ಅಧಿಕಾರಕೇಂದ್ರಗಳಿಗೂ ಸಾಮಾನ್ಯ ಜನತೆಗೂ ನಡುವೆ ದೊಡ್ಡ ಕಂದರವಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಎಂಬ ವ್ಯಾಖ್ಯೆ ಹಿಂದಿನ ವರ್ಷಗಳಲ್ಲಿ ಆಗಾಗ ಕೇಳಬರುತ್ತಿತ್ತು. ಅದು ದಿಟವೂ ಆಗಿತ್ತು. ಜನಸಂಪರ್ಕದಿಂದ ಆದಷ್ಟು ದೂರವಿರಿ ಎಂದೇ ಆಡಳಿತ ತರಬೇತಿ ಕೇಂದ್ರದಲ್ಲಿ ಬೋಧಿಸಲಾಗುತ್ತಿತ್ತು ಎಂಬ ವಾಸ್ತವವನ್ನು ಅನೇಕ ಹಿರಿಯ ಅಧಿಕಾರಿಗಳೇ ಹೇಳಿದ್ದಿದೆ; ಅದು ಹಾಗಿರಲಿ. ಸರ್ಕಾರಕ್ಕೂ ಪ್ರಜೆಗಳಿಗೂ ನಡುವೆ ಹೆಚ್ಚು ನಿಕಟವೂ ಸ್ಥಾಯಿಯೂ ಆದ ಸಂಪರ್ಕವನ್ನು ಸಾಧಿಸುವುದು ಈಗಿನ ಆರೂಢ ಸರ್ಕಾರದ ಆದ್ಯತೆಗಳಲ್ಲೊಂದಾಗಿರುವುದು ಅದರ ಹಲವಾರು ಕ್ರಮಗಳಿಂದ ದ್ಯೋತವಾಗುತ್ತಿದೆ. ಇದು ಶ್ಲಾಘನೀಯವೆಂದು ಗುರುತಿಸಬೇಕು. ನಿದರ್ಶನಕ್ಕೆ – ಈಗ ನೂರರ ಗಡಿ ದಾಟಿರುವ ಪ್ರಧಾನಿಗಳ ‘ಮನ್ ಕೀ ಬಾತ್’ ಪ್ರಸಾರಗಳು ಅನನ್ಯ ರೀತಿಯವಾಗಿದ್ದು ಅತ್ಯಂತ ಜನಪ್ರಿಯವಾಗಿವೆ. ವಿಶೇಷವೆಂದರೆ ಜನಸಾಮಾನ್ಯರೊಡನೆ ಈ ಸಂವಾದ ನಡೆದಿರುವುದು ಮಾತ್ರವಲ್ಲದೆ ಪ್ರಧಾನಿಗಳು ಸ್ಪರ್ಶಿಸುವ ವಿಷಯಗಳು ಜನರ ದೈನಂದಿನ ಜೀವನಕ್ಕೆ ಸಂಬಂಧಿಸಿರುವವೂ ಆಗಿರುವುದು. ಈ ಪ್ರಸಾರಗಳಲ್ಲಿ ಎಲ್ಲಿಯೂ ಅಪ್ಪಿತಪ್ಪಿಯೂ ರಾಜಕೀಯ ಸಂಗತಿಗಳು ನುಸುಳಿಲ್ಲ. ಅದರಂತೆ ಇನ್ನೊಂದು ಸಾರ್ಥಕ ಜನಸಂಪರ್ಕದ ಉಪಕ್ರಮವೆಂದರೆ ವಾರ್ಷಿಕ ಬಜೆಟಿನೊಡಗೂಡಿ ಮಂಡನೆಗೆ ಮೊದಲೂ ಅನಂತರವೂ ‘ವೆಬಿನಾರ್’ಗಳ ಮೂಲಕ ಸರ್ಕಾರಕ್ಕೂ ಸಮಾಜಪ್ರತಿನಿಧಿಗಳಿಗೂ ನಡುವೆ ನಿಯತ ರೀತಿಯ ಸಂಪರ್ಕಕ್ಕೂ ಸಮಾಲೋಚನೆಗೂ ದಾರಿಯಾಗಿರುವುದು. ಹಿಂದೆ ಯಾದೃಚ್ಛಿಕವಾಗಿ ನಡೆಯುತ್ತಿದ್ದ ಈ ಪ್ರಕ್ರಿಯೆ ಈಗ ಹೆಚ್ಚು ವ್ಯವಸ್ಥಿತಗೊಂಡಿರುವುದು ಯೋಜನೆಗಳ ಅನುಷ್ಠಾನವನ್ನು ಹೆಚ್ಚು ಸಾಂದ್ರಗೊಳಿಸುತ್ತದೆಂಬ ಆಕಾಂಕ್ಷೆ ನಿರಾಧಾರವಲ್ಲ.
ಸರ್ಕಾರ ಮತ್ತು ಜನತೆ
Month : June-2023 Episode : Author :