ಕಿಂ ತರ್ಕೇಣ ವಿತರ್ಕಿತೇನ ಶತಶೋ ಜ್ಞಾತೇನ ಕಿಂ ಛಂದಸಾ
ಕಿಂ ಪೀತೇನ ಸುಧಾರಸೇನ ಬಹುಧಾ ಸ್ವಾಧ್ಯಾಯಪಾಠೇನ ಕಿಂ |
ಅಭ್ಯಸ್ತೇನ ಚ ಲಕ್ಷಣೇನ ಕಿಮಹೋ ಧ್ಯಾನಂ ನ ಚೇತ್ ಸರ್ವಥಾ
ಲೋಕಾಲೋಕವಿಲೋಕನೈಕಕುಶಲಜ್ಞಾನೇ ಹೃದಿ ಬ್ರಹ್ಮಣಃ ||
– ಪದ್ಮನಂದನ ವೈರಾಗ್ಯಶತಕ
“ವಾದಕ್ಕಾಗಿ ಮಂಡಿಸುವ ತರ್ಕದಿಂದ ಏನು ಫಲ ದೊರೆತೀತು? ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಛಂದಃಶಾಸ್ತ್ರವನ್ನು ಅರಿಯುವುದರಿಂದೇನು? ಅಮೃತರಸವನ್ನೇ ಕುಡಿದರೂ ಏನು ತಾನೆ ಆದೀತು? ಪುನಃಪುನಃ ವೇದವನ್ನು ಪಾರಾಯಣ ಮಾಡುತ್ತಿರುವುದರಿಂದ ಆಗುವ ಲಾಭವೇನು? ಲಕ್ಷಣಶಾಸ್ತ್ರವನ್ನು ಸ್ವಾಧೀನ ಮಾಡಿಕೊಳ್ಳುವುದರಿಂದ ಆಗುವುದೇನು? ಎಲ್ಲವನ್ನೂ ಗ್ರಹಿಸಿಕೊಳ್ಳಬಲ್ಲ ಹೃದಯದೊಳಗಡೆ ಪರಬ್ರಹ್ಮವಸ್ತುವಿನ ಧ್ಯಾನ ನೆಲಸಿರದಿದ್ದರೆ ಮಿಕ್ಕದ್ದೆಲ್ಲವೂ ವ್ಯರ್ಥವೇ.”
ಚೈತನ್ಯ ಮಹಾಪ್ರಭುಗಳು ದಕ್ಷಿಣಭಾರತ ಪರ್ಯಟನದಲ್ಲಿದ್ದಾಗ ಒಂದೆಡೆ ಭಕ್ತನೊಬ್ಬನನ್ನು ಕಂಡರು. ಅವನು ಭಗವದ್ಗೀತಾಪಠನದಲ್ಲಿ ತೊಡಗಿದ್ದ. ಅವ್ಯುತ್ಪನ್ನನಾಗಿದ್ದುದರಿಂದ ಅವನ ಉಚ್ಚಾರಣೆಯಲ್ಲಿ ದೋಷಗಳಿದ್ದವು. ಆದರೆ ಅವನ ತನ್ಮಯತೆ ಅನುಪಮವಾಗಿದ್ದಿತು; ಹೊರಜಗತ್ತಿನ ಪರಿವೆಯೇ ಇರಲಿಲ್ಲ, ಭಾವಭರಿತನಾಗಿ ಕಣ್ಣೀರಿಡುತ್ತಿದ್ದ. ಚೈತನ್ಯರು ಕೇಳಿದರು – “ಯಾಕಪ್ಪಾ ಪಾರಾಯಣ ಸಮಯದಲ್ಲಿ ಅಳುತ್ತಿದ್ದೀ?” ಆತ ಹೇಳಿದ – “ಮಹಾಪ್ರಭುಗಳೆ, ನಾನು ಅದೃಷ್ಟಹೀನ; ಕಲಿತವನಲ್ಲ, ಸಂಸ್ಕೃತ ತಿಳಿಯದು. ತಪ್ಪು ತಪ್ಪು ಹೇಳುತ್ತಿದ್ದೇನೆಂದು ದುಃಖವಾಗುತ್ತದೆ. ನಾನೇನು ಮಾಡಲಿ!” ಚೈತನ್ಯರು ಕೇಳಿದರು – “ಪಾರಾಯಣ ಸಮಯದಲ್ಲಿ ನಿನ್ನ ಮನಸ್ಸಿನಲ್ಲಿ ಏನು ತುಂಬಿರುತ್ತದೆ?” ಆತ ಉತ್ತರಿಸಿದ – “ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಬೋಧಿಸುತ್ತಿರುವ ದೃಶ್ಯವೇ ನನ್ನ ಮನಸ್ಸನ್ನೆಲ್ಲ ಆವರಿಸಿರುತ್ತದೆ.” ಚೈತನ್ಯರು ಆತನನ್ನು ಸಾಂತ್ವನಪಡಿಸಿದರು – “ನಿನ್ನ ಪಾರಾಯಣ ನಿಜಕ್ಕೂ ಸಾರ್ಥಕವಾಗಿದೆ. ಉಚ್ಚಾರಣೆಯ ಬಗೆಗೆ ಬಾಧೆಪಡಬೇಡ. ಮುಖ್ಯವಾದ್ದು ಭಕ್ತಿಯೇ. ಅದು ನಿನ್ನಲ್ಲಿ ತುಂಬಿದೆ. ನಿನಗೆ ನಿಶ್ಚಿತವಾಗಿ ಸದ್ಗತಿ ಪ್ರಾಪ್ತವಾಗುತ್ತದೆ.”
ಇದರ ಆಶಯ ವ್ಯಾಕರಣಾದಿಗಳು ನಿಷ್ಪ್ರಯೋಜಕವೆಂದಲ್ಲ. ಏಕಾಗ್ರತೆಯೂ ತನ್ಮಯತ್ವವೂ ಇದ್ದಲ್ಲಿ ಅನ್ಯ ಸಂಗತಿಗಳು ಗೌಣವಾಗುತ್ತವೆ – ಎಂದು ತಾತ್ಪರ್ಯ.