ಆಶ್ರಮಕ್ಕೆ ಬಂದು ಇನ್ನೇನು ಪರ್ಣಕುಟಿಯ ಒಳಗೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ, “ರೇಣುಕಾ, ನಿಲ್ಲಲ್ಲಿ. ಇದೇನು ಇಷ್ಟು ತಡಮಾಡಿದೆ? ಈ ಕಡೆಯ ಯೋಚನೆಯೇ ಇಲ್ಲದವಳಂತೆ ನದಿ ತೀರದಲ್ಲಿ ವಿಹರಿಸುತ್ತಿದ್ದೆಯೇನು? ಮಾಡಬೇಕಾದ ಕರ್ತವ್ಯವೂ ಮರೆತುಹೋಯಿತೆ? ಅಥವಾ ನೆನಪಿದ್ದರೂ ನಿರ್ಲಕ್ಷ್ಯವೆ? ಏನೀ ವಿಳಂಬದ ಅರ್ಥ?” ನನ್ನ ಪತಿದೇವರ ಕಂಚಿನಂತಹ ಕಂಠ ಮೊಳಗಿತು.
ಎಂದಿನಂತೆ ಆ ದಿನವೂ ಪ್ರಭಾತ ಕಾಲದಲ್ಲಿ ನರ್ಮದೆಯತ್ತ ಹೊರಟಿದ್ದೆ. ನೀರು ತರುವುದಕ್ಕೆ ಕೈಯಲ್ಲಿ ಒಂದು ಕೊಡಪಾನ. ಆಶ್ರಮದಿಂದ ಬಹಳ ದೂರವೇನಲ್ಲ ನದಿ. ಆದರೆ ಬಿಸಿಲ ಝಳ ಪ್ರಖರವಿದ್ದಾಗ ತುಸು ಆಯಾಸವೆನಿಸುತ್ತಿತ್ತು. ಇಂದು ಬೆಳಗಿನ ಹೊತ್ತು ಸೂರ್ಯದೇವನ ಕಿರಣಗಳು ಎಳೆತನವನ್ನು ಕಳಕೊಳ್ಳದೆ ಮೈಗೂ ಮನಸಿಗೂ ಹಿತವಾದ ಅನುಭವವನ್ನು ನೀಡುತ್ತಿದ್ದವು.
ಸುತ್ತಣ ಪ್ರಕೃತಿಯ ಚೆಲುವು ನನ್ನ ಕಣ್ಣು, ಮನಸ್ಸುಗಳನ್ನು ಸೆಳೆಯುತ್ತಿತ್ತು. ಸಾಂದ್ರವಾಗಿ ಬೆಳೆದ ಹಸಿರು, ಗಿಡ, ಮರ, ಬಳ್ಳಿಗಳಲ್ಲಿ ಅರಳಿದ ಹೂಗಳ ಕಂಪು, ಹದವಾಗಿ ಬೀಸುತ್ತಿದ್ದ ಗಾಳಿ, ದೂರದಲ್ಲಿ ನಲಿಯುತ್ತದ್ದ ಚಿಗರೆಗಳ ಗುಂಪು, ಪಕ್ಷಿಗಳ ಇಂಪಾದ ಕೂಜನ ಇವೆಲ್ಲ ಒಟ್ಟಾಗಿ, ನನ್ನೊಳಗೂ ಏನೋ ಒಂದು ಮುದವನ್ನು ಹುಟ್ಟಿಸುತ್ತಿದ್ದವು. ಮೈಗೆ ಹಿತವೂ ಮನಸ್ಸಿಗೆ ಮುದವೂ ಇದ್ದಾಗ ಕಂಡುದೆಲ್ಲ ಸುಂದರವಾಗುತ್ತದೆ ಕೇಳಿಸಿದ್ದೆಲ್ಲ ಸಂಗೀತವಾಗುತ್ತದೆ. ಅಥವಾ ಸುಂದರ ದೃಶ್ಯಗಳೂ, ಮಧುರವಾದ ದನಿಗಳೂ ಮೈಮನಗಳಿಗೆ ಆನಂದಾನುಭೂತಿಯನ್ನು ಕಲ್ಪಿಸುತ್ತವೆ. ಜೀವನದ ನೋವುಗಳನ್ನು ಮರೆಸುತ್ತವೆ. ಬಹುಶಃ ನನಗೂ ಹಾಗೆಯೆ ಆಗಿದ್ದಿರಬೇಕು.
ಇಷ್ಟಕ್ಕೂ ಜೀವನದಲ್ಲಿ ನೋವು, ಯಾತನೆಗಳು ಇದ್ದರೆ ತಾನೆ ಅವುಗಳನ್ನು ಮರೆಯುವ ಸನ್ನಿವೇಶ ಉಂಟಾಗುವುದು. ನನಗೆ ಯಾವ ಸಂಕಷ್ಟಗಳೂ ಇಲ್ಲ. ಸದಾ ಪ್ರಿಯವಾಗುವಂತೆ ನಡೆದುಕೊಳ್ಳುವ ಮಕ್ಕಳು, ಆಶ್ರಮವಾಸಿಗಳು ತೋರುವ ಗೌರವಾದರಗಳು ಇವೆಲ್ಲ ನನಗೆ ಸಂತೃಪ್ತಿಯನ್ನು ಕೊಡತಕ್ಕವು. ಮತ್ತೆ ಮತ್ತೆ ಅಂತರಂಗವನ್ನು ಕೆದಕಿದರೆ, ನನ್ನ ಪತಿದೇವರ ಶೀಘ್ರ ಕೋಪ ಮಾತ್ರ ತುಸು ಆತಂಕದ ವಿಚಾರವೆಂಬ ಉತ್ತರ ಬಂದೀತೋ ಏನೋ. ಅದು ನಿತ್ಯ ಕೊರಗಿನ ವಸ್ತುವಲ್ಲ. ಹೆಣ್ಣಿಗೆ ಗಂಡನ ಕೋಪ ಒಮ್ಮೆ ಅಭ್ಯಾಸವಾದರೆ ಆ ಕುರಿತು ಅಂಜಿಕೆ ಇಲ್ಲವಾಗುತ್ತದೆ. ಯಾವಾಗ ಗಂಡ ಕೋಪಗೊಳ್ಳುತ್ತಾನೆ ಎಂದು ಗ್ರಹಿಸುವ ಬುದ್ಧಿವಂತಿಕೆ ಬೇಕು ಅಷ್ಟೆ. ನನ್ನ ಮದುವೆಯಾಗಿ ಇಷ್ಟು ದೀರ್ಘಕಾಲ ಗಂಡನ ಒಡನಾಟದಲ್ಲಿ ಕಳೆದ ಬಳಿಕ, ಅವರ ಕೋಪದ ಕುರಿತು ಎಚ್ಚರ ನನಗೆ ಬಾರದಿದ್ದೀತೆ? ಕೋಪ ಬರುವ ಸನ್ನಿವೇಶಗಳನ್ನು ತಪ್ಪಿಸುವ ಉಪಾಯಗಳನ್ನು ಬಲ್ಲವಳಾಗಿದ್ದೆ. ಹೀಗೆ ಗೃಹಿಣಿಯೊಬ್ಬಳು ಬಯಸುವ ಸಂತೋಷವನ್ನು ಅನುಭವಿಸುತ್ತಿದ್ದೇನೆ.
ಋಚೀಕ ಪುತ್ರ ಜಮದಗ್ನಿ ಮಹರ್ಷಿ ನನ್ನ ಗಂಡ. ನಾನು ಕ್ಷತ್ರಿಯಾಣಿ. ರೇಣು ಮಹಾರಾಜನ ಮಗಳು ನಾನು. ಬ್ರಾಹ್ಮಣರು ಮತ್ತು ಕ್ಷತ್ರಿಯರು ವೈವಾಹಿಕ ಸಂಬಂಧ ಬೆಳೆಸುವುದು ವಿರಳವಾಗಿದ್ದರೂ, ಅದು ನಿಷಿದ್ಧ ಆಗಿರಲಿಲ್ಲ. ನನ್ನ ಮದುವೆಯೂ ಅಂತಹ ಒಂದು ವಿರಳ ಘಟನೆ. ಅದು ನಡೆದುದು ಹೀಗೆ.
ಬಹಳ ಹಿಂದೆ ಒಮ್ಮೆ ಜಮದಗ್ನಿ ಋಷಿಗಳು ನಮ್ಮ ರಾಜ್ಯಕ್ಕೆ ಅಂದರೆ ಅರಮನೆಗೆ ಬಂದಿದ್ದರು. ನಮ್ಮ ತಂದೆಗೆ ಅವರ ಕುರಿತು ಬಹು ಆದರ. ಈ ಕಾರಣದಿಂದ ನಮ್ಮಪ್ಪ ಬಹಳ ಗೌರವಪೂರ್ವಕ ಉಪಚಾರ ಮಾಡಿದ. ಈ ಆತಿಥ್ಯದಿಂದ ಋಷಿವರೇಣ್ಯರು ಪರಮ ಸಂತುಷ್ಟರೂ ಆದರು. ವಿಶಿಷ್ಟವಾದ ಶಕ್ತಿಯುಳ್ಳವರು ತಮ್ಮ ಮನಸ್ಸು ಸಂತುಷ್ಟವಾದಾಗ ಆ ಸಂತುಷ್ಟಿಗೆ ಕಾರಣರಾದವರಿಗೆ ಅನುಗ್ರಹ ಮಾಡುವುದು ಅಥವಾ ವರ ಇತ್ಯಾದಿ ಏನಾದರೂ ಕೊಡುವುದು ಸಹಜ. ಆದರೆ ಈ ಮಹರ್ಷಿ ಕೊಡುವುದಿರಲಿ, ತಾನೇ ಬೇಡಿದರು. ಬೇಡಿದ್ದು ವರವನ್ನಲ್ಲ, ವಧುವನ್ನು. ಸುಂದರಿಯಾಗಿದ್ದ ಅರಸನ ಪುತ್ರಿಯನ್ನು. ಅರ್ಥಾತ್ ನನ್ನನ್ನು.
ನನ್ನಪ್ಪ ಮರುಮಾತಿಲ್ಲದೆ ಸಮ್ಮತಿಸಿದರು. ನನಗೂ ತರುಣನಾದ ಈ ವರ್ಚಸ್ವೀ ಋಷಿಯನ್ನು ನಿರಾಕರಿಸುವುದಕ್ಕೆ ಮನಸ್ಸು ಬರಲಿಲ್ಲ. ಹಾಗಾಗಿ ನಾನೂ ಒಪ್ಪಿದೆ. ಮದುವೆಯಾಯಿತು. ಮಕ್ಕಳು ಹುಟ್ಟಿದರು. ನನಗೂ ಆಶ್ರಮವಾಸ, ಅಲ್ಲಿನ ದಿನಚರಿ, ವೈದಿಕ ಕರ್ಮಕಾಂಡಗಳ ಪರಿಚಯವೂ, ಅಭ್ಯಾಸವೂ ಆಯಿತು. ಒಂದು ಅರ್ಥದಲ್ಲಿ ನಾನು ಬ್ರಾಹ್ಮಣಳೇ ಆದೆ. ನನ್ನ ಪತಿಗೆ ನನ್ನ ಕುರಿತು ಅಪಾರವಾದ ಪ್ರೇಮವಿತ್ತು. ಬಿಸಿಲಲ್ಲಿ ಬಳಲುತ್ತ ನದಿಯ ನೀರನ್ನು ಹೊತ್ತು ತರುತ್ತಿದ್ದ ನನ್ನ ಸಂಕಟವನ್ನು ಕಂಡು, ನೊಂದುಕೊಳ್ಳುತ್ತಿದ್ದರು ಅವರು. ಒಂದು ಸಲವಂತೂ ಸೂರ್ಯನ ತಾಪವನ್ನು ತಡೆದುಕೊಳ್ಳಲಾರದೆ ನನ್ನವರು ಬಹುವಾಗಿ ಕುಪಿತರಾದರು. ಸಾಮಾನ್ಯರಾಗಿದ್ದರೆ ಅಷ್ಟೇ ಪರಿಣಾಮ. ಆದರೆ ಪ್ರಚಂಡ ತಪಸ್ವಿಗಳಾದ ನನ್ನ ಪತಿ ಅದಕ್ಕೆ ಪರಿಹಾರವನ್ನು ಕಂಡುಕೊಂಡರು.
ತಪಸ್ವಿಗಳ ಕೋಪ ಹುಸಿಯಾಗುವುದಕ್ಕುಂಟೆ?
ಮಹರ್ಷಿಗಳು ತಮ್ಮಲ್ಲಿದ್ದ ವಿಶಿಷ್ಟವಾದ ವೈಷ್ಣವ ಧನುಸ್ಸನ್ನು ಎತ್ತಿಕೊಂಡು ಸೂರ್ಯನನ್ನು ತುಡುಕುವುದಕ್ಕೆ ಮುಂದಾದರು. “ರೇಣುಕಾ, ಬಾಣಗಳನ್ನು ತಂದುಕೊಡು” ಎಂದು ಆಜ್ಞಾಪಿಸಿದರು. ನಾನು ಬಾಣಗಳನ್ನು ತಂದುಕೊಟ್ಟೆ. ಅದನ್ನೆಲ್ಲ ಸೂರ್ಯನತ್ತ ಪ್ರಯೋಗಿಸಿದರು. ನಾನು ನಿರಂತರವಾಗಿ ಬಾಣಗಳನ್ನು ತಂದುಕೊಡುತ್ತಿದ್ದೆ. ಸೂರ್ಯನು ಇದನ್ನು ತಿಳಿದು, ತನ್ನ ಪ್ರಖರತೆಯನ್ನು ಹೆಚ್ಚಿಸಿದ. ನಾನು ತಲೆತರುಗಿ ಬಿದ್ದುಬಿಟ್ಟೆ. ಮತ್ತೆ ಏನಾಯಿತೋ ಗೊತ್ತಿಲ್ಲ. ಎಚ್ಚರಗೊಂಡಾಗ, ನನ್ನನ್ನು ಉಪಚರಿಸುತ್ತಿದ್ದ ಪತಿದೇವರ ಪ್ರಸನ್ನ ಮುಖ ಕಾಣಿಸಿತು.
“ರೇಣುಕಾ, ಇದೋ ನೋಡು, ಸೂರ್ಯದೇವನಿಂದ ಅನುಗ್ರಹೀತವಾದ ಸಾಧನಗಳು ಇವು” ಎಂದು ಪತ್ರವನ್ನೂ, ಪಾದುಕೆಗಳನ್ನೂ ತೋರಿಸಿದರು.
ಹೀಗೆ ನನ್ನ ಮೇಲಿನ ಪ್ರೇಮವೇ ಕಾರಣವಾಗಿ, ಜಗತ್ತಿನ ಜನರು ಕೊಡೆಯನ್ನು ಮತ್ತು ಪಾದುಕೆಗಳನ್ನು ಬಳಸುವುದಕ್ಕೆ ಕಲಿತರು. ನನಗೂ ತುಂಬ ಪ್ರಯೋಜನವಾಯಿತು. ಹೀಗೆ ನನ್ನವರು ನನ್ನ ಮೇಲೆ ಪ್ರೀತಿಯ ಮಳೆ ಸುರಿಸುತ್ತಿದ್ದರು.
ಗಂಡನ ಕೋಪ ಎಂದೆನಲ್ಲ, ಅದರ ಕುರಿತು ಹೇಳಬೇಕು. ಸ್ವಭಾವತಃ ಮುಂಗೋಪಿ ನನ್ನ ಗಂಡ. ಅದಕ್ಕೆ ಅವರ ಹಿನ್ನೆಲೆಯೂ ಕಾರಣ ಇರಬಹುದು. ನಾನು ಕ್ಷತ್ರಿಯಾಣಿ. ನನ್ನಲ್ಲಿದ್ದ ಕ್ಷಾತ್ರ ನನ್ನ ಮಕ್ಕಳಲ್ಲಿ ಅಲ್ಪಾಂಶವಾದರೂ ಬರುವುದಷ್ಟೆ. ಹಾಗೆಯೆ ಜಮದಗ್ನಿ ಮಹರ್ಷಿಗಳಿಗೂ ಒಂದು ಕ್ಷಾತ್ರ ಸಂಪರ್ಕ ಪೂರ್ವದಲ್ಲೇ ಇತ್ತು. ಅದು ಹೇಗೆಂದರೆ ಜಮದಗ್ನಿ ಮಹರ್ಷಿಯ ತಾಯಿ ಸತ್ಯವತಿ ಅಂದರೆ ನನ್ನ ಅತ್ತೆ ಕ್ಷತ್ರಿಯಾಣಿ. ಕನ್ಯಾಕುಬ್ಜದ ದೊರೆ ಗಾಧಿ ಮಹಾರಾಜನ ಮಗಳು ಸತ್ಯವತಿ. ಅವಳನ್ನು ಋಚೀಕ ಮಹರ್ಷಿ ಮದುವೆಯಾದರು. ಅವರಿಬ್ಬರ ಮಗನಾಗಿ ಹುಟ್ಟಿದವರು ಈ ಜಮದಗ್ನಿ. ಹಾಗಾಗಿ ಕ್ಷಾತ್ರದ ಲಕ್ಷಣವೊ ಎಂಬಂತೆ ಸಿಟ್ಟು ಸ್ವಭಾವವಾಗಿ ಬಂದಿದೆ ಎಂದು ಕಾಣುತ್ತದೆ. ಸಿಟ್ಟು ಬಂದಾಗ ಮಾತ್ರ ಉಗ್ರತೆಯೇ ಹೊರತು ಉಳಿದ ಹೊತ್ತಿಗೆ ಶಾಂತರೂಪಿ ನನ್ನ ಗಂಡ. ಹಾಗಾಗಿ ಅವರ ಕೋಪ ನನಗೆ ಆತಂಕವಾಗಿ ಕಾಡುತ್ತಿರಲಿಲ್ಲ.
ನಮ್ಮಿಬ್ಬರ ದಾಂಪತ್ಯ ಹಿತವಾಗಿಯೇ ಇತ್ತು. ದಾಂಪತ್ಯದ ಫಲವಾಗಿ ಐವರು ಮಕ್ಕಳೂ ಜನಿಸಿದರು. ಅವರಲ್ಲಿ ಕೊನೆಯವನಾದ ರಾಮನಿಗೆ ವಿಶಿಷ್ಟವಾದ ಹಿನ್ನೆಲೆಯೂ ಇತ್ತು ಅನ್ನುತ್ತಿದ್ದರು. ಅವನು ಏನೋ ದೊಡ್ಡ ಸಾಧನೆಯನ್ನು ಮಾಡಲಿದ್ದಾನೆ ಎಂಬ ನಿರೀಕ್ಷೆ ಅನೇಕರಲ್ಲಿತ್ತು. ಅದಕ್ಕೆ ಪೂರಕವೋ ಎನ್ನುವ ಹಾಗೆ ಅವನು ಕೊಡಲಿಯನ್ನು ಆಯುಧವಾಗಿ ಪಡೆದು ಅದರ ಪ್ರಯೋಗದಲ್ಲಿ ಪರಿಣತನಾದ. ಅಲ್ಲದೆ ಧನುರ್ವಿದ್ಯೆಯಲ್ಲಿಯೂ ನಿಷ್ಣಾತ ಎನಿಸಿದ. ಹಿಮಾಲಯದತ್ತ ಹೋಗಿ ಪರಮೇಶ್ವರನನ್ನು ಮೆಚ್ಚಿಸಿ ಅವನ ಅನುಗ್ರಹ ಸಂಪಾದನೆ ಮಾಡಿದ. ಬ್ರಾಹ್ಮಣರಿಗೆ ಆಯುಧ ಯಾಕೆ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದರೂ, ನಾನು ಕೇಳಹೋಗಲಿಲ್ಲ. ಅದಕ್ಕೆ ಪೂರ್ವದ ದೈವಸಂಕಲ್ಪ ಕಾರಣ ಇರಬಹುದು ಎಂದುಕೊಂಡೆ.
ಹೀಗೆ ಇದನ್ನೆಲ್ಲ ಯೋಚಿಸುತ್ತ ನದಿಯ ಸಮೀಪ ಬಂದೆ.
ಇದೇನು ವಿಚಿತ್ರ?
ಯಾವತ್ತೂ ಪ್ರಶಾಂತವಾಗಿ ಹರಿಯುವ ತಿಳಿನೀರು ಇಂದು ಕಲಕಿ ಬಗ್ಗಡವಾಗಿದೆ. ಸ್ಫಟಿಕ ಸದೃಶವಾದ ಜಲ ಮಲಿನವಾಗಿ ಕೆಸರಿನಂತೆ ಕಾಣುತ್ತಿದೆ. ಯಾಕೆ ಹೀಗಾಯ್ತು? ನದಿ ಪ್ರವಾಹ ಹರಿದು ಬರುತ್ತಿದ್ದ ದಿಕ್ಕಿನತ್ತ ನೋಡಿದೆ. ಅಲ್ಲಿ ಜನಸಂದಣಿ ನದಿಗಿಳಿದು ನೀರನ್ನು ಕಲಕುತ್ತಿದೆ. ಇದೇನು ಎಂದೂ ಇಲ್ಲದ ಜಲಕ್ರೀಡೆ, ಋಷ್ಯಾಶ್ರಮದ ಸನಿಹ, ಯಾರಿದು? ನಾಲ್ಕು ಹೆಜ್ಜೆ ನಡೆದು ಕೊಂಚ ಸಮೀಪದಿಂದ ನೋಡಿದೆ. ಆಗ ಅರ್ಥವಾಯಿತು. ಮಾಹಿಷ್ಮತಿಯ ಅರಸ ಕಾರ್ತವೀರ್ಯಾರ್ಜುನ ತನ್ನ ರಾಣಿಯರ ಜತೆ ಜಲಕ್ರೀಡೆಗೆ ಇಳಿದಿದ್ದಾನೆ. ಅದರ ಪರಿಣಾಮ ಇದು.
ಕಾರ್ತವೀರ್ಯನ ಕೀರ್ತಿಯನ್ನು ನಾನೂ ಕೇಳಿದವಳೇ. ದಿಗ್ವಿಜಯವನ್ನು ಮಾಡಿ, ಬಹುಮಂದಿ ರಾಜರನ್ನು ಗೆದ್ದು ಚಕ್ರವರ್ತಿಯಾದವನು. ಯಜ್ಞ, ದಾನ, ತಪಸ್ಸು ಇವುಗಳನ್ನೆಲ್ಲ ಮಾಡಿ ಕೀರ್ತಿಶಾಲಿಯಾದವನು. ಪರಾಕ್ರಮಿ. ಆತನಿಗೆ ಯುದ್ಧಕಾಲದಲ್ಲಿ ಸಾವಿರ ಕೈಗಳು ಮೂಡಿಕೊಳ್ಳುತ್ತಿದ್ದವು ಎನ್ನುವ ಪ್ರತೀತಿ ಇತ್ತು. ಇದು ಅವನ ಗುರು ದತ್ತಾತ್ರೇಯರ ಅನುಗ್ರಹವಂತೆ. ಇರಲಿ ನನಗೇನು?
ಹಾಗೆಂದು ಒಂದು ಕಾಲದಲ್ಲಿ ನನ್ನ ಕುರಿತು ಅವನಿಗೆ ಹಂಬಲವಿತ್ತು ಅಂತ ತಂದೆಯವರು ಹೇಳುತ್ತಿದ್ದರು. ನನ್ನ ಕೈಹಿಡಿಯ ಬಯಸಿದ್ದನಂತೆ. ಅವನು ಪ್ರಕಟವಾಗಿ ಕೇಳಲಿಲ್ಲವೊ ಅಥವಾ ತಂದೆಯವರು ಕೊಡಲಿಲ್ಲವೊ ಗೊತ್ತಿಲ್ಲ. ಅವನು ಯದುವಂಶೀಯ ಎಂಬ ಕಾರಣವಿರಲೂ ಸಾಕು. ನನಗೆ ಆ ಕುರಿತು ಕುತೂಹಲವೇನೂ ಇರಲಿಲ್ಲ. ಅವನ ಜಲಕ್ರೀಡೆಯನ್ನು ನೋಡಿದಾಗ ಇದೆಲ್ಲ ನೆನಪಿಗೆ ಬಂತು, ಅಷ್ಟೇ. ಅಲ್ಲದೆ ಜಮದಗ್ನಿ ಮಹರ್ಷಿಯ ಪತ್ನಿಯಾಗಿ ಸುಖವಾಗಿ ದಾಂಪತ್ಯ ನಡೆಸುತ್ತಿರುವ ನನಗೆ ಅನ್ಯಾಸಕ್ತಿ ಬರುವ ಪ್ರಮೇಯವೂ ಇಲ್ಲ. ಆದರೆ ಆ ಕ್ರೀಡೆಯನ್ನು ನೋಡುತ್ತಿದ್ದಾಗ, ನಾನು ರಾಜಕುಮಾರಿಯಾಗಿದ್ದಾಗ ಸಖಿಯರ ಜತೆ ನೀರಾಟವಾಡಿದ ನೆನಪು ಬಂದುದು ಸುಳ್ಳಲ್ಲ. ಈಗ ಹಾಗೆ ಆಟವಾಡುವ ಬಯಕೆಯಾದರೂ, ನನ್ನ ಪತಿ ಇದಕ್ಕೆ ಮನ ಮಾಡಬೇಕಲ್ಲ. ತಪಸ್ವಿ ಜನರಿಗೆ ಜಲಕ್ರೀಡೆಯೆ? ಮನಸ್ಸಾಗಲಿ, ವಯಸ್ಸಾಗಲಿ ಪೂರಕವೂ ಅಲ್ಲವಲ್ಲ.
ಸದ್ಯ ನೀರಿಗಾಗಿ ಇವರಿದ್ದಲ್ಲಿಂದ ಮೇಲಕ್ಕೆ ಸಾಗಬೇಕಾಯಿತು. ಕೊಡವನ್ನು ಹೊತ್ತು ದಡದಲ್ಲಿ ಕೊಂಚ ದೂರ ಸಾಗಿದೆ.
ಅಲ್ಲಿ ನೋಡಿದರೆ ಇನ್ನಾರೋ ಜಲಕ್ರೀಡೆಯಲ್ಲಿ ತೊಡಗಿದ ಸನ್ನಾಹ ಕಾಣಿಸಿತು. ಅವರು ಗಂಧರ್ವರAತೆ ಕಾಣಿಸಿದರು.
ಅವರ ಮುಳುಗಾಟ, ಚೀರಾಟ, ನೆಗೆದಾಟಗಳನ್ನು ನೋಡುತ್ತ ಅಲ್ಲಿ ನಿಂತುಬಿಟ್ಟೆ. ಎಚ್ಚರವಾದಾಗ ಸ್ವಲ್ಪ ಸಮಯವು ಸಂದುಹೋಯಿತು. ನನ್ನ ಮೈಗೆ ಪ್ರಜ್ಞೆ ಬಂದಾಗ ಸೂರ್ಯದೇವ ಮೇಲಕ್ಕೇರಿ ಬಂದಿದ್ದ. ಅಯ್ಯೋ! ಇದೇನು ಭ್ರಮೆಯಾಯ್ತು ನನಗೆ? ಇವರ ಆಟಗಳನ್ನು ಮೈಮರೆತು ನೋಡುವುದೆ? ಅಲ್ಲಿ ಪತಿದೇವರ ಮಾಧ್ಯಾಹ್ನಿಕ ಕರ್ಮಗಳಿಗೆ ತಡವಾಯಿತು. ಲಗುಬಗೆಯಿಂದ ನೀರು ತುಂಬಿಕೊಂಡೆ. ಸದ್ಯ, ಅವರು ಕೆಲವೇ ಜನರಿದ್ದರು. ನದಿಯ ಇನ್ನೊಂದು ಪಾರ್ಶ್ವದಲ್ಲಿ ಕ್ರೀಡಿಸುತ್ತಿದ್ದ ಕಾರಣ ಈ ಭಾಗದ ನೀರು ಶುದ್ಧವಾಗಿಯೇ ಇತ್ತು. ಕೊಡವನ್ನು ಹೊತ್ತು ದಾಪುಗಾಲಿಡುತ್ತ ಆಶ್ರಮದತ್ತ ಧಾವಿಸಿ ಬಂದೆ.
ಆಶ್ರಮಕ್ಕೆ ಬಂದು ಇನ್ನೇನು ಪರ್ಣಕುಟಿಯ ಒಳಗೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ, “ರೇಣುಕಾ, ನಿಲ್ಲಲ್ಲಿ. ಇದೇನು ಇಷ್ಟು ತಡಮಾಡಿದೆ? ಈ ಕಡೆಯ ಯೋಚನೆಯೇ ಇಲ್ಲದವಳಂತೆ ನದಿ ತೀರದಲ್ಲಿ ವಿಹರಿಸುತ್ತಿದ್ದೆಯೇನು? ಮಾಡಬೇಕಾದ ಕರ್ತವ್ಯವೂ ಮರೆತುಹೋಯಿತೆ? ಅಥವಾ ನೆನಪಿದ್ದರೂ ನಿರ್ಲಕ್ಷ್ಯವೆ? ಏನೀ ವಿಳಂಬದ ಅರ್ಥ?” ನನ್ನ ಪತಿದೇವರ ಕಂಚಿನಂತಹ ಕಂಠ ಮೊಳಗಿತು.
ನಾನು ನಡುಗಿಹೋದೆ. ಕೈಯ ಕೊಡಪಾನ ನೆಲಕ್ಕೆ ಜಾರಿತು.
ತಡವಾದುದಕ್ಕೆ ಏನೋ ಒಂದು ಕಾರಣವನ್ನು ಹೇಳಲಾರೆ. ಯಥಾರ್ಥವನ್ನು ಆಡಿದರೆ ಜಮದಗ್ನಿ ಋಷಿಗಳು ಕಡುಕೋಪದಿಂದ ಶಿಕ್ಷಿಸದೆ ಬಿಡುವರೆ? ನಡೆದುದನ್ನು ತಿಳಿಸಿದೆ.
“ನೀನು ಹೇಳದಿದ್ದರೂ ನನಗೆ ತಿಳಿದಿತ್ತು. ಅನ್ಯ ಪುರುಷರ ಜಲಕ್ರೀಡೆಯನ್ನು ನೋಡಿ ಮೈಮರೆತೆ ಎಂದರೆ ಅರ್ಥವೇನು? ನಿನ್ನ ಪಾತಿವ್ರತ್ಯ ಶುದ್ಧವಾಗಿ ಉಳಿದಿಲ್ಲ. ಮಾನಸಿಕವಾದ ಈ ವ್ಯಭಿಚಾರಿ ಭಾವಕ್ಕೆ ತಕ್ಕ ಶಿಕ್ಷೆಯಾಗಲೇಬೇಕು. ನಿನ್ನ ಶಿರಚ್ಛೇದವೇ ಸರಿಯಾದ ಶಿಕ್ಷೆ” ಹೀಗೆಂದವರೇ ಮಕ್ಕಳನ್ನು ಕರೆದು, ‘ಇವಳ ತಲೆಗಡಿಯಿರಿ’ ಎಂದು ಆಜ್ಞಾಪಿಸಿದರು.
ನಾನು ಕೈಹಿಡಿದು ಸಹಧರ್ಮಚಾರಿಣಿಯಾಗಿ ಯಾರನ್ನು ಅನುಸರಿಸಿದೆನೋ ಆ ಗಂಡನಿಗೆ ನನ್ನ ಜೀವವು ಬೇಡವಾದ ಬಳಿಕ ನನಗೆ ಬದುಕುವ ಹಂಬಲವೆ? ತಲೆಬಾಗಿ ಕಡಿಸಿಕೊಳ್ಳುವುದಕ್ಕೆ ಕೊರಳನ್ನೊಡ್ಡಿ ಕುಳಿತೆ. ತಂದೆ ಏನೋ ಆಜ್ಞಾಪಿಸಿದರು. ಆದರೆ ನಾನು ಹೆತ್ತಮಕ್ಕಳಲ್ಲವೆ? ನನ್ನ ಎದೆಯ ಹಾಲನ್ನುಂಡು ಬೆಳೆದವರಲ್ಲವೆ? ನನ್ನ ಜೋಗುಳದ ದನಿಗೆ ನಿದ್ರಿಸಿದವರಲ್ಲವೆ? ನನ್ನ ತಲೆಕಡಿಯುವುದಕ್ಕೆ ಅವರಿಂದಾದೀತೆ? ತನ್ನ ಮಾತನ್ನು ನಡೆಯಿಸಲು ಹಿಂಜರಿದ ನಾಲ್ವರು ಮಕ್ಕಳನ್ನೂ ಕ್ರೂರವಾಗಿ ಶಪಿಸಿಬಿಟ್ಟರು, ಕೆಂಡದಂತೆ ಜ್ವಲಿಸುತ್ತಿದ್ದ ನನ್ನ ಪತಿ.
ಮತ್ತೆ ಉಳಿದವನು ಒಬ್ಬನೇ. ಕೊನೆಯ ಮಗನಾದ ರಾಮ.
ನನ್ನ ಗಂಡ, ತಾಯಿಯ ತಲೆ ಕಡಿ ಅಂತ ಅವನಿಗೆ ಆಜ್ಞೆ ಕೊಟ್ಟರು. ನನಗೆ ಏನೂ ಅನಿಸಲಿಲ್ಲ. ಅನಿಸುವುದಕ್ಕೇನಿದೆ? ನಾನು ಹೆತ್ತ ನನ್ನ ಮಗ ಅನ್ನುವುದಕ್ಕಿಂತಲೂ ಯಾವುದೋ ಸಂಕಲ್ಪವನ್ನು ಪೂರ್ಣಗೊಳಿಸುವುದಕ್ಕೆ ಹುಟ್ಟಿದ ದೈವಾಂಶ ಸಂಭೂತ ಅವನು. ತಾಯಿ ಮಗ ಎಂಬ ಕರುಳಿನ ಸಂಬAಧವನ್ನು ಮೀರಿದವನು. ಆದರೂ?
ಅವನು ತಂದೆಯ ಮಾತು ಹೊರಬಿದ್ದ ಮರು ಗಳಿಗೆಯಲ್ಲಿ ಮಸೆದ ಕೊಡಲಿಯನ್ನೆತ್ತಿ ನನ್ನ ಕೊರಳಿಗೆ ಹೊಡೆದ. ಕೊರಳಿಗೆ ಅನ್ನಲೆ ಅಥವಾ ಕರುಳಿಗೊ? ಆಮೇಲೆ ಏನಾಯಿತು ಅನ್ನುವ ಅರಿವು ನನಗಿಲ್ಲ.
ಎಷ್ಟೋ ಹೊತ್ತಿನ ಬಳಿಕ ಕಣ್ಣು ತೆರೆದೆ. ಕೊರಳು ಕತ್ತರಿಸಿ ನನ್ನ ಸಾವಿಗೆ ಕಾರಣನಾದ ನನ್ನ ಮಗನೇ ಮತ್ತೊಮ್ಮೆ ಬದುಕುವುದಕ್ಕೂ ಕಾರಣನಾದ. ಮಹಾ ತಪಸ್ವಿಯಾದ ಜಮದಗ್ನಿ ಮಹರ್ಷಿಯನ್ನು ಒಲಿಸಿ, ವರ ಪಡೆದು, ತಾಯಿ ಮತ್ತು ಅಣ್ಣಂದಿರು ಬದುಕಲಿ ಎಂದನಂತೆ. ಅಷ್ಟು ಹೊತ್ತಿಗೆ ನನ್ನ ಗಂಡನ ಸಿಟ್ಟೂ ಇಳಿದಿತ್ತು. ನಾನು ಸತ್ತು ಬದುಕಿದೆ.
ಬದುಕಿ ಬಂದ ನನ್ನಲ್ಲಿ ಹೊಸದೃಷ್ಟಿ ಮೂಡಿರಬೇಕು. ಯಾರ ಕುರಿತೂ ವ್ಯಾಮೋಹವೂ ಇಲ್ಲದ, ಆಕ್ರೋಶವೂ ಇಲ್ಲದ ನಿರ್ಲಿಪ್ತ ದೃಷ್ಟಿ ಅದು. ಪರಶುರಾಮ ನಾನು ಬದುಕಿಬಂದ ಮೇಲೂ ಏನೋ ಅಪರಾಧಿ ಭಾವವನ್ನೇ ಹೊಂದಿದ್ದ. ಅದನ್ನು ಕಳೆದುಕೊಳ್ಳುವುದಕ್ಕೆ ಪ್ರಾಯಶ್ಚಿತ್ತ ಕರ್ಮವಾಗಿ ತೀರ್ಥಾಟನೆಗೆ ಹೊರಟುನಿಂತ. ನನ್ನ ಗಂಡನ ಅಂತರಂಗದಲ್ಲಿಯೂ ಪರಿವರ್ತನೆ ಆದಂತೆ ತೋರಿತು. “ರೇಣುಕಾ, ಇಷ್ಟೆಲ್ಲ ಅನಾಹುತಕ್ಕೆ ಕಾರಣವಾದುದು ನನ್ನ ಶೀಘ್ರಕೋಪ. ಒಂದಿಷ್ಟು ವಿವೇಚನೆ ಮಾಡುತ್ತಿದ್ದರೆ, ಪರಪುರುಷನ ಜಲಕ್ರೀಡೆ ನೋಡಿದ ಒಂದೇ ಕಾರಣಕ್ಕೆ ಕೊಲ್ಲುವುದು ಸಮರ್ಥನೀಯ ಎಂದು ತೋರುತ್ತಿರಲಿಲ್ಲ. ಅಂತೂ ಇದೆಲ್ಲ ಆದುದು ನನ್ನ ಕೋಪದಿಂದ. ಇದೋ ನಮ್ಮೀ ಪ್ರಶಾಂತ ಆಶ್ರಮದಲ್ಲಿ ಇಂತಹ ಭೀಕರ ಘಟನೆಗಳು ಮತ್ತೊಮ್ಮೆ ನಡೆಯಕೂಡದು. ಅದಕ್ಕಾಗಿ ನನ್ನ ಕ್ರೋಧವನ್ನು ತ್ಯಜಿಸುತ್ತೇನೆ” ಹೀಗೆ ಅವರು ಶಪಥವನ್ನೇ ಮಾಡಿಬಿಟ್ಟರು.
ಕೋಪವನ್ನು ಬಿಡುತ್ತೇನೆ ಎಂದರು ಬಿಟ್ಟರು ಕೂಡ.
ಆದರೆ ಇದು ಕೇವಲ ನನ್ನ ಸಲುವಾಗಿ ಎಂದು ನನಗೆ ಅನಿಸಲಿಲ್ಲ. ಜ್ಞಾನಿಗಳೂ, ಭವಿಷ್ಯತ್ತನ್ನು ಕಾಣಬಲ್ಲವರೂ ಆದ ಅವರ ಈ ಸಂಕಲ್ಪಕ್ಕೆ ಇನ್ನೇನಾದರೂ ಹಿನ್ನೆಲೆ ಇರಬಹುದು. ಅದೂ ವಿಧಿಯ ಆಶಯ ಆಗಿರಬಹುದು. ಅಥವಾ ಅರಿವಿಲ್ಲದೆ ಇನ್ನೇನೋ ಒಂದು ಮಹತ್ತ್ವದ ಸಂಭವಕ್ಕೆ ನನ್ನ ಗಂಡನೂ ಹೀಗೆ ನಿಮಿತ್ತರಾದರೋ?
ಇದನ್ನೆಲ್ಲ ಯಾರಲ್ಲಿ ಕೇಳಲಿ? ಆದರೆ ಮುಂದೆ ನಡೆದುಹೋದ ಆ ಮಹಾವಿಪ್ಲವವನ್ನು ಗ್ರಹಿಸಿದರೆ, ಇದೆಲ್ಲ ಆಗಲೇಬೇಕಿತ್ತು. ಕಣ್ಣಿಗೆ ಕಾಣಿಸದ ಕೈಯ ಸೂತ್ರದ ಬೊಂಬೆಗಳಂತೆ ನಾವೆಲ್ಲ ಆಡುತ್ತಿದ್ದೇವೆ ಅಂತ ಬಲವಾಗಿ ಅನಿಸತೊಡಗಿತು. ಆ ಹೊಸ ಬೆಳಕಿನಂತಹ ಬೋಧೆಯ ಬಳಿಕ ನಿರ್ಲಿಪ್ತಿ ಅಲ್ಲದೆ ಮತ್ತೇನು?