ಬದುಕೆಂದರೆ ಕೇವಲ ಮೋಜು–ಮಸ್ತಿಯಲ್ಲ, ಅದೊಂದು ಕರ್ತವ್ಯ ಎಂಬ ಪ್ರಜ್ಞೆಯನ್ನು ನಾವು ಮರೆತಿಲ್ಲವಾದರೆ ಅದನ್ನು ಮರೆಯುವಂತೆ ಮಕ್ಕಳನ್ನೇಕೆ ರೂಪಿಸಬೇಕು? ಪೋಷಕರು ಹೊರೆಯಲ್ಲ ಎಂಬ ಅರಿವು ನಮಗೆ ಇದ್ದುದೇ ಹೌದಾದರೆ ಅದೇ ಮನಃಸ್ಥಿತಿಯನ್ನು ನಮ್ಮ ಮಕ್ಕಳಲ್ಲೂ ಅರಳಿಸಬೇಕಾಗಿರುವುದು ಇಂದಿನ ಅಗತ್ಯವೇ ಹೌದು. ಮನೆಯೆಂದರೆ ಕೇವಲ ಗಂಡ–ಹೆಂಡತಿಯಲ್ಲ; ಅಜ್ಜಿ–ಅಜ್ಜ, ಅಪ್ಪ–ಅಮ್ಮ–ಮಕ್ಕಳಿಂದ ಕೂಡಿದ ಬಂಧ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಈ ಬಗ್ಗೆ ನಾವೇ ಹಿಮ್ಮೆಟ್ಟಿದರೆ ಮಕ್ಕಳಿಗೆ ಕಲಿಸುವವರಾರು? ಮನೆಯೆಂದರೆ ನೀರು, ನೆರಳು, ಹಣ್ಣುಗಳನ್ನೊದಗಿಸುವ ಒಂದು ಸುಂದರ ಮರವೇ ಹೌದಲ್ಲ, ಅಲ್ಲಿ ಹಳೆಯಬೇರುಗಳು, ಹೊಸಚಿಗುರುಗಳು ಇದ್ದರೆ ಮಾತ್ರವೇ ಎಲ್ಲವೂ ಚೆನ್ನಾಗಿರಲು ಸಾಧ್ಯವಲ್ಲವೆ?
ನಾವೇನೋ ನಮ್ಮ ತಂದೆತಾಯಿಯರನ್ನು ನೋಡಿಕೊಂಡೆವು, ನೋಡಿಕೊಳ್ಳುತ್ತಿದ್ದೇವೆ. ಆದರೆ ನಮ್ಮ ಮಕ್ಕಳು ನಮ್ಮ ಕೊನೆಗಾಲದಲ್ಲಿ ನಮ್ಮೊಂದಿಗೆ ಇದ್ದಾರು, ನಮ್ಮನ್ನು ನೋಡಿಕೊಂಡಾರು ಎಂಬ ಯಾವ ಭರವಸೆಯೂ ಇಲ್ಲ. ಮಕ್ಕಳೆಲ್ಲಿರುತ್ತಾರೋ ಅಲ್ಲಿಗೆ ನಾವೂ ಹೋಗಬೇಕೆನ್ನುವ ತುಡಿತ ನಮ್ಮೊಳಗೆ ಇದ್ದೀತೋ ಗೊತ್ತಿಲ್ಲ, ಆದರೆ ಹೆತ್ತವರು ನಮ್ಮೊಂದಿಗೆ ಬಂದಿರಲಿ ಎಂಬ ಆಸೆ ನಮ್ಮ ಮಕ್ಕಳಲ್ಲಿ ಒಂದು ವೇಳೆ ಇದ್ದರೂ ಮುಂದೆ ಅವರಿಗೆ ಸಂಗಾತಿಯಾಗಿ ಒದಗುವವರು ಹೇಗಿರುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿರುತ್ತದೆ. ಮಕ್ಕಳ ಭವಿಷ್ಯ ಚೆನ್ನಾಗಿರಲಿ ಅಂತ ಹಾರೈಸುವುದನ್ನು ಬಿಟ್ಟರೆ ಬಹುಶಃ ನಮ್ಮ ಕೈಯಲ್ಲೇನೂ ಉಳಿಯುವುದಿಲ್ಲ…’
‘ವಯಸ್ಸು ಐವತ್ತರ ಹತ್ತಿರವಾಗುವಾಗ ನಮ್ಮ ಕನಸಿನ ಮನೆಯನ್ನು ಕಟ್ಟಿಸುತ್ತಿದ್ದೇವೆ. ಆದರೂ ಯೋಚನೆ ಮಾಡುವಾಗ ಭಯವಾಗುತ್ತದೆ. ನಮಗೆ ನಿಜಕ್ಕೂ ಅಷ್ಟೊಂದು ದೊಡ್ಡ ಮನೆ ಅಗತ್ಯ ಇದೆಯಾ ಅನಿಸುತ್ತದೆ. ಈಗ ನಮ್ಮೊಂದಿಗೆ ಅತ್ತೆ ಮಾವ ಇದ್ದಾರೆಂಬುದೇನೊ ನಿಜವೆ. ಆದರೆ ಮಕ್ಕಳಿಗೆ ಅದೇ ಮಾದರಿಯಾದೀತು ಎಂಬ ಭರವಸೆಯಿಲ್ಲ ಅಥವಾ ಬರುವ ಸೊಸೆ-ಅಳಿಯಂದಿರೊಂದಿಗೆ ಹೊಂದಿಕೊಂಡು ಅವರಿಗೆ ಬೇಕಾದಂತೆ ಇರಬಲ್ಲೆವು ಎಂಬ ಭರವಸೆಯಿಲ್ಲ. ಮಕ್ಕಳ ಮೇಲೆ ಅವಲಂಬಿತರಾಗದಂತೆ ಇರಬೇಕು ಅಂತ ಈಗ ಅಂದುಕೊಳ್ಳುತ್ತೇವೆ, ಆದರೆ ಸಣ್ಣ ಜ್ವರ ಕಾಡಿದರೂ ವೈದ್ಯರನ್ನು ಕಾಣುವುದಕ್ಕೆ ಹೋಗುವಾಗ ನಮ್ಮೊಂದಿಗೆ ಮಕ್ಕಳು ಬರಲಿ ಅನಿಸುತ್ತದೆ…’
‘ಮಕ್ಕಳು ದೊಡ್ಡವರಾಗುತ್ತ ಆಗುತ್ತ ನಮ್ಮಿಂದ ದೂರವಾಗುತ್ತಾರೇನೊ ಎಂದೆನಿಸುವುದಕ್ಕೆ ಪ್ರಾರಂಭವಾಗಿದೆ. ಒಂದು ಬಗೆಯ ಸ್ವಾರ್ಥವೇ ಅವರಲ್ಲಿ ಕಾಣಿಸುತ್ತದೆ. ಶಿಕ್ಷಕಿಯಾಗಿದ್ದ ನಮ್ಮಮ್ಮ ಬೆಳಗ್ಗೆ ಬೇಗನೆ ಹೊರಡಬೇಕಿದ್ದುದರಿಂದ ಅವರು ತಿಂಡಿ ರೆಡಿ ಮಾಡಿಟ್ಟು ರೆಡಿಯಾಗುವಷ್ಟರಲ್ಲಿ ನಾವು ಅವರಿಗೆ ಮಧ್ಯಾಹ್ನಕ್ಕೆ ಬೇಕಾದ ಡಬ್ಬಿ ತುಂಬಿಡುತ್ತಿದ್ದೆವು, ನೀರಿನ ಬಾಟಲ್ ತುಂಬಿಡುತ್ತಿದ್ದೆವು. ನಮ್ಮ ಮಕ್ಕಳ್ಯಾಕೋ ಹಾಗೆ ನಡೆದುಕೊಳ್ಳುವುದೇ ಇಲ್ಲ. ಬೆಳಗ್ಗೆ ಎಂಟೂವರೆಯಾದರೂ ಎದ್ದೇಳುವುದಿಲ್ಲ. ರಾತ್ರಿ ಬೇಕಿದ್ದರೆ ಒಂದು ಗಂಟೆಯವರೆಗೂ ಎದ್ದೇ ಇರುತ್ತಾರೆ. ಇವರು ಹೀಗಾದರೆ ಮುಂದೆ ಅವರ ಜೀವನದ ಕಥೆಯೇನು? ಕೆಲವೊಮ್ಮೆ ತುಂಬಾ ಆತಂಕವಾಗುತ್ತದೆ.’
‘ನಾನಂತೂ ನಿರ್ಧಾರ ಮಾಡಿಬಿಟ್ಟಿದ್ದೇನೆ. ಮಗನಿಗೆ ಮದುವೆಯಾಗುತ್ತಲೇ ಬೇರೆ ಮನೆಯಲ್ಲಿ ಇದ್ದುಬಿಡು ಅಂತ ಹೇಳಿಬಿಡುತ್ತೇನೆ. ನಾನಂತೂ ನನ್ನ ಅತ್ತೆಯವರೊಂದಿಗೆ ಸಾಕಷ್ಟು ಹೆಣಗಾಡಿದೆ. ಮುಂದೆ ಸೊಸೆಯೊಂದಿಗೂ ತಿಕ್ಕಾಟ ನಡೆಸಿಕೊಂಡು ಬಾಳುವ ಶಕ್ತಿ ನನಗಿಲ್ಲ. ಮಗನಿಗೂ ಅದರಿಂದ ತೊಂದರೆಯಾದೀತು. ನಾವಂತೂ ಹೇಗೋ ಜೀವನ ಸಾಗಿಸಿದೆವು. ಇಂದಿನ ಮಕ್ಕಳಿಗೆ ಅಷ್ಟೊಂದು ಹೊಂದಾಣಿಕೆಯೇ ಇಲ್ಲ. ಸುಮ್ಮನೆ ನಾಳೆ ಅವರ ನಡುವೆ ಭಿನ್ನಾಭಿಪ್ರಾಯಗಳು ಬಂದರೆ ನೋಡಿ ಸಂಕಟಪಡುವವರು ನಾವೇ ಅಲ್ವಾ? ಅದಕ್ಕಿಂತ ನಾವು ಬೇರೆಯೇ ಇರುವುದೊಳ್ಳೆಯದಲ್ವಾ?’
ನಮ್ಮ ಸುತ್ತಮುತ್ತಲೂ ಸುಮಾರು ನಲವತ್ತು-ಐವತ್ತರ ಆಸುಪಾಸಿನಲ್ಲಿ ಇರುವವರು ಹೆಚ್ಚುಕಡಮೆ ದಿನನಿತ್ಯ ಎಂಬಂತೆ ಹೇಳಿಕೊಳ್ಳುತ್ತಿರುವ ಮಾತುಗಳಿವು. ಅವರಿವರೆಂದಿಲ್ಲದೆ, ಉದ್ಯೋಗದ ಭಿನ್ನತೆಯನ್ನೂ ಬದಿಗಿಟ್ಟು ನಮ್ಮ ತಲೆಮಾರಿನ ಬಹುತೇಕರ ಚಿಂತೆಯೂ ಇದೇ ಆಗಿದೆ ಎಂದರೆ ಅದಕ್ಕೆ ಕಾರಣವೇನು? ದಿಗ್ಭ್ರಮೆಯೆನಿಸುತ್ತದೆ. ಮಕ್ಕಳು ನಾವು ಹೇಳಿದ್ದನ್ನು ಕಲಿಯುವುದಿಲ್ಲ, ಬದಲಿಗೆ ನಮ್ಮನ್ನು ನೋಡಿ ಕಲಿಯುತ್ತಾರೆ ಎಂದೆಲ್ಲ ಭಾಷಣ ಬಿಗಿಯುವ ನಾವು ನಮ್ಮ ಬದುಕಿನಲ್ಲೂ ಅದೇ ತತ್ತ್ವವನ್ನು ಏಕೆ ನಂಬಲು ಸಿದ್ಧರಿಲ್ಲ ಅಥವಾ ಅದು ಸಾಧ್ಯವಾಗುತ್ತಿಲ್ಲ – ಎಂಬುದೇ ಇಂದಿನ ಗೊಂದಲ.
ನಮ್ಮ ತಲೆಮಾರಿನ ಹೆಚ್ಚುಕಡಮೆ ಎಲ್ಲರೂ ಬಯಸುವುದು, ಬಯಸುತ್ತಿರುವುದು ನಮ್ಮ ಮಕ್ಕಳು ಚೆನ್ನಾಗಿರಬೇಕು, ನಾವು ಅನುಭವಿಸಿದ ಕಷ್ಟವನ್ನು ಅವರು ಅನುಭವಿಸಬಾರದು. ನಮ್ಮಲ್ಲಿ ಹಣವಿದೆ ಎಂಬುದೇ ನಮ್ಮನ್ನು ನಮ್ಮ ಹಿರಿಯರಿಗಿಂತ ಭಿನ್ನವಾಗಿಸಿದೆಯೆ ಎನಿಸುತ್ತದೆ, ಕೆಲವೊಮ್ಮೆ. ನಮ್ಮ ಬಾಲ್ಯದ ದಿನಗಳಲ್ಲಿ ಮೈಲುಗಟ್ಟಲೆ ನಡೆದು ಹೋಗುವುದನ್ನೇ ಆದರೂ ಅದೆಷ್ಟು ಸಂಭ್ರಮಿಸುತ್ತಿದ್ದೆವು! ಮಳೆಗಾಲದಲ್ಲಿ ಮಳೆಯಲ್ಲಿ ಆಟವಾಡುತ್ತ, ನೆನೆಯುತ್ತ, ಬಿಸಿಲ ಬೇಗೆಯಲ್ಲಿ ಅಲ್ಲಲ್ಲಿ ಮರದ ನೆರಳಲ್ಲಿ ತಂಗುತ್ತ, ಕಾಡುದಾರಿಯ ತುಂಬ ಸಿಗುವ ಕಾಡುಹಣ್ಣುಗಳನ್ನು ತಿನ್ನುತ್ತ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅನುಭವಿಸಿಕೊಂಡು ಬೆಳೆದೆವು. ಇಂದು ಪಟ್ಟಣದೊಳಗಿದ್ದೇವೆ. ನಮ್ಮ ಮಕ್ಕಳು ಶಾಲೆ ಬಿಟ್ಟು ಹದಿನೈದು ನಿಮಿಷಗಳಲ್ಲಿ ಮನೆ ತಲಪಲಿಲ್ಲವೆಂದಾದರೆ ಅತ್ಯಂತ ಒತ್ತಡಕ್ಕೊಳಗಾಗುತ್ತೇವೆ. ಮನೆಯಿಂದ ಒಂದು ಫರ್ಲಾಂಗ್ ಅಷ್ಟೇ ದೂರವಿರುವ ಅಂಗಡಿಗೆ ಮಕ್ಕಳನ್ನು ಕಳುಹಿಸಿ ಏನನ್ನಾದರೂ ತರಿಸಬೇಕಾದರೂ ಹತ್ತು ಸಲ ಯೋಚಿಸುತ್ತೇವೆ. ಮಕ್ಕಳೂ ಅಷ್ಟೇ ಜಾಣರಿದ್ದಾರೆ. ನಡೆಯಲೊಲ್ಲರು. ಹೇಗೂ ಐದನೆಯ ತರಗತಿಯಲ್ಲಿ ಓದುವ ಮಕ್ಕಳಿಗೆ ಗಾಡಿ ಓಡಿಸುವುದನ್ನು ಕಲಿಸಿದವರು ನಾವು! ಅದರ ಅಗತ್ಯವೇನು, ಔಚಿತ್ಯವೇನು ಎಂಬುದರ ವಿವೇಚನೆ ಮಾಡದೆ ಅದನ್ನೊಂದು ಹೆಮ್ಮೆಯ ಸಂಗತಿಯೆಂಬಂತೆ ಹತ್ತಾರು ಮಂದಿಯ ಬಳಿ ಹೇಳಿಕೊಂಡರಷ್ಟೆ ನಮಗೆ ಸಮಾಧಾನ. ಹೀಗಿರುವಾಗ ಮೈಲುಗಟ್ಟಲೆ ನಡೆಯುವುದರ ಹಿಂದಿದ್ದ ಸಂಭ್ರಮವನ್ನು ಅವರಿಗೆ ಅರ್ಥ ಮಾಡಿಸಲು ನಾವು ಶಕ್ತರಾಗಿ ಉಳಿದಿಲ್ಲ.
ಬಹುಶಃ ಹಾಸಿಗೆ ಹಿಡಿದ ನಮ್ಮ ಹಿರಿಯರನ್ನು ನೋಡಿಕೊಂಡ ಅನುಭವ ನಮ್ಮನ್ನು ಬಹಳವಾಗಿ ದಣಿಸಿದ್ದಿರಬೇಕು. ಅದಕ್ಕಾಗಿ ನಮ್ಮ ಮಕ್ಕಳಿಗೆ ಆ ಕಷ್ಟ ಬೇಡ ಎಂಬ ತೀರ್ಮಾನವನ್ನು ನಾವೇ ತೆಗೆದುಕೊಳ್ಳುತ್ತಿದ್ದೇವೆಯೆ ಎಂದು ಯೋಚಿಸಿ ನೋಡಬೇಕಿದೆ. ಆದರೆ ಇದೇ ಯೋಚನೆಯನ್ನು ಅವರ ತಲೆಗೂ ತುಂಬಿದರೆ ಮಕ್ಕಳಿಗೆ ಜೀವನವೆನ್ನುವುದು ಕೇವಲ ಮೋಜುಮಸ್ತಿಗಳಿಗಾಗಿ ಇರುವಂಥದ್ದು, ಲಕ್ಷಾಂತರ ರೂಪಾಯಿಗಳನ್ನು ದುಡಿಯುವುದೇ ಸಾಧನೆ, ಅದನ್ನು ನಮಗಿಷ್ಟ ಬಂದಂತೆ ಖರ್ಚು ಮಾಡಲೂ ಬಲ್ಲೆವು ಎಂಬ ಅತಿ ಅಭಿಮಾನವೇ ಬದುಕು ಎನ್ನಿಸದೆ?
ಇಂದು ಎಲ್ಲಿಯವರೆಗೆ ಮಕ್ಕಳ ಕಾಳಜಿ ಮಾಡುತ್ತಿದ್ದೇವೆ ಎಂದರೆ ಮನೆಯ ಮಗಳು ಮದುವೆಯಾಗಿ ತನ್ನ ಜೀವನವನ್ನು ಸುಖವಾಗಿ ಕಳೆಯುವಲ್ಲಿಯೂ ಹೆತ್ತವರು ಕೈಯಾಡಿಸಹೊರಟಂತಿದೆ ವ್ಯವಸ್ಥೆ. ಮೊದಲಿಗೆ ಗರ್ಭಿಣಿಯಾದ ಮಗಳನ್ನು ಏಳನೆಯ ತಿಂಗಳಿನಲ್ಲಿ ಸೀಮಂತಶಾಸ್ತ್ರ ಮಾಡಿ ಕರೆದುಕೊಂಡು ಬರುತ್ತಿದ್ದ ಸಂಪ್ರದಾಯವಿತ್ತು. ಬಳಿಕ ಮೂರು ತಿಂಗಳ ಬಾಣಂತನ. ಇಂದು ಸೂಕ್ಷ್ಮವಾಗಿ ನೋಡಿದರೆ ಮಗಳು ಫಲವತಿಯಾಗಿದ್ದಾಳೆ ಎಂಬಲ್ಲಿಂದಲೆ ಅವಳನ್ನು ತವರಿಗೆ ಕರೆಸಿಕೊಂಡು ಮುಚ್ಚಟೆಯಿಂದ ನೋಡಿಕೊಳ್ಳುವ ಪ್ರಯತ್ನ ಮಾಡುವ ಪೋಷಕರೇ ಹೆಚ್ಚು. ಕಾರಣಗಳು ಏನೇ ಇರಬಹುದು, ಆದರೆ ಮಗುವಿನ ತಂದೆಯಾಗುವವನಿಗೂ ಅದೊಂದು ಗರ್ಭಿಣಿಯಾದ ತನ್ನವಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಪಾಠವಲ್ಲವೆ? ಅದೊಂದು ಹೊಸಪಯಣದ ಆರಂಭವಲ್ಲವೆ? ಆ ಹಂತದಲ್ಲಿ ಅವರಿಬ್ಬರು ಜೊತೆಯಾಗಿರುವುದು ಅಗತ್ಯವೇ ಅಲ್ಲವೆ? ಹೊಸದೊಂದು ಸಂಪ್ರದಾಯವನ್ನು ನಾವೇ ಸೃಷ್ಟಿಮಾಡಿಕೊಳ್ಳುತ್ತಿದ್ದೇವೆಯೆ? ಒಂದೊಮ್ಮೆ ಈ ಕಾರಣದಿಂದಲೇ ಗಂಡಹೆಂಡತಿಯ ನಡುವೆ ಮನಸ್ತಾಪಗಳು ಉದ್ಭವಿಸಿದಲ್ಲಿ ಅದಕ್ಕೆ ನೇರವಾಗಿ ಹೊಣೆಯಾಗುವುದು ಯಾರು?
ಬದುಕೆಂದರೆ ಕೇವಲ ಮೋಜು-ಮಸ್ತಿಯಲ್ಲ, ಅದೊಂದು ಕರ್ತವ್ಯ ಎಂಬ ಪ್ರಜ್ಞೆಯನ್ನು ನಾವು ಮರೆತಿಲ್ಲವಾದರೆ ಅದನ್ನು ಮರೆಯುವಂತೆ ಮಕ್ಕಳನ್ನೇಕೆ ರೂಪಿಸಬೇಕು? ಪೋಷಕರು ಹೊರೆಯಲ್ಲ ಎಂಬ ಅರಿವು ನಮಗೆ ಇದ್ದುದೇ ಹೌದಾದರೆ ಅದೇ ಮನಃಸ್ಥಿತಿಯನ್ನು ನಮ್ಮ ಮಕ್ಕಳಲ್ಲೂ ಅರಳಿಸಬೇಕಾಗಿರುವುದು ಇಂದಿನ ಅಗತ್ಯವೇ ಹೌದು. ಮನೆಯೆಂದರೆ ಕೇವಲ ಗಂಡಹೆಂಡತಿಯಲ್ಲ, ಅಜ್ಜಿ-ಅಜ್ಜ, ಅಪ್ಪ-ಅಮ್ಮ-ಮಕ್ಕಳಿಂದ ಕೂಡಿದ ಬಂಧ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಈ ಬಗ್ಗೆ ನಾವೇ ಹಿಮ್ಮೆಟ್ಟಿದರೆ ಮಕ್ಕಳಿಗೆ ಕಲಿಸುವವರಾರು? ಮನೆಯೆಂದರೆ ನೀರು, ನೆರಳು, ಹಣ್ಣುಗಳನ್ನೊದಗಿಸುವ ಒಂದು ಸುಂದರ ಮರವೇ ಹೌದಲ್ಲ, ಅಲ್ಲಿ ಹಳೆಯಬೇರುಗಳು, ಹೊಸಚಿಗುರುಗಳು ಇದ್ದರೆ ಮಾತ್ರವೇ ಎಲ್ಲವೂ ಚೆನ್ನಾಗಿರಲು ಸಾಧ್ಯವಲ್ಲವೆ?
ವೃದ್ಧಾಪ್ಯವು ಬದುಕಿನ ಸುಂದರಸಂಜೆಗಳಾಗಬೇಕೆಂಬ ಕನಸು ಚಂದವೇ. ಆದರೆ ಅಲ್ಲಿ ಸೊಗಸಿರುವುದು ಕಣ್ಣೆದುರು ಬೆಳೆದ ಮಕ್ಕಳ ಸಾಧನೆ, ಅವರ ಯಶೋಗಾಥೆಗಳು ಜತೆಯಲ್ಲಿ ಮೊಮ್ಮಕ್ಕಳ ಒಡನಾಟ. ಮುದ್ದುಮಕ್ಕಳು ಹೆರವರ ಆಶ್ರಯದಲ್ಲೆಂಬಂತೆ ಬೇಬಿಕೇರ್ ಸೆಂಟರ್ಗಳಲ್ಲಿ ಬೆಳೆಯುವುದಕ್ಕಿಂತ ಅಜ್ಜಿಅಜ್ಜನೊಂದಿಗೆ ಬೆಳೆದರೆ ಚಂದವಲ್ಲವೆ? ಮನೆಯಂಗಳದ ಅರಳುಮೊಗ್ಗುಗಳನ್ನು ಪೊರೆಯಬಲ್ಲವರು ಅವರಿಗಿಂತ ಇನ್ಯಾರು? ನಮ್ಮದಾದ ಭಾಷೆ, ಸಂಸ್ಕೃತಿಯನ್ನು ಕಲಿಸುತ್ತಲೇ ಪುರಾಣಕಥನಗಳನ್ನೂ ಅನಾವರಣಗೊಳಿಸುತ್ತ ಮಕ್ಕಳ ಕಲ್ಪನೆಯನ್ನು ವಿಸ್ತರಿಸುವುದು ಈ ಮೂಲಕವೇ ಸಾಧ್ಯವಾಗಬೇಕಲ್ಲವೆ?
ಭಾರತೀಯತೆ, ನಮ್ಮ ಸಂಸ್ಕೃತಿಯೆಂಬ ಹೆಗ್ಗಳಿಕೆ ಪಾಶ್ಚಾತ್ಯ ಜೀವನಕ್ರಮದ ಅನುಕರಣೆಯಲ್ಲಿ ಕಳೆದುಹೋಗದಂತೆ ಕಾಪಿಟ್ಟುಕೊಳ್ಳಬೇಕಾದ ಮಹತ್ತರ ಹೊಣೆಗಾರಿಕೆಯೊಂದು ನಮ್ಮ ಹೆಗಲ ಮೇಲಿದೆ. ಇಲ್ಲಿಯವರೆಗೂ ನಾವು ನಂಬಿಕೊಂಡು ಬಂದಿರುವ ಆದರ್ಶಗಳು ಸ್ಪಷ್ಟವೇ ಹೌದಾದರೆ ನಮ್ಮ ಮಕ್ಕಳಿಗೂ ಅದನ್ನು ದಿಟ್ಟವಾಗಿಯೇ ತೋರಿಸಬೇಕಲ್ಲ? ನಮ್ಮ ಜೀವನಕ್ರಮದ ಅನುಬಂಧಗಳ ಸೊಗಸಿನ ಮುಂದೆ ಪಾಶ್ಚಾತ್ಯರ ಕಲ್ಪನೆಯ ಸ್ವತಂತ್ರ ಬದುಕು ಟೊಳ್ಳು ಎಂಬರಿವು ಅವರಿಗೆ ಸದಾ ಇರುವಂತೆ ಬೆಳೆಸಬೇಕಾದುದು ನಮ್ಮ ಬದ್ಧತೆಯೇ. ಆರಂಭದ ದಿನಗಳಲ್ಲಿ ಸ್ವಾತಂತ್ರ್ಯವೆಂಬುದು ಸುಖವೆನಿಸಬಹುದು, ಆದರೆ ಯಾವಾಗ ಅದು ಮೊದಲಿಗಿಂತಲೂ ಹೆಚ್ಚು ಭಾರವಾದ ಜವಾಬ್ದಾರಿಯೆಂಬುದು ಅರಿವಾಗುತ್ತದೋ ಅಲ್ಲಿಗೆ ಮನೆಗಳು ಮನೆಗಳಾಗಿಯೇ ಉಳಿಯುತ್ತವೆ. ಅಲ್ಲವಾದಲ್ಲಿ ಹೊಸದೊಂದು ಬಗೆಯ ಕುಟುಂಬವ್ಯವಸ್ಥೆ ನಮ್ಮ ಸಂಸ್ಕೃತಿಯನ್ನು ಹೇಳಹೆಸರಿಲ್ಲದಂತೆ ಕೊಚ್ಚಿಕೊಂಡು ಹೋಗುತ್ತದೆ.