ಜಗತ್ತಿನಲ್ಲಿ ನಾವು ಯಾರ ನಿಂದೆಯನ್ನೂ ಮಾಡಬಾರದು. ನಾವು ಯಾವಾಗ ಎರಡನೆಯವರ ದೋಷಗಳನ್ನು ನೋಡುತ್ತೇವೆಯೊ ಅಂದರೆ ಎರಡನೆಯವರ ಹತ್ತಿರ ದೋಷಗಳಿವೆ ಎಂದು ಅನಿಸುತ್ತದೆಯೊ ಅವಾಗ ಆ ದೋಷಗಳು ಸೂಕ್ಷ್ಮವಾಗಿ ನಮ್ಮ ಹತ್ತಿರವೇ ಇರುತ್ತವೆ ಎಂದು ತಿಳಿಯಬೇಕು, ಹಾಗೂ ನಾವು ಕೂಡಲೇ ಭಗವಂತನಿಗೆ ಶರಣುಹೋಗಿ “ಈ ನನ್ನ ದುರ್ಗುಣವನ್ನು ತೆಗೆದುಹಾಕು” ಎಂದು ಕಳಕಳಿಯಿಂದ ಪ್ರಾರ್ಥಿಸಬೇಕು. ನಾವು ಯಾವಾಗ “ಜಗತ್ತಿನಲ್ಲಿ ನ್ಯಾಯ ಉಳಿದಿಲ್ಲ” ವೆಂದು ಅನ್ನುತ್ತೇವೆಯೊ ಆವಾಗ ಆ ದೋಷವು ನಮ್ಮ ಹತ್ತಿರವೇ ಇರುತ್ತದೆಯೆಂದು ತಿಳಿಯಬೇಕು. ಆದ್ದರಿಂದ ನಾವು ಯಾರ ದೋಷವನ್ನೂ ನೋಡಬಾರದು; ಮೊದಲು ನಮ್ಮನ್ನು ಸುಧಾರಿಸಿಕೊಳ್ಳಬೇಕು. ಚಿತ್ತಶುದ್ಧಿಯಾಗದ ಹೊರತು ನಮಗೆ ಸರ್ವತ್ರ ಭಗವದ್ಧ್ಯಾನ ಬರಲಾರದು. ಆದ್ದರಿಂದ ಯಾವಾಗ ಯಾವಾಗ ನಮಗೆ ಎರಡನೆಯವರ ದೋಷಗಳು ಕಾಣುತ್ತವೆಯೋ, ಆವಾಗ ನಮ್ಮ ಚಿತ್ತವು ಅಶುದ್ಧ ಇರುತ್ತದೆ ಎಂದು ತಿಳಿದು ನಾವು ಪರಮಾತ್ಮನಿಗೆ ಶರಣುಹೋಗಿ “ನನ್ನ ಚಿತ್ತವನ್ನು ಶುದ್ಧಗೊಳಿಸು” ಎಂದು ಪ್ರಾರ್ಥನೆ ಮಾಡಬೇಕು. ಹೀಗೆ ಮಾಡುವುದರಿಂದ ನಮ್ಮ ಚಿತ್ತವು ಶುದ್ಧವಾಗುತ್ತಹೋಗುತ್ತದೆ ಹಾಗೂ ಭಗವತ್ಪ್ರಾಪ್ತಿಗೆ ವಿಳಂಬವಾಗುವುದಿಲ್ಲ.
ಯಾವುದು ಮಿಶ್ರಣವಿರುತ್ತದೆಯೊ ಅದು ಪಚನವಾಗಲು ಕಠಿಣವಾಗಿರುತ್ತದೆ. ಉದಾಹರಣೆಗೆ – ಅನೇಕ ಧಾನ್ಯಗಳ ಮಿಶ್ರಣದ ಹಿಟ್ಟಿನಿಂದ ತಯಾರಿಸಿದ ರೊಟ್ಟಿ. ಮಿಶ್ರಣವಾಗದೇ ಇರುವ ಶುದ್ಧವಾದ ಅನ್ನವು ಪಚನಕ್ಕೆ ಹಗುರಾಗಿರುತ್ತದೆ. ಇದಕ್ಕಿಂತ ನಮ್ಮ ಅಂತಃಕರಣವು ಶುದ್ಧವಾಗಿರಬೇಕು. ಅಂದರೆ ಅದು ಎಲ್ಲರೊಡನೆ ಬೇಗನೇ ಹೊಂದಿಕೊಳ್ಳುತ್ತದೆ. ಆದರೆ ನಮ್ಮ ಅಂತಃಕರಣದಲ್ಲಿ ಸ್ವಾರ್ಥದ ಮಿಶ್ರಣವಿರುವುದರಿಂದ ಅದು ಎಲ್ಲರೊಡನೆ ಸಮರಸವಾಗುವುದಿಲ್ಲ. ಶುದ್ಧ ಅಂತಃಕರಣದ ಮನುಷ್ಯನ ನಡೆ, ನುಡಿ ಅತ್ಯಂತ ಮೃದುವಾಗಿರುತ್ತವೆ. ಅವನು ಎಲ್ಲರಿಗೂ ಪ್ರಿಯನಾಗಿರುತ್ತಾನೆ. ಜೀವನದಲ್ಲಿ ನಮ್ಮ ಸಮಾಧಾನ ಅಥವಾ ಅಸಮಾಧಾನವು ನಾವು ಜಗತ್ತಿನ ಕಡೆಗೆ ಯಾವ ದೃಷ್ಟಿಯಿಂದ ನೋಡುತ್ತೇವೆಯೋ ಅದನ್ನು ಅವಲಂಬಿಸಿರುತ್ತದೆ. “ನನಗಾಗಿ ನಾನು ಇರುವುದಲ್ಲ, ಜಗತ್ತಿಗಾಗಿ ನಾನು ಇರುತ್ತೇನೆ. ಜಗತ್ತು ನನಗಾಗಿ ಇರುವುದಲ್ಲ, ನಾನು ಜಗತ್ತಿಗಾಗಿ ಇರುತ್ತೇನೆ” ಎಂಬ ವೃತ್ತಿಯುಳ್ಳವರಾಗಬೇಕು.
[ಮಹಾರಾಜರ ಪ್ರವಚನದಿಂದ.
ಕೃಪೆ: ಶ್ರೀ ಚೈತನ್ಯಾಶ್ರಮ, ಹೆಬ್ಬಳ್ಳಿ.]