ಭಾರತ ಇದೀಗ ಸ್ವಾತಂತ್ರ್ಯದ ಅಮೃತಮಹೋತ್ಸವದ ಶುಭಸಂಭ್ರಮ ದಲ್ಲಿದೆ. ಈ ಅಮೃತಪರ್ವ ಕೇವಲ ಆಚರಣೆಗಷ್ಟೇ ಸೀಮಿತವಾಗದೆ ಈಗ ನಾವು ಎಲ್ಲಿದ್ದೇವೆ, ಎತ್ತ ಸಾಗುತ್ತಿದ್ದೇವೆ, ನಾವು ಎಲ್ಲಿಗೆ ಸಾಗಬಯಸಿದ್ದೇವೆ – ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೂ ನಡೆದಿದೆ. ಜನಸಹಭಾಗಿತ್ವ, ಸಾರ್ವಜನಿಕ ಕಲ್ಯಾಣಕಾರ್ಯಕ್ರಮಗಳು ಹಾಗೂ ಜಗತ್ತಿನ ವೇದಿಕೆಗಳಲ್ಲಿ ಭಾರತೀಯ ಮೌಲ್ಯ-ಚಿಂತನೆಗಳ ಸ್ವೀಕಾರಾರ್ಹತೆಯನ್ನು ವೃದ್ದಿಸುವ ಪ್ರಯತ್ನಗಳು ಗಣನೀಯ ಸಾಫಲ್ಯ ನೀಡುತ್ತಿವೆ.
ವಿದೇಶೀ ಆಕ್ರಮಣಕಾರಿಗಳ ವಿರುದ್ಧ ಭಾರತೀಯ ಅಸ್ಮಿತೆಯ ಸಂರಕ್ಷಣೆಗಾಗಿ ನಡೆದ ಎಲ್ಲ ಪ್ರಯಾಸಗಳಿಗೂ ಭಾರತೀಯ ಸ್ವಾತಂತ್ರ್ಯಹೋರಾಟದ ಶ್ರೇಯಸ್ಸನ್ನು ಸಲ್ಲಿಸುವ ಪ್ರಯತ್ನ ಸತರ್ಕವೇ. ಭಾರತೀಯರ ನೈಜಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವೂ ಈ ಸ್ಮರಣೀಯ ಕಾಲಘಟ್ಟದಲ್ಲಿ ವ್ಯಾಪಕವಾಗಿ ನಡೆಯಿತು. ಈಗಲಾದರೋ ಭಾರತ ‘ಮಿಷನ್ ಮೋಡ್’ನಲ್ಲಿ ಕಾರ್ಯನಿರ್ವಹಿಸುತ್ತಿದೆ – ಎನ್ನುವುದು ಕಣ್ಣಿಗೆ ಕಾಣುತ್ತಿದೆ.
ವಿಶ್ವದ ಆರ್ಥಿಕ ಬಿಕ್ಕಟ್ಟು, ಸಾಂಕ್ರಾಮಿಕ ಮತ್ತು ಯುದ್ಧದ ಹೊರತಾಗಿಯೂ ಭಾರತವು ವೇಗವಾಗಿ ಮತ್ತು ಸ್ಪಷ್ಟಗುರಿಯೊಂದಿಗೆ ಮುಂದುವರಿಯುತ್ತಿದೆ. ‘ಒಂದು ದೇಶ ಒಂದು ತೆರಿಗೆ’ – ‘ಜಿಎಸ್ಟಿ’ ಮೂಲಕ ಜನರ ಮೇಲಿನ ತೆರಿಗೆ ಹೊರೆಗಳನ್ನು ಕಡಮೆ ಮಾಡಿದ್ದು ಮಾತ್ರವಲ್ಲದೆ ತೆರಿಗೆ ಸಂಗ್ರಹದಲ್ಲೂ ಕ್ರಾಂತಿಕಾರಕ ಬದಲಾವಣೆಯನ್ನು ತಂದಿದೆ. ಇಂದು ೩.೫ ಟ್ರಿಲಿಯನ್ ಡಾಲರ್ ಆರ್ಥಿಕತೆಯೊಂದಿಗೆ ಜಗತ್ತಿನ ೫ನೇ ದೊಡ್ಡ ಆರ್ಥಿಕ ದೇಶವಾಗಿ ಭಾರತ ಎದ್ದುನಿಂತಿದೆ. (ಅಲ್ಪಕಾಲದ ಹಿಂದೆ -೨೦೧೪ರಲ್ಲಿ – ಅದು ೧೦ನೇ ಸ್ಥಾನದಲ್ಲಿತ್ತು.)
ಆಡಳಿತಾರೂಢರು ಉತ್ತಮ ಆಡಳಿತದಲ್ಲಿ ನಾವು ಯಾರಿಗಾಗಿ ‘ನೀತಿ ನಿರೂಪಣೆ’ಗಳನ್ನು ಮಾಡುತ್ತೇವೆಯೋ ಅಂತಹವರ ಒಳಗೊಳ್ಳುವಿಕೆ ಬಹುಮುಖ್ಯ ಎಂಬ ಸಂಕಲ್ಪ ಕೈಗೊಂಡಿದ್ದುದರ ಪರಿಣಾಮವಾಗಿ ಸಾರ್ವಜನಿಕರು ಸರ್ಕಾರದ ನೀತಿಗಳನ್ನು ಮತ್ತು ಯೋಜನೆಗಳನ್ನು ಸ್ವೀಕರಿಸುತ್ತಿರುವುದು ಮಾತ್ರವಲ್ಲದೆ ಸಾರ್ವಜನಿಕರೇ ಚಾಲಕ ಶಕ್ತಿಯಾಗಿರುವುದನ್ನೂ ಕಾಣಬಹುದಾಗಿದೆ. ಇದಕ್ಕೆ ಅಡುಗೆ-ಅನಿಲದ ಸಬ್ಸಿಡಿ ಹಿಂದಿರುಗಿಸುವ ಕರೆಗೆ ದೊರೆತ ಜನಸ್ಪಂದನೆ – ಒಂದು ಉದಾಹರಣೆಯಷ್ಟೇ.
ಕೋವಿಡ್ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿದ್ದು ಮಾತ್ರವಲ್ಲದೆ ಸ್ವತಂತ್ರ ಲಸಿಕೆಯನ್ನು ಉತ್ಪಾದಿಸಿ, ಅದನ್ನು ವ್ಯವಸ್ಥಿತವಾಗಿ ದೇಶದ ಎಲ್ಲ ಜನರಿಗೆ ತಲಪಿಸಿದ್ದು, ಹಾಗೂ ಜಗತ್ತಿನ ಹತ್ತಾರು ದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಸಿ ‘ವಸುಧೈವ ಕುಟುಂಬಕಂ’ ಎಂಬ ಭಾರತೀಯ ಮನೋದೃಷ್ಟಿಯನ್ನು ಪ್ರದರ್ಶಿಸಿದ್ದು ಜಗತ್ತಿನ ವಿವಿಧ ದೇಶಗಳು ಭಾರತವನ್ನು ‘ಭವಿಷ್ಯದ ಭರವಸೆ’ಯೆಂಬಂತೆ ಎದುರು ನೋಡುವಂತೆ ಮಾಡಿದೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ತ್ವಪೂರ್ಣ ಯೋಜನೆಗಳಾದ ಆಯುಷ್ಮಾನ್ ಭಾರತ್, ಉಜ್ಜ್ವಲ, ಅನ್ನ ಯೋಜನೆ, ‘ಒಂದು ರಾಷ್ಟ್ರ-ಒಂದು ಪಡಿತರ ಚೀಟಿ’, ಕಡಮೆ ದರದಲ್ಲಿ ಔಷಧಗಳು, ಉಚಿತ ಲಸಿಕೆ ಮತ್ತು ಜೀವವಿಮೆ – ಇಂತಹ ಯೋಜನೆಗಳು ಭಾರತೀಯ ಜನರ ಬಡತನವನ್ನು ಕಡಮೆ ಮಾಡುವಲ್ಲಿ ಹಾಗೂ ಆರೋಗ್ಯವಂತ ಭಾರತದ ನಿರ್ಮಾಣದಲ್ಲಿ ಮಹತ್ತ್ವದ ಪ್ರಭಾವ ಬೀರಿವೆ, ಹಾಗೂ ಭಾರತೀಯರ ಮಾನಸಿಕ ಸಾಮಾಜಿಕ ಆರ್ಥಿಕ ಉನ್ಮುಖತೆಗೆ ಮುನ್ನುಡಿ ಬರೆದಿವೆ.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ರೂ. ೫ ಲಕ್ಷದವರೆಗಿನ ವರಮಾನದವರಿಗೆ ಸಂಪೂರ್ಣ ಉಚಿತ ಆರೋಗ್ಯಸೇವೆ ಒದಗಿಸುವ ‘ಆಯುಷ್ಮಾನ್ ಭಾರತ್’ ಹಾಗೂ ಅತಿ ಕಡಮೆ ದರದಲ್ಲಿ ಉತ್ತಮಗುಣಮಟ್ಟದ ಔಷಧಗಳನ್ನು ಪೂರೈಸುವ ‘ಜನೌಷಧ ಕೇಂದ್ರ’ಗಳ ಮೂಲಕ ಭಾರತ ಸರ್ಕಾರ ಬಡ ಮಧ್ಯಮವರ್ಗವನ್ನು ಮೇಲಕ್ಕೆತ್ತುವ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಒಟ್ಟಾರೆ ಸುಮಾರು ೫೦ ಕೋಟಿಗೂ ಅಧಿಕ ಜನರು ‘ಆಯುಷ್ಮಾನ್ ಭಾರತ್’ ಯೋಜನೆಯ ಮೂಲಕ ಉಚಿತ ಚಿಕಿತ್ಸೆ ಪಡೆದಿದ್ದು, ರೂ. ೮೦,೦೦೦ ಕೋಟಿಗೂ ಅಧಿಕ ಹಣವನ್ನು ಉಳಿಸಲಾಗಿದೆ. ೧೭೫೯ ರೀತಿಯ ಔಷಧಗಳು, ೨೮೦ ಶಸ್ತ್ರಚಿಕಿತ್ಸಾ ಉಪಕರಣಗಳು ಹಾಗೂ ಇತರ ಹಲವು ಸಾಧನಗಳನ್ನು ಅತಿ ಕಡಮೆ ದರದಲ್ಲಿ ಪೂರೈಸುವ ೯೦೦೦ಕ್ಕೂ ಅಧಿಕ ಜನೌಷಧ ಕೇಂದ್ರಗಳು ಬಾರತದ ೭೪೩ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ೧೧ ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣ, ಬಡ ಮಧ್ಯಮ ವರ್ಗದ ೪೮ ಕೋಟಿ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಜೋಡಿಸಿಕೊಂಡಿದ್ದು, ಫಲಾನುಭವಿಗಳಿಗೆ ನೇರ ಪಾವತಿ ಮೂಲಕ ಮಧ್ಯವರ್ತಿಗಳ ಪಾಲಾಗುತ್ತಿದ್ದ ಸಾವಿರಾರು ಕೋಟಿ ರೂ.ಗಳನ್ನು ತಡೆಹಿಡಿದಿದೆ; ಹಾಗೂ ಅರ್ಹಫಲಾನುಭವಿಗಳಿಗೆ ಪೂರ್ಣ ಪ್ರಯೋಜನ ಲಭಿಸಿದೆ. ಆಧಾರ್ ಜೋಡಣೆಯ ಮೂಲಕ ಅನರ್ಹ ನಕಲಿ ಫಲಾನುಭವಿಗಳನ್ನು ಹೊರಹಾಕಿದ್ದು; ಸರ್ಕಾರೀ ಉದ್ಯಮಗಳ ಮೇಲೆ ಅವಲಂಬಿತವಾಗದೆ ಸ್ವತಂತ್ರ ಉದ್ಯಮ ಸ್ಥಾಪನೆಗೆ ಅಗತ್ಯ ಆರ್ಥಿಕ ನೆರವು ನೀಡುವ ಯೋಜನೆಗಳು – ಇವೆಲ್ಲ ಭಾರತದ ಚಿಂತನೆ ಮತ್ತು ಕಾರ್ಯಶೈಲಿ ಬದಲಾಗಿವೆ ಎನ್ನುವುದರ ಸ್ಪಷ್ಟ ನಿದರ್ಶನಗಳೇ ಆಗಿವೆ.
ಇಡೀ ಜಗತ್ತು ಇಂದು ಭಾರತೀಯ ಸಾಂಪ್ರದಾಯಿಕ ಆಯುಷ್ ವೈದ್ಯಪದ್ಧತಿ, ಯೋಗ, ಸಿರಿಧಾನ್ಯ ಮುಂತಾದವುಗಳ ಶಕ್ತಿಯನ್ನು ಗುರುತಿಸಿದೆ ಹಾಗೂ ಇವಕ್ಕೆ ಮನ್ನಣೆ ನೀಡಿದೆ.
* * *
ಎಸ್.ಆರ್. ರಾಮಸ್ವಾಮಿ ಅವರು ಹೇಳುವಂತೆ: “೧೮೫೭ರ ಸ್ವಾತಂತ್ರö್ಯ ಯುದ್ಧ ಸೈನಿಕನೆಲೆಯಲ್ಲಿ ನಡೆಯಿತು. ಎರಡನೇ ಸ್ವಾತಂತ್ರ್ಯಯುದ್ಧ ಬೀದಿಗಳಲ್ಲಿ ನಡೆಯಿತು. ಈಗ ಚಾಲೂ ಇರುವ ಮೂರನೆ ಸ್ವಾತಂತ್ರ್ಯಯುದ್ಧ ಮಾನಸಿಕ-ಬೌದ್ಧಿಕ ಸ್ತರದಲ್ಲಿ ನಡೆಯಬೇಕಾಗಿದೆ. ‘ನೀವು ನನಗೆ ವೋಟು ಕೊಡಿ. ನಾವು ನಿಮಗೆ ಈ ಸವಲತ್ತುಗಳನ್ನು ಕೊಡುತ್ತೇವೆ’ – ಇಂತಹ ಕೊಡು-ಕೊಳ್ಳುವ ವ್ಯವಹಾರದಿಂದ ರಾಷ್ಟçವನ್ನು ಕಟ್ಟುವುದಾಗಲಿ, ಉಳಿಸಿಕೊಳ್ಳುವುದಾಗಲಿ ಸಾಧ್ಯವೆ? ಆಜಾದ್ ಹಿಂದ್ ಫೌಜಿನ ನೇತೃತ್ವವನ್ನು ವಹಿಸಿಕೊಂಡಾಗ (ಜುಲೈ ೫, ೧೯೪೩) ನೇತಾಜಿ ಹೇಳಿದ್ದು: I can offer you nothing except hunger, thirst, privation, forced marches and death. But if you follow me in life and death… I shall lead you to victory and freedom.”
ರಾಷ್ಟ್ರೀಯತೆಗೆ ಅಸ್ತಿಭಾರ ಹಾಕಬಲ್ಲುದು ಇಂತಹ ಅಸ್ಖಲಿತ ನಿಷ್ಠೆ ಮಾತ್ರ.