ಕ್ಷಮಿಸುವುದನ್ನು ಕಲಿಯಲೇಬೇಕಾಗುತ್ತದೆ, ಅವರು ಕ್ಷಮೆಗೆ ಅರ್ಹರೆಂದಲ್ಲ, ಆದರೆ ನಿಮ್ಮ ಮನಸ್ಸು ಹಗುರವಾಗಿ, ಆರೋಗ್ಯಕರವಾಗಿರುವುದಕ್ಕೆ ಅದು ಸಹಕಾರಿ ಎಂಬ ಉದಾತ್ತ ಮಾತುಗಳನ್ನಾಡಿದ ಚಿಂತಕರು ಅನೇಕರು ಇರಬಹುದು. ಆದರೆ ನೋವುಂಡಷ್ಟೂ ಸಲ ಕ್ಷಮಿಸಿ ಸುಮ್ಮನಾಗುವುದು ದೌರ್ಬಲ್ಯವೆಂಬ ಅಪಾರ್ಥಕ್ಕೀಡಾಗುವ ಸಾಧ್ಯತೆಯೂ ಇದೆಯಲ್ಲವೆ? ಅದರರ್ಥ ಮಾತುಮಾತಿಗೂ ಎದುರಾಡಬೇಕೆಂದಲ್ಲ, ಚಿಕ್ಕಪುಟ್ಟದಕ್ಕೆಲ್ಲ ಜಗಳಾಡಬೇಕೆಂದಲ್ಲ. ಆದರೆ ಪ್ರತಿಭಟನೆಯ ಒಂದು ಸಣ್ಣವರ್ತನೆಯನ್ನಾದರೂ ತೋರದೆ ಹೋದರೆ ಮನೆಮಂದಿಯೆಲ್ಲರೂ ಅವಳನ್ನು ಅವಳು ಹಸುವಿನಂಥವಳು… ಸಿಟ್ಟು ಮಾಡಿಕೊಳ್ಳುವುದಿಲ್ಲ ಎಂದು ಸುಲಭವಾಗಿ, ಹಗುರವಾಗಿ ಪರಿಗಣಿಸುವುದೇ ಹೆಚ್ಚು. ಪದೇ ಪದೇ ಇದೇ ರೀತಿ ತನ್ನ ಭಾವನೆಗಳಿಗೆ ಗೌರವವಿಲ್ಲದಂತಾದಾಗ ಅವಳು ಮೌನಕ್ಕೆ ಸಂದುಹೋದಾಳು, ಇಲ್ಲವೇ ಖಿನ್ನತೆಗೆ ಜಾರಿಯಾಳು.
ದ ಗ್ರೇಟ್ ಇಂಡಿಯನ್ ಕಿಚನ್ ಎಂಬ ಸಿನೆಮಾ ಬಹುಶಃ ಕಳೆದ ಎರಡು ವರ್ಷಗಳಲ್ಲಿ ಅನೇಕ ಮನಸ್ಸುಗಳನ್ನು ತಟ್ಟಿದ ಸಿನೆಮಾ. ಸಾಂಪ್ರದಾಯಿಕ ಮನೆಗಳಲ್ಲಿ ಮನೆಯ ಗೃಹಿಣಿ ಅನುಭವಿಸುವ ಒತ್ತಡವನ್ನು ಬಲುಸ್ಪಷ್ಟವಾಗಿ ಹೇಳುವ ಪ್ರಯತ್ನ ಇದರಲ್ಲಿದೆ. ಹಿರಿಯರೇ ನೋಡಿ ಒಪ್ಪಿ ಮಾಡಿದ ಮದುವೆಯಲ್ಲಿ ಪತಿ-ಪತ್ನಿಯರ ನಡುವೆ ಆತ್ಮೀಯತೆಯ ಎಳೆಯೊಂದು ಬೆಸೆದುಕೊಳ್ಳುವ ಮೊದಲೇ ನವವಿವಾಹಿತೆಗೆ ಬದುಕಿನ ಬಗೆಗೆ ಅಸಹನೆ ಮೂಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸ್ವಲ್ಪಮಟ್ಟಿಗೆ ಆಧುನಿಕತೆಯ ಬದುಕಿನಿಂದ ಬಂದ ಹುಡುಗಿಗೆ ಗಂಡನ ಮನೆಯ ಸಾಂಪ್ರದಾಯಿಕ ವಾತಾವರಣಕ್ಕೆ ಒಗ್ಗಿಕೊಳ್ಳುವುದು ಕಷ್ಟವೇ ಆಗುತ್ತದಾದರೂ ಬದುಕನ್ನು ಒಂದು ಆದರ್ಶವಾಗಿ ಕಾಣುವ ಹುಮ್ಮಸ್ಸಿನಲ್ಲಿ ಆರಂಭದಲ್ಲಿ ಅವಳು ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ಹೊಸ ಪರಿಸರಕ್ಕೆ ಒಗ್ಗಿಕೊಳ್ಳುವ ಭರದಲ್ಲಿ ತನ್ನ ಆಸೆ ಆಸಕ್ತಿಗಳನ್ನು ಹೇಳಿಕೊಳ್ಳುವುದಕ್ಕೆ ಅವಳಿಗೆ ಅವಕಾಶವೇ ಒದಗುವುದಿಲ್ಲ. ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗುವುದಕ್ಕೆ ಅರ್ಜಿ ಹಾಕುವುದಕ್ಕೆ ಬಯಸಿದರೂ ಅದು ಈಡೇರುವುದಿಲ್ಲ. ಸದಾ ಅಡುಗೆಮನೆಯ ಕೆಲಸಗಳ ಒತ್ತಡದಲ್ಲಿ ಅವಳು ಹೇಗೆ ಹೈರಾಣಾಗುತ್ತಾಳೆ ಎಂಬುದು ಇಲ್ಲಿಯ ಮುಖ್ಯ ಕಥಾನಕ. ಜತೆಗೆ ಸದಾ ಕಟ್ಟಿಕೊಳ್ಳುವ ಅಡುಗೆಮನೆಯ ಸಿಂಕು ಅದರಲ್ಲೊಂದು ರೂಪಕ. ಅವಳು ಸರಿಪಡಿಸಲು ಯತ್ನಿಸಿದಷ್ಟೂ ಅದು ಕೆಡುತ್ತಲೇಹೋಗುತ್ತದೆ. ತನ್ನ ತಪ್ಪೇ ಇಲ್ಲದಿದ್ದರೂ, (ಸಾರಿ ಕೇಳಬೇಕಾದವನು ಗಂಡನೇ ಆಗಿದ್ದರೂ) ಪದೇಪದೇ ಸಾರಿ ಕೇಳುವ ಸ್ಥಿತಿ ಬಂದರೂ ಬದುಕನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅವಳು ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ಆದರೆ ಎಲ್ಲ ಸಹನೆಗೂ ಮಿತಿಯೊಂದಿದೆಯಲ್ಲ? ಬದುಕು ಮುರಿಯುತ್ತದೆ. ಅವಳು ಒಂಟಿಯಾಗಿಯೇ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮುಂದುವರಿಸಿದರೆ ಅವನು ಹೊಸಹುಡುಗಿಯನ್ನು ಹುಡುಕಿ ಮರುಮದುವೆ ಮಾಡಿಕೊಳ್ಳುವಲ್ಲಿಗೆ ಸಿನೆಮಾ ಮುಗಿಯುತ್ತದೆ. ಅದರಲ್ಲಿ ಪರಿಸ್ಥಿತಿಯ ಯಥಾವತ್ ಅನಾವರಣ ಇದೆಯೇ ಹೊರತು, ಅದಕ್ಕೆ ಪರಿಹಾರವನ್ನು ಸೂಚಿಸುವ ಯಾವ ಸಾಹಸವನ್ನೂ ನಿರ್ದೇಶಕರು ಮಾಡುವುದಿಲ್ಲ.
ಇದೇ ರೀತಿಯಲ್ಲಿ ಥಪ್ಪಡ್ ಎಂಬ ಹಿಂದಿ ಸಿನೆಮಾವೊಂದಿದೆ. ಪಾರ್ಟಿಯಲ್ಲಿ ಎಲ್ಲರ ಮುಂದೆ ತನ್ನ ಕೆನ್ನೆಗೆ ಹೊಡೆಯುವ ಗಂಡನ ನಡೆ ಅವಳಿಗೆ ಅತ್ಯಂತ ಆಘಾತವನ್ನು ತಂದಿರುತ್ತದೆ. ರಾತ್ರಿಯೆಲ್ಲ ಮಲಗಲಾಗದೆ ಒದ್ದಾಡಿ ಅವಳು ಮನಃಶಾಂತಿಗಾಗಿ ತನ್ನ ತವರಿಗೆ ಹೊರಟರೂ ಅತ್ತೆಯಾಗಲಿ, ಗಂಡನಾಗಲಿ ಯಾವುದೇ ಪಶ್ಚಾತ್ತಾಪ ತೋರುವುದಿಲ್ಲ. ಆದರ್ಶ ಪತ್ನಿಯಾಗುವ ಭರದಲ್ಲಿ ತನ್ನ ಕೆರಿಯರ್ನ್ನು ಬದಿಗೊತ್ತಿ ಮನೆಯಲ್ಲಿ ಗಂಡನಿಗೆ ಬೇಕುಬೇಕಾದಂತೆ ಅಡುಗೆ ಮಾಡಿಕೊಡುವಲ್ಲಿಂದ ತೊಡಗಿ ಕಾಯಿಲೆಯಿಂದ ಬಳಲುವ ಅತ್ತೆಯ ಆರೈಕೆಯನ್ನು ಅಚ್ಚುಕಟ್ಟಾಗಿ ಮಾಡುವ ಅವಳು ತನಗೇ ಅರಿವಿಲ್ಲದೆ ಟೇಕನ್ ಫಾರ್ ಗ್ರಾಂಟೆಡ್ ಆಗುವುದು ಅವಳಿಗೆ ಗೊತ್ತೇ ಆಗಿರುವುದಿಲ್ಲ. ಎಲ್ಲರ ಮುಂದೆ ಹೊಡೆದಿದ್ದರೂ ಅವನು ಮಾಡಿದ್ದು ತಪ್ಪು ಎಂದು ಹೇಳದ ಅತ್ತೆಯ ಮೌನ ಅವಳನ್ನು ಬಲುವಾಗಿ ನೋಯಿಸುತ್ತದೆ. ಮುಂದೆ ವಿಚ್ಛೇದನಕ್ಕೆ ಅರ್ಜಿ ಮಾಡಬೇಕಾದ ಸ್ಥಿತಿಯಲ್ಲಿಯೂ ಅವಳು ಒಂದು ದಿನ ಅತ್ತೆಯನ್ನು ಕಂಡು ಉಪಚರಿಸಿ ತನ್ನ ಪ್ರಶ್ನೆಗಳನ್ನೆಲ್ಲ ಅವಳ ಮುಂದಿಡುತ್ತಾಳೆ. ಆದರೆ ಉತ್ತರ ಸಿಗುವುದಿಲ್ಲ. ವಿಚ್ಛೇದನ ದೊರೆಯುವ ದಿನ ತನ್ನ ಬದುಕಿನ ತಪ್ಪನ್ನು ಮನವರಿಕೆ ಮಾಡಿಕೊಳ್ಳುವ ಅವಳ ಗಂಡ ಅವಳಲ್ಲಿ ಕಡೆಯ ಪಕ್ಷ ನನ್ನ ತಪ್ಪಿಗೆ ನಾನು ಕ್ಷಮೆ ಯಾಚಿಸಬೇಕಿತ್ತು ಎಂಬುದು ನನಗೆ ಅರ್ಥವೇ ಆಗಲಿಲ್ಲ. ಈಗ ಕೇಳುತ್ತೇನೆ, ಕ್ಷಮಿಸುತ್ತೀಯಾ? ಎನ್ನುತ್ತಾನೆ. ಆದರೆ ಅಷ್ಟರಲ್ಲಿ ಬಹಳ ತಡವಾಗಿರುತ್ತದೆ.
ಸುತ್ತಲೂ ಗಮನಿಸಿ ನೋಡಿದರೆ ನಮ್ಮ ಸುತ್ತಮುತ್ತಲೂ ಇಂಥ ಅನೇಕ ಸೂಕ್ಷ್ಮ ಸಂಗತಿಗಳು ನಡೆಯುತ್ತಿರುತ್ತವೆ. ಮನಃಪೂರ್ವಕವಾಗಿ ಕ್ಷಮೆ ಕೇಳುವುದರಿಂದ ಒಂದು ಚೆಂದದ ಬಂಧ ಉಳಿಯಬಲ್ಲುದಾದರೆ ಅದನ್ನು ಕೇಳುವುದರಲ್ಲಿ ತಪ್ಪೇನಿದೆ? ಆದರೆ ಅದಕ್ಕೆ ಅಡ್ಡಲಾಗಿ ಬರುವುದು ನಮ್ಮ ಇಗೋ, ಅರ್ಥಾತ್ ಅಹಂ. ಬಹುಶಃ ಅದನ್ನು ಮೀರಿನಿಲ್ಲುವುದಕ್ಕೆ ನಾವೆಷ್ಟು ಪ್ರಯತ್ನಪಟ್ಟರೂ ಸಾಲದು. ಗಂಡಹೆಂಡಿರ ನಡುವೆ ಇದೆಂಥ ಔಪಚಾರಿಕತೆ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಬಹುದು. ನಮ್ಮ ಪೂರ್ವಜರೂ ಹೀಗೇ ಇದ್ದರೇ? ಗಂಡ ಹೊಡೆದರೂ ಬಡಿದರೂ ಅವಾಚ್ಯ ಪದಗಳಿಂದ ನಿಂದಿಸಿದರೂ ಉಂಡು ಮಲಗುವ ತನಕ ಎಂದು ಬಾಳಿಲ್ಲವೇ ಎಂದು ಕೇಳುವವರೂ ಅನೇಕ ಮಂದಿ ಇರಬಹುದು. ಆದರೆ ಬೇರೆಲ್ಲ ವಿಷಯಗಳಿಗೆ ಬಂದಾಗಲೂ ಹೊಸತನವನ್ನು ಅವುಚಿಕೊಳ್ಳುವ ನಾವು ಮನೆಯೊಳಗಿನ ಬಂಧಗಳ ಬಗ್ಗೆ ಬಂದಾಗ ಮಾತ್ರ ಹಳೆಯ ಪದ್ಧತಿಗಳನ್ನು ಅನುಸರಿಸುವಲ್ಲಿ ಇನ್ನಿಲ್ಲದ ಉತ್ಸಾಹ ತೋರುತ್ತೇವೆ. ಕಡೆಗೆ ಕ್ಷುಲ್ಲಕ ಕಾರಣಗಳು ಎಂದು ಮೂರನೆಯವರಿಗೆ ಅನ್ನಿಸಬಹುದಾದ ಯಾವುದೋ ಸಣ್ಣ ವಿಚಾರಕ್ಕೆ ವಿಚ್ಛೇದನ ಬಯಸಿದಳಂತೆ ಎಂದು ಹೆಣ್ಣನ್ನು ನಿಂದಿಸುವಾಗಲೂ ಅವಳ ನಿರ್ಧಾರಕ್ಕೆ ಕೇವಲ ಅದೊಂದೇ ಕಾರಣವಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲಾರೆವು. ಸಹನೆಯ ಕಟ್ಟೆ ಒಡೆಯುವುದಕ್ಕೆ ಮನದೊಳಗೆ ತುಂಬಿಕೊಂಡ ನೂರಾರು ನೋವಿನ ಬುಲೆಟ್ಟುಗಳು ಕಾರಣವಾಗಿರುತ್ತವೆ ಹೊರತು ಒಂದೇ ಒಂದು ಘಟನೆಯಲ್ಲ.
ಕ್ಷಮಿಸುವುದನ್ನು ಕಲಿಯಲೇಬೇಕಾಗುತ್ತದೆ, ಅವರು ಕ್ಷಮೆಗೆ ಅರ್ಹರೆಂದಲ್ಲ, ಆದರೆ ನಿಮ್ಮ ಮನಸ್ಸು ಹಗುರವಾಗಿ, ಆರೋಗ್ಯಕರವಾಗಿರುವುದಕ್ಕೆ ಅದು ಸಹಕಾರಿ ಎಂಬ ಉದಾತ್ತ ಮಾತುಗಳನ್ನಾಡಿದ ಚಿಂತಕರು ಅನೇಕರು ಇರಬಹುದು. ಆದರೆ ನೋವುಂಡಷ್ಟೂ ಸಲ ಕ್ಷಮಿಸಿ ಸುಮ್ಮನಾಗುವುದು ದೌರ್ಬಲ್ಯವೆಂಬ ಅಪಾರ್ಥಕ್ಕೀಡಾಗುವ ಸಾಧ್ಯತೆಯೂ ಇದೆಯಲ್ಲವೆ? ಅದರರ್ಥ ಮಾತುಮಾತಿಗೂ ಎದುರಾಡಬೇಕೆಂದಲ್ಲ, ಚಿಕ್ಕಪುಟ್ಟದಕ್ಕೆಲ್ಲ ಜಗಳಾಡಬೇಕೆಂದಲ್ಲ. ಆದರೆ ಪ್ರತಿಭಟನೆಯ ಒಂದು ಸಣ್ಣವರ್ತನೆಯನ್ನಾದರೂ ತೋರದೆ ಹೋದರೆ ಮನೆಮಂದಿಯೆಲ್ಲರೂ ಅವಳನ್ನು ಅವಳು ಹಸುವಿನಂಥವಳು… ಸಿಟ್ಟು ಮಾಡಿಕೊಳ್ಳುವುದಿಲ್ಲ ಎಂದು ಸುಲಭವಾಗಿ, ಹಗುರವಾಗಿ ಪರಿಗಣಿಸುವುದೇ ಹೆಚ್ಚು. ಪದೇ ಪದೇ ಇದೇ ರೀತಿ ತನ್ನ ಭಾವನೆಗಳಿಗೆ ಗೌರವವಿಲ್ಲದಂತಾದಾಗ ಅವಳು ಮೌನಕ್ಕೆ ಸಂದುಹೋದಾಳು, ಇಲ್ಲವೇ ಖಿನ್ನತೆಗೆ ಜಾರಿಯಾಳು. ಆದರೆ ಇಂದಿನ ದಿನಗಳಲ್ಲಿ ಒತ್ತಡವೆಂಬುದು ಮಕ್ಕಳನ್ನೂ ಬಿಡದಂತೆ ಬಾಧಿಸುತ್ತಿರುವುದರಿಂದ ಅವಳ ನೋವನ್ನು ಗಮನಿಸುವ ಮನಃಸ್ಥಿತಿಯಲ್ಲಿ ಮಕ್ಕಳೂ ಇರಲಾರರು. ಮುಂದೊಂದು ದಿನ ಗಂಧದ ಕೊರಡಿನಂತೆ ತನ್ನ ಬದುಕನ್ನು ತೇದದ್ದು ಯಾರಿಗಾಗಿ ಎಂಬ ಪ್ರಶ್ನೆ ಅವಳ ಅಂತರಂಗದಲ್ಲಿ ಹುಟ್ಟಿಕೊಳ್ಳುತ್ತದೆ. ಸಿಕ್ಕಸಿಕ್ಕದ್ದಕ್ಕೆಲ್ಲ ಅತಿಯಾಗಿ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾಳೆ.
ತೆಲುಗು ಸಿನೆಮಾವೊಂದರಲ್ಲಿ (ಹೆಸರು ನೆನಪಿಲ್ಲ) ಬಹಳ ಕಾಲದಿಂದ ತನ್ನ ಗಂಡ ಅವನ ಮಹಿಳಾ ಸಹೋದ್ಯೋಗಿಯೊಂದಿಗೆ ಸಲುಗೆ ಹೊಂದಿದ್ದ ಎಂಬ ವಿಷಯ ಅವನ ಪತ್ನಿಗೆ ತಿಳಿದಾಗ ಅವಳು ತಳಮಳಿಸುತ್ತಾಳೆ. ಆದರೆ ಅಳುವುದಿಲ್ಲ. ಎಲ್ಲ ರೀತಿಯಿಂದಲೂ ಗಂಡನಿಗೆ ತಾನು ತಕ್ಕವಳೆನ್ನಿಸಬೇಕೆಂಬ ಆದರ್ಶವನ್ನು ನೆಚ್ಚಿಕೊಂಡ ಆಕೆ ಬದುಕಲ್ಲಿ ಸಣ್ಣಪುಟ್ಟ ಸಂತೋಷಗಳೆಲ್ಲವನ್ನೂ ತ್ಯಾಗಮಾಡಿರುತ್ತಾಳೆ. ಆದರೆ ಗಂಡನಿಗೆ ಅದೇ ನುಂಗಲಾರದ ತುತ್ತಾಗಿರುತ್ತದೆ. ಅವನಿಗೆ ಅವನಿಗಿಂತ ಒಂದು ಹಂತ ಕೆಳಗೆ ಇರುವಂಥವಳು ಇಷ್ಟವಾದಷ್ಟು ತನ್ನ ಹೆಗಲೆಣೆಯಾದವಳು ಸಹ್ಯವೆನ್ನಿಸುವುದಿಲ್ಲ. ಹೊರಜಗತ್ತಿಗೆ ಅನ್ಯೋನ್ಯವೆನಿಸುವಂತೆ ಬಾಳಿದರೂ ಅವರ ನಡುವೆ ಆತ್ಮೀಯತೆಯ ತಂತು ಎಂದೋ ಕಡಿದು ಹೋಗಿರುತ್ತದೆ. ಮನೆಯ ಇನ್ನೋರ್ವ ಸದಸ್ಯನ ಕಾರಣದಿಂದ ಮಗುವಿದ್ದಾಗಲೇ ಈ ತಂದೆತಾಯಿಯಿಂದ ದೂರವಾದ ಮಗು ಮುಂದೆ ದೊಡ್ಡವನಾಗಿ ಅವರದ್ದೇ ಕಂಪೆನಿಯಲ್ಲಿ ಕೆಲಸಕ್ಕೆ ಬಂದಾಗ ಅವನ ಮೂಲಕವಾಗಿ ಒಂದೊಂದೇ ಸತ್ಯಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ತನ್ನ ವಿವಾಹೇತರ ಸಂಬಂಧದ ಕುರಿತು ಪತ್ನಿಗೆ ತಿಳಿಯಿತೆಂದಾಗಲೂ ಅವನು ತನ್ನನ್ನು ಸಮರ್ಥಿಸಿಕೊಳ್ಳುತ್ತಾನೆಯೇ ಹೊರತು, ತಪ್ಪಿತಸ್ಥ ಭಾವ ಹೊಂದುವುದಿಲ್ಲ. ಅವಳಿಗೆ ಎಲ್ಲದಕ್ಕಿಂತ ಹೆಚ್ಚು ನೋವನ್ನುಂಟು ಮಾಡುವುದು ಇಷ್ಟು ವರ್ಷ ತನ್ನಿಂದ ಇದನ್ನೆಲ್ಲನ್ನೂ ಮುಚ್ಚಿಟ್ಟ ಗಂಡ ಕಡೆಯ ಪಕ್ಷ ತನ್ನಿಂದ ತಪ್ಪಾಯಿತು, ಕ್ಷಮಿಸು ಎನ್ನಲಾಗದೆ ಹೋಗುವುದು. ಡೋಂಟ್ ಐ ಡಿಸರ್ವ್ ಎ ಸಾರಿ? (ಕ್ಷಮಿಸು ಎಂದು ಕೇಳಿಸಿಕೊಳ್ಳಲೂ ತಾನು ಅರ್ಹಳಲ್ಲವೇ?) ಎಂಬ ಅವಳ ಪ್ರಶ್ನೆ ಅದೆಷ್ಟು ಹೆಂಗಳೆಯರ ಪ್ರಶ್ನೆಯಾಗಿರಬಹುದೋ ಏನೋ!
ಕ್ಷಮಿಸಿಬಿಡು… ಇನ್ನೆಂದೂ ಹೀಗೆ ಮಾಡುವುದಿಲ್ಲ ಎಂಬ ಒಂದೇ ವಾಕ್ಯ ಮನಃಪೂರ್ವಕವಾಗಿ ನುಡಿಯಲ್ಪಟ್ಟಲ್ಲಿ ಮನೆಯೊಳಗಿನ ಸಂಬಂಧಗಳು ಹಸಿರಾಗಿಯೇ ಉಳಿದಾವು. ಇಲ್ಲವಾದಲ್ಲಿ ರಸಹಿಂಡಿದ ಕಬ್ಬಿನ ಜಲ್ಲೆಯಂತಾಗಿ ಒಣಗಿಹೋದಾವು.
ಹೇಳಿ, ಕ್ಷಮಿಸಿ ಎಂಬುದು ಬಹುಭಾರದ ಪದವೇ?