ಗಂಡಹೆಂಡತಿಯರ ನಡುವೆ ಜಗಳಗಳಾದಾಗ ‘ಇದೇ ಕೊನೆ, ಇನ್ನು ಈ ಸಂಬಂಧ ಉಳಿಸುವುದರಲ್ಲಿ ಅರ್ಥವೇ ಇಲ್ಲ’ ಎಂಬಂಥ ಮಾತುಗಳನ್ನಾಡಿದ ಅನೇಕ ಮಂದಿ ಮರುದಿನ ಬೆಳಗಾದರೆ ‘ಮೈ ಸ್ವೀಟ್ ಹಬ್ಬೀ’ ಎಂದೋ ‘ಲವ್ ಯು ವೈಫೀ’ ಎಂದೋ ಸ್ಟೇಟಸ್ ಹಾಕಿಕೊಂಡು, ಇವರು ತಮ್ಮ ಜಗಳಗಳ ಕುರಿತು ಯಾವೆಲ್ಲ ಸ್ನೇಹಿತರಿಗೆ ಹೇಳಿಕೊಂಡಿದ್ದರೋ ಅವರೆಲ್ಲರೂ ತಮ್ಮ ಕಿವಿಗಳೇ ನಿನ್ನೆಯ ದಿನ ತಪ್ಪಾಗಿ ಕೇಳಿಸಿಕೊಂಡಿರಬೇಕು ಎಂಬ ಭ್ರಮೆ ಮೂಡುವಂತೆ ಮಾಡುತ್ತಾರೆ. ‘ಇವರ ಸ್ಟೇಟಸ್ಸೇ ಒಂದು, ಇವರಿರುವ ರೀತಿಯೇ ಒಂದು’ ಎಂದು ಆಡಿಕೊಳ್ಳುವವರಿಗೂ ಕಡಮೆಯೇನಿಲ್ಲ. ಅಂತೂ ಈ ಮೂಲಕ ಬದುಕು ಎನ್ನುವುದು ತಾವು ಬದುಕುವುದಕ್ಕಿಂತ ಇತರರು ನೋಡಲಿ ಎಂಬ ನಾಟಕವಾಗಿ ಬದಲಾಗಿರುವುದರಲ್ಲಿ ಸಂಶಯವೇ ಇಲ್ಲ. ನಮಗಾಗಿ ನಾವು ನಮ್ಮ ಜೀವನವನ್ನು ಸಂಭ್ರಮಿಸಬೇಕು ಎಂಬುದಕ್ಕಿಂತಲೂ ನಾವು ಈ ಜಗತ್ತಿನಲ್ಲಿ ಅತ್ಯಂತ ಸುಖಿಗಳು ಎಂದು ಇತರರು ಭ್ರಮಿಸಲಿ ಎಂದು ಬದುಕುತ್ತಿರುವವರ ಸಂಖ್ಯೆಯೇ ಹೆಚ್ಚಿದೆ.
ವಾಸ್ತುತಜ್ಞರಾಗಿರುವ ನಮ್ಮ ಸ್ನೇಹಿತರೊಬ್ಬರು ಇತ್ತೀಚೆಗೆ ಮನೆಗೆ ಬಂದಿದ್ದರು. ತಮ್ಮ ಹಲವು ಅನುಭವಗಳನ್ನು ಹಂಚಿಕೊಳ್ಳುತ್ತ, ಮನಸ್ಸಿನಲ್ಲಿರುವ ನಂಬಿಕೆಗಳು ಬದುಕನ್ನು ಶಾಂತವಾಗಿರಿಸುವುದಕ್ಕೆ ಅಥವಾ ಮನೆಯೊಳಗೆ ಅಲ್ಲೋಲಕಲ್ಲೋಲಗಳನ್ನು ಸೃಷ್ಟಿಸುವುದಕ್ಕೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ವಿವರಿಸುತ್ತಿದ್ದರು. ಕೆಲವು ಸಮಯದ ಹಿಂದೆ ಅವರನ್ನು ದಂಪತಿಗಳಿಬ್ಬರು ತಮ್ಮ ಮನೆಗೆ ಬರಮಾಡಿಕೊಂಡಿದ್ದರಂತೆ. ತಮ್ಮ ಮನೆಯಲ್ಲಿ ಎದುರಾಗುತ್ತಿರುವ ಕೆಲವು ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಕೋರಿದ ಬಳಿಕ ಮತ್ತೊಂದು ಗಹನವಾದ ಸಮಸ್ಯೆಯನ್ನು ಮುಂದಿಟ್ಟರಂತೆ. ಅದೇನೆಂದರೆ ಗಂಡಹೆಂಡಿರ ಜಗಳ! ಇವರು ನಗುತ್ತ್ತ ‘ಅದಕ್ಕೇನಾದರೂ ಪರಿಹಾರ ನಿಮಗೆ ದೊರೆತಲ್ಲಿ ನನಗೂ ಹೇಳಿ’ ಎಂದು ಪಕ್ಕದಲ್ಲೇ ಇದ್ದ ತಮ್ಮ ಪತ್ನಿಯತ್ತ ಕಣ್ಣುಮಿಟುಕಿಸಿ ನಕ್ಕು ಸಮಸ್ಯೆಯನ್ನು ಹಗುರವಾಗಿಸಿದರಂತೆ!
ಇದರ ಕುರಿತು ಯೋಚನೆ ಮಾಡಹೊರಟರೆ ಎಲ್ಲರ ಮನೆಯ ದೋಸೆಯೂ ತೂತು ಎಂಬಲ್ಲಿಂದ ತೊಡಗಿ ಗಂಡಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆಗಳವರೆಗೆ ಎಲ್ಲವೂ ನೆನಪಾಗುತ್ತವೆ. ಸಣ್ಣಪುಟ್ಟ ಜಗಳಗಳು, ಭಿನ್ನಾಭಿಪ್ರಾಯಗಳು ಇಲ್ಲದ ಮನೆಗಳಿರುವುದಕ್ಕೆ ಸಾಧ್ಯವೇ ಇಲ್ಲ. ಮನುಷ್ಯರೆಂದೇನು, ನಮ್ಮ ದೇವರುಗಳ ಹೆಂಡತಿಯರಾದರೂ ತಮ್ಮ ಗಂಡಂದಿರಲ್ಲಿ ಜಗಳವಾಡದೆ ಉಳಿದವರಲ್ಲ ತಾನೇ? ಲೋಕದ ಹಿತವನ್ನು ಕಾಯಬೇಕಾದ ದೇವರುಗಳೆಲ್ಲ ತಮ್ಮತಮ್ಮ ಸುಖಸಂತೋಷಗಳಲ್ಲಿ ನೆಮ್ಮದಿಯಾಗಿರುವುದನ್ನು ಕಂಡ ಕೊನೆಯದಾಗಿ ವೈಕುಂಠಕ್ಕೆ ಹೋದಾಗ ಅಲ್ಲಿಯೂ ಶ್ರೀಮನ್ನಾರಾಯಣನು ಯೋಗನಿದ್ರೆಯಲ್ಲಿ ಇದ್ದುದನ್ನು ಕಂಡು ಭೃಗುಮಹರ್ಷಿಗಳು ವಿಷ್ಣುವಿನ ಎದೆಗೆ ಒದೆಯುತ್ತಾರೆ. ಪರಿಣಾಮವಾಗಿ ಮುಂದೇನಾಯಿತು ಎನ್ನುವುದಕ್ಕಿಂತಲೂ ತನ್ನ ಆವಾಸಸ್ಥಾನವಾದ ವಿಷ್ಣುವಿನ ವಕ್ಷಸ್ಥಲವನ್ನು ಒದ್ದ ಋಷಿಯನ್ನು ಶಿಕ್ಷಿಸುವುದರ ಬದಲು ಉಪಚರಿಸಿದ ಪತಿಯ ಮೇಲೆ ಮುನಿದ ಲಕ್ಷ್ಮಿದೇವಿ ವೈಕುಂಠವನ್ನು ತೊರೆದ ಕಾರಣಕ್ಕೆ ಶ್ರೀನಿವಾಸನಾಗಿ ಶ್ರೀಮನ್ನಾರಾಯಣ ಭುವಿಗೆ ಅವತರಿಸುವಂತಾಯಿತು. ರುಕ್ಮಿಣಿ ಸತ್ಯಭಾಮೆಯರು ಕೃಷ್ಣನಲ್ಲಿ ಮುನಿಯದೇ ಇದ್ದಿದ್ದರೆ ಬಹುಶಃ ನರಕಾಸುರನ ವಧೆಯಾಗಲಿ, ರತಿಮನ್ಮಥರ (ಪ್ರದ್ಯುಮ್ನ) ಕಲ್ಯಾಣವಾಗಲಿ ಆಗುವುದು ಸಾಧ್ಯವೇ ಇರಲಿಲ್ಲ. ಹೆಂಡತಿಯ ಕೋಪವೆಂದರೆ ಮತ್ತೆ ಸಾಮಾನ್ಯವೇನೂ ಅಲ್ಲತಾನೇ! ಆದರೆ ದೇವರ ನಡೆಗಳು ಭೂಮಿಯ ಮೇಲೆ ವಿಸ್ಮಯಗಳನ್ನು ಸೃಷ್ಟಿಸಿದರೆ ವರ್ತಮಾನದ ಜಗಳಗಳು ವಿಚ್ಛೇದನಕ್ಕೆ ನೆಪವಾಗುತ್ತಿವೆ ಎಂಬುದು ವಾಸ್ತವ.
ಕೆಲವು ವರ್ಷಗಳ ಹಿಂದೆ ನನ್ನೋರ್ವ ಸಹೋದ್ಯೋಗಿ ಪ್ರತಿನಿತ್ಯವೂ ಎಂಬಂತೆ ತನ್ನ ಪತಿಯಲ್ಲಿ ಜಗಳವಾದ ಕತೆಯನ್ನು ಮರುದಿನ ಹೇಳಿಕೊಂಡು ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದರು. ಅತ್ತೆಯ ಕಾರಣದಿಂದ ಉಂಟಾಗುವ ಜಗಳ ಮಿತಿಮೀರಿತ್ತು. ಈಕೆ ತನ್ನ ಸೋದರಮಾವನಿಗೆ ಕರೆಮಾಡಿ (ಮದುವೆ ಮಾಡಿಸಿದ ಪುಣ್ಯಾತ್ಮ ಅವರೇ!) ತನಗೆ ವಿಚ್ಚೇದನ ಕೊಡಿಸಿಬಿಡಿ ಎನ್ನುತ್ತಿದ್ದರು. ಅಲ್ಲೇ ಸುತ್ತಲಿರುತ್ತಿದ್ದ ಇತರ ಸಹೋದ್ಯೋಗಿಗಳು ಬುದ್ಧಿ ಹೇಳುತ್ತಿದ್ದೆವು – ಮಗಳ ಭವಿಷ್ಯ ಮುಖ್ಯ, ದುಡುಕಬೇಡಿ ಎಂದು. ಏಕೆಂದರೆ ಜಗಳದಲ್ಲಿ ಪ್ರಧಾನಪಾತ್ರ ಯಾವತ್ತೂ ಇವರದ್ದೇ ಆಗಿರುತ್ತಿದ್ದ ಬಗ್ಗೆ ಎಲ್ಲರಿಗೂ ಅನುಮಾನವಿತ್ತು. ಮನಸ್ಸು ಸೂಕ್ಷ್ಮವೇ ಆದರೂ ಮಾತು ಒರಟು, ಜೋರು ಸ್ವರ. ಮಾತೆತ್ತಿದರೆ ವಿಚ್ಚೇದನದ ತಪಸ್ಸು… ಅವರನ್ನು ಅರ್ಥ ಮಾಡಿಕೊಳ್ಳುವುದೇ ನಮಗೆ ಕಷ್ಟವಾಗಿತ್ತು. ಅಂತೂ ಈಗ ತಮ್ಮೆಲ್ಲ ವೈಮನಸ್ಯಗಳನ್ನು ಮರೆತು ಚೆನ್ನಾಗಿದ್ದಾರೆ, ಮಗಳು ಚೆನ್ನಾಗಿ ಓದುತ್ತಿದ್ದಾಳೆ ಅಲ್ಲಿಗೆ ಸುಖಾಂತ್ಯವೇ.
ಗಂಡಹೆಂಡತಿಯರ ನಡುವೆ ಜಗಳಗಳಾದಾಗ ‘ಇದೇ ಕೊನೆ, ಇನ್ನು ಈ ಸಂಬಂಧ ಉಳಿಸುವುದರಲ್ಲಿ ಅರ್ಥವೇ ಇಲ್ಲ’ ಎಂಬಂಥ ಮಾತುಗಳನ್ನಾಡಿದ ಅನೇಕ ಮಂದಿ ಮರುದಿನ ಬೆಳಗಾದರೆ ‘ಮೈ ಸ್ವೀಟ್ ಹಬ್ಬೀ’ ಎಂದೋ ‘ಲವ್ ಯು ವೈಫೀ’ ಎಂದೋ ಸ್ಟೇಟಸ್ ಹಾಕಿಕೊಂಡು, ಇವರು ತಮ್ಮ ಜಗಳಗಳ ಕುರಿತು ಯಾವೆಲ್ಲ ಸ್ನೇಹಿತರಿಗೆ ಹೇಳಿಕೊಂಡಿದ್ದರೋ ಅವರೆಲ್ಲರೂ ತಮ್ಮ ಕಿವಿಗಳೇ ನಿನ್ನೆಯ ದಿನ ತಪ್ಪಾಗಿ ಕೇಳಿಸಿಕೊಂಡಿರಬೇಕು ಎಂಬ ಭ್ರಮೆ ಮೂಡುವಂತೆ ಮಾಡುತ್ತಾರೆ. ‘ಇವರ ಸ್ಟೇಟಸ್ಸೇ ಒಂದು, ಇವರಿರುವ ರೀತಿಯೇ ಒಂದು’ ಎಂದು ಆಡಿಕೊಳ್ಳುವವರಿಗೂ ಕಡಮೆಯೇನಿಲ್ಲ. ಅಂತೂ ಈ ಮೂಲಕ ಬದುಕು ಎನ್ನುವುದು ತಾವು ಬದುಕುವುದಕ್ಕಿಂತ ಇತರರು ನೋಡಲಿ ಎಂಬ ನಾಟಕವಾಗಿ ಬದಲಾಗಿರುವುದರಲ್ಲಿ ಸಂಶಯವೇ ಇಲ್ಲ. ನಮಗಾಗಿ ನಾವು ನಮ್ಮ ಜೀವನವನ್ನು ಸಂಭ್ರಮಿಸಬೇಕು ಎಂಬುದಕ್ಕಿಂತಲೂ ನಾವು ಈ ಜಗತ್ತಿನಲ್ಲಿ ಅತ್ಯಂತ ಸುಖಿಗಳು ಎಂದು ಇತರರು ಭ್ರಮಿಸಲಿ ಎಂದು ಬದುಕುತ್ತಿರುವವರ ಸಂಖ್ಯೆಯೇ ಹೆಚ್ಚಿದೆ.
ಮನೆಯಲ್ಲಿ ಪತಿಪತ್ನಿಯರಿಬ್ಬರೂ ಹೊರಗೆ ದುಡಿಯುವವರೇ ಆದಾಗ ಸಂಸಾರಗಳು ‘ಹಾಯ್-ಬಾಯ್’ ಸಂಸಾರಗಳಾಗದಂತೆ ಇಬ್ಬರೂ ಎಚ್ಚರವಹಿಸಬೇಕಿದೆ. ನಮ್ಮ ಬದುಕಿನ ರೀತಿನೀತಿಗಳು, ಒತ್ತಡಗಳು ಅದೇನೇ ಇದ್ದರೂ ಸಮರ್ಪಕವಾಗಿ ನಿಭಾಯಿಸದೆ ಹೋದರೆ ಅದರ ಪರಿಣಾಮ ತಟ್ಟುವುದು ನಮ್ಮ ಮಕ್ಕಳ ಮೇಲೆ ಎಂಬ ಪ್ರಜ್ಞೆ ಗಂಡಹೆಂಡತಿಯರಿಗಿದ್ದರೆ ಮನೆಯೊಳಗೆ ಬೀಸುವ ಗಾಳಿ ಶಾಂತವಾಗಿಯೇ ಇರುತ್ತದೆ. ಅದರ ಹೊರತು ಎಲ್ಲವೂ ತನ್ನ ಮೂಗಿನ ನೇರಕ್ಕೆ ಎಂಬ ನಿಲುವಿಗೆ ಬಂದರೆ ಮನೆಯೊಳಗೆ ಬಿರುಗಾಳಿ ಚಂಡಮಾರುತ ಎಲ್ಲವೂ ಮೈದಾಳುತ್ತವೆ. ಇಂದಿನ ಸಂದಿಗ್ಧವೆಂದರೆ ದುಡಿದು ಮನೆಗೆ ಬಂದಾಗ ಇಬ್ಬರಿಗೂ ಅಕ್ಕರೆಯಿಂದ ಒಂದು ಕಪ್ ಚಹ ಬೇಕಿರುತ್ತದೆ. ಇಬ್ಬರಲ್ಲೊಬ್ಬರು ಮೊದಲು ಬಂದರೆ ಅವರು ತಮಗಾಗಿ ಕದ ತೆರೆಯಲಿ ಎಂದೋ, ಚಹಾ ಮಾಡಲಿ ಎಂದೋ ಅಂದುಕೊಳ್ಳುವುದು ಮನುಷ್ಯ ಸ್ವಭಾವ ಸಹಜವೇ ಅಲ್ಲವೇ? ಅಲ್ಲಿ ಹೆಂಡತಿಯೇ ಮಾಡಲಿ ಎಂದಾಗಲಿ, ಗಂಡನೇ ಮಾಡಲಿ ಎಂದಾಗಲಿ ವಾಗ್ವಾದ ಮೊದಲುಗೊಂಡರೆ ಸುಂದರ ಸಂಜೆಯೊಂದು ವ್ಯರ್ಥವಾಗುತ್ತದೆ ಮಾತ್ರವಲ್ಲ, ನಾಶವಾಗುತ್ತದೆ. ಬಹುಶಃ ಮನೆಯಲ್ಲಿ ಮಕ್ಕಳನ್ನು ಸಾಕಿದ್ದಕ್ಕಿಂತ ಹೆಚ್ಚು ನಾವು ನಮ್ಮ ನಮ್ಮ ಅಹಂ ಅನ್ನು ಸಾಕುತ್ತಿದ್ದೇವೆಯೋ ಎನ್ನುವಂಥ ಪರಿಸ್ಥಿತಿ ನಮ್ಮ ಸುತ್ತಮುತ್ತಲಿರುವುದು ಸುಳ್ಳಲ್ಲ ತಾನೇ?
ಎಲ್ಲ ಸಮಸ್ಯೆಗಳಿಗೂ ಮೂಲವೆನ್ನುವಂತೆ ಮೊಬೈಲ್ ನಿಂತಿದೆ. ಪರಸ್ಪರ ಸಂವಹನ ನಡೆಸುವುದಕ್ಕಾಗಿ ಆವಿಷ್ಕಾರಗೊಂಡ ಸಾಧನವೊಂದು ಮನೆಯೊಳಗಿನ ಬಂಧಗಳನ್ನು ತನ್ನ ತಪ್ಪಿಲ್ಲದೆಯೂ ಮುರಿಯುತ್ತಿದೆ. ಪರಸ್ಪರರಿಗೆ ಕೊಡಬಹುದಾದ ಸಮಯವನ್ನು ಮೊಬೈಲ್ ಪೂರ್ತಿಯಾಗಿ ತನ್ನದಾಗಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳು, ಅದರಲ್ಲಿನ ಸಂದೇಶಗಳು, ವಿಡಿಯೋಗಳು ಕೊಡುವಂಥ ಖುಷಿಯನ್ನು ಪತಿಪತ್ನಿಯರು ಪರಸ್ಪರ ಮಾತುಕತೆಗಳಲ್ಲಿ ಪಡೆಯುವುದು ಸಾಧ್ಯವಿಲ್ಲ ಎಂಬಂತಾಗಿದೆ. ಬದುಕನ್ನು ಕಸಿಯುವ ಮೊಬೈಲನ್ನು ಎಲ್ಲಿಡಬೇಕೋ ಅಲ್ಲಿಡದೆ ಹೋದರೆ ಜೀವನದುದ್ದಕ್ಕೂ ಸಾಗಬೇಕಾದ ಹೆಜ್ಜೆಗಳು ಒಂಟಿ ಹೆಜ್ಜೆಯಷ್ಟೇ ಆದೀತು. ದುಡಿದು, ದಣಿದು ಬರುವ ಜೀವಗಳಿಗೆ ಪರಸ್ಪರ ಅಕ್ಕರೆಯ ಸಣ್ಣದೊಂದು ನೇವರಿಕೆ ಕೊಡುವಷ್ಟು ನೆಮ್ಮದಿಯನ್ನು ಮೊಬೈಲ್ ಕೊಡುವುದು ಸಾಧ್ಯವಿಲ್ಲವಲ್ಲ?
ಬಹುಶಃ ನಾವು ಕಲಿಯಬೇಕಿರುವುದು, ಮಕ್ಕಳಿಗೆ ಕಲಿಸಬೇಕಿರುವುದು ಬಹಳಷ್ಟಿವೆ. ನಮಗಾಗಿ ನಾವು ಸಮಯವನ್ನು ಹೊಂದಿಸಿಕೊಳ್ಳಲೇಬೇಕು. ಬದುಕು ಕಾಯುವುದಿಲ್ಲ. ಬದಲಾಗುತ್ತದೆ ಅಷ್ಟೇ. ದುಡಿಮೆಯಷ್ಟೇ ಜೀವನವಲ್ಲ. ‘ಹಿಂದೆ ಗಂಡಹೆಂಡತಿ ಬದುಕಲೇ ಇಲ್ವಾ?’ ಎನ್ನುವ ಪ್ರಶ್ನೆಯನ್ನೇ ಇದಕ್ಕೆ ಉತ್ತರವಾಗಿ ಆಡುವವರಿದ್ದಾರೆ. ಆದರೆ ಹಿಂದೆ ಕೂಡುಕುಟುಂಬಗಳಲ್ಲಿ ಮನೆಮಂದಿಯ ಸಂಖ್ಯೆ ದೊಡ್ಡದಿತ್ತು. ಮಾತಾಡುವುದಕ್ಕೆ, ಕೇಳಿಸಿಕೊಳ್ಳುವುದಕ್ಕೆ ಓರಗೆಯವರು ಇದ್ದೇ ಇರುತ್ತಿದ್ದರು. ಟಿ.ವಿ., ಮೊಬೈಲುಗಳ ಉಪಟಳವಿಲ್ಲದಿದ್ದುದರಿಂದ ಮನೆಮಂದಿಯ ನಡುವೆ ಸಂವಹನಕ್ಕೆ ಅವಕಾಶವಿತ್ತು. ಇಂದು ಗಂಡ-ಹೆಂಡತಿ ಒಂದು ಮಗುವಷ್ಟೇ ಇರುವ ಮನೆಗಳಲ್ಲಿ ಮೂರು ಮಂದಿ ಮೂರು ಮೊಬೈಲ್ ಹಿಡಿದು ಕುಳಿತರೆ ಮನೆಯೊಳಗಿನ ಬಂಧ ಬಹಳ ಸುಲಭವಾಗಿ ಕಳಚಿಕೊಳ್ಳುತ್ತದೆ. ಪರಸ್ಪರರಿಗೆ ಸಮಯ ಕೊಡುವುದು ಇಂದಿನ ಬದುಕಿನ ಅನಿವಾರ್ಯ. ಊಟಕ್ಕೆ ಕುಳಿತುಕೊಳ್ಳುವಾಗ ಅನ್ನದ ಜತೆಗೆ ಪ್ರೀತಿಯನ್ನೂ ಉಣ್ಣಬೇಕೆಂದರೆ ಮೊಬೈಲನ್ನು ಬದಿಗಿಡುವುದು ಅನಿವಾರ್ಯ. ಮೊಬೈಲ್ ಕೆಟ್ಟರೆ ಸರಿಪಡಿಸಿಕೊಳ್ಳಬಹುದು, ಬದಲಿಸಬಹುದು ಆದರೆ ಸಂಬಂಧಗಳು ಹಳಸಿದರೆ ಮತ್ತೆ ಮೊದಲಿನಂತಾಗುವುದಿಲ್ಲ. ಹೊಸದು ತರಲಾಗುವುದೂ ಇಲ್ಲ. ಮಲಗುವುದಕ್ಕಿಂತ ಮೊದಲು ಪರಸ್ಪರ ಹಿತನುಡಿಗಳನ್ನು, ಮೆಲುನುಡಿಗಳನ್ನು ಆಡಿಕೊಂಡರೆ ಸಾಕು, ಬದುಕು ಹಸಿರಾಗಿರುತ್ತದೆ. ಅಲ್ಲಿಗೂ ಮೊಬೈಲ್ ಆಕ್ರಮಿಸಿದರೆ ಹತ್ತಿರವೇ ಇರುವ ಶರೀರಗಳೊಳಗಿನ ಮನಸ್ಸುಗಳು ನೂರಾರು ಯೋಜನ ದೂರ, ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ ಎಂಬುದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು.
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ/ ಅರಿತೆವೇನು ನಾವು ನಮ್ಮ ಅಂತರಾಳವ.. ಎಂದುಕೊಂಡು ಬಾಳುವುದಕ್ಕಿಂತ, ಅರಿತುಕೊಳ್ಳುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆಯೇ ಎಂಬುದೇ ಹೆಚ್ಚು ಮುಖ್ಯವಾಗುತ್ತದೆ. ಎಲ್ಲವೂ ಒಂದು ನೆಲೆಗೆ ತಲಪಿದ ಬಳಿಕವಷ್ಟೇ ಬದುಕಿನ ಸಂಭ್ರಮವನ್ನು ಅನುಭವಿಸುತ್ತೇವೆಂದುಕೊಂಡರೆ ನಮಗಿಂತ ಮೂರ್ಖರು ಯಾರೂ ಇರುವುದಿಲ್ಲ. ಅಷ್ಟಕ್ಕೂ ಸೊಗಸಿರುವುದು ಪಯಣದಲ್ಲಿಯೇ ಹೊರತು, ತಲಪಿದ ಗುರಿಯಲ್ಲಲ್ಲ. ಗಂಡ-ಹೆಂಡತಿಯರ ಬಂಧಕ್ಕಂತೂ ಇದು ಹೆಚ್ಚು ಅರ್ಥಪೂರ್ಣವೆನಿಸುತ್ತದೆ.
ಮನದ ವಾಸ್ತು ಬದಲಿಸಿದರೆ ಬದುಕಿನ ವಾಸ್ತುವೂ ಬದಲಾದೀತು ಎಂಬುದು ವಾಸ್ತುತಜ್ಞರೇ ಹೇಳಿದ ಮಾತು!