ಪಚ್ಚಿಯಪ್ಪ ಅಂದಿನ ಕಾಲದಲ್ಲಿ ಕರ್ನಾಟಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬನಾಗಿದ್ದ. ಹಬ್ಬದ ಸಮಯಲ್ಲಿ ಗಣೇಶ, ಗೌರಿಯರ ಮೂರ್ತಿಗಳು, ನವರಾತ್ರಿಯಲ್ಲಿ ದುರ್ಗಾದೇವಿ, ಕಾಳಿಕಾದೇವಿ, ಅವಳ ಕಾಲ ಬಳಿ ಬಿದ್ದ ರಾಕ್ಷಸರು ಇತ್ಯಾದಿಗಳನ್ನು ಯಥಾವತ್ ನಿರ್ಮಿಸುತ್ತಿದ್ದ. ಉಳಿದ ಸಮಯದಲ್ಲಿ ರಾಕ್ಷಸರ ಮೂರ್ತಿಗಳಿಗೆ ತಮಿಳುನಾಡು, ಆಂಧ್ರ, ಕೇರಳದಿಂದ ಭಾರೀ ಬೇಡಿಕೆ ಇರುತ್ತಿತ್ತು. ದೇವಸ್ಥಾನದಲ್ಲಿ ದೇವಿಯ ಕಾಲ ಬಳಿ ಇರಿಸುವುದಕ್ಕೊ, ಮೆರವಣಿಗೆಗೊ, ಪ್ರಸಂಗಗಳಿಗೊ, ದೃಷ್ಟಿ ಪರಿಹಾರಕ್ಕೊ, ಇನ್ನೂ ಅನೇಕ ಕಾರಣಗಳಿಗೆ ದೈತ್ಯಮೂರ್ತಿಗಳು ಬಳಕೆಯಾಗುತ್ತಿದ್ದವು. ಪಚ್ಚಿಯಪ್ಪ ತಾನು ಮಾಡುವ ಮೂರ್ತಿಗಳಿಗೆ ನ್ಯಾಯ ಸಲ್ಲಿಸಲು ಅದೇ ಭಾವವನ್ನು ಆವಾಹಿಸಿಕೊಳ್ಳುತ್ತಿದ್ದ. ಮದ್ಯದ ಸೀಶೆ ಖಾಲಿಮಾಡುತ್ತ ಕೋಳಿ-ಕುರಿಗಳ ಸಮಾರಾಧನೆ ಮಾಡುತ್ತ ದೈತ್ಯರನ್ನು ನಿರ್ಮಿಸುತ್ತಿದ್ದ. ಆದರೆ ಗಣೇಶ, ಗೌರಿಯರನ್ನು ನಿರ್ಮಿಸುವಾಗ ಸಾತ್ತ್ವಿಕ ಸುಂದರ ಭಾವ. “ಗಣೇಶಾ, ಕಾಪಾಡೋ” ಎನ್ನುತ್ತ ಸಾತ್ತ್ವಿಕಾಹಾರ ನಿಷ್ಠನಾಗಿರುತ್ತಿದ್ದ. ಅವನು ಮಾಡುತ್ತಿದ್ದ ಮೂರ್ತಿಗಳಲ್ಲಿ ಜೀವಕಳೆ ತುಂಬಿ ತುಳುಕುತ್ತಿದ್ದುದು ಸುಳ್ಳಲ್ಲ.
ಪಾರ್ವತಿ ಕಾಫಿ ತಂದಿಟ್ಟು ಗಂಗಾಧರನತ್ತ ನೋಡಿದಳು. ಮಣ್ಣು ಅವನ ಕೈಯಲ್ಲಿ ಬೆಣ್ಣೆಯಂತಾಗಿ ಮೂರ್ತರೂಪ ತಳೆಯುತ್ತಿತ್ತು. ಉಂಡೆಉಂಡೆಯಾಗಿ ಮೆತ್ತಿಕೊಳ್ಳುತ್ತ ರಾಕ್ಷಸನ ಶರೀರ ಮೂಡುತ್ತಿತ್ತು. ಗುಡಾಣದಂಥ ಹೊಟ್ಟೆ, ದಪ್ಪ ದಪ್ಪ ಕೈಕಾಲುಗಳಿಂದ ಕೂಡಿ ದೈತ್ಯ ಮೇಲೇಳುತ್ತಿದ್ದ. ಕ್ರಮವಾಗಿ ಭುಜ, ಮುಖ, ಕೋರೆ ಹಲ್ಲುಗಳು, ಕಣ್ಣು, ಮೂಗಿನ ರಚನೆಯಲ್ಲಿ ತಲ್ಲೀನನಾಗಿದ್ದ ಗಂಗಾಧರನಿಗೆ ಪಾರ್ವತಿ ಕಾಫಿ ಇಟ್ಟದ್ದು ಗೊತ್ತಾಗಲಿಲ್ಲ. ಉಳಿದೆಲ್ಲ ಭಾಗಗಳನ್ನು ಬಿಡಿ, ಕಣ್ಣು, ಬಾಯಿ, ಮೂಗು ಮಾಡುವಾಗ ಅವನು ಬಹಳ ತಾದಾತ್ಮ್ಯಭಾವದಿಂದ ಮಾಡುತ್ತಾನೆ. ರಕ್ಕಸನ ತದ್ರೂಪು ಮೂಡಿಬರುವಷ್ಟರಲ್ಲಿ ಇವನೇ ರಾಕ್ಷಸನಾಗಿರುತ್ತಾನೆ. ಪಾರ್ವತಿಗೆ ಇದು ಎಷ್ಟೋ ವರ್ಷಗಳಿಂದ ಗೊತ್ತಿದ್ದ ವಿಷಯವೇ. ಅದಕ್ಕೆ ಅಳುಕುತ್ತಲೇ “ಕಾಫಿ ಇಟ್ಟಿದೀನಿ” ಎಂದು ಕೊಂಚ ಗಟ್ಟಿಯಾಗಿಯೇ ಹೇಳಿದಳು. ಕೇಳಿಸದಂತೆ ಅವನು ಬಿಯರ್ನ ಶೀಸೆಯನ್ನೆತ್ತಿ ಒಂದಷ್ಟು ಒಳಗಿಳಿಸಿಕೊಂಡ. ಅಸಮಾಧಾನದಿಂದ ಅವಳು “ಬೆಳಗಿನ ಹೊತ್ತೇ ಅದೇಕೆ ಕುಡಿಯುತ್ತೀರಿ? ಕಾಫಿ ತಂದಿಟ್ಟೀದ್ದೀನಲ್ಲ” ಎಂದಳು. ಅವಳತ್ತ ತಿರುಗಿ ಕೆಂಗಣ್ಣು ಬಿಡುತ್ತ “ತಲೆಯೆಲ್ಲ ಮಾತಾಡ್ಬೇಡ ಹೆಣ್ಣೇ. ನನಗೇನು ಬೇಕೋ ಕುಡೀತೀನಿ ಹೋಗು” ಎಂದವನೆ ತಂದಿಟ್ಟ ಕಾಫಿಯ ಲೋಟವನ್ನು ಅವಳತ್ತ ಬೀಸಿದ. ಅವಳು ತುಸು ಪಕ್ಕಕ್ಕೆ ಸರಿದು ತಪ್ಪಿಸಿಕೊಂಡರೂ ಗೋಡೆಗೆ ಲೋಟ ಬಡಿದು ಮುಖದ ಮೇಲೆಲ್ಲ ಬಿಸಿ ಕಾಫಿ ಚೆಲ್ಲಿ ಓಕುಳಿಯಾಡಿತು. ಸೊಸೆ ಶಾಂಭವಿ ನೋಡಿ ಕೋಪದಿಂದ ಉರಿಯುತ್ತ ಅತ್ತೆಯನ್ನು ಒಳಗೆ ಕರೆದೊಯ್ದಳು.
ತಣ್ಣೀರು ಎರಚಿಕೊಂಡ ಮೇಲೆ ಸುಡುವ ಮುಖಕ್ಕೆ ಹಾಯೆನಿಸಿತ್ತು ಪಾರ್ವತಿಗೆ. ಮಗ ನಾಗೇಶನನ್ನು ನೋಡಿ ಸಂತಾಪದಿಂದ “ಬರೀ ಇದೇ ಕತೆಯಾಯಿತು. ಈ ರಾಕ್ಷಸ ಹೋಗೋವರೆಗೂ ಇನ್ನೂ ಏನೇನು ಅನಾಹುತ ಕಾದಿದೆಯೋ?” ಎಂದು ಉಸಿರೆಳೆದುಕೊಂಡಳು. ಶಾಂಭವಿ “ಚಿನ್ಮಯ್ನನ್ನು ಹೇಗೆ ಸುಧಾರಿಸುವುದೋ ಗೊತ್ತಿಲ್ಲ. ನೋಡಿದರೆ ಹೆದರಿ ಅಳ್ತಾನೆ. ಸೊಂಟದಿಂದ ಕೆಳಗೆ ಇಳಿಯಲ್ಲ” ಎಂದು ಆತಂಕ ವ್ಯಕ್ತಪಡಿಸಿದಳು. ಮೂರು ವರ್ಷದ ಹಸುಳೆ ಭಯಂಕರ ಮುಖಗಳನ್ನು ಕಂಡರೆ ಹೆದರಿ ಅಳುತ್ತಿದ್ದ. ರಾತ್ರಿ ಹಾಸಿಗೆಯಲ್ಲೇ ಉಚ್ಚೆ ಮಾಡಿಕೊಳ್ಳುತ್ತಿದ್ದ. ಅದಕ್ಕೇ ನಾಗೇಶ, ಶಾಂಭವಿಗೆ ಆ ರಕ್ಕಸಮೂರ್ತಿಗಳನ್ನು ಕಂಡರೆ ಮೈ ಉರಿಯುವಂತಾಗುತ್ತಿತ್ತು. ಅಷ್ಟರಲ್ಲಿ ಗಂಗಾಧರ ಮತ್ತೆ ಕೂಗಿ “ನಾಗೇಶಾ, ಮಧ್ಯಾಹ್ನ ಊಟಕ್ಕೆ ಮಟನ್ ಕೀಮಾ ತಂದುಬಿಡು” ಎಂದ. ಗೊತ್ತಿದ್ದದ್ದೇ, ಎನಿಸಿ ಪಾರ್ವತಿಯ ಮುಖ ಒಮ್ಮೆ ಕಿವಿಚಿಕೊಂಡು ತಕ್ಷಣಕ್ಕೆ ಗಂಭೀರವಾಯಿತು.
ಗಂಗಾಧರ ಚಾಮರಾಜನಗರಕ್ಕೆ ಬಂದಿದ್ದು ಆಶ್ರಯವನ್ನರಸಿಯೇ. ಅವನ ತಂದೆತಾಯಿಗಳು ಕಡುಬಡವರು. ಅದಕ್ಕೆ ತಕ್ಕಂತೆ ಸಮೃದ್ಧವಾದ ಸಂತಾನ ಫಲ. ನಾಲ್ಕು ಗಂಡು, ಮೂರು ಹೆಣ್ಣುಮಕ್ಕಳು. ಕೊರಟಗೆರೆಯಲ್ಲಿ ಎಷ್ಟು ದುಡಿದರೂ ಎಲ್ಲರ ಹೊಟ್ಟೆ ತುಂಬಿಸುವುದೇ ಕಷ್ಟಸಾಧ್ಯವಾಗಿತ್ತು. ಅಪ್ಪ-ಅಮ್ಮ ಕೂಲಿ ನಾಲಿ ಮಾಡಿದರೆ ಚಿಳ್ಳೆ-ಪಿಳ್ಳೆಗಳು ಬೀಡಿ ಕಟ್ಟುತ್ತಿದ್ದವು. ದೊಡ್ಡವ ಸ್ವಲ್ಪ ಓದಿಕೊಂಡು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಎರಡನೆಯವ ಗಂಗಾಧರ. ವಿದ್ಯೆ ತಲೆಗೆ ನಾಟಲಿಲ್ಲ. ಆದರೆ ಊರಿನಲ್ಲಿ ಗೌರಿ, ಗಣೇಶನ ಹಬ್ಬದ ಸಮಯದಲ್ಲಿ ಗಣೇಶನ ಮೂರ್ತಿ ಮಾಡುವಲ್ಲಿಗೆ ಹೋಗಿ ನಿಂತು ತದೇಕಚಿತ್ತದಿಂದ ನೋಡುತ್ತಿದ್ದ. ಅವರಿಗೆ ಸಹಾಯ ಮಾಡುತ್ತ ಕೊಟ್ಟರೆ ಊಟ ಮಾಡುತ್ತಿದ್ದ. ಅದೆಲ್ಲ ಹಬ್ಬದ ಸಂದರ್ಭದಲ್ಲಿ ಕೆಲಸವಿದ್ದಾಗ ಮಾತ್ರ. ಉಳಿದಂತೆ ಅಲ್ಲಲ್ಲಿ ತಿರುಗುವುದು. ಆಗ ಅವನ ಸೋದರಮಾವ ತನ್ನ ಪರಿಚಯದ ಕಲಾವಿದ ಚಾಮರಾಜನಗರದ ಪಚ್ಚಿಯಪ್ಪನ ಕಡೆಗೆ ಹುಡುಗನನ್ನು ಕರೆದುಕೊಂಡು ಬಂದಿದ್ದ. ಒಂದು ತಿಂಗಳು ಹುಡುಗನನ್ನು ಗಮನಿಸಿ ಅವನಿಗೆ ಕೆಲಸ ಕಲಿಸುವುದಲ್ಲದೆ ತಿಂಗಳು ತಿಂಗಳೂ ಸಂಬಳವನ್ನು ಪಚ್ಚಿಯಪ್ಪ ಕೊರಟಗೆÀರೆಗೆ ಕಳಿಸುತ್ತಿದ್ದ. ಅಲ್ಲಿ ಅವನ ದೊಡ್ಡ ಕುಟುಂಬ ಕೊಂಚ ಹಾಯಾಗಿ ಉಸಿರಾಡಿತು.
ಪಚ್ಚಿಯಪ್ಪ ಅಂದಿನ ಕಾಲದಲ್ಲಿ ಕರ್ನಾಟಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬನಾಗಿದ್ದ. ಹಬ್ಬದ ಸಮಯಲ್ಲಿ ಗಣೇಶ, ಗೌರಿಯರ ಮೂರ್ತಿಗಳು, ನವರಾತ್ರಿಯಲ್ಲಿ ದುರ್ಗಾದೇವಿ, ಕಾಳಿಕಾದೇವಿ, ಅವಳ ಕಾಲ ಬಳಿ ಬಿದ್ದ ರಾಕ್ಷಸರು ಇತ್ಯಾದಿಗಳನ್ನು ಯಥಾವತ್ ನಿರ್ಮಿಸುತ್ತಿದ್ದ. ಉಳಿದ ಸಮಯದಲ್ಲಿ ರಾಕ್ಷಸರ ಮೂರ್ತಿಗಳಿಗೆ ತಮಿಳುನಾಡು, ಆಂಧ್ರ, ಕೇರಳದಿಂದ ಭಾರೀ ಬೇಡಿಕೆ ಇರುತ್ತಿತ್ತು. ದೇವಸ್ಥಾನದಲ್ಲಿ ದೇವಿಯ ಕಾಲ ಬಳಿ ಇರಿಸುವುದಕ್ಕೊ, ಮೆರವಣಿಗೆಗೊ, ಪ್ರಸಂಗಗಳಿಗೊ, ದೃಷ್ಟಿ ಪರಿಹಾರಕ್ಕೊ, ಇನ್ನೂ ಅನೇಕ ಕಾರಣಗಳಿಗೆ ದೈತ್ಯಮೂರ್ತಿಗಳು ಬಳಕೆಯಾಗುತ್ತಿದ್ದವು. ಪಚ್ಚಿಯಪ್ಪ ತಾನು ಮಾಡುವ ಮೂರ್ತಿಗಳಿಗೆ ನ್ಯಾಯ ಸಲ್ಲಿಸಲು ಅದೇ ಭಾವವನ್ನು ಆವಾಹಿಸಿಕೊಳ್ಳುತ್ತಿದ್ದ. ಮದ್ಯದ ಸೀಶೆ ಖಾಲಿಮಾಡುತ್ತ ಕೋಳಿ-ಕುರಿಗಳ ಸಮಾರಾಧನೆ ಮಾಡುತ್ತ ದೈತ್ಯರನ್ನು ನಿರ್ಮಿಸುತ್ತಿದ್ದ. ಆದರೆ ಗಣೇಶ, ಗೌರಿಯರನ್ನು ನಿರ್ಮಿಸುವಾಗ ಸಾತ್ತ್ವಿಕ ಸುಂದರ ಭಾವ. “ಗಣೇಶಾ, ಕಾಪಾಡೋ” ಎನ್ನುತ್ತ ಸಾತ್ತ್ವಿಕಾಹಾರ ಸಂಪನ್ನನಾಗಿರುತ್ತಿದ್ದ. ಅವನು ಮಾಡುತ್ತಿದ್ದ ಮೂರ್ತಿಗಳಲ್ಲಿ ಜೀವಕಳೆ ತುಂಬಿ ತುಳುಕುತ್ತಿದ್ದುದು ಸುಳ್ಳಲ್ಲ. ಅದಕ್ಕೇ ನೆರೆಹೊರೆಯ ಮೂರ್ತಿಕಾರರಿಗಿಂತ ಹೆಚ್ಚಾಗಿ ಅವನು ಮಾಡಿದ ಮೂರ್ತಿಗಳು ಮಾರಾಟವಾಗುತ್ತಿದ್ದವು. ಬೇಡಿಕೆಯೂ ಹಾಗೆಯೇ ಬರುತ್ತಿತ್ತು.
ಅವನ ಶಿಷ್ಯ ಗಂಗಾಧರ ಅವನ ಗರಡಿಯಲ್ಲೇ ಪಳಗತೊಡಗಿದ. ಮೊದಲೆಲ್ಲ ಒಳ್ಳೆಯ ಮಣ್ಣು ಸಿಗುವುದೇ ಕಷ್ಟವಾಗಿತ್ತು. ಕೆರೆಯ ತಟದಲ್ಲಿನ ಮಣ್ಣನ್ನು ಸಂಗ್ರಹಿಸುತ್ತಿದ್ದರು. ಹಳದಿ ಬಣ್ಣದ, ಅಂಟೇ ಇರದ ಮಣ್ಣನ್ನು ಪಚ್ಚಿಯಪ್ಪ ತರಿಸುತ್ತಿದ್ದ. ಹತ್ತಿ ಸೇರಿಸಿ ಕುಟ್ಟಿ ಅದನ್ನು ಹದ ಮಾಡಬೇಕಾಗಿತ್ತು. ಆ ಕೆಲಸವನ್ನೆಲ್ಲ ಗಂಗಾಧರ ಶ್ರದ್ಧೆಯಿಂದ ಮಾಡುತ್ತಿದ್ದ. ಮೂರ್ತಿಯ ಮುಂಬದಿಯನ್ನು ಪಚ್ಚಿಯಪ್ಪ ರಚಿಸುತ್ತಿದ್ದರೆ ಹಿಂಬದಿಯನ್ನು ಸರಿ ಮಾಡಿ ತೀಡುವುದರಿಂದ ಆರಂಭಿಸಿದವ ನಿಧಾನವಾಗಿ ಕಲಿತು ಅರಗಿಸಿಕೊಂಡ. ನಂತರ ಗುರುವನ್ನೇ ಮೀರಿಸುವಷ್ಟು ತಯಾರಾದ. ಪಚ್ಚಿಯಪ್ಪ ಸಂತಸದಿಂದ ಬೀಗಿದ. ಒಬ್ಬನಾದರೂ ಯೋಗ್ಯ ಶಿಷ್ಯ ದೊರೆತನಲ್ಲ, ಸಾರ್ಥಕವಾಯಿತು ತನ್ನ ಬಾಳು ಎನ್ನುತ್ತ ತನ್ನ ನೈಪುಣ್ಯತೆಯನ್ನೆಲ್ಲ ಶಿಷ್ಯನಿಗೆ ಧಾರೆ ಎರೆದ. ಅವನ ಇಬ್ಬರು ಮಕ್ಕಳು ಈ ಉದ್ಯೋಗಕ್ಕೆ ಕಾಲಿಡದೆ ಬೇರೆ ಬೇರೆ ನೌಕರಿಗಳಲ್ಲಿದ್ದು ತಮಿಳುನಾಡಿನಲ್ಲಿ ನೆಲೆಸಿದರು. ಕೊನೆಗಾಲದಲ್ಲಿ ತನ್ನ ವ್ಯವಹಾರವನ್ನೆಲ್ಲ ಮನೆಯ ಸಮೇತ ಗಂಗಾಧರನಿಗೆ ಬಿಟ್ಟುಕೊಟ್ಟು ಮಕ್ಕಳ ಕಡೆಗೆ ಹೋಗಿ ನೆಲೆಸಿದ. ಅದಕ್ಕೆ ತನ್ನಿಂದಾದಷ್ಟು ಶುಲ್ಕವನ್ನೂ ಗಂಗಾಧರ ಕೊಡಲು ಮರೆಯಲಿಲ್ಲ. ಹಳೆಯದಾದರೂ ವ್ಯವಹಾರಕ್ಕೆ ತಕ್ಕನಾಗಿತ್ತು ಮನೆ – ದೊಡ್ಡದಾದ ಹಜಾರ, ಅದಕ್ಕಿಂತಲೂ ವಿಶಾಲವಾದ ಒಳಗಿನ ಕೋಣೆ. ಅಲ್ಲೇ ಗಂಗಾಧರ ಮೂರ್ತಿಗಳನ್ನು ತಯಾರಿಸುತ್ತಿದ್ದ. ಹಿಂಬದಿಯ ಗೋಡೆಯ ಬದಲು ಅದಕ್ಕೆ ಶಟರ್ ಅಳವಡಿಸಲಾಗಿತ್ತು. ಇದರಿಂದ ಅವುಗಳನ್ನು ಕೊಂಡೊಯ್ಯುವಾಗ ಸಲೀಸಾಗುತ್ತಿತ್ತು. ಹಾಗೆಯೇ ತೆರೆದಿಟ್ಟಾಗ ಬಿಸಿಲು ಬಂದು ಮೂರ್ತಿಗಳು ಒಣಗಲೂ ಸಹಾಯವಾಗುತ್ತಿತ್ತು. ಬಿಟ್ಟರೆ ಮಾಮೂಲಿನಂತೆ ಅಡುಗೆಮನೆ, ಬಚ್ಚಲು, ಎರಡು ಕೋಣೆಗಳಲ್ಲಿ ಒಂದನ್ನು ಗಂಗಾಧರ, ಪಾರ್ವತಿ ಬಳಸಿದರೆ ಇನ್ನೊಂದನ್ನು ನಂದಿನಿ ಉಪಯೋಗಿಸುತ್ತಿದ್ದಳು. ಅಟ್ಟದ ಮೇಲಿದ್ದ ಎರಡು ಕೋಣೆಗಳಲ್ಲಿ ಒಂದನ್ನು ನಾಗೇಶ ಬಳಸಿಕೊಳ್ಳುತ್ತಿದ್ದ. ಆರ್ಡರ್ ಕೊಡಲು ಬರುವವರಲ್ಲಿ ತಿರುವಣ್ಣಾಮಲೈನ ಮಾರಿಮುತ್ತು, ಆಂಧ್ರಪ್ರದೇಶದ ಷಣ್ಮುಗಂ, ಕರ್ನಾಟಕ ಮತ್ತು ಕೇರಳದ ಆರ್ಡರ್ ತರುತ್ತಿದ್ದ ದೇವಯ್ಯ ಪ್ರಮುಖರು. ಅದರಲ್ಲೂ ಮಾರಿಮುತ್ತು ಗಂಗಾಧರನಿಗೆ ಆಪ್ತನಾಗಿದ್ದ.
ಸಮಯ ಕಳೆಯುತ್ತ ಹೋದಂತೆ ಗಂಗಾಧರನಿಗೂ ಮದುವೆಯಾಗಿ ಪಾರ್ವತಿ ವಧುವಾಗಿ ಬಂದಳು. ಬಡವರ ಮನೆಯಿಂದಲೇ ಬಂದವಳು ಅವನ ರೀತಿ-ನೀತಿಗಳಿಗೆ ಚಕಾರವೆತ್ತದೆ ಹೊಂದಿಕೊಂಡಳು. ಅವನ ಸ್ವಭಾವವನ್ನು ಅರಿತುಕೊಳುತ್ತ ರಾಕ್ಷಸ ಬೊಂಬೆಗಳನ್ನು ಮಾಡುವಾಗ ಅವನ ಮಾನಸಿಕ ಸ್ಥಿತಿ ನೋಡಿ ವಿಹ್ವಲಗೊಂಡಳು. “ನೀವು ಬರೀ ಗಣೇಶ, ಗೌರಿ, ದುರ್ಗೆಯರನ್ನು ಮಾಡಿದರಾಗದೆ? ಈ ರಾಕ್ಷಸ ಬೊಂಬೆಗಳನ್ನು ಮಾಡುವುದು ಬಿಟ್ಟುಬಿಡಿ” ಎಂದು ಹೇಳಿದ್ದಿತ್ತು. “ದಡ್ಡಿ, ದುಡ್ಡು ಬರುವುದು ಅವುಗಳಿಂದಲೇ ಗೊತ್ತಾ? ಒಂದೊಂದು ಬೊಂಬೆಗೂ ಹತ್ತು-ಹದಿನೈದು ಸಾವಿರ ಕೊಡುತ್ತಾರೆ. ಗೌರಿ, ಗಣೇಶರಿಂದ ಬರುವ ಆದಾಯ ಹೊಟ್ಟೆಗೆ ಸಾಕಾಗುತ್ತದಷ್ಟೆ. ಬಟ್ಟೆ, ಉಳಿದ ಖರ್ಚು ಹೇಗೆ ಮಾಡೋದು? ನಿನಗೆ ರೇಷ್ಮೆ ಸೀರೆ, ಚಿನ್ನದ ಸರ ಬೇಡವೆ?” ಎಂದು ಹತ್ತಿರ ಎಳೆದುಕೊಂಡು ಮುದ್ದು ಮಾಡಿದಾಗ ನಾಚಿಕೊಂಡು ಸುಮ್ಮನಾಗಿದ್ದಳು. ನಿಜ, ಉಳಿದ ಸಮಯದಲ್ಲಿ ಅವನು ಮಾಮೂಲಾಗಿರುತ್ತಿದ್ದ. ಅವಳು ಮಾಡಿದ ಮುದ್ದೆ, ಬಸ್ಸಾರು ನುಂಗುತ್ತ ಬೀರು ಇಳಿಸುತ್ತಿದ್ದ. ಶೀಘ್ರ ಕೋಪಿಯಾದರೂ ಹೆಂಡತಿಯ ಮೇಲೆ ಅಕ್ಕರೆಯೂ ಇತ್ತು. ವಾರಕ್ಕೊಮ್ಮೆ ಇಬ್ಬರೂ ಸಂತೆಗೆ ಹೋಗಿ ಬೇಕಾಗುವ ಸಾಮಾನುಗಳನ್ನು ತರುತ್ತಿದ್ದರು. ಅವಳು ಬಸುರಿಯಾದಾಗ ಹಿಟ್ಟು ರುಬ್ಬಿಕೊಡುವುದು, ನೀರು ತರುವುದೂ, ತರಕಾರಿ ಹೆಚ್ಚಿಕೊಡುವುದರೊಂದಿಗೆ ಅವಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದ. ಆದರೆ ದೈತ್ಯ ಬೊಂಬೆಗಳು ಸಿದ್ಧವಾಗುವಾಗ ಮಾತ್ರ ಅವಳ ಪಾಡು ಬೇಡ. ಗಂಗಣ್ಣನಿಗೆ ಆರ್ಡರ್ ಹೆಚ್ಚಾಗಿ ಇರುತ್ತಿದ್ದುದು ರಕ್ಕಸ ಬೊಂಬೆಗಳದ್ದೇ. ಹೀಗಾಗಿ ಇತ್ತೀಚೆಗಂತೂ ತಳಮಳವೇ ಹೆಚ್ಚಾಗಿದ್ದು ಸಮಾಧಾನ, ಶಾಂತಿ ಮರೀಚಿಕೆಯಾಗಿತ್ತು. ಅವನನ್ನು ಅನುಸರಿಸಿಕೊಂಡು ಹೋಗುವಷ್ಟರಲ್ಲಿ ಮನೆಯವರೆಲ್ಲ ಹಣ್ಣಾಗಿ ಹೋಗುತ್ತಿದ್ದರು. ಮನೆಯಲ್ಲಿ ಉಳಿದವರೆಲ್ಲ ಅಪ್ಪಟ ಶಾಖಾಹಾರಿಗಳಾದ್ದರಿಂದ ತನಗೆ ಬೇಕಾದ್ದನ್ನು ಪೇಟೆಯಲ್ಲಿದ್ದ ಬ್ಯಾರಿ ಹೋಟಲ್ನಿಂದ ತರಿಸಿ ತಿನ್ನುತ್ತಿದ್ದ ಗಂಗಣ್ಣ. ಪಾರ್ವತಿಯೂ ಕ್ರಮೇಣ ಈ ವ್ಯವಸ್ಥೆಗೆ ಒಗ್ಗಿ ಹೋಗಿದ್ದಳು. ಮೂರು ಮಕ್ಕಳೂ ಮಣ್ಣಿನೊಡನೆ ಆಡುತ್ತ ಬೆಳೆದವು. ಹಿರಿಯ ಮಗ ನಾಗೇಶ, ಎರಡನೆಯವನು ಶಂಕರ, ಮೂರನೆಯವಳು ಗಂಗಣ್ಣನ ಮುದ್ದಿನ ಮಗಳು ನಂದಿನಿ.
ಇದರಲ್ಲಿ ಶಂಕರ ಓದಿನಲ್ಲಿ ಮುಂದಿದ್ದ. ಇಂಜಿನಿಯರಿಂಗ್ ಓದಿ ಹೈದರಾಬಾದಿನಲ್ಲಿ ಕೆಲಸ ಗಿಟ್ಟಿಸಿಕೊಂಡು ಪರಿಚಯಸ್ಥರ ಹುಡುಗಿ ಶಮಂತಾಳನ್ನು ಇಷ್ಟಪಟ್ಟು ಮದುವೆಯಾದ. ಅವಳು ಮಾಡರ್ನ್ ಲೇಡಿ. ಮಣ್ಣಿನ ಸಹವಾಸ, ಹಳೆಯ ಮನೆ ಹಿತವಾಗಲಿಲ್ಲ. ಮೂರು ವರ್ಷಗಳ ಕೆಳಗೆ ಮದುವೆಯಲ್ಲಿ ಬಿಟ್ಟರೆ ಮತ್ತೆ ಮನೆಗೆ ಕಾಲಿಟ್ಟಿಲ್ಲ. ಪಾರ್ವತಿ, ಗಂಗಾಧರ ದಂಪತಿಗಳಿಗೆ ಅಸಮಾಧಾನವಾಗಿ ಕೊರಗಾಗಿದೆ. ಶಂಕರ ಒಬ್ಬನೇ ಬರುತ್ತಾನೆ. ಬಂದಾಗ ಮಣ್ಣು ಕಲಿಸಿ, ಬ್ರಶ್ ಹಿಡಿದು ಅಪ್ಪನಿಗೆ ಸಹಾಯ ಮಾಡುತ್ತಾನೆ. ಹಿರಿಯ ಮಗ ನಾಗೇಶ ಓದಿನಲ್ಲಿ ಸ್ವಲ್ಪ ಕುಂಟು. ಕಷ್ಟಪಟ್ಟು ಬಿ.ಕಾಂ. ಮುಗಿಸಿಕೊಂಡಿದ್ದಾನೆ. ಇದೇ ಊರಲ್ಲಿ ಪ್ರೈವೇಟ್ ಕಂಪೆನಿಯಲ್ಲಿ ಗುಮಾಸ್ತಿಕೆ ಮಾಡುತ್ತಾನೆ. ಹಿರಿಯರೇ ನೋಡಿ ಮದುವೆ ಮಾಡಿದ ಹುಡುಗಿ ಶಾಂಭವಿ. ಒಳ್ಳೆಯವಳು. ಆದರೆ ಮಾವನ ಕೆಲವು ವರಸೆಗಳು ಇಷ್ಟವಾಗುವುದಿಲ್ಲ. ಇರಿಸುಮುರಿಸು ಇದ್ದಿದ್ದೆ. ಅತ್ತೆಯೆಂದರೆ ಅಚ್ಚುಮೆಚ್ಚು. ನಾಗೇಶನಿಗೆ ಅಪ್ಪನ ಕಲೆ ಇಳಿದುಬಂದಿದೆ. ಗೌರಿ-ಗಣೇಶರನ್ನು ಮಾಡುವಾಗ ಸಾಧ್ಯವಾದರೆ ಸಹಾಯ ಮಾಡುತ್ತಾನೆ. ರಕ್ಕಸ ಬೊಂಬೆಗಳ ಹತ್ತಿರಕ್ಕೂ ಸುಳಿಯುವುದಿಲ್ಲ. ಇದು ಗಂಗಣ್ಣನಿಗೆ ಅಸಮಾಧಾನ ತರುವ ಸಂಗತಿ. “ಆ ಪುಟಗೋಸಿ ಗುಮಾಸ್ತಿಕೇಲಿ ಎಷ್ಟು ಬರುತ್ತೆ? ತಿಂಗಳಿಗೆ ಹದಿನೈದು, ಇಪ್ಪತ್ತು ಸಾವ್ರ ಬಂದರೆ ಜಾಸ್ತಿ. ಇಲ್ಲಿ ಒಂದೊಂದು ಬೊಂಬೆಗೆ ಇಪ್ಪತ್ತರಿಂದ ಮೂವತ್ತು ಸಾವ್ರ ಬರುತ್ತೆ. ಒಮ್ಮೊಮ್ಮೆ ಐವತ್ತು ಬಂದದ್ದೂ ಇದೆ. ಮಾಡೋಕೇನು ಗುನುಗು ನಿನ್ನ ಮಗಂಗೆ?” ಎಂದು ಪಾರ್ವತಿಯ ಮುಂದೆ ಕೂಗಾಡಿದ್ದೂ ಇದೆ. ಅವಳು ಸಮಾಧಾನ ಹೇಳುತ್ತಾಳೆಯೇ ಹೊರತು ಬದಲು ಹೇಳುವುದಿಲ್ಲ. ಅಸಲು ಕಾರಣ ಅವಳಿಗೂ ಗೊತ್ತು. ತಲ್ಲೀನನಾಗಿರುವಾಗ ಅವನ ಮಾನಸಿಕ ಸ್ಥಿತಿ, ಉಗ್ರ ಕೋಪ ಮಗನಿಗೆ ಇಷ್ಟವಾಗುವುದಿಲ್ಲ. ಸೊಸೆಗೂ ಅಷ್ಟೇ.
ಕೊನೆಯವಳು ನಂದಿನಿ. ಮುದ್ದಿನಿಂದಲೇ ಬೆಳೆದವಳು. ಮಣ್ಣು, ಬಣ್ಣಗಳೊಂದಿಗೆ ಆಪ್ತ ಸಂಬಂಧವಿಲ್ಲ. ಏನಿದ್ದರೂ ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಮಾರಾಟಕ್ಕೆ, ದುಡ್ಡು ಎಣಿಸಲು ಕೂರುವುದಿತ್ತು. ಬಿ.ಎ. ಓದುತ್ತ ಕಾಲೇಜು ಗೆಳತಿಯರ ಜೊತೆ ಓಡಾಡುತ್ತ ಹಾಯಾಗಿದ್ದಾಳೆ. ಪಾರ್ವತಿಯಂತೆಯೇ ಸುಂದರಿ. ಇತ್ತೀಚೆಗೆ ಅವಳೊಬ್ಬ ಹುಡುಗನನ್ನು ಇಷ್ಟಪಡುತ್ತಿದ್ದಾಳೆ. ಸುಕುಮಾರನ್ ಅವಳ ಗೆಳತಿಯ ಮನೆಯಲ್ಲಿ ಭೇಟಿಯಾದವನು. ಸ್ಫುರದ್ರೂಪಿ. ಬೆಂಗಳೂರಿನಲ್ಲಿ ಬಿಸಿನೆಸ್ ಮಾಡುತ್ತಾನೆ. ಅತ್ಯಾಧುನಿಕ ಜೀನ್ಸ್ ಧರಿಸಿ ನಟ ಸುದೀಪನ ಶೈಲಿಯಲ್ಲಿ ಕೂದಲು ಸರಿಸುತ್ತ ಅವನು ಮಾತನಾಡುವ ಧಾಟಿಗೆ ಅವಳು ಮರುಳಾಗಿದ್ದಳು. ಅವನೂ ಇವಳ ಪ್ರಾಯಕ್ಕೆ ಸೋತಿದ್ದ. ಕಿಚ್ಚ ಸುದೀಪನ ಫ್ಯಾನ್ ಅವಳು. ಅವನೂ ಅಷ್ಟೇ. ಅದೇ ಅವರಿಬ್ಬರನ್ನೂ ಹತ್ತಿರ ತಂದಿತ್ತು. ಅವನು ಕೊಂಚ ಸುದೀಪನನ್ನೇ ಹೋಲುತ್ತಾನೆ. “ಉಸಿರೇ, ಉಸಿರೇ” ಎಂದು ಕಣ್ಣುಮುಚ್ಚಿಕೊಂಡು ಹಾಡುತ್ತಿದ್ದರೆ ನಂದಿನಿ ಸೋತು ಮೋಡಗಳ ಮೇಲೆ ತೇಲಿ ಹೋಗುತ್ತಾಳೆ. ತನ್ನ ಬಾಳಸಂಗಾತಿಯಾಗಿ ಅವನನ್ನೇ ಕಲ್ಪಿಸಿಕೊಂಡು ಕನಸು ಕಟ್ಟಿದ್ದಾಳೆ. ಆದರೆ ಅವನ ಜಾತಿ ಬೇರೆ. ತಾಯಿತಂದೆಯರು ಒಪ್ಪುವ ಸಂಭವ ಕಡಮೆ. ಹೇಗಾದರೂ ಒಪ್ಪಿಸಲು ಉಪಾಯ ಮಾಡುತ್ತಿದ್ದಾಳೆ. ಅದಾಗದಿದ್ದರೆ, ಅವನೊಡನೆ ಬೆಂಗಳೂರಿಗೆ ಓಡಿಹೋಗಲೂ ಸಿದ್ಧ. ಇಬ್ಬರೂ ಪಾರ್ಕಿನಲ್ಲಿ ಭೇಟಿಯಾಗಿದ್ದಾರೆ. ಕೈ ಕೈ ಹಿಡಿದುಕೊಂಡು ಸುತ್ತಿದ್ದಾರೆ. ಪೇಟೆಯ ಹೋಟಲ್ನಲ್ಲಿ ತಿಂಡಿ ತಿಂದಿದ್ದಾರೆ. ಅದೇನು ಮುಂಬಯಿ, ಬೆಂಗಳೂರುಗಳಂತೆ ಮಹಾನಗರ ಅಲ್ಲವಲ್ಲ. ಎಲ್ಲರಿಗೂ ಸುಳಿವು ಸಿಕ್ಕಿದೆ. ಮೊದಲು ನೋಡಿದ್ದೇ ನಾಗೇಶ. ಅವನು ಪಾರ್ವತಿಗೆ ತಿಳಿಸಿದ. ಅವಳು ಸೂಕ್ಷ್ಮವಾಗಿ ಗಂಗಾಧರನಿಗೆ ಹೇಳಿದಳು. ಮನೆಯಲ್ಲಿ ಯಾರಿಗೂ ಇಷ್ಟವಿಲ್ಲ. ಜಾತಿ ಬಿಡಿ. ಯೋಗ್ಯತೆ ನೋಡದೆ, ಹಿಂದು-ಮುಂದು ಅರಿಯದೆ ಮಗಳು ಯಾರೊಂದಿಗೊ ಸುತ್ತಾಡುವುದು ಗಂಗಾಧರನಿಗೆ ಕೋಪ ತರಿಸಿದೆ. ಇದಕ್ಕಾಗಿ ಮನೆಯಲ್ಲಿ ಚಿಕ್ಕ ಯುದ್ಧವಾಗುವ ಸಂಭವವೂ ಇದೆ.
ಈ ಹಿನ್ನೆಲೆಯನ್ನೆಲ್ಲ ಮರೆತು ಮಟನ್ ಕೀಮಾ ತಿಂದು ದೈತ್ಯ ಬೊಂಬೆಗಳನ್ನು ಪೂರ್ತಿಯಾಗಿ ರೂಪಿಸಿ ತುಸು ದೂರ ಬಂದು ನಿಂತು ನೋಡಿದ ಗಂಗಾಧರ. ತೃಪ್ತಿಯಾಯಿತು. ತಲೆಯಲ್ಲಿನ ದೈತ್ಯ ಇಳಿದಿದ್ದ. “ಪಾರ್ವತಿ, ಕಾಫಿ ಕೊಡೇ” ಎಂದು ಕೂಗಿದ. ಅಳುಕುತ್ತಲೇ ಕಾಫಿ ತಂದ ಪಾರ್ವತಿ “ಕುಡೀತೀರೋ, ಎಸೀತೀರೋ” ಎಂದು ತುಸು ಕೋಪದಿಂದಲೇ ಕೇಳಿದಳು. “ಕುಡೀತೀನಿ ಕಣೆ. ಸಾರಿ, ಬೆಳಗ್ಗೆ ನಿನಗೆ ಬಿಸಿ ತಾಕಿತೇನೋ” ಎನ್ನುತ್ತ ಅವಳನ್ನು ಅಪರಾಧಿ ಭಾವದಿಂದ, ಪ್ರೀತಿಯಿಂದ ನೋಡುವುದಕ್ಕೂ ಅತ್ತಲಿಂದ ಮಾರಿಮುತ್ತು ಬರುವುದಕ್ಕೂ ಸರಿ ಹೋಗಿತ್ತು. ಅವನನ್ನು ನೋಡುತ್ತಲೇ ಪಾರ್ವತಿಯ ಬಾಯಿ “ಬನ್ನಿ” ಎಂದರೂ ಮುಖ ಚಿಕ್ಕದಾಗಿತ್ತು. ಮತ್ತೆ ದೈತ್ಯ ಬೊಂಬೆಗಳ ಬೇಡಿಕೆ ತಂದಿರಬಹುದೆಂದು ಎಣಿಸಿತು ಅವಳ ಮನ. ಆದರೆ ಗಂಗಾಧರ ಮಾತ್ರ “ಓಹೋ! ಬಾರಪ್ಪಾ ಮುತ್ತಣ್ಣ. ನಿಂದೇ ಕೆಲಸ ನಡೀತಾ ಇತ್ತು. ಪಾರ್ವತಿ, ಇನ್ನೊಂದು ಕಾಫಿ ತಕಂಬಾರೇ” ಎಂದ. ಪಾರ್ವತಿ ಒಳಗೆ ಸರಿಯುತ್ತಿದ್ದಂತೆ ನೆರೆಯಲ್ಲಿ ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಸೆಂಥಿಲ್ ಅವನನ್ನು ಮಾತನಾಡಿಸಲು ಹಾತೊರೆದು ಹೊರಬಂದ. ತಮಿಳುನಾಡಿನ ಮೂಲೆಮೂಲೆಗಳಿಂದ ದೈತ್ಯ ಬೊಂಬೆಗಳ ಆರ್ಡರ್ ತರುವ ಮಾರಿಮುತ್ತು ಒಂದರ್ಥದಲ್ಲಿ ಚಿನ್ನದಮೊಟ್ಟೆ ತರುವ ಕೋಳಿಯೇ. ಆದರೆ ಅವನ ಆರ್ಡರ್ಗಳೆಲ್ಲ ಗಂಗಾಧರನಿಗೇ. ಇದು ಸೆಂಥಿಲ್ಗಷ್ಟೇ ಅಲ್ಲ, ಇನ್ನೂ ಅನೇಕರಿಗೆ ಅಸೂಯೆ ತರಿಸಿತ್ತು ಎಂದು ಬೇರೆ ಹೇಳಬೇಕಿಲ್ಲ. ಅವರ ಆದಾಯ ಅಷ್ಟಕ್ಕಷ್ಟೆ. ಒಂದೆರೆಡು ದೈತ್ಯ ಬೊಂಬೆಗಳ ಆರ್ಡರ್ ಬಂದರೂ ತಮ್ಮ ಬದುಕು ಕೊಂಚ ಸಲೀಸಾಗಬಹುದು ಎನ್ನುವುದು ಅವರ ಲೆಕ್ಕಾಚಾರ.
ಸೆಂಥಿಲ್ ಎದುರಿಗೇ ಬಂದು “ಏನ್ ಮುತ್ತಣ್ಣೋ. ಬಲ್ ಅಪರೂಪವಾಗ್ಬಿಟ್ಟೆ. ಬೀರು ಇಳಿಸೀವಂತೆ ಬಾ. ಮತ್ತೇನಾರೂ ಆರ್ಡರ್ ಐತಾ ರಾಕ್ಷಸ ಬೊಂಬೆಗಳದ್ದು?” ಎಂದು ಕರೆದ. ಮುತ್ತಣ್ಣ ವಿನಯಪೂರ್ವಕವಾಗಿಯೇ “ಇಲ್ಲ ಸೆಂಥಿಲ್, ಈ ಬಾರಿ ಯಾವ ದೈತ್ಯರ ಆರ್ಡರೂ ಇಲ್ಲ” ಎಂದಾಗ “ಸರಿಬುಡು” ಎನ್ನುತ್ತ ಕೊಂಚ ನಿರಾಶೆಯಿಂದಲೇ ಒಳಸರಿದ. ಕೇಳಿಸಿಕೊಂಡ ಪಾರ್ವತಿ ಕಾಫಿಯೊಂದಿಗೆ ಹೊರಬಂದವಳು “ಮುತ್ತಣ್ಣ, ಹೇಗಿದ್ದೀರಿ? ಈವತ್ತು ಅವಸರ ಮಾಡಬೇಡಿ. ಊಟ ಮಾಡ್ಕೊಂಡೇ ಹೋಗೀವ್ರಂತೆ” ಎಂದು ಆಗ್ರಹಿಸಿದಳು. “ಸೆಂದಾಕಿದ್ದೀನಿ ಕಣಮ್ಮ. ಈವತ್ತು ಕೊಂಚ ಅರ್ಜೆಂಟು ಐತೆ. ಇನ್ನೊಮ್ಮೆ ನಿನ್ನ ಕೈಲಿ ಮುದ್ದೆ-ಬಸ್ಸಾರು ಉಣ್ಣಾಕೆ ಬತ್ತೀನಿ” ಎನ್ನುತ್ತ ಕಾಫಿಯ ಲೋಟ ಕೈಗೆತ್ತಿಕೊಂಡ. “ಗಂಗಣ್ಣಾ, ಕಳೆದ ಬಾರಿ ತಿರುಚ್ಚಿಗೆ ದೈತ್ಯ ಬೊಂಬೆ ಕೊಟ್ಟಿದ್ವಲ್ಲಾ, ಆ ಓನರ್ ಈ ಸಲಿ ಬುದ್ಧನ ಬೊಂಬೆ ಕೇಳ್ತವ್ರೆ. ಅದೂ ನಿನ್ನ ಕೈಲೇ ಆಗಬೇಕಂತೆ. ‘ಅವರ ಕೈಲಿ ಸರಸ್ವತಿಯೇ ಕೂತಿದಾಳೆ. ರಾಕ್ಷಸ ಬೊಂಬೆಗಳನ್ನೇ ಅಷ್ಟು ಕಳೆಗಟ್ಟೋ ಹಾಗೆ ಮಾಡೋರು, ಬುದ್ಧನ್ನ ಎಷ್ಟು ಚೆಂದಾಗಿ ಮಾಡಬಹುದು?’ ಅಂತವ್ರೆ. ಮಣ್ಣಿಂದೇ ಮೂರ್ತಿ, ಆರಡಿ ಎತ್ತರ, ಕೂತಿರೋ ಭಂಗಿ. ಆದರೆ ನಗುಮುಖ ಇರಬೇಕು. ಸೊರ್ಗದಿಂದ ಬುದ್ಧಾನೇ ಇಳಿದು ಬಂದಂಗಿರಬೇಕಂತೆ. ದುಡ್ಡಿಗೆ ಏನೂ ಚಿಂತೆಯಿಲ್ಲ. ನೀ ಕೇಳಿದ ಅಮೌಂಟ್ ಕೊಡ್ತಾರೆ. ಕೆಲಸಾ ಸೊಲ್ಪ ಬೇಗ ಆಗಬೇಕಷ್ಟೇ. ಏನು ಹೇಳ್ತೀ ನೋಡು” ಎನ್ನುತ್ತಾ ಕಾಫಿ ‘ಸೊರ್’ ಎಂದು ಹೀರಿದ. ಬುದ್ಧನ ಚಿತ್ರವನ್ನು ಅವನಿಗೆ ಕೊಟ್ಟ. ಅದನ್ನು ನೋಡುತ್ತ ಗಂಗಣ್ಣ ಕೊಂಚ ಯೋಚನೆಗೆ ಬಿದ್ದ. ಪ್ರಶಾಂತ ನಗುವಿನ ಬುದ್ಧ, ಜಗತ್ತಿನ ಕಾರುಣ್ಯವನ್ನೆಲ್ಲ ತನ್ನಲ್ಲೆ ತುಂಬಿಕೊಂಡಂತಿರುವ ಕಣ್ಣುಗಳು, ಎಲ್ಲರ ಸಮಸ್ಯೆಗಳನ್ನು ಆಲಿಸುವ ದೊಡ್ಡದಾದ ಕರ್ಣಗಳು, ಎಲ್ಲ ನೋವುಗಳನ್ನೂ ಪರಿಹರಿಸುವ ಮಂದಹಾಸ, ಎಲ್ಲ ಸಮಸ್ಯೆಗಳಿಗೂ ಪರಿಹಾರವೆನಿಸುವಂತಿದ್ದ ಮುಖಮುದ್ರೆ. ನಿಜಕ್ಕೂ ತುಂಬಾ ಸುಂದರವಾಗಿದ್ದ. ಇಂದಿನವರೆಗೂ ಗಂಗಣ್ಣ ಎಂದೂ ಬುದ್ಧನನ್ನು ಮಾಡಿದ್ದಿಲ್ಲ. ಪಚ್ಚಿಯಪ್ಪ ಕೂಡ ಒಂದೆರೆಡೇ ಬಾರಿ ಮಾಡಿದ್ದು. ಅದು ನೋಡಿ ಯಾವ ಕಾಲವಾಯಿತೋ ಈಗ.
“ನಿನ್ನ ಮ್ಯಾಗೆ ಭೋ ನಂಬಿಕೆ ಇಟ್ಟವ್ರೆ. ಮಾಡ್ಕೊಡು, ಯಾವುದೋ ಕಾಂಪಿಟೇಶನ್ಗೂ ಕಳಸ್ತವ್ರಂತೆ” ಎಂದ ಮುತ್ತಣ್ಣ. ಹಿಂದೆ ನಿಂತ ಪಾರ್ವತಿ “ಎಷ್ಟೆಲ್ಲಾ ಮೂರ್ತಿಗಳನ್ನ ಮಾಡಿದ್ದಾಯ್ತಂತೆ. ಇದಕ್ಯಾಕೆ ಯೋಚನೆ? ಮಾಡ್ಕೊಡಿ” ಎಂದು ಇಂಬುಕೊಟ್ಟಳು. ಗಂಗಾಧರನಿಗೂ ‘ಒಂದು ಕೈ ನೋಡೇ ಬಿಡಾನ’ ಎನಿಸಿದರೂ ಮನದ ಮೂಲೆಯಲ್ಲೇನೋ ಅಳುಕು. ‘ಸರಿಯಾಗಿ ಬರದಿದ್ದರೆ, ಅವರ ನಂಬಿಕೆ ಕಳೆದುಕೊಂಡರೆ, ಉಳಿದ ಆರ್ಡರ್ ಕೂಡ ಕೊಡದಿದ್ದರೆ’ ಇತ್ಯಾದಿ ‘ರೆ’ಗಳ ಸಾಲು. ತಕ್ಷಣ “ಶಿವನಿಚ್ಛೆ, ಆಗ್ಲಿ ಬಿಡಣ್ಣ. ಮಾಡಿಕೊಡಾನ” ಎಂದುಬಿಟ್ಟ. ಮುತ್ತಣ್ಣನಿಗೆ ಸಂತಸವೋ ಸಂತಸ. ಆಗಲೇ ಪಾರ್ಟಿಗೆ ಫೋನ್ ಹೊಡೆದು “ಅವರು ಒಪ್ಕೊಂಡಿದಾರೆ. ಭೋ ಕಷ್ಟಾಪಟ್ಟು ಒಪ್ಸಿದೀನಿ. ಹ್ಞಾಂ, ಹ್ಞೂಂ” ಎಂದು ತನ್ನ ಮಾತುಗಾರಿಕೆ ಮೆರೆದು ಮುಂಗಡ ಹಣ ಕೊಟ್ಟೇ ಹೋದ.
ಬುದ್ಧ ಆರಂಭವಾಗಬೇಕೆಂದರೆ ದೈತ್ಯ ಬೊಂಬೆಗಳು ಜಾಗ ಖಾಲಿ ಮಾಡಬೇಕಿತ್ತು. ‘ವಾರದಲ್ಲಿ ಈ ಬೊಂಬೆಗಳು ಒಣಗುತ್ತವೆ. ಬಿಸಿಲು ಜೋರಾಗಿದೆಯಲ್ಲ. ನಂತರ ಬಣ್ಣ ಮುಗಿಸಿದರೆ ಮುತ್ತಣ್ಣ ಬಂದು ಗಾಡಿಯಲ್ಲಿ ಏರಿಸಿಕೊಂಡು ಹೋಗ್ತಾನೆ. ಅಲ್ಲಿಯವರೆಗೂ ಬುದ್ಧನಿಗೆ ಮಣ್ಣಿನ ವ್ಯವಸ್ಥೆಯಾಗಬೇಕು, ತಾನೂ ಸಿದ್ಧನಾಗಬೇಕು’ ಎಂಬೆಲ್ಲ ಯೋಚನೆಗಳು ಗಂಗಾಧರನ ತಲೆಯಲ್ಲಿ ತಾಕಲಾಡುತ್ತಿದ್ದವು. ಮಣ್ಣು ಸಾಕಾಗದು ಎನಿಸಿ ಐದು ಚೀಲ ತರಿಸಿದ. ಜೊತೆಗೆ ಬುದ್ಧನ ಬಗ್ಗೆ ಪುಸ್ತಕಗಳನ್ನೂ ಕೊಂಡು ಓದಲಾರಂಭಿಸಿದ. ಕಪಿಲವಸ್ತುವಿನ ಗೌತಮ ರೋಗಿಷ್ಟನನ್ನು ಕಂಡದ್ದು, ಮಧ್ಯರಾತ್ರಿ ಪತ್ನಿ ಯಶೋಧರೆ, ಪುತ್ರ ರಾಹುಲನನ್ನು ಬಿಟ್ಟು ಎದ್ದು ಹೋದದ್ದು, ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದದ್ದು, ಎಲ್ಲ ಬಿಡದೇ ಓದಿದ. ನಾಗೇಶ ತನ್ನ ಲ್ಯಾಪ್ಟಾಪ್ನಲ್ಲಿ ಹೆಚ್ಚಿನ ಮಾಹಿತಿಯೊಡನೆ ಬುದ್ಧನ ಅನೇಕ ಚಿತ್ರಗಳನ್ನು ತೋರಿಸಿದ. ವೀಡಿಯೊಗಳನ್ನೂ ತೋರಿಸಿದ. ಅವನಿಗೇ ಅಚ್ಚರಿ. ಈ ಮೊದಲು ಅವನು ಯಾವುದಕ್ಕೂ ಇಷ್ಟು ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ. ‘ಸೊರ್ಗದಿಂದ ಬುದ್ಧ ಇಳಿದಂತೆ ಇರಬೇಕು’ ಎಂದಿದ್ದನಲ್ಲ ಮುತ್ತಣ್ಣ. ಅದಕ್ಕಾಗಿ ಇವೆಲ್ಲ ತಯಾರಿಗಳಾದವು. ಅಂತೂ ಬುದ್ಧನಿಗಾಗಿ ಮನೋಭೂಮಿಕೆ ಸಿದ್ಧವಾಯಿತು.
ವಾರದಲ್ಲಿ ಉಳಿದ ಕೆಲಸಗಳನ್ನು ಪೂರೈಸಿ ದೈತ್ಯ ಬೊಂಬೆಗಳಿಗೆ ಬಣ್ಣ ಬಳಿದು ಕಳಿಸಿದ್ದಾಯಿತು. ಮದ್ಯದ ಶೀಷೆಗಳನ್ನೆಲ್ಲ ಕಸಕ್ಕೆ ಎಸೆದಿದ್ದಾಯಿತು. ಆ ಜಾಗವನ್ನೆಲ್ಲ ಶುಚಿಗೊಳಿಸಿ ಮಣ್ಣು ಕಲಿಸಿ ಆರಂಭಿಸಿದ. ಬುದ್ಧನ ಪೀಠದಿಂದ ಮೊದಲಾಯಿತು. ಪೀಠವೇನೋ ಸರಿಯಾಗಿ ಬಂತು. ಆದರೆ ಡೊಳ್ಳು ಹೊಟ್ಟೆಗೆ, ದಪ್ಪದ ಕೈಕಾಲುಗಳ ದೈತ್ಯರಿಗೆ ಹೊಂದಿಕೊಂಡ ಅವನ ಕೈಗಳಿಂದ ಬುದ್ಧನ ಪ್ರಮಾಣಬದ್ಧ ಅಂಗಸೌಷ್ಟವ ಮೂಡಿಬರುವುದು ಕಷ್ಟವಾಗತೊಡಗಿತು. ಇಡೀ ದಿನ ಇದೇ ಕತೆಯಾಯಿತು. ಮಾಡಿ ಮುರಿದು ಮಣ್ಣು ಗುಪ್ಪೆ ಹಾಕಿದ್ದೇ ಬಂತು. ಮತ್ತೆ ಪಟವನ್ನೇ ದಿಟ್ಟಿಸಿದ. ಬುದ್ಧ ಅವನನ್ನು ನೋಡಿ ನಕ್ಕಂತೆ ಭಾಸವಾಯಿತು. ಇದಕ್ಕೆ ತನ್ನ ಕೈಚಳಕವಷ್ಟೇ ಸಾಲದೆನಿಸಿತು. “ಉಶ್’ ಎನ್ನುತ್ತ ಎದ್ದ. ಮರುದಿನ ಭಾನುವಾರ. ಪ್ರತಿಬಾರಿ ತಡವಾಗಿ ಏಳುವ ರೂಢಿ ಗಂಗಾಧರನದ್ದು. ಇಂದು ಪಾರ್ವತಿ ಬೆಳಗ್ಗೆ ಎದ್ದಾಗ ಗಂಡ ಪಕ್ಕದಲ್ಲಿರಲಿಲ್ಲ. ಅಚ್ಚರಿಯಾಯಿತು. ನೋಡುತ್ತ ಬಂದಾಗ ಆಗಲೇ ಸ್ನಾನಮಾಡಿ ಭಸ್ಮಭೂಷಿತನಾಗಿ ಧ್ಯಾನಮಗ್ನನಾಗಿದ್ದ. ಇದೇನಪ್ಪ ಹೊಸ ವರಸೆ, ಎನಿಸಿದರೂ ಒಳ್ಳೆಯದಾಯಿತೆಂದು ನಸುನಕ್ಕಳು. ಹಿಂದೆಯೇ ಎದ್ದು ಬಂದ ನಾಗೇಶ ಅಪ್ಪನನ್ನು ಧ್ಯಾನಸ್ಥ ಸ್ಥಿತಿಯಲ್ಲಿ ನೋಡಿದ. ಹಿಂದಿನ ದಿನ ಆಕಾರ ಸರಿಯಾಗಿ ಬಾರದೆ ಒದ್ದಾಡಿದ ನೆನಪಾಯಿತು. ಏನೋ ಯೋಚನೆ ಮಾಡುತ್ತ ಕಾಫಿ ಕುಡಿದವನೇ ಎದ್ದು ನಡೆದ.
ಧ್ಯಾನ ಮುಗಿಸಿ ಗಂಗಾಧರ ತಿಂಡಿ ತಿಂದು ಬರುವಷ್ಟರಲ್ಲಿ ನಾಗೇಶ ಸ್ನಾನ, ತಿಂಡಿ ಮುಗಿಸಿ ಮಣ್ಣನ್ನು ಹದ ಮಾಡುತ್ತಿದ್ದ. ಅದಕ್ಕೆ ನೀರು ಸಿಂಪಡಿಸಿ ಮಿದ್ದಿ ಮಿದ್ದಿ ಮೆತ್ತಗೆ ಬೆಣ್ಣೆಯಂತಾಗಿಸಿದ್ದ. ಗಂಗಾಧರನಿಗೆ ಮಗನ ವರ್ತನೆ ಅಚ್ಚರಿಯೊಂದಿಗೆ ಆನಂದವನ್ನು ತರಿಸಿತ್ತು. ಪಾರ್ವತಿ ಸೊಸೆಯೊಂದಿಗೆ ಕುತೂಹಲದಿಂದ ಬಂದು ನಿಂತಳು. ಮೊಮ್ಮಗ ಚಿನ್ಮಯ್ ಮಣ್ಣಿನಲ್ಲಿ ಆಟವಾಡತೊಡಗಿದ. ಎಲ್ಲರ ಸಹಕಾರ ಗಂಗಣ್ಣನಲ್ಲಿ ಉತ್ಸಾಹ ಹೆಚ್ಚಿಸಿತ್ತು. ತದೇಕಚಿತ್ತದಿಂದ ಕಾರ್ಯ ಆರಂಭಿಸಿದ. ಕಾಲುಗಳು, ಸೊಂಟದ ಭಾಗ, ಹೊಟ್ಟೆ, ಎದೆಯ ಭಾಗ, ಭುಜ ಮತ್ತು ಕೈಗಳು ಚೆನ್ನಾಗಿಯೇ ಮೂಡಿಬಂದವು. ಮುಂದೆ ಗಂಗಾಧರ ರೂಪಿಸುತ್ತಿದ್ದಂತೆ ಹಿಂದೆ ಮೂರ್ತಿಗೆ ಮಣ್ಣು ಲೇಪಿಸಿ ಸರಿ ಮಾಡುತ್ತಿದ್ದ ನಾಗೇಶ. ಊಟ ಮುಗಿಸಿ ಮತ್ತೆ ಕೆಲಸ ಮುಂದುವರಿಯಿತು. ನಂದಿನಿಯೂ ಸೇರಿ ಮನೆಯವರೆಲ್ಲ ಆಗಾಗ ಬಂದು ನೋಡುತ್ತಿದ್ದರು. ಮಧ್ಯೆ ಕಾಫಿ ಪೂರೈಕೆಯಾಗುತ್ತಿತ್ತು. ಸಂಜೆಯಾಗುವಷ್ಟರಲ್ಲಿ ಬುದ್ಧನ ಶರೀರ ಪ್ರಮಾಣಬದ್ಧವಾಗಿ ಮೂಡಿಬಂದಿತ್ತು. ಚೌಕಾಸನ ಹಾಕಿ ಕುಳಿತ ರೀತಿ, ಮೈಮೇಲಿನ ನಿಲುವಂಗಿ, ಅದರ ನೆರಿಗೆಗಳು ನೈಜವೆನಿಸುತ್ತಿದ್ದವು. ಗಂಗಾಧರ ಅದನ್ನೊಮ್ಮೆ ತೃಪ್ತಿಯಿಂದ ನೋಡಿ ಎದ್ದ. ಇಡೀ ಪರಿವಾರವೇ ಅಂದು ಸಂತಸದಲ್ಲಿ ಮಿಂದಿತ್ತು.
ಮರುದಿನವೂ ಧ್ಯಾನ ಮುಂದುವರಿಯಿತು. ಬುದ್ಧನ ಮೂರ್ತಿಯ ಆರ್ಡರ್ ಬಂದಾಗಿನಿಂದ ಗಂಗಾಧರ ಶಾಂತನಾಗಿ ಹಸನ್ಮುಖಿಯಾಗಿದ್ದ. ಬಂದು ಕೆಲಸ ಆರಂಭಿಸಿದವನನ್ನು ನಾಗೇಶ “ಅಪ್ಪಾ, ತುಂಬಾ ಕೆಲಸವಿದ್ದರೆ ರಜ ಹಾಕಲಾ?” ಎಂದು ಕೇಳಿದ. “ಬೇಡ ಕಣ್ಮಗಾ. ನಾನು ಮಾಡಿಕೋಳ್ತೇನೆ, ತೀಡಿಕೊಳ್ತೇನೆ” ಎಂದವ ಉಳಿದ ಕೆಲಸ ಮುಂದುವರಿಸಿದ. ಆದರೂ ನಾಗೇಶ ಬಿಡದೇ ಬುದ್ಧನಮೂರ್ತಿಯ ಕೈ ಬೆರಳುಗಳು, ಕಾಲ್ಬೆರಳುಗಳ ವಿವಿಧ ಭಂಗಿಗಳನ್ನು ತನ್ನ ಲ್ಯಾಪ್ಟಾಪಿನಲ್ಲಿ ತೋರಿಸಿ ಮಣ್ಣು ಹದ ಮಾಡಿಟ್ಟು ಆಫೀಸಿಗೆ ಹೊರಟ. ಸಂಜೆ ಅವನು ಬರುವಷ್ಟರಲ್ಲಿ ಬುದ್ಧನ ಕೈಬೆರಳುಗಳು ಪ್ರಮಾಣಬದ್ಧವಾಗಿ ಆಶೀರ್ವದಿಸುತ್ತಿದ್ದವು. ನಿಲುವಂಗಿಯ ಒಂದೊಂದು ನೆರಿಗೆಯೂ ತೀಡಿಕೊಂಡು ಸ್ಫುಟವಾಗಿ ಕುಳಿತಿದ್ದವು. ಇಡೀ ದಿನ ಉತ್ಸಾಹಿತನಾಗಿದ್ದ ತಾತನ ಮೇಲೆ ಚಿನ್ಮಯ್ನಿಗೆ ಪ್ರೀತಿ ಉಕ್ಕಿ ಅವನ ಬೆನ್ನ ಮೇಲೆ ಸವಾರಿ ಮಾಡಿದ. ಶಾಂಭವಿ ಕೂಡ ಖುಷಿಯಾಗಿದ್ದಳು.
ದಿನೇ ದಿನೇ ಧ್ಯಾನದ ಸಮಯ ಹೆಚ್ಚುತ್ತಿತ್ತು. ಬುದ್ಧನ ಮುಖ ಸುಂದರವಾಗಿ ಮೂಡಿತು. ಭುಜಕ್ಕೆ ತಾಗುವಂಥ ಕಿವಿಗಳು, ತೊಟ್ಟ ಕರ್ಣಕುಂಡಲಗಳು, ಗುಂಗುರಾಗಿ ಕುಳಿತ ಕೂದಲು, ಎಲ್ಲ ಚೆನ್ನಾಗಿಯೇ ಮೂಡಿದವು. ಆದರೆ ಕಣ್ಣು ಬರುತ್ತಿಲ್ಲ. ಬಂದರೂ ಬುದ್ಧನ ಮೂರ್ತಿಗೆ ಬೇಕಾದ ಕಾರುಣ್ಯಭಾವ ಸೂಸುತ್ತಿಲ್ಲ. ಮತ್ತೆ ತೀಡಿದ. ಮಣ್ಣು ಮೆತ್ತಿ ಹೊಸದಾಗಿಯೇ ಮಾಡಿದ. ಆದರೆ ಅವನಿಗೆ ತೃಪ್ತಿಯಾಗುತ್ತಿಲ್ಲ. ಹತ್ತಿರದಿಂದ ಮಾಡುತ್ತಾನೆ. ದೂರ ನಿಂತು ನೋಡುತ್ತಾನೆ. ಉಹ್ಞೂಂ, ಸರಿ ಹೋಗುತ್ತಿಲ್ಲ. ಅವನ ತಾಕಲಾಟವನ್ನು ಗಮನಿಸಿದ ಪಾರ್ವತಿ “ಕಾಫಿಬದಲು ಬೇರೇನಾದರೂ ಬೇಕೆ?” ಎಂದು ಇಂಗಿತಾರ್ಥದಲ್ಲಿ ಕೇಳಿದಳು. “ಛೇ! ಛೇ, ನಾನು ಮದ್ಯ, ಮಾಂಸಾಹಾರ ಬಿಟ್ಟುಬಿಟ್ಟಿದ್ದೇನೆ” ಎಂದ ಗಂಗಾಧರ. “ಓಹೋ! ಬುದ್ಧ ಸಿದ್ಧನಾಗುವವರೆಗೂ?” ಎಂಬ ಪ್ರಶ್ನೆ ಕೊಂಚ ಅಚ್ಚರಿಯೊಂದಿಗೆ ಅವಳಿಂದ ಮೂಡಿಬಂದಿತ್ತು. “ಇಲ್ಲ, ಕೊನೆ ಉಸಿರಿರುವ ತನಕ” ಎಂದದ್ದನ್ನು ಅಹಿಂಸಾಪ್ರಿಯ ಬುದ್ಧ ಕೇಳಿಸಿಕೊಂಡಂತೆ ಭಾಸವಾಯಿತು. ಪಾರ್ವತಿಗೆ ಅದೆಷ್ಟು ಸಂತೋಷವಾಯಿತೊ, ಬುದ್ಧನಿಗೆ ಮನದಲ್ಲೇ ವಂದಿಸಿದಳು. ಎಲ್ಲ ಚಟುವಟಿಕೆಗಳನ್ನು ನಿತ್ಯ ನೋಡುತ್ತಿದ್ದ ನಂದಿನಿಯ ಮನದಲ್ಲೂ ಭಾವನೆಗಳು ಉಮ್ಮಳಿಸಿದವು. ತಾನೂ ಬಂದು “ಇದು ಕೊಂಚ ದಪ್ಪ ಆಯ್ತಲ್ಲವೇ ಅಪ್ಪ” ಎಂದು ಸಲಹೆಯನ್ನೂ ನೀಡುತ್ತಿದ್ದಳು. ಯಾವುದೋ ಯೋಜನೆಯನ್ನೂ ಹಾಕುತ್ತಿದ್ದ ಹಾಗಿತ್ತು. ಒಟ್ಟಿನಲ್ಲಿ ಬುದ್ಧ ಅವರೆಲ್ಲರ ಬದುಕನ್ನು ಬದಲಿಸಿದ್ದು ಸುಳ್ಳಲ್ಲ.
ಮರುದಿನ ಧ್ಯಾನದ ಅವಧಿ ಇನ್ನೂ ಹೆಚ್ಚಾಗಿತ್ತು. ಬುದ್ಧನ ಮೂರ್ತಿಯ ಮುಂದೆ ಬಂದು ಕುಳಿತವನ ಮನವೆಲ್ಲ ಕಣ್ಣಿನಲ್ಲೇ ಕೇಂದ್ರೀಕೃತವಾಗಿತ್ತು. ಕೈ ಮತ್ತೆ ಹೊಸದಾಗಿಯೇ ರೂಪಿಸುತ್ತಿತ್ತು. ತದೇಕಚಿತ್ತನಾಗಿ ತೀಡುತ್ತಿದ್ದವನಿಗೆ ಹೊರಗೆ ಮಾರಿಮುತ್ತು ಬಂದದ್ದೂ ಅರಿವಿಗೆ ಬರಲಿಲ್ಲ. ಆಗಲೇ ಅಲ್ಲಿ ನಂದಿನಿಯ ಗೆಳೆಯ ಸುಕುಮಾರನ್ ಬಂದು ಕುಳಿತು ಅವಳ ಜೊತೆ ಹರಟುತ್ತಿದ್ದ. ಶಾಂಭವಿ ಮಗುವನ್ನು ನರ್ಸರಿಗೆ ಬಿಡಲು ಹೋಗಿದ್ದರೆ ಪಾರ್ವತಿ ಸ್ನೇಹಿತೆಯ ಮನೆಗೆ ಹೋಗಿದ್ದಳು. ಮುತ್ತಣ್ಣ ಕೋಣೆಯಲ್ಲಿ ಇಣುಕಿ ಸುಂದರವಾಗಿ ಮೂಡಿಬರುತ್ತಿದ್ದ ಬುದ್ಧನನ್ನು ಕಂಡು ಆನಂದಗೊಂಡ. ಗಂಗಣ್ಣನ ತಾದಾತ್ಮ್ಯತೆಯನ್ನು ಭಂಗಪಡಿಸಲಿಚ್ಛಿಸದೆ ಹೊರಗೆ ಅಂಗಳದಲ್ಲಿ ಕುಳಿತಿದ್ದ ಸುಕುಮಾರನ್ ಜೊತೆ ಮಾತಿಗಿಳಿದ. “ನಿಮ್ಮನ್ನು ಎಲ್ಲೋ ನೋಡಿದಂತಿದೆ. ಹ್ಞಾಂ, ಅದೇ ಬೆಂಗಳೂರಿನಲ್ಲಿ. ನಮ್ಮ ಶ್ರೀನಿವಾಸ ಶೆಟ್ಟರ ಅಳಿಯ ಸುಕುಮಾರನ್ ಅಲ್ಲವೇ ನೀವು? ಅವರ ಮಗಳು ಲಕ್ಷ್ಮಿ ಮತ್ತು ನನ್ನ ಮಗಳು ಆತ್ಮೀಯ ಗೆಳತಿಯರು. ಹಾಗಾಗಿ ನಾನು ನಿಮ್ಮ ಮದುವೆಗೆ ಬಂದಿದ್ದೆ. ಹೇಗಿದ್ದಾರೆ ನಿಮ್ಮ ಹೆಂಡತಿ ಲಕ್ಷ್ಮಿ ಮತ್ತು ಮಗಳು?” ಎಂದು ಕೇಳಿದಾಗ ಸುಕುಮಾರನ್ನ ಮುಖ ಬಿಳಿಚಿಕೊಂಡಿತು. ಬಾಗಿಲ ಬಳಿಯೇ ನಿಂತು ಕೇಳುತ್ತಿದ್ದ ನಂದಿನಿಗೆ ಅಚ್ಚರಿಯಾಗಿತ್ತು. ನಿಜವಾಗಿ ಹೇಳಬೇಕೆಂದರೆ ಅಪ್ಪನ ಶಾಂತ ಮನಃಸ್ಥಿತಿಯನ್ನು ಗಮನಿಸಿ ಅವಳು ತಮ್ಮ ಮದುವೆಯ ಬಗ್ಗೆ ಮಾತನಾಡಲು ಸುಕುಮಾರನ್ನನ್ನು ಕರೆಸಿದ್ದಳು. ಆದರೆ ವಿಷಯ ಬೇರೆತ್ತಲೋ ತಿರುಗಿ ಬಣ್ಣ ಬಯಲಾಗುತ್ತಿತ್ತು.
ಮಾರಿಮುತ್ತು ಮತ್ತೆ ಮುಂದುವರಿಸುತ್ತ “ನಿಮ್ಮ ತಂದೆಯವರ ಪರಿಚಯವೂ ನನಗಿದೆ. ಅವರು ಸಿವಿಲ್ ಕಾಂಟ್ರಾಕ್ಟರ್ ಆಗಿದ್ದಾಗ, ನಾನು ಮಣ್ಣು, ಸಿಮೆಂಟು ಇತ್ಯಾದಿಗಳನ್ನು ಪೂರೈಸುತ್ತಿದ್ದೆ. ನಿಮ್ಮ ಮದುವೆ ಗಟ್ಟಿಯಾಗುವಾಗ ಹುಡುಗಿಯ ಬಗ್ಗೆ, ಮನೆತನದ ಬಗ್ಗೆ ವಿಚಾರಿಸಲು ನಿಮ್ಮ ತಂದೆ ನಮ್ಮ ಮನೆಗೆ ಬಂದಿದ್ದರು. ಈಗ ಹೇಗಿದ್ದಾರೆ ಅವರು?” ಎಂದು ಪೂರ್ಣ ಜಾತಕವನ್ನೇ ಬಿಡಿಸಿದಾಗ ಅವನ ಮುಖದ ರಂಗು ಇಳಿದಿತ್ತು. “ಚೆನ್ನಾಗಿದ್ದಾರೆ, ಎಲ್ಲ ಚೆನ್ನಾಗಿದ್ದಾರೆ” ಎಂದು ಹೇಳುತ್ತ ಅಪ್ರತಿಭನಾಗಿ ನಂದಿನಿಯತ್ತ ತಿರುಗಿಯೂ ನೋಡದೆ ಕಾಲ್ತೆಗೆದ. ನಂದಿನಿ ದೊಡ್ಡ ಆಘಾತಕ್ಕೊಳಗಾದವಳಂತೆ ಕೋಣೆಗೆ ಹೋಗಿ ಸದ್ದಿಲ್ಲದಂತೆ ಬಿಕ್ಕಳಿಸುತ್ತ ಹಾಸಿಗೆಯ ಮೇಲೆ ಬೋರಲು ಬಿದ್ದುಕೊಂಡಳು. ಅವನ ಹಾಡು, ಮಾತಿನ ಶೈಲಿ ಅವಳ ಹೃದಯವನ್ನು ಇರಿಯುತ್ತಿದ್ದವು. ಎಂತಹಾ ಮೋಸಗಾರ. ಸದ್ಯ! ಮದುವೆಗೆ ಮೊದಲೇ ಗೊತ್ತಾಯಿತಲ್ಲ ಎಂದು ಸಂತೈಸಿಕೊಂಡಳು. ಅದಾವ ಅರಿವೂ ಇಲ್ಲದೇ ಬುದ್ಧನ ಕಣ್ಣುಗಳನ್ನು ದಯಾದ್ರವಾಗಿ ಮೂಡಿಸಿದ ಗಂಗಣ್ಣ. ಕೆಲಸ ಪೂರೈಸಿ ವಿವಿಧ ಕೋನಗಳಿಂದ ನೋಡಿ ತೃಪ್ತಿಪಟ್ಟ. ಒಳಗೆ ಬಂದ ಮಾರಿಮುತ್ತು “ಭೋ, ಭೋ, ಪಸಂದಾಗದೆ ಕನಣ್ಣ” ಎಂದು ಬೆನ್ನು ತಟ್ಟಿದ. “ಇನ್ನು ಹತ್ತು ದಿನಕ್ಕೆಲ್ಲಾ ಬರ್ತೇನೆ. ಅಷ್ಟರಲ್ಲಿ ಬಣ್ಣ ಆಗಿರ್ತದಲ್ಲ, ಅವರಿಗೆ ಇದೇ ತಿಂಗಳು ತಲಪಿಸಬೇಕು” ಎಂದು ಹೇಳಿ ಹೋದ.
ಅತ್ತು ಸಮಾಧಾನ ಮಾಡಿಕೊಂಡ ನಂದಿನಿ ಅಂದೇ ಒಂದು ನಿರ್ಧಾರಕ್ಕೆ ಬಂದಳು. ಅಪ್ಪನನ್ನು ಕರೆದು, “ಅಪ್ಪಾ, ನಾನು ನೀವು ತೋರಿಸಿದ ಹುಡುಗನನ್ನೇ ಮದುವೆಯಾಗುತ್ತೇನೆ. ನಿಮಗಿಂತ ನನ್ನ ಹಿತ ಬಯಸುವವರು ಜಗತ್ತಿನಲ್ಲಿ ಯಾರಿದ್ದಾರಪ್ಪಾ?” ಎನ್ನುತ್ತ ಹನಿಗಣ್ಣಾದಳು. ಹಿಂದಿನ ವಿಷಯ ತಿಳಿಯದ ಅವನಿಗೆ ಅಚ್ಚರಿಯ ಜೊತೆ ಸಂತಸ. ಆದರೆ ಮಗಳ ಕೆಂಪಾದ ಕಣ್ಣುಗಳು ಬೇರೇನೋ ಕತೆ ಹೇಳುತ್ತಿವೆ ಎಂದುಕೊಂಡ. ಅಷ್ಟರಲ್ಲಿ ಹಿಂದೆ ಬಂದ ಪಾರ್ವತಿಗೆ ತೆಕ್ಕೆ ಬಿದ್ದು ಅತ್ತಳು ನಂದಿನಿ. ವಿಷಯವನ್ನೆಲ್ಲ ವಿವರಿಸಿದಳು. ಮತ್ತೆ ಮುಂದುವರಿಸದೆ ಇಬ್ಬರೂ ಅವಳನ್ನು ಸಂತೈಸಿದರು. ಗಂಗಣ್ಣ ಎಷ್ಟೋ ಹೊತ್ತು ಮಗಳ ತಲೆ ನೇವರಿಸುತ್ತ ಕುಳಿತೇ ಇದ್ದ. ಗುಡ್ಡದಂತಹ ಸಮಸ್ಯೆ ತಾನೇ ತಾನಾಗಿ ಪರಿಹಾರವಾಗಿತ್ತು.
ಮರುದಿನ ಧ್ಯಾನದಲ್ಲಿ ಲೀನನಾಗಿದ್ದ ಗಂಗಣ್ಣ ಸಮಚಿತ್ತನಾಗಿದ್ದ. ತಿಂಡಿ ಮುಗಿಸಿ ಮೂರ್ತಿಯ ಮುಂದೆ ವಿರಾಜಮಾನನಾದ. ಬುದ್ಧನ ಮೂರ್ತಿಯ ನಿರ್ಮಾಣ ಇನ್ನೇನು ಮುಗಿಯುತ್ತಿತ್ತು. ತುಟಿಗಳಲ್ಲಿ ಮಂದಹಾಸ ಮೂಡಿ ಬರಬೇಕಿತ್ತು. ನೋಡುವವರನ್ನು ಮಂತ್ರಮುಗ್ಧಗೊಳಿಸುವ, ಜಗತ್ತನ್ನೇ ಗೆಲ್ಲುವ ಮಂದಹಾಸ. ನಾಗೇಶ ಮುಖಕ್ಕೆಲ್ಲ ಕೊಂಚ ನೀರು ಸಿಂಪಡಿಸಿ ಸರಿ ಮಾಡಿ ಹೋಗಿದ್ದ. ಕೆಲಸ ಆರಂಭಿಸಿ ಅದರಲ್ಲಿ ಮುಳುಗಿಬಿಟ್ಟ ಗಂಗಣ್ಣ. ತುಮಕೂರಿನಿಂದ ಬಂದ ಅವನ ಸಹೋದರರನ್ನು ಸೀದಾ ಅಡುಗೆಮನೆಗೆ ಕರೆದಳು ಪಾರ್ವತಿ. ತಿಂಡಿಯೊಂದಿಗೆ ಅವಳೊಂದಿಗೆ ಮಾತೂ ಮುಗಿಸಿ ಗಂಗಾಧರನತ್ತ ಬಂದರು. ಉಭಯಕುಶಲೋಪರಿ ಮುಗಿಸಿದ ನಂತರ “ಅಪ್ಪ ಕೊನೆ ದಿನಗಳಲ್ಲಿ ತುಮಕೂರಿನಲ್ಲಿ ತೆಗೆದಿದ್ದ ಸೈಟೊಂದೈತೆ. ಆಗ ಎರಡು ಸಾವ್ರಕ್ಕೆ ತಕಂಡಿದ್ದು. ಈಗ ಇಪ್ಪತ್ತು ಲಕ್ಷ ಬಾಳತೈತೆ. ಹೇಗೂ ನೀನು ಅಲ್ಲಿಗೆ ಬರಾಕಿಲ್ಲ” ಎಂದು ಪೀಠಿಕೆ ಹಾಕಿದರು. ಅವರ ಮಾತಿನ ವರಸೆ ಅವನಿಗೆ ಅರ್ಥವಾಯಿತು. ಅದಲ್ಲದೆ ಆ ಸೈಟು ತೆಗೆದದ್ದು ತಾನು ಕಳಿಸಿದ ದುಡ್ಡಿನಿಂದಲೇ ಎಂಬುದೂ ಗೊತ್ತಿತ್ತು. “ಹೌದಣ್ಣ, ಈಗ ನಾನಲ್ಲಿಗೆ ಬಂದು ವಾಸ ಮಾಡಲ್ವಲ್ಲಾ. ನೀವುಗಳೇ ತಕೊಳ್ಳಿ. ಹಾಗೂ ನಾವೇನೂ ಬೇರೆ ಅಲ್ಲವಲ್ಲ. ನಿಮ್ಮದಿದ್ದರೆ ನನ್ನದಿದ್ದ ಹಾಗೇ” ಎಂದುಬಿಟ್ಟ. ಬಂದವರ ಮುಖ ಅರಳಿತು. ಆದರೂ ದೊಡ್ಡವನು “ಬೇಡ ಕಣಪ್ಪ. ಲೋಕದಲ್ಲಿ ಯಾವುದು ಶಾಶ್ವತ ಹೇಳು. ಹಂಚಿತಿಂದರೆ ಪ್ರೀತಿ ಉಳೀತೈತೆ. ಅದನ್ನ ಮಾರಿ ಎಲ್ರೂ ಪಾಲು ತಕಳ್ಳಾಣ” ಎಂದ. “ಸರಿ, ನೀವೆಂಗೇಳ್ತೀರೊ, ಅಂಗೆ” ಎಂದುಬಿಟ್ಟ ಗಂಗಣ್ಣ. ಬುದ್ಧನ ತುಟಿಗಳಲ್ಲಿ ಮಂದಹಾಸ ಮೂಡಿತು. ಜಗತ್ತಿನ ಎಲ್ಲ ಕಷ್ಟಗಳಿಗೆ ಸಮಾಧಾನ ನೀಡುವ ಮುಗುಳ್ನಗು, ಪರಿವರ್ತನೆಗೆ ಕಾರಣವಾಗುವ ಮಂದಹಾಸ.
ರಾತ್ರಿ ಹೈದರಾಬಾದಿನಿಂದ ಶಂಕರನ ಫೋನ್ ಬಂದಿತ್ತು. ಪಾರ್ವತಿಯೊಂದಿಗೆ ಮಾತನಾಡುತ್ತ “ಎಲ್ಲಾ ಹೇಗಿದ್ದೀರಿ? ನಾಗೇಶ ಫೋಟೋ ಕಳಿಸಿದ್ದ. ಬುದ್ಧ ತುಂಬಾ ಚೆನ್ನಾಗಿ ಮೂಡಿದ್ದಾನೆ. ನಾನೂ ಊರಿಗೆ ಬಂದು ಎಷ್ಟೋ ದಿನಗಳಾದ್ವು. ನಿನ್ನ ಸೊಸೆ ಶಮಂತಾ ಕೂಡ ನಿಮ್ಮನ್ನೆಲ್ಲಾ ನೋಡಬೇಕು, ಜೊತೆ ಇರಬೇಕು ಅಂತಿದಾಳೆ. ಬುದ್ಧನಿಗೆ ಬಣ್ಣ ಮಾಡಕ್ಕೂ ಅಪ್ಪಂಗೆ ಸಹಾಯ ಮಾಡ್ದಂಗಾಗುತ್ತೆ. ಬೇಗಾನೇ ಬರ್ತೀವಿ” ಎಂದ. ಅವಳ ಸಂತಸ ಇನ್ನೂ ಹೆಚ್ಚಾಗಿತ್ತು. ಸೊಸೆ ತಾನಾಗಿ ಬರುತ್ತಿದ್ದಾಳಲ್ಲ, ಬುದ್ಧನ ಮೂರ್ತಿಯ ನಿರ್ಮಾಣ ಗಂಗಾಧರನ ವ್ಯಕ್ತಿತ್ವವನ್ನು ಬೇರೆಯಾಗಿಯೇ ಚಿತ್ರಿಸಿತ್ತು. ಎಲ್ಲ ಬುದ್ಧನ ಪವಾಡವೇ? ಗೊತ್ತಿಲ್ಲ.
ಹೇಳಿದ ಸಮಯಕ್ಕೇ ಸರಿಯಾಗಿ ಮಾರಿಮುತ್ತು ಟ್ರಕ್ಕು ಮತ್ತು ಆಳುಗಳೊಂದಿಗೆ ಆಗಮಿಸಿದ್ದ. ಆಗಲೇ ಬುದ್ಧ ಪೂರ್ಣವಾಗಿ ಸಿದ್ಧನಾಗಿದ್ದ. ಶಂಕರ ಕುಟುಂಬ ಸಮೇತನಾಗಿ ಬಂದು ಬ್ರಶ್ ಹಿಡಿದಿದ್ದಾಗಿತ್ತು. ಬಣ್ಣವೂ ಅಷ್ಟೇ ಚೆನ್ನಾಗಿ ಮೂಡಿ ಶಾಂತಮೂರ್ತಿಯ ಕಳೆ ಇಮ್ಮಡಿಸಿತ್ತು. ಮನೆಯಲ್ಲಿ ಎಲ್ಲರಿಗೂ ಬುದ್ಧನೊಂದಿಗೆ ಭಾವನಾತ್ಮಕವಾದ ಸಂಬಂಧ. ಯಾರಿಗೂ ಕಳಿಸಲು ಮನಸ್ಸಿಲ್ಲ. ಪುಟ್ಟ ಚಿನ್ಮಯ್ನಂತೂ “ಬುದ್ಧ ನಂಗೆ ಬೇಕು, ಕಲಿಸ್ಬೇಡ” ಎಂದು ತಾಕೀತು ಮಾಡಿಯೇ ಶಾಲೆಗೆ ಹೋಗಿದ್ದ. ಆದರೆ ಬುದ್ಧ ಆ ಕಾಲದಲ್ಲೇ ಮಧ್ಯರಾತ್ರಿಯಲ್ಲಿ ರಾಜಭೋಗವನ್ನು ತ್ಯಜಿಸಿ ಹೊರಟವನು ಈಗ ಬಿಟ್ಟಾನೇ? ಹೊರಡಲು ಸಿದ್ಧನಾಗೇ ಇದ್ದ. ಮತ್ತೆ ಇನ್ನೆಷ್ಟೋ ಗಮ್ಯಗಳು, ಇನ್ನೆಷ್ಟೋ ಜನರನ್ನು ಪರಿವರ್ತಿಸಬೇಕು. ಇಲ್ಲಿಯ ಕೆಲಸವಾಗಿತ್ತು. ಮಾರಿಮುತ್ತು “ಭೋ, ಭೋ ಸಂದಾಕೈತೆ ಕನಣ್ಣ. ಪಾರ್ಟಿ ಭೋ ಕುಶಿ ಪಡ್ತಾರೆ. ನಿಂಗೆ ಯೋಳಿದ್ದಕ್ಕೂ ಸಾರ್ಥಕ ಆಯ್ತು” ಎಂದ. ಆಳುಗಳ ಮೂಲಕ ಟ್ರಕ್ನಲ್ಲಿ ಕುಳಿತ ಬುದ್ಧನನ್ನು ಎಲ್ಲರೂ ಭಾರವಾದ ಹೃದಯದಿಂದಲೇ ಬೀಳ್ಕೊಟ್ಟರು. ಕೈ ಬೀಸುತ್ತಿದ್ದ ಮಾರಿಮುತ್ತು ಏನನ್ನೋ ನೆನಪಿಸಿಕೊಂಡಂತೆ ಬಂದು “ಹ್ಞಾಂ, ಇನ್ನೆರೆಡು ರಾಕ್ಷಸ ಬೊಂಬೆಗಳ ಆರ್ಡರ್ ಐತೆ ಕನಣ್ಣ ಕಂಚಿಯಂದ” ಎಂದ. ತಕ್ಷಣ ದೀರ್ಘವಾಗಿ ಉಸಿರು ಬಿಟ್ಟ ಗಂಗಾಧರ “ಬೇಡಪ್ಪಾ, ಸೆಂಥಿಲ್ಗೆ ಹೇಳು. ಖುಷಿಯಿಂದ ಮಾಡ್ತಾನೆ” ಎಂದ. ಮಾರಿಮುತ್ತು ಅಚ್ಚರಿಯಿಂದ “ಯಾಕಣ್ಣೋ, ಬೇಡಾಂತಿದೀಯಾ?” ಎಂದು ಕೇಳಿದ. “ನಾನು ಮಾಡುವ ಮೂರ್ತಿಗಳ ಗುಣವನ್ನೇ ಆವಾಹಿಸ್ಕೊಂಡು ಬಿಡ್ತೀನಿ. ಅದು ನನ್ನ ದೌರ್ಬಲ್ಯವೋ ಗೊತ್ತಿಲ್ಲ. ಬಹಳ ಪರಿಶ್ರಮಪಟ್ಟು ರೂಪಾಂತರಗೊಂಡು ಮನುಷ್ಯನಾಗಿದೀನಿ” ಎಂದು ಟ್ರಕ್ನಲ್ಲಿ ಪ್ಲಾಸ್ಟಿಕ್ ಶೀಟ್ ಹೊದ್ದು ಕುಳಿತ ಮೂರ್ತಿಯನ್ನೇ ನೋಡಿದ. ಬುದ್ಧ ಮಂದಹಾಸ ಬೀರುತ್ತಿದ್ದ. ಅದೇ ಮಂದಹಾಸ.