ಸಂಪರ್ಕಸಾಧನಗಳು, ಸಂವಹನ ಮಾಧ್ಯಮಗಳು ವಿಸ್ತೃತಗೊಂಡಲ್ಲಿ ಆರ್ಥಿಕ ಅಭ್ಯುದಯಕ್ಕೆ ಹೆಚ್ಚಿನ ವೇಗ ಬರುತ್ತದೆಂಬುದು ಹಿಂದಿನ ಅನುಭವ. ಈ ಹಿನ್ನೆಲೆಯಲ್ಲಿ ಈಗಿನ ಆರೂಢ ಸರ್ಕಾರ ಆರಂಭದಿಂದ ಈ ಕ್ಷೇತ್ರಕ್ಕೆ ಆದ್ಯತೆ ನೀಡುತ್ತ ಬಂದಿರುವುದು ಪ್ರಶಂಸಾರ್ಹವಾಗಿದೆ. ಅಭಿವೃದ್ಧಿಗೆ ಒಂದು ಪ್ರಮುಖ ಚಾಲಕಶಕ್ತಿಯೆಂದರೆ ಮೂಲಸೌಕರ್ಯಗಳ ಹೆಚ್ಚಳ. ಕಳೆದ ಒಂಭತ್ತು ವರ್ಷಗಳಲ್ಲಿ ಮೂಲಸೌಕರ್ಯವರ್ಧನೆಯಲ್ಲಿ ಸತತವಾಗಿ ಹೆಚ್ಚಿನ ಹೂಡಿಕೆಯಾಗಿದೆ. ದೀರ್ಘಾವಧಿ ಲಾಭವಲ್ಲದೆ ಈ ವೃದ್ಧಿಯು ಸಾಮಾನ್ಯ ವ್ಯವಹಾರಗಳ ಗುಣಮಟ್ಟವನ್ನೂ ಉನ್ಮುಖಗೊಳಿಸುತ್ತದೆಂಬುದು ಸ್ಪಷ್ಟವೇ ಆಗಿದೆ. ಸುಸಜ್ಜಿತವಾದ ರಸ್ತೆಗಳು, ರೈಲುಯಾನ, ವಿಮಾನಯಾನ ಸಂಬಂಧಿತ ಒಳಹಂದರ ಮೊದಲಾದವು ಸಮೃದ್ಧ ಭಾರತ ನಿರ್ಮಾಣಕ್ಕೆ ದೃಢವಾದ ಬಂಡವಾಳವಾಗಿವೆ. ಇವು ಹೆಚ್ಚಿನ ಉದ್ಯೋಗಸೃಷ್ಟಿಗೂ ಚಾಲನೆ ನೀಡುತ್ತದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಗತ್ತಿನಲ್ಲಿಯೆ ಅತಿ ದೊಡ್ಡ ರಸ್ತೆ ಜಾಲ – ಹತ್ತಿರಹತ್ತಿರ 64 ಲಕ್ಷ ಕಿಲೊಮೀಟರುಗಳಷ್ಟು – ಹೊಂದಿರುವ ದೇಶ ಭಾರತ. ಸಾಂಪ್ರತ ವರ್ಷದಲ್ಲಿ ಮೂಲಸೌಕರ್ಯಕ್ಕಾಗಿಯೆ ರೂ. 10 ಲಕ್ಷ ಕೋಟಿಯಷ್ಟು ಅಧಿಕ ಹಣ (ಎಂದರೆ ಹಿಂದಿನ ದಶಕದ ಐದುಪಟ್ಟು) ಮೀಸಲಾಗಿದೆ. ದೇಶದ ಹಲವಾರೆಡೆ ನಿರ್ಮಾಣದ ಹಂತದಲ್ಲಿರುವ ‘ಎಕ್ಸ್‍ಪ್ರೆಸ್‍ವೇ’ಗಳು ವಾಣಿಜ್ಯವೃದ್ಧಿಗೆ ಅನುಕೂಲಕರವಾಗುವುದಲ್ಲದೆ ಗ್ರಾಮಗಳ ಉನ್ನತೀಕರಣ ಮೊದಲಾದ ಅನ್ಯ ಲಾಭಗಳನ್ನೂ ನೀಡಲಿವೆ. ಈ ಸಂಪರ್ಕಕ್ರಾಂತಿಯು ನಮ್ಮ ಕಣ್ಣೆದುರಿಗೇ ದೇಶದ ಚಿತ್ರವನ್ನು ಮಾರ್ಪಡಿಸುತ್ತಿರುವುದು ಕಲ್ಪನೆಯಲ್ಲ, ವಾಸ್ತವಾನುಭವ.
ಸಂಪರ್ಕಕ್ರಾಂತಿ
Month : May-2023 Episode : Author :