ಬಹಿರಂಗದ ವಸ್ತುಗಳನ್ನು ಶಬ್ದಗಳಿಂದ ವರ್ಣಿಸುವುದು ಸುಲಭ. ಅಂತರಂಗದ ಭಾವನೆಗಳನ್ನು ಅಷ್ಟು ಸುಲಭವಾಗಿ ವರ್ಣಿಸಲಾಗದು. ಸುಖದುಃಖಾದಿ ಲೌಕಿಕ ಭಾವನೆಗಳನ್ನು ಹೇಗಾದರೂ ವರ್ಣಿಸಬಹುದು. ಅತ್ಯಂತ ಸೂಕ್ಷ್ಮವಾದ ಅಲೌಕಿಕ ಭಕ್ತಿಭಾವವನ್ನು ವರ್ಣಿಸುವುದು ಕಷ್ಟ.
ಸೀಮಿತ ಸ್ಥೂಲ ವಸ್ತುಗಳನ್ನು ವರ್ಣಿಸಬಹುದು. ಆದರೆ ಭಕ್ತಿ ಭಾವವು ನಿಸ್ಸೀಮವೂ, ಸೂಕ್ಷ್ಮವೂ ಆಗಿದೆ. ಆದ್ದರಿಂದ ಭಕ್ತಿಯನ್ನು ವರ್ಣಿಸಲಾಗದು. ಜಗತ್ತಿನಲ್ಲಿ ಅನೇಕ ಶ್ರೇಷ್ಠ ಕವಿಗಳು ಮಾನವಪ್ರೇಮ ಕುರಿತು ಸಾವಿರ ಸಾವಿರ ಕಾವ್ಯಗ್ರಂಥಗಳನ್ನು ರಚಿಸಿದ್ದಾರೆ. ಆದರೂ ‘ಆ ಪ್ರೇಮದ ಸಮಗ್ರ ವರ್ಣನೆ ಆಯಿತು’ ಎಂದು ಯಾರೂ ಭಾವಿಸಿಲ್ಲ. ಮಾನವರ ಸಾಮಾನ್ಯವಾದ ಲೌಕಿಕ ಪ್ರೇಮವನ್ನೇ ಪೂರ್ಣವಾಗಿ ವರ್ಣಿಸಲಾಗಿಲ್ಲ. ಇನ್ನು ಅಲೌಕಿಕ ದೈವೀ ಭಕ್ತಿಯನ್ನು ವರ್ಣಿಸುವುದೆಂತು?
ಭಕ್ತನ ಪ್ರಾಣದಂತಿರುವ ಈ ಭಕ್ತಿಯು ಭಗವಂತನಿಗೆ ಅತ್ಯಂತ ಪ್ರಿಯ. ಅಂತೆಯೇ ಈ ಭಕ್ತಿಯಿದ್ದಲ್ಲಿ ಅವನಿರುವನು. ಅದಿಲ್ಲದಲ್ಲಿ ಅವನಿಲ್ಲ! ಪ್ರಾಣಕ್ಕೆ ಪ್ರಾಣವಾಗಿರುವ ಈ ಭಕ್ತಿಭಾವವನ್ನು, ಪರಮಪ್ರೇಮವನ್ನು ತನ್ನ ಸಕಲೇಂದ್ರಿಯಗಳಿಂದ ಅಭಿವ್ಯಕ್ತ ಮಾಡುವವನೇ ಸದ್ಭಕ್ತನು!
ಭಗವದ್ಭಕ್ತನು ಪರಮಪ್ರೇಮಾಮೃತವನ್ನು ಆಕಂಠಪಾನ ಮಾಡಿದವನು. ಅವನು ಈ ಜಗತ್ತಿನಲ್ಲಿ ಏನನ್ನೂ ಬಯಸನು! ಕೊಡುವ ಮೊದಲೇ ಕೈಚಾಚುವ ನಾವೆಲ್ಲಿ, ಸುತ್ತಮುತ್ತ ಬೇಕಾದಷ್ಟು ಸಿರಿಸಂಪದ ಇದ್ದರೂ ಅದನ್ನು ಕಣ್ಣೆತ್ತಿ ನೋಡದ ಸದ್ಭಕ್ತರೆಲ್ಲಿ!
ಒಂದು ಊರು. ಅಲ್ಲೊಂದು ಬಡಕುಟುಂಬ. ಅವರಿಗೆ ಎಂಟು ವರುಷದ ಒಬ್ಬನೇ ಮಗ. ದಂಪತಿಗಳಿಬ್ಬರೂ ಕೂಲಿನಾಲಿ ಮಾಡಿ ಮಗುವನ್ನು ಅಕ್ಕರೆಯಿಂದ ಬೆಳೆಸುತ್ತಿದ್ದರು. ವಿಧಿವಶಾತ್ ಮಗುವಿನ ತಂದೆ ತೀರಿಹೋದ. ತಾಯಿ ಹಾಸಿಗೆ ಹಿಡಿದಳು. ಚಿಕ್ಕ ಬಾಲಕನೇ ದುಡಿಮೆಗೆ ಹೋಗಬೇಕಾಯಿತು. ಅವನು ಅವಿಶ್ರಾಂತವಾಗಿ ದುಡಿಯುವುದನ್ನು ನೋಡಿ ತಾಯಿಗೆ ಅಪಾರ ದುಃಖ.
ಒಂದು ದಿನ ರಾತ್ರಿ ಬಾಲಕನು ದಣಿದು ಮನೆಯಲ್ಲಿ ಮಲಗಿದ್ದಾನೆ. ತಾಯಿ ದೇವನಿಗೆ ಪ್ರಾರ್ಥಿಸುತ್ತಿದ್ದಾಳೆ, “ಓ ದೇವರೇ, ನನ್ನನ್ನು ಬೇಗ ಕರೆದುಕೋ! ನನ್ನ ಮಗನ ಕಷ್ಟವನ್ನು ನಾನು ನೋಡಲಾರೆ!”
ಮಾರುವೇಷದಲ್ಲಿ ನಡೆದಿದ್ದ ಆ ದೇಶದ ರಾಜನು ಈ ದುಃಖದ ನುಡಿಗಳನ್ನು ಕೇಳಿಸಿಕೊಳ್ಳುತ್ತಾನೆ. ಮನೆಯೊಳಗೆ ಬಂದು ಎಲುವಿನ ಗೂಡಾಗಿದ್ದ ತಾಯಿಯನ್ನು ಮಾತನಾಡಿಸುತ್ತಾನೆ. ಬಾಲಕನನ್ನು ಎಚ್ಚರಿಸಿ ಹೇಳುತ್ತಾನೆ, “ನಾನೀ ದೇಶದ ಮಹಾರಾಜ. ನಿಮ್ಮ ಕಷ್ಟವನ್ನು ನೋಡಿ ನನ್ನ ಮನ ಕರಗಿದೆ. ನಾಳೆಯೇ ನಿಮ್ಮ ಉಪಜೀವನಕ್ಕೆ ಎಲ್ಲ ಸಹಾಯವನ್ನು ಮಾಡುತ್ತೇನೆ, ಚಿಂತಿಸದಿರು!”
ಈ ಮಾತನ್ನು ಕೇಳಿದ ಬಡ ಬಾಲಕ ಹೇಳುತ್ತಾನೆ – “ಮಹಾರಾಜರೆ, ನಿಮ್ಮ ಔದಾರ್ಯಕ್ಕೆ ನಾನು ಋಣಿಯಾಗಿದ್ದೇನೆ. ಆದರೆ ನಿಮ್ಮ ಸಹಾಯ ನನಗೆ ಬೇಡ. ದೇವರು ನನಗೆ ದುಡಿಯುವ ಶಕ್ತಿಯನ್ನು, ಭಕ್ತಿಯನ್ನು ಕರುಣಿಸಿದ್ದಾನೆ. ಆನಂದದಿಂದ ದುಡಿದು, ತಾಯಿಯ ಸೇವೆಯನ್ನು ಮಾಡುತ್ತ ಸಂತೃಪ್ತಿಯಿಂದ ಇದ್ದೇನೆ.”
ಆ ಮಾತೃಭಕ್ತ ಬಾಲಕನಂತೆ ಭಗವದ್ಭಕ್ತನೂ ಭಗವತ್ಕಾರ್ಯಗಳಲ್ಲಿ ನಿತ್ಯತೃಪ್ತನು!
[ಪೂಜ್ಯ ಸ್ವಾಮಿಗಳ ‘ಭಕ್ತಿಯೋಗ’ ಪ್ರವಚನ ಸಂಗ್ರಹದಿಂದ.
ಸಂಕಲನ: ಡಾ|| ಶ್ರದ್ಧಾನಂದಸ್ವಾಮಿಗಳು.
ಕೃಪೆ: ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು.]