ಕಲ್ಕತ್ತಾ ಸಂಬಂಧವಾಗಿ ನಡೆದ ಯುದ್ಧದಲ್ಲಿ ಮೊದಲ ಗುಂಡು ಹಾರಿದ್ದು ಸಿರಾಜ್ನ ಸೈನ್ಯದಿಂದಲ್ಲ; ಕಂಪೆನಿಯ ಸೈನ್ಯದಿಂದ. ಅದು ಕಲ್ಕತ್ತಾದಲ್ಲಿ ಕೂಡ ಅಲ್ಲ; ಹೂಗ್ಲಿಯ ತನ್ನಾ ಕೋಟೆಯಲ್ಲಿ. ಅಲ್ಲಿ ನವಾಬನ ಸೇನೆ ಇತ್ತು. ನದಿಯಲ್ಲಿ ಕಲ್ಕತ್ತಾದ ಕೆಳಭಾಗದಲ್ಲಿ ತನ್ನಾ ಕೋಟೆ ಇತ್ತು. ಕಂಪೆನಿ ಅಲ್ಲಿಗೆ ನಾಲ್ಕು ಹಡಗುಗಳನ್ನು ಕಳುಹಿಸಿತ್ತು. ಆದರೆ ಕಾದಾಟವಿಲ್ಲದೆ ಕೋಟೆ ಸಿರಾಜ್ ವಶವಾಯಿತು; ಮದ್ದುಗುಂಡುಗಳನ್ನು ಕೂಡ ವಶಪಡಿಸಿಕೊಂಡರು.
ಮರುದಿನ ಸಿರಾಜ್ನ ೩–೪ ಸಾವಿರ ಸೈನಿಕರು ಬಂದರು. ಆ ಸೇನೆ ದಕ್ಷಿಣದಲ್ಲಿ ಚಂದ್ರನಗರದ (ಚಂದ್ರನಾಗೋರ್) ಬಳಿ ಮತ್ತು ಹೂಗ್ಲಿಯ ಪಶ್ಚಿಮದಂಡೆಯಲ್ಲಿ ಮುಂದುವರಿಯಿತು. ಹಾಗೆಯೇ ಫೋರ್ಟ್ವಿಲಿಯಂ ಬಳಿ ಹೋದರು. ಎಲ್ಲ ದಾಳಿಗಳಿಗೆ ಬ್ರಿಟಿಷರಿಂದ ಪ್ರತಿ ದಾಳಿ ಬಂತು. ವೈಟ್ ಟೌನ್ನ ದಕ್ಷಿಣಭಾಗದಲ್ಲಿ ನಡುರಾತ್ರಿ ದಾಳಿ ನಡೆಸಿ ಸಾವು–ನೋವು ಉಂಟುಮಾಡಿದರು. ವೈಟ್ ಟೌನ್ ಉತ್ತರದಲ್ಲಿ ಸಿರಾಜ್ನ ಸೇನೆ ಮೇಲುಗೈ ಸಾಧಿಸಿ, ಬ್ಲ್ಯಾಕ್ ಟೌನ್ ದಾಟಿ ಮುಂದುವರಿಯಿತು.
ಬಂಗಾಳದ ನವಾಬನ ಹುದ್ದೆ ಅಜ್ಜ ಅಲಿವರ್ದಿಯಿಂದ ಮೊಮ್ಮಗ (ಮಗಳ ಮಗ) ಸಿರಾಜುದ್ದೌಲನಿಗೆ ಬರುತ್ತಲೇ ಅವನು ಆಸ್ಥಾನದಲ್ಲಿ ಹಲವು ಬದಲಾವಣೆಗಳನ್ನು ಜಾರಿಗೊಳಿಸಿದ. ಮೀರ್ಜಾಫರ್ನ ಕೆಲಸವನ್ನು (ನವಾಬನ ಸೇನೆಗೆ ಸಂಬಳ ಕೊಡುವುದು) ಮೀರ್ ಮದನ್ಗೆ ವಹಿಸಲಾಯಿತು. ಅವನನ್ನು ಢಾಕಾದಿಂದ ಕರೆಸಲಾಗಿತ್ತು. ಸಿರಾಜ್ ಅರಮನೆ ವ್ಯವಹಾರದ ಮುಖ್ಯಸ್ಥ ಮೋಹನ್ಲಾಲ್ನನ್ನು ದಿವಾನ ಮತ್ತು ಪ್ರಧಾನಿಯಾಗಿ ನೇಮಕ ಮಾಡಿದ. ಯುವ ನವಾಬನ ಅಂತಹ ನೇಮಕಗಳಿಂದ ಯಥಾಸ್ಥಿತಿಗೆ (ಸ್ಟೇಟಸ್ಕೋ) ಭಂಗ ಬಂತು. ಅವನ ಕಠಿಣ ಹೃದಯ, ಬೈಗುಳ ಮತ್ತು ಸ್ವೇಚ್ಛಾಚಾರದ ವರ್ತನೆಗಳಿಂದಾಗಿ ಅಸಮಾಧಾನ ತೀವ್ರವಾಯಿತು.
ಸೇಠ್ಗೆ ಕಪಾಳಮೋಕ್ಷ
ಉತ್ತಮ ಗುಣ-ನಡತೆಯ ಅರ್ಹ ಕಮಾಂಡರ್ಗಳು ಸಿರಾಜ್ನಿಂದ ದೂರವಾದರು. ರಾಜಧಾನಿ ಮುರ್ಷಿದಾಬಾದ್ನ ಇತರ ಪ್ರಮುಖ ನಾಗರಿಕರನ್ನು ಕೂಡ ಆತ ಬಳಸಿಕೊಳ್ಳಲಿಲ್ಲ. ಆತನ ವರ್ತನೆಯಂತೂ ಕೆಲವು ಸಲ ಅತಿರೇಕಕ್ಕೆ ಹೋಗುತ್ತಿತ್ತು. ಇತರ ದೇಶಗಳ ವ್ಯಾಪಾರಿಗಳು ಮತ್ತವರ ಕಂಪೆನಿಗಳಿಂದ ೩ ಕೋಟಿ ರೂ.ಗಳನ್ನು ವಸೂಲು ಮಾಡುವಂತೆ ವ್ಯಾಪಾರಿ ಜಗತ್ಸೇಠ್ಗೆ ಆದೇಶಿಸಿದ. ಆತ ಅದು ಸಾಧ್ಯವಾಗುವುದಿಲ್ಲವೆಂದು ಹೇಳಿದಾಗ ಸಿರಾಜ್ ಆಸ್ಥಾನದಲ್ಲೇ ಸೇಠ್ಗೆ ಕಪಾಳಮೋಕ್ಷ ಮಾಡಿದ. ಒಟ್ಟಿನಲ್ಲಿ ಅವನಿಗೆ ಹಣದ ತೀವ್ರ ಆವಶ್ಯಕತೆಯಿತ್ತು. ಬಂಗಾಳ, ಬಿಹಾರ ಮತ್ತು ಒರಿಸ್ಸಾ (ಒಡಿಶಾ)ಗಳ ಸುಬೇದಾರ ಎಂದು ತನ್ನನ್ನು ಘೋಷಿಸುವ ಬಗ್ಗೆ ಮೊಘಲ್ ಚಕ್ರವರ್ತಿಗೆ ಹಣ ಕೊಡಬೇಕಿತ್ತು. ಮೊಘಲರಿಗೆ ಉಡುಗೊರೆಗಳೆಂದರೆ ತುಂಬಾ ಪ್ರೀತಿ.
ಇಂತಹ ಆಡಳಿತದ ಕೆಳಗೆ ಜೀವಿಸುವುದು ಕಷ್ಟವೆನ್ನುವ ಭಾವನೆ ಆಸ್ಥಾನದ ಪರಿಸರದಲ್ಲಿ ಮತ್ತು ಜನರ ನಡುವೆ ವ್ಯಾಪಕವಾಗಿತ್ತು. ಆತನ ಪದಚ್ಯುತಿಯನ್ನೇ ಹಲವರು ಎದುರುನೋಡುತ್ತಿದ್ದರು. ಆದರೆ ಸರ್ಕಾರದ ವಿರುದ್ಧ ಅಸಮಾಧಾನ, ಸಿಟ್ಟುಗಳು ಎಲ್ಲಿಯಾದರೂ ವ್ಯಕ್ತವಾದರೆ ನವಾಬನಿಗೆ ರಹಸ್ಯ ಸಂದೇಶಗಳು ಹೋಗುತ್ತಿದ್ದವು. ಹಣ ವಸೂಲಿಗೆ ಬೆಂಬಲ ನೀಡುವವರು ಆತನಿಗೆ ಇಷ್ಟವಾಗುತ್ತಿದ್ದರು. ಈ ನಡುವೆ ಮೀರ್ಜಾಫರ್ ತುಂಬಾ ಸಂತ್ರಸ್ತನೆಂದು ಗಮನಸೆಳೆದಿದ್ದ. ಆತನಿಗೆ ಬೆಂಬಲ ನೀಡುವುದಾಗಿ ಜಗತ್ಸೇಠ್ ಗುಟ್ಟಾಗಿ ಹೇಳಿದ್ದನೆನ್ನಲಾಗಿದೆ. ಸಿರಾಜ್ನ ದುರಾಡಳಿತವು ಮುಂದುವರಿದಂತೆ ಇಂತಹ ಅಸಮಾಧಾನಗಳು ವೇಗವನ್ನು ಪಡೆದುಕೊಂಡವು.
ಸಿರಾಜ್ನನ್ನು ಮಣಿಸುವ ಮೊದಲ ಪ್ರಯತ್ನವಾಗಿ ಮುರ್ಷಿದಾಬಾದ್ನ ಮೇಲ್ವರ್ಗದವರು ಆತನ ಸೋದರಸಂಬಂಧಿ ಶೌಕತ್ಜಂಗ್ಗೆ ಪ್ರಚೋದನೆ ನೀಡಿದರು; ಆತ ಬಿಹಾರದ ಪೂರ್ಣಿಯಾದ ನಾಯಬ್ನಜೀಂ (ಉಪ ಗವರ್ನರ್) ಆಗಿದ್ದ. ಎದ್ದು ನಿಲ್ಲು; ಇಡೀ ಅಲಿವರ್ದಿ ರಾಜ್ಯವನ್ನು ಸಿರಾಜ್ ಕೈಯಿಂದ ಕಿತ್ತುಕೊಳ್ಳೋಣ ಎಂದು ಮೀರ್ಜಾಫರ್ ಆತನಿಗೆ ಪತ್ರ ಬರೆದಿದ್ದ. ಸಿರಾಜ್ನ ಕ್ರೌರ್ಯ ದಿನವೂ ಬೆಳೆಯುತ್ತಲೇ ಇದೆ, ಸಯ್ಯದ್ ಅಹಮ್ಮದ್ ಖಾನ್ ಪುತ್ರನೇ ಸದ್ಯದ ಭರವಸೆ – ಎನ್ನುವ ಪಿತೂರಿ ಅದರ ಹಿಂದಿತ್ತು.
ಆಗ ಶೌಕತ್ಜಂಗ್ ಕಾರ್ಯಪ್ರವೃತ್ತನಾದ. ಮೊಘಲ್ ಆಸ್ಥಾನದಲ್ಲಿ ತನ್ನ ತಂದೆಗಿದ್ದ ಸಂಪರ್ಕವನ್ನು ಬಳಸಿಕೊಂಡು ಚಕ್ರವರ್ತಿಯ ವಜೀರನನ್ನು ಸಂಪರ್ಕಿಸಿ, ತನ್ನನ್ನು ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳ ಸುಬೇದಾರನಾಗಿ ನೇಮಿಸಬೇಕೆನ್ನುವ ಪ್ರಾರ್ಥನೆಯನ್ನು ಸಲ್ಲಿಸಿದ. ಚಕ್ರವರ್ತಿ ಎರಡನೇ ಅಲಂಗೀರ್ನ ವಜೀರ ಗಾಜಿಯುದ್ದೀನ್ ಇಮಾದ್ ಉಲ್ಮುಲ್ಕ್ ತೆರೆಮರೆ ವ್ಯವಹಾರದಲ್ಲಿ ಚಾಣಾಕ್ಷನಾಗಿದ್ದು, ಹಿಂದಿನ ಚಕ್ರವರ್ತಿ ಅಹಮದ್ ಶಾನನ್ನು ಸಿಂಹಾಸನದಿಂದ ಇಳಿಸಿದ ಖ್ಯಾತಿ ಅವನಿಗಿತ್ತು. ಚಕ್ರವರ್ತಿಯನ್ನು ಕುರುಡನನ್ನಾಗಿ ಮಾಡಿ ಆತ ಸೆರೆಮನೆಗೆ ತಳ್ಳಿಸಿದ್ದ.
ಕ್ರಾಂತಿಯ ಹಿಂದೆ ಸೇಠ್ಗಳು
ಈ ಮಧ್ಯೆ ಶೌಕತ್ಜಂಗ್ಗೆ ದರ್ಬಾರಿನಲ್ಲಿ ಕಷ್ಟಗಳು ಎದುರಾದವು. ಹಲವು ಕಮಾಂಡರ್ಗಳು, ಸೇನಾ ಮುಖ್ಯಸ್ಥರು ತಾವೇ ಸಭೆ ನಡೆಸುತ್ತಿದ್ದರು. ಆದ್ದರಿಂದ ಆತ ತನ್ನ ಮಹತ್ತ್ವಾಕಾಂಕ್ಷೆಯನ್ನು ಕೈಬಿಡುವ ಸ್ಥಿತಿಗೆ ತಲಪಿದ. ಸಿರಾಜ್ನ ರಾಜ್ಯದಲ್ಲಿ ಬ್ಯಾಂಕರ್ಗಳು ಮತ್ತು ವ್ಯಾಪಾರಿಗಳು ಅರಮನೆಯ ಒಳಗಿನ ತುಂಬಾ ವಿಷಯಗಳನ್ನು ತಿಳಿದುಕೊಳ್ಳುವ ಸ್ಥಿತಿಯಲ್ಲಿದ್ದರು. ಜಗತ್ಸೇಠ್ನ ಮನೆ ಬ್ರಿಟಿಷರು ಅಥವಾ ಯಾರಿಗಾದರೂ ಉತ್ತಮ ನೆರವು ನೀಡುವ ಸ್ಥಿತಿಯಲ್ಲಿತ್ತು; ಮತ್ತು ಬ್ರಿಟಿಷರಿಗೆ ನೆರವು ನೀಡುವ ಸಾಧ್ಯತೆ ಹೆಚ್ಚಿತ್ತು. ಅಲಿವರ್ದಿ ತೀರಿಕೊಳ್ಳುವವರೆಗೆ ಸೇಠ್ಗಳಿಗೆ ಅತಿ ಹೆಚ್ಚು ಗೌರವವಿತ್ತು. ನವಾಬನ ಎಲ್ಲ ಹಣಕಾಸು ವ್ಯವಹಾರವನ್ನು ಅವರೇ ನಡೆಸುತ್ತಿದ್ದರು; ಕುಟುಂಬದ ಆರ್ಥಿಕ ವ್ಯವಹಾರಗಳಲ್ಲೂ ಅವರೇ ಸೂತ್ರಧಾರರಾಗಿದ್ದರು. ಸೇಠ್ಗಳು ಬಹುಕಾಲದಿಂದ ಬಂಗಾಳದ ಎಲ್ಲ ಕ್ರಾಂತಿಗಳಿಗೆ ಮುಖ್ಯ ಕಾರಣವಾಗಿದ್ದರು. ಅವರು ಕ್ರಾಂತಿಯ ಮುಖ್ಯ ಚಾಲಕರು. ಅವರಿಲ್ಲದಿದ್ದರೆ ಇಂಗ್ಲಿಷರಿಗೆ ಅವರು ಮಾಡಿದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಓರ್ವ ಇತಿಹಾಸಕಾರ ಹೇಳಿದ್ದಾನೆ.
ಬ್ರಿಟಿಷರು ಕಲ್ಕತ್ತಾವನ್ನು ಪುನಃ ವಶಪಡಿಸಿಕೊಂಡಾಗ (ಜನವರಿ ೧೭೫೧) ಸಿರಾಜ್ ಜಗತ್ಸೇಠ್ನ ಜೊತೆ ಮಾತುಕತೆ ನಡೆಸಿದನಾದರೂ ಪರಿಣಾಮ ಸೀಮಿತವಾಗಿತ್ತು. ಬ್ಯಾಂಕರ್ಗಳ ಮುಂದೆ ದೊಡ್ಡ ಅವಕಾಶವು ತೆರೆದುಕೊಂಡಿತ್ತು. ತನಗೆ ಬ್ಯಾಂಕರ್ಗಳು ಬೇಕಾದವರೆಂದು ನವಾಬ ಚಿಂತಿಸಿದ. ಇಂಗ್ಲಿಷರಿಗೆ ಅವರಲ್ಲದೆ ಬೇರೆ ಯಾರೂ ಮಧ್ಯಸ್ಥ(ಸಂಧಾನಕಾರ)ರಿರಲಿಲ್ಲ. ಆದ್ದರಿಂದ ನವಾಬ ಮತ್ತು ಇಂಗ್ಲಿಷರು ಇಬ್ಬರ ವರ್ತನೆಗೂ ಅವರೇ ಹೊಣೆಗಾರರಾಗಿದ್ದರು. ಸೇಠ್ಗಳು ತಮ್ಮ ಸಂಪತ್ತಿನ ಜಾಲವನ್ನು ಹರಡುವ ಮೂಲಕ ನವಾಬನ ಅತಿ ಸಮೀಪದವರಿಂದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ನವಾಬ ಮುಂದೇನು ಮಾಡಬಹುದು ಎಂಬುದನ್ನು ಯಾವಾಗಲೂ ಅವರು ಊಹಿಸಬಲ್ಲವರಾಗಿದ್ದರು. ಆ ಹೊತ್ತಿಗೆ ಇಂಗ್ಲಿಷರು ಮತ್ತು ಸೇಠ್ಗಳ ಹಿತಾಸಕ್ತಿ ಒಂದೇ ಆಗಿತ್ತು. ಅದರಿಂದಾಗಿ ಅವರು ಜೊತೆಯಾಗಿ ಕಾರ್ಯನಿರ್ವಹಿಸಿದರೆ ಯಾರಿಗೂ ಆಶ್ಚರ್ಯವಾಗುತ್ತಿರಲಿಲ್ಲ. ಈ ಬ್ಯಾಂಕಿಂಗ್ ಹೌಸ್ ಹಿಂದೆ ಸರ್ಫರಾಜ್ಖಾನ್ನನ್ನು ಪದಚ್ಯುತಗೊಳಿಸಿ ಅಲಿವರ್ದಿ ಖಾನ್ನನ್ನು ಅಧಿಕಾರಕ್ಕೇರಿಸಿತ್ತು. ಆ ಬಗ್ಗೆ ಅವರಿಗೆ ಅಲಿವರ್ದಿ ಕೃತಜ್ಞನಾಗಿದ್ದ. ತನ್ನ ಸುಬಾಗಳ ಹಣಕಾಸು ಆಡಳಿತವನ್ನು ಅವರಿಗೆ ವಹಿಸಿದ್ದ.
ಸಿರಾಜ್ ಅಜ್ಜನ ದಾರಿಯಲ್ಲಿ ಮುಂದುವರಿಯಲಿಲ್ಲ. ಕೇವಲ ಬ್ಯಾಂಕರ್ಗಳಾದವರ ನೆರವಿನಿಂದ ಏನಾದೀತು ಎಂಬ ಭಾವನೆಯಲ್ಲಿದ್ದ. ಅವರ ಬಗೆಗೆ ಒಂದು ರೀತಿಯ ಅಲಕ್ಷ್ಯವಿತ್ತು; ಅವರ ಜೊತೆಗಿನ ವ್ಯವಹಾರದಲ್ಲಿ ಆದರ, ಸೌಹಾರ್ದಗಳಿರಲಿಲ್ಲ. ಒಂದು ದಿನ ಅವರ ವ್ಯವಹಾರವನ್ನೆಲ್ಲ ತಾನು ವಶಪಡಿಸಿಕೊಳ್ಳಬಹುದೇ ಎನ್ನುವ ಭಾವ ಅವನಲ್ಲಿ ಇದ್ದಂತಿತ್ತು.
ತಿರಸ್ಕಾರದ ಮೂರ್ತಿ ಸಿರಾಜ್
ತನ್ನ ಅಧಿಕಾರದ ಹಾದಿಯಿಂದ ದೊಡ್ಡಮ್ಮ ಘಸೇಟಿ ಬೇಗಮ್ನನ್ನು ಬದಿಗೊತ್ತಿದ್ದು, ಆಕೆಯ ಅರಮನೆಯನ್ನು ವಶಪಡಿಸಿಕೊಂಡದ್ದು ಸಿರಾಜ್ನ ಕಾರ್ಯಶೈಲಿಗೊಂದು ಉದಾಹರಣೆ. ಜಗತ್ಸೇಠ್ಗೆ ಆಸ್ಥಾನದಲ್ಲಿ ಅವಮಾನ ಮಾಡಿದ. ಬ್ರಿಟಿಷರ ವಿಷಯದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಿತ್ತು. ಈ ಬ್ಯಾಂಕರ್ಗಳು (ಸೇಠ್ಗಳು) ಬ್ರಿಟಿಷರ ಸೇವೆಗೆ ನಿಲ್ಲುವವರು ಎಂಬುದು ಆಗಲೇ ಸ್ಪಷ್ಟವಾಗಿತ್ತು. ಸೇಠ್ಗಳೇ ಒಂದು ಕೂಟವನ್ನು ನಿರ್ಮಿಸಿಕೊಂಡು ಯಾವುದೇ ಐರೋಪ್ಯರ ನೆರವಿಲ್ಲದೆ ಇನ್ನೊಬ್ಬ ನವಾಬನನ್ನು ಪೀಠಕ್ಕೆ ಏರಿಸುವಷ್ಟು ಸಮರ್ಥರಾಗಿದ್ದರು. ಸಾಕಷ್ಟು ಸಮಯವಿದ್ದರೆ ಇಂಗ್ಲಿಷರು ಸೇರಿದಂತೆ ಯಾವುದೇ ಐರೋಪ್ಯರನ್ನು ಅಧಿಕಾರಕ್ಕೆ ಏರಿಸಬಲ್ಲವರಾಗಿದ್ದರು. ಆದರೆ ಭಾರತದಲ್ಲಿ ವ್ಯಾಪಾರ-ವ್ಯವಹಾರಗಳು ತುಂಬಾ ನಿಧಾನವಾಗಿ ಚಲಿಸುತ್ತವೆ ಎಂಬುದು ಬ್ರಿಟಿಷರ ತಕರಾರು. ಈ ನಿಧಾನಗತಿ ಅವರಿಗೆ ಹಿಡಿಸಲಿಲ್ಲ. ಈ ಬ್ಯಾಂಕರ್ಗಳು ಕೂಡ ಹಿಂದುಗಳು; ರಿಸ್ಕ್(ಅಪಾಯ) ತೆಗೆದುಕೊಳ್ಳದ ಸ್ವಭಾದವರು ಎಂದವರು ಹೇಳುತ್ತಿದ್ದರು. ಸರಿಯಾದ ಒತ್ತಾಸೆ (push) ಇಲ್ಲದೆ ವ್ಯವಹಾರ ಮುಂದೆ ಚಲಿಸುತ್ತಿರಲಿಲ್ಲ. ಆ ರೀತಿಯಲ್ಲಿ ವ್ಯವಹಾರಕ್ಕೆ ಪ್ರಚೋದನೆ ನೀಡಿದರೆ ನವಾಬ ಸಿರಾಜುದ್ದೌಲನಿಂದ ಕಠಿಣ ಪರಿಣಾಮ ಎದುರಾಗುವ ಸಾಧ್ಯತೆಯಿತ್ತು.
ಇನ್ನೊಂದೆಡೆ ಸಿರಾಜ್ಗೆ ಎಲ್ಲ ಐರೋಪ್ಯರ ಮೇಲೆ ತುಂಬಾ ತಿರಸ್ಕಾರವಿತ್ತು. ಅವರನ್ನು ಆಳುವುದಕ್ಕೆ ಎರಡು ಚಪ್ಪಲಿ ಸಾಕು ಎಂದು ಹೇಳುತ್ತಿದ್ದ. ಪರಿಸ್ಥಿತಿ ಹೀಗಿರುವಾಗ ಇಂಗ್ಲಿಷರ ಕಡೆಯಿಂದ ರಾಬರ್ಟ್ ಕ್ಲೈವ್ ಮತ್ತು ನೌಕಾಪಡೆಯ ಮುಖ್ಯಸ್ಥನಾಗಿ ರಿಯರ್ ಅಡ್ಮಿರಲ್ ಚಾರ್ಲ್ಸ್ ವಾಟ್ಸನ್ ಬಂಗಾಳಕ್ಕೆ ಆಗಮಿಸಿದಾಗ ಎಲ್ಲ ಬದಲಾಗಲು ಆರಂಭವಾಯಿತು.
* * *
ಕಾರ್ಯರಂಗ ಕಲ್ಕತ್ತಾ
ಮೊಘಲ್ ಚಕ್ರವರ್ತಿ ಅಕ್ಬರನ ಇತಿಹಾಸಕ್ಕೆ ಸಂಬಂಧಿಸಿದ ಐನ್-ಐ-ಅಕ್ಬರಿಯಲ್ಲಿ ಕಲ್ಕತ್ತಾವನ್ನು ಕಾಳಿಕತ್ತಾ ಎನ್ನುವ ಗೇಣಿ (ಬಾಡಿಗೆ) ಕೊಡುವ ಹಳ್ಳಿ ಎಂದು ಬಣ್ಣಿಸಲಾಗಿದೆ. ೧೬೮೬ರಲ್ಲಿ ಹೂಗ್ಲಿ ಬಂದರಿನಲ್ಲಿ ಮುಸಲ್ಮಾನ ಅಧಿಕಾರಿಗಳೊಂದಿಗೆ ಉಂಟಾದ ಜಗಳದಿಂದಾಗಿ ಜಾಬ್ ಚಾರ್ನಾಕ್ ಎಂಬಾತನ ನೇತೃತ್ವದ ಇಂಗ್ಲಿಷ್ ವ್ಯಾಪಾರಿಗಳು ತಮ್ಮ ಕಾರ್ಖಾನೆಯನ್ನು (ಫ್ಯಾಕ್ಟರಿ) ಬಿಟ್ಟು ಸುತನಾತಿ ಎಂಬ ಸ್ಥಳಕ್ಕೆ ಹಿಂದೆ ಸರಿದರು (ಆ ಸ್ಥಳ ಈಗ ಕೊಲ್ಕತಾದ ಉತ್ತರಭಾಗದಲ್ಲಿದೆ). ಗವರ್ನರ್ ಶಾಯಿಸ್ತಾಖಾನ್ ಜೊತೆಗಿನ ಜಗಳದ ಕಾರಣ ಸುತನಾತಿಯಿಂದ ದಕ್ಷಿಣಕ್ಕೆ ಸರಿದರು. ಆಗ ಈಸ್ಟ್ ಇಂಡಿಯಾ ಕಂಪೆನಿಯ ಕಾಸಿಂಬಜಾರ್ ಫ್ಯಾಕ್ಟರಿ ಶಾಯಿಸ್ತಾಖಾನನ ವಶವಾಯಿತು.
ಮುಂದೆ ಇಂಗ್ಲಿಷರ ಹೊಸ ನೆಲೆ (ಸೆಟ್ಲ್ಮೆಂಟ್) ದಕ್ಷಿಣಕ್ಕೆ ವಿಸ್ತರಿಸಿತು. ಮೊದಲಿಗೆ ಕಾಳಿಕತ್ತಾ ಗ್ರಾಮವನ್ನು ತೆಗೆದುಕೊಂಡರು. ಅದು ಈಗಿನ ಕಸ್ಟಮ್ಹೌಸ್ ಮತ್ತು ಮುದ್ರಣಾಗಾರ (ಮಿಂಟ್)ದ ನಡುವೆ ಇತ್ತು; ಅನಂತರ ಗೋವಿಂದಪುರ ಗ್ರಾಮವನ್ನು ಸೇರಿಸಿಕೊಂಡರು. ಆ ಸ್ಥಳ ಮುಂದೆ ಫೋರ್ಟ್ ವಿಲಿಯಮ್ ಆಯಿತು.
೧೬೮೯ರಲ್ಲಿ ಶಾಯಿಸ್ತಾಖಾನ್ ಬಂಗಾಳದಿಂದ ನಿರ್ಗಮಿಸಿದ. ಆಗ ಫೋರ್ಟ್ ವಿಲಿಯಂ ಸೇರಿದಂತೆ ಆ ಸ್ಥಳ ಬಂಗಾಳದ ಕೇಂದ್ರವಾಯಿತು. ೧೬೯೦ರಲ್ಲಿ ಅಲ್ಲಿ ಕಂಪೆನಿಯ (ಬ್ರಿಟಿಷ್) ಧ್ವಜವನ್ನು ಹಾರಿಸಿದರು. ಅದೇ ಕಲ್ಕತ್ತಾದ ಸ್ಥಾಪನೆಯೆಂದು ಗುರುತಿಸಲ್ಪಟ್ಟಿತು. ನಗರದ ನಿರಂತರ ಬೆಳವಣಿಗೆ ಅಲ್ಲಿಂದ ಆರಂಭವಾಯಿತು; ಜಾಬ್ ಚಾರ್ನಾಕ್ನನ್ನು ಕಲ್ಕತ್ತಾದ ಸ್ಥಾಪಕ ಎನ್ನುತ್ತಾರೆ. ಅಲ್ಲಿಯ ನದಿ-ಉಪನದಿಗಳ ಜಾಲವು ನಗರದ ಅಭಿವೃದ್ಧಿಯಲ್ಲಿ ಭಾಗಿಯಾಗಿದೆ. ಕಂಪೆನಿ ಅಲ್ಲಿ ತನ್ನ ಅಧಿಕಾರಿಗಳ ನಡತೆಯ ಮೇಲೆ ನಿಯಮಗಳನ್ನು ವಿಧಿಸಿತ್ತು.
ಜಾನ್ ಕಂಪೆನಿ ಬಂಗಾಳದಲ್ಲಿ ದಸ್ತಕ್ನ (ವ್ಯಾಪಾರದ ಪರ್ಮಿಟ್) ದುರುಪಯೋಗ ಮಾಡಿಕೊಂಡು ಭಾರೀ ಲಾಭ ಗಳಿಸುತ್ತಿತ್ತು. ಕಂಪೆನಿಗೆ ಬಂಗಾಳದಲ್ಲಿ ಸುಂಕರಹಿತ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಅದರ ದುರುಪಯೋಗದಿಂದ ನವಾಬನಿಗೆ ಕಂದಾಯ ಬರುತ್ತಿರಲಿಲ್ಲ. ಅದರಿಂದಾಗಿ ಅಲಿವರ್ದಿ ಮತ್ತು ಸಿರಾಜ್ ಕೋಪಗೊಂಡಿದ್ದರು. ಸಿರಾಜ್ನ ಪಟ್ಟಾಭಿಷೇಕದ ವೇಳೆ ಕಂಪೆನಿಯ ವತಿಯಿಂದ ಉಡುಗೊರೆಯನ್ನು ನೀಡಲಾಯಿತಾದರೂ ಬಂಗಾಳ ಪ್ರಾಂತ (ಪ್ರೆಸಿಡೆನ್ಸಿ)ದಲ್ಲಿ ಕಂಪೆನಿಯ ಮುಖ್ಯಸ್ಥನಾಗಿದ್ದ ರೋಜರ್ ಡ್ರೇಕ್ ಅದರ ವಿಧಿ-ವಿಧಾನವನ್ನು (ಪ್ರೋಟೋಕಾಲ್) ಅನುಸರಿಸಲಿಲ್ಲ. ಅದು ಕೂಡ ಸಿರಾಜ್ಗೆ ಕೋಪ ತರಿಸಿತ್ತು.
ಶತ್ರುವಿಗೆ ಕಂಪೆನಿ ಆಶ್ರಯ
ಆ ಹೊತ್ತಿಗೆ ಸಿರಾಜ್ನ ದ್ವೇಷಕ್ಕೆ ಗುರಿಯಾದ ಒಬ್ಬಾತನಿಗೆ ಜಾನ್ ಕಂಪೆನಿಯವರು ಆಶ್ರಯ ನೀಡಿದರು. ಆಶ್ರಯ ಪಡೆದಾತ ರಾಜ್ಬಲ್ಲಭ್ ಪುತ್ರ ಕೃಷ್ಣಬಲ್ಲಭ್. ರಾಜ್ಬಲ್ಲಭ್ ಢಾಕಾದ ಗವರ್ನರ್ ಹುಸೇನ್ ಕೂಲಿಗೆ ಸಹಾಯಕ (ಡೆಪ್ಯುಟಿ) ಹಾಗೂ ಉತ್ತರಾಧಿಕಾರಿಯಾಗಿದ್ದ ವ್ಯಕ್ತಿ. ಆತ ಸಿರಾಜ್ನ ದೊಡ್ಡಮ್ಮ ಘಸೇಟಿ ಬೇಗಮ್ಳ ಹಿತಾಸಕ್ತಿಯನ್ನು ನೋಡಿಕೊಳ್ಳುತ್ತಿದ್ದ. ಘಸೇಟಿ ಪತಿಯ ಸಾವಿನ ಅನಂತರ ಸಿರಾಜ್ ರಾಜ್ಬಲ್ಲಭನ ಮೇಲೆ ಆರ್ಥಿಕ ಅವ್ಯವಹಾರದ ಆರೋಪ ಹೊರಿಸಿ ಬಂಧನಕ್ಕೆ ಒಳಪಡಿಸಿದ. ಬಂಧನಕ್ಕೆ ಹೋದಾಗ ಪುತ್ರ ಕೃಷ್ಣಬಲ್ಲಭ್ ತಪ್ಪಿಸಿಕೊಂಡು ಯಾತ್ರೆಯ ಸೋಗಿನಲ್ಲಿ ಕಲ್ಕತ್ತಾಗೆ ಹೋದ; ಅಲ್ಲಿಂದ ಪುರಿ ಜಗನ್ನಾಥ ದೇವಾಲಯಕ್ಕೆ ಹೋಗುವುದಾಗಿ ಹೇಳಿದ್ದ. ಆಶ್ರಯ ಕೇಳಿದಾಗ ಕಂಪೆನಿ ಆತನಿಗೆ ಆಶ್ರಯ ನೀಡಿತು. ಇದರಿಂದ ಸಿರಾಜ್ಗೆ ಭಾರೀ ಅವಮಾನವಾಯಿತು; ಇದಕ್ಕೆ ಕಂಪೆನಿಯೇ ಹೊಣೆ ಎಂದು ಭಾವಿಸಿದ ಆತ ಕೃಷ್ಣ ಬಲ್ಲಭ್ನನ್ನು ತನಗೆ ಒಪ್ಪಿಸುವಂತೆ ಡ್ರೇಕ್ ಬಳಿಗೆ ಸಂದೇಶವಾಹಕನನ್ನು ಕಳುಹಿಸಿದ. ಕಂಪೆನಿಯ ಅಧಿಕಾರಿಗಳು ಸಿರಾಜ್ನ ಬೇಡಿಕೆಯನ್ನು ತಿರಸ್ಕರಿಸಿದರು. ತನ್ನ ಬಳಿಗೆ ಬಂದ ಕಂಪೆನಿಯ ಸಂದೇಶವಾಹಕರ ಮೇಲೆ ಸಿರಾಜ್ ಗೂಢಚರ್ಯೆ ಆರೋಪ ಹೊರಿಸಿ ಶಿಕ್ಷಿಸಲು ಮುಂದಾದ. ಇದು ಬ್ರಿಟಿಷರು ಸಿರಾಜ್ಗೆ ಎದುರು ನಿಂತ ಮೊದಲ ಸಂದರ್ಭ ಎನಿಸಿತು. ಕೃಷ್ಣ ಬಲ್ಲಭ್ನನ್ನು ಒಪ್ಪಿಸುವುದಿಲ್ಲವೆನ್ನುವ ವಾಪಸು ಸಂದೇಶ ಬಂದಾಗ ಸಿರಾಜ್ ಕೋಪದಿಂದ ಕುದಿದು ಹೋದ. ಆಗಿನ್ನೂ ಅಜ್ಜ ಅಲಿವರ್ದಿ ನಿಧನ ಹೊಂದಿ ಹೆಚ್ಚು ಸಮಯ ಆಗಿರಲಿಲ್ಲ.
ಹಣದ ಆವಶ್ಯಕತೆ ವಿಪರೀತ ಇದ್ದ ಸಿರಾಜ್ ರಾಜ್ಯದ ಅಮೀರರ (nobles) ಆಸ್ತಿಗಳನ್ನು ವಶಪಡಿಸಿಕೊಳ್ಳುತ್ತಿದ್ದ. ಆಗ ಅವರು ರಕ್ಷಣೆಗಾಗಿ ಇಂಗ್ಲಿಷರ ಬಳಿಗೆ ಹೋಗುತ್ತಿದ್ದರು. ಯೂರೋಪಿನಲ್ಲಿ ಫ್ರೆಂಚರ ಜೊತೆ ಯುದ್ಧ ನಡೆಯುತ್ತಿದ್ದ ಕಾರಣ ಕಂಪೆನಿಯವರು ತಮ್ಮ ಕಾಸಿಂಬಜಾರ್ ಫ್ಯಾಕ್ಟರಿಯ ಭದ್ರತೆಯನ್ನು ಹೆಚ್ಚಿಸಿದ್ದರು. ಕಾಸಿಂಬಜಾರ್ನ ಕಂಪೆನಿಯ ಮುಖ್ಯಸ್ಥ ವಾಟ್ಸ್ ಸಿರಾಜ್ನನ್ನು ಪೂರ್ತಿ ಅಲಕ್ಷಿಸಿದ. ಆ ಹೊತ್ತಿಗೆ ಬೇರೆ ಕಡೆಗೆ ದಂಡಯಾತ್ರೆ ಹೊರಟಿದ್ದ ಸಿರಾಜ್ ವಾಪಸು ಬಂದು ಕಂಪೆನಿಯ ಜೊತೆ ಸಂಘರ್ಷಕ್ಕೆ ಅಣಿಯಾದ. ಕಾಸಿಂಬಜಾರ್ ಫ್ಯಾಕ್ಟರಿಗೆ ಮುತ್ತಿಗೆ ಹಾಕಲು ಸೈನ್ಯಕ್ಕೆ ಆದೇಶ ನೀಡಿದ. ಅದರಂತೆ ಸಿರಾಜ್ ಸೇನೆ ಫ್ಯಾಕ್ಟರಿಯನ್ನು ಆಕ್ರಮಿಸಿ ಲೂಟಿ ಮಾಡಿತು. ಸಿರಾಜ್ ದಾಳಿ ಮಾಡಿದ ಬಗ್ಗೆ ಕಾಸಿಂಬಜಾರ್ನಿಂದ ಫೋರ್ಟ್ ವಿಲಿಯಂ (ಕಲ್ಕತ್ತಾ)ಗೆ ಪತ್ರ ಹೋಯಿತು.
ಕಂಪೆನಿಗೆ ಪತ್ರ
ಸಿರಾಜ್ ಸ್ಪಷ್ಟವಾದ ಕಾರ್ಯತಂತ್ರವನ್ನು ಹಾಕಿಕೊಂಡಿದ್ದು ಅದರಂತೆ ಜಾನ್ ಕಂಪೆನಿಗೆ ಪತ್ರ ಬರೆದು ಕಂಪೆನಿಯವರು ಮುರ್ಷಿದ್ ಕೂಲಿಯ ಕಾಲದ ಷರತ್ತುಗಳನ್ನು ಬಿಡುವಂತಿಲ್ಲ. ಬಿಟ್ಟರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಒಡ್ಡಿದ.
ಫ್ರೆಂಚರು (ಗಂಗಾನದಿ ಪ್ರದೇಶದ) ತಾಟಸ್ಥ್ಯ ಧೋರಣೆಯನ್ನು ಬಿಟ್ಟು, ಇಂಗ್ಲಿಷರ ಮೇಲೆ ನಡೆಸುವ ದಾಳಿಯಲ್ಲಿ ತನ್ನೊಂದಿಗೆ ಸೇರಿಕೊಳ್ಳಬೇಕೆನ್ನುವ ಸೂಚನೆಯನ್ನು ನೀಡಿದ. ತನ್ನ ಆದೇಶವನ್ನು ಪಾಲಿಸದಿದ್ದರೆ ಕಂಪೆನಿಯನ್ನು ಹೊರಗೆಹಾಕುವ ತನ್ನ ನಿರ್ಧಾರ ಜಾರಿಯಾಗುತ್ತದೆ; ಇದನ್ನು ಇಂಗ್ಲಿಷರಿಗೆ ತಿಳಿಸಿ – ಎಂದು ಹೇಳಿದ.
ಕಂಪೆನಿಯವರು ಮಣಿಯದಿದ್ದಾಗ ಕಾಸಿಂಬಜಾರ್ ಫ್ಯಾಕ್ಟರಿಯ ಅವರ ಸವಲತ್ತುಗಳನ್ನು ಕಡಿದುಹಾಕಿದ. ೭೦ ವರ್ಷಗಳ ಹಿಂದೆ ಶಾಯಿಸ್ತಾಖಾನ್ ಅದೇ ರೀತಿ ಮಾಡಿದ್ದ. ಕಲ್ಕತ್ತಾ ಮತ್ತು ಕಂಪೆನಿಯ ವಿರುದ್ಧ ತಾನು ನಡೆಸುವ ಯುದ್ಧದಲ್ಲಿ ಇತರ ಐರೋಪ್ಯ ದೇಶಗಳವರು ಸೇರಿಕೊಳ್ಳಬೇಕೆಂದು ತನಗೆ ನಿಕಟವಾದ ಓರ್ವ ಆರ್ಮೇನಿಯನ್ ವ್ಯಾಪಾರಿಗೆ ಬರೆದ ಪತ್ರದಲ್ಲಿ ಹೇಳಿದ್ದ.
ಕಾಸಿಂಬಜಾರ್ನ ಅಧಿಕಾರಿ ವಾಟ್ಸನ್ನು ಬಂಧಿಸಿ ಒತ್ತೆ ಸೆರೆ ಇಟ್ಟುಕೊಂಡ ಸಿರಾಜ್ ಬಿಡುಗಡೆ ಮಾಡಬೇಕಿದ್ದರೆ ಮೂರು ಬಾಂಡ್ಗಳಿಗೆ ಸಹಿ ಮಾಡಬೇಕೆಂದು ಷರತ್ತು ವಿಧಿಸಿದ. ಅದರಂತೆ,
೧) ರಾಜ್ಬಲ್ಲಭ್ನ ಕುಟುಂಬದವರನ್ನು ತನಗೆ ಒಪ್ಪಿಸಬೇಕು.
೨) ಕಲ್ಕತ್ತಾದ ಅವರ ನಿರ್ಮಾಣಗಳನ್ನು (works) ನೆಲಸಮ ಮಾಡಲಾಗುವುದು.
೩) ಇನ್ನು ಮುಂದೆ ಕಂಪೆನಿಯವರು ಬಂಗಾಳದಲ್ಲಿ ನಡೆಸುವ ನೆಲದ ಮೇಲಿನ ವ್ಯಾಪಾರಕ್ಕೆ ಸುಂಕ ಕೊಡಬೇಕು.
ವಾಟ್ಸ್ ಪದಚ್ಯುತಿ ನಡೆಯಿತು. ಗುಲಾಮ ಮತ್ತು ಬಂಧಿತನ ರೀತಿಯಲ್ಲಿ ಆತನನ್ನು ನವಾಬ ಸಿರಾಜನ ಮುಂದೆ ಹಾಜರುಪಡಿಸಲಾಯಿತು. ವಾಚಾಮಗೋಚರವಾಗಿ ಬೈದ ಬಳಿಕ ವಾಟ್ಸ್ನಿಂದ ಬಾಂಡ್ಗೆ ಸಹಿ ಹಾಕಿಸಿಕೊಳ್ಳಲಾಯಿತು. ಕಂಪೆನಿಯನ್ನು ಏಕೆ ಹೊರಗೆ ಹಾಕಲಾಗುತ್ತಿದೆ ಎಂಬುದಕ್ಕೆ ನವಾಬ ವಿವರಣೆಯನ್ನು ನೀಡಿದ್ದಲ್ಲದೆ, ಸದ್ಯವೇ ಕಲ್ಕತ್ತಾದ ಮುಂದೆ ಹಾಜರಾಗುವೆ ಎಂದು ಪ್ರಕಟಿಸಿದ.
ಕಲ್ಕತ್ತಾ ಮೇಲೆ ದಾಳಿ
ತನ್ನ ನಿರ್ಧಾರದಂತೆ ಸಿರಾಜ್ ಕಲ್ಕತ್ತೆಗೆ ಹೊರಟ (ಜೂನ್ ೫, ೧೭೫೬). ಮುರ್ಷಿದಾಬಾದ್ನಿಂದ ಕಲ್ಕತ್ತೆಯ ಪಯಣಕ್ಕೆ ತೆಗೆದುಕೊಂಡ ದಿನಗಳು ಹನ್ನೊಂದು; ಅಷ್ಟೊಂದು ನಿಧಾನವಾದ ಕಾರಣ ನವಾಬ ಅಂತಃಪುರದಲ್ಲೇ (ಹೇರಮ್) ಇದ್ದಿರಬಹುದು ಎಂಬ ಜೋಕು ಚಲಾವಣೆಗೆ ಬಂದಿತ್ತು. ಈ ಕಾರ್ಯಾಚರಣೆಗೆ ಫ್ರೆಂಚರ ಸಹಾಯ ಕೇಳಿದ. ಅದಕ್ಕೆ ಪ್ರತಿಯಾಗಿ ಅವರಿಗೆ ಕಲ್ಕತ್ತಾವನ್ನು ಕೊಡುವುದಾಗಿ ಭರವಸೆ ನೀಡಿದ್ದ. ನೆರವಾಗದಿದ್ದರೆ ಅವರಿಗೆ ಆಸಕ್ತಿಯಿಲ್ಲ ಎಂದಾಗುತ್ತಿತ್ತು. ದಕ್ಷಿಣಭಾರತದ ಸಮಸ್ಯೆ ನಮಗೆ ಪರಿಹಾರವಾಗಿದೆ; ಆದ್ದರಿಂದ ನೆರವು ನೀಡುವುದಿಲ್ಲ ಎಂಬ ಸೂಚನೆ ಫ್ರೆಂಚರಿಂದ ಬಂತು. ಆದರೂ ಅವರು ನೆರವು ನೀಡಬಹುದೆಂಬ ಆಶಾವಾದದಲ್ಲಿ ಸಿರಾಜ್ ಇದ್ದ. ಫ್ರೆಂಚರ ನೆರವಿಗಾಗಿ ಪಾಂಡಿಚೇರಿ ಗವರ್ನರ್ಗೂ ಪತ್ರ ಬರೆದ. ಕಲ್ಕತ್ತಾ ನಿಮ್ಮದು. ನೀವು ನೀಡುವ ಸೇವೆಗಾಗಿ ಈ ಜಾಗ ಮತ್ತದಕ್ಕೆ ಸಂಬಂಧಿಸಿದವುಗಳನ್ನು ನಿಮಗೆ ನೀಡುತ್ತೇನೆ ಎಂದು ತಿಳಿಸಿದ.
ಕಂಪೆನಿಯವರು ತಮ್ಮ ಮದ್ರಾಸ್ ಕೌನ್ಸಿಲ್ ಮತ್ತು ಹೂಗ್ಲಿಯವರ ನೆರವು ಕೇಳಿದರು. ಡಚ್ಚರು ನೆರವು ನೀಡಲಿಲ್ಲ. ಫ್ರೆಂಚರು ಸಿರಾಜ್ಗೆ ನೆರವು ನೀಡುವ ಸಾಧ್ಯತೆ ಇರಲಿಲ್ಲ. ಗಂಗಾನದಿ ಪ್ರದೇಶದ ತಾಟಸ್ಥ್ಯದ ಕಾರಣವನ್ನು ಅವರು ಮುಂದೊಡ್ಡಿದರು. ಫ್ರೆಂಚರ ಈ ನಿಲವಿನಿಂದ ಬ್ರಿಟಿಷರಿಗೆ ಅನುಕೂಲವಾಯಿತು; ಸಿರಾಜ್ ಕಲ್ಕತ್ತಾ ಸಮೀಪಿಸಿದ.
ಕಲ್ಕತ್ತಾದಲ್ಲಿ ಬ್ರಿಟಿಷರು ಯೂರೋಪಿಯನ್ನರು ವಾಸಿಸುತ್ತಿದ್ದ ವೈಟ್ ಟೌನ್ ಮುಂತಾದ ಪ್ರದೇಶಗಳ ರಕ್ಷಣೆಗೆ ಆದ್ಯತೆ ನೀಡಿದರು. ಭಾರತೀಯರು ವಾಸಿಸುತ್ತಿದ್ದ ಬ್ಲ್ಯಾಕ್ ಟೌನಿಗೆ ರಕ್ಷಣೆ ನೀಡಲಿಲ್ಲ; ಮಾತ್ರವಲ್ಲ, ಸಿರಾಜ್ನ ಸೈನ್ಯವನ್ನು ತಡೆಯುವ ಸಲುವಾಗಿ ಆ ಭಾಗದಲ್ಲಿದ್ದ ಮನೆ-ಗುಡಿಸಲುಗಳನ್ನು ಸುಟ್ಟುಹಾಕಿದರು. ನವಾಬನ ಸೈನಿಕರು ಗ್ರೇಟ್ಬಜಾರ್ಗೆ ಬೆಂಕಿ ಹಾಕಿದರು. ಪೋರ್ಚುಗೀಸ್ ಮತ್ತು ಆರ್ಮೇನಿಯನ್ ಮಹಿಳೆಯರಿಗೆ ಇಂಗ್ಲಿಷರು ತಮ್ಮ ಕೋಟೆಯಲ್ಲಿ ಆಶ್ರಯ ನೀಡಿದರು. ಆದರೆ ಫೋರ್ಟ್ ವಿಲಿಯಂ ಸುರಕ್ಷಿತವಾಗಿರಲಿಲ್ಲ.
ಮೊದಲ ಗುಂಡು ಹಾರಿತು
ಆದರೆ ಕಲ್ಕತ್ತಾ ಸಂಬಂಧವಾಗಿ ನಡೆದ ಈ ಯುದ್ಧದಲ್ಲಿ ಮೊದಲ ಗುಂಡು ಹಾರಿದ್ದು ಸಿರಾಜ್ನ ಸೈನ್ಯದಿಂದಲ್ಲ; ಕಂಪೆನಿಯ ಸೈನ್ಯದಿಂದ. ಅದು ಕಲ್ಕತ್ತಾದಲ್ಲಿ ಕೂಡ ಅಲ್ಲ; ಹೂಗ್ಲಿಯ ತನ್ನಾ ಕೋಟೆಯಲ್ಲಿ. ಅಲ್ಲಿ ನವಾಬನ ಸೇನೆ ಇತ್ತು. ನದಿಯಲ್ಲಿ ಕಲ್ಕತ್ತಾದ ಕೆಳಭಾಗದಲ್ಲಿ ತನ್ನಾ ಕೋಟೆ ಇತ್ತು. ಕಂಪೆನಿ ಅಲ್ಲಿಗೆ ನಾಲ್ಕು ಹಡಗುಗಳನ್ನು ಕಳುಹಿಸಿತ್ತು. ಆದರೆ ಕಾದಾಟವಿಲ್ಲದೆ ಕೋಟೆ ಸಿರಾಜನ ವಶವಾಯಿತು; ಮದ್ದುಗುಂಡುಗಳನ್ನು ಕೂಡ ವಶಪಡಿಸಿಕೊಂಡರು.
ಮರುದಿನ ಸಿರಾಜ್ನ ೩-೪ ಸಾವಿರ ಸೈನಿಕರು ಬಂದರು. ಆ ಸೇನೆ ದಕ್ಷಿಣದಲ್ಲಿ ಚಂದ್ರನಗರದ (ಚಂದ್ರನಾಗೋರ್) ಬಳಿ ಮತ್ತು ಹೂಗ್ಲಿಯ ಪಶ್ಚಿಮದಂಡೆಯಲ್ಲಿ ಮುಂದುವರಿಯಿತು. ಹಾಗೆಯೇ ಫೋರ್ಟ್ವಿಲಿಯಂ ಬಳಿ ಹೋದರು. ಎಲ್ಲ ದಾಳಿಗಳಿಗೆ ಬ್ರಿಟಿಷರಿಂದ ಪ್ರತಿ ದಾಳಿ ಬಂತು. ವೈಟ್ ಟೌನ್ನ ದಕ್ಷಿಣಭಾಗದಲ್ಲಿ ನಡುರಾತ್ರಿ ದಾಳಿ ನಡೆಸಿ ಸಾವು-ನೋವು ಉಂಟುಮಾಡಿದರು. ವೈಟ್ ಟೌನ್ ಉತ್ತರದಲ್ಲಿ ಸಿರಾಜ್ನ ಸೇನೆ ಮೇಲುಗೈ ಸಾಧಿಸಿ, ಬ್ಲ್ಯಾಕ್ ಟೌನ್ ದಾಟಿ ಮುಂದುವರಿಯಿತು.
ಗಮನಿಸಬೇಕಾದ ಒಂದು ಅಂಶವೆಂದರೆ, ನವಾಬ ಎದುರಿನ ಸೈನಿಕರನ್ನು ಕೈದಿಗಳಾಗಿ ತೆಗೆದುಕೊಳ್ಳುತ್ತಿರಲಿಲ್ಲ; ಕೊಲ್ಲಿಸುತ್ತಿದ್ದರು. ಏಕೆಂದರೆ ಸೆರೆಮನೆಯಲ್ಲಿ ಜಾಗ ಇರಲಿಲ್ಲ – ಎಂದು ಸುದೀಪ್ ಚಕ್ರವರ್ತಿ ಅವರ ‘Plassey’ ಗ್ರಂಥ ವಿವರಿಸುತ್ತದೆ. ಜೂನ್ ೧೭ರ ರಾತ್ರಿ ಇಂಗ್ಲಿಷರಿಗೆ ತುಂಬಾ ಕಷ್ಟವಾಯಿತು. ಏಕೆಂದರೆ ಜವಾನ ಮುಂತಾದ ಕೆಲಸ ಮಾಡುತ್ತಿದ್ದ ಕಪ್ಪು ಜನರೆಲ್ಲ ಅವರನ್ನು ಬಿಟ್ಟು ಹೋದರು. ಜೂನ್ ೧೮ ಬ್ರಿಟಿಷರಿಗೆ ಗೊಂದಲಮಯ ದಿನವಾಗಿ ಪರಿಣಮಿಸಿತು. ಬೀದಿಬೀದಿಯಲ್ಲಿ ಕಾಳಗ ನಡೆಯಿತು. ಸಿರಾಜ್ನ ಸೈನಿಕರು ಬ್ರಿಟಿಷರಿಗಿಂತ ಜಾಸ್ತಿ ಸತ್ತರಾದರೂ ಇಂಗ್ಲಿಷ್ ಪಡೆಯನ್ನು ಹಿಂದಕ್ಕೆ ತಳ್ಳಿದರು. ಪೂರ್ವದಲ್ಲಿ ಸಿರಾಜ್ನ ಬಂಗಾಳಿ ಸೈನ್ಯದ ಆಕ್ರಮಣ ತೀವ್ರವಾಗಿದ್ದು, ಎದುರಿಸಲು ಕಷ್ಟವಾಗಿತ್ತು. ಫಿರಂಗಿಗಳನ್ನು ನಿಲ್ಲಿಸಿ ಕೋಟೆಗೆ ಮರಳುವಂತೆ ಇಂಗ್ಲಿಷ್ ಸೈನಿಕರಿಗೆ ಸೂಚಿಸಲಾಯಿತು.
ಮರುದಿನ ಇಂಗ್ಲಿಷರ ಸೈನ್ಯ ಕೋಟೆಯ ಒಳಗಿತ್ತು. ಸಿರಾಜ್ನ ಸೈನ್ಯ ಹೊರಗಿನಿಂದ ದಾಳಿ ನಡೆಸುತ್ತಿತ್ತು. ಚರ್ಚ್ ಸಹಿತ ಕೆಲವು ಕಟ್ಟಡಗಳು ನಾಶವಾದವು. ಕೋಟೆಯ ಗೋಡೆಗೂ ಅಪಾಯವಿತ್ತು. ಇಂಗ್ಲಿಷರ ಸೋಲು ನಿಶ್ಚಿತವಾಗಿದ್ದು, ಯಾವಾಗ ಎನ್ನುವುದಷ್ಟೇ ಉಳಿದಿತ್ತು. ಕೋಟೆಯ ಒಳಗಿದ್ದವರು ಪಲಾಯನಕ್ಕೆ ಶುರುಮಾಡಿದರು. ಮುಖ್ಯಸ್ಥ ಡ್ರೇಕ್, ದಂಡನಾಯಕರು, ಹಲವು ಅಧಿಕಾರಿಗಳು ಕೂಡ ಹೊರಟುಹೋದರು. ತಮ್ಮನ್ನು ಆ ರೀತಿಯಲ್ಲಿ ಬಿಟ್ಟು ಹೋದ ಬಗ್ಗೆ ಜನರು ಕೋಪಗೊಂಡರು; ಹತಾಶೆಗೆ ಗುರಿಯಾದರು. ಗೊಂದಲ ಹೆಚ್ಚಾಯಿತು; ಡ್ರೇಕ್ ಮತ್ತಿತರರು ಹಡಗನ್ನೇರಿ ಸಾಕಷ್ಟು ದೂರ ಹೋದರು.
ಬ್ಲ್ಯಾಕ್ಹೋಲ್ ದುರಂತ
ಅಲ್ಲಿ ಮುಂದೆ ಎದುರಾದದ್ದು ಬ್ಲ್ಯಾಕ್ಹೋಲ್ ಹಾರರ್ ಅಥವಾ ಕಪ್ಪುಕುಳಿ ದುರಂತ. ಮಾನವೀಯತೆಗೆ ಮಸಿ ಬಳಿದು ಇತಿಹಾಸದಲ್ಲಿ ಕಪ್ಪುಚುಕ್ಕಿ ಎನಿಸುವಂತಹ ಒಂದು ಘಟನೆ ನವಾಬ ಸಿರಾಜುದ್ದೌಲನಿಂದ ನಡೆದುಹೋಯಿತು. ಜೂನ್ ೨೦ರ ಮಧ್ಯಾಹ್ನದ ಹೊತ್ತಿಗೆ ಬ್ರಿಟಿಷ್ ಸೇನಾಧಿಕಾರಿಗಳು ಮತ್ತು ಸೈನಿಕರನ್ನು ಪೂರ್ತಿ ಹಿಮ್ಮೆಟ್ಟಿಸಲಾಯಿತು. ೨೫ ಜನ ಸೈನಿಕರು ಮೃತಪಟ್ಟು ೭೦ ಜನ ಗಾಯಗೊಂಡಿದ್ದರು. ಇಂಗ್ಲಿಷ್ ಮುಖ್ಯಾಧಿಕಾರಿ ಹಾಲ್ವೆಲ್ನನ್ನು ಸಿರಾಜ್ ಬಿಡುಗಡೆ ಮಾಡಿದ; ಅವನ ಸೈನಿಕರು ಇಂಗ್ಲಿಷರ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿದರು. ಸೆರೆಸಿಕ್ಕಿದ ಇಂಗ್ಲಿಷ್ ಮಹಿಳೆಯರನ್ನು ಗೌರವಯುತವಾಗಿ ಕಂಡರು. ದೋಣಿಗಳಲ್ಲಿ ಕರೆದೊಯ್ದು ಹಡಗಿನಲ್ಲಿದ್ದ ಅವರ ಗಂಡಂದಿರ ಬಳಿ ಮುಟ್ಟಿಸಿದರು.
ಈ ನಡುವೆ ಕೆಲವು ಐರೋಪ್ಯ ಅಧಿಕಾರಿಗಳು ಮದ್ಯಪಾನ ಮಾಡಿ ಸ್ಥಳೀಯ ಜನರಿಗೆ (natives) ಹೊಡೆದರು. ಸ್ಥಳೀಯರು ಆ ಬಗ್ಗೆ ಸಿರಾಜ್ಗೆ ದೂರು ನೀಡಿದರು. ಆಗ ಹಾಲ್ವೆಲ್ ಹಾಗೂ ಇತರ ಕೈದಿಗಳ ಪರಿಸ್ಥಿತಿ ಬದಲಾಯಿತು. ದುರ್ನಡತೆ ತೋರಿದವರೆಲ್ಲಿ ಎಂದು ಕೇಳಿದಾಗ ಬ್ಲ್ಯಾಕ್ಹೋಲ್ನಲ್ಲಿ ಎಂಬ ಉತ್ತರ ಬಂತು. ಅಷ್ಟು ಸಣ್ಣ ಜಾಗದಲ್ಲಿ ಬಹಳಷ್ಟು ಕೈದಿಗಳನ್ನು ರಾತ್ರಿಯಿಡೀ ಇರಿಸುವುದೇ ಸರಿಯಾದ ಶಿಕ್ಷೆ ಎಂದು ಯಾರೋ ಹೇಳಿದಾಗ ಸಿರಾಜ್ ಸರಿ ಎಂದ. ಕಂಪೆನಿಯ ಕೆಲವು ಅಧಿಕಾರಿಗಳು ಸೇರಿದಂತೆ ೧೪೬ ಜನರನ್ನು ೧೮ ಅಡಿ ಉದ್ದ ಮತ್ತು ೧೮ ಅಡಿ ಅಗಲದ ಕತ್ತಲಕೋಣೆಗೆ ತುರುಕಿಸಿದರು. ಜೂನ್ ೨೦ರಂದು ಅಲ್ಲಿ ತೀವ್ರ ಸೆಖೆಯಿತ್ತು. ಯಾರು ಏನೆಂದು ನೋಡದೆ ಸಂಜೆ ೭ ಗಂಟೆಗೆ ಎಲ್ಲರನ್ನೂ ಆ ಕೋಣೆಗೆ ತುಂಬಿದ್ದಾಯಿತು. ನವಾಬ ಸಿರಾಜ್ ಸ್ಥಳದಲ್ಲೇ ಇದ್ದು ಮರುದಿನ ಬೆಳಗ್ಗೆ ಆತ ಎದ್ದ ಆನಂತರವೇ ಕೋಣೆಯಲ್ಲಿ ಇದ್ದವರಿಗೆ ಬಿಡುಗಡೆ. ಬೆಳಗ್ಗೆ ೬ ಗಂಟೆಗೆ ನವಾಬ ಎದ್ದು ಕೋಣೆಯ ಬಾಗಿಲು ತೆರೆಸಿದ; ಆಗ ಹಲವರು ಜೀವದಿಂದಲೇ ಬಿಡುಗಡೆ ಪಡೆದಿದ್ದರು. ೧೪೬ ಜನರಲ್ಲಿ ಜೀವಸಹಿತ ಹೊರಗೆ ಬಂದವರು ೨೩ ಜನ ಮಾತ್ರ; ಉಳಿದವರೆಲ್ಲ ಕುಡಿಯಲು ನೀರು ಮತ್ತು ಉಸಿರಾಟಕ್ಕೆ ಗಾಳಿಯಿಲ್ಲದೆ ಅಸುನೀಗಿದ್ದರು. ನೀರು ಬೇಕೆಂದು ಅವರು ಬೊಬ್ಬೆ ಹೊಡೆದಾಗ ಸ್ಥಳೀಯ ಸೈನಿಕರು ಅದನ್ನು ತಮಾಷೆ ಎಂಬಂತೆ ಕಂಡರಂತೆ. ಕೆಲವು ಸ್ಥಾನಿಕ ಅಧಿಕಾರಿಗಳಿಗೆ ಪಾಪ ಎನ್ನಿಸಿದರೂ ಕೂಡ ನವಾಬನ ಆದೇಶವನ್ನು ಮೀರುವಂತಿರಲಿಲ್ಲ. ಬದುಕಿ ಉಳಿದವರ ಅನುಭವ ಅತ್ಯಂತ ಶೋಚನೀಯವಾಗಿತ್ತು. ಯಾವುದೇ ಆಚರಣೆ ಇಲ್ಲದೆ ಶವಗಳನ್ನು ಸುಮ್ಮನೆ ಹೂತುಹಾಕಿದರು. ಮುಂದೆ ಹಾಲ್ವೆಲ್ ಒಂದು ಸ್ಮಾರಕ ನಿರ್ಮಿಸಿದ (೧೭೫೮). ೧೮೨೧ರಲ್ಲಿ ಗವರ್ನರ್-ಜನರಲ್ ಹೇಸ್ಟಿಂಗ್ಸ್ ಅದನ್ನು ನಾಶ ಮಾಡಿದ; ಆ ಜಾಗದಲ್ಲೀಗ ಸರ್ಕಾರಿ ಕಚೇರಿಗಳಿವೆ ಎಂದು Pಟಚಿsseಥಿ ಲೇಖಕರು ಹೇಳಿದ್ದಾರೆ. ಸಿರಾಜ್ನನ್ನು ಧನದಾಹಿ, ಜೀವಕ್ಕಿಂತ ಲೂಟಿ ಮಾಡುವುದನ್ನು ಹೆಚ್ಚು ಇಷ್ಟಪಡುವವ ಎನ್ನುವ ವಿವರಗಳು ಸಿಗುತ್ತವೆ. ಜುಲೈ ೧೧ರಂದು ಸಿರಾಜ್ ರಾಜಧಾನಿ ಮುರ್ಷಿದಾಬಾದ್ಗೆ ಹೊರಟ.
೧೨೩ ಜನರ ಸಾವು
ಹಾಲ್ವೆಲ್ ಮತ್ತಿತರರಿಗೆ ಹತ್ತು ದಿನಗಳ ಜೈಲು ಶಿಕ್ಷೆಯಾಗಿತ್ತು. ಅದನ್ನು ಮುಗಿಸಿ ಬರುವಾಗ ಸಿರಾಜ್ನ ವರ್ತನೆ ಬದಲಾಗಿತ್ತಂತೆ. ಆತನ ಅಜ್ಜಿ ಶರ್ಘುನ್ನೀಸಾ ಬೇಗಮ್ ಮತ್ತು ತಾಯಿ ಅಮೀನಾ ಬೇಗಮ್ ಕೈದಿಗಳನ್ನು ಚೆನ್ನಾಗಿ ನಡೆಸಿಕೊಳ್ಳಬೇಕು; ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಬುದ್ಧಿಮಾತು ಹೇಳಿದರೆಂದು ದಾಖಲಾಗಿದೆ. ಯುರೋಪಿಯನ್ನರು ಕಲ್ಕತ್ತಾದಲ್ಲಿ ಇರಬಾರದು; ಇದ್ದವರ ಕಿವಿ ಮೂಗು ಕತ್ತರಿಸಲಾಗುವುದೆಂದು ಸಿರಾಜ್ ಆದೇಶ ಹೊರಡಿಸಿದ. ಕಲ್ಕತ್ತಾಗೆ ಅಲಿನಗರ್ ಎಂದು ಬದಲಿನಾಮಕರಣ ಮಾಡಿದ; ಕೋಟೆಯೊಳಗೆ ಮಸೀದಿ ಕಟ್ಟಿಸಲು ಆದೇಶ ನೀಡಿದ.
ಬ್ಲ್ಯಾಕ್ಹೋಲ್ನಲ್ಲಿ ಮೃತರಾದ ಜನರಲ್ಲಿ ೫೬ ಜನರ ಹೆಸರು ಮಾತ್ರ ಗೊತ್ತಾಯಿತು. ಐವತ್ತರಿಂದ ನೂರು ಜನ ನೀರು – ಗಾಳಿಗಾಗಿ ಜಗಳ ಮಾಡಿ ಸತ್ತಿರಬೇಕೆಂದು ಊಹಿಸಲಾಗಿದೆ. ಸಿರಾಜ್ ಢಾಕಾದ ಬ್ರಿಟಿಷ್ ಫ್ಯಾಕ್ಟರಿಯಿಂದ ೧೪೦ ಲಕ್ಷ ರೂ. ಮೌಲ್ಯದ ಬೆಳ್ಳಿಯನ್ನು ತೆಗೆದುಕೊಂಡನಂತೆ. ಅವನ ಈ ದಂಡಯಾತ್ರೆ, ದಾಳಿಗಳಿಂದ ಬಂಗಾಳದಲ್ಲಿ ಜಾನ್ ಕಂಪೆನಿಗೆ ಕನಿಷ್ಠ ೯೫ ಲಕ್ಷ ರೂ. ನಷ್ಟವಾಯಿತು. ಖಾಸಗಿ ಜನರಿಗಾದ ನಷ್ಟ ರೂ.೧.೬೦ ಕೋಟಿಗೂ ಅಧಿಕ ಎಂದು ಬ್ರಿಟಿಷ್ ಅಧಿಕಾರಿಗಳು ಹೇಳಿದ್ದಾರೆ. ಆ ಹಂತದಲ್ಲಿ ಬಂಗಾಳದಲ್ಲಿ ಬ್ರಿಟಿಷರ ಸಂಪತ್ತು ಪೂರ್ತಿ ಕುಸಿಯಿತು. ಬಲರಾಮಗುರಿಯ ಒಂದು ಸಣ್ಣ ಸೆಟ್ಲ್ಮೆಂಟ್ ಮಾತ್ರ ಸಿರಾಜ್ನ ಕೆಟ್ಟ ದೃಷ್ಟಿಗೆ ಸಿಲುಕದೆ ಉಳಿಯಿತೆಂದು ದಾಖಲೆಗಳು ಹೇಳುತ್ತವೆ. ಅದು ಇಂದಿನ ಒಡಿಶಾದ ಬಾಲಸೋರ್ ಸಮೀಪ ಇದೆ.
ಕಗ್ಗತ್ತಲ ಕೋಟೆಯಲ್ಲಿ ಶ್ರೀಮತಿ ಕಾರ್ವೆ ಎನ್ನುವ ಓರ್ವ ಮಹಿಳೆಯಿದ್ದು ಆಕೆ ಬದುಕಿ ಉಳಿದರು; ಆಕೆಯ ಪತಿ ರಾಬರ್ಟ್ ಕಾರ್ವೆ ಮೃತಪಟ್ಟರು. ಮೃತರಲ್ಲಿ ಹಲವು ಮಿಲಿಟರಿ ಅಧಿಕಾರಿಗಳು ಕೂಡ ಇದ್ದರು. ಕಂಪೆನಿಯ ಘಟಕದ ಮುಖ್ಯಾಧಿಕಾರಿ ಹಾಲ್ವೆಲ್ ತನ್ನ ಅನುಭವವನ್ನು ಬಣ್ಣಿಸಿದ್ದು ಹೀಗೆ: ರಾತ್ರಿ ೧೧.೩೦ರ ಬಳಿಕ ಕೋಣೆಯಲ್ಲಿನ ನರಕ ಇನ್ನೊಂದು ಹಂತಕ್ಕೆ ತಲಪಿತು. ಬಾಯಾರಿಕೆ ತಡೆಯಲಾಗದೆ ನಾನು ನನ್ನ ಮೂತ್ರ ಕುಡಿದೆ. ಒಳಗೆ ಜನ ಗಾಳಿ ಗಾಳಿ ಎಂದು ಕೂಗುತ್ತಿದ್ದುದು ಎಲ್ಲೆಡೆಯಿಂದ ಕೇಳಿಸುತ್ತಿತ್ತು. ರಾತ್ರಿ ೯ ಗಂಟೆಯ ಹೊತ್ತಿಗೇ ಬಾಯಾರಿಕೆಯ ಬಾಧೆ ಜೋರಾಗಿತ್ತು. ಸಮೀಪ ಇದ್ದ ಮುದಿ ಕಾವಲುಗಾರನಲ್ಲಿ ಅರ್ಧದಷ್ಟು ಜನರನ್ನು ಈ ಕೋಣೆಯಲ್ಲಿ ಉಳಿದ ಅರ್ಧವನ್ನು ಇನ್ನೊಂದು ಕೋಣೆಯಲ್ಲಿ ಹಾಕಲು ವಿನಂತಿಸಿ ಅದಕ್ಕೆ ಒಂದು ಸಾವಿರ ರೂ. ಕೊಡುವೆ ಎಂದು ಹೇಳಿದೆ. ಆತ ಪ್ರಯತ್ನಿಸುವೆ ಎಂದ. ಏನೂ ಆಗಲಿಲ್ಲ. ಮತ್ತೆ ಎರಡು ಸಾವಿರ ರೂ. ಕೊಡುವೆ ಎಂದು ಹೇಳಿದೆ. ಅಲ್ಲೇ ಇದ್ದ ಸುಬೇದಾರ ಹೇಳಿದರೆ ಆಗುತ್ತದೆ ಎಂದ. ಆದರೆ ಮಲಗಿದ್ದ ಸುಬೇದಾರನನ್ನು ಎಬ್ಬಿಸುವ ಧೈರ್ಯ ಯಾರಿಗೂ ಇರಲಿಲ್ಲ. ಒಳಗಿದ್ದ ೧೪೬ ಜನರಲ್ಲಿ ೧೨೩ ಜನ ಸತ್ತುಹೋದರು. ಜೊತೆಗಿದ್ದ ಬೇರೆಯವರು ಹಾಲ್ವೆಲ್ ಬಳಿ ಗಾಳಿಯಾಡಲು ಸ್ವಲ್ಪ ಜಾಗ ಮಾಡಿಕೊಟ್ಟು ಆತನನ್ನು ಉಳಿಸಿದರು ಎನ್ನಲಾಗಿದೆ.
ಬೆಳಗ್ಗೆ ಬಾಗಿಲು ತೆರೆಯುವ ಹೊತ್ತಿಗೆ ಹಾಲ್ವೆಲ್ ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿದ್ದ. ಶವಗಳ ದುರ್ವಾಸನೆ ಆಗಲೇ ಅಸಹನೀಯ ಮಟ್ಟ ತಲಪಿತ್ತು. ಈ ಅತ್ಯಂತ ಕ್ರೂರ ಘಟನೆಯ ಸಲಹೆ ನೀಡಿದ್ದಾತ ಕಲ್ಕತ್ತಾದ ವ್ಯಾಪಾರಿ, ಶ್ರೀಮಂತ ವ್ಯಕ್ತಿ ಉಮಾಚಂದ್ – ಎನ್ನುವ ಒಂದು ವಾದವೂ ಇದೆ. ತನ್ನನ್ನು ಕೋಟೆಯ ಸೆರೆಮನೆಯಿಂದ ಬಿಡಿಸಲಿಲ್ಲವೆಂದು ಆತನಿಗೆ ಹಾಲ್ವೆಲ್ ಮೇಲೆ ಸಿಟ್ಟಿತ್ತು. ಏನಿದ್ದರೂ ನವಾಬ ಸಿರಾಜ್ ಅದರ ಹೊಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ.
ಬ್ಲ್ಯಾಕ್ಹೋಲ್ನ ಸೇಡಿಗಾಗಿಯೇ ಪ್ಲಾಸಿ ಯುದ್ಧ ನಡೆಯಿತೆನ್ನುವ ಅಭಿಪ್ರಾಯ ಕೂಡ ಇದೆ.
ನಗರದ ಮರುನಾಮಕರಣ
ಕಲ್ಕತ್ತಾ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಸಿರಾಜ್ ಅಜ್ಜನ ನೆನಪಿಗಾಗಿ ಅದರ ಹೆಸರನ್ನು ಅಲಿನಗರ್ ಎಂದು ಬದಲಾಯಿಸಿದ. ಅನಂತರ ಫ್ರೆಂಚ್ ಮತ್ತು ಡಚ್ಚರ ಮೇಲೆ ಹಣ-ಉಡುಗೊರೆಗಾಗಿ ಒತ್ತಡ ಹಾಕಲು ಆರಂಭಿಸಿದ. ಫ್ರೆಂಚರಿಗೆ ೩.೫೦ ಲಕ್ಷ ರೂ. ಮತ್ತು ಡಚ್ಚರಿಗೆ ೪.೫೦ ಲಕ್ಷ ರೂ. ಕೊಡುವಂತೆ ಪೀಡಿಸತೊಡಗಿದ. ಮಾಣಿಕ್ಚಂದ್ಗೆ ಕಲ್ಕತ್ತಾದ ಅಧಿಕಾರವನ್ನು ನೀಡಿ, ಮುರ್ಷಿದಾಬಾದ್ಗೆ ಮರಳಿದ; ಆಗ ಆತನೊಂದಿಗೆ ೮-೯ ಸಾವಿರ ಸೈನಿಕರ ಕಾಲಾಳು ಪಡೆ ಮತ್ತು ೫,೦೦೦ ಅಶ್ವಪಡೆ ಇತ್ತೆಂದು ದಾಖಲೆಗಳು ಹೇಳುತ್ತವೆ.
ಕಲ್ಕತ್ತಾದ ಜಯ, ಅನಂತರ ಸೋದರಸಂಬಂಧಿ ಶೌಕತ್ಜಂಗ್ ಮೇಲಿನ ವಿಜಯಗಳು ಸಿರಾಜ್ನ ಅಹಂಕಾರವನ್ನು ಬೆಳೆಸಿದವು. ಮೇಲ್ವರ್ಗದವರಿಗೆ (ಅಮೀರರು) ಅವನ ಅವಿನಯದಿಂದ ಬೇಸರವಾಗಿತ್ತು. ಅವರು ಆತನಿಗೆ ಯಾವುದೇ ಸಲಹೆ ಕೊಡುತ್ತಿರಲಿಲ್ಲ. ಅದರಿಂದ ಆತ ಪ್ರತ್ಯೇಕಿತನಾದ; ಜಗತ್ತಿನ ಬಗ್ಗೆ ಅಜ್ಞಾನ ಬೆಳೆಯಿತು; ಅದು ಸರಿಯಾದ ಪಕ್ಷ ವಹಿಸುವ ಅಥವಾ ನಿರ್ಧಾರ ಕೈಗೊಳ್ಳುವ ಅಸಾಮರ್ಥ್ಯಕ್ಕೆ ಕಾರಣವಾಯಿತು – ಎಂದೂ ವಿಶ್ಲೇಷಿಸಲಾಗಿದೆ.
* * *
ಬಲಗೊಂಡ ನೌಕಾಪಡೆ
ಆ ಹೊತ್ತಿಗೆ ಭಾರತದಲ್ಲಿ ಜಾನ್ ಕಂಪೆನಿಗೆ (ಈಸ್ಟ್ ಇಂಡಿಯಾ ಕಂಪೆನಿ) ಹಲವು ಅದೃಷ್ಟಗಳು ಏರ್ಪಟ್ಟವು. ೧೭೫೫ರ ನವೆಂಬರ್ನಲ್ಲಿ ನೌಕಾಪಡೆ ಮುಖ್ಯಸ್ಥನಾಗಿ ರಿಯರ್ ಅಡ್ಮಿರಲ್ ಚಾರ್ಲ್ಸ್ ವಾಟ್ಸನ್ ಮುಂಬಯಿಗೆ ಬಂದಿಳಿದ. ಇಡೀ ಉಪಖಂಡದಲ್ಲಿ ಬ್ರಿಟಿಷ್ ಹಿತ ಕಾಯುವುದು ಆತನ ಜವಾಬ್ದಾರಿಯಾಗಿತ್ತು. ಕರ್ನಾಟಕದ ಯುದ್ಧಗಳು ಮತ್ತು ಯೂರೋಪಿನ ರಾಜಕೀಯ ಪರಿಸ್ಥಿತಿಯಿಂದಾಗಿ ಖಂಡಾಂತರ ಯುದ್ಧ ನಡೆಯಬಹುದೆಂಬ ಸ್ಥಿತಿಯಿತ್ತು. ಆದಕಾರಣ ದಕ್ಷಿಣ ಏಷ್ಯಾದಲ್ಲೂ ಅಪಾಯವನ್ನು ಎದುರಿಸಲು ಕಂಪೆನಿ ಸಿದ್ಧಗೊಳ್ಳಬೇಕಾಗಿತ್ತು.
ಅದೇ ಹೊತ್ತಿಗೆ ರಾಬರ್ಟ್ ಕ್ಲೈವ್ ಎರಡನೇ ಬಾರಿ ಭಾರತಕ್ಕೆ ಮರಳಿದ. ಮೂರು ವರ್ಷ ಆತ ಇಂಗ್ಲೆಂಡಿನ ತನ್ನ ಊರಲ್ಲಿದ್ದ. ಆಗಲೇ ಆತ ಇಂಗ್ಲೆಂಡ್ನಲ್ಲಿ ಹೀರೋ ಆಗಿದ್ದ. ೧೭೪೪ರಲ್ಲಿ ಕಂಪೆನಿಯ ರೈಟರ್ ಆಗಿ ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಆತ ಕೇವಲ ೧೮ ವರ್ಷದ ತರುಣ. ಮೈಲಾಪುರ ಯುದ್ಧದ ವೇಳೆ ಕ್ಲಾರ್ಕ್ ಆಗಿದ್ದ ಆತ ಮದ್ರಾಸಿನ ಸೈಂಟ್ ಜಾರ್ಜ್ ಕೋಟೆಯಿಂದ ತಪ್ಪಿಸಿಕೊಂಡಿದ್ದ. ಮುಂದೆ ಫ್ರೆಂಚರ ವಿರುದ್ಧವೇ ತನ್ನ ಶೌರ್ಯವನ್ನು (ಹೆರಾಯಿಸಮ್) ಪ್ರದರ್ಶಿಸಿ ೧೭೪೮ರ ಹೊತ್ತಿಗೆ ವ್ಯಾಪಾರಿ ಸೇನಾನಾಯಕ (ಮರ್ಚೆಂಟ್ ಮಿಲಿಟರಿಸ್ಟ್) ಎನಿಸಿಕೊಂಡಿದ್ದ. ೨೫ ವರ್ಷ ಆಗುವಾಗ (೧೭೫೧) ಲೆಫ್ಟಿನೆಂಟ್ ಹುದ್ದೆಗೇರಿದ್ದ. ಮೊದಲಿಗೆ ಮದ್ರಾಸ್ (ಇಂದಿನ ಚೆನ್ನೈ) ವಲಯದಲ್ಲಿ ಕ್ಲೈವ್ನನ್ನು ಯುವ ಲೆಫ್ಟಿನೆಂಟ್ ಆಗಿ ಕಂಪೆನಿ ನೇಮಿಸಿತು. ನಡುರಾತ್ರಿ ಅಥವಾ ಮುಂಜಾವ ದಾಳಿ ನಡೆಸುತ್ತಿದ್ದ ಆತ ಶತ್ರುಗಳು ಪಲಾಯನಗೈಯುವಂತೆ ಮಾಡುತ್ತಿದ್ದ. ಅವರು ಪುನಃ ಸಂಘಟಿತರಾಗಿ (ರೀಗ್ರೂಪ್ ಆಗುವುದು) ಮರಳುವಾಗ ಕೆಲವು ವಾರಗಳು ಕಳೆದಿರುತ್ತಿದ್ದವು. ಅಷ್ಟು ಸಮಯ ಕೋಟೆಯನ್ನು ರಕ್ಷಿಸಿಕೊಳ್ಳಲು ಸೇನೆಯ ಸಣ್ಣ ವಿಭಾಗ ಸಾಕಾಗುತ್ತಿತ್ತು. ೧೭೫೫ರಲ್ಲಿ ಭಾರತಕ್ಕೆ ಮರಳಿ ಬಂದ ರಾಬರ್ಟ್ ಕ್ಲೈವ್ ರಿ| ಅಡ್ಮಿರಲ್ ವಾಟ್ಸನ್ ಜೊತೆ ಸೇರಿ ಕೆಲವು ಕಾರ್ಯಾಚರಣೆಗಳನ್ನು ನಡೆಸಿದ; ಅದರಿಂದ ಆತನ ಗೌರವ ಹೆಚ್ಚಿತು.
ಕಲ್ಕತ್ತಾ ನಗರವನ್ನು ಮರಳಿ ವಶಪಡಿಸಿಕೊಳ್ಳುವ ಬಗ್ಗೆ ಕಲ್ಕತ್ತಾ ಕೌನ್ಸಿಲ್ ಮಾಹಿತಿಯನ್ನು ಸಂಗ್ರಹಿಸುತ್ತಿತ್ತು. ಸೋದರಸಂಬಂಧಿ ಶೌಕತ್ಜಂಗ್ ವಿರುದ್ಧ ಯುದ್ಧಕ್ಕಾಗಿ ಸಿರಾಜ್ ಕಲ್ಕತ್ತಾದಿಂದ ೧,೦೦೦ ಸೈನಿಕರನ್ನು ವಾಪಸು ಕರೆಸಿಕೊಂಡಿದ್ದ. ೧೭೫೬ರ ಅಕ್ಟೋಬರ್ ೭ರ ಹೊತ್ತಿಗೆ ಸಿರಾಜ್ ಬಲ ಮತ್ತಷ್ಟು ಇಳಿದ ಸುದ್ದಿ ಸಿಕ್ಕಿತು.
ಪೂರ್ಣಿಯಾ(ಬಿಹಾರ)ದ ಅಧಿಕಾರವನ್ನು ಬಿಟ್ಟುಕೊಡೆಂದು ಸಿರಾಜ್ ಶೌಕತ್ಜಂಗ್ಗೆ ಸಂದೇಶ ಕಳುಹಿಸಿದರೆ ಆತ ಪೂರ್ತಿ ಅಧಿಕಾರ (ಮನ್ಸದ್) ತನಗೆ ವಹಿಸಿಕೊಡುವಂತೆ ಉತ್ತರಿಸಿದ. ಆಗ ಸಿರಾಜ್ ಸೇನೆಯನ್ನೇ ಕಳುಹಿಸಿದ. ಅಕ್ಟೋಬರ್ ೧೬ರಂದು ಯುದ್ಧ ಸಂಭವಿಸಿತು. ಅದೇ ದಿನ ವಾಟ್ಸನ್ ಮತ್ತು ರಾಬರ್ಟ್ ಕ್ಲೈವ್ ಮದ್ರಾಸಿನಿಂದ ಕಲ್ಕತ್ತಾಗೆ ಹೊರಟಿದ್ದರು. ಆನೆಯ ಮೇಲೆ ಕುಳಿತು ಯುದ್ಧ ಮಾಡುತ್ತಿದ್ದ ಶೌಕತ್ ಓರ್ವ ಕಾಲಾಳು ಹಾರಿಸಿದ ಗುಂಡಿನಿಂದ ಮೃತಪಟ್ಟ.
ಆ ಹಂತದಲ್ಲಿ ಸಿರಾಜ್ನ ಅದೃಷ್ಟ ಏರುಗತಿಯಲ್ಲಿತ್ತು. ಶೌಕತ್ಜಂಗ್ ಮೇಲಿನ ಪ್ರಸ್ತುತ ವಿಜಯ ಐರೋಪ್ಯ ದೇಶಗಳವರ ಮೇಲೆ ಪ್ರಭಾವ ಬೀರಿತು. ಈ ಯುದ್ಧದಲ್ಲಿ ಸಿರಾಜ್ನ ಸೈನ್ಯ ಶಿಸ್ತುಬದ್ಧವಾಗಿತ್ತು. ಒಂದು ರೀತಿಯಲ್ಲಿ ಅಸಮರ್ಥ ಎನಿಸಿದ್ದ ಸಿರಾಜುದ್ದೌಲ ಸಿಂಹಾಸನ ಏರಿದ ಆರು ತಿಂಗಳಲ್ಲಿ ಮೊಘಲ್ ಚಕ್ರವರ್ತಿಯ ಮನ್ಸದ್(ಸನ್ನದು) ಹೊಂದಿರುವುದಕ್ಕೆ ಸಮರ್ಥನೆ ಒದಗಿಸಿದ ಎನ್ನಬಹುದು. ತನಗೊಂದು ತಡೆ ಎನಿಸಿದ್ದ ಶೌಕತ್ಜಂಗ್ನನ್ನು ಯುದ್ಧದಲ್ಲಿ ಮುಗಿಸಿದ. ಇಂಗ್ಲಿಷರನ್ನು ಕಲ್ಕತ್ತಾದಿಂದ ಹೊರಹಾಕಿದ; ಇತರ ಐರೋಪ್ಯ ದೇಶಗಳವರ ಮೇಲೆ ಪ್ರಾಬಲ್ಯ ಸ್ಥಾಪಿಸಿದ. ಈ ಸ್ಥಿತಿಯಲ್ಲಿ ಬದಲಾವಣೆ ತರಲು ಇಂಗ್ಲಿಷರಿಗೆ ಮಾತ್ರ ಸಾಧ್ಯ ಎಂಬಂತಿತ್ತು.
ಸಿರಾಜ್–ಕ್ಲೈವ್ ಯುದ್ಧ
ಬಂಗಾಳದಲ್ಲಿ ದಂಡಯಾತ್ರೆ ನಡೆಸುವ ಬಗ್ಗೆ ರಾಬರ್ಟ್ ಕ್ಲೈವ್ಗೆ ಸೈಂಟ್ ಜಾರ್ಜ್ ಕೋಟೆಯಿಂದ (ಮದ್ರಾಸ್) ಅಕ್ಟೋಬರ್ ೧೩ರಂದು ಔಪಚಾರಿಕ ಆದೇಶ ದೊರೆಯಿತು. ರಿ| ಅಡ್ಮಿರಲ್ ವಾಟ್ಸನ್ ನೌಕಾಪಡೆಯ ನೇತೃತ್ವ ವಹಿಸಲು ಬಂದಿದ್ದ. ಕ್ಲೈವ್ಗೆ ಬಂದ ಕಂಪೆನಿಯ ಸಂದೇಶದಲ್ಲಿ ಬಂಗಾಳವು ತಮಗೆ ಮುಖ್ಯ ಎಂದು ಹೇಳಲಾಗಿತ್ತು. ಭೂಸೇನೆಗೆ ಕ್ಲೈವ್ನೇ ದಂಡನಾಯಕ. ಕಂಪೆನಿಗೆ ಅವನಲ್ಲಿ ಪೂರ್ಣ ವಿಶ್ವಾಸವಿತ್ತು. ಬಂಗಾಳಕ್ಕೆ ಬಂದ ಕ್ಲೈವ್ ಕಲ್ಕತ್ತಾದ ಅಧಿಕಾರಿಗಳನ್ನು ಭೇಟಿ ಮಾಡಿದ. ವಹಿಸಿದ ಕೆಲಸ ಸುಲಭವಿರಲಿಲ್ಲ.
ಉನ್ನತಾಧಿಕಾರಿಯ ಸ್ಥಾನವನ್ನು ವಹಿಸಿಕೊಳ್ಳಲು ಕ್ಲೈವ್ಗೆ ಹಿಂಜರಿತವೇ ಉಂಟಾಯಿತು. ಅಲ್ಲಿ ಆಗಲೇ ಇದ್ದ ಸೈನ್ಯದ ಒಂದು ಭಾಗ ಕ್ಲೈವ್ ಕೆಳಗೆ ದುಡಿಯಲು ಒಪ್ಪಲಿಲ್ಲ. ಏಕೆಂದರೆ ಭೂಸೇನೆಯ ಇಡೀ ಅಧಿಕಾರವನ್ನು ರಾಬರ್ಟ್ ಕ್ಲೈವ್ಗೆ ನೀಡಿದ್ದು ಆ ವಿಭಾಗದ ನಾಯಕನಿಗೆ ಇಷ್ಟವಾಗಲಿಲ್ಲ. ಬ್ರಿಟಿಷರ ಸರ್ಕಾರೀ ಮತ್ತು ಕಂಪೆನಿಯ ಸೈನ್ಯಗಳು ಜಂಟಿಯಾಗಿ ಹೋರಾಡಬೇಕಿತ್ತು. ಕೊನೆಗೆ ರಿ| ಅಡ್ಮಿರಲ್ ವಾಟ್ಸನ್ ಜಾಣತನದ ಮೂಲಕ ಒಪ್ಪದ ಆ ಅಧಿಕಾರಿಯಿಂದ ಸೈನಿಕರನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಅಕ್ಟೋಬರ್ ೧೩ರಂದು ಸರ್ಕಾರ ಮತ್ತು ಕಂಪೆನಿಯ ತಲಾ ಐದು ಹಡಗುಗಳು ಪ್ರಯಾಣಿಕರು (ಸೈನಿಕರು) ಸೈನ್ಯದ ಸರಕು (ಕಾರ್ಗೊ), ಆಹಾರ ಪದಾರ್ಥ(ರೇಶನ್) ಮುಂತಾದವನ್ನು ಸಾಗಿಸಲು ಆರಂಭಿಸಿದವು. ಅದೇ ೧೯ರಂದು ಮದ್ರಾಸಿನಿಂದ ಇನ್ನೂ ಕೆಲವು ಹಡಗುಗಳು ಹೊರಟವು; ಮಾರ್ಗದಲ್ಲಿ ಬಿರುಗಾಳಿ ಎದುರಾದರೂ ಕೂಡ ಕಲ್ಕತ್ತಾಗೆ ಬಂದು ಸೇರಿದವು. ನವೆಂಬರ್ ೧೦ರಂದು ಅಡ್ಮಿರಲ್ ಆಹಾರ ಮತ್ತು ನೀರಿನ ರೇಶನ್ಗೆ (ಮಿತವ್ಯಯ) ಆದೇಶ ನೀಡಿದ. ಎರಡು ದಿನಗಳಾಗುವಾಗ ಪ್ರತಿಕೂಲ ಹವಾಮಾನದ ಕಾರಣದಿಂದ ಒಂದು ಹಡಗು ಕಲ್ಕತ್ತಾಗೆ ಬರುವ ಬದಲು ಸಿಲೋನ್(ಶ್ರೀಲಂಕಾ)ಗೆ ಹೋಗಬೇಕಾಯಿತು. ಅದರಿಂದಾಗಿ ಯುದ್ಧ ಆರಂಭಿಸುವ ಬಗ್ಗೆ ಡಿಸೆಂಬರ್ ೭ರವರೆಗೆ ಕಾಯಬೇಕಾಯಿತು.
ಇಂಗ್ಲಿಷರ ಯುದ್ಧಸಿದ್ಧತೆಯಿಂದ ಕಲ್ಕತ್ತಾದ ಗವರ್ನರ್ ಮಾಣಿಕ್ಚಂದ್ ಭಯಪಟ್ಟ. ನವಾಬ ಸಿರಾಜ್ಗೆ ತಲಪಿಸುವಂತೆ ಕ್ಲೈವ್ ಮತ್ತು ವಾಟ್ಸನ್ ಆತನಿಗೆ (ಮಾಣಿಕ್ಚಂದ್) ಪತ್ರವೊಂದನ್ನು ನೀಡಿದರು. ಡಿಸೆಂಬರ್ ೨೭ರಂದು ಅವರಿಬ್ಬರು ಸೇನೆಯ ಸಂಚಲನವನ್ನು ಶುರು ಮಾಡಿದರು. ಮರುದಿನ ಇಂಗ್ಲಿಷ್ ಸೈನ್ಯ ಮಾಯಾಪುರಕ್ಕೆ ಬಂತು. ಹಡಗುಗಳು ನದಿಯ ಮೂಲಕ ಬಂದು ದಾಳಿ ನಡೆಸಿದವು. ಎರಡು ದಿನಗಳಾಗುವಾಗ ಬ್ರಿಟಿಷ್ ಸೈನ್ಯ ಕಲ್ಕತ್ತಾಕ್ಕೆ ೧೬ ಕಿ.ಮೀ. ನಷ್ಟು ಹತ್ತಿರ ಬಂದಿತ್ತು. ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಗವರ್ನರ್ ಮಾಣಿಕ್ಚಂದ್ನ ಸೈನಿಕರು ಕಲ್ಕತ್ತಾದಿಂದ ದಕ್ಷಿಣಕ್ಕೆ ಬಂದು ಗುಂಡುಹಾರಿಸಿದರು. ಕ್ಲೈವ್ ಸೈನ್ಯ ಪ್ರತಿದಾಳಿ ನಡೆಸಿದಾಗ ಮಾಣಿಕ್ಚಂದ್ ಸೈನ್ಯ ಹಿಂದೆ ಸರಿಯಿತು; ಅದರ ಹಿಂದೆ ಅವರ ದೊಡ್ಡ ಸೈನ್ಯ ಇತ್ತು. ಮಾಣಿಕ್ಚಂದ್ ಸೂಚನೆ ಮೇರೆಗೆ ಸೈನ್ಯ ಕಲ್ಕತ್ತಾಗೆ ವಾಪಸಾಯಿತು. ಅದೇ ರಾತ್ರಿ ಕೋಟೆ ಇಂಗ್ಲಿಷರ ವಶವಾಯಿತು. ಬಂಗಾಳದ ಸೈನ್ಯ ಕತ್ತಲಲ್ಲಿ ಕರಗಿಹೋಯಿತು.
ತನ್ನಾ ಕೋಟೆಗೆ ದಾಳಿ
ಡಿಸೆಂಬರ್ ೩೦ ರಂದು ಕಂಪೆನಿಯ ಸೇನೆ ನದಿಯಲ್ಲಿ ಮತ್ತಷ್ಟು ಮುಂದುವರಿದು ತನ್ನಾ ಕೋಟೆಯನ್ನು ಸಮೀಪಿಸಿತು. ಮಾಣಿಕ್ಚಂದ್ ಅದನ್ನು ಕೂಡ ಬಿಟ್ಟುಕೊಟ್ಟ. ೧೭೫೭ರ ಜನವರಿ ೨ರಂದು ಕ್ಲೈವ್ ಹೂಗ್ಲಿ ಪೂರ್ವ ದಂಡೆಯ ಅಲಿಘರ್ನಲ್ಲಿ ನೆಲೆಯಾದ; ಮತ್ತು ಉತ್ತರಕ್ಕೆ ಕಲ್ಕತ್ತಾದತ್ತ ಸೇನಾ ಸಂಚಲನವನ್ನು ಆರಂಭಿಸಿದ. ಒಂದೆಡೆ ಬಿರುಗಾಳಿ ಅಡ್ಡಿಪಡಿಸಿದರೆ, ಇನ್ನೊಂದೆಡೆ ಅವರ ಹಡಗುಗಳ ಮೇಲೆ ಸಿರಾಜ್ ಫಿರಂಗಿಗಳು ಗುರಿಯಿಟ್ಟವು; ೧೬ ಸೈನಿಕರು ಮೃತಪಟ್ಟರು. ಇಂಗ್ಲಿಷರ ಫಿರಂಗಿಗಳು ಕೂಡ ದಾಳಿ ಆರಂಭಿಸಿದವು. ಬಂಗಾಳದ ಸೈನ್ಯ ಇಂಗ್ಲಿಷರ ಫಿರಂಗಿಗಳ ಮೇಲೆ ಮೇಲುಗೈ ಸಾಧಿಸಿತು. ಈ ನಡುವೆ ಮಾಣಿಕ್ಚಂದ್ ಸೈನ್ಯ ಫೋರ್ಟ್ ವಿಲಿಯಂ ಬಿಟ್ಟು ಪಲಾಯನ ಮಾಡಿತ್ತು. ಮರುದಿನ ಕೋಟೆಯ ಮೇಲೆ ಬ್ರಿಟಿಷ್ ಧ್ವಜವನ್ನು ಹಾರಿಸಿದರು. ಹಿಂದಿನ ಕೌನ್ಸಿಲ್ನವರು ಅಧಿಕಾರ ವಹಿಸಿಕೊಂಡರು. ವಾರದಲ್ಲಿ ಕ್ಲೈವ್ ಮತ್ತು ಬಳಗದವರು ಹೂಗ್ಲಿ ಪಟ್ಟಣದಿಂದ ಸಿರಾಜ್ನ ಹೊರಠಾಣೆ(ಔಟ್ಪೋರ್ಟ್)ಯನ್ನು ಕಿತ್ತೊಗೆದರು.
ಕಂಪೆನಿಯ ಕಲ್ಕತ್ತಾ ಕೌನ್ಸಿಲ್ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಾರಂಭ ಮಾಡಿತು. ಒಂದು ಪ್ರಜಾಸೈನ್ಯವನ್ನು (militia) ರಚಿಸಲು ನಿರ್ಧರಿಸಿತು. ಮೇಜರ್ ಕಿಲ್ಪ್ಯಾಟ್ರಿಕ್ ಅದರ ನಾಯಕ. ಆರ್ಥಿಕ ಚಟುವಟಿಕೆಗಳು ಚುರುಕುಗೊಂಡವು. ಹಿಂದೆ ಅಲ್ಲಿದ್ದು ಬಿಟ್ಟುಹೋದವರು ಮರಳಿ ಬಂದರು. ಕಂಪೆನಿ ತನ್ನ ಸೇವಕರ (ನೌಕರರ) ಬಗ್ಗೆ ಹೆಚ್ಚಿನ ಗಮನ ಹರಿಸಿತು.
ಹೂಗ್ಲಿ ಮೇಲಿನ ಇಂಗ್ಲಿಷರ ದಾಳಿ ಸಿರಾಜ್ನನ್ನು ಕೆರಳಿಸಿತು. ಕಲ್ಕತ್ತಾದ ಕಡೆಗೆ ದಂಡಯಾತ್ರೆ ಆರಂಭಿಸಿದ. ಜೊತೆಗೆ ಮೀರ್ ಜಾಫರ್, ರಾಜ್ಬಲ್ಲಭ್ ಮುಂತಾದವರಿದ್ದರು. ಆಗ ಸೇಠ್ಗಳು ಮತ್ತು ವ್ಯಾಪಾರಿ ಉಮಾಚಂದ್ಗೆ ಅಡಕತ್ತರಿಗೆ ಸಿಕ್ಕಿದಂತಾಯಿತು. ಪರಿಸ್ಥಿತಿ ಸೂಕ್ಷ್ಮವಾಗಿತ್ತು. ಅದಕ್ಕಾಗಿ ದ್ವಂದ್ವನೀತಿಯನ್ನು (ಡಬಲ್ಗೇಮ್) ಕೈಗೊಂಡರು. ಕ್ಲೈವ್ ಜೊತೆ ಪತ್ರವ್ಯವಹಾರ ನಡೆಸುವಂತೆ ಸಿರಾಜ್ಗೆ ಸಲಹೆ ನೀಡಿದರು; ಉಮಾಚಂದ್ಗೆ ಸಿರಾಜ್ ಕಲ್ಕತ್ತಾ ದಾಳಿಯಿಂದ ಉಂಟಾದ ನಷ್ಟವನ್ನು ಭರಿಸಬೇಕಾಗಿತ್ತು.
ಯುದ್ಧದ ಸಿದ್ಧತೆ
ಕ್ಲೈವ್ ಮತ್ತು ವಾಟ್ಸನ್ ಸಿರಾಜ್ನನ್ನು ಎದುರಿಸುವ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಂಡರು. ಕಲ್ಕತ್ತಾದ ಉತ್ತರದಲ್ಲಿ ಹಲವು ಔಟ್ಪೋಸ್ಟ್ಗಳಿದ್ದ ಶಿಬಿರವನ್ನು ಸ್ಥಾಪಿಸಿದರು; ಅದು ಕೋಟೆಯನ್ನು ಕೂಡ ಒಳಗೊಂಡಿತ್ತು. ಮದ್ದುಗುಂಡಿನ ಸೇನೆಯನ್ನು ಬಲಪಡಿಸಿದರು. ಫ್ರೆಂಚರು ಸಿರಾಜ್ಗೆ ನೆರವಾಗಬಹುದೆನ್ನುವ ಭಯ ಬ್ರಿಟಿಷರನ್ನು ಕಾಡುತ್ತಿತ್ತು. ಆದರೆ ಅವರು ತಟಸ್ಥರಾಗಿದ್ದು ಸಿರಾಜ್ಗೆ ನೆರವು ನೀಡಲು ನಿರಾಕರಿಸಿದರು. ಕ್ಲೈವ್ ಸಿರಾಜ್ಗೆ ಪತ್ರ ಬರೆದು ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ವಿನಂತಿಸಿದ. ಅದಕ್ಕೆ ಸೌಜನ್ಯದ ಉತ್ತರ ನೀಡಿದರೂ ಕೂಡ ಸಿರಾಜ್ ತನ್ನ ಸೇನೆಯ ಸಂಚಲನವನ್ನು ನಿಲ್ಲಿಸಲಿಲ್ಲ. ಇಬ್ಬರ ನಡುವೆ ಸಂದೇಶಗಳು ಆಚೀಚೆಯಾದರೂ ಕೂಡ ಸಿರಾಜ್ನ ಸೈನ್ಯ ಕಲ್ಕತ್ತಾ ಕಡೆಗೆ ಹೋಗುತ್ತಲೇ ಇತ್ತು. ಕ್ಲೈವ್ ಸಿದ್ಧಪಡಿಸಿದ್ದ ಸೇನಾಶಿಬಿರವನ್ನು ಕೂಡ ಸಮೀಪಿಸಿತು. ಸೇನೆಯ ಒಂದು ವಿಭಾಗ ರಸ್ತೆಯ ಮೇಲೆ ಹೋದರೆ ಇನ್ನೊಂದು ಬ್ರಿಟಿಷ್ ಸೈನ್ಯ ಯೋಜಿಸಿದ್ದ ಕಾರಿಡಾರ್ ಮೇಲೆ ಮುಂದುವರಿಯಿತು.
ರಾಬರ್ಟ್ ಕ್ಲೈವ್ ತನ್ನ ಸೈನ್ಯವನ್ನು ಆ ರೀತಿ ವಿಭಾಗ ಮಾಡಲಿಲ್ಲ. ಸಿರಾಜ್ನ ಸೇನೆ ಕಂಪೆನಿಗೆ ಸೇರಿದ ಪ್ರದೇಶದೊಳಗೆ ಪ್ರವೇಶಿಸಿ ನಗರದ (ಕಲ್ಕತ್ತಾ) ಉತ್ತರಭಾಗದ ಸ್ಥಳೀಯ ಜನರ ಮನೆಗಳ ಮೇಲೆ ದಾಳಿ ನಡೆಸಿತು. ಹಿಂದಿನ ವರ್ಷ ಇದೇ ರೀತಿ ಮಾಡಿದ್ದು ದಾಳಿಗೆ ಇದೊಂದೇ ದಾರಿ ಎಂಬಂತಿತ್ತು. ಪೂರ್ವದಲ್ಲಿ ಕುರುಚಲು ಕಾಡು ಮತ್ತು ನದಿ-ಉಪನದಿಗಳಿದ್ದರೆ ಹೂಗ್ಲಿ ನದಿಯಲ್ಲಿ ಬ್ರಿಟಿಷರ ಫಿರಂಗಿ ಪಡೆ ತಳವೂರಿತ್ತು. ಘರ್ಷಣೆಯಲ್ಲಿ ಬಂಗಾಳದ ಹಲವು ಸೈನಿಕರು ಮೃತಪಟ್ಟು, ಸುಮಾರು ೫೦ ಸೈನಿಕರನ್ನು ಇಂಗ್ಲಿಷ್ ಸೇನೆ ಬಂಧಿಸಿತು. ಅಲ್ಲಿಗೆ ಆ ಭಾಗದಲ್ಲಿ ಸಿರಾಜ್ನ ದಾಳಿ ನಿಂತಿತು.
ಆದರೆ ಅವನ ಸೈನ್ಯ ನಗರದ ಉತ್ತರದ ಬಯಲುಪ್ರದೇಶ, ಬ್ರಿಟಿಷ್ ಕ್ಯಾಂಪ್ನ ಪೂರ್ವ ಮತ್ತು ಆಗ್ನೇಯ ಭಾಗಗಳನ್ನು ಆಕ್ರಮಿಸಿತು; ಮತ್ತು ಸೇನೆಯ ಒಂದು ಭಾಗ ಉದ್ಯಾನವನವನ್ನು ಸುತ್ತುವರಿಯಿತು. ಕ್ಲೈವ್ ಸಿಟ್ಟಾಗಿ ಇನ್ನಷ್ಟು ಸೈನಿಕರಿಂದ ದಾಳಿ ನಡೆಸಿದ. ಬಂಗಾಳಿ ಸೈನ್ಯ ೯ ಫಿರಂಗಿಗಳಿಂದ ದಾಳಿ ನಡೆಸಿತು; ಉದ್ಯಾನದ ಎರಡೂ ಕಡೆ ಅದರ ಕುದುರೆಸವಾರರ ಸೈನ್ಯ ಇತ್ತು, ಅಪಾಯವನ್ನು ಊಹಿಸಿದ ಕ್ಲೈವ್ ಫಿರಂಗಿ ದಾಳಿಯನ್ನು ಮಾತ್ರ ನಡೆಸಿದ; ಮತ್ತು ಕತ್ತಲಾಗುವ ಮುನ್ನವೇ ದಾಳಿಯನ್ನು ನಿಲ್ಲಿಸಿದ.
ಫೆಬ್ರುವರಿ ೪ರಂದು ಸಿರಾಜ್ನ ಸೈನ್ಯದ ಮುಖ್ಯಭಾಗ ವಾಟ್ಸ್ ಕ್ರಮಿಸಿದ ದಾರಿಯನ್ನು ಬಳಸಿ ಕಾರಿಡಾರ್ನಲ್ಲಿ ಮುಂದುವರಿಯಿತು. ಸಿರಾಜ್ ಕೆಲವು ಕಿ.ಮೀ.ಗಳಷ್ಟು ಹಿಂದೆ ಇದ್ದ. ಅಲ್ಲಿಂದಲೇ ಬ್ರಿಟಿಷ್ ಪ್ರತಿನಿಧಿಗಳಿಗೊಂದು ಪತ್ರ ಬರೆದು ಉತ್ತರದ ಹಳ್ಳಿ ನವಾಬ್ ನಗರದಲ್ಲಿ ಸ್ನೇಹಾಚಾರದ ಸಭೆ ನಡೆಸೋಣ ಎಂದು ಹೇಳಿದ; ಆ ಹಳ್ಳಿ ಅವನ ಸೈನ್ಯದ ಹಿಡಿತದಲ್ಲಿತ್ತು.
ದೂತರ ಬಂಧನ ಯತ್ನ
ಆದರೆ ಬ್ರಿಟಿಷರು ಅಲ್ಲಿಗೆ ಹೋಗುವಾಗ ಆತ ಅಲ್ಲಿರಲಿಲ್ಲ. ಸೇನೆಯ ಒಂದು ತುಕಡಿಯ ಜೊತೆ ಬೇರೆ ಕಡೆಗೆ ಹೋಗಿದ್ದ; ಸಂಜೆ ಮರಳಿದ. ಉಮಾಚಂದ್ನ ಉದ್ಯಾನದಲ್ಲಿ ಕ್ಯಾಂಪ್ ಹಾಕಿಸಿದ್ದ. ಹೀಗೆ ಸಿರಾಜ್ ಎರಡು ದಿನಗಳಲ್ಲಿ ಕ್ಲೈವ್ಗೆ ಎರಡು ಬಾರಿ ಅಚ್ಚರಿ ಮೂಡಿಸಿದ್ದ. ಬಂದಿದ್ದ ಇಬ್ಬರು ಇಂಗ್ಲಿಷ್ ಪ್ರತಿನಿಧಿಗಳು ಸಿರಾಜ್ ಬ್ರಿಟಿಷರ ಜಾಗಕ್ಕೆ ಪ್ರವೇಶಿಸಿದ್ದಾಗಿ ಆಕ್ಷೇಪಪೂರ್ವಕ ಹೇಳಿದರು. ಶಾಂತಿಯ ಮಾತನ್ನು ಆಡುತ್ತಲೇ ಹೀಗೆ ಮಾಡಿದ ಪರಿಣಾಮವಾಗಿ ಕ್ಲೈವ್ ಮರುದಿನ ಮುಂಜಾವ ದಾಳಿ ನಡೆಸಲು ನಿರ್ಧರಿಸಿದ್ದ. ಅಲ್ಲಿ ಪ್ರತಿನಿಧಿಗಳನ್ನು ಬಂಧಿಸುವ ಲಕ್ಷಣ ಕಂಡಾಗ ಅವರು ಸ್ಥಳದಲ್ಲಿ ಕತ್ತಲೆ ಉಂಟುಮಾಡಿ ಅಲ್ಲಿಂದ ಪರಾರಿಯಾದರು.
ಭೀಕರ ಕದನ
ಆ ರೀತಿಯಲ್ಲಿ ಬ್ರಿಟಿಷರಿಂದ ಒಂದು ವಿಲಕ್ಷಣ ದಾಳಿ ನಡೆಯಿತು. ಸಿರಾಜ್ಗೆ ಹಿಂದೆಂದೂ ಹಾಗೆ ಆಗಿರಲಿಲ್ಲ. ಸುಮಾರು ೬೦೦ ಜನ ನೌಕಾಪಡೆ ಸೈನಿಕರು ನಡುರಾತ್ರಿ ವೇಳೆ ಹಡಗಿನಿಂದ ಇಳಿದು, ಮತ್ತೆ ೬೫೦ ಐರೋಪ್ಯ ಸೈನಿಕರ ಜೊತೆ ಸೇರಿಕೊಂಡರು. ಅದಲ್ಲದೆ ೮೦೦ ಜನ ಸಿಪಾಯಿಗಳಿದ್ದರು. ಮುಖ್ಯ ಸೈನ್ಯದ ಮುಂದೆ ಮತ್ತು ಹಿಂಭಾಗದಲ್ಲಿ ಲಷ್ಕರ್ಗಳು (ಭಾರತೀಯ ಹಡಗಿನ ಸಿಬ್ಬಂದಿ) ಇದ್ದರು. ಅವರಿಗೆ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ಹೊರುವ ಕೆಲಸ. ಕತ್ತಲೆಯಲ್ಲಿ ಅವರು ಪಲಾಯನ ಮಾಡಬಾರದೆಂದು ಐರೋಪ್ಯ ಸೈನಿಕರು ನಿಗಾ ಇಡುತ್ತಿದ್ದರು; ರಾಬರ್ಟ್ ಕ್ಲೈವ್ ಸೇನೆಯ ಮಧ್ಯಭಾಗದಲ್ಲಿದ್ದ.
ಮೀರ್ ಜಾಫರ್ ಜೊತೆಗಿದ್ದ ಸಿರಾಜ್ ಸೇನೆಯ ಒಂದು ಭಾಗ ಮರಾಠಾ ಕಂದಕದ ಬಳಿಯಿದ್ದರೆ, ದೊಡ್ಡ ಭಾಗ ಉಮಾಚಂದ್ನ ಗಾರ್ಡನ್ ಬಳಿ ಇತ್ತು. ಅಲ್ಲಿದ್ದ ಸಿರಾಜ್ನ ರಕ್ಷಣೆ ಅದರ ಉದ್ದೇಶ. ಉಳಿದ ಭಾಗ ಮರಾಠಾ ಕಂದಕ ಮತ್ತು ಕೆರೆಯ ನಡುವಣ ಭಾಗದಲ್ಲಿ ಅವ್ಯವಸ್ಥೆಯಲ್ಲಿತ್ತು.
ಅರುಣೋದಯಕ್ಕಿಂತ ಸ್ವಲ್ಪ ಮೊದಲು ದಾಳಿ ನಡೆಸಬೇಕೆನ್ನುವುದು ಕ್ಲೈವ್ ತಂತ್ರವಾಗಿತ್ತು; ಮಧ್ಯೆ ಒಂದು ರಾಕೆಟ್ ಸಿಡಿದು ಸ್ವಲ್ಪ ಗೊಂದಲವಾಯಿತು. ಅಷ್ಟರಲ್ಲಿ ಬೆಳಗಾಯಿತು. ಆದರೆ ದಟ್ಟ ಮಂಜು ಇದ್ದ ಕಾರಣ ದಾಳಿ ಕಷ್ಟವಾಗಿತ್ತು. ಇಂಗ್ಲಿಷ್ ಸೇನೆ ಉಮಾಚಂದ್ ಗಾರ್ಡನ್ ಬಳಿಗೆ ಹೋಯಿತು. ಅಲ್ಲಿ ನವಾಬನ ರಕ್ಷಣೆಗಿದ್ದ ಅಶ್ವ ಪಡೆ ಚೆನ್ನಾಗಿತ್ತು; ಆದರೆ ಬೇರೆ ಕಡೆಗೆ ಹೋಗುತ್ತಿತ್ತು. ಗಾರ್ಡನ್ಗೆ ೩೦ ಮೀ. ಇದ್ದಾಗ ಇಂಗ್ಲಿಷ್ ಪಡೆಯವರು ಗುಂಡು ಹಾರಿಸಿದರು. ಹಲವರು ಸತ್ತು ಗೊಂದಲ ಉಂಟಾಯಿತು, ಉಳಿದವರು ಚದುರಿದರು. ಸೈನಿಕರು ಗುಂಡು ಹಾರಿಸುತ್ತಾ ಮುಂದೆಹೋದರು. ಆದರೆ ಇಂಗ್ಲಿಷ್ ಸೇನೆಗೆ ಅಲ್ಲೊಂದು ಸಮಸ್ಯೆ ಎದುರಾಯಿತು. ಮುಂದೆ ಸಿರಾಜ್ ವಶದಲ್ಲಿದ್ದ ಜಾಗವಿದ್ದು ಕ್ಲೈವ್ ಸೈನ್ಯಕ್ಕೆ ತಡೆ ಉಂಟಾಯಿತು. ಅದನ್ನು ಬಿಟ್ಟು ಗಾರ್ಡನ್ನಲ್ಲಿದ್ದ ಸಿರಾಜ್ ಸೈನ್ಯದ ಮೇಲೆ ಆಕ್ರಮಣ ಮಾಡಲು ನಿರ್ಧರಿಸಿ ಗುಂಡು ಹಾರಿಸಿದರು. ಹಲವು ಸಿಪಾಯಿಗಳು ಮೃತಪಟ್ಟರು. ಗೊಂದಲದ ಅರಿವಾಗಿ ಕ್ಲೈವ್ ಕೊನೆಗೂ ಪಡೆಯನ್ನು ಹಿಡಿತಕ್ಕೆ ತಂದ.
ಕ್ಲೈವ್ನ ಕೆಲವು ಅಧಿಕಾರಿಗಳು ಮರಳುವುದಕ್ಕೆ ಕಾಯುತ್ತಿದ್ದರು. ಸಿರಾಜ್ನ ಸೇನೆ ಹಾಕಿದ ಬ್ಯಾರಿಕೇಡ್ ಬಗ್ಗೆ ತಿಳಿಯಲು ಕೆಲವರು ಹೋದಾಗ ಅವರ ಮೇಲೆ ದಾಳಿ ನಡೆಯಿತು. ಸುಮಾರು ಇನ್ನೂರು ಗಜ ದೂರದಿಂದ ಎರಡು ದೊಡ್ಡ ಫಿರಂಗಿಗಳು ಅನಿರೀಕ್ಷಿತವಾಗಿ ದಾಳಿ ನಡೆಸಿದವು. ಅಲ್ಲಿ ೨೨ ಜನ ಐರೋಪ್ಯ ಸೈನಿಕರು ಮೃತಪಟ್ಟರು. ಮತ್ತೆ ಫಿರಂಗಿ ದಾಳಿಯ ಹಾನಿಯನ್ನು ಕನಿಷ್ಠಗೊಳಿಸುವಂತೆ ಸೈನ್ಯವನ್ನು ಸಜ್ಜುಗೊಳಿಸಲಾಯಿತು. ಅಗಲವಾದ ಎತ್ತರದ ರಸ್ತೆಯನ್ನು ಏರಿದರು. ಆಚೆ ಕಡೆ ಕಂಪೆನಿಯ ಜಾಗ; ಮತ್ತೆ ಮುಂದುವರಿದರೆ ಕಲ್ಕತ್ತಾ ಕೋಟೆ. ಆದರೆ ಮಂಜಿನಿಂದಾಗಿ ತುಂಬಾ ಕಷ್ಟವಾಯಿತು. ಬೆಳಗ್ಗೆ ೯ ಗಂಟೆಯ ಬಳಿಕ ಮಂಜು ಕಡಮೆಯಾಯಿತು. ಭತ್ತದ ಗದ್ದೆಗಳ ಮೂಲಕ ಕ್ಲೈವ್ ಸೇನೆ ಹೋಗುತ್ತಿದ್ದಾಗ ಸಿರಾಜ್ ಕಡೆಯಿಂದ ಫಿರಂಗಿ ದಾಳಿ ನಡೆಯಿತು.
ನವಾಬ ಸಿರಾಜ್ ಇನ್ನೂ ಉಮಾಚಂದ್ನ ಉದ್ಯಾನದಲ್ಲಿದ್ದು, ಸುತ್ತ ದೊಡ್ಡ ಅಶ್ವಪಡೆ ಇತ್ತು. ಕ್ಲೈವ್ ಪಡೆ ಮಧ್ಯಾಹ್ನದ ಹೊತ್ತಿಗೆ ಕೋಟೆಯನ್ನು ಸೇರಿಕೊಂಡಿತು. ಅದಕ್ಕೆ ಸಾಕಷ್ಟು ಏಟು ಬಿದ್ದಿತ್ತು. ನೌಕಾಪಡೆಯ ಯೋಧರು ಸೇರಿದಂತೆ ೨೭ ಸೈನಿಕರು, ೧೮ ಸಿಪಾಯಿಗಳು ಸತ್ತು, ೭೦ ಜನ ಗಾಯಗೊಂಡಿದ್ದರು. ಇಬ್ಬರು ಕ್ಯಾಪ್ಟನ್ಗಳು ಹಾಗೂ ಕ್ಲೈವ್ನ ಕಾರ್ಯದರ್ಶಿ ಮೃತರಲ್ಲಿ ಸೇರಿದ್ದರು.
ಕ್ಲೈವ್ ಕಾರ್ಯಶೈಲಿಗೆ ಟೀಕೆ
ಈ ಹಾನಿಯಿಂದ ಕ್ಲೈವ್ ಸೈನ್ಯದ ಅಧಿಕಾರಿಗಳು ಮತ್ತು ಸೈನಿಕರ ಸ್ಥೈರ್ಯ ಸ್ವಲ್ಪಮಟ್ಟಿಗೆ ಕುಂದಿತು; ಕಮಾಂಡರ್ ತಮ್ಮನ್ನು ಅಪಾಯಕ್ಕೆ ಸಿಲುಕಿಸಿದ ಎಂದವರು ಭಾವಿಸಿದರು; ಉದ್ದೇಶ ತುಂಬಾ ಸಣ್ಣದಿತ್ತು. ಕಾರ್ಯಾಚರಣೆ ದುಡುಕಿನದ್ದು ಮತ್ತು ಕಾಳಜಿ ಇಲ್ಲದ್ದು ಎನಿಸಿತು. ಕ್ಲೈವ್ ಹಲವು ತಪ್ಪು ಹೆಜ್ಜೆಗಳನ್ನಿಟ್ಟು ತಪ್ಪು ದಾರಿಯಲ್ಲಿ ಹೋಗಿದ್ದ ಎಂಬ ಟೀಕೆ ಬಂತು. ಅನಗತ್ಯ ಅಪಾಯವನ್ನು ಮೈಮೇಲೆ ಎಳೆದುಕೊಂಡ; ಸಾವಿನ ಸಂಖ್ಯೆ ಇಳಿಸಬಹುದಿತ್ತು – ಎಂಬ ಮಾತು ಕೂಡ ಬಂತು.
ಆದರೆ ಇದರಲ್ಲಿ ಸಿರಾಜ್ಗೆ ಕೂಡ ಪಾಠ ಇತ್ತು. ಹಿಂದಿನಂತೆ ನಿಷ್ಕ್ರಿಯ ಆಗಿದ್ದರೆ ಇನ್ನು ನಡೆಯದು ಎಂಬುದು ಅರಿವಿಗೆ ಬಂತು. ಬ್ರಿಟಿಷ್ ದಾಳಿಯನ್ನು ನಿವಾರಿಸಿದ ಬಳಿಕವೂ ಸಿರಾಜ್ ಮತ್ತವನ ಸೈನ್ಯದಲ್ಲಿ ಆತಂಕ ಉಳಿಯಿತು. ಸಾವು ಬಹಳಷ್ಟು ಆಗಿತ್ತು. ೨೨ ಹಿರಿಯ ಅಧಿಕಾರಿಗಳು, ಸುಮಾರು ೬೦೦ ಸಾಮಾನ್ಯ ಸೈನಿಕರು, ನಾಲ್ಕು ಆನೆ, ೫೦೦ ಕುದುರೆಗಳು, ಕೆಲವು ಒಂಟೆ, ಹಲವು ಎತ್ತುಗಳು ಯುದ್ಧದಲ್ಲಿ ಸತ್ತವು. ನವಾಬ ಹಿಂದೆಂದೂ ರಣರಂಗದ ಇಷ್ಟು ಸಮೀಪ ಹೋಗಿರಲಿಲ್ಲ. ತಮ್ಮ ದಾಳಿ ಸರಿ ಇರಲಿಲ್ಲ. ಅಧಿಕಾರಿಗಳು ಹೇಡಿಗಳಂತೆ ವರ್ತಿಸಿದರು – ಎಂದಾತ ಬೈದ.
ಶಾಂತಿಯ ಮಾತುಕತೆ
ಈ ರಾತ್ರಿ ದಾಳಿಯಿಂದಾಗಿ ಕ್ಲೈವ್ ಮತ್ತೆ ದಾಳಿ ನಡೆಸುವುದು ತಪ್ಪಿತು. ಮತ್ತೆ ಮಾತುಕತೆಯ ಸಮಯ ಬಂತು. ಮೊದಲು ಅಂತಹ ಸಂದೇಶ ನೀಡಿದುದು ಸಿರಾಜ್ನೇ. ಸೇಠ್ ರಂಜಿತ್ ರಾ ಮೂಲಕ ಸಂದೇಶ ಕಳುಹಿಸಿದ. ಕ್ಲೈವ್ ತನ್ನ ಉತ್ತರದಲ್ಲಿ ದಾಳಿ ನಡೆಸುವುದಕ್ಕೆ ಬೇರೆ ಉದ್ದೇಶವಿರಲಿಲ್ಲ. ಬ್ರಿಟಿಷ್ ಸೈನ್ಯದ ಸ್ವರೂಪ ಮತ್ತು ಸಾಮರ್ಥ್ಯಗಳನ್ನು ತಿಳಿಸುವುದಷ್ಟೇ ತಮ್ಮ ಉದ್ದೇಶವಾಗಿತ್ತು; ಏನಿದ್ದರೂ ತಾನು ಮಾತುಕತೆಗೆ ಮುಕ್ತನಾಗಿದ್ದೇನೆ ಎಂದು ತಿಳಿಸಿದ. ಸಿರಾಜ್ ತನ್ನ ಸೈನ್ಯದ ಒಂದು ಭಾಗವನ್ನು ಕಲ್ಕತ್ತಾದ ಈಶಾನ್ಯ ಭಾಗಕ್ಕೆ ಕಳುಹಿಸಿ ಬ್ರಿಟಿಷ್ ಸೈನ್ಯದ ಎದುರು ನಿಲ್ಲಿಸಿದ. ಆಗಲೂ ಕ್ಲೈವ್ ಶಾಂತವಾಗಿಯೇ ಇದ್ದ.
ಕಂಪೆನಿಗೆ ಹಲವು ಅಧಿಕಾರ
ಫೆಬ್ರುವರಿ ೯ರಂದು ಅಲಿನಗರ್ ಒಪ್ಪಂದಕ್ಕೆ (Treaty of Alinagar) ಸಹಿ ಹಾಕಲಾಯಿತು. ಅದರಂತೆ ತನ್ನ ವಶದಲ್ಲಿದ್ದ ಕಂಪೆನಿಯ ಫ್ಯಾಕ್ಟರಿಗಳ ಅಧಿಕಾರಿಗಳನ್ನು ಮರಳಿಸಲು ಸಿರಾಜ್ ಒಪ್ಪಿದ. ಕಲ್ಕತ್ತಾದ ಆಕರ್ಷಕರಣ ಮತ್ತು ಅಲ್ಲಿ ಕೋಟೆ ಕಟ್ಟುವುದಕ್ಕೆ ಒಪ್ಪಿಗೆ ನೀಡಲಾಯಿತು. ಕಂಪೆನಿಯವರು ತಮಗೆ ಬೇಕಾದ ಚಿನ್ನ-ಬೆಳ್ಳಿ ನಾಣ್ಯಗಳನ್ನು ಮುದ್ರಿಸಿಕೊಳ್ಳುವುದಕ್ಕೆ ನವಾಬ ಅನುಮತಿ ನೀಡಿದ. ಕಂಪೆನಿಗೆ ಬಂಗಾಳದಲ್ಲಿ ಸುಂಕರಹಿತ ವ್ಯಾಪಾರ ನಡೆಸಲು ಅನುಮತಿ ನೀಡಿದ ಮೊಘಲ್ ಚಕ್ರವರ್ತಿ ಫರೂಕ್ಸಿಯಾರ್ ಫರ್ಮಾನಿಗೆ ಸಿರಾಜ್ ಮಾನ್ಯತೆ ನೀಡಿದ. ಜೊತೆಗೆ ಕಂಪೆನಿಗೆ ೩೮ ಹಳ್ಳಿಗಳನ್ನು ನೀಡಿದ.
ಈ ಒಪ್ಪಂದವು ನವಾಬ ಸಿರಾಜ್ಗೆ ಅವಮಾನಕರವಾಗಿತ್ತು. ಆತ ಒಮ್ಮೆಲೇ ಕೆಳಗೆ ಇಳಿದಂತಹ ಸ್ಥಿತಿ ನಿರ್ಮಾಣವಾಯಿತು. ನವಾಬ ಕಲ್ಕತ್ತಾದ ಉತ್ತರದಲ್ಲಿ ಹಲವು ಕಿ.ಮೀ. ಹಿಂದೆ ಸರಿದ. ಬ್ರಿಟಿಷರೊಂದಿಗೆ ಸಹಕಾರದಿಂದ ಕೆಲಸ ಮಾಡಿದರೆ ಉತ್ತಮ ಎಂಬುದನ್ನು ಆತ ಒಪ್ಪಿಕೊಂಡಂತಾಯಿತು. ಮುಂದೆ ಇನ್ನಷ್ಟು ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಇಬ್ಬರೂ ಒಂದು ವ್ಯವಹಾರಕ್ಕೆ (deal) ಸಹಿ ಹಾಕಿದರು. ಬೇರೆಯವರೊಂದಿಗೆ ಯುದ್ಧ ನಡೆದಾಗ ಒಬ್ಬರು ಇನ್ನೊಬ್ಬರ ನೆರವಿಗೆ ಬರಬೇಕೆಂದು ಅದರಲ್ಲಿತ್ತು. ಕ್ಲೈವ್ ಸಿರಾಜ್ಗೆ ಒಂದು ಪ್ರಶ್ನೆ ಹಾಕಿ, ಇಂಗ್ಲಿಷರು ಚಂದ್ರನಗರದ ಫ್ರೆಂಚ್ ನೆಲೆಯ ಮೇಲೆ ದಾಳಿ ನಡೆಸುವುದನ್ನು ನವಾಬರು ಒಪ್ಪುವರೇ ಎಂದು ಕೇಳಿದ.
ಕ್ಲೈವ್ ಆದಷ್ಟು ಬೇಗ ಮದ್ರಾಸಿಗೆ ಮರಳಲು ಬಯಸಿದ್ದ. ಅದಕ್ಕೆ ಮುನ್ನ ಚಂದ್ರನಗರದ ಫ್ರೆಂಚರ ಮೇಲೆ ಪ್ರಾಬಲ್ಯ ಸ್ಥಾಪಿಸಬೇಕೆಂಬುದು ಅವನ ಎಣಿಕೆಯಾಗಿತ್ತು. ಅದಕ್ಕೆ ನವಾಬನ ಒಪ್ಪಿಗೆ ಸಿಗಲಿಲ್ಲ. ಇನ್ನೊಮ್ಮೆ ಯುದ್ಧ ನಡೆಯುವುದು ಬೇಡ; ಅದನ್ನು ತಡೆಯಿರಿ ಎಂದಾತ ಹೇಳಿದ. ತನ್ನ ಸೈನ್ಯಕ್ಕೆ ಇಪ್ಪತ್ತು ಇಂಗ್ಲಿಷ್ ಗನ್ನರ್ಗಳನ್ನು ಸಿರಾಜ್ ನೇಮಿಸಿಕೊಂಡ. ತನ್ನ ಆಸ್ಥಾನದಲ್ಲಿ ಕಂಪೆನಿಯ ಪ್ರತಿನಿಧಿ ಇರಲಿ; ಅದಕ್ಕೆ ವಾಟ್ಸ್ ಆಗಬಹುದು ಎಂದಾತ ಹೇಳಿದ; ವಾಟ್ಸ್ ಓರ್ವ ಸೌಮ್ಯ ವ್ಯಕ್ತಿ ಎಂಬುದೇ ಅದಕ್ಕೆ ಕಾರಣ. ಅನಂತರ ಸಿರಾಜ್ ಮುರ್ಷಿದಾಬಾದ್ಗೆ ಹೊರಟ. ಈ ಕಡೆ ಕ್ಲೈವ್ ಚಂದ್ರನಗರದ ಮೇಲೆ ದಾಳಿ ನಡೆಸಲು ಮುಂದಾದ.
ಕಂಪೆನಿ ಮತ್ತು ಇಂಗ್ಲೆಂಡ್ ಸರ್ಕಾರದ ಜಂಟಿ ಸೈನ್ಯವು ಕಲ್ಕತ್ತಾದಿಂದ ಹಲವು ಕಿ.ಮೀ. ಉತ್ತರದಲ್ಲಿ ಹೂಗ್ಲಿ ನದಿಯನ್ನು ದಾಟಿ ನದಿಯ ಪಶ್ಚಿಮದಂಡೆಯಲ್ಲಿ ಶಿಬಿರ ಹೂಡಿ ಚಂದ್ರನಗರದ ಮೇಲಿನ ದಾಳಿಗೆ ಅಣಿಯಾಯಿತು. ಇದನ್ನು ಮೊದಲೇ ತಿಳಿದ ಫ್ರೆಂಚರು ಸಿರಾಜ್ಗೆ ಹಲವು ಪತ್ರಗಳನ್ನು ಬರೆದರು. ಆತ ಮುರ್ಷಿದಾಬಾದ್ನತ್ತ ಹೋಗುತ್ತಿದ್ದ. ಮುರ್ಷಿದಾಬಾದ್ನಿಂದ ೬೦ ಕಿ.ಮೀ. ದಕ್ಷಿಣದಲ್ಲಿ ಆತನನ್ನು ಕಂಡ ಫ್ರೆಂಚ್ ಪ್ರತಿನಿಧಿಗಳು ‘ನಮ್ಮ ನೆಲೆಯನ್ನು ರಕ್ಷಿಸಿ’ ಎಂದು ಆಗ್ರಹಪೂರ್ವಕವಾಗಿ ಒತ್ತಾಯಿಸಿದರು. ಸಿರಾಜ್ ಇಂಗ್ಲಿಷರಿಗೆ ಪತ್ರ ಬರೆದು ‘ಇದು ಬೇಡ’ ಎಂದ.
ವಾಟ್ಸ್ ರಕ್ಷಣೆಗೆ ಕೋವಿಧಾರಿಗಳ ಸಹಿತ ಮುರ್ಷಿದಾಬಾದ್ಗೆ ಹೊರಟ. ಸಿರಾಜ್ ಆಗಲೂ ಫ್ರೆಂಚರ ಸಹಕಾರವನ್ನು ನೆಚ್ಚಿಕೊಂಡಿದ್ದ. ಮೇಲ್ನೋಟಕ್ಕೆ ಮಾತ್ರ ಬ್ರಿಟಿಷರೊಂದಿಗೆ ವ್ಯವಹರಿಸುತ್ತಿದ್ದ. ವಾಟ್ಸ್ ಜೊತೆ ಉಮಾಚಂದ್ ಕೂಡ ಇದ್ದ; ಆತ ಬ್ರಿಟಿಷರ ಪರವಾಗಿದ್ದ. ಫ್ರೆಂಚರಿಗೆ ಸಿರಾಜ್ನ ಒಂದು ಲಕ್ಷ ರೂ. ಕೊಡುಗೆ ಹೋಗಿತ್ತು.
ಹೂಗ್ಲಿಯ ಘರ್ಷಣೆಯನ್ನು ತಟಸ್ಥಗೊಳಿಸಲು ಬ್ರಿಟಿಷರು ಉಮಾಚಂದ್ನನ್ನು ಕಳುಹಿಸಿದರು. ಆಗ ಉಮಾಚಂದ್ನ ನೈಜ ಯಜಮಾನರು ಕಂಪೆನಿಯೇ ಹೊರತು ಸಿರಾಜ್ ಆಗಿರಲಿಲ್ಲ; ಆತ ಅಷ್ಟೊಂದು ಬದಲಾಗಿದ್ದ. ಕ್ಲೈವ್ ಸಿರಾಜ್ಗೆ ಪತ್ರ ಬರೆದು “ನಿಮ್ಮ ಅನುಮತಿಯಿಲ್ಲದೆ ಚಂದ್ರನಗರದ ಮೇಲೆ ದಾಳಿ ನಡೆಸುವುದಿಲ್ಲ” ಎಂದು ಭರವಸೆ ನೀಡಿದ.
* * *
ದೆಹಲಿ ಪರಕೀಯರ ವಶಕ್ಕೆ
ಫೆಬ್ರುವರಿ ಕೊನೆಯ ಹೊತ್ತಿಗೆ ಪಠಾಣರು ದೆಹಲಿಯನ್ನು ವಶಪಡಿಸಿಕೊಂಡರೆನ್ನುವ ಸುದ್ದಿ ಬಂತು. ಇಲ್ಲಿ ಪಠಾಣರೆಂದರೆ ರೋಹಿಲ್ಲಾಗಳು. ೧೭೫೭ರ ಜನವರಿಯಲ್ಲಿ ಆಫಘನ್ ದೊರೆ ಅಹಮದ್ ಶಾ ಅಬ್ದಾಲಿ ದೆಹಲಿಯ ಮೇಲೆ ಆಕ್ರಮಣ ಮಾಡಿ, ಮೊಘಲ್ ದೊರೆಯನ್ನು ಪದಚ್ಯುತಗೊಳಿಸಿದನೆನ್ನುವ ಸುದ್ದಿ ಕೂಡ ಬಂತು. ಈ ಸುದ್ದಿಗಳು ಸಿರಾಜ್ನಲ್ಲಿ ಭಯ ಮೂಡಿಸಿದವು. ಒಟ್ಟಿನಲ್ಲಿ ಆಫಘನ್ನರು-ಪಠಾಣರು ದೆಹಲಿಯಲ್ಲಿ ಕಿಂಗ್ಮೇಕರ್ಗಳಾಗಿದ್ದರು.
ಆಗ ಸಿರಾಜ್ ರಾಬರ್ಟ್ ಕ್ಲೈವ್ನ ನೆರವನ್ನು ಕೇಳಿದ. ಮದ್ರಾಸ್ನಿಂದ ಒಂದು ಹಾಗೂ ಮುಂಬೈಯಿಂದ ಮೂರು ಹಡಗುಗಳು ಕಲ್ಕತ್ತಾಗೆ ಬಂದವು. ಇದರಿಂದ ಚಂದ್ರನಗರದ ದಾಳಿಗೆ ಕ್ಲೈವ್ನಲ್ಲಿ ಧೈರ್ಯ ಹೆಚ್ಚಿತು. ಇನ್ನು ಗಂಗಾನದಿ ಪ್ರದೇಶದ ತಟಸ್ಥತೆ ಬೇಡ ಎನಿಸಿತು. ತನ್ನ ಜೊತೆ ಇದ್ದ ಫ್ರೆಂಚ್ ಡೆಪ್ಯುಟಿಗಳನ್ನು ಕೈಬಿಟ್ಟ ಕ್ಲೈವ್, ದೆಹಲಿ ವಿಷಯದಲ್ಲಿ (ಪಠಾಣರ ಆಕ್ರಮಣ) ನೆರವಾಗುತ್ತೇನೆಂದು ನವಾಬ ಸಿರಾಜುದ್ದೌಲನಿಗೆ ತಿಳಿಸಿದ. ಪಠಾಣರು ದಾಳಿ ಮಾಡಬಹುದೆಂಬ ಭಯ ಸಿರಾಜ್ಗೆ ಕೂಡ ಇತ್ತು. ಇದರ ನಡುವೆ ಬ್ರಿಟಿಷ್ ನೌಕಾಪಡೆ ಅಧಿಕಾರಿ ವಾಟ್ಸನ್ ಆದೇಶದಂತೆ ಚಂದ್ರನಗರದ ಮೇಲೆ ದಾಳಿ ನಡೆಯಿತು.
(ಸಶೇಷ)
ರಾಬರ್ಟ್ಕ್ಲೈವ್ ಬಗ್ಗೆ
ಕ್ಲೈವ್ ಭರಪೂರ ಸುಳ್ಳುಗಳನ್ನು ಹೇಳುವ ಮೂಲಕ, ಬೂಟಾಟಿಕೆಯ ಮೂಲಕ, ದಾಖಲೆಗಳನ್ನು ಮನಸೋ ಇಚ್ಛೆ ತಿದ್ದುವ ಮೂಲಕ ಮತ್ತು ಸೋಗಿನ ಮೂಲಕ ಭಾರತವನ್ನು ಲೂಟಿ ಹೊಡೆಯುವ ಕೆಲಸವನ್ನು ಎಗ್ಗಿಲ್ಲದೆ ಮಾಡಿದ.
– ಲಾರ್ಡ್ ಮೆಕಾಲೆ, (ಬ್ರಿಟಿಷ್ ಶಿಕ್ಷಣತಜ್ಞ)
ಬ್ಲ್ಯಾಕ್ಹೋಲ್ ದುರಂತ ಎಷ್ಟು ನಿಜ?
ನಿಜವೆಂದರೆ ಹಿಂದೂಸ್ತಾನಿಗಳು ಆ ಜನರನ್ನು (ಬ್ಲ್ಯಾಕ್ಹೋಲ್ಗೆ ತಳ್ಳಲ್ಪಟ್ಟವರು) ಕೇವಲ ರಾತ್ರಿಯಮಟ್ಟಿಗೆ ಇರಿಸಿಕೊಳ್ಳಲು ಬಯಸಿದ್ದರು. ಮರುದಿನ ಬೆಳಗ್ಗೆ ಅವರನ್ನು ದೊರೆಯ (ಸಿರಾಜ್) ಮುಂದೆ ಹಾಜರುಪಡಿಸಬೇಕಿತ್ತು. ಅದು ಕೋಟೆಯ ಸೆರೆಮನೆ ಎಂದು ಅವರನ್ನು ಅಲ್ಲಿ ಹಾಕಿದ್ದರು. ಆ ಕೋಣೆಯಲ್ಲಿ ಎಷ್ಟು ಜನ ಇರಲು ಸಾಧ್ಯ ಎನ್ನುವ ಕಲ್ಪನೆ ಇಲ್ಲದೆ ಅವರನ್ನು ಅಲ್ಲಿ ಕೂಡಿಹಾಕಿದ್ದರು. ಇಂಗ್ಲಿಷರ ಬಳಿ ಕೂಡ ಸೆರೆಮನೆಯ ವ್ಯವಸ್ಥೆ ಇರಲಿಲ್ಲ. ಇಂಗ್ಲಿಷರ ದಾಖಲೆಗಳಲ್ಲಿ ಇಷ್ಟೊಂದು ದೊಡ್ಡದಾಗಿ ಬಿಂಬಿತವಾದ ಈ ಘಟನೆ ಬಂಗಾಳದಲ್ಲಿ ಹಲವರಿಗೆ ಗೊತ್ತೇ ಇರಲಿಲ್ಲ. ಕಲ್ಕತ್ತಾದ ೪ ಲಕ್ಷ ಜನರಲ್ಲಿ ಅದನ್ನು ಅಲ್ಷಕಿಸಿದವರೇ ಹೆಚ್ಚು. ಸ್ಥಳೀಯ ಗ್ರಾಮೀಣ ಜನರಲ್ಲಿ ಅದನ್ನು ತಿಳಿದವರು ಕಾಣಸಿಗುವುದಿಲ್ಲ. ಅವರು ಘಟನೆಯ ಬಗ್ಗೆ ಅಷ್ಟೊಂದು ಅಲಕ್ಷ್ಯ ಭಾವನೆಯನ್ನು ಹೊಂದಿದ್ದಾರೆ. ಆದ್ದರಿಂದ ನಾವು ಅಂತಹ ಒಂದು ವಿವೇಚನೆಯಿಲ್ಲದ ಘಟನೆಯ ಬಗ್ಗೆ ಭಾರತೀಯರನ್ನು ಕ್ರೂರಿಗಳೆಂದು ಹೇಳಬೇಕೆ? ಯಾರನ್ನಾದರೂ ಕ್ರೂರಿಗಳೆಂದು ಹೇಳಬೇಕಿದ್ದರೆ ಇಂಗ್ಲಿಷರನ್ನೇ ಹೇಳಬೇಕಾಗುತ್ತದೆ. ಮದ್ರಾಸಿಗೆ ಹೋಗಬೇಕಾಗಿದ್ದ ೪೦೦ ಜನ ಸಿಪಾಯಿಗಳನ್ನು ಅಗತ್ಯವಾದ ಯಾವ ವಸ್ತುಗಳನ್ನೂ ಕೊಡದೆ ದೋಣಿಗಳಲ್ಲಿ ತುಂಬಿ ಕಳುಹಿಸಿದವರು ಅವರಲ್ಲವೆ? ಮೂರು ದಿನಗಳ ಕಾಲ ಉಪವಾಸವಿದ್ದು ಅವರೆಲ್ಲ ಸತ್ತುಹೋದರಲ್ಲವೆ?
ಸಿಯಾರ್ ಸಾಹಿತ್ಯ ಕೃತಿಯಿಂದ.