“ನಾವೊಮ್ಮೆ ಪ್ರವಾಸದ ಅಂಗವಾಗಿ ಟೀಟ್ವಾಲ್ಗೆ ಹೋಗಿದ್ದಾಗ ಸ್ಥಾನೀಯರಲ್ಲಿ ಕೆಲವರು ನಮ್ಮನ್ನು ಭೇಟಿಯಾಗಿ ತುಂಬುಹೃದಯದಿಂದ ಎದುರುಗೊಂಡರು. ‘ನಿಮ್ಮ ಬರುವಿಕೆಯನ್ನೇ ನಾವು ಕಾಯುತ್ತಿದ್ದೆವು. ಹಿಂದೆ ಇಲ್ಲಿ ಶಾರದಾಮಂದಿರ ಹಾಗೂ ಗುರುದ್ವಾರಗಳಿದ್ದ ಭೂಮಿಯನ್ನು ನಾವು ನಿಮಗೆ ನೀಡಬಯಸುತ್ತೇವೆ. ಇಲ್ಲಿ ಶಾರದೆಯ ಮಂದಿರ ಮತ್ತೊಮ್ಮೆ ನೆಲೆಗೊಳ್ಳಬೇಕೆಂಬುದು ನಮ್ಮ ಹಂಬಲ. ಇದು ನಿಮ್ಮಿಂದಲೇ ಆಗಬೇಕಾಗಿದೆ’ – ಎಂದು ಅವರೆಲ್ಲ ಒಟ್ಟಾಗಿ ಸೇರಿ ನಿವೇದಿಸಿಕೊಂಡಾಗ ನಮಗೆ ಎಲ್ಲಿಲ್ಲದ ಗಲಿಬಿಲಿ. ಇವರಿಗೆ ಏನು ಉತ್ತರ ಹೇಳುವುದು? ಇವರು ನಮ್ಮನ್ನೇ ಈ ಕುರಿತು ಕೇಳಿಕೊಳ್ಳುವುದೇಕೆ? – ಎಂದು ಮುಂತಾಗಿ ನಮಗೂ ಹಲವು ಪ್ರಶ್ನೆಗಳು. ಆದರೂ ಅವರ ಬೇಡಿಕೆಯನ್ನು ಅಲ್ಲಗಳೆಯಲು ನಮಗೂ ಮನಸ್ಸಿರಲಿಲ್ಲ” – ಇದು ನಿರ್ಮಾಣಕಾರ್ಯದ ಉಸ್ತುವಾರಿ ಹೊತ್ತಿರುವ ಕೃಷ್ಣ ಮೋಹನ ಮೋಂಗಾ ಅವರ ಮಾತು.
ಕಾಶ್ಮೀರವೆನ್ನುತ್ತಿದ್ದಂತೆ ಮೊತ್ತಮೊದಲು ನಮಗೆ ನೆನಪಾಗುವುದು ಕಾಶ್ಮೀರಪುರವಾಸಿನಿಯಾದ ಶಾರದೆಯದೇ. ‘ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನಿ’ ಎಂಬ ಶ್ಲೋಕ ಹೇಳುತ್ತ ನಿತ್ಯವೂ ನಾವು ನೆನೆಯುವುದು ಆಕೆಯನ್ನೇ. ಸಾವಿರಾರು ವರ್ಷಗಳಿಂದ ನಡೆದು ಬಂದ ಪರಂಪರೆ ಇದು. ಈ ಶಾರದೆಯು ನಮ್ಮ ಶ್ರದ್ಧಾಸ್ಥಾನಗಳಲ್ಲಿ ಪ್ರಮುಖವಾದುದು. ಪುರಾಣ ತಿಳಿಸುವಂತೆ ಶಾಂಡಿಲ್ಯ ಮುನಿ ತಪಸ್ಸು ಮಾಡಿದ್ದು ಇಲ್ಲಿಯೇ. ಸತೀದೇವಿಯ ಕೈ ಬಿದ್ದುದು ಹಾಗೂ ಸಮುದ್ರಮಥನದ ನಂತರ ಅಮೃತವನ್ನೊಯ್ಯುತ್ತಿದ್ದಾಗ ಎರಡು ಬಿಂದುಗಳು ಬಿದ್ದುದೂ ಇಲ್ಲಿಯೇ.
ಸರ್ವಜ್ಞಪೀಠವೆಂದು ಖ್ಯಾತಿ ಹೊಂದಿದ ಈ ಶಾರದಾದೇವಸ್ಥಾನಕ್ಕೆ ಪ್ರಾಚೀನಕಾಲದಲ್ಲಿ ನಾಲ್ಕು ಬಾಗಿಲುಗಳಿದ್ದವು. ಯಾರು ಯಾರೋ ಈ ಬಾಗಿಲುಗಳನ್ನು ತೆರೆಯುವಂತಿರಲಿಲ್ಲ. ಅಪಾರ ಪಾಂಡಿತ್ಯವಿರುವ ಬೆರಳೆಣಿಕೆಯ ಕೆಲವರು ಮಾತ್ರ ಈ ಬಾಗಿಲುಗಳಲ್ಲಿ ಯಾವುದಾದರೊಂದನ್ನು ತೆರೆಯುವ ಸಾಹಸ ಮಾಡುತ್ತಿದ್ದರು. ಈ ರೀತಿ ಒಳಗೆ ಬಂದವರನ್ನು ತಾಯಿ ಶಾರದೆಯೇ ಪ್ರಶ್ನೆಗಳ ಮೂಲಕ ಪರೀಕ್ಷಿಸುತ್ತಿದ್ದಳು. ಆದ್ದರಿಂದ ದೊಡ್ಡ ದೊಡ್ಡ ಪಂಡಿತರೂ ಕೂಡ ಈ ಆಲಯದ ಬಾಗಿಲು ತೆರೆಯಲು ತೊಡಗುವ ಮುನ್ನ ಎದೆ ಮುಟ್ಟಿ ನೋಡಿಕೊಳ್ಳಬೇಕಾಗುತ್ತಿತ್ತು. ಅದರಲ್ಲಿಯೂ ದಕ್ಷಿಣದಿಕ್ಕಿನ ಬಾಗಿಲನ್ನು ತೆರೆಯುವ ಗೊಡವೆಗೆ ಯಾವ ಪಂಡಿತನೂ ಹೋಗುತ್ತಿರಲಿಲ್ಲ. ಯಾಕೆಂದರೆ ಆ ಬಾಗಿಲನ್ನು ತೆರೆದ ಪಂಡಿತನು ಹಲವು ಶಾಸ್ತ್ರಗಳನ್ನು ಬಲ್ಲವನಾಗಿದ್ದು ಆ ಶಾಸ್ತ್ರಗಳನ್ನು ಕರತಲಾಮಲಕವಾಗಿರಿಸಿಕೊಂಡಿರಬೇಕಾಗಿರುತ್ತಿತ್ತು. ಅಂತಹ ಸಾಹಸ ಮಾಡಿದವರಲ್ಲಿ ಆದಿಶಂಕರರು ಸುವಿಖ್ಯಾತರು.
ಶಂಕರರು ದಕ್ಷಿಣದ ಬಾಗಿಲನ್ನು ತೆಗೆಯುತ್ತಿದ್ದಂತೆಯೇ ಬೇರೆ ಬೇರೆ ಶಾಸ್ತ್ರಗಳಲ್ಲಿ ನಿಷ್ಣಾತರಾದ ವಿದ್ವಾಂಸರು ಪ್ರಶ್ನೆಗಳ ಮಳೆ ಸುರಿಸತೊಡಗಿದರು. ಶಂಕರರು ಎಲ್ಲವುಗಳಿಗೂ ಸರಿಯಾದ ಉತ್ತರ ನೀಡಿ ಆ ವಿದ್ವಾಂಸರನ್ನು ತೃಪ್ತಿಪಡಿಸಿ ಒಳಕ್ಕೆ ನಡೆದರು. ಆಗ ಶಾರದೆಯರುಹಿದಳು – ‘ಇಲ್ಲಿ ಬರಬೇಕಾದವರಲ್ಲಿ ಪಾಂಡಿತ್ಯವೊಂದೇ ಅಲ್ಲ, ಪಾವಿತ್ರ್ಯವೂ ಇರಬೇಕಾಗುತ್ತದೆ. ನೀನಾದರೋ ಅಮರುಕನ ಅಂತಃಪುರದಲ್ಲಿ ವಾಸ ಮಾಡಿದವನು. ಇಂತಹ ನಿನ್ನಲ್ಲಿ ಪಾವಿತ್ರ್ಯವಿರುವುದೆಂತು?’ ಎಂದು. ಶಂಕರರು ಇದಕ್ಕೂ ಸರಿಯಾದ ಉತ್ತರ ನೀಡಿ ತಮ್ಮ ಪಾವಿತ್ರ್ಯಕ್ಕೆ ಕುಂದಿಲ್ಲವೆನ್ನುವುದನ್ನು ಸಾಬೀತುಪಡಿಸಿದರು. ಇದರಿಂದ ಸಂತೃಪ್ತಳಾದ ಶಾರದೆಯು ಶಂಕರರನ್ನು ತನ್ನ ಕೃಪಾಕಟಾಕ್ಷದಿಂದ ಅನುಗ್ರಹಿಸಿದಳು.
ಹೀಗೆ ಈ ಶಾರದಾಮಂದಿರವು ಪಾಂಡಿತ್ಯದ ನೆಲೆವೀಡೇ ಆಗಿತ್ತು. ಹಲವು ವಿದ್ಯಾರ್ಥಿಗಳು ಈ ಪಂಡಿತರ ಮೂಲಕ ತಲಸ್ಪರ್ಶಿ ಜ್ಞಾನ ಪಡೆದು ಪದವಿ ಗಳಿಸುತ್ತಿದ್ದರು. ಹೀಗಾಗಿ ಈ ಸ್ಥಾನ ವಿಶ್ವವಿದ್ಯಾಲಯವೆಂದೂ ಖ್ಯಾತಿ ಹೊಂದಿತ್ತು. ಅಶೋಕನಿಂದ ಮೊದಲುಗೊಂಡು ರಾಜಾ ಲಲಿತಾದಿತ್ಯನವರೆಗೂ (ಸಾ.ಶ.ಪೂ. 273 – ಸಾ.ಶ. 753) ಇದರ ಖ್ಯಾತಿ ಎಲ್ಲೆಡೆ ಪಸರಿಸಿತ್ತು. ಮುಂದೆ ಬೌದ್ಧಮತದ ಪ್ರಭಾವ ಬೆಳೆದಂತೆಲ್ಲ ಇದರ ಮಹತ್ತ್ವ ಕಡಮೆಯಾಗತೊಡಗಿತು. ಹದಿಮೂರನೇ ಶತಕದ ಹೊತ್ತಿಗೆ ಮುಸ್ಲಿಮರ ಆಕ್ರಮಣದ ಹೊಡೆತದಿಂದ ಈ ದೇವಾಲಯ ಮೂಲೆಗುಂಪಾಗಿ ಪಾಳುಬೀಳುವ ಹಂತ ತಲಪಿತು. ಮುಂದೆ ಭಾರತ ಎರಡು ಭಾಗವಾದ ನಂತರ ಕಾಶ್ಮೀರವೂ ತುಂಡಾಗಿ ಶಾರದೆಯ ಆಲಯವು ‘ಪಾಕ್-ಆಕ್ರಮಿತ ಕಾಶ್ಮೀರ’ಕ್ಕೆ ಸೇರಿಹೋಯಿತು. ಅಲ್ಲಿಂದ ಮುಂದೆ ಈ ದೇವಾಲಯವನ್ನು ನೋಡುವ ಸೌಭಾಗ್ಯ ಭಾರತೀಯರಾರಿಗೂ ಇಲ್ಲವಾಯಿತು.
ಹಿಂದೆ ಶಾರದಾಮಂದಿರಕ್ಕೆ ತಲಪಲು ನಾಲ್ಕು ರಹದಾರಿಗಳಿದ್ದವು. ಅವುಗಳಲ್ಲೊಂದು ‘ಟೀಟ್ವಾಲ್’ನಿಂದ ಮೊದಲುಗೊಳ್ಳುತ್ತಿತ್ತು. ಇದು ಸ್ವಲ್ಪ ಬಳಸುದಾರಿಯಾದರೂ ಹೆಚ್ಚು ಸುರಕ್ಷಿತವಾಗಿದ್ದುದರಿಂದ ಜನರು ಈ ದಾರಿಯನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಇಲ್ಲಿಂದ ಯಾತ್ರೆಗೆ ಹೊರಡುವವರು ಒಂದು ಪವಿತ್ರದಂಡವನ್ನು ಒಯ್ಯುವ ಕ್ರಮವಿತ್ತು. ‘ಛಡೀ ಮುಬಾರಕ್’ ಎಂದು ಅದಕ್ಕೆ ಹೆಸರು. ಈ ಟೀಟ್ವಾಲ್ ನೀಲಂ ನದಿಯ ದಡದಲ್ಲಿ ಇರುವುದು. ಕಾಶ್ಮೀರವು ಇಬ್ಭಾಗವಾದಾಗ ನೀಲಂ ನದಿಯೇ ಗಡಿಯಾಗಿ ಬದಲಾಯಿತು. ನೀಲಂ ನದಿಯನ್ನು ದಾಟಲು ಮರದ ಸೇತುವೆಯಿದ್ದು ಅದರ ಮಧ್ಯೆ ನಿಯಂತ್ರಣರೇಖೆಯನ್ನು ಬರೆಯಲಾಯಿತು. ಅದರಿಂದಾಗಿ ಟೀಟ್ವಾಲ್ ಕಡೆಗಿನ ಸೇತುವೆಯ ಭಾಗ ಭಾರತಕ್ಕೆ ಸೇರಿದ್ದಾದರೆ ಉಳಿದ ಪಕ್ಕದ ಭಾಗ ಪಾಕ್-ಆಕ್ರಮಿತ ಕಾಶ್ಮೀರಕ್ಕೆ ಸೇರುವಂತಾಯಿತು. ಸೇತುವೆಯಿರುವುದು ಒಂದೇ ಆದರೂ ಅದರ ಒಡೆತನ ಎರಡು ದೇಶಗಳಿಗೆ ಹಂಚಿಹೋದಂತಹ ವಿಲಕ್ಷಣ ಪರಿಸ್ಥಿತಿ ಅಲ್ಲಿ ಏರ್ಪಟ್ಟಿತು.
ಇದೇ ಟೀಟ್ವಾಲ್ನಲ್ಲಿ ಒಂದು ಚಿಕ್ಕ ಶಾರದಾಮಂದಿರ ಮತ್ತು ಒಂದು ಗುರುದ್ವಾರ ಸಹ ಇದ್ದವು. ಎರಡೂ ಮರದಿಂದ ಮಾಡಿದ್ದಾಗಿದ್ದವು. (ಕಾಶ್ಮೀರದಲ್ಲಿ ಮರಗಳನ್ನೇ ಹೆಚ್ಚಾಗಿ ಬಳಸಿ ಮನೆ ನಿರ್ಮಿಸುವುದು ಒಂದು ಸಹಜ ಕ್ರಮ.) ಶಾರದೆಯ ಮೂಲಮಂದಿರಕ್ಕೆ ಹೋಗಲಾರದವರು ನೀಲಂ ನದಿಯ ತೀರದಲ್ಲಿಯ ಈ ಮಂದಿರದ ಶಾರದೆಗೆ ನಮಿಸಿ ತೃಪ್ತಿ ಪಡೆಯುತ್ತಿದ್ದರು. ಮುಂದೆ ದಾಳಿಕೋರರ ಕೈ ಮೇಲಾದಾಗ ಈ ಮಂದಿರ ಮತ್ತು ಗುರುದ್ವಾರವೂ ಬೆಂಕಿಗಾಹುತಿಯಾದವು. ಅಷ್ಟರಲ್ಲಾಗಲೇ ಕಾಶ್ಮೀರೀ ಪಂಡಿತರೆಲ್ಲ ನೆಲೆ ಕಳೆದುಕೊಂಡು ಗುಳೆ ಹೋಗಿದ್ದರಾದ್ದರಿಂದ ಮಂದಿರ ಅಳಿದದ್ದಕ್ಕೆ ಅಳುವವರು ಯಾರೂ ಇರಲಿಲ್ಲ.
ಈ ಟೀಟ್ವಾಲ್ನಲ್ಲಿಯೇ ಇಂದು ಹೊಸದಾಗಿ ಶಾರದೆಯ ಮಂದಿರ ನಿರ್ಮಿಸಲಾಗುತ್ತಿದೆ. ನಿರ್ಮಾಣಕಾರ್ಯದ ಉಸ್ತುವಾರಿ ಹೊತ್ತಿರುವವರು ಕೃಷ್ಣ ಮೋಹನ ಮೋಂಗಾ ಎಂಬವರು. ಅವರು ಇತ್ತೀಚೆಗೆ ಸಂಸ್ಕೃತ ಭಾರತಿಯ ಕಾರ್ಯಾಲಯ ಅಕ್ಷರಂಗೆ ಭೇಟಿ ಕೊಟ್ಟಿದ್ದರು. ಆಗ ಶಾರದಾಮಂದಿರದ ನಿರ್ಮಾಣದ ಕೆಲಸ ಮೊದಲುಗೊಂಡುದರ ಹಿನ್ನೆಲೆಯನ್ನು ಅವರು ಹೀಗೆ ವಿವರಿಸಿದರು:
“ನಾವೊಮ್ಮೆ ಪ್ರವಾಸದ ಅಂಗವಾಗಿ ಟೀಟ್ವಾಲ್ಗೆ ಹೋಗಿದ್ದಾಗ ಸ್ಥಾನೀಯರಲ್ಲಿ ಕೆಲವರು ನಮ್ಮನ್ನು ಭೇಟಿಯಾಗಿ ತುಂಬುಹೃದಯದಿಂದ ಎದುರುಗೊಂಡರು. ‘ನಿಮ್ಮ ಬರುವಿಕೆಯನ್ನೇ ನಾವು ಕಾಯುತ್ತಿದ್ದೆವು. ಹಿಂದೆ ಇಲ್ಲಿ ಶಾರದಾಮಂದಿರ ಹಾಗೂ ಗುರುದ್ವಾರಗಳಿದ್ದ ಭೂಮಿಯನ್ನು ನಾವು ನಿಮಗೆ ನೀಡಬಯಸುತ್ತೇವೆ. ಇಲ್ಲಿ ಶಾರದೆಯ ಮಂದಿರ ಮತ್ತೊಮ್ಮೆ ನೆಲೆಗೊಳ್ಳಬೇಕೆಂಬುದು ನಮ್ಮ ಹಂಬಲ. ಇದು ನಿಮ್ಮಿಂದಲೇ ಆಗಬೇಕಾಗಿದೆ’ – ಎಂದು ಅವರೆಲ್ಲ ಒಟ್ಟಾಗಿ ಸೇರಿ ನಿವೇದಿಸಿಕೊಂಡಾಗ ನಮಗೆ ಎಲ್ಲಿಲ್ಲದ ಗಲಿಬಿಲಿ. ಇವರಿಗೆ ಏನು ಉತ್ತರ ಹೇಳುವುದು? ಇವರು ನಮ್ಮನ್ನೇ ಈ ಕುರಿತು ಕೇಳಿಕೊಳ್ಳುವುದೇಕೆ? – ಎಂದು ಮುಂತಾಗಿ ನಮಗೂ ಹಲವು ಪ್ರಶ್ನೆಗಳು. ಆದರೂ ಅವರ ಬೇಡಿಕೆಯನ್ನು ಅಲ್ಲಗಳೆಯಲು ನಮಗೂ ಮನಸ್ಸಿರಲಿಲ್ಲ. ‘ಕಾಶ್ಮೀರದಲ್ಲಿ ಹುಟ್ಟಿಯೂ ನಮ್ಮ ನೆಲಕ್ಕೆ ಏನೂ ಮಾಡಲಾಗಿಲ್ಲ’ ಎಂಬ ಕೊರಗೂ ನಮ್ಮನ್ನು ಬಾಧಿಸುತ್ತಿತ್ತು. ಶಾರದೆಯಿಲ್ಲದ ಕಾಶ್ಮೀರ ನಮ್ಮ ಮನಸ್ಸನ್ನೂ ಕುಟುಕುತ್ತಿತ್ತು. ‘ಭಗವತಿಯ ಇಚ್ಛೆಯಿದ್ದಂತಾಗಲಿ’ ಎಂದುಕೊಂಡ ನಾವು – ‘ಈಗ ನಾವು ಯಾತ್ರೆಯಲ್ಲಿದ್ದೇವಷ್ಟೆ. ಬೇಗನೇ ಅದನ್ನು ಪೂರೈಸಿ ಮತ್ತೆ ಬಂದು ನಿಮ್ಮನ್ನು ಕಾಣುತ್ತೇವೆ’ ಎಂದು ತಿಳಿಸಿ ಯಾತ್ರೆ ಮುಂದುವರಿಸಿದೆವು.
ಇದು ನಡೆದುದು 17 ಸೆಪ್ಟೆಂಬರ್ 2021ರಂದು. ಅಂದು ಶಾರದಾಷ್ಟಮಿ. ಒಳ್ಳೆಯ ದಿನವೇ ಶಾರದಾ ಮಂದಿರ ನಿರ್ಮಾಣದ ಪ್ರಸ್ತಾಪ ಬಂದುದರಿಂದಲೋ ಏನೋ, ಮುಂದಿನ ಕೆಲಸಗಳೆಲ್ಲವೂ ವೇಗವಾಗಿ ಸಾಗಿದವು. ಕೆಲವೇ ದಿನಗಳಲ್ಲೇ ನ್ಯಾಸವೊಂದನ್ನು ರಚಿಸಿ ಅದರ ಹೆಸರಿಗೆ ಭೂಖಂಡವನ್ನು ನೋಂದಾಯಿಸಿದ್ದಾಯಿತು. ಮುಂದಿನ ಹೆಜ್ಜೆಯಿಡುವುದಕ್ಕೂ ಮೊದಲು ನಾವು ಎರಡು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿತ್ತು. ಅವುಗಳಲ್ಲಿ ಮೊದಲನೆಯದು – ಈ ಕೆಲಸಕ್ಕೆ ಹಣವನ್ನು ಹೊಂದಿಸುವುದು ಹೇಗೆ ಎಂದು. ಎರಡನೆಯದು – ಮಂದಿರದ ಸ್ವರೂಪ ಹೇಗಿರಬೇಕು ಎಂಬುದು. ಈ ಕುರಿತು ನಮಗೆ ಮಾರ್ಗದರ್ಶನದ ಆವಶ್ಯಕತೆಯಿತ್ತು. ಆಗ ನೆನಪಾದುದು ಶೃಂಗೇರಿಪೀಠ. ಶೃಂಗೇರಿಪೀಠವು ಶಾರದಾಂಬೆಯ ಶಕ್ತಿಕೇಂದ್ರವಾಗಿದ್ದು ಹಿಂದೆ ಮುಸ್ಲಿಮರ ದಾಳಿಯ ವೇಳೆ ಕಾಶ್ಮೀರದಲ್ಲಿದ್ದ ಶಾರದೆಯ ಕಾಷ್ಠಮೂರ್ತಿ ಶೃಂಗೇರಿಗೆ ತಲಪಿತ್ತು. ಆ ಮೂರ್ತಿಗೆ ಅಲ್ಲಿ ಇಂದಿಗೂ ಪೂಜೆ ಸಲ್ಲುತ್ತಿದೆ. ಆದ್ದರಿಂದ ನಾವು ಶೃಂಗೇರಿಯನ್ನು ಸಂಪರ್ಕಿಸುವುದೆಂದು ನಿಶ್ಚಯಿಸಿ ಜಗದ್ಗುರುಗಳಾದ ಭಾರತೀತೀರ್ಥರ ಭೇಟಿಗೆ ಅವಕಾಶ ಕೋರಿದೆವು. ಸುದೈವದಿಂದ ಭೇಟಿಯ ದಿನಾಂಕ ನಿಶ್ಚಿತವಾಯಿತು. ಆ ಭೇಟಿ ನಡೆದದ್ದು ಗುರುತೃತೀಯಾದಂದು. ತದಿಗೆಯ ಈ ದಿನ ಶಾರದೆಯ ಜನ್ಮದಿನವೆಂಬುದು ನಮ್ಮ ನಂಬಿಕೆ. ವಿಶಿಷ್ಟ ದಿನಗಳಲ್ಲಿಯೇ ಘಟನೆಗಳೆಲ್ಲ ಜರುಗುತ್ತಿರುವುದರಿಂದ ಕಾರ್ಯಸಿದ್ಧಿಯ ಬಗ್ಗೆ ನಮಗಿದ್ದ ಸಂದೇಹ ಆತಂಕಗಳೆಲ್ಲ ನಿರ್ಮೂಲನಗೊಂಡವು.
ಶೃಂಗೇರಿ ತಲಪಿ ಮಹಾಸನ್ನಿಧಾನದೆದುರು ಎಲ್ಲವನ್ನೂ ನಿವೇದಿಸಿಕೊಂಡಾಗ ತುಂಬುಹೃದಯದಿಂದ ಆಶೀರ್ವಾದ ದೊರೆಯಿತು. ಮಂದಿರ ನಿರ್ಮಾಣವನ್ನು ಕುರಿತಂತೆ ಒಂದಿಷ್ಟು ಚರ್ಚೆಗಳು ನಡೆದವು. ಮಂದಿರನಿರ್ಮಾಣಕ್ಕೆ ಬೇಕಾದ ಶಿಲೆಗಳು ಮಾಗಡಿಯಿಂದ ಸೇವೆಯಾಗಿ ದೊರೆಯುವುದೆಂಬ ಸಂತಸದ ಸುದ್ದಿ ಅಲ್ಲಿದ್ದಾಗಲೇ ನಮಗೆ ತಲಪಿತು. ನಮ್ಮ ಉತ್ಸಾಹ ಇಮ್ಮಡಿಗೊಂಡಿತು. ಜಗದ್ಗುರುಗಳು ‘ಸಂಕ್ರಾಂತಿ ಕಥಾ’ ಎಂಬ ಗ್ರಂಥವನ್ನು ನಮಗೆ ತೋರಿಸಿ – ‘ರಣವೀರ ವಿರಚಿತ ಈ ಗ್ರಂಥ ಹಿಂದೆ ರಕ್ಷಣೆಗಾಗಿ ನಮ್ಮಲ್ಲಿಗೆ ಬಂದಿತ್ತು’ ಎಂಬುದನ್ನು ನೆನಪಿಸುತ್ತ ಶಾರದಾಮಂದಿರ ಹಾಗೂ ಶೃಂಗೇರಿಯ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿದರು. ‘ಸಮಾಜದಿಂದ ನಿಧಿ ಸಂಗ್ರಹಿಸಿ, ಎಂದಾದರೂ ಹಣದ ಕೊರತೆ ಬಂದಾಗ ನಾವು ನೆರವು ನೀಡುತ್ತೇವೆ’ ಎಂಬ ಆಶ್ವಾಸನೆಯೂ ದೊರೆಯಿತು.
ಅಲ್ಲಿಂದ ಹಿಂದಿರುಗಿದ ನಾವು ಮಂದಿರದ ವಾಸ್ತುಸ್ವರೂಪ ನಿಶ್ಚಯಿಸುವತ್ತ ಗಮನ ಹರಿಸಿದೆವು. ಫೆಬ್ರುವರಿ ಮೂರರಂದು ಅದು ತೀರ್ಮಾನದ ಹಂತಕ್ಕೆ ಬಂತು. ಅದಾದ ತಿಂಗಳಿನ ನಂತರ (ಮಾರ್ಚ್ 26, 2022) ಭೂಮಿಪೂಜೆ ನಡೆದು ಮುಂದಿನ ನಿರ್ಮಾಣಕಾರ್ಯ ವಿಧ್ಯುಕ್ತವಾಗಿ ಪ್ರಾರಂಭವಾಯಿತು. ಧನ ಸಂಗ್ರಹಕಾರ್ಯವೂ ಮುಂದುವರಿಯಿತು.
ಈ ಜಾಗದಲ್ಲಿ ಹಿಂದೆ ಗುರುದ್ವಾರವೂ ಇದ್ದುದರಿಂದ ಮೊದಲು ಗುರುದ್ವಾರವನ್ನು ನಿರ್ಮಿಸಲಾಯಿತು. ಸ್ಥಾನೀಯ ಸಿಕ್ಖರು ಇದರ ಆವಶ್ಯಕತೆಯಿಲ್ಲವೆಂದಿದ್ದರು. ಹಲವೆಡೆ ಸಾಕಷ್ಟು ಗುರುದ್ವಾರಗಳು ಈಗಾಗಲೇ ಇರುವುದರಿಂದ ಹೊಸದೊಂದು ಗುರುದ್ವಾರ ನಿರ್ಮಿಸಿ ಅದರ ನಿರ್ವಹಣೆಯ ಹೊಣೆ ಹೊರುವುದು ಅವರಿಗೆ ಅಷ್ಟು ಸಮ್ಮತವಾಗಿರಲಿಲ್ಲ. ಆದರೂ ಹಿಂದಿದ್ದ ಗುರುದ್ವಾರವನ್ನು ಕೈಬಿಟ್ಟು ಶಾರದಾಮಂದಿರವೊಂದನ್ನೇ ನಿರ್ಮಿಸುವುದು ಅಷ್ಟು ಸಮಂಜಸವಾಗಲಾರದೆಂದು ಆಲೋಚಿಸಿ ಮೊದಲು ಗುರುದ್ವಾರವನ್ನೇ ನಿರ್ಮಿಸಿ ಅನಂತರ ಶಾರದಾ ದೇವಾಲಯದ ಕೆಲಸ ಕೈಗೆತ್ತಿಕೊಳ್ಳಲಾಯಿತು. ಇದರಿಂದಾಗಿ ಸುತ್ತಮುತ್ತಲಿನವರಲ್ಲಿ ಉತ್ಸಾಹ ಹೆಚ್ಚಿ ಮಂದಿರ ಕೆಲಸದಲ್ಲಿ ಸಕ್ರಿಯ ಸಹಕಾರ ದೊರೆಯುವಂತಾಯಿತು.”
* * *
ಇವಿಷ್ಟು ಮೋಂಗಾ ಅವರು ಸಂಕ್ಷೇಪವಾಗಿ ವಿವರಿಸಿದ ಸಂಗತಿಗಳು.
ಶಾರದಾ ದೇವಾಲಯದಲ್ಲಿ ನಾಲ್ಕು ದ್ವಾರಗಳಿರುವಂತೆ ವಿನ್ಯಾಸ ರಚಿಸಲಾಗಿದೆ. ಈ ನಾಲ್ಕು ದ್ವಾರಗಳು ಒಂದೊಂದು ಶಂಕರಮಠವನ್ನು ಪ್ರತಿನಿಧಿಸುತ್ತವೆ. ಆಯಾ ದ್ವಾರಗಳ ಮೇಲ್ಗಡೆ ಆಯಾ ಮಠಗಳ ಘೋಷವಾಕ್ಯವನ್ನು ಕೆತ್ತಲಾಗುವುದು. ದಕ್ಷಿಣದ್ವಾರವು ಶೃಂಗೇರಿಮಠದ ಪ್ರಾತಿನಿಧ್ಯ ಹೊಂದಿದ್ದು ಅಲ್ಲಿ ಬಾಗಿಲ ಜೋಡಣೆಯೂ ಮುಗಿದಿದೆ. ಮೇಲ್ಗಡೆ ‘ಅಹಂ ಬ್ರಹ್ಮಾಸ್ಮಿ’ ಎಂಬ ಘೋಷವಾಕ್ಯವನ್ನೂ ಕೆತ್ತಲಾಗಿದೆ. ಇದರ ಗರ್ಭಗೃಹದಲ್ಲಿ ಶಾರದಾ ಮೂರ್ತಿಯ ಜೊತೆ ಆದಿಶಂಕರರ ಹಾಗೂ ಸಂತ ನಂದಲಾಲರ ಪ್ರತಿಮೆಗಳೂ ಇರಲಿವೆ. ನಂದಲಾಲರು ಕಾಶ್ಮೀರದ ಸಂತಪರಂಪರೆಯಲ್ಲಿ ಅಗ್ರಗಣ್ಯರು. ಎಲ್ಲ ಕಾಶ್ಮೀರಿಗಳಿಗೂ ಪೂಜ್ಯರಾಗಿದ್ದ ಅವರು ಪಾಕ್ ಆಕ್ರಮಿತ ಕಾಶ್ಮೀರದಿಂದ ನಿರ್ಗಮಿಸಬೇಕಾಗಿಬಂದಾಗ ಶಾರದಾಮಂದಿರಕ್ಕೆ ಸಂಬಂಧಿಸಿದ ಹಲವು ಪೂಜ್ಯವಸ್ತುಗಳನ್ನು ತಮ್ಮೊಂದಿಗೆ ತಂದಿದ್ದರು. 1973 ಅಕ್ಟೋಬರ್ 10ರಂದು ಅವರ ದೇಹಾವಸಾನವಾಯಿತು.
ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಮೊದಲುಗೊಳ್ಳುವ ವೇಳೆಯಲ್ಲಿ ಅಲ್ಲಿಗೆ ಶಾರದಾ ಮಂದಿರದಿಂದಲೂ ಪವಿತ್ರ ಮೃತ್ತಿಕೆಯನ್ನು ತರಲಾಗಿತ್ತು. ಅದರ ಕಥೆಯೂ ರೋಚಕವೇ. ಭಾರತಸಂಜಾತರಾದರೂ ಶಾರದೆಯ ಮಂದಿರವನ್ನು ತಲಪುವುದು ಅಸಾಧ್ಯವಾಗಿದ್ದುದರಿಂದ ಈ ಸ್ಥಳ ತಲಪಲು ಬೇರೊಂದು ಕಾರ್ಯತಂತ್ರವನ್ನೇ ರೂಪಿಸಲಾಯಿತು. ಚೀನಾ ದೇಶದ ನಾಗರಿಕತೆ ಹೊಂದಿದವರು ಪಾಕ್-ಆಕ್ರಮಿತ ಕಾಶ್ಮೀರಕ್ಕೆ ಹಾಗೂ ಅಲ್ಲಿರುವ ಶಾರದಾಮಂದಿರಕ್ಕೆ ಹೋಗಬಹುದಾಗಿತ್ತು. ಈ ಸಂಗತಿಯನ್ನು ಅವಲಂಬಿಸಿ ವೆಂಕಟರಮಣ ದಂಪತಿಯರನ್ನು ಈ ಕೆಲಸಕ್ಕಾಗಿ ಜೋಡಿಸಲಾಯಿತು. ಅವರು ಚೀನಾ ದೇಶದ ನಾಗರಿಕತೆಯನ್ನು ಹೊಂದಿದವರು. ಹಾಂಗ್ಕಾಂಗ್ ಮೂಲಕ ಅವರು ವಿಶೇಷ ಅನುಮತಿಯೊಂದಿಗೆ ಪಾಕ್-ಆಕ್ರಮಿತ ಕಾಶ್ಮೀರಕ್ಕೆ ತೆರಳಿ ಕೃಷ್ಣಗಂಗಾ ನದಿಯ ತೀರದಲ್ಲಿ ಪೂಜೆಯನ್ನು ನೆರವೇರಿಸಿ ಶಾರದಾಮಂದಿರದ ಮೃತ್ತಿಕೆಯನ್ನು ತಂದು ಅಯೋಧ್ಯೆಗೆ ತಲಪಿಸಿದರು.
ಈ ಶಾರದಾಮಂದಿರದಲ್ಲಿ ಪ್ರತಿಷ್ಠಾಪಿಸಲೋಸುಗ ಶೃಂಗೇರಿ ಪೀಠವು ಪಂಚಲೋಹನಿರ್ಮಿತವಾದ ಶಾರದಾ ಪ್ರತಿಮೆಯನ್ನು ಶಾರದಾಮಂದಿರ ನಿರ್ಮಾಣ ಸಮಿತಿಗೆ ಹಸ್ತಾಂತರಿಸಿದೆ. ಇದು ನಡೆದುದು ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ. ಮಂದಿರದ ಗೋಪುರ ನಿರ್ಮಾಣ ಇನ್ನೂ ಬಾಕಿಯುಳಿದಿದ್ದು ಅದು ಪೂರ್ತಿಗೊಂಡ ನಂತರ ಗರ್ಭಗುಡಿಯಲ್ಲಿ ಶಾರದಾ ಮೂರ್ತಿಯೇ ಮೊದಲಾದವುಗಳ ಪ್ರತಿಷ್ಠಾಪನೆ ನೆರವೇರಲಿದೆ.
ಬರೀ ಮಂದಿರ ನಿರ್ಮಿಸಿಬಿಟ್ಟರೆ ಸಾಲದು ತಾನೆ. ಅಲ್ಲಿ ನಿತ್ಯಪೂಜೆ ನೆರವೇರುವಂತಾಗಬೇಕು, ಅರ್ಚಕರೇ ಮೊದಲಾದವರಿಗೆ ವಾಸಿಸಲು ಮನೆ, ಶಾರದೆಯನ್ನು ನೋಡಬರುವ ಭಕ್ತರಿಗಾಗಿ ಸರಿಯಾದ ರಸ್ತೆ, ಉಳಿದುಕೊಳ್ಳಲು ಅತಿಥಿಗೃಹ ಮುಂತಾದವುಗಳನ್ನೂ ನೇರ್ಪುಗೊಳಿಸಬೇಕು. ಈ ಮಂದಿರವೊಂದು ಯಾತ್ರಾಸ್ಥಳವಾಗುವಂತೆ ಭಾವಜಾಗರಣೆಯೂ ಆಗಬೇಕು. ಇದಕ್ಕೆಲ್ಲ ದೊಡ್ಡ ಪ್ರಮಾಣದಲ್ಲಿ ಹಣ ಹೊಂದಿಸಬೇಕು. ಹೀಗೆ ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಸವಾಲುಗಳು ಹಲವಾರಿವೆ.
ಶಾರದಾಮಂದಿರ ನಿರ್ಮಾಣದ ಈ ಕೈಂಕರ್ಯದಲ್ಲಿ ಪಂಡಿತ ರವೀಂದ್ರಕುಮಾರ ಅವರೂ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶಾರದಾ ರಕ್ಷಣ ಸಮಿತಿಯ ಸಂಸ್ಥಾಪಕರಾದ ರವೀಂದ್ರರು ಇದಕ್ಕೆ ಸಂಬಂಧಿಸಿದ ಹಲವು ಹೋರಾಟಗಳಲ್ಲಿ ನೇತೃತ್ವ ವಹಿಸಿದ್ದವರು. ದೇಶ-ವಿದೇಶದ ನ್ಯಾಯಾಲಯಗಳಲ್ಲಿ ದಾವೆ ಹೂಡುವುದು, ವಾದ ಮಂಡಿಸುವುದು, ಕಾರ್ಯತಂತ್ರ ರೂಪಿಸುವುದು, ಸರ್ಕಾರದ ಮೇಲೆ ಒತ್ತಡ ತರುವುದು ಮುಂತಾದ ಹಲವು ಕಾರ್ಯಗಳಲ್ಲಿ ಅವರು ಅಹರ್ನಿಶಿ ತೊಡಗಿಕೊಂಡಿರುತ್ತಾರೆ. ಈ ನಿಟ್ಟಿನಲ್ಲಿ ಕ್ರಮಿಸಬೇಕಾದ ದೂರ ಸಾಕಷ್ಟಿದೆಯಾದರೂ ಅವರೆಂದೂ ಎದೆಗುಂದಿಲ್ಲ, ಭರವಸೆಯನ್ನೇನೂ ಕಳೆದುಕೊಂಡಿಲ್ಲ.
ಕೈಗೆತ್ತಿಕೊಂಡ ಕೆಲಸದ ಉದ್ದೇಶ ಉದಾತ್ತವಾಗಿರುವುದರಿಂದಲೂ, ಕೈಗೊಂಡ ಕೆಲಸ ಕೈಗೂಡಿಯೇ ತೀರುತ್ತದೆ ಎಂಬುದರ ಬಗ್ಗೆ ಪೂರ್ಣ ವಿಶ್ವಾಸವಿರುವುದರಿಂದಲೂ, ಸತತ ಪ್ರಯತ್ನ ಮುಂದುವರಿಯುತ್ತಿರುವುದರಿಂದಲೂ ಮೂಲ ಶಾರದಾ ದೇವಾಲಯದ ದರ್ಶನ ಭಾಗ್ಯ ಪಡೆಯಲು ನಡೆದಿರುವ ಕೆಲಸದಲ್ಲಿ ದೈವಾನುಗ್ರಹ ಎಂದಾದರೊಂದು ದಿನ ದೊರೆತೇ ದೊರೆಯಬೇಕು. ಆ ದಿನ ಬೇಗ ಬರಲೆಂದು ನಾವೆಲ್ಲ ಆಶಿಸೋಣ. ಅಲ್ಲಿಯವರೆಗೂ ಗಡಿಯ ಹತ್ತಿರ ನಿರ್ಮಾಣಗೊಳ್ಳಲಿರುವ ಮಂದಿರದಲ್ಲಿರುವ ಶಾರದೆಯನ್ನು ನಮಿಸುತ್ತ ಅಷ್ಟಿಷ್ಟಾದರೂ ತೃಪ್ತಿ ಪಡೆಯೋಣ.