ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸೆಪ್ಟೆಂಬರ್ 2023 > ತುರ್ತುಪರಿಸ್ಥಿತಿ: ದೆಹಲಿಯನ್ನು ನಡುಗಿಸಿದ ಸ್ವಚ್ಛತಾ ಕಾರ್ಯ, ೭ ಲಕ್ಷ ಜನರ ಸ್ಥಳಾಂತರ

ತುರ್ತುಪರಿಸ್ಥಿತಿ: ದೆಹಲಿಯನ್ನು ನಡುಗಿಸಿದ ಸ್ವಚ್ಛತಾ ಕಾರ್ಯ, ೭ ಲಕ್ಷ ಜನರ ಸ್ಥಳಾಂತರ

ತುರ್ತುಪರಿಸ್ಥಿತಿಯ ಅತಿರೇಕಗಳಲ್ಲಿ ಬಹಳಷ್ಟು ಜನರನ್ನು ಅವರ ವಸತಿಪ್ರದೇಶಗಳಿಂದ ಕಿತ್ತೊಗೆದು ಸ್ಥಳಾಂತರಗೊಳಿಸಿದ ನಿರ್ದಯ ಕಾರ್ಯಾಚರಣೆ ಕೂಡ ಮಹತ್ತ್ವವನ್ನು ಪಡೆದುಕೊಂಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಅದು ನಡೆಯಿತಾದರೂ ರಾಜಧಾನಿ ದೆಹಲಿಯಲ್ಲಿ ಅದು ಭೀಕರ ಸ್ವರೂಪವನ್ನೇ ಪಡೆದುಕೊಂಡಿತು. ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮತ್ತು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ)ಗಳು ಬಹಳಷ್ಟು ಕಟ್ಟಡ ಮತ್ತಿತರ ನಿರ್ಮಾಣಗಳನ್ನು ನಾಶಮಾಡಿದವು. ತುರ್ತುಪರಿಸ್ಥಿತಿಯ ವೇಳೆ ಪ್ರತಿಭಟನೆಯು ಕಷ್ಟವಾಗಿದ್ದ ಕಾರಣ ಧ್ವಂಸಕಾರ್ಯವು ತುಂಬ ವೇಗವನ್ನು ಪಡೆದುಕೊಂಡಿತು. ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಅವರ ಮನೆಗಳನ್ನು ಒಡೆದುಹಾಕಿದರು. ಬದಲಿ ವ್ಯವಸ್ಥೆ ಅಥವಾ ಪುನರ್ವಸತಿಗಳು ಇರಲಿಲ್ಲ; ಇದ್ದರೂ ಪ್ರಕ್ರಿಯೆ ತುಂಬ ಅಸಮರ್ಪಕವಾಗಿತ್ತು.

ತುರ್ತುಪರಿಸ್ಥಿತಿಯ ವೇಳೆ ಕುಟುಂಬಯೋಜನೆಯ ಬಲಾತ್ಕಾರದ ಶಸ್ತ್ರಕ್ರಿಯೆಗಳ ಬಿಸಿಗೆ ಕರ್ನಾಟಕ ಕೂಡ ಹೊರತಾಗಿರಲಿಲ್ಲ. ದೇವರಾಜ ಅರಸು ಅವರ ನೇತೃತ್ವದ ಕರ್ನಾಟಕ ಸರ್ಕಾರ ಇದರಲ್ಲಿ ಇತರ ಹಲವು ರಾಜ್ಯಗಳಂತೆ ಉತ್ಸಾಹದಿಂದಲೇ ನಡೆದುಕೊಂಡಿತ್ತು; ಆ ಮೂಲಕ ಪ್ರಧಾನಿಪುತ್ರ ಸಂಜಯಗಾಂಧಿ ಅವರನ್ನು ಖುಷಿಪಡಿಸುವ ಕೆಲಸ ಎಗ್ಗಿಲ್ಲದೆ ನಡೆದಿತ್ತೆನ್ನಬಹುದು.

೧೯೭೫-೭೬ರ ಸಾಲಿಗೆ ಕರ್ನಾಟಕಕ್ಕೆ ಕುಟುಂಬಯೋಜನೆಗೆ ಕೇಂದ್ರಸರ್ಕಾರ ೧.೩೯ ಲಕ್ಷ ಶಸ್ತ್ರಕ್ರಿಯೆಗಳ ಗುರಿಯನ್ನು ನಿಗದಿಪಡಿಸಿತ್ತು. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ೧,೨೦,೬೭೧ ಶಸ್ತ್ರಕ್ರಿಯೆಗಳು ನಡೆದವು. ೧೯೭೬-೭೭ರ ಸಾಲಿಗೆ ಕೇಂದ್ರಸರ್ಕಾರ ೨,೪೪,೫೦೦ ಶಸ್ತ್ರಕ್ರಿಯೆಗಳ ಗುರಿಯನ್ನು ನೀಡಿತ್ತು. ಅದನ್ನು ಜುಲೈನಲ್ಲಿ ೩ ಲಕ್ಷಕ್ಕೆ ಮತ್ತು ಡಿಸೆಂಬರ್‌ನಲ್ಲಿ ೬ ಲಕ್ಷಕ್ಕೆ ಏರಿಸಿಕೊಂಡ ರಾಜ್ಯದ ಕಾಂಗ್ರೆಸ್ ಸರ್ಕಾರ ಫೆಬ್ರುವರಿ ೨೮, ೧೯೭೭ರ ಹೊತ್ತಿಗೆ ೪,೮೮,೮೬೧ ಶಸ್ತ್ರಕ್ರಿಯೆಗಳ ಗುರಿಯನ್ನು ಪೂರೈಸಿತ್ತು. ಅಂದರೆ ಕೇಂದ್ರಸರ್ಕಾರ ನಿಗದಿಪಡಿಸಿದ ಗುರಿಯನ್ನು ದಾಟಿ ಇಮ್ಮಡಿಗಿಂತಲೂ ಅಧಿಕ ಶಸ್ತ್ರಕ್ರಿಯೆಗಳನ್ನು ನಡೆಸಿತ್ತು – ಎಂದು ಶಾ ಆಯೋಗದ ವರದಿ ದಾಖಲಿಸಿದೆ (ಸಂಗ್ರಹಿಸಿ, ಸಂಪಾದಿಸಿದವರು ಇರಾ ಸೆಳಿಯನ್).

ಈ ಬಗೆಯ ಸಾಧನೆಯ ಹಿಂದೆ ಜನರ ಮೇಲೆ ಬಹಳಷ್ಟು ಒತ್ತಡ ಹಾಕಿರುವುದು ಸ್ಪಷ್ಟ. ಉದಾಹರಣೆಗೆ ಕಂದಾಯ ಇಲಾಖೆಗೆ ೯೦ ಸಾವಿರ ಸಂತಾನಹರಣ ಶಸ್ತ್ರಕ್ರಿಯೆಗಳ ಗುರಿಯನ್ನು ವಿಧಿಸಿದ್ದರು; ಆಗ ಇದ್ದ ಇಲಾಖೆಯ ಸುಮಾರು ೨೬ ಸಾವಿರ ಸಿಬ್ಬಂದಿ ವರ್ಷದೊಳಗೆ ಅದನ್ನು ಪೂರೈಸಬೇಕಿತ್ತು. ಅದೇ ರೀತಿ ಗೃಹ (ಪೊಲೀಸ್) ಇಲಾಖೆಗೆ ಕೂಡ ೯೦ ಸಾವಿರ ಶಸ್ತ್ರಕ್ರಿಯೆಗಳ ಗುರಿಯನ್ನು ನೀಡಿದ್ದರು. ಅಲ್ಲಿದ್ದ ಒಟ್ಟು ಸಿಬ್ಬಂದಿ ೩೨ ಸಾವಿರ. ನವೆಂಬರ್ ೧೨ರಂದು (೧೯೭೬) ಇನ್‌ಸ್ಪೆಕ್ಟರ್- ಜನರಲ್ ಅವರು ಒಂದು ಸುತ್ತೋಲೆ ಹೊರಡಿಸಿ, ಎರಡು ಅಥವಾ ಜಾಸ್ತಿ ಮಕ್ಕಳಿರುವ ಜನ (ಪತಿ ಅಥವಾ ಪತ್ನಿ) ಶಸ್ತ್ರಕ್ರಿಯೆಗೆ ಒಳಗಾಗಬೇಕು; ಸರ್ಕಲ್ ಇನ್‌ಸ್ಪೆಕ್ಟರ್ ಹಾಗೂ ಸಬ್‌ಇನ್‌ಸ್ಪೆಕ್ಟರ್‌ಗಳು ಜನರಿಗೆ ಆ ಬಗ್ಗೆ ಪ್ರೇರಣೆ ನೀಡಬೇಕು ಎಂದು ಸೂಚಿಸಿದ್ದರು.

ಕೇಂದ್ರಸರ್ಕಾರ ದಿ. ೧೬-೪-೧೯೭೬ರಂದು ಅಂಗೀಕರಿಸಿದ ರಾಷ್ಟ್ರೀಯ ಜನಸಂಖ್ಯಾ ನೀತಿಗೆ ಅನುಸಾರವಾಗಿ ಕರ್ನಾಟಕ ಸರ್ಕಾರ ದಿ.೩-೭-೧೯೭೬ರಂದು ಒಂದು ಆದೇಶವನ್ನು ಹೊರಡಿಸಿತು. ಅದರ ಪ್ರಕಾರ ಈ ಕ್ರಮಗಳಿದ್ದವು:

೧)  ಒಳ್ಳೆಯ ಫಲಿತಾಂಶ ತಂದ ಕ್ಷೇತ್ರ ಕಾರ್ಯಕರ್ತರಿಗೆ (ಫೀಲ್ಡ್ ವರ್ಕರ್ಸ್) ಸೂಕ್ತ ಬಹುಮಾನ ನೀಡಬೇಕು; ಮತ್ತು ಅಪೇಕ್ಷಿತ ಮಟ್ಟ ಸಾಧಿಸದೆ ಇದ್ದವರನ್ನು ಶಿಕ್ಷಿಸಬೇಕು.

೨) ಕುಟುಂಬ ಯೋಜನೆಗೆ ಸಂಘಟಿತ ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಬಿಗಿಯಾದ ಕ್ರಮಗಳನ್ನು ಜರುಗಿಸಬೇಕು.

ಈ ನಡುವೆ ಕುಟುಂಬಯೋಜನೆ ಅನುಷ್ಠಾನದಲ್ಲಿ ಬಲಪ್ರಯೋಗ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗೆ ದೂರುಗಳು ಬಂದವು. ಆಗ ಮುಖ್ಯಮಂತ್ರಿಯವರ ಕಾರ್ಯದರ್ಶಿಯವರು ಆರೋಗ್ಯ ಇಲಾಖೆ ಕಮಿಷನರ್ ಅವರಿಗೆ ಪತ್ರ ಬರೆದು (೫-೧೧-೧೯೭೬). ಕುಟುಂಬಯೋಜನೆ ಶಸ್ತ್ರಕ್ರಿಯೆಯಲ್ಲಿ ಬಲಾತ್ಕಾರ ಮಾಡಬಾರದೆಂದು ಸಂಬಂಧಪಟ್ಟ ಎಲ್ಲರಿಗೆ ಸ್ಪಷ್ಟಪಡಿಸಲಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಉತ್ಸಾಹದಿಂದ ಅಥವಾ ಗುರಿಸಾಧನೆಗಾಗಿ ಬಲಪ್ರಯೋಗ ನಡೆಸುತ್ತಿರಬೇಕು. ಇದು ಸರಿಯಲ್ಲ; ಒತ್ತಾಯಿಸುವುದಾದರೂ ಅದರಲ್ಲಿ ಬಲಾತ್ಕಾರ ಸಲ್ಲದು ಎಂದು ತಿಳಿಸಿದರು; ಅಂದರೆ ಒಂದು ರೀತಿಯಲ್ಲಿ ಜನರ ಆರೋಪವನ್ನು ಇನ್ನೊಂದು ಕಡೆಗೆ ವರ್ಗಾಯಿಸಿದರು.

ನಿರುತ್ಸಾಹಕ ಜಾರಿ

ಕರ್ನಾಟಕ ಸರ್ಕಾರ ಜುಲೈ ೩ರ ಆದೇಶದಲ್ಲಿ ಕೆಲವು ನಿರುತ್ಸಾಹಕ (ಡಿಸ್‌ಇನ್ಸೆಂಟಿವ್)ಗಳ ಪಟ್ಟಿ ಮಾಡಿತ್ತು. ಆ ಮೂಲಕ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮನೆ ನಿವೇಶನ ಅಥವಾ ಫ್ಲಾಟ್ (ಮನೆ) ನೀಡಿಕೆ, ಅಂಗಡಿ ಸಾಲ, ಗೃಹನಿರ್ಮಾಣ ಸಾಲ-ಸಬ್ಸಿಡಿ, ತಕ್ಕಾವಿ ಸಾಲ, ಶೈಕ್ಷಣಿಕ ರಿಯಾಯಿತಿ, ಫ್ರೀಶಿಪ್, ಸ್ಕಾಲರ್‌ಶಿಪ್ ಇತ್ಯಾದಿಗಳು ದೊರೆಯುವುದಿಲ್ಲ ಎಂದು ತಿಳಿಸಲಾಯಿತು. ಕಂದಾಯ, ಶಿಕ್ಷಣ, ಯುವಜನ ಸೇವೆಯಂತಹ ಇಲಾಖೆಗಳು ಆ ಬಗ್ಗೆ ಔಪಚಾರಿಕ ಆದೇಶಗಳನ್ನು ಕೂಡ ಹೊರಡಿಸಿದವು. ಸರ್ಕಾರೀ ನೌಕರರಿಗೆ ಮೂರಕ್ಕಿಂತ ಜಾಸ್ತಿ ಮಕ್ಕಳು ಇರಬಾರದೆಂದು ವಿಧಿಸುವ ಬಗ್ಗೆ ಕರ್ನಾಟಕ ಪೌರಸೇವಾ ನಿಯಮ-೧೯೬೬ಕ್ಕೆ ತಿದ್ದುಪಡಿಯನ್ನು ತಂದರು.

ಶಸ್ತ್ರಕ್ರಿಯೆಗೆ ಸಂಬಂಧಿಸಿ ತಮಗೆ ನೀಡಲಾದ ಗುರಿಯನ್ನು ಸಾಧಿಸುವ ಸಲುವಾಗಿ ಸರ್ಕಾರೀ ಅಧಿಕಾರಿಗಳು ವಿವಿಧ ತಂತ್ರಗಳನ್ನು ಅನುಸರಿಸಿದರು. ಉದಾಹರಣೆಗೆ ಎ) ಗುಲ್ಬರ್ಗಾ(ಕಲಬುರಗಿ) ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ (ಡಿಡಿಪಿಐ) ೭,೧೨೦ ಶಸ್ತ್ರಕ್ರಿಯೆಗಳ ಭರ್ಜರಿ ಗುರಿಯನ್ನು ನೀಡಲಾಗಿತ್ತು. ಆತ ಚಿತ್ತಾಪುರ, ಗುರುಮಿಠಕಲ್, ಕಮಲಾಪುರಗಳಲ್ಲಿ ದೊಡ್ಡ ರೀತಿಯ ಶಸ್ತ್ರಕ್ರಿಯೆ ಶಿಬಿರಗಳನ್ನು ಏರ್ಪಡಿಸಿದರು. ೧೯೭೬ರ ಡಿಸೆಂಬರ್ ೯ರಿಂದ ೧೯ರವರೆಗೆ ನಡೆದ ಆ ಶಿಬಿರಗಳಿಗೆ ಸ್ಥಳೀಯ ಶಾಲಾ ಶಿಕ್ಷಕರು ಅರ್ಹರಾದ ಸಾಧ್ಯವಾದಷ್ಟು ಜನರನ್ನು ಕರೆತರಬೇಕೆಂದು ತಾಕೀತು ಮಾಡಲಾಗಿತ್ತು. ಹತ್ತು ದಿನ ಸ್ಥಳೀಯ ಶಾಲೆಗಳಲ್ಲೇ ಆ ಶಿಬಿರಗಳನ್ನು ಜರುಗಿಸಬೇಕು, ರವಿವಾರ ಮತ್ತು ಇತರ ಸಾಮಾನ್ಯ ರಜಾದಿನಗಳಲ್ಲಿ ತರಗತಿ ನಡೆಸಿ ಹತ್ತು ದಿನಗಳ ಆ ರಜೆಯನ್ನು ತುಂಬಬೇಕು ಎಂದು ಸೂಚಿಸಲಾಗಿತ್ತು. ಅರ್ಹ ಶಿಕ್ಷಕರು ಸ್ವತಃ ಶಸ್ತ್ರಕ್ರಿಯೆ ಮಾಡಿಸಿಕೊಳ್ಳಬೇಕೆಂದು ಕೂಡ ತಿಳಿಸಲಾಗಿದ್ದು, ಚಿತ್ತಾಪುರದ ತಾಲೂಕು ಶಿಕ್ಷಣಾಧಿಕಾರಿಯವರು (ಎಇಓ) ವ್ಯಾಸೆಕ್ಟಮಿ ಶಸ್ತ್ರಕ್ರಿಯೆಗೆ ಒಳಗಾಗುವ ಬಗ್ಗೆ ೧೩ ಜನ ಶಿಕ್ಷಕರಿಗೆ ರಜೆ ನೀಡಿದ್ದರು; ರಜೆ ಮುಗಿಸಿ ಬರುವಾಗ ಆ ಬಗೆಗಿನ ಸರ್ಟಿಫಿಕೇಟ್ ತರಬೇಕಿತ್ತು.

ಬಿ) ಬೀದರ್ ಜಿಲ್ಲಾಧಿಕಾರಿಯವರು ಅದೇ ಆಗಸ್ಟ್ ಕೊನೆಯಲ್ಲಿ ಸಭೆ ನಡೆಸಿ, ಮುಂದಿನ ತಿಂಗಳಿನ ಹೊತ್ತಿಗೆ (ಸೆಪ್ಟೆಂಬರ್) ಜಿಲ್ಲೆಗೆ ನೀಡಲಾದ ಗುರಿಯಲ್ಲಿ ಶೇ.೬೫ರಷ್ಟನ್ನು ಸಾಧಿಸಬೇಕು ಎಂದು ಸೂಚಿಸಿದರು. ಸರ್ಕಾರೀ ನೌಕರರಿಗಾಗಿ ಅವರು ವಿಶೇಷ ಶಿಬಿರಗಳನ್ನು ಏರ್ಪಡಿಸಿದರು. ಎಲ್ಲ ಅರ್ಹ ಸರ್ಕಾರೀ ನೌಕರರು ನಿಗದಿತ ದಿನ ಬೆಳಗ್ಗೆ ೯ ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿಯ ಬಳಿ ಸೇರಬೇಕು; ಅಲ್ಲಿಂದ ನೇರವಾಗಿ ಸರ್ಕಾರೀ ಆಸ್ಪತ್ರೆಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕೆಂದು ತಿಳಿಸಲಾಗಿತ್ತು. ಅದೇ ರೀತಿ ಬೀದರ್ ಎಇಓ ಅವರು ಸೂಚನೆ ಹೊರಡಿಸಿ, ತನ್ನ ಕೆಳಗಿನ ಎಲ್ಲ ಸಂಸ್ಥೆಗಳ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರು. ಅದರಂತೆ ಎಲ್ಲ ಅರ್ಹ ಸರ್ಕಾರೀ ನೌಕರರು ಸೆಪ್ಟೆಂಬರ್ ೬ರಂದು ಜಿಲ್ಲಾಧಿಕಾರಿಯವರ ಕಚೇರಿಗೆ ಬರಬೇಕಿತ್ತು. ಅಲ್ಲಿಂದ ಬ್ಯಾನರ್ ಹಿಡಿದು ಮೆರವಣಿಗೆಯಲ್ಲಿ ಸಮೀಪದ ಸರ್ಕಾರೀ ಆಸ್ಪತ್ರೆಗೆ ಹೋಗುವುದು. ಇದರಲ್ಲಿ ಆಸಕ್ತಿ ತೋರಿಸದಿದ್ದವರ ಮೇಲೆ ಗಂಭೀರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿತ್ತು. ಅರ್ಹ ಶಿಕ್ಷಕ-ಶಿಕ್ಷಕಿಯರನ್ನು ಸಂತಾನಹರಣ ಶಸ್ತ್ರಕ್ರಿಯೆಗೆ ಕಳುಹಿಸಬೇಕೆಂದು ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕಳುಹಿಸಿದ ಬೀದರ್ ಡಿಡಿಪಿಐಯವರು, ಎನ್‌ಡಿಸಿ (ನೋ ಡಿಮಾಂಡ್ ಸರ್ಟಿಫಿಕೇಟ್) ಇಲ್ಲದೆ ಬಿಲ್‌ಗಳಿಗೆ ಹಣ ಪಾವತಿ ಮಾಡಬೇಡಿ ಎಂದು ಜಿಲ್ಲಾ ಖಜಾನಾಧಿಕಾರಿಯವರಿಗೆ (ಟ್ರೆಜರಿ ಆಫೀಸರ್) ಕೂಡ ಸೂಚನೆಯನ್ನು ಕೊಟ್ಟಿದ್ದರು.

ತುರ್ತುಪರಿಸ್ಥಿತಿಯ ಅನಂತರ ನಡೆದ ಶಾ ಆಯೋಗದ ವಿಚಾರಣೆಯ ವೇಳೆ ಕರ್ನಾಟಕದ ಸರ್ಕಾರವು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಒಂದು ಹಳ್ಳಿಯಿಂದ (ಮುಸ್ಲಿಂ ಸಮುದಾಯದವರಿಂದ) ಬಿಟ್ಟರೆ ರಾಜ್ಯದ ಬೇರೆ ಯಾವುದೇ ಭಾಗದಿಂದ ಕುಟುಂಬಯೋಜನೆ ಶಸ್ತ್ರಕ್ರಿಯೆಗೆ ಸಂಘಟಿತ ವಿರೋಧ ಬಂದುದಿಲ್ಲ ಎಂದು ತಿಳಿಸಿತು. ರಾಜ್ಯದಲ್ಲಿ ಇಬ್ಬರ ಮೇಲೆ ಆ ಸಂಬಂಧವಾಗಿ ಕ್ರಿಮಿನಲ್ ಕೇಸು ದಾಖಲಿಸಿದ್ದು, ಅದರಲ್ಲಿ ಒಬ್ಬಾತ ಸರ್ಕಾರೀ ಶಾಲೆಯ ಶಿಕ್ಷಕರು. ಆತನ ವಿರುದ್ಧ ಕುಟುಂಬಯೋಜನೆ ಶಸ್ತ್ರಕ್ರಿಯೆಯನ್ನು ಟೀಕಿಸಿದ ಹಾಗೂ ಕಾರ್ಯಕ್ರಮಕ್ಕೆ ತಡೆಯೊಡ್ಡಿದ ಆರೋಪವನ್ನು ಹೊರಿಸಲಾಗಿತ್ತು.

ಅವಸರ, ಲೋಪದೋಷ

ಶಸ್ತ್ರಕ್ರಿಯೆಗಳ ಗುರಿಸಾಧನೆಯ ಧಾವಂತದ ಕಾರಣದಿಂದ ಕೆಳಮಟ್ಟದ ಕಾರ್ಯದಲ್ಲಿ ಲೋಪದೋಷಗಳು ತಲೆಹಾಕಿದವು. ಇಲಾಖೆಯ ಸಭೆಯಲ್ಲಿ ಆ ಕುರಿತು ಪ್ರಸ್ತಾವವೂ ಆಯಿತು. ಇಲಾಖೆಯ ಜಂಟಿ ನಿರ್ದೇಶಕ ಡಾ|| ಶ್ರೀಧರ ಉಪಾಧ್ಯಾಯ ಅವರು ಕ್ಷೇತ್ರ (ಫೀಲ್ಡ್) ಮಟ್ಟದಲ್ಲಿ ಸಮಸ್ಯೆಗಳಿದ್ದವು. ಕ್ಷೇತ್ರದ ಗುರಿಗೆ ಸಂಬಂಧಿಸಿ ಅಲ್ಲಿಯ ದಂಪತಿಗಳ ಸಮೀಕ್ಷೆ ನಡೆಸಬೇಕಿತ್ತು. ಅದನ್ನು ಮಾಡಲಿಲ್ಲ. ಟಾರ್ಗೆಟ್ ದಂಪತಿಗಳ ಪಟ್ಟಿಯನ್ನು ಇಡಲಿಲ್ಲ. ಆ ಬಗ್ಗೆ ಎಎನ್‌ಎಂಗಳಿಗೆ ಮಾರ್ಗದರ್ಶಿ ಸೂತ್ರ (ಗೈಡ್‌ಲೈನ್ಸ್) ಇರಲಿಲ್ಲ. ಮೇಲಧಿಕಾರಿಗಳು ತಾವು ಅದರ ಪುಸ್ತಕ (ರೆಜಿಸ್ಟರ್)ಗಳ ತಪಾಸಣೆ ಮಾಡುತ್ತಿರಲಿಲ್ಲ ಎಂದು ಒಪ್ಪಿಕೊಂಡಿದ್ದರು. ಶಾ ಆಯೋಗಕ್ಕೆ ರಾಜ್ಯಸರ್ಕಾರವು ತಿಳಿಸಿದ ಪ್ರಕಾರ ರಾಜ್ಯದಲ್ಲಿ ಶಸ್ತ್ರಕ್ರಿಯೆಯ ಅನಂತರ ೧೨೩ ಮಂದಿ ಮೃತಪಟ್ಟರು; ಮತ್ತು ತುರ್ತುಪರಿಸ್ಥಿತಿಯ ವೇಳೆ ರಾಜ್ಯದಲ್ಲಿ ಎರಡು ಮಕ್ಕಳಿಗಿಂತ ಕಡಮೆ ಇದ್ದ ೧೦,೨೪೪ ಜನ ಕುಟುಂಬಯೋಜನೆ ಶಸ್ತ್ರಕ್ರಿಯೆಗೆ ಒಳಗಾಗಿದ್ದರು. ಮೊದಲೇ ಹೇಳಿದಂತೆ ಲೋಕಸಭಾ ಚುನಾವಣೆ (೧೯೭೭ರ ಆರಂಭ) ಬಂದು ಜನರನ್ನು ಪಾರು ಮಾಡಿತೇನೋ! ಬಲಾತ್ಕಾರದ ಕುಟುಂಬಯೋಜನೆಯಿಂದ ಉಂಟಾದ ಆಕ್ರೋಶವನ್ನು ಹೊರಹಾಕುವುದಕ್ಕೆ ಅದು ಒಂದು ಅವಕಾಶವನ್ನು ಕೂಡ ನೀಡಿತು.

* * *

ಕಟ್ಟಡಗಳ ಧ್ವಂಸ

ತುರ್ತುಪರಿಸ್ಥಿತಿಯ ಅತಿರೇಕಗಳಲ್ಲಿ ಬಹಳಷ್ಟು ಜನರನ್ನು ಅವರ ವಸತಿಪ್ರದೇಶಗಳಿಂದ ಕಿತ್ತೊಗೆದು ಸ್ಥಳಾಂತರಗೊಳಿಸಿದ ನಿರ್ದಯ ಕಾರ್ಯಾಚರಣೆ ಕೂಡ ಮಹತ್ತ್ವವನ್ನು ಪಡೆದುಕೊಂಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಅದು ನಡೆಯಿತಾದರೂ ರಾಜಧಾನಿ ದೆಹಲಿಯಲ್ಲಿ ಅದು ಭೀಕರ ಸ್ವರೂಪವನ್ನೇ ಪಡೆದುಕೊಂಡಿತು.

ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮತ್ತು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ)ಗಳು ಬಹಳಷ್ಟು ಕಟ್ಟಡ ಮತ್ತಿತರ ನಿರ್ಮಾಣಗಳನ್ನು ನಾಶಮಾಡಿದವು. ತುರ್ತುಪರಿಸ್ಥಿತಿಯ ವೇಳೆ ಪ್ರತಿಭಟನೆಯು ಕಷ್ಟವಾಗಿದ್ದ ಕಾರಣ ಧ್ವಂಸಕಾರ್ಯವು ತುಂಬ ವೇಗವನ್ನು ಪಡೆದುಕೊಂಡಿತು. ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಅವರ ಮನೆಗಳನ್ನು ಒಡೆದುಹಾಕಿದರು. ಬದಲಿ ವ್ಯವಸ್ಥೆ ಅಥವಾ ಪುನರ್ವಸತಿಗಳು ಇರಲಿಲ್ಲ; ಇದ್ದರೂ ಆ ಪ್ರಕ್ರಿಯೆ ತುಂಬ ಅಸಮರ್ಪಕವಾಗಿತ್ತು.

ತುರ್ತುಪರಿಸ್ಥಿತಿಗೆ ಮುನ್ನ ಇದ್ದ ನೀತಿಯೆಂದರೆ, ದೆಹಲಿಯಲ್ಲಿ ಯಾವುದೇ ಸ್ವಚ್ಛತಾಕಾರ್ಯವನ್ನು (ಕಟ್ಟಡ ನಾಶ) ಮಾಡಬೇಕಿದ್ದರೆ ಪ್ರಧಾನಿ ಸ್ವತಃ ಪರಿಶೀಲಿಸಿ ಒಪ್ಪಿಗೆ ನೀಡಬೇಕಿತ್ತು. ಅದಲ್ಲದೆ ಸೂಕ್ತ ಪುನರ್ವಸತಿ ವ್ಯವಸ್ಥೆ ಇಲ್ಲದೆ ಜನರನ್ನು ಅವರ ಮನೆಗಳಿಂದ ಕಿತ್ತುಹಾಕಲು ಸಾಧ್ಯವಿರಲಿಲ್ಲ. ನಿಜಸಂಗತಿಯೆಂದರೆ, ಆಗ ದೆಹಲಿಯ ಜುಗ್ಗಿ ಜೋಪಡಿಗಳನ್ನು ತೆಗೆಯುವುದಷ್ಟೇ ಅಲ್ಲ; ಪ್ರಧಾನಿಪುತ್ರ ಸಂಜಯಗಾಂಧಿಯವರು ದೊಡ್ಡ ಶಕ್ತಿಯಾಗಿ (Big Power) ಉದಯಿಸುವ ಮಹದಾಸೆ ಕೂಡ ಅದರ ಹಿಂದಿತ್ತು. ಅದಕ್ಕಿದ್ದ ಒಂದು ಉತ್ತಮ ಅವಕಾಶವೆಂದರೆ, ಸಾರ್ವಜನಿಕ ಅತಿಕ್ರಮಣಗಳನ್ನು ತೆರವುಗೊಳಿಸುವುದು. ಹೀಗೆ ಹೇಳಿದವರು ದೆಹಲಿಯ ಇನ್ನೊಂದು ಸಂಸ್ಥೆ ಎನ್‌ಡಿಎಂಸಿಯ ಮಾಜಿ ಅಧ್ಯಕ್ಷ ಎಸ್.ಸಿ. ಛಾಬ್ರಾ ಅವರು.

ಆತ ಅದಕ್ಕೊಂದು ಉದಾಹರಣೆಯನ್ನು ಕೂಡ ನೀಡಿದರು. ತಾಲ್ಕತೋರಾ ಅಭಿವೃದ್ಧಿ ಯೋಜನೆಯನ್ನು ಎನ್‌ಡಿಎಂಸಿ ಎತ್ತಿಕೊಂಡಾಗ ಉದ್ಯಾನಕ್ಕೆ ಬೀಗಮುದ್ರೆಯನ್ನು ಹಾಕಿ, ಪಾರ್ಕ್‌ನಿಂದ ಆಚೆ ಹೋಗಲು ಜನರ ಸಂಚಾರಕ್ಕಾಗಿ ಒಂದು ಪ್ಯಾಸೇಜ್ ಬಿಟ್ಟಿದ್ದರು. ಆಗ ಸ್ಥಳಕ್ಕೆ ಭೇಟಿ ನೀಡಿದ ಸಂಜಯಗಾಂಧಿ ಬೀಗಮುದ್ರೆ (Seal)ಯನ್ನು ಒಡೆಯಿರಿ ಎಂದು ಆದೇಶವಿತ್ತರು. ಛಾಬ್ರಾ ಮೊದಲಿಗೆ ವಿರೋಧಿಸಿದರಾದರೂ ಮತ್ತೆ ಅದರಲ್ಲಿ ಅರ್ಥವಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಪ್ರಧಾನಿಯ ಪುತ್ರನೇ ಉದ್ಯಾನದ ನಾಶಕ್ಕೆ ಬಾಗಿಲು ತೆರೆದಿರುವಾಗ ತನ್ನ ಪ್ರತಿರೋಧ ನಿರರ್ಥಕ ಎಂದು ಸುಮ್ಮನಾದರು. ಅದೇ ರಾತ್ರಿ ಪ್ರಧಾನಿ ಇಂದಿರಾಗಾಂಧಿಯವರು ಛಾಬ್ರಾ ಅವರನ್ನು ಕರೆಯಿಸಿ ವಾಚಾಮಗೋಚರ ಬೈದದ್ದೂ ಆಯಿತು.

ಎಸ್.ಸಿ. ಛಾಬ್ರಾ ಶಾ ಆಯೋಗಕ್ಕೆ ಹಿಂದಿನ ಒಂದು ಘಟನೆಯ ಬಗ್ಗೆ ತಿಳಿಸಿದರು. ಚಾಣಕ್ಯಪುರಿ (ದೆಹಲಿ) ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿದ ಜುಗ್ಗಿಗಳ ಅತಿಕ್ರಮಣವನ್ನು ತೆಗೆಯಬೇಕೆಂದು ೧೯೭೧ರ ಏಪ್ರಿಲ್‌ನಲ್ಲಿ ತೀರ್ಮಾನಿಸಲಾಗಿತ್ತು. ತೆರವಿಗೆ ಮುನ್ನ ಅಂದಿನ ದೆಹಲಿ ಉಪರಾಜ್ಯಪಾಲ (ಲೆಫ್ಟಿನೆಂಟ್ ಗವರ್ನರ್) ಎ.ಎನ್. ಝಾ ಮತ್ತು ಕೇಂದ್ರ ಕಾಮಗಾರಿ ಮತ್ತು ವಸತಿ ಸಚಿವ ಐ.ಕೆ. ಗುಜ್ರಾಲ್ ಅವರಲ್ಲಿ ವಿಚಾರವಿನಿಮಯ ನಡೆಸಿದ್ದರು. ಆಗ ಪ್ರಧಾನಿಯ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಆರ್.ಕೆ. ಧವನ್ ಮತ್ತು ಸಂಜಯಗಾಂಧಿ ಗುಡಿಸಲುಗಳನ್ನು ತೆರವುಗೊಳಿಸದಂತೆ ಉಪರಾಜ್ಯಪಾಲರ ಮೇಲೆ ಒತ್ತಡ ತಂದರು. ಉಪರಾಜ್ಯಪಾಲ ಒಪ್ಪದಿದ್ದಾಗ ಆ ಹೊತ್ತಿಗೆ ಸಿಮ್ಲಾದಲ್ಲಿದ್ದ ಪ್ರಧಾನಿ ಇಂದಿರಾ ಅವರು ಫೋನ್ ಮಾಡಿ ತೆರವುಗೊಳಿಸುವುದು ಬೇಡ ಎಂದರು. ಬೇಸರಗೊಂಡ ಛಾಬ್ರಾ ದೀರ್ಘ ರಜೆಯ ಮೇಲೆ ತೆರಳಿದರು. ಸಿಬಿಐ ಅವರ ವಿರುದ್ಧ ಸುಳ್ಳು ಕೇಸನ್ನು ಕೂಡ ಹಾಕಿತು; ಆದರೆ ಅದು ನಿಲ್ಲಲಿಲ್ಲ; ಛಾಬ್ರಾ ಸಾಚಾತನ ಸಾಬೀತಾಯಿತು.

ಪತ್ರಿಕೆಗಳ ಕಟುಟೀಕೆ

ಆಗ ಈ ವಿಷಯ ಜನರ ಗಮನವನ್ನು ಸೆಳೆಯಿತು. ಅದೇ ಮೇ ತಿಂಗಳಲ್ಲಿ ಪತ್ರಕರ್ತ ರಮೇಶ್ ಥಾಪರ್ ಹೀಗೆ ಬರೆದರು: ನಾಶಮಾಡಲು ಮುಂದಾದ ಜುಗ್ಗಿಗಳು ಹೊಸತಾದರೂ ರಾಜಕಾರಣಿಗಳು ತೆರವಿನ ವಿರುದ್ಧ ಧರಣಿ ನಡೆಸಿದರು. ಸ್ಥಳೀಯ ಚುನಾವಣೆ ಅವರ ಗಮನದಲ್ಲಿತ್ತು. ಸಂಜಯಗಾಂಧಿಯ ಮೂಲಕ ಪ್ರಧಾನಿ ತಮಗೆ ಇಷ್ಟವಾದ್ದನ್ನು ಮಾಡಿಸುತ್ತಿದ್ದಾರೆ. ಪುತ್ರನನ್ನು ದೆಹಲಿ ರಾಜಕೀಯ ಪರಿಸರದಲ್ಲಿ ತೊಡಗಿಸಿದ ಬಳಿಕ ಅವರನ್ನು ತನ್ನ ವಕ್ತಾರನಂತೆ ಬಳಸಿಕೊಳ್ಳಲು ಉದ್ದೇಶಿಸಿದಂತಿದೆ.

ಅದೇ ತಿಂಗಳಿನ ಪಾಯಿಂಟ್ ಆಫ್ ವ್ಯೂ ಪತ್ರಿಕೆ ಸ್ವಲ್ಪ ಕಟುವಾಗಿಯೇ ಬರೆಯಿತು: ಅದೊಂದು (ಜುಗ್ಗಿಗಳ ತೆರವು) ದೊಡ್ಡ ಪ್ರಶ್ನೆಯೆ? ಇದೆಲ್ಲ ಹೇಗಾಯಿತು? ಸಂಜಯಗಾಂಧಿ ಏನು? ಅವರ ಸಾರ್ವಜನಿಕ ಬದ್ಧತೆ ಏನು? ಅವರು ಯಾರನ್ನು (ಯಾವುದನ್ನು) ಪ್ರತಿನಿಧಿಸುತ್ತಾರೆ? ಅವರ ಅರ್ಹತೆ ಏನು? ತನ್ನ ಕರ್ತವ್ಯ ನಿರ್ವಹಿಸಿದ ಹಿರಿಯ ಅಧಿಕಾರಿಯನ್ನೇ ವರ್ಗಾಯಿಸುವಷ್ಟು ಪ್ರಭಾವ ಅವರಿಗೆ ಹೇಗೆ ಬಂತು? ಸರ್ಕಾರೀ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡದಂತೆ ತಡೆಯುವುದು ಕಾನೂನಿನ ಪ್ರಕಾರ ಅಪರಾಧ ಎನಿಸುತ್ತದೆ. ಎನ್‌ಡಿಎಂಸಿ ತನ್ನ ಅಧಿಕೃತ ನಿರ್ಧಾರವನ್ನು ಜಾರಿ ಮಾಡದಂತೆ ತಡೆಯುವ ಅಧಿಕಾರ ಸಂಜಯಗಾಂಧಿ ಅವರಿಗೆ ಎಲ್ಲಿಂದ ಬಂತು? ಕಾನೂನು ಮುರಿದಿದ್ದಕ್ಕೆ ಅವರ ಮೇಲೆ ಕ್ರಮ ಏಕಿಲ್ಲ? ಪ್ರಧಾನಿಪುತ್ರನಾದ ಕಾರಣ ಕಾನೂನು ಅವರಿಗೆ ಅನ್ವಯಿಸುವುದಿಲ್ಲವೆ? ಹಿಂದೆ ಮಧ್ಯಯುಗದಲ್ಲಿ ಇದೆಲ್ಲ ನಡೆಯುತ್ತಿತ್ತು. ರಾಜನ ಮಕ್ಕಳು, ಬಂಧುಗಳು ಕಾನೂನನ್ನು ಮುರಿಯುತ್ತಿದ್ದರು. ಮಧ್ಯಾವಧಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಜಯ ಲಭಿಸಿದ ಬಳಿಕ ಭಾರತ ಹಿಂದೆ ಹೋಯಿತು ಎನಿಸುತ್ತದೆ ಎಂದೆಲ್ಲ ಆ ಪತ್ರಿಕೆ ಬರೆಯಿತು. ಇದು ಆಗ್ಗೆ ನಾಲ್ಕು ವರ್ಷಗಳ ಹಿಂದಿನ ಮಾತು. ತುರ್ತುಪರಿಸ್ಥಿತಿಯ ವೇಳೆ ಇದೆಲ್ಲ ಸಾಧ್ಯವೇ ಇರಲಿಲ್ಲ. ನಿಜವೆಂದರೆ, ಇಂಥದು ಪ್ರಕಟವಾಗುತ್ತಲೇ ಇರಲಿಲ್ಲ.

. ಲಕ್ಷ ಕಟ್ಟಡ ನಾಶ

ತುರ್ತುಪರಿಸ್ಥಿತಿಯ ಅನಂತರ ಧ್ವಂಸಕಾರ್ಯಗಳಿಗೆ ಒಮ್ಮೆಗೇ ವೇಗ ಬಂತು. ೧೯೭೪ರಲ್ಲಿ ಡಿಡಿಎ ಮತ್ತು ಎಂಸಿಡಿಗಳು ಒಟ್ಟು ಸುಮಾರು ೧,೦೦೦ ನಿರ್ಮಾಣ (Struture)ಗಳನ್ನು ಕೆಡವಿದ್ದರೆ ೧೯೭೫ರಲ್ಲಿ ಅದು ೪೧,೨೫೨ಕ್ಕೇರಿತು; ೧೯೭೬ರಲ್ಲಿ ಸುಮಾರು ೧ ಲಕ್ಷ ಧ್ವಂಸಕಾರ್ಯಗಳು ನಡೆದಿದ್ದು ಅದರಲ್ಲಿ ಡಿಡಿಎ ಪಾಲು ಸುಮಾರು ೯೫ ಸಾವಿರ. ದೆಹಲಿಯಲ್ಲಿ ಧ್ವಂಸಕಾರ್ಯದ ವೇಗ ಹೆಚ್ಚುವುದಕ್ಕೆ ಆದೇಶ ಯಾರದ್ದೆನ್ನುವುದು ಸ್ಪಷ್ಟವಿಲ್ಲ. ಕಾಮಗಾರಿ ಮತ್ತು ವಸತಿ ಸಚಿವ ಕೆ. ರಘುರಾಮಯ್ಯ ಅವರು ತಮ್ಮ ಸಚಿವಾಲಯವು ಅಂಥ ನಿರ್ಧಾರ ಕೈಗೊಂಡದ್ದು ತಮಗೆ ಗೊತ್ತಿಲ್ಲ ಎಂದು ಹೇಳಿದರು. ದೆಹಲಿಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಕಟ್ಟಡ (ನಿರ್ಮಾಣ)ಗಳನ್ನು ನಾಶಮಾಡಿದ್ದು ಆ ಬಗ್ಗೆ ನನಗೆ ಯಾರೂ ಹೇಳಿಲ್ಲ; ಆ ಗಾತ್ರದಲ್ಲಿ ಮತ್ತು ಆ ರೀತಿಯಲ್ಲಿ ಧ್ವಂಸ ಮಾಡಿದ್ದು ನನಗೆ ಗೊತ್ತಾದದ್ದು ಶಾ ಆಯೋಗದಲ್ಲಿ ಓದಿ ಹೇಳಿದಾಗ ಎಂದು ರಘುರಾಮಯ್ಯ ತಿಳಿಸಿದರು; ಡಿಡಿಎ ಉಪಾಧ್ಯಕ್ಷ ಜಗಮೋಹನ್ ಪ್ರಧಾನಿ ನಿವಾಸಕ್ಕೆ ಹೋಗಿ ಬರುತ್ತಿದ್ದರು; ಅಲ್ಲೇ ಅವರಿಗೆ ನಿರ್ದೇಶನ ಸಿಕ್ಕಿರಬಹುದು ಎಂದು ಕೂಡ ಸಚಿವರು ಶಾ ಆಯೋಗಕ್ಕೆ ತಿಳಿಸಿದರು.

ತುರ್ತುಪರಿಸ್ಥಿತಿಯ ವೇಳೆ ಉಪರಾಜ್ಯಪಾಲರಾಗಿದ್ದ ಕೃಷನ್‌ಚಂದ್ ಅವರು ಆಯೋಗಕ್ಕೆ ನೀಡಿದ ಹೇಳಿಕೆಯಲ್ಲಿ, ತುರ್ತುಪರಿಸ್ಥಿತಿ ಘೋಷಣೆಯ ಅನಂತರ ಕಟ್ಟಡಗಳ ಧ್ವಂಸಕಾರ್ಯಕ್ಕೆ ಭಾರೀ ವೇಗ ಸಿಕ್ಕಿತು. ಎಷ್ಟೆಂದರೆ ಸಂತ್ರಸ್ತರಿಗೆ ತಮ್ಮ ನಾಯಕನನ್ನು ರೂಪಿಸಿಕೊಳ್ಳುವುದಕ್ಕೂ ಸಾಧ್ಯವಾಗಲಿಲ್ಲ. ಜನರಿಗೆ ಭಯವಿತ್ತು. ಏಕೆಂದರೆ ಕಾರ್ಯಕ್ರಮ ಜಾರಿಯಲ್ಲಿ ಆಡಳಿತವು ಬಲಪ್ರಯೋಗಕ್ಕೆ ಹಿಂಜರಿಯುವುದಿಲ್ಲ ಎಂಬುದು ಜನರಿಗೆ ತಿಳಿದಿತ್ತು ಎಂದರು. ಮುಂದುವರಿದು, ಕೊಳೆಗೇರಿ ಮತ್ತು ಅನಧಿಕೃತ ನಿರ್ಮಾಣಗಳ ನಾಶದ ವಿಷಯದಲ್ಲಿ ಡಿಡಿಎ, ಎಂಸಿಡಿ ಮತ್ತು ಎನ್‌ಡಿಎಂಸಿಗಳ ನಡುವೆ ಸ್ಪರ್ಧೆ ಉಂಟಾಗಿತ್ತು. ಕಾರ್ಯಾಚರಣೆಯಲ್ಲಿ ಕ್ರಮಬದ್ಧತೆ ಮತ್ತು ಮಾನವೀಯತೆಗಳನ್ನು ಹಿಂದಕ್ಕೆ ಸರಿಸಿದ್ದರು. ಈ ಅಧಿಕಾರಿಗಳಿಗೆ ಪ್ರಧಾನಿಯವರ ನಿವಾಸದಿಂದ ಸೂಚನೆ ಸಿಗುತ್ತಿತ್ತು. ಪ್ರಧಾನಿ ನಿವಾಸದಿಂದ ಅಥವಾ ಮೇಲಿನಿಂದ ಸೂಚನೆ ಇದೆ ಎಂದು ಅವರು ಹೇಳುತ್ತಿದ್ದರು ಎಂದು ಕೂಡ ಉಪರಾಜ್ಯಪಾಲ ಹೇಳಿದರು.

ಉಪರಾಜ್ಯಪಾಲ ಹಾಗೂ ಸಂಬಂಧಪಟ್ಟ ಸಚಿವರಿಗೆ ತಾನು ಕಟ್ಟಡಗಳ ಸ್ವಚ್ಛತಾ ಕಾರ್ಯದ ಬಗ್ಗೆ ತಿಳಿಸುತ್ತಿರಲಿಲ್ಲ ಎಂಬುದನ್ನು ಜಗಮೋಹನ್ ಶಾ ಆಯೋಗದ ಮುಂದೆ ನಿರಾಕರಿಸಿದರು. ಡಿಡಿಎ ದೆಹಲಿಯಲ್ಲಿ ಮಾಡುತ್ತಿದ್ದುದನ್ನು ಅವರಿಗೆ ಕ್ರಮಪ್ರಕಾರ ಹೇಳುತ್ತಿದ್ದೆ. ಸಂಸತ್ತಿನಲ್ಲಿ ಈ ಬಗ್ಗೆ ಬಂದ ಪ್ರಶ್ನೆಗೆ ಮಂತ್ರಿ ರಘುರಾಮಯ್ಯನವರೇ ಉತ್ತರಿಸುತ್ತಿದ್ದರು. ದೇಶೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕೂಡ ಅವರು ನನ್ನನ್ನು ಹೊಗಳಿದ್ದಾರೆ. ಆದ್ದರಿಂದ ಡಿಡಿಎ ಮಾಡಿದ ಕೆಲಸ ತನಗೆ ತಿಳಿದಿರಲಿಲ್ಲ ಎಂಬ ಅವರ ಮಾತು ತಪ್ಪು ಎಂದವರು ಹೇಳಿದರು.

ಸುಭದ್ರಾ ಜೋಶಿ ಹೋರಾಟ

ಕಟ್ಟಡಗಳ ಧ್ವಂಸಕಾರ್ಯ ನಡೆಯುತ್ತಹೋದಂತೆ ಹಲವು ದೂರುಗಳು ಬಂದವು. ಪ್ರಧಾನಿ ಇಂದಿರಾಗಾಂಧಿ ಅವರು ಮೊದಲು ಸಂಸತ್ಸದಸ್ಯರ ಜೊತೆ, ಅನಂತರ ದೆಹಲಿ ಆಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ೧೯೭೫ರ ಜುಲೈ-ಆಗಸ್ಟ್‌ಗಳಲ್ಲಿ ನಡೆದ ಆ  ಸಭೆಗಳಿಗೆ ಸಚಿವ ರಘುರಾಮಯ್ಯನವರಿಗೆ ಆಮಂತ್ರಣ ಇರಲಿಲ್ಲ. ಪ್ರಧಾನಿ ನಿವಾಸದಲ್ಲಿ ಸಂಸದರ ಸಭೆ ನಡೆದಿದ್ದು, ಕಾಂಗ್ರೆಸ್ ನಾಯಕಿ ಶ್ರೀಮತಿ ಸುಭದ್ರಾ ಜೋಶಿ ಅವರು ಅಲ್ಲಿ ಹಠಾತ್ತಾಗಿ ಕಟ್ಟಡಗಳ ಧ್ವಂಸ ನಡೆಸಿದ ರೀತಿ ಮತ್ತು ಪುನರ್ವಸತಿ ವ್ಯವಸ್ಥೆ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು; ಉಳಿದಂತೆ ಹೆಚ್ಚಿನವರು ಸಂತೃಪ್ತಿ ಸೂಚಿಸಿದರು.

ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಇಂದಿರಾಗಾಂಧಿ ಧ್ವಂಸಕಾರ್ಯದ ಬಗ್ಗೆ ಕೆಲವು ಸಂಸತ್ಸದಸ್ಯರು ಟೀಕಿಸಿದರಾದರೂ ಇದು ಒಳ್ಳೆಯದು; ಜೋರಾಗಿ ಮುಂದುವರಿಯಬೇಕು ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಸಭೆಯಲ್ಲಿ ಸಂಜಯಗಾಂಧಿ ಹಾಜರಿದ್ದರು. ಮನೆ ಉರುಳಿಸಿ ಹೊರಗೆ ಹಾಕಿದವರಿಗೆ ಮೂಲ ಆವಶ್ಯಕತೆಗಳನ್ನು ಒದಗಿಸಿ ಎಂದು ಪ್ರಧಾನಿ ಸಲಹೆ ಮಾಡಿದರು. ಅಷ್ಟೇ ಸಾಕೇ ಎಂಬ ಪ್ರಶ್ನೆ ಒಂದಾದರೆ, ಮುಂದೆ ಅದನ್ನಾದರೂ ಪಾಲಿಸಿದರೇ ಎಂಬುದು ಪ್ರಶ್ನೆಯಾಗಿಯೇ ಉಳಿಯಿತು.

ಡೀಫ್ಯಾಕ್ಟೋ ರೂಲರ್

ತುರ್ತುಪರಿಸ್ಥಿತಿ ಘೋಷಣೆಯಾಗುತ್ತಲೇ (ದಿ.೨೫-೬-೧೯೭೫) ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಕೆಲಸದ ವಿಧಾನ ಪೂರ್ತಿ ಬದಲಾಯಿತು. ಉಪರಾಜ್ಯಪಾಲರ ಕಾರ್ಯದರ್ಶಿ ನವೀನ್ ಚಾವ್ಲಾ ಎಂಸಿಡಿ ಕಮಿಷನರ್ ಬಿ.ಆರ್. ತಮ್ಟಾ ಅವರನ್ನು ಕರೆದು ಸಂಜಯಗಾಂಧಿಯವರ ಒಟ್ಟಾರೆ ನಿಗಾ ಮತ್ತು ನಿಯಂತ್ರಣದ ಕೆಳಗೆ ನಾವಿನ್ನು ಕೆಲಸ ಮಾಡಬೇಕು. ಆದೇಶಗಳನ್ನು ಅವರಿಂದ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಪ್ರಧಾನಿಯವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಆರ್.ಕೆ. ಧವನ್ ಕೂಡ ತಮ್ಟಾ ಅವರನ್ನು ಪ್ರಧಾನಿ ನಿವಾಸಕ್ಕೆ ಕರೆಯುತ್ತಿದ್ದರು; ಅಲ್ಲಿಗೆ ಹೋದಾಗ ಸಂಜಯಗಾಂಧಿ ಅವರ ಬಳಿಗೆ ಕರೆದೊಯ್ಯುತ್ತಿದ್ದರು.

ಅಲ್ಲಿ ಸಂಜಯ್ ತನಗೆ ಬಂದ ದೂರುಗಳ ಬಗ್ಗೆ ತಿಳಿಸಿ ಅದಕ್ಕಾಗಿ ಏನು ಮಾಡಬೇಕೆಂದು ಆದೇಶ ನೀಡುತ್ತಿದ್ದರು; ಆದೇಶದ ಜಾರಿಗೆ ದಿನವನ್ನು ಕೂಡ ನಿಗದಿಪಡಿಸಿ ಹೇಳುತ್ತಿದ್ದರು. ಜಗಮೋಹನ್ ಡಿಡಿಎ ಕಡತಗಳನ್ನು ತರುವ ರೀತಿಯಲ್ಲೇ ಎಂಸಿಡಿ ಕಡತಗಳನ್ನು ತರುವಂತೆ ಕಮಿಷನರ್ ತಮ್ಟಾಗೆ ಹೇಳುತ್ತಿದ್ದರು. ಸಂಜಯಗಾಂಧಿಯವರ ಆದೇಶವನ್ನು ಪಾಲಿಸದಿದ್ದರೆ ಅಮಾನತು ಅಥವಾ ಕೆಲಸದಿಂದ ವಜಾದಂತಹ ತೀವ್ರ ಶಿಕ್ಷೆ ಇತ್ತೆನ್ನುವ ಎಚ್ಚರಿಕೆ ಇದ್ದೇ ಇತ್ತು. ಹೀಗೆ ದೆಹಲಿ ಮಹಾನಗರ ಪಾಲಿಕೆಯ ನಿಜವಾದ ಆಳಿಕೆದಾರ (ಡೀ-ಫ್ಯಾಕ್ಟೋ ರೂಲರ್) ಸಂಜಯಗಾಂಧಿಯೇ ಆಗಿದ್ದರು. ದೈನಂದಿನ ಆಡಳಿತದ ಆದೇಶ ಹೊರಡಿಸುವಾಗಲೂ ಅವರನ್ನು ಕೇಳಬೇಕಿತ್ತು. ಎಂಸಿಡಿ ಅಧಿಕಾರಿಗಳ ನೇಮಕ, ವರ್ಗಾವಣೆಗಳನ್ನು ಅವರೇ ಮಾಡುತ್ತಿದ್ದರು.

ನವೀನ್ ಚಾವ್ಲಾ ಕೂಡ ಅದನ್ನೇ ಹೇಳಿದರು; ದೆಹಲಿ ಆಡಳಿತದ ಹಿರಿಯ ಅಧಿಕಾರಿಗಳು ಆಗಾಗ ಪ್ರಧಾನಿ ನಿವಾಸಕ್ಕೆ ಹೋಗುತ್ತಾರೆ. ತುರ್ತುಪರಿಸ್ಥಿತಿ ಹೇರುತ್ತಲೇ ಸಂಜಯ್ ದೆಹಲಿ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಲು ಆರಂಭಿಸಿದರು – ಎಂದರು. ಕೃಷನ್‌ಚಂದ್ ಅವರು ನವೀನ್ ಚಾವ್ಲಾ ಅವರನ್ನು ಪ್ರಧಾನಿ ನಿವಾಸಕ್ಕೆ ಕಳುಹಿಸುತ್ತಿದ್ದು, ಅಲ್ಲಿ ಆತ ಸಂಜಯಗಾಂಧಿ ಮತ್ತು ಧವನ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸುತ್ತಿದ್ದರು. ತೆರವಿನ ಕಾರ್ಯಾಚರಣೆಗಳ ಬಗೆಗಿನ ನಿರ್ಧಾರವನ್ನು ಪ್ರಧಾನಿ ನಿವಾಸದಲ್ಲಿ ಕೈಗೊಂಡು, ಜಾರಿಯ ಬಗ್ಗೆ ಅದನ್ನು ದೆಹಲಿ ಆಡಳಿತಕ್ಕೆ ನೀಡುತ್ತಿದ್ದರು. ಅಲ್ಲಿ ನಿರ್ಧಾರ ಕೈಗೊಳ್ಳುವವರು ಪ್ರಧಾನಿ ಇಂದಿರಾ ಅಥವಾ ಪುತ್ರ ಸಂಜಯಗಾಂಧಿ ಆಗಿರುತ್ತಿದ್ದರು. ಶಾ ಆಯೋಗಕ್ಕೆ ಬಂದು ಹೇಳಿಕೆ ನೀಡುವಂತೆ ಕರೆದಾಗ ಸಂಜಯ್ ಇಂದಿರಾಗಾಂಧಿ ಅವರಂತೆಯೇ ಬರಲಿಲ್ಲ.

ಕಟ್ಟಡಗಳ ಹಠಾತ್ ಧ್ವಂಸದಿಂದ ಬಹಳಷ್ಟು ಮಾನವೀಯ ಸಂಕಷ್ಟಗಳು ಉಂಟಾಗುತ್ತಿವೆ ಎಂದು ಸುಭದ್ರಾ ಜೋಶಿ ಟೀಕಿಸುವ ಧೈರ್ಯ ಮಾಡಿದರು. ಚಾಂದನೀಚೌಕ ಪ್ರದೇಶದ ವ್ಯಾಪಾರಿಗಳನ್ನು ಗಾಂಧಿಗ್ರೌಂಡ್‌ಗೆ ಸ್ಥಳಾಂತರಿಸಿದಾಗ ಅವರು ಕಮಿಷನರ್ ತಮ್ಟಾ ಅವರನ್ನು ಭೇಟಿ ಮಾಡಿ, ಪುನರ್ವಸತಿ ಬಗ್ಗೆ ವ್ಯಾಪಾರಿಗಳಿಗೆ ಮುಂಚಿತವಾಗಿ ತಿಳಿಸಬೇಕೆಂದು ಆಗ್ರಹಿಸಿದರು. ಅದಕ್ಕೆ ಎಂಸಿಡಿ ಕಮಿಷನರ್ ನಗರವನ್ನು ಶೀಘ್ರವಾಗಿ ಕ್ಲೀನ್ ಮಾಡಬೇಕೆಂದು ನನಗೆ ಆದೇಶವಿದೆ. ವ್ಯಾಪಾರಿಗಳನ್ನು ಸ್ಥಳಾಂತರ ಮಾಡುವ ಮುನ್ನ ಅವರಿಗೆ ಬದಲಿ ನಿವೇಶನ ನೀಡಲು ಸಾಧ್ಯವಿಲ್ಲ ಎಂದರು. ಗಾಂಧಿಗ್ರೌಂಡ್‌ನ ಜಾಗವನ್ನು ಸರಿಪಡಿಸುವ ಮೊದಲೇ ಅಲ್ಲಿಗೆ ಸ್ಥಳಾಂತರ ಮಾಡಿದ್ದು ಅಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ; ಬಿಸಿಲು, ಮಳೆಗಳಿಂದ ರಕ್ಷಣೆ ಇರಲಿಲ್ಲ.

ತಮ್ಟಾ ಅವರು ತನ್ನ ಸಲಹೆಗೆ ಅಸಹಕಾರ ತೋರಿದ ಕಾರಣ ಸುಭದ್ರಾ ಜೋಶಿ ಉಪರಾಜ್ಯಪಾಲರನ್ನು ಭೇಟಿ ಮಾಡಿದರು. ಆತ ತನ್ನ ಅಸಹಾಯಕತೆಯನ್ನು ಹೇಳಿಕೊಂಡಾಗ ಆಕೆ ಗೃಹಖಾತೆ ರಾಜ್ಯ ಸಚಿವ ಓಂ ಮೆಹ್ತಾ ಅವರ ಬಳಿಗೆ ಹೋದರು. ಅವರು ಇದನ್ನು ಉಪರಾಜ್ಯಪಾಲರೇ ಸರಿಪಡಿಸಬೇಕೆಂದು ವಾಪಸು ಕಳುಹಿಸಿದರು. ಸುಭದ್ರಾ ಜೋಶಿ ಪ್ರಧಾನಿ ಇಂದಿರಾ ಅವರನ್ನು ಕೂಡ ಭೇಟಿ ಮಾಡಿ ಜನರ ಸಂಕಷ್ಟ ಮತ್ತು ಕಮಿಷನರ್ ತಮ್ಟಾ ಅವರ ವರ್ತನೆಯ ಬಗ್ಗೆ ದೂರಿಕೊಂಡರು. ಆಗ ಇಂದಿರಾ ಆ ದೂರುಗಳ ಬಗ್ಗೆ ಏನೋ ಟಿಪ್ಪಣಿಯನ್ನು ಮಾಡಿಕೊಂಡರಂತೆ. ಆದರೆ ಪರಿಹಾರ ಏನೂ ಮಾಡಲಿಲ್ಲ; ಧ್ವಂಸಕಾರ್ಯ ಯಥಾಪ್ರಕಾರ ಮುಂದುವರಿಯಿತು.

ಪ್ರಧಾನಿಗೆ ಪತ್ರ

ಶ್ರೀಮತಿ ಜೋಶಿ ಅವರು ಪ್ರಧಾನಿ ಇಂದಿರಾ ಅವರಿಗೆ ಪತ್ರ ಬರೆದು ಇದೆಲ್ಲ ನಿಮಗೆ ತಿಳಿದೂ ಕೂಡ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದನ್ನು ನಂಬಲಾಗದು ಎಂದರು, ಮತ್ತು 

೧) ಸ್ಥಳಾಂತರಗೊಂಡ ಸ್ಥಳದಲ್ಲಿ ಸಾರ್ವಜನಿಕ ಸಂಪರ್ಕದ ನೀರಿನ ಸಂಪರ್ಕವನ್ನು ಕಡಿದುಹಾಕಲಾಗಿದೆ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಇವರು ನೀರಿಗಾಗಿ ಯಾರದೋ ಮನೆ ಬಾಗಿಲು ಬಡಿಯಬೇಕೆ? ದನ, ಕುದುರೆಗಳಿಗೂ ನೀರು ಸಿಗುತ್ತಿಲ್ಲ.

೨)  ಗುಡಿಸಲು ವಾಸಿ ಜನರಿಗೆ ನೀರಿನ ಸ್ವಂತ ಸಂಪರ್ಕ ಅಸಾಧ್ಯ. ಒಂದು ಕೋಣೆಯಲ್ಲಿ ಹತ್ತು ಜನ ವಾಸಿಸುವುದೂ ಇದೆ.

೩) ಚರಂಡಿ ಮತ್ತು ಓಣಿಗಳನ್ನು ಶುಚಿಗೊಳಿಸುವುದಕ್ಕೆ ನೀರಿನ ವಾಹನ ಚಲಿಸುವುದಕ್ಕೆ ದಾರಿಯಿಲ್ಲ; ಇದನ್ನೆಲ್ಲ ಕೇಳುವವರೂ ಇಲ್ಲ.

೪) ಚಾಂದನೀಚೌಕ್‌ನ ಬಿಗ್‌ಬಜಾರ್ ಪ್ರದೇಶದಲ್ಲಿ ರಿಕ್ಷಾ ಸಂಚಾರವನ್ನು ನಿಷೇಧಿಸಲಾಗಿದೆ. ಸಮೀಪದ ಸ್ಥಳದಿಂದ ಬರುವ ರಿಕ್ಷಾಗಳು ಇಲ್ಲಿ ದಾಟಲಾಗದ ಕಾರಣ ಮೈಲುಗಟ್ಟಲೆ ಸುತ್ತಿ ಹೋಗಬೇಕಾಗಿದೆ.

೫) ಆ ಪ್ರದೇಶದ ಜನರಿಗೆ ಸಂಚಾರಕ್ಕೆ ವ್ಯವಸ್ಥೆಯಿಲ್ಲ. ವೃದ್ಧರು, ರೋಗಪೀಡಿತರು ತುಂಬ ಕಷ್ಟಕ್ಕೆ ಗುರಿಯಾಗಿದ್ದಾರೆ. ಇನ್ನೊಂದೆಡೆ ರಿಕ್ಷಾದವರು ಉದ್ಯೋಗ ಕಳೆದುಕೊಂಡಿದ್ದಾರೆ.

೬) ನೀರಿನಲ್ಲಿ ಸಾಕಷ್ಟು ಒತ್ತಡವಿಲ್ಲದ ಕಾರಣ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ತಲಪುತ್ತಿಲ್ಲ.

೭) ಮೋರಿಗಳು ಸಾಕಷ್ಟು ಅಗಲವಾಗಿಲ್ಲ. ಅವು ಈಗಾಗಲೇ ತುಂಬಿಹೋಗಿವೆ. ಇದನ್ನು ಸರಿಪಡಿಸಲು ಅಸಾಧ್ಯವೆ? ಕೆಲವರು ನಿಮ್ಮ ಹೊಗಳಿಕೆಯಲ್ಲಿ ಮೈಮರೆತಿದ್ದಾರೆ. ಟೀಕೆಗಳಿಗೆ ಈಗ ಅವಕಾಶವಿಲ್ಲ. ಬಡಜನರು ನಮ್ಮೊಂದಿಗಿದ್ದಾರೆ; ಅವರು ನಮ್ಮಿಂದ ದೂರ ಹೋಗಬೇಕೆ? ಯಾರೋ ಇಡೀ ವ್ಯವಸ್ಥೆಯನ್ನು ಹಾಳುಮಾಡುತ್ತಿದ್ದಾರೆ ಅನ್ನಿಸುತ್ತದೆ. ಆದ್ದರಿಂದ ನಿಮಗೆ ಇನ್ನೊಮ್ಮೆ ಮನವಿ ಮಾಡುತ್ತಿದ್ದೇನೆ. ಪ್ರತಿಯೊಂದು ಕೆಲಸದಲ್ಲಿ ಮಾನವೀಯ ಸ್ಪರ್ಶದ ಕೊರತೆ ಕಾಣಿಸುತ್ತಿದೆ. ಸರ್ಕಾರದ ವಿರೋಧಿಗಳು ಸರ್ಕಾರ ಹಾಗೂ ತುರ್ತುಪರಿಸ್ಥಿತಿಯನ್ನು ಸೇನಾಡಳಿತ ಎಂದು ಬಣ್ಣಿಸುತ್ತಿದ್ದಾರೆ.

ನನಗೆ ಏನಾದರೂ ಸರಿ, ಈ ಎಲ್ಲ ಬೆಳವಣಿಗೆಗಳನ್ನು ತಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ. ಈ ಅಮಾನವೀಯ ಕೆಲಸಗಳನ್ನು ಮಾಡುತ್ತಿರುವವರು ಯಾರು ಮತ್ತು ಏಕೆ ಎಂಬುದರ ತನಿಖೆಯಾಗಬೇಕು – ಹೀಗೆ ಬಹಳ ದಿಟ್ಟತನದಿಂದ ಆಕೆ ಪತ್ರ ಬರೆದಿದ್ದಾರೆ.

ಸುಭದ್ರಾ ಜೋಶಿ ಆಗ ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷೆಯಾಗಿದ್ದರು. ಪ್ರಧಾನಿ ಇಂದಿರಾಗಾಂಧಿಯವರಿಗೆ ಆಕೆ ಬರೆದ ಇನ್ನೊಂದು ಪತ್ರವನ್ನು ಕೂಡ ಶಾ ಆಯೋಗವು ದಾಖಲಿಸಿದೆ. ಅದರಲ್ಲಿ ಈ ಅಂಶಗಳಿವೆ: ನಿಮ್ಮಲ್ಲಿ ಕೆಲವು ವಿಷಯಗಳನ್ನು ಹೇಳಬೇಕು ಎಂದಿದ್ದೆ. ಆದರೆ ನಿಮಗೆ ಸಮಯವಿಲ್ಲ; ಮತ್ತು ಇಲ್ಲಿ ಏನಾಗುತ್ತಿದೆ ಎಂದು ತಿಳಿಯಲು ನಿಮಗೆ ಆಸಕ್ತಿಯಿಲ್ಲ ಎನಿಸುತ್ತಿದೆ. ಇದು ಆಶ್ಚರ್ಯಕರ. ದೆಹಲಿ ಜಾಮಾ ಮಸೀದಿ ಮತ್ತು ತುರ್ಕ್‌ಮಾನ್ ಗೇಟ್ ಪ್ರದೇಶದಲ್ಲಿ ನಡೆದುದನ್ನು ವಿವರಿಸಲು ಕಷ್ಟ; ಹಿಂದೆ ಇಂಥದು ನಡೆದಿಲ್ಲ. ದೆಹಲಿಯನ್ನು ನೀವು ಕೆಲವು ಅಧಿಕಾರಿಗಳಿಗೆ ಮತ್ತು ಇತರ ಕೆಲವರಿಗೆ ಒಪ್ಪಿಸಿದ್ದೀರಿ. ಇಡೀ ವಿಷಯವು ನಿಮಗೆ ಗೊತ್ತಾದರೆ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎನಿಸದಿರದು; ಮತ್ತು ಅದರ ಉದ್ದೇಶವನ್ನು ನೀವು ಸಂಶಯಿಸದೆ ಇರಲಾರಿರಿ. ದೆಹಲಿಯ ಜನ ಉತ್ತರಪ್ರದೇಶ, ಬಿಹಾರ, ರಾಜಸ್ಥಾನಗಳಿಗೆ ಪಲಾಯನ ಮಾಡುತ್ತಿದ್ದಾರೆ. ಅವರ ಮಾತು ಪತ್ರಿಕಾ ವರದಿಗಳಿಗಿಂತ ಭೀಕರ ಇರಬಹುದು; ಪತ್ರಿಕೆಯದ್ದು ಸೆನ್ಸಾರ್‌ನವರು ಆಯ್ದು ಕೊಟ್ಟಂಥದು.

ಅಧಿಕಾರಿಗಳು ಒಡೆದ ಪ್ರತಿ ಮನೆಯಲ್ಲಿ ಗುಡಿಕೈಗಾರಿಕೆ ಇದೆ. ಅವರಿಗೆ ಆ ಪ್ರದೇಶದಲ್ಲೇ ಮನೆಕಟ್ಟಿಕೊಡಬೇಕು (ದೂರ ಕಳುಹಿಸುವುದಲ್ಲ). ದೆಹಲಿಯ ಹೊಸ ಅಧಿಕಾರಿಗಳು ಏನು ಮಾಡುತ್ತಾರೋ ಗೊತ್ತಿಲ್ಲ. ನಿಮ್ಮ ಅಧಿಕಾರಿಗಳದು ಸ್ಯಾಡಿಸ್ಟ್ (ಸಿನಿಕ) ಸಂತೋಷ. ಇದಕ್ಕೆ ನೀವೇನಾದರೂ ಮಾಡಬಹುದೆಂಬ ವಿಶ್ವಾಸ ಮಸುಕಾಗುತ್ತಿದೆ. ಆದರೂ ನಾನು ಹೇಳಬೇಕು, ಆಶಾವಾದಿಯಾಗಿ ಇರಬೇಕು. ಅದಕ್ಕಾಗಿ ಈ ಪತ್ರ ಬರೆದೆ. ಮೇಲಿನ ಸ್ಥಾನದಲ್ಲಿ ಇರುವವರ ಕಿವಿ ಕಿವುಡಾಗಿ ಇರುತ್ತದಂತೆ – ಎಂದು ಪತ್ರವನ್ನು ಮುಗಿಸಿದ್ದಾರೆ.

ಈ ರೀತಿ ಅಹವಾಲುಗಳನ್ನು ಹೇಳಲು ತೊಡಗಿದ ಮೇಲೆ ಪ್ರಧಾನಿ ಇಂದಿರಾಗಾಂಧಿ ಪಕ್ಷದ ನಾಯಕಿಯಾದ ಸುಭದ್ರಾ ಜೋಶಿ ಅವರಿಗೆ ಭೇಟಿಯ ಅವಕಾಶ ನೀಡುವುದನ್ನೇ ನಿಲ್ಲಿಸಿದರು. ಮತ್ತೆ ಕೂಡ ದೂರುಗಳು ಬಂದಾಗ ಅಲ್ಪಸಂಖ್ಯಾತರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎನ್ನುವ ಆರೋಪದ ಮೇರೆಗೆ ಅವರನ್ನು ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷಸ್ಥಾನದಿಂದ ವಜಾಗೊಳಿಸಿದರು.

ಬಲಾತ್ಕಾರದಿಂದ ಸ್ಥಳಾಂತರವನ್ನು ಮಾಡಿದ್ದರಿಂದ ಜನರಿಗೆ ತುಂಬ ಬೇಸರವಾಗಿತ್ತು ಎಂಬುದನ್ನು ಶಾ ಆಯೋಗದ ಮುಂದೆ ಒಪ್ಪಿಕೊಂಡ ಉಪರಾಜ್ಯಪಾಲ ಕೃಷನ್‌ಚಂದ್ ಡಿಡಿಎ ಮತ್ತು ಎಂಸಿಡಿಗಳು ಇಂತಹ ಕಾರ್ಯಾಚರಣೆ ನಡೆಸಿದ ಪ್ರದೇಶಗಳು ವಿರೋಧಪಕ್ಷಗಳದ್ದು, ವಿಶೇಷವಾಗಿ ಜನಸಂಘದ ಭದ್ರಕೋಟೆಯಾಗಿದ್ದ ಪ್ರದೇಶಗಳು – ಎಂದರು.

ಹಿಂದೆ ದೆಹಲಿಯಲ್ಲಿ ಕಟ್ಟಡಗಳನ್ನು ತೆರವುಗೊಳಿಸಬೇಕಿದ್ದರೆ ಉಪರಾಜ್ಯಪಾಲರ ಅನುಮತಿ ಕಡ್ಡಾಯವಾಗಿತ್ತು. ತುರ್ತುಪರಿಸ್ಥಿತಿಯಲ್ಲಿ ಅದನ್ನು ಉಲ್ಲಂಘಿಸಿದರು ಎಂದು ಶಾ ಆಯೋಗದ ಮುಂದೆ ಹೇಳಿದ ಉಪರಾಜ್ಯಪಾಲರ ಕಾರ್ಯದರ್ಶಿ ನವೀನ್ ಚಾವ್ಲಾ, ಉರುಳಿಸುವಾಗ ಧಾರ್ಮಿಕ ಕಟ್ಟಡಗಳನ್ನು ಕೂಡ ಬಿಡಲಿಲ್ಲ; ಮುಂಚಿತವಾಗಿ ಮಾಹಿತಿಯನ್ನೂ ನೀಡಲಿಲ್ಲ. ಜನಸಂಘ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಭದ್ರಕೋಟೆಗಳು ಹಾಗೂ ತುರ್ತುಪರಿಸ್ಥಿತಿಯ ವಿರುದ್ಧ ಪ್ರತಿಭಟನೆ ಮತ್ತು ಬಂಧನಗಳು ನಡೆದ ಸ್ಥಳಗಳನ್ನು ಧ್ವಂಸಕಾರ್ಯಕ್ಕೆ ಮೊದಲಿಗೆ ಗುರುತಿಸಲಾಯಿತೆಂಬ ಅಭಿಪ್ರಾಯವಿದೆ. ಅಧಿಕಾರಿಗಳು ಅನಂತರ ಜಾಮಾ ಮಸೀದಿಯಂತಹ ಮುಸ್ಲಿಮರಿಗೆ ರಿಯಾಯಿತಿ ಕೊಡುತ್ತಾರೆನ್ನುವ ಭಾವನೆ ಬರಬಾರದೆಂಬುದು ಅವರ ಉದ್ದೇಶವಾಗಿತ್ತು – ಎಂದು ವಿವರಿಸಿದರು.

ಜಾಮಾ ಮಸೀದಿ ಪ್ರದೇಶದಲ್ಲಿ ಮೊದಲಿಗೆ ಕಲಾನ್ ಮಹಲನ್ನು ಕೆಡವಿದರು. ಅದರಿಂದ ಆ ಭಾಗದಲ್ಲಿ ಭಯ ಹಬ್ಬಿತು. ನಗರದ ಇತರ ಭಾಗಗಳಲ್ಲೂ ಧ್ವಂಸಕಾರ್ಯ ನಡೆಯುತ್ತಿದೆ ಎಂಬ ಸುದ್ದಿ ಬಂದಾಗ ಜಾಮಾ ಮಸೀದಿ ಪರಿಸರದ ಅಂಗಡಿಗಳವರು ಹಿಂದೆ ಹೇಳಲಾದ ಪೈವಾಲನ್ ಯೋಜನೆಯನ್ನು ಜಾರಿ ಮಾಡಿ ಎಂದು ಪ್ರಧಾನಿಗೆ ಮನವಿ ಸಲ್ಲಿಸಲು ನಿರ್ಧರಿಸಿದರು.

ಅದರಂತೆ ಪ್ರಧಾನಿ ಇಂದಿರಾ ಅವರ ಭೇಟಿಗೆ ಅವಕಾಶ ಕೇಳಿದಾಗ ಆಪ್ತ ಕಾರ್ಯದರ್ಶಿ ಎನ್.ಕೆ. ಶೇಷನ್ ಅವರು ಪ್ರಧಾನಿಗಿಂತ ಸಂಜಯಗಾಂಧಿಯವರ ಭೇಟಿಯೇ ಉತ್ತಮ. ಏಕೆಂದರೆ ದೆಹಲಿಯ ಎಲ್ಲ ವಿಷಯಗಳನ್ನು ಅವರೇ ಡೀಲ್ ಮಾಡುತ್ತಾರೆ ಎಂದು ಸಲಹೆ ನೀಡಿದರು. ಆ ಪ್ರಕಾರ ಸಂಜಯಗಾಂಧಿ ಅವರನ್ನು ಭೇಟಿ ಮಾಡಿದಾಗ ಆ ಬಗೆಗಿನ ಚರ್ಚೆ ಅಪ್ರಸ್ತುತ. ಅಂಗಡಿಯವರು ನಿರ್ಮಾಣದ ವೆಚ್ಚ ೧.೮೦ ಕೋಟಿ ರೂ.ಗಳನ್ನು ಕೊಡಲಿ. ಅನಂತರ ಅವರು ಸ್ಥಳಾಂತರ ಮಾಡದಿದ್ದರೂ ತೊಂದರೆಯಿಲ್ಲ ಎನ್ನುವ ಪರಿಹಾರ ಹೇಳಿದರಂತೆ.

ರಾಷ್ಟ್ರಪತಿಗೆ ದೂರು

ಮತ್ತೆ ಕೆಲವು ಅಂಗಡಿಗಳನ್ನು ಒಡೆದುಹಾಕಿದಾಗ ಅಂಗಡಿಯವರು ಮತ್ತೆ ಸಂಜಯಗಾಂಧಿಯವರ ಬಳಿಗೆ ಹೋದರು. ಅಂಗಡಿಗಳ ಸ್ಥಳಾಂತರ ಅನಿವಾರ್ಯ ಎಂದು ಆತ ಉಡಾಫೆಯ ಮಾತನಾಡಿದರು. ಪೈವಾಲನ್ ಯೋಜನೆಯನ್ನು ನೆನಪಿಸಿದಾಗ, ಅದಕ್ಕೆ ೨ ಕೋಟಿ ರೂ. ಬೇಕು; ವ್ಯಾಪಾರಿಗಳು ಅದನ್ನು ನೀಡಿದರೆ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದರು. ಅನಂತರ ಅಂಗಡಿಯವರ ನಿಯೋಗವು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರನ್ನು ಭೇಟಿ ಮಾಡಿ ಧ್ವಂಸಕಾರ್ಯದ ಬಗ್ಗೆ ದೂರು ಸಲ್ಲಿಸಿತು; ಸಂಜಯಗಾಂಧಿ ಅವರು ಹೇಳಿದ ಪರಿಹಾರದ ಬಗ್ಗೆ ತಿಳಿಸಿತು. ರಾಷ್ಟ್ರಪತಿಯವರು ಸಮಸ್ಯೆಯನ್ನು ನಾನು ಪ್ರಧಾನಿಯವರಲ್ಲಿ ಹೇಳಿದ್ದೇನೆ. ಪೈವಾಲನ್ ಯೋಜನೆ ಜಾರಿಯಾಗುವ ತನಕ ಜಾಮಾ ಮಸೀದಿ ಪ್ರದೇಶದ ಅಂಗಡಿಗಳನ್ನು ಸ್ಥಳಾಂತರ ಮಾಡುವುದಿಲ್ಲವೆಂದು ಭರವಸೆ ನೀಡಿದ್ದಾರೆ ಎಂದು ನಿಯೋಗಕ್ಕೆ ತಿಳಿಸಿದರು.

ಆದರೆ ಪರಿಣಾಮದಲ್ಲಿ ಅದು ಕಾಣಲಿಲ್ಲ. ನವೆಂಬರ್ ೨೨ರಂದು (೧೯೭೫) ಒಂದಷ್ಟು ಅಂಗಡಿ ಮತ್ತು ನಿರ್ಮಾಣಗಳನ್ನು ನೆಲಸಮ ಮಾಡಿದರು. ನಗರಪಾಲಿಕೆ ಕಮಿಷನರ್ ತಮ್ಟಾ ಅವರು ಸುಭದ್ರಾ ಜೋಶಿ ಅವರನ್ನು ಭೇಟಿ ಮಾಡಿ ಸಂತ್ರಸ್ತರ ಪುನರ್ವಸತಿಗೆ ಯತ್ನಿಸುತ್ತೇನೆ. ಯೋಗ್ಯ ಜಾಗ ನೀಡುವವರೆಗೆ ಸ್ಥಳಾಂತರ ಆಗುವುದಿಲ್ಲ ಎಂದು ಭರವಸೆ ನೀಡಿದರು. ಅದೇಕೆ ಆ ಭರವಸೆ ನೀಡಿದರೋ ಗೊತ್ತಿಲ್ಲ. ಜಾಮಾ ಮಸೀದಿ ಪರಿಸರದ ಅನಂತರ ಬೀದಿಬದಿ ವ್ಯಾಪಾರಿಗಳ ಸ್ಥಳಾಂತರಕ್ಕೂ ಕೈಹಾಕಿದರು. ಸುತ್ತಲೂ ಬೃಹತ್ ಪೊಲೀಸ್ ಪಡೆ ಇತ್ತೆಂದು ಪ್ರತ್ಯೇಕ ಹೇಳಬೇಕಿಲ್ಲ. ಸುಭದ್ರಾ ಜೋಶಿ ಅವರು ವಲಯ ಸಹಾಯಕ ಕಮಿಷನರ್ ಅವರನ್ನು ಕಂಡು ದೂರು ನೀಡಿದಾಗ, ಎಂಸಿಡಿ ಮತ್ತು ಡಿಡಿಎಗಳು ಇಡೀ ಪ್ರದೇಶದ ಸುಂದರೀಕರಣವನ್ನು ನಡೆಸುತ್ತಿವೆ ಎನ್ನುವ ಉತ್ತರ ದೊರೆಯಿತು. ಶ್ರೀಮತಿ ಜೋಶಿ ಅವರು ಜಗಮೋಹನ್ ಅವರ ಭೇಟಿ ಮಾಡಿ ದೂರಿಕೊಂಡಾಗ ಆತ ನನಗೇನೂ ಗೊತ್ತಿಲ್ಲ ಎಂದು ಹೇಳಿದರು. ಸ್ಥಳಾಂತರಗೊಂಡ ಗುಜರಿ ವ್ಯಾಪಾರಿಗಳಿಗೆ ಬದಲಿ ನಿವೇಶನವನ್ನಾದರೂ ಕೊಡಿ ಎನ್ನುವ ಮನವಿ ಸಲ್ಲಿಸಿ ಆಕೆ ಮರಳಿದರು.

ಶಾ ಆಯೋಗದ ವಿಚಾರಣೆಗೆ ಹಾಜರಾದ ಬಿ.ಆರ್. ತಮ್ಟಾ ಜಾಮಾ ಮಸೀದಿ ಪ್ರದೇಶದ್ದು ಜಂಟಿ ಕಾರ್ಯಾಚರಣೆಯಾಗಿದ್ದು ಅದರಲ್ಲಿ ಎಂಸಿಡಿ ಡಿಡಿಎಗೆ ನೆರವು ನೀಡಿತು; ಸಂಜಯಗಾಂಧಿ ನಿರ್ದೇಶನದಂತೆ ಆ ಕಾರ್ಯ ನಡೆಯಿತು ಎಂದು ತಿಳಿಸಿದರು.

ಸಂಜಯಗಾಂಧಿ ಪಾತ್ರ

ತುರ್ತುಪರಿಸ್ಥಿತಿಯ ವೇಳೆ ಡಿಡಿಎ ತಾನು ನಡೆಸಬೇಕಾದ ಸಭೆಗಳನ್ನು ಕ್ರಮಪ್ರಕಾರ ನಡೆಸಲಿಲ್ಲ ಎಂದು ಆರೋಪಿಸಲಾಗಿದೆ. ಸಭೆಯ ಹಿಂದಿನ ರಾತ್ರಿ ಅಜೆಂಡಾವನ್ನು (ಕಾರ್ಯಕ್ರಮಪಟ್ಟಿ) ಸದಸ್ಯರಿಗೆ ಕೊಡುತ್ತಿದ್ದರು. ಸಭೆ ೨೫-೩೦ ನಿಮಿಷಗಳಲ್ಲಿ ಮುಗಿದುಹೋಗುತ್ತಿತ್ತು. ಅಷ್ಟರಲ್ಲೇ ಸುಮಾರು ನೂರು ವಿಷಯಗಳ ಬಗ್ಗೆ ತೀರ್ಮಾನಿಸಿಬಿಡುತ್ತಿದ್ದರು. ಯಾವುದೇ ಯೋಜನೆಯ ಕುರಿತು ಸವಿವರವಾದ ಚರ್ಚೆ ನಡೆಯುತ್ತಿರಲಿಲ್ಲ. ಎಲ್ಲ ವೃತ್ತಿಪರರಿಂದ ಡಿಡಿಎ ಯೋಜನೆಗಳ ಬಗ್ಗೆ ವಿರೋಧ ಬರುತ್ತಿತ್ತು. ಜಗಮೋಹನ್ ಆರ್.ಕೆ. ಧವನ್ ಅವರಿಗೆ ಬರೆದ ಒಂದು ಪತ್ರದಲ್ಲಿ ಸ್ವಚ್ಛತಾ ಕಾರ್ಯದ ಕೆಲವು ಪ್ರಮುಖ ಯೋಜನೆಗಳು ಮಹಾನಗರ ಪಾಲಿಕೆಯದ್ದಾದರೂ ಇಡೀ ದೆಹಲಿಯ ಅಭಿವೃದ್ಧಿಯ ಹೊಣೆ ಡಿಡಿಎಯದ್ದು ಎನ್ನುವ ಅಂಶವನ್ನು ಹೇಳಿದ್ದರು. ಆ ಉತ್ಸಾಹದಲ್ಲಿ ಅವರು ಕೆಲಸ ಮಾಡುತ್ತಿದ್ದರು ಕೂಡ. ಧ್ವಂಸಕಾರ್ಯದ ನೆರವಿಗೆ ಡಿವೈಎಸ್‌ಪಿ ನೇತೃತ್ವದ ಪ್ರತ್ಯೇಕ ಪೊಲೀಸ್ ತಂಡವಿತ್ತು.

ದೆಹಲಿಯ ಧ್ವಂಸಕಾರ್ಯಗಳ ಹಿಂದೆ ಪ್ರಧಾನಿಯ ಪುತ್ರ ಸಂಜಯಗಾಂಧಿ ಇದ್ದಾರೆ ಎನ್ನುವ ಒಂದು ಜನಾಭಿಪ್ರಾಯವನ್ನು ಬೆಳೆಸಲಾಗಿತ್ತು. ಪ್ರತಿದಿನ ಬೆಳಗ್ಗೆ ಸಂಜಯಗಾಂಧಿ ಅವರನ್ನು ಭೇಟಿ ಮಾಡಿ ಆದೇಶಗಳನ್ನು ಪಡೆಯುತ್ತಿದ್ದರು. ಸಂತ್ರಸ್ತರು ಯಾರಾದರೂ ದೂರು ನೀಡಲು ಬಂದರೆ ಈ ಅಧಿಕಾರಿಗಳು ಸಂಜಯ್ ಅವರನ್ನು ಭೇಟಿ ಮಾಡಲು ಹೇಳುತ್ತಿದ್ದರು; ಸಂಜಯಗಾಂಧಿಯಾದರೂ ತನ್ನದೇ ರೀತಿಯಲ್ಲಿ ಏನೇನೋ ಪರಿಹಾರ ಹೇಳುತ್ತಿದ್ದರು.

ಧ್ವಂಸಕಾರ್ಯವನ್ನು ವೇಗವಾಗಿ ಜಾರಿಗೊಳಿಸುವ ಧಾವಂತದಲ್ಲಿ ಡಿಡಿಎ ಮತ್ತು ಎಂಸಿಡಿಗಳು ಕಾನೂನಿನ ಅಗತ್ಯ ಕ್ರಮಗಳನ್ನು ಪಾಲಿಸಲಿಲ್ಲ ಎಂಬುದು ಸ್ಪಷ್ಟವಾಗಿದೆ; ಅದನ್ನು ಈ ರೀತಿಯಲ್ಲಿ ಪಟ್ಟಿ ಮಾಡಲಾಗಿದೆ:

೧) ಯಾವುದೇ ಕಟ್ಟಡ(ನಿರ್ಮಾಣ)ವನ್ನು ಕೆಡಹುವ ಮುನ್ನ ಸಂಬಂಧಪಟ್ಟವರಿಗೆ ನೋಟೀಸು ನೀಡಬೇಕು. ಇದನ್ನು ಪಾಲಿಸುತ್ತಿರಲಿಲ್ಲ.

೨) ಖಾಸಗಿ ಜಮೀನು ಅಥವಾ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದಾದರೆ ಅದಕ್ಕೆ ಅದರದ್ದೇ ಆದ ಕ್ರಮವಿದೆ. ದೆಹಲಿಯಲ್ಲಿ ಅದನ್ನು ಪಾಲಿಸಲಿಲ್ಲ; ಅಥವಾ ಪಾಲಿಸಿದರೂ ಕೂಡ ಆ ಪ್ರಕ್ರಿಯೆಗೆ ಮುನ್ನವೇ ಜಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

೩) ದೆಹಲಿ ಮಾಸ್ಟರ್‌ಪ್ಲಾನ್ (ಬೃಹತ್ ಯೋಜನೆ) ಇದ್ದು ಆ ವ್ಯಾಪ್ತಿಯಲ್ಲಿ ಭೂಮಿಯ ಬಳಕೆಯನ್ನು ಬದಲಿಸುವುದಾದರೆ ಕೇಂದ್ರಸರ್ಕಾರದ ಅನುಮತಿ ಪಡೆಯಬೇಕು. ತುರ್ತುಪರಿಸ್ಥಿತಿಯ ವೇಳೆ ಈ ನಿಯಮವನ್ನೂ ಉಲ್ಲಂಘಿಸಲಾಯಿತು.

೪) ಮುಂಚಿತವಾಗಿ ತಿಳಿಸಿದರೆ ಅಥವಾ ನೋಟೀಸು ನೀಡಿದರೆ ಜನ ಕೋರ್ಟಿಗೆ ಹೋಗಬಹುದು; ಅಥವಾ ರಾಜಕೀಯ ನಾಯಕರ ಮೂಲಕ ಒತ್ತಡ ತರಬಹುದೆಂದು ದೆಹಲಿಯಲ್ಲಿ ಅದಕ್ಕೆ ಅವಕಾಶವನ್ನೇ ನೀಡದಂತಹ ಕಾರ್ಯವಿಧಾನವನ್ನು ರೂಪಿಸಿಕೊಂಡಿದ್ದರು. ಕಣ್ಣ ಮುಂದೆಯೇ ತೀರಾ ಅನ್ಯಾಯ ಆಗುತ್ತಿದ್ದರೂ ಕೂಡ ಸಂತ್ರಸ್ತರಿಗೆ ಪರಿಹಾರ ಸಿಗುತ್ತಿರಲಿಲ್ಲ. ಮುಂಚಿತವಾಗಿ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದರೂ ಕೂಡ ಕಟ್ಟಡ ಉರುಳಿಸುವವರು ಅದಕ್ಕೆ ಬೆಲೆ ಕೊಡುತ್ತಿರಲಿಲ್ಲ. ಬದಲಾಗಿ ಸುಳ್ಳು ಕೇಸ್ ಹಾಕಿ ಕೋರ್ಟ್ ಆದೇಶ ತಂದವರನ್ನೇ ಬಂಧಿಸುತ್ತಿದ್ದರು; ಮೀಸಾ ಬಂಧನ ಕೂಡ ಪ್ರಯೋಗಿಸುತ್ತಿದ್ದರು. ಆ ರೀತಿಯಲ್ಲಿ ಏನಾದರೂ ಮಾಡಿ ಪ್ರಕರಣವನ್ನು ಹಿಂತೆಗೆಯುವಂತೆ ಮಾಡುತ್ತಿದ್ದರು.

೫)  ಕಟ್ಟಡ ತೆರವಿಗೆ ಸಂಬಂಧಿಸಿ ಡಿಡಿಎ ಬಳಿ ಶಾಶ್ವತ ಪೊಲೀಸ್ ಪಡೆ ಇತ್ತು. ಅದರಿಂದ ರಕ್ಷಣೆ ಪಡೆದ ಅಧಿಕಾರಿಗಳು ಜನರ ಆಕ್ರೋಶಕ್ಕೆ ಕ್ಯಾರೇ ಅನ್ನುತ್ತಿರಲಿಲ್ಲ. ಬೇರೆ ಬೇರೆ ಕಡೆಗಳಲ್ಲಿ ಧ್ವಂಸಕಾರ್ಯ ನಿರಂತರವಾಗಿ ನಡೆಯುತ್ತಿತ್ತು. ಅನ್ಯಾಯ ಎಸಗುತ್ತಿದ್ದರೂ ರಕ್ಷಣೆಯ ಧೈರ್ಯವಿತ್ತು; ಇದರಿಂದ ಪೊಲೀಸರ ಬಗೆಗಿನ ಗೌರವಕ್ಕೆ ಚ್ಯುತಿ ಉಂಟಾಗಿತ್ತು.

೬) ಸಾರ್ವಜನಿಕರಿಂದ ತುಂಬ ಟೀಕೆ ಬಂದಾಗ ಅಥವಾ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತರು ನ್ಯಾಯಾಲಯಕ್ಕೆ ಹೋದಾಗ ಡಿಡಿಎ, ಎಂಸಿಡಿ ಅಧಿಕಾರಿಗಳು ನೋಟೀಸು ನೀಡಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಿದ್ದರು.

೭) ತುರ್ತುಪರಿಸ್ಥಿತಿಯ ವೇಳೆ ಮಾನವೀಯ ಸಮಸ್ಯೆಗಳ ಕಡೆಗೆ ಕಿಂಚಿತ್ತೂ ಗಮನವಿಲ್ಲದೆ ದೊಡ್ಡ ಪ್ರಮಾಣದ ಧ್ವಂಸಕಾರ್ಯಗಳು ನಡೆದವು. ಬದಲಿ ಮನೆ ಅಥವಾ ವಸತಿ ನೀಡುತ್ತಿರಲಿಲ್ಲ. ಕೆಲವು ಸಲ ಸುಮ್ಮನೆ ಒಂದು ಚಿಕ್ಕ ಜಾಗವನ್ನು ಕೊಡುತ್ತಿದ್ದರು. ಅದು ಎಷ್ಟು ಚಿಕ್ಕದೆಂದರೆ ಅಲ್ಲಿ ಕಟ್ಟಡ (ಮನೆ) ಕಟ್ಟಿಸುವುದೇ ಅಸಾಧ್ಯ.

೮) ದೇಶ ವಿಭಜನೆಯ (೧೯೪೭) ಬಳಿಕ ದೆಹಲಿಯಲ್ಲಿ ಮತ್ತು ಅದರ ಸುತ್ತ ತುಂಬ ಜನ ಪಾಕಿಸ್ತಾನಿ ನಿರಾಶ್ರಿತರು ಮನೆ ಮಾಡಿಕೊಂಡು ಕುಳಿತಿದ್ದರು. ಜೀವನ ನಿರ್ವಹಣೆಗಾಗಿ ಸಣ್ಣ ವ್ಯಾಪಾರ, ಯಾವುದೋ ಸಣ್ಣ ನೌಕರಿ, ಹಾಲು ಮಾರುವುದು, ಮನೆ ಕೆಲಸ, ಮೇಸ್ತ್ರಿ, ಕಾವಲುಗಾರ, ಬೀದಿಬದಿ ವ್ಯಾಪಾರ ಮುಂತಾಗಿ ಏನೇನೋ ಮಾಡಿಕೊಂಡಿದ್ದರು. ಆ ಭಾಗದ ಶ್ರೀಮಂತರು ಮತ್ತು ಮಧ್ಯಮವರ್ಗದವರ ಮನೆಗಳೇ ಅವರಿಗೆ ಆಧಾರ. ಅವರನ್ನು ಅಲ್ಲಿಂದ ಕಿತ್ತು ಕಿ.ಮೀ. ಗಟ್ಟಲೆ ದೂರ ಕಳುಹಿಸಿದಾಗ ಅವರ ಜೀವನದ ಆಧಾರವೇ ಕುಸಿಯಿತು. ತುಂಬ ದೂರದಿಂದ ಇಲ್ಲಿಗೆ ಸಮಯಕ್ಕೆ ಸರಿಯಾಗಿ ಬರುವುದು ಕಷ್ಟ ಎನ್ನುವುದು ಒಂದಾದರೆ, ಕೆಲಸದ ಸ್ಥಳಕ್ಕೆ ಹೋಗಲು ಹೆಚ್ಚುವರಿ ಖರ್ಚಾದಾಗ ಅದನ್ನು ಭರಿಸುವುದು ಕೂಡ ಅವರಿಗೆ ಅಸಾಧ್ಯವಾಗಿತ್ತು.

೯) ಬಹಳಷ್ಟು ಕಡೆ ಪುನರ್ವಸತಿ ಬಗ್ಗೆ ಎಲ್ಲರಿಗೂ ಸಮಾನವಾಗಿ ೨೫ ಚದರ ಗಜ (ಒಂದು ಗಜ ಅಂದರೆ ಮೂರು ಅಡಿ) ಜಾಗವನ್ನು ನೀಡಲಾಯಿತು. ಹಿಂದೆ ಅವರಿಗೆ ಎಷ್ಟು ಜಾಗವಿದ್ದರೂ ಕೊಟ್ಟದ್ದು ಅಷ್ಟೇ. ಜಾಗಕ್ಕೆ ಮಾತ್ರ ಪರಿಹಾರ. ಕಾನೂನಿನ ಪ್ರಕಾರವೇ ಪರಿಹಾರ ನೀಡಬೇಕೆಂಬುದನ್ನು ತುರ್ತುಪರಿಸ್ಥಿತಿಯ ವೇಳೆ ಅಲ್ಲಿ ಪಾಲಿಸಲೇ ಇಲ್ಲ.

೧೦) ಶಾ ಆಯೋಗವು ಸಂತ್ರಸ್ತರ ಪುನರ್ವಸತಿಗೆ ನೀಡಿದ ಸ್ಥಳಗಳಿಗೆ ಭೇಟಿ ನೀಡಿತು. ಅಲ್ಲಿ ಆವಶ್ಯಕ ಸವಲತ್ತುಗಳಿರಲಿಲ್ಲ. ಇಕ್ಕಟ್ಟಾದ ಜಾಗದಲ್ಲಿ ಬೆನ್ನುಬೆನ್ನಿಗೆ ಮನೆಗಳನ್ನು ಕಟ್ಟಿಸಿದ್ದು ಅವುಗಳಿಗೆ ಕಿಟಕಿ ಇಲ್ಲ; ಮನೆಗಳ ನಡುವೆ ಪ್ಯಾಸೇಜ್ ಇಲ್ಲ, ಪ್ಲಾನಿಂಗ್ ಇಲ್ಲ. ಅವಸರದಲ್ಲಿ ಏನೇನೋ ಮಾಡಿದ್ದರು. ಆಯೋಗವು ತನ್ನ ವರದಿಯಲ್ಲಿ ಸಂತ್ರಸ್ತರ ಸಂಕಷ್ಟಗಳ ಪರಿಹಾರಕ್ಕೆ ಆದ್ಯತೆಯ ಮೇಲೆ ಗಮನಕೊಡಿ ಎಂದು ಶಿಫಾರಸು ಮಾಡಿತು.

* * *

ತುರ್ಕ್ಮಾನ್ಗೇಟ್ ಪ್ರಕರಣ

ದೆಹಲಿ ಆಡಳಿತವು ನಡೆಸಿದ ಸ್ವಚ್ಛತೆ ಅಥವಾ ಧ್ವಂಸಕಾರ್ಯದಲ್ಲಿ ತುರ್ಕ್‌ಮಾನ್‌ಗೇಟ್ ಪ್ರದೇಶದ್ದು ಬಹಳಷ್ಟು ಸುದ್ದಿ ಮಾಡಿತು. ಅಲ್ಲಿ ಗೋಲಿಬಾರು ಮತ್ತು ಕರ್ಫ್ಯೂ ಹೇರಿಕೆಗಳು ಕೂಡ ನಡೆದವು. ಹಳೇನಗರದ ಆ ಭಾಗದಲ್ಲಿ ೧೯೭೬ರ ಏಪ್ರಿಲ್ ಆರಂಭದಲ್ಲಿ ಕಾರ್ಯಾಚರಣೆಯನ್ನು ಶುರು ಮಾಡಿದರು. ಏಪ್ರಿಲ್ ೧೧ರಿಂದ ಕೆಡಹುವ ಕೆಲಸ ಆರಂಭಿಸುತ್ತೇವೆ ಎಂದು ಡಿಡಿಎ ಮುಖ್ಯಾಧಿಕಾರಿ ಜಗಮೋಹನ್ ಡಿಐಜಿ ಪಿ.ಎಸ್. ಭಿಂದರ್ ಅವರಿಗೆ ಮಾಹಿತಿ ನೀಡಿ ನೆರವು ಕೇಳಿದರು. ಧ್ವಂಸ ಹೇಗೆ ಎಂಬುದು ಅಸ್ಪಷ್ಟವಿತ್ತು. ಅಲ್ಲಿ ಸುಮಾರು ೮೦ ಕುಟುಂಬಗಳನ್ನು ಸ್ಥಳಾಂತರಿಸಬೇಕಿತ್ತು. ಧ್ವಂಸ ಮಾಡುವ ಸ್ಥಳ ಕ್ರಮೇಣ ವಿಸ್ತರಿಸಿತು. ಎಷ್ಟೆಂದು ಡಿಡಿಎ ಅಧಿಕಾರಿಗಳಿಗೂ ಗೊತ್ತಿಲ್ಲ. ಧ್ವಂಸಕಾರ್ಯದ ಜಾಗ ವಿಸ್ತರಿಸಿದಂತೆ ಭಯದ ವಾತಾವರಣಕ್ಕೆ ದಾರಿಯಾಯಿತು. ತುರ್ಕ್‌ಮಾನ್‌ಗೇಟ್ ಗಲಭೆ ನಡೆದು ಪೊಲೀಸ್ ಗೋಲಿಬಾರಿನಲ್ಲಿ ಆರು ಜನ ಅಸುನೀಗಿದರು.

ಯಥಾಪ್ರಕಾರ ಧ್ವಂಸಕಾರ್ಯದ ವಿಷಯದಲ್ಲಿ ರಹಸ್ಯವನ್ನು ಕಾಪಾಡಿಕೊಳ್ಳಲಾಗಿತ್ತು. ವಸತಿ ಖಾತೆ ರಾಜ್ಯ ಸಚಿವ ಎಚ್.ಕೆ.ಎಲ್. ಭಗತ್ ಅವರಿಗೇ ಇದು ತಿಳಿದಿರಲಿಲ್ಲ. ಅಲ್ಲೊಂದು ರಸ್ತೆ ನಿರ್ಮಾಣಕ್ಕಾಗಿ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಲಾಯಿತು. ನೋಟೀಸು ನೀಡದಿದ್ದ ಕಾರಣ ಸ್ಥಳೀಯರಿಂದ ಪ್ರತಿಭಟನೆ ಬಂತು. ಒಬ್ಬಾತ ಅವರ ನಾಯಕತ್ವ ವಹಿಸಿದಾಗ ಆತನಿಗೆ ಬೆದರಿಕೆಯೊಡ್ಡಿದರು. ಸುಮ್ಮನಿರದಿದ್ದರೆ ಗಂಭೀರ ಪರಿಣಾಮವಾಗಬಹುದು; ಏಕೆಂದರೆ ಈಗ ತುರ್ತುಪರಿಸ್ಥಿತಿಯಿದೆ ಎಂದು ಅಧಿಕಾರಿಗಳು ನೇರವಾಗಿ ಬೆದರಿಕೆಯೊಡ್ಡಿದರು.

ತುರ್ಕ್‌ಮಾನ್‌ಗೇಟಿನ ಪಶ್ಚಿಮದ ೮೦ ಕುಟುಂಬಗಳನ್ನು ಎಬ್ಬಿಸಬೇಕೆಂದು ನಕ್ಷೆ (Map) ನೀಡಿದ್ದರು. ಸ್ಥಳಕ್ಕೆ ಹೋಗಿ ನೋಡಿದರೆ ಅದಕ್ಕಿಂತ ತುಂಬ ಜಾಸ್ತಿ ಸ್ಥಳದಲ್ಲಿ ಕೆಡಹುವ ಕಾರ್ಯ ನಡೆಯುತ್ತಿತ್ತು. ಕೇಳಿದರೆ ಅಲ್ಲಿರುವ ಕಟ್ಟಡಗಳು ಅನಧಿಕೃತವಾದ ಕಾರಣ ಜಾಗವನ್ನು ವಿಸ್ತರಿಸಲಾಯಿತು ಎಂದು ಉತ್ತರಿಸಲಾಗುತ್ತಿತ್ತು. ನಾಶ ಮಾಡಿದ ಬಹಳಷ್ಟು ಆಸ್ತಿ ಖಾಸಗಿಯವರದಾಗಿತ್ತು.

ತುಂಬ ಮನೆಗಳನ್ನು ಕೆಡವಿದ ಕಾರಣ ಆ ಪ್ರದೇಶದಲ್ಲಿ ಗಲಭೆ ನಡೆಯುತ್ತಿದೆ ಎಂಬ ಸಂಗತಿ ಏಪ್ರಿಲ್ ೧೯ರಂದು ಬೆಳಕಿಗೆ ಬಂತು. ಉಪರಾಜ್ಯಪಾಲ ಕೃಷನ್‌ಚಂದ್ ಧ್ವಂಸಕಾರ್ಯವನ್ನು ನಿಲ್ಲಿಸಿ ಎಂದು ಆದೇಶ ನೀಡಿದರು. ಆದರೆ ಅದು ನಿಲ್ಲಲಿಲ್ಲ. ಕಾರಣವೆಂದರೆ, ಸಂಜಯಗಾಂಧಿಯವರು ಸ್ಥಳಕ್ಕೆ ಭೇಟಿ ನೀಡಿ ಕೆಲಸ ನಿಲ್ಲಿಸುವುದು ಬೇಡ ಎಂದು ಆದೇಶ ನೀಡಿದರು. ಆ ಬಗ್ಗೆ ಉಪರಾಜ್ಯಪಾಲರು ನನ್ನನ್ನು ಅಧಿಕಾರಿಗಳು ಅಲಕ್ಷಿಸುತ್ತಿದ್ದರು. ಏಕೆಂದರೆ ಕೆಲವರಿಗೆ ಪ್ರಧಾನಿ ನಿವಾಸದ ನೇರ ಸಂಪರ್ಕವಿತ್ತು. ಅಲ್ಲಿ ಬಹುಮಹಡಿಯ ವಾಣಿಜ್ಯ ಸಂಕೀರ್ಣದ ನಿರ್ಮಾಣ ಕೂಡ ಮಾಸ್ಟರ್‌ಪ್ಲಾನ್‌ನಲ್ಲಿ ಉಲ್ಲೇಖಗೊಂಡಿತ್ತು.

ಗೋಲಿಬಾರು, ಸಾವು

ಏಪ್ರಿಲ್ ೧೯ರಂದು (೧೯೭೬) ಪ್ರತಿಭಟನಾನಿರತರ ಮೇಲೆ ಗೋಲಿಬಾರು ನಡೆಸಲಾಯಿತು; ಆರು ಜನ ಗುಂಡಿಗೆ ಬಲಿಯಾದರು. ಅನಂತರ ಕರ್ಫ್ಯೂ ಹೇರಲಾಯಿತು. ಕರ್ಫ್ಯೂ ವೇಳೆ ಜನಸಂಚಾರ ಇಲ್ಲದ ಸಂದರ್ಭವನ್ನೇ ಬಳಸಿಕೊಂಡು ಧ್ವಂಸಕಾರ್ಯವನ್ನು ಮುಂದುವರಿಸಿದ್ದು ಕ್ರೂರವ್ಯಂಗ್ಯವೇ ಸರಿ; ಅದಕ್ಕೆ ಬುಲ್ಡೋಜರ್ ಮತ್ತು ಫ್ಲಡ್‌ಲೈಟ್‌ಗಳನ್ನು ಕೂಡ ಬಳಸಿಕೊಳ್ಳಲಾಯಿತು. ಮುಂದುವರಿಸುವ ನಿರ್ಧಾರವು ಅತ್ಯುನ್ನತ ಮಟ್ಟದಲ್ಲೇ ಆಯಿತು; ಯಾರೂ ತಡೆಯಲು ಬರಲಿಲ್ಲ. ಈ ಕಾರ್ಯಾಚರಣೆಯ ಉದ್ದಕ್ಕೂ ಇದ್ದ ಅಧಿಕಾರಿ ಎಚ್.ಕೆ. ಲಾಲ್ ವಿರುದ್ಧ ಬಹಳಷ್ಟು ದೂರುಗಳು ಬಂದವು.

ಖಾಸಗಿ ಆಸ್ತಿಗಳನ್ನು ಧ್ವಂಸ ಮಾಡುವಾಗ ದಾಖಲೆಗಳನ್ನು ತೋರಿಸಿದರೂ ಅದಕ್ಕೆ ಬೆಲೆ ಕೊಡಲಿಲ್ಲ; ಮಾತ್ರವಲ್ಲ, ನಾನು ಸ್ವಂತ ಇಚ್ಛೆಯಿಂದ ಕಟ್ಟಡವನ್ನು ಕೆಡವಿದ್ದೇನೆ ಎಂದು ಪೊಲೀಸರ ಸಮ್ಮುಖದಲ್ಲಿ ಬರೆಯಿಸಿಕೊಳ್ಳುವುದು ಕೂಡ ನಡೆಯಿತು; ಆ ಮೂಲಕ ಪರಿಹಾರ ಕೊಡುವ ಸಂದರ್ಭವನ್ನು ಕೂಡ ತಪ್ಪಿಸಿಕೊಂಡರು. ಸ್ವಾಧೀನಪಡಿಸಿಕೊಳ್ಳುವ ಮುನ್ನವೇ ಹಲವು ಆಸ್ತಿಗಳನ್ನು ನೆಲಸಮ ಮಾಡಲಾಯಿತು.

ಹಿಂದೆ ನಿಧಾನವಾಗಿದ್ದ ಕಟ್ಟಡಗಳ ಧ್ವಂಸಕಾರ್ಯ ವೇಗಗೊಂಡದ್ದು ಹೇಗೆ ಎನ್ನುವ ಒಂದು ಪ್ರಶ್ನೆಗೆ ಉತ್ತರಿಸಿದ ಜಗಮೋಹನ್, ಅದಕ್ಕೊಂದು ಮುಖ್ಯ ಕಾರಣ ಸಂಜಯಗಾಂಧಿಯವರು ತೋರಿಸಿದ ವಿಶೇಷವಾದ ಆಸಕ್ತಿ. ಅವರ ದೃಢನಿರ್ಧಾರ, ಕಾರ್ಯಾಸಕ್ತಿ ಮತ್ತು ಉತ್ಸಾಹಗಳ ಫಲವಾಗಿ ಕೆಲಸವು ವೇಗವಾಗಿ ನಡೆಯಿತು. ಅದಲ್ಲದೆ ಆಗ ತುರ್ತುಪರಿಸ್ಥಿತಿಯಿಂದಾಗಿ ಶಿಸ್ತಿನ ವಾತಾವರಣವಿತ್ತು. ಉಪರಾಜ್ಯಪಾಲರು ಅಗತ್ಯವಾದ ಹೊಂದಾಣಿಕೆಯನ್ನು ಏರ್ಪಡಿಸಿದ್ದರು. ಅದರಿಂದಾಗಿ ಪ್ರಾಜೆಕ್ಟ್ ಬೇಗ ಮುಗಿಯಿತು. ಜಗತ್ತಿನಲ್ಲಿ ಇದಕ್ಕೆ ಸಮಾನವಾದ ಬೇರೆ ಉದಾಹರಣೆ ಇರಲಾರದು. ಕೇವಲ ಎಂಟು ತಿಂಗಳಲ್ಲಿ ಏಳು ಲಕ್ಷ ಜನರ (ಅಂದಿನ ಅಮೃತಸರದ ಜನಸಂಖ್ಯೆಯ ಎರಡು ಪಾಲು) ಪುನರ್ವಸತಿಯು ಸಾಂಗವಾಗಿ ನೆರವೇರಿತು ಎಂದು ಹೇಳಿಕೊಂಡರು.

ಎಂಸಿಡಿಯ ತಮ್ಟಾ ಮತ್ತು ಡಿಡಿಎ ಪರವಾಗಿ ಜಗಮೋಹನ್ ತಮಗೆ ವಹಿಸಿದ ಕೆಲಸವನ್ನು ನಿರ್ದಯವಾಗಿ ಮಾಡಿ ಪೂರೈಸಿದರು. ಸಂಜಯಗಾಂಧಿಯವರನ್ನು ಖುಷಿಪಡಿಸುವುದು ಅದರ ಹಿಂದಿತ್ತು. ಸಂಜಯ್ ಗುರಿ ಒಂದೇ; ಕೆಲಸ ಮಾಡಿ ಮುಗಿಸುವುದು. ಕಾನೂನು ಮತ್ತು ಆಡಳಿತದ ನಿಯಮಗಳಿಗೆ ನಿಸ್ಸೀಮ ನಿರ್ಲಕ್ಷ್ಯ. ಇದರಿಂದ ಸಂತ್ರಸ್ತರಿಗೆ ಅಪಾರ ಕಷ್ಟ-ನಷ್ಟಗಳಾದವು. ಗಂಭೀರ ಕಾನೂನು ಸಮಸ್ಯೆಗಳು ಕೂಡ ಉಂಟಾದವು. ಬಹಳಷ್ಟು ಪ್ರಕರಣಗಳಲ್ಲಿ ಕಾನೂನನ್ನು ಪಾಲಿಸಲೇ ಇಲ್ಲ. ಡಿಡಿಎ ಸುಳ್ಳು ದಾಖಲೆಗಳನ್ನು ಸೃಷ್ಟಿಸಿತು; ರಾಜಕೀಯ ಕಾರಣದಿಂದ, ಅಂದರೆ ವಿರೋಧಪಕ್ಷದವರ ಆಸ್ತಿಗಳನ್ನು ಕೂಡ ಸಾಕಷ್ಟು ನಾಶಪಡಿಸಲಾಯಿತು. ದೆಹಲಿ ಉಪರಾಜ್ಯಪಾಲರು ಡಿಡಿಎ ಅಧ್ಯಕ್ಷರಾದರೂ ಅವರನ್ನು ಅಲಕ್ಷಿಸಲಾಯಿತು. ಅವರ ಕೆಳಗಿನ ಜಗಮೋಹನ್‌ರಿಗೆ ಸಂಜಯಗಾಂಧಿ ಅವರಿಂದ ನೇರವಾಗಿ ಆದೇಶ ತಲಪುತ್ತಿತ್ತು. ಆರಾಧನಾ ಸ್ಥಳಗಳನ್ನು ಕೆಡವಲು ಉಪರಾಜ್ಯಪಾಲರ ಅನುಮತಿ ಕಡ್ಡಾಯವಿತ್ತು. ಆದರೆ ಆರ್ಯಸಮಾಜದ ದೇವಾಲಯವನ್ನು ಕೆಡಹುವಾಗ ಅವರನ್ನು ಕೇಳಲೇ ಇಲ್ಲ.

ದೇವಾಲಯ ನಾಶ

ದಾನವಾಗಿ ಬಂದ ಜಮೀನಿನಲ್ಲಿ ಆರ್ಯಸಮಾಜದವರು ೧೯೭೩ರಲ್ಲಿ ದೇವಾಲಯವನ್ನು ನಿರ್ಮಿಸಿದ್ದರು. ಕಟ್ಟಡದ ಎದುರು ಓಂ ಮತ್ತು ಆರ್ಯಸಮಾಜದ ಸೈನ್‌ಬೋರ್ಡ್‌ಗಳಿದ್ದವು. ಅಲ್ಲಿ ದಿನವೂ ಬೇರೆ ಬೇರೆ ಕಾರ್ಯಕ್ರಮಗಳು ಜರುಗುತ್ತಿದ್ದವು. ದಿ. ೨೫-೦೯-೧೯೭೫ರಂದು ಡಿಡಿಎಯವರು ಸಾಕಷ್ಟು ಪೊಲೀಸ್ ಬಲವನ್ನು ಇರಿಸಿಕೊಂಡು ದೇವಾಲಯವನ್ನು ನೆಲಸಮ ಮಾಡಿದರು. ದೇವಳದ ಕಟ್ಟಡವನ್ನು ಕೆಡವಲು ಬುಲ್ಡೋಜರ್ ಬಳಸಿದ್ದು, ಕಾರ್ಯಾಚರಣೆಯ ವೇಳೆ ಕಟ್ಟಡ ನಿರ್ಮಾಣದ ದಾಖಲೆಗಳು ಕೂಡ ನಾಶವಾದವೆಂದು ಆರ್ಯಸಮಾಜದ ಪದಾಧಿಕಾರಿಗಳು ಆರೋಪಿಸಿದರು; ಎಂದಿನಂತೆ ಮಂದಿರದ ಕಟ್ಟಡವನ್ನು ಉರುಳಿಸುವ ಬಗ್ಗೆ ಮುಂಚಿತವಾಗಿ ನೋಟೀಸ್ ನೀಡಿರಲಿಲ್ಲ. ಆ ಬಗ್ಗೆ ಪ್ರತಿಕ್ರಿಯೆ ನೀಡಿದ ಜಗಮೋಹನ್, ಆ ಜಾಗವನ್ನು ಅಭಿವೃದ್ಧಿ ಪ್ರದೇಶ (ಡೆವಲಪ್‌ಮೆಂಟ್ ಏರಿಯಾ) ಎಂದು ಘೋಷಿಸಿತ್ತು. ಆದ್ದರಿಂದ ದೆಹಲಿ ಅಭಿವೃದ್ಧಿ ಕಾಯ್ದೆಯ ಪ್ರಕಾರ ಕ್ರಮ ಜರುಗಿಸಲಾಯಿತು; ಬಿಲ್ಡಿಂಗ್ ಪ್ಲಾನ್‌ಗೆ ಅಂಗೀಕಾರ ನೀಡಿರಲಿಲ್ಲ ಎಂದು ಹೇಳಿದರು. ಇದರಲ್ಲಿ ಎಷ್ಟು ನಿಜವೋ ಎಷ್ಟು ಸುಳ್ಳೋ ಯಾರಿಗೆ ಗೊತ್ತು!

ಉತ್ತರಪ್ರದೇಶ, ಹರ‍್ಯಾಣಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಆಂಧ್ರ, ಬಿಹಾರ ಮತ್ತು ಕರ್ನಾಟಕಗಳಲ್ಲೂ ಧ್ವಂಸಕಾರ್ಯಗಳು ನಡೆದಿದ್ದವು. ಗಮನಿಸಬೇಕಾದ ಒಂದು ಅಂಶವೆಂದರೆ, ದೆಹಲಿಯ ಕೊಳೆಗೇರಿಗಳ ನಿರ್ಮೂಲನ ಮತ್ತು ನಗರದ ಸುಂದರೀಕರಣದ ವಿಷಯದಲ್ಲಿ ಸಂಜಯಗಾಂಧಿ ಅವರಿಗೆ ಅವರದೇ ಚಿಂತನೆಗಳಿದ್ದವು. ತುರ್ತುಪರಿಸ್ಥಿತಿಯನ್ನು ಬಳಸಿಕೊಂಡು ಅದನ್ನು ಕಾರ್ಯಗತಗೊಳಿಸಲು ಉದ್ಯುಕ್ತರಾದರು. ತನ್ನ ಮೇಲೆ ಸಂತ್ರಸ್ತರ ಪುನರ್ವಸತಿಯ ಹೊಣೆ ಇರುತ್ತದೆ ಎನ್ನುವ ಕಲ್ಪನೆಯೇ ಅವರಿಗೆ ಇದ್ದಂತಿಲ್ಲ. ಆತ ಯಾರಿಗೂ ಉತ್ತರದಾಯಿ ಕೂಡ ಅಲ್ಲ. ನಿರಂಕುಶವಾದ ಅಧಿಕಾರ ಮಾತ್ರ. ದೆಹಲಿಯ ಧ್ವಂಸಕಾರ್ಯದಲ್ಲಿ ಅಧಿಕಾರಿಗಳು ಪ್ರತಿದಿನ ಬೆಳಗ್ಗೆ ಅವರಿಂದ ಆದೇಶ ಪಡೆದು ಕೆಲಸ ಮಾಡುತ್ತಿದ್ದರು. ಅದಕ್ಕೆ ಆತ ಪ್ರಧಾನಿಯ ಪುತ್ರ ಎಂಬುದೇ ಕಾರಣ.

ಅತಿದೊಡ್ಡ ಅತಿರೇಕ

ಈ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಶಾ ಆಯೋಗ ದೇಶದಾದ್ಯಂತ ನಡೆದ ಉಳಿದೆಲ್ಲ ಅತಿರೇಕಗಳಿಗಿಂತ ದೆಹಲಿಯಲ್ಲಿ ನಡೆದ ಈ ಕ್ರೌರ್ಯ ಭೀಕರವಾದದ್ದು; ಇದು ಕಾನೂನುಬಾಹಿರ ಮತ್ತು ಸಂವಿಧಾನವಿರೋಧಿ ಕೃತ್ಯ. ಇಲ್ಲಿ ಒಬ್ಬ ಯುವಕ ಜನರ ಮನೆ, ವಾಣಿಜ್ಯ ಮತ್ತು ಗುಡಿಕೈಗಾರಿಕೆ ಕಟ್ಟಡಗಳನ್ನೆಲ್ಲ ನೆಲಸಮ ಮಾಡುತ್ತ ಅದರಿಂದ ಖುಷಿಪಟ್ಟದ್ದು ಕಾಣಿಸುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿ ಅದು ನಡೆಯಿತು. ಜನರ ಕಷ್ಟ ಕೇಳುವವರೇ ಇರಲಿಲ್ಲ. ಜನ ಪೂರ್ತಿ ಅಸಹಾಯರಾಗಿದ್ದರು. ನ್ಯಾಯಾಲಯಗಳ ದಾರಿ ತಪ್ಪಿಸಿದ್ದ ಕಾರಣ ಜನರಿಗೆ ಅಲ್ಲಿಂದಲೂ ಸಾಂತ್ವನ ಸಿಗಲಿಲ್ಲ. ಸ್ವಾತಂತ್ರ್ಯ ಭಾರತದ ಸಾರ್ವಜನಿಕ ಜೀವನದಲ್ಲಿ ಸಂಜಯಗಾಂಧಿಯವರು ಇಲ್ಲಿ ಮಾಡಿದಷ್ಟು ಅಧಿಕಾರ ದುರುಪಯೋಗವನ್ನು ಬೇರೆ ಯಾರೂ ಎಲ್ಲೂ ಮಾಡಿಲ್ಲ. ಇದು ಅತಿದೊಡ್ಡ ಅತಿರೇಕವಾಗಿದೆ. ಭವಿಷ್ಯದಲ್ಲಿ ದೇಶ ಮತ್ತು ಮುಂದಿನ ಜನಾಂಗವು ಸುರಕ್ಷಿತವಾಗಿ ಇರಬೇಕಿದ್ದರೆ ತುರ್ತುಪರಿಸ್ಥಿತಿ ವೇಳೆ ಸಂಜಯಗಾಂಧಿ ಅವರ ಸುತ್ತ ಇದ್ದಂತಹ ಬೇಜವಾಬ್ದಾರಿತನ, ಸರ್ವಾಧಿಕಾರ ಮತ್ತು ಅಸಾಂವಿಧಾನಿಕತೆಗಳಿಗೆ ಜನ ಅವಕಾಶ ನೀಡಬಾರದು ಎಂದು ಸಲಹೆ ನೀಡಿದೆ. ಇದಕ್ಕಿಂತ ಹೆಚ್ಚು ಹೇಳಲು ಅಸಾಧ್ಯವೇ ಸರಿ.

* * *

ಸರ್ಕಾರೀ ನೌಕರರಿಗೆ ಶಿಕ್ಷೆ

ತುರ್ತುಪರಿಸ್ಥಿತಿಯ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರೀ ನೌಕರರ ಮೇಲೆ ಕೂಡ ಸಾಕಷ್ಟು ದೌರ್ಜನ್ಯಗಳು ನಡೆದವು; ನೌಕರ-ಕಾರ್ಮಿಕ ಸಂಘಗಳಿಂದ ಅವರಿಗೆ ರಕ್ಷಣೆ ಸಾಧ್ಯವಿರಲಿಲ್ಲ. ಆಗಾಗ ಅಮಾನತು, ಉದ್ಯೋಗದಿಂದ ವಜಾಗಳ ಬೆದರಿಕೆಗಳು ಬರುತ್ತಿದ್ದವು; ಸಂಬಳವನ್ನು ತಡೆಹಿಡಿಯುತ್ತಿದ್ದರು. ಅದಕ್ಕೆ ಕುಟುಂಬಯೋಜನೆ ಶಸ್ತ್ರಕ್ರಿಯೆಗಳ ಟಾರ್ಗೆಟ್‌ನ ಒಂದೇ ಉದಾಹರಣೆ ಸಾಕು.

ತುರ್ತುಪರಿಸ್ಥಿತಿಯ ವೇಳೆ ಕೇಂದ್ರ-ರಾಜ್ಯಸರ್ಕಾರಗಳ ಒಟ್ಟು ೨೫,೯೬೨ ನೌಕರರನ್ನು ಅವಧಿಪೂರ್ವ ನಿವೃತ್ತಿಗೆ ಒಳಪಡಿಸಲಾಯಿತು; ಬೇರೆ ಯಾವುದೇ ಇಷ್ಟೊಂದು ನಿವೃತ್ತಿಯ ಶಿಕ್ಷೆಗಳು ಹಿಂದೆ ನಡೆದಿರಲಿಲ್ಲ. ಶಾ ಆಯೋಗಕ್ಕೆ ಆ ಬಗ್ಗೆ ೪,೨೩೨ ದೂರುಗಳು ಬಂದವು. ಆಯೋಗ ಅದನ್ನು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದು, ಒಟ್ಟು ೧೪,೧೮೭ ಸರ್ಕಾರೀ ನೌಕರರನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಲಾಯಿತು. ಕರ್ನಾಟಕದಲ್ಲಿ ಆಗ ೭೭೯ ಸರ್ಕಾರೀ ನೌಕರರನ್ನು ವಜಾ ಮಾಡಲಾಗಿತ್ತು.

ತುರ್ತುಪರಿಸ್ಥಿತಿಯನ್ನು ಘೋಷಿಸುತ್ತಲೇ ಆರೆಸ್ಸೆಸ್, ಜಮಾತೆ ಇಸ್ಲಾಮಿ, ಆನಂದಮಾರ್ಗ, ನಕ್ಸಲ್ (ಸಿಪಿಐ-ಎಂಎಲ್) ಸಂಘಟನೆಗಳನ್ನು ನಿಷೇಧಿಸಲಾಯಿತು. ನಿಷೇಧಿತ ಸಂಘಟನೆಗಳ ಜೊತೆ ಸಂಬಂಧ ಹೊಂದಿರುವ ಸರ್ಕಾರೀ ನೌಕರರನ್ನು ಗುರುತಿಸಿ ಕ್ರಮಕೈಗೊಳ್ಳಿ ಎಂದು ಕೇಂದ್ರಸರ್ಕಾರದಿಂದ ಎಲ್ಲ ಸಚಿವಾಲಯಗಳಿಗೆ ಸೂಚನೆ ಹೋಯಿತು; ಅದರಂತೆ ವಜಾ ಮಾಡಲಾಗುತ್ತಿತ್ತು; ಮೀಸಾ ಬಂಧಿತರನ್ನು ಕೂಡ ಸೇವೆಯಿಂದ ವಜಾಗೊಳಿಸಲಾಯಿತು. ಈ ರೀತಿಯಲ್ಲಿ ಒಟ್ಟು ೪,೫೩೪ ಸರ್ಕಾರೀ ನೌಕರರನ್ನು ವಜಾಗೊಳಿಸಿದರು. ತುರ್ತುಪರಿಸ್ಥಿತಿಯ ಅನಂತರ ಅದರಲ್ಲಿ ೧,೮೮೫ ನೌಕರರನ್ನು ವಾಪಸ್ ಸೇರಿಸಿಕೊಳ್ಳಲಾಯಿತು.

ಒಟ್ಟಿನಲ್ಲಿ ತುರ್ತುಪರಿಸ್ಥಿತಿಯ ೧೯ ತಿಂಗಳುಗಳಲ್ಲಿ ವಿವಿಧ ಹಂತದ ಸರ್ಕಾರೀ ಅಧಿಕಾರಿಗಳು ಮತ್ತು ನೌಕರರಿಂದ ಇತರರ ಹಕ್ಕುಗಳ ಬಗ್ಗೆ ತೀರಾ ಅಲಕ್ಷ್ಯ ಮತ್ತು ಏಕಪಕ್ಷೀಯ ತೀರ್ಮಾನಗಳು ನಡೆದವು. ಅದರಿಂದಾಗಿ ಜನ ಅಪಾರ ಕಷ್ಟಗಳಿಗೆ ಗುರಿಯಾದರು; ಮೀಸಾ ಅಡಿಯಲ್ಲಿ ಬಂಧನವೆಂದರೆ ಜನ ಭಯದಿಂದ ನಡುಗುವ ಪರಿಸ್ಥಿತಿ ಉಂಟಾಗಿತ್ತು.

ರಾಜಕಾರಣಿಗಳು ಮತ್ತು ಆಡಳಿತದ ಮುಖ್ಯಸ್ಥರು ಹೇಳಿದಂತೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಜನರನ್ನು, ರಾಜಕೀಯ ನಾಯಕರನ್ನು (ವಿರೋಧಪಕ್ಷದವರನ್ನು) ಬಂಧಿಸುತ್ತಹೋದರು. ಹಾಗೆ ಮೀಸಾ ಬಂಧನವು ಜನರ ಪ್ರತಿನಿಧಿಗಳಿಗೆ ಕೂಡ ಒಂದು ಪಾಠವಾಯಿತು. ಇನ್ನೊಂದು ಕರಾಳ ಕೃತ್ಯವೆಂದರೆ ತುರ್ತುಪರಿಸ್ಥಿತಿಯ ವೇಳೆ ಮುಖ್ಯವಾಗಿ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ತಿದ್ದಲಾಯಿತು. ಕೆಲವರ ಹಿತಾಸಕ್ತಿ ಅದರ ಉದ್ದೇಶವಾಗಿತ್ತು. ಮೀಸಾ ಬಂಧನದಲ್ಲಿ ಕೂಡ ಸುಳ್ಳುದಾಖಲೆಗಳ ಪ್ರಯೋಗ ನಡೆಯಿತು. ಆರ್.ಕೆ. ಧವನ್, ಜಗಮೋಹನ್, ನವೀನ್ ಚಾವ್ಲಾ ಅಂತಹ ಅಧಿಕಾರಿಗಳು ವಿಪರೀತ ಅಧಿಕಾರವನ್ನು ಹೊಂದಿದ್ದರು. ಕೆಳಹಂತದ ಹಲವು ಅಧಿಕಾರಿಗಳು ಭಾರೀ ಅಧಿಕಾರವನ್ನು ಪ್ರಯೋಗಿಸಿದರು. ಆದರೆ ಅವರಿಗೆ ಅವರ ಕೆಲಸದ ಉತ್ತರದಾಯಿತ್ವ ಮತ್ತು ಜವಾಬ್ದಾರಿಗಳು ಇರಲಿಲ್ಲ.

ಒಟ್ಟಿನಲ್ಲಿ ಕಾಂಗ್ರೆಸ್‌ನ ತುರ್ತುಪರಿಸ್ಥಿತಿ ಎಂದೂ ಮರೆಯದ ಬಹಳಷ್ಟು ಆಘಾತಕಾರಿ ನೆನಪುಗಳನ್ನು ಬಿಟ್ಟು ಹೋಯಿತು. ಮೇಲೆ ನಿರೂಪಿತವಾಗಿರುವುದು ನಿದರ್ಶನಪ್ರಾಯ ಮಾತ್ರ.

                   (ಮುಗಿಯಿತು)

ನಿಯಮ ಮೀರಿ ರಿಸರ್ವ್ ಬ್ಯಾಂಕ್ ಅಧ್ಯಕ್ಷರ ನೇಮಕ

ಬಗೆಬಗೆಯ ದೌರ್ಜನ್ಯಗಳಿಂದ ಜನತೆಯನ್ನು ಸಾವು-ನೋವುಗಳಿಗೆ ಗುರಿ ಮಾಡಿದ್ದು ೧೯೭೦ರ ದಶಕದ ತುರ್ತುಪರಿಸ್ಥಿತಿಯ ಒಂದು ಮುಖವಾದರೆ, ಅನರ್ಹರ ನೇಮಕಾತಿ, ಪದೋನ್ನತಿಗಳ ಮೂಲಕ ಉನ್ನತ ಸಂಸ್ಥೆಗಳ ಘನತೆ-ಗೌರವಗಳನ್ನು ಮಣ್ಣುಪಾಲು ಮಾಡಿದ್ದು ಇನ್ನೊಂದು ಮುಖವಾಗಿದೆ. ರಿಸರ್ವ್ ಬ್ಯಾಂಕಿನ ಅಧ್ಯಕ್ಷರ ನೇಮಕವು ಅದಕ್ಕೊಂದು ತಾಜಾ ಉದಾಹರಣೆಯಾಗಿದೆ.

ಮೇ ೧೯೭೫ರಲ್ಲಿ ಎನ್.ಸಿ. ಸೇನ್‌ಗುಪ್ತ ಅವರನ್ನು ಮೂರು ತಿಂಗಳ ಅವಧಿಗೆ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ನೇಮಿಸಿದ್ದು, ಅವರ ಅವಧಿ ಆಗಸ್ಟ್ ೧೮ಕ್ಕೆ ಮುಗಿಯುವುದಿತ್ತು. ಹಣಕಾಸು ಮಂತ್ರಿ ಸಿ. ಸುಬ್ರಹ್ಮಣ್ಯಮ್ ಅವರು ಜುಲೈ ಕೊನೆಯ ವೇಳೆಗೆ ಪ್ರಧಾನಿ ಇಂದಿರಾ ಅವರಿಗೊಂದು ರಹಸ್ಯ ಪತ್ರ ಬರೆದು ಎಂಥವರು ಗವರ್ನರ್ ಆಗಬೇಕೆಂದು ತನ್ನ ಅಭಿಪ್ರಾಯವನ್ನು ತಿಳಿಸಿದ್ದರು. ಆಗ ಮುಂದೆ ಬಂದ ಒಂದು ಹೆಸರಾದ ಎಲ್‌ಐಸಿ ಅಧ್ಯಕ್ಷ ಕೆ.ಆರ್. ಪುರಿ ಅವರ ಬಗ್ಗೆ ಅವರ ಅರ್ಹತೆಯ ಬಗ್ಗೆ ನಾನು ಎಚ್ಚರದಿಂದ ಪರಿಶೀಲಿಸಿದೆ. ಅವರೊಬ್ಬ ಸಾಮಾನ್ಯ ಪದವೀಧರ. ಅಂದರೆ ಅವರ ಶೈಕ್ಷಣಿಕ ಅರ್ಹತೆ ಸಾಲದು; ಮತ್ತು ಅವರು ಜೀವನವಿಡೀ ವಿಮಾ ಕ್ಷೇತ್ರದಲ್ಲಿ ಇದ್ದವರು. ಅಂದರೆ ಅವರ ಅನುಭವ ಕೂಡ ಸೀಮಿತಕ್ಷೇತ್ರದ್ದು. ಅದಕ್ಕೂ ಬ್ಯಾಂಕಿಂಗ್‌ಗೂ ಹಣಕಾಸು ವ್ಯವಹಾರಕ್ಕೂ ಸಂಬಂಧ ಇಲ್ಲ ಎಂದು ರಹಸ್ಯಪತ್ರದಲ್ಲಿ ಸೂಚಿಸಿದ್ದರು.

ನೇಮಕಾತಿಯ ಬಗ್ಗೆ ಪ್ರಧಾನಿ ಖಚಿತವಾಗಿ ಏನೂ ಮಾಡಲಿಲ್ಲ. ಆಗ ಸುಬ್ರಹ್ಮಣ್ಯಮ್ ಕೆ.ಆರ್. ಪುರಿ ಅವರನ್ನು ಒಂದು ವರ್ಷದ ಮಟ್ಟಿಗೆ ಗವರ್ನರ್ ಆಗಿ ನೇಮಿಸಬಹುದು. ಇದಕ್ಕೆ ಪ್ರಧಾನಿ ಸಮ್ಮತಿಸಿದ್ದಾರೆ ಎಂದು ತಿಳಿಸಿದರು. ಸುಬ್ರಹ್ಮಣ್ಯಮ್ ಶಾ ಆಯೋಗದ ಮುಂದೆ ಹೇಳಿಕೆ ನೀಡಿದ್ದು ಅದರಿಂದ ಸ್ಪಷ್ಟವಾಗುವ ಅಂಶವೆಂದರೆ, ಎಸ್. ಜಗನ್ನಾಥನ್ ಅವರ ಉತ್ತರಾಧಿಕಾರಿಯ ನೇಮಕಾತಿಯಲ್ಲಿ ಸಹಮತ ಇಲ್ಲದ ಕಾರಣ ಸೇನ್‌ಗುಪ್ತ ಅವರನ್ನು ಮೂರು ತಿಂಗಳ ಅವಧಿಗೆ ನೇಮಿಸಲಾಗಿತ್ತು. ಆಗ ಸುಬ್ರಹ್ಮಣ್ಯಮ್ ಅವರಿಗೆ ಪುರಿ ಅವರ ಹೆಸರನ್ನು ತಿಳಿಸಲಾಯಿತು. ಅದಕ್ಕೆ ಅವರ ಒಪ್ಪಿಗೆ ಇರಲಿಲ್ಲ. ಅಷ್ಟು ದೊಡ್ಡ ಹುದ್ದೆಗೆ ಪುರಿ ಅರ್ಹರಲ್ಲ ಎಂಬುದವರ ತೀರ್ಮಾನವಾಗಿತ್ತು. ರಿಸರ್ವ್ ಬ್ಯಾಂಕ್ ನಿರ್ವಹಿಸಬೇಕಾದ ವಿಶಾಲ ಕ್ಷೇತ್ರಗಳ ಹಿನ್ನೆಲೆಯಲ್ಲಿ ಪುರಿ ಅದಕ್ಕೆ ಅರ್ಹರಲ್ಲ ಎಂದವರು ಸ್ಪಷ್ಟವಾಗಿಯೇ ಹೇಳಿದ್ದರು. ಎಲ್‌ಐಸಿಯ ಅವರ ಅನುಭವದ ಬಗ್ಗೆ ತಕರಾರಿಲ್ಲ; ರಿಸರ್ವ್ ಬ್ಯಾಂಕಿಗೆ ಅದು ಸಾಕೇ ಎಂಬುದೇ ಪ್ರಶ್ನೆ – ಎಂದಿದ್ದರು.

ಈ ಕುರಿತು ಸಿ. ಸುಬ್ರಹ್ಮಣ್ಯಮ್ ಪ್ರಧಾನಿ ಇಂದಿರಾ ಅವರಲ್ಲಿ ಬಹಳಷ್ಟು ಚರ್ಚಿಸಿ ತನ್ನ ಅಭಿಪ್ರಾಯವನ್ನು ಮಂಡಿಸಿದರು. ಆದರೆ ಇಂದಿರಾಗಾಂಧಿ ಹುದ್ದೆಗೆ ಕೆ.ಆರ್. ಪುರಿ ಸಮರ್ಥರಾಗುತ್ತಾರೆ; ಅವರನ್ನೇ ನೇಮಿಸಿ ಎಂದು ತಮ್ಮ ಅಭಿಪ್ರಾಯವನ್ನು ಹೇರಿದರಂತೆ. ಪುರಿ ಅವರ ನೇಮಕಾತಿಯ ಅವಧಿ ಒಂದು ವರ್ಷ ಇತ್ತು. ಸಾಮಾನ್ಯವಾಗಿ ಹಾಗೆ ಮಾಡುವುದಿಲ್ಲ. ನನ್ನ ಆಕ್ಷೇಪದ ಹಿನ್ನೆಲೆಯಲ್ಲಿ ಆತನ ಕೆಲಸದ ರೀತಿಯನ್ನು ನೋಡೋಣ ಎಂದು ಹಾಗೆ ಮಾಡಿರಬಹುದು ಎಂದು ಶಾ ಆಯೋಗಕ್ಕೆ ಸುಬ್ರಹ್ಮಣ್ಯಮ್ ತಿಳಿಸಿದರು. ಒಂದು ವರ್ಷ ಮುಗಿದಾಗ ಮತ್ತೆ ಎರಡು ವರ್ಷಕ್ಕೆ ಮುಂದುವರಿಸಿದರು. ಆ ಬಗ್ಗೆ ಇಂದಿರಾ ಯಾವುದೇ ಹೇಳಿಕೆ ನೀಡಲಿಲ್ಲ. ಒಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ನೇಮಕಾತಿಯಲ್ಲಿ ಹಿಂದೆ ಇದ್ದ ವಿಧಾನವನ್ನು ಪ್ರಧಾನಿ ಮುರಿದಿದ್ದರು.

ತುರ್ತುಪರಿಸ್ಥಿತಿಯ ವೇಳೆ ಈ ರೀತಿ ಹಲವು ನೇಮಕಾತಿಗಳು ನಡೆದವು. ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಕೂಡ ತಮಗೆ ಬೇಕಾದವರನ್ನು ಅಧ್ಯಕ್ಷರಾಗಿ ನೇಮಿಸಿದರು.

ಧೀರೇಂದ್ರ ಬ್ರಹ್ಮಚಾರಿ ವಿಮಾನ ಆಮದು

ಪ್ರಧಾನಿ ಇಂದಿರಾಗಾಂಧಿಯವರ ಅತ್ಯಾಪ್ತರಲ್ಲಿ ಒಬ್ಬರಾದ ಅಪರ್ಣ ಆಶ್ರಮದ ಸ್ವಾಮಿ ಧೀರೇಂದ್ರ ಬ್ರಹ್ಮಚಾರಿಯವರು ಪ್ರಚಲಿತ ನಿಯಮಗಳನ್ನು ಉಲ್ಲಂಘಿಸಿ ಒಂದು ವಿಮಾನವನ್ನು (ಹೆಲಿಕಾಪ್ಟರ್) ಆಮದು ಮಾಡಿಕೊಂಡದ್ದು ಶಾ ಆಯೋಗದ ವಿಚಾರಣೆಗೆ ಗುರಿಯಾಯಿತು. ಧೀರೇಂದ್ರ ಬ್ರಹ್ಮಚಾರಿಯವರು ಆಗ ವಿದೇಶಕ್ಕೆ (ನ್ಯೂಯಾರ್ಕ್) ಪ್ರವಾಸ ಮಾಡಿದ್ದರಲ್ಲೇ ತಪ್ಪುಗಳು ನಡೆದಿದ್ದವು. ನಿಜವೆಂದರೆ ಆ ವಿಮಾನ ಖರೀದಿಸಿದ್ದಾಗಿತ್ತು. ಆದರೆ ಸ್ವಾಮಿ ಅದು ದಾನವಾಗಿ ಬಂದದ್ದು ಎಂದು ಹೇಳುವ ಮೂಲಕ ಕಸ್ಟಮ್ಸ್‌ನಿಂದ ಅನುಮತಿ ಪಡೆದರು. ಆಮದು-ರಫ್ತು ಕಚೇರಿಯಲ್ಲಿ ಸಿಸಿಪಿಯ ಮೌಲ್ಯವನ್ನು ಏರಿಸುವಲ್ಲಿ ಕೂಡ ಆತ ಸುಳ್ಳು ಹೇಳಿದರೆಂದು ಆರೋಪಿಸಲಾಗಿದೆ; ಅವರು ಅದನ್ನು ರೂ. ೪ ಲಕ್ಷದಿಂದ ೬.೧೪ ಲಕ್ಷಕ್ಕೆ ಏರಿಸಿದ್ದರು. ಆದರೆ ೬.೧೪ ಲಕ್ಷ ರೂ. ಮೌಲ್ಯದ ಹೆಲಿಕಾಪ್ಟರನ್ನು ಅವರಿಗೆ ದಾನವಾಗಿ ನೀಡಿದ್ದಕ್ಕೆ ಸಾಕ್ಷ್ಯಗಳು ಇರಲಿಲ್ಲ. ಪ್ರಧಾನಿ ನಿವಾಸದೊಂದಿಗೆ ತನಗಿದ್ದ ಒಡನಾಟವನ್ನು ಆತ ಪೂರ್ತಿಯಾಗಿ ದುರುಪಯೋಗಪಡಿಸಿಕೊಂಡಿದ್ದರು.

ಸಂವಿಧಾನ ತಿದ್ದುಪಡಿಗಳ ಬಗ್ಗೆ ವಿಚಾರಗೋಷ್ಠಿ

ಬೆಂಗಳೂರಿನ ಗಾಂಧಿಭವನದಲ್ಲಿ ತಾ.೧೫-೫-೧೯೭೬ರಂದು ರಾಜ್ಯ ನಾಗರಿಕ ಸಮಿತಿಯ ಆಶ್ರಯದಲ್ಲಿ ಉದ್ದೇಶಿತ ಸಂವಿಧಾನ ತಿದ್ದುಪಡಿಗಳನ್ನು ಕುರಿತು ವಿಚಾರಗೋಷ್ಠಿ ನಡೆಯಿತು. ಹೈಕೋರ್ಟಿನ ಮಾಜಿ ನ್ಯಾಯಾಧೀಶ ಟಿ.ಕೆ. ತುಕೋಳ್ ಅಧ್ಯಕ್ಷತೆಯಲ್ಲಿ ೫ ಗಂಟೆಗಳಿಗೂ ಮೀರಿ ಸಭೆ ನಡೆಯಿತು. ಸಂಯೋಜಕರಲ್ಲೊಬ್ಬರಾದ ಮಾಜಿ ಸಂಸತ್ಸದಸ್ಯ ಶ್ರೀರಾಮರೆಡ್ಡಿ ಅವರು ಸ್ವಾಗತಿಸಿದರು.

ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶ ಕೆ.ಎಸ್. ಹೆಗ್ಡೆ, ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ವೀರೇಂದ್ರಪಾಟೀಲ್, ಪ್ರಮುಖ ನ್ಯಾಯವಾದಿಗಳಾದ ಎಸ್.ಕೆ. ವೆಂಕಟರಂಗ ಅಯ್ಯಂಗಾರ್, ಶ್ರೀಮತಿ ಪ್ರಮೀಳಾ, ಸಮಾಜವಾದಿ ಪಕ್ಷದ ಕೆ.ಎನ್. ಮಹೇಶ್ವರಪ್ಪ, ಮಾಜಿ ವಿಜಿಲೆನ್ಸ್ ಕಮಿಷನರ್ ಮೀರ್ ಇಕ್ಬಾಲ್ ಹುಸೇನ್, ಡಾ|| ಎಚ್.ಎಲ್. ತಿಮ್ಮೇಗೌಡ ಮುಂತಾದವರು ಮಾತನಾಡಿದರು. ಶಾಸಕ ಕೋಣಂದೂರು ಲಿಂಗಪ್ಪ, ಟಿ.ಆರ್. ಶಾಮಣ್ಣ, ಖ್ಯಾತ ಕವಿ ಗೋಪಾಲಕೃಷ್ಣ ಅಡಿಗ ಮುಂತಾದ ಹೋರಾಟಗಾರರೂ, ವಿಚಾರವಂತರೂ ಸಭೆಯಲ್ಲಿ ಹಾಜರಿದ್ದು ಸಭಾಭವನ ಕಿಕ್ಕಿರಿದು ತುಂಬಿತ್ತು.

ಸಂವಿಧಾನಕ್ಕೆ ದೂರಗಾಮಿ ತಿದ್ದುಪಡಿಗಳನ್ನು ತರಲು ಪ್ರಸ್ತುತ ಸಂಸತ್ತಿಗೆ ಜನರು ಅಧಿಕಾರ ನೀಡಿಲ್ಲವಾದ್ದರಿಂದ ಅಂಥ ತಿದ್ದುಪಡಿಗಳಿಗೆ ಚುನಾವಣೆಯ ನಂತರವೇ ಕೈಹಾಕಬೇಕೆಂದು ಸಭೆ ತೀರ್ಮಾನಿಸಿತು. ಈಗಿನ ಸ್ಥಿತಿಯಲ್ಲಿ ಈ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ಸಾಧ್ಯವಿಲ್ಲ. ಮಾಮೂಲು ಪರಿಸ್ಥಿತಿ ಬಂದಾಗಲೇ ಅದು ಸಾಧ್ಯ. ಈಗ ರಚಿತವಾಗಿರುವ ಸ್ವರ್ಣಸಿಂಗ್ ಸಮಿತಿ ಕೇವಲ ಆಡಳಿತ ಪಕ್ಷದ ಸೃಷ್ಟಿಯಾಗಿದ್ದು ಎಲ್ಲಾ ಪಕ್ಷ, ಅಭಿಪ್ರಾಯಗಳ ವಿಶಾಲ ವ್ಯಾಪ್ತಿಯ ಸಮಿತಿಯೊಂದು ರಚಿತವಾಗುವುದು ಅತ್ಯಗತ್ಯ ಎಂಬ ಇತರ ಮಹತ್ತ್ವದ ನಿರ್ಣಯಗಳನ್ನು ಸ್ವೀಕರಿಸಲಾಯಿತು. ಗೋಷ್ಠಿಗೆ ಪ್ರಾಂತದ ಇತರ ಭಾಗಗಳಿಂದಲೂ ವಿಚಾರವಂತರೂ, ನ್ಯಾಯವಾದಿಗಳೂ ಆಗಮಿಸಿದ್ದರು. ಈಗಿನ ಭಯದ ವಾತಾವರಣದಲ್ಲೂ ಇಲ್ಲಿ ನಡೆದ ಮುಕ್ತ ಚರ್ಚೆಯಿಂದ ಇತರೆಡೆಗಳಲ್ಲೂ ಇಂಥ ಕಾರ್ಯಕ್ರಮಗಳನ್ನು ನಡೆಸಲು ಪ್ರೇರಣೆ ಸಿಕ್ಕಿದಂತಾಗಿದೆ. ದಮನ ದಬ್ಬಾಳಿಕೆಯಿಂದ ಜನಮನವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಈ ವಿಚಾರಗೋಷ್ಠಿ ತೋರಿಸಿಕೊಟ್ಟಿದೆ.

       -ಕಹಳೆಯಿಂದ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ