ಸ್ತ್ರೀ ಪಾತ್ರದಲ್ಲಿ ಅತ್ಯಂತ ತಲ್ಲೀನರಾಗಿ ಪರಕಾಯ ಪ್ರವೇಶ ಮಾಡುವ ಪುರುಷರು ಮನೆಯಲ್ಲಿನ ತಮ್ಮ ಪತ್ನಿಯರ, ಸಹೋದರಿಯರ ಭಾವಗಳನ್ನು ಅಷ್ಟೇ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ ಎಂಬ ಭರವಸೆ ಇದೆಯೇ? ಹಾಗಿರುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಸರ್ವವೇದ್ಯ. ರಂಗಭೂಮಿಯೆಂಬುದು ಬದುಕಿನ ಉತ್ಪ್ರೇಕ್ಷಿತ ಅನುಕರಣೆಯೇ ಹೊರತು ಅದು ಬದುಕಲ್ಲ.
ಯಕ್ಷಗಾನ ತಾಳಮದ್ದಳೆಯ ಶ್ರೀಕೃಷ್ಣ ಸಂಧಾನ ಪ್ರಸಂಗ. ವಿದುರನ ಅರ್ಥ ಹೇಳುವ ಅವಕಾಶ ನನಗೆ ಒದಗಿ ಬಂದಿತ್ತು. ಮೊದಲ ಭಾಗದ ಭಕ್ತಿಯ, ಭಾವುಕತೆಯ ಕೃಷ್ಣನನ್ನು ಕಂಡ ಪುಳಕೋತ್ಸವದ ಹರ್ಷವೆಲ್ಲದರ ಅಭಿವ್ಯಕ್ತಿಯ ಬಳಿಕ ಮುಂದಿನ ಭಾಗದಲ್ಲಿ ಕೌರವ ವಿದುರನನ್ನು ಕುಲಹೀನನೆಂದು ಜರೆದು, ಕೃಷ್ಣನನ್ನು ಗೋವಳನೆಂದು ನಿಂದಿಸುವ ಸಂದರ್ಭ. ಅಲ್ಲಿ ವಿದುರನಿಗೆ ಅತ್ಯಂತ ಸಿಟ್ಟು ಬಂದು ಅವನು ಬಿಲ್ಲನ್ನು ಮುರಿದೆಸೆದು ಸುಯೋಧನನನ್ನು ತಾನು ಎಂದಿಗೂ ಕಾಯುವುದಕ್ಕಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳುವ ಸನ್ನಿವೇಶ. ಸಹಜವಾಗಿ ಏರುಧ್ವನಿಯಲ್ಲಿ ಮಾತನಾಡಬೇಕು, ಸಂದರ್ಭವನ್ನು ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ಸೃಷ್ಟಿಸಬೇಕು. ನನ್ನ ಸಾಮರ್ಥ್ಯಕ್ಕೆ ತಕ್ಕುದಾದ ಹಾಗೆ ಜೋರುಧ್ವನಿಯಲ್ಲಿ ಮಾತನಾಡಿದೆ. ಇನ್ನೊಂದಷ್ಟು ಪೂರ್ವಸಿದ್ಧತೆ ಇದ್ದಿದ್ದರೆ ಇನ್ನೂ ಚೆನ್ನಾಗಿ ಮಾತನಾಡಬಹುದಿತ್ತು ಎಂಬ ಸಣ್ಣ ತಳಮಳದೊಂದಿಗೆ ವೇದಿಕೆಯಿಂದ ಇಳಿದುಬಂದೆ.
ಧ್ವನಿಯ ಏರಿಳಿತದ ಬಗೆಗೆ, ಪಾತ್ರನಿರ್ವಹಣೆಯ ಬಗ್ಗೆ ಮೆಚ್ಚಿಕೊಂಡವರು, ಸಣ್ಣಪುಟ್ಟ ತಿದ್ದುಪಡಿಗಳನ್ನು ಸೂಚಿಸಿದವರು ಹಲವರು. ಇವೆಲ್ಲದರ ನಡುವೆ ಕೆಲವರು `ನೀವು ಮನೆಯಲ್ಲಿಯೂ ಹೀಗೆಯಾ?’ ಅಂತ ಕಾಲೆಳೆದರು. `ನಿನ್ನ ಗಂಡ ಯಾಕೆ ಅಷ್ಟೊಂದು ಮೌನಿಯಾಗಿರುತ್ತಾನೆ ಅಂತ ಗೊತ್ತಾಯಿತು’ ಎಂದು ಛೇಡಿಸಿದರು. `ತರಗತಿಯಲ್ಲಿ ನೀನು ಹೀಗೆ ಸ್ವರ ತೆಗೆದರೆ ಮಕ್ಕಳ ಕತೆ ಗೋವಿಂದ’ ಎಂದರು. ಎಲ್ಲವನ್ನೂ ಧನಾತ್ಮಕವಾಗಿಯೇ ಸ್ವೀಕರಿಸಿ ಅಲ್ಲಿಂದ ನಿರ್ಗಮಿಸಿದೆ. ಮನಸ್ಸಿನ ತುಂಬ ಕೃಷ್ಣ-ವಿದುರನ ಸಂವಾದ ತುಂಬಿತ್ತು.
ತಾಳಮದ್ದಳೆಯ ಕಾರ್ಯಕ್ರಮದ ನೇರಪ್ರಸಾರವೂ ಇದ್ದುದರಿಂದ ಅನೇಕ ಮಂದಿಯ ವಿಧವಿಧದ ವಿಮರ್ಶೆಗಳು ಬಂದವು. ಸರಿ, ಬೇಕಾದ್ದನ್ನು ತೆಗೆದುಕೊಂಡು ಬೇಡದಿರುವುದನ್ನು ಬಿಟ್ಟರಾಯಿತು ಎಂದುಕೊಳ್ಳೋಣ. ವಿದುರನ ಸಂಭಾಷಣೆಯ ಭಾಗವೊಂದನ್ನು ಫೇಸ್ಬುಕ್ನಲ್ಲಿ ಹಾಕಿದ ಪರಿಣಾಮ ವೈವಿಧ್ಯಮಯವಾದ ಪ್ರತಿಕ್ರಿಯೆಗಳು ಬಂದವು. ನನ್ನ ಸಂಗಾತಿಗೆ `ಇಂದು ನಿಮ್ಮ ಮೇಲೆ ಲಟ್ಟಣಿಗೆ ಪ್ರಯೋಗ ಖಂಡಿತಾ ಇದ್ದೀತು ಜೋಪಾನ… ಮನೆಯಲ್ಲಿ ಸ್ವಲ್ಪ ಹುಷಾರಾಗಿರಿ ಸಾರ್’ ಎಂಬ ಸಾಲುಗಳನ್ನು ಕಂಡಾಗ ನಿಜಕ್ಕೂ ಗೊಂದಲಕ್ಕೊಳಗಾದೆ. ಹೀಗೆ ಪ್ರತಿಕ್ರಿಯೆಯನ್ನು ಬರೆಯುವವರು ಎಲ್ಲೋ ಪತ್ನಿಪೀಡಕ ಸಂಘದ ಸದಸ್ಯರೋ ಅಧ್ಯಕ್ಷರೋ ಆಗಿರಬೇಕು ಬಿಡು ಎಂದು ನನ್ನೊಳಗೆ ನಕ್ಕೆ. ಆದರೆ ಈ ವಿಷಯ ಅಷ್ಟಕ್ಕೇ ಮುಗಿಯುವ, ಮುಗಿದು ಹೋಗಬೇಕಾದ ಸಂಗತಿಯಲ್ಲ ಎಂದು ಪದೇಪದೇ ಅನ್ನಿಸುವುದಕ್ಕೆ ಪ್ರಾರಂಭವಾಯಿತು.
ಪರಸ್ಪರ ಕಾಲೆಳೆಯುವುದು, ತಮಾಷೆ ಮಾಡಿಕೊಳ್ಳುವುದು ಈ ಕಾಲದ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ಅದು ಪುನರಾವರ್ತನೆಯಾದಾಗ ಇದಕ್ಕೂ ಒಂದು ಮಿತಿಯಿಲ್ಲವೇ ಎನಿಸತೊಡಗುತ್ತದೆ.
ಯಕ್ಷಗಾನವೆಂಬ ಕಲೆಯೇ ಅತಿರಂಜಿತ, ವೈಭವೋಪೇತವಾದದ್ದು. ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ನಾವು ಸಹಜತೆಯನ್ನು ಮೀರಿ ಪ್ರವರ್ತಿಸಬೇಕಾಗುತ್ತದೆ. ಅದರ ಆಂಗಿಕ, ವಾಚಿಕ, ಸಾತ್ತ್ವಿಕ, ಆಹಾರ್ಯಗಳೆಂಬ ನಾಲ್ಕೂ ಅಂಶಗಳೂ ಸಹಜತೆಯನ್ನು ಮೀರಿದ ಅಭಿವ್ಯಕ್ತಿ. ಯಾಕೆಂದರೆ ಅದು ರಂಗಸ್ಥಳ, ರಂಗಭೂಮಿ. ನಿಜಜೀವನದಲ್ಲಿ ನಾವು ಏನಲ್ಲವೋ ಅದನ್ನು ರಂಗದಲ್ಲಿ ಅಭಿನಯಿಸುವುದು ಸುಲಭ. ನಿಜವಾದ ನಮ್ಮ ವ್ಯಕ್ತಿತ್ವವನ್ನೇ ರಂಗದ ಮೇಲೂ ನಟಿಸುವುದು ಕಷ್ಟ. ಅನೇಕ ಮಂದಿ ಸ್ತ್ರೀಯರು ಯಕ್ಷಗಾನದಲ್ಲಿ ಸ್ತ್ರೀವೇಷ ಮಾಡಲು ಸಿದ್ಧರಾಗುವುದಿಲ್ಲ. ಅದರರ್ಥ ಪುರುಷಪಾತ್ರಗಳು ಮಾತ್ರ ಹೆಚ್ಚುಗಾರಿಕೆಯವು ಅಂತಲ್ಲ. ಸ್ವತಃ ಹೆಣ್ಣಿಗೆ ಹೆಣ್ಣಿನ ನಟನೆ ಮಾಡುವುದು ಕಠಿಣತರವಾದ ಕೆಲಸ. ಹಾಗೆಂದು ಭರತನಾಟ್ಯದಲ್ಲಿ ಬಲುಸುಂದರವಾಗಿ ಹೆಣ್ಣಿನ ಭಾವಾಭಿವ್ಯಕ್ತಿಯನ್ನು ಮಾಡುವವರಿದ್ದಾರೆ, ಅಲ್ಲಿ ಸಾಧ್ಯವಾಗುವುದು ಯಕ್ಷಗಾನದಲ್ಲಿ ಏಕೆ ಸಾಧ್ಯವಾಗುವುದಿಲ್ಲ ಎಂದರೆ ಇಲ್ಲಿ ನಾಟ್ಯದ ಬಳಿಕ ಮಾತೂ ಇರುತ್ತದೆ. ಅಲ್ಲದೆ ಸ್ತ್ರೀ ಪಾತ್ರಗಳಿಗೆ ಮಾದರಿ ನಮ್ಮ ಹಿಂದಿನ ತಲೆಮಾರುಗಳ ಶ್ರೇಷ್ಠ ಕಲಾವಿದರು (ಪುರುಷರು) ನಿರ್ಮಿಸಿ, ರೂಪಿಸಿರುವಂತಹ ಸ್ತ್ರೀ ಪಾತ್ರಗಳು. ಅಂದರೆ ಹೆಣ್ಣುಮಕ್ಕಳು ಅಭಿವ್ಯಕ್ತಿಪಡಿಸುವಾಗ ಅದು ಅನುಕರಣೆಯ ಅನುಕರಣೆಯಾಯಿತು. ಅಲ್ಲದೇ ಕೆಲವು ಶೃಂಗಾರ ಸನ್ನಿವೇಶಗಳನ್ನು ಅಭಿನಯಿಸುವಾಗ ಪುರುಷರು ಅಭಿನಯಿಸಿದಂತೆ ಅಭಿನಯಿಸುವುದು ಕಠಿಣವೇ.
ಮಾತುಗಾರಿಕೆಯಲ್ಲಾದರೂ ಅಷ್ಟೇ. ಯಕ್ಷಗಾನದ ಅರ್ಥಗಾರಿಕೆ ಸಹಜತೆಯಿಂದ ಭಿನ್ನ. ಅದರ ಸ್ವರಭಾರದ ಏರಿಳಿತ, ಸಾಹಿತ್ಯಿಕವಾದ ಭಾಷೆಗೊಂದು ವಿಶಿಷ್ಟತೆ ಇರುವುದೂ ದೈನಂದಿನ ಆಡುಭಾಷೆಯಂತೆ ಅದಿಲ್ಲ ಎಂಬುದರಿಂದಲೇ. ಕನ್ನಡವನ್ನು ನಿಜಾರ್ಥದಲ್ಲಾದರೂ ಔನ್ನತ್ಯಕ್ಕೇರಿಸಬಲ್ಲ ಶಕ್ತಿ ಅದಕ್ಕಿದೆ. ಹೀಗಿರುವಾಗ ಪಾತ್ರಕ್ಕೆ ನ್ಯಾಯ ಒದಗಿಸಬೇಕಾದರೆ ನಮ್ಮ ಸಿದ್ಧತೆ ಅಪಾರವಾಗಿ ಇರಬೇಕಾಗುತ್ತದೆ. ನಿರರ್ಗಳವಾಗಿ, ಆಂಗ್ಲಭಾಷೆ ಇಣುಕಿ ಆಭಾಸವಾಗದಂತೆ ಮಾತನಾಡುವ ಕೌಶಲವನ್ನು ಸಾಧಿಸಬೇಕಾದರೆ ಬಹಳ ಎಚ್ಚರವೂ ಬೇಕಾಗುತ್ತದೆ. ನಮ್ಮ ಯೋಚನೆ ಇದರೊಳಗಷ್ಟೇ ಇರುವಾಗ ಪಾತ್ರವನ್ನು ಪಾತ್ರವಾಗಿ ಕಾಣಬೇಕಲ್ಲದೆ ಮನೆಯ ಮಟ್ಟಿಗೆ ಇಳಿಸಿ ಪ್ರತಿಕ್ರಿಯೆ ನೀಡಹೊರಟರೆ ಅದು ಸಾಧುವೇ?
ನನ್ನೊಳಗೆ ಉದಿಸಿದ ಪ್ರಶ್ನೆಯೆಂದರೆ ರಂಗಸ್ಥಳದ ಮೇಲೆ ಅಥವಾ ತಾಳಮದ್ದಳೆಯ ವೇದಿಕೆಯಲ್ಲಿ ಸಾಲ್ವನಾಗಿ ಅಂಬೆಯೊಂದಿಗೊ, ಶಂತನುವಾಗಿ ಸತ್ಯವತಿಯೊಂದಿಗೊ, ವಿಶ್ವಾಮಿತ್ರನಾಗಿ ಮೇನಕೆಯೊಂದಿಗೊ ಶೃಂಗಾರವನ್ನು ಅಭಿವ್ಯಕ್ತಿಸುವ ಅದೆಷ್ಟು ಪುರುಷ ಕಲಾವಿದರಿಲ್ಲ! ಅವರ ಮಾತುಗಳನ್ನು ಕೇಳುವಾಗ ಎಂಥವರಿಗಾದರೂ ಮನಸ್ಸಿನಲ್ಲಿ ನವಿರಾದ ಭಾವಗಳು ಉಕ್ಕಿ ಹರಿಯಬೇಕು. ಅಷ್ಟೊಂದು ಒಲವಿನಿಂದ, ಅನುನಯದಿಂದ ಮನೆಮನೆಯಲ್ಲೂ ಗಂಡಹೆಂಡತಿ ಸಂವಹನ ನಡೆಸಿಕೊಳ್ಳುವಂತಿದ್ದರೆ ಎಷ್ಟು ಚೆನ್ನ ಅನ್ನಿಸಬೇಕು. ಈ ಬಗೆಯ ಯೋಚನೆಗಳು ಅಸಾಧುವೆನ್ನಿಸದು. ಆದರೆ ’ಆಹಾ ಎಷ್ಟು ಚೆನ್ನಾಗಿ ರಮಿಸಿ ಮಾತನಾಡುತ್ತಿದ್ದಾರೆ, ಬಹುಶಃ ಮನೆಯಲ್ಲಿ ತಮ್ಮ ಪತ್ನಿಯೊಂದಿಗೂ ಇವರು ಹೀಗೆಯೇ ಮಾತನಾಡಿಯಾರು’ ಎಂದು ಯೋಚಿಸುವುದಕ್ಕಿದೆಯೇ! ಸ್ತ್ರೀ ಪಾತ್ರದಲ್ಲಿ ಅತ್ಯಂತ ತಲ್ಲೀನರಾಗಿ ಪರಕಾಯ ಪ್ರವೇಶ ಮಾಡುವ ಪುರುಷರು ಮನೆಯಲ್ಲಿನ ತಮ್ಮ ಪತ್ನಿಯರ, ಸಹೋದರಿಯರ ಭಾವಗಳನ್ನು ಅಷ್ಟೇ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ ಎಂಬ ಭರವಸೆ ಇದೆಯೇ? ಹಾಗಿರುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಸರ್ವವೇದ್ಯ. ರಂಗಭೂಮಿಯೆಂಬುದು ಬದುಕಿನ ಉತ್ಪ್ರೇಕ್ಷಿತ ಅನುಕರಣೆಯೇ ಹೊರತು ಅದು ಬದುಕಲ್ಲ.
ತಪೋಭಂಗಗೊಂಡಂಥ ವಿಶ್ವಾಮಿತ್ರ ಮೇನಕೆಯ ಮೋಹಕ್ಕೆ ಒಳಗಾಗಿ, ಸಹಬಾಳ್ವೆ ನಡೆಸಿ ಶಕುಂತಲೆಯ ಜನನವಾದ ಬಳಿಕ ಜ್ಞಾನೋದಯವಾಗಿ ಮತ್ತೆ ತಪಸ್ಸಿಗೆ ತೆರಳಿದ ಕತೆ ನಮಗೆ ಗೊತ್ತು. ತಂದೆತಾಯಿಯಿಬ್ಬರೂ ಕೈಬಿಟ್ಟ ಶಕುಂತಲೆ ಕಣ್ವರಿಂದ ಪೋಷಿಸಲ್ಪಟ್ಟು, ದುಷ್ಯಂತನೊಂದಿಗೆ ಗಾಂಧರ್ವವಿವಾಹವಾದ ಕಥೆಯೂ ಗೊತ್ತು. ಅಂದಮಾತ್ರಕ್ಕೆ ನಿಜಜೀವನದಲ್ಲಿ ವಿಶ್ವಾಮಿತ್ರ ಮಹರ್ಷಿಯ ಈ ನಡೆ ಮಾದರಿಯೇ? ಅಲ್ಲವಲ್ಲ? ಅಷ್ಟೇ ಏಕೆ? ಮಗಳನ್ನು ತೊರೆದು ಹೋಗುವುದಕ್ಕೆ ಅಪಾರ ವೇದನೆ ಅನುಭವಿಸುತ್ತ ವಿಶ್ವಾಮಿತ್ರನಾಗಿ ಅಭಿನಯಿಸಿದ ಮಹಾನ್ ಕಲಾವಿದ ನಿಜ ಜೀವನದಲ್ಲಿ ತನ್ನ ಮಗಳು ಕುಡುಕಗಂಡನ ಹಿಂಸೆಯನ್ನು ತಾಳಲಾರದೆ ಪುಟ್ಟ ಮಗಳೊಂದಿಗೆ ಮರಳಿ ತವರಿನ ಆಸರೆ ಬೇಡಿದಾಗ ನಿರಾಕರಿಸಿದ ಘಟನೆಯನ್ನು ದೂರದಿಂದಲೇ ಕೇಳಿದ್ದೇವೆ. ಬದುಕೇ ಬೇರೆ, ರಂಗಸ್ಥಳವೇ ಬೇರೆ!
ರಂಗನಲ್ಲಿ ರಾಮನಾಗಿ ಏಕಪತ್ನೀವ್ರತಸ್ಥನಾಗಿರುವ ಹಿರಿಮೆಯನ್ನು ಮೆರೆಯುವ ಕಲಾವಿದನ ಹಿನ್ನೆಲೆಯನ್ನು ಕೆದಕಿ ಹೋದರೆ ಅವನ ನೆನಪಿನಂಗಳದಲ್ಲಿ ನೂರು ಚಿತ್ತಾರಗಳಿರವೇ? ಬದುಕಿನುದ್ದಕ್ಕೂ ಹಲವು ಸುಗಂಧಗಳು ಅವನನ್ನು ಹಾದು ಹೋಗಿರವೇ? ಓರ್ವ ಅಗ್ರಮಾನ್ಯ ಕಲಾವಿದರು ತಾವು ಹೋದ ಊರಿನಲ್ಲೆಲ್ಲಾ ಸಂಸಾರ ನಡೆಸಿದವರೆಂದೂ, ತೊಟ್ಟಿಲು ಕಟ್ಟಿದವರೆಂದೂ ಅನೇಕ ಮಂದಿ ಆಡಿಕೊಳ್ಳುವುದನ್ನು ಕೇಳಿದ್ದೇನೆ. ’ಅವರೆಲ್ಲಾ ತನ್ನ ಪಾತ್ರವನ್ನು ಕಂಡು ಮೆಚ್ಚಿ, ಒಲಿದು ಬಂದವರು’ ಎಂದು ಸ್ವತಃ ಅವರೇ ಆಡುತ್ತಿದ್ದರಂತೆ. ಹಾಗೆಂದ ಮಾತ್ರಕ್ಕೆ ರಂಗಸ್ಥಳದಲ್ಲಿ ಅವರನ್ನು ಕಾಣುವಾಗ ಅವರ ಈ ಬಗೆಯ ಚಾಳಿಯನ್ನು ಮರೆತು ಜನ ಅವರ ಪಾತ್ರವನ್ನಷ್ಟೇ ಮಾನಿಸುವುದು ಹೌದಲ್ಲಾ? ಅಲ್ಲಿಗೆ ವ್ಯಕ್ತಿ ಬೇರೆ, ಅವನಲ್ಲಿ ಅಡಕವಾಗಿರುವ ಕಲೆ ಬೇರೆ ಎಂದಾಯಿತು.
ಪ್ರಸಂಗದೊಳಗಿನ ಪಾತ್ರವಾಗಿ ಓರ್ವ ಕಲಾವಿದ ಕಾಣಿಸಿಕೊಳ್ಳುವಾಗ ಅವನು ಪಾತ್ರಕ್ಕೆ ನ್ಯಾಯ ಒದಗಿಸಿದನೆ ಇಲ್ಲವೇ ಎನ್ನುವುದಷ್ಟೇ ಮುಖ್ಯ ಹೊರತು ಅವನ ಹಿನ್ನೆಲೆಯೋ, ವ್ಯಕ್ತಿತ್ವವೋ ಅಲ್ಲ. ವೈಯುಕ್ತಿಕವಾಗಿ ಓರ್ವನ ಚಾರಿತ್ರ್ಯ ಶುದ್ಧವಿಲ್ಲದಿದ್ದರೆ ಸಮಾಜದ ಇತರ ಸ್ತರಗಳಲ್ಲಿ ಅವನು ಗಳಿಸುವ ಗೌರವ, ಮನ್ನಣೆಗಳು ವ್ಯತ್ಯಾಸಗೊಳ್ಳುತ್ತದೆ ನಿಜ, ಹಾಗೆಂದು ಅವನಲ್ಲಿರುವ ಕಲಾಸರಸ್ವತಿಯನ್ನು ನಾವು ಅಲ್ಲಗಳೆಯುವಂತಿಲ್ಲ. ಎಷ್ಟೋ ಮಂದಿ ಸಾಹಿತಿಗಳು, ಸಿನೆಮಾ ನಟರು, ರಂಗಭೂಮಿ ಕಲಾವಿದರು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ನೋವುಗಳನ್ನು, ಅವಮಾನಗಳನ್ನು ಅನುಭವಿಸಿದವರಿರಬಹುದು. ಹೆಣ್ಣಿನ ಕುರಿತಾಗಿ ಕೊಂಚ ಹೆಚ್ಚೇ ಆಸೆ, ಆಸಕ್ತಿಯನ್ನು ತಳೆದವರಾಗಿರಬಹುದು. ಓದುಗರಿಗೆ ಅವರ ವ್ಯಕ್ತಿತ್ವ ಮುಖ್ಯವಾಗದೆ ಅವರ ಸಾಹಿತ್ಯ, ಅಭಿನಯ, ತನ್ಮೂಲಕ ಅವರ ಸಂದೇಶ ಮುಖ್ಯವಾಗುತ್ತದೆ. ’ಈ ಸಂದೇಶಗಳನ್ನೆಲ್ಲ ನೀವು ನಿಮ್ಮ ಬದುಕಿನಲ್ಲಿ ಅನುಸರಿಸಿದ್ದೀರಾ?’ ಎಂದು ಆ ಕ್ಷಣದಲ್ಲಿ ಅವರನ್ನು ಯಾರೂ ಕೇಳಬೇಕಿಲ್ಲ. ಅವರವರ ಕರ್ಮಾನುಸಾರ, ಉಳಿಸಿಕೊಂಡ ಋಣಾನುಬಂಧಗಳ ಪ್ರಕಾರ ಪ್ರತಿಯೊಬ್ಬನೂ ಭೂಮಿಯ ಮೇಲೆ ಬಾಳಿ ಹೋಗುತ್ತಾರೆ. ಉತ್ತಮ ಚಾರಿತ್ರ್ಯವನ್ನು ಕಾಪಾಡಿಕೊಂಡು ಬೆಳೆದವರ ಬಗ್ಗೆ ಸಮಾಜ ಕೊಂಚ ಹೆಚ್ಚೇ ಗೌರವ ಕೊಡುತ್ತದೆ ಎಂಬುದಂತೂ ನಿಜವೇ. ಏನೇ ಇರಲಿ, ಕಲೆಯನ್ನು ಕಲೆಯನ್ನಾಗಿ ನೋಡುವ, ವಿಮರ್ಶಿಸುವ ಮನೋಪ್ರವೃತ್ತಿ ಬೆಳೆಯಲಿ. ಪ್ರತಿಕ್ರಿಯೆಯ ಭರದಲ್ಲಿ ವೈಯಕ್ತಿಕ ಬದುಕಿಗೆ ರಂಗಸ್ಥಳವನ್ನು ಹೊಂದಿಸಿ ನೋಡುವ ಭ್ರಮೆ ಕಳಚಲಿ. ಎಂಥ ಪ್ರಬುದ್ಧ ವ್ಯಕ್ತಿಯಾದರೂ ಅವರೊಳಗೊಂದು ಮುಗ್ಧಮನಸ್ಸಿರುತ್ತದೆ. ಅದನ್ನು ನೋಯಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಮನೆಯೆಂಬುವುದು ಮನೆಯೇ, ರಂಗಸ್ಥಳವೆಂಬುದು ರಂಗಸ್ಥಳವೇ. ಅಷ್ಟಕ್ಕೂ ಕಲೆಗಾಗಿ ಕಲೆ ಎಂಬ ಕೂಗು ಎದ್ದದ್ದು ಇಂದು ನಿನ್ನೆ ಅಲ್ಲವಲ್ಲ.