ಅವನನ್ನು ನೋಡಿದರೆ ಆತ ಒಂದೆರಡು ದಿನ ಸ್ನಾನ ಮಾಡದೆ ಇದ್ದ ಹಾಗೆ ಇದ್ದ. ಕೆದರಿದ ತಲೆಕೂದಲು, ಎಣ್ಣೆ ಹಚ್ಚಿಕೊಂಡ ಥರ ಇರುವ ಮುಖ, ಬಾಯಿ ತೆರೆದರೆ ಕಾಣುವ ಒಂದು ಹಲ್ಲು ಕಿತ್ತುಹೋದ ಸ್ಥಳ, ಒರಟಾದ ತುಟಿ, ಬಲಿಷ್ಠವಾದ ಕಾಲುಗಳು ಮತ್ತು ಅವನೇನಾದರೂ ಕೈಯೆತ್ತಿ ಬಾರಿಸಿದರೆ ಎಂಥವನನ್ನೂ ಆಯತಪ್ಪಿ ಬೀಳಿಸಬಹುದೆನ್ನುವಂಥ ಬಾಹುಗಳು ಅವನಿಗಿದ್ದುವು. ಅಂಥ ಅವನು ಕುಳಿತ ಭಂಗಿ, ಅಂದರೆ ಎಡದ ಕಾಲನ್ನು ಮಡಚಿ ಬಲದ ತೊಡೆಯ ಮೇಲಿಟ್ಟ ರೀತಿ ಅವರಿಗೆ ವಿಚಿತ್ರವೆನ್ನಿಸಿತ್ತು. ಆದರೆ ಆತ ತನ್ನಲ್ಲಿ ಏನೂ ಆಡದೆ ನೇರವಾಗಿ ಕೊಳಲು ಬಾರಿಸಲು ಹೊರಟ ಧಾಷ್ಟ್ರ್ಯ ಕುಪ್ಪಣ್ಣಯ್ಯನವರಿಗೆ ಸ್ವಲ್ಪ ಅಸಹನೆಗೆ ಕಾರಣವಾಯಿತು. ಆದರೂ ಅವರು ಅವನು ಕೊಳಲು ಬಾರಿಸುವುದನ್ನು ಗಂಭೀರವಾಗಿ ಮತ್ತು ಪೂರ್ತಿಯಾಗಿ ವೀಕ್ಷಿಸುತ್ತ ಆಹ್ಲಾದಿಸಿದರು.
ಈ ಕಥೆಗೆ ಏನೆಂದರೂ ನನ್ನ ಲೆಕ್ಕದಲ್ಲಿ ಮೂವತ್ತು ನಲವತ್ತು ವರುಷವಾಗಿರಬಹುದು ಅಥವಾ ಇನ್ನೂ ಜಾಸ್ತಿ. ಯಾಕೆಂದರೆ ನಮ್ಮ ಹಾಗೆ ಕಥೆಗೂ ಚಲನಶೀಲತೆ ಇರುತ್ತದೆ. ಅದು ನಿಂತಲ್ಲಿ ನಿಲ್ಲುವುದಿಲ್ಲ. ಚಲಿಸುತ್ತಲೇ ಇರುವುದರಿಂದ ಅದರ ಆಯುಸ್ಸು ಇಷ್ಟೇ ಎಂದು ಹೇಳಲಾಗುವುದಿಲ್ಲ. ಒಂದು ಮಾತ್ರ ಸತ್ಯ. ನಮಗೆ ಸಾವು ಇರುತ್ತದೆ, ಕಥೆಗಳಿಗೆ ಸಾವು ಇರುವುದಿಲ್ಲ.
ನಾನು ಇಲ್ಲಿನ ಕಥಾನಾಯಕನನ್ನು ನೋಡಿದ್ದೇನೆಂದರೆ, ಹೌದು ನೋಡಿದ್ದೇನೆ ಎಂದೇ ಇಟ್ಟುಕೊಳ್ಳಿ; ‘ಇಲ್ಲ’ ಎಂದರೆ ‘ಇಲ್ಲ’ ಎಂದೂ ಅಂದುಕೊಳ್ಳಿ. ಈ ಎರಡರಿಂದಲೂ ಕಥೆಯೂ, ಕಥಾನಾಯಕನ ವರ್ಚಸ್ಸೂ ಬದಲಾಗುವುದಿಲ್ಲ!
ಹೋಗಲಿ ಬಿಡಿ! ಹೆಚ್ಚು ಉದ್ದ ಯಾಕೆ? ಇದೇನು ಹರಿಕಥೆಯೇ? ಖಂಡಿತ ಅಲ್ಲ. ಹಾಗಾಗಿ ಕಥೆಯೇ ಎಂದು ಹೇಳಿಬಿಡುತ್ತೇನೆ ಎಂದು ಹೇಳುತ್ತಿರುವಾಗಲೇ, ಅದು ಪ್ರಾರಂಭವಾಗುವುದು. ಸೀತಾಪುರದ ಕುಪ್ಪಣ್ಣಯ್ಯನ ಹೊಟೇಲ್ ‘ದುರ್ಗಾಭವನ’ದಲ್ಲಿ.
ಮಧ್ಯಾಹ್ನ ಸುಮಾರು ಒಂದು ಗಂಟೆ ಹೊತ್ತಾಗಿರಬಹುದು. ಆ ಹೊತ್ತಿಗೆ ಸೀತಾಪುರದ ರಥಬೀದಿಗೆ ಕಾರ್ಕಳದಿಂದ ಬರುವ ಬಿ.ಎಂ.ಎಸ್. ಬಸ್ಸು ಬಂತು. ಅದು ಸೀತಾಪುರದಲ್ಲಿ ಬಂದು ನಿಲ್ಲುವುದು ಕುಪ್ಪಣ್ಣಯ್ಯನ ಹೊಟೇಲಿನ ಇದಿರಿರುವ ರಸ್ತೆಯ ಆಚೆ ಮಗ್ಗುಲಲ್ಲಿ. ದೊಡ್ಡದಾಗಿ ಬೆಳೆದಿರುವ ಅಶ್ವತ್ಥಮರದ ಬುಡದಲ್ಲಿ. ಆ ಮರಕ್ಕೆ ದೇವಸ್ಥಾನದ ಆಡಳಿತ ಮೊಕ್ತೇಸರರು – ಈಗಿನವರು ಅಲ್ಲ, ಅವರ ಹಿಂದಿನವರು – ದೊಡ್ಡದಾದ ಒಂದು ‘ಕಟ್ಟೆ’ ಕಟ್ಟಿಸಿದ್ದಾರೆ. ಈ ಕಟ್ಟೆಯ ಮೇಲೆ ಎಂಥ ಬಿರುಬೇಸಿಗೆಯಲ್ಲೂ ಮಲಗಿದರೆ ಹಾಯಾಗಿ ನಿದ್ದೆ ಬರಬೇಕು ಎಂಬಂಥ ನೆರಳು. ಹಾಗಾಗಿ ಆ ಕಟ್ಟೆಯು ಧಾರಾಳ ಪುರುಸೊತ್ತು ಇರುವವರಿಗೆ ಪಟ್ಟಾಂಗ ಹೊಡೆಯಲಿಕ್ಕೆ, ಇಲ್ಲವೇ ಕಾರ್ಕಳಕ್ಕೆ ಹೋಗುವವರಿಗೆ ಬಸ್ಸು ಕಾಯಲಿಕ್ಕೆ ಮತ್ತು ಅಲ್ಲಿಂದ ಇಲ್ಲಿಂದ ಬಂದವರು ತಮ್ಮ ಕೈಯಲ್ಲಿರುವ ಲಗ್ಗೇಜನ್ನು ತಲೆಯಿಂದ ಕೆಳಗಿಳಿಸಿ ಇಡಲಿಕ್ಕೆ ಉಪಯೋಗವಾಗುವ ಸ್ಥಳ. ಇದಕ್ಕೇನೇ ಎಂಬಂತೆ ಸೀತಾಪುರದ ರಥಬೀದಿಯಲ್ಲಿ ಬೇರೆ ಬಸ್ಸ್ಟ್ಯಾಂಡ್ ಇಲ್ಲ. ಇದೇ ಖಾಯಂ ಬಸ್ಸ್ಟ್ಯಾಂಡ್.
ಕುಪ್ಪಣ್ಣಯ್ಯ ಕಾರ್ಕಳದಿಂದ ಈ ಬಸ್ ಬಂದ ಮೇಲೆಯೇ ಮನೆಗೆ ಊಟಕ್ಕೆ ಹೊರಡುವುದು. ಯಾಕೆಂದರೆ ಕಾರ್ಕಳಕ್ಕೆ ಬೆಳಗ್ಗೆ ಇಲ್ಲಿಂದ ಬಸ್ಸು ಹತ್ತುವ ಕನಿಷ್ಠ ಐದು ಹತ್ತು ಮಂದಿ – ಮರಳಿ ಸೀತಾಪುರಕ್ಕೆ ಬರುವುದು – ಈ ಹೊತ್ತಿನಲ್ಲೇ. ಹಾಗೆ ಬಂದಿಳಿದವರು, ತಾವು ತಂದ ಮೂಟೆಗೀಟೆಗಳನ್ನು ಬಸ್ಸಿನಿಂದ ಇಳಿಸಿದ ತಕ್ಷಣ ಈ ಕಟ್ಟೆಯ ಮೇಲಿರಿಸಿದರೂ, ಮತ್ತೆ ತಂದಿಡುವುದು ಕುಪ್ಪಣ್ಣಯ್ಯನವರ ಜಗಲಿಯಲ್ಲಿ. ಅಷ್ಟೇ ಅಲ್ಲ, ಸೀತಾಪುರದ ಕಿರಾಣಿ ಅಂಗಡಿಯಲ್ಲಿ ಸಿಗದ ಕೆಲವಾರು ಅಂದರೆ ವಿಶೇಷ ಬ್ರಾಂಡಿನ ಚಹಾ ಪುಡಿ, ಇಲ್ಲವೇ ಪೇಟೆಯಿಂದ ತಮ್ಮ ಮನೆಗೆ ಬೇಕಾದ – ಸೀತಾಪುರದಲ್ಲಿ ಸಿಗದ ವಸ್ತುಗಳನ್ನು – ಕುಪ್ಪಣ್ಣಯ್ಯ ತರಿಸುವುದಾದರೆ ಈ ಬಸ್ಸಿನಲ್ಲೇ. ಯಾಕೆಂದರೆ ಸೀತಾಪುರದಿಂದ ಕಾರ್ಕಳಕ್ಕೆ ಹೋಗುವ ಯಾರೊಬ್ಬರಾದರೂ ಸರಿಯೇ – ಎಲ್ಲರೂ ಅವರಿಗೆ ಪರಿಚಿತರೇ – ಅಂಥವರಲ್ಲಿ ‘ಅವರು ನನಗೆ ಇಂಥ ವಸ್ತು ಬೇಕು, ಅದು ಕಾರ್ಕಳದಲ್ಲಿ ಇಂಥ ಕಡೆ ಸಿಗುತ್ತದೆ. ತಂದುಕೊಡುತ್ತೀರಾ ಹೇಗೆ?’ ಎಂದು ಪ್ರಶ್ನಿಸಿ ಅವರು ‘ಹ್ಞೂ’ ಎಂದರೆ ಅವರಲ್ಲಿ (ಯಾರೊಬ್ಬರೂ ಊಹ್ಞೂ ಅನ್ನುವವರಿಲ್ಲ) ದುಡ್ಡು ಕೊಟ್ಟು ತರಿಸಿಕೊಳ್ಳುತ್ತಾರೆ. ಆ ಕಾರಣದಿಂದ ಆ ಬಸ್ಸು ಮಧ್ಯಾಹ್ನದ ಹೊತ್ತಿಗೆ ಬರುವ ತನಕ ಕಾದು, ಆಮೇಲೆ ಅವರು ಊಟಕ್ಕೆ ತೆರಳುತ್ತಾರೆ. ಆನಂತರ ಅವರು ಹೊಟೇಲಿಗೆ ಮರಳುವುದು ಸುಮಾರು ಮೂರೂವರೆ ನಾಲ್ಕು ಗಂಟೆಗೆ. ನಡುವಿನ ಈ ಹೊತ್ತಿನಲ್ಲಿ ಅವರ ಹೊಟೇಲಿನ ‘ಅಡುಗೆಭಟ್ಟ’ ಗೋವಿಂದಯ್ಯನಿಗೆ ಹೊಟೇಲಿನ ಪೂರ್ತಿ ಉಸ್ತುವಾರಿ.
ಪ್ರತಿದಿನವೂ ಬಸ್ಸು ಬಂದು ಅಶ್ವತ್ಥಕಟ್ಟೆಗೆ ನಿಧಾನವಾಗಿ ಅರ್ಧ ಸುತ್ತು ಹಾಕಿ ‘ಪೋಂ, ಪೋಂ’ ಎಂದು ಹಾರ್ನ್ ಮಾಡುವುದು ರೂಢಿ. ಅದರ ಅರ್ಥ ಪ್ರಯಾಣಿಕರು ‘ಬೇಗ ಇಳಿಯಿರಿ’ ಎನ್ನುವುದು ಒಂದಾದರೆ, ಬಸ್ಸು ಹತ್ತುವವರೂ ‘ಬೇಗ ಬೇಗ ಹತ್ತಿ’ ಎನ್ನುವುದು ಇನ್ನೊಂದು.
ಕುಪ್ಪಣ್ಣಯ್ಯ ಆ ದಿನವೂ ಎಂದಿನಂತೆ ಬಸ್ಸಿನಿಂದ ಇಳಿಯುವವರನ್ನು ಅಥವಾ ಬಸ್ಸಿಗೆ ಹತ್ತುವವರನ್ನು ತನ್ನ ಹೊಟೇಲಿನ ಗಲ್ಲಾಪೆಟ್ಟಿಗೆಯ ಹಿಂದೆ ಕುಳಿತು ನೋಡುತ್ತಿದ್ದರು. ಅವರು ಹೀಗೆ ನೋಡುವುದು ಆ ಒಂದುದಿನ ಮಾತ್ರವಲ್ಲ, ವರ್ಷಪೂರ್ತಿ ಎಂದರೂ ತಪ್ಪಿಲ್ಲ. ಹಾಗೆ ಅವರು ನೋಡುತ್ತಿದ್ದಾಗ ಬಸ್ಸಿನಿಂದ ಇಳಿದ, ಒಂದು ದೊಗಲೆ ಅಂಗಿ ಹಾಕಿಕೊಂಡ, ಬಗಲಲ್ಲಿ ಒಂದು ಜೋಳಿಗೆ ಇರಿಸಿಕೊಂಡ – ದಢೂತಿ ವ್ಯಕ್ತಿಯೊಬ್ಬ – ತಮ್ಮ ಹೊಟೇಲಿನ ಕಡೆಗೇ ಬರತೊಡಗಿದ್ದು ಅವರಿಗೆ ಕಾಣಿಸಿತು. ಈತ ಸೀತಾಪುರಕ್ಕೆ ಹೊಸಬ, ತಾನು ಈ ತನಕ ಇವನನ್ನು ಎಲ್ಲೂ ನೋಡಿದ್ದಿಲ್ಲ ಎನ್ನುವಾಗಲೇ ಆತ ಹೊಟೇಲಿನ ಒಳಗೆ ಕಾಲಿಟ್ಟವನೇ ಒಂದು ಟೇಬಲ್ಲಿನ ಹಿಂದೆ ಕುಳಿತು ನಿಧಾನವಾಗಿ ತನ್ನ ಜೋಳಿಗೆಯಿಂದ ಕೊಳಲು ತೆಗೆದು ಅದರಲ್ಲಿ ‘ಕೃಷ್ಣ ನೀ ಬೇಗನೆ ಬಾರೋ’ ಎಂಬ ಹಾಡನ್ನು ತುಂಬಾ ಸೊಗಸಾಗಿ ನುಡಿಸತೊಡಗಿದ.
ಅವನನ್ನು ನೋಡಿದರೆ ಆತ ಒಂದೆರಡು ದಿನ ಸ್ನಾನ ಮಾಡದೆ ಇದ್ದ ಹಾಗೆ ಇದ್ದ. ಕೆದರಿದ ತಲೆಕೂದಲು, ಎಣ್ಣೆ ಹಚ್ಚಿಕೊಂಡ ಥರ ಇರುವ ಮುಖ, ಬಾಯಿ ತೆರೆದರೆ ಕಾಣುವ ಒಂದು ಹಲ್ಲು ಕಿತ್ತುಹೋದ ಸ್ಥಳ, ಒರಟಾದ ತುಟಿ, ಬಲಿಷ್ಠವಾದ ಕಾಲುಗಳು ಮತ್ತು ಅವನೇನಾದರೂ ಕೈಯೆತ್ತಿ ಬಾರಿಸಿದರೆ ಎಂಥವನನ್ನೂ ಆಯತಪ್ಪಿ ಬೀಳಿಸಬಹುದೆನ್ನುವಂಥ ಬಾಹುಗಳು ಅವನಿಗಿದ್ದುವು. ಅಂಥ ಅವನು ಕುಳಿತ ಭಂಗಿ, ಅಂದರೆ ಎಡದ ಕಾಲನ್ನು ಮಡಚಿ ಬಲದ ತೊಡೆಯ ಮೇಲಿಟ್ಟ ರೀತಿ ಅವರಿಗೆ ವಿಚಿತ್ರವೆನ್ನಿಸಿತ್ತು. ಆದರೆ ಆತ ತನ್ನಲ್ಲಿ ಏನೂ ಆಡದೆ ನೇರವಾಗಿ ಕೊಳಲು ಬಾರಿಸಲು ಹೊರಟ ಧಾಷ್ಟ್ರ್ಯ ಕುಪ್ಪಣ್ಣಯ್ಯನವರಿಗೆ ಸ್ವಲ್ಪ ಅಸಹನೆಗೆ ಕಾರಣವಾಯಿತು. ಆದರೂ ಅವರು ಅವನು ಕೊಳಲು ಬಾರಿಸುವುದನ್ನು ಗಂಭೀರವಾಗಿ ಮತ್ತು ಪೂರ್ತಿಯಾಗಿ ವೀಕ್ಷಿಸುತ್ತ ಆಹ್ಲಾದಿಸಿದರು.
ಸ್ವಲ್ಪ ಹೊತ್ತಿನಲ್ಲಿ ಕೊಳಲು ಬಾರಿಸುವುದನ್ನು ನಿಲ್ಲಿಸಿದ ಆತ ಎರಡುಬಾರಿ ನಾಲಗೆಯನ್ನು ಹೊರಗೆ ಹಾಕಿ ತುಟಿಯನ್ನು ಸವರಿಕೊಳ್ಳುತ್ತಲೇ ಕೊಳಲನ್ನು ಜೋಳಿಗೆಯೊಳಗೆ ಇಳಿಸುತ್ತಿರುವಾಗ, ಕುಪ್ಪಣ್ಣಯ್ಯ ಖುಶಿಯಿಂದಲೇ “ಯಾವೂರಾಯ್ತು ನಿಮ್ಮದು?” ಎಂದು ಪ್ರಶ್ನಿಸಿದರು.
ಆತ “ಇದೇ ಊರು” ಎಂದ. ಕುಪ್ಪಣ್ಣಯ್ಯನವರಿಗೆ ಆಶ್ಚರ್ಯವಾಯಿತು. “ಇದೇ ಊರಾ? ಎಲ್ಲಿ ಮನೆ?” ಎನ್ನುತ್ತ “ನಾನು ಈತನಕ ನಿಮ್ಮನ್ನು ನೋಡಿಯೇ ಇಲ್ಲವಲ್ಲ ನಮ್ಮ ಊರಲ್ಲಿ?” ಎಂದು ಇನ್ನೂ ಕುತೂಹಲ ತೋರಿಸಿದರು.
ಆತ, “ನಾನೀಗ ಇಲ್ಲೇ ಇದ್ದೇನಲ್ಲ. ಹಾಗಾಗಿ ಇದೇ ಊರು” ಎಂದ. ಕುಪ್ಪಣ್ಣಯ್ಯ ಇವನು ತಲೆ ಕೆಟ್ಟವನು ಇರಬೇಕು ಎಂದುಕೊಂಡು “ಸರಿ, ಆದರೂ ನೀವು ಎಲ್ಲಿ ಹುಟ್ಟಿದ್ದು, ಎಲ್ಲಿ ಬೆಳೆದದ್ದು ಎನ್ನುವುದಕ್ಕಾದರೂ ಒಂದು ಊರು ಇರಬೇಕಲ್ಲ?” ಎಂದು ಮತ್ತೆ ಪ್ರಶ್ನಿಸಿದರು.
ಆತ ಮಾತನಾಡಲಿಲ್ಲ. ತನಗೆ ಅದು ಸಂಬಂಧಿಸಿದ್ದೇ ಅಲ್ಲ ಎಂಬಂತೆ ರಸ್ತೆಯ ಕಡೆ ದೃಷ್ಟಿ ನೆಟ್ಟು ಒಂದು ಕ್ಷಣ ಬಿಟ್ಟು “ನನಗೆ ಮಧ್ಯಾಹ್ನದ ಊಟ ಬೇಕಿತ್ತು” ಎಂದ.
ಕುಪ್ಪಣ್ಣಯ್ಯ “ಇದು ಊಟದ ಹೊಟೇಲಲ್ಲ, ಇಲ್ಲಿ ಕಾಫಿ ತಿಂಡಿ ಮಾತ್ರ ಇರುವುದು. ಇದ್ದುದರಲ್ಲಿ ಏನು ಬೇಕಾದರೂ ನಿಮಗೆ ಕೊಡೋಣ. ನೀವು ದುಡ್ಡು ಕೊಡುವ ಆವಶ್ಯಕತೆ ಇಲ್ಲ” ಎಂದರು.
ಅವನು ತನ್ನ ಮುಖದಲ್ಲಿ ಆಶ್ಚರ್ಯ ಅಥವಾ ನಗೆ ಸೂಸದೆ “ದುಡ್ಡು ಕೊಡಲಿಕ್ಕೆ ದುಡ್ಡು ಇದ್ದರಲ್ಲ ನನ್ನಲ್ಲಿ!” ಎಂದು ಹೊರಗೆ ನೋಡುತ್ತಲೇ ಆಡಿದ. ಆಮೇಲೆ ಅವನಷ್ಟಕ್ಕೆ “ಕಾರ್ಕಳದಿಂದ ಬಸ್ಸಿನಲ್ಲಿ ದುಡ್ಡುಕೊಡದೆ ಬಂದಿದ್ದೇನೆ, ನಾನು. ಯಾವುದೇ ಬಸ್ಸಿನವರು ನನ್ನಲ್ಲಿ ದುಡ್ಡು ಕೇಳುವುದಿಲ್ಲ. ನಾನು ಒಂದಷ್ಟು ಹೊತ್ತು ಬಸ್ಸಿನಲ್ಲಿ ಕೊಳಲು ಬಾರಿಸಿದರೆ ಸಾಕು, ಅದರಲ್ಲಿದ್ದವರಲ್ಲಿ ಯಾರಾದರೊಬ್ಬರು ನನ್ನ ಟಿಕೇಟು ತೆಗೆಯುತ್ತಾರೆ. ಕಂಡಕ್ಟರ್ ನಾನು ಇಳಿಯಬೇಕೆನ್ನುವಲ್ಲಿ ಇಳಿಸುತ್ತಾನೆ. ಆಮೇಲೆ ‘ಇನ್ಯಾವಾಗ ನಿಮ್ಮ ಸವಾರಿ?’ ಎಂದು ಪ್ರೀತಿಯಿಂದಲೇ ಆತ ಬೀಳ್ಕೊಡುತ್ತಾರೆ” ಎಂದ.
ಕುಪ್ಪಣ್ಣಯ್ಯ “ನಾನೂ ನಿಮ್ಮಲ್ಲಿ ದುಡ್ಡು ಕೇಳುವುದಿಲ್ಲ. ಏನು ಬೇಕೋ ಹೇಳಿ. ಹೊಟ್ಟೆ ತುಂಬ ತಿನ್ನಿ” ಎಂದರು.
“ಇಲ್ಲ, ನನಗೆ ಕಾಫಿ ತಿಂಡಿ ಬೇಡ. ನಾನು ಊಟಕ್ಕೆ ನಿಮ್ಮ ಮನೆಗೆ ಬರುವವನು. ನೀವು ಬರಬಹುದು ಅಥವಾ ಬರಬೇಡಿ – ಎಂದರೂ ನಾನು ಬರುವವನೇ” ಎಂದು ಮೌನವಾದ.
ಕುಪ್ಪಣ್ಣಯ್ಯನವರಿಗೆ ಅವನ ನಡವಳಿಕೆಯಿಂದ ಆತಂಕವಾಯಿತು. ಇವನು ಕಳ್ಳನೋ ಸುಳ್ಳನೋ ಇರಬಹುದು ಅಥವಾ ಯಾವುದೋ ಒಂದು ವಿಷಯದ ರಹಸ್ಯ ಭೇದಿಸಲು ಪತ್ತೆದಾರಿ ಇಲಾಖೆಯವರು ವೇಷಮರೆಸಿ, ಊರೂರು ತಿರುಗಿ ಮಾಹಿತಿ ಸಂಗ್ರಹಿಸುತ್ತಾರಂತಲ್ಲ, ಹಾಗೆಯೆ ಇವನೂ ಬಂದಿರಬಹುದು ಎಂಬ ಸಂಶಯವಾಯಿತು. ಆದರೂ ಅವನಿಗೆ ‘ನನ್ನ ಜೊತೆ ಬನ್ನಿ’ ಎಂದು ಹೇಳಲು ಆಗದ ಅವರು ಏನೂ ಆಡದೆ ಮನೆಗೆ ಹೊರಟು ನಿಂತರು. ಅವನೂ ಅವರನ್ನು ಹಿಂಬಾಲಿಸಲು ರಥಬೀದಿಗೆ ಇಳಿದ.
ಇಬ್ಬರೂ ತಮ್ಮ ನಡುವೆ ಸ್ವಲ್ಪ ಅಂತರವಿಟ್ಟುಕೊಂಡವರಂತೆ ಒಟ್ಟಿಗೇ ನಡೆಯತೊಡಗಿದರು. ರಥಬೀದಿಯಲ್ಲಿ ಓಡಾಡುತ್ತಿದ್ದ ನಾಲ್ಕಾರು ಮಂದಿಗೆ ಕುಪ್ಪಣ್ಣಯ್ಯನ ಜೊತೆ ಈ ಅಪರಿಚಿತ ಯಾರು, ಯಾಕೆ ಕುಪ್ಪಣ್ಣಯ್ಯ ಅವನನ್ನು ಕರೆದೊಯ್ಯುತ್ತಿದ್ದಾರೆ ಎಂದು ಅನಿಸಿದರೂ, ಅವರನ್ನು ಯಾರೂ ಪ್ರಶ್ನಿಸದೆ ಸುಮ್ಮನೆ ನೋಡಿ, ಮೌನವಾದರು.
ಕುಪ್ಪಣ್ಣಯ್ಯನವರ ಮನೆ ಬಂತು. “ಕೈ ಕಾಲು ತೊಳೆದುಕೊಳ್ಳಿ” ಎಂದು ಕುಪ್ಪಣ್ಣಯ್ಯ ತಮ್ಮ ಮನೆ ಮುಂದಿದ್ದ ತೆಂಗಿನಮರದ ಬುಡದ ನೀರಿನ ಟಾಂಕಿಯನ್ನು ತೋರಿಸಿ, ಆಮೇಲೆ “ಇಲ್ಲಿ ಜಗಲಿಯಲ್ಲಿ ಕೂಡಿ” ಎಂದು ಹೇಳುತ್ತಲೇ ನೇರವಾಗಿ ಅಡುಗೆಮನೆಗೆ ಹೋದರು. ಹೆಂಡತಿಯಲ್ಲಿ “ಒಬ್ಬ ಅಪರೂಪದ ವಿಚಿತ್ರ ವ್ಯಕ್ತಿ ನನ್ನ ಜೊತೆ ಬಂದಿದ್ದಾನೆ. ಊಟ ಬೇಕು ಅನ್ನುತ್ತಿದ್ದಾನೆ. ಅನ್ನ ಸಾರು ಉಂಟೋ ಹೇಗೆ?” ಎಂದು ಪ್ರಶ್ನಿಸಿದರು.
ಪ್ರೇಮಕ್ಕ ಮುಜುಗರದಲ್ಲಿ “ಅನ್ನ ಸಾರು ಇರುವುದು ಹೇಗೆ? ನಾನು ನಮಗಿಬ್ಬರಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಮಾಡಿದ್ದೇನೆ” ಎಂದು ಮಾತು ನಿಲ್ಲಿಸಿದರು. ಆಮೇಲೆ ಹೊರಗೆ ಬಂದು ಆ ವ್ಯಕ್ತಿಯನ್ನು ಇಣುಕಿ ನೋಡಿದವರೇ ಸ್ವಲ್ಪ ಕಳವಳಪಟ್ಟು “ಯಾಕೆ ಅಂಥವರನ್ನೆಲ್ಲ ಕರಕೊಂಡು ಬರುತ್ತೀರಿ ಮನೆಗೆ? ಇಂಥದ್ದೆಲ್ಲ ಬೇಕಾ?” ಎನ್ನುತ್ತಲೇ, “ಅವನ ದೇಹದಾಢ್ರ್ಯ ನೋಡಿದರೆ, ನಾವು ಇಬ್ಬರು ಉಣ್ಣುವ ಅನ್ನ ಅವನಿಗೆ ಒಂದು ಊಟಕ್ಕೆ ಬೇಕಾದೀತು” ಎಂದರು. ಮತ್ತೆ ಮೆತ್ತಗಾಗಿ “ನಾನು ಅರ್ಧ ಸೇರು ಅಕ್ಕಿಯ ಅನ್ನ ಈಗ ಅರ್ಧ ಗಂಟೆಯಲ್ಲಿ ಮಾಡಿಕೊಡುತ್ತೇನೆ. ನಡುವೆ ಒಂದು ಸಾಂಬಾರೂ ಕೂಡಾ” ಎಂದರು.
“ಹಾಗಾದರೆ ಒಂದು ಕೆಲಸ ಮಾಡೋಣ. ಈಗ ನೀನು ನಮಗಿಬ್ಬರಿಗೆ ಮಾಡಿಟ್ಟಿರುವ ಅಡುಗೆಯನ್ನು ಅವನಿಗೆ ಬಡಿಸು. ನಿನ್ನ ಅನ್ನ, ಸಾರು ಆಗುವ ತನಕ ನಾನು ಕಾಯುತ್ತೇನೆ” ಎಂದ ಕುಪ್ಪಣ್ಣಯ್ಯ ಬಂದ ವ್ಯಕ್ತಿಗೆ ಎಲೆ ಹಾಕಿ ಬಡಿಸಲು ಮುಂದಾದರು. ತಕ್ಷಣ ಅವರನ್ನು ಕೈಹಿಡಿದು ಎಳೆದು ನಿಲ್ಲಿಸಿದ ಪ್ರೇಮಕ್ಕ “ನೀವು ಯಾಕೆ ಹಸಿದುಕೊಂಡು ಕೂರುತ್ತೀರಿ? ಅಂಥವರಿಗೆಲ್ಲ ಹಸಿವೆ ಕಟ್ಟಿಕೊಂಡು ಗೊತ್ತು” ಎಂದರು.
ಕುಪ್ಪಣ್ಣಯ್ಯನಿಗೆ ಅದು ಇಷ್ಟವಾಗಲಿಲ್ಲ. “ಅವನು ಊಟ ಬೇಕೆಂದೇ ಬಂದವನು! ಅವನನ್ನು ಹಸಿವೆಯಲ್ಲಿ ಕೂರಿಸಿ, ನಾನು ಉಣ್ಣುವುದು ಸರಿಯಲ್ಲ” ಎಂದಾಗ, ಸಿಡಿಮಿಡಿಗೊಂಡ ಪ್ರೇಮಕ್ಕ “ನೀವೊಬ್ಬರು ಧರ್ಮರಾಯ ಈ ಕಲಿಯುಗದಲ್ಲಿ” ಎನ್ನುತ್ತ ಹೊಸತಾಗಿ ಮತ್ತೆ ಅಡುಗೆಗೆ ಹೊರಟರು.
ಚಾವಡಿಗೆ ಬಂದ ಕುಪ್ಪಣ್ಣಯ್ಯ ತಾನು ಹೊಟೇಲಿನಿಂದ ಬಗಲಲ್ಲಿ ಇಟ್ಟುಕೊಂಡು ಬಂದ ‘ನವಭಾರತ’ ಪತ್ರಿಕೆಯನ್ನು ಬಿಡಿಸಿ ಓದಲು ಹೊರಟರು. ಅವರಿಗೆ ಯಾಕೋ ಪತ್ರಿಕೆಯ ಮೇಲೆ ಕಣ್ಣಾಡಿಸಲಾಗಲಿಲ್ಲ. ಜಗಲಿಯಲ್ಲಿ ಕುಳಿತಿದ್ದ ಆ ವ್ಯಕ್ತಿಯ ಕಡೆ ಕಣ್ಣು ಹಾಯಿಸಿದರು. ಆತ ನಿಶ್ಚಿಂತೆಯಿಂದ ಕುಳಿತಂತೆ ಇದ್ದ. ಅವರಿಗೆ ಅವನನ್ನು ಮತ್ತೆ ಮಾತನಾಡಿಸಬೇಕೆನಿಸಿತು. ಅವರು ಚಾವಡಿಯಿಂದ ಹೊರಬಂದು ಜಗಲಿಯಲ್ಲಿ ಕುಳಿತಿದ್ದ ಆ ವ್ಯಕ್ತಿಯ ಇದಿರು ನಿಂತು “ಅಂದ ಹಾಗೆ ನಾನು ನಿಮ್ಮ ಊರು ಯಾವುದು ಎಂದದ್ದಕ್ಕೆ ಇದೇ ಊರು ಎಂದು ಹೇಳಿದಿರಿ. ಹೋಗಲಿ ಬಿಡಿ, ನಿಮ್ಮ ಹೆಸರು ಏನೆಂದು ಹೇಳಬಹುದಾ ಹೇಗೆ?” ಎಂದು ಪ್ರಶ್ನಿಸಿದರು.
ಆತ ನಿಧಾನವಾಗಿ ಕಣ್ಣು ತೆರೆಯುತ್ತ ‘ನನಗೆ ನನ್ನದೇ ಆದ ಹೆಸರು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನನ್ನು ಎಲ್ಲರೂ ‘ಕೊಳಲಗೋಪ’ ಎನ್ನುತ್ತಾರೆ. ನೀವು ಆ ಹೆಸರಿನಿಂದ ಕರೆಯಬಹುದು ಅಥವಾ ಬೇರೆ ಹೆಸರಿನಿಂದ ಕರೆದರೂ ಆಕ್ಷೇಪ ಇಲ್ಲ” ಎಂದ.
ಆತ ಹಾಗೆ ಹೇಳುವಾಗ, ಅನ್ನಕ್ಕೆ ಎಸರಿಟ್ಟು ಬಂದ ಪ್ರೇಮಕ್ಕ ತನ್ನ ಗಂಡ ಈ ಅಪರಿಚಿತ ವ್ಯಕ್ತಿಯಲ್ಲಿ ಏನು ಮಾತನಾಡುತ್ತಾರೆ ಎಂಬ ಕುತೂಹಲದಿಂದ ಚಾವಡಿಯಾಚೆ ಬಂದಿದ್ದರು. ಅವರಿಗೆ ಈತ ‘ಯಾವ ಹೆಸರಿನಿಂದಲೂ ತನ್ನನ್ನು ಕರೆಯಬಹುದು’ ಎಂದದ್ದು ತೀರಾ ವಿಚಿತ್ರ ಅನಿಸಿ, ಆತ ಹುಚ್ಚನೇ ಇರಬೇಕು ಎಂದುಕೊಂಡು “ಇವರೇ, ಬನ್ನಿ” ಇಲ್ಲಿ ಎಂದು ಗಂಡನನ್ನು ಒಳಕ್ಕೆ ಕರೆದರು.
ಕುಪ್ಪಣ್ಣಯ್ಯನಿಗೆ ಈ ನಿಗೂಢ ಮನುಷ್ಯನಲ್ಲಿ ಮತ್ತೂ ಮಾತನಾಡುವ ಹುಮ್ಮಸ್ಸಿತ್ತು. ಅವರು ಇನ್ನೊಂದು ಪ್ರಶ್ನೆ ಕೇಳಬೇಕೆನ್ನುವಾಗ, ಪ್ರೇಮಕ್ಕ “ಓಯ್, ಇವರೇ ಇಲ್ಲಿ ಬನ್ನಿ” ಎಂದು ಮತ್ತೆ ಕೂಗಿದ್ದು ಕೇಳಿಸಿತು. ಇನ್ನೇನು ಕಾದಿದೆಯೊ ಇವಳಿಂದ ಎಂದುಕೊಂಡ ಅವರು ಚಾವಡಿಗೆ ಕಾಲಿಡುತ್ತಿದ್ದ ಹಾಗೆ, ಕುಪ್ಪಣ್ಣಯ್ಯನವರನ್ನು ಕೈ ಹಿಡಿದು ನಿಲ್ಲಿಸಿದ ಪ್ರೇಮಕ್ಕ, ಅವರನ್ನು ಕುರ್ಚಿಯ ಬಳಿ ಕರೆದೊಯ್ದು “ನೀವು ಇಲ್ಲಿ ತೆಪ್ಪಗೆ ಕುಳಿತು ಪೇಪರು ಓದಿ. ಇಲ್ಲವೇ ಒಳಗೆ ಬಂದು ನನಗೆ ತರಕಾರಿ ಹಚ್ಚಿ ಕೊಡಿ” ಎಂದರು.
ಕುಪ್ಪಣ್ಣಯ್ಯ ಇದೊಳ್ಳೆ ಗ್ರಹಚಾರವಾಯಿತಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡು, “ಹೌದು, ನಾನು ಅವನನ್ನು ಮನೆಗೆ ಕರೆದುಕೊಂಡು ಬರಬಾರದಿತ್ತು” ಎನ್ನುತ್ತಲೇ ಮತ್ತೆ ‘ನವಭಾರತ’ ಬಿಡಿಸಲು ಮುಂದಾದರು. ಅವರಿಗೆ ಪತ್ರಿಕೆಯ ಮೊದಲ ಪುಟವನ್ನು ನೋಡುತ್ತಿದ್ದಂತೆ ಉಳಿದದ್ದನ್ನು ಓದಲಾಗದೆ ಪತ್ರಿಕೆಯನ್ನು ಮಡಚಿಡುವಾಗ ಕೊಳಲಗೋಪ ಎರಡು ಬಾರಿ ದೊಡ್ಡದಾಗಿ ಆಕಳಿಸಿದ್ದು ಅವರಿಗೆ ಕೇಳಿಸಿತು.
ಅರ್ಧ ಗಂಟೆಯೊಳಗೆ ಪ್ರೇಮಕ್ಕ ಬಿಸಿ ಬಿಸಿ ಅನ್ನ ಮತ್ತು ಸಾಂಬಾರು ತಯಾರಿಸಿ ಗಂಡನನ್ನು ಎಬ್ಬಿಸಿ, “ಅವನಿಗೆ ಎಲೆಕೊಟ್ಟು ನೀವೇ ಬಡಿಸಿ, ನನ್ನಿಂದಾಗದು” ಎಂದರು.
ಕುಪ್ಪಣ್ಣಯ್ಯ “ಗೋಪ, ಊಟಕ್ಕೆ ಏಳಿ” ಎಂದು ಧ್ಯಾನಸ್ಥ ಸ್ಥಿತಿಯಲ್ಲಿದ್ದ ಅವನನ್ನು ಎಬ್ಬಿಸಿ, ಊಟ ಬಡಿಸಿದರು. ಎಷ್ಟು ಬಡಿಸಿದರೂ ‘ಸಾಕು’ ಎನ್ನದ ಆತ, ಪ್ರೇಮಕ್ಕ ಮಾಡಿದ ಅನ್ನ ಮತ್ತು ಸಾಂಬಾರನ್ನು ಕಲಸಿ, ಚೆನ್ನಾಗಿ ಊಟ ಮಾಡಿ, ಒಂದೂ ತೇಗು ತೆಗೆಯದೆ, ಇನ್ನೂ ನೀವು ಬಡಿಸಿದರೆ ತಿಂದೇನು ಎಂಬಂತೆ ಕುಪ್ಪಣ್ಣಯ್ಯನನ್ನು ನೋಡಿದ.
ಕುಪ್ಪಣ್ಣಯ್ಯ ಅವನಲ್ಲಿ ಏನೂ ಆಡದೆ ಒಳಗೆ ಬಂದು “ನೀನು ಮಾಡಿದ ಅಡುಗೆ ಅವನಿಗೆ ಸಾಕಾಗಲಿಲ್ಲ ಎಂದು ಕಾಣುತ್ತದೆ ಮಾರಾಯ್ತಿ. ನಮಗೆ ಮಾಡಿಟ್ಟದ್ದರಿಂದ ಸ್ವಲ್ಪ ಇಕ್ಕಿದರೆ ಹೇಗೆ?” ಎಂದು ಹೆಂಡತಿಯ ಮುಖ ನೋಡಿದರು.
ಪ್ರೇಮಕ್ಕನಿಗೆ ಸಿಟ್ಟು ಬಂತು. ಆಕೆ “ನಿಮ್ಮ ಈ ಮರ್ಜಿಯೇ ನನಗೆ ಆಗದಿರುವುದು!” ಎಂದು ಗಂಡನನ್ನು ಸಣ್ಣಗೆ ಗದರಿ, “ಅವನ ಹೊಟ್ಟೆ ಬಕಾಸುರನ ಹೊಟ್ಟೆ ಆಗಿರುವುದಕ್ಕೆ ನೀವು ಹೇಗೆ ಜವಾಬ್ದಾರಿ?” ಎಂದವರೇ, ಇಬ್ಬರಿಗೂ ಎಲೆ ಹಾಕುತ್ತ “ಬನ್ನಿ. ನಾನಂತೂ ಉಣ್ಣುವವಳೇ. ನೀವು ಏನು ಬೇಕಾದರೂ ಮಾಡಿ” ಎನ್ನುತ್ತ್ತ ಎರಡೂ ಎಲೆಗಳ ಮೇಲೆ ಉಪ್ಪು, ಉಪ್ಪಿನಕಾಯಿ, ಅನ್ನ ಬಡಿಸಿ ತಾನು ಊಟಕ್ಕೆ ಕುಳಿತರು. ಕುಪ್ಪಣ್ಣಯ್ಯ ಮಾತನಾಡದೆ ಊಟ ಮುಗಿಸಿ ಹೊರಬರುವಾಗ, ಎಂಜಲ ಎಲೆಯನ್ನು ದೂರ ಎಸೆದು ಬಂದಿದ್ದ ಗೋಪ, ಜಗಲಿಯಲ್ಲೇ ಮಲಗಿ ಗೊರಕೆ ಹೊಡೆಯತೊಡಗಿದ್ದ.
ಕುಪ್ಪಣ್ಣಯ್ಯ ಇವನನ್ನು ಎಬ್ಬಿಸುವುದೋ ಬೇಡವೋ ಎಂದು ಯೋಚಿಸಿ ಇನ್ನರ್ಧ ಗಂಟೆಯಲ್ಲಿ ತಾನು ಹೊಟೇಲಿಗೆ ಹೋಗಬೇಕಾಗಿದೆ ಎಂದುಕೊಂಡು, ಇವನನ್ನು ಇಲ್ಲಿ ಬಿಟ್ಟುಹೋದರೆ ಪ್ರೇಮ ಮುನಿಯುತ್ತಾಳೆ ಎಂದು ಗ್ರಹಿಸಿ ‘ಓಯೇ, ಓಯೇ’ ಎಂದು ಅವನ ಬಳಿ ಬಂದು ಕೂಗಿದರು. ತಕ್ಷಣ ಬಡಕ್ಕನೆ ಎದ್ದು ಕುಳಿತ ಗೋಪ “ನಿದ್ದೆ ಬಂದದ್ದು ಗೊತ್ತೇ ಆಗಲಿಲ್ಲ. ಮಧ್ಯರಾತ್ರಿಯವರೆಗೂ ನಿದ್ದೆ ಇದ್ದಿಲ್ಲ” ಎಂದು ಗೊಣಗಿಕೊಂಡು ಇದಿರಿದ್ದ ತೆಂಗಿನಮರದ ಬುಡದ ಬಳಿ ಇದ್ದ ನೀರಿನ ‘ಟಾಂಕಿ’ಯಿಂದ ಮುಖಕ್ಕೆ ನೀರು ಹಾಕಿಕೊಂಡು ಮೇಲೆ ನೋಡಿದ. ತೆಂಗಿನಮರದಲ್ಲಿ ನಾಲ್ಕಾರು ಗೊನೆಗಳು ಬೆಳೆದು ನಿಂತಿದ್ದುವು. ಒಂದೆರಡು ಗೊನೆಗಳ ಕಾಯಿಗಳು ದಿನಕ್ಕೆ ನಾಲ್ಕಾರರಂತೆ ಬೀಳಲು ಸಿದ್ಧ ಎಂಬಂತಿದ್ದುವು. ಅದನ್ನು ಗಮನಿಸಿದ ಗೋಪ ಜಗಲಿಗೆ ಬಂದು, ಅಂಗಿಯನ್ನು ಕಳಚಿ ತಾನು ಉಟ್ಟ ಪಂಚೆಯನ್ನು ಬಿಚ್ಚಿ, ಜೋಳಿಗೆಯಲ್ಲಿದ್ದ ಪಾಣಿಪಂಚೆಯನ್ನು ಸೊಂಟಕ್ಕೆ ಸುತ್ತಿ ‘ಹಗ್ಗ ಇದ್ದರೆ ಕೊಡಿ, ತೆಂಗಿನಕಾಯಿ ತೆಗೆಯುತ್ತೇನೆ’ ಎಂದು ಕುಪ್ಪಣ್ಣಯ್ಯನವರ ಕಣ್ಣಲ್ಲಿ ಕಣ್ಣು ನೆಟ್ಟ.
ಕುಪ್ಪಣ್ಣಯ್ಯನವರಿಗೆ ‘ಇಂವ ಎಂಥ ವಿಚಿತ್ರ ವ್ಯಕ್ತಿ’ ಅನಿಸಿ, ಅವನ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿ “ನಿನ್ನೆ ಮಧ್ಯರಾತ್ರಿಯವರೆಗೆ ನಿದ್ದೆ ಇರಲಿಲ್ಲ ಎಂದು ಗೊಣಗಿದಿರಲ್ಲ ಯಾಕೆ?” ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸದ ಗೋಪ “ಮರ ಏರಲು ಹಗ್ಗ ಕೊಡಿ” ಎಂದ. ಕುಪ್ಪಣ್ಣಯ್ಯ “ನಿಮಗೆ ಹಗ್ಗ ಕೊಡುವುದು ಸಾಧ್ಯವಿಲ್ಲ. ನಿನ್ನೆ ಎಲ್ಲಿದ್ದಿರಿ ಹೇಳಿ?” ಎಂದು ಸ್ವಲ್ಪ ದೊಡ್ಡದಾಗಿಯೇ ಪ್ರಶ್ನಿಸಿದರು.
ಗೋಪ “ಎಲ್ಲಿ ಅಂದರೆ ಮನೆಯಲ್ಲಿದ್ದೆ” ಎಂದ. ಕುಪ್ಪಣ್ಣಯ್ಯ “ಎಲ್ಲಿ ನಿಮ್ಮ ಮನೆ?” ಎಂದು ಮರುಪ್ರಶ್ನೆ ಹಾಕಿದರು. ಗೋಪ ಮುಖ ಗಂಟಿಕ್ಕಿಕೊಂಡು “ಎಲ್ಲಿ ಅಂದರೆ ಅಲ್ಲಿ. ಈಗ ಇದು ನನ್ನ ಮನೆಯಲ್ಲವೇ ಹಾಗೆ!” ಎಂದ.
ಕುಪ್ಪಣ್ಣಯ್ಯನಿಗೆ ಈತ ಖಂಡಿತ ಅರೆಹುಚ್ಚ ಎನ್ನುವುದು ದೃಢವಾಯಿತು. ಅವರು “ನಿಮಗೆ ಮರ ಹತ್ತಲು ಹಗ್ಗ ಕೊಡುವುದಿಲ್ಲ. ನೀವು ಕಳಚಿದ ಶರ್ಟು ಮತ್ತು ಪಂಚೆ ಉಟ್ಟುಕೊಂಡು ಹೊರಟುಹೋಗಿ” ಎಂದರು ಸಿಟ್ಟಿನಲ್ಲಿ.
ಗೋಪ ಅವರ ಮಾತು ಕೇಳಲಿಲ್ಲ. ‘ಹಗ್ಗ.. ಹಗ್ಗ.. ಹಗ್ಗ..’ ಎನ್ನುತ್ತಲೇ ನಿಂತುಕೊಂಡ. ಕುಪ್ಪಣ್ಣಯ್ಯ ‘ಇವನ ಕರ್ಮ. ಏನು ಮಾಡುತ್ತಾನೆ ನೋಡೋಣ’ ಎಂದು ಹೆಂಡತಿಯನ್ನು ಕರೆದು “ದನದ ಹಟ್ಟಿಯಲ್ಲಿ ತೆಂಗಿನಮರ ಏರುವ ಹಗ್ಗ ಇದ್ದರೆ ತಂದುಕೊಡು” ಎಂದರು.
ಪ್ರೇಮಕ್ಕ ಅಂಗಳಕ್ಕೆ ಇಳಿದು ಬಂದು ಗೋಪ ನಿಂತ ಭಂಗಿ ನೋಡಿ “ಅವನಿಗೆ ಹುಚ್ಚು ಎಂದರೆ ನಿಮಗೂ ಹುಚ್ಚೆ? ಅವನು ಯಾರೋ ಏನೋ! ಮರ ಹತ್ತಿ ಮರದ ತುದಿಗೆ ಹೋಗಿ ಕೈ ಬಿಟ್ಟರೆ ನೀವು ಜೈಲಿಗೆ ಹೋಗಬೇಕಾದೀತು” ಎಂದರು. ಕುಪ್ಪಣ್ಣಯ್ಯನವರಿಗೂ ಅದು ಹೌದೆನಿಸಿತು. ಅವರು “ಬೇಡ, ನೀವು ಮರ ಹತ್ತುವುದು ಬೇಡವೇ ಬೇಡ” ಎಂದರು. ಆತ “ನೀವು ಹಗ್ಗ ಕೊಡದಿದ್ದರೆ ಬೇಡ. ಈ ಪಂಚೆಯನ್ನೇ ಹಗ್ಗ ಮಾಡಿ ನಾನು ಮರ ಹತ್ತುತ್ತೇನೆ” ಎಂದ.
ಕುಪ್ಪಣ್ಣಯ್ಯನಿಗೆ ಈತ ಯಾಕೆ ಬಂದನೋ ಏನೋ ನನ್ನ ಮನೆಗೆ ಎಂದು ದನದ ಹಟ್ಟಿಗೆ ಹೋಗಿ ಹಗ್ಗ ತಂದುಕೊಟ್ಟರು. ಹಗ್ಗ ಅವನ ಕೈಗೆ ಸಿಕ್ಕಿದ ಕೂಡಲೇ ಅದನ್ನು ‘ತಳ್ಳೆ’ಯಾಗಿ ರೂಪಿಸಿಕೊಂಡ ಅವನು ಎರಡು ಕಾಲಿಗೂ ಆ ‘ತಳ್ಳೆ’ ಸಿಕ್ಕಿಸಿ ಅಳಿಲು ಮರವೇರುವ ಹಾಗೆ ಮರ ಏರಿ, ತೆಂಗಿನ ‘ಕೊಬೆ’ಯಲ್ಲಿ ಆರಾಮವಾಗಿ ಕುಳಿತು ಬೆಳೆದು ಹಣ್ಣಾದ ತೆಂಗಿನಕಾಯಿಗಳನ್ನು ಕೈಯಲ್ಲಿ ಕಿತ್ತು ದಢದಢನೆ ಉರುಳಿಸಿದ. ಆಮೇಲೆ ರೊಯ್ಯನೆ ಮರದಿಂದ ಕೆಳಗಿಳಿದ.
ಏಳೆಂಟು ನಿಮಿಷದಲ್ಲಿ ನಡೆದ ಈ ಘಟನೆ ನೋಡಿ ಕುಪ್ಪಣ್ಣಯ್ಯ ಬೆರಗಾದರು. ಪ್ರೇಮಕ್ಕ ಬಾಯಿಗೆ ಕೈ ಇಟ್ಟು ‘ಅಬ್ಬ!’ ಎನ್ನಲಾಗದೆ ಬೇರೆ ಶಬ್ದಗಳೂ ಸಿಕ್ಕದೆ ಅವಾಕ್ಕಾದರು.
ಸ್ವಲ್ಪ ಹೊತ್ತಿನ ಮೇಲೆ ಕುಪ್ಪಣ್ಣಯ್ಯ ಖುಶಿಯಿಂದಲೇ ಹೊಟೇಲಿಗೆ ಹೊರಡಲು ಶರ್ಟು ಹಾಕುತ್ತಲೇ ಹೊರಗೆ ಬಂದರು. ಗೋಪನಲ್ಲಿ “ಕಾಫಿ, ಚಾ ಏನಾದರೂ ಕುಡಿಯುವ ಅಭ್ಯಾಸ ಇದೆಯಾ ನಿಮಗೆ?” ಎಂದು ಕೇಳಿದರು.
ಗೋಪ ಮಾತನಾಡಲೇ ಇಲ್ಲ. ತನ್ನ ಸೊಂಟದಲ್ಲಿದ್ದ ಪಾಣಿಪಂಚೆಯನ್ನು ಬಿಚ್ಚಿ ಮತ್ತೆ ಅಂಗಿ ಮತ್ತು ಶರ್ಟು ಹಾಕಿ ದುರ್ದಾನ ತೆಗೆದುಕೊಂಡವನ ಹಾಗೆ ಕುಪ್ಪಣ್ಣಯ್ಯನವರ ಅಂಗಳದಿಂದ ಇಳಿದು ಉದ್ದಕ್ಕೂ ನಡೆಯುತ್ತ ಹೋದ.
ಪ್ರೇಮಕ್ಕ ಮತ್ತೆ ಬೆರಗಾಗಿ “ಯಾರ ಮಾತೂ ಕೇಳುವುದಿಲ್ಲವಲ್ಲ ಈತ? ಯಾಕೆ ಹೀಗೆ ಉಂಡಾಡಿಯಾಗಿ ತಿರುಗುತ್ತಿದ್ದಾನಪ್ಪ? ಯಾರಾದರೂ ಇವನನ್ನು ‘ಆ ಕಂಕನಾಡಿ ಆಸ್ಪತ್ರೆ’ಗೆ ಕರೆದೊಯ್ದರೆ ಇವನ ಹುಚ್ಚು ಬಿಟ್ಟೀತು!” ಎಂದರು ಸ್ವಗತದ ಹಾಗೆ.
“ಹೌದು ಹೌದು” ಎಂದ ಕುಪ್ಪಣ್ಣಯ್ಯ ಹೆಗಲಿಗೆ ಶಲ್ಯ ಹಾಕಿಕೊಂಡು ರಥಬೀದಿಯ ಕಡೆ ಹೆಜ್ಜೆ ಹಾಕಿದರು. ಆ ಹೊತ್ತಿಗೆ ಅವರನ್ನೇ ಕಾಯುವಂತೆ ಇದ್ದ ಗೋವಿಂದಯ್ಯ ಗಿರಾಕಿಗಳ ಬೇಡಿಕೆಗಳನ್ನು ಪೂರೈಸುತ್ತ ನಡುನಡುವೆ ಹೊಟೇಲಿನ ಇದಿರಿರುವ ರಸ್ತೆಗೆ ಇಳಿದು ಕುಪ್ಪಣ್ಣಯ್ಯ ಬರುತ್ತಿದ್ದಾರೆಯೇ ಎಂದು ತವಕ ತಲ್ಲಣದಿಂದ ನಿರೀಕ್ಷಿಸುತ್ತಿದ್ದರು. ಗೋವಿಂದಯ್ಯನಿಗೆ ಕುಪ್ಪಣ್ಣಯ್ಯ ಗೋಪನನ್ನು ಕರೆದುಕೊಂಡು ತನ್ನ ಮನೆಗೆ ಹೋದದ್ದು ಚೂರೂ ಇಷ್ಟವಾಗಿರಲಿಲ್ಲ.
ಕುಪ್ಪಣ್ಣಯ್ಯ ಹೊಟೇಲಿನ ಒಳಗೆ ಬಂದು ಗಲ್ಲಾಪೆಟ್ಟಿಗೆಯ ಹಿಂದೆ ಕುಳಿತು ಇನ್ನೇನು ಮುಖ ಕುತ್ತಿಗೆಯಲ್ಲಿ ಕಾಣಿಸಿಕೊಂಡಿದ್ದ ಬೆವರನ್ನು ಒರೆಸಿಕೊಳ್ಳುವಾಗ ಬಳಿಗೆ ಬಂದ ಗೋವಿಂದಯ್ಯ, “ಎಲ್ಲಿ ಹೋದ ಆ ಮನುಷ್ಯ?” ಎಂದು ಪ್ರಶ್ನಿಸಿದರು. ಆಗಲೇ ಗೋವಿಂದಯ್ಯ ಅಲ್ಲಿದ್ದ ನಾಲ್ಕಾರು ಮಂದಿ ಗ್ರಾಹಕರಲ್ಲಿ ಈ ವಿಚಾರವನ್ನು ಚರ್ಚಿಸಿದ್ದರು. ಅಂಥವರಲ್ಲಿ ಮುಖ್ಯರಾಗಿದ್ದ ಕೆಳಮನೆ ವೆಂಕಪ್ಪ, ಮಿತ್ತಲ್ಲ ಚೋಮ, ಬಳೆಗಾರ್ತಿ ಸೇಸಿ, ಮೈಂತೂರು ರಾಗು ಮೊದಲಾದವರು ತಂತಮ್ಮ ಕಲ್ಪನೆ ಮತ್ತು ಯೋಚನೆಗೆ ಅನುಗುಣವಾಗಿ ಗೋಪನ ವ್ಯಕ್ತಿ ಚಿತ್ರವನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದರು. ತನಿಯ ಬೋಂಟ್ರ ಮಾತ್ರ “ಸುಮಾರು ಹದಿನೈದು ದಿನಗಳ ಹಿಂದೆ ಈಗ ನೀವು ಹೇಳುವ ಮಾದರಿಯ ವ್ಯಕ್ತಿಯೊಬ್ಬ ನನಗೆ ಹೆಣ್ಣು ಕೊಟ್ಟ ಮಾವನ ಮನೆಗೆ ಬಂದು, ನಿಮ್ಮಲ್ಲಿ ಮಾಡಿದ ಹಾಗೆ ಕೊಳಲು ಬಾರಿಸಿ ‘ಊಟ ಹಾಕಿ’ ಎಂದು ಹೇಳಿದವನೇ, ಊಟ ಮುಗಿಸಿ ಹೋಗಿದ್ದಾನಂತೆ ಎಂದು ನಾನು ಅಲ್ಲಿಗೆ ಹೋಗಿದ್ದಾಗ ಮಾವ ನನ್ನಲ್ಲಿ ಹೇಳಿದ್ದುಂಟು” ಎಂದು ಹೇಳಿದ. ಆಮೇಲೆ “ನೀವು ಹೇಳುವ ವ್ಯಕ್ತಿಯ ಚರ್ಯೆ (ಸ್ವರೂಪ) ಹೇಗಿತ್ತು?” ಎಂದು ಕುಪ್ಪಣ್ಣಯ್ಯನನ್ನು ಪ್ರಶ್ನಿಸಿದ. ಕುಪ್ಪಣ್ಣಯ್ಯ ಅವನ ಹೊರ ಸ್ವರೂಪವನ್ನು ಹೇಳುತ್ತಿದ್ದ ಹಾಗೆ ಗೋವಿಂದಯ್ಯ “ನಾವು ಒಂದು ತಪ್ಪು ಮಾಡಿದೆವು, ಅವನ ಜೋಳಿಗೆಯಲ್ಲಿ ಏನು ಇತ್ತು ಎಂದು ನೋಡಬೇಕಿತ್ತು” ಎನ್ನುತ್ತಲೇ ಕೈ ಕೈ ಹಿಸುಕಿ, ಆಮೇಲೆ ಅದು ಸರಿಯಲ್ಲ ಎಂಬಂತೆ “ಅದೆಲ್ಲ ಆಗುವಂತದ್ದಲ್ಲ” ಎಂದು ಹೇಳಿದರು.
ಕುಪ್ಪಣ್ಣಯ್ಯ ನಸುನಕ್ಕು “ನಾವೇನಾದರೂ ಅವನ ಜೋಳಿಗೆಗೆ ಕೈ ಹಾಕಿದರೆ, ಅವನು ತಿರುಗಿಬಿದ್ದು ಕೈ ಹಾಕಿದವರ ಕೆನ್ನೆಗೆ ಬಾರಿಸಿದರೆ, ತಲೆತಿರುಗಿ ಬೀಳಬೇಕು ಹಾಗಿವೆ ಅವನ ಕೈಗಳು” ಎಂದರು. ಆ ಚರ್ಚೆಯಲ್ಲಿ ಪಾಲ್ಗೊಳ್ಳುವ ಶಕ್ತಿ ಇಲ್ಲದ ಬಳೆಗಾರ್ತಿ ಸೇಸಿ “ಅಂತೂ ನಮ್ಮ ಕಣ್ಣ ಮುಂದಿರದೆ ಹೋದನಲ್ಲ ಆತ, ಅಷ್ಟೇ ಸಾಕು” ಎಂದು ತಾನು ಚಹಾ ಕುಡಿದ ಬಾಬ್ತು ಐವತ್ತು ರೂಪಾಯಿ ನೋಟನ್ನು ಕುಪ್ಪಣ್ಣಯ್ಯನ ಗಲ್ಲಾಪೆಟ್ಟಿಗೆಯ ಮೇಲಿಟ್ಟು ಚಿಲ್ಲರೆ ಪಡೆದು ಹೊರಟುಹೋದಳು.
ಸಂಜೆಯಾಗುತ್ತಿದ್ದಂತೆ ಸೀತಾಪುರದ ರಥಬೀದಿಯಲ್ಲಿ ಈ ಸುದ್ದಿ ಹರಡಿ ಕೊಳಲಗೋಪ ಎಲ್ಲರ ಬಾಯಲ್ಲೂ ಕುಣಿಯತೊಡಗಿದ. ಅವನ ವಿಚಿತ್ರ ವೇಷ, ಕೊಳಲು ಊದುವ ಕೌಶಲ ಸದಾ ಮೌನಿಯಾಗಿ ಇರುವ ಅವನ ಪ್ರವೃತ್ತಿ, ಯಾರಾದರೂ ಪ್ರಶ್ನಿಸಿದರೆ ಬೇಕೆಂತಲೇ ತಪ್ಪಾಗಿ ಉತ್ತರಿಸುವ ರೀತಿ ಇತ್ಯಾದಿಗಳ ಬಗ್ಗೆ ಬಹುಮುಖ ಚರ್ಚೆ ನಡೆದು ಆತ ಹುಚ್ಚನೇ ಇರಬೇಕು ಎನ್ನುವುದು ಬಹುಮತಕ್ಕೆ ಬಂತು. ಆದರೆ ರಾಂಭಟ್ಟರ ಕಿರಾಣಿ ಅಂಗಡಿಗೆ ಬಂದ ದೇವಸ್ಥಾನದ ಅರ್ಚಕ ರಾಘವೇಂದ್ರ ಉಪಾಧ್ಯರು, ರಾಂಭಟ್ಟರಿಂದ ಈ ವಿಚಾರವನ್ನು ತಿಳಿದು ಸಾಮಾನ್ಯವಾಗಿ ಕುಪ್ಪಣ್ಣಯ್ಯನ ಹೊಟೇಲಿಗೆ ಬಾರದೆ ಇದ್ದವರು ಆ ದಿನ ದಿಢೀರಾಗಿ ಎಂಬಂತೆ ಬಂದು, ಮತ್ತೆ ಅದೇ ಕಥೆಯನ್ನು ಕುಪ್ಪಣ್ಣಯ್ಯನವರ ಬಾಯಿಯಿಂದ ಕೇಳಿ “ನೀವು ಒಪ್ಪಿ ಅಥವಾ ಒಪ್ಪದೇ ಇರಿ ಇವರೇ, ಅವನು ಖಂಡಿತ ಹುಚ್ಚನಲ್ಲ. ಅವಧೂತನೇ ಇರಬೇಕು” ಎಂದರು.
ಕುಪ್ಪಣ್ಣಯ್ಯನವರಿಗೆ ನಿತ್ಯಾನಂದಸ್ವಾಮಿಗಳ, ಶ್ರೀಧರಸ್ವಾಮಿಗಳ ನಡವಳಿಕೆಗಳನ್ನು ಕೇಳಿ ತಿಳಿದು ಗೊತ್ತಿತ್ತು. “ಅವರು ಹಾಗಿರಲಾರರು ಉಪಾಧ್ಯರೇ, ಹಾಗಿದ್ದರೆ ಅವನು ತೆಂಗಿನಮರ ಏರಿ, ಕಾಯಿಗಳನ್ನು ಕಿತ್ತುಹಾಕುತ್ತಿರಲಿಲ್ಲ ಅಥವಾ ಇಂಥದ್ದೇ ನಡವಳಿಕೆ ಅವಧೂತರ ನಡವಳಿಕೆಯಲ್ಲಿ ಇರುವುದು ನನಗೆ ಗೊತ್ತಿಲ್ಲ” ಎಂದರು.
ಆಮೇಲೆ “ಮರ ಹತ್ತಿದ್ದು ಯಾಕೆ ಎಂದು ನಿಮ್ಮ ಊಹೆ?” ಎಂದು ಉಪಾಧ್ಯರಿಗೇ ಸವಾಲು ಹಾಕಿದರು. ಉಪಾಧ್ಯರಿಗೆ ತಕ್ಷಣ ತನ್ನ ಹೇಳಿಕೆ ತಪ್ಪಾಗಿದೆ ಎಂದು ಮನದಟ್ಟಾಯಿತು. ಅವರು “ಹೌದು. ಇದು ನನಗೂ ತಿಳಿಯುತ್ತಿಲ್ಲ” ಎಂದು ತಲೆ ತುರಿಸಿಕೊಂಡು, “ನಿಮ್ಮಲ್ಲಿ ಅವನು ಉಂಡದ್ದಕ್ಕೆ ಪ್ರತಿಯಾಗಿ ಏನಾದರೂ ಕೊಡಬೇಕಲ್ಲ? ದುಡ್ಡುಗಿಡ್ಡು ಕೊಟ್ಟರೆ ನೀವು ಸ್ವೀಕರಿಸುವುದಿಲ್ಲ ಎಂದು ಅವನಿಗೆ ಗೊತ್ತಿತ್ತೇನೊ” ಎಂಬ ಸಂಶೋಧನೆ ಮಾಡಿ “ಇರಲಿ ಬಿಡಿ, ನಿಮಗೆ ಅವನಿಂದ ಏನೂ ಅಪಾಯ ಆಗಲಿಲ್ಲವಲ್ಲ ಅಷ್ಟು ಸಾಕು” ಎನ್ನುತ್ತ “ಬರ್ತೇನೆ” ಎಂದು ಹೊರಗೆ ಕಾಲಿಟ್ಟರು.
ರಾತ್ರಿ ಊಟದ ಹೊತ್ತಿನಲ್ಲಿ ಕುಪ್ಪಣ್ಣಯ್ಯ ಇದೇ ವಿಚಾರವನ್ನು ಹೆಂಡತಿಯಲ್ಲಿ ಮಾತೆತ್ತಿ ಬೀದಿಯಲ್ಲಿ ಆದ ಚರ್ಚೆಗಳ ಸ್ವರೂಪವನ್ನು ಪ್ರೇಮಕ್ಕನ ಮುಂದೆ ಬಿಚ್ಚಿಟ್ಟಾಗ, ಆಕೆ “ಏನೇ ಆಗಲಿ ಇನ್ನು ಆತ ನಮ್ಮಲ್ಲಿಗೆ ಮತ್ತೆ ಬಾರದಿದ್ದರೆ ಸಾಕು” ಎಂದರು.
ರಾತ್ರಿ ಆ ಯೋಚನೆಯಲ್ಲೇ ಮಲಗಿದ ಪ್ರೇಮಕ್ಕನಿಗೆ ತಡವಾಗಿ ನಿದ್ದೆ ಬಂತು. ಮಧ್ಯರಾತ್ರ್ರಿಯ ಹೊತ್ತಿಗೆ ಅವರ ಕಣ್ಣಲ್ಲಿ ಗೋಪ ಬಂದಿಳಿದಿದ್ದ. ಕಿಟಾರನೆ ಕಿರುಚಿದ ಅವರು ಮಲಗಿದಲ್ಲೇ ಕುಪ್ಪಣ್ಣಯ್ಯನನ್ನು ಹೆದರಿ ಬಿಗಿದಪ್ಪಿದರು, ತಕ್ಷಣ ಕುಪ್ಪಣ್ಣಯ್ಯ “ಏನಾಯ್ತೇ?” ಎಂದು ಅವಳ ಬಿಗಿಹಿಡಿತವನ್ನು ಸಡಿಲಿಸಿ ಎದ್ದುಕುಳಿತು “ಅಯ್ಯೋ ಮಂಕೇ, ಗೋಪನೂ ಇಲ್ಲ, ಭೂಪನೂ ಇಲ್ಲ, ಸುಮ್ಮನೇ ಮಲಗು” ಎಂದು ಹೆಂಡತಿಯನ್ನು ಸಂತೈಸಿದರು.
ಮತ್ತೆ ಎರಡು ದಿನಗಳ ಕಾಲ ರಥಬೀದಿಯಲ್ಲಿ ಈ ಸುದ್ದಿ ಬ್ರಾಡ್ಕಾಸ್ಟ್ ಆಗುತ್ತಿತ್ತು. ಎಲ್ಲರಿಗೂ ಅವನ ವಿಚಿತ್ರ ವರ್ತನೆ ವಿಶಿಷ್ಟವೂ ಅದ್ಭುತವೂ ಆಗಿ ಕಂಡು ಇನ್ನಷ್ಟು ವಿಚಾರ ಇದ್ದರೆ ಕೇಳೋಣ ಎಂಬಂತೆ ಉಪಾಹಾರದ ನೆಪದಲ್ಲಿ ಕುಪ್ಪಣ್ಣಯ್ಯನ ಹೊಟೇಲಿಗೆ ಬರತೊಡಗಿದ್ದರು. ಅಂಥವರಲ್ಲಿ ಸೀತಾಪುರದ ಪಿ.ಹೆಚ್.ಸಿ.ಯ ಮೆಡಿಕಲ್ ಆಫೀಸರ್ ಶಿವನಂಜಯ್ಯ, ಪಂಚಾಯತ್ನ ಕಾರ್ಯದರ್ಶಿ ಸೋಮಪ್ಪ, ಸರ್ಕಾರಿ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ತಿಮ್ಮಪ್ಪಯ್ಯ, ಊರಿನಲ್ಲಿ ತುಂಬಾ ಹೆರಿಗೆ ಮಾಡಿಸಿ ಕೀರ್ತಿ ಪಡೆದ ಎ.ಎನ್.ಎಂ. ಭಾರತಿ ಅಮ್ಮ ಎಲ್ಲರಿಗೂ ಗೋಪನ ವಿಚಾರವನ್ನು ಕೇಳುವ ಕುತೂಹಲವಿದ್ದರೆ, ಅಂಥವರಿಗೆಲ್ಲ ಅದನ್ನು ಹೇಳಿಹೇಳಿ ಕುಪ್ಪಣ್ಣಯ್ಯನವರಿಗೆ ಅದು ಹಿಂಸೆಯಾಗಿ ಕಂಡಿತು. ಅವರು ಮೂರನೇ ದಿನ ತನ್ನ ಗಲ್ಲಾಪೆಟ್ಟಿಗೆಯ ಹೊರಮೈಯಲ್ಲಿ ‘ಕೊಳಲುಗೋಪನ ಕುರಿತಾದ ಚರ್ಚೆಗೆ ಇಲ್ಲಿ ಅವಕಾಶ ಇಲ್ಲ’ ಎಂಬ ಚೀಟಿಯನ್ನು ದೊಡ್ಡದಾದ ಸ್ಕೆಚ್ ಪೆನ್ನಿನಿಂದ ಬರೆದು ಅಂಟಿಸಿಬಿಟ್ಟರು.
ಹದಿನೈದು ದಿವಸದ ಮೇಲೆ ಕೊಳಲುಗೋಪ ಮತ್ತೆ ಸೀತಾಪುರದಲ್ಲಿ ಪ್ರತ್ಯಕ್ಷನಾದ. ಆತ ಆ ದಿನ ಮೂಡುಬಿದ್ರೆಯಿಂದ ಬರುವ ಎಸ್ಸೆಮ್ಮೆಸ್ ಬಸ್ಸಿನಲ್ಲಿ ಸೀತಾಪುರದ ರಥಬೀದಿಗೆ ಬಂದಿಳಿದ. ಕುಪ್ಪಣ್ಣಯ್ಯನ ಹೊಟೇಲಿನಾಚೆ ಮುಖವನ್ನೂ ಕೂಡ ಹಾಕದೆ ನೇರವಾಗಿ, ಸೀತಾಪುರದಿಂದ ಕೆಳಗೆ ಹೋಗುವ ರಸ್ತೆಯಲ್ಲಿ ಹೆಜ್ಜೆ ಹಾಕಿದ. ಅದು ರಂಗಪ್ಪಯ್ಯನ ಮನೆಯಾಚೆಗೆ ಹೋಗುವ ರಸ್ತೆಯಾಗಿತ್ತು.
ಆಗ ಸೀತಾಪುರದ ಬೀದಿಯಲ್ಲಿದ್ದ ಒಂದಷ್ಟು ಜನ ‘ಇವನು ಎಲ್ಲಿಗೆ ಹೋಗುತ್ತಾನೆ?’ ಎಂದು ಕುತೂಹಲದಿಂದ ಅವನನ್ನು ದೂರದಿಂದಲೇ ಹಿಂಬಾಲಿಸಿದರು. ಅವನು ನೇರವಾಗಿ ರಂಗಪ್ಪಯ್ಯನ ಅಂಗಳ ತಲಪಿದ ಎನ್ನುವುದು ಅಲ್ಲಿನ ನಾಯಿಗಳು ಬೊಗಳಿದಾಗ ಅವನನ್ನು ಹಿಂಬಾಲಿಸಿದವರಿಗೆ ತಿಳಿಯಿತು. ಅವರು ಹಿಂದಿರುಗಿ ಬಂದು ಆ ವಿಚಾರವನ್ನು ಕುಪ್ಪಣ್ಣಯ್ಯನಿಗೆ ಹೇಳಿದಾಗ, ಈಗ ಅಲ್ಲಿಗೆ ತಾನೂ ಯಾಕೆ ಹೋಗಬಾರದು ಎಂದು ಕುಪ್ಪಣ್ಣಯ್ಯನವರಿಗೆ ಅನಿಸಿತು. ಆದರೆ ಅವರು ಹೋಗದೆ ಉಳಿದರು. ಆ ದಿನಗಳಲ್ಲಿ ರಂಗಪ್ಪಯ್ಯ ಸೀತಾಪುರದ ಆಢ್ಯ ಮನುಷ್ಯ. ಮಾತ್ರವಲ್ಲ ಬ್ರಾಹ್ಮಣರ ‘ಗುರಿಕಾರ’! ಅವರ ಮನೆಗೆ ಸುಕಾಸುಮ್ಮನೆ (ಕಾರಣ ಇಲ್ಲದೆ) ಯಾರೂ ಹೋಗುವುದಿಲ್ಲ ಎಂಬ ಸ್ಥಿತಿ ಊರಲ್ಲಿ ಇತ್ತು. ಆದರೆ ಬ್ರಾಹ್ಮಣರ ನಡುವಿನ ಪಂಚಾಯತಿಕೆಗೆ, ಮುಖ್ಯವಾಗಿ ಪರಸ್ಪರ ಕೋಪ-ತಾಪಗಳ ಜಗಳದ ವಿಷಯಕ್ಕೆ ಅಥವಾ ಉಳಿದ ಸಮುದಾಯದವರ ಸಮಸ್ಯೆಗಳಿಗೆ ಅವರು ಪಂಚಾಯತಿಕೆ ಮಾಡುತ್ತಿದ್ದರೂ ಕುಪ್ಪಣ್ಣಯ್ಯನೂ ಅವರ ಸಂಪರ್ಕ ಇಟ್ಟುಕೊಂಡದ್ದು ಕಡಮೆಯೇ.
ಆ ದಿನ ಸಂಜೆ ಮನೆಯಿಂದ ಹೊಟೇಲಿಗೆ ಬಂದ ಕುಪ್ಪಣ್ಣಯ್ಯ ಒಂದಷ್ಟು ಹೊತ್ತು ಹೊಟೇಲಿನ ಗಲ್ಲಾಪೆಟ್ಟಿಗೆಯ ಹಿಂದೆ ಕುಳಿತು, ಗ್ರಾಹಕರು ಕಡಮೆಯಾಗುತ್ತಿದ್ದಂತೆ ತಾನು ರಂಗಪ್ಪಯ್ಯನ ಮನೆಗೆ ಯಾಕೆ ಹೋಗಿ ಬರಬಾರದು ಎಂದು ಮತ್ತೆ ಉತ್ಸಾಹಗೊಂಡರು. ಕೊಳಲ ಗೋಪನ ಬಗೆಗಿದ್ದ ಅವರ ಒಳಮನಸ್ಸಿನ ಕುತೂಹಲ ಇನ್ನೂ ತಣಿದಿರಲಿಲ್ಲ.
ಕುಪ್ಪಣ್ಣಯ್ಯ ರಂಗಪ್ಪಯ್ಯನ ಮನೆಗೆ ಬಂದಾಗ ರಂಗಪ್ಪಯ್ಯ ಕೆಲಸದವರಿಗೆ ಆ ದಿನದ ಕೂಲಿ ನೀಡುತ್ತಿದ್ದರು. ಕುಪ್ಪಣ್ಣಯ್ಯನವರನ್ನು ಕಂಡವರೇ ‘ಬನ್ನಿ… ಬನ್ನಿ’ ಎಂದು ಅವರನ್ನು ಸ್ವಾಗತಿಸಿ, ಕುಶಲ ವಿಚಾರಿಸುತ್ತಿದ್ದಂತೆ ಅವರ ಪತ್ನಿ ಸೀತಮ್ಮ “ನೀವೇ ಹೊಟೇಲಿನವರಾಗಿರುವುದರಿಂದ ನಿಮಗೆ ಚಾ ಕಾಫಿ ಬೇಕೇ ಎಂದು ಕೇಳುವ ಆವಶ್ಯಕತೆ ಇಲ್ಲವಲ್ಲ!” ಎಂದು ತಮಾಷೆಯ ಮಾತೆತ್ತುತ್ತಲೇ ಕುಪ್ಪಣ್ಣಯ್ಯನಿಗೂ ಗಂಡನಿಗೂ ಚಹಾ ಮಾಡಿಕೊಟ್ಟರು.
ಲೋಕಾಭಿರಾಮದ ಮಾತುಕತೆಯ ಮೇಲೆ ಇಬ್ಬರ ನಡುವೆ ಕೊಳಲಗೋಪ ವೇದಿಕೆಗೆ ಬಂದ. “ನಾನು ಅವರಿವರಿಂದ ನಿಮ್ಮ ಮನೆಗೆ ಆತ ಬಂದ ವಿಚಾರ ಕೇಳಿದ್ದೆ. ಹಾಗೆಂದೇ ನಿಮ್ಮಲ್ಲಿ ವಿಚಾರಿಸಲೂ ಬರಬೇಕೆಂದಿದ್ದೆ. ಆದರೆ ನಡುವೆ ಏನೇನೋ ಕೆಲಸ ಕಾರ್ಯಗಳು ಬಂದು ನಿಮ್ಮಲ್ಲಿಗೆ ಬರಲಾಗಲಿಲ್ಲ” ಎಂದರು ರಂಗಪ್ಪಯ್ಯ.
ಕುಪ್ಪಣ್ಣಯ್ಯ “ಇರಲಿ ಬಿಡಿ, ಈ ದಿನ ಮಧ್ಯಾಹ್ನ ಬಂದಿದ್ದನಂತಲ್ಲ ನಿಮ್ಮಲ್ಲಿಗೆ ಆತ?” ಎಂದು ವಿಚಾರಿಸಿ “ಊಟ ಮಾಡಿದ ಮೇಲೆ ಮರಗಿರ ಹತ್ತಿದನಾ ಹೇಗೆ?” ಎಂದು ನಗುತ್ತ ಪ್ರಶ್ನಿಸಿದರು. ತಕ್ಷಣ ಸೀತಮ್ಮ “ಇಲ್ಲ ಅಂಥದ್ದೇನೂ ಇಲ್ಲಿ ಮಾಡಿಲ್ಲ. ಮಾತೇ ಇಲ್ಲದೆ ಕುಳಿತಿದ್ದ. ಆಮೇಲೆ ಒಂದರ್ಧ ಗಂಟೆ ಕೊಳಲಿನಲ್ಲಿ ದೇವರನಾಮಗಳನ್ನು ನುಡಿಸುತ್ತಿದ್ದ. ಊಟ ಬಡಿಸಿದ ಕೂಡಲೇ ಹೊಟ್ಟೆ ತುಂಬಾ ಅಂದರೆ ನಾವು ನಾಲ್ಕು ಮಂದಿ ತಿನ್ನುವಷ್ಟು ಉಂಡು ಸದ್ದುಗದ್ದಲವಿಲ್ಲದೆ ಎದ್ದು ಹೋದ” ಎಂದು ನಕ್ಕರು.
“ಹೌದಾ?” ಎಂದು ಆಶ್ಚರ್ಯಚಕಿತರಾದ ಕುಪ್ಪಣ್ಣಯ್ಯ “ಆತ ಒಳ್ಳೆ ಸಂಸ್ಕಾರವಂತನೇ ಇರಬೇಕು. ತಲೆಗಿಲೆ ಕೆಟ್ಟು ಅಂಡಲೆಯುತ್ತಿರಬಹುದು” ಎಂದರು.
ಆದರೆ ರಂಗಪ್ಪಯ್ಯ ಮತ್ತು ಸೀತಮ್ಮ ಇದು ದೊಡ್ಡ ವಿಷಯವೇ ಅಲ್ಲ ಎಂಬಂತೆ, ಆ ವಿಷಯವನ್ನು ಬದಿಗೆ ಸರಿಸಿ ಸ್ವಲ್ಪ ಹೊತ್ತು ಹರಟೆ ಹೊಡೆದರು.
ಕುಪ್ಪಣ್ಣಯ್ಯ ಅಲ್ಲಿಂದ ಕತ್ತಲಾಗುವ ಮೊದಲು ಹೊರಟು ಬಂದರು.
ರಂಗಪ್ಪಯ್ಯನ ಮನೆಗೆ ಕೊಳಲಗೋಪ ಬಂದು ಹೋದ ವಿಚಾರ ಯಾಕೋ ಕುಪ್ಪಣ್ಣಯ್ಯನ ಮನೆಗೆ ಆತ ಬಂದಷ್ಟು ಸೀತಾಪುರದ ಬೀದಿಯಲ್ಲಿ ಪ್ರಚಾರ ಪಡೆಯಲಿಲ್ಲ. ಜನ ಅದು ಸಹಜವೆಂಬಂತೆ ಸುಮ್ಮನಾದರು.
ವಾರದ ಮೇಲೆ ಕೊಳಲಗೋಪನನ್ನು ಸೀತಾಪುರದ ಬೀದಿಯಲ್ಲಿ ಜನ ಮತ್ತೆ ನೋಡಿದರು. ಅವನು ಮತ್ತೆ ರಂಗಪ್ಪಯ್ಯನ ಮನೆಗೆ ಹೋದನೋ ಇಲ್ಲವೋ ಅಥವಾ ಬೇರೆಲ್ಲಿ ಹೋದ ಎಂಬುದನ್ನು ಯಾರೂ ಗಮನಿಸಲಿಲ್ಲ.
ಆಮೇಲಿನ ದಿನಗಳಲ್ಲಿ ಕೊಳಲಗೋಪ ನಾಲ್ಕಾರು ಬಾರಿ ಕುಪ್ಪಣ್ಣಯ್ಯನವರ ಮನೆಗೆ ಬಂದು ಹೋದ. ಆದರೆ ಮರ ಹತ್ತಲಿಲ್ಲ. ಎಂಟು ಹತ್ತು ಬಾರಿ ರಂಗಪ್ಪಯ್ಯನ ಮನೆಗೂ ಬಂದು ಹೋದ ಎನ್ನುವುದನ್ನು ಜನ ಸೀರಿಯಸ್ಸಾಗಿ ಪರಿಗಣಿಸಲಿಲ್ಲ. ಸ್ವತಃ ರಂಗಪ್ಪಯ್ಯನೂ ಅವನ ಬಗ್ಗೆ ವಿಶೇಷ ಆಸಕ್ತಿ ವಹಿಸಲಿಲ್ಲ. ಅವನಿಗೆ ಹೊಟ್ಟೆ ತುಂಬಾ ಬಡಿಸುವುದರಲ್ಲಿ ಸೀತಮ್ಮ ಮತ್ತು ಪ್ರೇಮಕ್ಕನಲ್ಲಿ ತಾಯ್ತನ ಇತ್ತು. ಅವನು ‘ಸಾಕು’ ಎಂದರೂ ಇಬ್ಬರೂ ಮತ್ತೂ ಒಂದು ಹಿಡಿಯಷ್ಟು ಅನ್ನವನ್ನು ಅವನ ಎಲೆಗೆ ಬಡಿಸುತ್ತಿದ್ದರು.
ಹೀಗಿರುತ್ತ ಸುಮಾರು ಎಂಟು ತಿಂಗಳ ಮೇಲೆ ಒಂದು ಸಂಜೆ ರಂಗಪ್ಪಯ್ಯನ ಅಡಿಕೆತೋಟದ ಆಚೆ ಇರುವ ಹಾಡಿಯಲ್ಲಿ ಕೊಳಲಗೋಪನ ಹೆಣ ಮರದಲ್ಲಿ ನೇತಾಡುವುದು ಅಲ್ಲಿಗೆ ತರಗೆಲೆ ಒಟ್ಟುಮಾಡಲು ಹೋದ ರಂಗಪ್ಪಯ್ಯನ ಕೆಲಸದ ಹೆಣ್ಣಾಳುಗಳಿಗೆ ಕಂಡಿತು. ಗಾಬರಿಯಲ್ಲಿ ಓಡಿ ಬಂದ ಅವರು ರಂಗಪ್ಪಯ್ಯನ ಅಂಗಳದಲ್ಲಿ ನಿಂತು ವಿಷಯ ತಿಳಿಸಿದರು. “ಅಯ್ಯೋ ದೇವರೇ, ನಾಲ್ಕು ದಿನದ ಹಿಂದೆ ಇಲ್ಲಿಗೆ ಬಂದು ಮಧ್ಯಾಹ್ನದ ಊಟ ತೀರಿಸಿ ಹೋಗಿದ್ದ ಅವನಿಗೆ ನೇಣು ಹಾಕಿಕೊಳ್ಳುವಂಥದ್ದು ಏನಾಗಿತ್ತೋ?” ಎಂದು ಸೀತಮ್ಮ ಬೆರಗಾದರು. ಆಗ ಚಾವಡಿಯಲ್ಲಿ ಟಿ.ವಿ. ನೋಡುತ್ತ ಕುಳಿತಿದ್ದ ಗಂಡನನ್ನು ಕರೆದ ಆಕೆ ಈ ವಿಷಯ ಹೇಳಿದಾಗ ‘ಅರೇ!’ ಎಂದು ಗಾಬರಿಯಾದ ರಂಗಪ್ಪಯ್ಯ ನಾಲ್ಕು ಜನ ಕೂಲಿಯಾಳುಗಳನ್ನು ಕರೆದುಕೊಂಡು ಕೊಳಲಗೋಪ ನೇಣು ಬಿಗಿದ ಸ್ಥಳಕ್ಕೆ ಓಡಿದರು. ಅಲ್ಲಿ ಮರದಲ್ಲಿ ನೇತಾಡುತ್ತಿದ್ದ ಆತನ ಹೆಣವು ನಿಧಾನವಾಗಿ ಕೊಳೆಯುತ್ತ ವಾಸನೆ ಬರಲು ಪ್ರಾರಂಭವಾಗಿತ್ತು. ತಕ್ಷಣ ಮುಖ ಮುಚ್ಚಿಕೊಂಡು ಮನೆಗೆ ಬಂದ ರಂಗಪ್ಪಯ್ಯ, ಪೊಲೀಸ್ ಸ್ಟೇಶನ್ನಿಗೆ ಫೋನು ಮಾಡಿ ವಿಷಯ ತಿಳಿಸಿದರು. ಪೊಲೀಸ್ ಇನ್ಸ್ಪೆಕ್ಟರರು ‘ಹೌದಾ?’ ಎನ್ನುತ್ತ “ಈ ಸಂಜೆ ಅಲ್ಲಿಗೆ ಬರುವುದು ಕಷ್ಟ ರಂಗಪ್ಪಯ್ಯನೋರೇ. ನಾಳೆ ಹೆಣ ಇಳಿಸಿ ಪೋಸ್ಟ್ ಮಾರ್ಟಂ ಮಾಡಿಸೋಣ” ಎಂದವರೇ ಅವನು ಆತ್ಮಹತ್ಯೆ ಮಾಡಿಕೊಳ್ಳಲು ಏನಾದರೂ ಕಾರಣ ಇದ್ದಿರಬಹುದೇ ಎಂದು ರಂಗಪ್ಪಯ್ಯನನ್ನು ಪ್ರಶ್ನಿಸಿದರು.
ರಂಗಪ್ಪಯ್ಯ “ಗೊತ್ತಿಲ್ಲ” ಎಂದರು. ಆ ಮಾತುಕತೆಗಳು ಮುಗಿದು ಇನ್ನೇನು ಸೂರ್ಯ ಮುಳುಗಿದ ಎನ್ನುವ ಹೊತ್ತಿನಲ್ಲಿ ಅವರು ಬಾವಿಕಟ್ಟೆಗೆ ಹೋಗಿ ಬಾವಿಯಿಂದ ನಾಲ್ಕು ಕೊಡ ನೀರನ್ನು ಎಳೆದು ತಲೆಗೆ ಸುರುವಿಕೊಳ್ಳಲು ಮುಂದಾದರು. ಅದೇ ಹೊತ್ತಿಗೆ ಅಲ್ಲಿಗೆ ಬಂದ ಕುಪ್ಪಣ್ಣಯ್ಯ “ಅರೇ, ನೀವೇನು ಈ ಹೊತ್ತಿನಲ್ಲಿ ತಣ್ಣೀರುಸ್ನಾನ?” ಎಂದು ಕುತೂಹಲ ತೋರಿಸಿದರು. ಅದನ್ನು ಕೇಳಿಸಿಕೊಂಡ ರಂಗಪ್ಪಯ್ಯನ ಪತ್ನಿ ಸೀತಮ್ಮ “ಅವರು ಸೆಖೆಗೆ ಒಮ್ಮೊಮ್ಮೆ ಹೀಗೆ ತಣ್ಣೀರು ಹೊಯ್ದುಕೊಳ್ಳುವುದುಂಟು” ಎಂದು ನಕ್ಕರು.
ಸ್ನಾನ ತೀರಿಸಿ ಮೈ ಒರೆÀಸಿಕೊಂಡು ಚಾವಡಿಗೆ ಬಂದ ರಂಗಪ್ಪಯ್ಯ ಅಲ್ಲಿ ಹೆಂಡತಿ ಸೀತಮ್ಮ ಇಲ್ಲದ್ದನ್ನು ಗಮನಿಸಿ ಸಣ್ಣ ಸ್ವರದಲ್ಲಿ “ಕುಪ್ಪಣ್ಣಯ್ಯನೋರೇ” ಎಂದು ಕರೆದು “ಈ ಗೋಪನ ಸಾವು ನನ್ನಲ್ಲಿ ಪಾಪಪ್ರಜ್ಞೆಯನ್ನು ಯಾಕೋ ಮೂಡಿಸಿದೆ” ಎಂದು ಪಿಸುಗುಟ್ಟಿ “ಮೊನ್ನೆ ಏನಾಯಿತು ಅಂದರೆ, ಎಂದಿನ ಹಾಗೆ ಅವನು ನಮ್ಮಲ್ಲಿಗೆ ಬಂದು ಊಟ ತೀರಿಸಿ ಕೊಳಲು ಊದುತ್ತ ಕುಳಿತಿದ್ದ. ಆ ದಿನ ಕೆಲಸದ ಆಳುಗಳು ಯಾರೂ ಮನೆಯಲ್ಲಿ ಇರಲಿಲ್ಲ ಎಂದು ನಾನು ತಾಂಬೂಲ ಹಾಕಲು ವೀಳ್ಯದೆಲೆ ಬೇಕಿತ್ತು ಎಂದು ಪರ್ಸ್ ಇಟ್ಟುಕೊಂಡು ರಥಬೀದಿಗೆ ಹೊರಟಿದ್ದೆ. ಆದರೆ ಪರ್ಸನ್ನು ಮರೆತು ನಮ್ಮ ಮನೆಯ ಹಿಂದಿನ ಬೆಂಚಿನ ಮೇಲಿಟ್ಟು ರಥಬೀದಿಗೆ ಬಂದಿದ್ದೆ. ಅಲ್ಲಿ ಹತ್ತಿರದಲ್ಲೇ ನೆಲದಲ್ಲಿ ಗೋಪ ಕುಳಿತಿದ್ದ. ರಥಬೀದಿಗೆ ಬಂದು ನೋಡಿದರೆ ನಾನು ಪರ್ಸ್ ಮನೆಯಲ್ಲೇ ಬಿಟ್ಟು ಬಂದದ್ದು ನೆನಪಾಗಿ ನನಗೆ ಆತಂಕವಾಯಿತು. ಗೋಪನೇನಾದರೂ ಅದನ್ನು ಲಪಟಾಯಿಸಿದರೆ ಎಂದು ಮನೆಗೆ ಓಡೋಡಿ ಬಂದೆ. ಪರ್ಸ್ ಇಟ್ಟಲ್ಲಿ ನೋಡಿದರೆ, ಅದು ಮಾಯವಾಗಿತ್ತು. ತಕ್ಷಣ ನನಗೆ ಇದು ಗೋಪನದ್ದೇ ಕೆಲಸ ಎಂದು ಅಸಾಧ್ಯ ಸಿಟ್ಟು ಬಂತು. ಆದರೆ ಗೋಪ ಎಲ್ಲಿ ಕುಳಿತಿದ್ದನೋ ಅಲ್ಲೇ ಇದ್ದ. ನಾನು ಸಿಟ್ಟಿನಲ್ಲಿ ಅವನ ಕೈಯಲ್ಲಿದ್ದ ಕೊಳಲನ್ನು ಕಿತ್ತು ಮುರಿದುಹಾಕಿ ಕಪಾಳಕ್ಕೆ ಎರಡು ಬಾರಿಸಿ, ‘ನಡಿ ಆಚೆಗೆ’ ಎಂದು ಗರ್ಜಿಸಿದೆ. ಇದನ್ನೆಲ್ಲ ಸಹಿಸಿಕೊಂಡ ಗೋಪ ಏನೂ ಆಡದೆ ಬೆನ್ನು ಬಾಗಿಸಿಕೊಂಡು ಹೊರಟುಹೋದ. ತುಸುಹೊತ್ತಿನ ಮೇಲೆ ನಾನು ಎಚ್ಚೆತ್ತುಕೊಂಡು ಇವಳನ್ನು ಕರೆದು ಪರ್ಸಿನ ವಿಚಾರ ವಿಚಾರಿಸಬೇಕೆಂದುಕೊಂಡೆ. ಆಗ ಇವಳು ಮನೆಯಲ್ಲಿ ಇರಲಿಲ್ಲ. ತೋಟದಿಂದ ಮರಳಿ ಬಂದ ಇವಳನ್ನು ನಾನು ವಿಚಾರಿಸಿದಾಗ “ನೀವು ಪರ್ಸನ್ನು ಯಾಕೆ ಅಲ್ಲಿ ಬೆಂಚಿನ ಮೇಲೆ ಇಟ್ಟು ಹೋದಿರಿ? ಅಲ್ಲಿ ಪಕ್ಕದಲ್ಲೆ ನೆಲದಲ್ಲಿ ಗೋಪ ಇದ್ದದ್ದನ್ನು ಗಮನಿಸಲಿಲ್ಲವೇ ನೀವು?” ಎಂದು ಪ್ರಶ್ನಿಸಿ “ನಾನು ಆಗಲೇ ಅದನ್ನು ಒಳಗೆ ತೆಗೆದಿರಿಸಿದ್ದೆ” ಎಂದಳು.
ಇಷ್ಟು ಹೇಳುವಾಗ ರಂಗಪ್ಪಯ್ಯನ ಬಾಯಿ ಬಿದ್ದುಹೋಗಿ ಅವರ ಕಣ್ಣುಗಳು ತುಂಬಿ ಬಂದುವು. ಕ್ಷೀಣ ಸ್ವರದಲ್ಲಿ ಮಾತನ್ನು ಮುಂದುವರಿಸಿದ ರಂಗಪ್ಪಯ್ಯ “ಅವನು ಹಾಕಿಕೊಂಡ ನೇಣಿನ ಹಗ್ಗ ನಮ್ಮ ದನದ ಹಟ್ಟಿಯದ್ದೇ ಎನ್ನುತ್ತಿದ್ದಾರೆ ನಮ್ಮ ಕೆಲಸದಾಳುಗಳು. ಬಹುಶಃ ಆತ ರಾತ್ರಿ ಮರಳಿ ಬಂದು ಆ ಹಗ್ಗ ಹಿಡಿದುಕೊಂಡು ನೇಣು ಹಾಕಿಕೊಂಡಿರಬೇಕು” ಎಂದರು.
ಕುಪ್ಪಣ್ಣಯ್ಯನ ಕಣ್ಣುಗಳಲ್ಲಿ, ಗೋಪ ತನ್ನ ಮನೆಯಲ್ಲಿ ತೆಂಗಿನಮರ ಹತ್ತುವ ದೃಶ್ಯ ಕಂಡಂತಾಯಿತು. ಅವನಿಗೂ ಇಂಥ ಸಾವೇ ಎಂದು ಅವರ ಕಣ್ಣುಗಳು ಹೇಳಿದುವು.
ರಂಗಪ್ಪಯ್ಯ ತಣ್ಣೀರಲ್ಲಿ ಸ್ನಾನ ಮಾಡಿದ್ದು ಇದಕ್ಕೇ ಎಂದುಕೊಂಡ ಕುಪ್ಪಣ್ಣಯ್ಯ ಕುಟುಂಬಿಕರು ಸತ್ತರೆ ಅಥವಾ ಸತ್ತ ಸುದ್ದಿ ಕೇಳಿದರೆ ತಣ್ಣೀರ ಸ್ನಾನ ಮಾಡುವುದು ಬ್ರಾಹ್ಮಣರ ಸಂಸ್ಕಾರ. ಈ ರಂಗಪ್ಪಯ್ಯನ ಮನಸ್ಸಿನಲ್ಲಿ ಕೊಳಲಗೋಪ ಅಂಥ ಪ್ರಭಾವ ಬೀರಿದ್ದನೇ? – ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ ಕುಪ್ಪಣ್ಣಯ್ಯ ಏನೂ ಆಡದೆ ಸುಮ್ಮನಾದರು.
ಅದರ ಮೌನ ರಂಗಪ್ಪಯ್ಯನನ್ನು ಇನ್ನಷ್ಟು ಇರಿಯಿತು. ಅವರ ಕೈಗಳು, ನಿಧಾನವಾಗಿ ತಮ್ಮ ಕಣ್ಣುಗಳನ್ನು ಸ್ಪರ್ಶಿಸಿ ಸಾಂತ್ವನ ಹೇಳಲು ಮುಂದಾದವು.