ಇವತ್ತು ಮಾತ್ರ ಬೆಳಗಿನಿಂದಲೇ ವಿಪರೀತ ಹಸಿವು. ವಿಸ್ತಾರವಾಗಿ ಚಾಚಿಕೊಂಡಿದ್ದ ನನ್ನ ಕೈಗಳಿಗೆ ತಿನ್ನಬಹುದಾದ ಯಾವ ಜೀವಿಯೂ ಸಿಗಲಿಲ್ಲ. ನನ್ನ ಕೈಗಳಿಗೆ ಸಿಗಬಾರದು ಎನ್ನುವ ಪ್ರಜ್ಞೆ ಪ್ರಾಣಿಗಳಿಗೆ ಬಂತೋ? ಅಲ್ಲ, ಎಲ್ಲವನ್ನೂ ತಿಂದು ಮುಗಿಸಿ ನಾನೇ ಬರಿದು ಮಾಡಿದೆನೊ? ಹಸಿವೆಯಾದಾಗ ತಿನ್ನಲು ಏನೂ ಸಿಗದ ಹೊತ್ತು, ತೆರೆದಿರುವ ದೊಡ್ಡ ಕಣ್ಣಿಗೆ ದೂರದಲ್ಲಿ ಸಂಚರಿಸುವ ಮೃಗಗಳು ಕಾಣುತ್ತಿವೆ. ಆದರೆ ಕೈಯ ಅಳವಿಗೆ ಬಾರದೆ ದೂರವೇ ಇವೆ. ತಾಳ್ಮೆಯಿಂದ ಕಾಯುತ್ತ ಇದ್ದೆ. ಅಷ್ಟರಲ್ಲಿ, ಅದೇನಾಶ್ಚರ್ಯ! ಯಾರೋ ಇಬ್ಬರು ಪುಷ್ಟ ದೇಹದ ತರುಣರು ನನಗೆ ಅಭಿಮುಖವಾಗಿ ಕಾಣಿಸಿಕೊಂಡರು.
ದಟ್ಟವಾದ ಅರಣ್ಯ ಪ್ರದೇಶ.
ನಾನೊಬ್ಬನೇ ಇಲ್ಲಿ ಬಿದ್ದುಕೊಂಡಿದ್ದೇನೆ.
ಕಾಲುಗಳಿಲ್ಲದೆ, ದೊಡ್ಡದಾದ ಹೊಟ್ಟೆ ಮಾತ್ರ ಉಳ್ಳ ನಾನು ಎಲ್ಲಿಗೂ ಹೋಗಲಾರೆ. ಒಂದೇ ಕಣ್ಣು. ಅದೂ ಹೊಟ್ಟೆಯ ಮಧ್ಯೆ. ಕೈಗಳನ್ನು ಮಾತ್ರ ಅಷ್ಟು ಉದ್ದಕ್ಕೆ ಚಾಚಬಲ್ಲೆ. ಬಹು ಬಲಿಷ್ಠವಾದ ಕೈಗಳು. ಕಬಂಧ ಎಂದು ನನ್ನ ಹೆಸರು. ನನಗೆ ತಲೆ ಇಲ್ಲ. ಕಬಂಧ ಅಂದರೆ ತಲೆಯಿಲ್ಲದವ ಅಂತಲೇ ಅರ್ಥ. ತಲೆಯಿಲ್ಲದೆ ಕೇವಲ ಸದಾ ಹಸಿಯುವ ಹೊಟ್ಟೆಯಿದ್ದವನ ಸ್ಥಿತಿ ಹೇಗಿದ್ದೀತು? ನನ್ನ ಹಾಗೆಯೆ ಇದ್ದೀತು. ಹೊಟ್ಟೆ ತುಂಬಿಸುವ ಚಿಂತೆ ಮಾತ್ರ. ಅದಕ್ಕೆ ಬೇಕಾದುದನ್ನು ಸಂಪಾದಿಸುವ ಬುದ್ಧಿಯಿಲ್ಲ. ಸದ್ಯ ಹೊಟ್ಟೆ ತುಂಬುವುದಕ್ಕೆ ಬೇಕಾದಷ್ಟು ಆಹಾರ ಅಂದರೆ ಪ್ರಾಣಿಗಳು ನಾನಿರುವ ಪ್ರದೇಶದಲ್ಲಿ ಯಥೇಚ್ಛಿತವಾಗಿ ಸಂಚರಿಸುವ ಕಾರಣ ಅವುಗಳನ್ನು ಹಿಡಿದು ತಿಂದು ಹಸಿವನ್ನು ನೀಗಿಕೊಳ್ಳುತ್ತೇನೆ.
ಇಲ್ಲಿಯೇ ಮಲಗುತ್ತೇನೆ. ನಿದ್ರಿಸುತ್ತೇನೆ. ಎಚ್ಚರವಾಗುವಾಗ ಹಸಿವಾಗುತ್ತದೆ. ಕೈಗಳನ್ನು ವಿಸ್ತಾರಕ್ಕೆ ಚಾಚಿ ಸಿಕ್ಕಿದ ಪ್ರಾಣಿಗಳನ್ನು ಸೆಳೆದು ನುಂಗುತ್ತೇನೆ. ಮತ್ತೆ ಮಲಗುತ್ತೇನೆ. ಸ್ನಾನ ಇತ್ಯಾದಿ ಏನೂ ಇಲ್ಲ. ವಿಸರ್ಜನೆಯೂ ಇಲ್ಲಿಯೇ. ಚಲಿಸಲಾರದ ನಾನು ಅದರ ಅಸಹ್ಯವನ್ನು ಸಹಿಸಿಕೊಳ್ಳುವುದು ಅನಿವಾರ್ಯ. ಅಂತೂ ದಿನಗಳು ಉರುಳುತ್ತಿವೆ.
ನಾನಿರುವ ಈ ಪ್ರದೇಶ ಕ್ರೌಂಚಾರಣ್ಯ ಮತ್ತು ಮತಂಗಾಶ್ರಮಗಳ ನಡುವೆ ಇದೆ. ದಟ್ಟವಾಗಿ, ಹಗಲು ಕತ್ತಲೆಗಳ ವ್ಯತ್ಯಾಸವೇ ಗೋಚರಿಸದಂತೆ ಬೆಳೆದು ಹಬ್ಬಿದ ವನರಾಜಿ. ಇದರಿಂದಾಗಿ ನಾನು ಇಲ್ಲಿದ್ದೇನೆ ಎನ್ನುವುದು ಅನ್ಯಜೀವಿಗಳಿಗೆ ಫಕ್ಕನೆ ತಿಳಿಯುವುದಿಲ್ಲ. ಅರಿವಿಲ್ಲದೆ ಬಂದವುಗಳು, ಮನುಷ್ಯನೊ ಮೃಗವೊ ಅದು ನನ್ನ ಹೊಟ್ಟೆಗೆ. ಎಷ್ಟು ದಿನಗಳಿಂದ ಹೀಗಿದ್ದೇನೊ ನನಗೆ ಗೊತ್ತಿಲ್ಲ. ಇನ್ನೆಷ್ಟು ಕಾಲ ಹೀಗಿರುತ್ತೇನೊ ಅದೂ ಗೊತ್ತಿಲ್ಲ. ಗೊತ್ತಿದ್ದವರಲ್ಲಿ ಕೇಳೋಣ ಅಂದರೆ ಅಂತಹವರು ಇನ್ನೂ ಸಿಕ್ಕಿಲ್ಲ ಅಥವಾ ಅಂತಹವರನ್ನೂ ನಾನೇ ತಿಂದು ಮುಗಿಸಿದ್ದೇನೊ ಏನೋ. ಹಿಂದೆ ಏನಾಗಿದೆ ಎಂಬ ಅರಿವು ಇಲ್ಲದ, ಮುಂದೇನಾಗಲಿದೆ ಎಂಬ ಗ್ರಹಿಕೆ ಇಲ್ಲದ ವರ್ತಮಾನ ಮಾತ್ರ ನನ್ನ ಪಾಲಿಗೆ. ಇದು ನನ್ನ ಬದುಕು.
ಇವತ್ತು ಮಾತ್ರ ಬೆಳಗಿನಿಂದಲೇ ವಿಪರೀತ ಹಸಿವು. ವಿಸ್ತಾರವಾಗಿ ಚಾಚಿಕೊಂಡಿದ್ದ ನನ್ನ ಕೈಗಳಿಗೆ ತಿನ್ನಬಹುದಾದ ಯಾವ ಜೀವಿಯೂ ಸಿಗಲಿಲ್ಲ. ನನ್ನ ಕೈಗಳಿಗೆ ಸಿಗಬಾರದು ಎನ್ನುವ ಪ್ರಜ್ಞೆ ಪ್ರಾಣಿಗಳಿಗೆ ಬಂತೋ? ಅಲ್ಲ, ಎಲ್ಲವನ್ನೂ ತಿಂದು ಮುಗಿಸಿ ನಾನೇ ಬರಿದು ಮಾಡಿದೆನೊ? ಹಸಿವೆಯಾದಾಗ ತಿನ್ನಲು ಏನೂ ಸಿಗದ ಹೊತ್ತು, ತೆರೆದಿರುವ ದೊಡ್ಡ ಕಣ್ಣಿಗೆ ದೂರದಲ್ಲಿ ಸಂಚರಿಸುವ ಮೃಗಗಳು ಕಾಣುತ್ತಿವೆ. ಆದರೆ ಕೈಯ ಅಳವಿಗೆ ಬಾರದೆ ದೂರವೇ ಇವೆ. ತಾಳ್ಮೆಯಿಂದ ಕಾಯುತ್ತ ಇದ್ದೆ. ಅಷ್ಟರಲ್ಲಿ, ಅದೇನಾಶ್ಚರ್ಯ! ಯಾರೋ ಇಬ್ಬರು ಪುಷ್ಟ ದೇಹದ ತರುಣರು ನನಗೆ ಅಭಿಮುಖವಾಗಿ ಕಾಣಿಸಿಕೊಂಡರು. ಅವರ ಕೈಗಳಲ್ಲಿ ಹರಿತವಾದ ಖಡ್ಗಗಳು. ಹೆಗಲಿನಲ್ಲಿ ಧನುಸ್ಸುಗಳು. ಬತ್ತಳಿಕೆಯ ತುಂಬ ಬಾಣಗಳು. ಇರಲಿ, ಆಯುಧಗಳಿಂದ ನನಗೇನು ಮಾಡಿಯಾರು? ಹತ್ತಿರವಾಗುತ್ತಿರುವ ಅವರನ್ನು ಆಸೆಯಿಂದ ನೋಡುತ್ತಿದ್ದೆ. ಕೈ ಅಳವಿಗೆ ಬಂದಾಗ ಹಿಡಿದು ತಿನ್ನುತ್ತೇನೆ ಎಂದು ಕಾದು ಕುಳಿತೆ.
ಅವರಿಗೆ ಅಪಾಯದ ಅರಿವು ಇದ್ದಂತಿಲ್ಲ. ಏನನ್ನೋ ಹುಡುಕುತ್ತ ಸಮೀಪ ಬಂದರು. ಆಹಾ! ನನ್ನ ಭದ್ರವಾದ ಮುಷ್ಟಿಗಳಿಗೆ ಸಿಕ್ಕಿಬಿಟ್ಟರು. ಒಂದೊಂದು ಮುಷ್ಟಿಗೆ ಒಬ್ಬೊಬ್ಬರು. ಬಿಡಿಸಿಕೊಳ್ಳುವ ಯತ್ನದಲ್ಲಿದ್ದ ಅವರಿಬ್ಬರನ್ನೂ ಬಾಯಿಯ ಹತ್ತಿರ ತಂದೆ. ಇನ್ನೇನು ನುಂಗಬೇಕು ಎನ್ನುವಷ್ಟರಲ್ಲಿ ಒಂದು ಕುತೂಹಲ ಮೂಡಿತು. ಕುತೂಹಲಕ್ಕೆ ಕಾರಣ ಇಷ್ಟೆ. ಸಾಮಾನ್ಯವಾಗಿ ಯಾವ ಪ್ರಾಣಿಯಾದರೂ ನನ್ನ ಸಿಡಿಲಿನಂತಹ ಗರ್ಜನೆಗೆ, ಭಯಾನಕವಾದ ಸ್ವರೂಪಕ್ಕೆ ಅಂಜಿ ಅರ್ಧಪ್ರಾಣವನ್ನು ಕಳೆದುಕೊಳ್ಳುತ್ತಿತ್ತು. ಆದರೆ ಇವರು ಅಂಜಿದಂತೆ ಕಾಣುತ್ತಿರಲಿಲ್ಲ. ಪರಸ್ಪರ ಸಮಾಲೋಚನೆ ನಡೆಸಿದಂತೆ ಅವರ ವರ್ತನೆ. ಹಾಗಾಗಿ ಕುತೂಹಲ ತಡೆಯಲಾರದೆ ಕೇಳಿದೆ, “ಅಯ್ಯಾ, ನೀವು ಯಾರು?”
ಅವರಲ್ಲಿ ಕಿರಿಯವನಂತೆ ಕಾಣುತ್ತಿದ್ದವ ಉತ್ತರಿಸಿದ. “ನಾವು ಅಯೋಧ್ಯೆಯ ಅರಸ ದಶರಥನ ಮಕ್ಕಳು. ಇವನು ಹಿರಿಯನಾದ ರಾಮ. ನಾನು ಅವನ ತಮ್ಮ ಲಕ್ಷ್ಮಣ.”
ರಾಮ! ಆ ಹೆಸರನ್ನು ನಾನು ಮೊದಲೆಲ್ಲೋ ಕೇಳಿದಂತೆ ಭಾಸವಾಯಿತು. ಚಕಿತನಾದರೂ ಹಸಿವಿನ ತೀವ್ರತೆಯನ್ನು ಸಹಿಸಲಾಗದೆ ಬಾಯಿಗೆ ತುಂಬಿಕೊಳ್ಳಲು ಮುಂದಾದೆ. ಅವರಿಬ್ಬರೂ ಏಕಕಾಲಕ್ಕೆ ತಮ್ಮ ಹರಿತವಾದ ಖಡ್ಗಗಳಿಂದ ನನ್ನ ಎರಡೂ ಕೈಗಳನ್ನು ಕತ್ತರಿಸಿಬಿಟ್ಟರು. ನೆತ್ತರು ಪ್ರವಾಹವಾಗಿ ಹರಿಯಿತು. ಆ ಹೊತ್ತಿಗೂ ನನಗೆ ನೋವಿನ ಅನುಭವವಾಗಲಿಲ್ಲ. ಅಷ್ಟೇ ಅಲ್ಲ, ತುಂಡಾಗಿ ಬಿದ್ದ ನನ್ನದೇ ಕೈಗಳನ್ನು ನೋಡುತ್ತಿದ್ದಂತೆ ಹೊಸ ಅರಿವಿನ ಮಿಂಚು ಮೈಮನಗಳಲ್ಲಿ ಸಂಚರಿಸಿತು. ರಾಮ ಎಂಬ ಹೆಸರು ಕೇಳಿದ್ದೆಲ್ಲಿ ಎನ್ನುವುದೂ ಸ್ಮರಣೆಗೆ ಬಂತು. ವಿಸ್ಮೃತಿಗೆ ಸಂದಿದ್ದ ಗತಜೀವನದ ಚಿತ್ರ ಮನಃಪಟಲದಲ್ಲಿ ಸ್ಫುಟವಾಗಿ ಮೂಡಿ.
* * *
ನಾನು ದನು ಎಂಬವನ ಮಗ. ನನ್ನ ಹೆಸರು ವಿಶ್ವಾವಸು. ಗಂಧರ್ವ ವರ್ಗಕ್ಕೆ ಸೇರಿದವನು. ಅತ್ಯಂತ ಸುಂದರ ಪುರುಷನಾಗಿದ್ದೆ. ಸೌಂದರ್ಯವು ಅಹಂಕಾರಕ್ಕೆ ಕಾರಣವಾಗುವುದಷ್ಟೆ? ನನಗೂ ಹಾಗೆಯೆ ಆಗಿರಬೇಕು. ಅದರ ಜೊತೆಗೆ ಬ್ರಹ್ಮದೇವನಿಂದ ಒಂದು ವಿಶೇಷ ವರವನ್ನೂ ಪಡೆದಿದ್ದೆ. ಉದಾರವಾಗಿ ಸಿಕ್ಕಿದ್ದಲ್ಲ. ತಪಸ್ಸು ಮಾಡಿ ಬ್ರಹ್ಮದೇವನನ್ನು ಸಾಕ್ಷಾತ್ಕರಿಸಿಕೊಂಡು ಪಡೆದ ವರವದು.
ಸೌಂದರ್ಯ ಇದ್ದರೆ ಸಾಲದಲ್ಲ, ಅದು ಶಾಶ್ವತವೂ ಆಗಿರಬೇಕು. ಆದುದರಿಂದ ಬ್ರಹ್ಮನಲ್ಲಿ ಬೇಡಿ, ಸುದೀರ್ಘವಾದ ಆಯುಸ್ಸನ್ನು ವರವಾಗಿ ಹೊಂದಿದೆ. ಸಾಮಾನ್ಯವಾಗಿ ಜೀವ ಇರುವವರಿಗೆಲ್ಲ ಮರಣದ ಭಯ ಇರುತ್ತದೆ. ಆದರೆ ಈ ವರದಿಂದ ಅಂತಹ ಭಯವನ್ನು ನಾನು ಮೀರಿ ನಿಂತೆ. ಭಯವೇ ಇಲ್ಲದ ಮೇಲೆ, ಜೊತೆಗೆ ಅಹಂಕಾರವೂ ತುಂಬಿಕೊಂಡರೆ ಮತ್ತೇನಾಗಬೇಕು? ಭಯವಿಲ್ಲದವನು ಉಳಿದವರನ್ನು ಹೆದರಿಸುವುದನ್ನೇ ಅಭ್ಯಾಸ ಮಾಡಿಕೊಳ್ಳುತ್ತಾನೆ.
ನಾನೂ ಅದನ್ನೇ ಮಾಡಿದೆ ಅಥವಾ ನಿತ್ಯವೂ ಮಾಡುತ್ತಿದ್ದೆ ಎಂದರೂ ಸರಿ. ನನ್ನನ್ನು ಇರುವಂತೆಯೆ ನೋಡಿದರೆ ಯಾರಿಗೂ ಅಂಜಿಕೆ ಬಾರದು. ಅಂತಹ ಚೆಲುವು ನನ್ನದು. ನನ್ನನ್ನು ಕಂಡವರು ಸ್ತ್ರೀಯರಾದರೆ ಮೋಹ ಹುಟ್ಟೀತು. ಪುರುಷರಿಗೆ ಮೋಹ ಬಾರದಿದ್ದರೂ ಭಯವಂತೂ ಆಗಲಾರದು. ಅದಕ್ಕಾಗಿ ನಾನು ಉಪಾಯ ಮಾಡಿದೆ. ಬೇಕಾದಂತೆ ರೂಪಧಾರಣೆ ಮಾಡುವ ಶಕ್ತಿ ನಮ್ಮಂತಹ ದಿವ್ಯ ಪುರುಷರಿಗೆ ಸಿದ್ಧಿಯಾಗಿರುತ್ತದೆ. ಅದನ್ನು ಬಳಸಿಕೊಂಡು ವಿಕಾರವಾದ ಕೋರೆದಾಡೆ, ಉದ್ದವಾದ ನೆಟ್ಟಗೆ ನಿಂತ ಕೂದಲುಗಳು, ನೀಳವಾದ ಉಗುರುಗಳು, ಕೆಂಪಾದ ಕಣ್ಣುಗಳು, ಬೃಹದಾಕಾರದ ದೇಹ – ಹೀಗೆ ಮಾರ್ಪಡಿಸಿಕೊಂಡು ಕಾಡಿನಲ್ಲಿ ಸಂಚರಿಸುತ್ತಿದ್ದೆ. ಒಂದು ಬಗೆಯಲ್ಲಿ ಕ್ರೂರವಾಗಿ ರಾಕ್ಷಸರ ಹಾಗೆ ಕಾಣುತ್ತಿದ್ದೆ. ನನ್ನನ್ನು ಕಂಡೊಡನೆ ಎಲ್ಲರೂ ಭಯಗ್ರಸ್ತರಾಗುತ್ತಿದ್ದರು. ಹೆದರಿ ಓಡುತ್ತಿದ್ದ ಅವರನ್ನು ಕಂಡು ನಾನು ಕೇಕೆ ಹಾಕಿ ನಗುತ್ತಿದ್ದೆ. ನನ್ನ ವಿಕಾರವಾದ ನಗೆ ಕಂಡು ಅವರು ಮತ್ತೂ ಭೀತರಾಗುತ್ತಿದ್ದರು. ಇದೊಂದು ಮನೋರಂಜಕವಾದ ಕ್ರೀಡೆಯಾಯಿತು ನನ್ನ ಪಾಲಿಗೆ. ನಿತ್ಯವೂ ಇದನ್ನೇ ಮಾಡುತ್ತ ಆನಂದಿಸುತ್ತಿದ್ದೆ.
ಕಾಲ ಒಂದೇ ರೀತಿ ಇರುವುದಿಲ್ಲವಷ್ಟೆ? ಅಥವಾ ವಿಧಿ ಇನ್ನೇನೋ ಸಂಚು ಹೂಡುತ್ತ ಇರುತ್ತದೆ. ನನ್ನಂತಹವರಿಗೆ ಅದೆಲ್ಲಿ ಅರಿವಿಗೆ ಬಂದೀತು? ವಿವೇಚನೆಯನ್ನು ಕಳೆದುಕೊಂಡು ಹುಂಬನಂತೆ ನನ್ನ ದುರ್ವರ್ತನೆಯನ್ನು ಮುಂದುವರಿಸುತ್ತಿದ್ದೆ. ಹೀಗಾಗಿ ಮುಂದೆ ಏನೋ ವಿಪತ್ತು ಬರಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಆಯುಸ್ಸು, ಸೌಂದರ್ಯ, ಸಂಪತ್ತು, ಅಧಿಕಾರ, ಬಲ – ಇವೆಲ್ಲ ವ್ಯಕ್ತಿಯ ಕಣ್ಣನ್ನು ಕಟ್ಟಿಬಿಡುತ್ತವೆ. ಇದೇ ಶಾಶ್ವತ ಎಂಬ ಭ್ರಮೆಯನ್ನು ಉಂಟುಮಾಡಿ, ಪತನದತ್ತ ದೂಡುತ್ತವೆ. ಹತ್ತಿರದಲ್ಲಿ ವಿವೇಕಿಗಳಾದ ಹಿತೈಷಿಗಳು ಇದ್ದರೆ ಅವರಾದರೂ ಎಚ್ಚರಿಸಿಯಾರು. ದುರ್ದೈವವಶಾತ್ ನಾನು ಒಂಟಿಯಾಗಿದ್ದೆ. ಎಚ್ಚರಿಸುವ ಪ್ರಾಜ್ಞರು ನನ್ನ ಜೊತೆಗೆ ಇರಲಿಲ್ಲ. ಇದ್ದರೂ ಅವರ ಮಾತಿಗೆ ಕಿವಿಗೊಡುವ ವ್ಯವಧಾನ ನನ್ನಲ್ಲಿ ಇರಲಿಲ್ಲ.
ಇದೇ ಹುಂಬತನದಿಂದ, ತಪಸ್ಸಿಗೆ ಕುಳಿತಿದ್ದ ಸ್ಥೂಲಶಿರ ಎಂಬ ಋಷಿಯನ್ನು ಹೆದರಿಸುವ ಪ್ರಯತ್ನ ಮಾಡಿದೆ. ನನ್ನ ಗರ್ಜನೆಯನ್ನು ಕೇಳಿ ಭೀಕರಾಕೃತಿಯನ್ನು ಕಂಡು ತಪಸ್ಸನ್ನು ಬಿಟ್ಟು ಓಡಿ ಹೋಗುತ್ತಾನೆ ಎಂದು ಭಾವಿಸಿದ್ದೆ. ಮಹಾತಪಸ್ವಿಯಾದ ಸ್ಥೂಲಶಿರನನ್ನು ಸಾಮಾನ್ಯರಂತೆ ಎಂದು ನಾನು ಭಾವಿಸಿದೆ. ಆದರೆ ಹಾಗಾಗಲಿಲ್ಲ. ಅವನು ಒಂದು ಕ್ಷಣ ಬೆಚ್ಚಿಬಿದ್ದಿರಬಹುದು. ಆದರೆ ಅಂಜಲಿಲ್ಲ. ಅವನಿಗೆ ನಾನು ರೂಪಾಂತರ ಹೊಂದಿದ ಗಂಧರ್ವ ಎಂಬುದು ತಿಳಿಯಿತು. ಅವನ ಮುಖದಲ್ಲಿ ಕೋಪಾಗ್ನಿ ಪ್ರಜ್ವಲಿಸಿತು. ರಾಕ್ಷಸನೇ ಆಗಿದ್ದರೆ ಬಹುಶಃ ಅಷ್ಟು ಕ್ರೋಧ ಉಂಟಾಗುತ್ತಿರಲಿಲ್ಲವೊ ಏನೋ. ದುಷ್ಟರ ದುಷ್ಟತನಕ್ಕೆ ಒಂದಿಷ್ಟು ಕ್ಷಮೆಯುಂಟು. ಅದು ಸರಿ ಎಂದಲ್ಲ, ಸ್ವಭಾವ ಎಂದು. ಆದರೆ ಗಂಧರ್ವನಾದ ನಾನು ರಾಕ್ಷಸನ ರೂಪ ತಾಳಿದ್ದು ಮಾತ್ರವಲ್ಲ, ನನ್ನ ವರ್ತನೆಯೂ ಹಾಗೆಯೇ ಎಂದು ಅವನಿಗೆ ತೋರಿರಬೇಕು.
“ಎಲಾ ದುಷ್ಟ, ವಿನಾಕಾರಣ ನನ್ನ ತಪಸ್ಸಿಗೆ ಭಂಗತಂದೆಯಲ್ಲ. ಅದೂ ಅಲ್ಲದೆ ಸಾತ್ತ್ವಿಕರನ್ನು ಹೆದರಿಸಿ ಆನಂದವನ್ನು ಪಡೆಯುವೆಯಲ್ಲ. ನಿನ್ನ ಸ್ವಭಾವಕ್ಕೆ ತಕ್ಕ ರೂಪವನ್ನೇ ಧರಿಸಿದ್ದೀಯೆ. ಇರಲಿ. ಇದೇ ರೂಪ ನಿನಗೆ ಶಾಶ್ವತವಾಗಲಿ. ರಾಕ್ಷಸನೇ ಆಗಿಹೋಗು” ಎಂದು ಶಪಿಸಿಬಿಟ್ಟ. ಆ ಕ್ಷಣ ನನ್ನಲ್ಲಿ ಒಂದು ಪಶ್ಚಾತ್ತಾಪದ ಭಾವ ಹುಟ್ಟಿತು. ಹೀಗೆ ಮಾಡಬಾರದಿತ್ತು ಅನಿಸಿತು. ಅದರ ಜೊತೆಗೆ ಇಷ್ಟು ಸಣ್ಣ ಅಪರಾಧಕ್ಕೆ ಅಷ್ಟು ಘೋರವಾದ ಶಾಪವೆ ಎಂದೂ ತೋರಿತು. ನಾನು ಹೆದರಿಸಿದ್ದು ಮಾತ್ರ. ಏನು ಅವನನ್ನು ಹೊಡೆದೆನೆ? ಕೊಲ್ಲುವುದಕ್ಕೆ ನೋಡಿದೆನೆ? ಇಲ್ಲವಲ್ಲ. ಶಾಪದಿಂದ ಪಾರಾಗುವುದಕ್ಕಾಗಿ ಅವನ ಕಾಲಿಗೆ ಬಿದ್ದು ಪ್ರಾರ್ಥಿಸಿದೆ.
“ಹೂಂ. ಈಗ ಪಶ್ಚಾತ್ತಾಪಪಟ್ಟು ಏನು ಪ್ರಯೋಜನ? ಮೊದಲೇ ವಿವೇಚನೆ ಇರಬೇಕಿತ್ತು. ಮುಂದೆ ಬಹುಕಾಲದ ಬಳಿಕ ರಾಮನಿಂದ ಈ ಶಾಪಮುಕ್ತಿಯಾಗಿ ನಿನಗೆ ಪೂರ್ವರೂಪ ಪ್ರಾಪ್ತಿಸಲಿ” ಎಂದು ಅನುಗ್ರಹಿಸಿದ. ಅಷ್ಟಾದರೂ ಕರುಣೆದೋರಿದನಲ್ಲ ಎಂಬ ಸಮಾಧಾನದಿಂದ ಭೀಕರವಾದ ರಾಕ್ಷಸ ರೂಪವನ್ನು ಹೊತ್ತು ಅಲ್ಲಿಂದ ಹೊರಟೆ. ನನ್ನನ್ನು ಈ ಸ್ಥಿತಿಯಿಂದ ಪಾರು ಮಾಡುವ ಆ ರಾಮ ಎಂದರೆ ಯಾರೋ, ಎಲ್ಲಿದ್ದಾನೋ?
ನನ್ನ ದುರ್ದೈವ ಅಲ್ಲಿಗೂ ನನ್ನ ಬೆನ್ನು ಬಿಡಲಿಲ್ಲ. ಸ್ಥೂಲಶಿರನ ಶಾಪದಿಂದ ನಾನು ರಾಕ್ಷಸನಾದೆನಷ್ಟೆ ಅಥವಾ ರಾಕ್ಷಸನ ರೂಪ ನನಗೆ ಶಾಶ್ವತವಾಯಿತಷ್ಟೆ. ಇದೀಗ ನನ್ನ ಬುದ್ಧಿಯು ರಾಕ್ಷಸನದ್ದೇ ಆಗಿರಬೇಕು. ಹಾಗಾಗಿ ಗಂಧರ್ವನಾಗಿದ್ದ ನಾನು ಈಗ ಪೂರ್ಣ ರಾಕ್ಷಸನೇ ಆದೆ. ಮೊದಲು ರೂಪ ಮಾತ್ರ ರಾಕ್ಷಸನದು. ಈಗ ಬುದ್ಧಿಯೂ ಅದೇ ಆಯಿತು. ಈ ಕಾರಣದಿಂದ ನನ್ನ ಪೂರ್ವ ಜೀವನ ನನಗೆ ಮರೆತುಹೋಯಿತು. ಆದುದರಿಂದ ನಾನು ನನ್ನ ಲೋಕಕ್ಕೂ ಹಿಂದಿರುಗಲಿಲ್ಲ. ಕಾಡಿನಲ್ಲಿ ಸುತ್ತಾಡುತ್ತ, ಉಳಿದವರನ್ನು ಹೆದರಿಸುತ್ತ, ಪ್ರಾಣಿಗಳನ್ನು ಹಿಡಿದು ತಿನ್ನುತ್ತ ಇದ್ದೆ. ಕೆಲವು ದಿನಗಳಲ್ಲಿ ಈ ಕೆಲಸವೂ ಬೇಸರ ಹುಟ್ಟಿಸಿತು. ರಾಕ್ಷಸ ಸ್ವಭಾವವಲ್ಲವೆ? ಬೇರೆಯವರ ಸಂಪತ್ತು, ಅಧಿಕಾರ ಇವುಗಳನ್ನು ಕಸಿದುಕೊಳ್ಳಬೇಕು ಎಂದು ತೋರಿತು. ಅದು ಸಿಕ್ಕಿದರೆ ದುಡಿಯದೆ ಕುಳಿತಲ್ಲೇ ಉಣ್ಣಬಹುದಲ್ಲ? ಆಗ ನನಗೆ ಕಂಡದ್ದು ಸ್ವರ್ಗಲೋಕ. ಅಲ್ಲಿದ್ದವರೆಲ್ಲ ಸುಖವಾಗಿದ್ದಾರೆ. ನಿರಂತರವಾಗಿ ದುಡಿಮೆ ಇಲ್ಲದ, ಬೆವರು ಸುರಿಸದ ಭೋಗಜೀವನ ಅವರದು. ನಾನು ಅದನ್ನು ಹೊಂದಬಯಸಿದೆ. ಹೇಗೂ ದೇಹ ಬಲವಿತ್ತು. ಅದರೊಂದಿಗೆ ಮಹತ್ತ್ವಾಕಾಂಕ್ಷೆಯೂ ಸೇರಿಕೊಂಡು ದೇವಲೋಕದತ್ತ ನನ್ನ ಕಣ್ಣು ತಿರುಗಿತು. ಸ್ವರ್ಗವನ್ನು ಆಳುತ್ತಿರುವ ಇಂದ್ರನನ್ನು ಸೋಲಿಸಿದರೆ ಆಗ ನಿರಂತರವಾದ ಸುಖಜೀವನ ನನ್ನದಾಗುತ್ತದೆ ಎಂದು ತೋರಿತು. ಅದಕ್ಕಾಗಿ ದೇವೇಂದ್ರನನ್ನೇ ಹುಡುಕುವ ಪ್ರಯತ್ನಕ್ಕೆ ಮುಂದಾದೆ.
ಇಂದ್ರನನ್ನು ಸೋಲಿಸುವ ನನ್ನ ಉದ್ದೇಶ ವಿಫಲವಾಯಿತು. ಅವನು ನನಗಿಂತ ಎಷ್ಟೋ ಪಟ್ಟು ಹೆಚ್ಚು ಶಕ್ತಿವಂತನಾಗಿದ್ದ. ಅವನ ವಜ್ರಾಯುಧದ ಹೊಡೆತಕ್ಕೆ ನಾನು ಕಂಗೆಟ್ಟು ಕುಸಿದುಬಿದ್ದೆ. ಅವನು ಅಲ್ಲಿಗೇ ಬಿಡಲಿಲ್ಲ. ನನ್ನ ತಲೆ ಹಾಗೂ ಕೊರಳನ್ನು ಒತ್ತಿ ಎದೆಯೊಳಗೆ ತುರುಕಿದ. ಕಾಲುಗಳನ್ನು ಹೊಟ್ಟೆಯೊಳಗೆ ತಳ್ಳಿದ. ನನ್ನ ದೇಹ ಒಂದು ಗೋಲದಂತಾಗಿ ವಿಕಾರವಾಯಿತು. ಆದರೂ ವರಬಲದಿಂದಾಗಿ ನಾನು ಸಾಯಲಿಲ್ಲ. ಆದರೆ ಬದುಕುವುದು ಹೇಗೆ? ಅವನಲ್ಲಿ ದೀನನಾಗಿ ಯಾಚಿಸುವುದಲ್ಲದೆ ಬೇರೆ ದಾರಿ ಕಾಣಲಿಲ್ಲ. ಕೊನೆಗೆ ಇಂದ್ರ, ನನ್ನ ಹೊಟ್ಟೆಯ ಭಾಗದಲ್ಲಿ ಒಂದು ಕಣ್ಣನ್ನೂ, ದೊಡ್ಡ ಬಾಯಿಯನ್ನೂ ಕಲ್ಪಿಸಿದ. ಆಹಾರ ಸಂಪಾದನೆಗಾಗಿ ಎರಡು ಕೈಗಳನ್ನೂ ದೀರ್ಘವಾಗಿಸಿದ. “ಹೀಗೇ ಬಿದ್ದಿರು. ರಾಮ ಬಂದು ನಿನ್ನ ಕೈಗಳನ್ನು ಕತ್ತರಿಸಿದಾಗ ಬಿಡುಗಡೆಯಾಗುತ್ತದೆ” ಎಂದು ಹೊರಟುಹೋದ. ಅಲ್ಲಿಂದ ಇಲ್ಲಿಯತನಕ ನಾನು ತಿಳಿಯದೆ ಇದ್ದ ಆ ರಾಮನನ್ನು ಕಾಯುವುದೇ ನನ್ನ ಲಕ್ಷ್ಯವಾಗಿತ್ತು. ಇದೆಲ್ಲ ಪ್ರಜ್ಞೆಯಲ್ಲಿ ಜಾಗೃತವಿತ್ತು ಎನ್ನಲಾರೆ. ಆದರೂ ಏನೋ ಒಂದು ಸಂಭವಿಸಲಿದೆ ಎಂಬ ಪರೋಕ್ಷ ಗ್ರಹಿಕೆಯಿದ್ದಿರಬಹುದು.
* * *
ರಾಮಲಕ್ಷ್ಮಣರು ನನ್ನ ಕೈಗಳನ್ನು ಕತ್ತರಿಸಿದಾಗ ಇದೆಲ್ಲ ನೆನಪಿಗೆ ಬಂತು. “ಅಯ್ಯಾ, ಮೊದಲು ನನ್ನ ಈ ವಿಕಾರ ಶರೀರವನ್ನು ಸುಟ್ಟುಬಿಡಿ. ಆಗ ಮುನಿಶಾಪ ನಿವಾರಣೆಯಾಗಿ ನನ್ನ ಹಿಂದಿನ ದಿವ್ಯಾಕೃತಿ ಲಭಿಸುತ್ತದೆ. ಆಗ ನಿಮಗೆ ಉಪಕೃತಿಯನ್ನು ಮಾಡುತ್ತೇನೆ” ಎಂದು ಬೇಡಿದೆ. ಅವರು ಅಂತೆಯೆ ಮಾಡಿದರು. ದೊಡ್ಡ ಕಂದಕವೊಂದರೊಳಗೆ ನನ್ನ ಬೃಹತ್ ಕಾಯವನ್ನು ತಳ್ಳಿ, ಒಣಗಿದ ಮರದ ಕೊಂಬೆಗಳನ್ನು ಒಟ್ಟಿ, ಸುಟ್ಟುಹಾಕಿದರು. ಪೂರ್ವಾಕಾರವನ್ನು ಪಡೆದ ನಾನು ಆ ಬೆಂಕಿಯಿಂದ ಎದ್ದು ಬಂದೆ ಅಥವಾ ಮತ್ತೊಮ್ಮೆ ಹುಟ್ಟಿದೆ ಎಂದರೂ ಸರಿ. ಈಗ ನನ್ನೆಲ್ಲ ಸಂಕಟಗಳೂ ಕಳೆದು, ಹಿಂದಿನ ಅಹಂಕಾರವೂ ನಶಿಸಿ ವಿನಯಪರನಾಗಿದ್ದೆ. ನನ್ನ ಕಥೆಯನ್ನೆಲ್ಲ ಅವರಲ್ಲಿ ಹೇಳಿದೆ. ಅವರಿಂದ ಸೀತಾಪಹರಣದ ದುರ್ವಾರ್ತೆಯನ್ನು ಆಲಿಸಿದೆ. ಕೊನೆಗೆ, “ಪ್ರಭೋ ಶ್ರೀರಾಮ, ನಿನ್ನ ದಿವ್ಯಸ್ವರೂಪ ನನ್ನ ಅಂತರಂಗಕ್ಕೆ ಬೋಧೆಯಾಗಿದೆ. ನೀವಿಬ್ಬರೂ ದಕ್ಷಿಣದತ್ತ ಸಾಗಿ. ಅಲ್ಲಿ ಸುಗ್ರೀವನೆಂಬ ವಾನರ ನಾಯಕನ ಸಖ್ಯವನ್ನು ಮಾಡಿಕೊಳ್ಳಿ. ಅವನು ಧಾರ್ಮಿಕನು. ನಿಮಗೆ ಸಹಾಯವನ್ನು ಮಾಡತಕ್ಕವನು. ಶೀಘ್ರದಲ್ಲಿಯೇ ಸೀತೆ ನಿಮಗೆ ಲಭಿಸುವಳು. ನಿಮಗೆ ಮಂಗಳವಾಗಲಿ. ಅಂತೆಯೆ ನಿಮ್ಮಿಂದ ಲೋಕಕಲ್ಯಾಣವೂ ಸಾಧಿಸಲ್ಪಡಲಿ” ಎಂದು ಹಾರೈಸಿ, ನನ್ನ ಲೋಕದತ್ತ ಸಾಗಿ ಹೋದೆ.