ಚಂದ್ರನ ದಕ್ಷಿಣಧ್ರುವಕ್ಕೆ ಇಳಿಯಲು ಭಾರತದೊಂದಿಗೆ ಪೈಪೋಟಿಗೆ ಇಳಿದ ರಷ್ಯಾ ಭಾರತದ ಯಶಸ್ವೀ ಲ್ಯಾಂಡಿಂಗ್ಗೆ ಕೆಲವೇ ದಿನಗಳ ಮುನ್ನ ಲೂನಾ–೨೫ ಬಾಹ್ಯಾಕಾಶ ನೌಕೆಯನ್ನು ದಕ್ಷಿಣಧ್ರುವದಲ್ಲಿ ಇಳಿಸಲು ಹೋಗಿ ವಿಫಲವಾಯಿತು; ಚಂದ್ರನ ಮೇಲೆ ಬಿದ್ದು ಛಿದ್ರಗೊಂಡಿತು. ಆದರೆ ಭಾರತ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರನ ಮೇಲೆ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ನಂತರದ ನಾಲ್ಕನೇ ದೇಶವಾಗಿ ಹೊರಹೊಮ್ಮಿತು. ಆದರೆ ಆ ದೇಶಗಳ ಯಶಸ್ಸಿನ ರುಚಿ ಕಂಡಿದ್ದು ಹಲವು ಪ್ರಯತ್ನಗಳ ನಂತರವಷ್ಟೇ. ಆದರೆ ಭಾರತವು ಎರಡನೇ ಯತ್ನದಲ್ಲಿಯೇ ವಿಕ್ರಮ ಸಾಧಿಸಿದೆ. ತನ್ಮೂಲಕ ಇಸ್ರೋದ ತಾಂತ್ರಿಕ ಹಾಗೂ ವೈಜ್ಞಾನಿಕ ನೈಪುಣ್ಯದ ಹಿರಿಮೆಯನ್ನು ಜಗತ್ತಿಗೆ ತೋರಿಸಿದಂತಾಗಿದೆ.
ಆಗಸ್ಟ್ ೨೩, ೨೦೨೩ರಂದು ಚಂದ್ರಯಾನ-೩ ಉಪಗ್ರಹವನ್ನು ಚಂದ್ರನ ದಕ್ಷಿಣಧ್ರುವದಲ್ಲಿ ಯಶಸ್ವಿಯಾಗಿ ಇಳಿಸುವ ಮೂಲಕ ಭಾರತವು ಚಂದ್ರನ ಮೇಲೆ ಉಪಗ್ರಹವನ್ನು ಇಳಿಸಿದ ನಾಲ್ಕನೇ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ವಿಜ್ಞಾನಿಗಳ ಈ ಸಾಧನೆ ಜಗತ್ತಿನ ಗಮನವನ್ನು ಸೆಳೆದಿದೆ. ಚಂದ್ರನ ಮೇಲೆ ಹೆಜ್ಜೆಯನ್ನೂರುವ ಅಂತಿಮ ಮುಹೂರ್ತವನ್ನು ಎಲ್ಲ ಭಾರತೀಯರೂ ತವಕದಿಂದ ಎದುರುನೋಡುತ್ತಿದ್ದರು. ೨೦೧೯ರಲ್ಲಿ ನಡೆದಿದ್ದ ಪ್ರಯತ್ನದಲ್ಲಿ ವಿಫಲಗೊಂಡಿದ್ದ ಭಾರತ ಈ ಬಾರಿ ಸಫಲಗೊಳ್ಳಲೇಬೇಕೆಂದು ಇಡೀ ದೇಶ ಪ್ರಾರ್ಥಿಸುತ್ತಿತ್ತು. ದೇಶದ ಹಲವು ದೇವಸ್ಥಾನಗಳಲ್ಲಿ ಪ್ರಾರ್ಥನೆಗಳು, ಹೋಮ-ಹವನಗಳು ನಡೆದವು. ಚಂದ್ರನಲ್ಲಿ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ದೇಶದೆಲ್ಲೆಡೆ ಉತ್ಸಾಹದ ಚಿಲುಮೆಯನ್ನೆಬ್ಬಿಸಿತು, ಹಬ್ಬದ ವಾತಾವರಣ ಸೃಷ್ಟಿಯಾಯಿತು, ಊರೂರಿನಲ್ಲೂ ಜನರು ಪಟಾಕಿ ಸಿಡಿಸಿ ಸಡಗರದಿಂದ ಕುಣಿದಾಡಿದರು. ಬೆಂಗಳೂರಿನ ಇಸ್ರೋದ ಕಮಾಂಡಿಂಗ್ ಸೆಂಟರ್ನಲ್ಲಿ ಪರದೆಗಳನ್ನು ಆತಂಕದಿಂದ ದಿಟ್ಟಿಸಿ ನೋಡುತ್ತಿದ್ದ ವಿಜ್ಞಾನಿ-ತಂತ್ರಜ್ಞ ಸಮೂಹವೂ ವಿಕ್ರಂ ಲ್ಯಾಂಡರ್ ಚಂದ್ರನನ್ನು ಮುಟ್ಟಿದ ಕೂಡಲೇ ಅಕ್ಷರಶಃ ಮಕ್ಕಳಂತೆ ಕುಣಿದಾಡಿ ಸಂಭ್ರಮಿಸಿದರು. ಆ ಸಂದರ್ಭದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, “ನಾವು ಸಾಧಿಸಿದೆವು, ಭಾರತ ಚಂದ್ರನ ಮೇಲೆ ಇಳಿದಿದೆ” ಎಂದು ಹರ್ಷದಿಂದ ಘೋಷಿಸಿದರು. ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಯಶಸ್ವೀ ಲ್ಯಾಂಡಿಂಗನ್ನು ಅಲ್ಲಿಂದಲೇ ವೀಕ್ಷಿಸಿದ ಮೋದಿ, ಭಾರತದ ರಾಷ್ಟ್ರಧ್ವಜವನ್ನು ಬೀಸುವ ಮೂಲಕ ತಮ್ಮ ಆನಂದವನ್ನು ವ್ಯಕ್ತಪಡಿಸಿದರು. ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ವಿಕ್ರಂ ಲ್ಯಾಂಡರ್ ಕೂಡಾ “ಭಾರತ, ನಾನು ನನ್ನ ಗುರಿಯನ್ನು ಮುಟ್ಟಿದ್ದೇನೆ ಮತ್ತು ನೀನು ಕೂಡಾ!” – ಎಂಬ ಮೊದಲ ಸಂದೇಶವನ್ನು ಬೆಂಗಳೂರಿನ ಇಸ್ರೋದ ಕಮಾಂಡಿಂಗ್ ಸೆಂಟರ್ಗೆ ರವಾನಿಸಿತು.
ಚಂದ್ರನತ್ತ ಇಸ್ರೋ ಚಿತ್ತ
ಭಾರತದ ಹೆಮ್ಮೆಯ ಬಾಹ್ಯಾಖಾಶ ಸಂಸ್ಥೆ ‘ಇಸ್ರೋ’ ಕಳೆದ ಹದಿನೈದು ವರ್ಷಗಳಲ್ಲಿ ಚಂದ್ರನತ್ತ ಮೂರು ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿದೆ. ೨೦೦೯ರಲ್ಲಿ ಕಳುಹಿಸಿದ್ದ ಚಂದ್ರಯಾನ-೧ ಬಾಹ್ಯಾಕಾಶ ನೌಕೆಯು ಮೂನ್ ಇಂಪ್ಯಾಕ್ಟ್ ಪ್ರೋಬ್ನಿಂದ ಚಂದ್ರನನ್ನು ಅಪ್ಪಳಿಸಿ ಮತ್ತು ಬಾಹ್ಯಾಕಾಶ ನೌಕೆಯು ರವಾನಿಸಿದ ದತ್ತಾಂಶಗಳನ್ನು ವಿಶ್ಲೇಷಿಸಿ, ಚಂದ್ರನ ಧ್ರುವಪ್ರದೇಶಗಳಲ್ಲಿರುವ ಗುಂಡಿಗಳಲ್ಲಿನ ಸೂರ್ಯನ ಕಿರಣಗಳು ತಲಪದ ಭಾಗಗಳು, ಅಲ್ಲಿರುವ ಗುಹೆಗಳು ಮತ್ತು ಕತ್ತಲಪ್ರದೇಶಗಳಲ್ಲಿ ನೀರಿನ ಕುರುಹನ್ನು ಕಂಡುಹಿಡಿದಿತ್ತು. ಅದಾದ ಒಂದು ದಶಕದ ನಂತರ ೨೦೧೯ರಲ್ಲಿ ಕಳುಹಿಸಿದ್ದ ಚಂದ್ರಯಾನ-೨ ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣಧ್ರುವದಲ್ಲಿನ ಪೂರ್ವನಿಯೋಜಿತ ಸ್ಥಳದಲ್ಲಿ ಸುರಕ್ಷಿತವಾಗಿ ಇಳಿಯುವ ಕೆಲವೇ ನಿಮಿಷಗಳಿಗೆ ಮೊದಲು ನಿಯಂತ್ರಣ ಕಳೆದುಕೊಂಡು ಚಂದ್ರನ ಮೇಲೆ ಬಿದ್ದು ಇಡೀ ದೇಶವನ್ನು ನಿರಾಸೆಯ ಮಡುವಿನಲ್ಲಿ ಮುಳುಗಿಸಿತ್ತು. ಇದೀಗ ಚಂದ್ರಯಾನ-೩ ತನ್ನ ವಿಕ್ರಂ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿದೆ. ಈ ಮೂಲಕ ಚಂದ್ರನ ದಕ್ಷಿಣಧ್ರುವದಲ್ಲಿ ನೌಕೆಯನ್ನು ಇಳಿಸಿದ ಪ್ರಪ್ರಥಮ ದೇಶ ಎಂಬ ಹೆಗ್ಗಳಿಕೆಯನ್ನು ಭಾರತಕ್ಕೆ ಗಳಿಸಿಕೊಟ್ಟಿದೆ.
ಜಗತ್ತಿನ ಗಮನಸೆಳೆದಿರುವ ಭಾರತದ ಸಾಧನೆ
ಚಂದ್ರನ ದಕ್ಷಿಣಧ್ರುವಕ್ಕೆ ಇಳಿಯಲು ಭಾರತದೊಂದಿಗೆ ಪೈಪೋಟಿಗೆ ಇಳಿದ ರಷ್ಯಾ ಭಾರತದ ಯಶಸ್ವೀ ಲ್ಯಾಂಡಿಂಗ್ಗೆ ಕೆಲವೇ ದಿನಗಳ ಮುನ್ನ ಲೂನಾ-೨೫ ಬಾಹ್ಯಾಕಾಶ ನೌಕೆಯನ್ನು ದಕ್ಷಿಣಧ್ರುವದಲ್ಲಿ ಇಳಿಸಲು ಹೋಗಿ ವಿಫಲವಾಯಿತು; ಚಂದ್ರನ ಮೇಲೆ ಬಿದ್ದು ಛಿದ್ರಗೊಂಡಿತು. ಆದರೆ ಭಾರತ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರನ ಮೇಲೆ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳ ನಂತರದ ನಾಲ್ಕನೇ ದೇಶವಾಗಿ ಹೊರಹೊಮ್ಮಿತು. ಆ ದೇಶಗಳು ಯಶಸ್ಸಿನ ರುಚಿ ಕಂಡಿದ್ದು ಹಲವು ಪ್ರಯತ್ನಗಳ ನಂತರವಷ್ಟೆ. ಆದರೆ ಭಾರತವು ಎರಡನೇ ಯತ್ನದಲ್ಲಿಯೇ ವಿಕ್ರಮ ಸಾಧಿಸಿದೆ. ತನ್ಮೂಲಕ ಇಸ್ರೋದ ತಾಂತ್ರಿಕ ಹಾಗೂ ವೈಜ್ಞಾನಿಕ ನೈಪುಣ್ಯದ ಹಿರಿಮೆಯನ್ನು ಜಗತ್ತಿಗೆ ತೋರಿಸಿದಂತಾಗಿದೆ.
ಜಗತ್ತಿನ ಮುಂದುವರಿದ ದೇಶಗಳು ಎಂಬ ಹಣೆಪಟ್ಟಿ ಹಚ್ಚಿಕೊಂಡ ಇನ್ನೂ ಅನೇಕ ದೇಶಗಳು ಹಲವು ಪ್ರಯತ್ನಗಳ ನಂತರವೂ ಚಂದ್ರನ ಅಂಗಳ ತಲಪಲು ವಿಫಲವಾಗಿವೆ. ಚಂದ್ರಯಾನ-೩ರ ಯಶಸ್ಸಿನಿಂದ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ನೂತನ ಸೂಪರ್ಪವರ್ ರಾಷ್ಟ್ರವಾಗಿ ಹೊರಹೊಮ್ಮಿದೆ.
ಸೋಲೇ ಯಶಸ್ಸಿನ ಮೆಟ್ಟಿಲು!
ಚಂದ್ರಯಾನ-೨ರ ವೈಫಲ್ಯಗಳನ್ನು ಅಧ್ಯಯನ ಮಾಡಿದ ವಿಜ್ಞಾನಿಗಳ ತಂಡ, ಅದರಿಂದ ಕಲಿತ ಪಾಠಗಳನ್ನು ಚಂದ್ರಯಾನ-೩ರಲ್ಲಿ ಅಳವಡಿಸಿಕೊಂಡು ಹಿಂದಿನ ಸೋಲನ್ನು ಗೆಲವಿನ ಸೋಪಾನವಾಗಿ ಮಾಡಿಕೊಂಡಿತು. ಉಡ್ಡಯನದಿಂದ ಲ್ಯಾಂಡಿಂಗ್ ವರೆಗಿನ ಪ್ರತಿಯೊಂದು ಹೆಜ್ಜೆಯನ್ನೂ ಕರಾರುವಾಕ್ಕಾಗಿ ನಡೆಯಲು ಮುಖ್ಯವಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿರುವ ರೋಬಾಟ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಮಾಡಲಾಯಿತು. ಪ್ರತಿಯೊಂದು ಹೆಜ್ಜೆಯೂ ಹಿಂದಿನ ಹೆಜ್ಜೆಯನ್ನು ತಾನೇ ಸ್ವತಃ ವಿಶ್ಲೇಷಿಸಿಕೊಂಡು, ಆಗಿರಬಹುದಾದ ತಪ್ಪುಗಳನ್ನು ಸ್ವಯಂ ಸರಿಪಡಿಸಿಕೊಂಡು ಮುಂದಿನ ಹೆಜ್ಜೆಯನ್ನಿಡುವ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಲ್ಯಾಂಡಿಂಗ್ ಪ್ರಕ್ರಿಯೆಯೂ ಹಿಂದಿನ ಯಾನಕ್ಕಿಂತ ಭಿನ್ನವಾಗಿ ಯೋಜಿತವಾಗಿತ್ತು. ಹಿಂದಿನದಕ್ಕಿಂತ ಹೆಚ್ಚಿನ ಸಂಖ್ಯೆಯ ಹಾಗೂ ಅಗಲವಾದ ಸೌರಫಲಕಗಳನ್ನು ಅಳವಡಿಸಲಾಗಿತ್ತು. ಹೆಚ್ಚಿನ ಸಾಮರ್ಥ್ಯದ ಸೌರಫಲಕಗಳನ್ನು ಉಪಯೋಗಿಸಿದ್ದರಿಂದ ಲ್ಯಾಂಡರ್ಗೆ ಹೆಚ್ಚಿನ ವಿದ್ಯುತ್ ಪೂರೈಕೆ ಲಭಿಸಿತು. ಲ್ಯಾಂಡರ್ನ ಕಾಲುಗಳನ್ನು ಎಂಥದ್ದೇ ಸಂದರ್ಭದಲ್ಲೂ ಎಡವದೆ ದೃಢವಾಗಿ ಊರುವಂತೆ ಬಲಶಾಲಿಯಾಗಿ ರೂಪಿಸಲಾಗಿತ್ತು. ಲ್ಯಾಂಡರ್ ಇಳಿಕೆಗೆ ಎರಡು ಪ್ರತ್ಯೇಕ ಎಂಜಿನ್ಗಳನ್ನು ಅಳವಡಿಸಲಾಗಿತ್ತು. ಚಂದ್ರನ ಗುರುತ್ವಾಕರ್ಷಣದ ಬಲ ಭೂಮಿಯದಕ್ಕಿಂತ ಭಿನ್ನ. ಇದನ್ನು ಸರಿಯಾಗಿ ಲೆಕ್ಕ ಹಾಕಿಕೊಂಡು, ಅದಕ್ಕೆ ತಕ್ಕಂತೆ ವೇಗವನ್ನು ಸಮನ್ವಯಗೊಳಿಸಿಕೊಂಡು ಸಮತೋಲನ ತಪ್ಪದಂತೆ ಇಳಿಯಲು ಅನುಕೂಲವಾಗಲು ಲ್ಯಾಂಡರ್ನ ನಾಲ್ಕು ಕಾಲುಗಳಿಗೂ ಪ್ರತ್ಯೇಕ ಎಂಜಿನ್ಗಳನ್ನು ಅಳವಡಿಸಲಾಗಿತ್ತು. ಹಿಂದಿನ ಬಾರಿ ಇವೆಲ್ಲವನ್ನೂ ಒಂದೇ ಎಂಜಿನ್ ನಿರ್ವಹಿಸಿತ್ತು. ಚಂದ್ರನ ಮೇಲೆ ಓಡಾಡುವ ರೋವರ್ಗೆ ಹೆಚ್ಚಿನ ಸಾಮರ್ಥ್ಯದ ಸೌರಫಲಕಗಳನ್ನು ಅಳವಡಿಸಲಾಗಿತ್ತು. ಇದಿಷ್ಟೇ ಅಲ್ಲದೆ ಇಳಿಯುವ ಪ್ರದೇಶವನ್ನು ಬಾಹ್ಯಾಕಾಶ ನೌಕೆಯೇ ಆಯ್ಕೆ ಮಾಡಿಕೊಳ್ಳುವಂತೆ ಹಾಗೂ ವ್ಯಾಪ್ತಿಯನ್ನು ೯.೬ ಚದರ ಕಿ.ಮೀ. (೪x೨.೪ ಕಿ.ಮೀ.)ಗೆ ಹೆಚ್ಚಿಸಲಾಗಿತ್ತು. ಲ್ಯಾಂಡಿಂಗ್ಗೆ ಕೆಲವು ನಿಮಿಷಗಳ ಮೊದಲು ಕೆಳಗಿಳಿಯುವ ಪ್ರದೇಶವನ್ನು ಪರಿಶೀಲಿಸಿ, ಅದು ಇಳಿಯಲು ಸಮತಟ್ಟಾದ ಪ್ರದೇಶವಾಗಿದೆಯೆ ಎಂದು ಖಾತರಿಪಡಿಸಿಕೊಂಡು; ಒಂದು ವೇಳೆ ಆ ಪ್ರದೇಶ ಸರಿಯಿಲ್ಲ ಎನಿಸಿದಲ್ಲಿ, ಸ್ವತಃ ಪಕ್ಕಕ್ಕೆ ಚಲಿಸಿ ಹೊಸ ಪ್ರದೇಶವನ್ನು ಆಯ್ಕೆ ಮಾಡಿಕೊಂಡ ನಂತರವೇ ಇಳಿಯುವಂತೆ ಯೋಜಿಸಲಾಗಿತ್ತು. ಪ್ರತ್ಯಕ್ಷದಲ್ಲಿ ಆದದ್ದೂ ಹಾಗೆಯೇ. ಅದು ಮೊದಲಿಗೆ ಇಳಿಯಲು ನಿರ್ಧರಿಸಿದ್ದ ಪ್ರದೇಶಕ್ಕಿಂತ ಸ್ವಲ್ಪ ಪಕ್ಕಕ್ಕೆ ಚಲಿಸಿ ಹೊಸ ಸ್ಥಳದಲ್ಲಿ ಇಳಿಯಿತು.
‘ಶಿವಶಕ್ತಿ’ ಪಾಯಿಂಟ್!
ಚಂದ್ರಯಾನ-೩ ಯಶಸ್ಸಿಗೆ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಚಂದ್ರನಲ್ಲಿ ಇಳಿದ ಆಗಸ್ಟ್ ೨೩ನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲಾಗುತ್ತದೆ ಎಂದು ಘೋಷಿಸಿದರು; ಹಾಗೂ ದಕ್ಷಿಣಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಎಂದೂ ೨೦೧೯ರಲ್ಲಿ ಚಂದ್ರಯಾನ-೨ ನೌಕೆ ಚಂದ್ರನ ಅಪ್ಪಳಿಸಿದ ಸ್ಥಳವನ್ನು ‘ತಿರಂಗಾ’ ಎಂದೂ ಹೆಸರಿಸಿದ್ದಾರೆ. ಈ ಹೆಸರುಗಳಿಗೂ ಕೆಲವು ತಥಾಕಥಿತ ಸೆಕ್ಯುಲರ್ ರಾಜಕೀಯ ಪಕ್ಷಗಳು ಮತ್ತು ಎಡಬಿಡಂಗಿಗಳು ಅಪಸ್ವರವೆತ್ತಿದ್ದಾರೆ. ಆದರೆ ದೇಶದ ಜನರು ಸರ್ಕಾರದ ಘೋಷಣೆಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.
ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್
ವಿಕ್ರಂ ಲ್ಯಾಂಡರ್ ಜೊತೆಗಿರುವ ಪ್ರಜ್ಞಾನ್ ರೋವರ್ ಗಾಲಿಗಳಿರುವ ವಾಹನವಾಗಿದ್ದು, ಚಂದ್ರನ ಮೇಲೆ ಹದಿನಾಲ್ಕು ದಿನಗಳ ಕಾಲ ಸಂಚರಿಸಿ ಅನೇಕ ಪ್ರಯೋಗಗಳನ್ನು ನಡೆಸಿ, ನಿದ್ರೆಗೆ ಜಾರಿದೆ. ಪ್ರಜ್ಞಾನ್ ರೋವರ್ ತಾನು ಸಂಚರಿಸುವ ಜಾಗದಲ್ಲಿ ಇಸ್ರೋ ಹಾಗೂ ನಾಲ್ಕು ಸಿಂಹಗಳ ಅಶೋಕಸ್ತಂಭದ ಲಾಂಛನವನ್ನು ಚಂದ್ರನ ಮೇಲೆ ಪಡಿಮೂಡಿಸಿದೆ. ಚಂದ್ರನ ಮೇಲ್ಮೈ ಸಮತಟ್ಟಾಗಿಲ್ಲ, ಹಳ್ಳ-ದಿಣ್ಣೆಗಳಿಂದ ಕೂಡಿದೆ, ಉಲ್ಕಾಪಾತದಿಂದ ಅನೇಕ ಗುಂಡಿಗಳಾಗಿವೆ. ಪ್ರಜ್ಞಾನ್ ಚಂದ್ರನ ಮೇಲೆ ತಾನು ಹೋಗುವ ಮಾರ್ಗವನ್ನು ಪರಿಶೀಲಿಸಿಕೊಂಡು ಚಲಿಸಬೇಕು; ಹೀಗೆ ಹೋಗುತ್ತಿದ್ದ ದಾರಿಯಲ್ಲಿ ನಾಲ್ಕು ಮೀಟರ್ ಆಳದ ಗುಂಡಿಯೊಂದನ್ನು ಗುರುತಿಸಿ ತನ್ನ ಪಥವನ್ನು ಬದಲಿಸಿ ಸಂಚರಿಸಿತ್ತು. ಪ್ರಜ್ಞಾನ್ ರೋವರ್ ೧೧ ದಿನಗಳಲ್ಲಿ ಶಿವಶಕ್ತಿ ಪಾಯಿಂಟ್ನಿಂದ ಒಟ್ಟು ೧೦೦ ಮೀ. ದೂರವನ್ನು ಕ್ರಮಿಸಿದೆ. ಚಂದ್ರನ ನೆಲದಲ್ಲಿ ಗಂಧಕ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವಿರುವುದನ್ನು ಪತ್ತೆಹಚ್ಚಿದೆ. ಹೀಗೆ ಚಂದ್ರನ ಕುರಿತ ಅನೇಕ ಮಹತ್ತ್ವದ ಮಾಹಿತಿಗಳನ್ನು ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ನೀಡಿದ್ದು, ಇದು ಮುಂಬರುವ ದಿನಗಳಲ್ಲಿ ಬಾಹ್ಯಾಕಾಶ ವಿಜ್ಞಾನಕ್ಕೆ ಹೊಸ ಅಧ್ಯಾಯವನ್ನು ಸೇರ್ಪಡೆಗೊಳಿಸಲಿದೆ.
ಉದ್ದೇಶಗಳು
ಭಾರತದ ಈ ಸುದೀರ್ಘ ಪ್ರಯತ್ನದ ಉದ್ದೇಶವೇನು? ಲ್ಯಾಂಡರ್ನಲ್ಲಿ ಅಳವಡಿಸಿರುವ ‘ರೇಡಿಯೋ – ಅನಾಟಮಿ ಆಫ್ ಮೂನ್ – ಬೌಂಡ್ ಹೈಪರ್ಸೆನ್ಸಿಟಿವ್ ಅಯೊನೋಸ್ಫಿಯರ್ ಅಂಡ್ ಅಟ್ಮಾಸ್ಫಿಯರ್’ (RAMBHA) ಯಂತ್ರವು, ಚಂದ್ರನ ಮೇಲಿನ ಪ್ಲಾಸ್ಮಾ ಸಾಂದ್ರತೆ ಮತ್ತು ಸಮಯದೊಂದಿಗೆ ಅದು ಹೇಗೆ ಬದಲಾಗುತ್ತದೆ ಎನ್ನುವುದನ್ನು ಕಂಡುಹಿಡಿಯುತ್ತದೆ. ChaSTE ಯಂತ್ರವು ಚಂದ್ರನ ಮೇಲ್ಮೈನ ಥರ್ಮೋಫಿಸಿಕಲ್ ಮಾದರಿಯನ್ನು ರೂಪಿಸಲಿದ್ದು, ಚಂದ್ರನ ಮೇಲ್ಮೈ ಹಾಗೂ ವಿವಿಧ ಆಳಗಳಲ್ಲಿನ ತಾಪಮಾನಗಳನ್ನು ದಾಖಲಿಸುತ್ತದೆ. ಚಂದ್ರ ಕಂಪನ ಮಾಪಕವು (ILSA) ಚಂದ್ರನಲ್ಲಾಗುವ ಕಂಪನಗಳ ಕುರಿತು ಅಧ್ಯಯನ ನಡೆಸುತ್ತದೆ. ಲೇಸರ್ ರೆಟ್ರೋಫ್ಲೆಕ್ಟರ್ ಅರೇ (LRA) ಯಂತ್ರವು ಚಂದ್ರನ ಮೇಲ್ಮೈಯಲ್ಲಿ ಆಗುವ ವಿವಿಧ ಬದಲಾವಣೆಗಳನ್ನು ದಾಖಲಿಸಿಕೊಳ್ಳುತ್ತದೆ. ಗುಣಾತ್ಮಕ ಮತ್ತು ಪರಿಮಾಣಾತ್ಮಕ ಧಾತುರೂಪದ ವಿಶ್ಲೇಷಣೆಗಾಗಿ ಅಳವಡಿಸಲಾಗಿರುವ ಲೇಸರ್ ಪ್ರೇರಿತ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಪ್ರೊಪಲ್ಷನ್ ಮಾಡ್ಯೂಲ್ ಯಂತ್ರವು, ಚಂದ್ರನಲ್ಲಿರುವ ರಾಸಾಯನಿಕ ಸಂಯೋಜನೆಯನ್ನು ಮತ್ತು ಖನಿಜ ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ. ಅಲ್ಟ್ರಾ ಪಾರ್ಟಿಕಲ್ ಎಕ್ಸ್ರೇ ಸ್ಪೆಕ್ಟ್ರೋಮೀಟರ್ (APXS) ಯಂತ್ರವು ಚಂದ್ರನ ಮಣ್ಣು-ಕಲ್ಲುಗಳನ್ನು ಸಂಗ್ರಹಿಸಿ, ಅವುಗಳಲ್ಲಿರುವ ಮೆಗ್ನೀಶಿಯಂ, ಅಲ್ಯುಮಿನಿಯಂ, ಸಿಲಿಕಾನ್, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಟೈಟಾನಿಯಂ ಮುಂತಾದ ಖನಿಜಗಳ ಧಾತುರೂಪದ ಸಂಯೋಜನೆಯನ್ನು ಪತ್ತೆ ಮಾಡುತ್ತದೆ. ಅದರಲ್ಲಿ ಜೋಡಿಸಿರುವ ಮತ್ತೊಂದು ಯಂತ್ರವು ಚಂದ್ರನಲ್ಲಿ ನೀರಿರುವ ಸ್ಥಳ ಮತ್ತು ಪ್ರಮಾಣಗಳನ್ನು ಪತ್ತೆ ಮಾಡಲಿದೆ.
ಮುಖ್ಯ ರೂವಾರಿಗಳು
ಎಸ್. ಸೋಮನಾಥ್: ಪ್ರಸ್ತುತ ಇಸ್ರೋ ಅಧ್ಯಕ್ಷರು. ಕೇರಳದ ಅಲೆಪ್ಪಿಯವರು. ಮೂಲತಃ ಏರೋಸ್ಪೇಸ್ ಇಂಜಿನಿಯರ್. ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ನಲ್ಲಿ ವ್ಯಾಸಂಗ ಮಾಡಿದ್ದಾರೆ. ಭಾರತದ ರಾಕೆಟ್ ತಂತ್ರಜ್ಞಾನದ ಸಂಶೋಧನೆಗೆ ಸೋಮನಾಥ್ ಅವರೇ ಮುಖ್ಯಸ್ಥರು. ರಾಕೆಟ್ನ ವಿನ್ಯಾಸ ಹಾಗೂ ಉಡ್ಡಯನವಾಹನ ಮಾರ್ಕ್-೩ರ ಎಂಜಿನ್ ವಿನ್ಯಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಂದ್ರಯಾನ-೩ ಉಪಗ್ರಹದ ಪೂರ್ವಪರೀಕ್ಷೆ, ರಾಕೆಟ್ ಉಡ್ಡಯನ ಸೇರಿದಂತೆ ಎಲ್ಲ ಹಂತಗಳಲ್ಲೂ ಕೊಡುಗೆ ನೀಡಿದ್ದಾರೆ. ಭಾರತದ ಗಗನಯಾನ ಯೋಜನೆಯ ಮೊದಲ ನಿರ್ದೇಶಕರಾಗಿ ಮಾರ್ಗದರ್ಶನ ಮಾಡಿದ್ದಾರೆ.
ವೀರಮುತ್ತುವೇಲ್: ಚಂದ್ರಯಾನ-೩ ಯೋಜನೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಚೆನ್ನೈನ ವಿಲ್ಲುಪುರಂ ಜಿಲ್ಲೆಯವರು. ವಿಲ್ಲ್ಲುಪುರಂನ ರೈಲ್ವೇ ಶಾಲೆಯಲ್ಲಿ ಶಾಲಾಶಿಕ್ಷಣವನ್ನು ಪೂರೈಸಿದ ವೀರಮುತ್ತುವೇಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಗಳಿಸಿದವರು. ಅನಂತರ ಚೆನ್ನೈನ ಶ್ರೀರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಪೂರೈಸಿ, ತಿರುಚಿಯ ಎನ್.ಐ.ಟಿ.ಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ೨೦೧೪ರಲ್ಲಿ ಇಸ್ರೋ ಸೇರಿದ ವೀರಮುತ್ತುವೇಲ್ ಚಂದ್ರಯಾನ-೨ ಮತ್ತು ಮಂಗಳಯಾನ ಯೋಜನೆಯಲ್ಲೂ ಕಾರ್ಯನಿರ್ವಹಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಚಂದ್ರಯಾನ-೩ರ ತಯಾರಿಯಲ್ಲಿ ತೊಡಗಿರುವ ವೀರಮುತ್ತುವೇಲ್ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಹೆಜ್ಜೆಯೂರಲು ಬೇಕಾದ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಚಂದ್ರಯಾನ-೩ ಉಡಾವಣೆಯಿಂದ ಚಂದ್ರನ ದಕ್ಷಿಣಧ್ರುವವನ್ನು ಸ್ಪರ್ಶಿಸುವವರೆಗೆ ವೀರಮುತ್ತುವೇಲ್ ನೇತೃತ್ವದ ತಂಡವು ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡಿಂಗ್ ನೆಟ್ವರ್ಕ್ ಸೆಂಟರ್ನಿಂದ ಬಾಹ್ಯಾಕಾಶ ನೌಕೆಯ ಪ್ರಯಾಣದ ಮೇಲ್ವಿಚಾರಣೆ ನೋಡಿಕೊಂಡಿತು.
ಕಲ್ಪನಾ ಕಾಳಹಸ್ತಿ: ಚಂದ್ರಯಾನ-೩ ಯೋಜನೆಯ ಉಪ-ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಕಲ್ಪನಾ ಅವರು ತಿರುಪತಿ ಜಿಲ್ಲೆಯ ತಡುಕು ಗ್ರಾಮದವರು. ಪ್ರತಿಷ್ಠಿತ ಐಐಟಿ ಖರಗಪುರದಿಂದ ಏರೋನಾಟಿಕಲ್ ಇಂಜಿನಿಯರಿಂಗ್ ಮತ್ತು ಮದ್ರಾಸ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಗಳಿಸಿದ ನಂತರ ೨೦೦೩ರಲ್ಲಿ ಇಸ್ರೋ ಸೇರಿದರು. ಚಂದ್ರಯಾನ-೨ ಮತ್ತು ಮಂಗಳಯಾನ ಯೋಜನೆಗಳಲ್ಲಿ ದುಡಿದಿದ್ದಾರೆ. ವಿಕ್ರಂ ಲ್ಯಾಂಡರ್ ವಿನ್ಯಾಸಗೊಳಿಸುವಲ್ಲಿ ಕಲ್ಪನಾರು ಮಹತ್ತ್ವದ ಪಾತ್ರ ವಹಿಸಿದ್ದಾರೆ. ಕಲ್ಪನಾ ಅವರು ಯು.ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ ಉಪ-ಯೋಜನಾ ನಿರ್ದೇಶಕರಾಗಿದ್ದಾರೆ.
ಎಂ. ವನಿತಾ: ಯು.ಆರ್.ರಾವ್ ಉಪಗ್ರಹ ಕೇಂದ್ರದ ಉಪನಿರ್ದೇಶಕರು. ಚಂದ್ರಯಾನ-೨ ಯೋಜನೆಯ ಉಪನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು. ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಇಂಜಿನಿಯರ್ ಆಗಿರುವ ಇವರು ಚಂದ್ರಯಾನ ಯೋಜನೆಯನ್ನು ಮುನ್ನಡೆಸಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.
ಡಾ|| ಎಸ್. ಉನ್ನಿಕೃಷ್ಣನ್ ನಾಯರ್: ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿಯ ನಿರ್ದೇಶಕರು. ಕೇರಳ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್., ಐಐಎಸ್ಸಿ ಬೆಂಗಳೂರಿನಿಂದ ಏರೋಸ್ಪೇಸ್ ಇಂಜಿನಿಯರಿಂಗ್ನಲ್ಲಿ ಎಂ.ಇ. ಮತ್ತು ಐಐಟಿ ಮದ್ರಾಸ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಪಡೆದಿದ್ದಾರೆ. NALSARನಿಂದ ದೂರಸಂಪರ್ಕ ಮತ್ತು ಬಾಹ್ಯಾಕಾಶ ಕಾನೂನಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಉಪಗ್ರಹ ಉಡಾವಣಾ ರಾಕೆಟ್ಗಳಾದ ಪಿಎಸ್ಎಲ್ವಿ, ಜಿಎಸ್ಎಲ್ವಿ ಮತ್ತು ಎಲ್ವಿಎಂ೩ ರಾಕೆಟ್ಗಳ ನಿರ್ಮಾಣದಲ್ಲಿ ಮಹತ್ತ್ವದ ಪಾತ್ರ ವಹಿಸಿದ್ದಾರೆ. ಇವರು ನಿರ್ಮಿಸಿದ ಎಲ್ವಿಎಮ್೩ ರಾಕೆಟ್ನ ಸಹಾಯದಿಂದಲೇ ಚಂದ್ರಯಾನ-೩ ಉಡಾವಣೆಗೊಂಡಿದ್ದು.
ಎಂ. ಶಂಕರನ್: ಯು.ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕರು. ತಿರುಚಿರಾಪಳ್ಳಿಯ ಭಾರತೀದಾಸನ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸಂವಹನ, ನ್ಯಾವಿಗೇಷನ್, ರಿಮೋಟ್ ಸೆನ್ಸಿಂಗ್, ಹವಾಮಾನಶಾಸ್ತ್ರ ಮತ್ತು ಅಂತರ-ಗ್ರಹಗಳ ಅನ್ವೇಷಣೆಯಂತಹ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಆವಶ್ಯಕತೆಗಳನ್ನು ಪೂರೈಸಲು ಉಪಗ್ರಹ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ. ಉಪಗ್ರಹಗಳಿಗೆ ವಿದ್ಯುತ್ತನ್ನು ಒದಗಿಸುವ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಎಂ. ಶಂಕರನ್ ಅವರು ಎತ್ತಿದ ಕೈ. ನೋವಲ್ ಪವರ್ ಸಿಸ್ಟಂ ಹಾಗೂ ಸೋಲಾರ್ ಅರೇಸ್ ಅಭಿವೃದ್ಧಿಪಡಿಸಿ ಉಪಗ್ರಹಗಳಿಗೆ ವಿದ್ಯುತ್ ಶಕ್ತಿ ತುಂಬುವ ಕಾರ್ಯವನ್ನು ಮುನ್ನಡೆಸುತ್ತಾರೆ. ಉಪಗ್ರಹಗಳ ನಿರ್ಮಾಣದಲ್ಲಿ ೩ ದಶಕಗಳ ಅನುಭವವಿರುವ ಶಂಕರನ್ ಚಂದ್ರಯಾನ ೧, ೨ ಮತ್ತು ೩ ಹಾಗೂ ಮಂಗಳಯಾನ ಯೋಜನೆಗಳ ಉಪಗ್ರಹ ನಿರ್ಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಉಷ್ಣ ಹಾಗೂ ಶೀತ ತಾಳಿಕೆ ಪರೀಕ್ಷೆ ಸೇರಿದಂತೆ ಚಂದ್ರನ ಮೇಲೆ ಉಂಟಾಗಬಹುದಾದ ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ಉಪಗ್ರಹ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸ ಮಾಡುವಲ್ಲಿ ಶ್ರಮಿಸಿದ್ದಾರೆ.
ಮೋಹನ ಕುಮಾರ್: ಉಡಾವಣಾ ರಾಕೆಟ್ LVM3-M4ರ ಮಿಷನ್ ನಿರ್ದೇಶಕರು ಮತ್ತು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಹಿರಿಯ ವಿಜ್ಞಾನಿ. ಈ ಹಿಂದೆ LVM3-M3 ಮಿಷನ್ನಲ್ಲಿ ಒನ್ ವೆಬ್ ಇಂಡಿಯಾ-೨ ಉಪಗ್ರಹಗಳ ಯಶಸ್ವಿ ವಾಣಿಜ್ಯ ಉಡಾವಣೆಗೆ ನಿರ್ದೇಶಕರಾಗಿ ಸೇವೆಸಲ್ಲಿಸಿದರು. ಇವರು ೩೦ ವರ್ಷಗಳಿಂದ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ.
ಡಾ|| ವಿ. ನಾರಾಯಣನ್: ಇವರು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC) ನಿರ್ದೇಶಕರಾಗಿದ್ದಾರೆ. ರಾಕೆಟ್ ಪ್ರೊಪಲ್ಷನ್ ಪರಿಣತರಾಗಿರುವ ಅವರು ೧೯೮೪ರಲ್ಲಿ ಇಸ್ರೋ ಸೇರಿದರು. ಡಾ. ವಿ. ನಾರಾಯಣನ್ ಐಐಟಿ ಖರಗ್ಪುರದ ಹಳೆ-ವಿದ್ಯಾರ್ಥಿ. ೧೯೮೯ರಲ್ಲಿ ಮೊದಲ ಶ್ರೇಣಿಯೊಂದಿಗೆ ಕ್ರಯೋಜೆನಿಕ್ ಇಂಜಿನಿಯರಿಂಗ್ನಲ್ಲಿ ಎಂಟೆಕ್ ಪೂರೈಸಿ, ಏರೋಸ್ಪೇಸ್ ಇಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಗಳಿಸಿದರು. ಕ್ರಯೋಜೆನಿಕ್ ಇಂಜಿನ್ಗಳನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ಚಂದ್ರಯಾನ-೩ನಂತಹ ಮೆಗಾ ಯೋಜನೆಗಳಿಗೆ ಪ್ರೊಪಲ್ಷನ್ ಸಿಸ್ಟಮ್ಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಚಂದ್ರನತ್ತ ಭಾರತದ ಹೆಜ್ಜೆಗಳು
ಚಂದ್ರಯಾನ – ೧
ಚಂದ್ರನಲ್ಲಿಗೆ ಭಾರತ ಮೊದಲ ಬಾಹ್ಯಾಕಾಶ ನೌಕೆ ಕಳುಹಿಸಿದ್ದು, ಆಂಧ್ರಪ್ರದೇಶದ ಶ್ರೀಹರಿಕೋಟಾ ಉಪಗ್ರಹ ಉಡಾವಣಾ ಕೇಂದ್ರದಿಂದ ೨೨ ಅಕ್ಟೋಬರ್ ೨೦೦೮ರಂದು. ಆಗಸಕ್ಕೆ ಚಿಮ್ಮಿದ ಪಿಎಸ್ಎಲ್ವಿ-ಸಿ೧೧ ರಾಕೆಟ್ ಚಂದ್ರಯಾನ-೧ ಬಾಹ್ಯಾಕಾಶ ನೌಕೆಯನ್ನು ತನ್ನೊಡಲಲ್ಲಿ ಹೊತ್ತೊಯ್ದು, ೨೧ ದಿನಗಳ ಯಾತ್ರೆಯ ನಂತರ ಚಂದ್ರನ ಅಂತಿಮ ಕಕ್ಷೆಗೆ ತಲಪಿಸಿತು. ಈ ಬಾಹ್ಯಾಕಾಶ ನೌಕೆಯು ಇಸ್ರೋ ತಯಾರಿಸಿದ್ದ ಮೂನ್ ಇಂಪ್ಯಾಕ್ಟ್ ಪ್ರೋಬ್ ಹಾಗೂ ಇತರ ಐದು ಉಪಕರಣಗಳನ್ನಷ್ಟೇ ಅಲ್ಲದೆ ಅಮೆರಿಕ, ಯುಕೆ, ಜರ್ಮನಿ, ಸ್ವೀಡನ್ ಮತ್ತು ಬಲ್ಗೇರಿಯಾ ದೇಶಗಳು ನಿರ್ಮಿಸಿದ್ದ ಆರು ವೈಜ್ಞಾನಿಕ ಉಪಕರಣಗಳನ್ನೂ ಚಂದ್ರನಲ್ಲಿಗೆ ಒಯ್ದಿತ್ತು. ಈ ನೌಕೆಯಲ್ಲಿದ್ದದ್ದು ಒಟ್ಟು ೧,೩೮೦ ಕಿಲೋ ತೂಕದ ೧೧ ಪೇಲೋಡ್ಗಳು. ಚಂದ್ರನ ಸುತ್ತ ೧೦೦ ಕಿ.ಮೀ. ದೂರದ ಕಕ್ಷೆಯಲ್ಲಿ ಸುತ್ತಿದ ಈ ಉಪಗ್ರಹವು ಚಂದ್ರನಲ್ಲಿರುವ ರಾಸಾಯನಿಕ ವಸ್ತುಗಳು, ಖನಿಜ ಸಂಪತ್ತುಗಳ ಕುರಿತು ಸಂಶೋಧನೆ ನಡೆಸಿತು. ೧೪ ನವೆಂಬರ್ ೨೦೦೮ರಂದು ಬಾಹ್ಯಾಕಾಶ ನೌಕೆಯಿಂದ ಹೊರಟ ಮೂನ್ ಇಂಪ್ಯಾಕ್ಟ್ ಪ್ರೋಬ್ ಯಂತ್ರವು, ನಿಯಂತ್ರಿತ ರೀತಿಯಲ್ಲಿ ದಕ್ಷಿಣ ಧ್ರುವವನ್ನು ವೇಗದಿಂದ ಗುದ್ದಿತು. ಈ ಪ್ರೋಬ್, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನದಂದು ಚಂದ್ರನನ್ನು ಬಡಿಯುವಂತೆ ಯೋಜಿಸಲಾಗಿತ್ತು. ದಕ್ಷಿಣ ಧ್ರುವದಲ್ಲಿ ಅದು ಚಂದ್ರನನ್ನು ಮುಟ್ಟಿದ ಸ್ಥಳವನ್ನು ‘ಜವಾಹರ್ ಪಾಯಿಂಟ್’ ಎಂದು ನಾಮಕರಣ ಮಾಡಲಾಯಿತು. ಈ ಪ್ರೋಬ್ನ ಸಹಾಯದಿಂದಾಗಿಯೆ ಚಂದ್ರನಲ್ಲಿ ನೀರಿನ ಅಂಶ ಪತ್ತೆಯಾದದ್ದು. ಜರ್ಮನ್ ಸೈನ್ಸ್ ಅಡ್ವಾನ್ಸಸ್ ಎನ್ನುವ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾದ ಈ ಅಧ್ಯಯನವು ಚಂದ್ರನ ಮೇಲ್ಮೈಯಲ್ಲಿ ಘನೀಭೂತ ನೀರು, ತತ್ಸಂಬಂಧಿತ ಅಯಾನ್, ಹೈಡ್ರಾಕ್ಸಿಲ್, ಚಂದ್ರನ ಮಣ್ಣಿನಲ್ಲಿ ಪ್ರತಿ-ಹೈಡ್ರೋಜನ್, ಆಮ್ಲಜನಕದ ಪ್ರತಿ-ಪರಮಾಣುಗಳಿರುವುದಾಗಿ ಪ್ರಕಟಿಸಿತ್ತು. ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಚಂದ್ರಯಾನ-೧ರಲ್ಲಿ ತಾವು ಕಳುಹಿಸಿದ್ದ ಖನಿಜಾಂಶ ನಕಾಶೆ ಯಂತ್ರದ ಸಹಾಯದಿಂದ ಮೂನ್ ಮಿನರಾಲಜಿ ಮ್ಯಾಪರ್ ನಿರ್ಮಿಸಿದರು. ಚಂದ್ರಯಾನ-೧ ಸಂಗ್ರಹಿಸಿದ ಮಹತ್ತ್ವದ ಅಂಕಿಅಂಶಗಳ ಸಹಾಯದಿಂದ ನಾಸಾ (NASA) ಚಂದ್ರನ ನೆಲದೊಳಗೆ ಲಾಕ್ ಮ್ಯಾಗ್ನೆಟಿಕ್ ನೀರಿರುವುದನ್ನು ಪತ್ತೆ ಮಾಡಿತು. ಈ ಸಂಶೋಧನೆಗಳು ಚಂದ್ರನ ಒಳಭಾಗದ ಆಳದಿಂದ ಹುಟ್ಟುವ ನೀರಿನ ಈ ರೂಪದ ಮೊದಲ ದೂರದ ಪತ್ತೆಯನ್ನು ಪ್ರತಿನಿಧಿಸುತ್ತದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದರು. ಚಂದ್ರಯಾನ-೧ರ ಅಂದಾಜು ವೆಚ್ಚ ರೂ. ೩೮೬ ಕೋಟಿ. ಎರಡು ವರ್ಷಗಳವರೆಗೆ ಕಾರ್ಯನಿರ್ವಹಿಸಬೇಕಾಗಿದ್ದ ಈ ನೌಕೆಯು, ೨೯ ಆಗಸ್ಟ್ ೨೦೦೯ರಂದು ಇದ್ದಕ್ಕಿದ್ದಂತೆ ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡು, ೧೦ ತಿಂಗಳಿನಲ್ಲೇ ತಟಸ್ಥವಾಯಿತು. ಕೇವಲ ೩೧೨ ದಿನಗಳಷ್ಟೇ ಕಾರ್ಯನಿರ್ವಹಿಸಿದರೂ, ಅಷ್ಟು ಹೊತ್ತಿಗಾಗಲೇ ತನ್ನ ಉದ್ದೇಶಿತ ಯೋಜನೆಗಳ ಪೈಕಿ ಶೇ. ೯೫ರಷ್ಟನ್ನು ಅದು ಸಾಧಿಸಿತ್ತು. ಪ್ರತಿ ಎರಡು ಗಂಟೆಗೊಮ್ಮೆ ಚಂದ್ರನನ್ನು ಸುತ್ತುತ್ತಿದ್ದ ಈ ನೌಕೆಯು ೩೧೨ ದಿನಗಳಲ್ಲಿ ಚಂದ್ರನ ಸುತ್ತಲೂ ಸುತ್ತಿದ್ದು ಬರೋಬ್ಬರಿ ೩೪೦೦ ಪ್ರದಕ್ಷಿಣೆಗಳನ್ನು; ತೆಗೆದದ್ದು ೭೦,೦೦೦ ಛಾಯಾಚಿತ್ರಗಳನ್ನು!
ಚಂದ್ರಯಾನ – ೨
ಮೊದಲ ಉಪಗ್ರಹ ಕಳುಹಿಸಿದ ಒಂದು ದಶಕದ ನಂತರ, ೨೨ ಜುಲೈ ೨೦೧೯ರಂದು ಚಂದ್ರಯಾನ-೨ ಉಡಾವಣೆಯಾಯಿತು. ಜಿಎಸ್ಎಲ್ವಿ-ಎಂಕೆ೩-ಎಂ೧ ರಾಕೆಟ್ ಮೂಲಕ ಉಡಾವಣೆಯಾದ ಚಂದ್ರಯಾನ-೨ ಬಾಹ್ಯಾಕಾಶ ನೌಕೆಯು ಆರ್ಬಿಟರ್, ಲ್ಯಾಂಡರ್ ಮತ್ತು ರೋವರನ್ನು ಹೊತ್ತೊಯ್ದಿತ್ತು. ಯಂತ್ರಗಳ ಒಟ್ಟು ತೂಕ ೩,೮೫೦ ಕಿಲೋ. ಈ ಬಾಹ್ಯಾಕಾಶ ನೌಕೆಯ ಲ್ಯಾಂಡರನ್ನು ಚಂದ್ರನ ಮೇಲೆ ಇಳಿಸುವ, ಗಾಲಿಗಳಿರುವ ರೋವರ್ ಚಂದ್ರನ ಮೇಲೆ ಸಂಚರಿಸಿ ಮಣ್ಣು ಅಥವಾ ಶಿಲೆಯ ಮಾದರಿಗಳನ್ನು ಸಂಗ್ರಹಿಸಿ ರಾಸಾಯನಿಕ ವಿಶ್ಲೇಷಣೆ ನಡೆಸುವ ಪ್ರಮುಖ ಉದ್ದೇಶವನ್ನು ಹೊಂದಿತ್ತು. ೭ ಸೆಪ್ಟೆಂಬರ್ ೨೦೧೯ರಂದು ೪೮ ದಿನಗಳ ಪ್ರಯಾಣದ ಅಂತಿಮ ಹಂತವಾದ ಮೃದು ಇಳಿತದ (Soft Landing) ಕಡೆಯ ಕ್ಷಣದಲ್ಲಿ (ಚಂದ್ರನ ಮೇಲೆ ಇಳಿಯಲು ೨.೧ ಕಿ.ಮೀ.ಗಳಷ್ಟು ಎತ್ತರದಲ್ಲಿದ್ದಾಗ) ಅದು ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಳ್ಳುವ ಮೂಲಕ ವಿಫಲಗೊಂಡಿತು. ಯೋಜನೆಯಂತೆ ಇಳಿಯಲು ಸಾಧ್ಯವಾಗಲಿಲ್ಲ. ಲ್ಯಾಂಡರ್ ನಿಷ್ಕ್ರಿಯಗೊಂಡು ಚಂದ್ರನ ಮೇಲೆ ಅಪ್ಪಳಿಸಿತ್ತು. ಆರ್ಬಿಟರ್ ಯಂತ್ರ ಚಂದ್ರಯಾನ-೨ರ ಆರ್ಬಿಟರ್ ತನಗೆ ವಹಿಸಿದ್ದ ಎಲ್ಲ ವೈಜ್ಞಾನಿಕ ಕಾರ್ಯಗಳನ್ನೂ ಯಶಸ್ವಿಯಾಗಿ ಪೂರೈಸಿ, ಇಂದಿಗೂ ಕಾರ್ಯನಿರ್ವಹಿಸುತ್ತಿದ್ದು, ಅಮೂಲ್ಯವಾದ ವೈಜ್ಞಾನಿಕ ಮಾಹಿತಿಗಳನ್ನು ಒದಗಿಸುತ್ತಿದೆ. ಈ ಆರ್ಬಿಟರ್ ಜೊತೆಗೆ ಚಂದ್ರಯಾನ-೩ ಬಾಹ್ಯಾಕಾಶ ನೌಕೆಯು ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಚಂದ್ರಯಾನ-೨ಕ್ಕೆ ತಗುಲಿದ ಒಟ್ಟು ವೆಚ್ಚ ರೂ. ೪೨೫ ಕೋಟಿ. ೨೦೧೯ರಲ್ಲಿ ಚಂದ್ರನ ಕಕ್ಷೆಯನ್ನು ಸೇರಿದ ಚಂದ್ರಯಾನ-೨ ಬಾಹ್ಯಾಕಾಶ ನೌಕೆ ಇದುವರೆಗೂ ೯೦೦೦ಕ್ಕೂ ಹೆಚ್ಚು ಬಾರಿ ಚಂದ್ರನನ್ನು ಸುತ್ತುಹಾಕಿದ್ದು, ಸಾವಿರಾರು ಛಾಯಾಚಿತ್ರಗಳನ್ನು ರವಾನಿಸಿದೆ.
ಚಂದ್ರಯಾನ-೨ಕ್ಕೆ ಎರಡು ವರ್ಷಗಳು ತುಂಬಿದ ಸಂದರ್ಭದಲ್ಲಿ ನಡೆಸಲಾದ ಎರಡು ದಿನಗಳ ಲೂನಾರ್ ಸೈನ್ಸ್ ವರ್ಕ್ಶಾಪ್-೨೦೨೧ರಲ್ಲಿ ಮಾತನಾಡಿದ ಇಸ್ರೋದ ಅಂದಿನ ಅಧ್ಯಕ್ಷ ಕೆ. ಶಿವನ್, ಚಂದ್ರಯಾನ-೨ ನೌಕೆಯೊಂದಿಗೆ ಹಾರಿಬಿಡಲಾಗಿರುವ ೮ ವಿವಿಧ ಉಪಕರಣಗಳು, ರಿಮೋಟ್ ಸೆನ್ಸಿಂಗ್, ಇನ್ಸೈಟ್ ಆಬ್ಸರ್ವೇಶನ್ ಮುಂತಾದ ಅನೇಕ ಕಾರ್ಯಗಳನ್ನು ಇಂದಿಗೂ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಚಂದ್ರಯಾನ–೩ ಯಶಸ್ಸಿನ ಹಿಂದಿರುವ ಕಂಪೆನಿಗಳು
ಗೋದ್ರೆಜ್ ಏರೋಸ್ಪೇಸ್: ಮುಂಬೈ ಮೂಲದ ಖಾಸಗಿ ಸಂಸ್ಥೆ. ಗೋದ್ರೆಜ್ ಇಂಡಸ್ಟ್ರೀಸ್ನ ಭಾಗವಾಗಿರುವ ಗೋದ್ರೆಜ್ ಏರೋಸ್ಪೇಸ್ ಕಂಪೆನಿಯು ಇಸ್ರೋಗೆ ಅಗತ್ಯವಿದ್ದ ಅನೇಕ ವಸ್ತುಗಳನ್ನು ಕಡಮೆ ಬೆಲೆಗೆ ಪೂರೈಕೆ ಮಾಡಿದೆ. ಈ ಸಂಸ್ಥೆ ಚಂದ್ರಯಾನ-೧, ೨ ಮತ್ತು ಮಂಗಳಯಾನ ಯೋಜನೆಗಳಲ್ಲೂ ಮಹತ್ತ್ವದ ಕೊಡುಗೆ ನೀಡಿದೆ. ಇದು ಪೂರೈಸಿರುವ ಪ್ರಮುಖ ಸಂಗತಿಗಳ ಪೈಕಿ ವಿಕಾಸ್ ಇಂಜಿನ್ ಮತ್ತು ಸ್ಯಾಟೆಲೈಟ್ ಥ್ರಸ್ಟರ್ಗಳು ಸೇರಿವೆ.
ಎಲ್ & ಟಿ: ಕಂಪೆನಿಯ ಏರೋಸ್ಪೇಸ್ ವಿಭಾಗವು ಚಂದ್ರಯಾನ-೩ ಉಡಾವಣಾ ವಾಹನಕ್ಕೆ ಅಗತ್ಯವಾದ ಪ್ರಮುಖ ಸಾಧನಗಳನ್ನು ಒದಗಿಸಿದೆ. ಬೂಸ್ಟರ್ ವಿಭಾಗದಲ್ಲಿ ಹಲವು ಸಾಧನಗಳನ್ನು ಇದೇ ಕಂಪೆನಿ ಪೂರೈಸಿದೆ.
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್: ಬಿ.ಎಚ್.ಇ.ಎಲ್ ಉಡಾವಣೆಗೆ ಬೇಕಾದ ಬ್ಯಾಟರಿಗಳನ್ನು ಪೂರೈಸಿದೆ. ಕಂಪೆನಿಯ ವೆಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ವಿಭಾಗವು ಬೈ-ಮೆಟಾಲಿಕ್ ಅಡಾಪ್ಟರ್ಗಳನ್ನು ಒದಗಿಸಿದೆ.
ಮಿಶ್ರ ಧಾತು ನಿಗಮ್: ಸಾರ್ವಜನಿಕ ವಲಯದ ಲೋಹದ ಸಂಸ್ಥೆ ಮಿಶ್ರ ಧಾತು ನಿಗಮ್ ಸಂಸ್ಥೆಯು ಕೋಬಾಲ್ಟ್-ಬೇಸ್ ಮಿಶ್ರಲೋಹಗಳು, ನಿಕಲ್-ಬೇಸ್ ಮಿಶ್ರಲೋಹಗಳು, ಟೈಟಾನಿಯಂ ಮಿಶ್ರಲೋಹಗಳು ಮತ್ತು ಇತರ ಉಪಕರಣಗಳ ತಯಾರಿಕೆಗೆ ಅಗತ್ಯವಾದ ಉಕ್ಕನ್ನು ಪೂರೈಸಿದೆ.
ಒಖಿಂಖ ಟೆಕ್ನಾಲಜೀಸ್: ಚಂದ್ರಯಾನ-೩ ಮಿಷನ್ಗಾಗಿ ಎಂಜಿನ್ಗಳು, ಬೂಸ್ಟರ್ ಪಂಪ್ಗಳು ಮತ್ತು ಇತರ ನಿರ್ಣಾಯಕ ಸಾಧನಗಳನ್ನು ಪೂರೈಸಿದೆ.
ಅಂಕಿತ್ ಏರೋ ಸ್ಪೇಸ್: ಟೈಟಾನಿಯಂ ಬೋಲ್ಟ್ಗಳು, ಮಿಶ್ರಲೋಹ ಸ್ಟೀಲ್ ಮತ್ತು ರಾಕೆಟ್ನ ಗುಣಮಟ್ಟ, ಕಾರ್ಯಕ್ಷಮತೆ ಮತ್ತು ದೀರ್ಘಾವಧಿಯ ಬಾಳಿಕೆ ಮತ್ತು ಕಾರ್ಯಾಚರಣೆಯಲ್ಲಿ ಬಳಸಿದ ಇತರ ಉಪಕರಣಗಳಿಗೆ ಅಗತ್ಯವಾದ ಸ್ಟೇನ್ಲೆಸ್ ಸ್ಟೀಲ್ನ್ನು ಈ ಕಂಪೆನಿಯು ಒದಗಿಸಿದೆ.
ವಾಲ್ಚಂದ್ ನಗರ್ ಇಂಡಸ್ಟ್ರೀಸ್: ಉಡಾವಣಾ ವಾಹನದಲ್ಲಿ ಬಳಸಲಾದ S೨೦೦ ಬೂಸ್ಟರ್ಗಳು, ಫ್ಲೆಕ್ಸ್ ನಾಜಲ್ ಕಂಟ್ರೋಲ್ ಟ್ಯಾಂಕೇಜ್ಗಳು ಮತ್ತು S೨೦೦ ನಳಿಕೆಯ ಹಾರ್ಡ್ವೇರನ್ನು ಪೂರೈಸಿದೆ.
ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್: ಚಂದ್ರಯಾನ ಲಾಂಚರ್ನ ಕೆಲ ಘಟಕಗಳು, ವಿಕ್ರಮ್ ಲ್ಯಾಂಡರ್ಗಾಗಿ ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಪೂರೈಕೆ ಮಾಡಿದೆ.
ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಲಿಮಿಟೆಡ್ (ಟಿಸಿಇ): ಚಂದ್ರಯಾನಕ್ಕೆ ಅತ್ಯಗತ್ಯವಾಗಿದ್ದ ನಿರ್ಣಾಯಕ ವ್ಯವಸ್ಥೆಗಳು ಮತ್ತು ಪ್ರೊಪೆಲ್ಲೆಂಟ್ ಪ್ಲಾಂಟ್, ವೆಹಿಕಲ್ ಅಸೆಂಬ್ಲಿ ಕಟ್ಟಡ ಮತ್ತು ಮೊಬೈಲ್ ಉಡಾವಣಾ ಪೀಠ ಸೇರಿದಂತೆ ಬಾಹ್ಯಾಕಾಶ ಕಾರ್ಯಾಚರಣೆಯ ಯಶಸ್ವಿ ಉಡಾವಣೆಗೆ ಬೇಕಾದ ವಿಶೇಷ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಿದೆ.
ಟಾಟಾ ಸ್ಟೀಲ್: ಎಲ್ಎಮ್ವಿ೩ ಎಂ೪ ರಾಕೆಟ್ನ ಕ್ರೇನನ್ನು ನಿರ್ಮಿಸಿದೆ.
ಎಚ್ಎಎಲ್: ವಿಕ್ರಮ್ ಲ್ಯಾಂಡರ್ನ್ನು ತಯಾರಿಸುವಲ್ಲಿ ಗಮನಾರ್ಹ ಕಾರ್ಯ ಮಾಡಿದೆ.
ಸೆಂಟಮ್ ಇಲೆಕ್ಟ್ರಾನಿಕ್ಸ್: ಸಿಸ್ಟಮ್ಗಳ ಡಿಸೈನ್ ಮತ್ತು ತಯಾರಿಕೆಯಲ್ಲಿ ಮಹತ್ತ್ವದ ಪಾತ್ರ ನಿರ್ವಹಿಸಿದೆ.
ಪರಸ್ ಡಿಫೆನ್ಸ್ ಅಂಡ್ ಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್: ನ್ಯಾವಿಗೇಷನ್ ಸಿಸ್ಟೆಮ್ ಅಭಿವೃದ್ಧಿಪಡಿಸುವಲ್ಲಿ ಇದು ಶ್ರಮಿಸಿದೆ.
ಕೇರಳ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ: ಕೆಲ್ಟ್ರಾನ್ ಎಂದೇ ಪ್ರಸಿದ್ಧವಾಗಿರುವ ಈ ಕಂಪೆನಿಯು ಚಂದ್ರಯಾನ-೩ರ ಎಲೆಕ್ಟ್ರಾನಿಕ್ ಪವರ್ ಮಾಡ್ಯೂಲ್ ಮತ್ತು ಟೆಸ್ಟ್ ಹಾಗೂ ಎವಾಲ್ಯುಯೇಷನ್ ಸಿಸ್ಟಮ್ ಅನ್ನು ತಯಾರಿಸಿದೆ.
ಮುಂದಿನ ಯೋಜನಗಳು
ಆದಿತ್ಯ–ಎಲ್ ೧: ಇದು ಸೆ. ೨, ೨೦೨೩ರಲ್ಲಿ ಉಡಾವಣೆಗೊಂಡಿದ್ದು, ಸೂರ್ಯನನ್ನು ಅಧ್ಯಯನ ಮಾಡಲು ಉದ್ದೇಶಿಸಿರುವ ಭಾರತದ ಮೊಟ್ಟಮೊದಲ ಸೌರಯೋಜನೆ. ಒಟ್ಟು ವೆಚ್ಚ ೩೭೮ ಕೋಟಿ ರೂ.ಗಳು. ಸೆ. ೨ರಿಂದ ನಾಲ್ಕು ತಿಂಗಳ ಕಾಲ ಸೂರ್ಯನತ್ತ ಪ್ರಯಾಣಿಸುವ ಈ ಬಾಹ್ಯಾಕಾಶ ನೌಕೆಯು ಭೂಮಿಯಿಂದ ೧೫ ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲೆಗ್ರಾಂಜ್ ಬಿಂದುವನ್ನು ತಲಪಿ, ಅಲ್ಲಿಂದ ಸೂರ್ಯನ ಕುರಿತು ಅಧ್ಯಯನ ಮಾಡಲಿದೆ.
ನಾಸಾ ಇಸ್ರೋ (ನಿಸಾರ್) ಉಪಗ್ರಹ: ಇದು ೨೦೨೪ರಲ್ಲಿ ಉಡಾವಣೆಗೊಳ್ಳಲಿದ್ದು, ರೂ. ೧೨,೨೯೬ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಯೋಜನೆಯು ಭೂಮಿಯ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿದೆ.
ಸ್ಪೇಡೆಕ್ಸ್: ಇದು ೨೦೨೪ರಲ್ಲಿ ಉಡಾವಣೆಗೊಳ್ಳಲಿದ್ದು, ಇಸ್ರೋವಿನ ಅವಳಿ ಬಾಹ್ಯಾಕಾಶ ನೌಕಾ ಯೋಜನೆಯಾಗಿದೆ. ಒಟ್ಟು ವೆಚ್ಚ ರೂ. ೧೨೪ ಕೋಟಿ.
ಮಂಗಳಯಾನ–೨: ಇದು ೨೦೨೪ರಲ್ಲಿ ಉಡಾವಣೆಗೊಳ್ಳಲಿದ್ದು, ಮಂಗಳಗ್ರಹವನ್ನು ತಲಪಲಿರುವ ಭಾರತದ ಎರಡನೆಯ ಬಾಹ್ಯಾಕಾಶ ನೌಕೆಯಾಗಿದೆ.
ಗಗನಯಾನ: ಇದು ೨೦೨೪ರಲ್ಲಿ ಉಡಾವಣೆಗೊಳ್ಳಲಿದ್ದು, ಮಾನವನನ್ನು ಆಗಸಕ್ಕೆ ಹೊತ್ತೊಯ್ಯುವ ಉದ್ದೇಶವನ್ನು ಹೊಂದಿರುವ ಭಾರತದ ಪ್ರಥಮ ಬಾಹ್ಯಾಕಾಶ ಯೋಜನೆ. ೯,೦೨೩ ರೂ. ಕೋಟಿ ವೆಚ್ಚದಲ್ಲಿ ಸಿದ್ಧವಾಗುತ್ತಿದೆ. ಯೋಜನೆಯು ಮೂವರು ಗಗನಯಾತ್ರಿಗಳನ್ನು ೪೦೦ ಕಿ.ಮೀ. ಎತ್ತರದ ಕಕ್ಷೆಗೆ ಒಯ್ಯುಲಿದೆ. ಮೂರು ದಿನಗಳ ಕಾಲ ಕಕ್ಷೆಯಲ್ಲಿ ಭೂಮಿಯನ್ನು ಸುತ್ತಿದ ನಂತರ ಗಗನಯಾತ್ರಿಗಳನ್ನು ಭೂಮಿಗೆ ವಾಪಸ್ ಕರೆತರುತ್ತದೆ.
ಶುಕ್ರಯಾನ–೧: ಶುಕ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ತಲಪಿಸುವ ಗುರಿ ಹೊಂದಿದ್ದು, ೨೦೩೧ರಲ್ಲಿ ಉಡಾವಣೆಗೊಳ್ಳಲಿದೆ. ಯೋಜನೆಯ ವೆಚ್ಚ ಸುಮಾರು ೧೦೦೦ ರೂ. ಕೋಟಿ.