ಪ್ರಬುದ್ಧತೆಯ ಕಡೆಗಿನ ಒಂದು ನಡೆಯೆಂದರೆ ಭಿನ್ನತೆಯನ್ನು ಗೌರವಿಸುವುದು. ಎಲ್ಲರೂ ಒಂದೇ ಥರ ಇರುವುದು ಸಾಧ್ಯವಿಲ್ಲ ಎಂಬುದು ಹೇಗೋ ಹಾಗೆಯೇ ಒಂದು ಮೌಲ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಅವರವರ ನಿಲವು ಅವರವರದ್ದು. ವ್ಯಕ್ತಿಗತವಾಗಿ ಭಿನ್ನತೆ ಇದ್ದೇ ಇರುತ್ತದೆ. ಮನೆಯೊಳಗಿನ ಸಣ್ಣ ಉದಾಹರಣೆ ಕೊಡಬಹುದಾದರೆ ಒಬ್ಬರಿಗೆ ಚಹಾ ಇಷ್ಟವಾಗುತ್ತದೆ, ಮತ್ತೊಬ್ಬರಿಗೆ ಕಾಫಿ ಇಷ್ಟವಾಗುತ್ತದೆ. ತಿಂಡಿಯಲ್ಲಿಯೂ ಒಬ್ಬರಿನ್ನೊಬ್ಬರ ಆದ್ಯತೆಗಳು ಭಿನ್ನವೇ ಇರುತ್ತವೆ. ಆದರೆ ಪರಸ್ಪರರ ಇಷ್ಟಗಳನ್ನು ಗೌರವಿಸುವುದನ್ನು ಕಲಿತರೆ ಅಲ್ಲಿ ಸುಂದರ ಸಮನ್ವಯತೆ ಸಾಧಿತವಾಗುತ್ತದೆ.
ಎಳೆತನದ ದಿನಗಳಲ್ಲಿ ಅಪ್ಪ ತಂದುಕೊಡುತ್ತಿದ್ದ ಚಾಕ್ಲೇಟು, ಬಿಸ್ಕತ್ತಿನ ಪೊಟ್ಟಣಗಳು ಅದೆಷ್ಟು ಸಂತೋಷದ ಸಂಗತಿಗಳಾಗಿದ್ದವು! ಅಪರೂಪಕ್ಕೊಮ್ಮೆ ಪೇಟೆಗೆ ಹೋದಾಗ ಜ್ಯೂಸು ಐಸ್ಕ್ರೀಮು ಕೊಡಿಸಿಬಿಟ್ಟರೆ ತಿಂಗಳಾನುಗಟ್ಟಲೆ ಅದರ ರುಚಿ ಮನಸ್ಸಲ್ಲಿ ಇರುತ್ತಿತ್ತು. ಒಂದು ವೇಳೆ ನಾವು ಬಯಸಿದ್ದನ್ನು ಅಪ್ಪ ಕೊಡಿಸದೆ ಕಣ್ಣುಕೆಂಪು ಮಾಡಿ ನೋಡಿದರೆ ಆ ದಿನವೂ ಬಹುಕಾಲ ಮನದೊಳಗೆ ಭಯ ಮೂಡಿಸಿ ಇನ್ನು ಮುಂದೆ ಏನನ್ನೂ ಕೇಳಲೇಬಾರದು ಎನಿಸುವಂತೆ ಮಾಡುತ್ತಿತ್ತು. ಸಣ್ಣಪುಟ್ಟದಕ್ಕೂ ಸಂಭ್ರಮ, ಉತ್ಸಾಹ, ಉಲ್ಲಾಸ… ವರ್ಷಕ್ಕೊಮ್ಮೆ ಅಮ್ಮ ಹೊಲಿದುಕೊಡುವ ಹೊಸ ಅಂಗಿ (ಅದು ಅಮ್ಮನ ಸೀರೆಯದ್ದೇ ಆದರೂ ಸರಿ) ಎಷ್ಟೊಂದು ಖುಷಿ ಕೊಡುತ್ತಿತ್ತು! ಅಮ್ಮ ಬಟ್ಟೆ ಕತ್ತರಿಸುವಲ್ಲಿಂದ ನಮ್ಮ ಸಂಭ್ರಮ ಶುರು. ಇದು ಕೈಗೆ, ಇದು ಫ್ರಾಕ್ನ ಮೇಲ್ಭಾಗ, ಇದು ಫ್ರಿಲ್ಲು. ಅಮ್ಮ ಜೋಡಿಸಿಕೊಳ್ಳುತ್ತಿದ್ದರೆ ನಮ್ಮ ಕಲ್ಪನೆಯಲ್ಲಿ ನಾವದನ್ನು ಧರಿಸಿ ಅಪ್ಸರೆ ಅನುಗ್ರಹಿಸಿದ ಸಿಂಡ್ರೆಲ್ಲಾಳಂತೆ ಕಾಣಿಸುತ್ತಿದ್ದೆವು. ಜೊತೆಗೆ ‘ನನ್ನದೇ ಮೊದಲು ಹೊಲಿ’ ಅಂತ ಅಮ್ಮನಿಗೆ ದುಂಬಾಲು ಬೀಳುವುದು ಬೇರೆ. ಅದಕ್ಕಾಗಿ ನಮಗೆ ಅಕ್ಕತಂಗಿಯರ ನಡುವೆ ಸಣ್ಣಮುನಿಸು. ಅಮ್ಮನನ್ನು ಮೆಚ್ಚಿಸಲು ಮನೆಗೆಲಸವನ್ನೆಲ್ಲ ಬೇಕಿದ್ದರೆ ನಾವೇ ಮಾಡುತ್ತಿದ್ದೆವು. ಹಟ್ಟಿಗೆ ಸೊಪ್ಪು, ಹಸುಗಳಿಗೆ ಹುಲ್ಲು, ಅಕ್ಕಚ್ಚು, ಮನೆಯೊಳಗೆ ಅಡುಗೆ… ಎಲ್ಲ ನಮ್ಮದೇ ಕಾರುಬಾರು. ಅಂತೂ ಅಂಗಿ ರೆಡಿ ಆದರೆ ಸಾಕಿತ್ತು. ಈಗ ದಿನಬೆಳಗಾದರೆ ಪೇಟೆಯ ನಡುವೆಯೇ ಓಡಾಡುತ್ತೇವೆ. ಬೇಕುಬೇಕಾದಂತೆ ಏನನ್ನಾದರೂ ತೆಗೆದುಕೊಂಡು ತಿಂದೇವು. ಬಟ್ಟೆಬರೆಗಳಿಗಂತೂ ಲೆಕ್ಕವಿಲ್ಲ, ಕೆಲವು ಸಲ ಹೊಲಿದು ಸಿದ್ಧಪಡಿಸಲು ಬಾಕಿ ಉಳಿಸಿಕೊಂಡ ಸೀರೆಗಳು ಡ್ರೆಸ್ ಮಟೀರಿಯಲ್ಗಳು ಬೀರುವಿನೊಳಗಿಂದ ನಮ್ಮನ್ನು ನೋಡಿ ಅಣಕಿಸುತ್ತವೆ. ದಿನಗಳು ಬದಲಾದವಾ ಅಂದುಕೊಂಡರೆ ಅಲ್ಲ, ಬದಲಾದದ್ದು ನಾವೇ. ಮತ್ತು ಅದು ಸಹಜ ಕೂಡಾ. ನಾವು ಪ್ರಬುದ್ಧರಾಗುವ ಲಕ್ಷಣವಂತೆ ಅದು.
ಸಣ್ಣಪುಟ್ಟ ವಿಷಯಗಳಿಗೆ ನಾವು ಉದ್ವೇಗಕ್ಕೊಳಗಾಗುವುದಿಲ್ಲ ಅಂದರೆ ಸಮಸ್ಯೆಯಲ್ಲ. ಚಿಕ್ಕಪುಟ್ಟ ಸಂತೋಷಗಳನ್ನೂ ಜೀವನದಲ್ಲಿ ಅನುಭವಿಸಬೇಕು ನಿಜ, ಎಲ್ಲ್ಲ ಏಳುಬೀಳುಗಳ ನಡುವೆ ನಮ್ಮನ್ನು ಕಾಪಾಡಿಕೊಳ್ಳುವುದು ಈ ಬಗೆಯ ಸಂತೋಷಗಳೆ ಎಂಬುದೇ ನಿಜ. ಆದರೆ ಕೆಲ
ವೊಮ್ಮೆ ತೀರಾ ಸಣ್ಣವಿಷಯಕ್ಕೂ ಅತ್ಯಂತ ಉದ್ವಿಗ್ನರಾಗಿ ಸ್ಪಂದಿಸುವುದು ಮಕ್ಕಳಾಟಿಕೆ ಎನಿಸುತ್ತದೆ. ಒಂದು ಸಣ್ಣ ಗಾಂಭೀರ್ಯ ಇರಬೇಕಾದಲ್ಲಿ ಕುಣಿದು ಕುಪ್ಪಳಿಸಿ ಮಾಡಿದರೆ ಜನ ನಮ್ಮನ್ನು ನೋಡುವ ರೀತಿಯೇ ಬದಲಾಗುತ್ತದೆ.
ಮುಚ್ಚಿದ ಮನಸ್ಸುಗಳು ಅರಳುತ್ತವೆ, ತೆರೆದುಕೊಳ್ಳುತ್ತವೆ. ಕೆಲವೊಮ್ಮೆ ಹೆಚ್ಚಿನ ವಿಷಯಗಳಿಗೂ ನಸುನಗೆಯಿಂದ ಪ್ರತಿಕ್ರಿಯಿಸುವುದನ್ನು ರೂಢಿಮಾಡಿಕೊಂಡಿರುತ್ತೇವೆ. ಬೆಳೆಯುತ್ತ ಬೆಳೆಯುತ್ತ ಮಾತನಾಡಲೇಬೇಕಾದಲ್ಲಿ ಮೌನವಾಗಿರುವುದು ತಪ್ಪು ಎಂಬುದು ಅರ್ಥವಾಗುತ್ತದೆ. ಹಿತವೋ ಅಹಿತವೋ ಹೇಳಬೇಕಾದುದನ್ನು ನಿರ್ದಾಕ್ಷಿಣ್ಯವಾಗಿ ಎದುರಿಗಿರುವವರಿಗೆ ಮನದಟ್ಟಾಗುವಂತೆ ಹೇಳುವುದನ್ನು ಕಲಿಯುತ್ತೇವೆ. ಅದರರ್ಥ ಯಾರನ್ನೂ ಕ್ಷಮಿಸಬಾರದೆಂದಲ್ಲ. ಕೆಲವೊಂದು ಸಂದರ್ಭದಲ್ಲಿ ಕ್ಷಮಿಸಿ ಹಗುರಾಗದೆ ಹೋದರೆ ಬದುಕು ಭಾರವೆನ್ನಿಸುವುದು ನಮ್ಮದೇ. ಯಾವುದು ಹೋಗಬೇಕೋ ಅದನ್ನು ಇರಗೊಟ್ಟರೆ, ಯಾವುದು ಇರಬೇಕೋ ಅದನ್ನು ಹೋಗಗೊಟ್ಟರೆ ಮಾನಸಿಕ ಒತ್ತಡವನ್ನು ಅನುಭವಿಸಬೇಕಾಗುತ್ತದೆ.
ಪ್ರಬುದ್ಧತೆಯ ಕಡೆಗಿನ ಇನ್ನೊಂದು ನಡೆಯೆಂದರೆ ಭಿನ್ನತೆಯನ್ನು ಗೌರವಿಸುವುದು. ಎಲ್ಲರೂ ಒಂದೇ ಥರ ಇರುವುದು ಸಾಧ್ಯವಿಲ್ಲ ಹೇಗೋ ಹಾಗೆಯೇ ಒಂದು ಮೌಲ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಅವರವರ ನಿಲವು ಅವರವರದ್ದು. ವ್ಯಕ್ತಿಗತವಾಗಿ ಭಿನ್ನತೆ ಇದ್ದೇ ಇರುತ್ತದೆ. ಮನೆಯೊಳಗಿನ ಸಣ್ಣ ಉದಾಹರಣೆ ಕೊಡಬಹುದಾದರೆ ಒಬ್ಬರಿಗೆ ಚಹಾ ಇಷ್ಟವಾಗುತ್ತದೆ, ಮತ್ತೊಬ್ಬರಿಗೆ ಕಾಫಿ ಇಷ್ಟವಾಗುತ್ತದೆ. ತಿಂಡಿಯಲ್ಲಿಯೂ ಒಬ್ಬರಿನ್ನೊಬ್ಬರ ಆದ್ಯತೆಗಳು ಭಿನ್ನವೇ ಇರುತ್ತವೆ. ಆದರೆ ಪರಸ್ಪರರ ಇಷ್ಟಗಳನ್ನು ಗೌರವಿಸುವುದನ್ನು ಕಲಿತರೆ ಅಲ್ಲಿ ಸುಂದರ ಸಮನ್ವಯತೆ ಸಾಧಿತವಾಗುತ್ತದೆ. ಅದರ ಬದಲು ಪರಸ್ಪರರ ಇಷ್ಟಗಳನ್ನು ಹೀಗೆಳೆಯುತ್ತ ಸಾಗಿದರೆ ಮನಸ್ಸಿನಲ್ಲಿ ಉಳಿಯುವುದು ನೋವು ಮಾತ್ರ. ಗಂಡನಿಗೆ ಇಷ್ಟವಾದುದುನ್ನು ಮಾಡುವ ಪತ್ನಿಗೆ ತನ್ನಿಷ್ಟವಾದ ತಿನಿಸನ್ನೂ ಮಾಡಿಕೊಂಡು ತಿನ್ನುವ ಸ್ವಾತಂತ್ರ್ಯವಿದ್ದಲ್ಲಿ ಯಾರಿಗೂ ತೊಂದರೆಯಿಲ್ಲ. ಒಬ್ಬರಿಗೆ ಸಿಹಿ ಇಷ್ಟ, ಇನ್ನೊಬ್ಬರಿಗೆ ಖಾರ ಇಷ್ಟ ಎಂದಾಗುವಾಗ ಹೊಂದಾಣಿಕೆಯ ದಾರಿಯೇ ಈ ಭಿನ್ನತೆಯನ್ನು ಗೌರವಿಸುವುದು. ‘ಥೂ.. ಅದೇನು ಅಂತ ಇದನ್ನು ಮಾಡಿದ್ಯೋ.. ಅದು ಹೇಗಾದರೂ ತಿಂತೀಯೋ.. ನಂಗಂತೂ ವಾಕರಿಕೆ ಬರುತ್ತದೆ’ ಎಂದು ಹೇಳಿದರೆ ಮನಸ್ಸು ನೋಯುವುದಿಲ್ಲವೆ? ಎಷ್ಟೋ ಮನೆಗಳಲ್ಲಿ ಇತ್ತೀಚೆಗೆ ಮಕ್ಕಳೂ ಅಮ್ಮ ಮಾಡಿರುವುದಕ್ಕೆ ಏನಾದರೂ ಋಣಾತ್ಮಕವಾಗಿ ಹೇಳಿ ಹಂಗಿಸಿದರಷ್ಟೇ ತಿಂದಿರುವುದು ಜೀರ್ಣವಾಗುತ್ತದೆ ಎಂಬAತೆ ಆಡುತ್ತಾರೆ. ಎಲ್ಲರ ಆದ್ಯತೆಯನ್ನು ಗುರುತಿಸಿ ಅದರಂತೆ ತನ್ನ ಇಷ್ಟಗಳನ್ನು ಹೊಂದಿಸಿಕೊಳ್ಳುವ ಪತ್ನಿಗೂ ತನ್ನದೇ ಆದ ಆಸೆ ಅಭಿರುಚಿಗಳು ಇರುತ್ತವಲ್ಲ. ಅಪರೂಪಕ್ಕೊಮ್ಮೆ ತನಿಷ್ಟದಂತೆ ಮಾಡಿಕೊಂಡರೆ ಕುಂದೇನು?
ಏರು ಯೌವನಾವಸ್ಥೆಯಲ್ಲಿ ಪತಿಪತ್ನಿಯರ ನಡುವೆ ಅತೀವವಾದ ಪೊಸೆಸಿವ್ನೆಸ್ ಇರುತ್ತದೆ. ಗಂಡನ ಗೆಳತಿಯನ್ನಾಗಲಿ ಪತ್ನಿಯ ಗೆಳೆಯನನ್ನಾಗಲಿ ಒಪ್ಪಿಕೊಳ್ಳುವುದು ಕಷ್ಟವಿರುತ್ತದೆ. ಸಣ್ಣಮೆಸೇಜುಗಳ ಕಾರಣದಿಂದಲೂ ವಾರಪೂರ್ತಿ ಜಗಳಗಳಾದರೂ ಅಚ್ಚರಿಯೇನಲ್ಲ. ಇದೆಲ್ಲಕ್ಕೂ ಕಾರಣ ಒಬ್ಬರಿನ್ನೊಬ್ಬರ ಮೇಲೆ ಇಟ್ಟಿರುವ ಪ್ರೀತಿನಂಬಿಕೆಗಳಷ್ಟೇ ಆಗಿರುತ್ತವೆ. ಆದರೆ ಮನಸ್ಸು ಮಾಗುತ್ತ ಬದುಕನ್ನು ಹಸಿರಾಗಿಸಿರುವುದಕ್ಕೆ ಉತ್ತಮ ಸ್ನೇಹಿತರೂ ಬೇಕು ಎಂಬುದು ಅರ್ಥವಾಗುತ್ತದೆ. ಬಲವಂತದಿಂದ ಪ್ರೀತಿಯನ್ನು ಸಾಧಿಸಹೊರಟರೆ ಅದು ದಕ್ಕುವುದಕ್ಕಿದೆಯೆ? ಕೃಷ್ಣನೇ ಆದರೂ ರಾಧೆಯನ್ನೂ ಸತ್ಯಭಾಮೆಯನ್ನೂ ಒಂದೇ ರೀತಿ ಕಂಡನೆ? ಬಲವಂತದಿಂದ ಕೃಷ್ಣ ತನಗಷ್ಟೆ ಉಳಿಯಬೇಕು ಎಂದ ಸತ್ಯಭಾಮೆಗೆ ಬದುಕನ್ನು ಅರ್ಥ ಮಾಡಿಸಿದವಳು ರುಕ್ಮಿಣಿ. ಹಾಗೆಂದು ಇಂದು ಮನೆಮನೆಯಲ್ಲೂ ಗಂಡಂದಿರೆಲ್ಲ ಕೃಷ್ಣನಂತಿರಬಹುದು ಎಂದೇನೂ ಇದರ ತಾತ್ಪರ್ಯವಲ್ಲ. ಬಲವಂತವಾಗಿ ದಕ್ಕಿಸಿಕೊಳ್ಳಹೊರಟದ್ದು ಕ್ಷಣಿಕ ಎಂಬುದನ್ನು ಹೇಳುವುದಷ್ಟೆ.
ಮನೆಗಳೊಳಗೆ ಪ್ರಬುದ್ಧತೆ ಬೇಕೆಂದು ಅನಿಸುವ ಇನ್ನೂ ಕೆಲವು ವಿಷಯಗಳಿವೆ. ಕೆಲವು ಸಲ ಜಗಳ ಶುರುವಾಗುವುದು ಎಲ್ಲಿ ಅಂದರೆ ಮಾತು ಮಾತಿಗೂ ವಿಮರ್ಶೆಗೆ ತೊಡಗಿದಾಗ. ಹೆಚ್ಚಿನ ಸಂದರ್ಭಗಳು ಹೇಗಿರುತ್ತವೆಯೆಂದರೆ ೬ ನ್ನು ಎರಡೂ ಬದಿಯಿಂದ ನಿಂತುಕೊಂಡು ಓದಿದ ಹಾಗೆ. ಒಂದೆಡೆ ನಿಂತವರಿಗೆ ಅದು ೬, ಇನ್ನೊಂದು ಕಡೆ ನಿಂತವರಿಗೆ ೯. ತಮ್ಮದೇ ಸರಿಯೆಂದು ವಾದ ಮಾಡುವ ಮೊದಲು ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸಿದಾಗ ವಸ್ತುಸ್ಥಿತಿ ಅರ್ಥವಾಗುತ್ತದೆ. ಹೊರಜಗತ್ತಿನ ಬದುಕಿನಲ್ಲಾದರೂ ಅಷ್ಟೇ. ಯಾರನ್ನಾದರೂ ಎದುರಿಗೆ ಕಂಡಾಗ ನಮಗೆ ಅಗತ್ಯವಿಲ್ಲದೆಯೂ, ಏನೋ ಒಂದು ಹೇಳಿರುತ್ತೇವೆ – ಅಯ್ಯೋ, ಯಾಕಿಷ್ಟು ಸಣ್ಣ ಆಗಿದೀರಾ? ಅಯ್ಯಯ್ಯೋ.. ಇಷ್ಟೊಂದು ದಪ್ಪ ಆಗ್ಬಿಟ್ಟಿದ್ದೀರಾ.. ಇತ್ಯಾದಿ ಇತ್ಯಾದಿ. ವ್ಯಕ್ತಿಯೊಬ್ಬರು ಸಣ್ಣ ಆದರೂ ದಪ್ಪ ಆದರೂ ನಮಗೂ ಅದಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಅಂದರೂ ನಮಗರಿವಿಲ್ಲದಂತೆ ಉದ್ಗರಿಸಿರುತ್ತೇವೆ. ಈ ಬಗೆಯ ಅನಗತ್ಯ ವಿಮರ್ಶೆಗಳಿಂದ ದೂರ ಉಳಿದಷ್ಟೂ ನಮ್ಮ ಮಾನಸಿಕ ನೆಮ್ಮದಿ ಕ್ಷೇಮವಾಗಿರುತ್ತದೆ.
ಮನೆಯೊಳಗಾಗಲಿ ಸಾಮಾಜಿಕ ಬದುಕಿನಲ್ಲಾಗಲಿ ಮನಸ್ಸನ್ನು ಕೆಡಿಸುವ ಜಗಳಗಳಿಗಿಂತ ಮೌನವೇ ಲೇಸು. ಇಬ್ಬರಲ್ಲೊಬ್ಬರು ಸಿಟ್ಟಾಗಿ ಹರಿಹಾಯುವಾಗ ಎದುರಿಗಿರುವವರೂ ಅದೇ ಸಮಕ್ಕೆ ಧ್ವನಿಯೆತ್ತಿ ಕಿರುಚಾಡಿದರೆ ಬೀದಿರಂಪವೇ ಆಗುತ್ತದೆ. ಅದರ ಬದಲು ಮೌನವಾಗಿದ್ದು ಸಮಯವನ್ನು ನಿಭಾಯಿಸಿದರೆ ಬಳಿಕ ಕುಳಿತುಕೊಂಡು ಸಮಾಧಾನವಾಗಿ ವಿಚಾರ ವಿಮರ್ಶೆ ಮಾಡಬಹುದು. ತಮ್ಮ ನಿರೀಕ್ಷೆಯಂತೆಯೋ ಅಪೇಕ್ಷೆಯಂತೆಯೋ ನಡೆಯದೆ ಹೋದಾಗ ಸಿಟ್ಟು ಬರುವುದು ಸಹಜವೇ. ಅದನ್ನು ಹೊರಗೆಡಹದೆ ಇದ್ದರೆ ಆರೋಗ್ಯ ಹದಗೆಡುವಷ್ಟರಮಟ್ಟಿಗೆ ತೊಂದರೆಯಾದೀತು. ಆದರೆ ಸಿಟ್ಟಿನಲ್ಲಾದರೂ ಆಡುವ ಮಾತುಗಳು ಪ್ರಜ್ಞಾಪೂರ್ವಕವಾಗಿರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅದೇ ದೊಡ್ಡ ಮುಳ್ಳಾಗಿ ಚುಚ್ಚುತ್ತಿರುತ್ತದೆ. ಇದರಿಂದ ಮನಃಶಾಂತಿಯೂ ಹಾಳು, ಸಂಬಂಧಗಳೂ ಹಾಳು.
ಪ್ರೌಢವಯಸ್ಸಿಗೆ ಬಂದಾಗ ಬದುಕನ್ನು ಬಹುತೇಕ ಅರ್ಥಮಾಡಿಕೊಂಡಿರುತ್ತೇವೆ. ನಮ್ಮ ಸಂತೋಷ ಬೇರೆಯವರು ನಮ್ಮೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದರಲ್ಲಿ ಇರುವುದಿಲ್ಲ, ಬದಲಾಗಿ ಅಂತರAಗದ ನೋಟದಲ್ಲಿರುತ್ತದೆ. ನಾವು ಸಂತೋಷವಾಗಿರುವುದಕ್ಕೆ ಬದುಕು ನೂರು ದಾರಿಗಳನ್ನು ತೋರಿಸಿರುತ್ತದೆ. ಆದರೆ ನಾವು ದುಃಖಿಸುವುದಕ್ಕೆ ನೆಪಗಳನ್ನು ಹುಡುಕುತ್ತಿರುತ್ತೇವೆ. ಪರಿಸ್ಥಿತಿಗೆ ಹೊಂದಿಕೊಂಡಂತೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆಯೋ ಅದರ ಮೇಲೆ ನಮ್ಮ ಸಂತೋಷ-ದುಃಖಗಳು ನಿಂತಿರುತ್ತವೆ. ಚಿಕ್ಕಚಿಕ್ಕ ವಿಷಯಗಳಿಗೂ ನೊಂದುಕೊಳ್ಳುವುದನ್ನು ನಿಲ್ಲಿಸಿದಲ್ಲಿಗೆ ಬದುಕಿನ ಸೌಂದರ್ಯ ತೆರೆದುಕೊಂಡಿರುತ್ತದೆ.
ಈಗ ಹೇಳಿ, ಪ್ರಬುದ್ಧತೆಯ ಪಥದಲ್ಲಿ ನೀವೆಲ್ಲಿದ್ದೀರಿ? ಯಾವ ಹಂತದಲ್ಲಿದ್ದೀರಿ?