ಕೆಲವು ಪ್ರಧಾನಿಗಳಂತೆಯೇ ರಾಜೀವ್ಗಾಂಧಿ ಅವರೊಂದಿಗೆ ಕೂಡ ಡಾ|| ಕುರಿಯನ್ ಅವರಿಗೆ ಆತ್ಮೀಯ ಸಂಬಂಧವಿತ್ತು. “ರಾಜೀವ್ ಒಳ್ಳೆಯ ಮನುಷ್ಯ. ಕಾಂಪ್ಲಿಕೇಶನ್ ಇಲ್ಲದ ವ್ಯಕ್ತಿ. ಆತ ಮಾಡಿದ ಏಕೈಕ ತಪ್ಪೆಂದರೆ ಎಲ್ಲ ಬಗೆಯ ಭ್ರಷ್ಟ ಮಂತ್ರಿಗಳನ್ನು ತನ್ನ ಸುತ್ತ ಇಟ್ಟುಕೊಂಡದ್ದು. ಒಮ್ಮೆ ಏನನ್ನೋ ಉದ್ಘಾಟಿಸಲು ಆನಂದ್ಗೆ ಬಂದಾಗ ಆತ ನನ್ನ ಜೊತೆ ಒಂದು ಸಮಸ್ಯೆಯನ್ನು ಹೇಳಿಕೊಂಡರು” ಎಂದು ಕುರಿಯನ್ ಆ ಬಗ್ಗೆ ವಿವರಿಸಿದ್ದಾರೆ. ‘ಕುರಿಯನ್ಜೀ, ನಾನೊಂದು ದೊಡ್ಡ ತಪ್ಪು ಮಾಡಿದೆ. ನನ್ನ ಕ್ಷೇತ್ರ ರಾಯ್ಬರೇಲಿಯಲ್ಲಿ ೧೦೦ ಕೋಟಿ ರೂ. ಖರ್ಚು ಮಾಡಿ ಒಂದು ಕಾರ್ಖಾನೆ ಸ್ಥಾಪಿಸಿದೆ. ಅಲ್ಲಿಯ ೨೦೦೦ ಉದ್ಯೋಗದಲ್ಲಿ ೧೯೮೦ ಹೊರಗಿನವರಿಗಾಯಿತು; ಉಳಿದ ೨೦ ಕಸಗುಡಿಸುವ ಕೆಲಸ ಸ್ಥಳೀಯರಿಗೆ ಸಿಕ್ಕಿತು. ಇದರಿಂದ ಟೀಕೆಗೆ ಗುರಿಯಾಗಬೇಕಾಯಿತು. ನೀವು ಆನಂದ್ನಂತಹ ಒಂದು ಘಟಕವನ್ನು ಅಲ್ಲಿ ಹಾಕುವಿರಾ?’ ಎಂದು ಕೇಳಿದರು. “ಅದು ಬೇಗ ಆಗುವುದಿಲ್ಲ. ದನ ಸಾಕಿ ಹಾಲು ಬೇಕಾದಷ್ಟು ಉತ್ಪಾದಿಸಬೇಕು; ಮತ್ತೆ ಡೈರಿಯನ್ನು ಸ್ಥಾಪಿಸಬಹುದು” ಎಂದ ಕುರಿಯನ್ ಆ ಬಗ್ಗೆ ಕಾರ್ಯಪ್ರವೃತ್ತರಾದರು.
ಗುಜರಾತ್ ಮಿಲ್ಕ್ ಫೆಡರೇಶನ್ (ಗುಜರಾತ್ ಹಾಲು ಒಕ್ಕೂಟ) ದೇಶದ ಅತಿದೊಡ್ಡ ಆಹಾರ ಪದಾರ್ಥ ಮಾರುಕಟ್ಟೆ ಸಂಸ್ಥೆ ಎನ್ನುವ ಗೌರವಕ್ಕೆ ಪಾತ್ರವಾಯಿತು. ಅಮುಲ್ ಮತ್ತು ಸಾಗರ್ ಅದರ ಎರಡು ಬ್ರಾಂಡ್ ನೇಮ್ಗಳು. ೧೯೬೦ರ ದಶಕದಲ್ಲಿ ಆಪರೇಶನ್ ಫ್ಲಡ್ ಪ್ರಸ್ತಾವವನ್ನು ಪರಿಶೀಲಿಸುವಾಗ ಭಾರತವು ಹೆಚ್ಚು ಹಾಲನ್ನು ಉತ್ಪಾದಿಸಬೇಕೇ ಅಥವಾ ಬೆಳೆಯುತ್ತಿರುವ ಜನಸಂಖ್ಯೆಗೆ ಬೇಕಾದ ಆಹಾರಧಾನ್ಯವನ್ನು ಬೆಳೆಸಬೇಕೇ ಎನ್ನುವ ಅಂಶ ಚರ್ಚೆಗೆ ಬಂತು. ಅದರೊಂದಿಗೆ ಹಾಲು ಅನಿವಾರ್ಯ ಅಲ್ಲ ಎನ್ನುವ ಮಾತು ಕೂಡ ಬಂತು. ಇದರಲ್ಲಿ ಸ್ವಲ್ಪ ನಿಜವಿದ್ದರೂ ಕೂಡ ಒಂದು ಅಭಿವೃದ್ಧಿಶೀಲ (ಹಿಂದುಳಿದ) ದೇಶವು ಹಾಲಿನ ವಿಷಯದಲ್ಲಿ ಸ್ವಾವಲಂಬಿ ಆಗಬಾರದೇ ಎನ್ನುವ ಅಂಶ ಕೂಡ ಇತ್ತು. ಮುಂದುವರಿಯುವಾಗ ದೇಶದಲ್ಲಿ ಒಂದು ದನಕ್ಕೆ (ಅಥವಾ ಎಮ್ಮೆಗೆ) ಒಂದು ಎಕರೆ ಹುಲ್ಲು ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅದಕ್ಕಾಗಿ ಆನಂದ್ ಸಂಸ್ಥೆಯ ವತಿಯಿಂದ ಪಶುಆಹಾರ (ಫೀಡ್ಸ್), ದನದ ಆರೋಗ್ಯ, ಅದರ ಪೌಷ್ಟಿಕ ಆಹಾರಗಳ ಬಗ್ಗೆ ಸಂಶೋಧನೆ ನಡೆಸಲಾಯಿತು. ಹೊಸ ಯೋಜನೆಗಳನ್ನು ಕೈಗೊಳ್ಳುವಾಗ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯು (ಎನ್ಡಿಡಿಬಿ) ಪೂರ್ಣ (holistic) ದೃಷ್ಟಿಕೋನದಿಂದ ಯೋಚಿಸುತ್ತಿತ್ತು.
ಆಪರೇಶನ್ ಫ್ಲಡ್ ಮೊದಲ ಹಂತವು ಐದು ವರ್ಷಗಳಲ್ಲಿ ಮುಗಿಯಬೇಕಿತ್ತು; ಆದರೆ ಅದು ಹತ್ತು ವರ್ಷಗಳವರೆಗೆ ಮುಂದುವರಿಯಿತು. ಖರ್ಚು ನಿಗದಿತ ೯೬ ಕೋಟಿ ರೂ.ಗಳಿಂದ ೧೧೬ ಕೋಟಿಗೇರಿತು. ಹಾಲಿನ ಹುಡಿ ದರವನ್ನು ಏರಿಸಿ ಅದನ್ನು ಭರಿಸಿಕೊಂಡರು. ದೆಹಲಿ, ಕೋಲ್ಕತಾ, ಮುಂಬಯಿ ಮತ್ತು ಮದ್ರಾಸ್ ಈ ನಾಲ್ಕು ಮಹಾನಗರಗಳಲ್ಲಿ ಮದರ್ಡೈರಿ ಸ್ಥಾಪಿಸುವ ಕಾರಣದಿಂದಾಗಿ ಮೊದಲ ಹಂತ ವಿಳಂಬವಾಯಿತು. ಅದಕ್ಕಾಗಿ ಆನಂದ್ನಂತಹ ೧೭ ಸಂಸ್ಥೆಗಳನ್ನು ಸ್ಥಾಪಿಸಿ ಹತ್ತು ಲಕ್ಷ ಹಾಲು ಉತ್ಪಾದಕ ರೈತರನ್ನು ಸಂಘಟಿಸಬೇಕಿತ್ತು. ಸ್ವಚ್ಛತೆಗಾಗಿ ಮಹಾನಗರಗಳಲ್ಲಿ ದೊಡ್ಡ ಮಾರಾಟ ಯಂತ್ರ (bulk vending machine)ಗಳನ್ನು ಅಳವಡಿಸಬೇಕಿತ್ತು. ಪ್ಯಾಶ್ಚರೈಸರ್ನಲ್ಲಿ ಹಾಲಿನ ಉಷ್ಣತೆಯನ್ನು ೭೨.೪೦ ಡಿಗ್ರಿ ಸೆಲ್ಸಿಯಸ್ಗೆ ಏರಿಸುವ ಮೂಲಕ ಕೆಟ್ಟ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ತಂತ್ರಜ್ಞಾನವನ್ನು (ಪ್ಯಾಶ್ಚರೈಸೇಶನ್) ಅಳವಡಿಸಲಾಯಿತು. ಮಹಾನಗರಗಳಿಗಾಗಿ ೨೦೦ ದೊಡ್ಡ ಹಾಲು ಮಾರಾಟ ಯಂತ್ರಗಳನ್ನು ತರಿಸಬೇಕೆಂದು ಕೇಂದ್ರಸರ್ಕಾರವನ್ನು ಸಂಪರ್ಕಿಸಿದಾಗ ಸಚಿವ ಫಕ್ರುದ್ದೀನ್ ಅಲಿ ಅಹಮದ್ ಅವರು ಅದಕ್ಕೆ ನಿರಾಕರಿಸಿದರು. ಆಗ ಆನಂದ್ನಲ್ಲೇ ಅದನ್ನು ಸಿದ್ಧಪಡಿಸಿದರು. ಅದು ಕೂಡ ಮೊದಲ ಹಂತದ ವಿಳಂಬಕ್ಕೆ ಕಾರಣವಾಯಿತು. ಯುನಿಸೆಫ್ ಅಮೆರಿಕದ ಮೂಲಕ ಕೆಲವು ಯಂತ್ರಗಳನ್ನು ನೀಡಿತು. ಒಟ್ಟಿನಲ್ಲಿ ೨೦೦ ಯಂತ್ರ ಭರ್ತಿ ಆಯಿತು. ಅಲ್ಲಿ ಹಾಲು ಮಾರಾಟಕ್ಕೆ ಮಾಜಿ ಸೈನಿಕರನ್ನು ಬಳಸಿಕೊಂಡರು. ಅವರಿಗೆ ಲೀಟರಿಗೆ ಎರಡು ಪೈಸೆ ಕಮಿಷನ್. ಈ ಯಂತ್ರಗಳು ಭಾರೀ ಯಶಸ್ಸು ಗಳಿಸಿದವು. ಅದರಲ್ಲಿ ಇಡೀ ದಿನ ಹಾಲು ಸಿಗುತ್ತಿತ್ತು. ದೇಶದ ಹಾಲು ಮಾರಾಟದಲ್ಲಿ ಅದು ದೊಡ್ಡ ಕ್ರಾಂತಿ ಎನಿಸಿತ್ತು.
‘ಬಿಳಿ ಸುಳ್ಳೆಂಬ’ ಆರೋಪ
ಆಪರೇಶನ್ ಫ್ಲಡ್ ಬಗ್ಗೆ ಎಲ್ಲರೂ ಗಮನವಿಟ್ಟು ನೋಡಿದರು. ೧೯೮೧ರ ಒಂದು ಸಮೀಕ್ಷೆಯ ಪ್ರಕಾರ ರೈತರ ಆದಾಯ ಇಮ್ಮಡಿಯಾಗಿತ್ತು. ಆಹಾರ ನೆರವು ಯೋಜನೆಯನ್ನು ಇದಕ್ಕೆ ಬಳಸಬಹುದೆಂದು ಸಾಬೀತಾಯಿತು. ಆದರೆ ದೇಶದಲ್ಲಿ ಈ ಸಾಧನೆಯ ಮಹತ್ತ್ವವನ್ನು ಗುರುತಿಸುವವರು ಕಾಣಲಿಲ್ಲ. ೧೯೮೨-೮೩ರಲ್ಲಿ ಡಾ|| ವರ್ಗೀಸ್ ಕುರಿಯನ್ ಮತ್ತು ಆಪರೇಶನ್ ಫ್ಲಡ್ ಕಾರ್ಯಕ್ರಮವನ್ನು ಭಾರೀ ಟೀಕೆಗೆ ಗುರಿಪಡಿಸಲಾಯಿತು. ಹೇಗ್ನ ಒಂದು ಸಂಸ್ಥೆ ಇವರನ್ನು ಟೀಕಿಸಿ ಪುಸ್ತಕವನ್ನು ಕೂಡ ಪ್ರಕಟಿಸಿತು. ೧೯೮೩ರಲ್ಲಿ ‘ಇಲಸ್ಟ್ರೇಟೆಡ್ ವೀಕ್ಲಿ’ ಪತ್ರಿಕೆಯಲ್ಲಿ ಕ್ಲಾಡ್ ಅಲ್ವಾರಿಸ್ ಎನ್ನುವವರು (ಬಿಳಿಸುಳ್ಳು) ಎನ್ನುವ ಲೇಖನ ಬರೆದು, ಕಾರ್ಯಕ್ರಮವು ಪೂರ್ತಿ ವಿಫಲವಾಗಿದೆ; ಅದರ ಉದ್ದೇಶವೇ ಸರಿ ಇಲ್ಲ ಮುಂತಾಗಿ ಟೀಕಿಸಿದರು. ಇತರ ಕೆಲವು ಪತ್ರಿಕೆಗಳಲ್ಲೂ ಅಂತಹ ಲೇಖನಗಳು ಬಂದವು. ರೈತರು-ಬಳಕೆದಾರರ ನಡುವೆ ನೇರಸಂಪರ್ಕ ಉಂಟುಮಾಡಿದ್ದನ್ನು ಕೂಡ ಟೀಕಿಸಲಾಯಿತು. ಹಾಲಿನಂತಹ ಪೌಷ್ಟಿಕ ಆಹಾರವನ್ನು ಹಳ್ಳಿಯಿಂದ ನಗರಕ್ಕೆ ಸಾಗಿಸುತ್ತಾರೆಂದು ಆಕ್ಷೇಪಿಸಿದರು. ಹಾಲಿನ ಕೊಬ್ಬು, ಪ್ರೊಟೀನ್ಗಳು ತರಕಾರಿಗಿಂತ ಉತ್ತಮವಾಗಿದ್ದು, ಹಾಲನ್ನು ಮಾರುವುದಕ್ಕಿಂತ ಬಳಸುವುದೇ ಉತ್ತಮ ಎಂಬ ವಾದವೂ ಬಂತು.
ಆಗ ಡಾ|| ಕುರಿಯನ್, “ಆರ್ಥಿಕ ಬಲ ಇಲ್ಲದವರು ಎಮ್ಮೆ (ದನ) ಸಾಕಿ ಹಾಲನ್ನು ಮಾರಬೇಕು. ಬಂದ ಹಣದಲ್ಲಿ ಶೇ. ೩೩ ಭಾಗವನ್ನು ಕಳೆದುಕೊಂಡ ಪೌಷ್ಟಿಕ ಆಹಾರಕ್ಕಾಗಿ ಬಳಸಿದರೆ ಉಳಿದ ಶೇ. ೬೭ ಭಾಗವನ್ನು ತಮ್ಮ ಉಳಿದ ಅಗತ್ಯಗಳಿಗೆ ಬಳಸಿಕೊಳ್ಳಬೇಕು” ಎಂಬ ಸಲಹೆ ನೀಡಿದರು. ನಮ್ಮಲ್ಲಿ ಅಪೌಷ್ಟಿಕತೆಗೆ ಕಾರಣ ಬಡತನವಾಗಿದ್ದು, ಅದಕ್ಕಾಗಿ ಬಡವರ ಆದಾಯ ಏರಿಕೆಗೆ ಆದ್ಯತೆ ನಿಡಬೇಕು. ಉದಾಹರಣೆಗೆ, ದೊಡ್ಡ ನಗರಗಳಲ್ಲಿ ಬೃಹತ್ ಕಟ್ಟಡ ಕಟ್ಟುವ ಕೆಲಸಗಾರರಿಗೆ ಚೆಂದದ ಮನೆ ಇರುವುದಿಲ್ಲ; ಅದಕ್ಕಾಗಿ ಅವರಿಗೆ ಕಟ್ಟಡ ಕಟ್ಟುವುದನ್ನು ಬಿಟ್ಟು ನಿಮ್ಮ ಮನೆಯನ್ನು ಕಟ್ಟಿಕೊಳ್ಳಿ ಎನ್ನಬಹುದೆ? – ಎಂದು ಕುರಿಯನ್ ಪ್ರಶ್ನಿಸಿದರು. ಹಾಲು ಉತ್ಪಾದಕರಿಗೆ ಹಾಲನ್ನು ಮಾರಬೇಡಿ ಎನ್ನುವುದು ಸರಿಯಲ್ಲ. ಬದಲಿಗೆ ದೇಶದ ಬಡವರ ಆದಾಯವನ್ನು ಹೆಚ್ಚಿಸಬೇಕು – ಎಂದು ಸೂಚಿಸಿದರು. ಆ ಕೆಲಸವನ್ನು ಆಪರೇಶನ್ ಫ್ಲಡ್ ಮಾಡಿತು. ರೈತರ ಆದಾಯವನ್ನು ಹೆಚ್ಚಿಸಿತು. ಆ ಕಾರಣದಿಂದ ಅವರು ಹಾಲನ್ನು ಬಳಸುವುದು ಕೂಡ ಏರಿತು. ಈ ಬದಲಾವಣೆಯನ್ನು ಹಲವರು ಅಲಕ್ಷಿಸಿದರು.
ಆಪರೇಶನ್ ಫ್ಲಡ್ ಟೀಕೆಯ ಪುಸ್ತಕವನ್ನು ಓದಿದ ನೆದರ್ಲೆಂಡ್ಸ್ನ ರಾಣಿ ಸ್ವತಃ ತಿಳಿದುಕೊಳ್ಳುವ ಉದ್ದೇಶದಿಂದ ಅಮುಲ್ಗೆ ಬಂದರು. ಹಲವು ಪ್ರಶ್ನೆ ಕೇಳಿ ವಿಷಯವನ್ನು ತಿಳಿದುಕೊಂಡರು. ಎಲ್ಲವನ್ನೂ ನೋಡಿದ ಆಕೆ ‘ನನಗೆ ಸಮಾಧಾನವಾಯಿತು’ ಎಂದು ಸಂತೋಷ ವ್ಯಕ್ತಪಡಿಸಿದರು.
೧೯೮೧ರಲ್ಲಿ ರಾಬರ್ಟ್ ಮೆಕ್ನಮಾರ ಅವರು ವಿಶ್ವಬ್ಯಾಂಕ್ನಿಂದ ನಿವೃತ್ತರಾಗುವಾಗ ಕೃತಜ್ಞತೆ ಹೇಳಿ ಡಾ|| ಕುರಿಯನ್ರಿಗೆ ಪತ್ರ ಬರೆದರು. ‘ನನಗೂ ನಿವೃತ್ತನಾಗಬೇಕು ಅನ್ನಿಸುತ್ತಿದೆ’ ಎಂದು ಕುರಿಯನ್ ಅವರು ಉತ್ತರ ಬರೆದಾಗ ಆ ವಿದೇಶೀ ಗಣ್ಯರು “ನಾನಾದರೆ ಸರಿ; ನೀವಿಲ್ಲದೆ ಆಪರೇಶನ್ ಫ್ಲಡ್ ಪೂರ್ಣಗೊಳ್ಳದು. ಅಂತಹ ಮಾತನಾಡಬೇಡಿ” ಎಂದರು. “ಇಂತಹ ಮಾತುಗಳು ನನಗೆ ಹೋರಾಟಕ್ಕೆ ಉತ್ಸಾಹ ನೀಡಿದವು” ಎಂದು ಕುರಿಯನ್ ಹೇಳಿದ್ದಾರೆ.
ಮಂತ್ರಿ ಉಲ್ಟಾ ಮಾತು
೧೯೮೩ರಲ್ಲಿ ನಡೆದ ‘ದನಗಳ ಸಾಕಣೆ, ಪೌಷ್ಟಿಕ ಆಹಾರ’ದ ಬಗೆಗಿನ ಎರಡು ದಿನಗಳ ವಿಚಾರಸಂಕಿರಣದ ಸಮಾರೋಪ ಭಾಷಣ ಮಾಡಲು ಕೃಷಿ ಮಂತ್ರಿ ರಾವ್ ಬೀರೇಂದ್ರಸಿಂಗ್ ಆಗಮಿಸಿದ್ದರು. ತಮ್ಮ ಭಾಷಣದಲ್ಲಿ ಅವರು ಆಪರೇಶನ್ ಫ್ಲಡ್ನ ಆರಂಭ ಮತ್ತು ಅದರ ಅನುಷ್ಠಾನದ ಯಶಸ್ಸಿನ ಬಗ್ಗೆ ಪ್ರಶ್ನಿಸತೊಡಗಿದರು. ಅವರೊಂದಿಗೆ ಕುರಿಯನ್ರಿಗೆ ಸಮಸ್ಯೆ ಇತ್ತು. ಆದರೂ ಈ ರೀತಿ ಭಾಷಣ ಮಾಡುತ್ತಾರೆಂದು ಅವರು ಎಣಿಸಿರಲಿಲ್ಲ. ಸತ್ಸಂಪ್ರದಾಯ ಅಲ್ಲದಿದ್ದರೂ ಕುರಿಯನ್ ಅನಂತರ ಮಾತನಾಡಿ ಆಪರೇಶನನ್ನು ಸಮರ್ಥಿಸಿಕೊಂಡರು. ಅದೊಂದು ಬಹಿರಂಗ ಜಗಳವೇ ಆಯಿತು.
ಅದೇ ವರ್ಷ ಡಿಸೆಂಬರ್ ೨ರಂದು ರಾಜ್ಯಸಭೆಯಲ್ಲಿ ಸದಸ್ಯರೊಬ್ಬರು ‘ಇಲಸ್ಟ್ರೇಟೆಡ್ ವೀಕ್ಲಿ’ ಲೇಖನವನ್ನು ಉಲ್ಲೇಖಿಸಿ ಆಪರೇಶನ್ ಫ್ಲಡ್ ಬಗ್ಗೆ ಪ್ರಶ್ನೆ ಕೇಳಿದರು. ಉಪಮಂತ್ರಿ ಯೋಗೇಂದ್ರ ಮಕ್ವಾನ ಅದಕ್ಕೆ ಉತ್ತರಿಸಿ, ಎನ್ಡಿಡಿಬಿ ಮತ್ತು ಐಡಿಸಿಗಳ ಕಾರ್ಯನಿರ್ವಹಣೆಯ ಬಗ್ಗೆ ಕೆಲವು ತಜ್ಞರು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕೆಗಳಲ್ಲಿ ಅದು ಬಂದಾಗ ಎರಡೂ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಆಕ್ರೋಶಗೊಂಡರು; ಮತ್ತು ಎನ್ಡಿಡಿಬಿ ಕಾರ್ಯದರ್ಶಿ ಆರ್.ಪಿ. ಅನೇಜಾ ಅವರ ಬಳಿ ದೂರಿಕೊಂಡರು. ಅನೇಜಾ ಅದನ್ನು ಕುರಿಯನ್ರಿಗೆ ತಿಳಿಸಿದಾಗ, “ನೀವು ಗಲಿಬಿಲಿಗೊಂಡದ್ದು (ಅಪ್ಸೆಟ್ ಆದದ್ದು) ನಿಜವಾದರೆ ಏನು ಮಾಡಬೇಕೆಂದು ನಿರ್ಧರಿಸಿ” ಎಂದು ಸೂಚಿಸಿದರು.
ಸಾಮೂಹಿಕ ರಾಜೀನಾಮೆ
ತಮ್ಮೊಳಗೆ ಚರ್ಚಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಡಿಸೆಂಬರ್ ೧೩ರಂದು ತಮ್ಮ ರಾಜೀನಾಮೆ ಪತ್ರವನ್ನು ಅನೇಜಾ ಅವರ ಮೂಲಕ ಕುರಿಯನ್ರಿಗೆ ಕಳುಹಿಸಿಕೊಟ್ಟರು. ೭೦೦ಕ್ಕೂ ಅಧಿಕ ಜನ ಸಾಮೂಹಿಕ ರಾಜೀನಾಮೆಗೆ ಸಹಿ ಹಾಕಿದ್ದರು. ಸಂಸ್ಥೆಯ ಎಲ್ಲರೂ ಬಂಡೆಯಂತೆ ಡಾ|| ಕುರಿಯನ್ ಅವರ ಹಿಂದೆ ನಿಂತರು. ಅದರಿಂದ ಸಂಸ್ಥೆ (ಕಾರ್ಯಕ್ರಮ) ಗಟ್ಟಿಯಾಗಿ ಅದಕ್ಕೆ ಹಾನಿ ಎಸಗುವುದು ಅಸಾಧ್ಯ ಎನಿಸಿತು.
ಇನ್ನೊಂದೆಡೆ ರಾವ್ ಬೀರೇಂದ್ರಸಿಂಗ್ ಸಂಸತ್ತಿನಲ್ಲಿ ಸಿಕ್ಕಿಬಿದ್ದರು. ಎನ್ಡಿಡಿಬಿಯಲ್ಲಿ ಸಾಮೂಹಿಕ ರಾಜೀನಾಮೆ ಏತಕ್ಕೆ ಎನ್ನುವ ಪ್ರಶ್ನೆಗೆ ಉತ್ತರಿಸುವಾಗ ಅವರ ಧ್ವನಿ ಬದಲಾಯಿತು. “ತನಿಖೆ ನಡೆಸುವುದಲ್ಲ; ಆಪರೇಷನ್ ಫ್ಲಡ್ನ ಪ್ರಗತಿಯನ್ನು ಪರಿಶೀಲಿಸಲಾಗುವುದು” ಎಂದು ಸಮಜಾಯಿಷಿ ನೀಡಿದರು. ಪ್ರಧಾನಿ ಇಂದಿರಾಗಾಂಧಿಯವರು ಡಾ|| ಕುರಿಯನ್ರಿಗೆ ಫೋನ್ ಮಾಡಿ, “ಈ ಬಗ್ಗೆ ನಾನೇನು ಮಾಡಬೇಕು?” ಎಂದು ಕೇಳಿದರು. “ಯೋಗ್ಯ ವ್ಯಕ್ತಿಯಿಂದ ತನಿಖೆ ನಡೆಸಿ; ನನ್ನ ಪರಿಚಯದವರು ಬೇಡ” ಎಂದು ಇವರು ಹೇಳಿದ ಮೇರೆಗೆ ಎಲ್.ಕೆ. ಝಾ ಅಧ್ಯಕ್ಷತೆಯ ಮೌಲ್ಯಮಾಪನ (ಸಮೀಕ್ಷೆ) ಸಮಿತಿಯನ್ನು ರಚಿಸಲಾಯಿತು. ಸಮಿತಿಯು ಎಲ್ಲ ಅಂಶಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಸವಿವರ ವರದಿಯನ್ನು ಸಲ್ಲಿಸಿತು. ಅದರ ಮುಖ್ಯಾಂಶ ಹೀಗಿತ್ತು:
ಬೆಂಬಲಿಸಿದ ಝಾ ಸಮಿತಿ
“ಯಾವುದೇ ಮಾನದಂಡದಿಂದ ನೋಡಿದರೂ ಆಪರೇಶನ್ ಫ್ಲಡ್ ಒಂದು ಯಶಸ್ವೀ ಕಾರ್ಯಕ್ರಮವಾಗಿದೆ. ಅದನ್ನು ದಕ್ಷತೆ ಮತ್ತು ಅರ್ಪಣಾ ಮನೋಭಾವದಿಂದ ಜಾರಿಗೊಳಿಸಿದ್ದು, ಅದರ ಕೀರ್ತಿ ಎನ್ಡಿಡಿಬಿ ಮತ್ತು ಐಡಿಸಿಗಳಿಗೆ ಸಲ್ಲುತ್ತದೆ. ಹಾಲಿನ ಉತ್ಪಾದನೆಯ ಹೆಚ್ಚಳಕ್ಕೆ ಇನ್ನಷ್ಟು ಪ್ರಯತ್ನ ಅಗತ್ಯವೆನ್ನುವುದು ನಿಜವಾದರೂ ಅವರ ಇದುವರೆಗಿನ ಒಟ್ಟಾರೆ ಸಾಧನೆ ಚೆನ್ನಾಗಿಯೇ ಇದೆ.
“ಈ ಪ್ರಯತ್ನಕ್ಕೆ ಕಷ್ಟಗಳು ಎದುರಾದದ್ದು ನಿಜ. ಆಪರೇಶನ್ ಫ್ಲಡ್ನ ಯಶಸ್ವಿ ಅನುಷ್ಠಾನವು ಕೇವಲ ಎನ್ಡಿಡಿಬಿ ಮತ್ತು ಐಡಿಸಿಗಳ ಮೇಲೆ ಅವಲಂಬಿತವಾದದ್ದಲ್ಲ; ರಾಜ್ಯಸರ್ಕಾರಗಳ ಒಪ್ಪಿಗೆ, ಬೆಂಬಲಗಳ ಪಾತ್ರವೂ ಅದರಲ್ಲಿತ್ತು; ಮತ್ತು ಹಾಲಿನ ಉತ್ಪಾದಕರು ಮತ್ತು ಮಾರಾಟ ಮಾಡುವವರ ಸಹಕಾರವೂ ಅಗತ್ಯವಿತ್ತು. ರಾಜ್ಯಸರ್ಕಾರಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಹಾಗೂ ಸಹಕಾರಿ ಸಂಘಗಳ ಸಂಘಟನೆಗೆ ತಗಲುವ ಸಮಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿತ್ತು; ಜಿಲ್ಲೆಯಿಂದ ಜಿಲ್ಲೆಗೂ ವ್ಯತ್ಯಾಸವಿತ್ತು. ಅದರಿಂದಾಗಿ ಹಿಂದೆ ಎಣಿಸಿದ್ದಕ್ಕಿಂತ ಸಹಜವಾಗಿ ತಡವಾಗುತ್ತಿತ್ತು.
“ಕೆಲವರು ಇಡೀ ಕಾರ್ಯಕ್ರಮವನ್ನು ಟೀಕಿಸಿದರೆ ನಮ್ಮ ಬಳಿ ಇರುವ ಹೆಚ್ಚಿನ ಸಾಕ್ಷ್ಯಗಳ ಪ್ರಕಾರ ಎನ್ಡಿಡಿಬಿ ಮತ್ತು ಐಡಿಸಿಗಳು ತಮ್ಮ ಜವಾಬ್ದಾರಿಯನ್ನು ಎಚ್ಚರ ಮತ್ತು ದಕ್ಷತೆಯಿಂದ ನಿರ್ವಹಿಸಿದ್ದು ಗೊತ್ತಾಗುತ್ತದೆ.
“ಸಲಹೆಗಾರ ಸಂಸ್ಥೆಯಾಗಿ ಎನ್ಡಿಡಿಬಿ ಉತ್ತಮ ಮಟ್ಟದ ತಾಂತ್ರಿಕ ತಜ್ಞತೆಯನ್ನು ನೀಡುತ್ತಿದೆ; ಈ ಎರಡು ಸಂಸ್ಥೆಗಳಲ್ಲಿ ಒಟ್ಟು ಸುಮಾರು ೮೦೦ ಜನ ವಿವಿಧ ವೃತ್ತಿಪರರಿದ್ದಾರೆ. ಅವರು ದೊಡ್ಡ ನಗರಗಳಲ್ಲಿ ಡೈರಿಗಳನ್ನು ಸ್ಥಾಪಿಸಿದ್ದಲ್ಲದೆ ದಕ್ಷವಾಗಿ ನಿರ್ವಹಣೆ ಮಾಡಿದ್ದಾರೆ. ಕೆಲವು ನಗರಗಳಲ್ಲಿ ಮೊದಲೇ ಇದ್ದ ಡೈರಿಗಳನ್ನು ಇವರಿಗೆ ವಹಿಸಿದ್ದು, ಅಲ್ಲಿ ಉತ್ತಮ ಫಲಿತಾಂಶಗಳು ಕಂಡುಬಂದಿವೆ. ಈ ಎರಡು ಉತ್ತಮ ಸಾಧನೆ ತೋರಿಸಿದ ಇನ್ನೊಂದು ಕ್ಷೇತ್ರವು ಸಂಶೋಧನೆಗೆ ಸಂಬಂಧಿಸಿದ್ದು. ಬೃಹತ್ ಹಾಲು ಮಾರಾಟ ಯಂತ್ರ, ಇಲೆಕ್ಟ್ರಾನಿಕ್ ಕೊಬ್ಬು ಪರೀಕ್ಷಾ ಯಂತ್ರಗಳ ಬಳಕೆ, ಡೈರಿ ಉಪಕರಣಗಳ ಉತ್ಪಾದನೆಯಲ್ಲಿ ವ್ಯಾಪಕ ಸ್ವದೇಶೀ ನಿರ್ವಹಣೆ ಮುಂತಾದವು ಅದರಲ್ಲಿ ಸೇರುತ್ತವೆ.
“ಆಡಳಿತ ಮತ್ತು ಮಾರಾಟಕ್ಕೆ ಕೂಡ ಐಡಿಸಿ, ಎನ್ಡಿಡಿಬಿಗಳಿಗೆ ಉತ್ತಮ ಅಂಕಗಳು ಸಲ್ಲುತ್ತವೆ. ಹೆಚ್ಚುವರಿ ಪ್ರದೇಶದಿಂದ ನೂರಾರು ಕಿ.ಮೀ. ದೂರದಲ್ಲಿರುವ ಹಾಲಿನ ಕೊರತೆ ಪ್ರದೇಶಕ್ಕೆ ಹಾಲು ಕೆಡದಂತೆ ರಸ್ತೆ ಅಥವಾ ರೈಲಿನ ಮೂಲಕ ಸಾಗಿಸುವುದು ಮತ್ತು ದಾರಿಯಲ್ಲಿ ಸೋರಿಕೆ ಅಥವಾ ಕಲಬೆರಕೆ ಆಗದಂತೆ ನೋಡಿಕೊಳ್ಳುವ ಮೂಲಕ ರಾಷ್ಟ್ರೀಯ ಹಾಲಿನ ಗ್ರಿಡ್ ನಿರ್ಮಿಸಲಾಗಿದೆ; ಹಿಂದೆ ಇದು ಅಸಾಧ್ಯವಾಗಿದ್ದು ಹಾಲು ಸ್ಥಳದಲ್ಲೇ ಬಳಕೆಯಾಗುತ್ತಿತ್ತು.”
ಎಲ್.ಕೆ. ಝಾ ಸಮಿತಿಯ ಇಂತಹ ಮಾತುಗಳು ಕುರಿಯನ್ ಮತ್ತವರ ಸಹೋದ್ಯೋಗಿಗಳಿಗೆ ತುಂಬ ಅನುಕೂಲಕರವಾಗಿ ಕೂಡಿಬಂದವು. ಟೀಕಾಕಾರರ ಬಾಯಿಗಳು ಬಂದ್ ಆದವು. “ಆ ಹೊತ್ತಿಗೆ ನಮಗೆ ಇದಕ್ಕಿಂತ ಉತ್ತಮವಾದದ್ದೇನೂ ಆಗಲು ಸಾಧ್ಯವಿರಲಿಲ್ಲ. ಎನ್ಡಿಡಿಬಿಗೆ ಇದರಿಂದ ತುಂಬ ಪ್ರಯೋಜನವಾಯಿತು. ಆಪರೇಶನ್ ಫ್ಲಡ್ನ ವಿಶ್ವಾಸಾರ್ಹತೆ ಹೆಚ್ಚಿತು. ಕಾರ್ಯಕ್ರಮದ ಮೂರನೇ ಹಂತಕ್ಕೆ ಬೆಂಬಲ ನೀಡುವ ಬಗ್ಗೆ ಪರಿಶೀಲಿಸುತ್ತಿದ್ದ ಯೂರೋಪಿನ ಇಇಸಿ ಮತ್ತು ವಿಶ್ವಬ್ಯಾಂಕ್ಗಳಿಗೆ ತೀರ್ಮಾನ ಕೈಗೊಳ್ಳಲು ಅನುಕೂಲವಾಯಿತು” ಎಂದು ಡಾ|| ಕುರಿಯನ್ ಹೇಳಿದ್ದಾರೆ.
ವಿಲೀನಕ್ಕೆ ಶಿಫಾರಸು
ತುಂಬ ಅನುಕೂಲಕರವಾದ ಹಲವು ಶಿಫಾರಸುಗಳನ್ನು ಕೂಡ ಝಾ ಸಮಿತಿ ಮಾಡಿತ್ತು. ಅದರಲ್ಲೊಂದು ಎನ್ಡಿಡಿಬಿ ಮತ್ತು ಐಡಿಸಿಗಳ ವಿಲೀನದ ಬಗೆಗಿನ ಶಿಫಾರಸು. ಅದನ್ನು ಜಾರಿಗೊಳಿಸಿದಾಗ ಸಂಸ್ಥೆ ವೇಗವಾಗಿ ಬೆಳೆಯಿತು; ಅದಕ್ಕೆ ಎನ್ಡಿಡಿಬಿ ಎಂಬ ಹೆಸರು ಬಂತು. ಭಾರತಸರ್ಕಾರ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಿ ಎನ್ಡಿಡಿಬಿಯನ್ನು ರಾಷ್ಟ್ರೀಯ ಮಹತ್ತ್ವದ ಸಂಸ್ಥೆ ಎಂದು ಘೋಷಿಸಿತು. ಅದಕ್ಕೆ ಉದ್ಯಮಸಂಸ್ಥೆಯ (ಕಾರ್ಪೊರೇಟ್) ಸ್ಥಾನಮಾನವನ್ನು ನೀಡಿತು. ಮಸೂದೆಗೆ ಪಕ್ಷಭೇದವಿಲ್ಲದೆ ಬೆಂಬಲ ಬಂದು ನಾಲ್ಕೇ ದಿನಗಳಲ್ಲಿ ಎರಡೂ ಸದನಗಳಲ್ಲಿ ಪಾಸಾಯಿತು. ಸಂಸತ್ ಎನ್ಡಿಡಿಬಿ ಮೇಲೆ ಅಂತಹ ವಿಶ್ವಾಸ ಇರಿಸಿತ್ತು. ಅದರಿಂದಾಗಿ ಆಪರೇಶನ್ ಫ್ಲಡ್-೩ನೇ ಹಂತವು ವೇಗವಾಗಿ ಮತ್ತು ಸಲೀಸಾಗಿ ಜಾರಿಗೆ ಬಂತು.
ಇಷ್ಟಾದರೂ ಕೃಷಿ ಮಂತ್ರಿ ರಾವ್ ಬೀರೇಂದ್ರಸಿಂಗ್ ಅವರ ಕಿರಿಕಿರಿ ನಿಲ್ಲಲಿಲ್ಲ. ಅದಕ್ಕಾಗಿ ಒಂದಕ್ಕಿಂತ ಹೆಚ್ಚು ಸಲ ಕುರಿಯನ್ ರಾಜೀನಾಮೆ ಸಲ್ಲಿಸಿದರು; ಆದರೆ ಸರ್ಕಾರ ಅದನ್ನು ಅಂಗೀಕರಿಸಲಿಲ್ಲ. ಇಬ್ಬರೂ ಹುದ್ದೆಯಲ್ಲಿ ಮುಂದುವರಿಯುವುದು ಅಸಾಧ್ಯವೆಂಬ ತೀರ್ಮಾನಕ್ಕೆ ಕುರಿಯನ್ ಬಂದರು. ಸುಮಾರು ಹತ್ತು ವರ್ಷಗಳ ಹಿಂದೆ ಜಗಜೀವನರಾಮ್ ಅವರು ಇಲಾಖಾ ಮಂತ್ರಿಯಾಗಿದ್ದಾಗಲೂ ಕುರಿಯನ್ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು. ಆ ಬಗ್ಗೆ ದೆಹಲಿಗೆ ಹೋದಾಗ ಹಳೆಯ ಸ್ನೇಹಿತ ವಿಕ್ರಂ ಸಾರಾಭಾಯಿ ಸಿಕ್ಕಿದ್ದರು; ಸಂಜೆ ತಮ್ಮ ಕೊಠಡಿಗೆ ಬರುವಂತೆ ಹೇಳಿದರು. ಅಲ್ಲಿ ಡಿ.ಪಿ. ಧರ್ ಮತ್ತಿತರ ಹಿರಿಯ ಅಧಿಕಾರಿಗಳಿದ್ದರು. ರಾಜೀನಾಮೆ ಕೊಡುವುದು ಬೇಡ; ಮಂತ್ರಿಯವರಿಗೆ ತಾವೇ ಹೇಳುತ್ತೇವೆ ಎಂದಿದ್ದರು; ಅದು ಫಲ ನೀಡಿತ್ತು.
ಪ್ರಧಾನಿಗೆ ದೂರು
ಆ ಅನುಭವದ ಧೈರ್ಯದಿಂದ ದೆಹಲಿಗೆ ಹೋಗಿ ಇಂದಿರಾಗಾಂಧಿಯವರನ್ನು ಕಂಡು ಮಂತ್ರಿ ಬೀರೇಂದ್ರಸಿಂಗ್ ಜೊತೆಗಿನ ಸಮಸ್ಯೆಯ ಬಗ್ಗೆ ವಿವರಿಸಿದರು. ಕೂಡಲೇ ಫೋನ್ ಎತ್ತಿಕೊಂಡ ಪ್ರಧಾನಿ ಇಂದಿರಾಗಾಂಧಿ, “ಹೀಗೆಲ್ಲ ಮಾಡಬೇಡಿ; ಕುರಿಯನ್ ಅವರನ್ನು ಅವರಷ್ಟಕ್ಕೆ ಬಿಡಿ” ಎಂದು ನೇರವಾಗಿಯೇ ಹೇಳಿದರು. ಆದರೂ ಮಂತ್ರಿ ಸರಿಮಾಡಿಕೊಳ್ಳಲಿಲ್ಲ. ತೊಂದರೆ ಕೊಡುವುದು ಹೆಚ್ಚೇ ಆಯಿತು. ಪ್ರಧಾನಿಯ ಭೇಟಿಗೆ ಹೋದ ಕುರಿಯನ್ “ಮೇಡಂ, ಇದೇ ಕೊನೆ. ಇನ್ನು ನಾನು ಮುಂದುವರಿಯಲಾರೆ. ಕಳೆದ ಸಲ ತಾವು ಅವರೊಂದಿಗೆ ಮಾತನಾಡಿದ ಅನಂತರ ಅವರ ದ್ವೇಷ ಇನ್ನೂ ಹೆಚ್ಚಾಗಿದೆ. ಹೀಗಿರುವುದು ಅಸಾಧ್ಯ” ಎಂದರು.
ಕುರಿಯನ್ರನ್ನು ಒಮ್ಮೆ ದಿಟ್ಟಿಸಿ ನೋಡಿದ ಇಂದಿರಾಗಾಂಧಿ “ಡಾ|| ಕುರಿಯನ್, ಹಾಗಾದರೆ ನಾನವರನ್ನು ತೆಗೆಯುತ್ತೇನೆ” ಎಂದು ಗುಡುಗಿದರು; ಮತ್ತು ಅದನ್ನೇ ಮಾಡಿದರು. ಎನ್ಡಿಡಿಬಿ ಕೆಲಸಗಳಲ್ಲಿ ಆತ ಹಸ್ತಕ್ಷೇಪ ಮಾಡಿದ್ದೇ ಕೃಷಿ ಮಂತ್ರಿಸ್ಥಾನದಿಂದ ವಜಾಗೊಳಿಸಿದ್ದಕ್ಕೆ ಕಾರಣ.
“ಎನ್ಡಿಡಿಬಿಯಲ್ಲಿ ನಾವು ಸಾಧನೆಯ ಶಿಖರಗಳನ್ನು ನಿರ್ಮಿಸಲು ಶ್ರಮಿಸಿದೆವು. ಎಲ್ಲದರಲ್ಲೂ ಅದ್ಭುತ ಸಾಧನೆ ಮಾಡಿದೆವು. ರಾಜಕಾರಣಿಗಳು ಮತ್ತು ಅಧಿಕಾರಿಗಳ ಹಸ್ತಕ್ಷೇಪವೇ ನಮಗಿದ್ದ ಸಮಸ್ಯೆ. ಕ್ರಮೇಣ ನಾನು ಟೀಕೆ ಮತ್ತು ವಿರೋಧಗಳ ನಡುವೆ ಇರುವುದನ್ನು ಕಲಿತೆ. ನಾನು ಸರ್ವಾಧಿಕಾರಿ ಎನ್ನುವ ಟೀಕೆ ಇದೆ. ಅದು ಸ್ವಲ್ಪ ನಿಜ. ಆದರೆ ತ್ರಿಭುವನದಾಸ್ ಪಟೇಲರು ಹಾಕಿದ್ದ ಬೀಜ ನನ್ನಲ್ಲಿತ್ತು. ಆಪರೇಶನ್ ಫ್ಲಡ್ ವೇಳೆ ಪೂರ್ತಿ ಅಭಿವೃದ್ಧಿಯ ಕಡೆಗೆ ನಮ್ಮ ಗಮನ ಇತ್ತು. ಆದರೆ ನಾನು ಎಲ್ಲವೂ ನನ್ನ ಕೈಕೆಳಗೆ ಇರುವಂತೆ ಮಾಡಲಿಲ್ಲ. ನನ್ನ ಅಥವಾ ನಮ್ಮ ಸಾಮ್ರಾಜ್ಯವನ್ನು ಕಟ್ಟಲಿಲ್ಲ. ಬದಲಿಗೆ ಭಾರತದ ರೈತರ ಸಾಮ್ರಾಜ್ಯ ಸ್ಥಾಪನೆ, ವಿಸ್ತರಣೆಗಳೇ ನಮ್ಮ ಗುರಿಯಾಗಿತ್ತು. ೧೦೦೦ ಕೋಟಿ ರೂ. ವೆಚ್ಚ ಮಾಡಿದರೂ ಎನ್ಡಿಡಿಬಿ ಬಳಿ ಏನೂ ಇರಲಿಲ್ಲ. ಅದು ನಮಗೆ ಹೆಮ್ಮೆಯ ವಿಷಯ” ಎಂದು ಕುರಿಯನ್ ಆತ್ಮಕಥನದಲ್ಲಿ ಆತ್ಮಾವಲೋಕನವನ್ನು ಮಾಡಿಕೊಂಡಿದ್ದಾರೆ.
ನನ್ನೊಂದಿಗೆ ಹಲವು ಉತ್ತಮ ಅಧಿಕಾರಿಗಳಿದ್ದರು. ನನಗೆ ಅಂಥವರ ಸಹಕಾರ ಸಿಕ್ಕಿದೆ. ಪ್ರಧಾನಿಗಳು, ಮುಖ್ಯಮಂತ್ರಿಗಳು, ಮಂತ್ರಿಗಳು ಆನಂದ್ಗೆ ಭೇಟಿ ನೀಡಿ ಆಪರೇಶನ್ ಫ್ಲಡ್ ಟೇಕಾಫ್ ಆಗಬೇಕು ಎಂದರು. ಅದಕ್ಕನುಗುಣವಾಗಿ ಹಲವು ಅಧಿಕಾರಿಗಳು ಬೆಂಬಲ ನೀಡಿದರು. ನಮ್ಮ ವಿರೋಧಿಗಳನ್ನು ನಿಷ್ಕಿçಯ(ನ್ಯೂಟ್ರಲ್)ಗೊಳಿಸಿದರು. ಅದರಿಂದ ನನ್ನ ಧೈರ್ಯ ಬೆಳೆಯಿತು – ಎಂದ ಕುರಿಯನ್, ನೀರಾವರಿ ಮತ್ತು ಕೃಷಿ ಮಂತ್ರಿ ಜಗಜೀವನರಾಮ್ ಜೊತೆಗಿನ ಒಂದು ಮುಖಾಮುಖಿಯನ್ನು ಸ್ಮರಿಸಿಕೊಂಡಿದ್ದಾರೆ.
ಜಗಜೀವನರಾಂ ಮುಖಾಮುಖಿ
೧೯೭೦ರಲ್ಲಿ ಒಂದು ದಿನ ಡಾ|| ಕುರಿಯನ್ ದೆಹಲಿಯ ಕೃಷಿ ಭವನದಲ್ಲಿ ಕೃಷಿ ವಿಜ್ಞಾನಿ ಡಾ|| ಎಂ.ಎಸ್. ಸ್ವಾಮಿನಾಥನ್ ಅವರ ಭೇಟಿಗೆ ಹೋಗಿದ್ದರು. ಮೈಸೂರಿನ ಸಿಎಫ್ಟಿಆರ್ಐಗೆ ಒಬ್ಬ ನಿರ್ದೇಶಕರನ್ನು ನೇಮಿಸಬೇಕಿತ್ತು. ಆಗ ಜಗಜೀವನರಾಂ ಅವರಿಂದ ಬುಲಾವ್ ಬಂತು. “ಕೂಡಲೆ ಹೋಗಿ. ದೊಡ್ಡ ಮಂತ್ರಿಗಳು ಕರೆಯುವಾಗ ಕೂಡಲೆ ಹೋಗಬೇಕು. ನಾವು ಕಾಯುತ್ತೇವೆ” ಎಂದು ಸ್ವಾಮಿನಾಥನ್ ಸಲಹೆ ನೀಡಿದರು.
ಅದರಂತೆ ಜಗಜೀವನರಾಂ ಕಚೇರಿಗೆ ಧಾವಿಸಿದಾಗ ತಮ್ಮ ಕ್ಷೇತ್ರದಲ್ಲೊಂದು ಖಾಸಗಿ ಡೈರಿಯನ್ನು ಮಾಡಿಕೊಡಿ ಎನ್ನುವ ಬೇಡಿಕೆಯನ್ನು ಮುಂದಿಟ್ಟರು. ‘ಅದಾಗುವುದಿಲ್ಲ’ ಎಂದಾಗ ರಾಂ ಅವರಿಂದ ‘ಇನ್ನೊಮ್ಮೆ ಹೇಳಿ’ ಎನ್ನುವ ದರ್ಪದ ಮಾತು ನಿರೀಕ್ಷಿಸಿರಲಿಲ್ಲ. ಅದನ್ನು ಗಟ್ಟಿಯಾಗಿ ಪುನರುಚ್ಚರಿಸಿ “ನಾನದನ್ನು ಮಾಡಲಾರೆ. ಸಹಕಾರಿ ಡೈರಿಗಳನ್ನು ಸ್ಥಾಪಿಸುವುದು ನನ್ನ ಕೆಲಸ; ಯಾರದಾದರೂ ಖಾಸಗಿ ಡೈರಿಯ ಕೆಲಸವನ್ನು ಮಾಡಲಾರೆ” ಎನ್ನುವ ಸ್ಪಷ್ಟೀಕರಣವನ್ನು ನೀಡಿದರು. ‘ಓ ಹಾಗಾ?’ ಎಂದು ಜಗಜೀವನರಾಂ ಹೇಳಿದಾಗ ಇವರು ‘ಹೌದು’ ಎಂದರು; ದೊಡ್ಡ ಮಂತ್ರಿಗೆ ಆಘಾತವಾಗಿತ್ತು; ಸ್ವಲ್ಪ ಒರಟಾಗಿ “ನೀವಿನ್ನು ಹೋಗಬಹುದು” ಎಂದರು.
ಭೇಟಿ ಅಲ್ಲಿಗೆ ಮುಗಿಯಿತು. ಇಲ್ಲಿ ತಾನು ತಪ್ಪಾಗಿ ನಡೆದುಕೊಂಡೆ ಎಂದು ಕುರಿಯನ್ಗೆ ಅನ್ನಿಸತೊಡಗಿತು. ಅವರು ಹೇಳಿದ್ದಕ್ಕೆ ಒಪ್ಪಿಕೊಂಡು “ಸರಿ ಸರ್, ಇದೊಂದು ಒಳ್ಳೆಯ ಯೋಚನೆ. ಆ ಬಗ್ಗೆ ಯೋಚಿಸುತ್ತೇನೆ. ನಿಮಗೊಂದು ಟಿಪ್ಪಣಿ ಕಳುಹಿಸುತ್ತೇನೆ” ಎಂದು ಸಮಯ ಪಡೆದುಕೊಳ್ಳಬೇಕಿತ್ತು. ಅನಂತರ ಎನ್ಡಿಡಿಬಿ ಹಣವನ್ನು ಖಾಸಗಿರಂಗ ಡೈರಿ ನಿರ್ಮಿಸಲು ಬರುವುದಿಲ್ಲ ಎಂದು ಮನವರಿಕೆ ಮಾಡಬೇಕಿತ್ತು. ತುಂಬ ಒರಟಾಗಿ ಮತ್ತು ಅಪಕ್ವತೆಯಿಂದ ನಡೆದುಕೊಂಡೆ ಅನ್ನಿಸಿತು.
“ನಿಜವೆಂದರೆ, ಜಗಜೀವನರಾಂ ನಮ್ಮ ಅತ್ಯಂತ ಸಮರ್ಥ ಮಂತ್ರಿಗಳಲ್ಲಿ ಒಬ್ಬರಾಗಿದ್ದರು. ಅನುಭವಿ ರಾಜಕಾರಣಿಯಾಗಿದ್ದು ತಮ್ಮ ಅಧಿಕಾರಿಗಳನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದರು. ಅವರೆಲ್ಲ ರಾಂರನ್ನು ಪ್ರೀತಿಸುತ್ತಿದ್ದರು. ಅವರ ಕೋರಿಕೆಯನ್ನು ಎಚ್ಚರದಿಂದ ನಿರ್ವಹಿಸಿದ್ದರೆ ನನಗೊಬ್ಬ ದೊಡ್ಡ ಬೆಂಬಲಿಗ ಸಿಗುತ್ತಿದ್ದರು. ನಾನು ಬಹುದೊಡ್ಡ ತಪ್ಪು ಮಾಡಿರುವುದಾಗಿ ಅವರೆಲ್ಲ ನನಗೆ ಹೇಳಿದರು. ಜಗಜೀವನರಾಂ ಎಂತಹ ಚಾಣಾಕ್ಷ ವ್ಯಕ್ತಿಯೆಂದರೆ ಅವರು ನಿಮ್ಮ ಕುತ್ತಿಗೆ ಕತ್ತರಿಸಿದರೆ ಅದು ಗೊತ್ತಾಗುವುದು ತಲೆ ಉರುಳಿದ ಮೇಲೆಯೇ ಎಂದೆಲ್ಲ ಹೇಳಿದರು. ನಾನು ತೊಂದರೆಗೆ ಸಿಲುಕಿದ್ದೆ” ಎಂದು ಕುರಿಯನ್ ಹೇಳಿದ್ದಾರೆ.
‘ಈತನನ್ನು ವಜಾಗೊಳಿಸಿ’
ಕೆಲವೇ ಸಮಯದಲ್ಲಿ ಸಚಿವ ರಾಂ ಅವರು ತಮ್ಮ ಕಡತವನ್ನು ತರಿಸಿಕೊಂಡದ್ದು ದೆಹಲಿ ಮಿತ್ರರ ಮೂಲಕ ಕುರಿಯನ್ಗೆ ಗೊತ್ತಾಯಿತು. ಸಹಾನುಭೂತಿ ಹೊಂದಿದ್ದ ಓರ್ವ ಅಧಿಕಾರಿ ನನಗೆ ಕಡತವನ್ನು ತೋರಿಸಿದರು. ಅದರ ಮೇಲೆ ಕೆಂಪು ಶಾಯಿಯಲ್ಲಿ ‘ಈತನನ್ನು ವಜಾಗೊಳಿಸಿ’ (Remove him) ಎಂದು ಬರೆದಿದ್ದರು. ಅದರಿಂದ ಕೃಷಿ ಇಲಾಖೆಯ ಹಲವರಿಗೆ ಸಂತೋಷವಾಗಿತ್ತು. ಆ ಸೂಚನೆಗೆ ಅವರು ನೀಡಿದ ಕಾರಣವೆಂದರೆ ಒಬ್ಬ ವ್ಯಕ್ತಿ ಎರಡು ಹುದ್ದೆಗಳನ್ನು ಹೊಂದಿರುವುದು ಬೇಡ ಎನ್ನುವುದು. ಕುರಿಯನ್ ಆಗ ಎನ್ಡಿಡಿಬಿ ಮತ್ತು ಐಡಿಸಿ ಎರಡಕ್ಕೂ ಅಧ್ಯಕ್ಷರಾಗಿದ್ದರು. ಚಾಣಾಕ್ಷರಾದ ಮಂತ್ರಿಯವರಿಗೆ ಹಣ ಇರುವುದು ಐಡಿಸಿಯಲ್ಲಿ ಎಂಬುದು ಗೊತ್ತಿತ್ತು, ಆದ್ದರಿಂದ ಐಡಿಸಿ ಅಧ್ಯಕ್ಷತೆಯಿಂದ ವಜಾ ಮಾಡಿ ಎಂದು ಸೂಚಿಸಿದ್ದರು.
ತನಗೆ ಒಂದು ದಾರಿ ಇರುವುದೆಂದು ಕುರಿಯನ್ಗೆ ಗೊತ್ತಿತ್ತು. ಇಂದಿರಾಗಾಂಧಿಯವರಿಗೆ ಪತ್ರ ಬರೆದು ವಿಷಯವನ್ನು ತಿಳಿಸಿ ಭೇಟಿಗೆ ಅವಕಾಶ ಕೋರಿದರು. ಆಗ ಪ್ರಧಾನಿಯ ಕಚೇರಿಯಲ್ಲಿದ್ದ ಅಧಿಕಾರಿ ವಿ. ರಾಮಚಂದ್ರನ್ ಪ್ರಧಾನಿಯವರಿಗೆ ತಿಳಿಸಿ, ಒಂದು ಹುದ್ದೆಯಿಂದ ಈ ರೀತಿಯಲ್ಲಿ ವಜಾಗೊಳಿಸುವ ಕ್ರಮ ಸರಿಯಲ್ಲವೆನ್ನುವ ಕುರಿಯನ್ ಅಪೇಕ್ಷೆಯನ್ನು ತಿಳಿಸಿದರು. ಪ್ರಧಾನಿ ಕೃಷಿ ಸಚಿವರಿಗೊಂದು ಪತ್ರ ಬರೆದು, “ಕುರಿಯನ್ ಅವರನ್ನು ಮುಟ್ಟಬೇಡ; ಅವರಷ್ಟಕ್ಕೆ ಬಿಡಿ” ಎನ್ನುವ ಸೂಚನೆ ನೀಡಿದರು. ಪ್ರಕರಣ ಅಲ್ಲಿಗೆ ಮುಕ್ತಾಯವಾಯಿತು. ನಿಕಟ ಪರಿಚಯವಿದ್ದ ಕುರಿಯನ್ ಬಗ್ಗೆ ಇಂದಿರಾಗಾಂಧಿ ಅಷ್ಟೊಂದು ಗೌರವ, ವಿಶ್ವಾಸ ಹೊಂದಿದ್ದರು.
ಖಾದ್ಯತೈಲ ಕ್ಷೇತ್ರಕ್ಕೆ
೧೯೭೭ರಲ್ಲಿ ಮೊರಾರ್ಜಿ ದೇಸಾಯಿ ಅವರ ಜನತಾಪಕ್ಷದ ಸರ್ಕಾರದಲ್ಲಿ ಎಚ್.ಎಂ. ಪಟೇಲ್ ಹಣಕಾಸು ಮಂತ್ರಿಯಾದರು. ಅವರು ಕೂಡ ಕೈರಾ ಸಹಕಾರಿ ಹಾಲು ಉತ್ಪಾದಕರ ಸಂಸ್ಥೆಯ ಮಿತ್ರರೂ, ಹಿತೈಷಿಯೂ ಆಗಿದ್ದರು. ಒಮ್ಮೆ ಅವರು ಡಾ|| ಕುರಿಯನ್ರನ್ನು ದೆಹಲಿಗೆ ಕರೆದು ಎನ್ಡಿಡಿಬಿ ಖಾದ್ಯ ತೈಲ ಕ್ಷೇತ್ರಕ್ಕೆ ಪ್ರವೇಶಿಸಬಹುದೇ ಎಂದು ಕೇಳಿದರು. “ಖಾದ್ಯತೈಲ ಆಮದಿಗೆ ಸುಮಾರು ೧೦೦೦ ಕೋಟಿ ರೂ. ವೆಚ್ಚವಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಇದು ಆತಂಕಕಾರಿ ಆಗಬಹುದು” ಎಂದರು. ಅವರಿಗೆ ಅಮೂಲ್ಯವಾದ ವಿದೇಶೀ ವಿನಿಮಯವನ್ನು ಉಳಿಸಬೇಕಿತ್ತು. ಆನಂದ್ ಮಾದರಿಯನ್ನು ಖಾದ್ಯತೈಲದಲ್ಲೂ ಅನುಸರಿಸಬಹುದೆ? ಹಾಲಿನಲ್ಲಿ ಆಮದು ನಿಲ್ಲಿಸಿ ದೇಶ ಸ್ವಾವಲಂಬಿಯಾದಂತೆ ಇದರಲ್ಲೂ ಆಗಬಹುದೆ? – ಎಂದವರು ಕೇಳಿದರು. ಅದರಂತೆ ಎನ್ಡಿಡಿಬಿ ಖಾದ್ಯತೈಲ ಮಾರುಕಟ್ಟೆಗೆ ಪ್ರವೇಶಿಸಿತು. ಆನಂದ್ ಮಾದರಿಯಲ್ಲಿ ಖರೀದಿ, ಸಂಸ್ಕರಣ, ಮಾರಾಟಗಳನ್ನು ಮಾಡಬೇಕಿತ್ತು. ಅಂತಿಮವಾಗಿ ಈ ವ್ಯವಹಾರವನ್ನು ಎಣ್ಣೆಕಾಳು ಉತ್ಪಾದಕರಿಗೆ ಹಸ್ತಾಂತರಿಸಿ, ವ್ಯವಸ್ಥೆಯು ಅವರ ಹಿಡಿತದಲ್ಲಿರುವಂತೆ ನೋಡಿಕೊಳ್ಳುವುದು ಅವರ ಗುರಿ. ಆ ಮೂಲಕ ಮಧ್ಯವರ್ತಿಗಳಾದ ಶಕ್ತಿಶಾಲಿ ‘ತೇಲಿಯಾ ರಾಜ’ರನ್ನು ಹೊರಗಿಡಬೇಕು. ಬಳಕೆದಾರನು ಕೊಡುವ ಹಣದಲ್ಲಿ ಉತ್ಪಾದಕ (ರೈತ)ನಿಗೆ ದೊಡ್ಡಪಾಲು ಸಿಗಬೇಕು ಎಂಬ ಉದ್ದೇಶದಿಂದ ೭೦೦ ಕೋಟಿ ರೂ. ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಯಿತು; ಖಾದ್ಯತೈಲ ಉತ್ಪಾದನೆ ಮತ್ತು ಮಾರಾಟದ ಆಯೋಜನೆಯ ಮೂಲಕ ಉದ್ಯಮವನ್ನು ಖಾಸಗಿರಂಗಕ್ಕೆ ತರಲು ಪ್ರಯತ್ನಿಸಲಾಯಿತು.
೧೯೭೯ರಲ್ಲಿ ದೇಶದ ಏಳು ರಾಜ್ಯಗಳಲ್ಲಿ ಯೋಜನೆ ಕಾರ್ಯಾರಂಭಗೊಂಡಿತು; ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಒರಿಸ್ಸಾ(ಒಡಿಶಾ) ಮತ್ತು ರಾಜಸ್ಥಾನ ಆ ರಾಜ್ಯಗಳು. ೧೯೮೬ರ ಹೊತ್ತಿಗೆ ೩ ಲಕ್ಷಕ್ಕೂ ಅಧಿಕ ರೈತರು ೨೫೦೦ ಎಣ್ಣೆಕಾಳು ಬೆಳೆಗಾರರ ಸಹಕಾರಿ ಸಂಘಗಳಿಗೆ ಸೇರಿದ್ದರು. ಎಣ್ಣೆಕಾಳು ಉತ್ಪಾದನೆ, ಖರೀದಿ, ಸಂಸ್ಕರಣ ಮತ್ತು ಮಾರಾಟಕ್ಕೆ ಸಂಬಂಧಿಸಿದ ಆ ಸಂಘಗಳಿಗೆ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಯೂನಿಯನ್, ರಾಜ್ಯಮಟ್ಟದಲ್ಲಿ ರಾಜ್ಯ ಫೆಡರೇಶನ್(ಒಕ್ಕೂಟ)ಗಳಿದ್ದವು. ೧೯೮೯ರಲ್ಲಿ ಸರ್ಕಾರ ಅದಕ್ಕೆ ಸಮಗ್ರ ನೀತಿಯನ್ನು ರೂಪಿಸಿತು. ಅದರಲ್ಲಿ ಆಮದು ಮತ್ತು ವಿತರಣೆಗಳು ಕೂಡ ಸೇರಿದ್ದವು.
ಮೂರು ಇಲಾಖೆ ಅಡಿಯಲ್ಲಿ
ಖಾದ್ಯತೈಲದ ವಿಷಯದಲ್ಲಿ ವಾಣಿಜ್ಯ, ನಾಗರಿಕ ಪೂರೈಕೆ ಮತ್ತು ಕೃಷಿ ಇಲಾಖೆಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕಿತ್ತು. ಅಂತಹ ಹೊಂದಾಣಿಕೆಯ ಕೊರತೆ ಕಂಡುಬಂತು. ಮಾರುಕಟ್ಟೆಯ ಹೊಣೆ ಎನ್ಡಿಡಿಬಿಗೆಂದು ಸರ್ಕಾರ ನಿರ್ಧರಿಸಿತು; ಟೀಕೆಗಳು ಬಂದರೂ ಕೂಡ ಕೆಲಸ ನಡೆಯಿತು. ಎನ್ಡಿಡಿಬಿ ಎಣ್ಣೆಕಾಳು ಮತ್ತು ಖಾದ್ಯತೈಲ ಎರಡನ್ನೂ ಖರೀದಿಸಬೇಕು. ಖರೀದಿಸಿ, ದಾಸ್ತಾನು ಮಾಡಿ ಎಣ್ಣೆ ತಯಾರಿಸಿ ಮಾರಬೇಕು. ಅವ್ಯವಸ್ಥೆಯಲ್ಲಿದ್ದ ಮಾರುಕಟ್ಟೆಯಲ್ಲಿ ಭದ್ರತೆಯನ್ನು ತರಬೇಕಿತ್ತು. ರೈತರ ರಕ್ಷಣೆಗಾಗಿ ದರ ಸ್ವಲ್ಪ ಜಾಸ್ತಿ ಇಡಬೇಕು; ಆದರೆ ಅದು ಗ್ರಾಹಕನಿಗೆ ಜಾಸ್ತಿ ಆಗಬಾರದು. ವ್ಯಾಪಾರಿ (ತೇಲಿಯಾ ರಾಜ) ಸುಳ್ಳು ಸುದ್ದಿ ಹಬ್ಬಿಸಿ ಮಾರುಕಟ್ಟೆಯಲ್ಲಿ ಏರುಪೇರು ಮಾಡಿ ಹಣ ಮಾಡಲು ಹೊಂಚುಹಾಕುತ್ತಿದ್ದ. ಕೃಷಿಯಲ್ಲಿ ಮಾರುಕಟ್ಟೆಗೆ ಎಷ್ಟು ಬೇಕೋ ಅಷ್ಟನ್ನೇ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಶೇ.೫ರಷ್ಟು ಹೆಚ್ಚು ಉತ್ಪಾದಿಸಿದರೆ ವ್ಯಾಪಾರಿ ದರವನ್ನು ಶೇ.೫೦ರಷ್ಟು ಇಳಿಸುತ್ತಾನೆ; ಉತ್ಪಾದನೆ ಶೇ.೫ರಷ್ಟು ಕಡಮೆಯಾದರೆ ಗ್ರಾಹಕನ ದರವನ್ನು ಶೇ.೫೦ರಷ್ಟು ಏರಿಸುತ್ತಾನೆ. ಭಾರತದಲ್ಲಿ ಅನಿಶ್ಚಿತವಾದ ಮಳೆಯನ್ನು ನಂಬಿರುವ ಕಾರಣ ನಿಖರವಾದ ಯೋಜನೆ ಮಾಡಲು ಸಾಧ್ಯವಾಗುವುದಿಲ್ಲ. ಅದರ ಲಾಭ ಮಾಡಿಕೊಳ್ಳುವವರು ವ್ಯಾಪಾರಿಗಳು. ಖರೀದಿಸಿ ದಾಸ್ತಾನು ಮಾಡಿ ಮಾರುಕಟ್ಟೆಗೆ ಬಿಡದಿದ್ದರೆ ಬೆಲೆಗಳು ಏರಿಕೆಯಾಗಿ ದೊಡ್ಡ ಲಾಭವೇ ಸಿಗುತ್ತದೆ. ಬೆಳೆಗಾರ, ಬಳಕೆದಾರ ಇಬ್ಬರೂ ಅನುಕೂಲವಾಗುವಂತಹ ದರದ ಸ್ಥಿರತೆಗೆ ಎನ್ಡಿಡಿಬಿ ಶ್ರಮಿಸಿತು.
‘ಧಾರಾ’ ಎಂಬ ಖಾದ್ಯತೈಲ
೧೯೯೪ರ ಹೊತ್ತಿಗೆ ೫೩೪೮ ಎಣ್ಣೆಕಾಳು ಬೆಳೆಗಾರರ ಸಹಕಾರಿ ಸಂಘಗಳಾಗಿ ಸುಮಾರು ೧೦ ಲಕ್ಷ ರೈತರು ಅವುಗಳ ಸದಸ್ಯರಾಗಿದ್ದರು. ಏಳು ರಾಜ್ಯಗಳಲ್ಲಿ ೧೯ ಬೆಳೆಗಾರರ ಜಿಲ್ಲಾ ಯೂನಿಯನ್ಗಳಿದ್ದವು. ಎನ್ಡಿಡಿಬಿ ಹಲವು ದೊಡ್ಡ ಆಧುನಿಕ ಎಣ್ಣೆ ಕಾರ್ಖಾನೆಗಳನ್ನು ಸ್ಥಾಪಿಸಿತು. ಸಹಕಾರಿ ಸಂಘಗಳ ಎಣ್ಣೆಯನ್ನು ಖಾದ್ಯತೈಲ ಪ್ಯಾಕ್ನಲ್ಲಿ ನೀಡಿದರು. ಆ ಎಣ್ಣೆಗೆ ‘ಧಾರಾ’ ಎಂದು ಹೆಸರಿಡಲಾಯಿತು. ಈ ಸಹಕಾರಿ ಸಂಘಗಳು ಬಲಶಾಲಿಯಾದವು.
‘ಧಾರಾ’ ಬಹುಬೇಗ ಗುಣಮಟ್ಟದ, ವಿಶ್ವಾಸಾರ್ಹ, ಕಲಬೆರಕೆರಹಿತ ಮತ್ತು ಯೋಗ್ಯದರದ ಖಾದ್ಯತೈಲ ಎನ್ನುವ ಹೆಸರು ಪಡೆಯಿತು. ಅಮುಲ್ ಯಶಸ್ವಿ ಎನಿಸಲು ಸುಮಾರು ೨೫ ವರ್ಷಗಳು ಬೇಕಾದರೆ ಇದಕ್ಕೆ ಕೆಲವೇ ವರ್ಷ ಸಾಕಾಯಿತು. ಅತಿ ಕಡಮೆ ಬೆಲೆಯ ಬ್ರಾಂಡೆಡ್ ಆಯಿಲ್ ಎನಿಸಿದ್ದು, ಅದರ ಗುಣಮಟ್ಟ ಅಧಿಕ ಬೆಲೆಯ ಬ್ರಾಂಡಿಗೆ ಸಮಾನ ಅಥವಾ ಉತ್ತಮವಾಗಿತ್ತು.
ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಗುಜರಾತ್ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (ಜಿಸಿಎಂಎಂಎಫ್) ದೇಶಾದ್ಯಂತ ೫ ಲಕ್ಷ ಚಿಲ್ಲರೆ ಅಂಗಡಿಗಳನ್ನು ಹೊಂದಿತ್ತು. ಧಾರಾ ಮಾರಾಟವನ್ನು ಅದಕ್ಕೆ ವಹಿಸಲಾಯಿತು. ಕೇವಲ ಶೇ.೧.೫ ಮಾರ್ಜಿನ್ ಇದ್ದ ಕಾರಣ ಬೇರೆಯವರು ಅದನ್ನು ಮಾರಲು ಒಪ್ಪುತ್ತಿರಲಿಲ್ಲ.
ಮೊದಲಿಗೆ ಎನ್ಡಿಡಿಬಿ ಅಸಲು ಖರ್ಚಿಗಿಂತ ಕಡಮೆ ಬೆಲೆಗೆ ಖಾದ್ಯತೈಲದ ಮಾರಾಟ ಮಾಡಿತು. ಮಾರುಕಟ್ಟೆ ಗಳಿಕೆಗಾಗಿ ಅದು ಅಗತ್ಯವಿದ್ದು, ನಷ್ಟವಾದರೆ ಅದನ್ನು ಭರಿಸುತ್ತೇವೆಂದು ಸರ್ಕಾರ ಲಿಖಿತ ಭರವಸೆಯನ್ನು ನೀಡಿತ್ತು. ಈ ನಷ್ಟ ತುಂಬಿಸುವ ಬಗ್ಗೆ ಸರ್ಕಾರ ೧.೫೦ ಲಕ್ಷ ಟನ್ ಆಮದಾದ ಖಾದ್ಯತೈಲವನ್ನು ನೀಡಿದ್ದು, ಅದನ್ನು ಮಾರಿ ಬಂದ ಹಣ ಎನ್ಡಿಡಿಬಿಗೆ ಲಭಿಸಿತು. ಅದರಿಂದಾಗಿ ಮೊದಲ ಎರಡು ವರ್ಷ ನಷ್ಟವಾಗಲಿಲ್ಲ. ಮುಂದೆ ವಿದೇಶೀ ವಿನಿಮಯದ ಬಿಕ್ಕಟ್ಟಿನಿಂದಾಗಿ ಸರ್ಕಾರಕ್ಕೆ ಆಮದಾದ ತೈಲ ಕೊಡಲು ಸಾಧ್ಯವಾಗಲಿಲ್ಲ.
ಒಂದು ಕೃಷಿ ಉತ್ಪನ್ನದ ಕೊರತೆಯಾದಾಗ ರೈತನಿಗೆ ಹೆಚ್ಚು ಬೆಲೆ ನೀಡಿದರೆ ಆತ ಹೆಚ್ಚು ಉತ್ಪಾದಿಸಿ ಕೊರತೆಯನ್ನು ತುಂಬುತ್ತಾನೆನ್ನುವುದು ಡಾ|| ಕುರಿಯನ್ ಅವರ ಸಿದ್ಧಾಂತ. ಅದಕ್ಕಾಗಿ ದರ ಏರಿಸಿದರು. ಉತ್ಪನ್ನಗಳು ಉತ್ಪಾದಕರಿಂದ ಗ್ರಾಹಕರಿಗೆ ನೇರವಾಗಿ ತಲಪುವುದು, ಆ ಮೂಲಕ ವ್ಯಾಪಾರಿಯನ್ನು ದೂರವಿಡುವುದು ಎನ್ಡಿಡಿಬಿಯ ಗುರಿಯಾಗಿದ್ದು, ಅದಕ್ಕಾಗಿ ಗ್ರಾಹಕರ ದೊಡ್ಡ ಮಾರುಕಟ್ಟೆಯನ್ನು ಗಳಿಸಿಕೊಳ್ಳಬೇಕಿತ್ತು. ಇಲ್ಲಿ ಅವರಿಗೆ ಹಾಲಿನಂತಹ ಯಶಸ್ಸು ಸಿಗಲಿಲ್ಲ. ವಸ್ತುವಿನ ಸ್ವರೂಪ ಅದಕ್ಕೆ ಕಾರಣ. ಹಾಲಿನ ದಾಸ್ತಾನು ಅಸಾಧ್ಯವಾದರೆ ಖಾದ್ಯತೈಲದ್ದು ಸಾಧ್ಯ. ಆದರೂ ಎಣ್ಣೆಯ ಶಕ್ತಿಶಾಲಿ ಲಾಬಿಯನ್ನು ಧಾರಾ ಅಲುಗಾಡಿಸಿತು. “ಇದು ಗಮನಾರ್ಹ ಯಶಸ್ಸಾದರೂ ಯಾರೂ ಇದನ್ನು ಗುರುತಿಸಲಿಲ್ಲ; ಏಕೆಂದರೆ ಇದು ಬಹುರಾಷ್ಟ್ರೀಯ ಕಂಪೆನಿಯ (ಎಂಎನ್ಸಿ) ಸಾಧನೆಯಲ್ಲ. ಭಾರತದ ದುರಂತವೆಂದರೆ ಭಾರತೀಯರು, ಅವರ ಪ್ರಯತ್ನ ಮತ್ತು ಸಾಧನೆಗಳ ಬಗ್ಗೆ ನಮಗೆ ಗೌರವವಿಲ್ಲ. ಒಮ್ಮೆ ಒಬ್ಬ ಸರ್ಕಾರಿ ಅಧಿಕಾರಿ ನನ್ನ ಬಳಿ ನೆಸ್ಲೆಯನ್ನು ಹೊಗಳಿದಾಗ, ‘ಬ್ರಿಟಿಷರ ಆಡಳಿತ ಚೆನ್ನಾಗಿತ್ತು. ಅವರನ್ನು ವಾಪಸು ಕರೆಸೋಣವೆ?’ ಎಂದು ಕೇಳಿದ್ದೆ” ಎಂದು ಕುರಿಯನ್ ಬೇಸರದಿಂದ ಹೇಳಿದ್ದಾರೆ.
ಆಮದು ಇಳಿಕೆ
ಖಾದ್ಯತೈಲ ಮಾರುಕಟ್ಟೆಗೆ ಎನ್ಡಿಡಿಬಿ ಪ್ರವೇಶಕ್ಕೆ ಸಂಬಂಧಿಸಿ ಸರ್ಕಾರದ ನಿರೀಕ್ಷೆ ಹುಸಿಯಾಗಲಿಲ್ಲ. ಅದರ ಆಮದು ವೆಚ್ಚ ೧೦೦೦ ಕೋಟಿ ರೂ. ಗಳಿಂದ ೧೬೫ ಕೋಟಿಗೆ ಇಳಿಯಿತು. ಧಾರಾದ ವಾರ್ಷಿಕ ಮಾರಾಟ ೧೦೦೦ ಕೋಟಿ ರೂ.ಗೆ ಏರಿತು. ಬೇರೆ ಎಣ್ಣೆಗಳ ಮಾರಾಟ ವಾರ್ಷಿಕ ಶೇ.೧೨ರಷ್ಟು ಏರಿದರೆ, ಧಾರಾದ್ದು ಶೇ.೩೫ರಷ್ಟು ಏರುತ್ತಿತ್ತು. ಆಮದಾಗದಿದ್ದರೆ ವಾಣಿಜ್ಯ ಇಲಾಖೆಯ ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಶನ್ಗೆ (ಎಸ್ಟಿಸಿ) ಕಷ್ಟವಾಗುತ್ತಿತ್ತು. ನಾಗರಿಕ ಪೂರೈಕೆ ಇಲಾಖೆಯು ಆಮದು ಎಣ್ಣೆಯನ್ನು ದೇಶದ ಜನರಿಗೆ ಕಡಮೆ ಬೆಲೆಗೆ ಮಾರಬೇಕಿತ್ತು. ಕಡಮೆ ಬೆಲೆಗೆ ಮಾರಬೇಕಾದರೆ ಸರ್ಕಾರ ಸಬ್ಸಿಡಿ ನೀಡಬೇಕು. ಖಾದ್ಯತೈಲದಲ್ಲಿ ಸ್ವಾವಲಂಬಿಯಾದರೆ ಮೇಲಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಅದಕ್ಕೆ ಪ್ರೋತ್ಸಾಹಕ (incentive) ನೀಡಿ ಅಧಿಕ ಉತ್ಪಾದನೆ ಮಾಡಿಸುವುದೇ ಪರಿಹಾರ. ೧೯೯೩ರ ಹೊತ್ತಿಗೆ ಭಾರತ ಖಾದ್ಯತೈಲದಲ್ಲಿ ಸ್ವಾವಲಂಬಿ ಆಯಿತು. ೨೦ ಲಕ್ಷ ಟನ್ ಇದ್ದ ಆಮದು ಎರಡು ಲಕ್ಷ ಟನ್ಗೆ ಇಳಿಯಿತು. ದೇಶದೊಳಗೂ ಸ್ವಲ್ಪ ಶಿಸ್ತು ಬಂತು. ತೇಲಿಯಾ ರಾಜಾಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಲಾಯಿತು. ಆ ಕಾರಣದಿಂದ ಹಲವು ಎನ್ಡಿಡಿಬಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಯಿತು. ಭಾವನಗರದ ಎಣ್ಣೆ ಕಾರ್ಖಾನೆಗೆ ಅನೇಕ ಸಲ ಬೆಂಕಿ ಹಚ್ಚಿದರು. “ಆದರೆ ನಾವು ಹಿಂದೆ ಸರಿಯಲಿಲ್ಲ. ನಮ್ಮ ಖಾದ್ಯತೈಲ ಯೋಜನೆಯು ವಿಫಲವಾಗಬೇಕೆಂದು ಆ ಪುಂಡರು ಕಾಯುತ್ತಿದ್ದರು. ಇದು ಹಾಲಿನಂತಲ್ಲ; ಎಣ್ಣೆಯಲ್ಲಿ ಕಾಲು ಜಾರುತ್ತದೆ. ಡಾ|| ಕುರಿಯನ್ ಕಾಲು ಜಾರಿ ಬೀಳುವುದರಲ್ಲಿ ಸಂದೇಹವೇ ಇಲ್ಲ – ಎನ್ನುತ್ತಿದ್ದರು. ಆದರೆ ಬಿದ್ದದ್ದು ಅವರು. ಇದರಿಂದ ಹಲವರಿಗೆ ಬೇಸರ ಆಗಿರಬಹುದು. ಏನಿದ್ದರೂ ನಾವು ಲಕ್ಷಾಂತರ ಎಣ್ಣೆಕಾಳು ಬೆಳೆಗಾರರಿಗೆ ಲಾಭ ಗಳಿಸಿಕೊಟ್ಟಿದ್ದೇವೆ” ಎಂದು ಕುರಿಯನ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮಂತ್ರಿಯ ಭ್ರಷ್ಟಾಚಾರ
ಒಮ್ಮೆ ಒಂದು ಕುತೂಹಲಕರ ಘಟನೆ ನಡೆಯಿತು. ಡಾ|| ಕುರಿಯನ್ ಅವರು ಪತ್ನಿಯೊಂದಿಗೆ ದೆಹಲಿಗೆ ಹೋಗಿದ್ದಾಗ ಒಬ್ಬ ಅಧಿಕಾರಿ ಫೋನ್ ಮಾಡಿ ಆತಂಕವನ್ನು ತೋಡಿಕೊಂಡರು. ನಾಗರಿಕ ಪೂರೈಕೆ ಮಂತ್ರಿ ಸಂಜೆ ೭ ಗಂಟೆಗೆ ಪ್ರಧಾನಿ ರಾಜೀವ್ಗಾಂಧಿಯವರನ್ನು ಭೇಟಿ ಮಾಡಿ ದಾಸ್ತಾನಿರುವ ೨೭ ಸಾವಿರ ಟನ್ ಖಾದ್ಯತೈಲವನ್ನು ಎನ್ಡಿಡಿಬಿಗೆ ಕೊಡುವ ಬದಲು ಅರ್ಧಬೆಲೆಗೆ ಖಾಸಗಿಯವರಿಗೆ ಮಾರಲು ಅನುಮತಿ ಪಡೆಯುತ್ತಿದ್ದಾರೆಂಬುದೇ ಆ ಸುದ್ದಿ. ಆಗ ಸಂಜೆ ಗಂಟೆ ೫. ಎರಡು ಗಂಟೆಯೊಳಗೆ ಪ್ರಧಾನಿಯನ್ನು ಭೇಟಿ ಮಾಡಿ ಆ ಅವ್ಯವಹಾರವನ್ನು ತಡೆಯಲು ಹೇಗೆ ಸಾಧ್ಯ? ಪ್ರಧಾನಿ ಕಚೇರಿಯ ಓರ್ವ ಪರಿಚಿತ ಅಧಿಕಾರಿಗೆ ಫೋನ್ ಮಾಡಿ ೬.೪೫ಕ್ಕೆ ಪ್ರಧಾನಿ ಭೇಟಿಯ ಅವಕಾಶವನ್ನು ಪಡೆದುಕೊಂಡರು. ಎಣ್ಣೆ ಹಾಳಾದ ಕಾರಣ ಅರ್ಧಬೆಲೆಗೆ ಮಾರುತ್ತೇನೆನ್ನುವುದು ಮಂತ್ರಿಯ ಸಬೂಬು. “ನಾವದನ್ನು ಪೂರ್ತಿ ಬೆಲೆಗೆ ಪಡೆದುಕೊಳ್ಳುತ್ತೇವೆ; ನಮಗೆ ಎಣ್ಣೆ ಬೇಕಿದ್ದರೂ ಮಂತ್ರಿ ಕೊಡುತ್ತಿಲ್ಲ” ಎಂದು ಕುರಿಯನ್ ರಾಜೀವ್ಗಾಂಧಿಯವರಲ್ಲಿ ಹೇಳಿ ಹೊರಡುವುದಕ್ಕೆ ಅನುಮತಿ ಕೇಳಿದರು. “ಬೇಡ, ಇಲ್ಲೇ ಇರಿ” ಎಂದರು ರಾಜೀವ್ಗಾಂಧಿ. ಆಗ ಸಂಪುಟ ಕಾರ್ಯದರ್ಶಿಯಾಗಿದ್ದ ಟಿ.ಎನ್. ಶೇಷನ್ ಕೂಡ ಅಲ್ಲಿದ್ದರು.
ಮಂತ್ರಿ ಎಣ್ಣೆಯನ್ನು ಅರ್ಧ ಬೆಲೆಗೆ ಮಾರುವ ಮಾತನಾಡಿದಾಗ ಕುರಿಯನ್ ಪೂರ್ತಿ ಬೆಲೆಗೆ ಖರೀದಿಸುವುದಾಗಿ ಹೇಳಿದರು. “ಪೂರ್ತಿ ಬೆಲೆಗೆ ಸರ್ಕಾರೀ ರಂಗದ ಎನ್ಡಿಡಿಬಿಗೆ ಖರೀದಿಸಲು ಇವರು ತಯಾರಿರುವಾಗ ಅರ್ಧಬೆಲೆಗೆ ಖಾಸಗಿಯವರಿಗೆ ಕೊಡುವುದೇಕೆ? ಇದು ಯಾವ ನೀತಿ?” ಎಂದು ಪ್ರಧಾನಿ ರಾಜೀವ್ಗಾಂಧಿ ಅವರು ಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು; ಮತ್ತು ೨೪ ಗಂಟೆಯೊಳಗೆ ಎಲ್ಲ ತೈಲವನ್ನು ಡಾ|| ಕುರಿಯನ್ ಅವರಿಗೆ ಕೊಡಲು ಸೂಚಿಸಿದರು. ಕುರಿಯನ್ ಮುಂದುವರಿದು, “ಈ ಸಚಿವರ ಬಗ್ಗೆ ನನಗೆ ಹೇಳುವುದಿದೆ. ಕಳೆದ ಸಲದ ತೈಲ ಆಮದಿನಲ್ಲಿ ಈತ ಕೋಟಿಗಟ್ಟಲೆ ಹಣ ಮಾಡಿಕೊಂಡರೆಂದು ಮುಂಬಯಿ ತೇಲಿಯಾ ರಾಜಾಗಳು ಕೂಗಿ ಹೇಳುತ್ತಿದ್ದಾರೆ. ಅಂತಹ ಖದೀಮರು ನಿಮ್ಮ ಮಂತ್ರಿಯ ಬಗ್ಗೆ ಬೀದಿಯಲ್ಲಿ ಇಂತಹ ಸುದ್ದಿ ಹಬ್ಬಿಸುತ್ತಿದ್ದಾರೆಂದರೆ ನಿಮ್ಮ ಸರ್ಕಾರದ ಗೌರವದ ಗತಿ ಏನಾಗಬೇಕು?” ಎಂದು ರಾಜೀವ್ ಅವರಲ್ಲಿ ಕೇಳಿದರು. ಕುರಿಯನ್ ಅಲ್ಲಿಂದ ಹೊರಟಾಗ ಶೇಷನ್ ಕೈ ಕುಲುಕಿ “ಇಂತಹ ಮಾತನಾಡುವ ಸಾಮರ್ಥ್ಯ ನಿಮಗಿದೆ ಎಂದು ಗೊತ್ತಿರಲಿಲ್ಲ” ಎಂದರಂತೆ! “ಆ ಮಂತ್ರಿ ನನ್ನನ್ನು ಕ್ಷಮಿಸಲೇ ಇಲ್ಲ. ಈಗಲೂ ಎಲ್ಲಾದರೂ ಸಿಕ್ಕಿದರೆ ಮುಖ ತಿರುಗಿಸುತ್ತಾರೆ” ಎಂದು ಕುರಿಯನ್ ಆತ್ಮಕಥನದಲ್ಲಿ ದಾಖಲಿಸಿದ್ದಾರೆ.
* * *
ವಿದೇಶದಲ್ಲಿ ಪ್ರಭಾವ
ಆಪರೇಶನ್ ಫ್ಲಡ್ ಯಶಸ್ವಿಯಾಗಿ ಜಗತ್ತಿಗೆ ಅದು ತಿಳಿದಾಗ ಹಲವರು ಆನಂದ್ಗೆ ಬಂದು ನೋಡಬಯಸಿದರು. ಬ್ರಿಟನ್ನ ಪ್ರಿನ್ಸ್ ಚಾರ್ಲ್ಸ್, ಪ್ರಧಾನಿ ಲಾರ್ಡ್ ಜೇಮ್ಸ್ ಕಾಲಘನ್, ನೆದರ್ಲೆಂಡ್ಸ್ನ ರಾಣಿಯಲ್ಲದೆ ಸೋವಿಯತ್ ಒಕ್ಕೂಟದ (ಯುಎಸ್ಎಸ್ಆರ್) ಅಲೆಕ್ಸಿ ಕೊಸಿಗಿನ್ ಕೂಡ ಬಂದರು. ಎಲ್ಲ ನೋಡಿದ ಕೊಸಿಗಿನ್ “ಇದು ನಿಧಾನವಾಯಿತು. ಕ್ರಾಂತಿ ಆಗಬೇಕು” ಎಂದರಲ್ಲದೆ ಕ್ರಾಂತಿ ತಂದ ಬದಲಾವಣೆಯನ್ನು ನೋಡಲು ಕುರಿಯನ್ರನ್ನು ರಷ್ಯಾಗೆ ಆಹ್ವಾನಿಸಿದರು. ಅಲ್ಲಿಗೆ ಹೋದ ಕುರಿಯನ್ರಿಗೆ ಗುಪ್ತಚರ ಸಂಸ್ಥೆ ಕೆ.ಜಿ.ಬಿ. ತಮ್ಮನ್ನು ಹಿಂಬಾಲಿಸುತ್ತಿರುವುದು ಮತ್ತು ‘ಕುಳಿತುಕೋ, ನಿಲ್ಲು’ ಎಂಬಂತೆ ನಡೆಸಿಕೊಳ್ಳುವುದು ಇಷ್ಟವಾಗಲಿಲ್ಲ; ಪ್ರತಿಭಟಿಸಿದಾಗ ಇಬ್ಬರು ಮಂತ್ರಿಗಳು ಬಂದು ಕ್ಷಮೆ ಕೇಳಿದರು. ಅವರ ಡೈರಿ ಉದ್ಯಮ ಇವರಿಗೆ ಇಷ್ಟವಾಗಲಿಲ್ಲ. ದನಗಳನ್ನು ಚೆನ್ನಾಗಿ ಸಾಕುತ್ತಿಲ್ಲ; ಡೈರಿಗಳು ದಕ್ಷವಾಗಿ ಕೆಲಸ ಮಾಡುತ್ತಿಲ್ಲ ಅನ್ನಿಸಿತು.
ಏಷ್ಯಾ, ಆಫ್ರಿಕ, ಲ್ಯಾಟಿನ್ ಅಮೆರಿಕದ ಹಲವು ದೇಶಗಳು ಅಮುಲ್ ಮಾದರಿಯನ್ನು ಅನುಸರಿಸಿದವು. ಇಲ್ಲಿಗೆ ಬಂದು ಕಲಿತುಕೊಂಡರು. ೧೯೮೨ರಲ್ಲಿ ಪಾಕಿಸ್ತಾನದವರು ಡಾ|| ಕುರಿಯನ್ರನ್ನು ತಮ್ಮ ದೇಶಕ್ಕೆ ಕರೆದರು. ಆಗ ಉಭಯ ದೇಶಗಳ ಸಂಬಂಧ ಹಾಳಾಗಿದ್ದ ಕಾರಣ ಒಪ್ಪಿಗೆ ಸಿಗಲಿಲ್ಲ. ಕೊನೆಗೆ ವಿಶ್ವಬ್ಯಾಂಕ್ ಮೂಲಕ ಕುರಿಯನ್ ನೇತೃತ್ವದ ತಂಡವನ್ನು ತಮ್ಮಲ್ಲಿಗೆ ಕರೆಸಿಕೊಂಡು ಇವರಿಂದ ಕಲಿತರು. ಐದು ವಾರಗಳ ಅದೊಂದು ಸುಂದರ ಅನುಭವವಾಗಿತ್ತು. ಚಂದ್ರಿಕಾ ಕುಮಾರತುಂಗ ಅವರ ಆಹ್ವಾನದ ಮೇರೆಗೆ ಶ್ರೀಲಂಕೆಗೂ ಹೋಗಿಬಂದರು. ಅಲ್ಲಿ ನ್ಯೂಜಿಲೆಂಡ್, ನೆಸ್ಲೆ ಮುಂತಾದವರ ಹಿತಾಸಕ್ತಿ ಇರುವುದು ಗಮನಕ್ಕೆ ಬಂತು.
* * *
ಕೈ ತುಂಬ ಕೆಲಸ
ಡಾ|| ಕುರಿಯನ್ ಸಂಬಳ ಪಡೆಯುತ್ತಿದ್ದ ಕೆಲಸ ಒಂದೇ. ಅದು ಕೈರಾ ಹಾಲು ಸಹಕಾರಿ ಯೂನಿಯನ್ನ ಜನರಲ್ ಮ್ಯಾನೇಜರ್ ಹುದ್ದೆ. ಆದರೆ ಹಲವು ಜವಾಬ್ದಾರಿಗಳಿಗೆ ಅವರು ಹೆಗಲು ಕೊಡಬೇಕಾಯಿತು. ಸಮಸ್ಯೆ ಇರುವಲ್ಲಿಗೆ ಕರೆದಾಗ ಹೋದರು. ಅದಕ್ಕೆ ಸರಿಯಾಗಿ ಸಂಸತ್ ಅಂಗೀಕರಿಸಿದ ಎನ್ಡಿಡಿಬಿ ಕಾಯ್ದೆಯಲ್ಲಿ ಹಾಲು ಮಾತ್ರ ಅಲ್ಲ; ರಾಜ್ಯ ಅಥವಾ ಕೇಂದ್ರಸರ್ಕಾರಗಳು ವಹಿಸುವ ಯಾವುದೇ ಹೊಣೆಯನ್ನು ನಿರ್ವಹಿಸಬೇಕು ಎಂದಿತ್ತು. ೧೯೮೪ರಲ್ಲಿ ಅವರನ್ನು ಗುಜರಾತ್ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಲಾಯಿತು. ಗುಜರಾತ್ ವಿದ್ಯುತ್ ಮಂಡಳಿಯ (ಜಿಇಬಿ) ಅಧ್ಯಕ್ಷರಾಗಿ ಸರ್ಕಾರ ನೇಮಿಸಿತು. ಆ ಹುದ್ದೆಯಲ್ಲಿ ಅವರು ಹಲವು ಬದಲಾವಣೆ-ಸುಧಾರಣೆಗಳನ್ನು ತಂದರು. ಗುಣಮಟ್ಟದ ವಿದ್ಯುತ್ ಪೂರೈಕೆ, ಆವಶ್ಯಕತೆಗೆ ಸದಾ ಸ್ಪಂದನೆ, ವಿದ್ಯುತ್ ಕಳವಿಗೆ ತಡೆ ಅವರ ಮುಖ್ಯ ಉದ್ದೇಶಗಳಾಗಿದ್ದವು. ಊರಿಗೊಂದು ಮೀಟರ್ ಹಾಕಿ ಅದನ್ನು ನೋಡಿಕೊಳ್ಳುವುದಕ್ಕೆ ಅಲ್ಲೊಂದು ವಿದ್ಯುತ್ ಸಮಿತಿ, ಮೀಟರ್ನ ಪ್ರಕಾರ ಆ ಹಳ್ಳಿಗೆ ದರ, ಸರ್ಕಾರದಿಂದ ವಿದ್ಯುತ್ ಉತ್ಪಾದನೆ ಮಾತ್ರ; ನಿರ್ವಹಣೆ, ವಿತರಣೆಗಳು ಜನರ ಹೊಣೆ – ಹೀಗೆ ಹಲವು ಸುಧಾರಣೆಗಳಿಗೆ ಮಾರ್ಗ ಹಾಕಿಕೊಟ್ಟರು. ಕೈರಾ ಜಿಲ್ಲೆಯ ವಿದ್ಯುತ್ ವಿತರಣೆಯನ್ನು ತಾವೇ ವಹಿಸಿಕೊಂಡರು. ವಿದ್ಯುತ್ ಕೈಕೊಡಬಾರದು, ವೋಲ್ಟೇಜ್ ಸರಿ ಇರಬೇಕು ಎಂಬುದನ್ನು ಜಾರಿ ಮಾಡುವಾಗ ಜಿಇಬಿ ವಿದ್ಯುತ್ ಬೇಡ; ತಾವೇ ಉತ್ಪಾದಿಸೋಣ ಎನಿಸಿ ಆ ಬಗೆಗೂ ಕಾರ್ಯಪ್ರವೃತ್ತರಾದರು.
ಗುಜರಾತಿನ ಕಛ್ನ ರಾಣ್ನ ಹಾಲು ಸಹಕಾರಿ ಸಂಸ್ಥೆಯ ಅಧ್ಯಕ್ಷ ಒಮ್ಮೆ (೧೯೮೭) ಕುರಿಯನ್ ಅವರ ಬಳಿಗೆ ಬಂದು ಉಪ್ಪು ತಯಾರಕ ರೈತರ ಶೋಷಣೆಯ ಬಗ್ಗೆ ತಿಳಿಸಿದರು. ದೇಶದ ಶೇ.೬೦ರಷ್ಟು ಉಪ್ಪು ಗುಜರಾತಿನಲ್ಲಿ ತಯಾರಾಗುತ್ತದೆ. ಆದರೆ ಅದರ ತಯಾರಕರ ಕಷ್ಟ ಯಾರಿಗೂ ಗೊತ್ತಿಲ್ಲ. ಅದು ಮರುಭೂಮಿ; ಒಂದು ಮರವೂ ಇಲ್ಲ. ವರ್ಷ ಹತ್ತು ತಿಂಗಳು ಕೆಲಸ. ನೀರನ್ನು ವ್ಯಾಪಾರಿಯಿಂದ ಖರೀದಿಸಬೇಕು; ಉಪ್ಪನ್ನು ಅವನಿಗೇ ಮಾರುವುದು. ಅವರಿಗೆ ಆಗ ಕಿಲೋ ಉಪ್ಪಿಗೆ ಸಿಗುತ್ತಿದ್ದುದು ಎರಡು ಪೈಸೆ ಮಾತ್ರ. ಕಾಲುಗಳು ಉಪ್ಪನ್ನು ಹೀರಿಕೊಂಡು ಬೆಂಕಿ ಹಚ್ಚಿದರೂ ಸುಡುವುದಿಲ್ಲ ಮುಂತಾಗಿ ವಿವರಿಸಿದರು. ‘ಕೇಳಲಾರೆ, ಹೋಗಿ’ ಎಂದು ಕುರಿಯನ್ ಕಳುಹಿಸಿದರೆ ಎರಡನೇ ದಿನದಲ್ಲಿ ಆತ ಅಪಘಾತದಲ್ಲಿ ತೀರಿಕೊಂಡರು.
ಉಪ್ಪಿನವರ ಬವಣೆ
ಆತನ ಗೌರವಾರ್ಥ ಎನ್ಡಿಡಿಬಿ ಈಗ ಉಪ್ಪಿನ ಕ್ಷೇತ್ರಕ್ಕೆ ಪ್ರವೇಶಿಸಿತು. ಉಪ್ಪು ತಯಾರಕರನ್ನು ಸಂಘಟಿಸಿದರು. ಉಪ್ಪಿನ ಗುಣಮಟ್ಟ ಏರಿಸಿ ಮಾರಾಟ ಮಾಡಿದರು. ಮೊದಲ ವರ್ಷ ೧೦ ಸಾವಿರ ಟನ್, ಎರಡನೇ ವರ್ಷ ೨೫ ಸಾವಿರ ಟನ್ ಹಾಗೂ ಮೂರನೇ ವರ್ಷ ಒಂದು ಲಕ್ಷ ಟನ್ವರೆಗೆ ಮಾರಾಟ ಮಾಡಿದರು. ಉಪ್ಪು ತಯಾರಕರಿಗೆ ವಿವಿಧ ಸೌಲಭ್ಯಗಳನ್ನು ನೀಡಿದರು. ಕೆಲವು ವರ್ಷ ಆಗುವಾಗ ಅವರಿಗೆ ಕಿಲೋಗೆ ಐದು ಪೈಸೆ ಸಿಗುವಂತಾಯಿತು. ಆ ಹೊತ್ತಿಗೆ ಟಾಟಾದವರು ಅಯೊಡೈಸ್ಡ್ ಉಪ್ಪನ್ನು ಮಾರತೊಡಗಿದರು. ಆಗ ಎನ್ಡಿಡಿಬಿ ಹಿಂದೆ ಸರಿಯಿತು.
“ಎನ್ಡಿಡಿಬಿಯಲ್ಲಿ ನಾವು ಕಂಡದ್ದೆಂದರೆ, ಭಾರತದ ಕೃಷಿಯ ದೊಡ್ಡ ಸಮಸ್ಯೆ ಬೇಡಿಕೆಗೆ ಅನುಗುಣವಾಗಿ ನಮ್ಮ ಉತ್ಪಾದನೆ ವ್ಯವಸ್ಥಿತವಾಗಿ ಲಭ್ಯವಿಲ್ಲ; ಉತ್ಪಾದನೆ ಮಳೆಗಾಗಿ ಕಾಯಬೇಕಾಗುತ್ತದೆ. ವ್ಯಾಪಾರಿಗಳು ಈ ಸ್ಥಿತಿಯ ದುರುಪಯೋಗ ಮಾಡಿಕೊಳ್ಳು ಡುತ್ತಾರೆ; ಅವರಿಗೆ ಹಣವೇ ಮುಖ್ಯ. ಆದ್ದರಿಂದ ಶೋಷಣೆಯಿಲ್ಲದ ಸಹಕಾರಿ ವ್ಯವಸ್ಥೆ ಬರಬೇಕು. ಹಾಲಿನ ವಿಷಯದಲ್ಲಿ ಸಾಧ್ಯವಾದದ್ದು, ಇತರ ಕೃಷಿ ಉತ್ಪನ್ನಗಳಿಗೂ ಅನ್ವಯವಾಗಬೇಕು. ಅದಕ್ಕಾಗಿ ನಾವು ಖಾದ್ಯತೈಲ ಕ್ಷೇತ್ರದಲ್ಲಿ ಪ್ರಯೋಗ ಮಾಡಿದೆವು” ಎಂದಿದ್ದಾರೆ ಕುರಿಯನ್.
“ದೇಶದ ಸಹಕಾರಿ ಕಾನೂನುಗಳು ನಮ್ಮ ಕೈಕಟ್ಟುತ್ತವೆ. ದೇಶದಲ್ಲಿ ಇಂದಿಗೂ ‘ಸಹಕಾರಿ’ ಎಂಬುದು ಒಳ್ಳೆಯ ಶಬ್ದ ಅಲ್ಲ. ಸಹಕಾರಿ ಶಾಸನಗಳು ಪ್ರಾಚೀನ ಕಾಲದವಾಗಿದ್ದು, ಅವು ಅಧಿಕಾರಿಗಳ ಮತ್ತು ರಾಜಕಾರಣಿಗಳ ಹಿಡಿತದಲ್ಲಿವೆ – ಎನ್ನುವ ಅವರು, ಸರ್ಕಾರೀ ನಿಯಂತ್ರಣ ಇಲ್ಲದಿದ್ದರೆ ಸಹಕಾರಿರಂಗವು ಚೆನ್ನಾಗಿ ಸ್ಪರ್ಧಿಸಬಹುದು ಎನ್ನುವ ವಿಶ್ವಾಸ ತಳೆದಿದ್ದಾರೆ. ಎಂಎನ್ಸಿಗಳು ಬಂದರೂ ದೇಶದಲ್ಲಿ ಅತಿ ದೊಡ್ಡ ಬೇಬಿಫುಡ್ ಉತ್ಪಾದಕ ಸಂಸ್ಥೆ ಅಮುಲೇ ಆಗಿದೆ.
“ಹಣಕಾಸು ಮಂತ್ರಿಯಾಗಿ ಡಾ|| ಮನಮೋಹನ್ಸಿಂಗ್ ಕೈಗಾರಿಕೆಗಿಂತ ಮೊದಲು ಕೃಷಿಯ ಉದಾರೀಕರಣ ಮಾಡಬೇಕಿತ್ತು. ಕೃಷಿಯ ಕೈ ಕಟ್ಟಿಹಾಕಿ ಕೈಗಾರಿಕೆಗಳನ್ನು ಮುಕ್ತ ಮಾಡಿದಾಗ ಕೃಷಿಯ ಶೋಷಣೆ ಹೆಚ್ಚಾಯಿತು. ನಗರಗಳು ಹಳ್ಳಿಗಳನ್ನು ಹೀರಿ ಮೆರೆಯುತ್ತಿವೆ; ಕೈಗಾರಿಕೆ ಕೃಷಿಯನ್ನು ಶೋಷಿಸುತ್ತಿದೆ. ಸರ್ಕಾರ ಕೃಷಿ ಕ್ಷೇತ್ರವನ್ನು ಮರೆತಿದೆ. ಅದು ಸರಿಯಲ್ಲ. ಸರ್ಕಾರದ ಆಡಳಿತ ಎಲ್ಲ ಕ್ಷೇತ್ರಗಳನ್ನು ಮುಟ್ಟಬೇಕು; ಆಡಳಿತ ಮಾಡಬೇಕು. ಸರ್ಕಾರ ಡೈರಿ ನಡೆಸದಿದ್ದರೂ ಖಾಸಗಿಯವರು ಅದನ್ನು ಹಾಳುಮಾಡದಂತೆ ನೋಡಬೇಕು” ಇವು ಡಾ|| ಕುರಿಯನ್ ಅವರ ಅನುಭವಪೂರ್ಣ ಮಾತುಗಳು.
ದೇಶದಲ್ಲಿ ಇನ್ನೊಬ್ಬ ಡಾ|| ಕುರಿಯನ್ ಬರುವುದು ಸುಲಭವಲ್ಲ. ಅವರ ಸಾಧನೆಗಳೆಲ್ಲ ಆ ಕ್ಷೇತ್ರದ ಪ್ರಥಮ ಎನಿಸುವಂಥವು.
(ಮುಗಿಯಿತು)
ರಾಜೀವ್ಗಾಂಧಿ ಅವರ ಮನವಿ
ಇತರ ಕೆಲವು ಪ್ರಧಾನಿಗಳಂತೆಯೇ ರಾಜೀವ್ಗಾಂಧಿ ಅವರೊಂದಿಗೆ ಕೂಡ ಡಾ|| ಕುರಿಯನ್ ಅವರಿಗೆ ಆತ್ಮೀಯ ಸಂಬಂಧವಿತ್ತು. “ರಾಜೀವ್ ಒಳ್ಳೆಯ ಮನುಷ್ಯ. ಕಾಂಪ್ಲಿಕೇಶನ್ ಇಲ್ಲದ ವ್ಯಕ್ತಿ. ಆತ ಮಾಡಿದ ಏಕೈಕ ತಪ್ಪೆಂದರೆ ಎಲ್ಲ ಬಗೆಯ ಭ್ರಷ್ಟ ಮಂತ್ರಿಗಳನ್ನು ತನ್ನ ಸುತ್ತ ಇಟ್ಟುಕೊಂಡದ್ದು. ಒಮ್ಮೆ ಏನನ್ನೋ ಉದ್ಘಾಟಿಸಲು ಆನಂದ್ಗೆ ಬಂದಾಗ ಆತ ನನ್ನ ಜೊತೆ ಒಂದು ಸಮಸ್ಯೆಯನ್ನು ಹೇಳಿಕೊಂಡರು” ಎಂದು ಕುರಿಯನ್ ಆ ಬಗ್ಗೆ ವಿವರಿಸಿದ್ದಾರೆ.
“ಕುರಿಯನ್ಜೀ, ನಾನೊಂದು ದೊಡ್ಡ ತಪ್ಪು ಮಾಡಿದೆ. ನನ್ನ ಕ್ಷೇತ್ರ ರಾಯ್ಬರೇಲಿಯಲ್ಲಿ ೧೦೦ ಕೋಟಿ ರೂ. ಖರ್ಚು ಮಾಡಿ ಒಂದು ಕಾರ್ಖಾನೆ ಸ್ಥಾಪಿಸಿದೆ. ಅಲ್ಲಿಯ ೨೦೦೦ ಉದ್ಯೋಗದಲ್ಲಿ ೧೯೮೦ ಹೊರಗಿನವರಿಗಾಯಿತು; ಉಳಿದ ೨೦ ಕಸಗುಡಿಸುವ ಕೆಲಸ ಸ್ಥಳೀಯರಿಗೆ ಸಿಕ್ಕಿತು. ಇದರಿಂದ ಟೀಕೆಗೆ ಗುರಿಯಾಗಬೇಕಾಯಿತು. ನೀವು ಆನಂದ್ನAತಹ ಒಂದು ಘಟಕವನ್ನು ಅಲ್ಲಿ ಹಾಕುವಿರಾ? – ಎಂದು ಕೇಳಿದರು. “ಅದು ಬೇಗ ಆಗುವುದಿಲ್ಲ. ದನ ಸಾಕಿ ಹಾಲು ಬೇಕಾದಷ್ಟು ಉತ್ಪಾದಿಸಬೇಕು; ಮತ್ತೆ ಡೈರಿಯನ್ನು ಸ್ಥಾಪಿಸಬಹುದು” ಎಂದ ಕುರಿಯನ್ ಆ ಬಗ್ಗೆ ಕಾರ್ಯಪ್ರವೃತ್ತರಾದರು.
ಅಷ್ಟರಲ್ಲಿ ರಾಜೀವ್ಗಾಂಧಿಯವರ ಹತ್ಯೆ ನಡೆಯಿತು. ಸ್ವಲ್ಪ ಸಮಯ ಕಳೆದ ಮೇಲೆ ಕುರಿಯನ್, ಸೋನಿಯಾಗಾಂಧಿಯವರನ್ನು ಸಂಪರ್ಕಿಸಿ ರಾಜೀವ್ ಆರಂಭಿಸಿದ ಯೋಜನೆಯನ್ನು ಬಂದು ನೋಡಿ ಎಂದರು. “ಬಂದು ನೋಡುತ್ತೇನೆ; ಆದರೆ ಯೋಜನೆಯ ವಿವಿಧ ಕೆಲಸ ನೋಡಿಕೊಳ್ಳಲು ಯಾರನ್ನಾದರೂ ಸೇರಿಸಿಕೊಳ್ಳಿ” ಎಂದರು. ಅದರಂತೆ ರಾಜೀವ್ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಬಲರಾಂ ಜಾಖಡ್ ಅವರನ್ನು ಸೇರಿಸಿಕೊಳ್ಳಲಾಯಿತು.
ಸೋನಿಯಾ ರಾಯ್ಬರೇಲಿಗೆ ಬರುವಾಗ ಜೊತೆಗೆ ಮಗಳು ಪ್ರಿಯಾಂಕಾ ಕೂಡ ಇದ್ದರು. ಗಾಂಧಿ-ನೆಹರು ಕುಟುಂಬದ ಬಗ್ಗೆ ರಾಯ್ಬರೇಲಿ ಜನರಿಗಿದ್ದ ಒಲವು ಅಲ್ಲಿ ಕಂಡುಬಂತು. ಸೋನಿಯಾ ಅವರನ್ನು ನೋಡಲು, ಅವರ ಮಾತು ಕೇಳಲು ಕನಿಷ್ಠ ಒಂದು ಲಕ್ಷ ಜನ ಅಲ್ಲಿ ಸೇರಿದ್ದರು. ಗುಂಪು – ‘ಪ್ರಿಯಾಂಕಾ, ಪ್ರಿಯಾಂಕಾ’ ಎಂದು ಕೂಗುವುದಕ್ಕೂ ಆರಂಭಿಸಿತು. ಸೋನಿಯಾ ಜನರ ಬಳಿ ಹೋದಾಗ ಮಹಿಳೆಯರು ಅಳಲಾರಂಭಿಸಿದರು. ಸೋನಿಯಾಗೆ ಅಲ್ಲಿಂದ ಹೊರಡುವುದೇ ಕಷ್ಟವಾಯಿತಂತೆ. ಈ ಪ್ರಾಜೆಕ್ಟ್ ಕುರಿತು ಡಾ|| ಕುರಿಯನ್ ಮುಂದೇನೂ ಹೇಳುವುದಿಲ್ಲ. ಅದು ಗುರಿ ಮುಟ್ಟಿರಲಾರದು ಎನಿಸುತ್ತದೆ. ಆದರೆ ರಾಜೀವ್ ಅವರ ಉದ್ದೇಶದ ಬಗ್ಗೆ ಕುರಿಯನ್ರಿಗೆ ತುಂಬ ಮೆಚ್ಚುಗೆಯಿದೆ. ಹಿಂದೆ ೧೯೭೦ರಲ್ಲಿ ಸಚಿವ ಜಗಜೀವನರಾಂ ತಮ್ಮ ಕ್ಷೇತ್ರದಲ್ಲಿ ಖಾಸಗಿ ಡೈರಿ ಸ್ಥಾಪಿಸಲು ಕೋರಿದ್ದನ್ನು ಇದರೊಂದಿಗೆ ಹೋಲಿಸಿ ಅದರಲ್ಲಿ ಬಡವರಿಗೆ ನೆರವಾಗುವ ಉದ್ದೇಶ ಇರಲಿಲ್ಲ; ಬಡವರ ಸಬಲೀಕರಣ ಮತ್ತು ಅದಕ್ಕಾಗಿ ಸಹಕಾರಿ ಸಂಘವೇ ತಮ್ಮ ಧ್ಯೇಯ ಎಂದಿದ್ದಾರೆ.
ಗುರೂಜೀ: ಡಾ|| ಕುರಿಯನ್ ಕಂಡಂತೆ
೧೯೬೭ರಲ್ಲಿ ರಚಿಸಿದ ಒಂದು ಉನ್ನತಾಧಿಕಾರ ಸಮಿತಿಗೆ ಎನ್ಡಿಡಿಬಿ ಅಧ್ಯಕ್ಷರಾಗಿದ್ದ ಡಾ|| ವರ್ಗೀಸ್ ಕುರಿಯನ್ ಅವರನ್ನು ಸದಸ್ಯರಾಗಿ ಸೇರಿಸಿಕೊಂಡರು. ಅದು ಗೋಸಂರಕ್ಷಣೆ ಬಗೆಗಿನ ಸಮಿತಿ. ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು ಅದರ ಅಧ್ಯಕ್ಷರಾದರೆ ಸದಸ್ಯರ ಪುರಿ ಶಂಕರಾಚಾರ್ಯರು, ಆರೆಸ್ಸೆಸ್ ಸರಸಂಘಚಾಲಕ ಎಂ.ಎಸ್. ಗೋಲ್ವಲ್ಕರ್ (ಗುರೂಜಿ), ಅಶೋಕ್ಮಿತ್ರ ಮುಂತಾದವರಿದ್ದರು. ಶಂಕರಾಚಾರ್ಯರು ಸಭೆಗೆ ಜಿಂಕೆಯ ಚರ್ಮ, ದಂಡ-ಕಮಂಡಲುಗಳ ಸಹಿತವೇ ಬರುತ್ತಿದ್ದರು. ಡಾ|| ಕುರಿಯನ್ ಸಿಗರೇಟು ಸೇದುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಸಮಿತಿ ೧೨ ವರ್ಷ ಕ್ರಮ ಪ್ರಕಾರ ಸಭೆಗಳನ್ನು ನಡೆಸಿತು. ಗೋಹತ್ಯೆ ಕುರಿತು ಹಲವರ ಸಂದರ್ಶನ ನಡೆಸಿತು. ಈ ನಡುವೆ ಗೋಹತ್ಯೆಯನ್ನು ಪೂರ್ತಿ ತಡೆಯಬಾರದೆಂಬುದು ಕುರಿಯನ್ ಅವರ ನಿಲವು. ರೋಗಪೀಡಿತ ದನಗಳನ್ನು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ; ಉಪಯುಕ್ತ ದನಗಳನ್ನು ಕೊಲ್ಲಬಾರದು ಎಂದವರು ಹೇಳುತ್ತಿದ್ದರು. ಶಂಕರಾಚಾರ್ಯರು ಅದನ್ನು ವಿರೋಧಿಸಿದಾಗ, “ಎಲ್ಲ ಅನುಪಯುಕ್ತ ದನಗಳನ್ನು ನಿಮ್ಮ ಕಡೆ ಕಳುಹಿಸಿದರೆ ಸಾಕುತ್ತೀರಾ?” ಎಂದು ಕುರಿಯನ್ ಕೇಳಿದರು; ಮತ್ತು ಆಚಾರ್ಯರಲ್ಲಿ ಅದಕ್ಕೆ ಉತ್ತರ ಇರಲಿಲ್ಲವಂತೆ. ಕುರಿಯನ್ ಸಲಹೆ ಮೇರೆಗೆ ಪ್ರಧಾನಿ ಮೊರಾರ್ಜಿ ದೇಸಾಯಿ ಆ ಸಮಿತಿಯನ್ನು ರದ್ದುಪಡಿಸಿದರು.
ಅಲ್ಲಿ ಗುರೂಜಿ ಅವರೊಂದಿಗೆ ಉಂಟಾದ ಸಂಪರ್ಕವನ್ನು ಕುರಿಯನ್ ಹೀಗೆ ವಿವರಿಸಿದ್ದಾರೆ: “ಸಮಿತಿಯ ಸಭೆಗಳ ವೇಳೆ ಉಂಟಾದ ಒಂದು ಅನಿರೀಕ್ಷಿತ ಬೆಳವಣಿಗೆಯೆಂದರೆ ಗೋಲ್ವಲ್ಕರ್ ಮತ್ತು ನಾನು ನಿಕಟ ಸ್ನೇಹಿತರಾದೆವು. ಎಷ್ಟು ನಿಕಟ ಆದೆವೆಂದರೆ ನಾನು ಕೊಠಡಿಗೆ ಬರುವುದನ್ನು ಕಾಣುತ್ತಲೇ ಅವರು ಬಂದು ತಬ್ಬಿಕೊಳ್ಳುತ್ತಿದ್ದರು. ಸಭೆಯ ಅನಂತರ ನನ್ನನ್ನು ಬದಿಗೆ ಕರೆದು ಸಮಾಧಾನಪಡಿಸುತ್ತಿದ್ದರು. “ಶಂಕರಾಚಾರ್ಯರ ವಿಷಯದಲ್ಲಿ ಏಕೆ ಸುಮ್ಮನೆ ತಾಳ್ಮೆ ಕಳೆದುಕೊಳ್ಳುತ್ತೀರಿ? ಅವರ ವಿಷಯದಲ್ಲಿ ನನ್ನ ಅಭಿಪ್ರಾಯ ಕೂಡ ಅದೇ. ಸುಮ್ಮನೆ ಜಗಳಾಡಬೇಡಿ. ಸುಮ್ಮನೆ ಅಲಕ್ಷಿಸಿ” ಎಂದು ಹೇಳುತ್ತಿದ್ದರು.
“ಗೋಲ್ವಲ್ಕರ್ ಭರ್ಜರಿ ಆಳೇನೂ ಅಲ್ಲ; ಐದಡಿ ಎತ್ತರವಿರಬಹುದಷ್ಟೆ. ಆದರೆ ಅವರಿಗೆ ಕೋಪ ಬಂದಾಗ ಕಣ್ಣುಗಳು ಬೆಂಕಿಯನ್ನು ಉಗುಳುತ್ತಿದ್ದವು. ಅವರ ವಿಷಯದಲ್ಲಿ ನನಗೆ ತುಂಬ ಇಷ್ಟವಾದ ವಿಷಯವೆಂದರೆ ಅವರೊಬ್ಬ ಅತ್ಯಂತ ತೀವ್ರ ದೇಶಪ್ರೇಮಿ ಭಾರತೀಯ. ಅವರು ತಮ್ಮ ಕಲ್ಪನೆಯ ರಾಷ್ಟ್ರೀಯತೆಯನ್ನು ತಮ್ಮದೇ ರೀತಿಯಲ್ಲಿ ಬೋಧಿಸುತ್ತ ಹೋಗುತ್ತಿದ್ದಾರೆಂದು ನೀವು ವಾದಿಸಬಹುದು; ಆದರೆ ಯಾರೂ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ. ಒಂದು ದಿನ ಗೋಹತ್ಯೆ ನಿಷೇಧಿಸಬೇಕೆಂದು ತೀವ್ರವಾಗಿ ವಾದಿಸಿದ ಬಳಿಕ ಅವರು ನನ್ನ ಬಳಿ ಬಂದು, “ಕುರಿಯನ್, ಈ ಗೋಹತ್ಯೆ ವಿಷಯವನ್ನು ನಾನೇಕೆ ಅಷ್ಟು ದೊಡ್ಡದು ಮಾಡುತ್ತಿದ್ದೇನೆ ಗೊತ್ತೆ?” ಎಂದು ಕೇಳಿದರು. “ಹೇಳಿ, ಅದುಬಿಟ್ಟರೆ ನೀವು ತುಂಬ ವಿಚಾರವಂತರಿದ್ದೀರಿ; ಅದೇಕೆ ಹಾಗೆ?” ಎಂದು ಕೇಳಿದೆ.
“ಗೋಹತ್ಯೆ ನಿಷೇಧದ ಬಗ್ಗೆ ಈ ಮನವಿಗೆ ೧೦ ಲಕ್ಷ ಸಹಿ ಸಂಗ್ರಹಿಸಿ ರಾಷ್ಟçಪತಿಗೆ ನೀಡಬೇಕೆಂದಿದ್ದೇನೆ. ಇದಕ್ಕಾಗಿ ದೇಶಾದ್ಯಂತ ಸಂಚರಿಸುತ್ತಿದ್ದೇನೆ. ಹಾಗೆ ಒಮ್ಮೆ ಉತ್ತರಪ್ರದೇಶದ ಒಂದು ಹಳ್ಳಿಗೆ ಹೋಗಿದ್ದೆ. ಅಲ್ಲೊಬ್ಬ ಮಹಿಳೆ ಪತಿಯನ್ನು ಕೆಲಸಕ್ಕೆ, ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ಈ ಮನವಿಗೆ ಸಹಿ ಸಂಗ್ರಹಿಸಲು ಮನೆಮನೆಗೆ ಸುತ್ತುತ್ತಿದ್ದಳು. ಆಕೆ ಇಷ್ಟೇಕೆ ಶ್ರಮ ವಹಿಸುತ್ತಿದ್ದಾಳೆಂದು ನೋಡುವಾಗ ತನ್ನ ದನಕ್ಕಾಗಿ ಮಾಡುತ್ತಿದ್ದಾಳೆಂದು ತಿಳಿಯಿತು. ಒಂದು ದನದಲ್ಲಿ ಅಷ್ಟೊಂದು ಶಕ್ತಿಯಿದೆ. ಗೋವಿನ ಮೂಲಕ ದೇಶವನ್ನು ಒಗ್ಗೂಡಿಸಲು ಸಾಧ್ಯ; ಅದು ದೇಶದ ಸಂಸ್ಕೃತಿಯ ಪ್ರತೀಕ. ಗೋಹತ್ಯೆ ನಿಷೇಧದಿಂದ ಐದೇ ವರ್ಷದಲ್ಲಿ ದೇಶವನ್ನು ಒಗ್ಗೂಡಿಸಬಹುದು. ನಮ್ಮ ಭಾರತೀಯತ್ವದ ಪ್ರಕಟೀಕರಣಕ್ಕೆ ನಾನು ಗೋವನ್ನು ಬಳಸುತ್ತೇನೆ” ಎಂದರವರು.
“ಗೋಹತ್ಯೆ ನಿಷೇಧವನ್ನು ನಾನು ಒಪ್ಪದಿದ್ದರೂ ಗೋವಿನ ಮೂಲಕ ಅವರು ಭಾರತೀಯರಲ್ಲಿ ದೇಶದ ಬಗ್ಗೆ ಹೆಮ್ಮೆ ಮೂಡಿಸಲು ಯತ್ನಿಸುತ್ತಿದ್ದಾರೆಂಬುದು ನನಗೆ ಖಚಿತವಾಯಿತು. ಅವರ ವ್ಯಕ್ತಿತ್ವದ ಈ ಮುಖ ನನಗೆ ತುಂಬ ಇಷ್ಟವಾಯಿತು ಕೂಡ. ಗಾಂಧಿ ಹತ್ಯೆಯ ಸಂಚಿನಲ್ಲಿ ಗೋಲ್ವಲ್ಕರ್ ಇದ್ದಾರೆಂದು ಕೆಲವರು ಆರೋಪಿಸುತ್ತಾರೆ. ನಾನು ಎಂದೂ ಕೂಡ ಅದನ್ನು ನಂಬಲಾರೆ. ನನ್ನ ಪ್ರಕಾರ ಅವರೊಬ್ಬ ಪ್ರಾಮಾಣಿಕ ಮತ್ತು ನೇರಮಾತಿನ ವ್ಯಕ್ತಿ; ಮತ್ತು ಅವರೊಬ್ಬ ಹಿಂದೂ ಮತಾಂಧನಾಗಿದ್ದರೆ ನನ್ನ ಸ್ನೇಹಿತರಾಗಲು ಸಾಧ್ಯವಿರಲಿಲ್ಲ.
“ಕೊನೆಯ ದಿನಗಳು ಸಮೀಪಿಸಿದಾಗ ಗುರೂಜೀ ಪುಣೆಯಲ್ಲಿದ್ದರು. ಆಗ ರಾಜ್ಯಗಳ ಆರೆಸ್ಸೆಸ್ ಮುಖ್ಯಸ್ಥರನ್ನು ಕರೆದು ಅವರೊಂದಿಗೆ ಮಾತನಾಡಿದರು. ಗೋಲ್ವಲ್ಕರ್ ನಿಧನದ ಅನಂತರ ಅವರಲ್ಲೊಬ್ಬರು ನನ್ನ ಕಚೇರಿಗೆ ಬಂದರು. ನಾನು ಗುಜರಾತಿನವ ಎಂದಾಗ ಗುರೂಜೀ ‘ನೀನು ಗುಜರಾತಿಗೆ ಮರಳಿದಾಗ ಡಾ|| ಕುರಿಯನ್ ಭೇಟಿ ಮಾಡಿ ಅವರಿಗೆ ನನ್ನ ಆಶೀರ್ವಾದ ತಿಳಿಸು’ ಎಂದರು. ಅದಕ್ಕಾಗಿ ಬಂದಿದ್ದೇನೆ ಎಂದಾತ ಹೇಳಿದರು. ಆಗ ನಾನು ಭಾವುಕನಾದೆ; ಅವರಿಗೆ ಕೃತಜ್ಞತೆ ಹೇಳಿದೆ. ‘ನೀವು ಕ್ರೈಸ್ತರಾದರೂ ಇಡೀ ಗುಜರಾತಿನಲ್ಲಿ ಗುರೂಜೀ ನಿಮಗೆ ಮಾತ್ರ ಏಕೆ ಸಂದೇಶ ಕಳುಹಿಸಿದ್ದಾರೆ?’ ಎಂದಾತ ಕೇಳಿದಾಗ, ‘ನನಗೆ ಗೊತ್ತಿಲ್ಲ; ನೀವು ಅವರನ್ನೇ ಕೇಳಬೇಕಿತ್ತು’ ಎಂದೆ. ಇದು ಇಬ್ಬರು ಅಪ್ಪಟ ಪ್ರಾಮಾಣಿಕ ವ್ಯಕ್ತಿಗಳ ಹೃದಯಸಂಬಂಧ!
ಸಹಕಾರಿಗಳಿಗೆ ಪಕ್ಷ ಅಮುಖ್ಯ
೧೯೯೦ರ ದಶಕದಲ್ಲೊಮ್ಮೆ ಕೈರಾ ಸಹಕಾರಿ ಸಂಸ್ಥೆಗೆ ಕೇಂದ್ರ ಕೃಷಿ ಮಂತ್ರಿ ಹಾಗೂ ಉಪಪ್ರಧಾನಿ ದೇವೀಲಾಲ್ ಆಗಮಿಸಿದ್ದರು. ಜೊತೆಗೆ ಗುಜರಾತ್ ಮುಖ್ಯಮಂತ್ರಿ ಚಿಮಣ್ಭಾಯಿ ಪಟೇಲ್ ಕೂಡ ಇದ್ದರು. ಅಲ್ಲಿ ಸುಮಾರು ೫೦ ಸಾವಿರ ಜನ ರೈತರು ಸೇರಿದ್ದರು. ದೇವೀಲಾಲ್ ರೈತರ ನಡುವೆ ಹೋಗಿ ಮಾತು ಆರಂಭಿಸಿದರು. ಒಬ್ಬ ರೈತನಾಯಕನಲ್ಲಿ ‘ನೀನು ಯಾವ ಪಕ್ಷ?’ ಎಂದು ಕೇಳಿದರು. ಆತ ಜನತಾದಳ ಎಂದ; ಅವರು ಮುಗುಳ್ನಕ್ಕರು. ಅನಂತರ ಇನ್ನೊಬ್ಬನಲ್ಲಿ ಅದೇ ಪ್ರಶ್ನೆಯನ್ನು ಕೇಳಿದರು. ಆತ ‘ಕಾಂಗ್ರೆಸ್’ ಎಂದಾಗ ದೇವೀಲಾಲ್ ಗಲಿಬಿಲಿಗೊಂಡರು. ಮೂರನೆಯ ರೈತ ನಾಯಕನಲ್ಲಿ ಅದೇ ಪ್ರಶ್ನೆಯನ್ನು ಕೇಳಿದಾಗ ಆತ ‘ಭಾಜಪಾ’ ಎಂದ. ಗೊಂದಲಕ್ಕೊಳಗಾದ ದೇವೀಲಾಲ್ “ವಿವಿಧ ಪಕ್ಷಗಳ ನೀವು ಇಲ್ಲಿ ಒಟ್ಟಾದದ್ದು ಹೇಗೆ?” ಎಂದು ಕೇಳಿದರು. ಅದಕ್ಕೆ “ಸಹಕಾರಿ ಸಂಸ್ಥೆಯೊಳಗೆ ನಾವು ಪಕ್ಷದ ಜನ ಅಲ್ಲ; ಮೊದಲಿಗೆ ರೈತರು” ಎನ್ನುವ ಉತ್ತರ ಬಂತು. ಅನಂತರ ನಡೆದ ಚರ್ಚೆಯಲ್ಲಿ ರೈತರು ಕುರಿಯನ್ರನ್ನು ಬಹುವಾಗಿ ಹೊಗಳಿದರು. ಅಂದಿನಿಂದ ದೇವೀಲಾಲ್ ಕುರಿಯನ್ರ ಪಕ್ಕಾ ಬೆಂಬಲಿಗನಾದರು. ಚಿಮಣ್ಭಾಯಿ ಕುರಿಯನ್ರನ್ನು ‘ಗ್ರೇಟ್ ಗುಜರಾತಿ’ ಎಂದು ಹೊಗಳಿದರು. ‘ಇದು ರೈತರಿಂದ ನನಗೆ ದೊರೆತ ಪ್ರಶಸ್ತಿ’ ಎಂದು ಡಾ|| ಕುರಿಯನ್ ಸಂತೋಷ ಸೂಚಿಸಿದ್ದಾರೆ.