೧೯೩೭ರ ಷರಿಯಾ ಕಾನೂನು – ಮುಸ್ಲಿಮರಿಗೋ ಅಥವಾ ಜಿನ್ನಾ ಮತ್ತು ಜಮೀನುದಾರರಿಗೋ?
ಸಮಾನ ನಾಗರಿಕ ಸಂಹಿತೆಯ ಬಗ್ಗೆ ಸಂವಿಧಾನ ಸಭೆಯಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದ ವ್ಯಕ್ತಿಯೆಂದರೆ ಡಾ|| ಬಿ.ಆರ್. ಅಂಬೇಡ್ಕರ್ ಅವರು. ಸಂವಿಧಾನಸಭೆಯಲ್ಲಿ ಮುಸ್ಲಿಮರಿಂದ ಷರಿಯತ್ ಕಾನೂನನ್ನು ಬದಲಾಯಿಸಲಾಗದು ಎಂದು ವಾದಿಸಿ ಸಮಾನ ನಾಗರಿಕ ಸಂಹಿತೆಯನ್ನು ಪ್ರಬಲವಾಗಿ ವಿರೋಧಿಸಿದ ಮುಸ್ಲಿಂ ಲೀಗ್ ಮುಖಂಡರನ್ನು ತೀವ್ರವಾಗಿ ಖಂಡಿಸಿದರು. ವಾಯವ್ಯ ಗಡಿನಾಡು ಪ್ರಾಂತದ ಮುಸ್ಲಿಮರು ೧೯೩೫ರವರೆಗೂ ಹಿಂದು ಕಾನೂನನ್ನು ಅನುಸರಿಸುತ್ತಿದ್ದರು, ಷರಿಯತ್ ಕಾನೂನನ್ನಲ್ಲ. ಈ ವಿಚಾರವನ್ನು ಬಹಿರಂಗವಾಗಿ ಅಲ್ಲಗಳೆಯುವಂತೆ ಲೀಗ್ ಮುಖಂಡರಿಗೆ ನೇರವಾಗಿ ಸವಾಲು ಹಾಕಿದರು.
ನರೇಂದ್ರ ಮೋದಿಯವರನ್ನು ಅಧಿಕಾರಕ್ಕೆ ಬರದಂತೆ ತಡೆಯುವ ಏಕಮಾತ್ರ ಉದ್ದೇಶದಿಂದ ಒಗ್ಗೂಡಲೆಳಸಿರುವ ವಿರೋಧಪಕ್ಷಗಳು ಪಾಟ್ನಾದಲ್ಲಿ ಸೇರಿದ ಜಂಟಿ ಸಮಾಲೋಚನೆ ಸಭೆಯ ಕಾವು ಆರುವ ಮುನ್ನ ಮೋದಿಯವರು ಸಮಾನ ನಾಗರಿಕ ಸಂಹಿತೆ ಎಂಬ ಭಾರೀ ಅಸ್ತ್ರವೊಂದನ್ನು ಅವುಗಳ ಕಾರ್ಯಪಥದೆಡೆಗೆ ಎಸೆದರು. ಇದೊಂದು ರೀತಿಯ ಸೈದ್ಧಾಂತಿಕ ಸವಾಲು, ಹಾಗೆಯೇ ರಾಜಕೀಯ ಕೂಟನೀತಿಯೂ ಹೌದು. ಮೋದಿಯವರ ಈ ಜಾಣ ನಡೆ, ಪಾಟ್ನಾದಲ್ಲಿ ಸೇರಿದ್ದ ೧೫ ಪಕ್ಷಗಳನ್ನು ಮೂರು ಗುಂಪುಗಳಾಗಿ ವಿಭಜಿಸಿತು: ಒಂದು ಸಮಾನ ನಾಗರಿಕ ಸಂಹಿತೆಗೆ ವಿರೋಧಿಯಾದರೆ, ಇನ್ನೊಂದು ಬೆಂಬಲಿಸುವ ಗುಂಪು, ಹಾಗೂ ಸಮಾನ ನಾಗರಿಕ ಸಂಹಿತೆಯ ವಿಚಾರದಲ್ಲಿ ಬೆಂಬಲಿಸುವುದೋ ವಿರೋಧಿಸುವುದೋ ಎಂಬ ಗೊಂದಲದಲ್ಲಿರುವ ಮೂರನೆಯ ಗುಂಪು.
ನನ್ನ ಅನಿಸಿಕೆಯಂತೆ, ಸಮಾನ ನಾಗರಿಕ ಸಂಹಿತೆಯ ವಿಚಾರವು ಆಳವಾದ ಚಿಂತನೆಯ ಭಾಗವಾಗಿಯೇ ಹೊರಹೊಮ್ಮಿದೆ. ಇದು ಕೇವಲ ವಿರೋಧಪಕ್ಷಗಳನ್ನು ಪ್ರತ್ಯೇಕಿಸುವುದಷ್ಟೇ ಅಲ್ಲ. ವಾಸ್ತವವಾಗಿ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸುವುದೆಂದರೆ ಬ್ರಿಟಿಷರು ಜಾರಿಗೊಳಿಸಿದ ವಿಭಜನೆಪೂರ್ವದ ೧೯೩೭ರ ಷರಿಯಾ ಮಸೂದೆಯನ್ನು ಬೆಂಬಲಿಸಿದಂತೆಯೇ ಆಗಿದೆ. ಸಮಾನ ನಾಗರಿಕ ಸಂಹಿತೆಯನ್ನು ಸ್ವಚ್ಛ ಹಲಗೆಯ ಮೇಲೆ ಬರೆಯಲು ಸಾಧ್ಯವಾಗುವುದಿಲ್ಲ. ಬದಲಾಗಿ ೧೯೩೭ರ ಷರಿಯಾ ಮಸೂದೆಯ ಕರಾಳತೆಯನ್ನು ತಿದ್ದಿಯೇ ಬರೆಯಬೇಕಾಗುತ್ತದೆ. ಈಗಿನ ಬಹಳಷ್ಟು ರಾಜಕಾರಣಿಗಳಿಗೆ ೧೯೩೭ರ ಷರಿಯಾ ಕಾನೂನು ಮತ್ತು ಅದರ ಪೈಶಾಚಿಕ ಹಿನ್ನೆಲೆಯ ಬಗ್ಗೆ ಯಾವುದೇ ಅರಿವಿಲ್ಲ. ಮೋದಿಯವರು ಒಂದೊಮ್ಮೆ ೧೯೩೭ರ ಮಸೂದೆಯ ಅನೈತಿಕ ಕಥಾನಕವನ್ನು ನೆನಪಿಸಿದ್ದೇ ಆದಲ್ಲಿ ಅದೊಂದು ವಿಪಕ್ಷಗಳ ಕನಸನ್ನು ನುಚ್ಚುನೂರು ಮಾಡಬಲ್ಲ ಸ್ಫೋಟಕ ರಹಸ್ಯಗಳನ್ನೆಲ್ಲ ಬಟಾಬಯಲು ಮಾಡುತ್ತದೆ. ೧೯೩೭ರ ಷರಿಯಾ ಕಾನೂನನ್ನು ನೆನಪಿಸಿಕೊಳ್ಳುವುದೆಂದರೆ ವಿಭಜನೆಪೂರ್ವದ ಭಾರತದ ಪರಿಕಲ್ಪನೆಯನ್ನು ಮರುಸ್ಥಾಪಿಸುವುದೇ (ಸಾಕಾರಗೊಳಿಸುವುದೇ) ಆಗಿದೆ. ಮೋದಿಯವರ ಯೋಜನೆಯೂ ಇದೇ ಆಗಿರಬಹುದು.
ಪರಾಕಾಷ್ಠೆಯೇ ಮೊದಲು, ಕಥೆ ಅನಂತರ ಷರಿಯಾ ಕಾನೂನಿನ ಸುದೀರ್ಘ ಕಥೆಯನ್ನು ಅನಂತರ ನೋಡೋಣ.
೧೯೩೭ರ ಪೂರ್ವದಲ್ಲಿ ಭಾರತದ ಮುಸಲ್ಮಾನರು ಪಾಲಿಸುತ್ತಿದ್ದುದು ಷರಿಯತ್ ಕಾನೂನುಗಳನ್ನಲ್ಲ; ಹಿಂದು ಕಾನೂನುಗಳನ್ನೇ – ಎಂಬ ಸಾಮಾನ್ಯ ವಿಚಾರ ಇಂದಿನ ಬಹಳಷ್ಟು ರಾಜಕೀಯಸ್ಥರಿಗೂ ತಿಳಿದಿಲ್ಲ. ಭಾರತದಾದ್ಯಂತ ವಾಸವಾಗಿದ್ದ ಎಲ್ಲ ಉಪಾಧಿಯ ಮುಸ್ಲಿಮರೂ ಸ್ಥಳೀಯ ಹಿಂದು ಸಂಪ್ರದಾಯ ಮತ್ತು ರೂಢಿಗಳನ್ನೇ ಅನುಸರಿಸುತ್ತಿದ್ದರು. ೧೯೩೭ರ ಷರಿಯಾ ಮಸೂದೆಯು ಬ್ರಿಟಿಷರು ಮತ್ತು ಮುಸ್ಲಿಂ ಲೀಗ್ನ ಮುಖಂಡರ ಸ್ವಹಿತಾಸಕ್ತಿಯ ಅನೈತಿಕ ರಾಜಕೀಯ ಒಪ್ಪಂದವಾಗಿ ರೂಪಗೊಂಡಿತು. ಒಂದೆಡೆ ಹಿಂದು-ಮುಸ್ಲಿಮರ ಏಕತೆಯನ್ನು ಹಾಳುಮಾಡುವ ಉದ್ದೇಶವಿದ್ದ ಬ್ರಿಟಿಷರು, ಮತ್ತೊಂದೆಡೆ ಗಾಂಧಿ ನೇತೃತ್ವದ ಕಾಂಗ್ರೆಸ್ಸಿನ ತೆಕ್ಕೆಯಿಂದ ಭಾರತದ ಮುಸ್ಲಿಮರನ್ನು ಬೇರೆಡೆಗೆ ಸೆಳೆಯುವ ದುರುದ್ದೇಶ ಹೊಂದಿದ್ದ ಮುಸ್ಲಿಂ ಲೀಗ್ – ತಮ್ಮ ತಮ್ಮ ಕಾರ್ಯಯೋಜನೆ ಸಾಧಿಸಲು ಅನೈತಿಕವಾಗಿ ಒಗ್ಗೂಡಿದರು. ಮುಸ್ಲಿಂ ಲೀಗ್ನ ಮೂಲ ಉದ್ದೇಶವೆಂದರೆ ಹಿಂದುಗಳೊಂದಿಗೆ – ಅವರ ಸಂಪ್ರದಾಯ, ಪದ್ಧತಿ, ರೂಢಿ-ರೀತಿ-ನೀತಿಗಳಲ್ಲಿ ಸಮರಸವಾಗಿ ಬೆರೆತುಹೋಗಿದ್ದ ಮುಸ್ಲಿಂ ಸಮುದಾಯವನ್ನು ಸಂಪೂರ್ಣವಾಗಿ ಬೇರ್ಪಡಿಸುವುದು, ಅವರಲ್ಲಿ ಹಿಂದೂವಿರೋಧಿ ಪ್ರತ್ಯೇಕ ಇಸ್ಲಾಮೀ ಅಸ್ಮಿತೆಯನ್ನು ಸೃಷ್ಟಿಸುವುದು ಮತ್ತು ಅಂತಿಮವಾಗಿ ದೇಶದ ವಿಭಜನೆಗೆ ಅನುವು ಮಾಡಿಕೊಡುವುದೇ ಆಗಿತ್ತು.
ಈ ಮೇಲಿನ ರಹಸ್ಯ ಉದ್ದೇಶ ಹೊಂದಿದ್ದ ಮುಸ್ಲಿಂ ಲೀಗಿಗೆ ಕುಮ್ಮಕ್ಕು ನೀಡಿ ಅವರಿಚ್ಛೆಗೆ ಅನುಗುಣವಾಗಿ ೧೯೩೭ರ ಷರಿಯಾ ಮಸೂದೆ ಜಾರಿ ಮಾಡುವ ಮೂಲಕ ಬ್ರಿಟಿಷರು ಋಣಭಾರ ಹೊರಿಸಿದರು. ಮುಸ್ಲಿಂ ಲೀಗಿನ ಈ ರಹಸ್ಯ ಯೋಜನೆಯ ಹಿಂದೆ ಬೇರೆಯದೇ ಗುಪ್ತ ಮತ್ತು ಕ್ಷುದ್ರ ಉಪಕಥೆಗಳೂ ಇದ್ದವು. ಬ್ರಿಟಿಷ್ ಆಳರಸರ ಮತ್ತು ಮುಸ್ಲಿಂ ಲೀಗ್ಗಳ ಜಂಟಿ ಕಾರ್ಯನೀತಿಯಾದ ೧೯೩೭ರ ಷರಿಯಾ ಮಸೂದೆಯು ಇಸ್ಲಾಮಿನ ಮೂಲ ಷರಿಯತ್ ಕಾನೂನನ್ನೇ ಬುಡಮೇಲು ಮಾಡುವಂತಹ ಅಂಶಗಳನ್ನೂ ಒಳಗೊಂಡಿತ್ತು. ಹೇಗೆ? ಇಸ್ಲಾಮೀ ಷರಿಯತ್ ಕಾನೂನಿನಿಂದ ಸಂಭವಿಸಬಹುದಾದ ತೊಂದರೆಗಳಿಂದ ಮುಸ್ಲಿಂ ಲೀಗಿನ ನಾಯಕರುಗಳು – ಜಿನ್ನಾ ಮತ್ತು ಜಮೀನ್ದಾರರ ಆಸ್ತಿ ಹಕ್ಕುಗಳನ್ನು ಸಂರಕ್ಷಿಸಲು ೧೯೩೭ರ ಮಸೂದೆಯ ಒಳಗೆ ರಹಸ್ಯವಾಗಿ ಹಿಂದು ಸಂಪ್ರದಾಯ ಮತ್ತು ರೂಢಿಗಳನ್ನು ಕಳ್ಳತನದಲ್ಲಿ ತೂರಿಸಲಾಯಿತು. ಇಸ್ಲಾಮಿನ ಪವಿತ್ರ ಕಾನೂನುಸಂಹಿತೆ ಎಂದು ಕರೆಸಿಕೊಳ್ಳುತ್ತಿರುವ ಈ ೧೯೩೭ರ ಷರಿಯಾ ಮಸೂದೆಯು ಕೇವಲ ಮುಸ್ಲಿಂ ಲೀಗಿನ ಮುಖಂಡರ ಆಸ್ತಿಹಕ್ಕುಗಳನ್ನು ಸುಭದ್ರಪಡಿಸುವುದಕ್ಕಾಗಿಯೇ ಹಿಂದು ಕಾನೂನಿನ ಅಂಶಗಳನ್ನು ಹೊಂದಿರಲು ಸಾಧ್ಯವೇ? ಸಾಧ್ಯವಿದೆ. ಇದು ಸಾಧ್ಯವಾಗಿದೆ. ವಾಸ್ತವದಲ್ಲಿ ಅದೊಂದು ೧೦೦೦ ವರ್ಷಗಳ ಹಿನ್ನೆಲೆಯುಳ್ಳ ಸ್ಫೋಟಕ ಕಥೆ.
ಸಾವಿರ ವರ್ಷಗಳವರೆಗೂ ಷರಿಯಾ ಇರಲಿಲ್ಲ!
ಇಸ್ಲಾಂ ಭಾರತಕ್ಕೆ ಬಂದಿದ್ದು, ೭ನೇ ಶತಮಾನದಲ್ಲಿ ವ್ಯಾಪಾರದ ಮೂಲಕ ಮತ್ತು ೮ನೇ ಶತಮಾನದಲ್ಲಿ ಖಾಸಿ-ಘಜ್ನಿಗಳ ತಲವಾರುಗಳೊಂದಿಗೆ. ೧೦ನೇ ಶತಮಾನದ ವೇಳೆಗೆ ಭಾರತದ ಬಹುದೊಡ್ಡ ಭಾಗಕ್ಕೆ ಅದು ವ್ಯಾಪಿಸಿತು.
ಭಾರತೀಯ ಮತಾಂತರಿತ ಮುಸ್ಲಿಮರಿಗೆ ಅನ್ವಯಿಸುತ್ತಿರುವ ಕಟ್ಟರ್ ಇಸ್ಲಾಮೀ ಪಂಥೀಯರು, ಇದು ಇಸ್ಲಾಂನ ಎಂದೆಂದಿಗೂ ಬದಲಾಯಿಸಲಾಗದ, ಅವಿಭಾಜ್ಯ ಅಂಗ ಎಂದು ಹೇಳಿಕೊಳ್ಳುತ್ತಿರುವ ಈ ೧೯೩೭ರ ಷರಿಯತ್ ಕಾನೂನು ಯಾವಾಗ ಜಾರಿಗೆ ಬಂದಿತು? ಯೋಚಿಸಿ. ಮುಸ್ಲಿಂ ಆಳ್ವಿಕೆಯಿದ್ದ ೧೧ನೇ ಶತಮಾನದಲ್ಲಾಗಲಿ ೧೨ರಲ್ಲಾಗಲಿ ಅಥವಾ ೧೩ ರಿಂದ ೧೭ನೇ ಶತಮಾನದವರೆಗಾಗಲಿ ಅಲ್ಲ. ಇಸ್ಲಾಮಿನ ಆಳ್ವಿಕೆ ಮುಕ್ತಾಯಗೊಂಡು ಮರಾಠರಿಗೂ ಹಿಂದುಗಳಿಗೂ, ತದನಂತರ ಬ್ರಿಟಿಷರಿಗೂ ಅಧಿಕಾರ ಹಸ್ತಾಂತರಗೊಳ್ಳುವ ೧೮ನೇ ಶತಮಾನದಲ್ಲಿಯೂ ಅಲ್ಲ. ಬ್ರಿಟಿಷ್ ಆಧಿಪತ್ಯ ಆಳವಾಗಿ ಬೇರೂರುವತ್ತ ಸಾಗಿದ ೧೯ನೇ ಶತಮಾನದಲ್ಲಿಯೂ ಅಲ್ಲ. ಹಾಗಾದರೆ ಯಾವಾಗ?
ಅತ್ಯಂತ ರಣೋತ್ಸಾಹೀ ಕಟ್ಟರ್ ಮುಸ್ಲಿಂ ಅರಸನೆನಿಸಿಕೊಂಡ ಔರಂಗಜೇಬನು ಮತಾಂತರಿತ ಮುಸ್ಲಿಮರಿಗಾಗಿ ಷರಿಯಾ ಕಾನೂನನ್ನು ಜಾರಿ ಮಾಡಲಾಗದೆಯೇ ಮರಣಹೊಂದಿದ ಒಂದೂಕಾಲು ಶತಮಾನದ ನಂತರ, ಅಂದರೆ ೧೯೩೭ರಲ್ಲಿ. ಮತಾಂತರಿತ ಮುಸಲ್ಮಾನರಲ್ಲಿ ಪ್ರಚಲಿತದಲ್ಲಿದ್ದ ಸ್ಥಳೀಯ ಹಿಂದು ಸಂಪ್ರದಾಯಗಳು, ರೂಢಿಗಳು ಷರಿಯಾಗಿಂತಲೂ ಉತ್ತಮವೆಂದು ಬ್ರಿಟಿಷ್ ಸರ್ಕಾರವೂ ಗುರುತಿಸಿತ್ತು. ಭಾರತೀಯ ಮುಸ್ಲಿಮರ ಕುರಿತಾದ ವಾರಸುದಾರಿಕೆಯ ಸಂಬಂಧದ ವಿಚಾರಗಳಲ್ಲಿ ಲಾಗಾಯ್ತಿನಿಂದ ಆಚರಣೆಯಲ್ಲಿ ಬಂದಿರುವ ಹಿಂದೂ ಪದ್ಧತಿ, ರೂಢಿಗಳಿಗೆ ಬ್ರಿಟಿಷರು ಬಲ ನೀಡಿದ್ದರು.
ಗುಪ್ತ ರಾಜಕೀಯ ಕಾರ್ಯಸೂಚಿ, ರಹಸ್ಯ ಆರ್ಥಿಕ ಕಾರ್ಯಸೂಚಿ.
ಹಾಗಾದರೆ ಷರಿಯಾ ಕಾನೂನನ್ನು ೧೯೩೭ರಲ್ಲೇ ಜಾರಿಗೊಳಿಸಬೇಕೆನ್ನುವ ಈ ಅವಸರದ ನಡೆ ಏಕೆ? ಈ ಒಂದು ಪ್ರಶ್ನೆ ಮತ್ತೆರಡು ಪ್ರಶ್ನೆಗಳಿಗೆ ದಾರಿ ಮಾಡುತ್ತದೆ. ಮತಾಂತರಿತ ಮುಸ್ಲಿಮರು ಸಾವಿರ ವರ್ಷಗಳವರೆಗೂ ಷರಿಯತ್ ಕಾನೂನಿನ ಬಗ್ಗೆ ಯೋಚನೆಯನ್ನೇ ಮಾಡದಿದ್ದವರು ತಾವಾಗಿಯೇ ಷರಿಯಾ ಕಾನೂನಿನ ಜಾರಿಗೆ ಒತ್ತಾಯ ಮಾಡುತ್ತಾರೆಯೆ? ಅಥವಾ ಭಾರತವನ್ನು ಇನ್ನೂರು ವರ್ಷಗಳಿಂದ ಆಳಿದ ಬ್ರಿಟಿಷರು, ಹಿಂದು-ಮುಸ್ಲಿಂ ಸೌಹಾರ್ದವನ್ನು ಹಾಳುಮಾಡುವ ದೂರಗಾಮಿ ದುರುದ್ದೇಶದಿಂದಲೇ ಇದ್ದಕ್ಕಿದ್ದಂತೆ ಮುಸ್ಲಿಮರಿಗಾಗಿಯೆಂದೇ ಷರಿಯಾ ಕಾನೂನನ್ನು ಜಾರಿಗೊಳಿಸುವ ಚಿಂತನೆ ಮಾಡಿದರೆ? ಈ ಪ್ರಶ್ನೆಗಳಿಗೆ ಉತ್ತರವಾಗಿ ೧೯೩೭ರ ಕಾನೂನು ಕೇವಲ ಮುಸ್ಲಿಂ ಲೀಗ್ (ಮುಸ್ಲಿಮರಲ್ಲ) ಮತ್ತು ಬ್ರಿಟಿಷರ ನಡುವಣ ರಹಸ್ಯ, ಅನೈತಿಕ ಒಪ್ಪಂದವಾಗಿತ್ತು ಎಂಬ ಕಹಿಸತ್ಯವನ್ನು ಅನಾವರಣಗೊಳಿಸುತ್ತದೆ. ಮೊದಲಾಗಿ ಮತಾಂತರಿತ ಮುಸ್ಲಿಮರು ಷರಿಯಾ ಕಾನೂನನ್ನು ಕೇಳಿಯೇ ಇರಲಿಲ್ಲ. ಆದರೆ ಮುಸ್ಲಿಂ ಲೀಗ್ ಅದನ್ನು ಕೇಳಿತು.
ಬ್ರಿಟಿಷರು ತಮ್ಮ ಆಳ್ವಿಕೆಯನ್ನು ದೀರ್ಘಕಾಲದವರೆಗೂ ಉಳಿಸಿಕೊಳ್ಳಲು ಯಾವಾಗಲೂ ಹಿಂದು-ಮುಸ್ಲಿಮರನ್ನು ಒಡೆದಾಳುವ ರಹಸ್ಯ ಕಾರ್ಯಸೂಚಿಯನ್ನು ಹೊಂದಿದ್ದರು. ಆದರೆ ಮುಸ್ಲಿಂ ಲೀಗ್ ನಾಯಕರು ಷರಿಯಾ ಕಾನೂನಿಗಾಗಿ ಆಗ್ರಹಿಸುತ್ತಿದ್ದುದು ಭಾರತದ ವಿಭಜನೆಯ ರಹಸ್ಯ ಕಾರ್ಯಸೂಚಿಯಿಂದ, ಮತ್ತು ತಮ್ಮ ವೈಯಕ್ತಿಕ ಆರ್ಥಿಕ ಕಾರ್ಯಸೂಚಿಯನ್ನು ಸಾಧಿಸಿಕೊಳ್ಳುವುದಕ್ಕಾಗಿ. ಷರಿಯಾ ಕಾನೂನಿನ ಕತ್ತರಿಯಿಂದ ತಮ್ಮ ಆಸ್ತಿಹಕ್ಕುಗಳನ್ನು ಸಂರಕ್ಷಿಸಿಕೊಳ್ಳಲು ರಹಸ್ಯವಾಗಿ ಹಿಂದು ಕಾನೂನನ್ನು ಅಕ್ರಮವಾಗಿ ಒಳಗೆ ತೂರಿದರು.
ಈಗ ೧೯೩೭ರ ಷರಿಯಾ ಕಾನೂನಿನೆಡೆಗೆ ದೃಷ್ಟಿ ಹಾಯಿಸೋಣ. ಇದು ಪೂರ್ಣರೂಪದಲ್ಲಿ ಷರಿಯಾ ಕಾನೂನು ಅಲ್ಲ ಎಂಬುದು ಸುಸ್ಪಷ್ಟ. ೧೯೩೭ರ ಕಾನೂನು ಶಾಸನಬದ್ಧ ಇಸ್ಲಾಮೀ ಕಾನೂನು ಮತ್ತು ಕೃತ್ರಿಮವಾಗಿ ಸೇರಿಸಲಾದ ಹಿಂದು ಕಾನೂನಿನ ಮುಂದುವರಿಕೆಗಳ ಅನೈತಿಕ ಸಮ್ಮಿಶ್ರಣ. ಆಗಿನ ಮುಸ್ಲಿಂ ಲೀಗ್ ಮುಖಂಡರು ಒಂದೇ ಕಲ್ಲಿನಿಂದ ಎರಡು ಮಾವಿನಹಣ್ಣುಗಳನ್ನು ಹೊಡೆದುರುಳಿಸಿದರು. ಒಂದು ಹಿಂದುಪದ್ಧತಿ, ಆಚರಣೆ ಸ್ವಭಾವಗಳಲ್ಲಿ ಬೆರೆತು ಒಂದಾಗಿದ್ದ ಭಾರತೀಯ ಮತಾಂತರಿತ ಮುಸ್ಲಿಮರನ್ನು ಮಾನಸಿಕವಾಗಿ ಪ್ರತ್ಯೇಕಗೊಳಿಸುವ ಮತ್ತು ಮುಂದೆ ಬಂದೊದಗಬಹುದಾದ ದೇಶವಿಭಜನೆಗೆ ಮಾನಸಿಕವಾಗಿ ತಯಾರುಗೊಳಿಸುವ ಕೆಲಸ ಮಾಡಿದರು. ಇನ್ನೊಂದು, ಸಾಂಪ್ರದಾಯಿಕ ಹಿಂದು ಕಾನೂನಿನಿಂದ ವಿಶೇಷವಾದ ಸವಲತ್ತುಗಳನ್ನು ಅನುಭವಿಸುತ್ತಿದ್ದ ಶ್ರೀಮಂತ ಹಾಗೂ ಬಲಾಢ್ಯ ಮುಸ್ಲಿಂ ಲೀಗ್ ಮುಖಂಡರು ತಮ್ಮ ಆರ್ಥಿಕ ಶಕ್ತಿಗಳನ್ನು ಕಾಪಾಡಿಕೊಳ್ಳಲು ಇಸ್ಲಾಮೀ ಷರಿಯತ್ ಕಾನೂನಿನ ಏಟಿನಿಂದ ತಪ್ಪಿಸಿಕೊಂಡರು. ಇದು ಭಾರತ ಮತ್ತು ಹಿಂದುಗಳ ವಿರುದ್ಧವಷ್ಟೇ ಅಲ್ಲ, ಭಾರತದ ಇಡೀ ಮತಾಂತರಿತ ಮುಸ್ಲಿಂ ಜನಸಮುದಾಯದ ವಿರುದ್ಧ ಕೂಡ.
ಷರಿಯಾದೊಂದಿಗೆ ನುಸುಳಿದ ಹಿಂದು ಕಾನೂನು
೧೯೩೭ರ ಕಾನೂನಿನ ನಿರ್ಣಾಯಕ ಭಾಗವು ಕೇವಲ ೯೨ ಶಬ್ದಗಳನ್ನು ಹೊಂದಿದ್ದು, ಇದು ಭಾರತದ ಮತಾಂತರಿತ ಮುಸ್ಲಿಮರು ಅನುಸರಿಸುತ್ತ ಬಂದಿದ್ದ ಸಾಂಪ್ರದಾಯಿಕ ಹಿಂದು ಕಾನೂನನ್ನು ತಪ್ಪಿಸಿ ಇಸ್ಲಾಮೀ ಷರಿಯಾ ಕಾನೂನಿನ ನಿಯಮಗಳನ್ನು ಹೇರುತ್ತದೆ. ೧೯೩೭ರ ಕಾನೂನಿನ ಈ ೯೨ ಶಬ್ದಗಳು ಎಂದೂ ಬದಲಾಗದಂತಹವುಗಳು ಮತ್ತು ಭಾರತೀಯ ಮುಸ್ಲಿಮರನ್ನು ದೈವೀ ಇಸ್ಲಾಮೀ ಕಾನೂನಿಂದ ವಿಮುಖರಾಗದಂತೆ ನೋಡಿಕೊಳ್ಳುತ್ತದೆ.
ಆದರೆ ಈ ೧೯೩೭ರ ಷರಿಯಾ ಕಾನೂನು ನಿಜವಾಗಿಯೂ ಇಸ್ಲಾಂನಿಂದ ಭಾರತದ ಮುಸ್ಲಿಮರಿಗೆ ನಿಗದಿಗೊಳಿಸಲಾದ ದೈವೀ, ಇಸ್ಲಾಮೀ ಷರಿಯಾ ಕಾನೂನು ಆಗಿದೆಯೇ? ಇಲ್ಲ. ವಾಸ್ತವದಲ್ಲಿ ಇದು ಇಸ್ಲಾಂಗೆ ವಿರುದ್ಧವೇ ಆಗಿದೆ ಮತ್ತು ಹಾಗೆಯೆ ಮುಂದುವರಿಯುತ್ತದೆ ಕೂಡ. ಅದು ಹಿಂದು ಕಾನೂನು ನೀಡುವ ಮೂರು ಪ್ರಮುಖ ಹಕ್ಕುಗಳನ್ನು ಸೇರಿಸಿಕೊಂಡಿದೆ. ಮೊದಲನೆಯದು, ೧೯೩೭ರ ಕಾನೂನಿನಲ್ಲಿ ಹಿಂದುಗಳಿಗಿರುವಂತೆ ತಮಗಿಷ್ಟ ಬಂದವರಿಗೆ ಆಸ್ತಿಹಕ್ಕುಗಳನ್ನು ನೀಡುವ – ವಿಲ್ (ಮರಣಶಾಸನ) ಬರೆಯಲು ಅನುಮತಿಸುತ್ತದೆ. ವಿಲ್ಗೆ ಇಸ್ಲಾಮಿನಲ್ಲಿ ಸಂಪೂರ್ಣವಾಗಿ ನಿಷೇಧವಿದೆ. ಎರಡನೆಯದು, ಅಂದಿನ ದಿನಗಳಲ್ಲಿ ಬೆಲೆಬಾಳುವ ಆಸ್ತಿ ಎನಿಸಿಕೊಂಡಿದ್ದ – ಇಂದಿಗೂ ಕೂಡ ಹಾಗೆಯೆ ಇರುವ ಹಿಂದು ಋಷಿಗಳು ರೂಪಿಸಿರುವ ಸ್ಮೃತಿ-ನಿಯಮಗಳೂ ಮುಸ್ಲಿಮರಿಗೆ ಅನ್ವಯಿಸುವಂತೆ – ಕೃಷಿಭೂಮಿಯನ್ನು ಹೊರಗಿಡಲಾಗಿದೆ. ಮೂರನೆಯದು, ಮಕ್ಕಳಿಲ್ಲದ ಮುಸ್ಲಿಮರಿಗೆ – ಹಿಂದುಗಳಂತೆ – ದತ್ತಕ ತೆಗೆದುಕೊಳ್ಳುವ ಹಕ್ಕನ್ನು ನೀಡಲಾಗಿದೆ. ಮೂಲತಃ ಇಸ್ಲಾಮೀ ಕಾನೂನು ದತ್ತಕ ವ್ಯವಸ್ಥೆಯನ್ನು ನಿಷೇಧಿಸಿದೆ. ಪ್ರವಾದಿ ಕೂಡಾ ದತ್ತಕ ಪದ್ಧತಿಯನ್ನು ಮಾನ್ಯ ಮಾಡಿಲ್ಲ. ಆದುದರಿಂದ ಶುದ್ಧ ಇಸ್ಲಾಮೀ ಧರ್ಮಾನುಸಾರ ೧೯೩೭ರ ಮಸೂದೆಯು ಕುರಾನಿಗೆ ವಿರೋಧಿಯಾದುದು, ಇಸ್ಲಾಮಿನ ಪ್ರಕಾರ ಪಾಷಂಡಿತನ, ದೈವ-ಧರ್ಮವಿರೋಧಿ. ಹಾಗಾದರೆ ಹಿಂದು ಕಾನೂನನ್ನು ೧೯೩೭ರ ಷರಿಯಾ ಕಾನೂನಿನೊಳಗೆ ಅಕ್ರಮವಾಗಿ ಸೇರಿಸುವ ಈ ಕಾರ್ಯಯೋಜನೆಯಿಂದ ಯಾರಿಗೆ ಪ್ರಯೋಜನವಾಯಿತು?
ಜಿನ್ನಾ, ಜಮೀನುದಾರರಿಗೆ ಹಿಂದು ಕಾನೂನು: ಮುಸ್ಲಿಮರಿಗೆ ಷರಿಯಾ!
ಷರಿಯಾ ಪ್ರಕಾರ ಆಸ್ತಿಗಳನ್ನು ವಿಲ್ ಬರೆಯುವುದಕ್ಕೆ ಅನುಮತಿಯಿಲ್ಲದಿದ್ದರೂ ಜಿನ್ನಾ ತನಗಾಗಿ ಮತ್ತು ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ೧೯೩೭ರ ಷರಿಯಾ ಕಾನೂನಿನಲ್ಲಿ ಈ ಅವಕಾಶವನ್ನು ಅಕ್ರಮವಾಗಿ ಸೇರಿಸಿದ. ಜಿನ್ನಾ ತನ್ನ ಬೃಹತ್ತಾದ ಎಸ್ಟೇಟನ್ನು ಷರಿಯಾದಂತೆ ಅಲ್ಲ, ತನ್ನಿಚ್ಛೆಯಂತೆಯೇ ವಿಲ್ ಮಾಡಲು ಬಯಸಿದ್ದ. ಷರಿಯಾ ಕಾನೂನು ಜಾರಿಯಾದ ಎರಡು ವರ್ಷಗಳ ನಂತರ – ೩೦ ಮೇ ೧೯೩೯ರಂದು – ತನ್ನಿಚ್ಛೆಗೆ ವಿರುದ್ಧವಾಗಿ ಮುಸ್ಲಿಮನಲ್ಲದ ಪಾರ್ಸಿಯೊಬ್ಬನನ್ನು ಮದುವೆಯಾದ ಮಗಳಾದ ದೀನಾಳಿಗೆ ತನ್ನೆಲ್ಲ ಆಸ್ತಿಗಳ ಹಕ್ಕಿನಿಂದ ವಂಚಿಸಲು ವಿಲ್ ಬರೆದು ಪೂರೈಸಿದ. ಷರಿಯತ್ ಕಾನೂನಿನನ್ವಯ ಏಕಮೇವ ವಾರಸುದಾರಳಾದ ದೀನಾಳಿಗೆ ಸಂಪೂರ್ಣ ಎಸ್ಟೇಟ್ ಸೇರಬೇಕಾಗಿತ್ತು. ಪ್ರಮುಖ ನ್ಯಾಯಮೂರ್ತಿಗಳೂ, ಜಿನ್ನಾರ ಸ್ನೇಹಿತರೂ ಆದ ಮಹಮದ್ ಕರೀಂಭಾಯಿ ಛಾಗ್ಲಾರವರೂ ಕೂಡಾ ಜಿನ್ನಾನಿಗೆ ದೀನಾಳಿಗೆ ವಾರಸಿಕೆ ಕೊಡದಿರುವ ಇಚ್ಛೆಯಿತ್ತು ಎನ್ನುವುದನ್ನು ಸ್ಥಿರೀಕರಿಸಿದರು. ಜಿನ್ನಾ ತನ್ನ ಸಹೋದರಿ ಫಾತಿಮಾರನ್ನು ವಿಲ್ನ ಕಾರ್ಯನಿರ್ವಾಹಕಿಯಾಗಿ ನೇಮಿಸಿ ಮುಂಬೈನ ಅತ್ಯಂತ ಪ್ರತಿಷ್ಠಿತ ಮಲಬಾರ್ ಗುಡ್ಡಗಳ ಪ್ರದೇಶದ ೨.೫ ಎಕರೆ ನಿವೇಶನದಲ್ಲಿರುವ ಭವ್ಯಬಂಗಲೆ ಮತ್ತು ತನ್ನೆಲ್ಲ ಚರಾಸ್ತಿಗಳನ್ನು – ಈಗ ಸುಮಾರು ರೂ.೧೦೦೦ ಕೋಟಿಯಷ್ಟು ಬೆಲೆಬಾಳುವ ಆಸ್ತಿಯನ್ನು – ಉರಿಯು ಬರೆದಿಟ್ಟಿದ್ದ. ವಿಲ್ನಲ್ಲಿ ಆಸ್ತಿಯ ಬಹುಬಾಗವನ್ನು ದಾನವಾಗಿಯೂ, ಕೇವಲ ಅಲ್ಪಮೊತ್ತವು ಆನುಮಂಶಿಕವಾಗಿ ದೀನಾಳಿಗೆ ಲಭಿಸುವಂತೆ ಮಾಡಿದ. ಅಚ್ಚರಿಯೆಂದರೆ ದೀನಾ ಜನಿಸಿದ್ದು ಕೂಡಾ ಜಿನ್ನಾ ವಿವಾಹವಾದ ಪಾರ್ಸಿ ತಾಯಿಯಿಂದಲೇ (ಮುಂದೆ ಆಕೆ ಇಸ್ಲಾಂಗೆ ಮತಾಂತರಗೊಂಡಿದ್ದಳು).
೧೯೩೭ರ ಷರಿಯಾ ಮಸೂದೆಯ ಪ್ರಕಾರ ಷರಿಯಾ ನಿಯಮಗಳಿಗೆ ಹೊರತಾದ ಇನ್ನೆರಡು ಅಂಶಗಳು – ಕೃಷಿಭೂಮಿಯನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವುದು ಮತ್ತು ದತ್ತಕ ಹಕ್ಕಿಗೆ ಅವಕಾಶ ನೀಡುವುದು – ಮುಸ್ಲಿಂ ಲೀಗಿಗೆ ಬೆನ್ನೆಲುಬಾಗಿದ್ದ ಹೇರಳ ಆಸ್ತಿ ಹೊಂದಿದ್ದ ಬಲಾಢ್ಯ ಜಮೀನ್ದಾರರ ಹಿತರಕ್ಷಣೆಗಾಗಿ ರೂಪಿಸಿದ್ದಾಗಿತ್ತು. ಈ ಕಾನೂನಿನ ವ್ಯಾಪ್ತಿಯಿಂದ ಕೃಷಿಭೂಮಿಯನ್ನು ಹೊರಗಿಟ್ಟಿರುವುದರಿಂದ ಹಿಂದೂ ಕಾನೂನಿನಂತೆ ಭೂಮಿ-ಕಾಣಿ ಆಸ್ತಿಗಳು ಗಂಡು ವಾರಸುದಾರರಲ್ಲಿಯೇ ಉಳಿಯುವಂತಾಯಿತು; ಷರಿಯತ್ ಪ್ರಕಾರ ಬರಬೇಕಾಗಿದ್ದ ಹೆಣ್ಣುಮಕ್ಕಳ ಪಾಲಿನಿಂದ ಅವರು ವಂಚಿತರಾದರು.
ದತ್ತಕದ ಹಕ್ಕಿನಿಂದ ಜಮೀನ್ದಾರ ಶ್ರೀಮಂತ ಮುಸ್ಲಿಮರಿಗೆ ಹಿಂದುಗಳಂತೆ ಗಂಡುಮಗುವನ್ನು ದತ್ತು ತೆಗೆದುಕೊಳ್ಳುವ ಅವಕಾಶವನ್ನು ಹಾಗೂ ಷರಿಯಾ ಧಾರ್ಮಿಕ ಕಾನೂನಿನಂತೆ ಇತರರಿಗೆ ಬೇರೆ ಗಂಡು ವಾರಸುದಾರನಿಗೆ ಆಸ್ತಿ ಹಕ್ಕನ್ನು ನಿರಾಕರಿಸುವ ಹಕ್ಕನ್ನು ಖಾತರಿಪಡಿಸಲಾಯಿತು. ಹೀಗೆ ೧೯೩೭ರ ಷರಿಯಾ ಮಸೂದೆಯಿಂದ ಮುಸಲ್ಮಾನರಿಗೆ ಷರಿಯಾ ಮತ್ತು ಜಿನ್ನಾ ಹಾಗೂ ಜಮೀನ್ದಾರರಿಗೆ ಹಿಂದು ಕಾನೂನು – ಎಂಬಂತಾಯಿತು.
ಇಸ್ಲಾಂವಿರೋಧಿ ಒಪ್ಪಂದ
ಷರಿಯಾ ವಿರೋಧಿ ಹಿಂದೂ ಕಾನೂನಿನ ಅಂಶಗಳನ್ನು ೧೯೩೭ರ ಷರಿಯಾ ಮಸೂದೆಯಲ್ಲಿ ಅಕ್ರಮವಾಗಿ ತೂರಿಸುವಂತೆ ಆಗ್ರಹಿಸಿದ್ದು ಯಾರು? ಸಹಜವಾಗಿ ಬ್ರಿಟಿಷರಂತೂ ಅಲ್ಲ. ಮುಸ್ಲಿಮರಿಗೆ ದತ್ತಕ ಹಕ್ಕು, ತಮ್ಮ ಆಸ್ತಿಗಳಿಗೆ ವಿಲ್ ಮಾಡುವ ಹಕ್ಕು ಮತ್ತು ಕೃಷಿಭೂಮಿಯನ್ನು ೧೯೩೭ರ ಷರಿಯಾ ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವಂತೆ ಅವರೇಕೆ ಆಗ್ರಹಿಸಿದರು? ಹೀಗೆ ಕಳ್ಳಮಾರ್ಗದಲ್ಲಿ ಹಿಂದು ಕಾನೂನುಗಳನ್ನು ೧೯೩೭ರ ಕಾನೂನಿನಲ್ಲಿ ಸೇರಿಸಿದ್ದರಿಂದ ಲಾಭ ಪಡೆದುಕೊಂಡವರು ಯಾರು? ಮುಸ್ಲಿಂ ಲೀಗ್ ಮುಖಂಡರೇ ಹೊರತು ಬ್ರಿಟಿಷರಲ್ಲ! ಯಾರು ತಮಗಾಗಿ ಹಿಂದೂ ಕಾನೂನನ್ನು ಮುಂದುವರಿಸುವಂತೆ ಆಗ್ರಹಿಸಿ ಬ್ರಿಟಿಷರೊಂದಿಗೆ ಒಪ್ಪಂದವನ್ನು ಕುದುರಿಸಿದರೋ ಅವರೇ ಈ ಯೋಜನೆಯಿಂದ ಹೆಚ್ಚು ಲಾಭ ಪಡೆದವರಾಗಿದ್ದಾರೆ ಎಂಬ ಸಂಗತಿಯನ್ನು ಊಹಿಸಲು ತ್ರಿಕಾಲಜ್ಞಾನಿಗಳ ಆವಶ್ಯಕತೆ ಇದೆಯೆ?
೧೯೩೭ರ ಷರಿಯಾ ಮಸೂದೆ ಮುಸ್ಲಿಮರಿಗಾಗಿಯೇ ರಚಿಸಲಾದ ಇಸ್ಲಾಮೀ ಕಾನೂನು, ಇದನ್ನು ಸಂಸತ್ತು ಕೂಡ ಬದಲಾಯಿಸಲಾಗದು, ಮುಟ್ಟಲಾಗದುದು ಎಂದು ತಮ್ಮ ಮನೆಮಾಡುಗಳ ಮೇಲೆ ಹತ್ತಿ ಕಿರುಚಾಡುತ್ತಿರುವವರು, ಈ ೧೯೩೯ರ ಷರಿಯಾ ಮಸೂದೆ ಇಸ್ಲಾಮೀ ರಾಜಕಾರಣಕ್ಕೆ ಷರಿಯಾ ಮತ್ತು ಜಿನ್ನಾ ಹಾಗೂ ಜಮೀನ್ದಾರರುಗಳಿಗೆ ಹಿಂದು ಕಾನೂನು ಎಂಬುದನ್ನು ನಿರಾಕರಿಸುತ್ತಾರೆಯೆ? ಲೀಗ್ ಮುಖಂಡರು ಬ್ರಿಟಿಷರೊಂದಿಗಿನ ತಮ್ಮ ಅನೈತಿಕವಾದ ಒಳಒಪ್ಪಂದದಿಂದ ಹಿಂದೂ ಕಾನೂನನ್ನು ೧೯೩೭ರ ಷರಿಯಾಗೆ ಸೇರಿಸುವುದರ ಮೂಲಕ ತಮ್ಮ ಆಸ್ತಿ ಹಕ್ಕುಗಳನ್ನು ಭದ್ರಪಡಿಸಿಕೊಂಡರು ಮತ್ತು ಮುಸ್ಲಿಂ ಸಮುದಾಯದಲ್ಲಿ ಮತೀಯಭಾವನೆಗಳನ್ನು ಕೆರಳಿಸಿದರು. ೧೯೩೭ರ ಷರಿಯಾ ಮಸೂದೆಯು ಕೇವಲ ೧೦ ವರ್ಷಗಳಲ್ಲಿ ಭಾರತದಲ್ಲಿದ್ದ ಹಿಂದು-ಮುಸ್ಲಿಮರ ಕೋಮು ಸಾಮರಸ್ಯವನ್ನು ಪುಡಿಮಾಡಿತು, ಮುಸ್ಲಿಮರನ್ನು ಬೇರ್ಪಡಿಸಿತು, ಪ್ರತ್ಯೇಕ ಇಸ್ಲಾಮೀ ಅಸ್ಮಿತೆಯನ್ನು ಗಟ್ಟಿಗೊಳಿಸಿತು. ೧೯೪೦ರಲ್ಲಿ ದೇಶದ ವಿಭಜನೆಯ ಬೇಡಿಕೆಯ ಕಿಚ್ಚು ಹಚ್ಚಿತು. ಅದೇ ಮುಂದೆ ೧೯೪೭ರಲ್ಲಿ ಸಾಕಾರಗೊಂಡಿತು.
ಗಾಂಧಿ ನೇತೃತ್ವದಿಂದ ದೂರ
೧೯೩೭ರ ಷರಿಯಾ ಕಾನೂನು ಜಾರಿಯಾದ ನಂತರ ಮುಸ್ಲಿಂ ಲೀಗ್, ಮುಸ್ಲಿಮರ ಆಶೋತ್ತರಗಳಿಗೆ ಧ್ವನಿಯಾಗುವ ಬೃಹತ್ ಸಮೂಹಪಕ್ಷವಾಗಿ ರೂಪಗೊಂಡಿತು. ಅಷ್ಟೇ ಅಲ್ಲದೆ ಅಲ್ಲಿಯವರೆಗೂ ಭಾರತದ ಜನಮಾನಸದ ಮೇಲೆ ಸಂಪೂರ್ಣವಾಗಿ ಹಿಡಿತವನ್ನು ಸಾಧಿಸಿದ್ದ, ಸವಾಲು ಎಸೆಯುವವರೇ ಇಲ್ಲದಂತಿದ್ದ ಗಾಂಧಿ ನೇತೃತ್ವದ ಕಾಂಗ್ರೆಸ್ಸಿಗೂ ಸವಾಲು ಎಸೆಯಲು ಪ್ರಾರಂಭಿಸಿತು. ೧೯೩೭ರ ಈ ಮಸೂದೆ ಜಾರಿಯಾದದ್ದು ಕಾಂಗ್ರೆಸ್ ಪ್ರಭಾವಕ್ಕೂ ಹೊರತಾದ ಇಸ್ಲಾಮೀ ಧಾರ್ಮಿಕ ಮತ್ತು ಕೋಮುಭಾವನೆಗಳ ಪ್ರಚಂಡಶಕ್ತಿಯ ಪ್ರವಾಹವನ್ನು ಬಡಿದೆಬ್ಬಿಸಿತು. ಬ್ರಿಟಿಷರು ಮತ್ತು ಮುಸ್ಲಿಂ ಲೀಗ್ ಇಚ್ಛಿಸಿದಂತೆಯೇ ಈ ಮಸೂದೆ ಇಡೀ ಮುಸ್ಲಿಂ ಜನಾಂಗವನ್ನು ಗಾಂಧಿ ನೇತೃತ್ವದ ಕಾಂಗ್ರೆಸ್ಸಿನಿಂದ ಭಾರೀ ಪ್ರಮಾಣದಲ್ಲಿ ಪಲ್ಲಟಗೊಳಿಸುವಲ್ಲಿ ಸಹಾಯಮಾಡಿತು. ಈ ಸ್ಥಿತ್ಯಂತರವು ಎಷ್ಟು ಬೃಹತ್ತಾಗಿ ಮತ್ತು ಕ್ಷಿಪ್ರವಾಗಿ ರೂಪಗೊಂಡಿತೆಂದರೆ, ಅಲ್ಲಿಯವರೆಗೂ ಫೆಡರಲ್ ವ್ಯವಸ್ಥೆಯಲ್ಲೇ ಹಿಂದುಗಳೊಂದಿಗೆ ಕೆಲವು ಅಧಿಕಾರಿಗಳು ಪ್ರತ್ಯೇಕವಾಗಿರುವಂತೆ ಅಧಿಕಾರ ಹಂಚಿಕೆಯ ಯೋಚನೆ ಮಾಡಿದ್ದ ಮುಸ್ಲಿಂ ಲೀಗ್ ಏಕಾಏಕಿ ತನ್ನ ಗತಿಯನ್ನು ಬದಲಾಯಿಸಿ ದೇಶವಿಭಜನೆಗೆ ಒತ್ತಾಯಿಸತೊಡಗಿತು. ೧೯೩೭ರ ಅಕ್ಟೋಬರ್ನಲ್ಲಿ ಜಾರಿಗೊಂಡ ಈ ಮಸೂದೆ, ಕೇವಲ ಎರಡೂವರೆ ವರ್ಷದ ಅವಧಿಯೊಳಗೆ ಮಾರ್ಚ್ ೧೯೪೦ರಲ್ಲಿಯೇ ಜಿನ್ನಾ ಲಾಹೋರಿನಲ್ಲಿ ದೇಶವಿಭಜನೆಯ ಠರಾವನ್ನು ಮಂಡಿಸುವಂತೆ ಮಾಡಿತು.
ಸಂವಿಧಾನದ ೪೪ನೇ ಕಲಂ: ೧೯೩೭ರ ಮಸೂದೆಗೆ ಪ್ರತಿಕ್ರಿಯೆ
ಸಮಾನ ನಾಗರಿಕ ಸಂಹಿತೆಯನ್ನು ಸ್ವಚ್ಛವಾದ ಹಲಗೆಯಲ್ಲೇನೂ ಬರೆಯಲಾಗದು. ಬದಲಿಗೆ, ೧೯೩೭ರ ಷರಿಯತ್ ಮಸೂದೆಯ ಮೇಲೆಯೆ ಬರೆಯಬೇಕಾದೀತು. ೧೯೩೭ರ ಈ ಕಾನೂನು ಒಂದೇ ಪಟ್ಟಿಗೆ ಭಾರತದ ಹಿಂದು-ಮುಸ್ಲಿಮರನ್ನು ಅಷ್ಟೇಕೆ ವಾಸ್ತವದಲ್ಲಿ ಭಾರತವನ್ನೇ ವಿಭಜಿಸಿತು. ದೇಶವಿಭಜನೆಯ ಈ ಕಂದರವನ್ನು ಅಳಿಸಿಹಾಕಿ ಬಾಂಧವ್ಯಗಳನ್ನು ಬೆಸೆಯುವ ಬದಲಿಗೆ ಇದೇ ೧೯೩೭ರ ಕಾನೂನಿನ ಮುಂದುವರಿಕೆಯು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದು-ಮುಸ್ಲಿಮರ ಬಾಂಧವ್ಯಗಳು ಇನ್ನೂ ಬೃಹತ್ತಾದ ಒಡಕಿನೆಡೆಗೆ ವಾಲುವಂತೆ ಪ್ರೇರೇಪಿಸುತ್ತಿದೆ. ಸಮಾನ ನಾಗರಿಕ ಸಂಹಿತೆಯು ಈ ವಾಲುವಿಕೆಯನ್ನು ಸ್ಥಗಿತಗೊಳಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ. ಸಮಾನ ನಾಗರಿಕ ಸಂಹಿತೆಯು ದೇಶಕ್ಕೆ ವಿಭಜನಕಾರಿ ಎಂಬ ವಿರೋಧಪಕ್ಷಗಳ ಆರೋಪಕ್ಕೆ ಭಾರತೀಯ ಜನತಾ ಪಕ್ಷ ಸಂವಿಧಾನದ ಆಶಯಗಳ ಕಡೆಗೆ ಒಮ್ಮೆ ದೃಷ್ಟಿ ಹಾಯಿಸಿ. ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಿ ಎಂದು ಸಂವಿಧಾನವೇ ಹೇಳಿದೆ ಎಂದು ಪ್ರತಿಕ್ರಿಯಿಸಿದೆ. ೧೯೩೭ರ ಷರಿಯಾ ಕಾನೂನಿನ ಪರಿಣಾಮವಾಗಿ ಉಂಟಾಗಿರುವ ವಿಭಜಕಶಕ್ತಿಗಳ ಪಾರಮ್ಯವನ್ನು ನಿಗ್ರಹಿಸಬೇಕಾಗಿರುವ ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಭಾಜಪದ ಈ ಪ್ರತಿಕ್ರಿಯೆ ನಿಲವು ಅತ್ಯಂತ ದುರ್ಬಲ ಅನಿಸುತ್ತಿದೆ. ಪ್ರಾಯಶಃ ಸಮಾನ ನಾಗರಿಕ ಸಂಹಿತೆ ಕುರಿತು ಭಾಜಪದ ಚಿಂತಕರ ತಿಳಿವಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆ ಕುರಿತಾದ ಐತಿಹಾಸಿಕ ಮೂಲಗಳ ಆಳಕ್ಕೆ ಇಳಿದು ಶೋಧಿಸುವಂತೆ ಕಾಣುತ್ತಿಲ್ಲ.
ಅತ್ಯಂತ ಸ್ವಾಭಾವಿಕ ಪ್ರಶ್ನೆಯಾದ ನಮ್ಮ ಸಂವಿಧಾನ ನಿರ್ಮಾತೃಗಳು ನಮ್ಮ ಶಾಸಕಾಂಗದ ಅಧಿಕಾರವ್ಯಾಪ್ತಿಯಲ್ಲೇ ಕಾರ್ಯಸಾಧ್ಯವಾಗಿಸಬಹುದಾದ ಸಂದರ್ಭದಲ್ಲಿ, ಸಮಾನ ನಾಗರಿಕ ಸಂಹಿತೆ ಕುರಿತು ದೀರ್ಘ ಚರ್ಚೆಯಲ್ಲಿ ತೊಡಗಿಕೊಳ್ಳುವ ಆವಶ್ಯಕತೆ ಏನಿತ್ತು? – ಎಂಬುದಕ್ಕೆ ಉತ್ತರ ಕಂಡುಕೊಂಡಿಲ್ಲವೆಂದೆನಿಸುತ್ತದೆ. ೧೯೩೭ರ ಈ ಕಾನೂನು ಜಾರಿಯಲ್ಲಿಲ್ಲದಿದ್ದರೆ, ಮುಂದುವರಿಯದಿದ್ದರೆ ಸಂವಿಧಾನ ಸಭೆಯು ಸಮಾನ ನಾಗರಿಕ ಸಂಹಿತೆ ಕುರಿತು ತನ್ನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿರಲಿಲ್ಲ. ಮುಸ್ಲಿಮರಿಗಾಗಿ ಪ್ರತ್ಯೇಕ ಧಾರ್ಮಿಕ ಕಾನೂನು, ಅದೂ ಅಲ್ಲದೆ ಭಾರತವನ್ನೇ ವಿಭಜಿಸುವಂತಹ ಪ್ರತ್ಯೇಕ ಕಾನೂನು ಉಳಿಯಲು – ಮುಂದುವರಿಯಲು ಅವಕಾಶವೀಯುತ್ತಿರಲಿಲ್ಲ. ಯಾವನೇ ಒಬ್ಬ ವಿಚಕ್ಷಣೆಯ ಇತಿಹಾಸದ ವಿದ್ಯಾರ್ಥಿಯ ತಿಳಿವಳಿಕೆಗೆ ಬರುವ ಸಂಗತಿಯೆಂದರೆ ಈ ಸಮಾನ ನಾಗರಿಕ ಸಂಹಿತೆಯ ವಿಚಾರವು ಸಂವಿಧಾನ ಸಭೆಯಲ್ಲಿ ದೀರ್ಘವಾಗಿ ಚರ್ಚೆಗೆ ಒಳಪಟ್ಟಿತೆಂಬುದು ೧೯೩೭ರ ಷರಿಯಾ ಕಾನೂನನ್ನು ಇಲ್ಲವಾಗಿಸುವುದೇ ಆಗಿದೆ ಎಂಬ ವಿಚಾರ ಸುಸ್ಪಷ್ಟ. ಸಂವಿಧಾನದ ನಿರ್ದೇಶಕತತ್ತ್ವಗಳಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆನ್ನುವ ೪೪ನೇ ಕಲಂನ್ನು ಅಳವಡಿಸಲು ಮೂಲಪ್ರೇರಣೆಯಾಗಿ ಭಾರತವನ್ನೇ ವಿಭಜಿಸಿದ ಈ ೧೯೩೭ರ ಷರಿಯಾ ಮಸೂದೆಯೇ ಆಗಿದೆ. ಸಂವಿಧಾನದ ನಿರ್ಮಾತೃಗಳು ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡುವ ಅಥವಾ ಮಾಡದೆಯೇ ಇರುವ ವಿವೇಚನೆಯನ್ನು ಕಾನೂನು ರೂಪಿಸುವವರ ಸುಪರ್ದಿಗೆ ಬಿಡಲು ಒಪ್ಪಲೇ ಇಲ್ಲ. ಬದಲಿಗೆ ಅದನ್ನು ಸಂವಿಧಾನಬದ್ಧ ಕರ್ತವ್ಯವನ್ನಾಗಿಸಿದರು. ವಾಸ್ತವದಲ್ಲಿ ಭಾಜಪದವರು ದೇಶದ ವಿಭಜನೆಗೆ ಕಾರಣೀಭೂತವಾದ ೧೯೩೭ರ ಷರಿಯಾ ಮಸೂದೆಯ ಕಡೆಗೆ ಬೆರಳು ತೋರಿಸಿ, ನಮ್ಮ ಸಂವಿಧಾನ ನಿರ್ಮಾಪಕರು ಈ ಹರಿದುಹಂಚಿಹೋದ ಸಮುದಾಯಗಳ ಬಾಂಧವ್ಯವನ್ನು ಬೆಸೆಯಲೆಂದೇ ಈ ಸಮಾನ ನಾಗರಿಕ ಸಂಹಿತೆಯ ವಿಚಾರವನ್ನು ಕಡ್ಡಾಯಗೊಳಿಸಿದ್ದಾರೆ. ೭೦ ವಷಗಳ ಕಾಲ ದೇಶವನ್ನಾಳುತ್ತಾ ಈ ಭೇದವನ್ನು ಉಳಿಸಿದ್ದಲ್ಲದೆ ಇನ್ನೂ ಹಿಗ್ಗಿಸಿದ, ಜಾತ್ಯತೀತ ಭಾರತವನ್ನು ರೂಪಿಸುವುದರ ಬದಲು ಹಿಂದು-ಮುಸ್ಲಿಂ ಬಾಂಧವ್ಯಗಳನ್ನು ಹಾಳುಗೆಡವಿದ ಆ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡು ಅವರಿಗೆ ಸಂಸತ್ತಿನಲ್ಲಿ ಬೆವರಿಳಿಸಬೇಕಾಗಿತ್ತು. ಸಮಾನ ನಾಗರಿಕ ಸಂಹಿತೆಯ ಚರ್ಚೆಗೆ ಕಾರಣೀಭೂತವಾದ ಆ ೧೯೩೭ರ ಷರಿಯಾ ಮಸೂದೆ ಅದರ ದುಷ್ಪರಿಣಾಮಗಳು, ಐತಿಹಾಸಿಕ ಹಿನ್ನೆಲೆಗಳನ್ನು ಭಾಜಪವು ದೇಶದ ಜನತೆಗೆ ತಿಳಿಸಲಾಗುವುದಿಲ್ಲವೆಂದಾದಲ್ಲಿ, ಅವರ ವಿರೋಧಿಬಣವು ದೇಶವನ್ನು ಬಾಧಿಸುತ್ತಿರುವ ಹಲವಾರು ಸಮಸ್ಯೆಗಳು ಎದುರಾಗಿರುವ ಗಂಭೀರ ಸನ್ನಿವೇಶದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಜರೂರತ್ತು ಏನಿದೆ ಎಂಬ ಪ್ರಶ್ನೆಯನ್ನು ಏಕೆ ಕೇಳಬಾರದು?
ಮುಸ್ಲಿಂ ಲೀಗಿಗೆ ಅಂಬೇಡ್ಕರರ ಸವಾಲು
ಸಮಾನ ನಾಗರಿಕ ಸಂಹಿತೆಯ ಬಗ್ಗೆ ಸಂವಿಧಾನ ಸಭೆಯಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದ ವ್ಯಕ್ತಿಯೆಂದರೆ ಡಾ|| ಬಿ.ಆರ್. ಅಂಬೇಡ್ಕರ್ ಅವರು. ಸಂವಿಧಾನಸಭೆಯಲ್ಲಿ ಮುಸ್ಲಿಮರಿಂದ ಷರಿಯತ್ ಕಾನೂನನ್ನು ಬದಲಾಯಿಸಲಾಗದು ಎಂದು ವಾದಿಸಿ ಸಮಾನ ನಾಗರಿಕ ಸಂಹಿತೆಯನ್ನು ಪ್ರಬಲವಾಗಿ ವಿರೋಧಿಸಿದ ಮುಸ್ಲಿಂ ಲೀಗ್ ಮುಖಂಡರನ್ನು ತೀವ್ರವಾಗಿ ಖಂಡಿಸಿದರು. ವಾಯವ್ಯ ಗಡಿನಾಡು ಪ್ರಾಂತದ ಮುಸ್ಲಿಮರು ೧೯೩೫ರವರೆಗೂ ಹಿಂದು ಕಾನೂನನ್ನು ಅನುಸರಿಸುತ್ತಿದ್ದರು, ಷರಿಯತ್ ಕಾನೂನನ್ನಲ್ಲ. ಈ ವಿಚಾರವನ್ನು ಬಹಿರಂಗವಾಗಿ ಅಲ್ಲಗಳೆಯುವಂತೆ ಲೀಗ್ ಮುಖಂಡರಿಗೆ ನೇರವಾಗಿ ಸವಾಲು ಹಾಕಿದರು. ೧೯೩೭ರವರೆಗೂ ಶೇಷ ಭಾರತದಲ್ಲಿ ಸಂಯುಕ್ತಪ್ರಾಂತಗಳು, ಕೇಂದ್ರ ಪ್ರಾಂತಗಳು ಮತ್ತು ಮುಂಬೈಗಳಲ್ಲಿ ವಾರಸುದಾರಿಕೆಯ ವಿಚಾರಗಳಲ್ಲಿ ಮುಸ್ಲಿಮರು ಹೆಚ್ಚಾಗಿ ಹಿಂದು ಕಾನೂನಿಗೇ ಒಳಪಡುತ್ತಿದ್ದರು. ಅಂದಿನವರೆಗೂ (೧೯೪೬ರವರೆಗೂ) ಉತ್ತರ ಮಲಬಾರ್ನ ಮುಸ್ಲಿಮರು ಹಿಂದು ಮರುಮಕ್ಕಥಾಯಂ (ಮಾತೃಪ್ರಧಾನ ಸಮಾಜವ್ಯವಸ್ಥೆ) ಕಾನೂನನ್ನು ಅನುಸರಿಸುತ್ತಿದ್ದ ದೃಷ್ಟಾಂತವನ್ನು ನೀಡಿದರು. ಕೊನೆಗೆ ಸಮಾನ ನಾಗರಿಕ ಸಂಹಿತೆಯ ವಿಚಾರವನ್ನು ನಿರೂಪಿಸಿದ ನಮ್ಮ ಸಂವಿಧಾನ ನಿರ್ಮಾತೃಗಳು ಮುಸ್ಲಿಂ ಸಮಾಜದ ಭಾವನೆಗಳಿಗೆ ಬಲವಾದ ಪೆಟ್ಟುಕೊಟ್ಟಿದ್ದಾರೆ ಎಂದು ಯಾವೊಬ್ಬ ಮುಸ್ಲಿಮನೂ ಹೇಳಕೂಡದು ಎಂದು ತಮ್ಮ ವಾದಸರಣಿಯ ಉಪಸಂಹಾರ ಮಾಡಿದರು. ಹೀಗೆ ಹಿಂದು-ಮುಸ್ಲಿಮರಲ್ಲಿನ ನಾಗರಿಕ ಸಂಹಿತೆಯ ಸಮಾನ ಪೃಷ್ಠಭೂಮಿ ಕುರಿತು ಡಾ|| ಅಂಬೇಡ್ಕರ್ ಮಾತನಾಡಿದ ಕೆಲವೇ ವಿವರಗಳು ಇಲ್ಲಿವೆ.
ಕನ್ನಡ ಅನುವಾದಕರು: ಡಿ. ರಾಮಮೂರ್ತಿ,
ನಿವೃತ್ತ ಆಂಗ್ಲಭಾಷಾ ಉಪನ್ಯಾಸಕರು, ಜ್ಞಾನೋದಯ ಪ.ಪೂ.
ಕಾಲೇಜು. ಬೆಂಗಳೂರು