‘ಇಷ್ಟು ದಿನ ನೀನು ಯಾಕೆ ಬರೆಯಲಿಲ್ಲ, ಇಂಥಾ ಟ್ಯಾಲೆಂಟನ್ನ ಅದು ಹೇಗೆ ತಾನೆ ನೀನು ಅಡಗಿಸಿಟ್ಟಿದ್ದೆ, ಅದೆಲ್ಲಿ ಬಚ್ಚಿಟ್ಟುಕೊಂಡಿದ್ದೆ. ಹಾಗೆ ಮಾಡಲು ನಿನಗೆ ಮನಸ್ಸಾದರೂ ಹೇಗೆ ಬಂತು’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಳು. ಅವನೆದೆಯ ಮೇಲಿನ ಜೇಬಿನಿಂದ ಇಣುಕುತ್ತಿದ್ದ ದಪ್ಪನೆಯ ಪೆನ್ನಿನ ಮೇಲೆ ಕಣ್ಣಿಟ್ಟು, ‘ಈಗ ಬರೆ, ನಿಲ್ಲಿಸಬೇಡ, ನಿಲ್ಲಿಸಕೂಡದು’ ಎಂದು ಒತ್ತಾಯಿಸಿದ್ದಳು. ಏನು ಹೇಳಬೇಕೆಂದು ಹೊಳೆಯುತ್ತಲೇ ಇಲ್ಲ ಎನ್ನುವಂತೆ ಅವನ ವರ್ತನೆ. ‘ಏನೋ ಬರೆದೆ’ ಎಂದು ಸಂಕೋಚದಲ್ಲಿ ಹೇಳಿದ. ಮೂರನೆಯ ಭೇಟಿಯಲ್ಲಿ ಅವನ ನಂಬಿಕೆ ಗಳಿಸುವ ಪ್ರಯತ್ನವಾಗಿ, ಮನೆಯಲ್ಲಿ ಯಾರಾರಿದ್ದಾರೆ ಎಂದು ಆತ್ಮೀಯವಾಗಿ ಪ್ರಶ್ನಿಸಿದಳು. ಅಪ್ಪ, ಇಬ್ಬರು ತಮ್ಮಂದಿರು, ಒಬ್ಬಳು ತಂಗಿ ಎಂದು ಇದುವರೆಗಿನ ಮತ್ತು ಕೊನೆಯ ಅತಿ ದೀರ್ಘ ಉತ್ತರ ನೀಡಿದ. ‘ತಾಯಿ’ ಎಂಬ ಪ್ರಶ್ನೆಗೆ ಅವನದು ‘ಇಲ್ಲ’ ಎಂಬ ಒಂದು ಪದದ ಉತ್ತರ. ಆಗ ಅವಳಿಗೆ ಸಂಭಾಷಣೆ ಮುಂದುವರಿಸಲಾಗಲಿಲ್ಲ.
“ಮತ್ತೆ ಬನ್ನಿ” ಎಂದು ಆಯಾಸದ ದನಿಯೆಳೆದ ಅಂಗಡಿಯ ದಪ್ಪನೆಯ ಮನುಷ್ಯನ ಮುಂದೆ ಕೃತಕ ಉತ್ಸಾಹದ “ಖಂಡಿತಾ” ಎಂಬ ಗಾಳಿಪಟ ಹಾರಿಸಿ, ಅದಕ್ಕೊಂದು “ಥ್ಯಾಂಕ್ಸ್” ಬಾಲಂಗೋಚಿಯನ್ನೂ ಜೋಡಿಸಿ; ಚಿಲ್ಲರೆಹಣವನ್ನು ಪರ್ಸ್ಗೆ ಸೇರಿಸಿ, ಕೌಂಟರ್ ಮೇಲಿದ್ದ ಕ್ಯಾರಿಬ್ಯಾಗ್ನ ಹಿಡಿಕೆಗೆ ಕೈ ಹೂಡಿ ಸರ್ರನೆ ಎಳೆದುಕೊಂಡು, ಹೊತ್ತಾಗಿಯೇಬಿಟ್ಟಿತಲ್ಲ ಎಂದುಕೊಳ್ಳುತ್ತಲೇ ಸರಸರ ಮೆಟ್ಟಲಿಳಿದವಳು ಅಚ್ಚರಿಗೆ ಸಿಕ್ಕಿ ಕಣ್ಣರಳಿಸಿದಳು. ಮರುಕ್ಷಣ ಹುಟ್ಟಿದ ಅನುಮಾನ ಎಡಹುಬ್ಬಿನ ಮೇಲಿದ್ದ ಅರ್ಧ ರೊಟ್ಟಿಯಾಕಾರದ ಗಾಯದ ಗುರುತಿನಿಂದ ಪರಿಹಾರವಾಗಿಹೋಗಿ ಗಕ್ಕನೆ ನಿಂತುಬಿಟ್ಟಳು. ಅವನೂ ನಿಂತ. ಅವನ ಕಣ್ಣುಗಳಲ್ಲೂ ಅಚ್ಚರಿಯ ಜತೆ ಅನುಮಾನ ಸಹ.
ಕಣ್ಣೆದುರಿನ ವಾಸ್ತವವನ್ನು ಮೊದಲು ಅರಿತವನು ಅವನೇ. ಮುಖದಲ್ಲಿನ ಅಚ್ಚರಿ ಅನುಮಾನಗಳು ಮರೆಯಾಗಿ ಅವುಗಳ ಸ್ಥಾನದಲ್ಲಿ ಏಕಾಏಕಿ ಸಂಕೋಚ ಎದ್ದುನಿಂತಿತು. ಕೈಗಳೆರಡನ್ನೂ ಬೆನ್ನ ಹಿಂದೆ ಒಯ್ದ, ಏನನ್ನೋ ಅವಳಿಂದ ಮರೆಮಾಡುವಂತೆ.
ಅವಳೂ ವಾಸ್ತವಕ್ಕಿಳಿದಳು, ತುಸು ನಿಧಾನವಾಗಿ. ಆದರೂ ಅಚ್ಚರಿಯ ಛಾಪು ಕಣ್ಣುಗಳಲ್ಲಿನ್ನೂ ಪೂರ್ಣವಾಗಿ ಕರಗಿರಲಿಲ್ಲ. “ನೀನು! ಇಲ್ಲಿ?’’ ಎಂದು ದನಿ ಹೊರಡಿಸಿದಳು ಮೆಲ್ಲಗೆ. ಈಗ ಮಾತು ಆರಂಭಿಸುವುದು ತನಗೆ ಸುಲಭ ಎಂಬಂತೆ ಅವನ ಮುಖದಲ್ಲಿ ಸಮಾಧಾನ ತೆಳ್ಳಗೆ ಹರಡಿಕೊಂಡಿತು. “ಹ್ಞೂಂ, ಹೀಗೇ… ಸುಮ್ಮನೇ. ನೀನು ಈ ಊರಲ್ಲಿದೀಯ ಅಂತ ಗೊತ್ತಿರಲಿಲ್ಲ. ಗೊತ್ತಿರೋದು ಇರಲಿ, ಊಹೇನೂ ಬಂದಿರಲಿಲ್ಲ” ಎಂದ ತೆಳುದನಿಯಲ್ಲಿ. ಹಿಂದೆಯೇ ನಗೆಯರಳಿಸಿದ.
ಅವಳೂ ನಗಲು ಪ್ರಯತ್ನಿಸಿದಳು. ಅದಾಗದೇ, ಹಳೆಯದರಂತೆನಿಸಿದ ಕಂದು ಪ್ಯಾಂಟ್ ಹಾಗೂ ಮಾಸಲು ಬಿಳಿ ಮತ್ತು ಬೂದು ಚೌಕಳಿಯ ಅರೆತೋಳಿನ ಶರ್ಟು ತೊಟ್ಟ, ಕುರುಚಲು ಗಡ್ಡದ, ಕೆದರಿದ ತಲೆಗೂದಲಿನ ಅವನನ್ನೇ ಕಣ್ಣು ಕಿರಿದುಗೊಳಿಸಿಕೊಂಡು ದಿಟ್ಟಿಸಿದಳು. “ಎಷ್ಟು ದಿನ ಆಗಿತ್ತು ನಿನ್ನನ್ನ ನೋಡಿ! ನೀನೂ ಈ ಊರಲ್ಲೇ ಇದ್ದೀಯಾ? ಯಾವಾಗಿನಿಂದ?’’ ಎಂದಳು. ತಾನು ಅಂಗಡಿಯ ಬಾಗಿಲಲ್ಲೇ ನಿಂತಿರುವುದರ ಅರಿವಾಗಿ ಅವನ ಮುಖದ ಮೇಲೆ ಕಣ್ಣಿಟ್ಟೇ ಎರಡು ಹೆಜ್ಜೆ ಪಕ್ಕಕ್ಕೆ ಸರಿದಳು. ಅವನು ನಾಲ್ಕು ಹೆಜ್ಜೆ ಸರಿದು ಅವಳ ಆ ಬದಿಗೆ ನಿಂತ. “ವಿಜಯವಾಡಕ್ಕೆ ಹೊರಟಿದ್ದೆ. ನಾ ಬಂದ ಟ್ರೇನ್ ಈ ಸ್ಟೇಷನ್ನಲ್ಲಿ ಛಿದ್ರಛಿದ್ರ ಆಗುತ್ತಂತೆ. ಬೋಗಿಗಳು ಚೆಲ್ಲಾಪಿಲ್ಲಿ ಆಗಿ ಬೇರೆಬೇರೆ ಎಂಜಿನ್ಗಳ ಹಿಂದೆ ಸೇರ್ಕೊಂಡು – ಒಂದಷ್ಟು ನಾಗಪುರದ ಕಡೆಗೆ ಹೊರಡ್ತವೆ, ಇನ್ನೊಂದಿಷ್ಟು ಚೆನ್ನೈಗಂತೆ. ನಾನಿರೋ ಬೋಗಿ ಇನ್ನಾವುದೋ ಎಂಜಿನ್ ಹಿಂದೆ ಬೇರೆಲ್ಲಿಂದಲೋ ಬಂದ ಬೋಗಿಗಳ ಜತೆ ಸೇರ್ಕೊಂಡು ವಿಜಯವಾಡದ ದಿಕ್ಕು ಹಿಡೀತದಂತೆ. ಈ ಎಲ್ಲಾ ಸರ್ಕಸ್ಗೆ ಎರಡು ಗಂಟೆ ಆಗುತ್ತಂತೆ. ಟ್ರ್ಯಾಕ್ ಬದಲಾಯಿಸ್ತಾ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ, ಹಾಗೇ ಹಿಂದೆ ಮುಂದೆ ಹರಿದಾಡೋ ಬೋಗೀಲಿ ಕೂರೋಕೆ ಬೇಜಾರಾಯ್ತು. ಇಳಿದು ಹೊರಕ್ಕೆ ಬಂದೆ. ಟ್ರೇನ್ ಹೊರಡೋ ಹೊತ್ತಿಗೆ ಹೋಗಿ ಸೇರಿಕೊಂಡರಾಯ್ತು” ಎಂದ. ತಾನು ಹೇಳಿದ್ದು ಅವಳಿಗೆ ಅರ್ಥವಾಯಿತೋ ಇಲ್ಲವೋ ಎಂಬ ಅನುಮಾನದಲ್ಲಿ ಅವಳ ಕಣ್ಣುಗಳನ್ನೇ ನಿರುಕಿಸಿದ. “ಅದಕ್ಕಿನ್ನೂ ಒಂದೂವರೆ ಗಂಟೆ ಇದೆ’’ ಅಂತಲೂ ಸೇರಿಸಿದ. ಈಗ ಅವಳಿಗೆ ನಗು ಬಂತು. “ಇದು ಜಂಕ್ಷನ್” ಅಂದಳು ಅವನಿಗೆ ಗೊತ್ತಿಲ್ಲದ್ದೇನನ್ನೋ ಹೇಳುವಂತೆ. ಅವನು ನಿಟ್ಟುಸಿರಿಟ್ಟ. “ಈ ಜಂಕ್ಷನ್ ಅನ್ನೋದೊಂದು ವಿಚಿತ್ರ ಜಾಗ, ನೋಡು” ಅಂದ ಥಟಕ್ಕನೆ. ಅಂದು ತುಟಿ ಕಚ್ಚಿಕೊಂಡ. ಅದೇನನ್ನೋ ಹೇಳಿಯೇಬಿಡಬೇಕೆನ್ನುವಂತೆ ತಕ್ಷಣವೇ ಮತ್ತೆ ಬಾಯಿ ತೆರೆದ: “ಈ ಜಂಕ್ಷನ್ಗಳಿಗೆ ಬಂದ ಯಾವ ಟ್ರೇನೂ ತಾನು ಬಂದ ಹಾಗೇ ಇಲ್ಲಿಂದ ಹೊರಡೋದಿಲ್ಲ. ಇಲ್ಲಿಗೆ ಬಂದ ಎಲ್ಲ್ಲ ಟ್ರೇನ್ಗಳೂ ತಾವು ಯಾವ ದಿಕ್ಕು ಅರಸಿ ಬಂದವೋ ಅದೇ ದಿಕ್ಕು ಹಿಡಿದು ಮುಂದೆ ಹೋಗ್ತವೆ ಅಂತ ಗ್ಯಾರಂಟಿಯಾಗಿ ಹೇಳಕ್ಕಾಗಲ್ಲ ನೋಡು.’’
ಅವಳ ಮುಖದಲ್ಲಿ ಮೂಡಿದ್ದ ನಗೆ ಥಟ್ಟನೆ ಮಾಯವಾಯಿತು. ವಿಷಯ ಬದಲಾಯಿಸುವಂತೆ, “ಲಗೇಜ್! ಸೇಫ್ ತಾನೆ? ಚೈನ್ ಹಾಕಿ ಬಂದಿದ್ದೀಯಲ್ಲ?’’ ಎಂದು ಪ್ರಶ್ನಿಸಿದಳು. ಅವನ ಮುಖದಲ್ಲಿ ನಗೆ ಮೂಡಿತು. “ಅಂಥಾ ಘನಂದಾರಿ ಲಗೇಜೇನಿಲ್ಲ ಬಿಡು. ಹೇಳಿದ್ರೆ ನೀನು ನಗ್ತೀಯಾ. ಒಂದೆರಡು ಬಟ್ಟೆಗಳು, ಸೋಪು, ಟವಲ್ ಇರೋ ಒಂದು ಸಣ್ಣ ಚೀಲ. ಅಷ್ಟೆ. ನಂದು ಮೇಲಿನ ಬರ್ತ್. ಚೀಲಾನ ಮುದುರಿ ಮೂಲೆಲಿಟ್ಟಿದೀನಿ. ಅದು ಅಲ್ಲಿದೆ ಅಂತ ಯಾರ್ಗೂ ಕಾಣ್ಸೋದೇ ಇಲ್ಲ.’’ ಅವನ ನಗೆ ದೊಡ್ಡದಾಯಿತು. ಅವಳ ಮುಖ ಇನ್ನಷ್ಟು ಖಾಲಿಯಾಯಿತು.
ಆ ಖಾಲಿ ಮುಖವನ್ನು ಕೆಳಕ್ಕಿಳಿಸಿ, ಕ್ಯಾರಿಬ್ಯಾಗನ್ನು ಬಲಗೈಗೆ ವರ್ಗಾಯಿಸಿ ಎಡಗೈ ಮೇಲೆತ್ತಿ ಮಣಿಕಟ್ಟಿನಲ್ಲಿದ್ದ ಕಪ್ಪು ಡಯಲ್ನ ಪುಟ್ಟ ಗಡಿಯಾರವನ್ನು ಅಂಗಡಿ ಸಾಲಿನ ನಿಯಾನ್ ದೀಪಗಳ ಬೆಳಕಿಗೆ ಒಡ್ಡಿದಳು. “ಬಾ ಮನೆಗೆ ಹೋಗೋಣ. ನಮ್ಮನೆ ಇಲ್ಲೇ ಹತ್ತಿರದಲ್ಲೇ. ಗಾಡಿ ಇದೆ. ಹೊತ್ತಿಗೆ ಸರಿಯಾಗಿ ನಿನ್ನನ್ನ ಸ್ಟೇಷನ್ಗೆ ತಂದು ಬಿಡ್ತೀನಿ” ಎಂದಳು ತಲೆಯೆತ್ತಿ ಬಿಡಿಬಿಡಿ ಪದಗಳಲ್ಲಿ. ಎದುರಿಗೆ ಸಿಕ್ಕಿದ ಹಳೆಯ ಗೆಳತಿಯರನ್ನು ಆಹ್ವಾನಿಸುವಷ್ಟೇ ಸಲೀಸಾಗಿ ತಾನವನನ್ನು ಮನೆಗೆ ಕರೆದದ್ದರ ಬಗ್ಗೆ ಅವಳಿಗೇ ಅಚ್ಚರಿಯಾಯಿತು. ಅವನ ಪ್ರತಿಕ್ರಿಯೆಗಾಗಿ ಕುತೂಹಲ ತೋರಿದಳು.
ಅವನ ಮುಖದಲ್ಲಿ ಗಲಿಬಿಲಿ ಕಂಡಿತು. ಅದಕ್ಕೆ ಸಂಕೋಚದ ಧಾರಾಳ ಲೇಪ. ತಲೆ ಕೆಳಗೆ ಹಾಕಿ ತನ್ನ ಉದ್ದಕ್ಕೂ ಒಮ್ಮೆ ಕಣ್ಣು ಹರಿದಾಡಿಸಿಕೊಂಡ. “ಮನೇಗಾ! ಈಗ ಬೇಡ. ಇನ್ನೊಂದ್ಸಲ ಬರ್ತೀನಿ” ಎಂದ ಸಣ್ಣನೆಯ ದನಿಯಲ್ಲಿ.
ಅವಳು ಅವನ ಚರ್ಯೆಗಳನ್ನು ಇಡಿಯಾಗಿ ಗಮನಿಸಿಬಿಟ್ಟಿದ್ದಳು. ಗಕ್ಕನೆ ನೂರುನೂರು ನೆನಪುಗಳು ಉಕ್ಕಿಬಂದು ಅವಳೆದೆ ಭಾರವಾಯಿತು. ಅವನನ್ನು ಒತ್ತಾಯಿಸಲು ಅವಳಿಗೆ ಮನಸ್ಸಾಗಲಿಲ್ಲ. “ಸರಿ, ಇಲ್ಲೇ ಪಾರ್ಕ್ನಲ್ಲಿ ಸ್ವಲ್ಪ ಹೊತ್ತು ಕೂರೋಣ ಬಾ” ಎನ್ನುತ್ತಾ ಅವನ ಉತ್ತರಕ್ಕೆ ಕಾಯದೆ ಎಡಕ್ಕೆ ಹೊರಳಿದಳು. ತಲೆ ತಗ್ಗಿಸಿ ಮಾತಿಲ್ಲದೆ ಅವಳನ್ನು ಹಿಂಬಾಲಿಸಿದ ಅವನು ಮೂರು ಹೆಜ್ಜೆಗೇ ನಿಂತುಹೋದ, ಅವಳ ನಡಿಗೆಯನ್ನು ಕಂಡು ಕಿರುನಗೆ ನಕ್ಕ. “ನಿನ್ನ ಹಿಂದೇನೇ ಬರ್ತಿದೀನಿ” ಅಂದ. ಅವಳೂ ನಕ್ಕಳು. ಆ ನಗೆ ಸಹಜವಾಗಿತ್ತು, ನಿರಾಳವಾಗಿತ್ತು. “ಅದಲ್ಲ. ಆ ಅನುಮಾನ ಇರ್ಲಿಲ್ಲ. ನಿನಗೆ ಬೇರೆ ಕೆಲಸ ಏನೂ ಇಲ್ಲ ತಾನೆ? ನಿನ್ನ ಟ್ರೇನು ಹೊರಡೋವರೆಗೂ ನೀನು ಬಿಡುವಾಗೇ ಇದೀಯ ತಾನೆ? ಅದನ್ನ ಕೇಳೋದಕ್ಕೆ ಅಂತ ನಿಂತೆ’’ ಅಂದಳು. “ಇಲ್ಲ ಇಲ್ಲ, ನಾನು ಫ್ರೀನೇ. ನನಗೇನಿದೆ ಈ ಊರಲ್ಲಿ” ಅಂದ ಅವನು ಆತುರಾತುರವಾಗಿ. ‘ನನಗ್ಯಾರು’ ಎನ್ನಲು ಹೋಗಿ ಕೊನೆಗಳಿಗೆಯಲ್ಲಿ ‘ನನಗೇನು’ ಎಂದವನು ಮಾತು ಹೊರಳಿಸಿದಂತೆ ಅವಳಿಗನಿಸಿತು. ಅದರೆ ಏನೂ ಮಾತಾಡದೆ ಮುಂದೆ ನಡೆದಳು. ತಾನು ತಡವರಿಸಿದ್ದು ಅವಳಿಗೆ ತಿಳಿದುಬಿಟ್ಟಿತೇ, ಅವಳೇನು ಅಂದುಕೊಂಡಳೋ ಎಂದು ಯೋಚನೆ ಹತ್ತಿ ತಲೆಯನ್ನು ಮತ್ತೂ ತಗ್ಗಿಸಿ ಅವಳನ್ನು ಹಿಂಬಾಲಿಸಿದ. ಅವನಿಗೆ ಅವಳ ಎಡಗೈ ಸರ್ರನೆ ಮೇಲೇರಿ ಅದರ ಹಿಂಭಾಗ ಕಣ್ಣಂಚನ್ನು ಸೋಕಿ ಕೆಳಗಿಳಿದದ್ದು ಕಾಣಲಿಲ್ಲ.
ಮೈಮೇಲೆ ಬೀಳುತ್ತಿದ್ದ ಜನರ ನಡುವೆ ದಾರಿ ಮಾಡಿಕೊಂಡು ಅಂಗಡಿ ಸಾಲಿನ ಅಂಚು ತಲಪಿ ನಿಧಾನವಾಗಿ ರಸ್ತೆ ದಾಟಿದ ಅವಳು ತಿರುಗಣೆ ಗೇಟ್ ಸರಿಸಿ ಪಾರ್ಕ್ನೊಳಗೆ ಹೆಜ್ಜೆಯಿಟ್ಟಳು. ಅವಳ ಹಿಂದೆಯೇ ಇದ್ದ ಅವನು, ಹತ್ತಿರದಲ್ಲೇ ಕಂಡ ಖಾಲಿ ಸಿಮೆಂಟ್ ಬೆಂಚೊಂದರತ್ತ ಕೈ ಮಾಡಿ, “ಇಲ್ಲೇ ಕೂರಬೋದು” ಅಂದ ಮೆಲ್ಲಗೆ. ಅವಳಿಗೆ ಕೇಳಿಸಲಿಲ್ಲವೇನೋ ಎಂದು ಅನುಮಾನವಾಗಿ ಮತ್ತೆ ಅದನ್ನೇ ಹೇಳಲು ಬಾಯಿ ತೆರೆಯುತ್ತಿದ್ದಂತೆಯೆ ಅವಳು “ಬೇಡ” ಅಂದಳು. ಹಿಂದೆಯೇ ಒಮ್ಮೆ ಸಣ್ಣಗೆ ಕೆಮ್ಮಿದಳು. “ತುಂಬಾ ಬೆಳಕು ಇಲ್ಲಿ. ಶಾಪಿಂಗ್ಗೆ ಬಂದೋರೆಲ್ಲ ನಮ್ಮನ್ನೇ ನೋಡ್ತಾರೆ” ಅಂದಳು ನಸುಗೆಮ್ಮಿನ ನಡುವೆಯೇ. ಅವನು ತುಟಿ ತೆರೆಯದೆ ಅವಳನ್ನು ಹಿಂಬಾಲಿಸಿದ.
ಆ ಪಾರ್ಕ್ ತನಗೆ ತೀರಾ ಪರಿಚಿತ ಎನ್ನುವಂತೆ ಅವಳು ಅಗಲ, ನೇರದ ವಾಕಿಂಗ್ ಪಾತ್ ಬಿಟ್ಟು, ಪುಟಾಣಿ ಕಲ್ಲುಗಳನ್ನು ಉದ್ದಕ್ಕೂ ಹಚ್ಚಿಕೊಂಡಿದ್ದ, ಒಬ್ಬರು ಮಾತ್ರ ನಡೆಯಬಹುದಾದಷ್ಟು ಕಿರಿದಾದ ಹಾದಿಯನ್ನು ಹಿಡಿದು ಒಳಗೆ ನುಗ್ಗಿ ಎಡಬಲ ಸರಿದಾಡಿ ಅಚೆ ಬದಿ ತಲಪಿ, ಕುಳ್ಳ ಮರವೊಂದರ ಕೆಳಗೆ ಅರೆಗತ್ತಲೆಯಲ್ಲಿ ಹುದುಗಿದ್ದ ಒರಗು ಬೆಂಚೊಂದರ ಅಂಚಿನಲ್ಲಿ ಸುಸ್ತಾದವಳಂತೆ ಕುಸಿದಾಗ ಮುಂದೆ ಅನತಿ ದೂರದಲ್ಲಿ ಕಬ್ಬಿಣದ ಸರಳುಗಳ ಸಾಲಿನಾಚೆ ಹಳಿಗಳ ಮೇಲೆ ಟ್ರೇನೊಂದು “ಸುಂಯ್’’ ಎಂದು ನಸುಸದ್ದನ್ನಷ್ಟೇ ಹೊರಹಾಕಿಕೊಂಡು ನಿಶಾಚರಿಯಂತೆ ಸಾಗುತ್ತಿತ್ತು. ಅದೆಷ್ಟು ಕಳ್ಳತನದಲ್ಲಿ ಮುಂಬರಿಯುತ್ತಿದೆ ಎಂದು ಅಚ್ಚರಿಪಡುತ್ತ ಯಾರಿಗೆ, ಯಾವುದಕ್ಕೆ ಅದು ಹೆದರಿದೆ ಅಥವಾ ಯಾರಲ್ಲಿ ಹೆದರಿಕೆ ಹುಟ್ಟಿಸಬಾರದೆಂದು ಇಷ್ಟು ಸೌಮ್ಯವಾಗಿ ಸಾಗಿದೆ ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತ ಅವನು ಬೆಂಚಿನ ಇನ್ನೊಂದು ಅಂಚಿನಲ್ಲಿ ಕೂತು ಕೈಯಲ್ಲಿದ್ದುದನ್ನು ಇಬ್ಬರ ನಡುವಿನ ಖಾಲಿ ಜಾಗದಲ್ಲಿ, ತನಗೆ ಹತ್ತಿರವಿರುವಂತೆ ಇಟ್ಟುಕೊಂಡ. ಅದರ ಮೇಲೆ ಕಣ್ಣಾಡಿಸಿದ ಅವಳ ಮುಖದಲ್ಲಿ ಕಿರುನಗೆ ಮೂಡಿದ್ದು ಕಂಡು ಅವನ ಮುಖಕ್ಕೆ ಸಂಕೋಚ ಹಿಂತಿರುಗಿತು.
“ಇದೇನು ನೋಟ್ಬುಕ್ ತಗೊಂಡಿದೀಯ? ಇದನ್ನ ತಗೊಳ್ಳೋಕೆ ಸ್ಟೇಷನ್ನಿಂದ ಹೊರಕ್ಕೆ ಬಂದೆಯಾ?’’ ಅವಳು ಕೇಳಿಯೇಬಿಟ್ಟಳು. ಮರುಕ್ಷಣ ದನಿ ಗಂಭೀರವಾಗಿಸಿಕೊಂಡು, “ಮಕ್ಕಳಿಗೆ ಈ ಊರಿಂದೇನಾದರೂ ಕೊಂಡುಹೋಗಬೇಕು ಅಂತಾನಾ?’’ ಅಂದಳು. ಅವನು ಮಾತಾಡಲಿಲ್ಲ. ಅರೆನಿಮಿಷದವರೆಗೆ ಕಾದ ಅವಳು, “ಯಾಕೆ ಮಾತಾಡ್ತಿಲ್ಲ ನೀನು? ಆರಾಮಿದೀಯ ತಾನೆ?’’ ಅಂದಳು. ದನಿಯಲ್ಲಿ ಕಾಳಜಿಯಿತ್ತು.
“ಹೇಳಿದ್ರೆ ನೀನು ನಗ್ತೀಯ” ಎಂದು ಆರಂಭಿಸಿದ ಅವನು, “ಯಾವುದೋ ಗ್ರೂಪ್ನಲ್ಲಿ ಒಂದು ಕಲರ್ ಕಲರ್ ಪೋಸ್ಟರ್ ಕಾಣಿಸ್ತು. ಏನೋ ಕಥಾಸ್ಪರ್ಧೆ ಬಗ್ಗೆ. ಯಾರೋ ಫಾರ್ವರ್ಡ್ ಮಾಡಿದ್ರು. ಅದನ್ನು ನೋಡ್ತಾ ಇದ್ದಾಗ ಮರೆತೇಹೋಗಿದ್ದ ಏನೇನೋ ನೆನಪಾಗೋಕೆ ಶುರುವಾಯ್ತು. ತಿಂಗಳಿಂದ್ಲೂ ನಡೀತಾ ಇರೋದನ್ನ ಕಥೆ ಮಾಡಬೋದಲ್ಲ ಅನಿಸ್ತು. ಆ ಯೋಚನೆ ಬರ್ತಿದ್ದ ಹಾಗೇ ನಂಗೇ ಆಶ್ಚರ್ಯ ಆಗೋ ಥರಾ ಮನಸ್ಸು ಏನೋ ಒಂಥರಾ ಹಗುರ ಆದ ಹಾಗೆ ಅನಿಸೋಕೆ ಶುರುವಾಯ್ತು. ತುಂಬಾ ದಿನ ಆಗಿತ್ತು ಈ ಥರಾ ಅನಿಸಿ. ಹೇಗೂ ಇನ್ನೂ ಒಂದು ರಾತ್ರಿ ಜರ್ನಿ ಇದೆ, ಅದ್ರಲ್ಲಿ ಬರೆದುಬಿಡೋಣ, ಐ ಮೀನ್ ಬರೆಯೋಕೆ ಪ್ರಯತ್ನ ಮಾಡೋಣ ಅಂತ ಈ ನೋಟ್ಬುಕ್ ತಗೊಂಡೆ” – ಸಣ್ಣ ದನಿಯಲ್ಲಿ ಹೇಳಿದ. ಅವಳು ಕಣ್ಣರಳಿಸುತ್ತಿದ್ದಂತೆ, “ನನ್ನ ಪೆನ್ನು ಎಲ್ಲೋ ಕಳೆದುಹೋಗಿತ್ತು. ಅದಕ್ಕೆ ಇದನ್ನೂ ತಗೊಂಡೆ ನೋಡು” ಎನ್ನುತ್ತ ಜೇಬಿನಿಂದ ದಪ್ಪನೆಯ ನೀಲಿ ಬಣ್ಣದ ಪೆನ್ನೊಂದನ್ನು ಹೊರಗೆಳೆದು ತೋರಿಸಿ ದೊಡ್ಡದಾಗಿ ನಕ್ಕುಬಿಟ್ಟ. ನಗೆಯ ನಡುವೆ, “ಇಲ್ಲಾಂದ್ರೆ ಟ್ರೇನಿಂದ ಇಳೀತಾನೇ ಇರ್ಲಿಲ್ಲ” ಎಂದೂ ಸೇರಿಸಿದ. ಹತ್ತು ಹನ್ನೆರಡು ನಿಮಿಷಗಳ ಹಿಂದೆ ಅವನನ್ನು ಕಂಡಾಗಿನಿಂದ ಅವಳೆದೆಯಲ್ಲಿ ಏನೇನು ನೆನಪುಗಳು ಕೆಳಗೊತ್ತಿದರೂ ಮೇಲೆದ್ದು ಬರಲು ನೋಡುತ್ತಿದ್ದವೋ ಅವೆಲ್ಲವೂ ಈಗ ತಡೆ ಹರಿದಂತೆ ಒಟ್ಟಿಗೇ ಉಕ್ಕುಕ್ಕಿ ಬಂದುಬಿಟ್ಟವು.
ಬಿ.ಎಸ್ಸಿ. ಎರಡನೆಯ ವರ್ಷ ಅದು. ಕಥೆಗಾರ್ತಿಯಾಗಿ ಹೆಸರು ಮಾಡಿದ್ದ ಕನ್ನಡ ಅಧ್ಯಾಪಕಿಯೊಬ್ಬರು ಆಗಷ್ಟೇ ಹೊಸದಾಗಿ ಬಂದಿದ್ದರು. ಅವರು ಬಂದದ್ದೇ ತಡ, ಆ ವರ್ಷದ ಕಾಲೇಜ್ ಮ್ಯಾಗಝಿನ್ ಜವಾಬ್ದಾರಿಯನ್ನು ಅವರ ತಲೆಗೆ ಕಟ್ಟಿಬಿಟ್ಟರು ಪ್ರಿನ್ಸಿಪಾಲರು. ಅಧ್ಯಾಪಕಿಗೆ ಅದು ಸಮ್ಮತವೇ ಆಯಿತು. ಹೇಳತೀರದ ಉತ್ಸಾಹ ಅವರಿಗೆ. ವಿದ್ಯಾರ್ಥಿಗಳಿಗಾಗಿ ಕಥಾಸ್ಪರ್ಧೆಯನ್ನಿಟ್ಟು, ಮೂರು ಆಕರ್ಷಕ ಬಹುಮಾನಗಳನ್ನು ಘೋಷಿಸಿ, ಬಹುಮಾನಿತ ಕಥೆಗಳು ಆ ವರ್ಷದ ಮ್ಯಾಗಝಿನ್ನ ಪ್ರಮುಖ ಆಕರ್ಷಣೆ ಎಂದು ಹೇಳಿಬಿಟ್ಟರು.
ಹೈಸ್ಕೂಲ್ನಲ್ಲಿದ್ದಾಗಿನಿಂದಲೂ ಭಾಷಣಸ್ಪರ್ಧೆಗಳಲ್ಲಿ, ಪ್ರಬಂಧಸ್ಪರ್ಧೆಗಳಲ್ಲಿ ಬಹುಮಾನ ಗಳಿಸುತ್ತಿದ್ದವಳು ಅವಳು. ಪಿಯುಸಿಗೆ ಬಂದ ಮೇಲಂತೂ ಮೊದಲ ಬಹುಮಾನವನ್ನು ಯಾರಿಗೂ ಬಿಟ್ಟುಕೊಟ್ಟವಳಲ್ಲ. ಇತ್ತೀಚೆಗೆ ಸರ್ಜನಶೀಲ ಬರವಣಿಗೆಗೂ ಕೈ ಹಾಕಿ ಒಂದೆರಡು ಸಣ್ಣಕಥೆಗಳನ್ನೂ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಳು. ‘ಅಜ್ಜಿಮನೆಯ ಅಚ್ಚಳಿಯದ ನೆನಪುಗಳು’ ಎಂಬ ವಿಷಯವನ್ನಿಟ್ಟುಕೊಂಡು ಮಾಸಪತ್ರಿಕೆಯೊಂದು ನಡೆಸಿದ ಲಲಿತಪ್ರಬಂಧ ಸ್ಪರ್ಧೆಯಲ್ಲಿ ಅವಳಿಗೆ ಮೊದಲ ಬಹುಮಾನ ಬಂದು ತಿಂಗಳೂ ಕಳೆದಿರಲಿಲ್ಲ. ಅಂಥವಳು ತನ್ನದೇ ಅಖಾಡವಾದ ಕಾಲೇಜಿನ ಕಥಾಸ್ಪರ್ಧೆಯನ್ನು ಬಿಟ್ಟಾಳೆಯೇ? ಅತ್ಯುತ್ಸಾಹದಿಂದ ಲೇಖನಿ ಕೈಗೆತ್ತಿಕೊಂಡಳು. ಕಾಲೇಜಿನ ಇತಿಹಾಸದಲ್ಲೇ ಪ್ರಥಮ ಎನಿಸಿದ ಕಥಾಸ್ಪರ್ಧೆಯಲ್ಲಿನ ಪ್ರಥಮ ಬಹುಮಾನ ತನ್ನದೇ ಆಗಬೇಕು ಎಂಬ ನಿರ್ಧಾರ, ಆಗೇ ಆಗುತ್ತದೆ ಎಂಬ ತೀರ್ಮಾನ ಅವಳದು.
ಆದರೆ ಬಹುಮಾನ ಬಂದದ್ದು ಬಿ.ಎ. ಮೊದಲ ವರ್ಷದಲ್ಲಿದ್ದ ಅವನಿಗೆ.
ಪಠ್ಯವಿಷಯಗಳಲ್ಲಿ ಪ್ರತಿಭಾನ್ವಿತೆಯಾಗಿರುವುದರ ಜೊತೆಗೆ ಇಷ್ಟು ಚಿಕ್ಕ ವಯಸ್ಸಿಗೇ ಮಾಸ್ತಿ, ಕುವೆಂಪು, ಕಾರಂತ, ತ್ರಿವೇಣಿ, ತೇಜಸ್ವಿ, ಭೈರಪ್ಪನವರಿಂದ ಹಿಡಿದು ವೈದೇಹಿ, ಸಂಧ್ಯಾಶರ್ಮ, ತುಳಸಿ ವೇಣುಗೋಪಾಲರವರೆಗೆ ಎಲ್ಲರನ್ನೂ ಓದಿಕೊಂಡು, ಎಲ್ಲರಿಂದಲೂ ಒಂದೊಂದು ಕಲಿತು, ಕಥೆಗಾರ್ತಿಯಾಗುವ ಹಾದಿಯಲ್ಲಿ ಈಗಾಗಲೇ ನಾಲ್ಕು ಜನ ಗುರುತಿಸುವಂತಹ ಸ್ಪಷ್ಟ ಹೆಜ್ನೆಗಳನ್ನಿಟ್ಟಿರುವ ತಾನೀಗ ಬದುಕಿನ ಬಹು ಮಹತ್ತ್ವದ ತಿರುವಿನಲ್ಲಿ ನಿಂತಿದ್ದೇನೆ ಎಂದುಕೊಂಡು ಮಹತ್ತ್ವಾಕಾಂಕ್ಷೆಯಿಟ್ಟುಕೊಂಡು ನಾಲ್ಕು ದಿನಗಳಲ್ಲಿ ಕಥೆ ಬರೆದು, ಮುಂದಿನ ಎರಡು ವಾರಗಳಿಡೀ ಅದನ್ನು ನೇರ್ಪುಗೊಳಿಸಿ, ಈಗ ಇದರ ಮುಂದೆ ಇನ್ನಾವುದೂ ಇಲ್ಲ ಎಂದು ಮನದೊಳಗೇ ಬೀಗುತ್ತ ಕಥೆಗಾರ್ತಿ-ಅಧ್ಯಾಪಕಿಯ ಕೈಗೆ ಖುದ್ದಾಗಿ ಕೊಟ್ಟಿದ್ದ ತನ್ನ ಕಥೆಗೆ ಎರಡನೆಯ ಬಹುಮಾನ!
ಇನ್ನು ಮೂರೇ ವಾರಗಳಷ್ಟು ಹತ್ತಿರಕ್ಕೆ ಬಂದಿದ್ದ ಆ ವರ್ಷದ ಕಾಲೇಜ್ ಡೇ ಸಂಭ್ರಮದಲ್ಲಿ, ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ತಾನು ಹಾಜರಿರಬಾರದು, ಅಂದು ತಾನು ಊರಲ್ಲಿರಬಾರದು, ಇದ್ದರೆ ಆಸ್ಪತ್ರೆಯಲ್ಲಿರಬೇಕೆಂದು ಅವಳು ನಿರ್ಧಾರ ಮಾಡಿಬಿಟ್ಟಳು.
ಅವನ ಬಹುಮಾನಿತ ಕಥೆ ಅವನು ಬದುಕಿನಲ್ಲಿ ಮೊಟ್ಟಮೊದಲು ಬರೆದ ಕಥೆಯಂತೆ ಎಂದು ತಿಳಿದಾಗಲಂತೂ, ಅಧ್ಯಾಪಕಿ ಅವನನ್ನು ಎಲ್ಲರೆದುರು ಹೊಗಳಿದಾಗಲಂತೂ ಈ ಕಾಲೇಜಿನಲ್ಲಿರುವವರೆಗೂ ತನಗೆ ಇನ್ನೆಂದೂ ಪ್ರಥಮ ಬಹುಮಾನ ಸಿಗಲಾರದೆಂಬಂತೆ, ಬದುಕೇ ಅಂತ್ಯಗೊಂಡಂತೆ ನಿರಾಶಳಾಗಿಬಿಟ್ಟಿದ್ದಳು ಅವಳು.
ಕಾಲೇಜ್ ಡೇ ಬಂತು, ಹೋಯಿತು. ಅವಳು ತನ್ನ ನಿರ್ಧಾರವನ್ನುಳಿಸಿಕೊಂಡಳು. ತನಗೆ ಸಮಾಧಾನವಾಗುವಂತೆ ಅಂದು ಅವಳು ಆ ಊರುಬಿಟ್ಟು ಬೇರೆಲ್ಲೂ ಹೋಗಬೇಕಾಗಲಿಲ್ಲ. ಆದರೆ ಆಸ್ಪತ್ರೆಗೆ ಹೋದಳು, ಚೊಚ್ಚಲ ಹೆರಿಗೆಗೆಂದು ತವರಿಗೆ ಬಂದಿದ್ದ ಅಕ್ಕನ ಜೊತೆ. ಅಕ್ಕ ಲೇಬರ್ ವಾರ್ಡ್ನೊಳಗೆ ಅಡಿಗಡಿಗೆ ನೋವಿನ ದನಿ ಹೊರಹಾಕುತ್ತಿದ್ದಾಗಲೂ, ಮಗು ಕಿರ್ರೆಂದು ಅತ್ತಾಗಲೂ, ಎಲ್ಲರೂ ನಕ್ಕಾಗಲೂ ಅವಳಿಗೆ ಕಾಲೇಜ್ ಡೇಯ ಹಾಡುಗಳು ಮತ್ತು ಭಾಷಣಗಳೇ ಕೇಳಿಸುತ್ತಿದ್ದವು.
ಮರುದಿನ ಭಾನುವಾರ. ಮಗುವನ್ನು ನೋಡಲು ಬಂದ ಆತ್ಮೀಯ ಗೆಳತಿಯ ಕೈಯಲ್ಲಿ ಮಗುವಿಗೊಂದು ಬಣ್ಣದ ಗಿಲಕಿ, ಇವಳಿಗಾಗಿ ಕಾಲೇಜ್ ಮ್ಯಾಗಝೀನ್ ಇದ್ದವು. ಅವಳು ಪುಸ್ತಕವನ್ನು ಅತ್ತ ಒಗೆದು ಗಿಲಕಿ ಹಿಡಿದು ಮಗುವಿನ ಮುಂದೆ ಅಲ್ಲಾಡಿಸತೊಡಗಿದಳು.
ಆ ಹಗಲು ಅವಳು ಆ ಪುಸ್ತಕ ಬಿಡಿಸಲಿಲ್ಲ. ಆದರೆ ಅದನ್ನು ಓದಿದ್ದು ಅಕ್ಕ, ಅಣ್ಣ ಇಬ್ಬರೂ. ಇಬ್ಬರದೂ ಒಂದೇ ತೀರ್ಮಾನ – ಅವನ ಕಥೆ ಸೊಗಸಾಗಿದೆ, ಪ್ರಥಮ ಬಹುಮಾನಕ್ಕೆ ಅರ್ಹವಾಗಿದೆ!
ಅದೇನು ನೋಡಿಯೇಬಿಡೋಣವೆಂದು ರಾತ್ರಿ ಮಲಗುವ ಮೊದಲು ಅದರತ್ತ ಕಣ್ಣಾಡಿಸಿದಳು. ಅದರೊಂದಿಗೆ ಸ್ಪರ್ಧೆಗೆ ಬಂದ ಕಥೆಗಳ ಬಗ್ಗೆ ಕಥೆಗಾರ್ತಿ-ಅಧ್ಯಾಪಕಿಯ ಟಿಪ್ಪಣಿಯನ್ನೂ ಓದಿದಳು. ಕಣ್ಣುಮುಚ್ಚಿ ಗೊಂಬೆಯಂತೆ ಕೂತುಬಿಟ್ಟಳು.
ಶಾಲಾಬಾಲಕನೊಬ್ಬ ಶಾಲೆಯಿಂದ ಹಿಂತಿರುಗುವ ಹೊತ್ತಿಗೆ ಅವನ ತಾಯಿ ಬಾವಿನೀರಿನಲ್ಲಿ ಮುಳುಗಿ ಹೆಣವಾಗಿ ಮನೆಯ ಮುಂದೆ ಈಚಲ ಚಾಪೆಯ ಮೇಲೆ ಮಲಗಿದ್ದುದು ಅವನ ಕಥೆಯ ವಸ್ತು. ಕೆಳವರ್ಗದ ಜನರ ಭಾವನೆ-ಬವಣೆ, ಅವರ ವಸತಿಪ್ರದೇಶದ ಕಳೆ-ಕೊಳೆ, ಅವರ ಕೂಗು-ಕಲಹ ಹಾಗೂ ಬಣ್ಣನೆ-ಬೈಗಳುಗಳು ಎಳೆಯ ಹುಡುಗನ ಕಣ್ಣಿನಲ್ಲಿ ಕಂಡ ಬಗೆ ಮನಮುಟ್ಟುವಂತೆ ಚಿತ್ರಿತವಾಗಿತ್ತು. “ನಮ್ಮನ್ನು ಕಥೆಗಾರರನ್ನಾಗಿಸುವುದು ನಾವು ಓದುವ ಪುಸ್ತಕಗಳಲ್ಲ, ಸಾಗಿಸುವ ಬಾಳು” ಎಂದು ಕಥೆಗಾರ್ತಿ-ಅಧ್ಯಾಪಕಿ ತನ್ನ ಟಿಪ್ಪಣಿಯಲ್ಲಿ ಬರೆದಿದ್ದ ವಾಕ್ಯವನ್ನು ಅವಳು ಮಲಗುವ ಮೊದಲು ಮತ್ತೊಮ್ಮೆ ಓದಿದಳು. ಅವನ ಫೋಟೋ ಮೇಲೆ ಕಣ್ಣಿಟ್ಟು ನೋಡಿದಳು. ಎಡಹುಬ್ಬಿನ ಮೇಲೆ ಅರೆರೊಟ್ಟಿಯಾಕಾರದ ಗಾಯದ ಗುರುತು ಬರೆದುಕೊಂಡ ಆ ಮುಖವನ್ನು ನೋಡಿದ ನೆನಪೇ ತನಗಿಲ್ಲವಲ್ಲ ಅಂದುಕೊಂಡಳು. ‘ನನ್ನ ಜಗತ್ತೆಷ್ಟು ಸೀಮಿತ!’ ಜೋರಾಗಿಯೇ ಹೇಳಿಕೊಂಡು ಮುಖದ ಮೇಲೆ ಹೊದಿಕೆಯೆಳೆದುಕೊಂಡಳು.
ಮಾರನೆಯ ದಿನ, ಉಡಾಳರು, ಹುಂಬರು, ಪುಂಡುಪೋಕರಿಗಳು, ಪರಿಚಯ ಸ್ನೇಹವಿರಲಿ ಅಮಾವಾಸ್ಯೆ ಹುಣ್ಣಿಮೆಗಾದರೂ ಒಂದು ಪದದ ಮಾತಿಗೂ ಯೋಗ್ಯರಲ್ಲದ ವೇಸ್ಟು ಬಾಡಿಗಳು ಎಂದು ತಾನು ಇದುವರೆಗೆ ನಂಬಿದ್ದ ಆಟ್ರ್ಸ್ ಹುಡುಗರ ಗುಂಪನ್ನರಸಿ ಅವಳು ಇದುವರೆಗೆ ತಾನೆಂದೂ ಕಾಲಿಟ್ಟಿರದಿದ್ದ ಕಾಲೇಜಿನ ಇನ್ನೊಂದು ಬದಿಯ ಹಳೆಯ ಕಟ್ಟಡದತ್ತ ನಡೆದಳು, ಅವನನ್ನು ಹುಡುಕಿಕೊಂಡು, ಒಳ್ಳೆಯ ಕಥೆಗಾರನಾದ ಅವನಿಗೆ ಅಭಿನಂದನೆ ಹೇಳಲೆಂದು.
ಮುಖವನ್ನು ಗಂಭೀರವಾಗಿಸಿಕೊಂಡು, ದನಿಯನ್ನು ಬಿಗಿಗೊಳಿಸಿಕೊಂಡು ಅವನೆಲ್ಲಿದ್ದಾನೆಂದು ಗುಂಪೊಂದನ್ನು ದೂರದಿಂದಲೇ ಪ್ರಶ್ನಿಸಿದರೆ ಒಟ್ಟಿಗೇ ಹಲವು ಕೈಗಳು ಮೇಲೆದ್ದವು. ಆದರೆ ಅವು ಒಂದೊಂದೂ ತೋರಿದ್ದು ಒಂದೊಂದು ದಿಕ್ಕನ್ನು. ಜೊತೆಗೆ ಕೀಟಲೆಯ ನಗೆಗಳು. ಒಬ್ಬಳೇ ಯಾಕಾದರೂ ಇತ್ತ ಬಂದೆನೋ ಅನಿಸಿಬಿಟ್ಟಿತು ಅವಳಿಗೆ. ತನ್ನ ಹುಚ್ಚು ಉತ್ಸಾಹವನ್ನು ಹಳಿದುಕೊಳ್ಳುತ್ತ ಮುಖ ಸಿಂಡರಿಸಿಕೊಂಡು ಹಿಂದಕ್ಕೆ ತಿರುಗಿದವಳ ಕಿವಿಗೆ ಸಣ್ಣನೆಯ ಸಿಳ್ಳುಗಳ ನಸುವೆ ಬಿದ್ದದ್ದು ‘ಮೂಲೆಯ ಕಂಬವ ಹಿಡಿದು ನಿಂತಿದೆ ಮೂಷಂಡಿ ಮೊದಲ ಬಹುಮಾನ, ಹುಡುಕಿ ಅಲೆದಿದೆ ಉರಿಮೂತಿ ಎರಡನೇ ಬಹುಮಾನ’ ಎಂಬ ಆಶುಕವಿತೆ ಅವಳನ್ನು ಅದೆತ್ತಲೋ ನೋಡುತ್ತ ಒಂಟಿಯಾಗಿ ನಿಂತಿದ್ದ ಅವನತ್ತ ತಿರುಗಿಸಿತು. ಅವನ ಗಡ್ಡದಲ್ಲಿ ಹತ್ತಾರು ಕೂದಲುಗಳು ನೇತಾಡುತ್ತಿದ್ದವು. ಕಾಲೇಜ್ ಮ್ಯಾಗಝಿನ್ನಲ್ಲಿದ್ದ ಫೋಟೋದಲ್ಲಿ ಕಂಡಿರಲಿಲ್ಲ ಅವು. ಆದರೆ ಹುಬ್ಬಿನ ಮೇಲೆ ಅರ್ಧವಷ್ಟೇ ಉಳಿದ ರೊಟ್ಟಿ ನುಣ್ಣಗೆ ಮಿರುಗುತ್ತಿತ್ತು.
ಅವಳ ಅಭಿನಂದನೆಗಳನ್ನವನು ಸಂಕೋಚದಿಂದಲೇ ಸ್ವೀಕರಿಸಿದ. ಆದರೆ ದ್ವಿತೀಯ ಬಹುಮಾನ ಪಡೆದ ಅವಳನ್ನು ಅಭಿನಂದಿಸಲೇ ಇಲ್ಲ. ಅವಳಿಗೇನೂ ನಿರಾಸೆಯಾಗಲಿಲ್ಲ. ಬದಲಿಗೆ ತನ್ನ ಮುಖವನ್ನು ನೇರವಾಗಿ ನೋಡಲೂ ಹಿಂಜರಿಯುತ್ತಿದ್ದ ಅವನ ಬಗ್ಗೆ ಅವಳಿಗೆ ನಗೆ, ಜೊತೆಗೆ ಅಗಾಧ ಕುತೂಹಲ. ಆದರೆ ಅವಳ ಪ್ರಶ್ನೆಗಳಿಗೆ ಅವನಿಂದ ಬರುತ್ತಿದ್ದುದು ಒಂದೊಂದೇ ಪದದ ಉತ್ತರಗಳು. ಅವುಗಳು ಅವಳಿಗೆ ಉತ್ತರಗಳೆನಿಸಲೇ ಇಲ್ಲ. ಅಷ್ಟೂ ಹೊತ್ತು ಸುತ್ತಲೂ “ಮಗ ಹೊಡೆದ್ನಲ್ಲ ಜಾಕ್ಪಾಟ್ನ!’’. “ಐನಾತಿ ಗಾಡಿ ಕಣೋ, ಬೆಂಝ್ ಗಾಡಿ!’’, “ಬೆಂಝ್ ಅಲ್ಲ ಕಣಲೇ, ಆಡಿ, ಲಕ್ಷುರಿ ಆಡೀ”, “ಏಯ್ ಅದೂ ಅಲ್ಲ ಕಣ ಮಗನೇ, ಮಗಂಗೆ ಸಿಕ್ಕಿರೋದು ರೋಲ್ಸ್ರಾಯ್ಗಿಂತ ಒಂಚೂರು ಕಮ್ಮೀದು!’’ ಎಂಬ ಹಗುರ ಮಾತುಗಳು ಮತ್ತವುಗಳ ನಡುವೆ ಸಣ್ಣನೆಯ ಸಿಳ್ಳುಗಳು.
ಅದಾವುದನ್ನೂ ಅವಳು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಆದರೆ ಅಂತಹ ಒಂದೊಂದು ಮಾತಿಗೂ, ಒಂದೊಂದು ಸಿಳ್ಳಿಗೂ ಅವನು ಕುಗ್ಗುತ್ತ ಹೋದ. ಅದನ್ನು ಅವಳಿಗೆ ನೋಡಲಾಗಲಿಲ್ಲ.
ಇತರ ಗೆಳೆಯ ಗೆಳತಿಯರನ್ನು ಕೇಳಿದಳು. ಮೈಮೇಲೆ ತನ್ನ ಅಳತೆಗಿಂತ ದೊಡ್ಡದಾದ ಅಥವಾ ಚಿಕ್ಕದಾದ ಬಟ್ಟೆಗಳನ್ನೂ, ಕಾಲುಗಳಲ್ಲಿ ಹವಾಯಿ ಚಪ್ಪಲಿಗಳನ್ನೂ ತೊಟ್ಟು ಪಟ್ಟಣದ ಯಾವುದೋ ದೂರದ ಕೊಂಪೆಯಿಂದ ನಡೆದು ಬರುವ, ಯಾರೊಂದಿಗೂ ಹೆಚ್ಚು ಬೆರೆಯದ ಅವನ ಬಗ್ಗೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ, ತಿಳಿಯುವ ಆಸಕ್ತಿ ಯಾರಿಗೂ ಇರಲಿಲ್ಲ ಎಂದರೆ ಸರಿ. ಅದು ಅರ್ಥವಾದೊಡನೆ ತಾನೇ ಖುದ್ದಾಗಿ ತಿಳಿಯುವ ಪ್ರಯತ್ನವನ್ನವಳು ಆರಂಭಿಸಿದ್ದಳು. ಆಸೆಗಳ ವಯಸ್ಸಿನ, ಬಿಸಿರಕ್ತಕ್ಕೆ ತಕ್ಕ ಸಹಜ ಸಿಟ್ಟಿನ, ರುಚಿಗೆ ತಕ್ಕಷ್ಟು ಉಪ್ಪಿನಂತಹ ಈಷ್ರ್ಯೆಯ ಅವಳಲ್ಲೊಂದು ಆದ್ರ್ರ ಹೃದಯವಿತ್ತು.
‘ಇಷ್ಟು ದಿನ ನೀನು ಯಾಕೆ ಬರೆಯಲಿಲ್ಲ, ಇಂಥಾ ಟ್ಯಾಲೆಂಟನ್ನ ಅದು ಹೇಗೆ ತಾನೆ ನೀನು ಅಡಗಿಸಿಟ್ಟಿದ್ದೆ, ಅದೆಲ್ಲಿ ಬಚ್ಚಿಟ್ಟುಕೊಂಡಿದ್ದೆ. ಹಾಗೆ ಮಾಡಲು ನಿನಗೆ ಮನಸ್ಸಾದರೂ ಹೇಗೆ ಬಂತು’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಳು. ಅವನೆದೆಯ ಮೇಲಿನ ಜೇಬಿನಿಂದ ಇಣುಕುತ್ತಿದ್ದ ದಪ್ಪನೆಯ ಪೆನ್ನಿನ ಮೇಲೆ ಕಣ್ಣಿಟ್ಟು, ‘ಈಗ ಬರೆ, ನಿಲ್ಲಿಸಬೇಡ, ನಿಲ್ಲಿಸಕೂಡದು’ ಎಂದು ಒತ್ತಾಯಿಸಿದ್ದಳು. ಏನು ಹೇಳಬೇಕೆಂದು ಹೊಳೆಯುತ್ತಲೇ ಇಲ್ಲ ಎನ್ನುವಂತೆ ಅವನ ವರ್ತನೆ. ‘ಏನೋ ಬರೆದೆ’ ಎಂದು ಸಂಕೋಚದಲ್ಲಿ ಹೇಳಿದ. ಮೂರನೆಯ ಭೇಟಿಯಲ್ಲಿ ಅವನ ನಂಬಿಕೆ ಗಳಿಸುವ ಪ್ರಯತ್ನವಾಗಿ, ಮನೆಯಲ್ಲಿ ಯಾರ್ಯಾರಿದ್ದಾರೆ ಎಂದು ಆತ್ಮೀಯವಾಗಿ ಪ್ರಶ್ನಿಸಿದಳು. ಅಪ್ಪ, ಇಬ್ಬರು ತಮ್ಮಂದಿರು, ಒಬ್ಬಳು ತಂಗಿ ಎಂದು ಇದುವರೆಗಿನ ಮತ್ತು ಕೊನೆಯ ಅತಿ ದೀರ್ಘ ಉತ್ತರ ನೀಡಿದ ಅವನು. ‘ತಾಯಿ’ ಎಂಬ ಪ್ರಶ್ನೆಗೆ ‘ಇಲ್ಲ’ ಎಂಬ ಒಂದು ಪದದ ಉತ್ತರ. ಆಗ ಅವಳಿಗೆ ಸಂಭಾಷಣೆ ಮುಂದುವರಿಸಲಾಗಲಿಲ್ಲ. ತನಗೆ ಯಾವತ್ತೂ ಸುಲಭವೆನಿಸುವ ‘ಹೊಸ ಕಥೆ ಏನಾದರೂ ಬರೆದೆಯಾ? ನನಗೆ ತೋರಿಸು ಪ್ಲೀಸ್’ ಎಂಬ ಮಾತಿನಿಂದ ಸಂಭಾಷಣೆಯನ್ನು ಮತ್ತೆ ಹಳಿಗೇರಿಸಲು ನೋಡಿದಳು. ಅವನು ಏನೋ ಗೊಣಗಿ ಜಾರಿಕೊಂಡಿದ್ದ.
ಹಾಗೆ ಜಾರಿಹೋಗಿಯೇಬಿಟ್ಟಿದ್ದ.
ತಿಂಗಳೊಳಗೆ ವಾರ್ಷಿಕ ಪರೀಕ್ಷೆಗಳು ಬರಲಿದ್ದವು. ಕ್ಲಾಸುಗಳು ಮುಗಿದುಹೋದವು, ಹಿಂದೆಯೇ ಸ್ಟಡಿ ಲೀವ್ ಎಂಬ ದೀರ್ಘ ರಜೆ. ಹಾಲ್ಟಿಕೆಟ್ ತೆಗೆದುಕೊಳ್ಳಲು ಹೋಗುವಾಗ ಆಟ್ರ್ಸ್ ಅಂಡ್ ಕಾಮರ್ಸ್ ಬ್ಲಾಕ್ನ ಕಡೆಯಿಂದಲೇ ಹೋದಳು, ಹಿಂತಿರುಗುವಾಗಲೂ ಅದೇ ಮಾರ್ಗ ಹಿಡಿದಳು. ಎರಡೂ ಸಲ ಕಿವಿಗೆ ಸಿಳ್ಳುಗಳು ಬಿದ್ದವು. ಅದನ್ನು ಕೇಳಿಸಿಕೊಳ್ಳಲು ಅವನು ಎಲ್ಲಿಯೂ ಇರಲಿಲ್ಲ.
ಪರೀಕ್ಷಾ ವೇಳಾಪಟ್ಟಿಯಲ್ಲಿ ಆಟ್ರ್ಸ್ ಮತ್ತು ಸೈನ್ಸ್ ಪೇಪರ್ಗಳಿಗೆ ಬೇರೆಬೇರೆ ದಿನಗಳು ನಿಗದಿಯಾಗಿದ್ದವು.
ಪರೀಕ್ಷೆಗಳು ಮುಕ್ತಾಯವಾದವು. ಆಮೇಲೆ ಎಲ್ಲರಿಗೂ ಇಡೀ ಎರಡು ತಿಂಗಳ ದೀರ್ಘ ಬೇಸಿಗೆ ರಜೆ.
ರಜೆ ಮುಗಿದು, ಹೊಸ ಸಲ್ವಾರ್ ಕಮೀಜ್ ತೊಟ್ಟು ಅವಳು ಕಾಲೇಜಿಗೆ ಬಂದಾಗ ಅಲ್ಲಿ ಕಥೆಗಾರ್ತಿ-ಅಧ್ಯಾಪಕಿ ಕಾಣಲಿಲ್ಲ. ಅವರ ಬಗ್ಗೆ ಸುದ್ದಿಯೊಂದು ಹಾರಾಡುತ್ತಿತ್ತು. ಅವರು ಮದುವೆ ಮಾಡಿಕೊಂಡು, ನೌಕರಿಗೆ ಗುಡ್ಬೈ ಹೇಳಿ, ಗಂಡನೊಂದಿಗೆ ನ್ಯೂಜಿಲ್ಯಾಂಡ್ಗೆ ಹೊರಟುಹೋಗಿದ್ದರು. ಈ ವರ್ಷ ಕಥಾಸ್ಪರ್ಧೆ ಇಲ್ಲ ಎಂಬ ನಿರಾಸೆ ಅವಳಿಗೆ. ಆ ನಿರಾಸೆ ತನ್ನ ಬಗೆಗಲ್ಲ ಅಂತ ಅವಳೊಬ್ಬಳಿಗೆ ಮಾತ್ರ ಗೊತ್ತು. ಅವನಿಗೆ ಗೊತ್ತೇ ಅಥವಾ ಗೊತ್ತು ಮಾಡಿಕೊಳ್ಳಬಲ್ಲನೇ ಎಂದು ತಿಳಿಯಲು ಆ ಸಿಳ್ಳುಗಳ ಸಂತೆಯೊಳಗೆ ಕಾಲಿಟ್ಟಳು. ಅಲ್ಲಿ ಅವನಿರಲಿಲ್ಲ.
ವಾರವಿಡೀ ಹಾಗೇ. ಅವನೆಲ್ಲಿ ಎಂದು ಕೇಳಿದರೆ ಯಾರಲ್ಲೂ ಉತ್ತರವಿರಲಿಲ್ಲ. ಉತ್ತರ ಹುಡುಕುವ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ ಎಂದರೇ ಸರಿ. ಆ ಬಗ್ಗೆ ಯಾರಿಗೂ ಆಸಕ್ತಿಯಿರಲಿಲ್ಲ ಅಂದರೆ ಇನ್ನೂ ಸರಿ.
ತಿಂಗಳಲ್ಲಿ ಎಲ್ಲರೂ ಅವನನ್ನು ಮರೆತುಬಿಟ್ಟರು, ಅವಳೊಬ್ಬಳನ್ನುಳಿದು.
ಎರಡು ವಾರಗಳ ನಂತರ ಕೊನೆಗೊಂದು ಮಧ್ಯಾಹ್ನ ತಲೆತಗ್ಗಿಸಿ ನಿಧಾನವಾಗಿ ಹೆಜ್ಜೆ ಸರಿಸಿ ಸೈನ್ಸ್ ಬ್ಲಾಕ್ಗೆ ಹಿಂತಿರುಗುತ್ತಿದ್ದಾಗ ಏಕಾಏಕಿ ಎದುರಿಗೆ ದೇವದೂತೆಯಂಥವಳೊಬ್ಬಳು ಪ್ರತ್ಯಕ್ಷಳಾಗಿದ್ದಳು, ಅವನು ಕ್ಲಾಸಿಗೆ ಬರುತ್ತಿಲ್ಲ ಎಂದು ಹೇಳಿದ್ದಳು. ನಮ್ಮ ಕಾಲೇಜು ಬಿಟ್ಟು ಬೇರೆಡೆ ಹೋಗಿರಲಾರ, ಯಾಕೆಂದರೆ ಟಿಸಿಯೇನೂ ತೆಗೆದುಕೊಂಡಿಲ್ಲ ಎಂದೂ ಮಾಹಿತಿ ಕೊಟ್ಟಿದ್ದಳು. ಅವನು ಬಂದಾಗ ತನ್ನನ್ನು ಕಾಣಲು ಹೇಳು ಎಂದಾಕೆಗೆ ಅವಳು ವಿನಂತಿ ಮಾಡಿಕೊಂಡಿದ್ದಳು. ‘ಖಂಡಿತಾ’ ಎಂಬ ಆಶ್ವಾಸನೆ ದೇವದೂತೆಯಿಂದ ಬಂದಿತ್ತು.
ಅದೇ ಕೊನೆ, ದೇವದೂತೆಯೂ ಕಣ್ಣಿಗೆ ಬೀಳಲಿಲ್ಲ. ಅದ್ಯಾವ ದೂರಲೋಕದಿಂದ ಬಂದಿದ್ದಳೋ, ಅಲ್ಲಿಗೇ ಹೊರಟುಹೋಗಿದ್ದಳು.
ಅವನೂ ಅಷ್ಟೇ, ಗುರುತಿಲ್ಲದಂತೆ ಕಳೆದುಹೋಗಿದ್ದ.
ತಿಂಗಳಲ್ಲಿ ಎಲ್ಲರೂ ಅವನನ್ನು ಮರೆತುಬಿಟ್ಟರು, ಅವಳೊಬ್ಬಳನ್ನುಳಿದು. ಬಹುಶಃ ಅವಳ ಜೊತೆ ಅವನನ್ನು ಒಮ್ಮೆಗಷ್ಟೇ ನೆನಪಿಸಿಕೊಂಡವಳು ಕಾಲೇಜ್ ಮ್ಯಾಗಝಿನ್ ಅನ್ನು ಅಕ್ಕ ಇದ್ದ ಆಸ್ಪತ್ರೆಗೆ ತುಂದುಕೊಟ್ಟಿದ್ದ ಗೆಳತಿ ಮಾತ್ರ. “ದಿಸ್ ಈಸ್ ಎ ಸ್ಮಾಲ್ ವಲ್ರ್ಡ್. ಅಂಡ್ ಇಟ್ ಈಸ್ ರೌಂಡ್ ಟೂ. ಹಿ ವಿಲ್ ಬಂಪ್ ಇಂಟು ಯೂ ಸಮ್ಟೈಮ್ಸ್ ಸಮ್ವೇರ್” ಅಂದಿದ್ದಳು ಸಣ್ಣನೆಯ ದನಿಯಲ್ಲಿ.
ಆ ಮಾತು ಯಾವುದಾದರೂ ಪತ್ರಿಕೆಯಲ್ಲಿ ನಿಜವಾಗುತ್ತದೋ ಎಂದವಳು ವಾರವಾರ, ತಿಂಗಳುತಿಂಗಳು ಮನೆಗೆ ಧಂಡಿಯಾಗಿ ಬಂದು ಬೀಳುತ್ತಿದ್ದ ನಿಯತಕಾಲಿಕೆಗಳಲ್ಲಿ ಹುಡುಕಿದಳು. ಉಹ್ಞುಂ, ಅವನು ಗುರುತೇ ಇಲ್ಲದಂತೆ ಕಾಣೆಯಾಗಿಹೋಗಿದ್ದ.
ಅವಳ ಬದುಕಿನಲ್ಲೂ ಬದಲಾವಣೆಗಳಾಗತೊಡಗಿದ್ದವು.
ಅವು ಅವಳಿಗೆ ಉಸಿರು ತೆಗೆದುಕೊಳ್ಳಲು ಬಿಡದೇ ಪ್ರವಾಹವೇಗ ಪಡೆದುಕೊಂಡವು. ಶ್ರಾವಣದ ಹುಚ್ಚು ಹೊಳೆಗಳಂತೆ. ಅವಳು ಅವುಗಳಲ್ಲಿ ಕೊಚ್ಚಿಹೋದಳು. ಎಷ್ಟು ವೇಗವಾಗಿ ಅಂದರೆ ಅವಳಿಗೆ ಕಥೆ ಬರೆಯುವುದಿರಲಿ, ಓದುವುದಕ್ಕೂ ಸಮಯ ಸಿಗದಾಯಿತು. ಆದರೂ ಅವನು ಆಗೊಮ್ಮೆ ಈಗೊಮ್ಮೆ ನೆನಪಾಗುತ್ತಿದ್ದ. ನಿಧಾನವಾಗಿ ಅದೂ ಅಪರೂಪವಾಗುತ್ತ ಹೋಗಿ ಅವಳಿಗೆ ತಿಳಿಯದಂತೆ ನಿಂತುಹೋಗಿಯೂಬಿಟ್ಟಿತು. ಒಮ್ಮೆ ಏಕಾಏಕಿ ಅವನು ಬರೆದ ಕಥೆ ನೆನಪಾಯಿತು. ಆದರೆ ಅವನ ಹೆಸರು ನೆನಪಾಗಲಿಲ್ಲ. ಕೊನೆಗೂ ಅದು ನೆನಪಾದದ್ದು ತೀರಾ ಇತ್ತೀಚೆಗೆ, ಎರಡು ಮೂರು ವರ್ಷಗಳ ಹಿಂದೊಮ್ಮೆ ತವರಿಗೆ ಹೋಗಿ ಬಿಡುವಾಗಿ ಕೂತು ತನ್ನ ಕಾಲೇಜು ಪುಸ್ತಕಗಳನ್ನು ನೋಡುತ್ತಿದ್ದಾಗ ಅವುಗಳ ನಡುವೆ ಕಾಲೇಜ್ ಮ್ಯಾಗಝಿನ್ ಕಾಣಿಸಿದಾಗ. ಅಂದು ಮತ್ತೆ ಲೇಖನಿ ಕೈಗೆತ್ತಿಕೊಂಡಳು. ಆದರೆ ತನಗೆ ಊಹೆಯಷ್ಟೇ ಆಗಿಹೋದ ಅವನ ಬದುಕು, ಅದರೊಂದಿಗೆ ತನ್ನ ಬಾಳಿನ ಏರಿಳಿತಗಳೂ ಕೂಡಿಕೊಂಡು ಗೊಂದಲಗೆಟ್ಟು ಅವಳಿಗೆ ಏನೂ ಬರೆಯಲಾಗಲೇ ಇಲ್ಲ, ಇಂದಿನವರೆಗೂ.
ಗೆಳತಿ ಕಾಳಜಿಯಿಂದಲೋ, ತಮಾಷೆಗೋ ಹೇಳಿದ್ದ ಮಾತು ಇಂದು ಇಲ್ಲಿ ನಿಜವಾಗಿತ್ತು – ಹಿ ಹ್ಯಾಸ್ ಬಂಪ್ಡ್ ಇಂಟು ಹರ್ ಇನ್ ದಿಸ್ ಸ್ಮಾಲ್ ಅಂಡ್ ರೌಂಡ್ ವಲ್ರ್ಡ್.
ಉದ್ದನೆಯ ರೈಲುಬಂಡಿಯೊಂದು ವೇಗವಾಗಿ ಧಡಗುಟ್ಟಿಕೊಂಡು ಓಡಿಹೋಯಿತು. “ಬೇಸಿಗೆ ರಜೆ ಮುಗಿದ ಮೇಲೆ ನೀನು ಕಾಲೇಜಿಗೆ ಬರಲೇ ಇಲ್ಲ! ಎಲ್ಲಿ ಹೋಗಿಬಿಟ್ಟೆ?’’ ಅವಳು ಎಚ್ಚರಗೊಂಡು ಕೇಳಿದಳು. ಕಣ್ಣರೆಪ್ಪೆಗಳನ್ನು ಅಲುಗಿಸದೆ ರೈಲುಬಂಡಿ ಉಳಿಸಿಹೋದ ಖಾಲಿ ಹಳಿಗಳನ್ನೇ ದಿಟ್ಟಿಸುತ್ತಿದ್ದ ಅವನೂ ಗಕ್ಕನೆ ಎಚ್ಚರಗೊಂಡು ಗಡಿಯಾರ ನೋಡಿದ. ಹಿಂದಿನಂತೆ ಒಂದೊಂದೇ ಪದದ ಉತ್ತರ ಹೇಳುತ್ತ ಅವಳನ್ನು ಕಾಯಿಸಲು ಸಮಯವಿಲ್ಲವೆನಿಸಿರಬೇಕು, ಪಟಪಟ ಆದರೆ ಸಣ್ಣದನಿಯಲ್ಲಿ ಆರಂಭಿಸಿದ. ಹಾಗೆ ಮಾತಾಡುವುದನ್ನು ಬದುಕು ಅವನಿಗೆ ಕಲಿಸಿದ್ದಂತಿತ್ತು.
“ನಿನಗೆ ಗೊತ್ತಿದೆಯಲ್ಲ, ನಮ್ಮಪ್ಪ ಮಾಡ್ತಿದ್ದದ್ದು ರೈಲ್ವೇ ಸ್ಟೇಷನ್ನಲ್ಲಿ ಹಮಾಲಿ ಕೆಲಸ. ರಾತ್ರಿ ಹೊತ್ನಲ್ಲಿ ಅವನ ಜೊತೆ ನಾನೂ ಸೇರ್ಕೊಳ್ತಿದ್ದೆ. ಇದು ನಿಂಗೆ ಗೊತ್ತಿರಲ್ಲ ಬಿಡು. ಕಾಲೇಜಿನ ಯಾರಿಗೂ ಗೊತ್ತಾಗದೆ ಇರಲಿ ಅಂತ ಮುಖಕ್ಕೆ ಮಫ್ಲರ್ ಕಟ್ಕೋತಿದ್ದೆ. ಹ್ಞುಂ ಅದಿರಲಿ, ನಡೆದದ್ದು ಏನು ಅಂದ್ರೆ ಬೇಸಿಗೆ ರಜೇಲಿ ಒಂದು ರಾತ್ರಿ ಹ್ಞಂ, ಹನ್ನೆರಡಾಗಿತ್ತು ಆಗ, ಅಪ್ಪ ರೈಲಿಗೆ ಸಿಕ್ಕಿ ಸತ್ತೋದ. ನನ್ನ ಕಣ್ಣ ಮುಂದೆ ಅದಾದದ್ದು.’’
ಪಾರ್ಕ್ನ ವಾಕಿಂಗ್ ಪಾತ್ಗಳಲ್ಲಿ ಭರಭರ ನಡೆದಾಡುತ್ತಿದ್ದವರ, ಅವರಿಬ್ಬರೂ ಬಿಟ್ಟುಬಂದಿದ್ದ ಅತ್ತಲಿನ ಅಂಗಡಿ ಸಾಲುಗಳಲ್ಲಿ ಗಿಜಿಗುಟ್ಟುತ್ತಿದ್ದವರ, ಎಲ್ಲರ ಸದ್ದುಗಳನ್ನೂ ಅಡಗಿಸಿಬಿಡುವಂತೆ ರೈಲೊಂದು ದೀರ್ಘವಾಗಿ ಸಿಳ್ಳು ಹಾಕಿತು. ಕೇಳಿದ್ದನ್ನು ಅರಗಿಸಿಕೊಳ್ಳಲು ಅವಳಿಗೆ ಸಮಯ ಸಿಕ್ಕಿತ್ತು.
ರೈಲಿನ ಕೂಗು ಕುಗ್ಗುತ್ತಿದ್ದಂತೆ ಅವನು ಮತ್ತೊಮ್ಮೆ ಗಡಿಯಾರ ನೋಡಿಕೊಂಡು ಬಾಯಿ ತೆರೆದ: “ಮತ್ತೆ ರೈಲ್ವೇ ಸ್ಟೇಷನ್ಗೆ ಕಾಲಿಡೋಕೆ ನಂಗೆ ಆಗ್ಲಿಲ್ಲ. ಅದನ್ನ ನೆನಪಿಸಿಕೊಂಡ್ರೇ ನಡುಕ ಬಂದುಬಿಡ್ತಿತ್ತು. ಮನೆ ಹತ್ರಾನೇ ಇದ್ದ ಒಂದು ಆಯಿಲ್ ಮಿಲ್ನಲ್ಲಿ ಕೆಲಸಕ್ಕೆ ಸೇರಿದೆ. ಬೆಳಗಿನ ಹೊತ್ನಲ್ಲಿ ಆ ಏರಿಯಾದಲ್ಲೇ ಹಾಲಿನ ಪ್ಯಾಕೆಟ್ ಹಂಚೋ ಕೆಲಸ ಕೂಡಾ ಸಿಕ್ತು. ತಮ್ಮಂದಿರನ್ನ ಓದಿಸ್ಬೇಕಾಗಿತ್ತು. ತಂಗೀನೂ ಇದ್ಲಲ್ಲ.’’
‘ಕಾಲೇಜು ಬಿಟ್ಟೆ’ ಎನ್ನುವ ಎರಡು ಪದಗಳು ಅವನ ಬಾಯಿಂದ ಬರಲೇ ಇಲ್ಲ ಎನ್ನುವುದು ಆ ಮಾತಿನ ಆಘಾತಗಳ ನಡುವೆಯೂ ಅವಳ ಎದೆಗೆ ತಟ್ಟಿತು. ಗಮನವನ್ನು ಪೂರ್ಣವಾಗಿ ಅವನ ಕಣ್ಣುಗಳ ಮೇಲೆಯೆ ಕೇಂದ್ರೀಕರಿಸಿದಳು. ಹತ್ತು ಅಡಿಗಳ ದೂರದ ವಾಕಿಂಗ್ ಟ್ರ್ಯಾಕ್ನಲ್ಲಿ ಕಣ್ಣಿಗಡ್ಡವಾಗಿ ಕಾಣಿಸಿಕೊಂಡ ಕೈಕೈ ಹಿಡಿದ ಜೋಡಿಯೊಂದರಿಂದ ಮುಖ ಮೇಲೆತ್ತಿ ದಟ್ಟ ಎಲೆಗಳ ಕತ್ತಲಿನತ್ತ ನೋಟ ಹರಿಸಿದ ಅವನು. “ಅಷ್ಟೇ, ಇನ್ನೇನೂ ಇಲ್ಲ. ನಿನ್ನದು ಹೇಳು. ಬಿ.ಎಸ್ಸಿ. ಆದಮೇಲೆ ಗಂಗೋತ್ರಿಗೆ ಹೋದೆಯಾ? ಎಂ.ಎಸ್ಸಿ. ಮಾಡಿದೆಯಾ?’’ ಎಂದ.
ಅವನ ಪ್ರಶ್ನೆ ಅರ್ಥವಾಗಲು ಅವಳಿಗೆ ಹಲವು ಕ್ಷಣಗಳೇ ಬೇಕಾದವು. ಅರ್ಥವಾದ ಮೇಲೆ ಉತ್ತರಕ್ಕಿಂತಲೂ ಇನ್ನಷ್ಟು ಪ್ರಶ್ನೆಗಳು ತನ್ನಲ್ಲಿವೆಯೆಂದು ಅರಿವಿಗೆ ಬಂತು. ಆದರೆ ಅವನ್ನೆಲ್ಲಾ ಕೇಳಲು ಅವಳು ತುಸು ಕಾಯಬೇಕಾಯಿತು.
ಅವರಿಬ್ಬರ ಮೇಲೆ ಪ್ರಖರ ಬೆಳಕು ಚೆಲ್ಲಿಕೊಂಡು, ‘ಚುಗುಚುಗುಚುಗುಚುಗುಸ್ಸ್ಸ್ಸ್’ ಎಂದು ಕರ್ಕಶವಾಗಿ ಕೂಗುತ್ತ ಎಂಜಿನ್ ಒಂದು ಅತ್ತಲಿಂದ ಬಂದು ಇತ್ತ ಓಡಿಹೋಯಿತು. ಅದರ ಹಿಂದೆಯೇ ಹತ್ತಿಪ್ಪತ್ತು ಬೋಗಿಗಳು ‘ದಢಕ್ದಢಕ್ ದಢಕ್ದಢಕ್ ದಢಕ್ದಢಕ್’ ಎಂದು ಸದ್ದುಮಾಡಿಕೊಂಡು ಓಡಿದವು. ಕೊನೆಯಲ್ಲೊಮ್ಮೆ ಒಂಟಿ ದಢಕ್ನೊಂದಿಗೆ ಆ ಶಬ್ದಕ್ಷೋಭೆ ಅಂತ್ಯಗೊಂಡಾಗ ಅವನು ಸಣ್ಣಗೆ ಕಂಪಿಸುತ್ತಿದ್ದ.
ಅವನನ್ನು ಮಾನಸಿಕವಾಗಿ ಅಲ್ಲಿಂದ ದೂರ ಒಯ್ಯುವ ಪ್ರಯತ್ನದಂತೆ ಅವಳು ಆತುರಾತುರವಾಗಿ ಮಾತು ಹೊರಡಿಸಿದಳು: “ಆಮೇಲೇನಾಯ್ತು? ತಮ್ಮಂದಿರು, ತಂಗಿ ಈಗೆಲ್ಲಿದಾರೆ? ನೀನೇನು ಮಾಡ್ತಿದೀಯಾ? ಹೆಂಡತಿ, ಮಕ್ಕಳು?’’
ದೀರ್ಘ ನಿಟ್ಟುಸಿರೊಂದರ ಎಂಜಿನ್ ಹಿಂದೆ ಅವನು ಪದಗಳ ಬೋಗಿಗಳನ್ನು ನಿಧಾನವಾಗಿ ಜೋಡಿಸತೊಡಗಿದ: “ರಾಜೀನ ಸೋದರಮಾವನೇ ಮಾಡ್ಕೊಂಡ. ಹಳ್ಳೀಲೇ ಇದಾಳೆ. ಎರಡು ಮಕ್ಕಳಿವೆ. ಎಲ್ಲ ಸರಿಯಾಗಿದೆ ಅಂತ ಹೇಳಲಾರೆ. ಸಂಸಾರ ಅಂದ್ರೆ ಇದ್ದೇ ಇರ್ತವಲ್ಲ. ಹೇಗೋ ನಿಭಾಯಿಸ್ಕೊಂಡು ಹೋಗ್ತಿದಾಳೆ. ಕಷ್ಟ ಆದ್ರೂ ನಂಗೆ ಹೇಳಲ್ಲ. ನಂಗೆ ತೊಂದರೆ ಕೊಡಬಾರದು ಅಂತಾನೋ ಅಥವಾ ನನ್ನಿಂದೇನೂ ಪ್ರಯೋಜನ ಇಲ್ಲ ಅಂತಾನೋ ಗೊತ್ತಿಲ್ಲ.’’ ಗಕ್ಕನೆ ನಿಲ್ಲಿಸಿದ.
ಅವಳು ತಗ್ಗಿಸಿದ ತಲೆ ಮೇಲೆತ್ತಿ ಅವನತ್ತ ತಿರುಗಿದಳು. ಅವನ ಕಣ್ಣುಗಳು ರೈಲು ಹಳಿಗಳಾಚೆಗಿನ ಎತ್ತರದ ಮರದ ಮೇಲೆ ಕೀಲಿಸಿತ್ತು. ಅವನ ನೋಟವನ್ನನುಸರಿಸಿ ಅತ್ತ ತಿರುಗಿದ ಅವಳಿಗೆ ಕಂಡದ್ದು ಮರದಿಂದೇನೋ ಕಪ್ಪಗೆ ಕೆಳಗಿಳಿಯುತ್ತಿರುವ ದೃಶ್ಯ. ಅದು ಇನ್ನಷ್ಟು ಕೆಳಗೆ ಬಂದಾಗ ಅದಕ್ಕೆ ಅಗಲ ರೆಕ್ಕೆಗಳಿರುವುದು, ಅವು ನಿಶ್ಶಬ್ದವಾಗಿ ಅಲುಗುತ್ತಿರುವುದು ಕಂಡಿತು. ಪುಟ್ಟ ಆದರೆ ಅಗಲ ಪುಕ್ಕದ ಅದು ಮುಂದಿನ ಕ್ಷಣದಲ್ಲಿ ಏಕಾಏಕಿ ವೇಗ ಹೆಚ್ಚಿಸಿಕೊಂಡು ರೈಲುಹಳಿಗಳ ಮೇಲೆ ಎರಗಿತು, ಆತುರಗೆಟ್ಟಂತೆ ಎಡಬಲ ಕುಪ್ಪಳಿಸಿತು. ‘ಕೀಚ್ ಕೀಚ್’ ಎಂದು ಕೀರಲುಗುಟ್ಟುತ್ತಿದ್ದುದೇನನ್ನೋ ಎರಡೂ ಕಾಲುಗಳಲ್ಲಿ ಬಿಗಿಯಾಗಿ ಹಿಡಿದು, ಬಲಿಯ ಕುತ್ತಿಗೆಗೆ ಕೊಕ್ಕು ಹೂಡಿ ಆ ಬೇಟೆಗಾರ ಬಂದ ದಾರಿ ಬಿಟ್ಟು ಇನ್ನೊಂದು ದಿಕ್ಕಿಗೆ ಚಿಮ್ಮಿತು. ಬಲಿಯ ತೆಳುವಾದ ಉದ್ದನೆಯ ಬಾಲ ಆ ಕತ್ತಲಿನಲ್ಲೂ ಅವಳಿಗೆ ಸ್ಪಷ್ಟವಾಗಿ ಕಂಡಿತು. “ಹ್ಞಹ್!’’ ಎಂಬ ಉದ್ಗಾರ ಅವಳಿಗರಿವಿಲ್ಲದೆ ಅವಳ ಗಂಟಲಿನಿಂದ ಹೊರಟಿತು. ಬಲಕ್ಕೆ ತಿರುಗಿದರೆ ಅವನು ಗಂಟಲು ಸರಿಪಡಿಸಿಕೊಳ್ಳುತ್ತಿದ್ದ.
“ರಾಜಪ್ಪ ಬಿ.ಎಸ್.ಎಫ್. ಸೇರ್ಕೊಂಡ. ಈಗ ಅದೆಂಥದೋ ಬಾರ್ಮೇರ್ ಅಂತ, ಪಾಕಿಸ್ತಾನ್ ಬಾರ್ಡರ್ನಲ್ಲಿದೆಯಂತೆ, ಭಯಂಕರ ಸೆಖೆಯ ಜಾಗವಂತೆ, ಅಲ್ಲಿದಾನೆ. ಪರಶುರಾಮ ಕ್ರಾಂತಿಕಾರಿ ಕವಿತೆಗಳನ್ನು ಬರೀತಾನೆ, ನೆತ್ತರಪರಶು ಅನ್ನೋ ಕಾವ್ಯನಾಮದಲ್ಲಿ. ಅವನ ಕವಿತೆಗಳು ಆಲ್ಮೋಸ್ಟ್ ಎಲ್ಲ ಪೇಪರ್ಗಳಲ್ಲೂ ಪ್ರಕಟ ಆಗ್ತಾನೇ ಇರ್ತವೆ. ನೀನು ನೋಡಿರಬೇಕು.’’
ಅವಳು ಥಟ್ಟನೆ ಕಣ್ಣುಗಳನ್ನು ಅರೆಮುಚ್ಚಿಕೊಂಡಳು. ತಲೆ ಮತ್ತೆ ತಗ್ಗಿತು. ಅವನು ಹೇಳಿದ ಕಾವ್ಯನಾಮದ ಪರಿಚಯ ಅವಳಿಗಿರಲಿಲ್ಲ. “ನೀನು ಏನು ಮಾಡ್ತಿದೀಯ?’’ ಅಂದಳು ಗಕ್ಕನೆ ಎಚ್ಚರಗೊಂಡಂತೆ.
ಅವನ ಮುಖದಲ್ಲಿ ನಿಶ್ಶಬ್ದ ನಗೆ. ತಲೆಯ ಮೇಲಿನ ಎಲೆಗಳ ಗುಂಪಿನಲ್ಲಿ ಹಕ್ಕಿಗಳೆರಡು ಪಟಪಟ ರಕ್ಕೆ ಬಡಿದುಕೊಂಡು ಕಿರುಕಿರುಗುಟ್ಟಿದವು.
“ಪರಶು ಮನೆ ಬಿಟ್ಟು ಹೋಗಿ ಐದು ತಿಂಗಳಾಯ್ತು. ಮೊದಲೂ ಹಾಗೆ ಮಾಡ್ತಿದ್ದ. ಆದ್ರೆ ತಿಂಗಳು, ಎರಡು ತಿಂಗಳಲ್ಲಿ ವಾಪಸ್ ಬರ್ತಿದ್ದ. ಈ ಸಲ ಪತ್ತೆಯಿಲ್ಲ. ನಕ್ಸಲರ ಜೊತೆ ಸೇರ್ಕೊಂಡಿದಾನೆ ಅಂತ ಸುದ್ದಿ. ಮರಡಿಕೆರೆ ಎಂಎಲ್ಎ ಮರ್ಡರ್ನಲ್ಲಿ ಅವನ ಕೈನೂ ಇದೆ ಅಂತ ಪೊಲೀಸರು ಹೇಳ್ತಿದ್ದಾರೆ. ಈಗೆಲ್ಲೋ ಆಂಧ್ರದ ಶ್ರೀಕಾಕುಳಂ ಕಡೆ ಓಡಿಹೋಗಿದ್ದಾನೆ ಅಂತ ಅವರ ಲೆಕ್ಕ.’’
ಶ್ರೀಕಾಕುಳಂ! ಅವಳ ಮನಸ್ಸಿನಲ್ಲೇನೋ ಸಣ್ಣನೆಯ ಛಳಕು. ತನ್ನಮ್ಮನ ಅಚ್ಚುಮೆಚ್ಚಿನ ಗಾಯಕ ಪಿ.ಬಿ. ಶ್ರೀನಿವಾಸ್ರ ಹುಟ್ಟೂರಲ್ಲವೇ ಅದು? ತೋರುಬೆರಳೆತ್ತಿ ಗಲ್ಲದ ಮೇಲೆ ಮೆಲ್ಲಗೆ ಬಡಿದುಕೊಂಡಳು. “ಬೆಳಗ್ಗೆ ವಿಜಯವಾಡ ಸೇರಿ ಅಲ್ಲಿಂದ ಶ್ರೀಕಾಕುಳಂ ಕಡೆಗೆ ಬೇರೆ ರೈಲು ಹಿಡೀಬೇಕು ನಾನು. ನಂಗೂ ಪೊಲೀಸರಿಗೂ ರೇಸು ಈಗ, ಪರಶು ಹತ್ರ ಮೊದಲು ಯಾರು ತಲಪೋದು ಅಂತ” – ಅವನು ಹೇಳುತ್ತಿದ್ದ. ಮುಂದೆ ಇನ್ನೊಂದು ರೈಲು ‘ಚುಗುಚುಗುಚುಗು’ ಎನ್ನುತ್ತ ಮೆಲ್ಲಮೆಲ್ಲನೆ ತೆವಳುತ್ತ ಹೋಯಿತು. “ನಿನ್ನ ಕಥೆ ಹೇಳು. ಯಾವಾಗಿಂದ ಈ ಊರಲ್ಲಿದಿಯಾ? ಗಂಡ, ಮಕ್ಕಳು?’’ ಅವನ ಪ್ರಶ್ನೆ ರೈಲಿಗಿಂತಲೂ ವೇಗವಾಗಿತ್ತು. ಅವಳು ಎಚ್ಚರಗೊಂಡಂತೆ “ಹ್ಞ’’ ಎಂದು ಸದ್ದು ಹೊರಡಿಸಿದಳು. ಅವನು ನಕ್ಕಂತೆನಿಸಿ ಅವನತ್ತ ತಿರುಗಿದಳು.
ಹೌದು, ಅವನು ಸಣ್ಣಗೆ ನಗುತ್ತಿದ್ದ. ಮುಖ ಮೇಲಿನ ಕಪ್ಪು ಆಕಾಶದತ್ತ ಇತ್ತು. ಕನಸಿನಲ್ಲೆಂಬಂತೆ ದನಿ ತೆಗೆದ: “ನೀನೂ ಕಾಲೇಜನ್ನ ಅರ್ಧಕ್ಕೆ ಬಿಟ್ಟೆ ಅಲ್ವಾ? ನಂಗೆ ಹೇಗೆ ಗೊತ್ತು ಅಂತೀಯಾ? ಕಾಲೇಜು ಶುರುವಾದಾಗ ಒಂದಿನ ಬೆಳಗ್ಗೆ ಬೆಳಗ್ಗೇನೇ ಬಂದು ಸೈನ್ಸ್ ಬ್ಲಾಕ್ ನೋಟೀಸ್ ಬೋರ್ಡ್ ಮೇಲಿದ್ದ ನಿನ್ನ ಟೈಂ ಟೇಬಲ್ಲನ್ನು ಬರಕೊಂಡೆ. ಆವಾಗಾವಾಗ ಸಮಯ ಹೊಂದಿಸ್ಕೊಂಡು ಬಂದು ದೂರದಲ್ಲಿ ನಿಂತ್ಕೊಂಡು ನೀನು ಕಾರ್ನಲ್ಲಿ ಬರೋದನ್ನ, ಹೋಗೋದನ್ನ ನೋಡ್ತಿದ್ದೆ. ಹಾಗೇ ನೋಡ್ಕೊಂಡು ಹೊರಟುಹೋಗ್ತಿದ್ದೆ. ಒಂದಿನ ನಿನ್ನನ್ನ ಡ್ರಾಪ್ ಮಾಡಿ ಹೋಗ್ತಿದ್ದ ನಿನ್ನ ಡ್ರೈವರ್ ಬಂದು ಏನೇನೋ ಬೈದ. ನಾನು ಓಡಿಬಿಟ್ಟೆ.’’ ಅವನು ಜೋರಾಗಿಯೇ ನಗತೊಡಗಿದ.
ಅವಳು ಬೆಚ್ಚಿದಳು. ಅವನು ನಗೆ ನಿಲ್ಲಿಸಿದ. “ಆದ್ರೆ ನಿನ್ನನ್ನ ನೋಡೋದನ್ನೇನೂ ನಾನು ನಿಲ್ಲಿಸ್ಲಿಲ್ಲ. ಇನ್ನಷ್ಟು ದೂರದಲ್ಲಿ, ಏನಾದ್ರೂ ಒಂದರ ಮರೇಲಿ ನಿಲ್ತಿದ್ದೆ ಅಷ್ಟೇ. ಆದ್ರೆ ಸ್ವಲ್ಪ ದಿನ ಆದಮೇಲೆ ನೀನು ಕಾಲೇಜ್ಗೆ ಬರೋದು ನಿಲ್ಲಿಸ್ದೆ. ಒಂದಿಡೀ ತಿಂಗಳು ಕಾದರೂ ನೀನು ಕಾಣಿಸ್ಲಿಲ್ಲ.’’
ಅವಳು ಅತೀವ ಬೆರಗಿನಲ್ಲಿ ಅವನತ್ತಲೇ ನೋಡುತ್ತಿದ್ದಳು. ಮುಖ ಅವನತ್ತ ಬಾಗಿತು.. “ನನ್ನಿಂದಾನೇ ಹಾಗಾಯ್ತೇನೋ ಅಂತನಿಸ್ತು. ನಿಮ್ಮ ಮನೆಯವರು ನಿನ್ನನ್ನ ಬೇರೆ ಕಾಲೇಜಿಗೆ ಸೇರಿಸಿದಾರೆ ಅಥವಾ ಬೇರೆ ಊರಿಗೇ ಕಳಿಸಿಬಿಟ್ಟಿದಾರೆ ಅಂದ್ಕೊಂಡೆ. ತುಂಬ ಬೇಜಾರಾಯ್ತು. ಮತ್ತೆ ಆ ಕಡೆ ಹೋಗ್ಲಿಲ್ಲ ನಾನು.’’ ಅವನು ಹೇಳುತ್ತಿದ್ದ. ಈಗ ತಲೆ ತಗ್ಗಿತ್ತು, ದನಿ ಕುಗ್ಗಿತ್ತು.
ಇನ್ನೊಂದು ರೈಲು ಸತ್ತವರನ್ನೂ ಎಬ್ಬಿಸುವಂತೆ ಕೂಗಿದಾಗ ಅವಳು ಈ ಲೋಕಕ್ಕೆ ಬಂದಳು. ಅವನ ಕಣ್ಣು ಗಡಿಯಾರದತ್ತ ಇದ್ದದ್ದನ್ನು ನೋಡಿ ತಾನೂ ತನ್ನದರತ್ತ ಹೊರಳಿದಳು. ಒಮ್ಮೆ ಮೇಲೆ, ಇನ್ನೊಮ್ಮೆ ಕೆಳಗೆ, ಮತ್ತೊಮ್ಮೆ ಎದುರಿಗೆ, ಮಗದೊಮ್ಮೆ, ನಡುನಡುವೆ ಅವನತ್ತ ನೋಡುತ್ತ ಹೇಳತೊಡಗಿದಳು: “ಇಲ್ಲಾ, ಅದೊಂದು ದೊಡ್ಡ ಕಥೆ. ಏಳೆಂಟು ತಿಂಗಳ ಮಗೂನ ಬಿಟ್ಟು ಅಕ್ಕ ಹೊಗ್ಬಿಟ್ಳು. ನಾಲ್ಕು ದಿನದ ಚಳಿಜ್ವರ ಅಷ್ಟೇ. ಸಾಯೋದಕ್ಕೆ ಅದೊಂದು ನೆಪ ಬಿಡು. ಇರಲಿ, ವಿಷಯ ಏನು ಅಂದ್ರೆ ಆ ಮಗೂನ ಅಳೂನ ನೋಡೋಕೆ ಆಗ್ಲಿಲ್ಲ. ಸೊರಗ್ಹೋಯ್ತು ಬೇರೆ. ಅಕ್ಕನ ಆ ಮಗಳನ್ನ ನಾನು ತುಂಬಾ ಹಚ್ಕೊಂಡುಬಿಟ್ಟಿದ್ದೆ. ಫೈನಲ್ ಇಯರ್ ಎಕ್ಸಾಮನ್ನು ಮುಂದಿನ ವರ್ಷ ಬರೆದರಾಯ್ತು, ಏನೂ ನಷ್ಟ ಇಲ್ಲ ಅಂದ್ಕೊಂಡು ಮಗೂನ ಆರೈಕೆಗೆ ನಿಂತೆ. ಆಮೇಲೆ ಬದುಕು ನನ್ನನ್ನ ಎತ್ತೆತ್ತಲೋ ಕರಕೊಂಡು ಹೋಗಿಬಿಡ್ತು.’’ ನಿಲ್ಲಿಸಿದಳು. ಮರುಕ್ಷಣ ಆವೇಶದಿಂದೆಂಬಂತೆ ಮತ್ತೆ ಆರಂಭಿಸಿದಳು: “ಭಾವನೂ ತಮ್ಮ ಮಗಳನ್ನ ತುಂಬ ಹಚ್ಚೊಂಡಿದ್ರು. ನಾನು ಅದಕ್ಕಿಂತ್ಲೂ ಹೆಚ್ಚು ಹಚ್ಚೊಂಡಿದ್ದೆ. ರಶ್ಮಿಯಂತೂ ನನ್ನನ್ನೇ ಅಮ್ಮ ಅಂದ್ಕೊಂಡುಬಿಟ್ಳು. ಇನ್ನೇನಿದೆ, ನಾನು ಭಾವಂಗೆ ಎರಡನೇ ಹೆಂಡ್ತಿ ಆದೆ. ನನ್ನಿಷ್ಟದಿಂದ್ಲೇ ಆದದ್ದು ನಾನು. ಭಾವ ತುಂಬ ಒಳ್ಳೇವ್ರು. ನನ್ನನ್ನ, ರಶ್ಮೀನ ತುಂಬಾ ಪ್ರೀತಿಸ್ತಾರೆ. ಆದ್ರೆ ಅದನ್ನ ತೋರಿಸೋಕೆ ಅವರಿಗೆ ಸಮಯಾನೇ ಸರಿಯಾಗಿ ಸಿಗೋದಿಲ್ಲ.’’
ಅವನು ಕಲ್ಲಾಗಿ ಕೂತುಬಿಟ್ಟಿದ್ದ. ಅವಳು ಕರಗಿ ಹರಿಯುತ್ತಿದ್ದಳು.
“ಮಗು ಎತ್ಕೊಂಡು ಗಂಡನ ಜತೆ ಈ ಊರಿಗೆ ಬಂದೆ. ನನ್ ಗಂಡ ಇಲ್ಲೇ ಎಂಜಿನಿಯರಿಂಗ್ ಕಾಲೇಜ್ನಲ್ಲಿ ಪ್ರೊಫೆಸರ್. ಹತ್ತಾರು ದೊಡ್ಡ ದೊಡ್ಡ ಕನ್ಸ್ಟ್ರಕ್ಷನ್ ಫರ್ಮ್ಗಳಲ್ಲಿ ಕನ್ಸಲ್ಟೆನ್ಸಿ ಬೇರೆ. ಇದೊಂದೇ ಊರಲ್ಲಲ್ಲ. ಬೇರೆ ಬೇರೆ ಕಡೆನೂ. ಮುಂಬೈ, ದೆಹಲಿ, ಚಂಡೀಘರ್ ಅಂತ ಓಡಾಟ. ಮೂರು ತಿಂಗಳಿಗಾದ್ರೂ ಒಂದು ಫಾರಿನ್ ಟೂರು. ಇಪ್ಪತ್ತನಾಲ್ಕು ತಾಸುಗಳು ಸಾಕಾಗೋದೇ ಇಲ್ಲ ಅವರಿಗೆ. ಹೀಗಾಗಿ ನಾನು ಪೂರ್ತಿಯಾಗಿ ಮನೆಗೇ ಕನ್ಫೈನ್ ಆಗಿಬಿಟ್ಟೆ. ರಶ್ಮೀನೇ ನನ್ನ ಲೋಕ ಆಗಿಹೋದ್ಲು. ನಂಗೂ ಬೇರೆ ಮಗೂ ಆಗ್ಲಿಲ್ಲ. ನನಗೆಲ್ಲವೂ ಅವಳೇ. ಆದ್ರೆ…’’ ನಿಲ್ಲಿಸಿದಳು. ಅವನು ಗಾಬರಿಗೊಂಡ. ಆತಂಕದಿಂದಲೇ ಅವಳ ಮುಂದಿನ ಮಾತುಗಳಿಗೆ ಪೂರ್ತಿಯಾಗಿ ಕಿವಿ ತೆರೆದುಕೊಂಡ.
“ರಶ್ಮೀಗೆ ಇಪ್ಪತ್ತಮೂರು ಈಗ. ಒಳ್ಳೇ ಹುಡುಗಿ, ಜಾಣೆ, ಓದಿನಲ್ಲಿ ಯಾವಾಗಲೂ ಮುಂದು. ನನ್ನನ್ನ ತುಂಬಾ ಹಚ್ಚೊಂಡಿದಾಳೆ ನನ್ ಮಗ್ಳು. ಆದ್ರೆ ಅದೇನು ಮೋಡಿ ಮಾಡಿದ್ನೋ! ಹ್ಞಂ! ಆ ಭಗವಂತ ಹಣೇಲಿ ಅದೇನೇನು ಬರೆದು ಕಳಿಸ್ತಾನೋ! ಅವನನ್ನೂ ತುಂಬಾ ಹಚ್ಚೊಂಡುಬಿಟ್ಟು. ಮದುವೆಯಾದ್ರೆ ಅವನನ್ನೇ, ಇಲ್ಲಾಂದ್ರೆ ನನ್ನ ಹೆಣ ನೋಡೋಕೆ ತಯಾರಾಗು ಅಮ್ಮ ಅಂದುಬಿಟ್ಳು! ಮನುಷ್ಯರು ಅಂದಮೇಲೆ ಪ್ರೀತಿ ಮಾಡೋದು, ಪ್ರೇಮಗೀಮ ಅಂತ ಹೋಗೋದು ದೊಡ್ಡದಲ್ಲ. ತಪ್ಪೂ ಅಲ್ಲ. ಆದ್ರೆ ಇಲ್ಲಿ ತೊಂದರೆ ಆದದ್ದು ಅವನ ಜಾತಿ, ಐ ಮೀನ್ ಅವನ ಧರ್ಮ. ನಮ್ಮ ಕಾಲದಲ್ಲಿ ಅದೂ ಅಷ್ಟು ತಪ್ಪು ಅನ್ನೋ ಥರಾ ಕಾಣ್ತಾ ಇರ್ಲಿಲ್ಲ. ಆದ್ರೆ ಈಗ ಎಲ್ಲ ಬದಲಾಗಿಹೋಗಿದೆ ನೋಡು. ಈಗಿನ ವಾತಾವರಣ ನೋಡಿದ್ರೆ ಯಾವುದು ನಿಜ, ಯಾವುದು ನಾಟಕ, ಯಾವುದು ಹಗ್ಗ, ಯಾವುದು ಹಾವು ಅಂತಾನೇ ತಿಳಿಯೋದಿಲ್ಲ. ಅದರಲ್ಲೂ ಆ ಮುಂಬಯಿನ ನಮ್ರತಾ, ದೆಹಲಿಯ ಶ್ರದ್ದಾ, ಆ ಬಾಂಗ್ಲಾದೇಶದ ಕವಿತಾ ಇವರ ಕಥೇನೆಲ್ಲಾ ಕೇಳ್ತಾ ಇದ್ರೆ ಜೀವಾನೇ ಬಾಯಿಗೆ ಬಂದುಬಿಡುತ್ತೆ. ಮೊನ್ನೆ ಅಂತೂ ಆ ಕೇರಳ ಸ್ಟೋರಿ ಫಿಲ್ಮ್ದು ಟ್ರೇಲರ್ ನೋಡಿ ನಡುಗಿಹೋದೆ.” ಅವಳ ದನಿ ಅವನೆದೆಗೆ ತಟ್ಟುವಷ್ಟು ಅಲುಗಾಡಿಹೋಯಿತು.
ಆಸರೆಗೆಂಬಂತೆ ಅವನತ್ತ ಬಾಗಿ ಕೈಯೂರಿದ ಅವಳ ಅಂಗೈ ಇಳಿದದ್ದು ಅವನು ಇಟ್ಟುಕೊಂಡಿದ್ದ ನೋಟ್ಬುಕ್ ಮೇಲೆ. ಅದರ ಮೇಲೆ ಇನ್ನಷ್ಟು ಬಲವಾಗಿ ಭಾರ ಊರಿ, ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡಳು. ಎದುರು ಸಾಗಿಹೋಗುತ್ತಿದ್ದ ರೈಲಿನ ವೇಗಕ್ಕೆ ಸಮನಾಗಿ ಮಾತು ಹರಿಸಿದಳು: “ನನ್ನ ಮಗಳಿಗೆ ಹಾಗೇನೂ ಆಗಬಾರದು ಅಂತ ಎಲ್ಲ ದೇವರಿಗೂ ಹರಕೆ ಹೊತ್ಕೊಂಡಿದೀನಿ. ದೇವರನ್ನಷ್ಟೇ ನಂಬಿದ್ರೆ ಸಾಕಾಗಲ್ಲ ಅಂತ ನಾನೂ ನನ್ನ ಕೈಲಾದ ಪ್ರಯತ್ನ ಮಾಡ್ತಿದೀನಿ. ಇವರಂತೂ ನಾನು ಹೇಳಿದ ಯಾವುದಕ್ಕೂ ಇಲ್ಲ ಅನ್ನೋದಿಲ್ಲ. ನಮ್ಮನೇ ಪಕ್ಕದಲ್ಲೇ ಮಗಳು-ಅಳಿಯನಿಗೆ ಮನೆ ಕೊಂಡುಕೊಟ್ಟು ಕಣ್ಣೆದುರೇ ಇರಿಸಿಕೊಂಡಿದೀವಿ. ಅವರ ಹಬ್ಬ ನಮ್ಮ ಹಬ್ಬ ಎಲ್ಲನೂ ಒಟ್ಟಿಗೆ ಮಾಡ್ತೀವಿ. ಅಳಿಯನಿಗೆ ಏನೂ ಕಡಮೆಯಾಗದ ಹಾಗೆ ನೋಡ್ಕೊಳ್ತಿದೀವಿ. ಅವನಿಗಷ್ಟೇ ಅಲ್ಲ, ಅವನ ಅಣ್ಣತಮ್ಮ ಅಕ್ಕತಂಗೀರೂ ನಮ್ಮವರೇ ಅಂತ ಅವರನ್ನೆಲ್ಲ ಹತ್ರ ಮಾಡ್ಕೊಂಡಿದೀವಿ. ಅಳಿಯನ ತಂಗಿಗೆ ಹೋದ ತಿಂಗಳು ಮದುವೆಯಾಯ್ತು. ನಾಳೆ ಅವಳ ಗಂಡನ ಬರ್ತ್ಡೇ. ಅದಕ್ಕೆ ಇವರು ಉಂಗುರ ತಂದಿಟ್ಟಿದಾರೆ. ಇರಲಿ ಅಂತ ನಾನೂ ಎರಡು ಜೊತೆ ಡ್ರೆಸ್ ಖರೀದಿ ಮಾಡಿ ತಂದಿದೀನಿ.’’ ತೊಡೆಯ ಮೇಲಿದ್ದ ಕ್ಯಾರಿಬ್ಯಾಗ್ ಮೇಲೆ ಎಡಅಂಗೈಯಿಂದ ತಟ್ಟಿದಳು. “ಯಾವ ಕಾರಣಕ್ಕೂ ನನ್ನ ಮಗಳನ್ನ ಕಳಕೊಳ್ಳೋಕೆ ನಾನು ತಯಾರಿಲ್ಲ ನೋಡು. ನಾನು ಬದುಕಿನಲ್ಲಿ ಏನೇನೆಲ್ಲಾ ಕಳಕೊಂಡಿದೀನಿ ಗೊತ್ತಾ?’’ ಬಿಕ್ಕಿದಳು. ಎದೆ ಏರಿಳಿಯಿತು.
ತನ್ನ ನೋಟ್ಬುಕ್ ಮೇಲೆ ಗಟ್ಟಿಯಾಗಿ ಊರಿದ್ದ ಅವಳ ಬಲ ಅಂಗೈನ ಹಿಂಭಾಗದತ್ತ ಅವನು ನಿಧಾನವಾಗಿ ತನ್ನ ಕೈ ಇಳಿಸಿದ. ಮೊದಲಿಗೆ ನಾಲ್ಕು ಬೆರಳುಗಳು, ನಂತರ ತನ್ನ ಇಡೀ ಅಂಗೈಯಿಂದ ಮೃದುವಾಗಿ ತಟ್ಟತೊಡಗಿದ. ಅವಳ ಕಣ್ಣುಗಳು ಒಮ್ಮೆಲೆ ಅಗಲಗೊಂಡವು.
ಅವನ ತಟ್ಟುವಿಕೆ ನಿಧಾನಗೊಳ್ಳುತ್ತ ಹೋಯಿತು. ಅಷ್ಟೇ ನಿಧಾನವಾಗಿ ಅವಳ ರೆಪ್ಪೆಗಳು ಮುಚ್ಚಿಕೊಳ್ಳುತ್ತ ಹೋದವು. ಒಂದು ಹಂತದಲ್ಲಿ ತಟ್ಟುವಿಕೆ ಪೂರ್ಣವಾಗಿ ನಿಂತುಹೋಗಿ, ಅವನ ಅಂಗೈ ಅವಳ ಅಂಗೈನ ಹಿಂಭಾಗದ ಮೇಲೆ ನಿಶ್ಚಲಗೊಳ್ಳುವ ಹೊತ್ತಿಗೆ ಅವಳ ಕಣ್ಣುಗಳು ಪೂರ್ತಿಯಾಗಿ ಮುಚ್ಚಿಕೊಂಡಿದ್ದವು.
ಯಾರು ಮೊದಲು ಎಚ್ಚರಗೊಂಡರು ಎಂದು ಇಬ್ಬರಿಗೂ ತಿಳಿಯಲಿಲ್ಲ. ಪೂರ್ಣ ಅರಿವು ಬಂದಾಗ, “ಟೈಮ್ ಆಗ್ಹೋಯ್ತು. ನನ್ನಿಂದಾಗಿ ನಿನ್ನ ಟ್ರೇನ್ ಮಿಸ್ ಅಗಬಾರದು” ಎಂದು ಹೇಳುತ್ತಾ ಅವಳು ಎದ್ದು ನಿಲ್ಲುತ್ತಿದ್ದಳು.
ಇಬ್ಬರೂ ಮೌನವಾಗಿ ನಡೆದು ಪಾರ್ಕ್ನಿಂದ ಹೊರಬಂದರು. ಈಗ ಅವನು ಮುಂದೆ, ಅವಳು ಹಿಂದೆ.
ಹೊರಬಂದು ರಸ್ತೆಯಂಚು ತಲಪಿದಾಗ ಅವನು ದಾರಿಗಾಣದೇ ನಿಂತ. ಅವಳು ಅವನ ಮುಂದೆ ಬಂದಳು.
ಕಾರ್ ಸಮೀಪಿಸಿದ ಅವಳು, “ನಡೀ, ನಿನ್ನನ್ನ ಸ್ಟೇಷನ್ಗೆ ಬಿಡ್ತೀನಿ” ಅಂದಳು, ಕೀಲಿಗಾಗಿ ಪರ್ಸ್ನೊಳಗೆ ಕೈ ಇಳಿಸುತ್ತ್ತ. “ಇಲ್ಲ ಇಲ್ಲ, ಬೇಡ. ನಾನು ನಡೆದು ಹೋಗ್ತೀನಿ. ಐದು ನಿಮಿಷದ ದಾರಿ ಅಷ್ಟೇ” ಅವನೆಂದ. “ಇರಲಿ ಇರಲಿ, ನಾನು ಹೋಗೋದೇ ಆ ಕಡೆಯಿಂದ. ಹತ್ತು” ಎನ್ನುತ್ತ ಅವಳು ಕಾರಿನೊಳಗೆ ಸೇರಿ ಅವನಿಗಾಗಿ ಈ ಬದಿಯ ಬಾಗಿಲು ತೆರೆದಳು.
ಅವನು ಕ್ಷಣ ಸಂಕೋಚಗೊಂಡು ನಿಂತ. ಅವಳು ತೆರೆದಿದ್ದ ಬಾಗಿಲನ್ನು ಮುಚ್ಚಿ ಹಿಂಬಾಗಿಲು ತೆರೆದ. ಅವಳ ಮುಖದತ್ತ ನೋಡದೆ ಒಳಸೇರಿ ಕೂತ.
“ಆಹಾ, ಲೇಡಿ ಡ್ರೈವರ್ ಇಟ್ಕೋಂಡಿರೋ ರಸಿಕ ಅಂತ ಈ ಊರಿನ ಜನಕ್ಕೆ ತೋರಿಸಿಕೊಳ್ಳೋ ಆಸೆ!’’ ಅವಳು ಜೋರು ನಗೆ ಹಾಕಿದಳು. “ಯೆಸ್ ಯೆಸ್.’’ ನಕ್ಕ ಅವನು, “ಬದುಕಿನಲ್ಲಿ ಒಂದು ನಿಮಿಷವಾದರೂ ಆ ಅದೃಷ್ಟ ನನಗೆ ಬೇಕು. ಏಕ್ ದಿನ್ ಕಾ? ಅಲ್ಲಲ್ಲಾ, ಏಕ್ ಮಿನಿಟ್ ಕಾ ಸುಲ್ತಾನ್!’’ ಅವನು ಅವಳಿಗಿಂತಲೂ ಜೋರಾಗಿ ನಕ್ಕ. ನಾಲ್ಕಾರು ಜನ ಇತ್ತ ತಿರುಗಿದರು. ಅವಳು ನಿಶ್ಶಬ್ದವಾಗಿ ನಗುತ್ತಾ ತಾನು ಆಗಷ್ಟೇ ತೆರೆದಿದ್ದ ಮುಂದುಗಡೆಯ ಎರಡೂ ಕಿಟಕಿಗಳ ಗಾಜು ಏರಿಸಿದಳು. ಕಣ್ಣರೆಪ್ಪೆಗಳನ್ನೊಮ್ಮೆ ಪಟಪಟ ಬಡಿದುಕೊಂಡು ವಾಹನವನ್ನು ಮುಂದಕ್ಕೆ ಚಿಮ್ಮಿಸಿದಳು. ಮುಂದಿನ ರಸ್ತೆಯತ್ತಲೇ ಕಣ್ಣಿಟ್ಟು “ಅದೇನೋ ಕಥೆ ಬರೀಬೇಕು ಅಂತ ನೋಟ್ಬುಕ್ಕು, ಪೆನ್ನು ಎಲ್ಲ ತಗೊಂಡಿದೀಯ” ಎಂದು ಆರಂಭಿಸಿದಳು. ಅವನು ಹೇಳಿದ ಕಥಾಸ್ಪರ್ಧೆಯ ಬಣ್ಣಬಣ್ಣದ ಪೋಸ್ಟರ್ ಹತ್ತಾರು ಕಡೆಗಳಿಂದ ತನಗೂ ಫಾರ್ವರ್ಡ್ ಆದದ್ದು ಅವಳಿಗೂ ನೆನಪಾಗಿತ್ತು. “ಮರೀದೇ ಕಥೆ ಬರೀ. ಸ್ಪರ್ಧೆಯಿಂದ ಆರಂಭವಾದ ನಿನ್ನ ಕಥೆಗಾರಿಕೆಗೆ ಸ್ಪರ್ಧೆಯಿಂದಲೇ ಮರುಜೀವ ಬರಲಿ” ಅಂದಳು. ವಾಹನವನ್ನು ತಿರುವಿನಲ್ಲಿ ಸುಂಯ್ಯನೆ ತಿರುಗಿಸುತ್ತ. “ನೀನೂ ಬರಿ. ನಿನಗೆ ಬಹುಮಾನ ಬಂದ್ರೆ ನನಗೇ ಬಂದಹಾಗೆ” ಮೆಲ್ಲನೆಂದ ಅವನು ಏನೋ ಯೋಚನೆಯಲ್ಲಿದ್ದಂತೆ. ಅವಳು ಉತ್ತರಿಸಲಿಲ್ಲ.
ಎರಡು ನಿಮಿಷಗಳಲ್ಲಿ ವಾಹನ ರೈಲ್ವೇ ಸ್ಟೇಷನ್ನ ಮುಂದಿತ್ತು. “ನಿನ್ನ ಟ್ರೇನ್ಗೆ ಇನ್ನೂ ಕಾಲು ಗಂಟೆ ಇದೆ. ನಿಧಾನವಾಗಿ ಹೋಗು. ಆತುರ ಮಾಡಿಕೊಳ್ಳಬೇಡ” ಅಂದಳು ಅವಳು ಮೆಲ್ಲಗೆ. ಅವನು ಕೆಳಗಿಳಿದು ಅವಳತ್ತ ಬಂದ. ಕೈಗಳು ಒಂದೂಕಾಲು ಗಂಟೆಯ ಹಿಂದೆ ಮಾಡಿದ್ದಂತೆಯೇ ಬೆನ್ನ ಹಿಂದೆ ಸೇರಿಕೊಂಡಿದ್ದವು. ಅವಳಿಗೆ ನಗೆ. “ಬೈ” ಎಂದು ಪಿಸುಗುಟ್ಟಿ ಕೈಯಾಡಿಸಿದಳು. ಅವನು ಅಷ್ಟೇ ಮೆಲ್ಲಗೆ “ಕಥೆ ಬರಿ” ಅಂದ ಮುಖದ ತುಂಬಾ ತೆಳು ನಗು ತುಂಬಿಕೊಂಡು. ಕಣ್ಣುಗಳಲ್ಲೇನೋ ಸಣ್ಣನೆಯ ಬೆಳಕು. ಹಾಗೇ ನಗೆಯರಳಿಸಿಕೊಂಡೇ ಅವಳ ಮೇಲೆ ಕಣ್ಣಿಟ್ಟೇ ಎರಡು ಹೆಜ್ಜೆ ಹಿಂದೆ ಸರಿದ.
ಹೊಳೆವ ಕಪ್ಪು ಲ್ಯಾನ್ಸರ್ ಮುಂದೆ ಹೋಗಲಿಲ್ಲ. ಒಂದೆರಡು ಸಲ ಕೆಮ್ಮಿದಂತೆ ಮೊರೆದು ಸ್ತಬ್ಧವಾಯಿತು. ಅವಳು ಎಲ್ಲೆಲ್ಲಿಗೋ ಕೈ ಹೂಡುತ್ತ್ತ, ಎಡ ಬಲ ಗಾಬರಿಯಲ್ಲಿ ಕಣ್ಣಾಡಿಸುತ್ತಿದ್ದಳು.
ಅವನು ಸರ್ರನೆ ಹತ್ತಿರ ಸರಿದ. “ಯಾಕೋ ಸ್ಟಾರ್ಟ್ ಆಗಿಲ್ಲ” ಅಂದಳು ಅವಳು ತಗ್ಗಿದ ದನಿಯಲ್ಲಿ. “ಪೆಟ್ರೋಲ್ದೇನೂ ಸಮಸ್ಯೆಯಿಲ್ಲ. ಟ್ಯಾಂಕ್ ಭರ್ತಿಯಾಗಿದೆ. ಇಲ್ಲಿಗೆ ಬರೋವಾಗ ತಾನೆ ತುಂಬಿಸಿದ್ದೆ” ಎಂದು ಗೊಣಗಿಕೊಂಡಳು. ಎಡ ಮಂಡಿ ಮೇಲೇರಿ ಕೆಳಗಿಳಿಯಿತು. ಬಲಗೈ ಆತುರದಲ್ಲಿ ಅತ್ತಿತ್ತ ಸರಿದಾಡಿತು. ಅವನು ಜಾಗೃತಗೊಂಡ. “ನೂಕ್ತೀನಿ ಇರು” ಅಂದ. ಅವಳ ಮುಖದ ತುಂಬಾ ಸಂಕೋಚ ತುಂಬಿಕೊಂಡಿತು. ಗೊಂಬೆಯಂತೆ ನಿಶ್ಚಲಗೊಂಡು ಅವನನ್ನೇ ನೋಡಿದಳು. “ಇದೆಲ್ಲ ಆಗೋವಂಥದ್ದೇ. ಇದಕ್ಕೇಕೆ ಇಷ್ಟು ಸಂಕೋಚ ಮಾಡ್ಕೊಳ್ತೀಯ? ಇಲ್ಲೇ ಆದದ್ದು ಎಷ್ಟು ಒಳ್ಳೇದಾಯ್ತು ನೋಡು. ನಾನಿದೀನಲ್ಲ” ಎಂದು ಆಶ್ವಾಸನೆಯ ದನಿಯಲ್ಲಿ ಪಟಪಟ ಹೇಳಿದ. ಉತ್ತರಕ್ಕೆ ಕಾಯದೆ ವಾಹನದ ಹಿಂದಕ್ಕೆ ಜಿಗಿದ.
ಅವನು ನಾಲ್ಕೇ ಹೆಜ್ಜೆ ಮುಂದೆ ಸರಿದಿದ್ದ, ಅವಳ ವಾಹನ ಎಚ್ಚರಗೊಂಡು ಊಂ ಊಂ ಎಂದು ಮೊರೆದು ಸಣ್ಣಗೆ ಮೈಯಲುಗಿಸಿತು.
ಮುಖದ ತುಂಬಾ ಸಮಾಧಾನದ ಸೌಮ್ಯ ನಗು ತುಂಬಿಕೊಂಡು ತನ್ನ ಮುಂದೆ ಬಂದು ನಿಂತ ಅವನತ್ತ ಅವಳು ನೂರೊಂದು ಭಾವ ತುಂಬಿದ ಕಿರುನಗೆ ಬೀರಿದಳು. ಅವನು ಅದೇ ನಗುಮುಖವನ್ನು ಮುಂದೆ ತಂದು, “ಕಥೆ? ಕಥೆ!’’ ಅಂದ. ಇನ್ನಷ್ಟು ಬಾಗಿ, “ಮರೀಬೇಡಾ” ಎಂದು ಅವಳಿಗಷ್ಟೇ ಕೇಳುವಂತೆ ಪಿಸುಗಿದ. ಅವಳು ನಕ್ಕುಬಿಟ್ಟಳು.
ವಾಹನ ಬೇಕೋ ಬೇಡವೋ ಎನ್ನುವಂತೆ ಮುಂದೆ ಸರಿಯಿತು. ಆಗಲೂ ಅವಳ ಮುಖದಲ್ಲಿ ನಗು ತುಂಬಿಕೊಂಡೇ ಇರುವುದು ಅವನಿಗೆ ಕಂಡಿತು. ತನ್ನೀ ನಗೆ ಬಹಳ ದಿನಗಳ ನಂತರ ಬಂದ ನಿರಾಳ ನಗೆ ಎಂದು ಅವಳು ಅಂದುಕೊಳ್ಳುತ್ತಿದ್ದಳು.
ತನಗೇ ಕಾದಿದ್ದಂತೆ ಮಿನುಗಿದ ಹಸಿರು ದೀಪಕ್ಕೆ ಥ್ಯಾಂಕ್ಸ್ ಹೇಳುತ್ತಲೇ ಬಲಕ್ಕೆ ಹೊರಳುತ್ತ ಅವಳೊಮ್ಮೆ ಅರೆಕ್ಷಣ ಕಣ್ಣುಗಳನ್ನು ಇನ್ನಷ್ಟು ಬಲಕ್ಕೆ ಹೊರಳಿಸಿದಾಗ ಅವನು ಇತ್ತಲೇ ನೋಡುತ್ತ ನಿಶ್ಚಲನಾಗಿ ನಿಂತಿರುವುದನ್ನು ಕಂಡಳು.
ಮನೆಗೆಲಸದ ಮಣಿ ತೆರೆದ ಗೇಟ್ನೊಳಗೆ ವಾಹನ ಕೊಂಡೊಯ್ದು ಅದರ ಸ್ಥಾನಕ್ಕೆ ಸೇರಿಸಿದಳು ಅವಳು. ಗೇಟ್ ಮುಚ್ಚಿ ಬಂದ ಮಣಿ, “ರಶ್ಮಿ ಪಾಪು ಬಂದಿದಾಳೆ. ಜೊತೆಗೆ ಯಜಮಾನರೂ. ಅಣ್ಣ ಸಹಾ ಈಗ ತಾನೆ ಬಂದ್ರು. ಎಲ್ರೂ ನಿಮಗಾಗಿ ಕಾಯ್ತಾ ಇದಾರೆ. ನಾನು ಸ್ಟೌ ಮೇಲೆ ಹಾಲಿಟ್ಟಿದೀನಿ” ಎನ್ನುತ್ತ ಒಳಗೆ ಓಡಿದಳು
ಅವಳಿಗೆ ಅವನು ನೆನಪಾದ. ಅವನ ಹಿಂದೆಯೇ, ‘ನಮ್ಮನ್ನು ಕಥೆಗಾರರನ್ನಾಗಿಸುವುದು ನಾವು ಓದಿದ ಪುಸ್ತಕಗಳಲ್ಲ, ನಾವು ಸಾಗಿಸುವ ಬದುಕು’ ಎಂಬ ಕಥೆಗಾರ್ತಿ-ಅಧ್ಯಾಪಕಿ ಬರೆದಿದ್ದ, ಅವಳಿಗೆ ಮರೆತೇಹೋಗಿದ್ದ ವಾಕ್ಯವೂ ನೆನಪಿಗೆ ಬಂತು.
ತಕ್ಷಣ ಕೆಳಗಿಳಿಯಬೇಕು ಅನಿಸಲಿಲ್ಲ. ಸುಮ್ಮನೆ ಕಣ್ಣುಮುಚ್ಚಿ ಗೊಂಬೆಯಂತೆ ಕುಳಿತಳು. ನಿಮಿಷದ ನಂತರ ಏಕಾಏಕಿ ಕಣ್ಣು ತೆರೆದು, ಅವನಿನ್ನೂ ಹಿಂದೆ ಕುಳಿತಿದ್ದಾನೇನೋ ಎನ್ನುವಂತೆ ಸರಕ್ಕನೆ ಹಿಂದೆ ಹೊರಳಿದಳು.
ಅಲ್ಲಿ ಅವನಿರಲಿಲ್ಲ. ಸೀಟ್ ಮೇಲೆ ಏನೋ ಇತ್ತು.
ಕುತೂಹಲದಿಂದ ಕಣ್ಣರಳಿಸಿ ಇನ್ನಷ್ಟು ಹಿಂದೆ ಬಾಗಿದಳು.
ಅದೊಂದು ನೋಟ್ಬುಕ್. ಒಳಗೇನೋ ಇಟ್ಟುಕೊಂಡಿರುವಂತೆ ಅದು ತುಸು ಉಬ್ಬಿಕೊಂಡಿತ್ತು. ಎಡಗೈ ಚಾಚಿ ಅದನ್ನೆತ್ತಿಕೊಂಡಳು. ತೊಡೆಯ ಮೇಲಿಟ್ಟುಕೊಂಡು ಬಿಡಿಸಿದಳು.
ದಪ್ಪನೆಯ ಶರೀರದ ನೀಲಿಬಣ್ಣದ ಪೆನ್ನು ಅಲ್ಲಿ ಮುಗ್ಧವಾಗಿ ಮಲಗಿಕೊಂಡಿತ್ತು.
ಅವಳು ಶಿಲೆಯಾದಳು.
ಮುಂದಿನ ಕ್ಷಣದಲ್ಲಿ ಅವಳಲ್ಲಿ ಜೀವಸಂಚಾರವಾಯಿತು. ಒಮ್ಮೆ ಜೋರಾಗಿ ಬಿಕ್ಕಿದಳು. ಮುಂದಿನ ಕ್ಷಣದಲ್ಲಿ ಬೊಗಸೆಯಲ್ಲಿ ಮುಖ ಮುಚ್ಚಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದಳು. ಬೆರಳುಗಳ ನಡುವಿನಿಂದ ಇಳಿದ ದಪ್ಪ ದಪ್ಪ ಕಣ್ಣೀರಹನಿಗಳು ತೆರೆದ ನೋಟ್ಬುಕ್ನ ಮೇಲೆ ನಿಶ್ಶಬ್ದವಾಗಿ ಉದುರುತ್ತ ಖಾಲಿ ಹಾಳೆಗಳನ್ನು ತೋಯಿಸತೊಡಗಿದವು.
* * *