ನೆನಪುಗಳ ಕೊಳಕ್ಕೆ ಕಲ್ಲು ಹಾಕಿದಾಗ ಹುಟ್ಟಿದ ಅಲೆಗಳು ರೇಖಾಳ ಸಹಿಷ್ಣುತೆಯ ಮಟ್ಟವನ್ನು ಮೀರಿ ಅವಳನ್ನು ದುರ್ಬಲವಾಗಿಸತೊಡಗಿದವು. ಕಾಲೇಜ್ ಕ್ಯಾಂಟೀನಿನಲ್ಲಿ ಎಲ್ಲರೆದುರೇ “ನಿಂಗೆ ನನ್ನನ್ನ ಕಂಡ್ರೆ ಇಷ್ಟಾನಾ ಇಲ್ವಾ ಅಂತ ಕ್ಲಿಯರ್ ಆಗಿ ಹೇಳ್ಬಿಡು” ಎಂದು ವಿಕಾಸ ಪ್ರೇಮನಿವೇದನೆ ಮಾಡಿದ್ದು, ಅಪ್ಪ-ಅಮ್ಮ ಇಲ್ಲದೋಳು ಎಂದು ತನ್ನ ತಂದೆತಾಯಿ ಕಡೆಗಣಿಸಿದಾಗ ಅವರ ಜೊತೆಗೇ ಮಾತುಬಿಟ್ಟು ಹಠ ಹಿಡಿದು ನನ್ನನ್ನು ಮದುವೆ ಮಾಡಿಕೊಂಡಿದ್ದು, ಅವನಿಗೆ ಇಷ್ಟವಿಲ್ಲದಿದ್ದರೂ ಈ ಅಪಾರ್ಟ್ಮೆಂಟಿಗೆ ನನ್ನೊಂದಿಗೆ ಬಂದಿದ್ದು – ಎಲ್ಲವನ್ನೂ ಒಂದೊಂದಾಗಿ ವಿವರವಾಗಿ ಟೈಪಿಸುತ್ತಾ ಹೋದಂತೆ ಅವಳಿಗೆ ಮತ್ತೊಮ್ಮೆ ವಿಕಾಸನ ಮೇಲೆ ಪ್ರೀತಿ ಹುಟ್ಟಿ ತನ್ನದೇ ತಪ್ಪೇನೋ ಎನ್ನಿಸಿ ಮನಸ್ಸು ಹುಳ್ಳಗಾಗಿ ಕಂಗಳು ತುಂಬಿಕೊಂಡವು. ಅದಕ್ಕೇ ಆ ಫೈಲನ್ನು ತೆರೆಯುವುದೆಂದರೆ ಅವಳಿಗೆ ಸಿಕ್ಕಾಪಟ್ಟೆ ಭಯವಾಗುತ್ತದೆ. ಅದಕ್ಕೆ ಪ್ರತೀ ಬಾರಿ ಅವಳು ಒಂದು ಸಮಜಾಯಿಷಿಯನ್ನೂ ಬಲವಾದ ಕಾರಣವನ್ನೂ ಹುಡುಕಿಕೊಳ್ಳಬೇಕು.
ಇಲ್ಲ ಮೇಡಂ, ನಿಜಾನೇ ಹೇಳ್ತಿದೀನಿ, ಅದದೇ ಬಟ್ಟೇಲಿ ಒರ್ಸಿದ್ರೆ ನಮ್ ಮನೆದೇವ್ರು ಮಾದಪ್ಪ ನಾನ್ ತಿನ್ನೋ ಅನ್ನಾನ ಹುಳ ಮಾಡಕಿಲ್ವಾ? ಎಲ್ಲಾ ಬಟ್ಟೇನೂ ಒಣಗ್ ಹಾಕಿದೀನಿ ಅಲ್ಲಿ, ಬನ್ನಿ ಬೇಕಾದ್ರೆ ತೋರಿಸ್ತೀನಿ, ಎಷ್ಟು ಇದಾವೆ ಅಂತ ನೀವೇ ಲೆಕ್ಕ ಹಾಕ್ಕೊಳಿ” ಎಂದು ದೈನ್ಯವಾದ ಧ್ವನಿ ಮತ್ತು ಹಾವಭಾವದಲ್ಲಿ ನಾಗರಾಜ ಅಲವತ್ತುಕೊಳ್ಳುತ್ತಿದ್ದ. ಸದ್ಯಕ್ಕೆ ಆಗಿರುವ ಗೀರು ಸಣ್ಣದಾಗಿದ್ದರಿಂದಲೂ, ಇನ್ನರ್ಧ ಘಂಟೆಯಲ್ಲಿ ಲಾಯರ್ ಜೊತೆಗೆ ಭೇಟಿ ನಿಗದಿಯಾಗಿದ್ದರಿಂದಲೂ, ನಾಗರಾಜ ಬಟ್ಟೆಗಳನ್ನು ಒಣಗಿ ಹಾಕುವ ಜಾಗ ಎರಡನೇ ಬೇಸ್ಮೆಂಟಿನ ಮೂಲೆಯಲ್ಲಿ ವಾಸನೆ ಹೊಡೆಯುವ ಕರಾಳ ಜಾಗವಾಗಿದ್ದರಿಂದಲೂ ರೇಖಾ “ಇನ್ನೊಂದ್ಸಲ ಆದ್ರೆ ಕಮಿಟೀ ಮುಂದೆ ಹೇಳ್ಬೇಕಾಗುತ್ತೆ” ಎಂದು ಹೇಳಿ ನಾಗರಾಜ ಸಮಾಧಾನದಿಂದ ಹೊಡೆದ ಸಲಾಮನ್ನೂ ಗಮನಿಸದೇ ಧಡಾರೆಂದು ಬಾಗಿಲನ್ನು ಎಳೆದುಕೊಂಡು ನಾಗರಾಜನನ್ನು ದಾಟಿಕೊಂಡು ಕಾರಿಡಾರಿನಲ್ಲಿ ನಡೆದು ಲಿಫ್ಟಿನ ಒಳಗೆ ಹೋಗಿ ‘ಬೇಸ್ಮೆಂಟ್-1’ ಎನ್ನುವ ಬಟನ್ನನ್ನು ಒತ್ತಿದಳು. ನಾಗರಾಜನಿಗೆ ತನ್ನ ಜೊತೆಗೇ ಲಿಫ್ಟಿನಲ್ಲಿ ಬರಲು ಹಿಂಜರಿಕೆಯಾಗಿ ತಾನು ಹೋದ ಮೇಲೆ ಮತ್ತೊಮ್ಮೆ ಬಟನ್ ಒತ್ತಿ, ಕಾದು ಇನ್ನೊಂದು ಲಿಫ್ಟಿನಲ್ಲಿ ಬರುತ್ತಾನೆ ಎಂದು ರೇಖಾಳಿಗೆ ಗೊತ್ತು. ಬೇರೆ ದಿನವಾದರೆ “ನೀನೂ ಬಾ ಇದ್ರಲ್ಲಿ ಸುಮ್ನೇ” ಎಂದು ಗದರಿ ಅವನನ್ನೂ ಒಳಗೆ ಕರೆಯುತ್ತಿದ್ದಳು. ಆದರೆ ಲಾಯರ್ ವೈಷ್ಣವಿಯ ಭಯ ಅವಳ ಮಾಮೂಲಿ ಆಲೋಚನಾ ಲಹರಿಯನ್ನು ಮೀರಿಸಿದ್ದರಿಂದ ಲೋಕದ ವ್ಯವಹಾರಗಳಲ್ಲಿ ಆ ಒಂದಷ್ಟು ಹೊತ್ತಿನ ಮಟ್ಟಿಗೆ ಗಮನ ಕಳೆದುಕೊಳ್ಳುವುದು ಅವಳಿಗೆ ಅನಿವಾರ್ಯವಾಗಿತ್ತು.
“ಡೊಮೆಸ್ಟಿಕ್ ವಯಲೆನ್ಸ್ ಹಾಕೋದ್ ಬೇಡ ಅಂದ್ರಿ, ಕೇಸ್ ಅರ್ಧ ವೀಕ್ ಆಯ್ತು, ನಿಮ್ಗೆ ಗೊತ್ತು ತಾನೇ? ಮಗೂದು ಕಸ್ಟಡಿ ಕೇಳಿದಾರೆ ಅವ್ರು. ಗಂಡ ಮಗೂನ ಸಾಕೋಕ್ ರೆಡಿ ಇದಾನೆ ಅಂದ್ರೆ ಅವ್ರಿಗೆ ಆಟೋಮ್ಯಾಟಿಕಲಿ ಅಡ್ವಾಂಟೇಜ್, ಸೋ ನಮ್ ಕಡೆಯಿಂದ ರಿಪ್ಲೈ ತುಂಬಾ ಸ್ಟ್ರಾಂಗ್ ಇರ್ಬೇಕು… ಅದು ಬಿಡಿ, ಎಸ್ಸೇ ಬರೀರಿ ಅಂದಿದ್ನಲ್ಲ, ಇನ್ನೂ ಯಾಕ್ ಬರ್ದಿಲ್ಲ? ರೇಖಾ ಲೆಟ್ ಮಿ ಕ್ಲಾರಿಫೈ ಒನ್ ತಿಂಗ್ ಟು ಯೂ, ನಿಮ್ಗೆ ನಿಮ್ ಗಂಡನ್ ಮೇಲೆ ಸಿಟ್ಟಿದ್ಯೋ ಇಲ್ವೋ ನಂಗೊತ್ತಿಲ್ಲ, ಆದ್ರೆ ನನ್ ಕೇಸಲ್ಲಿ ಯಾರೋ ಒಬ್ರಿಗೆ ಸರಿಯಾಗಿ ಕಾಂಪೆನ್ಸೇಷನ್ ಕೊಡಿಸ್ಲಿಲ್ಲ ಅಂದ್ರೆ ನನ್ ಟ್ರಾಕ್ ರೆಕಾರ್ಡ್ ಹಾಳಾಗುತ್ತೆ. ಸೋ ನೀವು ಸ್ವಲ್ಪ ಸ್ಟಬ್ಬರ್ನ್ ಆಗ್ತೀರಾ ಅಂದ್ರೆ ಮಾತ್ರ ನಾನು ಮುಂದುವರಿಸ್ತೀನಿ. ಇಲ್ಲ ಅಂದ್ರೆ ಯಾರಾದ್ರೂ ಸಣ್ಪುಟ್ ಲಾಯರ್ನ ಹಿಡ್ಕೊಂಡು ಮ್ಯೂಚುವಲ್ ಮಾಡ್ಕೊಳಿ.” ಲಾಯರ್ ವೈಷ್ಣವಿ ಸ್ಫುಟವಾಗಿ, ಸ್ಪಷ್ಟವಾಗಿ ತನ್ನ ಕಣ್ಣುಗಳನ್ನೇ ನೋಡುತ್ತಾ ವಾಗ್ಝರಿಯನ್ನು ಹರಿಸುತ್ತಿದ್ದರೆ ರೇಖಾಗೆ ತಾನು ಹೆದರಿಕೊಳ್ಳುತ್ತಿದ್ದೇನೋ ಅಥವಾ ಮಂತ್ರಮುಗ್ಧಳಾಗುತ್ತಿದ್ದೇನೋ ಎಂಬ ಅನುಮಾನ ಮೂಡುತ್ತಿತ್ತು. ತಾನು ವೈಷ್ಣವಿಯ ಬಳಿಗೆ ಬಂದದ್ದೇ ಇದಕ್ಕಲ್ಲವೇ? ಬೇರೆ ಲಾಯರುಗಳ ಎದುರು ಕೂತಾಗ ಅವರ ಮಾತುಗಳಲ್ಲಿ ‘ಎಷ್ಟಾದರೂ ನೀವು ನಮಗೆ ಅನ್ನ ಕೊಡುವ ಧಣಿ, ನಿಮಗೇನು ಬೇಕೋ ಹಾಗೆ ಮಾಡೋಣ’ ಎನ್ನುವಂತಹ ನಾಗರಾಜನ ದೈನ್ಯತೆ ಕಾಣಿಸುತ್ತಿತ್ತು. ಅದೇ ವೈಷ್ಣವಿಯ ಮಾತುಗಳಲ್ಲಿ ಒಂದು ಧಾಷ್ಟ್ರ್ಯ ಇದೆ, ಅದೇ ಎಷ್ಟು ಬಾರಿ ಅವಳಿಂದ ಬೈಸಿಕೊಂಡರೂ, ‘ಎಷ್ಟು ಗಾಂಚಲಿ ಆ ಯಮ್ಮಂಗೆ’ ಎಂದು ನಾನೇ ಬೈದುಕೊಂಡರೂ ಮತ್ತೆ ಅವಳ ಬಳಿಯೇ ಹೋಗುವಂತೆ ಮಾಡಿರುವುದು. ನಮ್ಮನ್ನು ಕಾಪಾಡಲೆಂದೋ, ಆಳಲೆಂದೋ ನಾವು ಆರಿಸಿಕೊಳ್ಳುವವರು ನಮ್ಮ ಮೇಲೆ ನಮಗೇ ಗೊತ್ತಿಲ್ಲದಂತೆ ಹಿಡಿತ ಸಾಧಿಸಬೇಕೆಂದು ನಾವು ಬಯಸುತ್ತೇವೆ ಅನ್ನಿಸುತ್ತದೆ. ಬಹುಶಃ ಆಕರ್ಷಕವಾಗಿ ಮೋಸಹೋಗಲು ಬಯಸುವುದೇ ಮಾನವರ ಮೂಲಭೂತ ಗುಣವೇನೋ. ನನಗೂ ನಾಗರಾಜನಂತೆ ದೈನ್ಯವಾಗಿ ಎದುರು ನಿಂತು ಪ್ರೀತಿಯನ್ನು ನಿವೇದಿಸಿಕೊಂಡವರು ಎಷ್ಟು ಜನ ಇದ್ದರು? ತಾನು ವಿಕಾಸನನ್ನು ಇಷ್ಟಪಟ್ಟಿದ್ದೂ ಅವನ ಗಡಸುತನ, ‘ನೀನು ನನ್ನ ಸ್ವತ್ತು’ ಎಂಬ ಅವನ ಅಧಿಕಾರಯುತ ನಡವಳಿಕೆಯಿಂದಲೇ ಅಲ್ಲವೆ? ಹಾಗಾದರೆ ಈಗಲೂ ಅವನನ್ನು ಸಹಿಸಿಕೊಳ್ಳಬೇಕಿತ್ತಾ? ಛೇ ಛೇ ಒಬ್ಬನ ಐಬುಗಳನ್ನು ಸಹಿಸಿಕೊಂಡು ಇಷ್ಟಪಟ್ಟ ಮಾತ್ರಕ್ಕೆ ತನ್ನ ಸಂಪೂರ್ಣ ಲಗಾಮು ಅವನ ಕೈಗೆ ಕೊಟ್ಟೆ ಎಂದರ್ಥವಲ್ಲ. ತನ್ನ ನಿರ್ಧಾರ ಸರಿಯಾಗಿಯೇ ಇದೆಯಲ್ಲವೆ?… ಕಾರು ಡೆಲ್ಲಿ ಪಬ್ಲಿಕ್ ಸ್ಕೂಲಿನ ಎದುರು ಬಂದು ನಿಂತಿತ್ತು. ಶಾಲೆಯ ಹಿಂದಿನ ಗೇಟಿನ ಬಳಿ ಈ ಆಲದಮರದ ಕೆಳಗೆ ಕಾರು ನಿಲ್ಲಿಸಿಕೊಂಡು ಒಳಗೇ ಕೂತು ಕಾಯುವುದು ರೇಖಾಳಿಗೆ ಆರಾಮದಾಯಕ. ಆದರೆ ಬೆಲ್ಲು ಹೊಡೆದು ಬ್ಯಾಗೆತ್ತಿಕೊಂಡು ಹೊರಗೆ ಬಂದ ತಕ್ಷಣ ಪ್ರಣವನಿಗೆ ಅಮ್ಮ ಕ್ಲಾಸುರೂಮಿನ ಎದುರಿನ ಕಾರಿಡಾರಿನಲ್ಲಿಯೇ ನಿಂತಿರಬೇಕು, ಇಲ್ಲದಿದ್ದರೆ ಕಣ್ಣೀರಧಾರೆ ಶುರುವಾಗುತ್ತದೆ. ತನಗೆ ವಿಕಾಸನ ಮೇಲೆ ಎಷ್ಟೇ ದ್ವೇಷವಿದ್ದರೂ ಈ ಪ್ರಣವ ವಿಕಾಸನಂತೆ ಆತ್ಮವಿಶ್ವಾಸಿಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆಗಾಗ ರೇಖಾಳಿಗೆ ಅನ್ನಿಸುತ್ತಿತ್ತು. ಇತರ ಸಹಪಾಠಿಗಳ ಜೊತೆಗೆ ಮಾತನಾಡಲು ಭಯ, ಅಳುಮುಂಜಿತನ – ಇವೆಲ್ಲ ಗುಣಗಳು ನನ್ನಿಂದ ಅವನಿಗೆ ದಾಟಿಕೊಂಡುಬಿಟ್ಟಿವೆ. ಹಾಗಾದರೆ ಇವನ ಒಳ್ಳೆಯದಕ್ಕಾಗಿಯಾದರೂ ಇವನನ್ನು ವಿಕಾಸನ ಸುಪರ್ದಿಗೆ ಒಪ್ಪಿಸಿಬಿಡಲಾ? ರೇಖಾಳ ಲಹರಿಯನ್ನು ಶಾಲೆಯ ಘಂಟೆಯ ಸದ್ದು ಮುರಿಯಿತು.
“ಮತ್ತೆ ಮತ್ತೆ ಕೇಳ್ಬೇಡ ಅಮ್ಮಾ, ನಾನ್ ನಿನ್ ಜೊತೇನೇ ಇರ್ತೀನಿ” ಪ್ರಣವ ಖಡಕ್ಕಾಗಿ ಉತ್ತರಿಸಿ ಮುಖ ಆ ಕಡೆ ತಿರುಗಿಸಿಕೊಂಡು ಕೂತ. ಸಂಜೆಯ ಟ್ರಾಫಿಕ್ಕು ಆಗಲೇ ರಸ್ತೆಯನ್ನು ಅಲಂಕರಿಸಿತ್ತು. “ಜಾಸ್ತಿ ರೊಮ್ಯಾಂಟಿಕ್ ಆಗ್ ಮಾತಾಡಕ್ ಬರಲ್ಲ ನಂಗೆ. ಆದ್ರೆ ಕೊನೇವರೆಗೂ ನಿನ್ ಜೊತೆ ಇರ್ತೀನಿ”. ಹೌದು, ಇದೇ ಮಾತು! ಇದೇ ರೀತಿ ಕಾರಿನಲ್ಲಿ ಕುಳಿತಾಗ ವಿಕಾಸ ನನಗೆ ಹೇಳಿದ್ದು! ಅವತ್ತೂ ಇದೇ ರೀತಿ ಟ್ರಾಫಿಕ್ ಇತ್ತಲ್ಲವೆ? ಟ್ರಾಫಿಕ್ಕಿಗೆ ಇರುವಷ್ಟು ಬದ್ಧತೆ, ದೀರ್ಘಾಯುಷ್ಯ ಮಾತುಗಳಿಗೂ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಹಾಗಾದರೆ ನನಗೆ ವಿಕಾಸನ ಮೇಲೆ ಈಗಲೂ ಪ್ರೀತಿಯಿದೆಯೇ? ಅವನು ವಾಪಸ್ ಬಂದು ಮತ್ತೊಮ್ಮೆ ಕೊನೆಯವರೆಗೂ ನಿನ್ನ ಜೊತೆಗೇ ಇರುತ್ತೀನಿ ಎಂದರೆ ಮತ್ತೆ ನಂಬುತ್ತೇನೆಯೆ? ಹಿಂದಿನವನ ಹಾರ್ನ್ ಸದ್ದಿನಿಂದ ಎಚ್ಚರಾಗಿ ರೇಖಾ ಆಕ್ಸಲರೇಟರ್ ಒತ್ತಿದಳು. ನೂರೈವತ್ತು-ಇನ್ನೂರು ಕಿಲೋಮೀಟರ್ ವೇಗದಲ್ಲಿ ಸಾಗಲೆಂದು ತಯಾರಿಸಿದ ಅತ್ಯಾಧುನಿಕ ಕಾರುಗಳು ಬಸವನಹುಳುಗಳಂತೆ ಹತ್ತು-ಹದಿನೈದು ಕಿಲೋಮೀಟರ್ ವೇಗದಲ್ಲಿ ತೆವಳುತ್ತಿದ್ದವು. ಸೀಟನ್ನು ಹಿಂದೆ ಜಾರಿಸಿ ಒರಗಿಕೊಂಡಿದ್ದ ಪ್ರಣವನಿಗೆ ನಿಧಾನಕ್ಕೆ ನಿದ್ರೆ ಆವರಿಸುತ್ತಿತ್ತು. ಅಷ್ಟಕ್ಕೂ ನಮ್ಮ ಸಂಸಾರವೂ ಹೀಗೆಯೇ ಇಳಿಸಂಜೆಯ ಜೊಂಪಿನಂತೆ ಚೆನ್ನಾಗಿಯೇ ಸಾಗುತ್ತಿತ್ತಲ್ಲವೆ?
ಆ ಮ್ಯೂಚುವಲ್ ಫಂಡಿನ ನಿಯಮಾವಳಿಗಳು ಸಾಕಷ್ಟು ಅನುಮಾನಾಸ್ಪದವಾಗಿದ್ದವು. ತೀರಾ ಹಾಕುವುದಾದರೆ ಕೊಂಚ ಮೊತ್ತವನ್ನು ಮಾತ್ರ ಹಾಕಿ ನೋಡೋಣ ಎಂದೆ. ಅದು ಸಂಸಾರದಲ್ಲಿಯೇ ಬಿರುಕು ಬರುವಂತಹಾ ಮಾತಾಗಿತ್ತೆ? ವಿಷಯ ಸಣ್ಣದೇ, ಆದರೆ ಸಾಸಿವೆಯಂತೆ ಸಿಡಿಯಿತು. “ಈ ದುಡ್ಡಿನ್ ವಿಷಯ ಎಲ್ಲಾ ನಿಂಗೇನು ಗೊತ್ತು? ಅಕೌಂಟಿಗ್ ಸಂಬ್ಳ ಬಂದ್ ಬಿದ್ ತಕ್ಷಣ ನೀನೇನ್ ಫೈನಾನ್ಸ್ ಮಿನಿಸ್ಟರ್ ಆಗ್ಬಿಡಲ್ಲ, ಸುಮ್ನಿರು” ಎನ್ನುವಲ್ಲಿಂದ ಶುರುವಾಗಿ ಕೊನೆಗೆ “ನಿಂಗೆ ಕೆಲಸ ಕೊಡ್ಸಿದ್ದೇ ನಾನು. ನನ್ ಇನ್ಫ್ಲುಯೆನ್ಸ್ ಇಲ್ದೇ ಇದ್ದಿದ್ರೆ ಬರೀ ಹೌಸ್ವೈಫ್ ಆಗಿ ಪಾತ್ರೆ ತೊಳ್ಕೊಂಡಿರ್ತಿದ್ದೆ” ಎನ್ನುವಲ್ಲಿಗೆ ಬಂದು ನಿಂತಿತು. ಈ ಮಾತುಗಳು ಇವೆಯಲ್ಲಾ, ಅವು ಬಲವಾಗಿ ಮುಷ್ಟಿ ಕಟ್ಟಿ ಹೊಡೆಯುವ ಹೊಡೆತಗಳಂತೆ. ಎಷ್ಟೋ ಬಾರಿ ಹೊರಗೆ ಅದರ ಪ್ರಭಾವ ಕಾಣುವುದಿಲ್ಲ, ಆದರೆ ಒಳಗೆ ಗುಣವಾಗದ ದೊಡ್ಡ ಗಾಯಗಳಾಗಿಬಿಟ್ಟಿರುತ್ತವೆ. ಅದಾದ ಮೇಲೆ ಇಬ್ಬರೂ ಒಟ್ಟಿಗೆ ಯಾವ ವಿಷಯಕ್ಕೂ ಅಸ್ತು ಎನ್ನಲಿಲ್ಲ. ನಿನ್ನ ಋಣದಿಂದ ಸಿಕ್ಕಿದ್ದೇ ಹೌದಾದರೆ ನನಗದು ಬೇಡ ಎಂದು ಬೇರೆ ಕೆಲಸಕ್ಕೆ ಸೇರಿದೆ. ಮನೆಗೆ ಮುಂಗಡ ಹಣವನ್ನು ಕೊಟ್ಟಿದ್ದವಳು ನಾನು. ಯಾವುದೋ ಸಿಟ್ಟಿನಲ್ಲಿ “ಬರೀ ನಿನ್ನಿಂದಾನೇ ನಾನ್ ಬದುಕ್ತಿದೀನಿ ಅನ್ನೋ ಥರಾ ಮಾತಾಡ್ಬೇಡ ವಿಕಾಸ್, ಈ ಮನೆ ಅಡ್ವಾನ್ಸ್ ಕೊಟ್ಟಿರೋಳು ನಾನು. ನಿಂಗೆ ಮನೆ ಬಿಟ್ ಹೋಗು ಅಂತ ಹೇಳಿದ್ರೆ ನಿಂಗೆ ಸಿಟ್ ಬರಲ್ವಾ?” ಎಂದೆ. ವಿಕಾಸ್ ಯಲಹಂಕಕ್ಕೆ ಅವರ ಅಪ್ಪನ ಮನೆಗೆ ಹೋಗಿಯೇಬಿಟ್ಟ. ಆದರೂ ಹೊರಡುವಾಗ ಅವನಿಗೆ ಅವನ ಬಟ್ಟೆಗಳೇ ಎಲ್ಲಿವೆ ಎಂದು ಗೊತ್ತಾಗದೇ ಸೂಟ್ಕೇಸ್ ತುಂಬಿಸಲು ನನ್ನ ಸಹಾಯ ಬೇಕಾಯಿತು ಎನ್ನುವುದು ಈಗಲೂ ನನಗೆ ಒಂದು ಬಗೆಯ ಜಂಭವನ್ನು ತರುತ್ತದೆ ಅಲ್ಲವೆ? ಕಾರು ಗುಂಪಿನಿಂದ ಆಚೆ ಬಂದು ಗೋಲ್ಡನ್ ಲೇಕ್ ಅಪಾರ್ಟ್ಮೆಂಟಿನತ್ತ ಹೋಗುವ ಇಳಿಜಾರಿಗೆ ಬಂದಿತು.
ಮುಳುಗುವ ಸೂರ್ಯ ಕೊನೆಯ ಪ್ರಖರ ಕಿರಣಗಳನ್ನು ನೇರವಾಗಿ ಕಾರಿನ ವಿಂಡ್ಶೀಲ್ಡಿನ ಮೇಲೆ ರಾಚುತ್ತಿದ್ದ. ಆ ಬೆಳಕಿನಲ್ಲಿ ರೇಖಾಳಿಗೆ ಬೆಳಗ್ಗೆ ಕಾಣಿಸದಿದ್ದ ಗೀರು ಕಾಣಿಸಿತು. ಸರಿಯಾಗಿ ಪ್ರಣವನ ಎದುರುಗಡೆ ಭಾಗದಲ್ಲಿ ಗಾಜಿನ ಮೇಲೆ ಕೊಂಚ ಉದ್ದವೇ ಎನ್ನಬಹುದಾದ ಗೀರು ಸ್ಥಾನ ಪಡೆದಿತ್ತು. ಈ ಸ್ಕ್ರ್ಯಾಚು ಇಷ್ಟು ದೊಡ್ಡದಿತ್ತೆಂದು ಅವಳಿಗೆ ಬೆಳಗ್ಗೆ ಅರಿವಿಗೆ ಬಂದಿರಲಿಲ್ಲ. ಕಾಣಿಸಿದ್ದರೆ ನಾಗರಾಜನ ಮೇಲೆ ಮತ್ತೊಮ್ಮೆ ಸಿಟ್ಟು ಉಕ್ಕುತ್ತಿತ್ತೇನೋ. ಆದರೆ ಈಗ ವಾಪಸ್ ಬರುತ್ತಿದ್ದಾಳಲ್ಲ. ಮನೆಗೆ ಹತ್ತಿರ ಬರುತ್ತಿದ್ದಂತೆಯೇ ರೇಖಾಳಿಗೆ ಯಾವಾಗಲೂ ಒಂದು ಬಗೆಯ ಖುಷಿ. ಅದು ವಿಕಾಸ ಅವಳ ಕೈಯಲ್ಲಿ ಕಸಿದುಕೊಳ್ಳಲಾಗದ ಅಸ್ಮಿತೆ. ಒಂದರ ಮೇಲೊಂದು ಸುತ್ತು ಹೊಡೆಯುತ್ತಾ ಪಾತಾಳಕ್ಕೆ ಇಳಿಯುವ ರಿಂಗ್ ಬಾವಿಯಂತೆ ಆ ಅಪಾರ್ಟ್ಮೆಂಟು ಸುತ್ತಮುತ್ತಲಿನ ಭೂಮಟ್ಟಕ್ಕಿಂತ ಸಾಕಷ್ಟು ಕೆಳಗೆ ಹೊಂಡದಲ್ಲಿದ್ದಂತೆ ಇದೆ. ದೂರದಿಂದ ನೋಡಿದರೆ ಗುಂಡಿಯಲ್ಲಿ ಹಾಕಿಟ್ಟ ಕಾಂಕ್ರೀಟಿನ ಬೀಜ ಮೊಳೆತು ಮರವಾಗಿ ಕಟ್ಟಡವಾದಂತೆ ಭಾಸವಾಗುತ್ತದೆ. ವಿಕಾಸನಿಗೆ ಈ ಮನೆ ಇಷ್ಟವೇ ಇರಲಿಲ್ಲ. ನನಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ವಿಕಾಸ ಎಲ್ಲರಿಗೂ ಕಾಣುವಂತೆ ಬದುಕುವ ಬಹಿರ್ಮುಖಿ. ತಾನು ಹೆಚ್ಚಾಗಿ ಅವಿತುಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದ ಅಂತರ್ಮುಖಿ. ಬಹುಶಃ ನಾವಿಬ್ಬರೂ ಒಂದಾಗಿದ್ದಿದ್ದೇ ತಪ್ಪಾಯಿತು ಎಂದು ರೇಖಾಗೆ ಅನ್ನಿಸಿತು. ಹಾಗನ್ನಿಸಿದ ತಕ್ಷಣ ಈಗಿರುವುದೇ ಆರಾಮ ಎಂದೂ ಸಮಾಧಾನವಾಯಿತು. ಗೊರಕೆ ಹೊಡೆಯುತ್ತಿದ್ದ ಪ್ರಣವನ ಬಾಯಿಯಲ್ಲಿ ಬಂದಿದ್ದ ಜೊಲ್ಲನ್ನು ಪ್ರೀತಿಯಿಂದ ಒರೆಸಿದಳು. ಪ್ರಣವ ಸಣ್ಣದಾಗಿ ಕಣ್ಣುಬಿಟ್ಟು ‘ಬ್ಲಾಕ್ ಹೋಲ್’ ಬಂತಾ ಎಂದು ಕನವರಿಸಿ ಅಮ್ಮನತ್ತ ಒಮ್ಮೆ ನೋಡಿ “ಅಮ್ಮಾ ಇಲ್ಲೇ ಮಲಗಿರ್ತೀನಿ, ರಾತ್ರಿ ಊಟದ್ ಟೈಮಿಗ್ ಎದ್ ಬರ್ತೀನಿ ಪ್ಲೀಸ್” ಎಂದ. ಕಾರಿನ ಸೀಟನ್ನು ಹಿಂದೆ ಆನಿಸಿ ಮಲಗುವುದು ಪ್ರಣವನಿಗೆ ಅತ್ಯಂತ ಖುಷಿ ಕೊಡುವ ವಿಷಯ. ಎಷ್ಟೋ ಬಾರಿ ಮಗ ಮನೆಯಲ್ಲಿ ಕಾಣದೇ ಗಾಬರಿಯಾಗಿ ಕೊನೆಗೆ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಕಾರಿನೊಳಗೆ ಮಲಗಿದ್ದನ್ನು ಕಂಡು ಸರಿಯಾಗಿ ಬಾರಿಸಿರುವ ರೇಖಾಳಿಗೆ ಅವನ ಆ ವಿಚಿತ್ರ ನಡವಳಿಕೆ ಅರ್ಥವಾಗುವುದಿಲ್ಲ. ಗಡಸು ಧ್ವನಿಯಲ್ಲಿ “ಬೇಡ” ಎಂದಳು. ಅದನ್ನು ಮೀರಿ ತಾನೆಷ್ಟು ಅಂಗಲಾಚಿದರೂ ಅವಳ ನಿರ್ಧಾರ ಬದಲಾಗುವುದಿಲ್ಲ ಎಂದು ಗೊತ್ತಿದ್ದ ಪ್ರಣವ ಹತ್ತಿರಾಗುತ್ತಿದ್ದ ಅಪಾರ್ಟ್ಮೆಂಟಿನ ಕಡೆಗೆ ನೋಡಿ “ನಮ್ ಬಿಲ್ಡಿಂಗ್ ಯಾಕೋ ಒಂಚೂರ್ ವಾಲ್ಕೊಂಡಿದೆ” ಎಂದ. ರೇಖಾ ಆನಿಸಿಕೊಂಡಿದ್ದ ಅವನ ಸೀಟನ್ನು ಬಟನ್ ಒತ್ತಿ ಮೇಲೆತ್ತುತ್ತಾ “ಜಗತ್ತೆಲ್ಲ ವಾಲ್ಕೊಂಡಂಗ್ ಕಾಣ್ತಾ ಇದೆ ಅಂದ್ರೆ ನಾವೊಂಚೂರ್ ನೇರ ಆಗ್ಬೇಕು ಅಂತ ಅರ್ಥ” ಎಂದಳು.
ಕಮಿಟಿ ಮೀಟಿಂಗು ಎಂದರೆ ತಮ್ಮ ಬದುಕು ಎಷ್ಟು ಸಹಿಸಲಸಾಧ್ಯವಾಗುತ್ತಿದೆ ಮತ್ತು ಅದಕ್ಕೆ ನಮಗಿಂತ ಕೆಳಗಿರುವವರು ಹೇಗೆಲ್ಲ ಕಾರಣ ಎಂದು ಬಗೆಬಗೆಯಲ್ಲಿ ದೂರುಗಳನ್ನು ಹೇಳಲು ಅಪಾರ್ಟ್ಮೆಂಟಿನ ಮಹಾಜನತೆಯೆಲ್ಲ ಒಂದೆಡೆ ಸೇರುವ ಸಭೆ. ನಾಗರಾಜ ಬೆಳಗ್ಗೆ ತನ್ನೆದುರು ನಿಂತಿದ್ದಕ್ಕಿಂತ ದೈನ್ಯನಾಗಿ, ಸ್ಟಾಫ್ ರೂಮಿನಲ್ಲಿ ನಡುಗುತ್ತಾ ನಿಂತಿರುವ ಸ್ಕೂಲು ಹುಡುಗನಂತೆ ಮಧ್ಯದಲ್ಲಿ ನಿಂತಿದ್ದ. ‘ಡಿ’ ಬ್ಲಾಕಿನಲ್ಲಿ ಅವನ ಸುಪರ್ದಿಗೆ ತಮ್ಮ ವಾಹನಗಳ ಸ್ವಚ್ಛತೆಯನ್ನು ಒಪ್ಪಿಸಿದವರೆಲ್ಲರೂ ಅವನ ಮೇಲೆ ಒಂದೇ ಸಲಕ್ಕೆ ಹರಿಹಾಯುತ್ತಿದ್ದರು. ಎಲ್ಲರದ್ದೂ ಒಂದೇ ದೂರು, ನಾಗರಾಜ ಒಂದೇ ಬಟ್ಟೆಯಲ್ಲಿ ಎಲ್ಲಾ ಗಾಡಿಗಳನ್ನೂ ಒರೆಸುತ್ತಾನೆ, ಹಾಗಾಗಿ ಎಲ್ಲರ ಕಾರಿನ ಗಾಜುಗಳ ಮೇಲೂ ಗೀರುಗಳಾಗಿವೆ ಎಂದು. ನಾಗರಾಜ ತಾನು ಇನ್ನೆಷ್ಟು ಅಳುಮುಖ ಮಾಡಿದರೆ ತನ್ನನ್ನು ಮುಂಚಿನಂತೆಯೇ ಕನಿಕರದ ಆಧಾರದ ಮೇಲೆ ಬಿಟ್ಟುಬಿಡುತ್ತಾರೆ ಎಂದು ಮುಖದ ನೆರಿಗೆಗಳನ್ನು ಅತ್ತಿತ್ತ ಆಡಿಸುತ್ತಾ ಲೆಕ್ಕ ಹಾಕುತ್ತಿದ್ದ. “ರಘುನಾಥ್ ಅವ್ರು ಯುಎಸ್ ಇಂದ ವಾಪಸ್ ಬರೋವರ್ಗೂ ಮೇಂಟೇನೆನ್ಸ್ ಡಿವಿಷನ್ನಿಗೆ ರೇಖಾ ಅವ್ರೇ ಸ್ಟ್ಯಾಂಡ್-ಬೈ ಪ್ರೆಸಿಡೆಂಟು, ಅವ್ರೇ ಒಂದ್ ಡಿಸಿಷನ್ ತಗೋಬೇಕು” ಎಂದು ಬೆಂಕಿಚೆಂಡನ್ನು ತನ್ನ ಕೈಗೆ ಹಾಕಿ ಎಲ್ಲರೂ ಪಿಳಿಪಿಳಿ ಕಣ್ಣು ಬಿಡುತ್ತಾ ತನ್ನ ಆಜ್ಞೆಗೆ ಕಾಯಲು ಕೂತಾಗ ರೇಖಾಗೆ ಒಮ್ಮೆಗೇ ಗಾಬರಿಯಾಯಿತು. ಉಪಾಧ್ಯಕ್ಷೆ ಎಂದರೆ ಅಧ್ಯಕ್ಷ ಹೇಳಿದ್ದಕ್ಕೆಲ್ಲಾ ಹೂಂ ಎನ್ನುವುದಷ್ಟೇ ಎಂದುಕೊಂಡು ನೆಮ್ಮದಿಯಾಗಿದ್ದ ಅವಳಿಗೆ ಈ ಜವಾಬ್ದಾರಿಯನ್ನು ಇದ್ದಕ್ಕಿದ್ದಂತೆ ಹೇಗೆ ತೆಗೆದುಕೊಳ್ಳುವುದು ಎಂದು ಗೊಂದಲವಾಯಿತು. ಎರಡು ಕ್ಷಣ ಯೋಚಿಸಿ, ತಲೆ ಕೆರೆದುಕೊಂಡು, ಮುಂಗುರುಳನ್ನು ಹಿಂದೆ ಸರಿಸಿ, ಸೀರೆ ಸೆರಗು ಸರಿ ಮಾಡಿಕೊಂಡು, ಮೂರ್ನಾಲ್ಕು ಬಾರಿ ಕೆಮ್ಮಿ, ಅತ್ತಿತ್ತ ತಿರುಗಿ ಕೊನೆಗೆ ಇದಾಗಿದ್ದಲ್ಲ ಎಂದು ನಾಗರಾಜನತ್ತ ಒಮ್ಮೆ ನೋಡಿದಳು. ಅವನು “ಹೇಗಾದ್ರೂ ಮಾಡಿ ಇದೊಂದು ಸಲ ಬಚಾವು ಮಾಡಿ ಮೇಡಂ” ಎನ್ನುವಂತೆ ಅವಳತ್ತಲೇ ನೋಡುತ್ತಿದ್ದ. ಕೊನೆಗೂ ಗಟ್ಟಿ ಧ್ವನಿಯಲ್ಲಿ “ಅವನು ಸದ್ಯಕ್ಕೆ ಸುಮಾರು ಮೂವತ್ತೈದು ಕಾರು ವಾಶ್ ಮಾಡ್ತಿದಾನೆ. ಅಷ್ಟೊಂದು ಬಟ್ಟೆ ತಗೊಳ್ಳಕ್ಕೆ ಫೈನಾನ್ಷಿಯಲ್ ಇಶ್ಯೂ ಇರ್ಬೋದು. ಈ ಸಲ ಹೆಂಗಿದ್ರೂ ಕಮ್ಯುನಿಟಿ ಡೇ ಲಿ ಎಂಟ್ರೀಸ್ ಕಮ್ಮಿ ಇರೋದ್ರಿಂದ ಸ್ಪೋಟ್ರ್ಸ್ ಆಡಿಸ್ತಿಲ್ಲ, ಆ ಫಂಡಲ್ಲಿ ಒಂದಷ್ಟು ಮೈಕ್ರೋಫೈಬರ್ ಬಟ್ಟೆ ತಂದ್ಕೊಟ್ರೆ ಆಯ್ತು” ಎಂದು ಉಚ್ಚರಿಸಿದಳು. ಕಪ್ತಾನ ಹೇಳಿದ್ದನ್ನು ಕೇಳಿದ ತಕ್ಷಣ ಇಡೀ ತಂಡ ಹೂಂಗುಡುವಂತೆ ಎಲ್ಲರೂ ಆಯ್ತಾಯ್ತೆಂದರು. ಎದುರು ಮನೆ ಗಾಯತ್ರಿ ಮಾತ್ರ “ಎಲ್ಲಾ ಬೇರೆ ಬೇರೆ ಕಲರ್ದು ಇರ್ಲಿ, ಇಲ್ಲ ಅಂದ್ರೆ ಅದ್ರಲ್ಲೂ ಮೋಸ ಮಾಡ್ತಾನೆ” ಎಂದು ಒಮ್ಮೆ ಒದರಿದರು. ಇಷ್ಟು ಚಿಕ್ಕ ಪರಿಹಾರವನ್ನು ತೆಗೆದುಕೊಳ್ಳುವುದಕ್ಕೆ ಇಷ್ಟು ಸಮಯ ಬೇಕಾಯಿತೆ? ಬಹುಶಃ ರಸ್ತೆಯಲ್ಲಿ ಗುಂಡಿಗಳು ಸಿಕ್ಕಾಗ ಇದನ್ನು ಮುಚ್ಚುವುದಕ್ಕೆ ಎಷ್ಟು ದಿನ ಬೇಕು ಎಂದು ಬೈದುಕೊಳ್ಳುತ್ತೀವಲ್ಲ, ಅದರದ್ದೂ ಇದೇ ಕಥೆ ಏನೋ. ಗುಂಡಿಗೆ ಟಾರ್ ಹಾಕಿದರೆ ಮುಗಿಯಿತು. ಆದರೆ ಅದಕ್ಕೆಂದು ನೂರಿಪ್ಪತ್ತು ಸಭೆಗಳನ್ನು ಕರೆದು ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡುತ್ತಾರೇನೋ. ಇಲ್ಲೂ ಅಷ್ಟೇ, ಗಾಜು ಸ್ಕ್ರ್ಯಾಚ್ ಆಗುತ್ತಿದೆ ಎಂದು ಅರಚುತ್ತಿರುವವರೆಲ್ಲರೂ ಅವರದ್ದೇ ಮನೆಯಿಂದ ಒಂದೊಂದು ಪ್ರತ್ಯೇಕ ಬಟ್ಟೆಯನ್ನು ಅವನಿಗೆ ಕೊಟ್ಟುಬಿಟ್ಟಿದ್ದರೆ ಸಮಸ್ಯೆ ಹುಟ್ಟುತ್ತಲೇ ಇರಲಿಲ್ಲ ಅಲ್ಲವೇ? ಅಂತೂ ಇಂತೂ ದೊಡ್ಡದೊಂದು ಜ್ವಾಲಾಮುಖಿಯ ಬಾಯಿಗೆ ತಾತ್ಕಾಲಿಕವಾಗಿ ಕಲ್ಲುಬಂಡೆ ಮುಚ್ಚಿದ ಸಮಾಧಾನದಲ್ಲಿ ರೇಖಾ ಮನೆಗೆ ಬರುವಷ್ಟರಲ್ಲಿ ಪ್ರಣವ ನಿದ್ರಾದೇವಿಯ ಜೊತೆಗೆ ಸಖ್ಯದಲ್ಲಿದ್ದ. ನಿಧಾನಕ್ಕೆ ಬೇಕೋ ಬೇಡವೋ ಎಂಬಂತೆ ರೈಟಿಂಗ್ ಟೇಬಲ್ ಬಳಿ ಬಂದು ಕೂತ ರೇಖಾ ಮನಸ್ಸಿಲ್ಲದ ಮನಸ್ಸಿನಲ್ಲಿ ಲ್ಯಾಪ್ಟಾಪ್ ತೆರೆದು ‘ಮೈ ಡೇಸ್ ವಿತ್ ವಿಕಾಸ್’ ಎಂದು ಹೆಸರು ಕೊಟ್ಟಿದ್ದ ವರ್ಡ್ಫೈಲನ್ನು ಓಪನ್ ಮಾಡಿದಳು.
ಸಿಕ್ಕಾಪಟ್ಟೆ ದೊಡ್ಡ ಅಪಘಾತಗಳಾದಾಗ ಆ ಕ್ಷಣದಲ್ಲಿ ದೇಹಕ್ಕೆ ನೋವು ಅರಿವಿಗೆ ಬರುವುದಿಲ್ಲವಂತೆ. ನಿಧಾನಕ್ಕೆ ಒಂದೆರಡು ದಿನಗಳಾದ ಮೇಲೆ ಸ್ಪಂದನಶಕ್ತಿ ಚೂರುಚೂರೇ ವಾಪಸ್ ಬಂದಾಗ ಅಪಘಾತದ ಆ ಕ್ಷಣವನ್ನು ನೆನೆಸಿಕೊಳ್ಳುತ್ತಾ ನೋವು ಇಡೀ ದೇಹವನ್ನೇ ನುಂಗುವಂತೆ ವ್ಯಾಪಿಸಿಕೊಳ್ಳುತ್ತದೆಯಂತೆ. ವಿಕಾಸನ ಕಡೆಯಿಂದ ಡೈವೋರ್ಸ್ ನೋಟಿಸ್ ಬಂದಾಗ ಒಂದು ಸಲಕ್ಕೆ ರೇಖಾಳಿಗೆ ಅಷ್ಟೇನೂ ಬೇಸರವೋ, ದುಗುಡವೋ ಆಗಿರಲಿಲ್ಲ. “ರೇಖಾ ಎಂಬ ಹೆಸರಿನ ಈ ಸಂಬಂಧಪಟ್ಟವರು ನನ್ನ ಕಕ್ಷೀದಾರರನ್ನು ಮದುವೆಯಾಗುವ ಸಮಯದಲ್ಲಿಯೇ ತಂದೆ-ತಾಯಿ ಯಾರೂ ಇಲ್ಲದ ಅನಾಥೆಯಾಗಿದ್ದು, ನಂತರದಲ್ಲಿಯೂ ಸ್ವತಃ ಕೆಲಸ ಮಾಡುತ್ತಿದ್ದರೂ ಆರ್ಥಿಕವಾಗಿ ಬಹುತೇಕ ನನ್ನ ಕಕ್ಷೀದಾರರ ಮೇಲೆ ಅವಲಂಬಿತರಾಗಿದ್ದರಿಂದ ಅವರಿಗೆ ಈ ಸಮಯದಲ್ಲಿ ಮಗುವಿನ ಪಾಲನೆ-ಪೋಷಣೆ ಮಾಡುವಷ್ಟು ಸಾಮಥ್ರ್ಯ ಇಲ್ಲವೆಂಬುದನ್ನು ಗಮನಿಸಿ ಮಗುವನ್ನು ಸಂಪೂರ್ಣವಾಗಿ ತಂದೆಯ ಸುಪರ್ದಿಗೆ ಒಪ್ಪಿಸಬೇಕೆಂದು ಕೂಡಾ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ. ರೇಖಾ ಎಂಬ ಸಂಬಂಧಪಟ್ಟವರಿಗೆ ಪರಸ್ಪರ ಒಪ್ಪಿಗೆಯಾಗುವ ಮೊತ್ತವನ್ನು ಜೀವನಾಂಶ ಎಂದು ಕೊಡಲು ನನ್ನ ಕಕ್ಷೀದಾರರಿಗೆ ಯಾವುದೇ ಅಭ್ಯಂತರವಿಲ್ಲ” ಎಂಬುದನ್ನು ಓದಿದಾಗಲೂ ಅಷ್ಟೊಂದೇನೂ ಅವಳು ಅಧೀರಳಾಗಿರಲಿಲ್ಲ. ಹಾಗೆ ನೋಡಿದರೆ ಅತೀವವಾಗಿ ಸಿಟ್ಟುಗೊಂಡು ಪ್ರಸಿದ್ಧ ಲಾಯರ್ ವೈಷ್ಣವಿಯ ಬಳಿಗೆ ಹೋಗಿ “ಅವನ ಅಪ್ಪ-ಅಮ್ಮಂಗೆ ಇವ್ನೊಬ್ನೇ ಮೊಮ್ಮಗ ಅಂತೆ. ಅದ್ಕೇ ಅವ್ರಿಗೇ ಬೇಕಂತೆ ಇವ್ನು, ನಂಗೇನು ನೂರೈವತ್ತು ಜನ ಮಕ್ಳಿದಾರಾ?… ನಂಗ್ ಅವನ ದುಡ್ಡು ಒಂದು ರೂಪಾಯೀನೂ ಬೇಡ. ಆದ್ರೆ ನನ್ ಮಗ ನಂಗ್ ಬೇಕು. ಅದಕ್ಕಿಂತಾ ಮುಖ್ಯ ನಂಗೆ ಅವನು ಮತ್ತೆ ಮತ್ತೆ ಅವಮಾನ ಮಾಡಿದಾನೆ. ಅದಕ್ಕೋಸ್ಕರಾನಾದ್ರೂ ಅವನನ್ನ ಕೋರ್ಟಿಗೆ ಎಳೀಬೇಕು. ಅವ್ನು ಎಲ್ಲಾರ ಎದ್ರುಗಡೆ ನಂಗೆ ಸಾರಿ ಕೇಳ್ಬೇಕು” ಎಂದು ಕಿರುಚುವ ಧ್ವನಿಯಲ್ಲೇ ಮನವಿ ಮಾಡಿದ್ದಳು. ಆದರೆ ಯಾವಾಗ ವೈಷ್ಣವಿ “ಡಾಕ್ಯುಮೆಂಟೇಷನ್ ಎಲ್ಲಾ ನಂಗ್ ಬಿಡಿ, ಸದ್ಯಕ್ಕೆ ನೀವು ಮಾಡ್ಬೇಕಾಗಿರೋದು ಒಂದೇ ಕೆಲಸ, ನೀವು ವಿಕಾಸನ್ನ ಫಸ್ಟ್ ಮೀಟ್ ಮಾಡ್ದಾಗಿಂದ ಹಿಡ್ದು ಇಲ್ಲೀವರೆಗೆ ನಿಮ್ಮಿಬ್ರ ಮಧ್ಯೆ ಏನೇನಾಗಿದೆ, ಏನೇನ್ ಇಂಪಾರ್ಟೆಂಟ್ ಮೊಮೆಂಟ್ಸ್ ಇದೆ ಎಲ್ಲಾವ್ದನ್ನೂ ನೆನಪು ಮಾಡ್ಕೊಂಡು ಒಂದು ಪ್ರಬಂಧ ಬರೀರಿ, ಅದ್ರಲ್ಲಿ ಡಿವೋರ್ಸ್ಗೆ ನಿಮ್ಮ ರೀಸನ್ ಕೂಡಾ ಕ್ಲಿಯರ್ ಆಗಿ ಮೆನ್ಷನ್ ಆಗ್ಬೇಕು” ಎಂದು ತಾಕೀತು ಮಾಡಿದರೋ ಅಲ್ಲಿಂದ ರೇಖಾಳಿಗೆ ಸಮಸ್ಯೆ ಶುರುವಾಯಿತು.
ನೆನಪುಗಳ ಕೊಳಕ್ಕೆ ಕಲ್ಲು ಹಾಕಿದಾಗ ಹುಟ್ಟಿದ ಅಲೆಗಳು ರೇಖಾಳ ಸಹಿಷ್ಣುತೆಯ ಮಟ್ಟವನ್ನು ಮೀರಿ ಅವಳನ್ನು ದುರ್ಬಲವಾಗಿಸತೊಡಗಿದವು. ಕಾಲೇಜ್ ಕ್ಯಾಂಟೀನಿನಲ್ಲಿ ಎಲ್ಲರೆದುರೇ “ನಿಂಗೆ ನನ್ನನ್ನ ಕಂಡ್ರೆ ಇಷ್ಟಾನಾ ಇಲ್ವಾ ಅಂತ ಕ್ಲಿಯರ್ ಆಗಿ ಹೇಳ್ಬಿಡು” ಎಂದು ವಿಕಾಸ ಪ್ರೇಮನಿವೇದನೆ ಮಾಡಿದ್ದು, ಅಪ್ಪ-ಅಮ್ಮ ಇಲ್ಲದೋಳು ಎಂದು ತನ್ನ ತಂದೆತಾಯಿ ಕಡೆಗಣಿಸಿದಾಗ ಅವರ ಜೊತೆಗೇ ಮಾತುಬಿಟ್ಟು ಹಠ ಹಿಡಿದು ನನ್ನನ್ನು ಮದುವೆ ಮಾಡಿಕೊಂಡಿದ್ದು, ಅವನಿಗೆ ಇಷ್ಟವಿಲ್ಲದಿದ್ದರೂ ಈ ಅಪಾರ್ಟ್ಮೆಂಟಿಗೆ ನನ್ನೊಂದಿಗೆ ಬಂದಿದ್ದು – ಎಲ್ಲವನ್ನೂ ಒಂದೊಂದಾಗಿ ವಿವರವಾಗಿ ಟೈಪಿಸುತ್ತಾ ಹೋದಂತೆ ಅವಳಿಗೆ ಮತ್ತೊಮ್ಮೆ ವಿಕಾಸನ ಮೇಲೆ ಪ್ರೀತಿ ಹುಟ್ಟಿ ತನ್ನದೇ ತಪ್ಪೇನೋ ಎನ್ನಿಸಿ ಮನಸ್ಸು ಹುಳ್ಳಗಾಗಿ ಕಂಗಳು ತುಂಬಿಕೊಂಡವು. ಅದಕ್ಕೇ ಆ ಫೈಲನ್ನು ತೆರೆಯುವುದೆಂದರೆ ಅವಳಿಗೆ ಸಿಕ್ಕಾಪಟ್ಟೆ ಭಯವಾಗುತ್ತದೆ. ಅದಕ್ಕೆ ಪ್ರತೀ ಬಾರಿ ಅವಳು ಒಂದು ಸಮಜಾಯಿಷಿಯನ್ನೂ ಬಲವಾದ ಕಾರಣವನ್ನೂ ಹುಡುಕಿಕೊಳ್ಳಬೇಕು. ಇವನ ಕಂಪನಿಯಲ್ಲೇ ನನಗೇನೋ ಕೆಲಸ ಕೊಡಿಸಿದ ಸರಿ, ಆದರೆ ನಾನು ಯಾವತ್ತಿಗೂ ಅವನಿಗಿಂತ ಒಳ್ಳೆಯ ಕೆಲಸಗಾರ್ತಿ ಎನ್ನುವುದು ಅವನಿಗೂ ಗೊತ್ತಿತ್ತು. ಸಹಜವಾಗಿಯೇ ನನಗೆ ವಿದೇಶಕ್ಕೆ ಹೋಗಲು ಅವಕಾಶ ಸಿಕ್ಕಿದಾಗ ಅವನ ಬೇಸರದ ಬೇರೆ ಬೇರೆ ಅಭಿವ್ಯಕ್ತಿಗಳನ್ನು ತಾಳಲಾರದೇ ತಾನೇ ಅವಕಾಶವನ್ನು ತಿರಸ್ಕರಿಸಲಿಲ್ಲವೆ? ಅವನಿಗಾಗಿ ನನ್ನ ವೃತ್ತಿಜೀವನದ ಔನ್ನತ್ಯವನ್ನೇ ಬದಿಗೊತ್ತಿದೆ, ನನ್ನ ಅರ್ಹತೆಗಿಂತ ಅತೀ ಕಡಮೆ ಸಂಬಳದಲ್ಲಿಯೇ ಉಳಿದುಕೊಂಡೆ. ಅವನು ಮಾತ್ರ ದೆಹಲಿಗೆ ಹೋಗುವ ಅವಕಾಶ ಸಿಕ್ಕಾಗ ಹೇಳದೇ ಕೇಳದೇ ಆರು ತಿಂಗಳು ಹೋಗಿಯೇಬಿಟ್ಟ. ಇಂತಹ ಕೆಟ್ಟ ವ್ಯಕ್ತಿಯ ಬಗ್ಗೆ ಮತ್ತೆ ನನಗೆ ಪ್ರೀತಿಯಾಗುವುದೆಂದರೇನು? ಸಿಟ್ಟಿನಲ್ಲಿ ಮತ್ತೆ ಟೈಪ್ ಮಾಡಲು ಶುರು ಮಾಡಿದಳು. ಮನಸ್ಸು ಅತ್ತಿತ್ತ ಹೋಗಲು ಬಿಡದಂತೆ ಒಂದೇ ಕಡೆಗೆ ಹಿಡಿದಿಟ್ಟು ಬರೆದಳು. ಪ್ರಣವ ಹುಟ್ಟಿದ ಸಮಯದಲ್ಲಿ ಅತ್ತೆ-ಮಾವ ಎಷ್ಟು ಚೆನ್ನಾಗಿ ತನ್ನನ್ನು ನೋಡಿಕೊಂಡಿದ್ದರು ಎಂದು ಬರೆಯುವಾಗ ಕೊಂಚ ಕಂಗಳು ತುಂಬಿದರೂ ಮನೆ ಬಿಟ್ಟು ಹೋದ ನಂತರ ವಿಕಾಸ ಕರೆ ಮಾಡಿದಾಗ “ಅಪ್ಪ-ಅಮ್ಮನ್ ಜೊತೆ ಬೆಳ್ದಿದ್ರೆ ಈ ಬುದ್ಧಿ ಬರ್ತಿರ್ಲಿಲ್ಲ” ಎಂದು ಅವರಿಬ್ಬರ ಗೊಣಗಾಟ ಕೇಳಿದ್ದು ನೆನಪಾಗಿ ಕಣ್ಣೀರು ಕಣ್ಣೊಳಗೇ ಒಣಗಿತು. ಇಪ್ಪತ್ತೈದು ಪುಟಗಳ ಜೀವನ ಚರಿತ್ರೆ ಬರೆದು ಮುಗಿಸಿದ ಮೇಲೆ ದೇಹ, ಮನಸ್ಸು ಎರಡೂ ಹಗುರವೆನ್ನಿಸಿತು. ಒಮ್ಮೆ ಏದುಸಿರು ಬಿಟ್ಟು ಖುಷಿಯಲ್ಲಿ ಅಮೆಜಾನ್ ತೆರೆದು, ಸರ್ಚ್ ಮಾಡುವ ಜಾಗದಲ್ಲಿ ‘ಮೈಕ್ರೋಫೈಬರ್ಸ್’ ಎಂದು ಟೈಪ್ ಮಾಡಿದಳು.
ಎರಡನೇ ಬೇಸ್ಮೆಂಟಿನ ಮೂಲೆಯೊಂದರಲ್ಲಿ ನಾಗರಾಜನ ಸಂಸಾರ ನೆಲೆಯಾಗಿತ್ತು. ಬೂಸಲು ಬಂದಿದ್ದ ಮೂರ್ನಾಲ್ಕು ಬೆಡ್ಡುಗಳು, ಒಂದಷ್ಟು ಹರಕಲು ಬೆಡ್ಶೀಟುಗಳು, ಒಂದಷ್ಟು ಸಣ್ಣ ಪಾತ್ರೆಗಳು, ಸಣ್ಣದೊಂದು ಸ್ಟವ್, ಒಬ್ಬಳು ಹೆಂಡತಿ, ಐದು ಜನ ಮಕ್ಕಳು – ಇವಿಷ್ಟೂ ಆ ಕರಾಳ ಜಾಗದಲ್ಲಿ ಬದುಕಿನ ಬೆಳಕಿಗಾಗಿ ಬಹುಶಃ ತವಕಿಸುತ್ತಾ ಉಸಿರಾಡುತ್ತಿದ್ದವು. ಮೈಕ್ರೋಫೈಬರ್ ಬಟ್ಟೆಗಳನ್ನು ಎಂದಿನಂತೆ ದೈನ್ಯವಾಗಿ ಪ್ರಸಾದದಂತೆ ಪಡೆದುಕೊಂಡ ನಾಗರಾಜ ಅದರ ಜೊತೆಗೆ ಒಂದಿಷ್ಟು ಚಿಲ್ಲರೆ ಕಾಸು ಸಿಗಬಹುದೇನೋ ಎಂಬಂತೆ ನನ್ನತ್ತ ನೋಡಿದ. ವಿಕಾಸನಿಗೆ ಇಂಥವರ ನೆರಳು ಕಂಡರೂ ಆಗುತ್ತಿರಲಿಲ್ಲ. ಎಲ್ಲರೊಂದಿಗೂ ಒಂದೇ ರೀತಿ ನಡೆದುಕೊಳ್ಳದವರು ಒಳ್ಳೆಯವರಾಗುವುದು ಸಾಧ್ಯವೇ ಇಲ್ಲ ಅಲ್ಲವೆ? ವಿಕಾಸ ಕೆಟ್ಟವನು! ಅದೇ ನನಗೆ ಮೊದಲಿನಿಂದಲೂ ಸಮಾಜಸೇವೆಯ ಹಂಬಲ ಜಾಸ್ತಿ. ಸರಿಯಾಗಿ ಕಾರು ಒರಸದೇ ಎಲ್ಲರ ಬಳಿಯಲ್ಲೂ ಬೈಸಿಕೊಳ್ಳುತ್ತಿದ್ದ ನಾಗರಾಜನಿಗೂ ತಾನು ಪ್ರತೀ ತಿಂಗಳು ಒಂದು ಸಾವಿರ ರೂಪಾಯಿ ಸುಮ್ಮನೇ ದಾನ ಮಾಡುತ್ತಿರಲಿಲ್ಲವೆ? ಹಾಗೆ ನೋಡಿದರೆ ಕಮಿಟಿ ರೂಲ್ಸ್ ಪ್ರಕಾರ ಹೀಗೆ ಬೇಸ್ಮೆಂಟಿನಲ್ಲೆಲ್ಲ ಯಾರನ್ನೂ ಇರಗೊಡುವಂತಿಲ್ಲ. ಅವನ ಪರವಾಗಿ ಮನ ಮಿಡಿಯುವಂತೆ ವಾದ ಮಾಡಿ ಈ ಅದ್ಭುತ ಜಾಗವನ್ನು ಅವನ ವಾಸ್ತವ್ಯಕ್ಕೆ ಕೊಡಿಸಿದವಳೇ ನಾನಲ್ಲವೆ? ಈಗ ಡಿವೋರ್ಸ್ ಕೆಲಸ ಶುರುವಾದ ಮೇಲೆ ಮುಂದಿನ ಭವಿಷ್ಯದ ಭಯದಲ್ಲಿ ಎಲ್ಲಾ ಕಡೆಯೂ ದುಡ್ಡು ಮಿಗಿಸುವುದು ಶುರುವಾಗಿ ನಾಗರಾಜನಿಗೆ ತಿಂಗಳ ಬಿಟ್ಟಿ ಭಕ್ಷೀಸೂ ನಿಂತು ಹೋಗಿತ್ತು. ಅವನೂ ಯಾವ ಆಧಾರದ ಮೇಲೆ ಕೇಳುವುದೆಂದು ಇಷ್ಟು ದಿನ ಸುಮ್ಮನಾಗಿದ್ದನೆಂದು ಕಾಣುತ್ತದೆ. ಪರ್ಸಿನಿಂದ ಐನೂರು ರೂಪಾಯಿ ತೆಗೆದು ಕೊಟ್ಟು “ಒಂದೊಂದ್ ಕಾರಿಗೆ ಒಂದೊಂದ್ ಬಟ್ಟೆ ಅಂತ ಇಟ್ಕೊಂಬಿಡು, ಮತ್ತೆ ಪ್ರಾಬ್ಲಂ ಆದ್ರೆ ನಿನ್ನನ್ನ ಇಲ್ಲಿಂದ ಓಡಿಸ್ತಾರೆ. ಇರಕ್ ಒಂದ್ ಗೂಡು ಸಿಕ್ಕಿದೆ, ಇಲ್ಲಿಲ್ಲ ಅಂದ್ರೆ ಎಲ್ಲಿಗ್ ಹೋಗ್ತೀಯಾ ಆಮೇಲೆ?” ಎಂದು ಒಮ್ಮೆ ಅವನ ಕಂಗಳು ಭಯದಲ್ಲಿ ದೊಡ್ಡವಾಗುವಂತೆ ಹೆದರಿಸಿ ಅಲ್ಲಿಂದ ಹೊರಟ ರೇಖಾ ಲಿಫ್ಟ್ ಕಡೆಗೆ ನಡೆದಳು. ಅಕ್ಕಪಕ್ಕ ಕಣ್ಣು ಹಾಯಿಸಿದಾಗ ಅವಳ ಗಮನಕ್ಕೆ ಬಂದ ಅಂಶವೆಂದರೆ ಎಲ್ಲ ಕಾರುಗಳ ಮೇಲೂ ಗೀರುಗಳಿದ್ದವು. ಕೆಲವು ಸಣ್ಣವು, ಕೆಲವು ಘನವಾದವು. ಒಟ್ಟಿನಲ್ಲಿ ಗೀರಿಲ್ಲದ ಕಾರಂತೂ ಅಲ್ಲಿರಲಿಲ್ಲ.
“ಇದು ಹೋಗಲ್ಲ ಮೇಡಂ, ಹೊಸಾ ವಿಂಡ್ಶೀಲ್ಡೇ ಹಾಕ್ಬೇಕು, ಐದಾರು ಕಡೆ ಸ್ಕ್ರ್ಯಾಚ್ ಆಗಿದೆ, ಹೆಂಗ್ ಓಡಿಸ್ತೀರೀ ಹಿಂಗಿಟ್ಕೊಂಡು” ಎಂದು ಗ್ಯಾರೇಜ್ ಹುಡುಗ ಹೇಳಿದಾಗ ರೇಖಾ ಮೊದಲಿಗೆ ಗಾಬರಿಯಲ್ಲಿ “ನೀನೇ ಈಗ ಎಲ್ಲೋ ಗಡಿಬಿಡೀಲಿ ಸ್ಕ್ರ್ಯಾಚ್ ಮಾಡಿರ್ಬೇಕು” ಎಂದು ಜಗಳವೇ ಆಡಿದಳು. ಆಮೇಲೆ ಅದು ಖಂಡಿತಾ ಒಪ್ಪುವಂತಹ ವಾದವಲ್ಲ ಎಂದು ಅವಳಿಗೆ ಅರ್ಥವಾದ ಮೇಲೆ “ಎಷ್ಟಾಗುತ್ತೆ?” ಎಂದು ಮೆಲ್ಲಗೆ ಕೇಳಿದಳು. ಮುಖವರಳಿಸಿದ ಗ್ಯಾರೇಜ್ ಹುಡುಗ “7500 ಆಗುತ್ತೆ ನೋಡಿ ಒಳ್ಳೇ ಕ್ವಾಲಿಟಿ, ಇನ್ನೊಂದ್ಸಲ ಸ್ಕ್ರ್ಯಾಚ್ ಆಗಲ್ಲ” ಎಂದು ಹೇಳಿ ಇನ್ನೇನು ಗ್ಲಾಸನ್ನೇ ತರಲು ಹೊರಡುವವನಿದ್ದ. ಮೊದಲಾದರೆ ‘ಹಾಕ್ಬಿಡು ಅತ್ಲಾಗೆ’ ಎಂದು ಹೇಳುವವಳಿದ್ದ ರೇಖಾ “ಇವತ್ತು ನಂದು ಪೇಮೆಂಟ್ ಕಳಿಸ್ತೀರಾ ಅಲ್ವಾ?” ಎಂಬ ವೈಷ್ಣವಿಯ ಮೆಸೇಜು ನೋಡಿದ್ದರಿಂದ “ಸದ್ಯಕ್ಕೆ ಬೇಡ ಬಿಡು” ಎಂದು ಹೇಳಿ ಅಲ್ಲಿಂದ ಹೊರಟಳು. ಅಲ್ಲಿಂದ ವೈಷ್ಣವಿಯ ಮನೆಯುದ್ದಕ್ಕೂ ಅವಳಿಗೆ ಕಾಡಿದ ಪ್ರಶ್ನೆಯೊಂದೇ, ಮೈಕ್ರೋಫೈಬರ್ ಕೊಟ್ಟಮೇಲೂ ಮತ್ತೆ ಹೇಗೆ ಸ್ಕ್ರ್ಯಾಚ್ ಆಯಿತು ಎನ್ನುವುದು. ವೈಷ್ಣವಿ ಇವಳ ಪ್ರಬಂಧವನ್ನು ನೋಡಿ “ಇದ್ದಿದ್ದನ್ನು ಇದ್ದ ಹಾಗೇ ಬರೀಬಾರ್ದು, ಸ್ವಲ್ಪ ಅಗ್ರೆಸಿವ್ ಆಗ್ಬೇಕು. ಅವ್ರೇನು ನ್ಯಾಯ ನೀತಿ ಅಂತ ಹೋಗಲ್ಲ, ಅವ್ರೂ ಚೆನಾಗೇ ಕಥೆ ಕಟ್ತಾರೆ” ಎಂದು ಗದರಿದರೂ ಸದ್ಯದ ಮಟ್ಟಿಗೆ ನಿಮ್ಮ ಕೆಲಸ ಮುಗಿಯಿತು. ಮನೆಗೆ ಮತ್ತು ಮಗನ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ನೀವು ಖರ್ಚು ಮಾಡಿದ ಹಣದ ಎಲ್ಲಾ ದಾಖಲೆ, ರಸೀದಿಗಳನ್ನು ಹುಡುಕಿ ಒಟ್ಟು ಮಾಡಿಟ್ಟುಕೊಳ್ಳಿ. ಮುಂದಿನ ಹಿಯರಿಂಗ್ ತುಂಬಾ ತಡ ಇದೆ, ಆರಾಮಾಗಿರಿ ಎಂದು ಅಭಯವನ್ನೂ ನೀಡಿದಳು. ಅವಳ ಪ್ರಕಾರ ಯಾವುದೇ ರೀತಿಯಲ್ಲೂ ವಿಕಾಸ ಈ ಕೇಸನ್ನು ಗೆಲ್ಲುವುದಂತೂ ಸಂಭವವೇ ಇಲ್ಲ. ಅವರ ಉದ್ದೇಶ ಕೇವಲ ಮತ್ತೆ ಮತ್ತೆ ಕೋರ್ಟಿಗೆ ಸುತ್ತಾಡಿಸಿ ಸುಸ್ತು ಮಾಡಿ ಕೊನೆಗೆ ರೇಖಾಳೇ “ನನ್ ಕೈಲಿ ಎಲ್ಲಾವ್ದನ್ನೂ ಮ್ಯಾನೇಜ್ ಮಾಡೋಕೆ ಆಗ್ತಾ ಇಲ್ಲ, ಪ್ರಣವನ್ನ ನೀವೇ ಇಟ್ಕೊಳಿ” ಎಂದು ಹೇಳುವ ಸ್ಥಿತಿಗೆ ತಂದಿಡುವುದು. ಹೀಗಾಗಿ ಈಗ ಮುಖ್ಯವಾಗಿ ಬೇಕಾಗಿರುವುದು ನಿಮ್ಮ ದೃಢತೆ ಮತ್ತು ತಾಳ್ಮೆ ಎಂದಿದ್ದನ್ನೇ ಮೆಲುಕು ಹಾಕುತ್ತಾ ಕೊಂಚ ಅಸಹನೆಯಲ್ಲಿಯೇ ಮನೆಯ ಕಡೆ ಗಾಡಿ ಓಡಿಸುತ್ತಿದ್ದ ರೇಖಾಳಿಗೆ “ಹೆಂಗ್ ಓಡಿಸ್ತೀರೀ ಹಿಂಗಿಟ್ಕೊಂಡು” ಎಂಬ ಗ್ಯಾರೇಜ್ ಹುಡುಗನ ಮಾತು ನೆನಪಾಗಿ ಅದು ನೆನಪಾಗಿದ್ದೇ ನೆಪವೇನೋ ಎಂಬಂತೆ ಆ ಗೀರುಗಳು ಇದ್ದಕ್ಕಿದ್ದಂತೆ ಅವಳ ಚಾಲನೆಗೆ ಹಿಂಸೆ ಕೊಡತೊಡಗಿದವು. ನಾಗರಾಜನ ಮೇಲೆ ಬಂದ ಸಿಟ್ಟಿನಲ್ಲಿ ಒಮ್ಮೆ ಹಲ್ಲನ್ನು ಕಚ್ಚಿದಳು. ಯಾಕೋ ದೂರದಿಂದ ಅವಳಿಗೂ ಆ ಕ್ಷಣಕ್ಕೆ ಅಪಾರ್ಟ್ಮೆಂಟು ಕೊಂಚ ವಾಲಿರುವಂತೆ ಕಂಡಿತು.
ರೇಖಾ ನಾಗರಾಜನಿಗೆ ಎಲ್ಲರೆದುರು ತಾರಾಮಾರು ಬೈದ ರೀತಿಗೆ ಪ್ರತೀ ಬಾರಿಯೂ ಬೈಗುಳದ ಪರವಾನಗಿ ಪಡೆದವರಂತೆ ಆಡುವ ಕಮಿಟಿಯ ಸದಸ್ಯರುಗಳೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. “ಬೇರೆ ಯಾರಾದ್ರೂ ಏಜೆನ್ಸಿಯವ್ರಿಗೆ ಹೇಳಿದ್ರಾಯ್ತು ಬಿಡಿ, ಇವ್ನಿಗೆ ಎರ್ಡು ತಿಂಗ್ಳ ಸಂಬ್ಳ ಸೇರ್ಸಿ ಕೊಟ್ಟು ಕಳ್ಸಿಬಿಡೋಣ, ಜಾಸ್ತಿ ಬೈಬೇಡಿ ಹೋಗ್ಲಿ” ಎಂದು ಮೊದಲ ಬಾರಿಗೆ ಉಳಿದವರೇ ರೇಖಾಳನ್ನು ಸಮಾಧಾನ ಮಾಡಬೇಕಾಯಿತು. ನಾಗರಾಜ ಮೈಕ್ರೋಫೈಬರ್ ಬಟ್ಟೆಗಳನ್ನು ಯಾರಿಗೋ ಮಾರಿ ಬಂದ ದುಡ್ಡಿನಲ್ಲಿ ಹೆಂಡತಿಗೆ ಒಂದು ರೋಲ್ಡ್ ಗೋಲ್ಡ್ ಸರ ಕೊಡಿಸಿದ್ದ. ಮತ್ತೆ ತನ್ನ ಹಳೇ ಬಟ್ಟೆಗಳಲ್ಲೇ ಕಾರಿನ ಗಾಜುಗಳನ್ನು ಒರೆಸಿ ಎಲ್ಲರ ಗಾಡಿಗಳನ್ನೂ ಸ್ಕ್ರ್ಯಾಚ್ ಮಾಡಿದ್ದ. ಪ್ರತೀ ಬಾರಿ ದೈನ್ಯತೆಯ ಮುಖ ಮಾಡಿ ನಿಲ್ಲುತ್ತಿದ್ದ ನಾಗರಾಜ ಅದೇಕೋ ಈ ಬಾರಿ ಗಂಭೀರವಾಗಿ ನಿಂತಿದ್ದ. ಕೊನೆಗೊಮ್ಮೆ ರೇಖಾಳ ಕಡೆಗೆ ನೋಡಿ ಒಂದು ಬಗೆಯ ನಿರ್ಲಕ್ಷ್ಯ ಮತ್ತು ಜಂಭಭರಿತ ನಗುವನ್ನು ಬೀರಿ ತನ್ನ ಗಂಟುಮೂಟೆ ಕಟ್ಟಲು ಹೊರಟುಹೋದ. ಮನೆಗೆ ಬಂದ ಅಮ್ಮ ಸಿಟ್ಟಿನಿಂದ ಧುಮುಗುಡುತ್ತಿದ್ದುದನ್ನು ಕಂಡು ಪ್ರಣವ ಹೆದರಿಕೊಂಡು ತನ್ನ ಊಟದ ತಟ್ಟೆಯನ್ನು ತಾನೇ ತೊಳೆದಿಟ್ಟು ಟಿವಿ ನೋಡದೇ ಹೋಗಿ ಮಲಗಿಕೊಂಡ.
ಮಧ್ಯರಾತ್ರಿ ರೇಖಾಳಿಗೆ ಎಚ್ಚರವಾಗಿ ಎದ್ದು ಹೊರಗೆ ಬರುವಷ್ಟರಲ್ಲಿ ಅಪಾರ್ಟ್ಮೆಂಟಿನ ಸುತ್ತಮುತ್ತ ಸಾಕಷ್ಟು ಜನ ಸರ್ಕಾರೀ ಅಧಿಕಾರಿಗಳು, ಪೊಲೀಸರು, ಫೈರ್ ಎಂಜಿನ್ನು, ದೇಹಪೂರ್ತಿ ವಿಚಿತ್ರ ಕವಚಗಳನ್ನು ತೊಟ್ಟವರು ಯಾರಾರೋ ಗಡಿಬಿಡಿಯಲ್ಲಿ ಓಡಾಡುತ್ತಿದ್ದರು. ಪ್ರತೀ ಮನೆಗೂ ಹೋಗಿ ಬೆಲ್ಲಿನ ಜೊತೆಗೆ ಬಾಗಿಲನ್ನೂ ಧಬಧಬನೇ ಒತ್ತಿ ಎಲ್ಲರನ್ನೂ ಉಟ್ಟ ಬಟ್ಟೆಯಲ್ಲಿಯೇ ಹೊರಗೆ ಕಳಿಸಲಾಗುತ್ತಿತ್ತು. ಕೆಂಡಗಣ್ಣಿನ ಅಧಿಕಾರಿಗಳಿಂದ ಹೇಗೋ ಕಣ್ಣುತಪ್ಪಿಸಿ ಪ್ರಣವನ ಶಾಲೆಯ ಬ್ಯಾಗು, ಮತ್ತೊಂದಿಷ್ಟು ಬಟ್ಟೆಗಳನ್ನು ಎತ್ತಿಕೊಂಡು ಕಾರಿನಲ್ಲಿ ಹಾಕಿಕೊಂಡು ಹೊರಗೆ ಬರುವಷ್ಟರಲ್ಲಿ ರೇಖಾಳಿಗೆ ಉಬ್ಬಸವೇ ಶುರುವಾಗಿತ್ತು. ಬೇರೆ ದೇಶದ ಸೈನ್ಯವೊಂದು ಹಠಾತ್ ದಾಳಿ ಮಾಡಿದಾಗ ದಿಕ್ಕುದೆಸೆಯಿಲ್ಲದೇ ಒಂದೆಡೆ ಗುಂಪು ಸೇರುವ ನಿರಾಶ್ರಿತರಂತೆ ಸಾವಿರಾರು ಮೇಲ್ವರ್ಗದ ಕುಟುಂಬಗಳು ಕಡುಬಡವರಂತೆ ಸಿಕ್ಕಸಿಕ್ಕದ್ದನ್ನು ಎತ್ತಿಕೊಂಡು ಹೊರಗೆ ಮೈದಾನದಲ್ಲಿ ರೋದಿಸುತ್ತಾ ನಿಂತಿದ್ದವು. ಹೆಂಗಸರು ಮತ್ತು ಮಕ್ಕಳು ಅಳುತ್ತಿದ್ದರೆ ಗಂಡಸರೆಲ್ಲ ಧುಸುಮುಸು ಮಾಡಿಕೊಂಡು ಸಿಕ್ಕಸಿಕ್ಕ ಇನ್ಶರ್ಟ್ ಅಧಿಕಾರಿಗಳಿಗೆ ಬೈಯುತ್ತಾ ಅತ್ತಿತ್ತ ಅಲೆಯುತ್ತಿದ್ದರು. ಎಲ್ಲಾ ಕಡೆ ದೊಡ್ಡ ದೊಡ್ಡ ಲೈಟುಗಳನ್ನು ಹಾಕಿದ್ದರಿಂದ ಬೆಳಕೇ ಹರಿದಿದೆಯೇನೋ ಎಂಬಷ್ಟು ಪ್ರಕಾಶ. ಗೇಟಿನ ಬಳಿ ಕಾರು ತಂದು ನಿಲ್ಲಿಸಿಕೊಂಡ ರೇಖಾಳಿಗೆ ವಿಷಯ ತಿಳಿದಾಗ ಕಾಲುಗಳು ತಣ್ಣಗಾದವು.
ಹಿಂದೆಲ್ಲೋ ಆ ಜಾಗದಲ್ಲೊಂದು ಕೆರೆ ಇತ್ತಂತೆ. ಆ ಕೆರೆಗೆ ಸಹಜವಾದ ಸಾವು ಬಂದು ನಂತರದಲ್ಲಿ ಈ ಬಿಲ್ಡಿಂಗು ಚಿಗುರಿರುವುದಲ್ಲವಂತೆ. ಕೆರೆಯ ಕುತ್ತಿಗೆಯನ್ನು ಬಲವಂತವಾಗಿ ಒತ್ತಿ ಹಿಡಿದು ಕೊಲೆ ಮಾಡಿ ಈ ಬಿಲ್ಡಿಂಗನ್ನು ನೆಟ್ಟಿರುವುದಂತೆ. ಹೀಗಾಗಿ ಮಣ್ಣಿನ ಮೇಲ್ಪದರ ಯಾವಾಗಿನಿಂದಲೋ ಸಡಿಲವಾಗುತ್ತಾ ಸಾಗಿತ್ತಂತೆ. ಬಿಲ್ಡಿಂಗಿನ ಹಿಂಭಾಗದ ನೆಲದಲ್ಲಿ ದೊಡ್ಡದಾಗಿ ಬಿರುಕು ಮೂಡಿ ಇಡೀ ಬಿಲ್ಡಿಂಗೇ ನಾಲ್ಕೂವರೆ ಡಿಗ್ರಿ ವಾಲಿತ್ತಂತೆ. ನಾಗರಾಜನ ಹೆಂಡತಿ ಗಂಟುಮೂಟೆ ಕಟ್ಟಿಕೊಂಡು ಹೊರಡುವ ಮುನ್ನ ಕಟ್ಟಡದ ಹಿಂಭಾಗದಲ್ಲಿ ಯಾವುದೋ ಕಾಲದಲ್ಲಿ ತಾನು ಕುಂಡದೊಳಗೆ ಇಟ್ಟಿದ್ದ ಮಲ್ಲಿಗೆ ಗಿಡ ಬದುಕಿದ್ದರೆ ಎತ್ತಿಕೊಂಡು ಹೋಗೋಣ ಎಂದು ಹೋದಾಗ ಬಿರುಕು ಕಾಣಿಸಿತಂತೆ. ನಾಗರಾಜ ಹೋಗುವ ಮುನ್ನ ಸೆಕ್ಯುರಿಟಿಯವನಿಗೆ ವಿಷಯ ತಿಳಿಸಿದ್ದನಂತೆ. ನಂತರ ಅದು ಸರ್ಕಾರದವರೆಗೂ ಮುಟ್ಟಿ ರಾತ್ರೋರಾತ್ರಿ ಸಂಬಂಧಪಟ್ಟವರು ಜಾಗೃತರಾಗಿ ಈಗ ಎಲ್ಲರನ್ನೂ ಅನಾಮತ್ತಾಗಿ ಎತ್ತಿ ಬಿಸಾಕಿದ್ದಾರೆ. ಕಟ್ಟಡ ಯಾವ ಕ್ಷಣದಲ್ಲಾದರೂ ಬೀಳಬಹುದಾಗಿರುವುದರಿಂದ ಸುತ್ತಮುತ್ತಲಿನ ಐನೂರು ಮೀಟರ್ವರೆಗಿನ ಜಾಗವನ್ನು ಸಂಪೂರ್ಣ ಖಾಲಿ ಮಾಡಿಸುತ್ತಿದ್ದಾರೆ. ಕೊನೇ ಕ್ಷಣದಲ್ಲಿ ಮಾಹಿತಿ ಗೊತ್ತಾಗಿರುವುದರಿಂದ ಯಾರಿಗೂ ಮನೆಯೊಳಗಿರುವ ಯಾವ ವಸ್ತುಗಳನ್ನೂ ತೆಗೆದುಕೊಂಡು ಬರಲು ಸಮಯ ಕೊಡುವಂತಹ ಸ್ಥಿತಿಯಲ್ಲಿ ಅಧಿಕಾರಿಗಳು ಇಲ್ಲ. ಹೀಗಾಗಿಯೇ ಈ ಗೊಂದಲದ ಗುಂಪು ಇಲ್ಲಿ ನೆರೆದಿದೆ.
ನಿದ್ರೆಗಣ್ಣಿನಲ್ಲಿಯೇ ಮನೆಯಿಂದ ಹೊರಬಂದ ಧಾವಂತ, ಕಾರು ಹೊರಗೆ ತೆಗೆಯುವುದರೊಳಗೆ ಏನಾದರೂ ಅನಾಹುತವಾದರೆ ಎಂಬ ಅವಸರದಲ್ಲಿ ಅಲ್ಲಲ್ಲಿ ಕೈ ಕಾಲು ತಗುಲಿಸಿಕೊಂಡ ನೋವು, ಮಾಹಿತಿ ತಿಳಿದ ಗಾಬರಿ ಎಲ್ಲವೂ ಸೇರಿ ಐದ್ಹತ್ತು ನಿಮಿಷ ಸ್ತಬ್ಧವಾಗಿದ್ದ ರೇಖಾ ನಂತರ ಸುಧಾರಿಸಿಕೊಂಡು ಸುತ್ತಲೂ ನೋಡಿದಳು. ಇನ್ನೇನು ಕೊನೆಯುಸಿರೆಳೆಯಲಿರುವ ತಂದೆಯ ಬಾಯಿಗೆ ಗಂಗಾಜಲ ಬಿಡಲು ಎಲ್ಲರೂ ಅಲ್ಲಿ ನಿಂತಂತೆ ಅವಳಿಗೆ ಅನ್ನಿಸಿತು. ಬಿಲ್ಡಿಂಗು ಬೀಳುತ್ತಿದೆ ಎಂದು ಗೊತ್ತಾಗಿ ಆಗಲೇ ಜನ ಜಮಾವಣೆಯಾಗುತ್ತಿದ್ದರು. ತನ್ನ ಒಡಲಲ್ಲಿ ಇಷ್ಟು ದಿನ ಇಷ್ಟು ಜನರನ್ನು ಪೊರೆದ ಬೃಹತ್ ಗೂಡೊಂದು ಭಾರದ ಪೋಷಾಕು, ಒಡವೆ, ಕಿರೀಟ ಎಲ್ಲದರ ಜೊತೆಗೆ ನೀರಿಗೆ ಹಾರುವ ವ್ಯಕ್ತಿಯಂತೆ ಎಲ್ಲಾ ವಸ್ತುಗಳು, ನೆನಪುಗಳ ಜೊತೆಗೇ ಧರಾಶಾಯಿಯಾಗಲು ತಯಾರಾಗಿತ್ತು. ರೇಖಾ ಒಮ್ಮೆ ತಲೆಯೆತ್ತಿ ತನ್ನ ಪ್ರೀತಿಯ ಫ್ಲಾಟು ಡಿ ಬ್ಲಾಕು 605ರ ಕಡೆಗೆ ನೋಡಿದಳು. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅದು ಕೇವಲ ಇಟ್ಟಿಗೆಯ ಅವಶೇಷವಾಗಿ ಪರಿವರ್ತನೆಯಾಗುತ್ತದೆ ಎಂಬ ವಿಷಯವನ್ನು ಅವಳಿಗೆ ತೆಗೆದುಕೊಳ್ಳಲಾಗಲಿಲ್ಲ. ಮತ್ತೆ ಕಾರಿನೊಳಗೆ ಪ್ರಣವನನ್ನು ಕೂರಿಸಿ ಕಾರು ಚಲಾಯಿಸಿಕೊಂಡು ಹೊರಟಳು. ಬಲಬದಿಗೆ ಬೀಳುವ ಸಾಧ್ಯತೆ ಹೆಚ್ಚಿದ್ದಿದ್ದರಿಂದ ಎಲ್ಲಾ ವಾಹನಗಳಿಗೂ ಎಡಗಡೆಯಿಂದ ಹೋಗುವಂತೆ ತಾಕೀತು ಮಾಡುತ್ತಿದ್ದರು. ಆ ಕಡೆಯಿಂದ ಹೋಗುವಾಗ ಕೊನೆಯ ಬಾರಿಗೆಂಬಂತೆ ಕಟ್ಟಡದ ಕಡೆಗೆ ನೋಡಿದಳು. ದೊಡ್ಡ ದೊಡ್ಡ ದೀಪಗಳ ಬೆಳಕಿನಲ್ಲಿ ಎಲ್ಲವೂ ಸ್ಪಷ್ಟವಾಗಿಯೇ ಕಾಣುತ್ತಿತ್ತು. ನಾಗರಾಜ ನಿರ್ಲಕ್ಷ್ಯದಿಂದ ಗಾಜಿನ ಮೇಲೆ ಮಾಡಿದ ಗೀರಿನಂತೆಯೇ ಕಟ್ಟಡದ ಕಾಲಿನ ಬಳಿ ಭೂಮಿಯ ಮೇಲ್ಮೈಯಲ್ಲಿ ದೊಡ್ಡದೊಂದು ಗೀರು ಮೂಡಿತ್ತು.
ಮೈಮೇಲೆ ದೆವ್ವ ಬಂದಂತೆ ಆಕ್ಸಲರೇಟರ್ ತುಳಿಯುತ್ತಿದ್ದ ರೇಖಾ ಕಟ್ಟಡ ಬಿದ್ದ ಸದ್ದೂ ಕೇಳದಷ್ಟು ದೂರ ಬರುವವರೆಗೂ ಗಾಡಿಯನ್ನು ನಿಲ್ಲಿಸಲಿಲ್ಲ. ಆ ಕ್ಷಣದಲ್ಲಿ ಅವಳ ತಲೆಯಲ್ಲಿ ಓಡುತ್ತಿದ್ದ ವಿಷಯಗಳ ವೇಗ ಕಾರಿಗಿಂತ ಜಾಸ್ತಿಯಿತ್ತು. ಈಗ ಎಲ್ಲಿಗೆ ಹೋಗುವುದು? ಯಾವ ಪರಿಚಿತರಿಗೆ ಕರೆ ಮಾಡುವುದು? ಇದ್ದಬದ್ದ ವಸ್ತುಗಳೆಲ್ಲ ಹೋದವು, ಅದಕ್ಕೆ ಪರಿಹಾರ ಯಾವಾಗ ಬರುತ್ತದೆ? ಬರದಿದ್ದರೆ ಅದಕ್ಕೆ ಮತ್ತೆ ನಾವೇ ಕೇಸು ಹಾಕಬೇಕಾ? ಯಾರ ವಿರುದ್ಧ ಹಾಕುವುದು? ಮಾಲೀಕರ ವಿರುದ್ಧವೋ, ಸರ್ಕಾರದ ವಿರುದ್ಧವೋ? ಅದಕ್ಕೆ ಮತ್ತೆ ಲಾಯರನ್ನು ಹುಡುಕಬೇಕು. ವೈಷ್ಣವಿಗೆ ಆ ಕೇಸು ಕೊಟ್ಟರೆ ಎರಡಕ್ಕೂ ಸೇರಿಸಿ ರಿಯಾಯಿತಿ ಕೊಡುತ್ತಾಳಾ? ನನ್ನ ಹತ್ತಿರ ಇರುವ ದುಡ್ಡಿನಲ್ಲಿ ಈಗ ಮುಂಗಡ ಹಣ ಕೊಟ್ಟು ಹೊಸ ಮನೆ ಬಾಡಿಗೆಗೆ ಹಿಡಿದು ಮತ್ತೆ ಸಾಮಾನುಗಳನ್ನೆಲ್ಲ ಕೊಳ್ಳಲು ಸಾಧ್ಯವೇ? ಅದೇ ಕೆರೆಯ ಜಾಗದಲ್ಲಿ ಮತ್ತೊಂದು ಕಟ್ಟಡ ರಪ್ಪೆಂದು ತಲೆಯೆತ್ತಬಹುದು. ಆದರೆ ಈಗ ಮಣ್ಣುಪಾಲಾಗಿರುವ ನನ್ನ ಜೀವನವನ್ನು ಮತ್ತೆ ನಾನು ತ್ವರಿತವಾಗಿ ಕಟ್ಟಿಕೊಳ್ಳಲು ಸಾಧ್ಯವೆ? ಪ್ರಣವನ ಭವಿಷ್ಯದ ಗತಿಯೇನು? ಹೌದು, ಅವನನ್ನು ಸದ್ಯಕ್ಕಾದರೂ ವಿಕಾಸನ ಮನೆಯಲ್ಲಿ ಬಿಡಲೇಬೇಕಾಗುತ್ತದೆ. ಬಹುಶಃ ನಾನೂ ನನ್ನ ಆತ್ಮಗೌರವವನ್ನು ಬಿಟ್ಟು ಕೆಲಕಾಲದ ಮಟ್ಟಿಗಾದರೂ ಅವರ ಮನೆಯಲ್ಲಿ ಆಶ್ರಯ ಪಡೆಯಬೇಕಾಗುತ್ತದೆ. ಅದೇ ಸರಿ. ಒಂದು ನಿರ್ಧಾರಕ್ಕೆ ಬಂದವಳಂತೆ ರೇಖಾ ಒಂದು ದೊಡ್ಡ ಬೀದಿದೀಪದ ಬದಿಯಲ್ಲಿ ಗಾಡಿ ನಿಲ್ಲಿಸಿದಳು.
ಬಹುಶಃ ಎರಡು ತಿಂಗಳಾಗಿತ್ತು ಅನ್ನಿಸುತ್ತದೆ ಆ ನಂಬರಿಗೆ ಕರೆ ಮಾಡಿ. ರೇಖಾಳ ಕೈ ಸಣ್ಣಗೆ ನಡುಗುತ್ತಿತ್ತು. ಬೆರಳಿಗೆ ಅದೊಂದು ಕ್ಲಿಕ್ ಅಷ್ಟೇ. ಆದರೆ ಮನಸ್ಸಿಗೆ ಅಲ್ಲಿಯವರೆಗೂ ಕಟ್ಟಿಕೊಂಡಿದ್ದ ಸ್ವಾಭಿಮಾನದ ಕಟ್ಟಡ ಧಡಾರೆಂದು ಕೆಳಗೆ ಬೀಳುವ ಕ್ಷಣ. ಇನ್ನೇನು ಒತ್ತರಿಸಿ ಬರುತ್ತಿರುವ ಹತಾಶೆಯನ್ನು ಮೀರಿ ರೇಖಾ ‘ಕಾಲ್’ ಅನ್ನು ಒತ್ತಬೇಕು, ಅಷ್ಟರಲ್ಲಿ ವಿಕಾಸನಿಂದಲೇ ಕರೆ ಬಂತು. ಗೊಂದಲದಲ್ಲಿ ರೇಖಾ ಕರೆ ಎತ್ತಿ ನಿಧಾನಕ್ಕೆ ‘ಹಲೋ’ ಎನ್ನುವ ಮೊದಲೇ ಅತ್ತಲಿಂದ ಅವನ ಮಾತು ಶುರುವಾಗಿತ್ತು. “ಕರ್ಮ ಅಂತ ಒಂದಿರುತ್ತೆ ಕೇಳಿದ್ಯಾ? ಅದು ಇದೇ… ನೋಡ್ತಾ ಇದೀನಿ ಟೀವೀಲಿ ನಿನ್ ದರಿದ್ರ ಗುಂಡಿ ಬಿಲ್ಡಿಂಗ್ ಬೀಳ್ತಾ ಇರೋದನ್ನ. ಅದೊಂದ್ ಮನೆ ಇತ್ತು ಅಂತ ಹಾರಾಡ್ತಿದ್ದೆ, ಈಗ ಎಲ್ಲಿಗ್ ಹೋಗ್ತೀಯಾ? ರಸ್ತೇಲಿ ಮಲ್ಕೊಂತೀಯಾ? ಇವಾಗ್ಲಾದ್ರೂ ನಿನ್ ಜಂಭ ಬಿಟ್ಟು ಮುಚ್ಕೊಂಡು ನನ್ ಮಗನ್ನ ಕರ್ಕೊಂಡು ಮನೆಗ್ ಬಾ. ನನ್ ಜೊತೆ ಇರಕ್ ಇಷ್ಟ ಇಲ್ಲ ಅಂದ್ರೆ ನಾನೇ ಪರಿಚಯದೋರಿಗೆ ಹೇಳಿ ಯಾವ್ದಾದ್ರೂ ಬಾಡ್ಗೆ ಮನೆ ಹುಡುಕ್ಸಿಕೊಡ್ತೀನಿ, ಹೋಗು. ಆದ್ರೆ ನನ್ ಮಗನ್ನ ಮಾತ್ರ ನಿನ್ ಜೊತೆ ಕಳ್ಸಲ್ಲ ನಾನು. ಕಾರ್ ತಗೊಂಡ್ ಬಂದ್ಯಾ ಅಥ್ವಾ ಅದೂ ಢಮಾರಾ? ಕ್ಯಾಬ್ ಬುಕ್ ಮಾಡ್ತೀನಿ ತಗೋ ನಾನೇ…” ಎಂದು ಯುದ್ಧವನ್ನು ಗೆದ್ದ ಉಮೇದಿನಲ್ಲಿ ವಿಕಾಸ ಹೂಂಕರಿಸಿದ. ಎರಡು ಕ್ಷಣ ಸಣ್ಣ ಅಸಹನೀಯ ಮೌನ. ಅತ್ತಲಿಂದ ವಿಕಾಸ್ ಏನನ್ನೋ ಹೇಳಲು ಬಾಯಿ ತೆರೆಯುವಷ್ಟರಲ್ಲಿ ರೇಖಾ ಸಮಾಧಾನದ ಧ್ವನಿಯಲ್ಲಿ “ಬಿಲ್ಡಿಂಗ್ ಬೀಳ್ತಾ ಇರೋದ್ ನೋಡ್ದೆ, ನೀವಿಬ್ರೂ ಹೊರಗ್ ಬಂದಿದೀರಿ ತಾನೇ ಅಂತ ಮಾತು ಸ್ಟಾರ್ಟ್ ಮಾಡಬೋದಿತ್ತೇನೋ ಅಲ್ವಾ?” ಎಂದಳು. ಅತ್ತ ಕಡೆಯಿಂದ ವಿಕಾಸ ಅರೆಕ್ಷಣದ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾ ಸಮಜಾಯಿಷಿಗೆ ತಡಕಾಡುತ್ತಿದ್ದ ಅನ್ನಿಸುತ್ತದೆ. ಕರೆ ಕಟ್ ಮಾಡಿದ ರೇಖಾ ಅವನ ನಂಬರನ್ನು ಬ್ಲಾಕ್ ಮಾಡಿದಳು. ಸಮಯ ಮಧ್ಯರಾತ್ರಿ 12 ಘಂಟೆಯಿರಬೇಕು. ಇಡೀ ರಸ್ತೆ ಖಾಲಿಯಿತ್ತು. ಬೀದಿದೀಪದ ಬೆಳಕಿನಲ್ಲಿ ಕಾರಿನ ವಿಂಡ್ಶೀಲ್ಡ್ ಮೇಲಿರುವ ಗೀರುಗಳು ಸೂರ್ಯನ ಕಿರಣಗಳಂತೆ ಆಕರ್ಷಕವಾಗಿ ಹೊಳೆಯುತ್ತಿದ್ದವು. ಪ್ರಣವನ ಕಡೆಗೆ ನೋಡಿದ ರೇಖಾ ಅವನ ಸೀಟನ್ನು ಬಟನ್ ಒತ್ತಿ ಹಿಂದಕ್ಕೆ ಜಾರಿಸಿ “ನಾಳೆಗೆ ಏನಾದ್ರೂ ವ್ಯವಸ್ಥೆ ಮಾಡ್ತೀನಿ, ಇವತ್ತೊಂದಿನ ಕಾರಲ್ಲೇ ಮಲ್ಕೊಂತೀಯಾ?” ಎಂದು ಕೇಳಿದಳು. ಪ್ರಣವ ಅತೀವ ಖುಷಿಯಲ್ಲಿ “ಹೂಂ” ಎಂದ.