ಸ್ಫುರದ್ರೂಪಿಯಾದ ಯಶೋಧರ, ಅರಸನಾದವನು ತನ್ನ ಪತಿಯಾಗಿದ್ದರೂ ಅಮೃತಮತಿ ವಿಕಾರರೂಪಿನ ಮಾವಟಿಗ, ಅಷ್ಟಾವಕ್ರನಿಗೆ ಮನಸೋಲುತ್ತಾಳೆ. ಅವನ ಸಂಗೀತ ಅವಳನ್ನು ಸೆಳೆಯಿತು ಎಂಬಲ್ಲಿಗೆ ಅವಳು ಆತ ಅಸಹ್ಯಕರವಾಗಿದ್ದರೂ ‘ಪೊಲ್ಲಮೆಯೆ ಲೇಸು ನಲ್ಲರ ಮೈಯೊಳ್’ ಎಂದುಕೊಂಡು ಅವನನ್ನು ಮನದನ್ನನಾಗಿ ಸ್ವೀಕರಿಸಿಬಿಡುತ್ತಾಳೆ. ಅವರೀರ್ವರ ನಡುವಿನ ಸಂಬಂಧವನ್ನು ಅರಿತ ಯಶೋಧರ ಪರಿತಪಿಸುವುದು, ತನ್ನ ತಾಯಿಯೊಂದಿಗೆ ಕನಸಿನ ರೂಪದಲ್ಲಿ ನಡೆದುದೆಲ್ಲವನ್ನೂ ಹೇಳುವುದು, ಇತ್ಯಾದಿ ನಡೆಯುತ್ತದೆ. ಮುಂದೆ ರಾಜನು ತನ್ನ ತಾಯಿಯೊಂದಿಗೆ ಅರಣ್ಯಮುಖಿಯಾಗಲು ನಿರ್ಧರಿಸಿದಾಗ ಅಮೃತಮತಿ ವಿಷವುಣಿಸಿ ಅವರಿಬ್ಬರನ್ನೂ ಕೊಲ್ಲುತ್ತಾಳೆ.
ಅಂದು ಕೊನೆಯಿರದ ಕೆಲಸಗಳು. ಅಂತೂ ಮಾಡಬೇಕೆಂದುಕೊಂಡಿದ್ದ ಹತ್ತಾರು ಕೆಲಸಗಳಲ್ಲಿ ಆದ್ಯತೆಯ ಮೇಲೆ ಕೆಲವನ್ನು ಮುಗಿಸಿ, ಹಲವನ್ನು ನಾಳೆಗೆ ನೂಕಿ ಇನ್ನೇನು ಮಲಗಬೇಕು ಅಂದುಕೊಳ್ಳುವಷ್ಟರಲ್ಲಿ ಸಂಗಾತಿಯ ಫೋನು ರಿಂಗಣಿಸಿತು. ಅಪರಾತ್ರಿಯಲ್ಲಿ ಬರುವ ಕರೆಗಳು ಭಯ ಹುಟ್ಟಿಸುತ್ತವಾದರೂ ಸ್ವೀಕರಿಸದೆ ನಿರ್ವಾಹವಿಲ್ಲವಲ್ಲ. ಕರೆ ಮಾಡಿದವರು ವಸತಿಗೃಹದಲ್ಲಿರುವ ವಿದ್ಯಾರ್ಥಿನಿಯರು. ಒಬ್ಬಳಿಗೆ ತೀರಾ ಅನಾರೋಗ್ಯವಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದರು. ಅವಳಿದ್ದ ಪರಿಸ್ಥಿತಿ ಚಿಂತಾಜನಕವಾಗಿತ್ತು. ವೈದ್ಯರು ಕಠಿಣ ಎನ್ನುತ್ತಿದ್ದಾರೆ ಎಂದ ಅವರ ಮಾತಿಗೆ ಸ್ಪಂದಿಸಿ ಆಸ್ಪತ್ರೆಯ ಕಡೆಗೆ ಹೋಗುವುದು ಅನಿವಾರ್ಯವಾಯಿತು. ಅಲ್ಲಿ ನೋಡಿದರೆ ಯಾರೊಬ್ಬರನ್ನೂ ಒಳಗೆ ಸೇರಿಸಲಿಚ್ಛಿಸದ ವೈದ್ಯರು ನಮ್ಮನ್ನು ಕರೆದು ಹೇಳಿದ್ದಿಷ್ಟೇ: ಆಕೆಗೆ ಬಂದಿರುವುದು ಜ್ವರವಲ್ಲ, ಅವಳು ಗರ್ಭಪಾತಕ್ಕಾಗಿ ತೆಗೆದುಕೊಂಡ ಔಷಧಿಯ ಪರಿಣಾಮ ಹತ್ತು-ಹನ್ನೆರಡು ದಿನಗಳಿಂದ ವಿಪರೀತ ರಕ್ತಸ್ರಾವವಾಗಿ ಪರಿಸ್ಥಿತಿ ಕೈಮೀರಿದೆ.
ಅಂತೂ ಅವಳ ಮನೆಯವರೂ ಅವಳ ಸ್ಥಿತಿಗೆ ಕಾರಣನಾದವನೂ ಎಲ್ಲರೂ ಬಂದು ಅವಳ ಆರೈಕೆ ಮಾಡಿದರು, ಆಕೆ ಬದುಕುಳಿದಳು. ಮುಂದಿನ ನಡೆ ಏನೋ ನಮಗೆ ಗೊತ್ತಿಲ್ಲ. ಗರ್ಭಕೋಶವೇ ಹಾನಿಗೊಳಗಾಗಿ ಅವಳ ಬದುಕಿನಲ್ಲಿನ್ನು ತಾಯ್ತನ ಎನ್ನುವುದು ಒದಗೀತೇ, ಗೊತ್ತಿಲ್ಲ. ಆದರೆ ಪ್ರೀತಿಯ ಭ್ರಮೆಯೊಳಗೆ ಸಿಲುಕಿ ವಿವಾಹಪೂರ್ವದಲ್ಲಿಯೇ ಗರ್ಭ ಧರಿಸಿದ ಬಳಿಕ ಸಮಾಜಕ್ಕೆ ಹೆದರಿ ಪರಿತಪಿಸಿ ಬಾಳನ್ನೇ ಬಲಿಗೊಡುವುದಕ್ಕಿಂತ ಮೊದಲು ಅವಳೊಂದಿಷ್ಟು ಎಚ್ಚರ ವಹಿಸುತ್ತಿದ್ದರೆ! ಕುಂತಿಯ ಕಥೆಯಿಂದಲೋ, ಶಕುಂತಲೆಯ ಕಥೆಯಿಂದಲೋ ಯಾರೂ ಪಾಠ ಕಲಿಯುವುದಿಲ್ಲ, ವರವನ್ನಿತ್ತ ದೂರ್ವಾಸನನ್ನು ದೂಷಿಸುವುದನ್ನು, ಗುರುತಿಸದಂತೆ ನಾಟಕವಾಡಿದ ದುಷ್ಯಂತನನ್ನು ದೂರುವುದನ್ನು ಬಿಟ್ಟರೆ! ತನ್ನ ಹುಡುಗಿಯನ್ನು ಬದುಕಿಸಿಕೊಳ್ಳಬೇಕು, ರಕ್ತದಾನಿಗಳು ಬೇಕು ಎಂದು ಅವರಿವರನ್ನು ಅವಲತ್ತುಗೊಂಡ ಹುಡುಗ ತನ್ನ ಬಗ್ಗೆ ಮೊದಲೇ ಕೊಂಚ ನಿಯಂತ್ರಣ ಸಾಧಿಸುತ್ತಿದ್ದರೆ ಇಬ್ಬರ ಬದುಕೂ ಚೆನ್ನಾಗಿಯೇ ಇರುತ್ತಿತ್ತು. ಅವಳ ವಿದ್ಯಾಭ್ಯಾಸವೂ ಪೂರ್ಣಗೊಳ್ಳುತ್ತಿತ್ತು.
ಇತ್ತೀಚೆಗೆ ನಟಿಯೋರ್ವಳು ತನ್ನ ಪ್ರಿಯಕರನೆನಿಸಿದವನಿಗೆ ವಿಡಿಯೋ ಮೂಲಕ ತನ್ನ ಅಂಗಾಂಗಳ ಪ್ರದರ್ಶನ ಮಾಡಿದ್ದೂ, ಬಳಿಕ ಅವನು ಅದನ್ನು ಜಾಲತಾಣಗಳಲ್ಲಿ ಹರಿಯಬಿಟ್ಟದ್ದೂ ತುಂಬ ಸುದ್ದಿಯಾಯಿತು. ಎಲ್ಲರೂ ಆಕೆಯನ್ನು ಛೀ, ಥೂ ಎಂದು ಜರೆದರು. ಅವಳು ನೊಂದುಬೆಂದು ಕೊನೆಗೆ ಧೈರ್ಯವಾಗಿ ಸಮಾಜವನ್ನು ಎದುರಿಸಿದಳು. ಇನ್ನೂ ಒಂದು ಸುದ್ದಿಯಲ್ಲಿ ಸಮಾಜದ ಉನ್ನತ ಸ್ಥಾನದಲ್ಲಿದ್ದ ಓರ್ವರು ಇದೇ ಪರಿಸ್ಥಿತಿ ತಂದುಕೊಂಡು ಆತ್ಮಹತ್ಯೆಗೆ ಶರಣಾದರು.
ಇಂತಹ ಎಲ್ಲ ಘಟನೆಗಳಲ್ಲಿಯೂ ಸಾಮಾನ್ಯವಾಗಿ ಕಾಣುವ ಅಂಶ ಒಂದೇ. ಅತಿಯಾದ ನಂಬಿಕೆ, ತನ್ನವರೆಂದುಕೊಳ್ಳುವ ಭ್ರಮೆ, ಆ ಕ್ಷಣದ ವಿಸ್ಮೃತಿಯಲ್ಲಿ ತನ್ನ ಪ್ರಿಯತಮ/ಪ್ರಿಯತಮೆ ಹೇಳಿದ್ದನ್ನು ಕೇಳುವುದು, ಆದರ್ಶ ಪ್ರೇಯಸಿಯಂತೆ/ಪ್ರೇಮಿಯಂತೆ ಪರಸ್ಪರ ಇಚ್ಛೆಯನ್ನು ಪೂರೈಸುವ ಪಣ ತೊಡುವುದು. ಬದುಕಿನ ದಾರಿ ಇನ್ನೂ ಅದೆಷ್ಟೋ ದೂರವಿರುತ್ತದೆ, ಪಯಣಿಸುವಲ್ಲಿ ಸಂಗಾತಿಯ ಸಾಮೀಪ್ಯದ ಸಂತೋಷವಿರುತ್ತದೆ. ಸಮಾಜದಿಂದ ಒಪ್ಪಿಗೆಯ ಮುದ್ರೆ ವಿವಾಹದ ಸ್ವರೂಪದಲ್ಲಿ ದೊರಕುವುದಕ್ಕೂ ಮೊದಲೇ ಬದುಕಿನ ಸಕಲ ಸಂತೋಷವನ್ನು ಅನುಭವಿಸಿಬಿಡಬೇಕೆನ್ನುವ ತಹತಹ ಇವರನ್ನು ಈ ಹೆಜ್ಜೆಯಿಡುವಂತೆ ಪ್ರೇರೇಪಿಸಿತೇ ಎಂದರೆ ವಿಷಯ ಅಷ್ಟು ಸರಳವಲ್ಲ.
ಜನ್ನನ ಯಶೋಧರ ಚರಿತೆಯಲ್ಲಿ ಬರುವ ಅಮೃತಮತಿಯ ಪಾತ್ರ ಹೆಚ್ಚುಕಡಮೆ ಇಂತಹುದೇ. ಸ್ಫುರದ್ರೂಪಿಯಾದ ಯಶೋಧರ, ಅರಸನಾದವನು ತನ್ನ ಪತಿಯಾಗಿದ್ದರೂ ಅಮೃತಮತಿ ವಿಕಾರರೂಪಿನ ಮಾವಟಿಗ, ಅಷ್ಟಾವಕ್ರನಿಗೆ ಮನಸೋಲುತ್ತಾಳೆ. ಅವನ ಸಂಗೀತ ಅವಳನ್ನು ಸೆಳೆಯಿತು ಎಂಬಲ್ಲಿಗೆ ಅವಳು ಆತ ಅಸಹ್ಯಕರವಾಗಿದ್ದರೂ ‘ಪೊಲ್ಲಮೆಯೆ ಲೇಸು ನಲ್ಲರ ಮೈಯೊಳ್’ ಎಂದುಕೊಂಡು ಅವನನ್ನು ಮನದನ್ನನಾಗಿ ಸ್ವೀಕರಿಸಿ ಬಿಡುತ್ತಾಳೆ. ಅವರೀರ್ವರ ನಡುವಿನ ಸಂಬಂಧವನ್ನು ಅರಿತ ಯಶೋಧರ ಪರಿತಪಿಸುವುದು, ತನ್ನ ತಾಯಿಯೊಂದಿಗೆ ಕನಸಿನ ರೂಪದಲ್ಲಿ ನಡೆದುದೆಲ್ಲವನ್ನೂ ಹೇಳುವುದು, ಇತ್ಯಾದಿ ನಡೆಯುತ್ತದೆ. ಮುಂದೆ ರಾಜನು ತನ್ನ ತಾಯಿಯೊಂದಿಗೆ ಅರಣ್ಯಮುಖಿಯಾಗಲು ನಿರ್ಧರಿಸಿದಾಗ ಅಮೃತಮತಿ ವಿಷವುಣಿಸಿ ಅವರಿಬ್ಬರನ್ನೂ ಕೊಲ್ಲುತ್ತಾಳೆ. ಕಥೆ ಮುಂದುವರಿಯುತ್ತದೆ.
ಹೆಣ್ಣಿನ ಮನಸ್ಸು ನಿಜಕ್ಕೂ ಅಮೃತಮತಿಯಂಥಹುದೇ? ಒಬ್ಬನ ಬಾಹ್ಯ ಸೌಂದರ್ಯಕ್ಕೋ, ತೋರಿಕೆಯ ಪ್ರೀತಿಗೋ ಅಷ್ಟು ಸುಲಭವಾಗಿ ತನ್ನನ್ನು ಮರೆತುಬಿಡುವಂಥದ್ದೇ? ಇದ್ದರೂ ಇರಬಹುದೇನೋ! ಸದಾ ಅಂತರಂಗದೊಳಗೆ ಹಸಿರಾದ, ನವಿರಾದ ಪ್ರೀತಿಯನ್ನು ಹಂಬಲಿಸುವ ಅವಳು ತೀರಾ ತನ್ನವರಿಂದ ಅದು ಒದಗದೆ ಹೋದಾಗ ಕಣ್ಣೆದುರು ಬರುವ ಮರೀಚಿಕೆಯನ್ನೇ ನೀರೆಂದು ಭ್ರಮಿಸುವವರಂತೆ ಸೋಲುತ್ತಾಳೆ. ಅಥವಾ ನಿರಂತರವಾಗಿ ಕಾಳಜಿಯನ್ನು, ಪ್ರೀತಿಯನ್ನು ಹಂಬಲಿಸಿ, ತನ್ನ ಸುತ್ತಲಿದ್ದವರ ನಿರ್ಲಕ್ಷ್ಯಕ್ಕಷ್ಟೇ ಗುರಿಯಾಗುತ್ತಿದ್ದರೆ ತನ್ನೆಡೆಗೆ ಕಿರುನಗೆ ಸೂಸಿದವನನ್ನೂ ಬಹುವಾಗಿ ಹಚ್ಚಿಕೊಳ್ಳಬಲ್ಲಳು. ಸಂಪೂರ್ಣವಾಗಿ ಅವನನ್ನು ನಂಬಬಲ್ಲಳು. ಭಾವನಾತ್ಮಕವಾಗಿ ಅವಳೆಷ್ಟು ದುರ್ಬಲಳು ಎಂಬುದನ್ನು ತಿಳಿದುಕೊಳ್ಳುವ ಅವನು ತನ್ನ ಆವಶ್ಯಕತೆಗೆ ಬೇಕಾದಂತೆ ಅವಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿಯಾನು. ಪರಿಣಾಮವಾಗಿ ನಲುಗುವುದು ಅವಳ ಬದುಕೇ ಹೊರತು, ಅವನದಲ್ಲ.
ಅವಿವಾಹಿತ ಹೆಣ್ಣುಮಕ್ಕಳ ಮನಸ್ಸಿನ ಚಾಂಚಲ್ಯ ಒಂದು ಬಗೆಯದಾದರೆ ವಿವಾಹಿತ ಸ್ತ್ರೀಯರೂ ಇಂತಹ ಮೋಹದ ಬಲೆಗೆ ಬೀಳುವ ಕಥಾನಕಗಳು ಸುತ್ತಮುತ್ತ ಅದೆಷ್ಟೋ ನಡೆಯುತ್ತವೆ. ಮದುವೆಯಾಗಿ ಎರಡು ಮುದ್ದಾದ ಮಕ್ಕಳಿದ್ದೂ ವಿವಾಹದ ಹೊರಗಿನ ಬಂಧವೊಂದರಲ್ಲಿ ಹೆಣ್ಣು ಸಿಲುಕಿಹಾಕಿಕೊಳ್ಳುವ ಸಂದರ್ಭಗಳು ನಿಜಕ್ಕೂ ಅವಳ ಬದುಕಿನ ವಿಷಗಳಿಗೆಯೇ ಹೌದು. ಹಾಗೆಂದು ವಿವಾಹಿತನಾದವನೂ ತನ್ನ ಪತ್ನಿಯ ಪ್ರೀತಿಯಿಂದ ವಂಚಿತನಾಗಿ ಇನ್ನೋರ್ವಳ ಮೋಹದಲ್ಲಿ ಬೀಳುತ್ತಾನೆ ಎಂದರೆ ಅಲ್ಲಿಗೆ ನಾಲ್ಕು ಮಂದಿಯ ಬದುಕು, ಅವರೀರ್ವರ ಮಕ್ಕಳ ಬದುಕೂ ಸೊರಗುತ್ತದೆ. ಗಂಡಹೆಂಡತಿಯ ನಡುವೆ ಒಂದೆಳೆಯಷ್ಟಾದರೂ ಇರಬಹುದಾದ ಪ್ರೀತಿಯ ದಾರ ಕಡಿದೇ ಹೋಗುತ್ತದೆ. ಕಳೆದುಕೊಂಡದ್ದಕ್ಕೆ ಯಾರು ಹೊಣೆ?
ಸ್ನೇಹಿತರೊಬ್ಬರ ಗೆಳತಿ ತನ್ನ ಹತ್ತಾರು ವರ್ಷದ ವೈವಾಹಿಕ ಬದುಕನ್ನು ಕಡಿದುಕೊಂಡು ಇನ್ನೋರ್ವನಿಂದ ಪ್ರೀತಿಯನ್ನು ಹಂಬಲಿಸಿ ಬಂದಳು. ಈಕೆ ತನ್ನ ಬದುಕು ಕಡಿದುಕೊಳ್ಳುವವರೆಗೂ ಪ್ರೀತಿಯ ಹೊಳೆಯನ್ನೇ ಹರಿಸಿದ ಅವನು, ಅವಳು ತನ್ನ ಮನೆಯಿಂದ ಕಾಲು ಹೊರಗಿಡುತ್ತಿದ್ದಂತೆಯೇ ತನ್ನ ಬಣ್ಣವನ್ನೂ ಬದಲಾಯಿಸಿದ. ಕೇವಲ ದೈಹಿಕವಾಗಿ ಅವಳನ್ನು ಬಯಸಿದ್ದ ಈತನಿಗೆ ಅವಳನ್ನೂ ಅವಳ ಮಗುವನ್ನೂ ತಾನು ಸಾಕಬೇಕೆಂಬ ಯಾವ ಅಪೇಕ್ಷೆಯೋ ಉದ್ದೇಶವೋ ಇರಲಿಲ್ಲ. ಅಷ್ಟಕ್ಕೂ ಮದುವೆಯೇ ಆಗುವುದಕ್ಕೆ ಅವನಿಗೆ ನವವಧುವೇ ದೊರಕಬಲ್ಲ ಸಂದರ್ಭವಿದ್ದಾಗ ಮಗುವಿನ ತಾಯಿಯನ್ನು ವರಿಸುತ್ತಾನೆಂದು ಇವಳು ನಂಬಿದ ಪರಿಯಾದರೂ ಅದೆಂತೋ! ಅಂತೂ ನಂಬಿ ಕೆಟ್ಟವಳು ಹೆಣ್ಣು! ಚೆಂದವಾಗಿಯೇ ಅರಳಬಹುದಿದ್ದ ಬದುಕನ್ನು ಕೈಯಾರೆ ಕಡಿದುಕೊಂಡ ಅವಳನ್ನು ಹೆತ್ತವರೂ ಬಂಧುಗಳೂ ಎಲ್ಲರೂ ದೂರಮಾಡಿದರು. ಒಂಟಿಯಾಗಿ ತನ್ನ ಬಾಳನ್ನು ನಿಜಾರ್ಥದಲ್ಲಿಯೂ ಸವೆಸುತ್ತಿರುವ ಅವಳಿಗೆ ನೆಮ್ಮದಿಯೆಂಬುದು ಕನ್ನಡಿಯ ಗಂಟು.
ಒಂದೆರಡು ತಿಂಗಳ ಹಿಂದೆ ಕನ್ನಡದ ಹೆಸರಾಂತ ನಟಿಯ ವಿವಾಹದ ಸುದ್ದಿ ವಾರದುದ್ದಕ್ಕೂ ಟಿವಿ ಚಾನೆಲ್ಲುಗಳಿಗೆ, ಇತರ ಮಾಧ್ಯಮಗಳಿಗೆ ಆಹಾರವಾಯಿತು. ಸ್ಫುರದ್ರೂಪಿ ನಟಿಯೊಬ್ಬಳು ಅತಿಕಾಯನಂತಹ ಗಂಡೊಬ್ಬನನ್ನು ಮದುವೆಯಾದದ್ದನ್ನೂ ಚಿತ್ರವಿಚಿತ್ರವಾಗಿ ಆಡಿಕೊಂಡು ಜನ ಪರಿತಪಿಸಿದರು. ಇಲ್ಲೆಲ್ಲ ನಿಜಕ್ಕೂ ಒಲವೆಂಬುದು ಅರಳಿರುವುದೇ ಅಥವಾ ಆಸ್ತಿ, ಅಂತಸ್ತುಗಳು ಮಾತ್ರ ಪರಿಗಣನೆಗೆ ಬರುವುದೇ? ಬದುಕೆಂಬುದು ಸೋಲುಗೆಲವುಗಳ ಕೇವಲ ಆಟವೇ?
ಒಟ್ಟಿನಲ್ಲಿ ಇಂದಿನ ಮಾಧ್ಯಮಗಳು ಒದಗಿಸಿಕೊಟ್ಟಿರುವ ಅವಕಾಶಗಳೂ ಕಡಮೆಯದೇನಲ್ಲ. ಎಲ್ಲೆಲ್ಲೋ ಇರುವವರನ್ನು ಒಂದುಗೂಡಿಸಬಲ್ಲ ಇದೇ ವೇದಿಕೆಗಳು ಮನೆಯೊಳಗೆ ಇರುವವರನ್ನು ಅಪರಿಚಿತರನ್ನಾಗಿ ಮಾಡಿರುವುದು ಖೇದದ ಸಂಗತಿಯಷ್ಟೇ! ಕಳೆದುಹೋಗುತ್ತಾ ಸಮಾಜದಲ್ಲಿ ಎಲ್ಲೆಲ್ಲಿ ಏನಾಗಿದೆ, ಯಾರ್ಯಾರು ಏನೇನು ಪೋಸ್ಟ್ ಹಂಚಿಕೊಂಡಿದ್ದಾರೆ, ಅದಕ್ಕಿನ್ಯಾರು ಏನೇನು ಕಮೆಂಟ್ ಮಾಡಿದ್ದಾರೆ ಎಂಬುದರ ನಡುವೆ ಮನೆಯೊಳಗಿರುವ ನಮ್ಮವರ ಮನಸ್ಸಿನ ತುಮುಲಗಳೇನು, ಅವರನ್ನು ಕಾಡುವ ತಲ್ಲಣಗಳೇನು, ಭಾವಪಲ್ಲಟಗಳು ಅವರಲ್ಲಿ ಯಾಕಾಗಿ ಘಟಿಸುತ್ತಿವೆ ಎಂಬುದನ್ನು ಕೊಂಚ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರೂ ಪ್ರತಿಯೊಬ್ಬರ ಬದುಕೂ ಈಗ ಇರುವುದಕ್ಕಿಂತ ಹತ್ತರಷ್ಟು ಸುಧಾರಿಸೀತು ಅಥವಾ ದಿಕ್ಕು ಸರಿಯಾಗಿಯೇ ಉಳಿದೀತು.