ಹೊಸ ತೆರಿಗೆಯನ್ನು ದೇಶಕ್ಕೆ ಪ್ರಸ್ತುತಿಪಡಿಸುವ ಸಮಯದಲ್ಲಿ ಪ್ರಧಾನಿ ಮೋದಿಯವರು ಆಡಿದ ಕೆಲವು ಸದಾಶಯದ ಮಾತುಗಳು ಜಿಎಸ್ಟಿ ಜಾರಿಯಾದ ಆರು ವರ್ಷಗಳ ನಂತರವೂ ಪ್ರಸ್ತುತ. “ಜಿಎಸ್ಟಿಯು ದೇಶದ ವ್ಯಾಪಾರದಲ್ಲಿನ ಅಸಮತೋಲನವನ್ನು ಕೊನೆಗೊಳಿಸುವ ವ್ಯವಸ್ಥೆಯಾಗಿದೆ. ಇದು ದೇಶದ ರಫ್ತುಗಳನ್ನು ಹೆಚ್ಚಿಸುತ್ತದೆ. ಈ ವ್ಯವಸ್ಥೆಯು ಈಗಾಗಲೇ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಮತ್ತಷ್ಟು ಬಲ ನೀಡಿದೆ. ಹಿಂದುಳಿದ ರಾಜ್ಯಗಳ ಅಭಿವೃದ್ಧಿಯ ಅವಕಾಶವನ್ನು ಹೊಸತೆರಿಗೆ ವ್ಯವಸ್ಥೆ ಒದಗಿಸುತ್ತದೆ. ನಮ್ಮ ರಾಜ್ಯಗಳು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ. ಬಿಹಾರ, ಪೂರ್ವ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಈಶಾನ್ಯ, ಒಡಿಶಾ – ಈ ರಾಜ್ಯಗಳು ನೈಸರ್ಗಿಕ ಸಂಪನ್ಮೂಲಗಳಿಂದ ತುಂಬಿವೆ. ಒಂದೇ ತೆರಿಗೆ ಪದ್ಧತಿಯು ಅಂಥ ರಾಜ್ಯಗಳ ಯಾವುದೇ ಕೊರತೆ ನಿವಾರಣೆ ಮಾಡುವ ಶಕ್ತಿ ಹೊಂದಿದೆ. ಭಾರತದ ಎಲ್ಲ ರಾಜ್ಯಗಳು ಅಭಿವೃದ್ಧಿಗೆ ಸಮಾನ ಅವಕಾಶವನ್ನು ಪಡೆಯುತ್ತವೆ.
ದೇಶದ ಸಾರ್ವಜನಿಕ ಸಂಸ್ಥೆಗಳ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ, ಸಾರ್ವಜನಿಕ ಕಲ್ಯಾಣ, ಆಂತರಿಕ ಮತ್ತು ಗಡಿಗಳ ಭದ್ರತೆಯ ಯೋಜನೆ ಹಾಗೂ ನಿರ್ವಹಣೆ, ಆಡಳಿತಾತ್ಮಕ ವೆಚ್ಚಗಳ ನಿಭಾವಣೆ – ಇವೆಲ್ಲ ಆಯಾ ದೇಶದ ಸರ್ಕಾರದ ಜವಾಬ್ದಾರಿಯಾಗಿದ್ದು, ಅವಕ್ಕೆ ಅಗತ್ಯವಾದ ಹಣಕಾಸು ಒದಗಿಸುವುದಕ್ಕಾಗಿ ಅದು ನಾಗರಿಕರಿಂದ ಆದಾಯದ ಮೇಲೆ ಕರ/ತೆರಿಗೆ ವಿಧಿಸಿ ಸಂಗ್ರಹಮಾಡುವುದು ಒಂದು ವ್ಯವಸ್ಥೆಯಾಗಿದೆ.
ಭಾರತದಲ್ಲಿ ಪ್ರಮುಖವಾಗಿ ಎರಡು ರೀತಿಯ ತೆರಿಗೆಗಳಿವೆ. ೧. ವ್ಯಕ್ತಿಗಳು ಮತ್ತು ನಿಗಮಗಳ ಆದಾಯದ ಮೇಲೆ ನೇರವಾಗಿ ವಿಧಿಸಲಾಗುವ ತೆರಿಗೆ ‘ನೇರ ತೆರಿಗೆ’ಯಾಗಿದ್ದು ಅದು ಸರ್ಕಾರಕ್ಕೆ ನೇರವಾಗಿ ಪಾವತಿಸಲ್ಪಡುತ್ತದೆ. ೨. ಸರಕು ಅಥವಾ ಸೇವೆಗಳನ್ನು ಖರೀದಿಸಿದಾಗ/ಪಡೆಯುವಾಗ ಪಾವತಿಸುವ ಕರ ಪರೋಕ್ಷ ತೆರಿಗೆಯಾಗಿದ್ದು, ಸರಕು ಮಾರಾಟಗಾರರು/ಸೇವೆ ಒದಗಿಸುವವರು ಹೀಗೆ ಸಂಗ್ರಹವಾದ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸುತ್ತಾರೆ. ಅಬಕಾರಿ ಸುಂಕ, ಮಾರಾಟತೆರಿಗೆ, ಮನರಂಜನಾತೆರಿಗೆ ಮುಂತಾದವು ಪರೋಕ್ಷ ತೆರಿಗೆಗಳಾಗಿವೆ.
೧೯೪೪ರಲ್ಲಿ ಬ್ರಿಟಿಷ್ ಸರ್ಕಾರವು ಪರೋಕ್ಷ ತೆರಿಗೆಗಳನ್ನು ದೇಶೀಯ ವಸ್ತುಗಳ ಮೇಲೆ ಸಂಗ್ರಹಿಸಲು ಪ್ರಾರಂಭಿಸಿತು. ಕಾರಣ, ಆಗಿನ ಆಡಳಿತಕ್ಕೆ ಭಾರತದ ಮಾರುಕಟ್ಟೆಯಲ್ಲಿ ಬ್ರಿಟಿಷ್ ಉತ್ಪಾದಿತ ವಸ್ತುಗಳನ್ನು ರಕ್ಷಿಸುವ/ಪ್ರೋತ್ಸಾಹಿಸುವ ಉದ್ದೇಶವಿತ್ತು. ಸ್ವಾತಂತ್ರ್ಯಾನಂತರದಲ್ಲಿ, ಭಾರತ ಸರ್ಕಾರವು ಅಬಕಾರಿ ಸುಂಕ, ಕಸ್ಟಮ್ಸ್ ಸುಂಕ, ವ್ಯಾಟ್ ಮುಂತಾದ ಹೊಸ ಪರೋಕ್ಷ ತೆರಿಗೆಗಳನ್ನು ಚಲಾವಣೆಗೆ ತಂದಿತು.
ಪರೋಕ್ಷ ತೆರಿಗೆ ಪದ್ಧತಿಯಲ್ಲಿ `ತೆರಿಗೆ ಮೇಲಿನ ತೆರಿಗೆ’ ಅಥವಾ ಪುನರ್ತೆರಿಗೆ (ಕ್ಯಾಸ್ಕೇಡಿಂಗ್) ಅಂದರೆ ಪ್ರತಿ ಹಂತದಲ್ಲೂ ತೆರಿಗೆಗಳನ್ನು ಪಾವತಿಸುವ ಹೊರೆ ಸೃಷ್ಟಿಯಾಯಿತು. ಅದೇ ರೀತಿ ರಾಜ್ಯಗಳು ವಿಭಿನ್ನ ತೆರಿಗೆ ದರಗಳನ್ನು ಹೊಂದಿದ್ದವು. ಅದರ ಪರಿಣಾಮವಾಗಿ ಕಡಮೆ ತೆರಿಗೆ ದರಗಳ ರಾಜ್ಯಗಳಿಂದ ಕಚ್ಚಾವಸ್ತು ಖರೀದಿಯಾಗಿ ಹೆಚ್ಚಿನ ತೆರಿಗೆ ದರಗಳೊಂದಿಗೆ ವಸ್ತುಗಳು ಮಾರಾಟವಾಗತೊಡಗಿದವು.
ಈ ಸಮಸ್ಯೆಗಳಿಗೆ ಪರಿಹಾರವಾಗಿ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಪದ್ಧತಿಯನ್ನು ತರಲಾಯಿತು. ಮಾರಾಟಗಾರರು ಖರೀದಿದಾರರಿಂದ ತೆರಿಗೆಗಳನ್ನು ಸಂಗ್ರಹಿಸಿ, ಮೌಲ್ಯವರ್ಧಿತ ಮೌಲ್ಯದ ಪ್ರಕಾರ ಪಾವತಿಸಬೇಕಾಯಿತು. ತೆರಿಗೆಯನ್ನು ಒಟ್ಟು ಲಾಭದ ಮೇಲೆ ಮಾತ್ರ ಪಾವತಿಸಲಾಗುತ್ತಿದ್ದಾಗ ವಹಿವಾಟಿನ ಮೊತ್ತದ ಮೇಲೆ ತೆರಿಗೆ ಬೀಳುತ್ತಿರಲಿಲ್ಲ. ಇದರ ಪರಿಣಾಮ ಸರ್ಕಾರಕ್ಕೆ ತೆರಿಗೆ ಸಂಗ್ರಹ ಕಡಮೆಯಾಯಿತು ಮತ್ತು ರಾಜ್ಯಗಳ ಸ್ವಾಯತ್ತತೆಗೂ ಧಕ್ಕೆಯಾಯಿತು. ಅದರಿಂದ ‘ವ್ಯಾಟ್’ ಉದ್ದೇಶವಾದ ಏಕರೂಪ ತೆರಿಗೆ ಕೈಗೂಡದೆ, ರಾಜ್ಯಗಳು ತಮ್ಮದೇ ಆದ ತೆರಿಗೆಗಳನ್ನು ವಿಧಿಸಿತೊಡಗಿದವು.
ಹೊಸ ತೆರಿಗೆ ಪದ್ಧತಿಯ ಆವಿಷ್ಕಾರ
ತೆರಿಗೆ ಸಂಗ್ರಹದಲ್ಲಿದ್ದ ಅನೇಕ ನ್ಯೂನತೆಗಳ ಕಾರಣಗಳಿಂದ ಹೊಸ ತೆರಿಗೆ ಪದ್ಧತಿಯೊಂದರ ಜಾರಿ ಭಾರತಕ್ಕೆ ಅಗತ್ಯವಾಗಿತ್ತು. ಆ ಚಿಂತನೆಯ ಮೊದಲ ಹಂತವಾಗಿ ವರ್ಷ ೨೦೦೦ರಲ್ಲಿ ‘ಜಿಎಸ್ಟಿ ಸಮಿತಿ’ ಮತ್ತು ೨೦೦೩ರಲ್ಲಿ ‘ವಿಜಯ್ ಕೇಳ್ಕರ್ ಕಾರ್ಯಸಮಿತಿ’ ರಚನೆ ಮಾಡಲಾಯಿತು.
ಸರಕು ಮತ್ತು ಸೇವಾತೆರಿಗೆ (ಜಿಎಸ್ಟಿ) ಪದ್ಧತಿಯನ್ನು ಜಾರಿಗೊಳಿಸುವ ಮಸೂದೆಯನ್ನು (ಸಂವಿಧಾನ ೧೨೨ನೇ ತಿದ್ದುಪಡಿ) ಭಾರತದ ಸಂಸತ್ತಿನಲ್ಲಿ ೨೦೧೬ ಆಗಸ್ಟ್ ೩ರಂದು ರಾಜ್ಯಸಭೆಯಲ್ಲಿ ಮತ್ತು ೮ರಂದು ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಯಿತು. ೨೦೧೭ ಜುಲೈ ೧ರಿಂದ ಹೊಸ ‘ಸರಕು ಮತ್ತು ಸೇವಾ ತೆರಿಗೆ’ (ಜಿಎಸ್ಟಿ) ಪದ್ಧತಿ ಜಾರಿಗೆ ಬಂದಿತು.
ಇದು ಏಕರೂಪ ಪರೋಕ್ಷ ತೆರಿಗೆ ಪದ್ಧತಿಯಾಗಿದ್ದು, ತೆರಿಗೆ, ಸುಂಕ, ಕೇಂದ್ರೀಯ ಅಬಕಾರಿ ಸುಂಕ, ಸೇವಾತೆರಿಗೆ, ಹೆಚ್ಚುವರಿ ಕಸ್ಟಮ್ಸ್ ಸುಂಕ, ಇತರ ಹೆಚ್ಚುವರಿ ಶುಲ್ಕ, ರಾಜ್ಯಗಳ ಮೌಲ್ಯವರ್ಧಿತ ತೆರಿಗೆ ಮತ್ತು ಆಕ್ಟಾçಯ್ ಒಳಗೊಂಡಿದೆ. ಅಂತರ-ರಾಜ್ಯ ಸರಕು ಸಾಗಣೆ ಮೇಲೆ ಅನ್ವಯವಾಗುತ್ತಿದ್ದ ಇತರ ಸುಂಕಗಳು, ಸರಕು ಮತ್ತು ಸೇವೆಗಳ ಮಾರಾಟ, ವರ್ಗಾವಣೆ, ಖರೀದಿ, ವಿನಿಮಯ, ಗುತ್ತಿಗೆ ಅಥವಾ ಆಮದು ಮುಂತಾದ ಎಲ್ಲ ವಹಿವಾಟು ‘ಜಿಎಸ್ಟಿ’ ಒಳಗೊಳ್ಳುತ್ತದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು ವಿಧಿಸುತ್ತಿದ್ದ ಬಹುತೆರಿಗೆಗಳು ‘ಜಿಎಸ್ಟಿ’ ಜಾರಿಯಾದ ನಂತರದಲ್ಲಿ ನಿಷ್ಕ್ರಿಯಗೊಂಡಿವೆ.
ಈ ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯಸರ್ಕಾರಗಳು ನಿರ್ವಹಿಸುತ್ತವೆ. ಒಂದೇ ರಾಜ್ಯದೊಳಗೆ ಮಾಡಿದ ವಹಿವಾಟುಗಳನ್ನು ಕೇಂದ್ರಸರ್ಕಾರದಿಂದ ‘ಕೇಂದ್ರ ಜಿಎಸ್ಟಿ’ (ಸಿಜಿಎಸ್ಟಿ) ಮತ್ತು ರಾಜ್ಯಸರ್ಕಾರಗಳಿಂದ ‘ರಾಜ್ಯ ಜಿಎಸ್ಟಿ’ (ಎಸ್ಜಿಎಸ್ಟಿ) ಮತ್ತು ಅಂತರರಾಜ್ಯ ವಹಿವಾಟು ಮತ್ತು ಆಮದು ಅಥವಾ ಸೇವೆಗಳಿಗೆ ಕೇಂದ್ರಸರ್ಕಾರದ ‘ಇಂಟಿಗ್ರೇಟೆಡ್ ಜಿಎಸ್ಟಿ’ (ಐಜಿಎಸ್ಟಿ) ಎಂದು ಕರೆಯಲಾಗುತ್ತದೆ.
ಜಿಎಸ್ಟಿ ಪದ್ಧತಿ ‘ವ್ಯಾಟ್’ನ ಮುಂದುವರಿದ ರೂಪವೆನ್ನಬಹುದು. ಇದು ‘ವ್ಯಾಟ್’ನ ಗಣಕೀಕೃತ (ಡಿಜಿಟಲೈಸ್ಡ್) ರೂಪವಾಗಿದ್ದು, ಸರಕು ಮತ್ತು ಸೇವೆಗಳ ಜಾಡು (ಟ್ರ್ಯಾಕ್) ಕಂಡುಕೊಳ್ಳಬಹುದಾಗಿದೆ. ಕೆಲವು ರಾಜ್ಯ ತೆರಿಗೆಗಳನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲ ಪರೋಕ್ಷ ತೆರಿಗೆಗಳು ‘ಜಿಎಸ್ಟಿ’ಗೆ ಒಳಪಟ್ಟಿರುವುದರಿಂದ ಅದು ಸಮಗ್ರ ಮತ್ತು ಸುಧಾರಿತ ತೆರಿಗೆ ಪದ್ಧತಿ ಎನ್ನುವುದರಲ್ಲಿ ಸಂಶಯವಿಲ್ಲ.
‘ಜಿಎಸ್ಟಿ’ ಜಾರಿಗೆ ಬಂದ ಹಿನ್ನೆಲೆ
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಮಯದಲ್ಲಿ, ೨೦೦೬ರ ಫೆಬ್ರುವರಿ ೨೮ರಂದು ಮಂಡಿಸಿದ ಬಜೆಟ್ಟಿನಲ್ಲಿ, ಹೊಸತೆರಿಗೆ ಪದ್ಧತಿಯನ್ನು ಏಪ್ರಿಲ್ ೧, ೨೦೧೦ರಿಂದ ಜಾರಿಗೆ ತರಲಾಗುವುದೆಂದು ಮೊದಲ ಬಾರಿ ಘೋಷಿಸಿದರು. ಆದರೆ ವಿರೋಧಪಕ್ಷಗಳ ಅಸಹಕಾರದ ಕಾರಣ ಅದು ಸಾಧ್ಯವಾಗದೆ ಹೋಯಿತು. ಅದಕ್ಕೂ ಮೊದಲು ವಾಜಪೇಯಿ ೧೯೯೯ರಲ್ಲಿ ‘ಒಂದು ರಾಷ್ಟç – ಒಂದು ತೆರಿಗೆ’ ಎಂಬ ಪರಿಕಲ್ಪನೆಯನ್ನು ಮೂವರು ನಿವೃತ್ತ ರಿಸರ್ವ್ ಬ್ಯಾಂಕ್ ಗವರ್ನರ್ಗಳನ್ನು ಒಳಗೊಂಡಿದ್ದ ‘ಆರ್ಥಿಕ ಸಲಹಾ ಮಂಡಲಿ’ ಸಭೆಯಲ್ಲಿ ಪ್ರಥಮ ಬಾರಿಗೆ ಪ್ರಸ್ತಾವಿಸಿದ್ದರು. ಆ ಕಾರಣದಿಂದಾಗಿ ವಾಜಪೇಯಿಯವರನ್ನು ‘ಜಿಎಸ್ಟಿ ಪದ್ಧತಿಯ ಪಿತಾಮಹ’ ಎಂದು ಕರೆಯಲಾಗುತ್ತದೆ.
* * *
ಈ ಹೊಸ ತೆರಿಗೆ ಪದ್ಧತಿ ಅಭೂತಪೂರ್ವವೂ ಮತ್ತು ಅಷ್ಟೇ ಕಷ್ಟಕರವೆನಿಸಿದ ತೆರಿಗೆ ಸುಧಾರಣೆಗಳಲ್ಲಿ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರಗಾಮಿ ದೃಷ್ಟಿ ಮತ್ತು ಅಂದಿನ ವಿತ್ತ ಮಂತ್ರಿ ದಿ. ಅರುಣ್ ಜೇಟ್ಲಿಯವರ ಮಹತ್ತ್ವಾಕಾಂಕ್ಷೆಯಿಂದಷ್ಟೇ ಅಪೇಕ್ಷಿತ ಸುಧಾರಣೆ ಸಾಧ್ಯವಾಗಿ ಜಿಎಸ್ಟಿ ಜಾರಿಯಾಯಿತು.
“ಜಿಎಸ್ಟಿ ಕೇವಲ ಸರಳ ತೆರಿಗೆ ವ್ಯವಸ್ಥೆಯಷ್ಟೇ ಅಲ್ಲದೆ, ಅದು ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಹೊಸ ರೀತಿಯ ಸುಧಾರಿತ ತೆರಿಗೆ ವ್ಯವಸ್ಥೆಯ ಮೂಲಕ ಶ್ರೀಗಂಗಾನಗರದಿAದ ಇಟಾನಗರ ಮತ್ತು ಲೇಹ್ನಿಂದ ಲಕ್ಷದ್ವೀಪದವರೆಗೆ ‘ಒಂದೇ ರಾಷ್ಟç, ಒಂದು ತೆರಿಗೆ’ ವ್ಯವಸ್ಥೆಯ ಆಶಯ ಈಡೇರಿದೆ” ಎಂದು ಪ್ರಧಾನಿ ಮೋದಿ ಹೊಸತೆರಿಗೆ ಪದ್ಧತಿಯ ಜಾರಿಯ ಸಮಯದಲ್ಲಿ ತಮ್ಮ ಮಹದಾಶಯವನ್ನು ವ್ಯಕ್ತಪಡಿಸಿದ್ದರು.
ಜಿಎಸ್ಟಿಯ ವಿವಿಧ ಅಂಶಗಳನ್ನು ಪರಿಶೀಲಿಸಲು ಮತ್ತು ವಿನಾಯಿತಿಗಳು, ಮಿತಿಗಳು, ಸೇವೆಗಳ ತೆರಿಗೆ ಮತ್ತು ಅಂತರ-ರಾಜ್ಯ ಪೂರೈಕೆಗಳ ಕುರಿತು ವರದಿಗಳನ್ನು ತಯಾರಿಸಲು ರಾಜ್ಯ ಮತ್ತು ಕೇಂದ್ರಸರ್ಕಾರದ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಕಾರ್ಯ ಸಮಿತಿಯನ್ನು ಸ್ಥಾಪಿಸಲಾಯಿತು. ವ್ಯಾಪಕ ಚರ್ಚೆ, ಸಮಾಲೋಚನೆಗಳ ಆಧಾರದ ಮೇಲೆ, ನವೆಂಬರ್ ೨೦೦೯ರಲ್ಲಿ ಜಿಎಸ್ಟಿ ಕುರಿತು ಸಮಿತಿ ತನ್ನ ಮೊದಲ ಪರಿಕಲ್ಪನಾ ಪತ್ರ (ಎಫ್ಡಿಪಿ)ವನ್ನು ಬಿಡುಗಡೆ ಮಾಡಿತು. ಇದು ಪ್ರಸ್ತುತ ಜಿಎಸ್ಟಿ ಕಾನೂನು ಮತ್ತು ನಿಬಂಧನೆಗಳಿಗೆ ಅಡಿಪಾಯವಾಗಿದೆ.
ಹೊಸತೆರಿಗೆಯ ಅನುಷ್ಠಾನಕ್ಕೆ ತಯಾರಿ ನಡೆಸಲು, ಅಗತ್ಯ ತಾಂತ್ರಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಮತ್ತು ತೆರಿಗೆ ಅಧಿಕಾರಿಗಳು ಮತ್ತು ವ್ಯವಹಾರಗಳಿಗೆ ತರಬೇತಿ ನೀಡಲು ವ್ಯಾಪಕ ಪ್ರಯತ್ನಗಳನ್ನು ಮಾಡಲಾಯಿತು. ಜಿಎಸ್ಟಿ ನೆಟ್ವರ್ಕ್ (ಜಿಎಸ್ಟಿಎನ್) ಎಂಬ ಲಾಭರಹಿತ ಕಂಪೆನಿ ಸ್ಥಾಪಿತಗೊಂಡಿದ್ದು, ಅದು ತೆರಿಗೆದಾರರ ನೋಂದಣಿ, ರಿಟರ್ನ್ ಫೈಲಿಂಗ್ ಮತ್ತು ತೆರಿಗೆ ಪಾವತಿಗಳನ್ನು ಒಳಗೊಂಡಂತೆ ಜಿಎಸ್ಟಿ ವ್ಯವಸ್ಥೆಗೆ ಪೂರಕ ಕಾರ್ಯನಿರ್ವಹಿಸುತ್ತಿದೆ.
ವಿರೋಧಪಕ್ಷಗಳ ವಾದಗಳು
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಕಮ್ಯೂನಿಸ್ಟ್ ಪಕ್ಷಗಳು ಸೇರಿದಂತೆ ಅನೇಕ ಪ್ರತಿಪಕ್ಷಗಳು ಹೊಸತೆರಿಗೆ ಪದ್ಧತಿಯನ್ನು ವಿರೋಧಿಸಿದವು. ಜಿಎಸ್ಟಿ ಮತ್ತು ಅಸ್ತಿತ್ವದಲ್ಲಿರುವ ತೆರಿಗೆ ವ್ಯವಸ್ಥೆಯ ನಡುವೆ ವಾಸ್ತವಿಕವಾಗಿ ಯಾವುದೇ ವ್ಯತ್ಯಾಸವಿಲ್ಲ ಹಾಗೂ ಸರ್ಕಾರ ಪ್ರಸ್ತುತ ತೆರಿಗೆ ವ್ಯವಸ್ಥೆಯನ್ನೇ ಹೊಸ ನಾಮಕರಣದೊಂದಿಗೆ ತರಲು ಪ್ರಯತ್ನಿಸುತ್ತಿದೆ ಎಂದು ವಾದ ಮಾಡಲಾಯಿತು. ‘ಜಿಎಸ್ಟಿ’ಯು ಐಷಾರಾಮಿ ವಸ್ತುಗಳ ಮೇಲಿನ ದರಗಳನ್ನು ಕಡಮೆ ಮಾಡಲಿದೆ ಮತ್ತು ಸಾಮಾನ್ಯ ದೈನಂದಿನ ಸರಕುಗಳ ಮೇಲಿನ ಅಸ್ತಿತ್ವದಲ್ಲಿರುವ ದರಗಳನ್ನು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯ ಆ ಪಕ್ಷಗಳದಾಗಿತ್ತು. ಹೊಸತೆರಿಗೆ ಮಧ್ಯಮ, ಕೆಳಮಧ್ಯಮ ಮತ್ತು ಬಡವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆನ್ನುವುದು ಅವರ ವಾದವಾಗಿತ್ತು.
ಬದಲಾದ ನಿಯಮಗಳು
ವಸ್ತುವಿನ ಉತ್ಪಾದನೆಯ ಪ್ರತಿ ಹಂತದಲ್ಲೂ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಅಂದರೆ ಕಚ್ಚಾವಸ್ತುಗಳ ಖರೀದಿ, ಸಂಸ್ಕರಣೆ, ಉತ್ಪಾದನೆ, ದಾಸ್ತಾನು ಮತ್ತು ಗ್ರಾಹಕರಿಗೆ ಅಂತಿಮವಾಗಿ ಸೇರುವವರೆಗೆ ‘ಜಿಎಸ್ಟಿ’ ಇರಲಿದ್ದು, ಗ್ರಾಹಕನು ಕಟ್ಟಕಡೆಯ ಹಂತದಲ್ಲಿ ನಿಗದಿಯಾಗುವ ತೆರಿಗೆಯನ್ನು ಪಾವತಿಸುತ್ತಾನೆ.
ಸಂಗ್ರಹವಾಗುವ ಒಟ್ಟು ತೆರಿಗೆಯಲ್ಲಿ ವಿವಿಧ ಹಂತಗಳಲ್ಲಿ ಸಂಗ್ರಹವಾದ ತೆರಿಗೆ ಭಾಗವನ್ನು ಆಯಾ ಹಂತದಲ್ಲಿ ಪಾವತಿಸಿದವರಿಗೆ ಮರುಪಾವತಿಸುವ ವ್ಯವಸ್ಥೆ ರೂಪಿಸಲಾಗಿದೆ.
ತೆರಿಗೆ ಸಂಗ್ರಹಕ್ಕಾಗಿ ಸರಕು ಮತ್ತು ಸೇವೆಗಳನ್ನು ೦%, ೫%, ೧೨%, ೧೮% ಮತ್ತು ೨೮% ಹೀಗೆ ಐದು ವಿಭಿನ್ನ ತೆರಿಗೆ ಹಂತಗಳಾಗಿ ವಿಂಗಡಿಸಲಾಗಿದೆ. (ಪೆಟ್ರೋಲಿಯಂ ಉತ್ಪನ್ನಗಳು, ಮದ್ಯ ಮುಂತಾದ ಪಾನೀಯಗಳು ಮತ್ತು ವಿದ್ಯುಚ್ಛಕ್ತಿ ಇವುಗಳಿಗೆ ಜಿಎಸ್ಟಿ ವಿಧಿಸಲಾಗುವುದಿಲ್ಲ; ಬದಲಿಗೆ ಹಿಂದಿನ ಪದ್ಧತಿಯಂತೆ ರಾಜ್ಯಸರ್ಕಾರಗಳಿಂದ ಪ್ರತ್ಯೇಕವಾಗಿ ತೆರಿಗೆ ವಿಧಿಸಲಾಗುತ್ತದೆ.)
ತೆರಿಗೆ ದರಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಕೇಂದ್ರಸರ್ಕಾರ ಮತ್ತು ಎಲ್ಲ ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಒಳಗೊಂಡಿರುವ ‘ಜಿಎಸ್ಟಿ ಕೌನ್ಸಿಲ್’ ನಿಯಂತ್ರಿಸುತ್ತದೆ.
ಜಿಎಸ್ಟಿಯ ಕಾರಣದಿಂದ ಅಂತರರಾಜ್ಯ ಚೆಕ್ಪೋಸ್ಟ್ಗಳು ನಿಷ್ಕ್ರಿಯಗೊಂಡಿವೆ. ಆ ಕಾರಣದಿಂದ ಸಾಗಣೆಯ ಸಮಯದಲ್ಲಿ ಪೋಲಾಗುತ್ತಿದ್ದ ಹೆಚ್ಚಿನ ಸಮಯ ಉಳಿತಾಯವಾಗುತ್ತಿದೆ.
* * *
ಹೊಸ ತೆರಿಗೆಯ ಪ್ರಮುಖ ಲಕ್ಷಣಗಳು
ಜಿಎಸ್ಟಿ ದೇಶದ ತೆರಿಗೆ ರಚನೆಯಲ್ಲಿ ಆದ ಒಂದು ಮಹತ್ತರ ಬದಲಾವಣೆ. ಇದು ವ್ಯವಹಾರಗಳು ಮತ್ತು ಒಟ್ಟಾರೆಯಾಗಿ ಆರ್ಥಿಕತೆಯ ಲಾಭಕ್ಕಾಗಿ ಹೆಚ್ಚು ಏಕೀಕೃತ, ಪರಿಣಾಮಕಾರಿ ಮತ್ತು ಪಾರದರ್ಶಕ ಪರೋಕ್ಷ ತೆರಿಗೆಯಾಗಿದೆ. ಅಬಕಾರಿ ಸುಂಕ, ಸೇವಾತೆರಿಗೆ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಇತರ ಕೇಂದ್ರ ಮತ್ತು ರಾಜ್ಯಸರ್ಕಾರಗಳು ವಿಧಿಸುವ ಬಹು ಪರೋಕ್ಷ ತೆರಿಗೆಗಳನ್ನು ‘ಜಿಎಸ್ಟಿ’ ಬದಲಿಸಿದೆ. ಇದು ಭಾರತದಾದ್ಯಂತ ತೆರಿಗೆ ರಚನೆಯಲ್ಲಿ ಏಕರೂಪತೆಯನ್ನು ತಂದಿದ್ದು ತೆರಿಗೆಗಳ ಹೆಚ್ಚುವರಿ ಪದರಗಳ (ಕ್ಯಾಸ್ಕೇಡಿಂಗ್) ಪರಿಣಾಮವನ್ನು ತೊಡೆದುಹಾಕಿದೆ.
೧. ಜಿಎಸ್ಟಿಯು ಕೊನೆಯ ಗ್ರಾಹಕನಿಗೆ ಮಾರಾಟ ಮಾಡುವಾಗ ಪಾವತಿಸುವ ತೆರಿಗೆಯಾಗಿದೆ. ಆದರೆ ತಯಾರಿಕೆಯ ಪ್ರಕ್ರಿಯೆಯಿಂದ ಮೊದಲುಗೊಂಡು ಗ್ರಾಹಕನನ್ನು ತಲಪುವವರೆಗೆ ಬರುವ ಪ್ರತಿ ಹಂತದಲ್ಲೂ ತೆರಿಗೆ ವಿಧಿಸಲಾಗುತ್ತದೆ. ಜಿಎಸ್ಟಿ ಪಾರದರ್ಶಕವಾಗಿದ್ದು, ಹಿಂದಿನ ಪದ್ಧತಿಯಲ್ಲಿದ್ದ ಕ್ಯಾಸ್ಕೇಡಿಂಗ್ ತೆರಿಗೆ ಹೊರೆ ಇರುವುದಿಲ್ಲ. ಅಂದರೆ ಉತ್ಪಾದನೆಯಿಂದ ಅಂತಿಮ ಉತ್ಪನ್ನ ಮಾರಾಟ ಮಾಡುವ ನಾನಾ ಹಂತಗಳ ಸರಪಳಿಯಲ್ಲಿ ತೆರಿಗೆಗಳು ಪಾವತಿಯಾಗಿದ್ದರೆ, ಅನಂತರದ ಹಂತಗಳಲ್ಲಿ ಉದ್ಯಮಿಯು ಮತ್ತೆ ತೆರಿಗೆ ಕಟ್ಟಬೇಕಾಗಿರುವುದಿಲ್ಲ. ಒಂದು ವೇಳೆ ಹೆಚ್ಚುವರಿ ಪಾವತಿಸಿದ್ದಲ್ಲಿ ಮರುಪಾವತಿಯ ವ್ಯವಸ್ಥೆ ಮಾಡಲಾಗಿದೆ. ಇದರಿಂದ ತೆರಿಗೆ ವೆಚ್ಚ ಇಳಿದು, ಅದರ ಲಾಭವನ್ನು ಗ್ರಾಹಕ ಪಡೆಯುತ್ತಾನೆ.
೨. ತೆರಿಗೆಯ ಮರುಪಾವತಿ ಪ್ರಕ್ರಿಯೆ: ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ): ಜಿಎಸ್ಟಿಯ ಮರುಪಾವತಿ ಕ್ಲೈಮ್ ವಿವರ ‘ಜಿಎಸ್ಟಿಆರ್-೧’ ಮತ್ತು ‘ಜಿಎಸ್ಟಿಆರ್-೩ಬಿ’ಗಳಲ್ಲಿ ವರದಿ ಮಾಡುವ ಮೂಲಕ ಕ್ಲೆöÊಮ್ ಮಾಡಬಹುದು.
೩. ಮದ್ಯಸಾರ (ಆಲ್ಕೋಹಾಲ್) ಹೊರತುಪಡಿಸಿ ಎಲ್ಲ ಸರಕು ಮತ್ತು ಸೇವೆಗಳ ಮೇಲೆ ಜಿಎಸ್ಟಿ ಅನ್ವಯವಾಗುತ್ತದೆ. ನಿರ್ದಿಷ್ಟವಾದ ಐದು ವಸ್ತುಗಳಾದ ಪೆಟ್ರೋಲಿಯಂ ಉತ್ಪನ್ನಗಳು, ತಂಬಾಕು ಮತ್ತು ತಂಬಾಕುಉತ್ಪನ್ನಗಳು ಜಿಎಸ್ಟಿಗೆ ಒಳಪಟ್ಟಿರುತ್ತವೆ. ಹೆಚ್ಚುವರಿಯಾಗಿ, ಈ ಉತ್ಪನ್ನಗಳ ಮೇಲೆ ಕೇಂದ್ರೀಯ ಅಬಕಾರಿ ಸುಂಕವನ್ನು ವಿಧಿಸುವ ಅಧಿಕಾರವನ್ನು ಕೇಂದ್ರವು ಹೊಂದಿರುತ್ತದೆ.
೪. ವಾರ್ಷಿಕ ೪೦ ಲಕ್ಷ ರೂ.ಗಳಿಗೂ ಮೇಲಿನ ವಹಿವಾಟಿರುವ ವ್ಯವಹಾರಗಳು ಜಿಎಸ್ಟಿ ನೋಂದಾವಣೆಯ ಮಿತಿಯಾಗಿದೆ. ಆದರೆ, ಕೆಲವು ವಿಶೇಷ ವರ್ಗದ ರಾಜ್ಯಗಳಲ್ಲಿನ ವ್ಯವಹಾರಗಳಿಗೆ ೨೦ ಲಕ್ಷ ರೂ.ಗಳ ಮಿತಿ ನಿಗದಿಪಡಿಸಲಾಗಿದೆ. ನಿರ್ದಿಷ್ಟ ಮಿತಿಗಿಂತ ಕಡಮೆ ವಹಿವಾಟು ಹೊಂದಿರುವ ಸಣ್ಣ ವ್ಯವಹಾರಗಳು ಜಿಎಸ್ಟಿಯಿಂದ ವಿನಾಯಿತಿ ಪಡೆದಿವೆ.
೫. ಲಾಭಬಡುಕತನದ ನಿಯಂತ್ರಣ ಕ್ರಮಗಳು: ಜಿಎಸ್ಟಿಯ ಪ್ರಯೋಜನಗಳು ಗ್ರಾಹಕರಿಗೆ ತಲಪಿಸುವ ಉದ್ದಿಶ್ಯವಾಗಿ ಸರ್ಕಾರವು ವ್ಯಾಪಾರಗಳ ಲಾಭಕೋರತನವನ್ನು ನಿಯಂತ್ರಿಸುವ, ಮೇಲ್ವಿಚಾರಣೆ ಮಾಡುವ ಮತ್ತು ಜಿಎಸ್ಟಿಗೆ ಸಂಬಂಧಪಟ್ಟ ದೂರುಗಳನ್ನು ಪರಿಶೀಲಿಸುವ ಸಲುವಾಗಿ ಡಿಸೆಂಬರ್ ೧, ೨೦೨೨ರಿಂದ ‘ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ’ (ಸಿಸಿಐ) ಆಯೋಗವನ್ನು ಸ್ಥಾಪಿಸಿದೆ. ವ್ಯವಹಾರ ಪ್ರಕ್ರಿಯೆಯ ಎಲೆಕ್ಟ್ರಾನಿಕ್ ದಾಖಲೆಗಳ ಡಿಜಿಟಲೀಕರಣದ ಕಾರಣ ತೆರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತ್ವವಿದ್ದು, ತೆರಿಗೆ ವಂಚನೆಯನ್ನು ತಡೆಯಲು ಇದರಿಂದ ಸಾಧ್ಯವಾಗಿದೆ.
೬. ಆರೋಗ್ಯ ರಕ್ಷಣೆ, ಶಿಕ್ಷಣ, ಮತ್ತು ಆಹಾರಧಾನ್ಯಗಳು ಮತ್ತು ಮೂಲಭೂತ ಆವಶ್ಯಕತೆಗಳ ಕೆಲವು ವಲಯಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ ಅಥವಾ ತೆರಿಗೆ ದರಗಳಲ್ಲಿ ಕಡಿತ ಮಾಡಲಾಗಿದೆ.
೭. ಕೇಂದ್ರ ಮತ್ತು ರಾಜ್ಯಗಳ ತೆರಿಗೆ ವಿಧಗಳು: ಜಿಎಸ್ಟಿಯಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಒಂದೇ ತಳಹದಿಯಲ್ಲಿ ತೆರಿಗೆ ವಿಧಿಸುತ್ತವೆ. ಕೇಂದ್ರಸರ್ಕಾರ ನಿಗದಿಪಡಿಸುವ ಜಿಎಸ್ಟಿಯನ್ನು ‘ಸೆಂಟ್ರಲ್ ಜಿಎಸ್ಟಿ’ (ಸಿಜಿಎಸ್ಟಿ) ಮತ್ತು ರಾಜ್ಯಗಳು ನಿಗದಿಪಡಿಸುವ ಜಿಎಸ್ಟಿಯನ್ನು ‘ಸ್ಟೇಟ್ ಜಿಎಸ್ಟಿ’ (ಎಸ್ಜಿಎಸ್ಟಿ) ಎಂದು ಕರೆಯಲಾಗುತ್ತದೆ. ಇವುಗಳೆರಡರ ದರ ಎಷ್ಟಿರಬೇಕು ಎಂಬುದನ್ನು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪರಸ್ಪರ ಒಮ್ಮತದಿಂದ ನಿರ್ಧರಿಸುತ್ತವೆ.
ಧನಾತ್ಮಕ ಪರಿಣಾಮಗಳು
ಹೊಸ ತೆರಿಗೆಯ ಪರಿಣಾಮವಾಗಿ, ದೇಶದ ನಿವ್ವಳ ರಫ್ತು ಹೆಚ್ಚಳವಾಯಿತು. ಸರಕುಗಳ ಉತ್ಪಾದನೆ ಹೆಚ್ಚಿತು. ದೇಶದ ವ್ಯಾಪಾರ ವಹಿವಾಟಿನಲ್ಲಿ ಏರಿಕೆ ಕಂಡು ಉದ್ಯೋಗಿಗಳ ಸಂಖ್ಯೆಯೂ ಬೆಳೆದಿರುವುದು ಗಮನಾರ್ಹ.
ಸರಳಗೊಂಡ ತೆರಿಗೆ ಕೋಡ್, ಅಂತರರಾಜ್ಯ ನಿರ್ಬಂಧಗಳ ತೆಗೆಯುವಿಕೆ, ಚೆಕ್ಪೋಸ್ಟ್ ಮತ್ತು ರಾಜ್ಯ ಗಡಿಗಳಲ್ಲಿನ ಪ್ರವೇಶ ತೆರಿಗೆ ಮುಂತಾದ ಅಡೆತಡೆಗಳ ಮುಕ್ತಿಯಿಂದ ಕರ ಸಂಗ್ರಹದ ದಕ್ಷತೆ ಹೆಚ್ಚಾಗಿದೆ. ವೆಚ್ಚಗಳಲ್ಲಿ ಕಡಿತವಾದ ಕಾರಣ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಅದು ಉತ್ಪಾದನೆಯಿಂದ ಮೊದಲುಗೊಂಡು ಪೂರೈಕೆಯಾಗುವವರೆಗಿನ (ಲಾಜಿಸ್ಟಿಕ್ಸ್) ಉದ್ಯಮಗಳು ಅಭಿವೃದ್ಧಿ ಹೊಂದಲು ಸಹಾಯ ಮಾಡಿದೆ.
ಪ್ರಾರಂಭದಲ್ಲಿ ಜಿಎಸ್ಟಿ ಅಡಿಯಲ್ಲಿ ತೆರಿಗೆಗಳ ಸರಾಸರಿ ಒಟ್ಟು ಬೆಳವಣಿಗೆ ೯ಕ್ಕಿಂತಲೂ ಕಡಮೆಯಿತ್ತು. ಜಿಎಸ್ಟಿ ಅಸ್ತಿತ್ವಕ್ಕೆ ಬರುವ ಮೊದಲು ರಾಜ್ಯಗಳ ಆದಾಯ ಪ್ರತಿಶತ ೧೪ರಿಂದ ೧೫ ಹೊಂದಿದ್ದವು. ಈ ವ್ಯತ್ಯಯವನ್ನು ಸರಿಪಡಿಸುವ ಮೊದಲ ಹಂತವಾಗಿ ಕೇಂದ್ರವು ರಾಜ್ಯಗಳಿಗೆ ಹೊಸ ತೆರಿಗೆಗಳಲ್ಲಿ ಪ್ರತಿಶತ ೧೪ ಬೆಳವಣಿಗೆ ಏರಿಕೆಯ ಭರವಸೆ ನೀಡಿತು.
ಜಿಎಸ್ಟಿ ಸರಕು ಮತ್ತು ಸೇವೆಗಳ ಮಾರಾಟದ ಮೇಲಿನ ಪುನರ್ತೆರಿಗೆ (ಕ್ಯಾಸ್ಕೇಡಿಂಗ್) ಹೊರೆಯನ್ನು ಪೂರ್ಣವಾಗಿ ತೊಡೆದುಹಾಕಿರುವುದರಿಂದ ಸರಕುಗಳ ಬೆಲೆಗಳ ಇಳಿತಕ್ಕೆ ಕಾರಣವಾಗಿದೆ.
ನೋಂದಣಿಯಿಂದ ಹಿಡಿದು ರಿಟರ್ನ್ ಸಲ್ಲಿಸುವವರೆಗೆ ಅಥವಾ ಮರುಪಾವತಿ ಪಡೆಯುವವರೆಗೆ, ಪ್ರತಿಯೊಂದು ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಟಲೀಕರಣಗೊಂಡಿರುವುದರಿಂದ ಆನ್ಲೈನ್ನಲ್ಲಿ ವ್ಯವಹಾರಗಳು ದಾಖಲಾಗುತ್ತವೆ. ಅಂತೆಯೇ ಆನ್ಲೈನ್ನಲ್ಲಿ ವಿವಾದ ಪರಿಹಾರ ವ್ಯವಸ್ಥೆಯೂ ಸೇರಿದ್ದು ವ್ಯಾಪಾರದಾರರ ಸಂಕಷ್ಟಗಳು ಶೀಘ್ರ ಪರಿಹಾರ ಕಾಣುತ್ತಿವೆ.
ಮೊದಲಿದ್ದ ಚೆಕ್ಪೋಸ್ಟ್ಗಳನ್ನು ನಿಷ್ಕ್ರಿಯಗೊಳಿಸಿರುವುದರಿಂದ ಸರಕು ಪೂರೈಕೆ ಸಮಯ ವೇಗ ಪಡೆದಿದೆ. ಈ ಕಾರಣದಿಂದ ಕಂಪೆನಿಗಳ ವೆಚ್ಚಗಳು ಕಡಿತಗೊಂಡಿವೆ.
ಸರಕು ದರಗಳ ಮೇಲಿನ ತೆರಿಗೆಗಳು ಪುನರ್ ಪರಿಶೀಲನೆಗೊಳಗಾಗುವುದರಿಂದ ಹಿಂದಿನ ವರ್ಷಗಳಲ್ಲಿದ್ದ ೨೮% ಮತ್ತು ೫% ತೆರಿಗೆಯ ಸರಕು/ಸೇವೆಗಳ ಸಂಖ್ಯೆ ಗಣನೀಯವಾಗಿ ಕಡಮೆಯಾಗಿವೆ.
ಸೇವಾತೆರಿಗೆ, ಮಾರಾಟತೆರಿಗೆ, ವ್ಯಾಟ್ ಇತ್ಯಾದಿ ಹಲವೆಂಟು ತೆರಿಗೆಗಳಿಗಿಂತ ಜಿಎಸ್ಟಿ ಹೆಚ್ಚು ಸರಳ ಮತ್ತು ಸಮರ್ಪಕವಾಗಿದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
ಜಿಎಸ್ಟಿಯನ್ನು ಆಯಾ ಹಂತದಲ್ಲಿ ಇನ್ವಾಯ್ಸ್ಗಳಲ್ಲಿಯೆ (ಬಿಲ್) ಸ್ಪಷ್ಟವಾಗಿ ತೋರಿಸುವುದರಿಂದ ತೆರಿಗೆ ವಂಚನೆ ಸಾಧ್ಯವಾಗುವುದಿಲ್ಲ. ಉದ್ಯಮಿಗಳು ತೆರಿಗೆಯ ಲೆಕ್ಕವನ್ನು ತಪ್ಪಿಸಿದರೆ, ‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ ಸಿಗುವುದಿಲ್ಲ. ಈ ಕಾರಣದಿಂದ ಉದ್ಯಮಿಯು ತಾನು ಕಟ್ಟಿದ ತೆರಿಗೆಯಲ್ಲಿ ಮೊದಲೇ ಕಟ್ಟಿದ ತೆರಿಗೆಯನ್ನು ಹಿಂಪಡೆಯಲು (ರೀಫಂಡ್) ಬಿಲ್ ಕೊಡಲೇಬೇಕಾಗುತ್ತದೆ. ಆನ್ಲೈನ್ ಮೂಲಕ ನೋಂದಣಿಯಾಗುವುದರಿಂದ ತೆರಿಗೆ ಹಿಂಪಡೆಯುವಿಕೆ ವಿಳಂಬವಾಗುವ ಸಂಭವ ಬಹಳ ಕಡಮೆ. ಇದರ ಪರಿಣಾಮ, ತೆರಿಗೆ ಸಂಗ್ರಹಣೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಈ ಎಲ್ಲ ಅನುಕೂಲಗಳಿಂದ ಭವಿಷ್ಯದಲ್ಲಿ ತೆರಿಗೆಯ ದರದ ಇಳಿಕೆ ಸಾಧ್ಯವಾಗಿ, ದೇಶದ ‘ಜಿಡಿಪಿ’ ಏರಿಕೆಯಾಗುತ್ತದೆ. ಅದರಿಂದ ಸರ್ಕಾರಕ್ಕೆ ಮೂಲಸೌಕರ್ಯ, ಸಾಮಾಜಿಕ ಕಲ್ಯಾಣ ಯೋಜನೆ ಮುಂತಾದವುಗಳಿಗೆ ಬೇಕಿರುವ ಬಂಡವಾಳ/ಸಂಪನ್ಮೂಲ ಕ್ರೋಡೀಕರಣವಾಗುತ್ತದೆ.
ತೆರಿಗೆ ಪಾವತಿ ಈಗ ಸುಲಭಸಾಧ್ಯವಾಗಿರುವುದರಿಂದ ನೋಂದಣಿದಾರರ ಸಂಖ್ಯೆಯಲ್ಲಿ ದಾಖಲೆಯ ಏರಿಕೆಯಾಗಿದೆ. ತೆರಿಗೆ ಪಾವತಿಯನ್ನು ಹೆಚ್ಚು ಸರಳಗೊಳಿಸಿರುವ ಕಾರಣದಿಂದ ವಿಶ್ವದ ದೇಶಗಳ ‘ಸರಳೀಕೃತ ವ್ಯಾಪಾರ ವ್ಯವಸ್ಥೆ’ಯ ಪಟ್ಟಿಯಲ್ಲಿ ಭಾರತ ಹೆಚ್ಚಿನ ಶ್ರೇಯಾಂಕಕ್ಕೆ ಜಿಗಿದಿದೆ. ೨೦೧೮ರಲ್ಲಿ ೧೦೦ನೇ ಶ್ರೇಯಾಂಕದಲ್ಲಿದ್ದ ಭಾರತ ೨೦೨೦ರಲ್ಲಿ ೬೩ನೇ ಸ್ಥಾನಕ್ಕೆ ಬಡ್ತಿ ಪಡೆದಿರುವುದು ಒಂದು ಗಮನಾರ್ಹ ಅಂಶ.
ಕೆಲವು ಋಣಾತ್ಮಕ ಅಂಶಗಳು
ಹೊಸ ಪದ್ಧತಿ ಜಾರಿಯಾಗುವ ಸಮಯದಲ್ಲಿ, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ಹೊಸ ಮಾನದಂಡಗಳಿಗೆ ಹೊಂದಿಕೊಳ್ಳುವಲ್ಲಿ ಹಲವು ಅಡೆತಡೆ/ತೊಂದರೆಗಳನ್ನು ಹೊಂದಿದ್ದವು, ತಾತ್ಕಾಲಿಕವಾಗಿ ವ್ಯಾಪಾರ ಕಾರ್ಯಾಚರಣೆಗಳನ್ನು ಅಡ್ಡಿಪಡಿಸಿದ್ದವು. ಈ ಬಗೆಯ ದೂರುಗಳ ಬಗೆಗೂ ಸರ್ಕಾರ ಹೆಚ್ಚಿನ ಗಮನಹರಿಸಬೇಕಿದೆ.
ಜಿಎಸ್ಟಿ ಜಾರಿಯಾಗಿರುವ ಬಹಳಷ್ಟು ದೇಶಗಳು ಎಲ್ಲ ವಸ್ತುಗಳಿಗೆ ಒಂದೇ ತೆರಿಗೆ ದರವನ್ನು ನಿಗದಿಪಡಿಸಿವೆ. ಆದರೆ ಭಾರತದಲ್ಲಿ ಶೂನ್ಯ ದರದಿಂದ ೨೮%ವರೆಗೆ ತೆರಿಗೆ ದರಗಳನ್ನು ನಿಗದಿಪಡಿಸಲಾಗಿದೆ. ಈ ತೆರಿಗೆ ದರವನ್ನು ಎರಡು ಅಥವಾ ಮೂರಕ್ಕೆ ಇಳಿಸುವುದು ಉತ್ತಮವೆಂದು ತಜ್ಞರ ಅಭಿಪ್ರಾಯವಿದೆ.
ಪ್ರತಿ ತಿಂಗಳು ಸಾವಿರಾರು ಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣಗಳು ವರದಿಯಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ಈ ನಿಟ್ಟಿನಲ್ಲಿ ಹೆಚ್ಚಿಸುವ ಅಗತ್ಯವಿದೆ.
ತೆರಿಗೆ ಸಂಗ್ರಹದಲ್ಲಿ ಏರಿಕೆ
ಪ್ರತಿ ತಿಂಗಳ ಜಿಎಸ್ಟಿ ಸಂಗ್ರಹ ವರ್ಷದಿಂದ ವರ್ಷಕ್ಕೆ ಹೆಚ್ಚಳವನ್ನು ಕಾಣುತ್ತಿದೆ. ೨೦೧೭ರಲ್ಲಿ ಜಿಎಸ್ಟಿ ಜಾರಿಯಾದಾಗ ೮೫,೦೦೦ದಿಂದ ೯೫,೦೦೦ ಕೋಟಿ ರೂ.ಗಳಷ್ಟಿದ್ದ ಮಾಸಿಕ ಜಿಎಸ್ಟಿ ಆದಾಯವು ಈಗ ಸುಮಾರು ೧.೫ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು ೨೦೨೩ ಏಪ್ರಿಲ್ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ೧.೮೭ ಲಕ್ಷ ಕೋಟಿ ರೂಗಳನ್ನು ಮುಟ್ಟಿತು.
೨೦೨೩ ಜೂನ್ ತಿಂಗಳಿನಲ್ಲಿ ಸಂಗ್ರಹಿಸಲಾಗಿರುವ ಒಟ್ಟು ಜಿಎಸ್ಟಿ ಆದಾಯವು ೧,೬೧,೪೯೭ ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್ಟಿ ೩೧,೦೧೩ ಕೋಟಿ, ಎಸ್ಜಿಎಸ್ಟಿ ೩೮,೨೯೨ ಕೋಟಿ, ಐಜಿಎಸ್ಟಿ ೮೦,೨೯೨ ಕೋಟಿಗಳಷ್ಟಾಗಿವೆ. ಜೂನ್ ೨೦೨೩ರ ಆದಾಯವು ಕಳೆದ ವರ್ಷದ ಅದೇ ತಿಂಗಳ ಆದಾಯಕ್ಕಿಂತ ೧೨% ಹೆಚ್ಚಳವಾಗಿದೆ. ತಿಂಗಳಿನಲ್ಲಿ, ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ೧೮% ಹೆಚ್ಚಾಗಿದೆ.
ಜಿಎಸ್ಟಿ ಬಹಳಷ್ಟು ಸುಧಾರಣೆಗಳನ್ನು ಕಂಡಿದ್ದರೂ ಪೂರ್ಣ ಯಶಸ್ವಿಗೊಳ್ಳಲು ಮತ್ತು ಅದರ ಮುಖ್ಯ ಉದ್ದೇಶಗಳನ್ನು ಸಾಧಿಸಲು ಅನೇಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಜಿಎಸ್ಟಿ ಅಡಿಯಲ್ಲಿ ನೋಂದಾಯಿಸದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪೂರೈಕೆದಾರರಿಗಿರುವ ನಿಬಂಧನೆಗಳ ಕಾರಣದಿಂದಾಗಿ ದೊಡ್ಡ ಘಟಕಗಳು ಅವರಿಂದ ಖರೀದಿಗೆ ಮುಂದಾಗದಿರುವ ಸಮಸ್ಯೆಯ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅದೇ ರೀತಿಯಲ್ಲಿ ಜಿಎಸ್ಟಿ ಕಾರ್ಯಾಚರಣೆಯಲ್ಲಿರುವ ಸಂಕೀರ್ಣತೆಗಳು ಕಡಮೆಯಾಗಬೇಕಿದೆ ಮತ್ತು ಕಾನೂನುಗಳ ಘೋಷಣೆಗಳಲ್ಲಿ ಮತ್ತಷ್ಟು ಸ್ಪಷ್ಟತೆ ತರಬೇಕಿದೆ ಎನ್ನುವುದನ್ನು ಮರೆಯುವಂತಿಲ್ಲ.
ಅಭಿವೃದ್ಧಿ ಪಥದ ಆಶಾಕಿರಣ
ಹೊಸ ತೆರಿಗೆಯನ್ನು ದೇಶಕ್ಕೆ ಪ್ರಸ್ತುತಿಪಡಿಸುವ ಸಮಯದಲ್ಲಿ ಪ್ರಧಾನಿ ಮೋದಿಯವರು ಆಡಿದ ಕೆಲವು ಸದಾಶಯದ ಮಾತುಗಳು ಜಿಎಸ್ಟಿ ಜಾರಿಯಾದ ಆರು ವರ್ಷಗಳ ನಂತರವೂ ಪ್ರಸ್ತುತ. “ಜಿಎಸ್ಟಿಯು ದೇಶದ ವ್ಯಾಪಾರದಲ್ಲಿನ ಅಸಮತೋಲನವನ್ನು ಕೊನೆಗೊಳಿಸುವ ವ್ಯವಸ್ಥೆಯಾಗಿದೆ. ಇದು ದೇಶದ ರಫ್ತುಗಳನ್ನು ಹೆಚ್ಚಿಸುತ್ತದೆ. ಈ ವ್ಯವಸ್ಥೆಯು ಈಗಾಗಲೇ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಮತ್ತಷ್ಟು ಬಲ ನೀಡಿದೆ. ಹಿಂದುಳಿದ ರಾಜ್ಯಗಳ ಅಭಿವೃದ್ಧಿಯ ಅವಕಾಶವನ್ನು ಹೊಸತೆರಿಗೆ ವ್ಯವಸ್ಥೆ ಒದಗಿಸುತ್ತದೆ. ನಮ್ಮ ರಾಜ್ಯಗಳು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ. ಬಿಹಾರ, ಪೂರ್ವ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಈಶಾನ್ಯ, ಒಡಿಶಾ – ಈ ರಾಜ್ಯಗಳು ನೈಸರ್ಗಿಕ ಸಂಪನ್ಮೂಲಗಳಿಂದ ತುಂಬಿವೆ. ಒಂದೇ ತೆರಿಗೆ ಪದ್ಧತಿಯು ಅಂಥ ರಾಜ್ಯಗಳ ಯಾವುದೇ ಕೊರತೆ ನಿವಾರಣೆ ಮಾಡುವ ಶಕ್ತಿ ಹೊಂದಿದೆ. ಭಾರತದ ಎಲ್ಲ ರಾಜ್ಯಗಳು ಅಭಿವೃದ್ಧಿಗೆ ಸಮಾನ ಅವಕಾಶವನ್ನು ಪಡೆಯುತ್ತವೆ. ಜಿಎಸ್ಟಿ ನಮ್ಮ ರೈಲ್ವೇ ಇದ್ದಂತೆ. ರೈಲ್ವೆಯನ್ನು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ನಡೆಸುತ್ತವೆ. ಆದರೂ ನಾವು ಅದನ್ನು ಭಾರತೀಯ ರೈಲ್ವೇ ಎಂದು ನೋಡುತ್ತೇವೆ. ಕೇಂದ್ರ ಸೇವೆಗಳ ಅಧಿಕಾರಿಗಳನ್ನು ಕೇಂದ್ರ ಮತ್ತು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ, ಆದರೂ ಅವರು ಭಾರತಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ. ಜಿಎಸ್ಟಿ ಭಾಗವಾಗಿ ಮೊದಲ ಬಾರಿಗೆ, ಕೇಂದ್ರ ಮತ್ತು ರಾಜ್ಯಸರ್ಕಾರಗಳು ಒಂದೇ ದಿಕ್ಕಿನಲ್ಲಿ ಒಟ್ಟಾಗಿ ಕೆಲಸ ಮಾಡುತ್ತವೆ. ‘ಏಕ ಭಾರತ – ಶ್ರೇಷ್ಠ ಭಾರತ’ ಸಾಕ್ಷಾತ್ಕಾರದ ಮಾರ್ಗದಲ್ಲಿ ಇದೊಂದು ಉದಾಹರಣೆ. ಇದರ ಪ್ರಭಾವವನ್ನು ಮುಂಬರುವ ಪೀಳಿಗೆ ಬಹಳ ಹೆಮ್ಮೆಯಿಂದ ಪ್ರಶಂಸಿಸುತ್ತದೆ.” ಹೊಸತೆರಿಗೆ ಪದ್ಧತಿಯು ಜಾರಿಗೊಂಡ ಆರಂಭದ ಹಂತದಲ್ಲಿನ ಕೆಲವೊಂದು ನ್ಯೂನತೆಗಳನ್ನು ದಾಟಿ ಅಭೂತಪೂರ್ವ ಯಶಸ್ಸು ಕಂಡಿರುವುದರಲ್ಲಿ ಸಂಶಯವಿಲ್ಲ. ದೇಶದ ಆರ್ಥಿಕತೆಯೂ ಈ ಕಾರಣದಿಂದ ಹೆಚ್ಚಿನ ವೇಗ ಪಡೆದಿರುವುದು ನಿಚ್ಚಳ. ಭಾರತದಂತಹ ಒಕ್ಕೂಟ ವ್ಯವಸ್ಥೆಯ ವಿಶಾಲ ದೇಶದಲ್ಲಿ, ರಾಜ್ಯಗಳ ವಿವಿಧ ಪಕ್ಷಗಳ ಸರ್ಕಾರಗಳ ಆಡಳಿತವಿರುವಲ್ಲಿ, ಏಕರೂಪದ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವ ಸಂಕಲ್ಪ ಸಿದ್ಧಿಯಾಗುವುದು ಸುಲಭಸಾಧ್ಯವಲ್ಲ. ಅದು ಸಾಧ್ಯವಾಗಿ ಯಶಸ್ವೀ ಆರು ವರ್ಷಗಳನ್ನು ಈಗ ಪೂರ್ಣಗೊಳಿಸಿದೆ. ಈ ಮಹತ್ತರ ಕಾರ್ಯದ ಯಶಸ್ಸಿಗೆ ಕಾರಣರಾದ ಎಲ್ಲ ಮಹನೀಯರೂ ಅಭಿನಂದನಾರ್ಹರು.