(ಕಳೆದ ಸಂಚಿಕೆಯಿಂದ)
1857ರ ಮೇ ಹತ್ತರಂದು ಮೀರಠ್ನ ಅಶ್ವದಳ ಹಚ್ಚಿದ ಬಂಡಾಯದ ಕಿಡಿ ಅತಿ ಶೀಘ್ರದಲ್ಲಿ ದೆಹಲಿ, ಪಂಜಾಬ್, ರಾಜಪುತಾನಾ, ಆಗ್ರಾ, ಅವಧ, ಕಾನ್ಪುರ, ಝಾನ್ಸಿ, ಜಗದೀಶಪುರ ಮೊದಲಾದೆಡೆ ಹಬ್ಬಿ ಕ್ರಾಂತಿಯ ದಾವಾನಲವಾಗಿ ಪರಿಣಮಿಸುತ್ತದೆ. ಎಲ್ಲೆಡೆ ಪುರುಷರು-ಸ್ತ್ರೀಯರು, ವೃದ್ಧರು-ಹಸುಳೆಗಳು ಎಂಬ ತರತಮವಿಲ್ಲದೆ ಬ್ರಿಟಿಷರ ಮಾರಣಹೋಮ ನಡೆಯುತ್ತದೆ. ಬ್ರಿಟಿಷರೂ ಕೈಕಟ್ಟಿ ಕೂಡುವವರಾಗಿರಲಿಲ್ಲ. ತಮ್ಮ ಕೈ ಮೇಲಾದೆಡೆಯಲ್ಲೆಲ್ಲ ಹಳ್ಳಿಹಳ್ಳಿಗಳನ್ನು ಸುತ್ತುವರಿದು ಅವುಗಳನ್ನು ಬೆಂಕಿಯ ಜ್ವಾಲೆಗೆ ಆಹುತಿ ನೀಡಿದರು. ಸೆರೆಸಿಕ್ಕವರನ್ನು ಬೀದಿಬದಿಯ ಸಾಲುಮರಗಳಿಗೆ ನೇಣುಹಾಕಿಯೋ ಅಥವಾ ಫಿರಂಗಿಗಳಿಗೆ ಕಟ್ಟಿ ಉಡಾಯಿಸಿಯೋ ತಮ್ಮ ಪ್ರಾಬಲ್ಯವನ್ನು ಮೆರೆದರು.
ಈ ಕ್ರಾಂತಿಯ ದಾವಾನಲದ ಬಿಸಿ ಕನ್ನಡ ನಾಡಿಗೂ ತಟ್ಟಿದ್ದುದರಲ್ಲಿ ಆಶ್ಚರ್ಯವಿಲ್ಲ.
ಸುರಪುರ
ಈಗಿನ ಕಲಬುರಗಿ ಜಿಲ್ಲೆಯ ಸುರಪುರ ಮೊದಲು ನಿಜಾಮನ ಪ್ರದೇಶಕ್ಕೆ ಒಳಪಟ್ಟಿದ್ದ ಸಂಸ್ಥಾನ. ಸುರಪುರದ ರಾಜ ವೆಂಕಪ್ಪನಾಯಕ ಸತ್ತಾಗ ನಿಜಾಮ 15 ಲಕ್ಷ ರೂ.ಗಳ ಯುದ್ಧಶುಲ್ಕವನ್ನು (ಬಂಡಣಿ – ಕ.ವಿ.ವಿ. 1360) ವಿಧಿಸಿದ. ಇದರ ಬಹುಪಾಲನ್ನು ವೆಂಕಪ್ಪನಾಯಕನ ಮಗ ಕೃಷ್ಣಪ್ಪನಾಯಕ ನಗದು ರೂಪದಲ್ಲಿ ಸಂದಾಯಮಾಡಿ 1841ರಲ್ಲಿ ತೀರಿಕೊಳ್ಳುವ ವೇಳೆಗೆ ರಾಜ್ಯದ ಬೊಕ್ಕಸ ಖಾಲಿಯಾಗಿತ್ತು. ಕೃಷ್ಣಪ್ಪನಾಯಕ ಮತ್ತು ಈರಮ್ಮನ ಮಗನಾದ ವೆಂಕಟಪ್ಪನಾಯಕ ತಂದೆಯ ಸಾವಿನ ಸಮಯದಲ್ಲಿ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದುದರಿಂದ ರಾಜ್ಯದ ಉಸ್ತುವಾರಿಯನ್ನು ನೋಡಿಕೊಳ್ಳಲು ಮೆಡೋಸ್ ಟೇಲರ್ ಎಂಬಾತನನ್ನು ಬ್ರಿಟಿಷ್ ಪ್ರತಿನಿಧಿಯಾಗಿ ನೇಮಿಸಲಾಯಿತು. ಈತ ವೆಂಕಟಪ್ಪನಾಯಕನ ವಿದ್ಯಾಭ್ಯಾಸದ ಬಗೆಗೆ ಗಮನ ನೀಡಲು ಮುರ್ರೆ ಎಂಬಾತನನ್ನು ನೇಮಿಸಿ ಬಾಲಕನಿಗೆ ಇಂಗ್ಲಿಷ್, ತೆಲುಗು, ಮರಾಠಿ ಹಾಗೂ ಪರ್ಶಿಯನ್ ಭಾಷೆಗಳನ್ನು ಕಲಿಸುವ ವ್ಯವಸ್ಥೆಯನ್ನು ಮಾಡುತ್ತಾನೆ. 1853ರಲ್ಲಿ ರಾಜ್ಯಾಡಳಿತವನ್ನು ವೆಂಕಟಪ್ಪನಾಯಕ ವಹಿಸಿಕೊಂಡಾಗ ರಾಜ್ಯದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬನನ್ನು ರಾಜಕೀಯ ಸಲಹೆಗಾರನಾಗಿ ನೇಮಿಸಿಕೊಂಡು 20,000 ರೂಪಾಯಿಗಳನ್ನು ತೆರಬೇಕೆಂದು ಗವರ್ನರ್-ಜನರಲ್ ಆಗಿದ್ದ ಲಾರ್ಡ್ ಡಾಲ್ಹೌಸಿ ಆದೇಶಿಸುತ್ತಾನೆ. ರಾಜ್ಯದ ಆರ್ಥಿಕ ದುಃಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡ ನಾಯಕ ಇದನ್ನು ತಿರಸ್ಕರಿಸಿದಾಗ ಸಹಜವಾಗಿಯೇ ಸ್ವತಂತ್ರ ಪ್ರವೃತ್ತಿಯನ್ನು ತೋರಿದಂತಾಗಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದುದರಲ್ಲಿ ಆಶ್ಚರ್ಯವಿಲ್ಲ.
1857ರ ಬಂಡಾಯದ ಸಮಯದಲ್ಲಿ ಸುರಪುರವೂ ಉತ್ತರ ಕರ್ನಾಟಕದ ಇತರ ಸಂಸ್ಥಾನಗಳಂತೆ ನಾನಾಸಾಹೇಬನೊಂದಿಗೆ ಸಂಪರ್ಕ ಬೆಳೆಸಿಕೊಂಡು ವಿದ್ರೋಹದ ಕಡೆ ವಾಲಿರುವುದು ಕಂಡುಬರುತ್ತದೆ. ಹೀಗಾಗಿ 1857ರ ನವೆಂಬರ್ ವೇಳೆಗೆ ನಾಯಕನ ಪ್ರತಿನಿಧಿಯಾಗಿ ನಾನಾ ಸಂಕೇಶ್ವರ್ ಎಂಬಾತನನ್ನು ನಾನಾಸಾಹೇಬನ ಬಳಿ ಕಳುಹಿಸಲಾಗಿತ್ತು. ಬೇಡರು, ಅರಬ್ಬರು ಮತ್ತು ರೋಹಿಲ್ಲರನ್ನು ಸೈನ್ಯಕ್ಕೆ ಸೇರಿಸಿಕೊಂಡು ತನ್ನ ಶಕ್ತಿಯನ್ನು ಬೆಳೆಸಿಕೊಳ್ಳಲು ಪ್ರಾರಂಭಿಸಿದ ವೆಂಕಟಪ್ಪನಾಯಕನ ‘ಚಟುವಟಿಕೆಗಳು ಅಪಾಯಕಾರಿಯಾಗಿದ್ದು ತೀಕ್ಷ್ಣವಾಗಿ ಗಮನಿಸಲಾಗುತ್ತಿದೆ’ ಎಂದು ಬ್ರಿಟಿಷ್ ವರದಿಗಳು ದಾಖಲಿಸಿವೆ. ಇದೇ ಸಮಯದಲ್ಲಿ ಬೆಳಗಾಂವ್ನ 29ನೇ ರೆಜಿಮೆಂಟನ್ನು ಉದ್ರೇಕಿಸಲು ಪ್ರಯತ್ನಿಸುತ್ತಿದ್ದ ಮಹಿಪಾಲ್ಸಿಂಗ್ನನ್ನು ಬ್ರಿಟಿಷರು ಬಂಧಿಸಿದಾಗ ಅವನು ಸುರಪುರದ ರಾಜನಿಂದ ಕಳುಹಿಸಲ್ಪಟ್ಟವನೆಂದು ತಿಳಿದುಬರುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯ ಪೊಲೀಸ್ ಪಾಟೀಲನ ಮನೆಯಲ್ಲಿ ಸುರಪುರದ ಆನಂದರಾವ್ ಬರೆದ ಎರಡು ಪತ್ರಗಳು ಸಿಗುತ್ತವೆ. ಹೀಗೆ ವೆಂಕಟಪ್ಪನಾಯಕ ಮತ್ತು ಆತನ ಸಂಸ್ಥಾನದ ಜನರು ನಡೆಸುತ್ತಿದ್ದ ವಿದ್ರೋಹದ ದಾಖಲೆಗಳು ಹೆಚ್ಚು ಹೆಚ್ಚಾಗಿ ಬ್ರಿಟಿಷರ ಗಮನಕ್ಕೆ ಬರಲಾರಂಭಿಸಿತು.
1858ರ ಫೆಬ್ರುವರಿ 7ರಂದು ಸುರಪುರವನ್ನು ಮಣಿಸಲು ಕ್ಯಾಪ್ಟನ್ ವೈಂಡ್ಹ್ಯಾಮ್ ತನ್ನ ಸೇನೆಯೊಂದಿಗೆ ಕೋಟೆಯ ಹೊರಗೆ ಬಂದಿಳಿದರೆ ಅತ್ತ ಕಲಾದಗಿಯಿಂದ ಮಾಲ್ಕಮ್ನ ಸೈನ್ಯವೂ ಬಂದು ಸೇರುತ್ತದೆ. ಅಂದು ರಾತ್ರಿ ಮತ್ತು ಮರುದಿನ ಜಮೆದಾರ ತಾಸ್ದಿಕ್ ಹುಸೇನ್ ಮತ್ತು ಲಕ್ಷ್ಮಣ್ಸಿಂಗ್ ನೇತೃತ್ವದಲ್ಲಿ ನಡೆದ ಉಗ್ರ ಕಾಳಗದಲ್ಲಿ ಕ್ಯಾಪ್ಟನ್ ನ್ಯೂಬೆರ್ರಿ ಹತನಾದ. ಅಭೇದ್ಯವಾದ ದುರ್ಗವನ್ನು ಪ್ರವೇಶಿಸಲು ಸತತ ಪ್ರಯತ್ನದ ಬಳಿಕವೂ ಅಸಾಧ್ಯವಾದಾಗ ಕುಟಿಲತೆಗೆ ಹೆಸರಾಗಿರುವ ಬ್ರಿಟಿಷರು ತಮ್ಮ ಸಹಜಗುಣಕ್ಕೆ ತಕ್ಕದಾಗಿ ಭೀಮರಾವ್ ಎಂಬ ದ್ರೋಹಿಯ ಸಹಾಯ ಪಡೆದು ಕೋಟೆಯ ದುರ್ಬಲ ಮಾರ್ಗದಿಂದ ಪ್ರವೇಶಿಸಿ ಕೋಟೆಯನ್ನು ಗೆಲ್ಲುತ್ತಾರೆ. ಬಳಿಕ ಅರಮನೆಯೂ ಸೇರಿದಂತೆ ಎಲ್ಲವನ್ನೂ ಲೂಟಿ ಮಾಡಿ ನಾಶಮಾಡಿದರು. ಈ ಸಮಯದಲ್ಲಿ ವಾಗಣಗೇರಿ ಭೀಮರಾವ್ ರಾಜನಿಗೆ ತಲೆತಪ್ಪಿಸಿಕೊಂಡು ಹೈದರಾಬಾದ್ ತಲಪಿ ಸಾಲಾರ್ಜಂಗ್ನ ಸಹಾಯ ಪಡೆಯುವಂತೆ ಸಲಹೆಯನ್ನು ನೀಡಿದುದಾಗಿ ಡಾ. ಸೂರ್ಯನಾಥ ಕಾಮತ್ ತಿಳಿಸುತ್ತಾರೆ. ಇದರಂತೆ ಕೆಲವು ವಿಶ್ವಾಸಾರ್ಹ ಸಂಗಾತಿಗಳೊಂದಿಗೆ ಕುದುರೆಯ ಮೇಲೆ ಪ್ರಯಾಣ ಬೆಳೆಸಿದ ನಾಯಕ 160 ಮೈಲಿ ದೂರವನ್ನು ಕ್ರಮಿಸಿ ಮೂರು ದಿನಗಳ ಬಳಿಕ ಹೈದರಾಬಾದ್ ತಲಪಿದರೆ ವೆಂಕಟಪ್ಪನಾಯಕನ ರಾಣಿಯರು ಅಲ್ಲಿಂದ ಪರಾರಿಯಾಗಿ ಪಕ್ಕದ ಶಹಾಪುರದಲ್ಲಿ ಆಶ್ರಯ ಪಡೆಯುತ್ತಾರೆ. ಮರುದಿನ ಹಿಂತಿರುಗಿದ ಇವರಿಗೆ ಅರಮನೆಯನ್ನು ಪ್ರವೇಶಿಸಲು ಬ್ರಿಟಿಷರು ಅನುಮತಿ ನೀಡದ ಕಾರಣ ಬೇರೊಂದು ಮನೆಯಲ್ಲಿ ಇರಬೇಕಾಯಿತು. ಹಿರಿಯ ರಾಣಿ ರಂಗಮ್ಮ ಬ್ರಿಟಿಷರು ಅರಮನೆಯಿಂದ ಲೂಟಿಮಾಡಿದ ತಮ್ಮ ಒಡವೆ-ವಸ್ತ್ರಗಳನ್ನು ಹಿಂತಿರುಗಿಸುವಂತೆ ಕೇಳಿದಾಗ ‘ದಯಾಳು ಹಾಗೂ ನ್ಯಾಯನಿಷ್ಠ ಬ್ರಿಟಿಷ್ ಸರ್ಕಾರ’ ಎರಡು ಸೀರೆಗಳನ್ನು ನೀಡಿ ತನ್ನ ಸಭ್ಯತೆಯನ್ನು ಪ್ರದರ್ಶಿಸುತ್ತದೆ.
ಇತ್ತ ಹೈದರಾಬಾದ್ ಸೇರಿದ ವೆಂಕಟಪ್ಪನಾಯಕನನ್ನು ಸುಲಭವಾಗಿ ಗುರುತಿಸುವ ನಿಜಾಮನ ಸೈನಿಕರು ಆತನನ್ನು ಬಂಧಿಸಿ ಬ್ರಿಟಿಷರಿಗೆ ಒಪ್ಪಿಸುತ್ತಾರೆ. 1858ರ ಏಪ್ರಿಲ್ 28ರಂದು ಬ್ರಿಗೇಡಿಯರ್ ವಿಲಿಯಂ ಹಿಲ್ ಮತ್ತಿತರ ಆರು ಅಧಿಕಾರಿಗಳು ಅವನನ್ನು ಸೈನಿಕ ವಿಚಾರಣೆಗೆ ಒಳಪಡಿಸಿ 1858ರ ಮೇ 7ರಂದು ಆಜೀವ ಗಡೀಪಾರಿನ ಶಿಕ್ಷೆ ವಿಧಿಸುತ್ತಾರೆ. ಆದರೆ ಇದನ್ನು ನಾಲ್ಕು ವರ್ಷಗಳ ಕಾರಾಗೃಹವಾಸಕ್ಕೆ ಇಳಿಸಲಾಯಿತು. ರಾಜನನ್ನು ಮದ್ರಾಸ್ ಪ್ರೆಸಿಡೆನ್ಸಿಯ ಚಂಗಲಪೇಟೆ ಸೆರೆಮನೆಗೆ ವರ್ಗಾಯಿಸಲು 500 ಸೈನಿಕರೊಂದಿಗೆ ಲೆಫ್ಟಿನೆಂಟ್ ಪಿಕ್ಟೇಟ್ನ ನೇತೃತ್ವದಲ್ಲಿ ಕಳುಹಿಸಲಾಗುತ್ತದೆ. ಮೇ 11ರಂದು ಇವರು ಹುಸೇನ್ಸಾಗರದಿಂದ 6 ಮೈಲಿ ಕ್ರಮಿಸಿ ಅಂಬರ್ಪೇಟೆಯಲ್ಲಿ ವಿಶ್ರಾಂತಿಗಾಗಿ ನಿಂತಾಗ ಲೆಫ್ಟಿನೆಂಟ್ ಪಿಕ್ಟೇಟ್ ತನ್ನ ಸೊಂಟಪಟ್ಟಿಯನ್ನು ಕುರ್ಚಿಗೆ ತಗುಲಿಹಾಕಿ ಡೇರೆಯಿಂದ ಹೊರಕ್ಕೆ ನಡೆಯುತ್ತಾನೆ. ಡೇರೆಯಲ್ಲಿ ಒಬ್ಬಂಟಿಯಾಗಿದ್ದ ವೆಂಕಟಪ್ಪನಾಯಕ ಆ ಸೊಂಟಪಟ್ಟಿಯಲ್ಲಿದ್ದ ಪಿಸ್ತೂಲನ್ನು ಕೈಗೆತ್ತಿಕೊಂಡು ಹೊಟ್ಟೆಗೆ ಹಾರಿಸಿಕೊಂಡ ಗುಂಡು ಆತನ ಬೆನ್ನಹುರಿಯನ್ನು ಭೇದಿಸಿ ತಕ್ಷಣದ ಸಾವಿಗೆ ಕಾರಣವಾಗುತ್ತದೆ. ಸಾವಿನ ಸಮಯದಲ್ಲಿ ಇನ್ನೂ 20ರ ಹರೆಯದಲ್ಲಿದ್ದ ವೆಂಕಟಪ್ಪನಾಯಕನಿಗೆ ಎಂಟು ರಾಣಿಯರಿದ್ದು ಒಬ್ಬ ಮಗ, ಒಬ್ಬ ಮಗಳು ಮತ್ತು ಇಬ್ಬರು ತಂಗಿಯರಿದ್ದರು. ರಾಣಿಯರು ಕರ್ನೂಲ್ ತಲಪಿ ರಾಜನೊಂದಿಗೆ ಮುಂದಕ್ಕೆ ಪ್ರಯಾಣಿಸುವ ವ್ಯವಸ್ಥೆಯಾಗಿತ್ತಾದರೂ ವೆಂಕಟಪ್ಪನ ಆತ್ಮಹತ್ಯೆ ಅದನ್ನು ತಪ್ಪಿಸಿತು.
“ಸುರಪುರದ ರಾಜ ಚಿಕ್ಕಂದಿನಿಂದಲೂ ಮೆಡೋಸ್ ಟೇಲರನೊಂದಿಗೆ ಬೆಳೆದವನಾಗಿದ್ದು, ಆತನನ್ನು ‘ಅಪ್ಪಾಜಿ’ಯೆಂದು ಕರೆಯುತ್ತಿದ್ದನಾದ್ದರಿಂದ ಇಂಗ್ಲಿಷರು ಅವನಿಂದ ಕ್ರಾಂತಿಯ ಎಲ್ಲ ರಹಸ್ಯಗಳನ್ನೂ, ಪ್ರಮುಖ ನಾಯಕರ ಹೆಸರುಗಳನ್ನೂ ತಿಳಿದುಕೊಳ್ಳುವಂತೆ ಟೇಲರನನ್ನು ಕಳುಹಿಸಿಕೊಡುತ್ತಾರೆ. ಸಾವಿನ ನಿರೀಕ್ಷೆಯಲ್ಲಿದ್ದ ರಾಜ ಮೆಡೋಸ್ ಟೇಲರನ ಆಗಮನದಿಂದ ಬಹಳ ಸಂತಸಗೊಂಡು ಆತನನ್ನು ಹಾರ್ದಿಕವಾಗಿ ಆಲಿಂಗಿಸಿಕೊಳ್ಳುತ್ತಾನೆ. ಆದರೆ ಟೇಲರ್ ಆತನನ್ನು ರಹಸ್ಯ ಸಮಿತಿಯ ವಿವರಗಳನ್ನೂ, ಅದರಲ್ಲಿ ರಾಜ ಹೇಗೆ ಸಿಲುಕಿಕೊಂಡನೆಂಬುದನ್ನೂ ವಿಚಾರಿಸಲು ತೊಡಗಿದಾಗ, ರಾಜನ ವರ್ತನೆಯನ್ನು ಟೇಲರನ ವಾಕ್ಯಗಳಲ್ಲೇ ತಿಳಿಯೋಣ. ಅವನು ಹೆಮ್ಮೆಯಿಂದ ಸೆಟೆದುನಿಂತು ರೋಷದಿಂದ ಉತ್ತರಿಸಿದ: “ಇಲ್ಲ ಅಪ್ಪಾಜಿ, ಅದೊಂದನ್ನು ಮಾತ್ರ ನಾನು ಎಂದೂ ಹೇಳುವುದಿಲ್ಲ! ನೀವು ರೆಸಿಡೆಂಟನನ್ನು ನೋಡಲು ನನಗೆ ಹೇಳಿದರೆ ಅದನ್ನೂ ನಾನು ಮಾಡುವುದಿಲ್ಲ. ನಾನು ನನ್ನ ಪ್ರಾಣಭಿಕ್ಷೆಯನ್ನು ಕೇಳುವೆನೆಂದು ಆತ ನಿರೀಕ್ಷಿಸುತ್ತಿರಬಹುದು. ಆದರೆ ಮತ್ತೊಬ್ಬರ ದಯಾಭಿಕ್ಷೆಗೆ ಒಳಗಾಗಿ ಹೇಡಿಯಂತೆ ಜೀವಿಸುವುದನ್ನು ನಾನು ಎಂದಿಗೂ ಇಚ್ಛಿಸುವುದಿಲ್ಲ ಅಥವಾ ನನ್ನ ದೇಶಬಾಂಧವರ ಹೆಸರುಗಳನ್ನೂ ಹೇಳುವುದಿಲ್ಲ!” ಅದಕ್ಕೆ ಟೇಲರ್ ಮತ್ತೊಮ್ಮೆ ಅವನ ಬಳಿಸಾರಿ ಕ್ಷಮಾದಾನದ ಆಮಿಷವನ್ನು ತೋರಿಸಿ, ಪಿತೂರಿಯ ರೂಪರೇಖೆಗಳನ್ನು ತಿಳಿಸುವಂತೆ ಒತ್ತಾಯಿಸಿದ. ಅದಕ್ಕೂ ರಾಜ “ಅದರಲ್ಲಿ ನಾನು ನನ್ನ ಪಾತ್ರವನ್ನು ವಿವರಿಸಬಲ್ಲೆ. ಆದರೆ ನನ್ನನ್ನು ಪ್ರೇರೇಪಿಸಿದವರ ಹೆಸರುಗಳನ್ನು ಕೇಳಿದರೆ ಅದನ್ನು ನಾನು ಹೇಳುವುದಿಲ್ಲ. ಸಾವಿನ ದವಡೆಯಲ್ಲಿರುವ ನಾನೀಗ ನನ್ನ ದೇಶವಾಸಿಗಳ ಹೆಸರುಗಳನ್ನು ಹೇಳಲೆ? ಎಂದಿಗೂ ಇಲ್ಲ! ಫಿರಂಗಿ, ನೇಣುಗಂಬ ಅಥವಾ ಕರಿನೀರಿನ ಶಿಕ್ಷೆಗಳಿಗಿಂತಲೂ ಮೀರಿದ್ದು ನಂಬಿಕೆದ್ರೋಹ!” ಎಂದು ಸಾರುತ್ತಾನೆ. ಇದಕ್ಕುತ್ತರವಾಗಿ ಮೆಡೋಸ್ ಟೇಲರ್ ಅವನಿಗೆ ಸಾವು ಖಚಿತವೆಂದು ತಿಳಿಸಿದಾಗ ರಾಜ ಉತ್ತರಿಸಿದ. “ಅಪ್ಪಾಜಿ! ನನ್ನದೊಂದು ಕೋರಿಕೆಯಿದೆ. ನನ್ನನ್ನು ಕಳ್ಳನಂತೆ ನೇಣಿಗೇರಿಸದೆ ಫಿರಂಗಿಗೆ ಕಟ್ಟಿ ಉಡಾಯಿಸಿದರೆ ನಾನು ಎಷ್ಟು ಶಾಂತನಾಗಿ ಅದರ ಮುಂದೆ ನಿಲ್ಲಬಲ್ಲೆನೆಂಬುದನ್ನು ನೋಡಿ!”
ಆದರೆ ಮೆಡೋಸ್ ಟೇಲರನ ಮಧ್ಯಸ್ಥಿಕೆಯಿಂದ ಈ ದೇಶಭಕ್ತ ರಾಜನ ಶಿಕ್ಷೆಯನ್ನು ಮರಣದಂಡನೆಯಿಂದ ಕೆಲವು ವರ್ಷಗಳ ಗಡಿಪಾರಿಗೆ ಇಳಿಸಲಾಯಿತು. ಅದಾದ ಬಳಿಕ ಕೆಲವೇ ದಿನಗಳಲ್ಲಿ ರಾಜನನ್ನು ಅಂಡಮಾನಿಗೆ ಸಾಗಿಸುವುದಿತ್ತು. ಆದರೆ ರಾಜ ತನ್ನ ಇಂಗ್ಲಿಷ್ ಕಾವಲುಗಾರನ ಪಿಸ್ತೂಲನ್ನು ತೆಗೆದುಕೊಂಡು ಯಾರೂ ಇಲ್ಲದ ಸಮಯದಲ್ಲಿ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ. ಅದಕ್ಕೆ ಮೊದಲು ಅವನು ‘ಸೆರೆಮನೆ ಮತ್ತು ಗಡಿಪಾರು? ನನ್ನ ರಾಜ್ಯದ ಗುಡ್ಡಗಾಡಿನ ನಿವಾಸಿಯೂ ಸೆರೆಯಲ್ಲಿರಲಾರ. ಹಾಗಿರುವಾಗ ಅವರ ದೊರೆ ಸೆರೆಯಲ್ಲಿರುವನೇ?’ ಎಂದು ಗುಡುಗಿದ್ದ.
ಆದರೆ ವಾಸ್ತವದಲ್ಲಿ ವೆಂಕಟಪ್ಪನಾಯಕ ತನ್ನ ಅನುಯಾಯಿಗಳ ಹೆಸರುಗಳನ್ನು ಟೇಲರ್ಗೆ ತಿಳಿಸಿದ್ದನೆ? 1858ರ ಮಾರ್ಚ್ 22ರಂದು ಮೆಡೋಸ್ ಟೇಲರ್ ನೀಡಿರುವ ಯಾದಿಯೊಂದು ಬೊಂಬಾಯಿ ಪತ್ರಾಗಾರದಲ್ಲಿ ಲಭ್ಯವಿದೆ. ಅದರಲ್ಲಿ ಈ ಕೆಳಕಂಡಂತೆ ದಾಖಲಿಸಲಾಗಿದೆ: ‘ರಾಜ ವೆಂಕಟಪ್ಪ ನೀಡಿರುವ ಸುರಪುರದ ಪಿತೂರಿಯಲ್ಲಿ ಭಾಗಿಗಳಾದವರ ಯಾದಿ – ಪಕ್ಕದಲ್ಲೆ ರಾಜನು ಬರೆದಿರುವ ಟಿಪ್ಪಣಿಯೊಂದಿಗೆ’. ಇದರಲ್ಲಿ ಸುಮಾರು 95 ಮಂದಿಯ ಹೆಸರುಗಳಿವೆ.
ನಾಯಕನ ಪರವಾಗಿ ಹೋರಾಡಿದ ಜಮೇದಾರ ತಾಸ್ದಿಕ್ ಹುಸೇನ್ನನ್ನು ಸೆರೆಹಿಡಿದ ಬ್ರಿಟಿಷರು 1858ರ ಜುಲೈ 3ರಂದು ಸುರಪುರದ ಬಜಾರ್ನಲ್ಲಿ ಬಹಿರಂಗವಾಗಿ ನೇಣಿಗೇರಿಸುತ್ತಾರೆ.
ಇದರೊಂದಿಗೆ ಸುಮಾರು 30 ತಲೆಮಾರುಗಳಿಂದ ನಡೆದುಬಂದಿದ್ದ ಸುರಪುರದ ಸಂಸ್ಥಾನದ ಕೊನೆಯಾಯಿತು. ಅಂತಿಮವಾಗಿ ವೆಂಕಟಪ್ಪನಾಯಕನ ಮರಣ ‘ಆಕಸ್ಮಿಕವೇ, ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಸಂಗತಿ ಇನ್ನೂ ನಿಗೂಢವಾಗಿ ಉಳಿದಿದೆ.’ ಮೆಡೋಸ್ ಟೇಲರ್ ಇದನ್ನು ಆತ್ಮಹತ್ಯೆಯೆಂದು ಭಾವಿಸುವುದಿಲ್ಲ. ಬದಲಿಗೆ ವೆಂಕಟಪ್ಪನಾಯಕನಿಗಿದ್ದ ಕುತೂಹಲಕಾರಿ ಬುದ್ಧಿ ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂಬುದು ಆತನ ಅಭಿಪ್ರಾಯ. ಚಿಕ್ಕ ವಯಸ್ಸಿನಿಂದಲೂ ಹೊಸತಾದ ಯಾವ ವಸ್ತುವನ್ನು ಕಂಡರೂ ನಾಯಕ ಅದನ್ನು ಕೈಗೆತ್ತಿಕೊಂಡು ಹಿಂದೆಮುಂದೆ ತಿರುಗಿಸಿ ನೋಡುವ ಸ್ವಭಾವದವನಾಗಿದ್ದ. ಪ್ರಾಯಶಃ ಅದೇ ರೀತಿಯಲ್ಲಿ ಲೆಫ್ಟಿನೆಂಟ್ ಪಿಕ್ಟೇಟ್ ಕಳಚಿಟ್ಟಿದ್ದ ಪಿಸ್ತೂಲಿನ ಮೇಲೆ ಕೈಯಾಡಿಸುವಾಗ ಆಕಸ್ಮಿಕವಾಗಿ ಕುದುರೆಯನ್ನು ಅದುಮಿ ಸಾವನ್ನಪ್ಪಿರಬಹುದೆಂದು ಆತ ಊಹಿಸುತ್ತಾನೆ.
ಡಂಬಳ, ಕೊಪ್ಪಳ ಮತ್ತು ಮುಂಡರಗಿ ಭೀಮರಾಯ
1857ರ ಸಂಗ್ರಾಮದಲ್ಲಿ ಡಂಬಳ, ಕೊಪ್ಪಳಗಳಲ್ಲಿ ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿ ರಣಭೂಮಿಯಲ್ಲಿ ಪ್ರಾಣಾರ್ಪಣೆ ಮಾಡಿದ ಮುಂಡರಗಿ ಭೀಮರಾಯ ಬ್ರಿಟಿಷರ ವಿರುದ್ಧದ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ. ಇದೇ ಸಮಯದಲ್ಲಿ ಹಲಗಲಿಯ ಯುದ್ಧದಲ್ಲಿ ನೇಣಿಗೇರಿಸಲ್ಪಟ್ಟ ಮೊಂಡಗೈ ಭೀಮರಾಯನ ಮೊಮ್ಮಗನೀತ ಎಂದು ತಿ.ತಾ. ಶರ್ಮ ದಾಖಲಿಸುತ್ತಾರೆ. ಇಂಗ್ಲಿಷ್, ಮರಾಠಿ, ಮತ್ತು ಕನ್ನಡದಲ್ಲಿ ಸುಲಲಿತವಾಗಿ ಮಾತನಾಡಬಲ್ಲ 35 ವರ್ಷ ವಯಸ್ಸಿನ ಭೀಮರಾಯ ಮೊದಲು ಹರಪನಹಳ್ಳಿ ಮತ್ತು ಬಳ್ಳಾರಿಗಳಲ್ಲಿ ಮಾಮಲೆದಾರನಾಗಿ ಬ್ರಿಟಿಷರ ಸೇವೆಯಲ್ಲಿದ್ದ. ‘ತನ್ನ ಮೇಲಿನ ಬಿಳಿಯ ಅಧಿಕಾರಿಗಳ ನಡತೆ, ಮಾತು, ಮೇಲಾಗಿ ಅವರು ಸ್ಥಳೀಯ ಜನರನ್ನು ಕೀಳಾಗಿ ಕಾಣುತ್ತಿದ್ದ ದುರಹಂಕಾರಿ ಪ್ರವೃತ್ತಿ ಮೊದಲಾದವುಗಳಿಂದ ಕಿಡಿಕಿಡಿಯಾಗುತ್ತಿದ್ದ’, ಭೀಮರಾಯ! ಆನಂತರದಲ್ಲಿ ಅಕಾರಣವಾಗಿ ಕೆಲಸದಿಂದ ವಜಾಗೊಂಡಿದ್ದ ಆತನಿಗೆ 1857ರ ವಿಪ್ಲವ ವರವಾಗಿ ಬಂದಂತಾಗುತ್ತದೆ. ನಾನಾಸಾಹೇಬನೊಂದಿಗೆ ಸಂಪರ್ಕ ಸಾಧಿಸಿ, ಸ್ಥಳೀಯ ರಾಜರುಗಳಾದ ನರಗುಂದದ ಬಾಬಾಸಾಹೇಬ ಮತ್ತಿತರ ದೇಸಾಯಿ, ದೇಶಮುಖರುಗಳನ್ನು ಒಗ್ಗೂಡಿಸಿ ಬ್ರಿಟಿಷ್ ಆಧಿಪತ್ಯದ ವಿರುದ್ಧ ಒಂದೇ ದಿನ ಎಂದರೆ 1858ರ ಮೇ 27ರಂದು ದಂಗೆಯೇಳುವಂತೆ ಕಾರ್ಯತಂತ್ರವನ್ನು ರೂಪಿಸುತ್ತಾನೆ. ಇವರೊಂದಿಗೆ ಬೆಳಗಾಂವ್, ಧಾರವಾಡ ಮೊದಲಾದ ಸ್ಥಳಗಳಲ್ಲಿರುವ ಬ್ರಿಟಿಷ್ ಸೇನೆಯ ದೇಶೀಯ ಸಿಪಾಯಿಗಳೂ ಸೇರಿರುತ್ತಾರೆ.
ಭೀಮರಾವ್ ಮುಂಡರಗಿಯ ಮನೋಧರ್ಮ, ಕಾರ್ಯಕ್ಷಮತೆಯ ಪರಿಚಯವಿದ್ದ ಬ್ರಿಟಿಷರು ನಿರಂತರವಾಗಿ ಆತನ ಚಟುವಟಿಕೆಗಳನ್ನು ಗಮನಿಸುತ್ತಿರುತ್ತಾರೆ. 1857ರ ಆಗಸ್ಟ್ 1ರಂದು ಧಾರವಾಡದ ಕಮಿಶನರ್ನ ಆದೇಶದಂತೆ ಆತನನ್ನು ಕಚೇರಿಯಲ್ಲಿ ಕಂಡುಬಂದ ಬಳಿಕ ಶಸ್ತ್ರಾಸ್ತ್ರಗಳ ಸಂಗ್ರಹಣೆಯನ್ನು ತೀವ್ರಗೊಳಿಸುತ್ತಾನೆ. ಆದರೆ ಬ್ರಿಟಿಷರು ಆತನ ಸಹಚರ, ಡಂಬಳದ ಅಧಿಕಾರಿ ಹಮ್ಮಿಗೆಯ ಕೆಂಚನಗೌಡನ ಮನೆಯನ್ನು ಮುತ್ತಿ, ಅಲ್ಲಿದ್ದ ಶಸ್ತ್ರಾಸ್ತ್ರಗಳಿಗೆ ಬೀಗಮುದ್ರೆಯನ್ನೊತ್ತುತ್ತಾರೆ. ತನ್ನ ಸಂಚು ಬಯಲಾದ ಪ್ರಯುಕ್ತ ಮುಂಡರಗಿ ಭೀಮರಾಯ 1858ರ ಮೇ 24ರಂದು 70 ಮಂದಿ ಸಶಸ್ತ್ರ ಅನುಚರರೊಂದಿಗೆ ಅಲ್ಲಿಗೆ ಧಾವಿಸಿ, ಬೀಗಮುದ್ರೆಯನ್ನೊಡೆದು, ಕೆಂಚನಗೌಡನೊಂದಿಗೆ ಶಸ್ತ್ರಗಳನ್ನು ಡಂಬಳಕ್ಕೆ ಹೊತ್ತೊಯ್ಯುತ್ತಾನೆ. ಹಮ್ಮಿಗೆಯಲ್ಲಿ ಶತ್ರುಗಳಿಗೆ ಸುದ್ದಿಯನ್ನು ನೀಡಿದ ಖೊವಾಸ್ ಹುಸೇನ್ ಎಂಬವನನ್ನು ಕೊಲ್ಲಲಾಯಿತು. ಡಂಬಳ ಸೇರಿ ಅಲ್ಲಿಯ ಖಜಾನೆಯನ್ನು ಸೂರೆಗೊಂಡು ಭೀಮರಾವ್ ಮುಂಡರಗಿ ಅಲ್ಲಿಂದ ಗದಗದಲ್ಲಿ ಭಾರತೀಯರಿಗೆ ಮಾರಕವಾಗಿದ್ದ ಅಂಚೆ ಮತ್ತು ತಂತಿ ಕಚೇರಿಯನ್ನು ಧ್ವಂಸಗೊಳಿಸಿ ಕೊಪ್ಪಳದುರ್ಗವನ್ನು ಸೇರುತ್ತಾನೆ. ಮೇ 30ರಂದು ಕೊಪ್ಪಳದುರ್ಗ ಸುಲಭವಾಗಿ ಅವನ ಕೈಸೇರಿತು. ಕೊಪ್ಪಳದುರ್ಗ ಅತ್ಯಂತ ದುರ್ಗಮವಾದುದೆಂದು ಹೆಸರಾಗಿದೆ. ಇದನ್ನಾಕ್ರಮಿಸಿ ಕುಳಿತ ಭೀಮರಾಯನನ್ನು ಮಣಿಸಲು ಬ್ರಿಟಿಷ್ ಸೇನೆ ಬಳ್ಳಾರಿ, ರಾಯಚೂರು, ಧಾರವಾಡ ಮತ್ತು ಹೈದರಾಬಾದ್ನಿಂದ ಹೊರಟು ದುರ್ಗವನ್ನು ಸುತ್ತುವರಿಯುತ್ತದೆ. ಇಲ್ಲಿಯೂ ವಂಚಕರದ್ದೇ ಮೇಲುಗೈ. ಜೂನ್ 1ರಂದು ನಡೆದ ಭೀಕರ ಕಾಳಗದಲ್ಲಿ ಭೀಮರಾವ್, ಕೆಂಚನಗೌಡ ಹಾಗೂ ಅವರ ನೂರಾರು ಮಂದಿ ಅನುಚರರು ಸಾವನ್ನಪ್ಪಿದರು. ವಂಚಕರ ಸಹಾಯದಿಂದ ಬ್ರಿಟಿಷ್ ಸೈನ್ಯ ಕೋಟೆಯೊಳಕ್ಕೂ ನುಗ್ಗಿತು. ಸೆರೆಸಿಕ್ಕವರನ್ನೆಲ್ಲ ಸೈನಿಕ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು 80 ಮಂದಿಗೆ ಮರಣದಂಡನೆ ವಿಧಿಸಿ, 40 ಜನರನ್ನು ಆಜೀವ ಕಾರಾಗೃಹವಾಸಕ್ಕೆ ತಳ್ಳಿತು. ಉಳಿದ 8 ಮಂದಿಯನ್ನು 5 ವರ್ಷಗಳ ಕಠಿಣ ಶಿಕ್ಷೆಗೆ ಗುರಿಮಾಡಿತು. 12 ಜನರು 1 ವರ್ಷ ಕಠಿಣ ಸಜೆಗೆ ಗುರಿಯಾದರು. ದ್ರೋಹಿ ಹುಸೇನ್ನನ್ನು ಹಮ್ಮಿಗೆಯಲ್ಲಿ ಕೊಂದಿದ್ದಕ್ಕಾಗಿ ಸಣ್ಣದ್ಯಾಮ ಮತ್ತು ಲಿಂಗಫಾಯ್ (ಲಿಂಗಪ್ಪಯ್ಯ?) ಲಿಂಗ್ಯ ಎಂಬವರನ್ನು ಜುಲೈನಲ್ಲೂ, ಮನೆಬಸಪ್ಪ ವೀರಭದ್ರಪ್ಪನನ್ನು ನವಂಬರ್ನಲ್ಲೂ ನೇಣಿಗೇರಿಸುತ್ತಾರೆ. ಭೀಮರಾವ್ನ ಬಳಿ ನಾನಾಸಾಹೇಬ್ ದಕ್ಷಿಣದ ವತನದಾರರು, ಸರಕಾರಿ ಅಧಿಕಾರಿಗಳು, ದಖ್ಖನ್ನಿನ ಜನತೆಯನ್ನುದ್ದೇಶಿಸಿ ನೀಡಿದ ಘೋಷಣಾಪತ್ರದ 12 ಪ್ರತಿಗಳು ದೊರೆತಿರುವುದು ಆತನಿಗೆ ರಾಷ್ಟ್ರೀಯ ನಾಯಕರೊಂದಿಗೆ ಇದ್ದ ಸಂಪರ್ಕವನ್ನು ದೃಢಪಡಿಸುತ್ತದೆ.
ವಿದ್ರೋಹಿಗಳ ಆಸ್ತಿಯನ್ನೆಲ್ಲ ಸರಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಭೀಮರಾವ್ನ ಕುಟುಂಬದಲ್ಲಿರುವ ಆತನ 35 ವರ್ಷ ವಯಸ್ಸಿನ ಮಲತಾಯಿ ಗಂಗಾಬಾಯಿ, ಮೊದಲ ಪತ್ನಿ 30 ವರ್ಷದ ಜೀವೂಬಾಯಿ, ಆಕೆಯ ಮಗ 9 ವರ್ಷ ವಯಸ್ಸಿನ ರಂಗರಾವ್, ಎರಡನೆಯ ಪತ್ನಿ 20 ವರ್ಷದ ವೆಂಕುಬಾಯಿ, ಅವಳ ಮಗಳು 2 ತಿಂಗಳ ಹಸುಗೂಸು ತುಳಸವ್ವ ಇವರಿಗೆ ತಿಂಗಳಿಗೆ 30 ರೂಪಾಯಿಗಳ ಮಾಸಾಶನವನ್ನು ನೀಡುತ್ತದೆ.
ವಿದ್ರೋಹದ ಸಮಯದಲ್ಲಿ ಹಮ್ಮಿಗೆಯ ಕೆಂಚನಗೌಡನಿಗೆ 40 ವರ್ಷ ವಯಸ್ಸಾಗಿತ್ತು. ಕೆಂಚನಗೌಡನಿಗೆ ಇಬ್ಬರು ಪತ್ನಿಯರಿದ್ದು ಒಬ್ಬಾಕೆಯ ಹೆಸರು ಚೆನ್ನವ್ವ ಮತ್ತೊಬ್ಬಾಕೆಯ ಹೆಸರು ಗುಂಡವ್ವ ಎಂದಾಗಿದೆ. ಆತನ ಮರಣದ ಸಮಯದಲ್ಲಿ 32 ವರ್ಷದ ಚೆನ್ನವ್ವನಿಗೆ 16 ವರ್ಷದ ಚೆನ್ನವೀರವ್ವ ಮತ್ತು 11 ವರ್ಷದ ಬಸಂತವ್ವ ಎಂಬ ವಿವಾಹಿತ ಹೆಣ್ಣು ಮಕ್ಕಳಿರುವರು. ಮತ್ತೊಬ್ಬ ಪತ್ನಿ 25ರ ಗುಂಡವ್ವ ಎಂಬಾಕೆ ಈರವ್ವ (8 ವರ್ಷ) ಮತ್ತು ನೀಲವ್ವ (3 ವರ್ಷ) ಎಂಬ ಅವಿವಾಹಿತ ಮಕ್ಕಳಲ್ಲದೆ 3 ತಿಂಗಳ ಗಂಡು ಮಗುವಿನ ತಾಯಿಯೂ ಆಗಿದ್ದಳು. ಇವರೆಲ್ಲರಿಗಾಗಿ ಕಂಪೆನಿ ಸರಕಾರ ತಿಂಗಳಿಗೆ 30 ರೂಪಾಯಿಗಳನ್ನು ನಿಗದಿಮಾಡುತ್ತದೆ.
ಡಂಬಳದ ವೆಂಕಪ್ಪಯ್ಯ ದೇಸಾಯಿ ಅಥವಾ ಶೀನಪ್ಪ ದೇಸಾಯಿಯನ್ನು ಜೂನ್ 12ರಂದು ಫಿರಂಗಿಗೆ ಕಟ್ಟಿ ಉಡಾಯಿಸಲಾಯಿತು. ಆಗ ಆತನ ವಯಸ್ಸು ಕೇವಲ 20 ವರ್ಷಗಳು. ಸರಕಾರ ಆತನ ಅಜ್ಜಿ 60 ವರ್ಷದ ಗಾಯತ್ರಿಬಾಯಿ, 40 ವರ್ಷದ ತಾಯಿ ರಮಾಬಾಯಿ, ವಿಧವೆ 20 ವಯಸ್ಸಿನ ಲಕ್ಷ್ಮಿಬಾಯಿ, ಆಕೆಯ ಮೂರು ತಿಂಗಳ ಹಸುಗೂಸು ಇವರ ಜೀವನೋಪಾಯಕ್ಕಾಗಿ 20 ರೂಪಾಯಿಯನ್ನು ತಿಂಗಳಿಗೆ ನಿಗದಿಮಾಡುತ್ತದೆ.
ನರಗುಂದ
ಸುರಪುರದ ವೆಂಕಟಪ್ಪನಾಯಕನಂತೆ ಬ್ರಿಟಿಷರ ವಿರುದ್ಧ ಸಾಹಸದಿಂದ ಮೆರೆದ ನರಗುಂದದ ರಾಜ ಭಾಸ್ಕರ್ರಾವ್ ಭಾವೆ ಅಥವಾ ಬಾಬಾಸಾಹೇಬ್ ಎಂದು ಜನಪ್ರಿಯನಾಗಿದ್ದ ಮತ್ತೊಬ್ಬ ವ್ಯಕ್ತಿಯ ಶೌರ್ಯದ ಗಾಥೆಯನ್ನು ಲಾವಣಿಗಳ ರೂಪದಲ್ಲಿ ಉತ್ತರ ಕರ್ನಾಟಕದ ಜನತೆ ಇಂದಿಗೂ ಗುನುಗುನಿಸುತ್ತದೆ. ನರಗುಂದದ ಬಾಬಾಸಾಹೇಬ್, ಸುರಪುರದ ವೆಂಕಟಪ್ಪನಾಯಕ, ಜಮಖಂಡಿಯ ಅಪ್ಪಾಸಾಹೇಬ್ ಪಟವರ್ಧನ್, ಡಂಬಳದ ಭೀಮರಾವ್ ಮುಂಡರಗಿ ಇವರೆಲ್ಲ ಒಂದೇ ಗರಡಿಯಲ್ಲಿ ಬ್ರಿಟಿಷರ ವಿರುದ್ಧ ಸವಾಲನ್ನೆಸೆದು ನಿಂತವರು. ಪರಸ್ಪರ ಸ್ನೇಹ, ಪತ್ರವ್ಯವಹಾರ, ನಾನಾಸಾಹೇಬ್ ಪೇಶ್ವೆಯೊಂದಿಗೆ ಸಂಪರ್ಕ, ಬ್ರಿಟಿಷ್ ಸೇನೆಯ ದೇಶೀಯ ರೆಜಿಮೆಂಟ್ಗಳಿಗೆ ರಾಯಭಾರಿಗಳನ್ನು ಕಳುಹಿಸುವುದು ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಎಲ್ಲರೂ 1857ರಲ್ಲಿ ಬ್ರಿಟಿಷರ ಕಾಕದೃಷ್ಟಿಗೆ ಗುರಿಯಾದವರು.
1842ರಲ್ಲಿ ನರಗುಂದದ ಗಾದಿಯನ್ನೇರಿದ ಬಾಬಾಸಾಹೇಬ್ನ ಏಕೈಕ ಪುತ್ರ ಅಕಾಲಿಕ ಮರಣಕ್ಕೆ ತುತ್ತಾದಾಗ ದತ್ತು ಸ್ವೀಕರಿಸಲು 1846ರಲ್ಲಿ ಈತ ಕಳುಹಿಸಿದ ಬೇಡಿಕೆಯನ್ನು ಬ್ರಿಟಿಷ್ ಸರಕಾರದ ಇನಾಂ ಕಮಿಶನರ್ ಆಗಿದ್ದ ಮಾನ್ಸನ್ ತಳ್ಳಿಹಾಕುತ್ತಾನೆ. ಪಕ್ಕದ ಸಂಸ್ಥಾನ ರಾಮದುರ್ಗದ ರಾಣಿಯಾಗಿದ್ದ ಬಾಬಾಸಾಹೇಬನ ಚಿಕ್ಕಮ್ಮನಿಗೆ 1829ರಲ್ಲಿ ದತ್ತು ಸ್ವೀಕಾರಕ್ಕೆ ಅನುಮತಿ ನೀಡಿದ್ದ ಬ್ರಿಟಿಷರ ಪಕ್ಷಪಾತ ಧೋರಣೆ ಬಾಬಾಸಾಹೇಬನನ್ನು ಕೆರಳಿಸಿದ್ದು ಸಹಜ.
1857ರ ವಿದ್ರೋಹದ ಹಿನ್ನೆಲೆಯಲ್ಲಿ ಬ್ರಿಟಿಷ್ ಸರಕಾರ ಭಾರತೀಯರನ್ನು ನಿಶ್ಶಸ್ತ್ರಗೊಳಿಸಲು ಹೊಸ ಕಾಯ್ದೆಯನ್ನು ಜಾರಿಗೆ ತರುತ್ತದೆ. 1858ರ ಮೇ ತಿಂಗಳಿನಲ್ಲಿ ಧಾರವಾಡದ ದಂಡಾಧಿಕಾರಿಯಾಗಿದ್ದ ಥಾಮಸ್ ಓಗಿಲ್ವಿ ನರಗುಂದದ ರಾಜನಿಗೂ ಕೋಟೆಯಲ್ಲಿದ್ದ ಭಾರಿ ಫಿರಂಗಿಗಳು, ಸಿಡಿಮದ್ದು, ಮತ್ತು ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ವಶಕ್ಕೊಪ್ಪಿಸುವಂತೆ ಆದೇಶ ನೀಡುತ್ತಾನೆ. ಇದಕ್ಕನುಗುಣವಾಗಿ ರಾಜ ಶಸ್ತ್ರಾಸ್ತ್ರಗಳನ್ನು ಧಾರವಾಡಕ್ಕೆ ಕಳುಹಿಸಿಕೊಡುವನಾದರೂ ಅತಿಯಾಗಿ ಸುರಿಯುತ್ತಿರುವ ಮಳೆಯ ನೆಪವನ್ನೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೆ ಉಳಿಸಿಕೊಂಡು ಮಿಕ್ಕ ಸಾಮಗ್ರಿಗಳನ್ನು ಮೇ 7ರಂದು ಧಾರವಾಡಕ್ಕೆ ಕಳುಹಿಸಿದ. ಆದರೆ ನರಗುಂದದಿಂದ ಮೂರು ಮೈಲಿ ದೂರದಲ್ಲಿದ್ದ ಜಗಪುರವೆಂಬಲ್ಲಿ ಅವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನೂ ದೋಚಿಕೊಂಡು ಬರುತ್ತಾರೆ.
ಇದೇ ಸಮಯದಲ್ಲಿ ಎಂದರೆ ಮೇ 24ರಂದು ಭೀಮರಾವ್ ಮುಂಡರಗಿ ಡಂಬಳದಲ್ಲಿ ಬ್ರಿಟಿಷರ ವಿರುದ್ಧ ದಂಗೆಯೆದ್ದ ಸುದ್ದಿಯನ್ನು ಕೇಳಿದ ರಾಜ ತಕ್ಷಣ ಅದರ ಪರಿಣಾಮವನ್ನೆದುರಿಸಲು ತನ್ನ ಬಳಿಯಿದ್ದ ಫಿರಂಗಿಗಳನ್ನು ಕೋಟೆಯ ಗೋಡೆಯ ಮೇಲಿಟ್ಟು ಸನ್ನದ್ಧನಾಗುತ್ತಾನೆ. ನರಗುಂದದ ರಾಜನ ವಿದ್ರೋಹವನ್ನು ಮೊಳಕೆಯಲ್ಲೆ ಚಿವುಟಿಹಾಕಲು ಮೇ 26ರಂದು ದಕ್ಷಿಣ ಮರಾಠ ಪ್ರದೇಶದ ಪ್ರಸಕ್ತ ರಾಜಕೀಯ ಪ್ರತಿನಿಧಿಯಾಗಿದ್ದ ಸಿ.ಜೆ. ಮ್ಯಾನ್ಸನ್ ಕೊಲ್ಲಾಪುರದಿಂದ ಹೊರಟು ಮಾರ್ಗದಲ್ಲಿ ಕುರುಂದವಾಡ ಮತ್ತು ರಾಮದುರ್ಗವನ್ನು ಸೇರುತ್ತಾನೆ. ರಾಮದುರ್ಗದ ರಾಜ – ನರಗುಂದದ ಬಾಬಾಸಾಹೇಬನ ಮಲ ಸಹೋದರ – ಬ್ರಿಟಿಷರಿಗೆ ತನ್ನ ನಿಷ್ಠೆಯ ಭರವಸೆ ನೀಡುವನಲ್ಲದೆ ಬಾಬಾಸಾಹೇಬ್ ವಿದ್ರೋಹಕ್ಕೆ ಸಹಕಾರ ಕೇಳಿ ಆತನಿಗೆ ಬರೆದಿದ್ದ ಪತ್ರಗಳನ್ನು ಮ್ಯಾನ್ಸನ್ ಮುಂದೆ ಬಿಚ್ಚಿಡುತ್ತಾನೆ. ಕೇವಲ ಹನ್ನೆರಡು ಸವಾರರೊಂದಿಗೆ ರಾಮದುರ್ಗವನ್ನು ಸೇರಿದ್ದ ಮ್ಯಾನ್ಸನ್ ಕಲಾದಗಿಯಿಂದ ಕರ್ನಲ್ ಮಾಲ್ಕಂನ ಪಡೆಗಳು ಬರುವವರೆಗೂ ತಾಳದೆ, ರಾಮದುರ್ಗದ ರಾಜನ ಎಚ್ಚರಿಕೆಯ ಹೊರತಾಗಿಯೂ, ತಕ್ಷಣ ನರಗುಂದದ ಕಡೆ ಹೊರಟು ಮೇ 29ರ ರಾತ್ರಿ ಸುರೇಬಾನ್ ಎಂಬ ಹಳ್ಳಿಯ ಬಳಿ ತಂಗುತ್ತಾನೆ. ಮಧ್ಯರಾತ್ರಿಯ ವೇಳೆ ಬಾಬಾಸಾಹೇಬ್ ಸುಮಾರು 800 ಸೈನಿಕರೊಂದಿಗೆ ಮ್ಯಾನ್ಸನ್ ಬಿಡಾರವನ್ನು ಸುತ್ತುವರಿದು ದಾಳಿ ಮಾಡಿದಾಗ ಅನೇಕರು ಹತರಾಗುತ್ತಾರೆ. ಮ್ಯಾನ್ಸನ್ ತಾನು ಮಲಗಿದ್ದ ಮೇನೆಯೊಳಗಿನಿಂದ ಗುಂಡುಹಾರಿಸಿದನೆಂದು ಲಿಗ್ರ್ಯಾಂಡ್ ತಿಳಿಸಿದರೆ, ದಿವೇಕರ್ರವರ ಪ್ರಕಾರ ಅವನು ಒಂದು ಮಾರುತಿಮಂದಿರದಲ್ಲಿ ಅಡಗಿಕೊಳ್ಳುತ್ತಾನೆ. ಆದರೆ ಕ್ಷಣಮಾತ್ರದಲ್ಲಿ ಕತ್ತಿಯಿಂದ ಆತನ ಮೇಲೆರಗಿದ ಆಕ್ರಮಣಕಾರಿಗಳು ತಲೆಯನ್ನು ಕತ್ತರಿಸಿ, ಮುಂಡವನ್ನು ಅಲ್ಲೆ ಉರಿಯುತ್ತಿದ್ದ ಬೆಂಕಿಗೆ ಒಗೆದು, ರುಂಡವನ್ನು ಸಂಭ್ರಮದಿಂದ ಕೊಂಡೊಯ್ದು ಕೋಟೆಯ ದ್ವಾರಕ್ಕೆ ತೂಗುಹಾಕುತ್ತಾರೆ. ಕಾಳಗದಲ್ಲಿ ಮ್ಯಾನ್ಸನ್ನೊಂದಿಗಿದ್ದ ದಕ್ಷಿಣ ಮರಾಠ ಅಶ್ವದಳದ ಪೂರನ್ಸಿಂಗ್ ಸಹಿತ ಹತನಾದ.
ಮ್ಯಾನ್ಸನ್ನನ್ನು ಬಲಿತೆಗೆದುಕೊಂಡದ್ದೇನೋ ಆಯಿತು. ಆದರೆ ಅವನ ಬಳಿ ಸಿಕ್ಕ ಪತ್ರಗಳಿಂದ ಬಾಬಾಸಾಹೇಬನಿಗೆ ತನ್ನ ಅನುಚರರಲ್ಲಿ ಕೃಷ್ಣಾಜಿಪಂತ ಮೊದಲಾದವರು ತನಗೆ ದ್ರೋಹಬಗೆದು ಬ್ರಿಟಿಷರಿಗೆ ನೆರವಾಗುತ್ತಿರುವ ವಿಚಾರ ವೇದ್ಯವಾಗುತ್ತದೆ. ಆದರೇನು? ಅವಮಾನಿತನಾಗಿ ಬದುಕುವುದಕ್ಕಿಂತ ಸಾವೇ ಗೌರವಯುತವೆಂದು ಭಾವಿಸುವ ಬಾಬಾಸಾಹೇಬ್ ಯುದ್ಧಕ್ಕೆ ಅಣಿಯಾದನಾದರೂ ಬ್ರಿಟಿಷರು ಒಡ್ಡಿದ ಲಾಲಸೆಗೆ ಸಿಕ್ಕಿದ ಅವನ ಅನುಚರರು ಮದ್ದಿನ ಮನೆಗೆ ಸಗಣಿ ತುಂಬಿ ಅವನ ಸೋಲಿಗೆ ನಾಂದಿ ಹಾಡಿರುತ್ತಾರೆ.
ಇತ್ತ ಡಂಬಳದ ದಂಗೆಯನ್ನು ಹತ್ತಿಕ್ಕಲು ಹೋಗಿದ್ದ ಕರ್ನಲ್ ಮ್ಯಾಲ್ಕಂ ಕೊಪ್ಪಳ ದುರ್ಗದಲ್ಲಿ ವಿದ್ರೋಹಿಗಳನ್ನು ಸೋಲಿಸಿ, ದುರ್ಗವನ್ನು ವಶಕ್ಕೆ ತೆಗೆದುಕೊಂಡು ತಕ್ಷಣ ಧಾರವಾಡದಿಂದ ಹೆಚ್ಚಿನ ಪಡೆಗಳೊಂದಿಗೆ ಜೂನ್ 1ರಂದು ನರಗುಂದವನ್ನು ಸೇರುತ್ತಾನೆ. ಅಭೇದ್ಯ ಕೋಟೆಯಲ್ಲಿ ಸೇರಿದವರನ್ನು ಹೊರಕ್ಕೆಳೆಯಲು ತಂತ್ರಹೂಡಿದ ಕರ್ನಲ್ ಮ್ಯಾಲ್ಕಂ ಕೋಟೆಯ ಗೋಡೆಯವರೆಗೂ ಸರಿದು ಹಿಮ್ಮೆಟ್ಟುವಂತೆ ನಟಿಸುತ್ತಾನೆ. ತಮ್ಮ ಗೆಲವು ನಿಶ್ಚಯವೆಂಬ ತಪ್ಪು ತಿಳಿವಳಿಕೆಯಿಂದ ಕೋಟೆಯಿಂದ ಹೊರಬಿದ್ದ ವಿದ್ರೋಹಿಗಳ ಮೇಲೆ ತಿರುಗಿಬಿದ್ದಾಗ 60 ಮಂದಿ ಹತರಾಗುತ್ತಾರೆ. ಪಟ್ಟಣವನ್ನು ಕೂಡಲೆ ತನ್ನ ವಶಕ್ಕೆ ತೆಗೆದುಕೊಂಡ ಶತ್ರುಗಳು ಕೋಟೆಯ ಮೇಲಿನ ಆಕ್ರಮಣವನ್ನು ಮರುದಿನದವರೆಗೂ ಮುಂದಕ್ಕೆ ತಳ್ಳುತ್ತಾರೆ. ಸ್ವಜನರ ದ್ರೋಹ, ಸುಸಜ್ಜಿತ ಶತ್ರುಪಡೆ ಇವೆರಡರ ಮಧ್ಯೆ ಸಿಲುಕಿದ ಬಾಬಾಸಾಹೇಬ್ ಅಂದು ರಾತ್ರಿ ಆರು ಜನ ವಿಶ್ವಾಸಿ ಅನುಚರರೊಂದಿಗೆ ದುರ್ಗದಿಂದ ಪರಾರಿಯಾಗುತ್ತಾನೆ. ಕೋಟೆ ಶತ್ರುಗಳ ವಶವಾಯಿತು. ಮರುದಿನ ಎಂದರೆ ಜೂನ್ 3ರಂದು ನರಗುಂದವನ್ನು ಬ್ರಿಟಿಷ್ ಆಧಿಪತ್ಯಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಅಧಿಸೂಚನೆಯನ್ನು ಹೊರಡಿಸಿ ಬ್ರಿಟಿಷ್ ಸರಕಾರ ಆ ಸಂಸ್ಥಾನದ ಇತಿಶ್ರೀ ಹಾಡಿತು.
ದುರ್ಗದಿಂದ ಪರಾರಿಯಾದ ಬಾಬಾಸಾಹೇಬ್ನನ್ನು ಹಿಡಿಯಲು ಸರಕಾರ 10,000 ರೂಪಾಯಿಗಳ ಬಹುಮಾನ ಘೋಷಿಸಿತು. ಬೆನ್ನಟ್ಟುವ ಬ್ರಿಟಿಷರು ಅವನನ್ನು ಹಿಡಿಯಲು ಪುನಃ ದ್ರೋಹಿಯ ನೆರವನ್ನು ಪಡೆಯುತ್ತಾರೆ. ಪೆÇಲೀಸ್ ಸೂಪರಿಂಟೆಂಡೆಂಟ್ ಫ್ರ್ಯಾಂಕ್ ಸೌಟರ್ ತನ್ನ `ಅಪಾರ ಕ್ಷಮತೆ, ಬೆನ್ನು ಬಿಡದ ಹಟ ಮತ್ತು ಚಾಕಚಕ್ಯತೆಯಿಂದ’ ತೋರಗಲ್ ಕಾಡಿನಲ್ಲಿ ಪಂಢರಪುರಕ್ಕೆ ಹೋಗುತ್ತಿರುವ ಯಾತ್ರಾರ್ಥಿಗಳ ಗುಂಪಿನಲ್ಲಿ ಮಾರುವೇಷದಲ್ಲಿದ್ದ ಆತನನ್ನು ಸೆರೆಹಿಡಿದು ಬೆಳಗಾಂವ್ಗೆ ತರುತ್ತಾನೆ. `ಇಂತು ಅತಿ ತೀವ್ರ ಹಾಗೂ ಕ್ಷಿಪ್ರ ಕಾರ್ಯಾಚರಣೆಯಿಂದ ಮ್ಯಾನ್ಸನ್ನ ಸಾವಿನ ಸೇಡನ್ನು ತೀರಿಸಿಕೊಳ್ಳಲಾಯಿತು.’
ಬೆಳಗಾಂವ್ನಲ್ಲಿ ಸೈನಿಕ ವಿಚಾರಣೆಗೆ ಗುರಿಪಡಿಸಿದ ಬಾಬಾಸಾಹೇಬ್ನನ್ನು ಅಪರಾಧಿಯೆಂದು ತೀರ್ಮಾನಿಸಿ ಮರಣದಂಡನೆಗೆ ಗುರಿಮಾಡಲಾಯಿತು. ಜೂನ್ 12ರಂದು ಮುಂಜಾನೆ ಆತನನ್ನು ಗಾಡಿಯ ಮೇಲೆ ನಿಲ್ಲಿಸಿ ಕೈಗಳಿಗೆ ಬೇಡಿ, ಕಾಲುಗಳಿಗೆ ದೊಣ್ಣೆಯನ್ನು ಕಟ್ಟಿ ಮಹಾರರಿಂದ ಬೀದಿಯಲ್ಲಿ ಎಳೆದುಕೊಂಡು ವಧಾಸ್ಥಾನಕ್ಕೆ ಕರೆದೊಯ್ಯುತ್ತಾರೆ. ಗಾಡಿಯ ಮುಂದೆ ತಮಟೆ ಬಾರಿಸುತ್ತ ನಡೆದ ಮೆರವಣಿಗೆ ಕೋಟೆಯಿಂದ ಮಾರುತಿ ಗಲ್ಲಿ, ರಾಮದೇವ್ ಗಲ್ಲಿ ಹಾದು ಈಗಿರುವ ಬೆಳಗಾಂವ್ ಕ್ಲಬ್ನ ಮುಂದಿರುವ ವಿಶಾಲ ಮೈದಾನವನ್ನು ಸೇರಿತು. ಹುಲ್ಲಿನ ಗುಡ್ಡದಲ್ಲಿ ನೆಡಲಾಗಿದ್ದ ನೇಣುಗಂಬಕ್ಕೆ ಬಾಬಾಸಾಹೇಬನನ್ನು ಕಟ್ಟಿದಾಗ ಕುಣಿಕೆಯ ಹಗ್ಗ ತುಂಡಾಗಿ ಅರೆಸತ್ತ ವೀರ ಕೆಳಗಿನ ಗುಣಿಯಲ್ಲಿ ಬೀಳುತ್ತಾನೆ. ಅರೆಪ್ರಜ್ಞಾವಸ್ಥೆಯಲ್ಲಿ ನರಳುತ್ತಿದ್ದ ಆತನ ಬಾಯಿಂದ ರಕ್ತ ಬುಗ್ಗೆಯೊಡೆಯುತ್ತಿತ್ತು. ಆದರೂ ಬಿಡದೆ ಮತ್ತೊಮ್ಮೆ ಕುಣಿಕೆಯನ್ನು ಸರಿಪಡಿಸಿ ಕತ್ತಿಗೆ ಬಿಗಿದಾಗ ಆತನ ಪ್ರಾಣಪಕ್ಷಿ ಹಾರಿಹೋಯಿತು. ರಾಜಮಾತೆ ಯಮುನಾಬಾಯಿ ಹಾಗೂ ಪತ್ನಿ ಸಾವಿತ್ರಿಬಾಯಿ ಮಲಪ್ರಭಾ ನದಿಯಲ್ಲಿ ಮುಳುಗಿ ಸತ್ತರು. ಪಟ್ಟಣವನ್ನು ಸೂರೆಗೊಂಡ ಬ್ರಿಟಿಷರು 4000 ಅಮೂಲ್ಯ ಸಂಸ್ಕೃತ ಗ್ರಂಥಗಳನ್ನು ಹೊಂದಿದ್ದ ಆತನ ಗ್ರಂಥಾಲಯವನ್ನು ನಾಶಮಾಡಿದರು.
ನರಗುಂದದ ನರಳಾಟ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಸರಕಾರ ರಾಜನನ್ನು ನೇಣಿಗೇರಿಸಿದ ಬಳಿಕ ಆತನ ಜೊತೆಯಲ್ಲಿದ್ದ ಐದು ಮಂದಿಯನ್ನು ವಿಚಾರಣೆಗೆ ಗುರಿಮಾಡಿ ರಾಜದ್ರೋಹದ ಅಪರಾಧಕ್ಕಾಗಿ ಧಾರವಾಡದಲ್ಲಿ ಜೂನ್ ತಿಂಗಳ ಅಂತ್ಯದಲ್ಲಿ ಗಲ್ಲಿಗೇರಿಸುತ್ತದೆ. ಇನ್ನೂ 30 ಮಂದಿ ಗಣ್ಯರನ್ನು ಸೆರೆಹಿಡಿದು, ವಿಚಾರಣೆ ನಡೆಸಿ ಮರಣದಂಡನೆಗೆ ಒಳಪಡಿಸಲಾಯಿತು. ಇಲ್ಲಿ ಮತ್ತು ಕೊಪ್ಪಳದಲ್ಲಿ ಸೆರೆಹಿಡಿದ 100 ಜನ ‘ಸಶಸ್ತ್ರ ದೊಂಬಿಕೋರರನ್ನು’ ಸೈನಿಕ ವಿಚಾರಣೆಯ ಬಳಿಕ ಗುಂಡಿಟ್ಟು ಕೊಲ್ಲಲಾಯಿತು. ಮ್ಯಾನ್ಸನ್ನ ಕೊಲೆಯಲ್ಲಿ ಪ್ರಮುಖ ಪಾತ್ರವಹಿಸಿದ ವಿಷ್ಣು ಕೃಷ್ಣ ಕುಲಕರ್ಣಿಯೂ ಸೇರಿದಂತೆ ಏಳು ಜನರನ್ನು ಹಿಡಿಯಲು ಸರಕಾರ ನಗದು ಬಹುಮಾನವನ್ನು ಘೋಷಿಸಿತು. ಜೂನ್ 10ರಂದು ನರಗುಂದದ ಪೇಟೆಯಲ್ಲಿ 14 ಜನರನ್ನು ನಿಲ್ಲಿಸಿ ಗುಂಡುಹಾರಿಸಿ ಕೊಲ್ಲಲಾಯಿತು. ಡಂಬಳ ಮತ್ತು ಸೊರಟೂರಿನ ಸರ್ದೇಸಾಯಿ ಶೀನಪ್ಪ ದೇಸಾಯಿಯನ್ನು ಜೂನ್ 12ರಂದು ಫಿರಂಗಿಗೆ ಕಟ್ಟಿ ಉಡಾಯಿಸುತ್ತಾರೆ. ಜೂನ್ 12ರಂದು ಐವರನ್ನು ಗುಂಡಿಟ್ಟು ಕೊಲ್ಲುವ ಶಿಕ್ಷೆಗೆ ಗುರಿಪಡಿಸಿದರೆ ಇಬ್ಬರಿಗೆ ತಲಾ ಎರಡು ಡಜನ್ ಛಡಿಯೇಟಿನ ಶಿಕ್ಷೆಯನ್ನು ನೀಡಲಾಯಿತು. ಜೂನ್ 16ರಂದು 16 ಜನರಲ್ಲಿ ಮೂವರು ಮರಣದಂಡನೆ, 11 ಜನರು ಆಜೀವ ಗಡೀಪಾರು, ಇಬ್ಬರು ಛಡಿಯೇಟಿನ ಶಿಕ್ಷೆಗೆ ಗುರಿಯಾದರು. 22ರಂದು ನೀಡಿದ ತೀರ್ಪಿನಂತೆ 4 ಜನರಿಗೆ ನೇಣಿನ ಶಿಕ್ಷೆ, 7 ಮಂದಿಗೆ ಆಜೀವ ಗಡೀಪಾರು, ಒಬ್ಬನಿಗೆ ಛಡಿಯೇಟು, ಹಾಗೂ ಮಿಕ್ಕ ಮೂರು ಮಂದಿಯನ್ನು ಹೆಚ್ಚಿನ ವಿಚಾರಣೆಗೆ ಗುರಿಮಾಡಲಾಗಿದೆ. ಹೀಗೆ ಅನೇಕ ದಿನಗಳ ತನಕ ವಿಚಾರಣೆ, ಶಿಕ್ಷೆಯ ಪ್ರಕ್ರಿಯೆಯನ್ನು ಮುಂದುವರಿಸುವ ಬ್ರಿಟಿಷ್ ಸರಕಾರ ತನ್ನ ದಮನಕಾರಿ ನೀತಿಯಿಂದ ವಿದ್ರೋಹವನ್ನು ಹತ್ತಿಕ್ಕುತ್ತದೆ. ಸರಕಾರದ ದಬ್ಬಾಳಿಕೆಗೆ ಬಲಿಯಾದವರ ಯಾದಿ ಬೆಳೆಯುತ್ತ ಸಾಗುತ್ತದೆ.
ಬ್ರಿಟಿಷರ ನೇಣುಗಂಬಕ್ಕೆ ಕೊರಳನ್ನೊಡ್ಡಿ ಸತ್ತವನು ನಿಜವಾಗಿಯೂ ಬಾಬಾಸಾಹೇಬನೇ ಅಥವಾ ಅದು ಬೇರೆ ಯಾರೋ ಇದ್ದೀತೆ ಎಂಬ ಸಂಶಯ ಜನಮನದಲ್ಲಿ ಇಂದಿಗೂ ಹೊಗೆಯಾಡುತ್ತಿದೆ. ಅಂದು ಸತ್ತವನು ಬಾಬಾಸಾಹೇಬ್ ಆಗಿರದೆ ಮತ್ತಾರೋ ಬೇರೆಯವನನ್ನು ಬ್ರಿಟಿಷರು ನೇಣಿಗೇರಿಸಿದ್ದಾರೆ ಎಂದು ಜನ ಕ್ರಮೇಣ ನಂಬಲಾರಂಭಿಸಿದರು.
ಹೀಗೆ ಒಂದೊಂದೇ ಪ್ರದೇಶಗಳಲ್ಲಿ ವಿದ್ರೋಹಕ್ಕಿಳಿದ ಸಂಸ್ಥಾನಿಕರನ್ನು ಬಗ್ಗುಬಡಿಯಲು ಶಕ್ತರಾದ ಬ್ರಿಟಿಷರು ಬಂಡಾಯವನ್ನು ಸುಲಭವಾಗಿ ಹತ್ತಿಕ್ಕುವುದರ ಮೂಲಕ ಕರ್ನಾಟಕದಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸುವುದರಲ್ಲಿ ಸಫಲರಾದರು. ಅನೇಕರ ಬಲಿದಾನದ ಬಳಿಕವೂ ಸ್ವಾತಂತ್ರ್ಯ ಮರೀಚಿಕೆಯಾಗಿಯೇ ಉಳಿಯಿತು.
ಆಕರ ಗ್ರಂಥಗಳು
1. ಕನ್ನಡ ವಿಷಯ ವಿಶ್ವಕೋಶ, ಮೈಸೂರು ವಿಶ್ವವಿದ್ಯಾನಿಲಯ
2. ಕುಲಕರ್ಣಿ ‘ಫ್ರೀಡಂ ಮೂವ್ಮೆಂಟ್ ಇನ್ ಬೆಳಗಾಂ’
3. ಜ್ಯಾಕಬ್, ಸರ್ ಜಾರ್ಜ್ ಲೆ ಗ್ರಾಂಡ್ ‘ವೆಸ್ಟರ್ನ್ ಇಂಡಿಯ ಬಿಫೋರ್ ಎಂಡ್ ಡ್ಯೂರಿಂಗ್ ದಿ ಮ್ಯುಟಿನೀಸ್’
4. ಡಾ. ವಿ.ಡಿ. ದಿವೇಕರ್ ‘ಸೌಥ್ ಇಂಡಿಯ ಇನ್ 1857 ವಾರ್ ಆಫ್ ಇಂಡಿಪೆಂಡೆನ್ಸ್’
5. ಮಜುಂದಾರ್ ಆರ್.ಸಿ. ‘ದಿ ಸಿಪಾಯ್ ಮ್ಯೂಟಿನಿ ಎಂಡ್ ದಿ ರಿವೋಲ್ಟ್ ಆಫ್ 1857’
6. ಸಾವರ್ಕರ್, ಸ್ವಾತಂತ್ರ್ಯವೀರ ವಿ.ದಾ.; ‘ಭಾರತದ ಸ್ವಾತಂತ್ರ್ಯ ಸಂಗ್ರಾಮ 1857’’ (ಸಮಗ್ರ ಅನುವಾದ: ಬಿ.ಪಿ. ಪ್ರೇಮಕುಮಾರ್)
7. ಸೂರ್ಯನಾಥ ಕಾಮತ್, ಇತಿಹಾಸ ದರ್ಶನ, ಸಂ. 4, 1989; ‘ದಿ ರೈಜಿಂಗ್ ಇನ್ ದ ಸೌಥ್’’, ಸಂಡೆ ಹೆರಾಲ್ಡ್ 20 ಮೇ 2007
8. ಹಯವದನರಾವ್ 2903-5, ಮೈಸೂರ್ ಗೆಜೆಟಿಯರ್ ಸಂ.2, ಮಾಡರ್ನ್ ಭಾಗ-4