೨೦೨೩ರ ವರ್ಷವನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ವೆಂದು ವಿಶ್ವಸಂಸ್ಥೆಯು ಘೋಷಿಸಿರುವುದು ಒಂದು ಸ್ವಾಗತಾರ್ಹ ಕ್ರಮವಾಗಿದೆ. ಈ ಆಶಯದ ಭಾರತದ ಪ್ರಸ್ತಾವವನ್ನು ಜಗತ್ತಿನ ೭೨ ದೇಶಗಳು ಸಮರ್ಥಿಸಿದುದೂ ಹೃದ್ಯವಾಗಿದೆ. ಚಾರಿತ್ರಿಕವಾಗಿ, ತಾಂತ್ರಿಕವಾಗಿ – ಎರಡೂ ದೃಷ್ಟಿಗಳಿಂದ ಸಿರಿಧಾನ್ಯಗಳಿಗೆ ಮಹತ್ತ್ವ ಸಲ್ಲುತ್ತದೆ. ಮಾನವಕುಲಕ್ಕೇ ಸಿರಿಧಾನ್ಯಗಳು ನಿಸರ್ಗದ ವಿಶಿಷ್ಟ ಕೊಡುಗೆಯಾಗಿವೆ. ಇವು ಪ್ರಾಚೀನಕಾಲದಿಂದಲೂ ಬಳಕೆಯಲ್ಲಿ ಇದ್ದಂಥವೇ. ಹೆಚ್ಚಿನ ಪೌಷ್ಟಿಕತೆಯನ್ನುಳ್ಳ ರಾಗಿ, ಸಜ್ಜೆ, ಸಾಮೆ, ನವಣೆ ಮೊದಲಾದವು ಕಡಮೆ ನೀರಿನಲ್ಲಿ ಹಾಗೂ ಒಣಭೂಮಿಯಲ್ಲಿಯೂ ಬೆಳೆಯುವ ಬೆಳೆಗಳಾಗಿವೆಯಾದ್ದರಿಂದ ಆಹಾರಭದ್ರತೆಗೆ ಇವು ಪೂರಕವಾಗಿವೆ. ಭಾರತವಲ್ಲದೆ ಅನ್ಯ ನೂರಾರು ದೇಶಗಳಲ್ಲಿಯೂ ಇವು ಸಾಂಪ್ರದಾಯಿಕ ಆಹಾರವೆನಿಸಿವೆ. ಭಾರತದಲ್ಲಿ ಈಚಿನ ದಶಕಗಳಲ್ಲಿ ವಾಣಿಜ್ಯ ಬೆಳೆಗಳು ಪ್ರಾಧಾನ್ಯ ಪಡೆದುಕೊಂಡ ಕಾರಣದಿಂದಾಗಿ ಹಿನ್ನೆಲೆಗೆ ಸರಿದಿದ್ದ ಸಿರಿಧಾನ್ಯಗಳ ಗುಣವತ್ತತೆಯ ಮನವರಿಕೆಯೂ ಜನಜಾಗೃತಿಯೂ ಹರಡತೊಡಗಿರುವುದೂ ಕೇಂದ್ರಸರ್ಕಾರ ಇದಕ್ಕೆ ಆದ್ಯತೆ ನೀಡುತ್ತಿರುವುದೂ ಒಳ್ಳೆಯ ಬೆಳವಣಿಗೆಯೆನ್ನಬೇಕಾಗಿದೆ.
ಸಿರಿಧಾನ್ಯಂ ಗೆಲ್ಗೆ!
Month : April-2023 Episode : Author :