ದಯಾನಂದ ಸರಸ್ವತಿಗಳ ಇನ್ನೂರನೇ ಜನ್ಮದಿನ ಪರ್ವದ ಸ್ಮರಣೆಯ ನಿಮಿತ್ತ ವಿಶೇಷ ಲೇಖನ
ಬಾಲ್ಯದಿಂದಲೇ ಶಾಸ್ತ್ರಾಭ್ಯಾಸವನ್ನು ನಡೆಸಿದ ಮೂಲಶಂಕರ ನಿರಂತರವಾದ ಅಧ್ಯಯನ, ಲೋಕಸಂಚಾರ, ಉಪನ್ಯಾಸಗಳ ಮೂಲಕ ಲೋಕಪ್ರಸಿದ್ಧರಾಗುತ್ತಾರೆ. ಸಂನ್ಯಾಸ ಸ್ವೀಕರಿಸಿ ದಯಾನಂದ ಸರಸ್ವತಿಯವರಾದರು. ಸಾಂಗ ವೇದಾಧ್ಯಯನ ಮಾಡಿದರು. ಸಮಾಜದ ಸಮಸ್ಯೆಯ ಮೂಲವನ್ನು ಅರಿಯಲು ಯತ್ನಿಸಿದರು. ವೇದಗಳನ್ನು ತಳಹದಿಯಾಗಿರಿಸಿಕೊಂಡು, ಹಿಂದೂಸಮಾಜಕ್ಕೆ ಕವಿದಿದ್ದ ಕತ್ತಲೆಯಿಂದ ಅದನ್ನು ದೂರಗೊಳಿಸುವಂತೆ ಮತ್ತು ಹೊಸ ಬೆಳಕಿನ ದರ್ಶನವಾಗುವಂತೆ ಮಾಡುವಲ್ಲಿ ದಯಾನಂದ ಸರಸ್ವತಿಯವರು ತಮ್ಮ ಜೀವನವನ್ನೇ ಸಮರ್ಪಿಸಿದರು. ವೇದಗಳ ಕಡೆಗೆ ಹಿಂತಿರುಗಿ ಎನ್ನುವುದೇ ಅವರ ಜೀವನದ ಘೋಷಣೆಯಾಯಿತು.
ಹದಿನೆಂಟು-ಹತ್ತೊಂಬತ್ತನೆಯ ಶತಮಾನವನ್ನು ಭಾರತದ ಚರಿತ್ರೆಯೊಳಗೆ ಹೊಸಬಗೆಯ ಪಲ್ಲಟಗಳಿಗೆ ಸಾಕ್ಷಿಯಾದ ಕಾಲ ಎಂದೇ ಗುರುತಿಸಬಹುದು. ಹಲವು ಬಗೆಯ ಹೊಸತನಗಳಿಗೆ ಈ ಕಾಲಮಾನ ತೆರೆದುಕೊಂಡಿತು. ಅದರಲ್ಲೂ ಭಾರತೀಯ ಸಮಾಜದಲ್ಲಿ ಸುಧಾರಣೆಯ ಹೊಸಬಗೆಯ ಕಾಳಜಿಗಳು ಪ್ರಕಟವಾದವು. ಹಿಂದೂ ಸಮಾಜ ತನ್ನೊಳಗಿನ ಕಾಲಬಾಹ್ಯ ನಡವಳಿಕೆಯಿಂದ, ತನ್ನದೇ ಸಂಪ್ರದಾಯಗಳ ಮೇಲರಿಮೆ-ಕೀಳರಿಮೆಗಳ ಜಗಳದಲ್ಲಿ ಮುಳುಗಿ ಸತ್ತ್ವ ಕಳೆದು ಟೊಳ್ಳಾಗುತ್ತಿದ್ದಾಗ, ಸ್ವರಕ್ಷಣೆಯ ಸಾಮರ್ಥ್ಯವನ್ನೂ ಕಳೆದುಕೊಂಡು ಅನ್ಯಮತೀಯ ಆಕ್ರಮಣಗಳಿಗೆ ಸುಲಭವಾಗಿ ತುತ್ತಾಯಿತು. ಹಿಂದೂಧರ್ಮವನ್ನು ಇಂತಹ ಸಂಕಟದ ಕಾಲದಲ್ಲಿ ಸಂರಕ್ಷಣೆ ಮಾಡಬೇಕೆಂದು ಹೊರಟವರಲ್ಲೂ ಹಿಂದೂ ಸಮಾಜದ ಸಮಗ್ರವಾದ ಕಲ್ಪನೆಯೆ ಇಲ್ಲವಾಗಿದ್ದ ಕಾರಣ ಸರ್ವಸ್ಪರ್ಶಿಯಾಗಲು ಸಾಧ್ಯವಾಗಲಿಲ್ಲ. ಸುಧಾರಣೆಯ ಹೆಸರಿನಲ್ಲಿ ಮೇಲುಮೇಲಿನ ಸ್ತರದಲ್ಲಿ ನಡೆಸುತ್ತಿದ್ದ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶವನ್ನು ಕೊಟ್ಟಿರಲಿಲ್ಲ. ಏಕೆಂದರೆ ಹೀಗೆ ನಿವಾರಿಸಲು ಹೊರಟ ಸಮಸ್ಯೆ ಸರಳವಾದುದಾಗಿರಲಿಲ್ಲ. ಶತಮಾನಗಳಿಂದ ದೋಷವನ್ನು ದೋಷವೆಂದೇ ಅರಿಯದೆ ಸಹಜಗೊಳಿಸಿ ಆಚರಣೆಗಳ ಸ್ವರೂಪಕ್ಕೆ ತರಲಾಗಿತ್ತು.
ಸಮೂಲ ಚಿಂತನೆ
ದೋಷವನ್ನು ಅರಿಯಲು ದೋಷದ ಮೂಲಕ್ಕೆ ಇಳಿದು ಪರಿಹಾರವನ್ನು ಕಂಡುಕೊಳ್ಳಬೇಕಾಗಿತ್ತು. ಆದರೆ ಅಂತಹ ಪ್ರಯತ್ನಗಳು ದೊಡ್ಡ ಪ್ರಮಾಣದಲ್ಲಿ ನಡೆದಿರಲಿಲ್ಲ. ಸಮಾಜದಲ್ಲಿ ಹುಟ್ಟನ್ನು ಆಧರಿಸಿ ಕೆಲವರನ್ನು ಶ್ರೇಷ್ಠ ಮತ್ತು ಇನ್ನು ಕೆಲವರನ್ನು ಕೀಳೆಂದು ಪರಿಭಾವಿಸಿ ತಾರತಮ್ಯವನ್ನು ತೋರಲಾಗುತ್ತಿತ್ತು. ವಿದ್ಯಾವಂತರಾಗುತ್ತಿದ್ದ ಕೆಲವರಿಗೆ ಸಮಾಜದ ಈ ದೋಷ ಕಂಡಿತು. ತಪ್ಪೆಂದೂ ಅನ್ನಿಸಿತು. ತತ್ಕ್ಷಣದ ಪ್ರತಿಕ್ರಿಯೆಯಾಗಿ ಅವರಲ್ಲಿ ಅನೇಕರು ಜನಿವಾರ ಕಿತ್ತೆಸೆದರು, ಜುಟ್ಟು ಕತ್ತರಿಸಿಕೊಂಡರು, ಅಂತರ್ಜಾತೀಯ ವಿವಾಹ ಸಂಬಂಧಗಳನ್ನು ಬೆಳೆಸಿದರು, ಸಹಪಂಕ್ತಿ ಭೋಜನ ಏರ್ಪಡಿಸಿದರು. ಹೀಗೆ ಅನೇಕ ಉಪಕ್ರಮಗಳನ್ನು ತೋರಿದರೂ ಇವುಗಳಿಂದಷ್ಟೆ ನಿವಾರಣೆಯಾಗಬಹುದಾದಷ್ಟು ಸಮಸ್ಯೆ ಸರಳವಾಗಿರಲಿಲ್ಲ. ಈ ಎಲ್ಲ ಪ್ರಯತ್ನಗಳು ಅಂದಿನ ಕಾಲಕ್ಕೆ ಸುಧಾರಣೆಯ ಬಿಸಿಯನ್ನು ಬಹುಕಾಲ ಉಳಿಸಿಕೊಂಡು ಬಂದಿತ್ತಾದರೂ, ಸರಿಯಾದ ಸುಧಾರಣೆಗೆ ಇನ್ನಷ್ಟು ಆಳವಾದ, ಗಾಢವಾದ ಸಿದ್ಧತೆ ಬೇಕಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.
ಸಮಸ್ಯೆಯ ಮೂಲ ಹಿಂದೂಸಮಾಜದಲ್ಲಿತ್ತು. ಅದನ್ನು ಮೊದಲು ಅರಿಯಬೇಕಿತ್ತು. ಸಮಾಜಕ್ಕೆ ಅಂಟಿದ್ದ ಕಳೆಯನ್ನು ತೊಳೆಯುವುದು ಪರಿಶ್ರಮದ ಕೆಲಸವಾಗಿತ್ತು. ಸುಧಾರಣೆ ಎಂದರೆ ಮೂಲದಿಂದಲೇ ಮತ್ತೆ ಹೊಸದಾಗಿ ಕಟ್ಟಬೇಕಿದ್ದ ಕೆಲಸ. ಗೆದ್ದಲು ಹಿಡಿದು ದುರ್ಬಲವಾಗಿದ್ದ ಗೋಡೆಯನ್ನು ಕೆಡವದೆ ಹೊಸದನ್ನು ನಿರ್ಮಿಸಲು ಸಾಧ್ಯವಿರಲಿಲ್ಲ. ಈ ಕೆಡಹುವ ಕ್ರಿಯೆ ದ್ವೇಷದ ಮೂಲದ್ದಾಗಿರಲಿಲ್ಲ. ಕೆಡಹುತ್ತಲೇ ಹಿಂದುಧರ್ಮಕ್ಕೆ ತಾತ್ತ್ವಿಕವಾಗಿ, ತಾರ್ಕಿಕವಾಗಿ ಗಟ್ಟಿಯಾದ ಒಂದು ನೆಲವನ್ನು ಸಿದ್ಧ ಮಾಡಬೇಕಾಗಿತ್ತು.
ಅಂದಿನ ಸಮಾಜದ ಪರಿದೃಶ್ಯ
ಮಹಿಳೆಯರನ್ನು ಕೀಳಾಗಿ ನಡೆಸಿಕೊಳ್ಳುತ್ತ, ಅವರ ಸೃಷ್ಟಿಶೀಲ ಸಾಮರ್ಥ್ಯವನ್ನೇ ಗೌಣವಾಗಿ ಮೂಲೆಗೆ ತಳ್ಳಿದ್ದಂತಹ ಸ್ಥಿತಿಯಲ್ಲಿ, ವಿಧವೆಯರನ್ನು ಒಂದೋ ಅಮಾನವೀಯವಾಗಿ ಸತಿ ಹೋಗಬೇಕು, ಇಲ್ಲವೇ ಜೀವನಪರ್ಯಂತ ಅನಾಗರಿಕವಾಗಿ ನಡೆಸಿಕೊಳ್ಳಲು ಸಿದ್ಧರಾಗಿರಬೇಕು ಎನ್ನುವಂತಿದ್ದ, ಶೂದ್ರರು-ದಲಿತರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಿಕೊಳ್ಳುತ್ತಿದ್ದ, ಒಂದು ಬಗೆಯ ನಿರಾಶಾದಾಯಕ ಸ್ಥಿತಿಯಲ್ಲಿ ಹಿಂದುಸಮಾಜವಿತ್ತು. ಒಂದೆಡೆ ಆಂತರಿಕ ದೋಷಗಳ ಭಾರಕ್ಕೆ ಕುಸಿದುಹೋಗಿದ್ದರೆ, ಇನ್ನೊಂದೆಡೆ ಬಾಹ್ಯ ಆಕ್ರಮಣಕಾರರ ಅನಿಯಂತ್ರಿತ ಅಟ್ಟಹಾಸಕ್ಕೆ ಸಿಲುಕಿ ಹಿಂದುಗಳು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗದೆ ಒಂದೋ ಬಲಾತ್ಕಾರಕ್ಕೆ, ಇಲ್ಲವೇ ಆಮಿಷಕ್ಕೆ, ಮತ್ತೆ ಕೆಲವರು ಕಳೆದುಕೊಂಡಿದ್ದ ಆತ್ಮಗೌರವವನ್ನು ಮರಳಿ ಸಂಪಾದಿಸಲು ಮತಾಂತರಗೊಳ್ಳುತ್ತಿದ್ದ ಕಾಲದಲ್ಲಿ, ಲೋಕದ ಸಜ್ಜನರು ಬಿಡುಗಡೆಗಾಗಿ ತೀವ್ರವಾಗಿಯೇ ಪ್ರಾರ್ಥಿಸಿರಬೇಕು.
ಆ ಪ್ರಾರ್ಥನೆಯ ಫಲವೋ ಎನ್ನುವಂತೆ ಈಗ್ಗೆ ಇನ್ನೂರು ವರ್ಷ ಹಿಂದೆ ಸೌರಾಷ್ಟ್ರದ ಮಣ್ಣಿನಲ್ಲಿ ಕರ್ಶನ್ಜಿ ತಿವಾರಿ ಮತ್ತು ಯಶೋದಾಬಾಯಿ ದಂಪತಿಗಳಿಗೆ ಜನಿಸಿದ ಮೂಲಶಂಕರನೇ ಮುಂದೆ ಭಾರತದ ಸಾಮಾಜಿಕ ಪರಿವರ್ತನೆಗೆ ಹೊಸ ಅಧ್ಯಾಯವನ್ನು ಬರೆದು ಮಹರ್ಷಿ ದಯಾನಂದ ಸರಸ್ವತಿಯವರಾಗುತ್ತಾರೆ (೧೨.೨.೧೮೨೪- ೩೦.೧೦.೧೮೮೩).
ಬಾಲ್ಯದಿಂದಲೇ ಶಾಸ್ತ್ರಾಭ್ಯಾಸವನ್ನು ನಡೆಸಿದ ಮೂಲಶಂಕರ ನಿರಂತರವಾದ ಅಧ್ಯಯನ, ಲೋಕಸಂಚಾರ, ಉಪನ್ಯಾಸಗಳ ಮೂಲಕ ಲೋಕಪ್ರಸಿದ್ಧರಾಗುತ್ತಾರೆ. ಸಂನ್ಯಾಸ ಸ್ವೀಕರಿಸಿ ದಯಾನಂದ ಸರಸ್ವತಿಯವರಾದರು. ಸಾಂಗ ವೇದಾಧ್ಯಯನ ಮಾಡಿದರು. ಸಮಾಜದ ಸಮಸ್ಯೆಯ ಮೂಲವನ್ನು ಅರಿಯಲು ಯತ್ನಿಸಿದರು. ವೇದಗಳನ್ನು ತಳಹದಿಯಾಗಿರಿಸಿಕೊಂಡು, ಹಿಂದೂಸಮಾಜಕ್ಕೆ ಕವಿದಿದ್ದ ಕತ್ತಲೆಯಿಂದ ಅದನ್ನು ದೂರಗೊಳಿಸುವಂತೆ ಮತ್ತು ಹೊಸ ಬೆಳಕಿನ ದರ್ಶನವಾಗುವಂತೆ ಮಾಡುವಲ್ಲಿ ದಯಾನಂದ ಸರಸ್ವತಿಯವರು ತಮ್ಮ ಜೀವನವನ್ನೇ ಸಮರ್ಪಿಸಿದರು. ವೇದಗಳ ಕಡೆಗೆ ಹಿಂತಿರುಗಿ ಎನ್ನುವುದೇ ಅವರ ಜೀವನದ ಘೋಷಣೆಯಾಯಿತು.
ಇದು ಕೇವಲ ಭಾವುಕ ಘೋಷಣೆಯಷ್ಟೆ ಆಗಿರಲಿಲ್ಲ. ವೇದಗಳ ಒಳಹೊಕ್ಕು, ತರ್ಕಿಸಿ, ಪರಿಶೀಲಿಸಿ ಅಲ್ಲಿ ಸತ್ಯವಿದೆ, ಸತ್ತ್ವವಿದೆ ಎಂದು ಅರಿತ ಮೇಲೆ ಮಾಡಿದ ಬುದ್ಧಿಪೂರ್ವಕ ಘೋಷಣೆಯಾಗಿತ್ತು. ಪಂಡಿತ ಸುಧಾಕರ ಚತುರ್ವೇದಿಗಳು, ದಯಾನಂದ ಸರಸ್ವತಿಯವರ ಬಗೆಗೆ ಹೇಳುತ್ತ, ದಯಾನಂದರು ಮತಾಚಾರ್ಯರಲ್ಲ; ನವೀನ ಮತ ಪ್ರವರ್ತಕರೂ ಅಲ್ಲ. ಅವರು ಸಮಸ್ತ ಮತ ಮತಾಂತರಗಳ ವಿಧ್ವಂಸನ ಹಾಗೂ ಏಕಮಾತ್ರ ಸಾರ್ವಭೌಮ ಧರ್ಮದ ಪ್ರಶಂಸನಕ್ಕಾಗಿ ಜಗತ್ತಿನಲ್ಲಿ ಉದ್ಭವಿಸಿದ ಒಬ್ಬ ನಿರ್ಮೋಹಕರೂ, ಪೂರ್ಣ ನಿಷ್ಪಕ್ಷರೂ, ಉದಾರತಮರೂ ಆದ ಮಹರ್ಷಿಗಳು. ಸುಧಾರಕ, ಆಚಾರ್ಯ, ಪಥಪ್ರದರ್ಶಕ ಮಾರ್ಗಾನ್ವೇಷಕ ಇವೆಲ್ಲರಿಗಿಂತ ಮೇಲ್ಮಟ್ಟದ ಆತ್ಮ ಋಷಿಯದು ಎಂದ ಮೇಲೆ ಮಹರ್ಷಿಯ ಮಟ್ಟವಾವುದೆಂಬುದನ್ನು ಊಹಿಸಿಕೊಳ್ಳಬಹುದು ಎಂದಿದ್ದರು.
ಸನಾತನಧರ್ಮದ ಅಧಿಷ್ಠಾನ
ಸುಧಾರಣೆಗಳು ಪಶ್ಚಿಮ-ಪ್ರೇರಿತ ವಿಚಾರಗಳಿಂದಲೇ ಆರಂಭವಾಗುವ ಉದಾಹರಣೆಗಳು ಇದ್ದ ಕಾಲಕ್ಕೆ ದಯಾನಂದರು ಪಶ್ಚಿಮಪ್ರೇರಿತರಾಗದೆ ಸನಾತನಧರ್ಮದ ವೇದಗಳಿಂದಲೇ ಪ್ರೇರಿತರಾಗಿ ಕಾರ್ಯಾರಂಭ ಮಾಡಿದರು. ವೇದಮಾರ್ಗದಲ್ಲೇ ಬದುಕು, ಸತ್ಯಾನ್ವೇಷಣೆಗೆ ವೇದಗಳೇ ಪ್ರಮಾಣವೆಂದು ತಿಳಿದು ಅದರ ಹೊರತಾಗಿ ಬೇರಾವುದೂ ಪ್ರಮಾಣವಲ್ಲ ಎನ್ನುವ ನಿಶ್ಚಿತವಾದ ನಿಲವು ದಯಾನಂದರದ್ದಾಗಿತ್ತು. ವೇದಗಳಿಗೆ ಹಿಂತಿರುಗುವುದೆಂಬುದು ಉದ್ವೇಗದ ಘೋಷಣೆಯಲ್ಲ. ವರ್ತಮಾನದ ಬದುಕಿನ ಸವಾಲುಗಳಿಗೆ ಉತ್ತರವಾಗಬಹುದಾದ ಶಕ್ತಿ ವೇದಗಳಲ್ಲಿದೆ. ಹೀಗಾಗಿ ವೇದಾಧಾರಿತ ಜ್ಞಾನಜಗತ್ತಿನ ಪುನರುತ್ಥಾನವಾಗಬೇಕೆಂಬ ಹಂಬಲ ಅವರದ್ದಾಗಿತ್ತು. ಆ ನಿಲವಿನ ತೀವ್ರವಾದ ಪ್ರತಿಪಾದನೆಗಾಗಿ ಉಳಿದೆಲ್ಲ ಗ್ರಂಥರಾಶಿಗಳನ್ನು ಪಕ್ಕಕ್ಕೆ ಸರಿಸಿದವರು ದಯಾನಂದರು.
ಈ ಕ್ರಿಯೆ ರೋಷದ ಭಾವನೆಯದ್ದಾಗಿರಲಿಲ್ಲ. ವೇದಗಳಲ್ಲಿಯೇ ಎಲ್ಲವೂ ಅಂತರ್ಗತವಾಗಿದೆ ಎನ್ನುವ ಅಧ್ಯಯನಪೂರ್ವಕ ಅಭಿಮತದಿಂದ ಅದರ ಹೊರತಾಗಿ ಬಂದಿರುವ ಅನೇಕ ಗ್ರಂಥರಾಶಿಗಳು ವೇದ ಸಂದೇಶಗಳನ್ನು ರೂಢಿಗತ ವಿಕೃತಿಗೆ ಇಳಿಸಿರುವುದರಿಂದ ಪ್ರಮಾಣಯೋಗ್ಯವಲ್ಲ, ಸ್ವೀಕಾರಯೋಗ್ಯವಲ್ಲ ಎನ್ನುವ ಕಠಿಣ ನಿಲವು ಅವರದ್ದಾಗಿತ್ತು. ಅವರ ಈ ನಿಲವು ನಮಗೆ ಸಮ್ಮತವೋ, ಅಸಮ್ಮತವೋ ಎನ್ನುವುದು ಪ್ರತ್ಯೇಕ ವಿಷಯ. ದಯಾನಂದರ ನಿಲವು, ನಿಷ್ಠೆಯ ತೀವ್ರತೆಯನ್ನು, ಸುಧಾರಣೆಗೆ ತೊಡಕಾಗಬಹುದಾದ ಸಂಗತಿಗಳನ್ನು ನಿವಾರಿಸಿಕೊಳ್ಳಲು ಮಾಡಿದ ಪ್ರಯತ್ನವನ್ನಂತೂ ನಿರಾಕರಿಸಲಾಗದು. ಇದೇ ಸಂದರ್ಭದಲ್ಲಿ ಅವರು ವಿಗ್ರಹಾರಾಧನೆಯನ್ನೂ ವಿರೋಧಿಸಿದರು. ವಿಗ್ರಹಾರಾಧನೆಯು ಅರ್ಥಕಳೆದುಕೊಂಡು ವಿಗ್ರಹವೇ ದೇವರಾಗಿ, ಇಡೀ ಚಿಂತನೆಯೇ ಕುಬ್ಜವಾಗಿ ವಿಕೃತವಾಗಿದ್ದಾಗ ದಯಾನಂದರು ವಿಗ್ರಹಗಳನ್ನೇ ನಿರಾಕರಿಸಿ ವಿಗ್ರಹಾರಾಧನೆಯ ವಿರುದ್ಧ ಆಂದೋಲನವನ್ನು ಕೈಗೊಂಡರು. ವಿಗ್ರಹಗಳನ್ನೇ ನೆಚ್ಚಿಕೊಂಡು ಜೀವನ ಹೊರೆಯುತ್ತಿದ್ದ ಪಂಡಿತ/ಪುರೋಹಿತ ಜನರಿಗೆ ದಯಾನಂದರ ವಿಚಾರ ಜನಪ್ರಿಯತೆಯನ್ನು ಗಳಿಸುತ್ತಿದ್ದುದು ಆತಂಕವನ್ನು ಉಂಟುಮಾಡಿತ್ತು. ಅವರ ವಿರುದ್ಧ ಅಪಪ್ರಚಾರ ಮಾಡಿದರು, ಜನಾಕ್ರೋಶವನ್ನು ಉಂಟುಮಾಡುವುದಕ್ಕಾಗಿ ಸುಳ್ಳು ಪ್ರಚಾರಗಳನ್ನು ಮಾಡಿದರು.
ಸಮಾಜ ಇನ್ನೂ ದಯಾನಂದರ ಅಭಿಪ್ರಾಯಗಳನ್ನು ಸ್ವೀಕಾರ ಮಾಡಬಹುದಾದ ಮಟ್ಟಕ್ಕೇರಿರಲಿಲ್ಲ. ಸಹಜವಾಗಿಯೇ ತೀವ್ರ ಪ್ರತಿರೋಧವೂ ಅಲ್ಲಿತ್ತು. ಆದರೆ ಇದಾವುದರಿಂದಲೂ ಅವರು ಅಂಜಲಿಲ್ಲ. ಪ್ರತಿರೋಧಗಳನ್ನು ವೇದೋಕ್ತವಾದ ಉತ್ತರಗಳಿಂದಲೇ ಎದುರಿಸುತ್ತ, ವಿರೋಧಿಗಳನ್ನೂ ತನ್ನವರನ್ನಾಗಿಸುತ್ತ, ದೇಶಾದ್ಯಂತ ಬಿರುಗಾಳಿಯನ್ನೆಬ್ಬಿಸಿದ್ದರು. ಅದರ ನಡುವೆಯೂ ಅವರ ಪ್ರತಿಪಾದನೆಯ ಮೊನಚು ಕಡಮೆಯಾಗಿರಲಿಲ್ಲ. ಅವರು ಸ್ವೀಕರಿಸಿದ ಸುಧಾರಣೆಯ ಈ ವ್ರತವು ನಿಶ್ಚಿತವಾಗಿಯೂ ರಕ್ತಪಾತ ರಹಿತ ಮಹಾನ್ಕ್ರಾಂತಿಯೇ ಆಗಿತ್ತು. ಲೋಕದ ಪ್ರಶ್ನೆಗಳಿಗೆ, ಪಂಡಿತರ ಸವಾಲುಗಳಿಗೆ ಶಾಸ್ತ್ರಾರ್ಥಗಳ ಮೂಲಕವೇ ಉತ್ತರಿಸುತ್ತ, ದಿಗ್ವಿಜಯಗೈಯುತ್ತ ಸಾಗಿದರು. ಮೂರ್ತಿಪೂಜಕರು ದಯಾನಂದರ ವಾದದ ವೈಖರಿಗೆ ತತ್ತರಿಸಿಹೋಗುತ್ತಿದ್ದರು. ನೇರವಾಗಿ ಎದುರಿಸಲು ಶಾಸ್ತ್ರಾರ್ಥಕ್ಕೆ ಬಂದವರೆಲ್ಲರೂ ಸೋತುಹೋದರು. ಆ ಸಾಮರ್ಥ್ಯವಿಲ್ಲದವರು ಹಿಂದಿನಿಂದಲೇ ದಯಾನಂದರ ನಿಂದನೆಯನ್ನು ಮಾಡುತ್ತ, ಅವರನ್ನು ಧರ್ಮದ್ರೋಹಿ ಎಂದು, ಇಸ್ಲಾಂ, ಕ್ರೈಸ್ತರ ಮುಖವಾಣಿ ಎಂಬಂತೆ ಬಿಂಬಿಸುತ್ತ ಅವರನ್ನು ಹೀಗಳೆಯುತ್ತಿದ್ದರು. ವೈಜ್ಞಾನಿಕ ದೃಷ್ಠಿಯೂ ವೇದನಿಷ್ಠೆಯೂ ದಯಾನಂದರ ಪಥವಾಗಿತ್ತು. ಸಮಾಜ ಜಡತೆಯನ್ನು ರೂಢಿಸಿಕೊಂಡಾಗ ಅದೇ ಸಮಾಜದ ಒಡಲಿನಿಂದ ಮೂಡಿದ ಸುಧಾರಣೆಯ ಧ್ವನಿ ಅವರಾಗಿದ್ದರು. ಧರ್ಮದ ಪುನರುಜ್ಜೀವನಕ್ಕಾಗಿ ಹಂಬಲಿಸಿದ ದಯಾನಂದರು ಧರ್ಮಭಂಜಕರೆಂಬ ನಿಂದನೆಗೂ ಒಳಗಾದರು.
ಆಂತರಿಕ ದೌರ್ಬಲ್ಯಗಳ ನಿವಾರಣೆ
ಹೊರಗಿನ ಮತಗಳ ಆಕ್ರಮಣದಿಂದ ಹಿಂದೂಧರ್ಮ ತತ್ತರಿಸಿತ್ತು. ಅಂದಿನ ಅನೇಕ ಸುಧಾರಕರು ಹೊರಗಿನ ಶತ್ರುಗಳ ವಿರುದ್ಧ ಅಷ್ಟಿಷ್ಟು ಜನಜಾಗೃತಿಯನ್ನು ಮೂಡಿಸುತ್ತ, ಲೋಕ ಸಂಚಾರಗೈಯುತ್ತಿದ್ದರೆ, ದಯಾನಂದ ಸರಸ್ವತಿಯವರು ಸುಧಾರಣೆಯು ಹೊರಗಿನ ಶತ್ರುಗಳ ಅನ್ಯಾಯದಿಂದ ಹಿಂದುಸಮಾಜವನ್ನು ಪಾರುಮಾಡುವುದಕ್ಕಾಗಿ ಮಾತ್ರವಲ್ಲ, ಒಳಗಿನಿಂದಲೇ ಗೆದ್ದಲು ಹುಳುವಿನಂತೆ ಧರ್ಮವೆಂಬ ವೃಕ್ಷವನ್ನು ದುರ್ಬಲಗೊಳಿಸುತ್ತಿರುವ ಆಂತರಿಕ ಶಕ್ತಿಗಳನ್ನು ತಡೆಯುವುದೂ ಸುಧಾರಕನ ಕರ್ತವ್ಯ ಎಂಬಂತೆ ದುಡಿದರು. ದೇವರು, ಧರ್ಮ, ಸಂಪ್ರದಾಯಗಳ ಹೆಸರಿನಲ್ಲಿ ಕೆಲವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇನ್ನು ಕೆಲವರು ಧರ್ಮದ ಹೆಸರಿನಲ್ಲಿ ಮುಗ್ಧ ಜನಗಳನ್ನು ಶೋಷಿಸುತ್ತಿದ್ದರು. ಧರ್ಮದ ಮುಖವಾಡ ಕೆಲವರಿಗೆ ಹೊಟ್ಟೆ ತುಂಬಿಸಿ ಸುಖಲೋಲುಪತೆಯಲ್ಲಿ ಮುಳುಗಲು ಪರವಾನಿಗೆಯಾಗಿತ್ತು. ಉದ್ದೇಶವನ್ನು ಮರೆತ ಇಂತಹ ಗುರುಗಳು, ಸಂನ್ಯಾಸಿಗಳು ಮೊದಲಾದವರೇ ಧರ್ಮದ ಒಳಗಿನ ಕಳೆಗಳಾಗಿ ನಿಜ ಬೆಳೆಯನ್ನು ನಾಶಮಾಡುವ ಶಕ್ತಿಗಳಾಗಿದ್ದರು. ಧರ್ಮದ ಸತ್ತ್ವವನ್ನು ನಾಶಮಾಡುತ್ತಿದ್ದ ಇಂತಹ ವ್ಯಕ್ತಿಗಳನ್ನು ದಯಾನಂದರು ಕಟುವಾಗಿಯೆ ವಿಡಂಬನೆ ಮಾಡುತ್ತಿದ್ದರು. ವೇದಗಳನ್ನು ಜೀವನದ ರೂಢಿಯಾಗಿಸಿಕೊಂಡವರಲ್ಲೂ ಗೊತ್ತಿಲ್ಲದೆಯೆ ಅನೇಕ ವಿಕೃತಿಗಳು ಮನೆ ಮಾಡಿಕೊಂಡಿದ್ದವು. ಅವರಲ್ಲನೇಕರು ವೇದಗಳ ಒಳಗಿನ ಸತ್ತ್ವವನ್ನು ಅರಿಯದೆ ಹೊರಗಿನ ತೊಗಟೆಯನ್ನು ಅಪ್ಪಿಕೊಂಡಿದ್ದರು. ಅನುಷ್ಠಾನದ ಸಂದರ್ಭದಲ್ಲಿ ವಿಕೃತಗೊಂಡ ಆಚರಣೆಗಳನ್ನು ಶಾಸ್ತ್ರಗಳೆಂಬಂತೆ ಬೋಧಿಸಲಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣ ವೇದಗಳ ಅಪವ್ಯಾಖ್ಯಾನ. ದಯಾನಂದರು ವೇದಗಳ ಮೂಲಕ್ಕೆ ಪ್ರವೇಶಿಸಿ ಅಗತ್ಯವಾದ ಪುನರ್ ವ್ಯಾಖ್ಯಾನವನ್ನು ಮಾಡುತ್ತಾರೆ. ಈ ಮೂಲಕ ಶಾಸ್ತ್ರದ ಹೆಸರಿನಲ್ಲಿ ಸೇರಿಕೊಂಡ ವಿಕೃತಿಗಳ ನಿವಾರಣೆಗಾಗಿ, ಇಂತಹ ಸ್ಥಿತಿಯಿಂದ ಸಮಾಜವನ್ನು ಪಾರುಮಾಡಬೇಕೆಂದು ಮುಂಚೂಣಿಗೆ ನಿಂತು ತಮ್ಮ ಜೀವನವನ್ನು ಸಮರ್ಪಿಸಿದರು.
ದಯಾನಂದರ ವೇದೋಕ್ತ ವೈಚಾರಿಕತೆಯು ಪ್ರವರ್ಧಮಾನಕ್ಕೆ ಬರುವುದನ್ನು ವಿರೋಧಿಶಕ್ತಿಗಳು ಸಹಿಸದಾಗಿದ್ದರು. ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದವರನೇಕರು, ಹತ್ಯೆಗೆ ಪ್ರಯತ್ನಿಸಿದವರು ಅನೇಕರು. ವಿಷ ಉಣಿಸಿ ಕೊಲ್ಲಲು ಪ್ರಯತ್ನ ಮಾಡಿದವರು ಅನೇಕರು. ಆದರೆ ದಯಾನಂದರು ಇವೆಲ್ಲವನ್ನು ಎದುರಿಸಿದರು. ಕಪಟಿಗಳ ಕಪಟವನ್ನು ಸಮಾಜದ ಮುಂದಿರಿಸಿದರು. ದಯಾನಂದರನ್ನು ಓರ್ವ ಮೂರ್ತಿಭಂಜಕ ಎಂಬಂತೆ ಬಿಂಬಿಸಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ದಯಾನಂದರು ಮಾಡುತ್ತಿದ್ದ ಕಪಟಸಂಪ್ರದಾಯಗಳ ವಿರೋಧವನ್ನು ಧರ್ಮವಿರೋಧಿ ಎಂಬಂತೆ ಬಿಂಬಿಸಲು ಮಾಡಿದ ಪ್ರಯತ್ನಗಳೂ ಕೈಗೂಡಲಿಲ್ಲ.
ವೇದ: ಎಲ್ಲರ ವಾರಸಿಕೆ
ಅವರ ಅನುಯಾಯಿಗಳನೇಕರು ಇಂತಹ ಘಟನೆಗಳಿಂದ ರೋಸಿಹೋಗಿ ಪ್ರತೀಕಾರವನ್ನು ಬಯಸಿದರೂ ದಯಾನಂದರು, ಭಿನ್ನ ಮತ, ಭಿನ್ನ ಅಭಿಪ್ರಾಯಗಳನ್ನು ಹೊಂದಿರುವವರು ನಮ್ಮ ವಿರೋಧಿಗಳಲ್ಲ ಎಂಬ ಉದಾತ್ತ ನಿಲವನ್ನು ತೋರಿಸುತ್ತ, ಅವರನ್ನು ಸುಧಾರಿಸಬೇಕು, ಸುಧಾರಿಸಬೇಕಾದವರನ್ನೇ ವಿರೋಧಿಗಳೆಂದು ಭಾವಿಸಿ ದೂರವಿಟ್ಟರೆ ಸುಧಾರಿಸುವುದು ಯಾರನ್ನು ಎನ್ನುವ ಮೂಲಭೂತ ಪ್ರಶ್ನೆಯನ್ನು ಕೇಳುತ್ತಿದ್ದರು. ಯಾವುದು ಎಲ್ಲರಿಗೂ ಸೇರಬೇಕಾಗಿತ್ತೋ ಅಂತಹ ವೇದಗಳೆನ್ನುವ ಸಾವಿರಾರು ವರ್ಷಗಳ ಜ್ಞಾನಪರಂಪರೆಯನ್ನು ಕೆಲವೇ ಕೆಲವು ಪಂಡಿತರು ತಮ್ಮ ಸ್ವತ್ತಾಗಿಸಿಕೊಂಡು ಸಮಸ್ತ ಅನುಕೂಲಗಳನ್ನೂ ಅನುಭವಿಸುತ್ತ, ಜನರನ್ನು ವಂಚಿಸುತ್ತಿದ್ದಾಗ ದಯಾನಂದರು ವೇದಗಳ ಮೇಲೆ ಜಾತಿ ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನ ಅಧಿಕಾರವಿದೆ ಎಂದು ಘೋಷಿಸಿದ್ದರು. ಸರ್ವರಿಗೂ ವೇದಾಧಿಕಾರವಿದೆ ಎಂದು ಮಾತ್ರ ಹೇಳಿ ಸುಮ್ಮನಾಗಲಿಲ್ಲ. ಯಾರನ್ನು ಶತಮಾನಗಳಿಂದ ವೇದಾಧ್ಯಯನದಿಂದ ವಂಚಿತರನ್ನಾಗಿಸಲಾಗಿತ್ತೋ ಅಂತಹ ಶೂದ್ರಾದಿ ದಲಿತ ಬಂಧುಗಳಿಗೂ ಗಾಯತ್ರಿ ಮಂತ್ರಬೋಧನೆಯನ್ನು ಮಾಡಿದರು. ವೇದಮಂತ್ರ ಪಠಣಕ್ಕೆ ಸ್ತ್ರೀಯರೂ ಶೂದ್ರರೂ ಅರ್ಹರೆನ್ನುವುದನ್ನು ಕಿಂಚಿತ್ತೂ ಅನುಮಾನವಿಲ್ಲದಂತೆ ಪ್ರಕಟಪಡಿಸಿದರು. ಜಾತಿಪದ್ಧತಿ ಮಾನವಕುಲಕ್ಕೆ ಬಗೆದ ದ್ರೋಹ ಎನ್ನುತ್ತ, ಗಾಯತ್ರಿ ಮಂತ್ರವು ಮಾನವಜನಾಂಗಕ್ಕೆ ನೀಡಿದ ಸರ್ವಶ್ರೇಷ್ಠ ವರದಾನ ಎಂದಿದ್ದರು. ಜಾತಿಯ ಕಾರಣದಿಂದ ಯಾರಿಗೂ ಸಿಗದಂತೆ ಮುಚ್ಚಿಟ್ಟ ಪ್ರವೃತ್ತಿಯನ್ನು ಖಂಡಿಸಿ ಎಲ್ಲರಿಗಾಗಿ ಗಾಯತ್ರಿ ಎಂದು ಘೋಷಿಸಿದರು. ಶೂದ್ರರ ಮುಂದೆ ವೇದಘೋಷ ಮಾಡಿ ಅನರ್ಥ ಮಾಡಿದಿರಿ ಎಂದು ನಿಂದಿಸಿದವರಿಗೂ ಉತ್ತರಿಸಿದರು. ಮುಂದುವರಿದು, ಜನ್ಮಜಾತ ಜಾತಿಪದ್ಧತಿಯನ್ನು ಖಂಡಿಸಿದರು. ವಿಧವೆಯರನ್ನು ಕೋಟಲೆಗೆ ನೂಕಿದ್ದ ವಿಧವಾ ಪುನರ್ವಿವಾಹದ ನಿಷೇಧದ ವಿರುದ್ಧ ಧ್ವನಿಯೆತ್ತಿ, ಪುನರ್ವಿವಾಹದ ಅಧಿಕಾರವನ್ನು ಪ್ರತಿಪಾದಿಸಿದರು. ಸಂಪ್ರದಾಯದ ಹೆಸರಿನಲ್ಲಿ ಸ್ತ್ರೀ-ಶಿಕ್ಷಣವನ್ನು ವಿರೋಧಿಸುತ್ತಿದ್ದವರಿಗೆ ದಯಾನಂದರು ಉತ್ತರಿಸುತ್ತ, ಇದು ವೇದವಿರುದ್ಧವಾದ ಅಪಸಿದ್ಧಾಂತ ಎಂದು ಘಂಟಾಘೋಷವಾಗಿ ಸಾರಿಹೇಳಿದರು. ನೂರಾರು ವರ್ಷಗಳ ಕಾಲದ ಪರಕೀಯ ಮತೀಯರ ಆಕ್ರಮಣಕ್ಕೆ ಸಿಲುಕಿದ ಕಾರಣ ಅನೇಕರು ಬಲವಂತಕ್ಕೋ ಆಮಿಷಕ್ಕೋ ಮರುಳಾಗಿ ಹಿಂದೂಧರ್ಮ ತೊರೆದು ಮುಸ್ಲಿಂ ಅಥವಾ ಕ್ರೈಸ್ತ ಮತಗಳಿಗೆ ಮತಾಂತರವಾಗಿದ್ದರು. ಒಂದೊಮ್ಮೆ ಮತಾಂತರವಾದ ಹಿಂದು ಬಂಧುಗಳು ಕಾಲಾನಂತರದಲ್ಲಿ ಪಶ್ಚಾತ್ತಾಪಪಟ್ಟುಕೊಂಡು ಮರಳಿ ಹಿಂದೂಧರ್ಮಕ್ಕೆ ಪರಾವರ್ತನಗೊಳ್ಳಲು ಬಯಸಿದರೂ ಅಂತಹವರನ್ನು ಹಿಂದೂಧರ್ಮದೊಳಗೆ ಮರಳಿ ಕರೆಸಿಕೊಳ್ಳುವ ಅವಕಾಶವೇ ಇಲ್ಲದೇ ಇದ್ದ ಕಾಲದಲ್ಲಿ, ಮರಳಿ ಹಿಂದೂಧರ್ಮದೊಳಕ್ಕೆ ಕರೆಸಿಕೊಳ್ಳುವ ಅವಕಾಶ ನೀಡಿ ಸ್ವಾಗತಿಸಬೇಕು – ಎನ್ನುವುದನ್ನು ಬಲವಾಗಿಯೇ ಪ್ರತಿಪಾದಿಸಿದರು. ಈ ಮೂಲಕ ಶಿಥಿಲಗೊಳ್ಳುತ್ತಿದ್ದ ಹಿಂದೂ ಧಾರ್ಮಿಕತೆಯ ಬೇರುಗಳನ್ನು ಮತ್ತೊಮ್ಮೆ ಸದೃಢಗೊಳಿಸಿದರು.
ಇಸ್ಲಾಂ ಮತ್ತು ಕ್ರೈಸ್ತ ಮತಪ್ರಸಾರಕರು ಹಿಂದೂಧರ್ಮವನ್ನು ನಿಂದನೆ ಮಾಡುತ್ತ, ವೇದಗಳ ಬಗೆಗೆ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿದ್ದಾಗ ದಯಾನಂದರು ತರ್ಕಬದ್ಧವಾಗಿಯೇ ಅವರನ್ನು ಎದುರಿಸಿದರು. ಅಂತಹವರಿಗೆ ಕ್ರೈಸ್ತ ಮತ್ತು ಇಸ್ಲಾಂನ ಹುಳುಕುಗಳನ್ನೂ ಎತ್ತಿತೋರಿಸಿ ಅವರ ಅಸ್ತಿತ್ವ ಎಷ್ಟು ದುರ್ಬಲವಾಗಿದೆ ಎಂಬುದನ್ನು ಪ್ರಕಟಗೊಳಿಸಿದರು. ಯೇಸುವನ್ನು ನಂಬದಿದ್ದರೆ ಕ್ರೈಸ್ತ ಮತ ಮುಳುಗಿಹೋಗುತ್ತದೆ, ಪೈಗಂಬರರನ್ನು ನಂಬದಿದ್ದರೆ ಇಸ್ಲಾಂ ಮತ ಮುಳುಗಿಹೋಗುತ್ತದೆ. ಆದರೆ ಹಿಂದುಗಳು ದೇವರನ್ನು ನಂಬಲಿ ನಂಬದಿರಲಿ, ವೇದಗಳನ್ನು ಒಪ್ಪಲಿ ಒಪ್ಪದಿರಲಿ, ಅಹಿಂಸಾರಾಧಕರಾಗಲಿ ಪ್ರಾಣಿಬಲಿ ನೀಡುವ ಆರಾಧಕರಾಗಲಿ ಹಿಂದೂಧರ್ಮ ನಮ್ಮನ್ನು ಬಿಡುವುದಿಲ್ಲ ಎನ್ನುತ್ತಿದ್ದರು. ಮುದುವರಿದು, ಪರಿಪೂರ್ಣ ವೈದಿಕ ಧರ್ಮವಂತೂ ಕ್ರೈಸ್ತರ ನಿಲವಿಗೆ ಬಹಳ ಮೇಲ್ಮಟ್ಟದ ವಿಷಯ. ಗೀತೆ ಉಪನಿಷತ್ತುಗಳ ಹಾಗೂ ರಾಮಾಯಣ, ಮಹಾಭಾರತದ ಮಟ್ಟಕ್ಕೂ ಏರಲಾರರು. ಬೇಕಾದಷ್ಟು ಬುರುಡೆಗಳಿಂದ ತುಂಬಿಹೋಗಿದ್ದರೂ ಕೂಡ, ಪೌರಾಣಿಕ ಮತವೂ ಕೂಡ ಕ್ರೈಸ್ತಮತಕ್ಕಿಂತ ಶ್ರೇಷ್ಠವಾಗಿದೆ (ಪಂ. ಸುಧಾಕರ ಚತುರ್ವೇದಿ) ಎಂದು ಘೋಷಿಸಿದ್ದರು.
ಕಲ್ಮಶ ಪ್ರಕ್ಷಾಳನ
ಜಾತಿಪದ್ಧತಿ ಮತ್ತು ಅದರ ಫಲರೂಪವಾಗಿ ಹುಟ್ಟಿದ ಅಸ್ಪೃಶ್ಯತೆಯನ್ನು ಖಂಡಿಸಿದಾಗ ಅದನ್ನು ಸ್ವೀಕರಿಸಿದ್ದವರ ನಡುವೆ ಕೋಲಾಹಲವೇ ಆಗಿತ್ತು. ದಯಾನಂದರು ಈ ಪದ್ಧತಿಯನ್ನು ಮಾನವಜಾತಿಯ ಮೇಲಿನ ಅತಿಘೋರವಾದ ಅಭಿಶಾಪ ಎಂದು ಖಂಡಿಸಿದ್ದರು. ಓರ್ವ ಬ್ರಾಹ್ಮಣನು ವೇದಾಧ್ಯಯನ ಮತ್ತು ತಪಸ್ಸಿನಿಂದ ಮಹರ್ಷಿ ಪದವಿಗೇರಬಹುದಾದರೆ, ಓರ್ವ ಅಸ್ಪೃಶ್ಯನೂ ವೇದಾಧ್ಯಯನ ಮತ್ತು ತಪಸ್ಸಿನಿಂದ ಮಹರ್ಷಿಯಾಗಬಲ್ಲನು – ಎನ್ನುವುದು ದಯಾನಂದರ ದೃಢವಾದ ನಂಬಿಕೆಯಾಗಿತ್ತು. ಪ್ರತಿಯೊಬ್ಬ ಮಾನವನೊಳಗೂ ಸರ್ವಗೌರವಕ್ಕೆ ಅರ್ಹವಾದ ಒಂದು ಆತ್ಮವಿದೆ ಎನ್ನುವ ಮೂಲಭೂತ ವಿಚಾರವನ್ನು ಅರಿಯಲಾರದವರು ವೇದಗಳನ್ನಾಗಲಿ, ವೈದಿಕ ಧರ್ಮವನ್ನಾಗಲಿ ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಅವರ ಉದ್ದೇಶ ಕೇವಲ ಖಂಡನೆಯಾಗಿರಲಿಲ್ಲ. ಅಪಸಿದ್ಧಾಂತವನ್ನು ಮಾತ್ರ ಅವರು ನಿರಾಕರಿಸಿದರು, ದ್ವೇಷಭಾವನೆಯಿಂದ ದಯಾನಂದರು ಸುಧಾರಣೆಗೆ ಹೊರಟವರಲ್ಲ, ಅವರದು ಪ್ರೇಮಭಾವನೆಯ ಕಾರ್ಯ, ಬೆಳಕಿಗೆ ಹಿಡಿದ ಕಲ್ಮಶವನ್ನು ತೊಳೆದು ಮತ್ತೆ ಅದರ ಪ್ರಕಾಶವನ್ನು ಜಗತ್ತಿಗೆ ತೋರಿಸುವುದಷ್ಟೇ ಅವರ ಕಾಳಜಿಯಾಗಿತ್ತು. ವೇದಾಧಿಕಾರವಿಲ್ಲ, ಯಜ್ಞಾಧಿಕಾರವಿಲ್ಲ, ಅನುಷ್ಠಾನಾಧಿಕಾರವಿಲ್ಲ ಎಂದು ವೈದಿಕಧರ್ಮದೊಳಗೆ ಬಹುಪಾಲು ಜನರನ್ನು ಅಜ್ಞಾನದಲ್ಲಿ ಇರಿಸಲಾಗಿದೆ; ಇದರ ಪರಿಣಾಮವಾಗಿ ಲಕ್ಷಾಂತರ ಜನ ಕ್ರೈಸ್ತರಾಗಿ, ಮುಸಲ್ಮಾನರಾಗಿ ಹೋಗಿದ್ದಾರೆ; ಇಷ್ಟಾದರೂ ಹಿಂದೂಸಮಾಜದ ಭ್ರಾಂತಿ ಕಳೆದಿಲ್ಲ – ಎಂದು ಕಳವಳಗೊಂಡಿದ್ದರು. ವೈದಿಕ ಧರ್ಮೀಯರಲ್ಲಿ ಒಂದು ಭಾವನೆಯಿಲ್ಲ, ಏಕತ್ವದ ಹೆಸರೇ ಇಲ್ಲವಾಗಿದೆ. ಇನ್ನೂ ಆಲಸ್ಯದ ನಿದ್ರೆ ಹರಿಯದಿದ್ದರೆ ವೈದಿಕಧರ್ಮ
ನಾಮಾವಶೇಷವಾಗಿಹೋಗುವುದರಲ್ಲಿ ಸಂದೇಹವಿಲ್ಲ. ಸಮಾಜಕ್ಕೆ ಅಂಟಿದ ರೋಗವನ್ನು ಮೂಲದಿಂದಲೇ ಕಿತ್ತೆಸೆಯೋಣ. ಮೊದಲು ಕೈಬಿಟ್ಟು ಹೋಗುತ್ತಿರುವ ದೀನದಲಿತರನ್ನು ಉಳಿಸಿಕೊಳ್ಳಿರಿ, ಆಮೇಲೆ ನಡೆಯಲಿ ನಿಮ್ಮ ಚರ್ಚೆ ಎಂದು ನೇರವಾಗಿ ಧರ್ಮಾಚಾರ್ಯರಿಗೆ ಸವಾಲು ಹಾಕಿದರು. ಜನ್ಮಜಾತ ಮೇಲು-ಕೀಳು ಕಲ್ಪನೆಗಳನ್ನು ನಿರಾಕರಿಸಿದ್ದು ಮಾತ್ರವಲ್ಲ, ಅವುಗಳಿಗೆ ವೇದಾಧಾರಗಳಿಲ್ಲ ಎನ್ನುವ ವಿಚಾರ ಮಂಡನೆಯ ಮೂಲಕ ದಯಾನಂದರು ಅಕ್ಷರಶಃ ಕಾಲದ ವಿರುದ್ಧ ಹೋರಾಡಿದ್ದರು. ಸ್ವತಃ ದಯಾನಂದರು ಮತಾಂತರಕ್ಕೆ ಒಂದು ತಡೆಗೋಡೆಯಾಗಿ ನಿಂತರು. ವಿದ್ವಾಂಸರ ಜತೆಗೆ ನಿರಂತರ ಚರ್ಚೆ, ಸಂವಾದಗಳ ಮೂಲಕ ತಪ್ಪು ಅಭಿಪ್ರಾಯಗಳ ನಿವಾರಣೆಗಾಗಿ ಪ್ರಯತ್ನಿಸಿದರು. ಸಮಾಜದಲ್ಲಿ ಒಂದು ವಿಚಾರಕ್ರಾಂತಿಯನ್ನು ಹುಟ್ಟುಹಾಕಿದರು. ಕೇವಲ ವಿಮರ್ಶೆಯಲ್ಲ, ರಚನಾತ್ಮಕವಾಗಿ ಸಮಾಜದಲ್ಲಿ ಬದಲಾವಣೆಯನ್ನು ಮಾಡಿ ತೋರಿದರು. ೧೮೭೫ರಲ್ಲಿ ಧರ್ಮ ಪ್ರಚಾರಕ್ಕಾಗಿಯೇ ಆರ್ಯ ಸಮಾಜವನ್ನು ಸ್ಥಾಪನೆ ಮಾಡಿದರು. ಈ ಸಂಸ್ಥೆಯ ಮೂಲಕ ನಡೆಸಿದ ಕಾರ್ಯಗಳು ಭಾರತದ ಧಾರ್ಮಿಕ ಇತಿಹಾಸದಲ್ಲಿ ಶಾಶ್ವತವಾದ ಹೆಗ್ಗುರುತುಗಳಾಗಿ ಉಳಿದವು. ಅನ್ಯಮತಗಳ ಆಕ್ರಮಣಶೀಲತೆಯನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸವನ್ನು ತುಂಬುವಲ್ಲಿ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಾಡಿದ ಕಾರ್ಯ ಗಣನೀಯವಾದುದು.
ಅಸ್ಮಿತೆಯ ಜಾಗರಣ
ಭಾರತೀಯರಲ್ಲಿ ಮೂಡಿದ್ದ ಕೀಳರಿಮೆ, ವಿಸ್ಮೃತಿಯನ್ನು ಗುರುತಿಸಿದ್ದ ದಯಾನಂದರು, ಭಾರತೀಯ ಜನಾಂಗದ ಹಿರಿಮೆಯನ್ನು ಅಭಿಮಾನಪೂರ್ವಕವಾಗಿ ಪ್ರಕಟಪಡಿಸಿದ್ದರು. ಆರ್ಯರೇ! ನಿಮ್ಮ ಪೂರ್ವಜರು ಅನಾಗರಿಕರಲ್ಲ. ವಿಶ್ವಮಾನವ ಸಮಾಜಕ್ಕೇ ನಿರ್ಮಲ ಜ್ಞಾನಜ್ಯೋತಿಯನ್ನು ಎತ್ತಿಹಿಡಿದ ಸಾಕ್ಷಾತ್ಕೃತ ಧರ್ಮರಾದವರು ಋಷಿ-ಮುನಿಗಳು. ನಿಮ್ಮ ಇತಿಹಾಸ ಸೋಲಿನ ಕಂತೆಯಲ್ಲ; ವಿಶ್ವವಿಜಯೀ ಶೂರವೀರರಾದ ಧೀರಗಂಭೀರ ಕ್ಷತ್ರಿಯಪುಂಗವರ ಜೀವನದಾಯಕವಾದ ಯಶೋಗಾನ. ನಿಮ್ಮ ವೇದಗಳೂ, ನಿಮ್ಮ ಉಪನಿಷತ್ತುಗಳೂ ದನಕಾಯುವ ಗೊಲ್ಲರ ಹಾಡುಗಳಲ್ಲ; ಶ್ರೀರಾಮ-ಕೃಷ್ಣರಂತಹ ಮರ್ಯಾದಾ ಪುರುಷೋತ್ತಮರ ಆದರ್ಶ ಚರಿತ್ರೆ ನಿರ್ಮಾಣ ಮಾಡಿದ ಮಹಾನ್ ಆಧ್ಯಾತ್ಮಿಕ ತತ್ತ್ವಗಳ ಅಸೀಮ ನಿಧಿಗಳು. ನೀವು ಯಾರ ಅಡಿಯಾಳುಗಳಾಗಿ ಬಿದ್ದಿರುವುದಕ್ಕಾಗಿಯೂ ಹುಟ್ಟಿದವರಲ್ಲ. ಏಳಿ, ಎದ್ದು ನಿಲ್ಲಿ. ನಿಮ್ಮ ಪೂರ್ವಜರ ಬಗ್ಗೆ ನಿಮ್ಮಹೃದಯದಲ್ಲಿ ತಿರಸ್ಕಾರ ಭಾವನೆ ಹುಟ್ಟಿಸಿ, ನಿನ್ನೆ ಮೊನ್ನೆಯವರೆಗೆ ಕಾಡಾಡಿಗಳಾಗಿ ಬೆತ್ತಲೆ ತಿರುಗುತ್ತಿದ್ದ ಐರೋಪ್ಯರನ್ನೇ ಗುರುಗಳೆಂದು ಭಾವಿಸುವ ದಾಸ್ಯಮನೋಭಾವಕ್ಕೆ ರೂಪನೀಡುವ ಆಧುನಿಕ ಶಿಕ್ಷಣಕ್ರಮವನ್ನು ಅರೆಕ್ಷಣವೂ ಸಹಿಸಬೇಡಿ (ಪಂ. ಸುಧಾಕರ ಚತುರ್ವೇದಿ) ಎಂಬ ಸಿಂಹವಾಣಿಯನ್ನು ಮೊಳಗಿಸಿದ್ದರು.
ಈ ಸಮಾಜ ಎಷ್ಟರಮಟ್ಟಿಗೆ ದಯಾನಂದರನ್ನು ಅರ್ಥಮಾಡಿಕೊಂಡಿತು ಎಂದು ಚಿಂತನೆ ನಡೆಸಬೇಕಾದ ಕಾಲ ಅದಾಗಿತ್ತು. ಕರ್ತವ್ಯಮೂಢ ಸಮಾಜವನ್ನು ಎಚ್ಚರಿಸುವುದು ಹೇಗೆಂಬ ಚಿಂತೆಯೇ ದಯಾನಂದರನ್ನು ಸದಾ ಕಾಡುವ ಚಿಂತೆಯಾಗಿತ್ತು. ಸಮಾಜ ಅದಾಗಲೇ ಹಲವು ವಿಪ್ಲವಗಳಿಗೆ ಸಾಕ್ಷಿಯಾಗಿತ್ತು. ಹೀಗಿದ್ದರೂ ಹಿಂದುವಿನ ನಿದ್ರಾಭಂಗವಾಗಿರಲಿಲ್ಲ ಎನ್ನುವ ನೋವು ಅವರ ಮಾತಿನಲ್ಲಿತ್ತು. ಕೇವಲ ೭೦೦-೮೦೦ ಜನ ಮುಸಲ್ಮಾನರು ಬಂದರು; ಲಕ್ಷವಾಗಿ, ಕೋಟಿಯಾಗಿ, ೯೦೦ ವರ್ಷಗಳ ಕಾಲ ಭಾರತವನ್ನಾಳಿದರು. ಆದರೂ ವೈದಿಕ ಧರ್ಮೀಯರ ನಿದ್ರೆ ಭಂಗವಾಗಲಿಲ್ಲ. ಸಣ್ಣದೊಂದು ವ್ಯಾಪಾರಿ ತಂಡವಾಗಿ ಬಂದ ಆಂಗ್ಲರು ಸಾಮ್ರಾಜ್ಯ ಸ್ಥಾಪನೆಗೈದು ಇಂದಿನವರೆಗೂ ಆಳುತ್ತಿದ್ದಾರೆ. ಕ್ರೈಸ್ತ ಪಾದರಿಗಳು ಬೆಟ್ಟ ಗುಡ್ಡಗಳಿಗೆ, ಕಾಡು ಕೇರಿಗಳಿಗೆ ವ್ಯಾಪಿಸಿ, ವೈದಿಕ ಧರ್ಮೀಯರ ಆಧಾರಸ್ತಂಭಗಳಂತಿರುವ ಕೋಲ-ಬೀಲರನ್ನು, ನಾಗಾ-ಸಂತಾಲರನ್ನು, ಶೂದ್ರ-ಅಸ್ಪೃಶ್ಯರನ್ನು ವಿದ್ಯಾದಾನದಿಂದ, ಔಷಧೋಪಚಾರದಿಂದ, ಆರ್ಥಿಕ ಆಮಿಷದಿಂದ, ಒಲಿಸಿಕೊಂಡು ಕ್ರೈಸ್ತರನ್ನಾಗಿ ಮಾಡುತ್ತಿದ್ದಾರೆ. ಈಗಲೂ ವೈದಿಕ ಧರ್ಮೀಯರಿಗೆ ತಮ್ಮ ಕರ್ತವ್ಯದ ಅರಿವಾಗಿಲ್ಲ. ಅವರು ಕಾಲುಚಾಚಿ ಗೊರಕೆ ಹಾಕುತ್ತ ಮಲಗಿದ್ದಾರೆ. ಅವರನ್ನು ಹೇಗೆ ಎಚ್ಚರಿಸಲಿ? ಎಂಬ ಅವರ ವೇದನೆಯ ಮಾತನ್ನು ಸಮಾಜ ಅರ್ಥಮಾಡಿಕೊಳ್ಳಲಿಲ್ಲ.
ಕ್ರಾಂತಿಕಾರಕ ಚಿಂತನಪ್ರಣಾಳಿ
ವಿದೇಶೀಯರು ಭಾರತವನ್ನಾಳಲು ಕಾರಣವೇನು? ಅವರ ಸಾಮರ್ಥ್ಯವೆಂದೇ ಅನೇಕರ ಎಣಿಕೆ. ಹೀಗಿದ್ದಾಗ ದಯಾನಂದರು ಕೂಡ ಕಾರಣದ ಹುಡುಕಾಟವನ್ನು ಮಾಡುತ್ತಾರೆ. ಆಗ ಅವರು ಕಂಡುಕೊಂಡಿದ್ದು ನಾವು ಇಂದು ವಿದೇಶೀಯರಿಗೆ ದಾಸರಾಗಿರುವುದು ನಮ್ಮ ದೌರ್ಬಲ್ಯದಿಂದಲೇ ಹೊರತು ವಿದೇಶೀಯರ ಪರಾಕ್ರಮದಿಂದಲ್ಲ. ರಾಜರೂ, ಪ್ರಜೆಗಳೂ ಎಂದು ಸದಾಚಾರಿಗಳೂ ಸದ್ವಿಚಾರಿಗಳೂ ಆಗಿ ಏಕಕಂಠವಾಗಿ ನಮ್ಮದು ಈ ದೇಶಎನ್ನುವ ಶಕ್ತಿ ಸಂಪಾದಿಸುತ್ತಾರೋ ಅಂದೇ ವಿದೇಶೀಯರು ಈ ದೇಶದಿಂದ ಕಾಲುಕೀಳುತ್ತಾರೆ ಎಂದಿದ್ದರು. ಸ್ವಾತಂತ್ರ್ಯ ಹೋರಾಟದ ಕಾಲಕ್ಕೆ ದಯಾನಂದರ ಈ ಪ್ರೇರಣಾದಾಯಿ ಮಾತುಗಳು ಹೋರಾಟಗಾರರ ಹೃದಯದ ದೀಪಗಳಂತೆ ಜ್ವಲಿಸುತ್ತಿತ್ತು. ಆಂತರಿಕವಾದ ದೋಷಗಳಿಂದ ದೇಶ ಮುಕ್ತವಾದಾಗ ಹೊರಗಿನ ಎಲ್ಲ ಶಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಸಹಜವಾಗಿಯೇ ಪ್ರಾಪ್ತವಾಗುತ್ತದೆ. ಏಕತೆಯ ಭಾವನೆ ಮೂಡಬೇಕಾದರೆ ಭೇದಗಳೆಲ್ಲ್ಲ ಕಳೆಯಬೇಕು. ಮೇಲು-ಕೀಳು ಭಾವನೆಗಳು ಇಲ್ಲವಾಗಬೇಕು. ಸ್ತ್ರೀಯರೂ ರಾಷ್ಟ್ರದ ನಿರ್ಣಾಯಕ ಶಕ್ತಿಯಾಗಬೇಕು. ಆದರೆ ನಮ್ಮ ದೇಶ ಸ್ತ್ರೀಯರನ್ನು ಸಂಪ್ರದಾಯದ ಹೆಸರಿನಲ್ಲಿ ನಿರ್ಬಂಧಿಸಿ ಕಟ್ಟಿಹಾಕಿದೆ. ಅವರು ಗುರುತಿಸಿದಂತೆ, ಸ್ತ್ರೀಯರಿಗೆ ವೇದಾಧಿಕಾರ ಮತ್ತು ವಿದ್ಯಾಧಿಕಾರವನ್ನು ನಿರಾಕರಿಸಿ, ಅದನ್ನು ಕಿತ್ತುಕೊಂಡ ಪಾತಕದ ಪರಿಣಾಮವಾಗಿ ವೈದಿಕಧರ್ಮ ಪತನಕ್ಕೆ ಸಾಗಿತು. ರಾಷ್ಟ್ರದ ಅರ್ಧಶರೀರವಾದ ಸ್ತ್ರೀಶಕ್ತಿಯನ್ನು ದೀನ ಹೀನಾವಸ್ಥೆಯಲ್ಲಿ ಬಿಟ್ಟು ಬೇರಾವ ರಾಷ್ಟ್ರೀಯ ಸಮಸ್ಯೆಯನ್ನೂ ಬಗೆಹರಿಸಲಾಗದು – ಎನ್ನುವುದು ದಯಾನಂದರ ಸ್ಪಷ್ಟವಾದ ನುಡಿ. ಹೆಣ್ಣು ಅನುಭವಿಸುತ್ತಿದ್ದ ಸಂಕಟಗಳನ್ನು ರಾಷ್ಟ್ರೀಯ ಸಂಕಟವಾಗಿ, ಧಾರ್ಮಿಕ ಸಂಕಟವಾಗಿ ಕಂಡು, ಭಾರತವರ್ಷದ ಘೋರ ಪತನದ ಅತಿಮುಖ್ಯ ಕಾರಣ ಬಾಲೆಯರ ಮೇಲೆ ಹೊರಿಸಿದ ಬಲಾತ್ಕಾರದ ವೈಧವ್ಯದಲ್ಲಿದೆ – ಎನ್ನುವ ಗ್ರಹಿಕೆಯೇ ಆ ಕಾಲಕ್ಕೆ ಕ್ರಾಂತಿಕಾರಕವಾಗಿತ್ತು.
ಈ ಕಾರಣದಿಂದಲೇ ಕೆ.ಎಂ. ಮುನ್ಶಿಯವರು ದಯಾನಂದ ಸರಸ್ವತಿಯವರನ್ನು ಆಧುನಿಕ ಭಾರತದ ಶಿಲ್ಪಿ ಎನ್ನಬಹುದು ಎಂದಿದ್ದರು. ಬುದ್ಧ ಹಾಗೂ ಶಂಕರರ ನಂತರ ಹಿಂದೂ ಸಮಾಜ ಸುಧಾರಕರಲ್ಲಿ ದಯಾನಂದ ಸರಸ್ವತಿಯವರೇ ಕಡೆಯವರು. ಇಂದಿನ ಸುಧಾರಣೆಗೆ ಬಂದಂತಹ ಹಿಂದೂ ಸಂಸ್ಕೃತಿಯು ದಯಾನಂದರ ವರದಾನವೇ ಸರಿ ಎನ್ನುವ ಕೆ.ಪಿ. ಜೈಸ್ವಾಲರ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ. ದಯಾನಂದರ ದೂರದೃಷ್ಠಿಯ ಕಾರ್ಯ ಫಲಕೊಟ್ಟಿತು. ಜಡಗೊಳ್ಳುತ್ತಿದ್ದ ಸಮಾಜದಲ್ಲಿ ಚೈತನ್ಯಪೂರ್ಣ ಚಲನಶೀಲತೆ ಮರುಹುಟ್ಟು ಪಡೆಯಿತು. ವೇದಗಳನ್ನು ಯಾವುದೋ ಕಾಲದ ಹಾಡು-ಹರಟೆಯೆಂದೋ, ಕಾಲಬಾಹಿರ ಪುರಾಣಗಳೆಂದೋ ಭಾವಿಸಿದ್ದ ಸಮಾಜದ ಮುಂದೆ ವೇದಗಳನ್ನು ಬದುಕಿನ ಜತೆಗೆ ಮುಖಾಮುಖಿಯಾಗಿಸಿಕೊಂಡು ಹಾಗೆಯೆ ಬದುಕಬಹುದೆನ್ನುವುದನ್ನು ತೋರಿದ ಮಹರ್ಷಿ ದಯಾನಂದರು ಜನ್ಮತಾಳಿ ಇನ್ನೂರು ವರ್ಷಗಳಾಗುತ್ತಿದೆ. ಈ ಹೊತ್ತಿನಲ್ಲಿ ಮತ್ತೊಮ್ಮೆ ದಯಾನಂದರ ವಿಚಾರದೊಂದಿಗೆ ಭಾರತೀಯ ಸಮಾಜ ಸಂವಾದವನ್ನು ಮಾಡಲು ಸಾಧ್ಯವಾದರೆ ಅದೇ ಅವರಿಗೆ ಸಲ್ಲಿಸಬಹುದಾದ ಶ್ರೇಷ್ಠ ಗೌರವ.
ಪರಾಮರ್ಶನ ಗ್ರಂಥಗಳು:
೧. ಮಹರ್ಷಿ ದಯಾನಂದ ಸರಸ್ವತಿ – ಪಂ. ಸುಧಾಕರ ಚತುರ್ವೇದಿ
೨. ಸತ್ಯಾರ್ಥ ಪ್ರಕಾಶ – ದಯಾನಂದ ಸರಸ್ವತಿ
೩. ನವೋತ್ಥಾನದ ಅಧ್ವರ್ಯುಗಳು – ಎಸ್.ಆರ್.ರಾಮಸ್ವಾಮಿ
ಸತ್ಯಾರ್ಥ ಪ್ರಕಾಶ
ಸತ್ಯಾರ್ಥ ಪ್ರಕಾಶವನ್ನು ದಯಾನಂದ ಸರಸ್ವತಿಯವರ ಅಮರ ಕೃತಿ ಎಂದೇ ಗುರುತಿಸಲಾಗಿದೆ. ಈ ಮಹಾನ್ ಗ್ರಂಥ ೧೮೭೪ರಲ್ಲಿ ಮನುಕುಲದ ಅಗತ್ಯವಾಗಿ ರೂಪಗೊಂಡಿತು. ಉದಾತ್ತವಾದ ವೇದ ಚಿಂತನೆಯನ್ನು ಕಾಲಾನಂತರದಲ್ಲಿ ಅಪ್ರಬುದ್ಧರು ತಮ್ಮ ಸ್ವಾರ್ಥಕ್ಕಾಗಿ ಸಂಕುಚಿತಗೊಳಿಸಿ ಅರ್ಥವ್ಯಾಖ್ಯಾನವನ್ನು ಮಾಡುತ್ತ, ಜನಜೀವನದಿಂದ ದೂರವಾಗಿಸಿದ್ದರು. ಇಂತಹ ಸಂಗತಿಗಳನ್ನು ಈ ಪೂರ್ವದಲ್ಲಿ ಹಲವು ಸಜ್ಜನ ತತ್ತ್ವಜ್ಞರು ಗುರುತಿಸಿದ್ದರಾದರೂ, ದಯಾನಂದ ಸರಸ್ವತಿಯವರಂತೆ ವೇದಗಳಿಗೆ ಮರಳುವುದನ್ನೇ ಜೀವನ ಸಿದ್ಧಾಂತವಾಗಿಸಿಕೊಂಡು ಬದುಕಲು ಸಾಧ್ಯವಾಗಿರಲಿಲ್ಲ. ಸತ್ಯಾರ್ಥ ಪ್ರಕಾಶ ಕೃತಿ ವೇದಗಳ ಮೂಲ ವಿಚಾರಕ್ಕೆ ಕವಿದ ಕತ್ತಲೆಯನ್ನು ದೂರಗೊಳಿಸಿ ನಿಜವಾದ ಜ್ಞಾನವನ್ನು ಪ್ರಕಾಶಮಾನಗೊಳಿಸುವುದೇ ಆಗಿದೆ. ಈ ಕೃತಿಯಲ್ಲಿ ವೇದವಿರುದ್ಧ ನಡೆಯ ಖಂಡನೆಯೂ, ವೇದೋಕ್ತ ಬದುಕಿನ ಮಂಡನೆಯೂ ಸೇರಿಕೊಂಡಿದೆ. ತಮ್ಮ ಕಾಲದಲ್ಲಿ ರೂಢಿಯಲ್ಲಿದ್ದ ಧರ್ಮವಿರೋಧಿ ನಡವಳಿಕೆಗಳನ್ನು ತೀಕ್ಷ್ಣವಾಗಿಯೇ ಖಂಡಿಸಿದ್ದಾರೆ. ಖಂಡನೆಯೇ ಒಂದು ಕ್ರಾಂತಿಕಾರಕ ಮಾರ್ಗವಾಗಿದೆ. ವೇದಗಳ ಮೇಲೆ ತಮ್ಮದೇ ಹಕ್ಕು ಸ್ಥಾಪಿಸಿ ವೇದವಿರುದ್ಧವಾಗಿ ಬದುಕುತ್ತಿದ್ದ ಪಂಡಿತರಿಂದ ಹಿಡಿದು ಬೌದ್ಧ, ಜೈನ ಪರಂಪರೆಗಳನ್ನು, ಇಸ್ಲಾಂ, ಕ್ರೈಸ್ತ ಬೋಧನೆಗಳನ್ನೂ ನಿಷ್ಪಕ್ಷಪಾತವಾಗಿ ವಿಮರ್ಶೆಗೆ ಹಚ್ಚಿದ್ದಾರೆ. ಅಂತಿಮ ಗುರಿ ಅಸತ್ಯದ ಖಂಡನೆ, ಸತ್ಯದ ಪ್ರತಿಪಾದನೆ ಮಾತ್ರವಾಗಿತ್ತು. ೧೫೦ ವರ್ಷಗಳ ಹಿಂದೆ ದಯಾನಂದರು ತಮ್ಮ ಸುತ್ತಲಿನ ಸಮಾಜವನ್ನು ಕಂಡು ತೀವ್ರವಾಗಿ ಪ್ರತಿಕ್ರಿಯಿಸಿದ್ದು ಭಾವೋದ್ವೇಗದ ನಡೆಯಾಗಿರಲಿಲ್ಲ. ವೇದಮಂತ್ರಗಳನ್ನು ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ ಮಾಡಿದ ವ್ಯಾಖ್ಯಾನವೂ ಅದಾಗಿತ್ತು. ಹದಿನಾಲ್ಕು ಸಮುಲ್ಲಾಸಗಳಲ್ಲಿ ವಿಸ್ತರಿಸಿರುವ ಈ ಕೃತಿ ಬ್ರಹ್ಮಚರ್ಯ, ಶಿಕ್ಷಣಪದ್ಧತಿ, ಗೃಹಸ್ತ, ವಾನಪ್ರಸ್ತ, ಸಂನ್ಯಾಸ ಆಶ್ರಮಗಳ ಚರ್ಚೆಯಿಂದ ಆರಂಭಿಸಿ ಆಚಾರ-ಅನಾಚಾರ, ವಿದ್ಯೆ-ಅವಿದ್ಯೆ ಮೊದಲಾದ ಬಹು ಸೂಕ್ಷ್ಮ ವಿಚಾರಗಳನ್ನು ಕುರಿತು ಸ್ಪಷ್ಟವಾದ ವಿಚಾರವನ್ನು ಮಂಡಿಸುತ್ತದೆ. ಸ್ತ್ರೀ ಶಿಕ್ಷಣ, ಬ್ರಾಹ್ಮಣರು ಮಾತ್ರವಲ್ಲದೆ ಶೂದ್ರರೂ ಕೂಡ ವೇದವನ್ನು ಕಲಿಯಬಹುದೆನ್ನುವ ವೇದೋಕ್ತ ದಾರಿಗೆ ಅಡ್ಡವಾಗಿ ಕಟ್ಟಿದ್ದ ಗೋಡೆಯನ್ನು ಕೆಡವಿ ವೇದಗಳು ಎಲ್ಲರಿಗೂ ಸೇರಿದ್ದೆನ್ನುವುದನ್ನು ಸೂಕ್ತ ಆಧಾರಗಳ ಸಹಿತವಾಗಿ ಮಂಡಿಸುತ್ತಾರೆ. ಅನೇಕ ಕಾರಣಗಳಿಂದ ಕ್ರಾಂತಿಕಾರಕವಾದ ಈ ಕೃತಿ ಆ ಕಾಲದ ಪಂಡಿತ ಸಮುದಾಯವನ್ನು ಕೆರಳಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
ಆರ್ಯಸಮಾಜ
ದಯಾನಂದ ಸರಸ್ವತಿಯವರು ವೇದಗಳ ಆಧಾರದಲ್ಲಿ ಜಾತಿಭೇದರಹಿತ ಆರ್ಯಸಮಾಜವನ್ನು ಕಟ್ಟುವುದಕ್ಕಾಗಿ ಸ್ಥಾಪಿಸಿದ ಒಂದು ಆಂದೋಲನವೇ ಈ ಸಂಘಟನೆ. ೧೮೭೫ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಮುಂದೆ ದೇಶಾದ್ಯಂತ ಪ್ರಭಾವಶಾಲಿಯಾಗಿ ಬೆಳೆಯಿತು. ಸಮಾಜವನ್ನು ವ್ಯಾಪಿಸಿರುವ ಅಸತ್ಯದ ಪೊರೆಯನ್ನು ಕಳಚಿ ಸತ್ಯದ ಬೆಳಕಿನಲ್ಲಿ ಮುನ್ನಡೆವ ದಾರಿಯನ್ನು ತೋರುವುದೇ ಮುಖ್ಯ ಉದ್ದೇಶವಾಗಿತ್ತು. ಮೂರ್ತಿ ಪೂಜೆಯ ತಿರಸ್ಕಾರ, ಬಾಲ್ಯವಿವಾಹಕ್ಕೆ ವಿರೋಧದ ಜತೆಗೆ ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುತ್ತ, ಸಮಾಜವನ್ನು ಪ್ರಗತಿಯ ಕಡೆಗೆ ಮುನ್ನಡೆಸಬೇಕೆಂಬ ಕನಸು ಇಲ್ಲಿತ್ತು. ವೇದಗಳನ್ನು ಅವುಗಳ ಮೂಲ ಸ್ವರೂಪದಲ್ಲಿಯೇ ಅರ್ಥೈಸಿಕೊಳ್ಳಬೇಕು ಎಂಬ ಆಂದೋಲನದ ಸಂಘಟಿತ ರೂಪವೇ ಆರ್ಯಸಮಾಜ. ಭಾರತವು ಪರಾಧೀನತೆಗೆ ಒಳಪಟ್ಟಿದ್ದ ಕಾಲಘಟ್ಟದಲ್ಲಿ ಸ್ವರಾಜ್ಯ, ಸ್ವಭಾಷಾ ಮತ್ತು ಸ್ವಧರ್ಮದ ಬಗೆಗೆ ದಿಟ್ಟವಾಗಿ ಮಾತನಾಡುವ ಮೂಲಕ ಸ್ವಾತಂತ್ರ್ಯ ಸಮರದಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಆರ್ಯಸಮಾಜ ನಿರ್ವಹಿಸಿತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಆರ್ಯ ಸಮಾಜದ ಪ್ರಭಾವದಿಂದಲೇ ರಣಾಂಗಣಕ್ಕೆ ಪ್ರವೇಶಿಸಿದರು. ಈ ಕೊಡುಗೆಯನ್ನು ಸಮಾಜ ಎಂದಿಗೂ ಸ್ಮರಿಸುತ್ತಲೇ ಇರುತ್ತದೆ.