ತುರ್ತುಪರಿಸ್ಥಿತಿಯ ವೇಳೆ ಖಾಸಗಿ ಮಾಲೀಕತ್ವದ ಪತ್ರಿಕೆಗಳು ಮತ್ತು ಅವುಗಳಿಗೆ ಜಾಹೀರಾತು ನೀಡುವ ಖಾಸಗಿ ಜಾಹೀರಾತು ಸಂಸ್ಥೆಗಳನ್ನೇ ಬಗ್ಗಿಸಿ ತಮಗೆ ಬೇಕಾದ ರೀತಿಯಲ್ಲಿ ನಡೆಯುವಂತೆ ಮಾಡಿದ ಕೇಂದ್ರ ವಾರ್ತಾ ಮಂತ್ರಿ ವಿ.ಸಿ. ಶುಕ್ಲ ಅವರು ತಮ್ಮ ಕೈಯೊಳಗಿರುವ ಸರ್ಕಾರೀ ಮಾಧ್ಯಮಗಳನ್ನು ಹೇಗೆ ನಡೆಸಿಕೊಂಡಿರಬಹುದೆನ್ನುವುದು ಊಹೆಗೆ ನಿಲುಕದ ವಿಷಯವೇನಲ್ಲ. ತುರ್ತುಪರಿಸ್ಥಿತಿ ಕಾಲದಲ್ಲಿ ಅವುಗಳಿಗೆ ಎರಡು ಮುಖ್ಯ ಕೆಲಸಗಳಿದ್ದವು. ಅವುಗಳೆಂದರೆ:
೧) ಪೋಷಕತ್ವದ (Patronage) ಒಂದು ಮೂಲವಾಗಿರುವುದು.
೨) ಒಂದು ರಾಜಕೀಯ ಪಕ್ಷ ಮತ್ತದರ ಕೆಲವು ನಾಯಕರ ಪ್ರತಿಷ್ಠೆಯನ್ನು (ವರ್ಚಸ್ಸು) ಬೆಳೆಸುವುದು.
ಕಾಂಗ್ರೆಸ್ ಪಕ್ಷವು ತಂದ ವಿವಿಧ ಸ್ಮರಣ ಸಂಚಿಕೆಗಳಿಗೆ ಸರ್ಕಾರೀ ಸಂಸ್ಥೆ ಡಿಎವಿಪಿ ಮೂಲಕ ಜಾಹೀರಾತನ್ನು ಭಾರೀ ಪ್ರಮಾಣದಲ್ಲಿ ನೀಡಲಾಯಿತು. ವಿರೋಧಪಕ್ಷಗಳಿಗೆ ಅಂತಹ ಯಾವುದೇ ಪೋಷಕತ್ವ ಸಿಗಲಿಲ್ಲ. ಈ ರೀತಿಯಲ್ಲಿ ೧೯೭೪-೭೫ರಿಂದ ಮೂರು ವರ್ಷ ಕಾಂಗ್ರೆಸ್ ಮತ್ತದರ ಅಂಗಸಂಸ್ಥೆಗಳು ಜಾಹೀರಾತಿನ ಅಗಾಧ ಬೆಂಬಲ ಗಳಿಸಿದವು; ಪ್ರತಿಪಕ್ಷಗಳಿಗೆ ಇದು ಮೂರು ವರ್ಷಗಳಲ್ಲಿ ಕುಸಿದುಹೋಯಿತು.
ಕಾಂಗ್ರೆಸ್ನ ಪ್ರಕಟಣೆಗಳಿಗೆ ಜಾಹೀರಾತು ನೀಡಿದ್ದು ಮಾತ್ರ ಅಲ್ಲ; ನಡುವೆ ದರ ಏರಿಸಲು ಅವಕಾಶ ನೀಡಿ ತುಂಬ ಹಣ ನೀಡಿದರು. ದೆಹಲಿಯಲ್ಲಿ ಎಐಸಿಸಿ ಸಭೆ ನಡೆದಾಗ ಬಂದ ಸ್ಮರಣಸಂಚಿಕೆಯ ಪುಟಕ್ಕೆ ರೂ. ೧,೦೦೦ (ಅಂದಿನ ಮೊತ್ತ) ದರದಲ್ಲಿ ಇಪ್ಪತ್ತು ಪುಟ ಜಾಹೀರಾತು ಬಿಡುಗಡೆ ಮಾಡಿದರು; ಅದಕ್ಕೆ ಶುಕ್ಲ ಅವರ ಸೂಚನೆಯೂ ಇತ್ತು. ದೆಹಲಿ ಪ್ರದೇಶ ಕಾಂಗ್ರೆಸ್ ೧೯೭೬ರ ಮೇ ಮತ್ತು ಜೂನ್ನಲ್ಲಿ ಪುಟಕ್ಕೆ ರೂ. ೨೦೦೦ದಂತೆ ೪೦ ಸಾವಿರ ರೂ.ಗಳ ಬಿಲ್ ಕಳುಹಿಸಿತು. ಆಗ ಶುಕ್ಲರ ಆಪ್ತ ಕಾರ್ಯದರ್ಶಿ ಸಿ.ಕೆ. ಶರ್ಮ ಏರಿಸಿದ ದರದಲ್ಲಿ ಹಣ ಕೊಡಿ ಎಂದು ಶುಕ್ಲ ಹೇಳಿದ್ದಾರೆಂದು ಡಿಎವಿಪಿಗೆ (ಜಾಹೀರಾತು ಮತ್ತು ದೃಶ್ಯ ನಿರ್ದೇಶನಾಲಯ) ಸೂಚಿಸಿದರು.
ಆಕಾಶವಾಣಿ
ಆಕಾಶವಾಣಿ ಸುದ್ದಿ ಸೇವಾ ವಿಭಾಗದ ನಿರ್ದೇಶಕ ಎಸ್.ಸಿ. ಭಟ್ ಅವರು ಶಾ ಆಯೋಗದ ಮುಂದೆ ಈ ಹೇಳಿಕೆಯನ್ನು ನೀಡಿದರು: “ತುರ್ತುಪರಿಸ್ಥಿತಿ ಘೋಷಣೆಯಾದ ಬಳಿಕ ಆಕಾಶವಾಣಿಯ ಮೇಲೆ ಸರ್ಕಾರ ಬಿಗಿನಿಯಮಗಳನ್ನು ಹೇರಿತು. ಇಡೀ ತುರ್ತುಪರಿಸ್ಥಿತಿ ವೇಳೆ ಪ್ರಧಾನಿ ಇಂದಿರಾಗಾಂಧಿ ಮತ್ತವರ ಪುತ್ರ ಸಂಜಯಗಾಂಧಿ ಅವರ ಭಾಷಣಗಳಿಗೆ ಹೆಚ್ಚು ಪ್ರಚಾರ ನೀಡಬೇಕಾಗಿತ್ತು. ಲಿಖಿತ, ಅಲಿಖಿತ ಸೂಚನೆಗಳು ಸಚಿವ ಶುಕ್ಲರಿಂದಲೇ ಬರುತ್ತಿದ್ದವು; ಕೆಲವು ಸಲ ಪ್ರಧಾನಿ ಕಚೇರಿಯಿಂದಲೂ ಬರುತ್ತಿದ್ದವು. ‘ಸಮಾಚಾರ ದರ್ಶನ’ದಲ್ಲಿ ಇಂದಿರಾ ಅವರ ಭಾಷಣಗಳು ೧೭೧ ಸಲ ಮತ್ತು ಸಂಜಯಗಾಂಧಿ ಭಾಷಣಗಳು ೨೪ ಸಲ ಪ್ರಸಾರಗೊಂಡವು. ಅದಕ್ಕೆ ಹೊರತಾಗಿಯೂ ಸಂಜಯ್ ಅವರ ಬಗ್ಗೆ ವ್ಯಾಪಕ ಪ್ರಚಾರ ನೀಡಲಾಯಿತು. ಪ್ರಧಾನ ನ್ಯೂಸ್ ಬುಲೆಟಿನ್ನಲ್ಲಿ ಅವರ ಬಗ್ಗೆ ೧೯೨ ಐಟಮ್ಗಳು ಬಿತ್ತರಗೊಂಡವು.”
ಎಸ್.ಸಿ. ಭಟ್ ಅವರು ಮುಂದುವರಿದು, “ಕಾಂಗ್ರೆಸ್ನಲ್ಲೇ ಆಳುವ ಕೂಟದ ಕೃಪೆಯಿಂದ ಹೊರಬಿದ್ದವರ ಬಗ್ಗೆ ಆಕಾಶವಾಣಿ ನಿಂದನಾತ್ಮಕ ವರದಿಗಳನ್ನು ಪ್ರಚಾರ ಮಾಡಬೇಕಿತ್ತು. ಉದಾ: ಒಡಿಶಾದ ಮುಖ್ಯಮಂತ್ರಿ ನಂದಿನಿ ಸತ್ಪಥಿ ಅವರನ್ನು ಖಂಡಿಸುವ ಹಲವು ಸುದ್ದಿಗಳನ್ನು ಬಿತ್ತರಿಸಲಾಯಿತು. ಮತ್ತೆ ಅಲ್ಲಿ ರಾಷ್ಟçಪತಿ ಆಳ್ವಿಕೆಯನ್ನು ಹೇರಿದರು” ಎಂದು ತಿಳಿಸಿದರು. ವಿರೋಧಪಕ್ಷಗಳ ಬಗ್ಗೆ ಆಕಾಶವಾಣಿ ಗಾಢ ಮೌನ ತಳೆಯುತ್ತಿತ್ತು. ೧೯೭೬ರ ಡಿಸೆಂಬರ್ನಲ್ಲಿ ಕಾಂಗ್ರೆಸ್ ವಕ್ತಾರರ ಹೇಳಿಕೆಗೆ ೨೨೦೭ ಸಾಲು ದೊರೆತರೆ, ಪ್ರತಿಪಕ್ಷಗಳಿಗೆ ಸಿಕ್ಕಿದ್ದು ಕೇವಲ ೩೪ ಸಾಲು. ೧೯೭೪ರ ಡಿಸೆಂಬರ್ನಲ್ಲಿ (ತುರ್ತುಪರಿಸ್ಥಿತಿಗೆ ಮುನ್ನ) ಅದು ಅನುಕ್ರಮವಾಗಿ ೫೭೧ ಮತ್ತು ೫೨೨ ಸಾಲುಗಳಾಗಿತ್ತು.
೧೯೭೭ರ ಆರಂಭದ ಲೋಕಸಭಾ ಚುನಾವಣೆಯ ವೇಳೆ ಅಕಾಶವಾಣಿ ಪ್ರತಿಪಕ್ಷಗಳ ಸುದ್ದಿಯನ್ನು ತಿರುಚುತ್ತಿತ್ತು; ಮತ್ತು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಸುದ್ದಿಯ ಅನುಪಾತ ೮.೫:೧ ರಷ್ಟಿತ್ತು. ಆಕಾಶವಾಣಿ ಸುದ್ದಿಪ್ರಸಾರಕ್ಕೆ ಮುನ್ನ ವಾರ್ತಾ-ಪ್ರಸಾರ ಇಲಾಖೆ ಕಾರ್ಯದರ್ಶಿ ಬರ್ನಿ ಅಥವಾ ಹೆಚ್ಚುವರಿ ಕಾರ್ಯದರ್ಶಿ ಪ್ರಸಾದ್ ಅವರ ಒಪ್ಪಿಗೆ ಪಡೆದಿರಬೇಕಿತ್ತು. ಏಕೆಂದರೆ ಇಂದಿರಾಗಾಂಧಿಯವರು ಒಮ್ಮೆ ಬರ್ನಿ ಅವರನ್ನು ಕರೆದು ‘ವಾರ್ತಾ ಇಲಾಖೆಯು ಪತ್ರಿಕೆಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ, ಆಕಾಶವಾಣಿ ಮತ್ತು ದೂರದರ್ಶನಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ದೂರಿದ್ದರು. ಅನಂತರ ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿ ಬುಲೆಟಿನ್ಗಳಿಗೆ ಒಪ್ಪಿಗೆ ನೀಡುವ ಕ್ರಮ ಬಂದಿತ್ತು.
ಮಾರ್ಚ್ ೧೯೭೬ರಲ್ಲಿ ಆಕಾಶವಾಣಿಗೆ ೧೪೦ ಅರೆಕಾಲಿಕ ಬಾತ್ಮೀದಾರರನ್ನು ನೇಮಿಸುವ ಪ್ರಸ್ತಾವ ಬಂತು. ಈಗಾಗಲೇ ವರ್ತಮಾನ ಪತ್ರಿಕೆಗಳಲ್ಲಿ ಕೆಲಸ ಮಾಡುವವರನ್ನು ಹೆಚ್ಚುವರಿಯಾಗಿ ಇದಕ್ಕೆ ನೇಮಿಸುವುದು ಹಿಂದಿನ ಕ್ರಮವಾಗಿತ್ತು. ಸಚಿವ ಶುಕ್ಲ ಅದನ್ನು ಬದಲಿಸಿದರು. ಸಮಿತಿಯೊಂದು ಆರಿಸಿ ಸಚಿವರ ಒಪ್ಪಿಗೆ ಪಡೆದು ನೇಮಿಸಬೇಕೆಂದು ತೀರ್ಮಾನಿಸಿದರು. ಆ ರೀತಿ ಕೆಲವರ ನೇಮಕಾತಿಯೂ ನಡೆಯಿತು. ಆದರೆ ಅವರೆಲ್ಲ ಕಾಂಗ್ರೆಸ್ ಪದಾಧಿಕಾರಿಗಳು. ಅವರ ರಾಜಕೀಯ ಹಿನ್ನೆಲೆ ತಿಳಿದರೂ ಅವರನ್ನು ನೇಮಿಸಿದರು. ರಾಜಕೀಯ ಪಕ್ಷದವರನ್ನು ನೇಮಿಸಬಾರದೆಂಬ ನಿಷೇಧವನ್ನು ರದ್ದುಪಡಿಸಿದರು; ಆದರೆ ಬೇರೆ ಪಕ್ಷಗಳ ಬೆಂಬಲಿಗರ ನೇಮಕ ನಡೆಯಲೇ ಇಲ್ಲ.
ದೂರದರ್ಶನ
ದೂರದರ್ಶನವು ಹೆಚ್ಚು ಪ್ರಚಲಿತ ಇಲ್ಲದಿದ್ದರೂ ೧೯೭೫ರ ಡಿಸೆಂಬರ್ ಅನಂತರ ಅದರಲ್ಲಿ ಸಂಜಯಗಾಂಧಿಯವರ ಪ್ರಚಾರ ಜೋರಾಯಿತು. ಅದಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಿದರು. ಅದಕ್ಕೆ ಸಚಿವ ಶುಕ್ಲ ಅವರ ಸಮರ್ಥನೆ ಇದ್ದೇ ಇತ್ತು.
ಸರ್ಕಾರದ ಚಲನಚಿತ್ರ ವಿಭಾಗವು ಸಂಜಯಗಾಂಧಿಯವರ ಬಗ್ಗೆ ಹಲವಾರು ಸಿನೆಮಾ (ಸಾಕ್ಷ್ಯಚಿತ್ರ)ಗಳನ್ನು ತಯಾರಿಸಿತು. ಕೇವಲ ಯುವನಾಯಕ ಅಲ್ಲ; ಒಬ್ಬ ಸ್ವಯಂನಾಯಕ ಎಂಬ ರೀತಿಯಲ್ಲಿ ಅವರನ್ನು ಚಿತ್ರಿಸಲಾಯಿತು. ಸಂಜಯ್ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ಚಿತ್ರಿಸುವ ಬಗ್ಗೆ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸುತ್ತಿದ್ದರು.
ಸರ್ಕಾರದ ಇನ್ನೊಂದು ಮಾಧ್ಯಮ ವಿಭಾಗವಾದ ಕ್ಷೇತ್ರಪ್ರಚಾರ, ಹಾಡು, ನಾಟಕ, ನಿರ್ದೇಶನಾಲಯವನ್ನು ಕೂಡ ಇಂದಿರಾಗಾಂಧಿ ಮತ್ತು ಕಾಂಗ್ರೆಸ್ಗೆ ಭಾರೀ ಪ್ರಚಾರ ನೀಡುವಂತೆ ಸಜ್ಜುಗೊಳಿಸಲಾಗಿತ್ತು. ಹಿಂದೆ ಪ್ರಧಾನ ವಾರ್ತಾಧಿಕಾರಿಯಾಗಿದ್ದ ಡಾ|| ಎ.ಆರ್. ಬಾಜಿ ಮುಂದೆ ಕ್ಷೇತ್ರ ಪ್ರಚಾರದ ನಿರ್ದೇಶಕರಾದರು. ‘ಸಾಧನೆಯ ದಶಕ’, ‘ಸಿದ್ಧಿಯ ವರ್ಷ’ ಮುಂತಾದ ಹೆಸರುಗಳಿಂದ ಪ್ರಧಾನಿ ಇಂದಿರಾ ಅವರಿಗೆ ಸಂಬಂಧಿಸಿ ಬಹುಮಾಧ್ಯಮ ಪ್ರಚಾರಾಂದೋಲನಗಳನ್ನು ನಡೆಸಲಾಯಿತು. ಆ ಬಗ್ಗೆ ಸರ್ಕಾರೀ ಮಾಧ್ಯಮ ವಿಭಾಗಗಳಿಗೆ ಸವಿವರವಾದ ಸೂಚನೆಯಿತ್ತು. ಗ್ರಾಮೀಣ, ಅರೆಪಟ್ಟಣ ಪ್ರದೇಶಗಳಲ್ಲಿ ಭಾರೀ ಪ್ರಚಾರ ನಡೆಸಿದರು. ಆಕಾಶವಾಣಿಯು ಇಂದಿರಾ ಅವರ ಇನ್ನೂರು ಕೊಟೇಶನ್ಗಳನ್ನು ಆರಿಸಿಕೊಂಡು ಪ್ರತಿದಿನ ೫-೧೦ ಕೊಟೇಶನ್ಗಳ ಪ್ರಸಾರ ಮಾಡಿತು. ಇಂದಿರಾ ಅವರ ಪುಸ್ತಕಗಳಿಗೆ ವ್ಯಾಪಕ ಪ್ರಚಾರ ನೀಡಲಾಯಿತು. ಶಾ ಆಯೋಗದ ಮುಂದೆ ಸಾಕ್ಷ್ಯ ನೀಡಿದ ವಾರ್ತಾ ಮಂತ್ರಿ ವಿ.ಸಿ. ಶುಕ್ಲ “ಇಂದಿರಾ ಅವರ ಇಮೇಜ್ ಸೃಷ್ಟಿಸಲು ಇದೆಲ್ಲ ಮಾಡಿದ್ದಲ್ಲ; ಬದಲಾಗಿ ಸರ್ಕಾರದ ಇಮೇಜ್ಗಾಗಿ ಮಾಡಿದ್ದು” ಎಂದರು. ಸರ್ಕಾರದೊಳಗೇ ಮಾಡಿದ್ದು; ಹೊರಗಿನವರ ಮೇಲೆ ಹೇರಿದ್ದಲ್ಲ ಎಂದು ಕೂಡ ಸಮರ್ಥಿಸಿಕೊಂಡರು. ೧೯೭೭ರ ಚುನಾವಣೆಯ ಅಂಗವಾಗಿ ಇನ್ನೊಂದು ಬಹುಮಾಧ್ಯಮ ಪ್ರಚಾರಾಂದೋಲನವನ್ನು ಹಮ್ಮಿಕೊಳ್ಳಲಾಯಿತು. ಆಗ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ವ್ಯತ್ಯಾಸವೇ ಕಾಣಿಸುತ್ತಿರಲಿಲ್ಲ.
ಬಂಧನ, ಸೆರೆಮನೆ ವಾಸ
ದೇಶಾದ್ಯಂತ ಭಾರೀ ಸಂಖ್ಯೆಯಲ್ಲಿ ಅಮಾಯಕರನ್ನು ಬಂಧಿಸಿ ಸೆರೆಮನೆಗೆ ತಳ್ಳಿದ್ದು ಮತ್ತು ಜಾಮೀನು ಸಿಗದಂತೆ ಮಾಡಿ, ಅನಿರ್ದಿಷ್ಟಾವಧಿವರೆಗೆ ವಿಚಾರಣೆಯಿಲ್ಲದೆ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದು ದೇಶದ ತುರ್ತುಪರಿಸ್ಥಿತಿಯ ಹೆಗ್ಗುರುತಾಗಿತ್ತು. ಆ ಬಂಧನಗಳು ‘ಮೀಸಾ’ ಎಂದು ಕುಖ್ಯಾತವಾದ ಆಂತರಿಕ ಭದ್ರತೆ ನಿರ್ವಹಣಾ ಕಾಯ್ದೆ (Maintenance of Internal Security Act) ಪ್ರಕಾರ ನಡೆದವು. ೧೯೭೧ರಲ್ಲಿ ಆ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು.
ಅಂದು ಅದನ್ನು ಮಂಡಿಸಿದ ಗೃಹಸಚಿವ ಕೆ.ಸಿ. ಪಂತ್ ಅವರು “ದೇಶದಲ್ಲಿರುವ ಪರಿಸ್ಥಿತಿ ಮತ್ತು ಗಡಿಭಾಗದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅದನ್ನು ತಡೆಯಲು ತುರ್ತು ಮತ್ತು ಪರಿಣಾಮಕಾರಿ ಮುಂಜಾಗ್ರತಾ ಕ್ರಮವು ಅವಶ್ಯವೆನಿಸಿದೆ. ರಾಷ್ಟçದ ಭದ್ರತೆಯ ದೃಷ್ಟಿಯಿಂದ ಇದು ಅವಶ್ಯವಾಗಿದ್ದು, ಅದಕ್ಕಾಗಿ ಮುಂಜಾಗ್ರತಾ ಬಂಧನಗಳನ್ನು ಮಾಡಬೇಕು. ಮುಖ್ಯವಾಗಿ ಬಾಹ್ಯಮೂಲಗಳಿಂದ, ವಿದೇಶೀ ಗೂಢಚರ ಚಟುವಟಿಕೆಗಳಿಂದ ಅಪಾಯವಿದ್ದು, ಅದರ ಬಗ್ಗೆ ಈಗಾಗಲೆ ಇರುವ ಕಾನೂನುಗಳು ಸಾಲದೆನಿಸಿವೆ. ಆದ್ದರಿಂದ ಆಂತರಿಕ ಭದ್ರತೆ ನಿರ್ವಹಣೆ ಕಾಯ್ದೆ-೧೯೭೧ನ್ನು ತರಲಾಗುತ್ತಿದೆ” ಎಂದಿದ್ದರು. ಆಗ ಸಂಸತ್ನಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ಜನಸಂಘದ ನಾಯಕ ಅಟಲ್ಬಿಹಾರಿ ವಾಜಪೇಯಿ ಅವರು “ಇದು ಪೊಲೀಸ್ ರಾಜ್ಯದ ಆರಂಭ ಮತ್ತು ಪ್ರಜಾಪ್ರಭುತ್ವಕ್ಕೊಂದು ಕಪ್ಪು ಚುಕ್ಕೆ. ಇದು ಸರ್ವಾಧಿಕಾರದ ಕಡೆಗಿನ ಮೊದಲ ಹೆಜ್ಜೆ… ಈ ಅಧಿಕಾರವನ್ನು ವಿದೇಶೀ ಗೂಢಚರರ ವಿರುದ್ಧ ಬಳಸಲಾಗುವುದಿಲ್ಲ. ಬದಲಾಗಿ ರಾಜಕೀಯ ವಿರೋಧಿಗಳ ವಿರುದ್ಧ ಬಳಸುವುದು ಸತ್ಯ” ಎಂದು ಆಕ್ಷೇಪಿಸಿದ್ದರು. ತುರ್ತುಪರಿಸ್ಥಿತಿಯ ವೇಳೆ ವಾಜಪೇಯಿ ಅವರ ಈ ಮಾತು ಅಕ್ಷರಶಃ ನಿಜವಾಯಿತು.
ತುರ್ತುಪರಿಸ್ಥಿತಿಯ ವೇಳೆ ದೆಹಲಿಯಲ್ಲಿ ಒಟ್ಟು ೧,೦೧೨ ಜನರನ್ನು ಮೀಸಾ ಅಡಿಯಲ್ಲಿ ಬಂಧಿಸಲಾಯಿತು. ಅದರಲ್ಲಿ ೧೪೬ ಜನ ಆರೆಸ್ಸೆಸ್ ಮುಂತಾದ ನಿಷೇಧಿತ ಸಂಘಟನೆಗಳಿಗೆ ಸೇರಿದವರಾದರೆ, ೧೮೦ ಜನ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದವರು; ಅಂದರೆ ಸಿಪಿಐಗೆ ಹೊರತಾದ ವಿವಿಧ ವಿರೋಧಪಕ್ಷಗಳವರು (ಸಿಪಿಐ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿದರೆ ಸಿಪಿಐಎಂ ಅದನ್ನು ವಿರೋಧಿಸಿತ್ತು); ೫೩೮ ಜನ ಆರ್ಥಿಕ ಅಪರಾಧಿಗಳ ಸಹಿತ ವಿವಿಧ ಅಪರಾಧಿ (ಕ್ರಿಮಿನಲ್)ಗಳು ಮತ್ತು ೫೧ ಜನ ಸಾರ್ವಜನಿಕ ಸೇವಕರು.
ಇದರ ಹಿನ್ನೆಲೆಯನ್ನು ಗಮನಿಸುವುದಾದರೆ, ತುರ್ತುಪರಿಸ್ಥಿತಿ ವೇಳೆ ದೇಶಾದ್ಯಂತ ಮೀಸಾ ಅಡಿಯಲ್ಲಿ ಮಾಡಿದ ಬಂಧನಗಳು ನಾಲ್ಕು ವರ್ಗಗಳಿಗೆ ಸೇರುತ್ತವೆ. ಅವುಗಳೆಂದರೆ,
೧. ವಿರೋಧಪಕ್ಷಗಳ ನಾಯಕರು, ಮತ್ತವರ ಸಹವರ್ತಿಗಳು ಹಾಗೂ ಬೆಂಬಲಿಗರು.
೨. ಆರೆಸ್ಸೆಸ್, ಜೆಇಐ, ಆನಂದಮಾರ್ಗ, ಸಿಐಐಎಂಎಲ್ (ನಕ್ಸಲೀಯರು) ನಂತಹ ನಿಷೇಧಿತ ಸಂಘಟನೆಗಳ ಸದಸ್ಯರು, ಅವರ ಸಹವರ್ತಿಗಳು.
೩. ಕ್ರಿಮಿನಲ್ಗಳು.
೪. ಸಮಾಜವಿರೋಧಿ ಶಕ್ತಿಗಳು ಮತ್ತು ಆರ್ಥಿಕ ಅಪರಾಧಿಗಳು.
ಜೂನ್ ೨೫ರ ಸಂಜೆ
೧೯೭೫ರ ಜೂನ್ ೨೫ರ ಸಂಜೆ ಇತರ ವಲಯಗಳಲ್ಲಿ ಅಂಥದ್ದೇನೂ ವ್ಯತ್ಯಾಸ ಇಲ್ಲದಿದ್ದರೂ ದೆಹಲಿಯ ಅಧಿಕಾರ ಕೇಂದ್ರಗಳಲ್ಲಿ ಭಾರೀ ಸಂಚಲನ ಶುರುವಾಯಿತು. ರಾಜ ನಿವಾಸದಲ್ಲೊಂದು ಸಭೆ ನಡೆಯಿತು. ಅಲ್ಲಿ ಉಪರಾಜ್ಯಪಾಲ (ಲೆಫ್ಟಿನೆಂಟ್ ಗವರ್ನರ್) ಕೃಷನ್ಚಂದ್ ಅವರು ‘ಸಿಪಿಐಗೆ ಹೊರತಾದ ವಿರೋಧಪಕ್ಷಗಳ ನಾಯಕರನ್ನು ಶೀಘ್ರಾತಿಶೀಘ್ರ ಬಂಧಿಸಬೇಕು; ಬಂಧನಗಳು ಮೀಸಾ ಅಡಿಯಲ್ಲಿ ನಡೆಯಬೇಕು’ ಎಂದು ಆದೇಶ ಹೊರಡಿಸಿದರು. ಅಷ್ಟರಲ್ಲಿ ರಾತ್ರಿಯಾಯಿತು. ಮೊದಲಿಗೆ ಒತ್ತಡ ಬಂದದ್ದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ಸುಶೀಲ್ಕುಮಾರ್ ಅವರ ಮೇಲೆ.
ಮೀಸಾ ಅಡಿಯಲ್ಲಿ ಸಮಯ ಮಿತಿಯೊಳಗೆ ಬಂಧನ ಕಷ್ಟ; ಭಾರತೀಯ ದಂಡಸಂಹಿತೆಯ (ಐಪಿಸಿ) ಮುಂಜಾಗ್ರತಾ ಕ್ರಮದ ಬಂಧನದ ಅಡಿಯಲ್ಲಿ ಬಂಧಿಸಬಹುದೆಂದು ಸುಶೀಲ್ಕುಮಾರ್ ಪ್ರಮುಖ ನಾಯಕರ ಬಂಧನದ ವಿಷಯದಲ್ಲಿ ಎಚ್ಚರ ವಹಿಸಲು ಬಯಸಿದರು. ಉಪರಾಜ್ಯಪಾಲರು ಅದಕ್ಕೊಪ್ಪದೆ ಮೀಸಾ ಅಡಿಯಲ್ಲೇ ಬಂಧನಗಳಾಗಬೇಕೆಂದು ಪಟ್ಟು ಹಿಡಿದರು. ಅನಂತರ ಸುಶೀಲ್ಕುಮಾರ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳನ್ನು (ಎಡಿಎಂ) ತಮ್ಮ ನಿವಾಸಕ್ಕೆ ಕರೆದು ಬಂಧನದ ಆದೇಶಗಳನ್ನು ಸಿದ್ಧಪಡಿಸಲು ಆರಂಭಿಸಿದರು.
ಅವರ ಮೇಲೆ ಒಂದು ಕಡೆಯಿಂದ ಉಪರಾಜ್ಯಪಾಲ ಕೃಷನ್ಚಂದ್ ಅವರ ಒತ್ತಡವಾದರೆ ಇನ್ನೊಂದು ಕಡೆಯಿಂದ ಪ್ರಧಾನಿ ಇಂದಿರಾಗಾಂಧಿಯವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಆರ್.ಕೆ. ಧವನ್ ಅವರು ಬಂಧನದ ಆದೇಶಗಳು ಶೀಘ್ರ ಬಂದು ಪ್ರತಿಪಕ್ಷ ನಾಯಕರ ಬಂಧನವಾಗಬೇಕೆಂದು ತೀವ್ರ ಒತ್ತಡ ತರುತ್ತಿದ್ದರು. ಎಲ್ಲ ಬಂಧನಗಳು ಏಕಕಾಲದಲ್ಲಿ ನಡೆಯಬೇಕೆಂಬ ಪ್ರಯತ್ನ ಕೂಡ ಅವರದಾಗಿತ್ತು. ಮಾಹಿತಿ ಸೋರಿಕೆಯಾಗಿ ಯಾರೂ ತಪ್ಪಿಸಿಕೊಳ್ಳಬಾರದು. ಅದಕ್ಕಾಗಿ ರಾತ್ರಿ (ಜೂನ್ ೨೫-೨೬ರ ರಾತ್ರಿ) ಬೆಳಗಾಗುವುದರೊಳಗೆ ಎಲ್ಲ ಬಂಧನಗಳು ಮುಗಿಯಬೇಕೆಂದು ಚಡಪಡಿಸುತ್ತಿದ್ದರು.
ಈ ನಡುವೆ ಸುಶೀಲ್ಕುಮಾರ್ ಓರ್ವ ಎಡಿಎಂ ಜೊತೆ ಪ್ರಧಾನಿ ನಿವಾಸಕ್ಕೆ ಹೋಗಿ, ಮೀಸಾ ಅಡಿಯಲ್ಲಿ ನಡೆಯುವ ಬಂಧನದ ಕಾನೂನು ಪ್ರಕ್ರಿಯೆ ತೊಡಕಿನ ಬಗ್ಗೆ ಹೇಳಿ ವಿಳಂಬವಾಗಬಹುದು ಎಂದರು. ಅದಕ್ಕಾಗಿ ಸಿಪಿಸಿ ಮುಂಜಾಗ್ರತೆ ಕ್ರಮದಂತೆ ಬಂಧಿಸಬಹುದು. ಅದನ್ನು ಉಪರಾಜ್ಯಪಾಲರಿಗೆ ತಿಳಿಸಿ ಎಂದು ವಿನಂತಿಸಿದರು. ಆಗ ಆರ್.ಕೆ. ಧವನ್ ಸರ್ಕಾರವು ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ; ಎಲ್ಲೆಡೆ ಪ್ರತಿಪಕ್ಷ ನಾಯಕರ ಬಂಧನ ಆಗುತ್ತಿದೆ ಎಂದು ತಿಳಿಸಿದರು. ಈಗಾಗಲೆ ತಡವಾದ ಬಗ್ಗೆ ಆಕ್ಷೇಪಿಸಿದ ಧವನ್, ಪೊಲೀಸ್ ಅಧಿಕಾರಿಗಳಿಗೆ ಕೂಡಲೆ ವಾರಂಟ್ಗಳನ್ನು ಹಸ್ತಾಂತರಿಸಿ; ಔಪಚಾರಿಕತೆ (formalities)ಎಲ್ಲ ಬೇಡ ಎಂದು ಮಾರ್ಗದರ್ಶನ ಮಾಡಿದರು.
ಆರ್.ಕೆ. ಧವನ್ ಕಾರ್ಯಾಚರಣೆ
ಶಾ ಆಯೋಗದ ಮುಂದೆ ನೀಡಿದ ಹೇಳಿಕೆಯಲ್ಲಿ ಸುಶೀಲ್ಕುಮಾರ್ “ಧವನ್ ಅವರು ಹೇಳಿದ ರೀತಿ ಮತ್ತು ‘ವಾರಂಟ್ ಕೊಡಿ’ ಎಂದು ಹೇಳುವಾಗ ಅವರ ಸ್ವರ ಆಕ್ರಮಣಕಾರಿ ಹಾಗೂ ಬೆದರಿಕೆ ಹಾಕುವಂತಿದ್ದವು. ನನಗೆ ಬಂದ ಸ್ಪಷ್ಟ ಅಭಿಪ್ರಾಯವೆಂದರೆ, ವಾರಂಟ್ ಕೊಡುವುದಕ್ಕೆ ನಾನು ತಡ ಮಾಡಿದರೆ ನನಗೇ ವೈಯಕ್ತಿಕವಾಗಿ ಅಪಾಯ ಆಗಬಹುದು ಎನ್ನಿಸಿತು” ಎಂದರು. ಧವನ್ ತಮ್ಮ ಮಾತಿಗೆ ತುಂಬಾ ಒತ್ತು ನೀಡಿದರು; ಮತ್ತು ಆತ ಪ್ರಧಾನಿ ಇಂದಿರಾ ಅವರ ಪರವಾಗಿ ಮಾತನಾಡುತ್ತಿದ್ದಾರೆ ಅನ್ನಿಸಿತು – ಎಂದು ಜಿಲ್ಲಾ ಮ್ಯಾಜಿಸ್ಟೆçÃಟ್ ಆಯೋಗಕ್ಕೆ ತಿಳಿಸಿದರು. ನಿಜವಾಗಿ ಧವನ್ ಆಗ ಪ್ರಧಾನಿ ಅವರ ಪರವಾಗಿಯೇ ಮಾತನಾಡಿದ್ದರು.
ಹೀಗೆ ತುರ್ತುಪರಿಸ್ಥಿತಿಯ ಘೋಷಣೆ ಆದ ಕೂಡಲೆ ಮೀಸಾ ಕೆಳಗಿನ ಬಂಧನಗಳ ಬಗ್ಗೆ ನಿರ್ಧರಿಸಲಾಯಿತು. ಜೂನ್ ೨೫ರ ರಾತ್ರಿ ಸುಶೀಲ್ಕುಮಾರ್ ೬೭ ವ್ಯಕ್ತಿಗಳ ಬಂಧನಕ್ಕೆ ಆಜ್ಞೆ ಹೊರಡಿಸಿದರು. ಮುಖ್ಯವಾಗಿ ದೆಹಲಿ ಸಿಐಡಿ ಪೊಲೀಸ್ ಸೂಪರಿಂಟೆಂಡೆಂಟ್ ಕೆ.ಎಸ್. ಬಾಜ್ವಾ ಅವರು ನೀಡಿದ ಪಟ್ಟಿಯಂತೆ ಈ ಬಂಧನಗಳನ್ನು ಮಾಡಲಾಯಿತು. ಬಂಧನದ ಆದೇಶ ಹೊರಡಿಸುವಾಗ ಜಿಲ್ಲಾ ಮ್ಯಾಜಿಸ್ಟ್ರೇಟರ ಮುಂದೆ ಈ ಪಟ್ಟಿಗೆ ಹೊರತಾಗಿ ಬಂಧನವನ್ನು ಸಮರ್ಥಿಸುವ ಬೇರಾವುದೇ ಸಾಮಗ್ರಿ (material) ಇರಲಿಲ್ಲ. ಇದು ಮೀಸಾ ಕಾಯ್ದೆಗೆ ಕೂಡ ವಿರುದ್ಧವಾಗಿತ್ತು. ಏಕೆಂದರೆ ಮೀಸಾದ ಸೆಕ್ಷನ್ ೩ರ ಪ್ರಕಾರ ಬಂಧನ ಆಜ್ಞೆ ಹೊರಡಿಸುವವರಿಗೆ ಸಮಾಧಾನ ತರುವಂತಹ ಸಾಮಗ್ರಿ, ದಾಖಲೆಗಳು ಅಲ್ಲಿರಬೇಕು. ಒತ್ತಡದ ಕಾರಣದಿಂದ ಸುಶೀಲ್ಕುಮಾರ್ ಹಾಗೂ ಎಡಿಎಂಗಳು ಕಾನೂನನ್ನು ಪೂರ್ತಿಯಾಗಿ ಉಲ್ಲಂಘಿಸಿದರು.
ಕೆ.ಎಸ್. ಬಾಜ್ವಾ ತನ್ನ ಹೇಳಿಕೆಯಲ್ಲಿ, ಅಂದು ತಾನು ಜಿಲ್ಲಾಧಿಕಾರಿಯವರಿಗೆ ಬಂಧನದ ಬಗ್ಗೆ ೧೫೯ ಜನ ರಾಜಕೀಯ ನಾಯಕರ, ಕಾರ್ಯಕರ್ತರ ಪಟ್ಟಿ ನೀಡಿದ್ದೆ. ಉಪರಾಜ್ಯಪಾಲರು ಅಂದು ರಾತ್ರಿ ೯ ಗಂಟೆಯ ಹೊತ್ತಿಗೆ ತನಗೆ ಆ ಪಟ್ಟಿಯನ್ನು ನೀಡಿದರು. ಬಂಧನಕ್ಕೆ ಕಾರಣವಾಗುವ ಸಾಮಗ್ರಿಯನ್ನು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ಗೆ ಮರುದಿನ ನೀಡಿದರು ಎಂದು ತಿಳಿಸಿದರು. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ, ಬಂಧಿಸುವ ಅಧಿಕಾರಿಯಾದ ಜಿಲ್ಲಾಧಿಕಾರಿಯವರ ಮುಂದೆ ಬಂಧನದ ಆದೇಶ ನೀಡುವಾಗ ಯಾವುದೇ ಸಾಮಗ್ರಿ ಇರಲಿಲ್ಲ; ಅಂದರೆ ಅದು ಕಾನೂನುಬಾಹಿರವಾಗಿತ್ತು. ಹೀಗಿದ್ದರೂ “ನೆರೆರಾಜ್ಯಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಬಂಧನಗಳು ನಡೆದಿವೆ; ದೆಹಲಿ ಸಿಐಡಿ ಪೊಲೀಸರು ಸಣ್ಣ ಪಟ್ಟಿಯನ್ನು ನೀಡಿದರೆಂದು” ಜೂನ್ ೨೬ರಂದು ಡಿಐಜಿ ಪಿ.ಎಸ್. ಭಿಂದರ್ ತನಗೆ ತಿಳಿಸಿದರೆಂದು ಬಾಜ್ವಾ ಹೇಳಿದ್ದರು.
ಇಂದಿರಾ ನಿರ್ದೇಶನ
ಮೀಸಾ ಕೆಳಗಿನ ಪ್ರಸ್ತುತ ಬಂಧನಗಳ ಬಗ್ಗೆ ನಿರ್ದೇಶನವನ್ನು ನೀಡಿದವರು ಸ್ವತಃ ಇಂದಿರಾಗಾಂಧಿ ಅವರೇ ಎಂಬುದು ದೆಹಲಿ ಐಜಿಪಿ ಭವಾನಿಮಾಲ್ ಅವರ ಹೇಳಿಕೆಯಿಂದಲೂ ಖಚಿತವಾಯಿತು: “ಅಂದು ಮಧ್ಯರಾತ್ರಿ ಹೊತ್ತಿಗೆ ಆರ್.ಕೆ. ಧವನ್ ನನ್ನನ್ನು ಕರೆದು ಪ್ರತಿಪಕ್ಷದವರ ಬಂಧನ ವಿಳಂಬವಾಗುತ್ತಿದೆ ಎಂದು ಆಕ್ಷೇಪಿಸಿದರು; ಮತ್ತು ಪ್ರತಿಪಕ್ಷನಾಯಕರ ಬಂಧನದ ವಿಷಯದಲ್ಲಿ ದೆಹಲಿ ಪೊಲೀಸರು ಅಂಜುತ್ತಿದ್ದಾರೆಯೆ? – ಎಂದು ಕೇಳಿದರು. ಅದಕ್ಕೆ ನಾನು ಜಿಲ್ಲಾಧಿಕಾರಿಗಳು ಬಂಧನದ ಆದೇಶ ನೀಡುತ್ತಲೇ ನಾವು ಬಂಧಿಸುತ್ತೇವೆ ಎಂದು ಧವನ್ರಿಗೆ ಹೇಳಿದೆ – ಎಂದವರು ಆಯೋಗಕ್ಕೆ ತಿಳಿಸಿದರು.
ಉಪರಾಜ್ಯಪಾಲ ಕೃಷನ್ಚಂದ್ ಶಾ ಆಯೋಗಕ್ಕೆ ಹೇಳಿಕೆ ನೀಡಿ, ‘ಜೂನ್ ೨೫ರಂದು ಸಂಜೆ ಪ್ರಧಾನಿ ನಿವಾಸದಲ್ಲಿ ಜರಗಿದ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಮೀಸಾ ಬಂಧನಗಳು ನಡೆದವು. ಅದೊಂದು ರಾಜಕೀಯ ನಿರ್ಧಾರವಾಗಿದ್ದು, ತುರ್ತುಪರಿಸ್ಥಿತಿ ಹೇರಿಕೆಯ ಭಾಗವಾಗಿ ಅಂದು ರಾತ್ರಿ ಬಂಧನಗಳು ನಡೆದವು’ ಎಂದರು. ದಂಡಸಂಹಿತೆಯ ಮುಂಜಾಗ್ರತೆ ಕ್ರಮದಂತೆ ಈ ಬಂಧನಗಳನ್ನು ಮಾಡಬೇಕು. ಇದರಲ್ಲಿ ನ್ಯಾಯಾಲಯಗಳ ಪ್ರವೇಶವಾಗಿ ಗಂಭೀರ ಕಷ್ಟಗಳು ಎದುರಾಗಬಹುದಿತ್ತು. ಸುಶೀಲ್ಕುಮಾರ್ ಅಂದು ರಾತ್ರಿ ಆರ್.ಕೆ. ಧವನ್ರನ್ನು ಕಂಡಾಗ ಅದೇ ಮಾತು ಬಂತು. ಬಂಧನಗಳ ಬಗ್ಗೆ ಒಂದು ಪಟ್ಟಿ ಜೂನ್ ೧೨ರಂದು ಪ್ರಧಾನಿ ನಿವಾಸದಲ್ಲೇ ತಯಾರಾಗಿತ್ತು. ಆ ಸಭೆಯಲ್ಲಿ ಗೃಹಖಾತೆ ರಾಜ್ಯ ಮಂತ್ರಿ ಓಂ ಮೆಹ್ತಾ, ಸಿಐಡಿಯ ಎಸ್.ಪಿ. ಬಾಜ್ವಾ ಹಾಗೂ ಧವನ್ ಭಾಗವಹಿಸಿದ್ದರು. ಅದಕ್ಕೆ ಕೆಲವು ಹೆಸರುಗಳನ್ನು ಸೇರಿಸುವುದು, ಕೆಲವನ್ನು ಕೈಬಿಡುವುದು ನಡೆದೇ ಇತ್ತು. ರಾಂಧನ್ ಅವರ ಹೆಸರು ಮೊದಲು ಇರಲಿಲ್ಲ; ಮತ್ತೆ ಸೇರಿಸಿದರು. ಕೆ.ಡಿ. ಮಾಲವೀಯ ಮತ್ತು ಪತ್ರಕರ್ತ ಬಿ.ಜಿ. ವರ್ಗೀಸ್ ಅವರ ಹೆಸರು ಮೊದಲು ಇತ್ತು. ಅಂತಿಮಪಟ್ಟಿಯಲ್ಲಿ ಅದನ್ನು ಕೈಬಿಡಲಾಯಿತು. ೩೦-೪೦ ಹೆಸರುಗಳಿದ್ದ ಅಂತಿಮಪಟ್ಟಿಯನ್ನು ಕೃಷನ್ಚಂದ್ ಪ್ರಧಾನಿ ನಿವಾಸದಲ್ಲಿ ನೋಡಿದ್ದರು. ಅದರಲ್ಲಿ ಪ್ರತಿಪಕ್ಷಗಳ ಪ್ರಮುಖ ನಾಯಕರ ಹೆಸರು ಮಾತ್ರ ಇತ್ತು. ಅವರೊಂದಿಗೆ ಅವರ ಬೆಂಬಲಿಗರನ್ನು ಕೂಡ ಬಂಧಿಸಲು ನಿರ್ಧರಿಸಲಾಯಿತು. ಬೆಂಬಲಿಗರ ಹೆಸರುಗಳನ್ನು ಆರಿಸುವ ಕೆಲಸವನ್ನು ಎಸ್.ಪಿ. ಬಾಜ್ವಾ ಅವರಿಗೆ ನೀಡಿದರು. ಪಟ್ಟಿಯಲ್ಲಿದ್ದ ಪ್ರತಿಯೊಂದು ಹೆಸರನ್ನು ಪ್ರಧಾನಿ ಇಂದಿರಾಗಾಂಧಿ ಅವರು ಕಂಡು ಒಪ್ಪಿಗೆ ನೀಡಿದ್ದರು – ಎಂದು ದೆಹಲಿ ಉಪರಾಜ್ಯಪಾಲರು ತಿಳಿಸಿದರು.
ವಾಜಪೇಯಿ, ಆಡ್ವಾಣಿ ಸೆರೆ
ಆ ದಿನದ ಬಂಧನಗಳಲ್ಲಿ ಪ್ರಧಾನಿ ಇಂದಿರಾ ಅವರ ಪಾತ್ರ ಪ್ರಮುಖವಾಗಿತ್ತು ಎಂಬುದಕ್ಕೆ ಕರ್ನಾಟಕದ ಅಂದಿನ ಮುಖ್ಯ ಕಾರ್ಯದರ್ಶಿ ಅವರ ಟಿಪ್ಪಣಿ ಕೂಡ ಪುರಾವೆ ನೀಡುತ್ತದೆ. ಜಿ.ವಿ.ಕೆ. ರಾವ್ ಅವರು ಆಯೋಗದ ಮುಂದೆ ಹೇಳಿಕೆ ನೀಡಿ, “ದೆಹಲಿಯ ಮುಖ್ಯ ಕಾರ್ಯದರ್ಶಿ ಜೆ.ಕೆ. ಕೋಹ್ಲಿ ಅವರು ಮರುದಿನ (ಜೂನ್ ೨೬) ಬೆಳಗ್ಗೆ ೭.೩೦ಕ್ಕೆ ಫೋನ್ ಮಾಡಿ ಆಗ ಬೆಂಗಳೂರಿನಲ್ಲಿದ್ದ ಅಟಲ್ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ, ಎಸ್.ಎನ್. ಮಿಶ್ರಾ, ಮಧು ದಂಡವತೆ, ಸಮರಗುಹಾ ಮತ್ತು ಸುಬ್ರಹ್ಮಣ್ಯಮ್ ಸ್ವಾಮಿ ಅವರನ್ನು ಬಂಧಿಸುವಂತೆ ಹೇಳಿದರು” ಎಂದು ತಿಳಿಸಿದರು. ಅದು ಪ್ರಧಾನಿ ಇಂದಿರಾ ಅವರ ಅಪೇಕ್ಷೆಯಾಗಿತ್ತು ಎಂದ ಜಿ.ವಿ.ಕೆ. ರಾವ್, ಕೋಹ್ಲಿ ಅವರ ಮಾತನ್ನು ದೃಢಪಡಿಸಿಕೊಳ್ಳಲು ಕೇಂದ್ರ ಗೃಹ ಕಾರ್ಯದರ್ಶಿ ಎಸ್.ಎಲ್. ಖುರಾನಾ ಅವರನ್ನು ಸಂಪರ್ಕಿಸಿದೆ. ಅದಕ್ಕೆ ಪ್ರಧಾನಿ ಅವರ ಒಪ್ಪಿಗೆ ಇರುವುದು ಖಚಿತವಾಯಿತು – ಎಂದು ತಿಳಿಸಿದರು.
ಆಡ್ವಾಣಿ, ವಾಜಪೇಯಿ, ಮಿಶ್ರಾ, ದಂಡವತೆ ಅವರುಗಳನ್ನು ಜೂನ್ ೨೬ರಂದು ಮೀಸಾ ಅಡಿಯಲ್ಲಿ ಬಂಧಿಸಲಾಯಿತು ಎಂದು ಅಂದಿನ ಬೆಂಗಳೂರು ಪೊಲೀಸ್ ಕಮಿಷನರ್ ಎಂ.ಎಲ್. ಚಂದ್ರಶೇಖರ್ ಅವರು ಶಾ ಆಯೋಗದ ಮುಂದೆ ಹೇಳಿದರು. ಅದಕ್ಕೆ ರಾಜ್ಯ ಐಜಿಪಿಯವರ ನಿರ್ದೇಶನವನ್ನು ಪಡೆಯಲಾಗಿದ್ದು, ವಾರಂಟ್ ನೀಡಿದ ಅನಂತರ ಬಂಧನ ಏಕೆಂದು ಹಿನ್ನೆಲೆಯನ್ನು ದೆಹಲಿಯಿಂದ ಸಂಗ್ರಹಿಸಲಾಯಿತು. ಅಂದರೆ ಇವೆಲ್ಲ ಪ್ರಧಾನಿ ನೀಡಿದ ಸೂಚನೆ ಮೇರೆಗೆ ನಡೆಸಿದ ಕಾನೂನುಬಾಹಿರ ಬಂಧನಗಳಾಗಿವೆ. ದೆಹಲಿಯಲ್ಲಿ ಬಂಧನದ ಅಧಿಕಾರ ಇರುವವರ ಸಂಖ್ಯೆ (ಡಿಎಂ, ಎಡಿಎಂ) ಒಂದರಿಂದ ಆರಕ್ಕೇರಿತು. ಮೀಸಾ ಬಂಧನದ ಬಗ್ಗೆ ತಿದ್ದುಪಡಿ ತಂದು, ಬಂಧನದ ಕಾರಣವನ್ನು (ಹಿನ್ನೆಲೆ) ದಾಖಲಿಸಬೇಕಿಲ್ಲ ಎಂದು ದೃಢಪಡಿಸಲಾಯಿತು.
ಐಎಎಸ್ಗೆ ಬೆದರಿಕೆ
‘ಪೊಲೀಸರು ಕೇಳಿದಂತೆ ಕೂಡಲೆ ಬಂಧನ ಆದೇಶವನ್ನು ಕೊಡಿ’ ಎಂದು ಉಪರಾಜ್ಯಪಾಲರು ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ಸುಶೀಲ್ಕುಮಾರ್ ಅವರಿಗೆ ಸೂಚಿಸಿದ್ದರು. ಪೊಲೀಸರು ಕೊಟ್ಟ ಸಾಮಗ್ರಿಯನ್ನು ಒಪ್ಪಿಕೊಳ್ಳಬೇಕು; ಇದು ನೀತಿಗೆ ಸಂಬಂಧಪಟ್ಟ ವಿಷಯ – ಎಂದಾಯಿತು. ಕೆಲವು ಎಡಿಎಂಗಳು ಬಂಧನದ ಆದೇಶ ನೀಡುವಾಗ ತಡ ಮಾಡುತ್ತಾರೆಂದು ಉನ್ನತ ಪೊಲೀಸ್ ಅಧಿಕಾರಿ ಪಿ.ಎಸ್. ಭಿಂದರ್ ದೂರಿದಾಗ ಉಪರಾಜ್ಯಪಾಲ ಕೃಷನ್ಚಂದ್ ಮತ್ತವರ ಕಾರ್ಯದರ್ಶಿ ನವೀನ್ ಚಾವ್ಲಾ ಚುರುಕು ಮಾಡುವಂತೆ ಸೂಚನೆ ನೀಡಿದರು. ಕೆಲವು ದಿನಗಳ ಬಳಿಕ ನವೀನ್ ಚಾವ್ಲಾ ಅವರು ಡಿಎಂ, ಎಡಿಎಂಗಳನ್ನು ಮತ್ತೆ ಸಂಪರ್ಕಿಸಿ “ಮೀಸಾ ಬಂಧನದಲ್ಲಿ ಸೂಕ್ತ ಸಹಕಾರ ನೀಡದಿದ್ದರೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಕೂಡ ಸೆರೆಮನೆಗೆ ತಳ್ಳಲು ಉಪರಾಜ್ಯಪಾಲರು ಅನುಮಾನಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದರು. ಈ ಬೆದರಿಕೆಯ ಅನಂತರ ಎಡಿಎಂಗಳು ಪೂರ್ತಿ ಬದಲಾದರು; ಕಾರಣ ಸರಿ ಇದೆಯೆ ಇಲ್ಲವೇ ಎಂಬುದನ್ನು ಸ್ವಲ್ಪವೂ ನೋಡದೆ ಬಂಧನದ ಆದೇಶ ನೀಡತೊಡಗಿದರು. ‘ಬಂಧನದ ಹಿನ್ನೆಲೆ, ಕಾರಣಗಳನ್ನು(ಸಾಮಗ್ರಿ) ನೀವೇ ಬರೆದುಕೊಳ್ಳಿ’ ಎಂದು ಕೂಡ ಉಪರಾಜ್ಯಪಾಲರ ಕಾರ್ಯದರ್ಶಿ ಚಾವ್ಲಾ ಎಡಿಎಂಗಳಿಗೆ ಹೇಳಿದ್ದೂ ಇದೆ.
ವಿಶೇಷ ಶಾಖೆಯ ಸಿಐಡಿ ಪೊಲೀಸ್ ಸೂಪರಿಂಟೆಂಡೆಂಟ್ ಕೆ.ಎಸ್. ಬಾಜ್ವಾ ಮೀಸಾ ಬಂಧನದ ಬಗೆಗಿನ ಪಟ್ಟಿಯನ್ನು ನೀಡುತ್ತಲೇ ಇದ್ದರೆಂದು ಜಿಲ್ಲಾ ಎಸ್ಪಿಗಳು ಹೇಳಿದ್ದಾರೆ. ಪೂರ್ತಿ ತುರ್ತುಪರಿಸ್ಥಿತಿಯ ವೇಳೆ ಅಂತಹ ಪಟ್ಟಿಗಳು ಬರುತ್ತಲೇ ಇದ್ದವು. ಅವರೇ ಬಂಧನದ ಕಾರಣವನ್ನೂ ತಿಳಿಸುತ್ತಿದ್ದರು. ಜೊತೆಗೆ “ಇದೇ ಬಂಧನದ ಬಗೆಗಿನ ಕೊನೆಯ ಮಾತು; ಇದನ್ನು ಪ್ರಶ್ನಿಸುವಂತಿಲ್ಲ” ಎಂದು ಕೂಡ ಬರೆಯುತ್ತಿದ್ದರು. ರಾಜಕೀಯ ವ್ಯಕ್ತಿಗಳ ಬಂಧನ ಮತ್ತು ಸೆರೆಮನೆಗೆ ತಳ್ಳುವಲ್ಲಿ ಸಿಐಡಿಯ ಎಸ್ಪಿ ಬಾಜ್ವಾ ಪ್ರಧಾನ ಸಂಯೋಜನಾಧಿಕಾರಿ (Chief Co-Ordinator) ಆಗಿದ್ದರು. ಬಂಧನದ ಆದೇಶವನ್ನು ಜಾರಿಗೊಳಿಸುವಲ್ಲಿ ಸಂಬಂಧಪಟ್ಟ ಎಸ್ಪಿಗಳು ತಡಮಾಡಿದರೆ ಐಜಿಪಿ, ಡಿಐಜಿಗಳು ಸಿಟ್ಟಾಗುತ್ತಿದ್ದರು. ಈ ವಿಷಯದಲ್ಲಿ ಎಲ್ಲ ಜಿಲ್ಲಾ ಎಸ್ಪಿಗಳ ಮೇಲೆ ಬಾಜ್ವಾಗೆ ಅಧಿಕಾರವಿತ್ತು.
ಆಯೋಗದ ಮುಂದೆ ನೀಡಿದ ಹೇಳಿಕೆಯಲ್ಲಿ ಕೆ.ಎಸ್. ಬಾಜ್ವಾ “ಮೀಸಾ ಅಡಿಯಲ್ಲಿ ಬಂಧಿಸುವ ಬಗ್ಗೆ (ತುರ್ತುಪರಿಸ್ಥಿತಿ ವೇಳೆ) ಒಟ್ಟು ೬೧೬ ವ್ಯಕ್ತಿಗಳ ಹೆಸರುಗಳನ್ನು ನೀಡಿದ್ದೆ; ಇದು ಸ್ಪೆಷಲ್ ಬ್ರಾಂಚ್ನ ಕಾನೂನುಬದ್ಧ ಕೆಲಸವಾಗಿತ್ತು” ಎಂದು ತಿಳಿಸಿದರು. ಆತ ಈ ಕೆಲಸದಲ್ಲಿ ಉಪರಾಜ್ಯಪಾಲರಿಗೆ ನಿಕಟವಾಗಿದ್ದರು.
ಜೂನ್ ೨೫ರಂದು ರಾತ್ರಿ ದೆಹಲಿ ಐಜಿಪಿಯವರ ಮನೆಯಲ್ಲಿ ನಡೆದ ಸಭೆಯಲ್ಲಿ ಮೀಸಾ ಬಂಧಿತರಿಗೆ ಜಾಮೀನು ಸಿಗಬಾರದು ಎನ್ನುವ ಅಂಶ ಕೂಡ ಇತ್ತು. ಮ್ಯಾಜಿಸ್ಟ್ರೇಟರಿಗೆ ಆ ಬಗ್ಗೆ ಡಿಎಂ ಮತ್ತು ಎಡಿಎಂಗಳಿಂದ ಸೂಚನೆ ಬರುತ್ತಿತ್ತು. ಅಂದರೆ ಅದು ನ್ಯಾಯಾಂಗದ ಕೆಲಸದಲ್ಲಿ ನಡೆಸುವ ಹಸ್ತಕ್ಷೇಪವಾಗಿತ್ತು. ದಂಡಸಂಹಿತೆಯ ಅಡಿಯಲ್ಲಿ ಸುಳ್ಳು ಕೇಸ್ಗಳನ್ನು ಹಾಕಲಾಗುತ್ತಿತ್ತು – ಎಂದು ಅಧಿಕಾರಿಯೊಬ್ಬರು ಹೇಳಿದ್ದಿದೆ.
ಜೂನ್ ೨೫ರಂದು ರಾತ್ರಿ ದೆಹಲಿಯಲ್ಲಿ ಸುಮಾರು ೩೫ ನಾಯಕರ ಬಂಧನಗಳು ನಡೆದವು. ಸರ್ಕಾರ ಮೇಲಿಂದ ಮೇಲೆ ಸೂಚನೆ ನೀಡಿದ ಕಾರಣ ಬಂಧನಗಳು ವೇಗವಾಗಿ ನಡೆದವು. ಕಾನೂನು-ಸುವ್ಯವಸ್ಥೆಗೆ ಅದು ಅಗತ್ಯ ಎನ್ನುವ ವಿವರಣೆಯನ್ನು ನೀಡಲಾಯಿತು. ವಿವಿಧ ವ್ಯಕ್ತಿಗಳ ಬಂಧನದ ಬಗ್ಗೆ ತಮಗೆ ಡಿಐಜಿ ಭಿಂದರ್ ಅವರಿಂದ ಮೌಖಿಕ ಮತ್ತು ಲಿಖಿತ ಸೂಚನೆಗಳು ಬರುತ್ತಿದ್ದವು ಎಂದ ಐವರು ಎಸ್ಪಿಗಳು, ‘ಇವರನ್ನು ಪಿಕ್ ಮಾಡಿ’, ‘ಅವರನ್ನು ಲಿಫ್ಟ್ ಮಾಡಿ’ ಎಂಬ ರೀತಿಯಲ್ಲಿ ಸೂಚನೆಗಳು ಇರುತ್ತಿದ್ದವು. ಏಕೆಂದರೆ ಕಾರಣಗಳು ಇರಲಿಲ್ಲ. ಅದನ್ನು ಅವರೇ ಹುಡುಕಬೇಕು ಅಥವಾ ಸ್ಪೆಷಲ್ ಬ್ರಾಂಚ್ನಿಂದ ಪಡೆದುಕೊಳ್ಳಬೇಕು. ಬಾಜ್ವಾ ಅವರಿಂದಲೂ ಬಂಧನಕ್ಕೆ ಸೂಚನೆಗಳು ಬರುತ್ತಿದ್ದವು. ಒಮ್ಮೆ ಆತ ‘ಖೇಮ್ರಾಜ್ ನಯ್ಯರ್ರನ್ನು ಬಂಧಿಸಿ; ಜಾಮೀನು ಸಿಗದಂತೆ ನೋಡಿಕೊಳ್ಳಿ’ ಎಂಬ ಸೂಚನೆ ನೀಡಿದ್ದರು. ಅದೇರೀತಿ ಜನಸಂಘವನ್ನು ಬಿಟ್ಟು ಪ್ರಧಾನಿಯವರ ೨೧ ಅಂಶಗಳ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ರಾಂ ಶರಣದಾಸ್ ಎಂಬವರ ಬಂಧನವನ್ನು ಕೈಬಿಟ್ಟರು.
ಪೆರೋಲ್ನಲ್ಲಿ ತಾರತಮ್ಯ
ಬಂಧನಕ್ಕೊಳಗಾಗಿ ಸೆರೆಮನೆಯಲ್ಲಿದ್ದವರಿಗೆ ಪೆರೋಲ್ ನೀಡುವುದರಲ್ಲಿ ದೆಹಲಿ ಆಡಳಿತವು ತಾರತಮ್ಯ ನೀತಿಯನ್ನು ಅನುಸರಿಸಿತ್ತು; ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಅರ್ಹರಿಗೂ ಪೆರೋಲ್ ನೀಡುತ್ತಿರಲಿಲ್ಲ.
೧. ಜನಸಂಘದ ಪ್ರಮುಖ ನಾಯಕ ಕನ್ವರ್ಲಾಲ್ ಗುಪ್ತ ಅವರ ಪತ್ನಿ ಕುಸುಮ್ ಗುಪ್ತ ಅವರು ಸೋದರಸೊಸೆಯ ಮದುವೆಯ ಕಾರಣ ನೀಡಿ ಕೆ.ಎಲ್. ಗುಪ್ಪ ಅವರಿಗೆ ಪೆರೋಲ್ ಮೂಲಕ ಬಿಡುಗಡೆಯನ್ನು ಕೇಳಿದರು. ಜೊತೆಗೆ ಅನಾರೋಗ್ಯದ ಕಾರಣವೂ ಇತ್ತು. ಗೃಹಖಾತೆಯ ಶಿಫಾರಸು ಇದ್ದಾಗಲೂ ಉಪರಾಜ್ಯಪಾಲ ಕೃಷನ್ಚಂದ್ ಅದನ್ನು ತಳ್ಳಿಹಾಕಿದರು. ಗುಪ್ತ ಅವರಿಗೆ ೧೫ ದಿನಗಳ ಪೆರೋಲ್ ನೀಡಬಹುದೆಂದು ಗೃಹ ಇಲಾಖೆ ಶಿಫಾರಸು ಮಾಡಿತ್ತು.
ಗುಪ್ತ ಅವರು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದಾಗ ಕೋರ್ಟ್ ಪೆರೋಲ್ ನೀಡಲು ದೆಹಲಿ ಆಡಳಿತಕ್ಕೆ ಸೂಚಿಸಿ, ಅವರನ್ನು ಚಿಕಿತ್ಸೆಗೆ ಕಳುಹಿಸಿ ಎನ್ನುವ ಸಲಹೆ ನೀಡಿತು. ಆಗ ಉಪರಾಜ್ಯಪಾಲರು ಕಡತದ ಮೇಲೆ ‘ಇದು ನ್ಯಾಯಾಲಯದ ಹಸ್ತಕ್ಷೇಪ’ ಎಂದು ಬರೆದದ್ದಲ್ಲದೆ “ಹೈಕೋರ್ಟ್ನ ಇಂತಹ ವರ್ತನೆಯಿಂದ ಸಂಘರ್ಷಕ್ಕೆ ದಾರಿಯಾಗಬಹುದು” ಎನ್ನುವ ಎಚ್ಚರದ ಮಾತನ್ನು ಕೂಡ ದಾಖಲಿಸಿದರು.
ಆಗ ಗೃಹ ಇಲಾಖೆ ಜಂಟಿ ಕಾರ್ಯದರ್ಶಿಯವರು ದೆಹಲಿ ಆಡಳಿತದ ವಿಶೇಷ ಕಾರ್ಯದರ್ಶಿಯವರಿಗೆ (ಗೃಹ) ಪತ್ರ ಬರೆದು (ಏಪ್ರಿಲ್ ೨೨, ೧೯೭೬) ಕೆ.ಎಲ್. ಗುಪ್ತ ಅವರನ್ನು ಬಿಡುಗಡೆ ಮಾಡಬೇಕೆಂದು ಗೃಹ ಸಚಿವರು ಬಯಸಿದ್ದಾರೆ; ಅನುಕಂಪದ ಆಧಾರದಲ್ಲಿ ಪೆರೋಲ್ ನೀಡಬಹುದು ಎಂದು ಸಲಹೆ ನೀಡಿದರು. ಆಗ ರಾಜ್ಯಪಾಲರ ಕಾರ್ಯದರ್ಶಿ ನವೀನ್ ಚಾವ್ಲಾ ಅವರು ವಿಶೇಷ ಕಾರ್ಯದರ್ಶಿಯವರನ್ನು ಸಂಪರ್ಕಿಸಿ, “ನಿಮ್ಮದೇ ರಿಸ್ಕ್ನಲ್ಲಿ ಉಪರಾಜ್ಯಪಾಲರಿಗೆ ಆ ಮಾತನ್ನು (ಬಿಡುಗಡೆ) ಹೇಳಬಹುದು. ನಾನದನ್ನು ಹಿಂತೆಗೆಯುವಂತೆ ಮಾಡುವೆ” ಎಂದು ಧಮಕಿ ಹಾಕಿದರು. ಮುಂದುವರಿದು, ಗೃಹಸಚಿವ ಬ್ರಹ್ಮಾನಂದ ರೆಡ್ಡಿ ಮತ್ತು ಗುಪ್ತ ಅವರಿಗೆ ಸಮಾನ ಹಿತಾಸಕ್ತಿಗಳಿವೆ. ಪೆರೋಲ್ ಕೊಡಿಸುವುದಕ್ಕೆ ಸಚಿವ ರೆಡ್ಡಿ ಸಹಾಯ ಮಾಡುತ್ತಿದ್ದಾರೆ. ಇದು ಪ್ರಧಾನಿಯವರಿಗೆ ಇಷ್ಟವಿಲ್ಲದ ವಿಷಯ” ಎಂದು ನವೀನ್ ಚಾವ್ಲಾ ಕೇಂದ್ರ ಗೃಹ ಸಚಿವರನ್ನೇ ಬದಿಗೊತ್ತುವಂತೆ ನಡೆದುಕೊಂಡರು. ಉಪರಾಜ್ಯಪಾಲರು ಹೈಕೋರ್ಟ್ಗೇ ಎಚ್ಚರಿಕೆ ನೀಡಿದರೆ ಉಪರಾಜ್ಯಪಾಲರ ಕಾರ್ಯದರ್ಶಿ ದೇಶದ ಗೃಹಸಚಿವರನ್ನೇ ಎದುರುಹಾಕಿಕೊಳ್ಳುತ್ತಾನೆ. ಇದು ತುರ್ತುಪರಿಸ್ಥಿತಿಯ ವಿದ್ಯಮಾನಗಳ ಒಂದು ಮಾದರಿ. ಕೊನೆಯಲ್ಲಿ ಗೃಹಖಾತೆ ರಾಜ್ಯ ಸಚಿವ ಓಂ ಮೆಹ್ತಾ ಅವರು ಮಧ್ಯಪ್ರವೇಶ ಮಾಡಿ ಕೆ.ಎಲ್. ಗುಪ್ತ ಅವರಿಗೆ ಪೆರೋಲ್ ಕೊಡಿಸಿದರು; ಅವರ ಬಿಡುಗಡೆ ಆಯಿತು.
ಮುಂದೆ ಆ ಕುರಿತು ಆಯೋಗಕ್ಕೆ ವಿವರಣೆ ನೀಡಿದ ಉಪರಾಜ್ಯಪಾಲ ಕೃಷನ್ಚಂದ್, “ಕೆ.ಎಲ್. ಗುಪ್ತ ಅವರ ವಿಷಯದಲ್ಲಿ ನನಗೆ ಗೃಹ ಇಲಾಖೆ ಒಂದು ಹೇಳಿದರೆ ಓಂ ಮೆಹ್ತಾ ಇನ್ನೊಂದು ಹೇಳುತ್ತಿದ್ದರು. ಆಗ ನಾನು ಇಲಾಖೆಯ (ಗೃಹಸಚಿವರ) ಶಿಫಾರಸನ್ನು ತಿರಸ್ಕರಿಸಿದೆ. ಏಕೆಂದರೆ ಪೆರೋಲ್ ಕೊಡುವುದು ಪ್ರಧಾನಿ ಇಂದಿರಾ ಅವರಿಗೆ ಇಷ್ಟವಿಲ್ಲ ಎಂದು ಓಂ ಮೆಹ್ತಾ ಹೇಳಿದ್ದರು. ಕೊನೆಯಲ್ಲಿ ಗುಪ್ತ ಅವರನ್ನು ಬಿಡುಗಡೆ ಮಾಡಿದಾಗ ಇಂದಿರಾ ಅವರಿಗೆ ನನ್ನ ಮೇಲೆ ಸಿಟ್ಟು ಬಂದು “The hell, I got, only I know” ಎಂದು ಬೈದರು ಎಂದು ತಿಳಿಸಿದರು.
೨. ಕಸ್ಟಮ್ಸ್ ನ ಮಾಜಿ ಕಲೆಕ್ಟರ್ ಆರ್. ಪ್ರಸಾದ್ ಎಂಬವರು ನಿಷೇಧಿತ ಸಂಘಟನೆ ಆನಂದಮಾರ್ಗದಲ್ಲಿ ಇದ್ದಾರೆಂದು ಬಂಧನಕ್ಕೊಳಗಾಗಿದ್ದರು. ಮನೆಯಲ್ಲಿ ಕೆಲವರಿಗೆ ಅಸೌಖ್ಯಗಳಾಗಿ ಪೆರೋಲ್ ನೀಡುವ ಬಗ್ಗೆ ಗೃಹಸಚಿವರ ಮಟ್ಟದಿಂದ ಶಿಫಾರಸು ಬಂದರೂ ಉಪರಾಜ್ಯಪಾಲರು ಅದನ್ನು ತಿರಸ್ಕರಿಸಿದರು. ಕೊನೆಯಲ್ಲಿ ಅವರ ಮಗನಿಗೆ ಹೃದಯಾಘಾತವಾದಾಗ ಬಂಧನದ ಆದೇಶವನ್ನು ಹಿಂತೆಗೆದುಕೊಂಡು ಬಿಡುಗಡೆ ಮಾಡಿದರು.
೩. ಮುಂದೆ ರೆಡ್ಡಿ (ಆರ್.) ಕಾಂಗ್ರೆಸ್ನ ನಾಯಕರಾದ ರಾಂಧನ್ ಅವರನ್ನು ತುರ್ತುಪರಿಸ್ಥಿತಿ ಹೇರಿಕೆಯ ಮರುದಿನ ಬಂಧಿಸಲಾಯಿತು. ಅಣ್ಣ ತೀರಿಕೊಂಡಾಗ ಆತ ಪೆರೋಲ್ ಕೇಳಿದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಶೀಲ್ಕುಮಾರ್ ಬಿಡುಗಡೆಗೆ ಶಿಫಾರಸು ಮಾಡಿದಾಗಲೂ ಉಪರಾಜ್ಯಪಾಲ ಅದನ್ನು ತಿರಸ್ಕರಿಸುತ್ತ, ಆತ ಹೋರಾಟದ ಸ್ವಭಾವದವರಾಗಿದ್ದು, ಆತನಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದರು.
೪. ಅಂಬಾಲಾ ಸೆರೆಮನೆಯಲ್ಲಿದ್ದ ಒಬ್ಬರ ಮಾವ ದೆಹಲಿಯಲ್ಲಿ ನಿಧನ ಹೊಂದಿದಾಗ ಅವರಿಗೆ ನೀಡಿದ ಪೆರೋಲ್ನ ಅವಧಿ ಎಷ್ಟು ಗೊತ್ತೆ? ನಾಲ್ಕು ತಾಸು. ಆ ಸಮಯದಲ್ಲಿ ಬಂದು ವಾಪಸು ಹೋಗುವುದು ಅಸಂಭವ. ಇಲ್ಲಿ ತಪ್ಪು ಯಾರದು?
೫. ಮೀಸಾ ಬಂಧನಕ್ಕೊಳಗಾಗಿ ಸೆರೆಮನೆಯಲ್ಲಿದ್ದ ಟಿ.ಆರ್. ನರೂಲಾ ಅವರು ಅಸೌಖ್ಯಕ್ಕೆ ಗುರಿಯಾದಾಗ ಮನೆಯವರು ಪೆರೋಲ್ ಕೇಳಿದಾಗ ಕೊಡಲಿಲ್ಲ. ಅಸೌಖ್ಯ ಗಂಭೀರವಾದಾಗ ಅವರೇ ಆಸ್ಪತ್ರೆಗೆ ಸೇರಿಸಿದರೇ ವಿನಾ ಪೆರೋಲ್ನಿಂದ ಬಿಡುಗಡೆ ಮಾಡಲಿಲ್ಲ. ಆತ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದು ಜೈಲ್ ಸೂಪರಿಂಟೆಂಡೆಂಟ್ ಹೇಳಿದಾಗಲೂ ಪೆರೋಲ್ ಕೊಡಲಿಲ್ಲ. ಕುಟುಂಬದ ವೈದ್ಯರನ್ನು ಜೈಲಿಗೆ ಕರೆಸಲು ಅನುಮತಿ ಕೊಡಿ ಎಂದರೂ ಕೊಡಲಿಲ್ಲ. ತಮ್ಮ ವಿಶೇಷ ಕಾರ್ಯದರ್ಶಿ ಶ್ರೀಮತಿ ಚಂದಾ ಅವರು ೧೫ ದಿನಗಳ ಪೆರೋಲ್ ಕೊಡಿ ಎಂದರೂ ಉಪರಾಜ್ಯಪಾಲ ನಿರಾಕರಿಸಿದರು; “ಡಾ|| ಪದ್ಮಾವತಿ ಅವರ ವೈದ್ಯಕೀಯ ವರದಿ ಪ್ರಕಾರ ರೋಗಿಯ ಜೀವಕ್ಕೆ ತಕ್ಷಣ ಅಪಾಯ ಇಲ್ಲ. ಪರಿಸ್ಥಿತಿ ಇನ್ನಷ್ಟು ಹಾಳಾದ ಬಗ್ಗೆ ವರದಿ ಬಂದರೆ ಮತ್ತೆ ನೋಡೋಣ” ಎಂದರು. ಕೊನೆಗೆ ಏಪ್ರಿಲ್ ೨ರಂದು ಅವರ ಬಿಡುಗಡೆ ಮಾಡಿದರೆ, ಅದೇ ೨೮ರಂದು ಆತ ಈ ಜಗತ್ತಿನಿಂದಲೇ ಬಿಡುಗಡೆ ಪಡೆದರು.
ಇದು ಹೀಗಾದರೆ ಇನ್ನು ಕೆಲವು ಪ್ರಕರಣಗಳಲ್ಲಿ ಅಗತ್ಯ ಇಲ್ಲದಿದ್ದರೂ ಪೆರೋಲ್ ನೀಡಿದ ನಿದರ್ಶನಗಳಿವೆ.
ಎ) ಬಿಶಂಬರ್ ದತ್ತ ಶರ್ಮ ಎಂಬವರ ಪತ್ನಿ ತಮ್ಮ ತಂದೆಗೆ ಸೌಖ್ಯವಿಲ್ಲವೆಂದು ಪತಿಗೆ ಪೆರೋಲ್ ಕೇಳಿದರು. ಅದನ್ನು ಉಪರಾಜ್ಯಪಾಲ ತಿರಸ್ಕರಿಸಿದರು. ಮತ್ತೆ ಅದೇ ಬೇಡಿಕೆಯನ್ನು ರಕ್ಷಣಾ ಸಚಿವ ಬನ್ಸೀಲಾಲ್ ಅವರು ವಿಶೇಷ ಸಹಾಯಕರ ಮೂಲಕ ಮುಂದಿಟ್ಟಾಗ ಪೆರೋಲ್ ನೀಡಲಾಯಿತು. ಮುಂದೆ ಪೆರೋಲ್ ಅವಧಿಯನ್ನು ವಿಸ್ತರಿಸುತ್ತ ಹೋಗಿ ಕೊನೆಯಲ್ಲಿ ಬಂಧನ ಆದೇಶವನ್ನೇ ವಜಾಗೊಳಿಸಲಾಯಿತು.
ಬಿ) ರಂಜಿತ್ಸಿಂಗ್ ಎನ್ನುವ ಕೈದಿಗೆ ಅರ್ಜಿ ಹಾಕದಿದ್ದರೂ ಪೆರೋಲ್ ದೊರೆಯಿತು; ಬಂಧನದ ಆದೇಶವು ವಜಾ ಆಗುವವರೆಗೂ ಆತ ಪೆರೋಲ್ನಲ್ಲೇ ಇದ್ದರು.
ರಾಧಾಕೃಷ್ಣನ್ ಎನ್ನುವ ಬಂಧಿತರಿಗೆ ಕೂಡ ಇದೇ ರೀತಿ ಪೆರೋಲ್ ದೊರೆಯಿತು; ಅದರ ವಿಸ್ತರಣೆ ಮುಂದುವರಿದು ಕೊನೆಯಲ್ಲಿ ಬಂಧನದ ಆದೇಶವೇ ವಜಾ ಆಯಿತು. ಸಚಿವ ಓಂ ಮೆಹ್ತಾ ಅವರ ಅಪೇಕ್ಷೆ ಮೇರೆಗೆ ಈ ಇಬ್ಬರನ್ನು ಉದಾರವಾಗಿ ಕಂಡುದಾಗಿ ಉಪರಾಜ್ಯಪಾಲ ಒಪ್ಪಿಕೊಂಡರು.
ಸಿ) ‘ಕುಖ್ಯಾತ ಆ್ಯಂಟಿಕ್ ಕಳ್ಳಸಾಗಣೆದಾರ’ ಬಲಿರಾಂ ಶರ್ಮ ಎಂಬಾತನನ್ನು ‘ಕೋಫೆಪೋಸಾ’ ಅಡಿಯಲ್ಲಿ ೧೯೭೫ರ ಡಿಸೆಂಬರ್ನಲ್ಲಿ ಬಂಧಿಸಿದರು. ಪತ್ನಿಗೆ ಸೌಖ್ಯವಿಲ್ಲವೆಂದು ಆತನಿಗೆ ೧೯೭೬ರ ಜೂನ್ನಲ್ಲಿ ಪೆರೋಲ್ ನೀಡಿದರು. ಪೆರೋಲ್ ವಿಸ್ತರಿಸುವಂತೆ ಕೇಳಿದಾಗ ಒಮ್ಮೆ ನಿರಾಕರಿಸಿದರೂ ಮತ್ತೆ ವಿಸ್ತರಿಸುತ್ತ ಹೋದರು; ಮುಂದೆ ಬಂಧನ ಆದೇಶವೇ ವಜಾ ಆಯಿತು. ಪೊಲೀಸರು ಪೆರೋಲ್ಗೆ ವಿರೋಧ ಸೂಚಿಸಿದ್ದರೂ ಅದನ್ನು ಪರಿಗಣಿಸಲಿಲ್ಲ. ಇದರಲ್ಲೂ ಓಂ ಮೆಹ್ತಾ ಅವರ ಕೈವಾಡವನ್ನು ಶಂಕಿಸಲಾಗಿದೆ. ರಮೇಶಕುಮಾರ್ ರಖೇಜಾ ಎಂಬ ಇನ್ನೊಬ್ಬ ಕಳ್ಳಸಾಗಣೆದಾರನನ್ನು ಕೂಡ ಅದೇರೀತಿ ಉದಾರವಾಗಿ ನಡೆಸಿಕೊಳ್ಳಲಾಯಿತು.
ಕುಟುಂಬಯೋಜನೆಗೆ ಪೆರೋಲ್
ದೆಹಲಿ ಆಡಳಿತವು ತಿಹಾರ್ ಜೈಲಿನಲ್ಲಿ ಪೆರೋಲ್ ನೀಡಿಕೆಯನ್ನು ಕುಟುಂಬಯೋಜನೆಯ ಪ್ರೋತ್ಸಾಹಕವಾಗಿ (incentive) ಬಳಸಿಕೊಂಡಿತ್ತು ಎನ್ನುವ ಕುತೂಹಲಕರ ಸಂಗತಿಯೊಂದು ಶಾ ಆಯೋಗದ ಗಮನಕ್ಕೆ ಬಂತು. ಸಂಬಂಧಪಟ್ಟ ಕೈದಿಗಳ ಕಡತದ ಮಾರ್ಜಿನ್ನಲ್ಲಿ Family Planning Case (ಕುಟುಂಬಯೋಜನೆ ಪ್ರಕರಣ) ಎಂದು ಪೆನ್ಸಿಲ್ನಲ್ಲಿ ಬರೆಯುತ್ತಿದ್ದರು. ಉಪರಾಜ್ಯಪಾಲರ ಕಾರ್ಯದರ್ಶಿ ನವೀನ್ ಚಾವ್ಲಾ ಯೋಜನೆಯಂತೆ ಇದು ನಡೆಯುತ್ತಿತ್ತು. ಅದರಂತೆ ಕುಟುಂಬಯೋಜನೆ ಶಸ್ತ್ರಕ್ರಿಯೆ ಮಾಡಿಸಿಕೊಳ್ಳುವವರಿಗೆ ಪೆರೋಲ್ ನೀಡಲಾಗುತ್ತಿತ್ತು. ಉಪರಾಜ್ಯಪಾಲರು ಹೇಳಿದ ಪ್ರಕಾರ ತಾನಿದನ್ನು ಮಾಡಿದ್ದಾಗಿ ಚಾವ್ಲಾ ಆಯೋಗದ ಮುಂದೆ ಹೇಳಿದರು.
ವಿದ್ಯಾರ್ಥಿಗಳಿಗೆ ಬಿಗು ನೀತಿ
ಜೈಲಿನಲ್ಲಿದ್ದ ವಿದ್ಯಾರ್ಥಿಗಳು ಪೆರೋಲ್ ಕೇಳಿದಾಗ ದೆಹಲಿ ಆಡಳಿತವು ಬಿಗುವಾಗಿ ನಡೆದುಕೊಳ್ಳುತ್ತಿತ್ತು. ವಿಶ್ವವಿದ್ಯಾಲಯವು ನಡೆಸುವ ಪರೀಕ್ಷೆಗೆ ಹಾಜರಾಗಲು ೧೭ ಜನ ವಿದ್ಯಾರ್ಥಿಗಳು ಪೆರೋಲ್ ಕೇಳಿದ್ದರು. ಒಬ್ಬ ಜೆಎನ್ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಬೇಕಿದ್ದು ಆತನ ಬಗ್ಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿತ್ತು; ಗೃಹ ಇಲಾಖೆಯು ಬಿಡುಗಡೆ ಮಾಡಿ ಎಂದು ಸೂಚಿಸಿತ್ತು. ಆದರೆ ದೆಹಲಿ ಆಡಳಿತವು ಆತನನ್ನು ದೆಹಲಿ ಜೈಲಿನಿಂದ ನೈನಿ ಜೈಲಿಗೆ ವರ್ಗಾವಣೆಯನ್ನು ಮಾತ್ರ ಮಾಡಿತು; ಕರೆದೊಯ್ಯುವಾಗ ಕೈಕೋಳ ಹಾಕಿದ್ದರು. ಆತ ಜೈಲಿನಲ್ಲಿ ಎಂ.ಇ. ಪರೀಕ್ಷೆ ಬರೆದರು.
ದೆಹಲಿ ಬಂಧಿತರ ಆದೇಶ-೧೯೭೬ರ ಪ್ರಕಾರ (ಮೀಸಾ ಬಂಧನ) ಆಡಳಿತದ ಒಪ್ಪಿಗೆಯ ಮೇರೆಗೆ ಬಂಧಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು ಎಂದಿತ್ತು. ಆದರೆ ವಿವೇಚನೆಯ ಅಂಶವನ್ನು ಯಾವಾಗಲೂ ಅರ್ಜಿದಾರರ ವಿರುದ್ಧವೇ ಬಳಸಿದರು. ಜೈಲಿನಲ್ಲಿ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯವು ಒಪ್ಪಿದರೆ ಮಾತ್ರ ಪರೀಕ್ಷೆಗೆ ಹಾಜರಾಗಬಹುದೆಂದು ಪ್ರಕಟಿಸಿದರು. ಪರೀಕ್ಷೆಗೆ ಹಾಜರಾಗಲು ಬಿಡುತ್ತಿಲ್ಲವೆಂದು ಕೆಲವು ವಿದ್ಯಾರ್ಥಿಗಳು ದೆಹಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ದೆಹಲಿ ವಿಶ್ವವಿದ್ಯಾಲಯ ತಿಹಾರ್ ಜೈಲಿನಿಂದ ಕೇವಲ ಒಂದು ಕಿ.ಮೀ. ದೂರದ ರಾಂಲಾಲ್ ಆನಂದ್ ಕಾಲೇಜಿನಲ್ಲಿ ವಿಶೇಷ ಪರೀಕ್ಷಾಕೇಂದ್ರವನ್ನು ತೆರೆಯಲು ಒಪ್ಪಿತು. ಆದರೂ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ಪರೀಕ್ಷೆಗೆ ಬರೆಯುವುದನ್ನು ದೆಹಲಿ ಆಡಳಿತ ಒಪ್ಪಿಕೊಳ್ಳಲಿಲ್ಲ.
ಹೈಕೋರ್ಟ್ ಟೀಕೆ
ಆ ಬಗ್ಗೆ ದೆಹಲಿ ಹೈಕೋರ್ಟ್ “ದೆಹಲಿ ಆಡಳಿತವು ಒಂದು ಹೆಜ್ಜೆ ಕೂಡ ಮುಂದೆ ಹೋಗದಿರುವುದು ದುರದೃಷ್ಟಕರ; ಏಕೆಂದರೆ ವಿಶ್ವವಿದ್ಯಾಲಯವು ಇಪ್ಪತ್ತು ಹೆಜ್ಜೆ ಮುಂದೆ ಹೋಗಲು ಸಿದ್ಧವಿದೆ. ಇದರಿಂದ ದೆಹಲಿ ಆಡಳಿತಕ್ಕೆ ಮುಂದೆ ಕಷ್ಟವಾಗಬಹುದು. ಬಂಧಿತರು ಮುಂದೆ ತಮ್ಮ ಬಂಧನವು ಮುಂಜಾಗ್ರತೆ ಕ್ರಮವಾಗಿ ನಡೆದುದಲ್ಲ; ಅದು ಶಿಕ್ಷೆಯೇ ಆಗಿತ್ತು ಎಂದು ಹೇಳಬಹುದು” ಎಂದು ಎಚ್ಚರಿಸಿತು. ಆದರೆ ಅದು ಉಪರಾಜ್ಯಪಾಲರ ಗಮನವನ್ನು ಸೆಳೆಯಲೇ ಇಲ್ಲ; ಅವರ ಮನಸ್ಸು ಪೂರ್ತಿ ಮುಚ್ಚಿತ್ತು – ಎಂದು ಅವರ ಕೆಲವು ಸಹೋದ್ಯೋಗಿಗಳೇ ಹೇಳಿದರು. ಇದಕ್ಕಿಂತ ಸತ್ಯಕ್ಕೆ ಹತ್ತಿರವಾದ ಸಂಗತಿಯೆಂದರೆ, ಯಾವುದೋ ಒಂದು ಮೂಲದಿಂದ ನಿರ್ದೇಶನವನ್ನು ಪಡೆಯುತ್ತಿದ್ದ ಆತ ಉಳಿದೆಲ್ಲಕ್ಕೂ ಕುರುಡಾಗಿದ್ದರು; ಕಿವುಡಾಗಿದ್ದರು. ವಿದ್ಯಾರ್ಥಿಗಳ ವಿಷಯದಲ್ಲಂತೂ ಆತ ಅವರು ‘ಹೈ ಸೆಕ್ಯೂರಿಟಿ ರಿಸ್ಕ್’ (ದೊಡ್ಡ ಭದ್ರತಾ ಅಪಾಯ) ಎಂದು ಭಾವಿಸಿದ್ದರು.
ದೆಹಲಿ ಉಪರಾಜ್ಯಪಾಲರ ಕಾರ್ಯದರ್ಶಿ ನವೀನ್ ಚಾವ್ಲಾ ಕೂಡ ವಿದ್ಯಾರ್ಥಿ ಚಟುವಟಿಕೆಗಳನ್ನು ಅತ್ಯಂತ ಕಟುಶಬ್ದಗಳಲ್ಲಿ ಟೀಕಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಕೂಡ ಹೊರಗೆ ಬಿಡಬಾರದೆಂದು ಗೃಹ ಇಲಾಖೆಗೆ ಮನವರಿಕೆ ಮಾಡಿಸಿದ್ದರು. ಜೈಲಿನಲ್ಲಿ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯವು ಒಪ್ಪಿದರೆ ಮಾತ್ರ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕೆಂಬುದು ದೆಹಲಿ ಆಡಳಿತದ ನೀತಿ ಆಗಿತ್ತು – ಎಂದು ಹೇಳಿಕೊಂಡ ಉಪರಾಜ್ಯಪಾಲ, ವಿದ್ಯಾರ್ಥಿಗಳ ಚಟುವಟಿಕೆಗಳ ಆಧಾರದಲ್ಲಿ ಪ್ರಧಾನಿ ಇಂದಿರಾಗಾಂಧಿಯವರು ಇಂತಹ ಕಾಳಜಿಯನ್ನು ಹೊಂದಿದ್ದುದೇ ಆ ನೀತಿಗೆ ಆಧಾರವಾಗಿತ್ತು ಎನ್ನುವ ವಿವರವನ್ನು ನೀಡಿದ್ದಾರೆ.
ಗೃಹಖಾತೆ–ದೆಹಲಿ ಆಡಳಿತ ಜಗಳ
ತುರ್ತುಪರಿಸ್ಥಿತಿಯ ವೇಳೆ ಎಲ್ಲೆಲ್ಲೂ ರಹಸ್ಯವೇ ತುಂಬಿಹೋಗಿತ್ತು; ಸರ್ಕಾರದ ಯಾವ ಇಲಾಖೆಗಳಲ್ಲಿ ಏನು ನಡೆಯುತ್ತಿದೆ, ದೇಶದಲ್ಲೇನು ಸಂಭವಿಸುತ್ತಿದೆ ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಆದರೆ ಕೇಂದ್ರ ಗೃಹ ಇಲಾಖೆ ಮತ್ತು ದೆಹಲಿ ಆಡಳಿತಗಳ ನಡುವಣ ಜಗಳವು ಜಗಜ್ಜಾಹೀರಾಗಿತ್ತು. ದೆಹಲಿಯಲ್ಲಿ ಮೀಸಾ ಬಂಧನಗಳ ವಿಷಯದಲ್ಲಿ ತುಂಬ ದೋಷಗಳಾಗುತ್ತಿವೆ ಎಂದು ಗೃಹಖಾತೆ ದೆಹಲಿ ಆಡಳಿತಕ್ಕೆ ಹೇಳುತ್ತಲೇ ಇತ್ತು. ಕೆಲವು ಬಂಧಿತರ ಕಡೆಯಿಂದ ಬಂದ ಅಭಿಪ್ರಾಯಗಳು, ಅಸಮಾಧಾನಗಳು ಇದಕ್ಕೆ ಆಧಾರವಾಗಿತ್ತು. ಸೆಪ್ಟೆಂಬರ್ ೯, ೧೯೭೬ರಂದು ಗೃಹಖಾತೆ ರಾಜ್ಯ ಸಚಿವ ಓಂ ಮೆಹ್ತಾ ಅವರ ಕಚೇರಿಯಲ್ಲಿ ನಡೆದ ಒಂದು ಸಭೆಯಲ್ಲಿ ದೆಹಲಿ ಆಡಳಿತದ ಅಧಿಕಾರಿಗಳನ್ನು ಗೃಹಇಲಾಖೆಯವರು ತರಾಟೆಗೆ ತೆಗೆದುಕೊಂಡರು. ‘ಮೀಸಾ ಅಡಿಯಲ್ಲಿ ಬಾರದ ಕಾರಣಗಳಿಗಾಗಿ ತುಂಬ ಜನರ ಬಂಧನವಾಗಿದೆ’ ಎಂದು ಗೃಹಖಾತೆ ಕಾರ್ಯದರ್ಶಿ ಆಕ್ಷೇಪಿಸಿದರು. “ನಿಯಮದಲ್ಲಿ ಇದ್ದರೂ ಕೂಡ ಅದನ್ನು ಉಲ್ಲಂಘಿಸಿ, ಗೃಹಖಾತೆಗೆ ಹೇಳದೆ ಮೀಸಾ ಬಂಧಿತರ ಬಿಡುಗಡೆ ಮಾಡುತ್ತಿದ್ದೀರಿ” ಎಂದರು.
ಅದು ನಿಜವೂ ಆಗಿತ್ತು. ಕೆಲವು ವ್ಯಕ್ತಿಗಳ ಬಂಧನ, ಪೆರೋಲ್ ನೀಡಿಕೆ, ಬಂಧನ ಆದೇಶ ರದ್ದತಿ ಇತ್ಯಾದಿಗಳಲ್ಲಿ ಗೃಹಖಾತೆ ಸೂಚನೆಯನ್ನು ಉಪರಾಜ್ಯಪಾಲ ಕೃಷನ್ಚಂದ್ ತಿರಸ್ಕರಿಸುತ್ತಿದ್ದರು. ಒಮ್ಮೆ ವಿಶೇಷ ಕಾರ್ಯದರ್ಶಿ ಅದನ್ನು ಗಮನಕ್ಕೆ ತಂದಾಗ ಉಪರಾಜ್ಯಪಾಲರು “ಆ ಬಗ್ಗೆ ಚಿಂತೆ ಬೇಡ; ಇಲಾಖೆಯ ಪತ್ರಗಳನ್ನು ಮರೆಯುವುದಿಲ್ಲ” ಎಂದರಂತೆ. ಉಪರಾಜ್ಯಪಾಲ ತನ್ನ ಇಚ್ಛೆಯಂತೆ ನಡೆದುಕೊಳ್ಳುತ್ತಾರೆಂಬುದು ಇಲಾಖೆ ಅಧಿಕಾರಿಗಳ ದೂರು. ಹಲವು ಸಲ ಸೂಚನೆಗಳನ್ನು ಪೂರ್ತಿ ಕೈಬಿಡುತ್ತಿದ್ದರು. “ಗೃಹ ಇಲಾಖೆ ಅಧಿಕಾರಿಗಳು ಪ್ರಧಾನಿ ಮತ್ತು ದೇಶದ ಭದ್ರತೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ” ಎಂದು ಉಪರಾಜ್ಯಪಾಲ ನೇರವಾಗಿಯೇ ಹೇಳುತ್ತಿದ್ದರು. ಒಟ್ಟಿನಲ್ಲಿ ಗೃಹ ಇಲಾಖೆ ದೆಹಲಿ ಉಪರಾಜ್ಯಪಾಲರ ಇಚ್ಛೆಯಂತೆ ನಡೆದುಕೊಳ್ಳುವ ದುಃಸ್ಥಿತಿಗೆ ಗುರಿಯಾಗಿತ್ತು.
“ಮೀಸಾ ಬಂಧನಗಳ ವಿಷಯದಲ್ಲಿ ಉಪರಾಜ್ಯಪಾಲರಿಗೆ ಗೃಹಖಾತೆಯ ಬಗ್ಗೆ ಏನೇನೂ ಗೌರವ ಇರಲಿಲ್ಲ. ಅವರೆಲ್ಲ ಕಡತಗಳನ್ನು (ಫೈಲ್) ಮುಂದೆ ತಳ್ಳುತ್ತ ಕಾಲಕಳೆಯುವವರು. ಅವರಿಗೆ ನೆಲದ ವಾಸ್ತವ (Field condition) ಅರ್ಥವಾಗುವುದಿಲ್ಲ. ಗೃಹಸಚಿವರಿಗೆ ರಾಜಕೀಯ ಪ್ರಜ್ಞೆಯೇ ಇಲ್ಲ ಎಂದು ಉಪರಾಜ್ಯಪಾಲರು ಹೇಳುತ್ತಿದ್ದರು” ಎಂದು ದೆಹಲಿ ಮುಖ್ಯಕಾರ್ಯದರ್ಶಿ ಜೆ.ಕೆ. ಕೋಹ್ಲಿ ಅವರು ಶಾ ಆಯೋಗಕ್ಕೆ ತಿಳಿಸಿದರು. ಒಟ್ಟಿನಲ್ಲಿ ದೆಹಲಿಯಲ್ಲಿ ಉಪರಾಜ್ಯಪಾಲರ ಅಪೇಕ್ಷೆಯಂತೆ ಗೃಹ ಇಲಾಖೆ ತನ್ನ ನಡತೆಯನ್ನು ತಿದ್ದಿಕೊಳ್ಳಬೇಕಿತ್ತು. ಪರಿಣಾಮವಾಗಿ ಇಲಾಖೆಯ ಅಧಿಕಾರಿಗಳು ತಮ್ಮ ಮೇಲಿನವರ ಮಾತನ್ನು ಪಾಲಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಉಪರಾಜ್ಯಪಾಲರ ಅಳಲು
ಶಾ ಆಯೋಗದ ಮುಂದೆ ಬಂದ ಕೃಷನ್ಚಂದ್, “ದೆಹಲಿಯಲ್ಲಿ ನಡೆದ ಎಲ್ಲದರ ಬಗ್ಗೆ ನನಗೆ ‘ಸಾಂವಿಧಾನಿಕ’ ಜವಾಬ್ದಾರಿಯಿತ್ತು. ನಾನು ಸ್ವತಂತ್ರನಾಗಿರಲಿಲ್ಲ. ನನಗೆ ಪರಸ್ಪರ ವಿರುದ್ಧವಾದ ಸೂಚನೆಗಳು ಬರುತ್ತಿದ್ದವು -ಗೃಹ ಇಲಾಖೆ ಮತ್ತು ಪ್ರಧಾನಿ ನಿವಾಸದಿಂದ; ಅದಲ್ಲದೆ ಸಂಜಯಗಾಂಧಿ ಅವರಿಂದಲೂ ಬರುತ್ತಿದ್ದವು. ಪಿ.ಎಸ್. ಭಿಂದರ್, ನವೀನ್ ಚಾವ್ಲಾ ಮತ್ತು ಬಾಜ್ವಾ ಅವರಿಗೆ ನೇರವಾಗಿ ಸೂಚನೆಗಳು ಬರುತ್ತಿದ್ದವು. ಕೆಲವು ತಾಂತ್ರಿಕತೆ ಮತ್ತು ಔಪಚಾರಿಕತೆಯನ್ನು ಪೂರೈಸುವುದಕ್ಕಷ್ಟೇ ನಾನಿದ್ದೆ. ನನ್ನ ಸ್ವಂತ ವಿವೇಚನೆಗೆ ಅವಕಾಶ ಇರಲೇ ಇಲ್ಲ. ಪ್ರಧಾನಿ ನಿವಾಸದಿಂದ ಆದೇಶ ಬಂದಾಗ ಸುಮ್ಮನಿರುವಂತಿರಲಿಲ್ಲ. ಆದೇಶವನ್ನು ಪಾಲಿಸದಿದ್ದರೆ ನನ್ನನ್ನು ಬಂಧಿಸಬಹುದಿತ್ತು. ನನ್ನ ಬಂಧನ ಆಗದಿರಲೆಂದು ನಾನು ನೂರಾರು ಜನರನ್ನು ಅಕ್ರಮವಾಗಿ ಬಂಧಿಸಿದೆ; ಇನ್ನು ಕೆಲವರನ್ನು ಪೆರೋಲ್ ನೀಡಿ ಬಿಡುಗಡೆ ಮಾಡಿದ್ದರೆ ಭೂಗತ ಚಳವಳಿಯು ಬೆಳೆಯುವ ಅಪಾಯ ಕೂಡ ಇತ್ತು” ಮುಂತಾಗಿ ಹೇಳಿದರು. ಅವರ ಕ್ರಮಗಳಿಂದ ಜನರಿಗೆ ಭಾರೀ ಕಷ್ಟ-ಸಂಕಷ್ಟಗಳು ಆದದ್ದಂತೂ ಸತ್ಯ.
ಇನ್ನು ಡಿಐಜಿ ಭಿಂದರ್, ಸಿಐಡಿ ಎಸ್ಪಿ ಬಾಜ್ವಾ ಮತ್ತು ಉಪರಾಜ್ಯಪಾಲರ ಕಾರ್ಯದರ್ಶಿ ನವೀನ್ ಚಾವ್ಲಾಗೆ ತುರ್ತುಪರಿಸ್ಥಿತಿ ವೇಳೆ ವ್ಯಾಪಕ ಅಧಿಕಾರಗಳಿದ್ದವು. ಏಕೆಂದರೆ ಅವರು ಪ್ರಧಾನಿ ನಿವಾಸಕ್ಕೆ ಸುಲಭವಾಗಿ ಹೋಗಬಹುದಿತ್ತು. ವಿಪುಲ ಅಧಿಕಾರವಿದ್ದ ಕಾರಣ ಅವರು ತಾವು ಮಾಡುವ ಕೆಲಸ ನೈತಿಕವೇ-ಅನೈತಿಕವೇ, ಕಾನೂನುಬದ್ಧವೇ-ಕಾನೂನುಬಾಹಿರವೇ ಎಂಬ ವಿವೇಚನೆ ಇಲ್ಲದೆ ಮಾಡಿದರು. ಆ ಮೂವರ ನಡುವೆ ಕೆಲವು ಡಿಗ್ರಿಯಷ್ಟೆ ವ್ಯತ್ಯಾಸ ಇರಬಹುದಾದರೂ ಜನರ ಸಮಸ್ಯೆಗಳ ಬಗೆಗಿನ ಅವರೆಲ್ಲರ ನಿಲವು ಸರ್ವಾಧಿಕಾರ ಧೋರಣೆಯದ್ದು ಮತ್ತು ಬೇಜವಾಬ್ದಾರಿತನದ್ದಾಗಿತ್ತು. ಅವರ ಒಂದೇ ಕಾಳಜಿಯೆಂದರೆ ತಾನು ಮಾಡಿದ್ದೆಂದು ತಿಳಿಯದಂತೆ ಮಾಡುವುದು (Proximity); ಅಂತಿಮವಾಗಿ ಅವರು ತಮ್ಮ ಬಲ (ಅಧಿಕಾರ) ವೃದ್ಧಿಯಾಗುವ ಎಲ್ಲವನ್ನೂ ಮಾಡಿದರು. ತಮ್ಮ ಹುದ್ದೆಗಳ ವ್ಯಾಪಕ ದುರುಪಯೋಗ ಮಾಡಿದರು. ನಾಗರಿಕರ ಹಿತದ ವಿಷಯದಲ್ಲಿ ಅವರು ಸಿನಿಕರಾಗಿದ್ದರು. ಒಟ್ಟಿನಲ್ಲಿ ಯಾವುದೇ ಸಾರ್ವಜನಿಕ ಹುದ್ದೆಯನ್ನು ಹೊಂದಲು ಅನರ್ಹರೆನಿಸಿದ್ದರು. ಏಕೆಂದರೆ ಅಲ್ಲಿ ನ್ಯಾಯಸಮ್ಮತ ನಡತೆ ಮತ್ತು ಇತರರ ಬಗ್ಗೆ ಕಾಳಜಿಗಳು ಬೇಕಾಗುತ್ತವೆ. ತಮ್ಮ ಅಧಿಕಾರ ದಾಹದಿಂದ ಅವರು ಅಧಿಕಾರ ನಿರ್ವಹಣೆ ಮತ್ತು ಆಡಳಿತದ ಸತ್ಸಂಪ್ರದಾಯಗಳನ್ನು ಪೂರ್ತಿ ಬುಡಮೇಲು ಮಾಡಿದರು – ಎಂದು ಆಯೋಗ ಕಟುವಾದ ಶಬ್ದಗಳಲ್ಲಿ ಹೇಳಿದೆ.
ಉಪರಾಜ್ಯಪಾಲ ಕೃಷನ್ಚಂದರ್ ಬಗ್ಗೆ ಮತ್ತೆ ಆಯೋಗವು ಪ್ರಸ್ತಾಪಿಸಿ, ಆತ ಪ್ರಮುಖ ವಿಷಯಗಳಲ್ಲಿ, ಬಂಧನ, ಪೆರೋಲ್ ನೀಡಿಕೆ ಇತ್ಯಾದಿಗಳಲ್ಲಿ ಸೂಕ್ತ ಮತ್ತು ಸಕಾಲಿಕ ನಿರ್ಧಾರ ಕೈಗೊಳ್ಳುವಲ್ಲಿ ಅಸಮರ್ಥ ಎಂದು ತೋರಿಸಿಕೊಟ್ಟರು. ದೆಹಲಿಯ ಕ್ರಮಬದ್ಧ ಆಡಳಿತದಲ್ಲಿ ಆತನಿಗೆ ಆಸಕ್ತಿಯೇ ಇರಲಿಲ್ಲ. ಭಿಂದರ್, ಬಾಜ್ವಾ, ನವೀನ್ ಚಾವ್ಲಾನಂತಹ ಅತಿ ಮಹತ್ತ್ವಾಕಾಂಕ್ಷೆಯ ಅಧಿಕಾರಿಗಳು ಹೇಳಿದಂತೆ ಮಾಡುತ್ತ ಜನತೆಗೆ ಘೋರ ಸಂಕಷ್ಟಗಳನ್ನು ತಂದಿಟ್ಟರು; ಕಾನೂನುಬದ್ಧ ಅಧಿಕಾರ ನಿರ್ವಹಣೆಯನ್ನು ಮರೆತರು; ಒಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿ ದೆಹಲಿಯ ನಾಗರಿಕರಿಗೆ ನಂಬಿಕೆದ್ರೋಹ ಎಸಗಿದರು – ಎಂದು ಟೀಕಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಶೀಲ್ಕುಮಾರ್ ಎಂತಹ ಸನ್ನಿವೇಶದಲ್ಲಿ ತಾನು ಬಂಧನದ ಆದೇಶಗಳನ್ನು ನೀಡಬೇಕಾಯಿತೆಂದು ವಿವರಿಸಿದರು. ಆತನಿಗೆ ಎರಡು ಗಂಭೀರ ತಡೆಗಳಿದ್ದವು. ಒಂದೆಡೆ ಪ್ರಧಾನಿಯವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಆರ್.ಕೆ. ಧವನ್ ಪಟ್ಟಿಯಲ್ಲಿದ್ದ ಪ್ರತಿಪಕ್ಷನಾಯಕರನ್ನು ರಾತ್ರಿ ಬೆಳಗಾಗುವುದರೊಳಗೆ ಬಂಧಿಸಬೇಕೆಂದು ಪಟ್ಟು ಹಿಡಿದರೆ, ಇನ್ನೊಂದೆಡೆ ಪೊಲೀಸರು ಸರಿಯಾದ ವಾರಂಟ್ ಇಲ್ಲದೆ ಬಂಧಿಸಲು ಅನುಮಾನಿಸಿದರು. ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಬಂಧಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಇಷ್ಟವಿರಲಿಲ್ಲ. ಏಕೆಂದರೆ ಬಂಧಿಸಬೇಕಾದವರು ದೊಡ್ಡ ಪ್ರತಿಪಕ್ಷನಾಯಕರು. ಪಟ್ಟಿಯಲ್ಲಿದ್ದ ನಾಯಕರನ್ನು ಮೀಸಾ ಅಡಿಯಲ್ಲಿ ಬಂಧಿಸಬೇಕೆಂದು ಪ್ರಧಾನಿ ನಿವಾಸದಿಂದ ಸೂಚನೆ ಬಂದಿತ್ತು. ಆ ನಾಯಕರು ನ್ಯಾಯಾಲಯದಿಂದ ರಕ್ಷಣೆ ಪಡೆಯಬಹುದಿತ್ತು. ಸುಶೀಲ್ಕುಮಾರ್ ಕೆಲವು ಖಾಲಿ ಆದೇಶಗಳನ್ನು ಕೂಡ ನೀಡಿದರು. ಅದು ಕಾನೂನುಬಾಹಿರ. ಇಂದಿರಾಗಾಂಧಿಯವರ ನಿರ್ದೇಶನದಂತೆ ಬಂಧನ ಆದೇಶಗಳನ್ನು ನೀಡಿದ್ದ ಕಾರಣ ಅಕ್ರಮ ಬಂಧನದ ಪ್ರಾಥಮಿಕ ಹೊಣೆ ಅವರದೇ ಆಗುತ್ತದೆ.
ಇಂದಿರಾ ಅಸಹಕಾರ
ಶಾ ಆಯೋಗದ ಕಲಾಪಕ್ಕೆ ಇಂದಿರಾಗಾಂಧಿಯವರು ಸಹಕರಿಸಲಿಲ್ಲ; ಕಾನೂನು ಪ್ರಕಾರ ಸಮನ್ಸ್ ನೀಡಿದರೂ ಆಯೋಗದ ಮುಂದೆ ಹಾಜರಾಗಿ ಹೇಳಿಕೆಯನ್ನು ನೀಡಲಿಲ್ಲ. ಅದರಿಂದಾಗಿ ಅವರ ಕಡೆಯ ಹೇಳಿಕೆ ಅಥವಾ ಸಮರ್ಥನೆ ಇಲ್ಲದೆ ಆಯೋಗ ತನ್ನ ತೀರ್ಮಾನಕ್ಕೆ ಬರಬೇಕಾಯಿತು. ದೇಶಾದ್ಯಂತ ನಡೆದ ಅಕ್ರಮ ಬಂಧನ ಸೆರೆಮನೆವಾಸಗಳ ಹೊಣೆಯಿಂದ ಅವರು ತಪ್ಪಿಸಿಕೊಳ್ಳುವಂತಿಲ್ಲ. ತಾವು ಅಧಿಕಾರದಲ್ಲಿ ಮುಂದುವರಿಯುವ ಸಲುವಾಗಿ ಆಕೆ ಕಾನೂನುಬಾಹಿರ ಕ್ರಮಗಳನ್ನು ಕೈಗೊಂಡರು – ಎಂದು ಶಾ ಆಯೋಗವು ದಾಖಲಿಸಿದೆ.
ರಾಜ್ಯಗಳಲ್ಲಿ ಬಂಧನ
ಮೀಸಾ ಕಾಯ್ದೆ-೧೯೭೧ಕ್ಕೆ ತಂದ ತಿದ್ದುಪಡಿಯ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ಅವರು ಹೊರಡಿಸಿದ ಬಂಧನ ಆದೇಶವನ್ನು ರಾಜ್ಯಸರ್ಕಾರ ೧೫ ದಿನದೊಳಗೆ ಪರಿಶೀಲಿಸಿ ದೃಢಪಡಿಸಬೇಕಾಗಿತ್ತು; ಅಥವಾ ರದ್ದುಪಡಿಸಬೇಕಾಗಿತ್ತು. ಆ ಮೂಲಕ ಸಂಬಂಧಪಟ್ಟ ರಾಜ್ಯಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊರಿಸಿದ್ದು, ಅದರಂತೆ ರಾಜ್ಯಸರ್ಕಾರ ಅಸಮರ್ಥನೀಯ ಮತ್ತು ಅಸಂಗತ ನೆಲೆಯಲ್ಲಿ ಬಂಧನಗಳು ನಡೆಯದಂತೆ ತಡೆಯಬೇಕಾಗಿತ್ತು. ಆದರೆ ರಾಜ್ಯಸರ್ಕಾರಗಳು ಆ ರೀತಿಯಲ್ಲಿ ಬಂಧನಗಳನ್ನು ತಡೆದದ್ದು ತೀರಾ ಕಡಮೆ. ಬಂಧನ ಆದೇಶಗಳನ್ನು ಸಾರಾಸಗಟಾಗಿ ಅಂಗೀಕರಿಸುತ್ತ ಹೋದವು. ಕರ್ನಾಟಕದ ಬಗೆಗೂ ಇದು ಸತ್ಯ.
ಉತ್ತರಪ್ರದೇಶ, ಒಡಿಶಾ(ಒರಿಸ್ಸಾ), ಬಿಹಾರ, ಆಂಧ್ರಪ್ರದೇಶ, ಗುಜರಾತ್ ಮತ್ತು ಕರ್ನಾಟಕಗಳಲ್ಲಿ ಗೃಹ ಇಲಾಖೆ ಪರಿಶೀಲನೆಯ ಕೆಲಸವನ್ನು ಸ್ವಲ್ಪಮಟ್ಟಿಗೆ ಮಾಡಿದವು. ಒಡಿಶಾ, ಬಿಹಾರ, ಕರ್ನಾಟಕ, ಆಂಧ್ರ ಮತ್ತು ಗುಜರಾತ್ಗಳಲ್ಲಿ ಬಹಳಷ್ಟು ಪ್ರಕರಣಗಳಲ್ಲಿ ಬಂಧನದ ಕಾರಣ ಸರಿಯಾಗಿಲ್ಲವೆಂದು ಗೃಹ ಇಲಾಖೆ ಹೇಳಿದಾಗಲೂ ರಾಜ್ಯಸರ್ಕಾರಗಳು ಬಂಧನವನ್ನೇ ದೃಢಪಡಿಸಿದವು. ರಾಜ್ಯಸರ್ಕಾರದ ಪರಿಶೀಲನೆ ಎನ್ನುವುದು ಒಂದು ಅರ್ಥಹೀನ ಔಪಚಾರಿಕತೆ ಎನಿಸಿತು. ಒಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಬಂಧನ ಆದೇಶಗಳ ಪರಿಶೀಲನೆ ನಡೆದ ಮತ್ತು ನಡೆಯದ ರಾಜ್ಯಗಳ ನಡುವೆ ಯಾವುದೇ ವ್ಯತ್ಯಾಸ ಇರಲಿಲ್ಲ.
ರಾಜ್ಯಗಳಲ್ಲಿ ವ್ಯತ್ಯಾಸ
ತುರ್ತುಪರಿಸ್ಥಿತಿ ವೇಳೆ ರಾಜಕೀಯ ಮತ್ತು ರಾಜಕೀಯೇತರ ಬಂಧನಗಳ ಅನುಪಾತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವನ್ನು ಕಾಣಬಹುದಿತ್ತು. ಉತ್ತರಪ್ರದೇಶ, ಬಿಹಾರ, ಗುಜರಾತ್, ಗೋವಾ ಮತ್ತು ದೆಹಲಿಗಳಲ್ಲಿ ಕ್ರಿಮಿನಲ್ಗಳು ಹಾಗೂ ಸಮಾಜವಿರೋಧಿ ಶಕ್ತಿಗಳ ಬಂಧನವು ರಾಜಕೀಯ ನಾಯಕರು, ಕಾರ್ಯಕರ್ತರ ಬಂಧನಕ್ಕಿಂತ ತುಂಬ ಜಾಸ್ತಿಯಿತ್ತು. ತಮಿಳುನಾಡು, ಕರ್ನಾಟಕ, ಕೇರಳ, ರಾಜಸ್ಥಾನ, ಪಶ್ಚಿಮಬಂಗಾಳ, ಹಿಮಾಚಲಪ್ರದೇಶ, ಒಡಿಶಾ, ಹರ್ಯಾಣ, ಆಂಧ್ರಪ್ರದೇಶಗಳಲ್ಲಿ ಕ್ರಿಮಿನಲ್ಗಳಿಗಿಂತ ರಾಜಕೀಯ ವ್ಯಕ್ತಿಗಳ ಬಂಧನವೇ ಜಾಸ್ತಿ. ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಒಟ್ಟು ಬಂಧನವು ೫,೦೦೦ ದಾಟಿದ್ದು, ಕ್ರಿಮಿನಲ್ಗಳು ಹಾಗೂ ರಾಜಕೀಯ ವ್ಯಕ್ತಿಗಳ ಬಂಧನದ ಅನುಪಾತವು ಬಹುತೇಕ ಸಮಾನವಾಗಿತ್ತು. ತುರ್ತುಪರಿಸ್ಥಿತಿ ವೇಳೆ ದೇಶದಲ್ಲಿ ಮೀಸಾ ಅಡಿಯಲ್ಲಿ ಒಟ್ಟು ಸುಮಾರು ೩೫ ಸಾವಿರ ಬಂಧನಗಳು ನಡೆದಿದ್ದು, ಅದರಲ್ಲಿ ೧೩ ಸಾವಿರದಷ್ಟು ರಾಜಕೀಯ ಪಕ್ಷ(ಪ್ರತಿಪಕ್ಷ)ದವರು ಹಾಗೂ ನಿಷೇಧಿತ ಸಂಘಟನೆಗಳಿಗೆ ಸೇರಿದವರಾಗಿದ್ದರು.
ಜನಸಂಘ, ಆರೆಸ್ಸೆಸ್ ಜಾಸ್ತಿ
ರಾಜ್ಯವಾರು ನೋಡುವುದಾದರೆ ಗುಜರಾತ್, ಕರ್ನಾಟಕ, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶಗಳಲ್ಲಿ ನಡೆದ ರಾಜಕೀಯ ವ್ಯಕ್ತಿಗಳ ಬಂಧನಗಳಲ್ಲಿ ಹೆಚ್ಚಿನವರು ಜನಸಂಘದವರು, ಆ ಪಕ್ಷದ ಬಗೆಗೆ ಸಹಾನುಭೂತಿ ಹೊಂದಿದವರು ಮತ್ತು ಬೆಂಬಲಿಗರು. ಸಾಮಾನ್ಯವಾಗಿ ರಹಸ್ಯ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ನೀತಿಯನ್ನು ಟೀಕಿಸಿದ್ದಾರೆಂದು ಆರೋಪಿಸಿ ಬಂಧಿಸಲಾಗುತ್ತಿತ್ತು. ಕರಪತ್ರ, ನಿಷೇಧಿತ ಸಾಹಿತ್ಯಗಳನ್ನು ಹಂಚಿದ ಆರೋಪಗಳೂ ಇದ್ದವು. ಇದರಲ್ಲಿ ಬಂಧಿತರು ಸ್ವಲ್ಪವಾದರೆ ಭೂಗತರಾಗಿಯೇ ಉಳಿದು ತಮ್ಮ ಹೋರಾಟವನ್ನು ಮುಂದುವರಿಸಿದವರು ಬಹಳಷ್ಟು ಮಂದಿ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂತಾದ ಸಂಘಟನೆಗಳನ್ನು ಕೇಂದ್ರಸರ್ಕಾರ ನಿಷೇಧಿಸುತ್ತಲೇ ಹಲವು ರಾಜ್ಯಸರ್ಕಾರಗಳು ಆ ಸಂಘಟನೆಗಳ ಸದಸ್ಯರ ಮೇಲೆ ಮುಗಿಬಿದ್ದವು. ಬಂಧಿಸುವುದಕ್ಕೆ ಸಂಘಟನೆಯ ಜೊತೆಗಿನ ಸಂಪರ್ಕದ ಅನುಮಾನ ಕೂಡ ಸಾಕಾಗಿತ್ತು. ಉತ್ತರಪ್ರದೇಶದಲ್ಲಿ ಕುಟುಂಬಯೋಜನೆಯ ವಿರೋಧಿಗಳು ಮತ್ತು ಅದರ ತಡೆಗೆ ಸಕ್ರಿಯವಾಗಿ ಸಹಕರಿಸಿದವರ ವಿರುದ್ಧ ಕೂಡ ಮೀಸಾ ಬಂಧನದ ಅಸ್ತ್ರವನ್ನು ಬಳಸಲಾಯಿತು.
(ಸಶೇಷ)
ಬೆಂಗಳೂರಿನಲ್ಲಿ ಅಭೂತಪೂರ್ವ ಪ್ರತಿಭಟನೆ
ಸೆನ್ಸಾರ್ಶಿಪ್ನಿಂದಾಗಿ ತುರ್ತುಪರಿಸ್ಥಿತಿಯ ವೇಳೆ ವರ್ತಮಾನ ಪತ್ರಿಕೆಗಳು ಪೂರ್ತಿ ನೀರಸವಾಗಿದ್ದವು. ಅವು ಕಾಂಗ್ರೆಸ್ ಸರ್ಕಾರದ ಪ್ರಚಾರದಂತಿದ್ದು ನಿಜವಾದ ಸುದ್ದಿಗಳು ಅವುಗಳಲ್ಲಿ ಬರುವುದು ಅಸಂಭವವಿತ್ತು. ಅದಕ್ಕಾಗಿ ಬಂದನವನ್ನು ತಪ್ಪಿಸಿಕೊಂಡು ಭೂಗತರಾಗಿದ್ದ ನಾಯಕರು, ಕಾರ್ಯಕರ್ತರು ಬಹುತೇಕ ತಮ್ಮದೇ ಸುದ್ದಿಜಾಲವನ್ನು ನಿರ್ಮಿಸಿಕೊಂಡಿದ್ದರು. ಅಂತಹ ‘ಕಹಳ’ ಎನ್ನುವ ಭೂಗತಪತ್ರಿಕೆ ಆಸಕ್ತರಿಗೆ, ಚಳವಳಿನಿರತರಿಗೆ ಬಹಳಷ್ಟು ಸುದ್ದಿಗಳನ್ನು ನೀಡುತ್ತಿತ್ತು. ಅದರಲ್ಲಿ ಪ್ರಕಟವಾದ ಒಂದು ಸುದ್ದಿ ಹೀಗಿತ್ತು:
“ಡಿಸೆಂಬರ್ ೨೫ರಂದು (೧೯೭೫) ಬೆಂಗಳೂರಿನ ಸಹಸ್ರಾರು ನಾಗರಿಕರಿಗೆ ಅಪೂರ್ವ ಹೆಮ್ಮೆಯ ದೃಶ್ಯವೊಂದು ನೋಡಲು ಸಿಕ್ಕಿತು. ಆನಂದರಾವ್ ಸರ್ಕಲ್ನಿಂದ ಒಂದು ಮೆರವಣಿಗೆ ಹೊರಟಿತು. ಪ್ರದರ್ಶನಕಾರರು ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದರು; ಕೈಯಲ್ಲಿ ಫಲಕಗಳನ್ನು ಹಿಡಿದಿದ್ದರು. ಅವುಗಳಲ್ಲಿನ ಬರೆಹಗಳು ಅವರ ಉದ್ದೇಶವನ್ನು ಸಾರಿ ಹೇಳುತ್ತಿದ್ದವು.
“ತುರ್ತುಪರಿಸ್ಥಿತಿ ರದ್ದಾಗಲಿ, ಬಂಧನದಲ್ಲಿರುವ ನಾಯಕರೆಲ್ಲರ ಬಿಡುಗಡೆಯಾಗಲಿ; ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲಿನ ನಿಷೇಧ ರದ್ದಾಗಲಿ; ಪತ್ರಿಕಾಸ್ವಾತಂತ್ರ್ಯ ಕೊಡಿ; ಮೂಲಭೂತ ಹಕ್ಕುಗಳನ್ನು ಮರಳಿ ಕೊಡಿ” ಮುಂತಾದ ಆಗ್ರಹಗಳು ಅಲ್ಲಿದ್ದವು.
ಜನ ಓದಿದರು. ಇಷ್ಟು ದಿಟ್ಟವಾಗಿ ಹೊರಟವರಾರು ಎಂದು ಅಚ್ಚರಿಯಿಂದ ನೋಡಿದರು. ರಾಜ್ಯದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್, ಮಾಜಿ ಅರ್ಥಮಂತ್ರಿ ರಾಮಕೃಷ್ಣ ಹೆಗಡೆ, ರಾಜ್ಯಸಭಾ ಸದಸ್ಯ ಡಾ|| ನಾಗಪ್ಪ ಆಳ್ವ, ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಅಧ್ಯಕ್ಷೆ ಮತ್ತು ಶಾಸನಸಭಾ ಸದಸ್ಯೆ ಪದ್ಮಾವತಿ ವಿಠಲರಾವ್, ಚಿಕ್ಕಮಗಳೂರಿನ ಶ್ರೀಮತಿ ಸುಬ್ಬಮ್ಮ, ಸರೋಜಮ್ಮ ತಿಮ್ಮೇಗೌಡ, ಕಲಬುರ್ಗಿಯ ಒಡೆಯರಾಜ್, ಧಾರವಾಡದ ಎಸ್.ಆರ್. ಬೊಮ್ಮಾಯಿ, ಬೆಳಗಾವಿಯ ಜಿ.ಕೆ. ಕುಲಕರ್ಣಿ, ಬೆಂಗಳೂರಿನ ವಿ.ಎಸ್. ಕೃಷ್ಣ ಅಯ್ಯರ್, ಪಕ್ಷೇತರ ಟಿ.ಆರ್. ಶಾಮಣ್ಣ ಮುಂತಾದ ಪ್ರತಿಪಕ್ಷಗಳ ೨೫ ಶಾಸಕರು ಮತ್ತು ೪೦-೫೦ ಜನ ರಾಜ್ಯಮಟ್ಟದ ಮುಖಂಡರು ಮೆರವಣಿಗೆ ಹೊರಟಿದ್ದರು.
ಲೋಕಸಂಘರ್ಷ ಸಮಿತಿಯ ಬೃಹತ್ ಆಂದೋಳನದ ಅಂಗವಾಗಿ ಈ ಪ್ರತಿಭಟನಾ ಮೆರವಣಿಗೆ ಹೊರಟಿತ್ತು. ನೋಡನೋಡುತ್ತಿದ್ದಂತೆ ಜನರ ಗುಂಪು ಬೆಳೆಯಿತು. ಪ್ರೋತ್ಸಾಹ ನೀಡುತ್ತ ಪ್ರದರ್ಶನಕಾರರನ್ನು ಹಿಂಬಾಲಿಸಿತು. ಮುನ್ಸೂಚನೆ ಇಲ್ಲದಿದ್ದುದರಿಂದ ಪೊಲೀಸರ ಚೌಕ ಸೇರುವ ಹೊತ್ತಿಗೆ ಸಹಸ್ರಾವಧಿ ಜನರ ವಿಶಾಲ ಸಭೆಯಾಗಿ ಮಾರ್ಪಟ್ಟಿತ್ತು.
ಮುಂದಾಳುಗಳು ಬಾಯಿಗೆ ಕಟ್ಟಿಕೊಂಡಿದ್ದ ಬಟ್ಟೆಗಳನ್ನು ತೆಗೆದು ಭಾಷಣ, ಘೋಷಣೆ ಆರಂಭಿಸಿದರು. ಜನಸಮೂಹವು ಸರ್ವಾಧಿಕಾರಕ್ಕೆ ಧಿಕ್ಕಾರ ಹಾಗೂ ಜೆಪಿಯವರಿಗೆ ಜಯಕಾರ ಹಾಕಿತು. ಅಧಿಕಾರಿಗಳು ಅವಾಕ್ಕಾದರು. ಮುಖಂಡರೆಲ್ಲರನ್ನು ಬಂಧಿಸಲಾಯಿತು. ಅಂದು ರಾತ್ರಿಯೇ ಅವರೆಲ್ಲರ ಬಿಡುಗಡೆಯೂ ಆಯಿತು. ಪ್ರತಿಪಕ್ಷಗಳಲ್ಲಿ ಹೆಚ್ಚುತ್ತಿರುವ ಒಗ್ಗಟ್ಟು ಹಾಗೂ ಹೋರಾಟದ ಕಿಚ್ಚು ಕಂಡು ಇಂದಿರಾ ಕಾಂಗ್ರೆಸ್ ಬೆಚ್ಚಿಬೀಳತೊಡಗಿತು.
ಮಾರುತಿ ಲಿಮಿಟೆಡ್ಗಾಗಿ ‘ಭಯೋತ್ಪಾದನೆ’
ತುರ್ತುಪರಿಸ್ಥಿತಿಯ ಅತಿರೇಕಗಳೊಂದಿಗೆ ಮಾರುತಿ ಲಿಮಿಟೆಡ್ ಸಂಸ್ಥೆಯ ಹೆಸರು ಕೂಡ ತಳಕು ಹಾಕಿಕೊಂಡಿರುತ್ತದೆ. ಪ್ರಧಾನಿಯವರ ಪುತ್ರ ಸಂಜಯಗಾಂಧಿಯವರ ಕನಸಿನ ಕೂಸಾದ ಅದರ ಹೆಸರು ಹೇಳುವುದಕ್ಕೇನೇ ಭಯಪಡುವಂತಹ ವಾತಾವರಣ ನಿರ್ಮಾಣವಾಗಿತ್ತೆಂದರೆ ತಪ್ಪಲ್ಲ. ಸರ್ಕಾರ ಮತ್ತು ಬ್ಯಾಂಕ್ಗಳ ಔದಾರ್ಯವನ್ನು ಗಿಟ್ಟಿಸಿಕೊಳ್ಳುವಲ್ಲಿಯೂ ಅದು ಮುಂದಿತ್ತು. ಮಾರುತಿ ಲಿ. ಬಗೆಗೆ ಭಯಪಡುವ ವಾತಾವರಣ ಇತ್ತೆಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ; ನಾಲ್ವರು ಅಧಿಕಾರಿಗಳ ವಿರುದ್ಧ ಸುಳ್ಳುಕೇಸ್ ಹಾಕಿ ತನಿಖೆಗೆ ಒಳಪಡಿಸಿದ್ದೇ ಆ ಘಟನೆ.
ಮಾರುತಿ ಖಾಸಗಿ ನಿಯಮಿತ ಸಂಸ್ಥೆಯು ಯಂತ್ರಗಳನ್ನು ಆಮದು ಮಾಡಿಕೊಂಡ ಬಗ್ಗೆ ಜ್ಯೋತಿರ್ಮಯ ಬಸು ಅವರು ಸಂಸತ್ತಿನಲ್ಲಿ ಒಂದು ಪ್ರಶ್ನೆಯನ್ನು ಕೇಳಿದರು. ಕೈಗಾರಿಕಾ ಸಚಿವಾಲಯದ ನಾಲ್ವರು ಅಧಿಕಾರಿಗಳು – ಉಪಕಾರ್ಯದರ್ಶಿ ಕೃಷ್ಣಸ್ವಾಮಿ, ಅಭಿವೃದ್ಧಿ ಅಧಿಕಾರಿ ಎ.ಎಸ್. ರಾಜನ್, ಪ್ರಧಾನ ಮಾರ್ಕೆಟಿಂಗ್ ಮ್ಯಾನೇಜರ್ ಎಲ್.ಆರ್. ಕವಳೆ ಹಾಗೂ ಉಪ ಮಾರ್ಕೆಟಿಂಗ್ ಮ್ಯಾನೇಜರ್ ಪಿ.ಎಸ್. ಭಟ್ನಾಗರ್ ಎಂಬವರು ಆ ಪ್ರಶ್ನೆಗೆ ಉತ್ತರಿಸಲು ಬೇಕಾದ ಮಾಹಿತಿ ಸಂಗ್ರಹಿಸಲು ಮುಂದಾದರು. ಮಾರುತಿ ಸಂಸ್ಥೆಯಲ್ಲಿ ಕೇಳಿದಾಗ ಮ್ಯಾನೇಜ್ಮೆಂಟ್ನಿಂದ ಮಾಹಿತಿ ದೊರೆಯಲಿಲ್ಲ. ರಾಜನ್ ಮತ್ತು ಭಟ್ನಾಗರ್ ಅವರು ಕಂಪೆನಿಗೆ ಸಂಬಂಧಪಟ್ಟ ಬಾಟ್ಲಭಾಯಿ ಆ್ಯಂಡ್ ಕಂಪೆನಿಗೆ ಫೋನ್ ಮಾಡಿ ಮಾರುತಿ ಬಗ್ಗೆ ಮಾಹಿತಿ ಕೇಳಿದರು. ಇದೇ ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು.
ಇಂದಿರಾಗಾಂಧಿಯವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಆರ್.ಕೆ. ಧವನ್ ಅವರು ಬೃಹತ್ ಕೈಗಾರಿಕೆ ಸಚಿವ ಟಿ.ಎ. ಪೈ ಅವರಿಗೆ ಫೋನ್ ಮಾಡಿ ಆ ಅಧಿಕಾರಿಗಳ ವರ್ತನೆಯನ್ನು ಆಕ್ಷೇಪಿಸಿದರು; ಮತ್ತು ರಾಜನ್ ಹಾಗೂ ಭಟ್ನಾಗರ್ ಜೊತೆ ಮಾತನಾಡಿ, ಮಾರುತಿ ಸಂಸ್ಥೆಯು ಯಂತ್ರಗಳನ್ನು ಆಮದು ಮಾಡಿದ ಬಗ್ಗೆ ಮಾಹಿತಿ ಸಂಗ್ರಹಿಸಬೇಡಿ ಎಂದು ಸೂಚಿಸಿದರು. ಪ್ರಧಾನಿ ಇಂದಿರಾಗಾಂಧಿಯವರು ಟಿ.ಎ. ಪೈ ಅರ್ನು ತಮ್ಮ ನಿವಾಸಕ್ಕೆ ಕರೆದು ಮಾತನಾಡಿದರು. “ಆಗ ಇಂದಿರಾ ಪೂರ್ತಿ ಗಲಿಬಿಲಿ(ಅಪ್ಸೆಟ್)ಗೊಂಡಿದ್ದರು; ತೀವ್ರವಾಗಿ ಕೋಪಗೊಂಡಿದ್ದರು” ಎಂದು ಟಿ.ಎ. ಪೈ ಶಾ ಆಯೋಗಕ್ಕೆ ತಿಳಿಸಿದರು. “ನಿಮ್ಮ ಇಲಾಖೆ ಅಧಿಕಾರಿಗಳು ಬಾಟ್ಲಿಬಾ ಕಂಪೆನಿಗೆ ಕಿರುಕುಳ ಕೊಡುತ್ತಿದ್ದಾರೆ” ಎಂದ ಪ್ರಧಾನಿ, ಪೈ ಅವರ ಎದುರಲ್ಲೇ ಧವನ್ರನ್ನು ಕರೆದು, ಆ ನಾಲ್ವರು ಅಧಿಕಾರಿಗಳ ವರ್ತನೆ ಬಗ್ಗೆ ತನಿಖೆ ನಡೆಸುವಂತೆ ಸಿಬಿಐ ನಿರ್ದೇಶಕ ಡಿ. ಸೇನ್ ಅವರಿಗೆ ಹೇಳಿ ಎಂದು ಆದೇಶಿಸಿದರು; ಅವರ ಮನೆಗಳ ಮೇಲೆ ದಾಳಿ ನಡೆಸುವಂತೆ ಕೂಡ ಸಿಬಿಐ ನಿರ್ದೇಶಕರಿಗೆ ಸೂಚಿಸಿದರು.
ಅನಂತರ ಇಂದಿರಾಗಾಂಧಿಯವರು ವಾಣಿಜ್ಯ ಮಂತ್ರಿ ಪಿ. ಚಟ್ಟೋಪಾಧ್ಯಾಯ ಅವರನ್ನು ಕರೆದು ಭಟ್ನಾಗರ್ ವಿರುದ್ಧ ಕೂಡಲೆ ತನಿಖೆ ಆರಂಭಿಸಲು ಹೇಳಿದರು; ಆತ ಕೆಲವರಿಗೆ ಕಿರುಕುಳ ನೀಡಿದ್ದಾರೆನ್ನುವ ಆರೋಪವನ್ನು ಕೂಡ ಮಾಡಿದರು. ಚಟ್ಟೋಪಾಧ್ಯಾಯ ಅವರು ಆ ಬಗ್ಗೆ ಮಾಡಿದ ಟಿಪ್ಪಣಿಯಲ್ಲಿ “ಭಟ್ನಾಗರ್ ಒಂದು ಸಂಸ್ಥೆಯ ಪ್ರತಿನಿಧಿಗಳನ್ನು ಕಾಯಿಸಿದರು; ಅವರು ಮಾಹಿತಿಯನ್ನು ಕೇಳಿ ಪಡೆದ ರೀತಿ ಒಬ್ಬ ಸಾರ್ವಜನಿಕ ಸೇವಕನಿಗೆ ಹೇಳಿಸಿದಂತಿರಲಿಲ್ಲ” ಎಂಬ ಅಂಶಗಳು ಸೇರ್ಪಡೆಯಾಗಿದ್ದವು. ಟಿಪ್ಪಣಿಯ ಪ್ರಕಾರ ಭಟ್ನಾಗರ್ ಅವರನ್ನು ತಕ್ಷಣ ಅಮಾನತುಗೊಳಿಸಲಾಯಿತು.
ಟಿ.ಎ. ಪೈ ಅವರು ಅದನ್ನು ಅಲ್ಲಿಗೇ ಬಿಡದೆ ತಮ್ಮ ಅಧಿಕಾರಿಗಳನ್ನು ಕರೆದು ಮಾತನಾಡಿದರು. ಅಧಿಕಾರಿಗಳ ವಿರುದ್ಧ ಮಾಡಿದ ಆರೋಪದಲ್ಲಿ ಹುರುಳಿಲ್ಲ ಎಂಬುದು ಅವರ ಗಮನಕ್ಕೆ ಬಂತು. ಅದೇರೀತಿ ಬಾಟ್ಲಿಬಾ ಆ್ಯಂಡ್ ಕಂಪೆನಿಯ ಮ್ಯಾನೇಜರ್ ಜೊತೆ ಕೂಡ ಮಾತನಾಡಿದರು. ಅಧಿಕಾರಿಗಳು ಬಾಟ್ಲಿಬಾ ನೌಕರರನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದು ಕೂಡ ಖಾತ್ರಿಯಾಯಿತು. ಸಚಿವ ಚಟ್ಟೋಪಾಧ್ಯಾಯರು ಈ ರೀತಿ ಮಾಡಲಿಲ್ಲ ಎಂಬುದು ಸ್ಪಷ್ಟ.
ಸಿಬಿಐ ತನಿಖೆ ಮುಂದುವರಿಯಿತು. ಆ ಅಧಿಕಾರಿಗಳಲ್ಲಿ ಮೂವರು ಭ್ರಷ್ಟರು; ತಮ್ಮ ಆದಾಯಕ್ಕಿಂತ ಜಾಸ್ತಿ ಆಸ್ತಿಯನ್ನು ಹೊಂದಿದ್ದಾರೆAದು ಅವರ ಮೇಲೆ, (ಕೃಷ್ಣಸ್ವಾಮಿ, ರಾಜನ್ ಮತ್ತು ಭಟ್ನಾಗರ್) ನಿಗಾ ಇಟ್ಟರು. ಅದರಲ್ಲಿ ಭಟ್ನಾಗರ್ ಮತ್ತು ರಾಜನ್ ವಿರುದ್ಧ ಪ್ರಕರಣ ದಾಖಲಿಸಿದರು; ಸಿಬಿಐ ಅವರ ಮನೆಗಳ ಶೋಧ ನಡೆಸಿತು. ಭಟ್ನಾಗರ್ ಅವರನ್ನು ಅಮಾನತು ಮಾಡಿದರೆ, ಕವಳೆ ಅವರನ್ನು ದೆಹಲಿಯಿಂದ ಚೆನ್ನೈಗೆ ವರ್ಗಾಯಿಸಿದರು. ಆದರೆ ಆತ ವರ್ಗಾವಣೆಗೆ ಒಪ್ಪಲಿಲ್ಲ. ಅವರ ವಿರುದ್ಧ ತನಿಖೆಗೆ ಆದೇಶ ನೀಡಿ ಅದನ್ನೇ ಕೇಸಾಗಿ ಪರಿವರ್ತಿಸಿದರು. ಕೇಸಿಗೆ ಬೇಕಾದ ವಿಷಯ ಸಿಗಲಿಲ್ಲ. ಭ್ರಷ್ಟಾಚಾರ ತಡೆ ಕಾಯ್ದೆಯಂತೆ ಅವರ ಮನೆಯ ಶೋಧ ನಡೆಸಿದರು. ಮುಂದುವರಿದು ಅವರ ರಾಜೀನಾಮೆಯನ್ನೇ ಕೇಳಿದರು. ಕೊಡದಿದ್ದರೆ ಕಿರುಕುಳ ಇನ್ನಷ್ಟು ಜಾಸ್ತಿಯಾದೀತೆಂದು ಕವಳೆ ಹುದ್ದೆಗೆ ರಾಜೀನಾಮೆ ನೀಡಿ ಹೊರಗೆ ಬಂದರು.
ಕೃಷ್ಣಸ್ವಾಮಿ ಅವರ ಮನೆಯನ್ನು ಶೋಧಿಸಿದರೂ ಕ್ರಮಕೈಗೊಳ್ಳಲು ಪುರಾವೆ ಸಿಗಲಿಲ್ಲ. ಸಿಬಿಐ ನಿರ್ದೇಶಕರು ತನಿಖೆಗೆ ಆದೇಶ ನೀಡಿದರು. ಆತ ನಾಲ್ಕು ತಿಂಗಳು ರಜೆಯ ಮೇಲೆ ಹೋದರು, ಮತ್ತೆ ಮನೆ ಶೋಧ ಮಾಡಿದಾಗ ಮಿತಿಗಿಂತ ಜಾಸ್ತಿ ಮದ್ಯ ಸಿಕ್ಕಿತೆಂದು ಅಬಕಾರಿ ಕೇಸ್ ಹಾಕಿದರು; ಕೋರ್ಟ್ ಅವರನ್ನು ದೋಷಮುಕ್ತಗೊಳಿಸಿತು. ಅನಂತರ ವಿದೇಶೀ ವಿನಿಮಯ ಕೇಸ್ನಂತೆ ಅವರ ಪತ್ನಿಗೆ ಕಿರುಕುಳ ನೀಡಿದರು. ಅವರ ತಂದೆಯ ಬ್ಯಾಂಕ್ ಲಾಕರ್ ಶೋಧ ಮಾಡಿದರು. ಏನೆಲ್ಲ ವಿಚಾರಣೆ ನಡೆಸಿದರೂ ಈ ಅಧಿಕಾರಿಗಳ ವಿಷಯದಲ್ಲಿ ಆದಾಯಕ್ಕಿಂತ ಅಧಿಕ ಸಂಪತ್ತಿನ ಕೇಸನ್ನೇ ಕೈಬಿಡಬೇಕಾಯಿತು.
ಆಯೋಗದ ಮುಂದೆ ಹೇಳಿಕೆ ನೀಡಿದ್ದ ಟಿ.ಎ. ಪೈ ಅವರು “ಪ್ರಧಾನಿ ನನ್ನ ಮುಂದೆ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ತೊಡಗಿದರು. ಅದು ನಿಜವಾಗಿರಲಿಲ್ಲ. ಆಕೆ ತುಂಬ ಸಿಟ್ಟಾಗಿದ್ದರು. ನಾನು ಉತ್ತರಿಸುವ ಮುನ್ನ ಧವನ್ರನ್ನು ಕರೆದು ಅಧಿಕಾರಿಗಳ ಮನೆಯ ಶೋಧಕ್ಕೆ ಸೂಚನೆ ನೀಡಿದರು” ಎಂದು ತಿಳಿಸಿದರು. ತುರ್ತುಪರಿಸ್ಥಿತಿಯ ವಿದ್ಯಮಾನಗಳಿಗೆ ಇದೊಂದು ಉತ್ತಮ ಉದಾಹರಣೆಯಾಗಿದ್ದು, ಹಲವು ಅಧಿಕಾರಿಗಳಿಗೂ ಇಂತಹ ಬಿಸಿ ತಾಗಿತು.