ಪಾಂಡವರನ್ನು ನಾಶಮಾಡುವ ಅಪ್ಪನ ಉದ್ದೇಶ ಫಲಿಸಲಿಲ್ಲ. ಹಿರಿಯರ ಒತ್ತಾಯದಿಂದಾಗಿ ಇಂದ್ರಪ್ರಸ್ಥವನ್ನು ಪಾಂಡವರ ಪಾಲಿಗೆ ಬಿಟ್ಟುಕೊಡಲೇಬೇಕಾಯಿತು. ಇದರಿಂದ ಕುರು-ಪಾಂಡವರ ನಡುವೆ ದ್ವೇಷ ತಗ್ಗಿ, ಸ್ವಲ್ಪ ಸುಹೃತ್ ಭಾವ ಉಂಟಾಯಿತು. ಆದರೂ ರಾಜ್ಯಾಧಿಕಾರಕ್ಕಾಗಿ ದಾಯಾದಿಗಳ ಕೊಲೆಗೆ ಹೇಸದ ಮನಸ್ಸು ಅಪ್ಪನದು ಎಂಬ ಅರಿವು ನನ್ನಲ್ಲಿ ಏನೋ ಒಂದು ವಿಚಿತ್ರ ಪರಿವರ್ತನೆಗೆ ನಾಂದಿಯಾಯಿತು. ಅಪ್ಪನಿಗೆ ಹೋಲಿಸಿದರೆ ದೊಡ್ಡಪ್ಪ ಯುಧಿಷ್ಠಿರನಾಗಲಿ ಅಥವಾ ಉಳಿದ ಪಾಂಡವರಾಗಲಿ ಸಜ್ಜನರು ಎಂದು ಕಾಣುತ್ತಿತ್ತು. ಮಗಳಾದ ನನಗೇ ಹೀಗೆ ಅನಿಸಬೇಕಾದರೆ ಜನರಿಗೆ ಹೇಗೆ ತೋರಬೇಡ?
ನನ್ನ ಹೆಸರು ಲಕ್ಷಣಾ. ಲಕ್ಷಣಾ ಅಂದರೆ ಸುಂದರಿ ಎಂದು ಅರ್ಥವಂತೆ. ಹೆಸರಿಗೆ ತಕ್ಕಂತೆ ಲಕ್ಷಣವಾಗಿಯೆ ಇದ್ದೇನೆ ಎನ್ನುತ್ತಾರೆ, ನನ್ನ ಸಖಿಯರು. ಇರಬಹುದು. ಅದು ಕೇವಲ ನನ್ನನ್ನು ಮೆಚ್ಚಿಸುವುದಕ್ಕಾಗಿ ಹೇಳುವುದಲ್ಲ. ಏಕೆಂದರೆ ಕನ್ನಡಿಯ ಎದುರು ನಿಂತರೆ ನನ್ನ ರೂಪ ನನಗೆ ಕಾಣಿಸುವುದಿಲ್ಲವೆ? ನನ್ನದೇ ಹೆಸರಿನ ಅಣ್ಣನೂ ನನಗಿದ್ದಾನೆ, ಲಕ್ಷಣ ಕುಮಾರ.
ಇರಲಿ, ಲೋಕದ ದೃಷ್ಟಿಯಲ್ಲಿ ಬಹು ಭಾಗ್ಯವಂತೆ ನಾನು. ಹಸ್ತಿನಾವತಿಯ ಭಾವೀ ಚಕ್ರವರ್ತಿಯ ಮಗಳು. ಅಭಿಷೇಕವಾಗದಿದ್ದರೂ ಪ್ರಭುವಾಗಿ ಆಳುತ್ತಿರುವವನು ನನ್ನ ಅಪ್ಪ ದುರ್ಯೋಧನ. ಹೆಸರಿಗೆ ನನ್ನ ಅಜ್ಜ ಧೃತರಾಷ್ಟ್ರ ಅಧಿರಾಜನಾದರೂ ಆಳ್ವಿಕೆ ನನ್ನ ಅಪ್ಪನದೇ. ಹೀಗಾಗಿ ಅರಮನೆಯ ಪರಿಜನರೂ, ಹಸ್ತಿನಾವತಿಯ ಪುರಜನರೂ ನನ್ನನ್ನು ರಾಜಕುಮಾರಿ ಎಂದೇ ಗುರುತಿಸುತ್ತಾರೆ. ನಾನೂ ಹಾಗೆಯೆ ನನ್ನನ್ನು ತಿಳಿದುಕೊಂಡವಳು. ರಾಜಕನ್ಯೆಯಾದವಳಿಗೆ ಸುಖವಾಗಿರುವುದಕ್ಕೆ ಏನೆಲ್ಲ ಇರಬೇಕೋ ಅದೆಲ್ಲ ನನಗೆ ಹೆಚ್ಚೇ ಎನಿಸುವಷ್ಟು ಇದೆ. ತಂದೆತಾಯಿಗಳಿಗೆ ನನ್ನ ಕುರಿತು ತುಂಬ ಅಕ್ಕರೆ. ಪ್ರತಿಯೊಂದು ಕೆಲಸಕ್ಕೂ ದಾಸದಾಸಿಯರು. ನಿತ್ಯ ಅಲಂಕರಿಸಿಕೊಳ್ಳುವುದು, ಅರಮನೆಯಲ್ಲಿ ಅಥವಾ ಉದ್ಯಾನದಲ್ಲಿ ಅಡ್ಡಾಡುವುದು, ಸಖಿಯರ ಜತೆ ಲಘು ಮಾತು ಇವನ್ನು ಬಿಟ್ಟರೆ ಬೇರೇನಿದೆ? ನಾನು ಎಂದಲ್ಲ, ಬಹುಮಂದಿ ರಾಜಕುಮಾರಿಯರ ಕಥೆಯೂ ಇಷ್ಟೇ.
ಎಳವೆಯಲ್ಲಿ ಒಂದಿಷ್ಟು ಅಕ್ಷರಾಭ್ಯಾಸ, ಲಲಿತಕಲಾಭ್ಯಾಸ ಆಗಿತ್ತು. ಸ್ವಲ್ಪ ಯುದ್ಧವಿದ್ಯೆ, ರಥ, ಅಶ್ವಗಳ ಚಾಲನೆ ಇತ್ಯಾದಿ ಅಭ್ಯಾಸವೂ ಆಗಿತ್ತು. ಆ ದಿನಗಳಲ್ಲಿ ಏನೋ ಒಂದಿಷ್ಟು ಸ್ವಾರಸ್ಯವಿತ್ತು. ಆದರೆ ತಾರುಣ್ಯ ಬಂದ ಬಳಿಕ ಪರೋಕ್ಷ ಬಂಧನವೇ. ಈ ಬಂಧನಕ್ಕೆ ಕಾರಣವಾದ ಪಂಜರವು ಬಂಗಾರದ್ದು ಎಂಬುದನ್ನು ಬಿಟ್ಟರೆ, ಸೆರೆಮನೆಗೂ ಅರಮನೆಗೂ ಬಹಳ ವ್ಯತ್ಯಾಸವೇನೂ ಇರಲಿಲ್ಲ. ಹಾಗೆಂದು ಹೊರಗಿನ ಪ್ರಪಂಚದ ತಿಳಿವಳಿಕೆ ಏನೇನೂ ಇರಲಿಲ್ಲ ಎಂದರ್ಥವಲ್ಲ. ಅಷ್ಟೋ ಇಷ್ಟೋ ವಿಚಾರಗಳು ನನಗೂ ಗೊತ್ತಿದ್ದವು. ನನ್ನ ಸಖಿಯರು ಹೊರಗಿನ ವಿಶಾಲ ಪ್ರಪಂಚದ ವರ್ತಮಾನವನ್ನು ನನಗೆ ತಿಳಿಸುತ್ತಿದ್ದರು. ಅವರ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರು. ಅಷ್ಟಲ್ಲದೆ ನನ್ನ ಅಪ್ಪನ ಆಪ್ತರು ಬಂದಾಗ ಅಥವಾ ಅಪ್ಪನೇ ಅಂತಹವರನ್ನು ಕರೆಸಿಕೊಂಡಾಗ, ಅವರೆಲ್ಲ ಅರಮನೆಯ ಒಳಓವರಿಯಲ್ಲಿ ಸೇರಿ ಸಮಾಲೋಚನೆ ಮಾಡುವುದಿತ್ತು. ಆಗ ಬೇಡವೆಂದರೂ ಅವರ ಮಾತುಗಳು ಕಿವಿಗೆ ಬೀಳುತ್ತಿದ್ದವು. ಅವುಗಳಿಂದ ರಾಜನೀತಿಯ ಹಲವು ಮುಖಗಳ ದರ್ಶನ ನನಗಾಗುತ್ತಿತ್ತು. ಅಲ್ಲದೆ ಸಹಜವಾಗಿ ನನ್ನಲ್ಲಿದ್ದ ಬುದ್ಧಿಶಕ್ತಿ ಅನೇಕ ವಿಚಾರಗಳನ್ನು ತರ್ಕಿಸಿ, ಊಹಿಸಿ ಗ್ರಹಿಸುವುದಕ್ಕೆ ಸಹಾಯಕವಾಗಿತ್ತು.
ಈ ತಿಳಿವಳಿಕೆಯ ಪರಿಣಾಮವಾಗಿ ನನ್ನ ತಂದೆ, ಚಿಕ್ಕಪ್ಪಂದಿರ ಕುರಿತು ಅದರ ಭಾವ ಬೆಳೆಯದೆ ಸ್ವಲ್ಪ ತಿರಸ್ಕಾರ ಹುಟ್ಟಿದ್ದರೂ ಇರಬಹುದು. ನಮ್ಮ ಪಾಂಡು ಅಜ್ಜನ ಮಕ್ಕಳಾದ ಪಾಂಡವರನ್ನು ನಮ್ಮಪ್ಪ ದ್ವೇಷಿಸುತ್ತಿದ್ದ. ದ್ವೇಷ ಮಾತ್ರವಲ್ಲ, ಅವರ ವಿನಾಶಕ್ಕೂ ಪ್ರಯತ್ನಿಸಿದ್ದ. ಒಳ ಓವರಿಯ ಮಂತ್ರಾಲೋಚನೆಯ ಸಂದರ್ಭದಲ್ಲಿ ಇದೆಲ್ಲ ನನ್ನ ಗಮನಕ್ಕೂ ಬಂದಿತ್ತು. ಪಾಂಡವರು ಧರ್ಮವಂತರಂತೆ. ಅವರಿಗೂ ಹಸ್ತಿನಾವತಿಯ ಸಿಂಹಾಸನದಲ್ಲಿ ಹಕ್ಕು ಇದೆಯಂತೆ. ಆದರೆ ನನ್ನ ಅಪ್ಪ ಅವರಿಗೆ ಪಾಲು ಕೊಡುವುದಕ್ಕೆ ಸಿದ್ಧನಿರಲಿಲ್ಲ. ಮಾತ್ರವಲ್ಲ, ಪಾಂಡವರನ್ನು ನಾಶ ಮಾಡುವುದಕ್ಕೂ ಪ್ರಯತ್ನ ಮಾಡುತ್ತಿದ್ದ. ಇದರಿಂದಾಗಿ ನನ್ನ ಅಪ್ಪನನ್ನು ದುಷ್ಟ ಎಂದೇ ಪ್ರಪಂಚ ಹೇಳುತ್ತಿತ್ತು. ನನಗೂ ಅದು ಸರಿ ಎಂದು ತೋರುತ್ತಿತ್ತು. ನನ್ನ ತಾಯಿ, ಭಾನುಮತಿಯಾದರೊ ಮೂಕವಾಗಿ ಇದನ್ನೆಲ್ಲ ನೋಡುತ್ತಿದ್ದಳೆ ಹೊರತು ಒಮ್ಮೆಯೂ ಬಾಯಿ ಬಿಟ್ಟು ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಿದವಳಲ್ಲ. ಕಾರಣ ಅಪ್ಪನ ದರ್ಪವೋ ಅಥವಾ ಅವಳ ಸ್ವಭಾವವೇ ಹಾಗೋ ಏನೋ.
ಪಾಂಡವರನ್ನು ನಾಶಮಾಡುವ ಅಪ್ಪನ ಉದ್ದೇಶ ಫಲಿಸಲಿಲ್ಲ. ಹಿರಿಯರ ಒತ್ತಾಯದಿಂದಾಗಿ ಇಂದ್ರಪ್ರಸ್ಥವನ್ನು ಪಾಂಡವರ ಪಾಲಿಗೆ ಬಿಟ್ಟುಕೊಡಲೇಬೇಕಾಯಿತು. ಇದರಿಂದ ಕುರು-ಪಾಂಡವರ ನಡುವೆ ದ್ವೇಷ ತಗ್ಗಿ, ಸ್ವಲ್ಪ ಸುಹೃತ್ ಭಾವ ಉಂಟಾಯಿತು. ಆದರೂ ರಾಜ್ಯಾಧಿಕಾರಕ್ಕಾಗಿ ದಾಯಾದಿಗಳ ಕೊಲೆಗೆ ಹೇಸದ ಮನಸ್ಸು ಅಪ್ಪನದು ಎಂಬ ಅರಿವು ನನ್ನಲ್ಲಿ ಏನೋ ಒಂದು ವಿಚಿತ್ರ ಪರಿವರ್ತನೆಗೆ ನಾಂದಿಯಾಯಿತು. ಅಪ್ಪನಿಗೆ ಹೋಲಿಸಿದರೆ ದೊಡ್ಡಪ್ಪ ಯುಧಿಷ್ಠಿರನಾಗಲಿ ಅಥವಾ ಉಳಿದ ಪಾಂಡವರಾಗಲಿ ಸಜ್ಜನರು ಎಂದು ಕಾಣುತ್ತಿತ್ತು. ಮಗಳಾದ ನನಗೇ ಹೀಗೆ ಅನಿಸಬೇಕಾದರೆ ಜನರಿಗೆ ಹೇಗೆ ತೋರಬೇಡ?
ನನಗೆ ಇದರಿಂದಾಗಿ ಹಸ್ತಿನಾವತಿಯ ಅರಮನೆ ಅಪ್ರಿಯವಾಗತೊಡಗಿತು. ಇಲ್ಲಿರುವುದು ಬೇಡ ಅನಿಸುತ್ತಿತ್ತು. ಹಾಗೆಂದು ಎಲ್ಲಿಗೆ ಹೋಗಲಿ? ಪಾಂಡವರ ಜತೆಗೆ ಇಂದ್ರಪ್ರಸ್ಥದಲ್ಲಿ ಇರಬಹುದಿತ್ತು. ಅಜ್ಜಿ ಕುಂತೀದೇವಿ ಮತ್ತು ದೊಡ್ಡಮ್ಮ ದ್ರೌಪದಿ ನನ್ನನ್ನು ವಾತ್ಸಲ್ಯದಿಂದ ಕಾಣುವವರೇ. ಆದರೆ ಅವರ ಜತೆಗೆ ಹೋಗುತ್ತೇನೆ ಎಂದರೆ ನನ್ನಪ್ಪ ಸಹಿಸಲಾರ ಎನ್ನುವ ಸತ್ಯ ನನಗೆ ಗೊತ್ತಿತ್ತು. ಪಾಂಡವರು ಇಲ್ಲಿಗೆ ಬಂದಿರುವುದು, ದಾಯಾದಿಗಳು ಪರಸ್ಪರ ಮಾತನಾಡುವುದು ಇತ್ತಾದರೂ ಅವರೆಂದೂ ನನ್ನಪ್ಪನಿಗೆ ಪ್ರಿಯರೆನಿಸುವುದು ಸಾಧ್ಯವೇ ಇರಲಿಲ್ಲ. ಹಾಗಾಗಿ ನಾನು ಅಲ್ಲಿಗೆ ಹೋಗುವುದು, ಅಲ್ಲಿ ಇರುವುದು ಅಶಕ್ಯವಾಗಿತ್ತು.
ತಾರುಣ್ಯ ಉದಿಸುತ್ತಿದ್ದಂತೆ ನನಗೆ ಇನ್ನೊಂದು ಬಿಡುಗಡೆಯ ದಾರಿ ಗೋಚರಿಸತೊಡಗಿತು. ಅದು ನನ್ನ ಮದುವೆ. ಮದುವೆಯಾದರೆ ಇಲ್ಲಿಂದ ಗಂಡನ ಮನೆಗೆ ಹೋಗಬೇಕಷ್ಟೆ? ಆಗ ಇಲ್ಲಿಂದ ಬಿಡುಗಡೆ ಆದೀತು. ಕೆಲವು ಕಾಲದ ಬಳಿಕ ಅದೂ ಅಶಕ್ಯವೇನೋ ಎಂದು ಕೂಡ ಅನಿಸಲಾರಂಭಿಸಿತು. ನಮ್ಮ ಅರಮನೆಯಲ್ಲಿ ಹೆಣ್ಣನ್ನು ಕೊಟ್ಟ ಬಳಿಕವೂ ಅವಳು ಇಲ್ಲೇ ಉಳಿಯುವ ದೃಷ್ಟಾಂತ ಕಣ್ಣೆದುರಿಗೆ ಇತ್ತಲ್ಲ. ನನ್ನ ಅತ್ತೆ ದುಶ್ಶಲೆ ಮದುವೆಯಾದದ್ದು ಸಿಂಧೂ ದೇಶದ ಜಯದ್ರಥನನ್ನು. ಮದುವೆಯಾದ ಮೇಲೆ ಅವಳು ಸಿಂಧೂದೇಶಕ್ಕೆ ಹೋಗುವುದಿರಲಿ, ಅವಳ ಗಂಡನೇ ಇಲ್ಲಿ ನೆಲೆಯೂರಿದ. ಒಂದು ವೇಳೆ ನನ್ನ ಮದುವೆಯಾದರೂ ನನ್ನ ಗಂಡನನ್ನೇ ಇಲ್ಲಿ ಉಳಿಸಿಕೊಂಡರೆ ಈ ಸೆರೆ ನನಗೆ ಶಾಶ್ವತವೇ. ಅಲ್ಲದೆ ತನ್ನ ಪರಮಸ್ನೇಹಿತನಾದ ಕರ್ಣನ ಮಕ್ಕಳಲ್ಲಿ ಒಬ್ಬನಿಗೆ ನನ್ನನ್ನು ಕೊಡುವ ಯೋಚನೆಯನ್ನು ಅಪ್ಪ ಮಾಡಿದರೆ? ಯಾಕೋ ಈ ಕರ್ಣನ ಕುರಿತು ನನ್ನಲ್ಲಿ ಅಭಿಮಾನ ಮೂಡಲೇ ಇಲ್ಲ. ಬಹುಶಃ ಅಪ್ಪನ ಕೆಟ್ಟ ಯೋಚನೆಗಳನ್ನು ಬೆಂಬಲಿಸುತ್ತಾನೆ ಎಂಬುದರಿಂದ ಇರಬಹುದು.
ಕರ್ಣ ಕ್ಷತ್ರಿಯನಲ್ಲ, ಸೂತಪುತ್ರ. ಕ್ಷತ್ರಿಯರಿಗೆ ಸಮಾನನಲ್ಲ, ನಿಜ. ಆದರೆ ನನಗೆ ಅವನು ಕುಲದ ನೆಲೆಯಲ್ಲಿ ಕೀಳೆಂದು ಕಂಡಿರಲಿಲ್ಲ. ಕ್ಷತ್ರಿಯರಂತೆ ಪರಾಕ್ರಮಿಯಾಗಿದ್ದ ಕರ್ಣ. ಆದರೆ ಅವನ ರೀತಿನೀತಿಗಳು ನನಗೆ ಸರಿಯೆಂದು ತೋರುತ್ತಿರಲಿಲ್ಲ. ನನ್ನ ಅಭಿಪ್ರಾಯ ಹೇಗಿದ್ದರೂ, ಸಂಬಂಧ ಬೆಳೆಸಬೇಕೆಂದು ಅಪ್ಪನಿಗೆ ಅನಿಸಿದರೆ ನನ್ನ ಮಾತಿಗೆ ಬೆಲೆ ಸಿಗಲಾರದು. ಅಲ್ಲದೆ ರಾಜನೀತಿಯಲ್ಲಿ ತನಗೆ ಲಾಭವಾಗುವುದಿದ್ದರೆ ಕುಲದ ಪ್ರಶ್ನೆ ಅಪ್ಪನಿಗೆ ಮುಖ್ಯವಾಗದು. ಹಾಗೇನಾದರೂ ಅಪ್ಪ ನಿರ್ಧರಿಸಿದರೆ ನನಗೆ ಇಲ್ಲಿಂದ ಬಿಡುಗಡೆಯೇ ಇಲ್ಲ. ಈ ಭೀತಿ ಆಗಾಗ ನನ್ನನ್ನು ಕಾಡುವುದಿತ್ತು. ಭಗವಂತ, ಹಾಗಾಗದಂತೆ ಮಾಡು ಎಂದು ಸದಾ ದೇವರಲ್ಲಿ ಮೊರೆಯಿಡುತ್ತಿದ್ದೆ. ವಯಸ್ಸಿಗೆ ಸಹಜವಾಗಿ ಪ್ರಿಯವೆನಿಸುವ ಮದುವೆಯ ಕಲ್ಪನೆ ಈ ಆತಂಕದಿಂದಾಗಿ ಅಪ್ರಿಯವೆನಿಸುತ್ತಿತ್ತು. ಯಾರೋ ದೂರ ದೇಶದ ರಾಜಪುತ್ರನ ಕೈಹಿಡಿದರೆ ಇಲ್ಲಿಂದ ಹೊರಹೋಗಬಹುದು ಎಂದು ತೋರಿದಾಗ ಅದೇ ಮದುವೆಯ ಯೋಚನೆ ಪ್ರಿಯವೆನಿಸುತ್ತಲೂ ಇತ್ತು. ಒಟ್ಟಿನಲ್ಲಿ ನಾನು ಸಂದಿಗ್ಧದಲ್ಲಿ ದಿನಕಳೆಯುತ್ತಿದ್ದೆ. ಅಮ್ಮನೇನೋ ಆಗೀಗ ನನ್ನ ಮದುವೆಯ ವಿಚಾರ ಪ್ರಸ್ತಾವಿಸುತ್ತಿದ್ದಳು. ಸಖಿಯರೂ ಅಂತಹ ವಿಚಾರವನ್ನೆತ್ತಿ ನನ್ನನ್ನು ಹಾಸ್ಯ ಮಾಡುತ್ತಿದ್ದರು. ಆದರೆ ಅಪ್ಪ ಮಾತ್ರ ರಾಜಕಾರಣದಲ್ಲಿ ಮುಳುಗಿದ್ದ. ಮನೆ ಅಥವಾ ಸಂಸಾರದ ಚಿಂತೆ ಸುಳಿಯದಷ್ಟು ಆಳವಾದ ರಾಜನೀತಿಯ ಸುಳಿ ಅದು.
ಈ ನಡುವೆ ಇಂದ್ರಪ್ರಸ್ಥದ ಸುದ್ದಿಗಳು ನಮ್ಮನ್ನು ತಲಪುತ್ತಿದ್ದವು. ಪಾಂಡವರು ಅಲ್ಲಿ ಬಹಳ ದೊಡ್ಡ ನಗರವನ್ನು ನಿರ್ಮಾಣ ಮಾಡಿದರಂತೆ, ವಿಸ್ತಾರವಾದ ರಾಜ್ಯವನ್ನು ಕಟ್ಟಿದ್ದಾರಂತೆ. ಬಹಳ ವೈಭವದಲ್ಲಿದ್ದಾರಂತೆ – ಹೀಗೆಲ್ಲ ಸುದ್ದಿಗಳು. ನಮ್ಮವರೇ ಅಲ್ಲವೆ ಪಾಂಡವರು? ಅವರ ಅಭ್ಯುದಯ ನಮಗೂ ಸಂತೋಷವನ್ನು ತರಬೇಡವೆ? ಹಸ್ತಿನಾವತಿಯಲ್ಲಿ ಹೆಚ್ಚಿನವರು ಹೀಗೆ ಯೋಚಿಸಿ ಸಂಭ್ರಮಿಸುತ್ತಿದ್ದರು. ಹಿರಿಯರಾದ ಮುತ್ತಜ್ಜ ಆಚಾರ್ಯ ಭೀಷ್ಮರು, ಗುರು ದ್ರೋಣರು, ಕೃಪರು, ಅಜ್ಜ ಧೃತರಾಷ್ಟ್ರ, ಅಜ್ಜಿ ಗಾಂಧಾರಿ – ಎಲ್ಲ ಹಿಗ್ಗುತ್ತಿದ್ದರು. ಅವರಂತೆ ಪುರಜನ, ಪರಿಜನ ಎಲ್ಲರೂ. ವಿರಳವಾಗಿ ಪಾಂಡವರು ಹಸ್ತಿನಾವತಿಗೆ ಬಂದರೆ ಅವರಲ್ಲಿ ಇದನ್ನೆಲ್ಲ ಕೇಳಿ, ಕೇಳಿ ತಿಳಿದುಕೊಳ್ಳುತ್ತಿದ್ದರು. ವಿವರಣೆಗಾಗಿ ಒತ್ತಾಯಿಸುತ್ತಿದ್ದರು. ಅಪ್ಪ ಮಾತ್ರ ಇದಕ್ಕೆಲ್ಲ ಹೆಚ್ಚು ಗಮನಕೊಡುತ್ತಿರಲಿಲ್ಲ. ತೀರ ಅನಿವಾರ್ಯವಾದ ಒಂದೆರಡು ಮಾತು ಮಾತ್ರ. ಪಾಂಡವರು ಇಲ್ಲಿದ್ದ ದಿನಗಳಲ್ಲಿ ಅವನು ಕರ್ಣ, ಶಕುನಿ ಅಜ್ಜ, ಜಯದ್ರಥ ಮಾವ ಮತ್ತೆ ಕೆಲವರ ಜತೆ ಹೆಚ್ಚು ಕಾಲ ಕಳೆಯುತ್ತಿದ್ದ. ಪಾಂಡವರನ್ನು ನೋಡುವುದನ್ನೂ ತಪ್ಪಿಸುತ್ತ ಇದ್ದ.
ಇಂತಹ ದಿನಗಳಲ್ಲೇ ಪಾಂಡವರ ಸುದ್ದಿಯ ಜೊತೆಜೊತೆಗೆ ಕೃಷ್ಣನ ಹೆಸರೂ ಕೇಳಿಬರುತ್ತಿತ್ತು. ಈ ಕೃಷ್ಣ ಅಂದರೆ ಯದುಕುಲದ ವಸುದೇವನ ಪುತ್ರ. ನಮಗೆ ಸಂಬಂಧಿಕನೇ. ಅಜ್ಜಿ ಕುಂತೀದೇವಿಯ ಸೋದರಳಿಯ. ಅಂದರೆ ನನಗೆ ಮಾವ. ಅಪ್ಪನಿಗೆ ಭಾವ. ಅಪ್ಪನಿಗೆ ಯಾದವರ ಜತೆ ಸ್ನೇಹವಿತ್ತು. ಅದರಲ್ಲೂ ಯದುವೀರನಾದ ಬಲರಾಮನ ಜತೆ ಹತ್ತಿರದ ಗೆಳೆತನ. ಆದರೆ ಕೃಷ್ಣನ ಕುರಿತು ಮಾತ್ರ ಅಸಹನೆ. ಅದಕ್ಕೆ ಹಿನ್ನೆಲೆಯೂ ಇತ್ತು. ಅಪ್ಪನಿಗೆ ಕೃಷ್ಣನ ತಂಗಿ ಸುಭದ್ರೆಯನ್ನು ಮದುವೆಯಾಗುವ ಆಸೆ ಇತ್ತಂತೆ. ಬಹಳ ಚಂದದ ಹೆಣ್ಣಂತೆ ಸುಭದ್ರೆ. ಅವಳನ್ನು ಅಪ್ಪನಿಗೆ ಕೊಡಬೇಕು ಅಂತ ಬಲರಾಮನೂ ಯೋಚಿಸಿದ್ದನಂತೆ. ಬಲರಾಮನ ಹೇಳಿಕೆಯೂ ಬಂದಿತ್ತಂತೆ. ಅದರಂತೆ ಅಪ್ಪ ದಿಬ್ಬಣ ಸಹಿತ ಹೊರಟು ದ್ವಾರಕೆಗೆ ತಲಪುವಾಗ ಮದುವೆಯ ಹೆಣ್ಣೇ ಕಣ್ಮರೆಯಾಗಿದ್ದಳಂತೆ. ಆಮೇಲೆ ಅದರ ಗುಟ್ಟು ಗೊತ್ತಾದದ್ದು. ಅವಳಿಗೆ ಅರ್ಜುನ ಚಿಕ್ಕಪ್ಪನ ಮೇಲೆ ಮೊದಲೇ ಪ್ರೇಮವಿತ್ತಂತೆ. ಅವನು ದ್ವಾರಕೆಯಿಂದ ಅವಳನ್ನು ಅಪಹರಿಸಿ ತಂದು ಇಂದ್ರಪ್ರಸ್ಥದಲ್ಲಿ ಮದುವೆಯಾದನಂತೆ. ಇದಕ್ಕೆ ಕೃಷ್ಣ ಮಾವನ ಪೂರ್ಣ ಬೆಂಬಲ ಇತ್ತಂತೆ. ಮೊದಲೇ ಅವಮಾನಿತನಾಗಿದ್ದ ನನ್ನಪ್ಪ. ಮದುವಣಿಗ ದಿಬ್ಬಣದಲ್ಲಿ ಹೋದವನು ಮದುವಣಗಿತ್ತಿಯೇ ಇಲ್ಲದೆ ಹಿಂದೆ ಬರುವುದು ಶೋಭೆಯೇ? ಆ ನೋವಿನ ಗಾಯದ ಮೇಲೇ ಈ ವರ್ತಮಾನ. ತನಗೆ ಕಂಡರಾಗದ ಅರ್ಜುನನನ್ನು ಸುಭದ್ರೆ ಮದುವೆಯಾದಳಲ್ಲ! ಇದನ್ನು ಕೇಳಿದ ಅಪ್ಪ ಕುದಿಯುತ್ತಿದ್ದ. ಅದರಿಂದಾಗಿ ಸುಭದ್ರೆಯ ಮದುವೆಗೆ ಸಹಾಯ ಮಾಡಿದ ಕೃಷ್ಣನ ಕುರಿತು ಅಸಹನೆ.
ಆದರೆ ಇಷ್ಟೆಲ್ಲ ಆದಾಗಲೂ ಅರಮನೆಯಲ್ಲಿ ಯಾರೂ ಗಂಭೀರವಾಗಿ ಅದನ್ನು ಪರಿಗಣಿಸಿದ ಹಾಗೆ ಕಾಣಲಿಲ್ಲ. ಯಾಕೆಂದರೆ ಕ್ಷತ್ರಿಯರಲ್ಲಿ ಹೀಗೆಲ್ಲ ಆಗುವುದು ಸಹಜವೇ ಇತ್ತು. ಯಾರಿಗೋ ನಿಶ್ಚಯವಾದ ಹೆಣ್ಣನ್ನು ಇನ್ಯಾರೋ ಮದುವೆಯಾಗುವುದು, ಕೆಲವು ಸಲ ಸ್ವಯಂವರದಲ್ಲಿ ಹೆಣ್ಣು ವರಮಾಲೆ ಹಾಕಿದ ಗಂಡನ್ನು ಉಳಿದವರು ಸೋಲಿಸುವುದು, ಮದುವೆಮನೆಯಲ್ಲಿ ಯುದ್ಧ, ರಕ್ತಪಾತ ಎಲ್ಲ ನಡೆಯುತ್ತಿತ್ತು. ಹತ್ತರ ಜೊತೆ ಇದೂ ಒಂದು ಎಂದು ಭಾವಿಸಿರಬೇಕು. ಅಪ್ಪ ಮಾತ್ರ ಬಹಳ ಗಂಭೀರವಾಗಿ ತೆಗೆದುಕೊಂಡ ಅನಿಸುತ್ತದೆ. ಅವನಿಗೂ ಅವನ ಆಪ್ತರಿಗೂ ಮರೆಯಲಾರದ ವಿಚಾರವಾಯಿತು ಇದು. ಬಹುಶಃ ಮದುವೆಯಿಂದಾಗಿ ಯಾದವರ ಸ್ನೇಹ ದೊರೆತು, ತನ್ನ ಬಲ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಿದ್ದ ಅಪ್ಪ, ಅದಾಗದೆ ಇದ್ದಾಗ ನಿರಾಶನಾಗಿರಬಹುದು. ಆ ಬಳಿಕವಂತೂ ಅಪ್ಪನ ಸಿಡುಕು ದಿನೇದಿನೇ ಹೆಚ್ಚುತ್ತಿತ್ತು.
ಈ ಮದುವೆಯ ಕಥೆ ಕೇಳಿದ ಮೇಲೆ ನನಗೆ ಕೃಷ್ಣ ಮಾವನ ಕುರಿತು ಕುತೂಹಲ ಮಾಡಿತು. ತನ್ನ ಅಣ್ಣನನ್ನೇ ವಿರೋಧಿಸಿ, ತಂಗಿಯನ್ನು ಅವಳು ಒಲಿದ ಗಂಡಿಗೆ ಮದುವೆ ಮಾಡಿಕೊಟ್ಟನಲ್ಲ. ಹೆಣ್ಣಿನ ಮನಸ್ಸಿಗೆ ಬೆಲೆ ಕೊಡುವವನೇ ಇರಬೇಕು ಎಂದು ತೋರಿತು. ಒಮ್ಮೆ ಒಬ್ಬನನ್ನು ಒಪ್ಪಿದರೆ ಮತ್ತೆ ಬೇಕಾದ ಗುಣಗಳೇ ಅವನಲ್ಲಿ ಕಾಣಿಸುತ್ತವಂತೆ. ಆದರೆ ಕೃಷ್ಣನ ವಿಚಾರದಲ್ಲಿ ಇನ್ನೂ ಇನ್ನೂ ಕಥೆಗಳಿದ್ದವು. ನನ್ನ ಸಖಿಯರಲ್ಲಿ ಒಬ್ಬಳು ಯಾದವರ ಕಡೆಯವಳು. ಮದುವೆಯಾಗಿ ಇಲ್ಲಿಗೆ ಬಂದಿದ್ದಳು. ಅವಳು ಕೃಷ್ಣನನ್ನು ಸಮೀಪದಿಂದ ಕಂಡವಳು. ಅವನ ವಿಚಾರ ಎತ್ತಿದರೆ ಸಾಕು, ಅವಳ ಮೈಯೆಲ್ಲ ನಾಲಗೆಯಾಗುತ್ತಿತ್ತು. ಅವನ ಎಳೆತನದ ನೂರಾರು ಸಾಹಸಗಾಥೆಗಳು ಅವಳ ಜೋಳಿಗೆಯಲ್ಲಿ ತುಂಬಿದ್ದವು. ಅವನ ಬಾಲಲೀಲೆಗಳನ್ನು, ತುಂಟಾಟಗಳನ್ನು ವರ್ಣಿಸಿದಷ್ಟೂ ಅವಳಿಗೆ ತೃಪ್ತಿಯಿರಲಿಲ್ಲ. ಕೇಳುತ್ತ ಕೇಳುತ್ತ ನಾನೂ ಕೃಷ್ಣನ ಅಭಿಮಾನಿಯಾಗಿಬಿಟ್ಟೆ. ಅವನು ಹೆಣ್ಣುಮಕ್ಕಳ ಅಂತರಂಗವನ್ನು ಅರಿತವನು ಅನ್ನುತ್ತಿದ್ದಳು ನನ್ನ ಸಖಿ. ಎಂದಿಗೂ ಹೆಣ್ಣಿನ ಭಾವನೆಗಳನ್ನು ನೋಯಿಸಿದವನಲ್ಲವಂತೆ ಅವನು. ಅವನನ್ನು ಪ್ರೀತಿಸಿ ಮದುವೆಯಾದವರ ಸಂಖ್ಯೆ ಬಹಳ ದೊಡ್ಡದಂತೆ.
ಯಾವ ಹೆಣ್ಣಿನಲ್ಲಾದರೂ, ಮದುವೆಯಾದರೆ ಅಂತಹ ಗಂಡನ್ನು ಮದುವೆಯಾಗಬೇಕು, ಹಡೆದರೆ ಅಂತಹ ಮಗನನ್ನು ಹಡೆಯಬೇಕು ಎಂಬ ಹಂಬಲ ಹುಟ್ಟುವಂತೆ ಇದ್ದಾನಂತೆ ಕೃಷ್ಣ.
ಅರ್ಜುನ ಚಿಕ್ಕಪ್ಪನೂ ಆಗೀಗ ಕೃಷ್ಣನ ಕುರಿತು ಬಹು ಅಭಿಮಾನದಿಂದ ಮಾತನಾಡುವುದನ್ನು ಕೇಳಿದ್ದೆ. ಅವರಿಬ್ಬರೂ ತುಂಬ ಆಪ್ತರಂತೆ. ಈ ಎಲ್ಲ ವಿಚಾರಗಳೂ ಕೃಷ್ಣನ ಕುರಿತು ನನ್ನಲ್ಲಿದ್ದ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದವು. ಇದರ ಅರ್ಥ ಅವನ ಮೇಲೆ ಅನುರಾಗ ಮೂಡಿತು ಎಂದಲ್ಲ. ಸಂಬಂಧದಲ್ಲಿ ಮಾವನಾಗುವವನನ್ನು ಮೋಹಿಸುವುದುಂಟೆ? ಒಂದು ವಿಶೇಷ ಆಕರ್ಷಣೆ ಅಷ್ಟೇ. ಸಖಿಯರು ಹೇಳುತ್ತಿದ್ದ ಮಾತುಗಳಲ್ಲಿ ಕೃಷ್ಣ ಮಾವನ ಮಕ್ಕಳ ಸುದ್ದಿಯೂ ಇರುತ್ತಿತ್ತು. ಅವರೂ ತಂದೆಯಂತೆ ಬಹಳ ಮೋಹಕ ರೂಪವುಳ್ಳವರಂತೆ. ಅದರಲ್ಲೂ ಜಾಂಬವತಿಯ ಮಗ ಸಾಂಬ ಬಲು ಚೆಲುವನಂತೆ.
ಹೀಗೆಲ್ಲ ಮಾತುಗಳು ಕೇಳಿಬರುತ್ತಿದ್ದವು. ನಾನೂ ತಿಳಿಯುವ ಕಾತರದಿಂದ ಅವರ ಮಾತುಗಳಿಗೆ ಕಿವಿಯಾಗುತ್ತಿದ್ದೆ.
ಇಂತಹ ದಿನಗಳಲ್ಲಿ ನನ್ನ ಜೀವನವೇ ಬದಲಾಗುವ ಒಂದು ಸನ್ನಿವೇಶ ಎದುರಾಗಿಬಿಟ್ಟಿತು. ನಾನು ಊಹಿಸದೆ ಇದ್ದ ಬೆಳವಣಿಗೆ ಅದು.