ವಿತಸ್ತಾಕ್ಕೆ ಹಗಲಿಡೀ ಯಾತ್ರಿಕರನ್ನು ಕರೆತಂದು ಅವರಿಗೆ ಅಲ್ಲಿಯ ದೃಶ್ಯವನ್ನು ತೋರಿಸುವ ಮಾರ್ಗದರ್ಶಕರು ನಿತ್ಯ ಬಂದು ಹೋಗುತ್ತಿದ್ದರು. ನಾವೆಯಲ್ಲಿರುವವರ ಮಕ್ಕಳು ನದಿಯಲ್ಲಿ ಬೆತ್ತಲೆಯಲ್ಲಿ ಸ್ನಾನ ಮಾಡಿ, ಈಜುತ್ತಾ ನದಿಯನ್ನು ದಾಟುವ ದೃಶ್ಯವನ್ನು ನೋಡುವುದು ಅವನಿಗೆ ಇಷ್ಟವಾಗುತ್ತಿತ್ತು. ಅವನ ಬಾಲ್ಯದಿಂದ ಹಿಡಿದು ಯೌವನಕ್ಕೆ ಕಾಲಿಡುವವರೆಗೆ ಅದೆಷ್ಟೋ ನೆನಪುಗಳು ವಿತಸ್ತಾದೊಂದಿಗೆ ಕಲೆತಿವೆ.
ಇಂದು ರೋಶನ್ ಬೆಳಗ್ಗೆಯಿಂದಲೇ ಅಶಾಂತನಾಗಿದ್ದ. ದಿನವಿಡೀ ಕೋಣೆಯಲ್ಲಿ ಕೂತಿದ್ದ. ಹಾಸಿಗೆಯನ್ನು ಇನ್ನೂ ತೆಗೆದಿರಲಿಲ್ಲ, ಸ್ನಾನವನ್ನೂ ಮಾಡಿರಲಿಲ್ಲ, ಮುಖ-ಕ್ಷೌರವನ್ನೂ ಮಾಡಿಕೊಂಡಿರಲಿಲ್ಲ. ಹಾಸಿಗೆಯ ಮೇಲೆ ಮಲಗಿ ಹೊರಳಾಡುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ತಲೆದಿಂಬಿನ ಮೇಲೆ ತಲೆಯಿಟ್ಟುಕೊಂಡು ಚಾವಣಿಯನ್ನೇ ನೋಡಲಾರಂಭಿಸಿದ. ಆಗಲೇ ಅವನ ಹೆಂಡತಿ ತೋಷಾ ಕೋಣೆಗೆ ಬಂದಳು. ಅವಳು ಪತಿಯ ತಲೆಯನ್ನು ನೇವರಿಸುತ್ತ ಹೇಳಿದಳು, “ಇಷ್ಟು ಚಿಂತಿಸುವ ಅಗತ್ಯವಿಲ್ಲ. ನಗರ ವಿಶಾಲವಾಗಿದೆ, ನಮಗೆ ಎಲ್ಲಾದರೂ ಬಾಡಿಗೆ ಮನೆ ಸಿಗುವುದು. ಒಂದು ವೇಳೆ ಸಿಗದಿದ್ದರೆ ಮೈಗ್ರೆಂಟ್ ಕ್ಯಾಂಪಿಗೆ ಹೋಗಿ ಇರೋಣ.” ರೋಶನ್ ಅವಳ ಮಾತಿಗೆ ಉತ್ತರಿಸಲಿಲ್ಲ. ಮನೆ ಬದಲಿಸುವ ಯೋಚನೆಗೇ ಅವನು ಹೆದರುತ್ತಿದ್ದ. ಮನೆ ಮಾಲೀಕ ಮನೆಯನ್ನು ಬಿಡುವಂತೆ ಆದೇಶಿಸಿದಾಗ, ಚಿಂತೆ ಇನ್ನಷ್ಟು ಹೆಚ್ಚಿತು. ಸಾವಿನ ಭಯದಂತೆಯೇ ಮನೆಯನ್ನು ಬದಲಾಯಿಸುವ ಬಗ್ಗೆ ಭಯವಿತ್ತು. ಪದೇ-ಪದೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು, ಪದೇ-ಪದೇ ಲಗ್ಗೇಜು ಕಟ್ಟುವುದು, ಎತ್ತಿನ ಗಾಡಿ ಅಥವಾ ಟೆಂಪೋದಲ್ಲಿ ಸಾಮಾನುಗಳನ್ನು ತುಂಬುವುದು ಕಷ್ಟದ ಕೆಲಸವಾಗಿತ್ತು. ಸಾಮಾನುಗಳನ್ನೆಲ್ಲ ಇನ್ನೊಂದು ಮನೆಯಲ್ಲಿ ಬಿಚ್ಚಿ ಮತ್ತೆ ಸುಸಜ್ಜಿತಗೊಳಿಸುವುದು ಸಹ ಬಹು ಕಷ್ಟಕರವಾಗಿತ್ತು. ಅದಕ್ಕಿಂತಲೂ ಕಚೇರಿಗಳಿಗೆ ಅಲೆದು ಹೋಗಿ ವಿಳಾಸ ಬದಲಿಸುವುದು, ರೇಶನ್ ಕಾರ್ಡ್, ಗ್ಯಾಸ್, ಮಕ್ಕಳ ಶಾಲೆ ಎಲ್ಲೆಡೆಯಲ್ಲೂ ವಿಳಾಸ ಬದಲಿಸುವುದು ಹೀಗೆ ಎಲ್ಲೆಲ್ಲಿಗೋ ಹೋಗಬೇಕಾಗುತ್ತಿತ್ತು. ಅನಂತರ ಮಿತ್ರರು ಮತ್ತು ಸಂಬಂಧಿಕರ ಮನೆಗಳಿಗೆ ಹೋಗಿ ಹೊಸ ಮನೆಯ ವಿಳಾಸ ಕೊಡಬೇಕಾಗುತ್ತಿತ್ತು. ಈ ಕೆಲಸಗಳಲ್ಲಿ ತಿಂಗಳುಗಳೇ ಕಳೆದುಹೋಗುತ್ತಿದ್ದವು. ಪರ ಊರು, ಅಪರಿಚಿತ ಜನ… ಅವನು ಕಳೆದ ಒಂಬತ್ತು ವರ್ಷಗಳಿಂದ ಇದನ್ನೆಲ್ಲ ಮಾಡುತ್ತ ಇದುವರೆಗೆ ಐದು ಮನೆಗಳನ್ನು ಬದಲಿಸಿದ್ದಾನೆ.
ಈಗ ರೋಶನ್‍ಗೆ ತನ್ನ ಶರೀರ ಒಂದು ಮರದ ಕೋಲಿನಂತಿದೆ ಎಂದು ತೋರುತ್ತಿತ್ತು. ಇದನ್ನು ಬೇಕಾದಂತೆ ಉರುಳಿಸಬಹುದಿತ್ತು. ಅವನಿಗೆ ತನ್ನ ಅಸ್ತಿತ್ವ ನಾಶವಾಗುತ್ತಿರುವಂತೆ ಕಂಡಿತು. ಅವನ ಅಶಾಂತತೆ ಹೆಚ್ಚುತ್ತಿತ್ತು. ಅವನು ಕಳವಳಗೊಂಡು ಎದ್ದು ನಿಂತು ಸಿಗರೇಟಿಗಾಗಿ ಹುಡುಕಾಡಿದ. ಇಡೀ ಅಲ್ಮಾರಿಯನ್ನು ಹುಡುಕಿದ, ಆದರೆ ಏನೂ ಸಿಗಲಿಲ್ಲ. ಜೇಬುಗಳನ್ನು ತಡವರಿಸಿದ. ಒಂದು ತುಂಡೂ ಸಿಗರೇಟ್ ಸಿಗಲಿಲ್ಲ. ರೋಶನ್‍ನ ಚಡಪಡಿಕೆಯನ್ನು ನೋಡಿ ತೋಷಾ ವ್ಯಗ್ರತೆಯಿಂದ ಹೇಳಿದಳು: “ಈ ಸಿಗರೇಟಿಗೆ ಬೆಂಕಿ ಬೀಳಲಿ, ನಿಮ್ಮ ಪರಿಸ್ಥಿತಿ ಏನಾಗಿದೆ ನೋಡಿ! ತುಟಿಗಳೆಲ್ಲಾ ಕಪ್ಪಗಾಗಿವೆ.”
ರೋಶನ್ ಅವಳ ಮಾತನ್ನು ಕೇಳಿಯೂ, ಕೇಳದವನಂತೆ ವರ್ತಿಸಿದ. ಅವನಿಗೆ ಕೋಣೆಯಲ್ಲಿ ಎಲ್ಲೂ ಸಿಗರೇಟ್ ಸಿಗದಿದ್ದಾಗ ಆಶ್-ಟ್ರೇಯನ್ನು ತಡಕಾಡಿದ. ಅವನಿಗೆ ಒಂದು ತುಂಡು ಸಿಗರೇಟ್ ಸಿಕ್ಕಿತು. ಅದನ್ನು ಹೊತ್ತಿಸಿ, ದಮ್ ಎಳೆದ. ದಮ್ ಎಳೆಯುತ್ತಲೇ ಮತ್ತೆ ಬಂದು ಹಾಸಿಗೆಯಲ್ಲಿ ಕೂತ. ಕೋಣೆಯಲ್ಲಿ ಹೊಗೆ ಆವರಿಸಿತು. ತೋಷಾ ರೇಗಿ, ಬಾಗಿಲನ್ನು ಮುಚ್ಚಿ ಕೋಣೆಯಿಂದ ಹೊರಕ್ಕೆ ಹೋದಳು. ಹೋಗುವಾಗ ಹೇಳಿದಳು, “ಏನು ಮಾಡಬೇಕೆಂದಿದ್ದೀರೋ ಮಾಡಿ! ನಿಮಗೆ ನನ್ನ ಮಾತು ಕೇಳಬೇಕಿಲ್ಲ, ಅದಕ್ಕೆ ನಾನೇ ಹೋಗ್ತೀನಿ…” ತೋಷಾ ಹೀಗೆ ವಟಗುಟ್ಟುತ್ತಾ ಹೋಗುವುದು ರೋಶನ್‍ಗೆ ಒಳಿತೆನಿಸಲಿಲ್ಲ, ಕೆಡುಕೆಂದೂ ಅನ್ನಿಸಲಿಲ್ಲ. ಇವರು ಮನೆಯಿಂದ ಹೊರಹಾಕಲ್ಪಟ್ಟಾಗ ಹೀಗೆಯೇ ಆಗುತ್ತಿರುತ್ತದೆ. ರೋಶನ್ ಬೆಳಗ್ಗೆಯ ಪತ್ರಿಕೆಯನ್ನು ಮತ್ತೆ ಓದಲಾರಂಭಿಸಿದ. ಯುವಕನೊಬ್ಬ ವಿತಸ್ತಾ ನದಿಯಲ್ಲಿ ಶವವಾಗಿ ಸಿಕ್ಕ ಎಂಬ ಸುದ್ದಿಯನ್ನು ಮತ್ತೆ ಹುಡುಕಲಾರಂಭಿಸಿದ. ಅವನ ಶವ ಗುರುತಿಸಲಾಗದಷ್ಟು ಹಾಳಾಗಿತ್ತು.
ರೋಶನ್‍ಗೆ ‘ವಿತಸ್ತಾ’ ಶಬ್ದ ತಳ್ಳುವ-ಗಾಡಿಯಂತೆ ಅತೀತಕ್ಕೆ ತಳ್ಳುತ್ತಿತ್ತು. ಅವನಿಗೆ ವಿತಸ್ತಾದ ಘಟ್ಟಗಳು ನೆನಪಾದವು; ಅಲ್ಲಿ ಅವನು ತನ್ನ ಬಾಲ್ಯವನ್ನು ಕಳೆದಿದ್ದ. ಸೋಮಯಾರ್ ಘಟ್ಟದ ಸಮೀಪದಲ್ಲೇ ಅವನ ಮೂರಂತಸ್ತಿನ ಮನೆಯಿದ್ದು, ಅದರ ಗೋಡೆಗಳು ವಿತಸ್ತಾದ ದಡದ ಸಮೀಪದಲ್ಲಿದ್ದವು. ವಿತಸ್ತಾ ಒಂದು ವಿಶಾಲ ನದಿಯಾಗಿತ್ತು. ಅವನು ಈ ನದಿಯ ಹರಿಯುವ ನೀರನ್ನು ಮನೆಯ ಹಿಂದಿನ ಕೋಣೆಯಲ್ಲಿ ಕೂತು ಗಂಟೆಗಟ್ಟಲೆ ನೋಡುತ್ತಿದ್ದ. ಈ ನದಿಯ ಅಲೆಗಳಲ್ಲಿ ಅವನಿಗೆ ಇಡೀ ಜಗತ್ತು ಕಾಣ ಬರುತ್ತಿತ್ತು, ಕಾಲದ ಕೋಲಾಹಲವೂ ಕಾಣಬರುತ್ತಿತ್ತು, ಋತುವಿನ ಬಡಿತವನ್ನು ಅಂದಾಜಿಸಬಹುದಿತ್ತು. ಘಟ್ಟದೊಂದಿಗೆ ಕಟ್ಟಿಹಾಕಲಾಗಿದ್ದ ದೋಣಿಗಳು, ಅದರಲ್ಲಿದ್ದ ನಾವಿಕರು ಮತ್ತು ಅವರ ಪತ್ನಿಯರು ಮತ್ತು ಅವರ ಪರಿವಾರ ಅವನಿಗೆ ತನ್ನ ಕಿಡಕಿಯಿಂದ ಕಾಣಬರುತ್ತಿದ್ದರು. ಅವರ ನಿತ್ಯದ ಚಟುವಟಿಕೆಗಳನ್ನು ನೋಡುವುದು ಅವನಿಗೆ ಇಷ್ಟವಾಗುತ್ತಿತ್ತು: ಉದಾಹರಣೆಗೆ ಸುಲ್ತಾನ್ ಹಾಜಿ, ನಾವೆಯ ತುದಿಯಲ್ಲಿ ಕೂತು ಹುಕ್ಕಾ ಸೇದುವುದು; ಸಾಜಾ ಮತ್ತು ಜಾನಾ ಚಿಕ್ಕಮ್ಮರ ಸಣ್ಣಪುಟ್ಟ ಜಗಳಗಳು; ತಸಲೀಮಾ ಗುಲಾಮನೊಂದಿಗೆ ಕದ್ದು-ಮುಚ್ಚಿ ಭೇಟಿಯಾಗಿ ಪ್ರೀತಿಯನ್ನು ವ್ಯಕ್ತಪಡಿಸುವುದು… ಇತ್ಯಾದಿ.
ವಿತಸ್ತಾಕ್ಕೆ ಹಗಲಿಡೀ ಯಾತ್ರಿಕರನ್ನು ಕರೆತಂದು ಅವರಿಗೆ ಅಲ್ಲಿಯ ದೃಶ್ಯವನ್ನು ತೋರಿಸುವ ಮಾರ್ಗದರ್ಶಕರು ನಿತ್ಯ ಬಂದು ಹೋಗುತ್ತಿದ್ದರು. ನಾವೆಯಲ್ಲಿರುವವರ ಮಕ್ಕಳು ನದಿಯಲ್ಲಿ ಬೆತ್ತಲೆಯಲ್ಲಿ ಸ್ನಾನ ಮಾಡಿ, ಈಜುತ್ತಾ ನದಿಯನ್ನು ದಾಟುವ ದೃಶ್ಯವನ್ನು ನೋಡುವುದು ಅವನಿಗೆ ಇಷ್ಟವಾಗುತ್ತಿತ್ತು. ಅವನ ಬಾಲ್ಯದಿಂದ ಹಿಡಿದು ಯೌವನಕ್ಕೆ ಕಾಲಿಡುವವರೆಗೆ ಅದೆಷ್ಟೋ ನೆನಪುಗಳು ವಿತಸ್ತಾದೊಂದಿಗೆ ಕಲೆತಿವೆ.
ರೋಶನ್‍ಗೆ ಗುರುಗಳಾದ ಹಮೀದಉಲ್ಲಾರ ನೆನಪಾಯಿತು. ಅವರು ಅವನಿಗೆ ಪಾಠ ಬೋಧಿಸಲು ಮನೆಗೆ ಬರುತ್ತಿದ್ದರು. ಅವರು ನದಿಯೆಡೆಗಿನ ಕೋಣೆಯಲ್ಲಿ ರೋಶನ್‍ಗೆ ನದಿಯ ಕಥೆಯನ್ನು ಹೇಳಿದ್ದರು. ‘ಜಿಹಿಲಮ್‍ನ ವಾಸ್ತವ ಹೆಸರು ವಿತಸ್ತಾ, ಇದು ಹಿಂದೂಸ್ತಾನದ ಮಹತ್ತ್ವದ ನದಿಗಳಲ್ಲಿ ಒಂದು, ಇದರ ಬಗ್ಗೆ ಋಗ್ವೇದ ಮತ್ತು ಮಹಾಭಾರತದಲ್ಲಿ ಬರೆಯಲಾಗಿದೆ. ನೀಲಮತ್ ಪುರಾಣದಲ್ಲಿ ಈ ನದಿಯನ್ನು ‘ನೀಲಜಾ’ ಎನ್ನಲಾಗಿದೆ, ಅಂದರೆ ನೀಲ್ ಪುತ್ರಿ. ನೀಲ್ ಕಶ್ಯಪ್ ಋಷಿಯ ಮಗನಾಗಿದ್ದ. ಕಶ್ಯಪ್ ಋಷಿ ಸತೀಸರ್‍ನಿಂದ ನೀರನ್ನೆಲ್ಲ ತೆಗೆದು ಕಾಶ್ಮೀರವನ್ನು ಸ್ಥಾಪಿಸಿದ್ದರು, ಅನಂತರ ಅವರು ಕಾಶ್ಮೀರವನ್ನು ನೀಲ್-ನಾಗನ ವಶಕ್ಕೆ ಕೊಟ್ಟು ದೇವರ ಆರಾಧನೆಯಲ್ಲಿ ತೊಡಗಿದರು’ ಎಂದು ಗುರುಗಳು ಹೇಳಿದ್ದರು. ಗುರುಗಳಿಂದ ಕೇಳಿದ ವಿತಸ್ತಾದ ಈ ಕಥೆ ರೋಶನ್‍ಗೆ ತುಂಬಾ ಇಷ್ಟವಾಗಿತ್ತು.
ಗುರುಗಳಾದ ಹಮೀದರು ರೋಶನ್‍ಗೆ ಸಾಮಾನ್ಯವಾಗಿ ಹೇಳುತ್ತಿದ್ದರು, “ನೀನು ನೀಲ್-ನಾಗನ ವಂಶದವನು, ಅದಕ್ಕೇ ನೀನು ವಿತಸ್ತಾದ ದಡದಲ್ಲಿ ವಾಸಿಸುತ್ತಿದ್ದೀಯ. ನೀನು ವಿತಸ್ತಾದಿಂದ ದೂರವಾಗಲಾರೆ. ಇದೇ ನಿನ್ನ ಪರಿಚಯ. ನೀನು ಸೋಹನಲಾಲರ ಮಗ ರೋಶನಲಾಲ್ ಕೌಲ್ ಆಗಿದ್ದು, ಸೋಮಯಾರ್ ಘಟ್ಟದ ವಿತಸ್ತಾದ ದಡದಲ್ಲಿ ವಾಸಿಸುವವ. ಹಿಂದಿನ ಕಾಲದಿಂದ ನಿಮ್ಮ ಮನೆ ಇಲ್ಲೇ ಇದೆ. ನೀನಿಲ್ಲಿಯೇ ನೆಲೆಸುತ್ತೀಯ. ವಿತಸ್ತಾ ನದಿ ಹರಿಯುವವರೆಗೆ, ನಿನ್ನ ವಿಳಾಸ ಇದೇ ಆಗಿರುವುದು. ನೀನು ಅದೃಷ್ಟವಂತ. ನಿನ್ನ ಹೆಸರು ಸದಾ ಕಾಲಕ್ಕೂ ವಿತಸ್ತಾ ನದಿಯೊಂದಿಗೆ ಕಲೆತಿರುವುದು. ವಿತಸ್ತಾ ಪ್ರತಿಯೊಂದು ಯುಗದಲ್ಲೂ ಹರಿಯುತ್ತಿರುತ್ತದೆ, ನಿನ್ನ ವಂಶ ಸಹ ಸದಾ ವಿತಸ್ತಾದ ದಡದಲ್ಲಿ ನೆಲೆಸುವುದು.” ಇದಕ್ಕೆ ಗುರುಗಳಾದ ಹಮೀದರ ಆಶೀರ್ವಾದವೂ ಆಗಿತ್ತು.
ರೋಶನ್‍ಗೆ ಅಂಚೆಯ ಸಲಾಮ್ ಸಹ ನೆನಪಾದ. ಸಲಾಮ್, ನಾವಿಕ ಗುಲಾಮ್‍ನ ವಿಳಾಸ ಹುಡುಕುತ್ತ ವ್ಯಗ್ರನಾಗಿದ್ದ. ಅವನಿಗೆ ಮನಿಯಾರ್ಡರ್ ಹಣವನ್ನು ಪಾವತಿಸಲು ಅಂಚೆಯ ಸಲಾಮ್ ಅದೆಷ್ಟೋ ಘಟ್ಟಗಳನ್ನು ಹಾದು ಬಂದಿದ್ದ; ಮೊದಲು ಡಲ್ ಗೇಟ್, ನಂತರ ಅಮೀರಾ ಕದಲ್, ತದನಂತರ ಗಾವ್-ಕದಲ್ ಹಾಗೂ ಕಡೆಗೆ ಸೋಮಯಾರ್ ಘಟ್ಟ ಹಾದು ಬಂದಿದ್ದ. ಏದುಸಿರು ಬಿಡುತ್ತದ್ದ ಸಲಾಮ್ ರೋಶನ್‍ನನ್ನು ನೋಡಿದಾಗ, ಅವನಿಗೆ ಕೆಲವು ಭರವಸೆಗಳು ಲಭಿಸಿದ್ದವು, “ರೋಶನ್, ಈ ಹಾಜಿಗಳು [ಮಕ್ಕಾ ನಗರಕ್ಕೆ ತೀರ್ಥಯಾತ್ರೆ ಹೋಗಿ ಬಂದವರು] ಒಂದು ಸ್ಥಳದಲ್ಲಿರುವುದಿಲ್ಲ, ಇವತ್ತು ಇಲ್ಲಿದ್ದರೆ, ನಾಳೆ ಬೇರೊಂದು ಘಟ್ಟದಲ್ಲಿರುತ್ತಾರೆ. ತಮಗಿಷ್ಟ ಬಂದಲ್ಲಿ ತಮ್ಮ ನಾವೆ ಹೂಡುತ್ತಾರೆ. ಇವರಿಗೆ ನಿಮ್ಮ ಹಾಗೆ ಸ್ಥಿರವಾದ ವಿಳಾಸವಿರುವುದಿಲ್ಲ. ಈಗ ನೀನೇ ಹೇಳು, ನಾನು ಮನಿಯಾರ್ಡರನ್ನು ಯಾರಿಗೆ ಕೊಡಲಿ? ನನಗೆ ಅವನ ವಿಳಾಸ ಹುಡುಕಿ ಕೊಡು, ದೇವರು ನಿನಗೆ ಒಳ್ಳೆಯದನ್ನು ಮಾಡುತ್ತಾನೆ.”
ತೋಷಾ ಒಮ್ಮೆಲೆ ಬಾಗಿಲು ತೆರೆದಳು. ರೋಶನ್ ಬೆಚ್ಚಿಬಿದ್ದ. ದಿನಪತ್ರಿಕೆ ಅವನ ಕೈಯಿಂದ ಜಾರಿ ಕೆಳಗೆ ಬಿತ್ತು. ತೋಷಾ ಕೂಡಲೆ ದಿನಪತ್ರಿಕೆಯನ್ನು ತೆಗೆದುಕೊಂಡು ಹೋಗಿ ಅದನ್ನು ಬಾಥ್‍ರೂಮಿನ ನಲ್ಲಿಯ ಕೆಳಗಿಟ್ಟಳು. ಮರಳಿ ಬಂದು ರೇಗಿ ಹೇಳಿದಳು, “ದೇವರೇ ಕಾಪಾಡು-ಕಾಪಾಡು! ಈ ಸಿಗರೇಟಿನ ಮನೆ ಹಾಳಾಗಲಿ. ದಿನಪತ್ರಿಕೆಗೆ ಬೆಂಕಿ ಹೊತ್ತಿದ್ದು ಸಹ ನಿಮಗೆ ಗೊತ್ತಾಗಲಿಲ್ಲ, ಅಂಥದ್ದೇನಾಗಿದೆ? ಹಾಸಿಗೆ ಸುಟ್ಟು ಹೋಗ್ತಿತ್ತು, ಸಾಮಾನುಗಳು ಸುಟ್ಟು ಹೋಗುತ್ತಿದ್ದವು, ನಿಮಗೇನಾದರೂ ಆಗಿದ್ದರೆ, ಏನು ಮಾಡಬೇಕಿತ್ತು?” ರೋಶನ್ ಗಾಢನಿದ್ರೆಯಿಂದ ಎಚ್ಚೆತ್ತವನಂತೆ ಜಾಗೃತನಾದ. ಅವನ ಶರೀರ ಕಂಪಿಸುತ್ತಿತ್ತು. ಮುಖದಲ್ಲಿ ಬೆವರು ಸೂಸುತ್ತಿತ್ತು. ಅವನ ಈ ಪರಿಸ್ಥಿತಿಯನ್ನು ನೋಡಿ ತೋಷಾ ಗಾಬರಿಗೊಂಡಳು, “ಅಯ್ಯೋ! ನಿಮಗೇನಾಯ್ತು? ನಿಮ್ಮ ಆರೋಗ್ಯ ಸರಿಯಿದೆ ತಾನೇ?”
ರೋಶನ್ ಕಂಪಿಸುವ ಧ್ವನಿಯಲ್ಲಿ ಹೇಳಿದ, “ನಾನು ಸರಿಯಿಲ್ಲ. ನನ್ನ ವಿಳಾಸ ಕಳೆದುಹೋಗಿದೆ, ತೋಷಾ, ನನ್ನ ವಿಳಾಸ ಕಳೆದುಹೋಗಿದೆ!…”
(ರೂಪಕೃಷ್ಣ ಭಟ್ಟ ಅವರು ಪ್ರಸಿದ್ಧ ಕಥೆಗಾರರು, ಭಾಷಾ-ವಿದ್ವಾಂಸರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಐದು ಕಥಾಸಂಕಲನಗಳು ಪ್ರಕಟಿತವಾಗಿವೆ. ಭಾಷೆಯ ಬಗ್ಗೆ ಇವರ ಅನೇಕ ಪುಸ್ತಕಗಳು ಪ್ರಕಟಗೊಂಡಿದ್ದು, ಇವುಗಳಲ್ಲಿ ‘ಕಶ್ಮೀರಿ ಸ್ವಯಂ ಶಿಕ್ಷಕ್’ ಮತ್ತು ‘ಡಿಸ್ಕ್ರಿಯೆಟೀವ್ ಸ್ಟಡಿ ಆಫ್ ಕಶ್ಮೀರಿ ಲಾಂಗ್ವೇಜ್’ ಪ್ರಮುಖವಾದವುಗಳು.)