ನನ್ನನ್ನು ಭಜಿಸಿ ತಮ್ಮ ಆತ್ಮಹಿತವನ್ನು ಬೆಳೆಸಿಕೊಂಡಂತಹವರು ನಾಲ್ಕು ಬಗೆಯ ಭಕ್ತರಿರುವರು. ಅವರ ವರ್ಣನೆಯನ್ನು ಕೇಳು. ಅವರೊಳಗಿನ ಮೊದಲಿಗರು ಆರ್ತರು, ಎರಡನೆಯವರು ಜಿಜ್ಞಾಸುಗಳು, ಮೂರನೆಯವರು ಅರ್ಥಾರ್ಥಿಗಳು ಮತ್ತು ನಾಲ್ಕನೆಯವರು ಜ್ಞಾನಿಗಳು.
ಅದರೊಳಗಿನ ಆರ್ತನು ಕಷ್ಟಗಳ ನಿವಾರಣೆಗಾಗಿ, ಜಿಜ್ಞಾಸುವು ಜ್ಞಾನಾರ್ಥವಾಗಿ ಮತ್ತು ಮೂರನೆಯವರು ಅರ್ಥಪ್ರಾಪ್ತಿಗಾಗಿ ನನ್ನನ್ನು ಭಜಿಸುವರು. ಬಳಿಕ ನಾಲ್ಕನೆಯವನಾದ ಜ್ಞಾನಿ-ಭಕ್ತನಲ್ಲಿ (ಬಯಕೆಯೇ ಇಲ್ಲದ್ದರಿಂದ) ಅವನಿಗೆ ಏನೂ ಕರ್ತವ್ಯವಿರುವುದಿಲ್ಲ. ಆದ್ದರಿಂದ ಒಬ್ಬ ಜ್ಞಾನಿಯೇ ನಿಜವಾದ ಭಕ್ತನಿರುವನೆಂದು ತಿಳಿ. ಯಾಕೆಂದರೆ ಆತ್ಮಜ್ಞಾನರೂಪಪ್ರಕಾಶದಿಂದ ಅವನಲ್ಲಿ ಹುದುಗಿದ ದ್ವೈತಾದ್ವೈತರೂಪ ಕತ್ತಲೆಯು ಇಲ್ಲದಾಗಿರುವುದು. ಆದ್ದರಿಂದ ಅವನು ಮದ್ರೂಪ (ನನ್ನ ರೂಪ)ನಾಗುವನು. ಇಂತು ಅವನು ಬೋಧರೂಪದಿಂದ ಮದ್ರೂಪನಾದಾಗ್ಯೂ (ದೇಹವಿರುವವರೆಗೆ) ಅವನು ತನ್ನನ್ನು ನನ್ನ ಭಕ್ತನೆಂದೇ ತಿಳಿದುಕೊಳ್ಳುವನು. ಗಾಳಿಯನ್ನು ಅಲ್ಲಾಡಿಸಿ ನೋಡಿದಾಗ ಅದು ಆಕಾಶದಿಂದ ಬೇರೆಯಾಗಿರುವುದು ತಿಳಿಯುವುದು. ಇಲ್ಲವಾದರೆ ಅದು ಆಕಾಶರೂಪವೇ ಆಗಿರುವುದು.
ಅದರಂತೆ ಜ್ಞಾನಿಪುರುಷನು ಶರೀರದೃಷ್ಟಿಯಿಂದ ಭಕ್ತನೆಂದೆನಿಸುವನು. ಆದರೆ ಭೇದದೃಷ್ಟಿಯಿಂದ ಅವನು ಮದ್ರೂಪನೇ ಇರುವನು. ಆತನು ಕರ್ಮಕ್ಷಯರೂಪ ಜ್ಞಾನೋದಯದ ಬೆಳಗನ್ನು ಕಂಡವನು. ಅದರಂತೆ ಗುರುಕೃಪೆಯೆಂಬ ಉಷಃಕಾಲವಾಗಿ, ಜ್ಞಾನರೂಪದ ಎಳೆಬಿಸಿಲು ಬಿದ್ದಿತ್ತು. ಆಗ ಬ್ರಹ್ಮಸಾಮ್ಯತೆಯ ಐಶ್ವರ್ಯವನ್ನು ಅವನು ಕಂಡನು. ಮತ್ತು ಆ ಸಮಯಕ್ಕೆ ಅವನು ನೋಡಿದತ್ತೆಲ್ಲ ಅವನಿಗೆ ನಾನೇ ಕಾಣುವೆನು. ಅಥವಾ ಆತನು ಸ್ವಸ್ಥವಾಗಿ ಕುಳಿತಾಗ್ಯೂ ಆತನಿಗೆ ಎಲ್ಲೆಡೆಗೂ ನಾನೇ ಇರುವೆನು. ಹೆಚ್ಚಿಗೇನು ಹೇಳುವುದಿದೆ! ಅವನಿಗೆ ನನ್ನ ಹೊರತು ಇನ್ನೇನೂ ಕಾಣದು. ನೀರಲ್ಲಿ ಮುಳುಗಿದ ಕೊಡಕ್ಕೆ ಒಳಗೂ ಹೊರಗೂ ನೀರೇ ಇರುವುದಷ್ಟೆ! ಅದರಂತೆ ಅವನು ನನ್ನೊಳಗಿರುವನು, ನಾನು ಆತನ ಒಳಗೂ ಹೊರಗೂ ಇರುವೆನು.
[ಶ್ರೀ ಜ್ಞಾನೇಶ್ವರೀ ಗೀತೆ, ಅಧ್ಯಾಯ 7.
ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ]