ಸತ್ಪುರುಷರ ಸಹವಾಸದಲ್ಲಿ ನಮ್ಮ ಪಾಪಗಳು ಶೋಷಿಸಲ್ಪಡುತ್ತವೆ ಹಾಗೂ ಪುನಃ ಆ ಸತ್ಪುರುಷನು ಸ್ವತಃ ಶುದ್ಧವೇ ಉಳಿಯುತ್ತಾನೆ. ಸತ್ಸಂಗತಿಯು ಪ್ರಾಪ್ತವಾಗಬಹುದು; ಆದರೆ ಅದು ಉಳಿಯುವುದು ಅತ್ಯಂತ ಕಠಿಣವಾಗಿರುತ್ತದೆ. ಸಾಮಾನ್ಯವಾಗಿ ನಮಗೆ ಯಾವ ವಿಷಯದಲ್ಲಿ ಅಭಿರುಚಿ ಇರುತ್ತದೆಯೋ, ನಾವು ಅದರ ಸಹವಾಸವನ್ನೆ ಹುಡುಕುತ್ತೇವೆ. ನಾನು ಅಯೋಗ್ಯನಾಗಿದ್ದರೆ, ಅಯೋಗ್ಯ ಜನರ ಸಂಗತಿಯನ್ನೇ ಹಿಡಿಯುತ್ತೇನೆ. ವಿಷಯಗಳಲ್ಲಿ ದೋಷವಿರುವುದಿಲ್ಲ. ಅಂದರೆ ಕೇವಲ ವಿಷಯಗಳು ಬಾಧಕವಾಗಿರುವುದಿಲ್ಲ. ಆದರೆ ವಿಷಯೀ ಜನರ ಸಹವಾಸ ಮಾತ್ರ ಅತ್ಯಂತ ಹಾನಿಕರವಾಗಿರುತ್ತದೆ. ಸಹವಾಸದಿಂದ ನಮ್ಮ ಮೇಲೆ ಉತ್ತಮ ಅಥವಾ ಕೆಟ್ಟ ಪರಿಣಾಮಗಳಾಗುತ್ತವೆ. ವಿಷಯಗಳನ್ನು ಕೇಳಿದರೂ ಯಾರುನಮ್ಮನ್ನು ಅವುಗಳಿಂದ ಪರಾವೃತ್ತಗೊಳಿಸುವರೋ ಅವರೇ ನಿಜವಾದ ಸಂತರು. ಯಾರ ಒಡನಾಟ ಮಾಡುವುದರಿಂದ ಭಗವತ್ಪ್ರೇಮವು ಪ್ರಕಟವಾಗುತ್ತದೆಯೋ ಅವರಿಗೆ ಸಂತರೆನ್ನಬೇಕು. ಇಂಥವರ ಸಹವಾಸ ಯಾವಾಗ ಸಿಕ್ಕೀತು ಎಂಬ ತಳಮಳವಿರಬೇಕು. ವಿಷಯವು ಅತ್ಯಂತ ಮಧುರವಾಗಿರುತ್ತದೆ; ಆದರೆ ಅದನ್ನು ಬಿಡಬೇಕೆಂದು ಅನ್ನಿಸತೊಡಗಿದಾಗ ಭಗವಂತನ ಭಜನೆ, ಪೂಜೆ ಮಾಡುವವರ ಸಂಗತಿಯನ್ನು ಆಗ್ರಹಪೂರ್ವಕವಾಗಿ ಹಿಡಿಯಬೇಕು. ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬರತೊಡಗಿದವೆಂದರೆ ನಾಮಸ್ಮರಣೆಯನ್ನು ಮಾಡಬೇಕು. ಸರ್ವತ್ರ ಭಗವದ್ಭಾವ ಬರತೊಡಗಿತೆಂದರೆ ಸತ್ಪುರುಷರ ಸಂಗತಿಯ ಅನುಭವ ಬಂದಂತೆ. ಯಾವಾಗಲೂ ಭಗವಂತನ ಲೀಲೆಯನ್ನು ನೋಡುವವರಿಗೆ ನಿಜವಾದ ಆನಂದ ಪ್ರಾಪ್ತವಾಗುತ್ತದೆ. ಆದ್ದರಿಂದ ಸಂತರು ಯಾವಾಗಲೂ ಭಗವಂತನ ವಿಷಯದಲ್ಲಿಯೇ ಹೇಳುತ್ತಿರುತ್ತಾರೆ. ಅವರು ಹಾಡಿದ್ದೆಲ್ಲವೂ ಸಂಗೀತದಲ್ಲಿಯ ರಾಗವೇ ಎಂದು ತಿಳಿಯಬೇಕು. ತುಕಾರಾಮ ಮಹಾರಾಜರು ಕೇವಲ ವಿಠ್ಠಲ ವಿಠ್ಠಲ ಎನ್ನುತ್ತಿದ್ದರು. ಆದರೆ ಅದರ ಮಾಧುರ್ಯವು ಗಾಯನದಲ್ಲಿಯೂ ಕೂಡ ಬರುವುದಿಲ್ಲ.
ಸತ್ಪುರುಷರು ಸಂಪಾದಿಸಿದ ಸ್ಥಿತಿಯನ್ನು ಸಂಪಾದಿಸುವುದಕ್ಕಾಗಿ ನಾವು ಸಾಧನೆಯನ್ನು ಮಾಡುತ್ತೇವೆ. ಅವರ ಭಾವ ನಿಃಸಂಶಯವಾದದ್ದಾಗಿರುತ್ತದೆ. ಆದರೆ ನಾವು ಮಾತ್ರ ಯಾವಾಗಲೂ ಸಂಶಯವನ್ನು ವ್ಯಕ್ತ ಮಾಡುತ್ತಿರುತ್ತೇವೆ. ಕಣ್ಣಿನಲ್ಲಿ ಚುಚ್ಚುವ ಹರಳನ್ನು ತೆಗೆಯಲು ಅದರಲ್ಲಿ ಬೆಣ್ಣೆಯನ್ನು ಹಾಕುತ್ತಾರೆ. ಅದರಿಂದ ಹರಳು ಚುಚ್ಚದಂತೆ ಹೊರಗೆ ಬರುತ್ತದೆ ಹಾಗೂ ಕಣ್ಣು ತಂಪಾಗುತ್ತದೆ. ಅದರಂತೆ ಸಂತರ ವಾಣಿಯು ಮಧುರ, ಮೃದು ಹಾಗೂ ಹಿತಕರವಾಗಿರುತ್ತದೆ. ನಾವೂ ಅದರಂತೆಯೇ ಮಾತನಾಡಬೇಕು.
[ಶ್ರೀ ಸದ್ಗುರು ಮಹಾರಾಜರ ಪ್ರವಚನದಿಂದ.
ಅನುವಾದ: ಶ್ರೀ ದತ್ತಾತ್ರೇಯ ಅವಧೂತರು.
ಕೃಪೆ: ಚೈತನ್ಯಾಶ್ರಮ, ಹೆಬ್ಬಳ್ಳಿ.]