ಸೂರ್ಯನು ಸ್ವತಃ ಏನೂ ಮಾಡದೆ ಜನರ ವ್ಯವಹಾರಗಳೆಲ್ಲ ಆತನ ಪ್ರಕಾಶದ ಮೇಲೆ ಸಾಗುವವು. ಅದರಂತೆ ಪರಮಾತ್ಮನು ಈ ಶರೀರದಲ್ಲಿ ಮಲಗಿದಂತೆ ಇರುವನು. ಅದರಿಂದ ಅವನಿಗೆ ‘ಪುರುಷ’ ಎಂದೆನ್ನುವರು ಎಂದು ತಿಳಿ. ಮತ್ತು ಈತನು ಪ್ರಕೃತಿ ಎಂಬ ಪತಿವ್ರತೆಯೊಡನೆ ಏಕಪತ್ನೀವ್ರತದಿಂದ ಇರುವನೆಂದೂ ಈತನಿಗೆ ಪುರುಷನೆನ್ನುವರು. ಆದರೆ ನಾಲ್ಕು ವೇದಗಳ ಇಷ್ಟೊಂದು ವಿಸ್ತಾರವೂ ಆತನ ಅಂಗಳವನ್ನು ಕೂಡ ನೋಡಲರಿಯದು. ಈ ಪರಮಾತ್ಮನು ಆಕಾಶಕ್ಕೆ ಆವರಣ (ಹೊದಿಕೆ) ವಾಗಿರುವನು. ಇಂತು ಆ ಪುರುಷನ ಸ್ವರೂಪವನ್ನು ತಿಳಿದ ಯೋಗಿಗಳು ಅವನನ್ನು “ಪರಾತ್ಪರ” ನೆಂದು ಕರೆಯುವರು. ಇಂತಹ ಪರಮಾತ್ಮನು ಅನನ್ಯ ಭಕ್ತರ ಮನೆಯನ್ನು ಹುಡುಕುತ್ತ ಬರುವನು. ಅಂದರೆ ಅವರಿಗೆ ಲಭಿಸುವನು. ಭಕ್ತನು ತ್ರಿಕರಣಪೂರ್ವಕವಾಗಿ ಪರಮಾತ್ಮನ ಹೊರತು ಎರಡನೆಯದೇನನ್ನೂ ತಿಳಿಯದಿದ್ದರೆ, ಅಂತಹ ಭಕ್ತನ ಏಕನಿಷ್ಠತೆಯು ಚೆನ್ನಾಗಿ ಬೆಳೆಬರುವ ಭೂಮಿಯೇ ಅಹುದು.
ಅರ್ಜುನ! ತ್ರೈಲೋಕ್ಯವು ಪುರುಷೋತ್ತಮ ರೂಪವಾಗಿದೆ. ನಿಜವಾದ ತಿಳಿವಳಿಕೆಯುಳ್ಳ ಆಸ್ತಿಕ ಭಕ್ತನಿಗೆ ಪರಮತತ್ತ್ವವು ನಿವಾಸಸ್ಥಾನವಾಗಿದೆ. ನಿರಭಿಮಾನಿಗಳ ವೈಭವವು, ಗುಣಾತೀತರ ಜ್ಞಾನವು, ಸಾಚ್ಛ ಪುರುಷನ ಸುಖಸಾಮ್ರಾಜ್ಯವು, ಸಂತೋಷಿಗಳಿಗೆ ಬಡಿಸಿಟ್ಟ ತಾಟು, ಸಂಸಾರದ ಚಿಂತೆಯನ್ನು ಮಾಡದ ಅನಾಥರಿಗೆ ಪ್ರೇಮಾನ್ವಿತನು. ಭಕ್ತಿಯು ಆತನ ಊರಿಗೆ ಹೋಗುವ ಸರಳ ಮಾರ್ಗವಾಗಿರುವ ಗ್ರಾಮವು. ಅರ್ಜುನ! ಒಂದೊಂದನ್ನೇ ಹೇಳುತ್ತ ಇದನ್ನೇಕೆ ವಿಸ್ತರಿಸಲಿ? ಆದರೆ ಯಾವ ಸ್ಥಳಕ್ಕೆ ನಾವು ಹೋಗಲು, ಆ ಸ್ಥಳವೇ ನಾವಾಗುವೆವು. ತಂಗಾಳಿಯಿಂದ ಬಿಸಿನೀರು ಸಹ ತಣ್ಣಗಾಗುವುದು. ಅಥವಾ ಸೂರ್ಯನ ಮುಂದಿನ ಕತ್ತಲೆಯು ಪ್ರಕಾಶರೂಪವೇ ಆಗುವುದು. ಅದರಂತೆ ಅರ್ಜುನ! (ದುಃಖರೂಪ ದೇಹ ಮೊದಲಾದ ಎಲ್ಲ) ಸಂಸಾರವು ಆ ಗ್ರಾಮಕ್ಕೆ ಮುಟ್ಟಲು ಮೋಕ್ಷ (ಸುಖ) ರೂಪವೇ ಆಗುವುದು. ಬೆಂಕಿಯಲ್ಲಿ ಹಾಕಿದ ಕಟ್ಟಿಗೆಯು ಬೆಂಕಿಯೇ ಆಗುವುದು. ಅನಂತರ ಅದನ್ನು ಬೆಂಕಿಯಿಂದ ಬೇರೆ ಮಾಡಲು ಬರಲಾರದು. ಅಥವಾ ಕಬ್ಬಿನಿಂದ ಸಕ್ಕರೆಯನ್ನು ಮಾಡಿದ ಮೇಲೆ, ಆ ಸಕ್ಕರೆಯಿಂದ ಎಂತಹ ಬುದ್ಧಿವಂತನಿಗಾದರೂ ಕಬ್ಬನ್ನು ಮಾಡಲು ಬರಲಾರದು. ಪರಿಸದ ಸ್ಪರ್ಶದಿಂದ ಕಬ್ಬಿಣವು ಬಂಗಾರವಾಯಿತು. ಆದರೆ ಆ ಬಂಗಾರಕ್ಕೆ ಮೊದಲಿನ ಕಬ್ಬಿಣತ್ವವನ್ನುಂಟು ಮಾಡುವ ಯಾವ ಬೇರೊಂದು ಪದಾರ್ಥವು ಈ ಜಗತ್ತಿನಲ್ಲುಂಟು? ಹಾಲಿನಿಂದ ತುಪ್ಪವನ್ನು ಮಾಡಿದ ಮೇಲೆ, ಆ ತುಪ್ಪದಿಂದ ಮರಳಿ ಹಾಲನ್ನು ಮಾಡಲು ನಿಶ್ಚಯವಾಗಿ ಬರಲಾರದು. ಅದರಂತೆ ಯಾವ ಸ್ಥಿತಿಯನ್ನು ಪಡೆದ ಮೇಲೆ ಜೀವವು ಮತ್ತೆ ಜನ್ಮಕ್ಕೆ ಬರಲಾರದೋ ಅಂತಹ ಸ್ವರೂಪವೇ ನನ್ನ ನಿಜವಾದ ಉತ್ಕೃಷ್ಟ ನಿಜಧಾಮವು. ಇದೇ ನನ್ನ ಅಂತಃಕರಣದೊಳಗಿನ ಗುಪ್ತ ಸಂಗತಿಯು. ಅದನ್ನು ನಿನಗೆ ಸ್ಪಷ್ಟಗೊಳಿಸಿ ಹೇಳಿರುವೆ.
[ಶ್ರೀ ಜ್ಞಾನೇಶ್ವರೀ ಗೀತೆ, ಅಧ್ಯಾಯ ೮.
ಕನ್ನಡ ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ.]