ಸ್ತೋ ತ್ರ ಶಬ್ದದ ಅರ್ಥ ಸ್ತುತಿಸು, ಕೊಂಡಾಡು, ಗುಣಗಾನ ಮಾಡು, ಹಾಡು ಎಂದಾಗುತ್ತದೆ. ದೇವನು ದಯಾಸಾಗರ, ಕರುಣಾಮಯಿ, ಸರ್ವಜ್ಞ, ಸರ್ವಶಕ್ತ ಎಂದು ಮುಂತಾಗಿ ದೇವರ ದಿವ್ಯ ಗುಣಗಾನ ಮಾಡುವುದೇ ಸ್ತೋತ್ರ ಎನಿಸುತ್ತದೆ. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು”ಎಂದು ಮುಂತಾಗಿ ಹೃದಯದುಂಬಿ ದೇವರನ್ನು ಪ್ರಾರ್ಥಿಸುವುದು ಕೂಡಾ ಸ್ತೋತ್ರ ಎನಿಸುತ್ತದೆ.
ದೇವರನಾಮಗಳನ್ನೂ ಭಕ್ತಿಗೀತೆಗಳನ್ನೂ ಆಗಾಗ ಹೇಳುತ್ತಿದ್ದರೆ ನಮ್ಮ ಮನಸ್ಸು ಶಾಂತವಾಗಿರುತ್ತದೆ. ಮನೆಯಲ್ಲಿ ಯಾವುದೇ ವಾದ-ವಿವಾದಗಳು, ಜಗಳಗಳು ಆಗುವುದಿಲ್ಲ. ಒಂದುವೇಳೆ ಅಂತಹ ವಿಷಮ ಪ್ರಸಂಗ ನಿರ್ಮಾಣವಾಗಿದ್ದಲ್ಲಿ ದೇವರ ನಾಮಸ್ಮರಣ ಕೇಳಿಬಂದರೆ ವಾತಾವರಣ ತಿಳಿಯಾಗುತ್ತದೆ.
ಪ್ರಪಂಚವು ಎಷ್ಟೇ ಸುಂದರವಾಗಿದ್ದರೂ ಅದು ಶಾಶ್ವತವಲ್ಲ. ಪರಮ ಸತ್ಯ ಪರಮಾತ್ಮನೇ ಶಾಶ್ವತವೆಂದು ದೇವನನ್ನು ನಂಬಿ ನಡೆಯಬೇಕು. ಪ್ರಾಪಂಚಿಕ ವಿಷಯಗಳ ಅಭಿಮಾನ ಅಹಂಕಾರದಿಂದ ಸ್ವಲ್ಪ ದೂರ ಇರಲು ಪ್ರಯತ್ನಿಸಬೇಕು.
ಈ ಸಂಸಾರಸಾಗರದಲ್ಲಿ ಸುಖ-ದುಃಖದ ತೆರೆಗಳು ನಿರಂತರ ಬರುತ್ತಿರುತ್ತವೆ. ನಮ್ಮ ಆರೋಗ್ಯ, ಆಯುಷ್ಯ ಯಾವುದೂ ಸ್ಥಿರವಲ್ಲ. ಏನಾದರೂ ಸ್ವಲ್ಪ ಅನಾರೋಗ್ಯವಾದರೆ ದೊಡ್ಡ ಆಸ್ಪತ್ರೆಗೆ ಹೋಗಿ ಲಕ್ಷಾಂತರ ಹಣ ಖರ್ಚು ಮಾಡಿ ಸರಿ ಮಾಡಿಕೊಂಡು ಬರುತ್ತಾರೆ. ಮರುದಿನ ಜಾರಿ ಬಿದ್ದು ಕಾಲು ಮುರಿದು ಮತ್ತೆ ಆಸ್ಪತ್ರೆಗೆ ಸೇರಿದರೂ ಆಶ್ಚರ್ಯವಿಲ್ಲ! ಇದುವೇ ಜೀವನ. ಈ ಜೀವನದಲ್ಲಿ ಸುಖ-ದುಃಖ ಯಾವುದೂ ಶಾಶ್ವತವಲ್ಲ ಇಂಥ ಸಂಸಾರಸಾಗರವನ್ನು ನಾವು ನೆಮ್ಮದಿಯಿಂದ ದಾಟಿ ಶಾಂತಿಸಾಗರವನ್ನು ತಲಪಬೇಕು. ಅದಕ್ಕೆ ಇರುವ ಒಂದು ಸುಲಭ ಸುಂದರ ಸಾಧನವೆಂದರೆ ದೇವರ ಪವಿತ್ರ ನಾಮಸ್ಮರಣೆ ಅಥವಾ ದೇವರ ದಿವ್ಯಗುಣಗಾನ! ದೇವಸ್ತುತಿ!!
[ಪೂಜ್ಯ ಸ್ವಾಮಿಗಳ ‘ದೇವನೊಲುಮೆ’
ಪ್ರವಚನಸಂಕಲನದಿಂದ.
ಸಂಪಾದಕರು: ಡಾ|| ಶ್ರದ್ಧಾನಂದ ಸ್ವಾಮಿಗಳು
ಕೃಪೆ: ಜ್ಞಾನಯೋಗ ಫೌಂಡೇಶನ್, ವಿಜಾಪುರ]