ಗ್ರೀಸ್ನಿಂದ ಕೆಳಗೆ ಈಜಿಯನ್ ಸಮುದ್ರ (Aegean Sea) ದಲ್ಲಿ, ದೂರದಿಂದ ಕಂಡರೆ ಪುಟ್ಟ ದಿಟ್ಟಿಬೊಟ್ಟು ಇಟ್ಟಿರುವಂತೆ ಕಾಣುವ ಒಂದು ದ್ವೀಪ. ಜಗತ್ತಿನ ಸಾವಿರಾರು ದ್ವೀಪಗಳಂತೆಯೇ ಹತ್ತಿರ ಒಂದಷ್ಟು ಮುಳುಗುಗಾರರು ನೀರ ಕೆಳಕೆ ಡುಮ್ಕಿ ಹಾಕಿದರು. ೫೦ ಮೀಟರ್ ಆಳಕ್ಕೆ ಹೋದರು. ಮೇಲಿನ ಭೋರ್ಗರೆತ, ನೊರೆ, ಅಬ್ಬರ ಇಲ್ಲದ ಕಡಲಿನ ಪ್ರಶಾಂತ ಒಡಲಿನಲ್ಲಿ ಹಡಗೊಂದು ಕಂತಿ ಕೂತಿತ್ತು. ಅದರೊಳಗಿದ್ದ ಹಲವಾರು ಮಣ್ಣಿನ, ಕಂಚಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನುಷ್ಯನೆತ್ತರದ ಕಂಚಿನ ಪ್ರತಿಮೆಗಳು ನೆಲದಲ್ಲಿ ಮಲಗಿ ಆಕಾಶ ನೋಡುತ್ತಿದ್ದವು. ಹೂಜಿಯಂತಹ ಸುಂದರ ಮೃತ್ಕಲಾಕೃತಿಗಳು ಮೃತನಾಗರಿಕತೆಯ ಕಥೆ ಹೇಳುವ ತವಕದಲ್ಲಿ ಬಾಯಿಕಳೆದು ನಿಂತಿದ್ದವು. ಮುಳುಗಿದವರು ಅವೆಲ್ಲವನ್ನೂ ಹೆಕ್ಕಿತಂದರು. ಅಳೆದುತೂಗಿದರೆ ಬರೋಬ್ಬರಿ ೩೦ ಟನ್ ಆಗುವಷ್ಟು ಸರಕು! ಈ ಸಾಗರಸಂಪತ್ತನ್ನು ನೋಡಿ, ಪ್ರಾಯ ಅಳೆದ ಪುರಾತತ್ತ್ವಶಾಸ್ತ್ರಜ್ಞರು ಇವೆಲ್ಲ ೨೦೦೦ ವರ್ಷಕ್ಕೂ ಹಿಂದಿನವುಗಳೆಂದಾಗ ಮಾತ್ರ ಎಲ್ಲರ ಹುಬ್ಬು ಮೇಲೇರಿತು. ಕ್ರಿ.ಪೂ. ೧೫೦ಕ್ಕೂ ಹಿಂದಿನ, ಗ್ರೀಕ್ ನಾಗರಿಕತೆಗೆ ಸಂಬಂಧಿಸಿದ ವಸ್ತುಗಳವು ಎನ್ನುವುದು ಅನಂತರದ ಸಂಶೋಧನೆಯಿಂದ ಗೊತ್ತಾದ ಸತ್ಯ.
ಈ ಮಣ್ಣಿನ ರಾಶಿಯಲ್ಲಿ, ೩೨ x ೧೬ x ೧೦ ಸೆ.ಮೀ. ಆಕಾರದ ಒಂದು ಮಣ್ಣಿನ ತುಂಡೂ ಇತ್ತು. ಯಾವುದೋ ಹಳೆಯಕಾಲದ ಬಾಗಿಲ ತುಂಡೋ, ಆಲಂಕಾರಿಕ ವಸ್ತುವೋ ಇರಬೇಕೆಂದು ಸಂಶೋಧಕರು ಅದನ್ನು ಅಸಡ್ಡೆಯಿಂದ ಮೂಲೆಯಲ್ಲಿಟ್ಟಿದ್ದರು. ಪುರಾತತ್ತ್ವಬೇಟೆಯಲ್ಲಿ ಇಂತಹ ಮಣ್ಣಿನ ಹೆಂಟೆಗಳು ಸಿಗುವುದು ಸಾಮಾನ್ಯ. ಅವುಗಳ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ, ಅಲ್ಲಿದ್ದವರ ಪೈಕಿ ಒಬ್ಬ ಈ ಮಣ್ಣಾಂಗಟ್ಟಿಯನ್ನು ಒಡೆದು ನೋಡಿದಾಗ, ಅದರಲ್ಲಿ ವೃತ್ತಾಕಾರದ ಕಂಚಿನ ಚೌಕಟ್ಟು ಕಂಡ. ಇನ್ನೂ ಕೆದಕುತ್ತ ಹೋದಾಗ, ಅದರೊಳಗೂ ಒಂದಷ್ಟು ಪುಟ್ಟ ವೃತ್ತಗಳು ಕಾಣಿಸಿಕೊಂಡವು. ಅವು ಕೇವಲ ವೃತ್ತಗಳಲ್ಲ, ಹಲ್ಲುಗಳಿರುವ ಗಿಯರ್ಚಕ್ರಗಳು ಎನ್ನುವುದು ನೋಡಿದರಿಗೆ ಸ್ಪಷ್ಟವಾಯಿತು. ಒಂದರೊಳಗೊಂದು ಹಲ್ಲುಕಚ್ಚಿ ನಿಂತ ಅಂತಹ ಐದಾರು ಗಿಯರ್ಗಳು ಮೇಲ್ನೋಟಕ್ಕೇ ಕಂಡವು. ಅಸಡ್ಡೆ ಮತ್ತು ಆಲಸ್ಯದಿಂದ ಎಸೆದುಬಿಟ್ಟಿದ್ದ ಮೃಣ್ಮಯತುಂಡು ಒಮ್ಮಿಂದೊಮ್ಮೆಲೆ ಜಗತ್ತಿನ ವಿಜ್ಞಾನಿಗಳ ಗಮನ ಸೆಳೆಯಿತು. “ಇದು ಗಡಿಯಾರ ಇರಬಹುದೆ?” ಎಂದು ನೋಡಿದವರು ಸಂಶಯ ತೋಡಿಕೊಂಡರು. “ನಿಮಗೇನು ಹುಚ್ಚೆ? ಹದಿಮೂರನೇ ಶತಮಾನದವರೆಗೂ ಈ ಜಗತ್ತಿನಲ್ಲಿ ಗಿಯರ್ಗಳಿಂದ ನಡೆಯುವ ಮುಳ್ಳಿನ ಗಡಿಯಾರಗಳೇ ಇರಲಿಲ್ಲ. ಇದ್ದದ್ದು ಕೇವಲ ಬಿಸಿಲುಕೋಲು, ನೀರಿನ ಅಥವಾ ಮಳಲಿನ ಘಟಿಕಾಯಂತ್ರ ಅಷ್ಟೆ. ಹಾಗಾಗಿ ಇದು ಅಂಥಾದ್ದಾಗಿರಲಿಕ್ಕೆ ಸಾಧ್ಯವೇ ಇಲ್ಲ. ಇಷ್ಟಕ್ಕೂ ಆ ಕಾಲದ ನಾಗರಿಕತೆಗಳಿಗೆ ಗಿಯರಿನ ಹಲ್ಲುಚಕ್ರಗಳ ಜೊತೆ ಆಡುವಷ್ಟು ಪರಿಣತಿ ಇತ್ತೋ ಇಲ್ಲವೋ ಎನ್ನುವುದೇ ಅನುಮಾನ. ಸುಮ್ಮನೆ ಅಲಂಕಾರಕ್ಕಾಗಿ ಮಾಡಿದ ಆಟಿಕೆ ಇರಬಹುದು ಇದು” ಎಂದರು. ವರ್ಷಾನುಗಟ್ಟಲೆ ಪರವಿರೋಧಗಳ ಚರ್ಚೆ ನಡೆಯುತ್ತಲೇ ಇತ್ತು. ೧೯೫೦ರಲ್ಲಿ ಆಂಗ್ಲ ಭೌತವಿಜ್ಞಾನಿಯೊಬ್ಬ ರೇಡಿಯೋಗ್ರಫಿ ಎಂಬ (ಆ ಕಾಲದ) ಆಧುನಿಕ ತಂತ್ರಜ್ಞಾನ ಬಳಸಿ ಈ ಮಣ್ಣನ್ನು ನೋಡಿದಾಗ, ಅದರಲ್ಲಿ ಒಂದೆರಡಲ್ಲ, ೨೭ ಹಲ್ಲುಚಕ್ರಗಳು ಕಂಡವು! ಮತ್ತು ಈ ಎಲ್ಲವೂ ಒಂದಕ್ಕೊಂದು ಸುಸಂಬದ್ಧವಾಗಿ ಕೂಡಿಕೊಂಡಿದ್ದವು! ಈ ತುಂಡಿನ ಒಂದೊಂದೇ ಚಕ್ರಗಳ ಮೇಲೆ ಎಕ್ಸ್ಕಿರಣಗಳನ್ನು ಹಾಯಿಸಿ ಚಿತ್ರ ತೆಗೆದಾಗ, ಒಂದು ಚಕ್ರದಲ್ಲಿ ೧೨೭ ಹಲ್ಲುಗಳೂ, ಇನ್ನೊಂದರಲ್ಲಿ ೨೩೫ ಹಲ್ಲುಗಳೂ ಇರುವುದು ಕಂಡುಬಂತು. ಇಷ್ಟೊಂದು ಸಂಖ್ಯೆಯ ಹಲ್ಲುಗಳಿರುವ ದೊಡ್ಡ ಗಿಯರ್ಗಳನ್ನು ಗಡಿಯಾರಕ್ಕಾಗಿ ಮಾಡಿರಲು ಸಾಧ್ಯವಿಲ್ಲ; ಯಾವುದೋ ಘನ ಉದ್ದೇಶ ಇದರ ಹಿಂದಿದೆ ಎಂಬ ಹೊಸಚಿಂತನೆಯನ್ನು ಈಗ ವಿಜ್ಞಾನಿಗಳು ಮಾಡಲೇಬೇಕಾಯಿತು.
ಕಳಚಿತು ಆವರಣ
ವಿಜ್ಞಾನಿಗಳು ಈ ಮಣ್ಣಿನ ತುಂಡನ್ನು ಆಂಟಿಕಿಥಿರಾ ಮೆಕಾನಿಸಂ ಎಂದು ಕರೆದರು. ಹೆಚ್ಚಿನ ಸಂಶೋಧನೆಗಾಗಿ ಅದು ಕೈಯಿಂದ ಕೈಗೆ ಹೋಗುತ್ತ, ಮೆತ್ತಿಕೊಂಡಿದ್ದ ಮಣ್ಣನ್ನು ಕಳಚಿಕೊಳ್ಳುತ್ತ, ಹೊಸ ಭಾಗಗಳನ್ನು ಪ್ರಕಾಶಪಡಿಸುತ್ತ, ಇನ್ನಷ್ಟು ಕುತೂಹಲ ಕೆರಳಿಸುತ್ತ ಹೋಯಿತು. ಗಾಮಾ ಕಿರಣಗಳನ್ನು ಹಾಯಿಸಿ ಅದರ ಸಂಪೂರ್ಣ ಅಸ್ಥಿಪಂಜರದ ಚಿತ್ರ ಬರೆದಾದ ಮೇಲೆ ಅದರ ಜೊತೆ ಇಷ್ಟು ದಿನ ಗುದ್ದಾಡಿದ್ದವರು ನಿಬ್ಬೆರಗಾದರು. ಯಾಕೆಂದರೆ, ಆ ತಂತ್ರಜ್ಞಾನ ಯಾವುದೇ ಆಧುನಿಕನಿಗೂ ಆಘಾತ ಕೊಡುವಷ್ಟು ಕಲಾತ್ಮಕವಾಗಿತ್ತು. ಒಟ್ಟು ೩೨ ಚಕ್ರಗಳು ಅಲ್ಲಿ ಒಂದರೊಳಗೊಂದು ಸುಸಂಬದ್ಧವಾಗಿ ಕೂರುತ್ತಿದ್ದವು. ಅದನ್ನೇ ಆಕರನಕ್ಷೆಯಾಗಿಟ್ಟುಕೊಂಡು, ಇಂಜಿನಿಯರುಗಳ ಪಡೆ ಹೊಸಯಂತ್ರವನ್ನು ತಯಾರು ಮಾಡಿತು. ಆಗ ಅವರಿಗೆ ಗೊತ್ತಾಗಿದ್ದೇನೆಂದರೆ, ಈ ಯಂತ್ರದ ಮೂಲಕ ವರ್ಷದ ಹನ್ನೆರಡುಮಾಸಗಳಲ್ಲಿ ಸೂರ್ಯ ಮತ್ತು ಚಂದ್ರನ ಸಾಪೇಕ್ಷಚಲನೆಗಳನ್ನು ಪತ್ತೆಹಚ್ಚಬಹುದು.
ಅಂದರೆ, ಸೂರ್ಯ ಯಾವ ರಾಶಿಯ ಮೇಲೆ ಬಂದಾಗ ಚಂದ್ರ ಎಲ್ಲಿರುತ್ತಾನೆ ಎನ್ನುವುದನ್ನು ಹೇಳಬಹುದು. ವರ್ಷದ ಯಾವ ಋತುವಿನಲ್ಲಿ ಸೂರ್ಯ ಯಾವ ರಾಶಿಯನ್ನು ತನ್ನ ಛತ್ರಿಯಾಗಿ ಹಿಡಿದುಕೊಂಡಿರುತ್ತಾನೆ ಎಂದು ಹೇಳಬಹುದು. ಸೂರ್ಯಚಂದ್ರರಿಬ್ಬರ ಗ್ರಹಣಗಳನ್ನೂ ಪತ್ತೆಹಚ್ಚಬಹುದು. ಮತ್ತು ಇವೆಲ್ಲಕ್ಕಿಂತ ಮುಖ್ಯವಾಗಿ, ಪ್ರತಿದಿನವೂ ಸೌರಮಂಡಲದ ನಾಲ್ಕು ಕಾಯಗಳಾದ ಬುಧ, ಶುಕ್ರ, ಮಂಗಳ, ಗುರುಗ್ರಹಗಳ ಸಾಪೇಕ್ಷಚಲನೆಗಳನ್ನು ಗುರುತುಹಾಕಬಹುದು! ಚಂದ್ರಗ್ರಹಣಗಳು ಇನ್ನು ಮುಂದಿನ ಸಾವಿರ ವರ್ಷಗಳ ಕಾಲ ಯಾವ ವರ್ಷಗಳಲ್ಲಿ ಯಾವ ಹೊತ್ತಿಗೆ ಆಗುತ್ತವೆ ಎಂದು ಹೇಳಬಹುದು; ಪ್ರತಿ ಗ್ರಹಣದಲ್ಲಿ ಛಾಯೆ ಯಾವ ಕಡೆಯಿಂದ ಚಂದ್ರನನ್ನು ಆವರಿಸುತ್ತದೆ; ಗ್ರಹಣಕಾಲದ ಚಂದ್ರನ ಬಣ್ಣ ಯಾವುದು ಎನ್ನುವುದನ್ನೂ ಮುಂಚಿತವಾಗಿ ಹೇಳಬಹುದು! ಮೂರ್ಛೆ ತಪ್ಪಿಬೀಳಲು ಇದಕ್ಕಿಂತ ಇನ್ನೇನು ಬೇಕು!
ಕ್ರಿ.ಪೂ. ೨೦೦ರ ಸಮಯದಲ್ಲಿ ಗ್ರೀಕರು ಜಗತ್ತಿನ ಬಹುಭಾಗವನ್ನು ಆಳುತ್ತಿದ್ದರು ಎನ್ನುವುದನ್ನು ಕೇಳಿದ್ದೇವೆ, ಓದಿದ್ದೇವೆ. ಅವರ ಚಕ್ರಾಧಿಪತಿ ಅಲೆಗ್ಸಾಂಡರ್ ಆ ಕಾಲದಲ್ಲೇ ಭಾರತಕ್ಕೂ ಬಂದುಹೋದ ಕತೆ ನಮಗೆ ಗೊತ್ತು. ಗ್ರೀಕರು ತಮ್ಮ ದೇಶದಿಂದ ಹೊರಬಂದು ಊರು ಸುತ್ತತೊಡಗಿದ ಮೇಲೆ ಹಲವಾರು ವರ್ಷಗಳ ಕಾಲ ಏಷಿಯಾಮೈನರ್ (ಅಂದರೆ ಈಗಿನ ಮಧ್ಯಪ್ರಾಚ್ಯ ಏಷ್ಯ; ಟರ್ಕಿಯ ಸುತ್ತಮುತ್ತಲಿನ ಪ್ರದೇಶ)ಅನ್ನು ಆಳುತ್ತಿದ್ದರು. ಈ ಜಾಗದಲ್ಲೇ ಬ್ಯಾಬಿಲೋನಿಯ ನಾಗರಿಕತೆ ಕಣ್ಣು ತೆರೆದದ್ದು ಎನ್ನುವುದನ್ನೂ ಮರೆಯುವ ಹಾಗಿಲ್ಲ. ಹಾಗಾಗಿಯೇ ಗ್ರೀಕರ ನಾಗರಿಕತೆ, ಬ್ಯಾಬಿಲೋನಿಯನ್ನರಿಂದ ಬಹಳಷ್ಟನ್ನು ಎರವಲು ಪಡೆಯಿತು. ಬ್ಯಾಬಿಲೋನಿಯದ ಜನ, ಅಸ್ಟ್ರೋನಮಿ – ಅರ್ಥಾತ್ ಖಗೋಳಶಾಸ್ತ್ರದಲ್ಲಿ ನಮ್ಮಂತಹ ಆಧುನಿಕರೂ ನಾಚುವಷ್ಟು ಕೆಲಸಗಳನ್ನು ಮಾಡಿಹೋಗಿದ್ದಾರೆ. ಅವರು ಸುಟ್ಟಮಣ್ಣಿನ ಟ್ಯಾಬ್ಲೆಟ್(ಫಲಕ)ಗಳಲ್ಲಿ ಬರೆದಿಟ್ಟ ಖಗೋಳಜ್ಞಾನವನ್ನು ಇಂದಿಗೂ ಸುರಕ್ಷಿತವಾಗಿ ಇಡಲಾಗಿದೆ. ಅಂತಹ ಸುಮಾರು ೪೦೦೦ ಟ್ಯಾಬ್ಲೆಟ್ಟುಗಳು ಇದುವರೆಗೆ ಸಿಕ್ಕಿವೆ! ಸೂರ್ಯನ ಹಿಂದಿನ ಆಕಾಶದ ಪರದೆ ಸ್ಥಿರವಲ್ಲ; ಅದು ಬದಲಾಗುತ್ತಲೇ ಇರುತ್ತದೆ. ಪ್ರತಿ ೩೬೫ ದಿನಗಳಿಗೊಮ್ಮೆ ಈ ಚಿತ್ರಪರದೆ ಒಂದು ಸುತ್ತು ತಿರುಗುತ್ತದೆ ಎನ್ನುವುದನ್ನು ಅವರು ಲೆಕ್ಕಹಾಕಿದ್ದರು. ಈ ಪರದೆಯನ್ನೇ ಹನ್ನೆರಡು ತುಂಡು ಮಾಡಿ, ಪ್ರತಿ ತುಂಡನ್ನೂ ಒಂದು ಆಕೃತಿಯಂತೆ ಕಲ್ಪಿಸಿಕೊಂಡು ಅದಕ್ಕೆ ಹೆಸರು, ಚಿಹ್ನೆಗಳನ್ನು ಕೊಟ್ಟವರು ಬ್ಯಾಬಿಲೋನಿಯನ್ನರು. ಇಂದು ನಮಗೆ ಅಚ್ಚಭಾರತೀಯವೋ ಎನ್ನುವಂತೆ ಕಾಣುವ, ಹನ್ನೆರಡು ರಾಶಿಗಳ ರಾಶಿಚಕ್ರ ಮತ್ತು ಅದಕ್ಕೆ ಸಂಬಂಧಿಸಿದ ರಾಶಿಫಲವನ್ನು ಉಡುಗೊರೆಯಾಗಿ ಕೊಟ್ಟವರು ಇವರೇ ಎಂದರೆ ನಂಬಲಿಕ್ಕೇ ಕಷ್ಟವಾಗಬಹುದು, ಅಲ್ಲವೆ? ಇರಲಿ, ಈ ರಾಶಿಚಕ್ರ ಭಾರತಕ್ಕೆ ಬಂದು ಮಾಡಿದ ಹಾವಳಿಗಿಂತಲೂ ಗ್ರೀಕ್, ಯುರೋಪ್ ಜಗತ್ತುಗಳಿಗೆ ಉಡದಂತೆ ಅಂಟಿಕೊಂಡಿತು. ಗ್ರೀಕರ ಮೇಲೆ ಬ್ಯಾಬಿಲೋನಿಯನ್ನರು ಮಾಡಿದ ಪ್ರಭಾವ ಅಗಾಧವಾದದ್ದು ಎನ್ನುವುದಕ್ಕೆ ಆಂಟಿಕಥಿರಾವೇ ಪ್ರಮುಖಸಾಕ್ಷಿ ಎನ್ನಬಹುದು.
ಸಂಕೀರ್ಣ ಗಣಿತ
ಖಗೋಳದ ಆಟಗಳನ್ನು ಅರ್ಥೈಸಿಕೊಳ್ಳಲು ಬೇಕಾದ ಗಣಿತವೂ ಆಧುನಿಕ ಮತ್ತು ಸಂಕೀರ್ಣವಾಗಬೇಕಾದ್ದು ಅನಿವಾರ್ಯವಾಗಿತ್ತು. ಯಾಕೆಂದರೆ, ನಮ್ಮ ತಲೆ ಮೇಲೆ ಆಕಾಶದಲ್ಲಿ ನಡೆಯುವ ಯಾವ ಘಟನೆಯನ್ನೂ ಪೂರ್ಣಾಂಕದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಹಾಕುವುದು ಸರಿಯಾಗಿ ೩೬೫ ದಿನಗಳಲ್ಲಿ ಅಲ್ಲ; ಇನ್ನೂ ಕಾಲುದಿನ ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತದೆ. ಅದು ಪರಿಪೂರ್ಣ “ಕಾಲು” ಕೂಡ ಅಲ್ಲ; ಇನ್ನೂ ಒಂದಷ್ಟು ದಶಮಾಂಶ ಬಿಂದುಗಳಲ್ಲಿ ಬರೆದಿಡಬೇಕಾದ ಸಂಖ್ಯೆ. ಹಾಗೆಯೇ, ಚಂದ್ರ ಎಂಬ ನಮ್ಮ ಉಪಗ್ರಹ ಭೂತಾಯಿಗೆ ಒಂದು ಪರಿಪೂರ್ಣ ಸುತ್ತು ಬರುವುದಕ್ಕೆ ಪೂರ್ಣಾಂಕ ದಿನಗಳನ್ನು ತೆಗೆದುಕೊಳ್ಳುವುದಿಲ್ಲ. ಯಾವುದೇ ಎರಡು ಪೂರ್ಣ ಅಮಾವಾಸ್ಯೆಗಳ ನಡುವಿನ ಅಂತರ ೨೯.೫ (ಮತ್ತೂ ಒಂದಷ್ಟು ಚಿಲ್ಲರೆ) ದಿನಗಳು. ೨೯.೫ನ್ನು ೧೨ರಿಂದ ಗುಣಿಸಿದಾಗ ೩೫೪ ಸಿಗುತ್ತದೆ. ಇದು ಸೌರಪಂಚಾಂಗದ ಒಂದು ವರ್ಷಕ್ಕಿಂತ ೧೧ ದಿನಗಳಷ್ಟು ಕಡಮೆ. ಸ್ಥೂಲವಾಗಿ ಹೇಳಬೇಕೆಂದರೆ ಚಾಂದ್ರಮಾನ ಮತ್ತು ಸೌರಮಾನ ಕ್ಯಾಲೆಂಡರುಗಳು ಜೊತೆಜೊತೆಯಾಗಿ ಎಂದೂ ಹೋಗುವುದಿಲ್ಲ. ಅವುಗಳ ಮಧ್ಯೆ ಕನಿಷ್ಠ ೧೧ ದಿನಗಳ ಅಂತರ ಇದ್ದೇ ಇರುತ್ತದೆ. (ಅದಕ್ಕೇ ಮೂರುವರ್ಷಕ್ಕೊಮ್ಮೆ ಅಧಿಕಮಾಸ ಕೂಡಿಸಿ, ಅವೆರಡಕ್ಕೂ ಸಾಮರಸ್ಯ ಮೂಡಿಸುವ ಕೆಲಸ ನಡೆಯುತ್ತದೆ ನಮ್ಮಲ್ಲಿ) ಹಾಗಾದರೆ, ೩ ವರ್ಷಗಳಿಗಾದರೂ ಅವು ಜೊತೆಯಾಗುತ್ತವೆ ಎನ್ನಬಹುದೆ? ಅದೂ ಇಲ್ಲ; ಆಗ ೩೭ ಚಾಂದ್ರಮಾಸಗಳು ಮುಗಿದು ಇನ್ನೂ ಮೂರೂವರೆ ದಿನ ಹೆಚ್ಚುವರಿಯಾಗಿ ಬಿದ್ದಿರುತ್ತದೆ. ಈ ಭಿನ್ನರಾಶಿಯ ತೊಂದರೆಯನ್ನು ಪರಿಹರಿಸಿಕೊಂಡು, ಎರಡೂ ಕಡೆಯಲ್ಲೂ ಪೂರ್ಣಾಂಕಗಳು ಮೂಡುವುದನ್ನು ನೋಡಬೇಕಾದರೆ ನಾವು ಬರೋಬ್ಬರಿ ೧೯ ವರ್ಷ ಕಾಯಬೇಕು. ೧೯ ಸೌರವರ್ಷಗಳು ೨೩೫ ಚಾಂದ್ರಮಾಸಗಳಿಗೆ (ಬಹುತೇಕ) ಸಮ. ಇದು ಬ್ಯಾಬಿಲೋನಿಯ ಮತ್ತು ಗ್ರೀಸಿನ ಜನರಿಗೆ ಗೊತ್ತಿದ್ದದ್ದರಿಂದಲೇ, ಯಂತ್ರದ ಒಂದು ಚಕ್ರಕ್ಕೆ ೨೩೫ ಹಲ್ಲುಗಳಿದ್ದದ್ದು! ಆ ದೊಡ್ಡ ಚಕ್ರ ಒಂದು ಸುತ್ತು ಪೂರ್ಣಗೊಳಿಸುವ ಹೊತ್ತಿಗೆ, ತಾಳತಪ್ಪಿ ಕುಡುಕರಂತೆ ಹೆಜ್ಜೆಹಾಕುತ್ತಿದ್ದ ಚಾಂದ್ರಮಾನ ಮತ್ತು ಸೌರಮಾನ ಕ್ಯಾಲೆಂಡರುಗಳು ಜೊತೆಯಾಗಿ, ಒಟ್ಟಿಗೆ ಹೆಜ್ಜೆ ಊರುತ್ತವೆ ಎನ್ನಬಹುದು.
ಈಗ ಅಮಾವಾಸ್ಯೆಗಳ ನಡುವಿನ ಅಂತರವನ್ನು ಲೆಕ್ಕಹಾಕುವ ಬದಲು, ಚಂದ್ರ ಯಾವುದಾದರೂ ನಕ್ಷತ್ರದ ಮೇಲೆ ಬರುವ ಅವಧಿಯನ್ನು ಲೆಕ್ಕ ಹಾಕೋಣ. ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೇಲೆ ಕೂತಿರುವ ಚಂದ್ರ ಮತ್ತೆ ಅದೇ ನಕ್ಷತ್ರದ ಮೇಲೆ ಬಂದು ಸೇರುವುದಕ್ಕೆ ೨೭ ಅಲ್ಲ, ೨೭.೩ ದಿನಗಳು ಬೇಕು. ಒಟ್ಟು ೧೯ ವರ್ಷದಲ್ಲಿ ಇಂತಹ ೨೫೪ ಪ್ರದಕ್ಷಿಣೆಗಳನ್ನು ಚಂದ್ರ ಹಾಕುತ್ತಾನೆ. ೨೫೪ ಸಮಸಂಖ್ಯೆಯಾದ್ದರಿಂದ, ಅದರ ಅರ್ಧದಷ್ಟು ಸಂಖ್ಯೆಯ ಹಲ್ಲುಗಳನ್ನು ಇಟ್ಟುಕೊಂಡೂ ಗಿಯರ್ಚಕ್ರವನ್ನು ರಚಿಸಬಹುದಲ್ಲವೆ? ೧೨೭ ಹಲ್ಲುಗಳ ಚಕ್ರ ಹುಟ್ಟಿದ್ದು ಹೀಗೆ! ಇವಲ್ಲದೆ, ಯಂತ್ರದಲ್ಲಿ ೨೨೩ ಹಲ್ಲುಗಳ ಇನ್ನೊಂದು ಚಕ್ರವೂ ಇತ್ತು. “ಸಾರೋಸ್ ಚಕ್ರ”ದ ಬಗ್ಗೆ ತಿಳಿದವರಿಗೆ ಈ ಸಂಖ್ಯೆ ಅಲ್ಲೇಕೆ ಬಂತು ಎಂದು ಗೊತ್ತಿರುತ್ತದೆ. ಜಗತ್ತಿನ ಯಾವುದೇ ಜಾಗದಲ್ಲಿ ಪ್ರತಿ ಹದಿನೆಂಟು ವರ್ಷ ಒಂದು ತಿಂಗಳಿಗೆ ಸರಿಯಾಗಿ ಒಂದು ವಿಶೇಷ ಚಂದ್ರಗ್ರಹಣ ನಡೆಯುತ್ತದೆ. ಚಾಂದ್ರಮಾಸಗಳ ಲೆಕ್ಕದಲ್ಲಿ ಹೇಳುವುದಾದರೆ, ಎರಡು ಗ್ರಹಣಗಳ ನಡುವಿನ ಅವಧಿ ಕರಾರುವಾಕ್ಕಾಗಿ ೨೨೩ ಚಾಂದ್ರಮಾಸಗಳು. ಬ್ಯಾಬಿಲೋನಿಯದಲ್ಲಿ, ಕ್ರಿಪೂ ೬೮೨, ೬೬೪, ೬೪೬ರಲ್ಲಿ ಈ ಗ್ರಹಣಗಳು ಕಂಡುಬಂದದ್ದನ್ನು ದಾಖಲಿಸಿದ್ದಾರೆ. ಇದೇ ಕ್ರಮದಲ್ಲಿ ಮುಂದುವರಿದರೆ, ಭವಿಷ್ಯದ ಎಲ್ಲಾ ಗ್ರಹಣಗಳನ್ನೂ ಮೊದಲೇ ಲೆಕ್ಕಹಾಕಿ ಹೇಳುತ್ತಾ ಹೋಗಬಹುದು. ಗ್ರೀಕರಿಗೆ ಈ ಗ್ರಹಣದ ಲೆಕ್ಕಾಚಾರ ಬಹಳ ಮುಖ್ಯವಾಗಿತ್ತು. ಆಯಾ ಗ್ರಹಣಗಳು ರಾಜರಿಗೆ ಕೇಡು ಬಗೆಯುತ್ತವೆ ಎಂದು ಅವರು ನಂಬುತ್ತಿದ್ದರು. ಗ್ರಹಣದ ವರ್ಷ, ರಾಜನನ್ನು ಬಲವಂತವಾಗಿಯಾದರೂ ಪದವಿಯಿಂದ ಇಳಿಸಿ (ಸಾಧ್ಯವಾದರೆ ತಲೆ ಕಡಿದು!) ಹೊಸಬನನ್ನು ಸಿಂಹಾಸನದಲ್ಲಿ ಕೂರಿಸಬೇಕು ಎನ್ನುವುದು ಅವರ ನಂಬಿಕೆ! ಹಾಗಾಗಿ, ಈ ಗ್ರಹಣಗಳ ಲೆಕ್ಕ, ಜನಕ್ಕಿಂತಲೂ ಹೆಚ್ಚಾಗಿ ರಾಜನಿಗೆ ಮುಖ್ಯವಾಗಿತ್ತು ಎನ್ನಬಹುದು! ವಿಶೇಷವೆಂದರೆ, ಚಂದ್ರನ ಚಲನೆ ಹೇಗಿದೆ ಎನ್ನುವುದರ ಮೇಲೆನಡೆಯುತ್ತಿದ್ದ ಈ ಲೆಕ್ಕಾಚಾರದಲ್ಲಿ ಪ್ರತಿಸಲದ ಗ್ರಹಣಕ್ಕೆ ಯಾವ ಕಡೆಯಿಂದ ನೆರಳು ಬೀಳಲು ಶುರುವಾಗುತ್ತದೆ; ಗ್ರಹಣದ ಚಂದ್ರನ ಬಣ್ಣ ರಕ್ತಕೆಂಪಿರುತ್ತದೋ ಕಪ್ಪಿರುತ್ತದೋ ಅಥವಾ ಕಿತ್ತಲೆಬಣ್ಣದಲ್ಲಿರುತ್ತದೋ ಎಂದೂ ಹೇಳಬಹುದು! ಆಂಟಿಕಥಿರಾದ ಚಾಂದ್ರಗ್ರಹಣಚಕ್ರದ ಮೇಲೆ ಕೊರೆದ ಚಿತ್ರಾಕ್ಷರದಲ್ಲಿ ಇದನ್ನೂ ಸೂಚಿಸಲಾಗಿದೆ! ಆಂಟಿಕಥಿರಾ ಯಂತ್ರದ ಒಂದು ಬದಿಯಲ್ಲಿ ಆರು ಚಕ್ರಗಳು ಒಂದನ್ನೊಂದು ಅಪ್ಪಿ ಒಟ್ಟು ಮೂರುಗೂಟಗಳಲ್ಲಿ ಕೂತಿವೆ. ಮೊದಲ ಗೂಟದಲ್ಲಿ ೨೪ ಮತ್ತು ೧೨೭ ಹಲ್ಲುಗಳಿರುವ ಚಕ್ರಗಳು; ಎರಡನೇ ಗೂಟದಲ್ಲಿ ೩೮ ಮತ್ತು ೪೮ ಹಲ್ಲುಗಳಿರುವ ಚಕ್ರಗಳು; ಹಾಗೂ ಮೂರನೇ ಗೂಟದಲ್ಲಿ ೩೨ ಮತ್ತು ೬೪ ಹಲ್ಲುಗಳಿರುವ ಚಕ್ರಗಳಿವೆ. ೩೨ ಹಲ್ಲಿನ ಚಕ್ರ, ೧೨೭ ಅರದ ಚಕ್ರದ ಜೊತೆ ಕೈಕೈ ಬೆಸೆದಿದೆ. ೬೪ ಹಲ್ಲಿನ ಚಕ್ರ, ೩೮ ಹಲ್ಲುಗಳ ಚಕ್ರದೊಂದಿಗೆ ಬೆಸೆದುಕೊಂಡಿದೆ. ಹಾಗೆಯೇ ೪೮ ಮತ್ತು ೨೪ ಹಲ್ಲಿನ ಚಕ್ರಗಳು ಪರಸ್ಪರ ಕೈಹಿಡಿದಿವೆ. ಈ ಎಲ್ಲ ಚಕ್ರಗಳ ಒಟ್ಟು ಕೋನೀಯವೇಗವನ್ನು (೬೪/೩೮)x(೪೮/೨೪)x(೧೨೭/೩೨) ಎಂದು ಬರೆದು ಗಣಿಸಬಹುದು. ಉತ್ತರ, ೧೩.೩೬೮೪೨. ಇದನ್ನೆ ಆಧುನಿಕ ಪರಿಭಾಷೆಯಲ್ಲಿ ಖಗೋಳೀಯ ಅನುಪಾತ ಎಂದೂ ಹೇಳುತ್ತಾರೆ. ಭೂಮಿ ಸೂರ್ಯನಿಗೆ ಸುತ್ತು ಹಾಕಲು ತೆಗೆದುಕೊಳ್ಳುವ ಸಮಯವನ್ನು ಆ ಅವಧಿಯಲ್ಲಿ ನಡೆಯುವ ಒಟ್ಟು ಚಾಂದ್ರಮಾಸಗಳಿಂದ ಭಾಗಿಸಿದರೆ ಸಿಗುವ ಉತ್ತರವೇ ಖಗೋಳೀಯ ಅನುಪಾತ. ವೈಜ್ಞಾನಿಕ ವಿಧಾನಗಳ ಮೂಲಕ ಲೆಕ್ಕಹಾಕಿದರೆ ಇದರ ಬೆಲೆ ೧೩.೩೬೮೨೬೭. ಅಂದರೆ, ಎರಡುಸಾವಿರ ವರ್ಷಗಳ ಹಿಂದಿನ ಯಂತ್ರ ತೋರಿಸುತ್ತಿರುವ ದೋಷಪ್ರಮಾಣ ೧/೮೬೦೦೦ರಷ್ಟು ಕಡಮೆ!
ಗಿಯರ್ ಸಮಸ್ಯೆ
ಇಡೀ ವಿಶ್ವದ ವ್ಯವಹಾರವನ್ನು ಕೆಲವೇ ಗಿಯರುಗಳ ಮೂಲಕ ಹಿಡಿದಿಡಲು ಹೋದ ಪ್ರಾಚೀನರಿಗೆ ಒಂದು ತೊಂದರೆ ಎದುರಾಯಿತು. ಅದೇನೆಂದರೆ, ನಮ್ಮ ಸೌರಮಂಡಲದ ಗ್ರಹಗಳನ್ನೂ ಸೇರಿಸಿ, ಯಾವೊಂದು ಕಾಯವೂ ಪರಿಪೂರ್ಣ ವೃತ್ತಾಕಾರದಲ್ಲಿ ಚಲಿಸುವುದಿಲ್ಲ. ಅವೆಲ್ಲ ತಿರುಗುವುದು ದೀರ್ಘವೃತ್ತದ ಪಥಗಳಲ್ಲಿ. ಅಲ್ಲದೆ, ಆ ಪಥದಲ್ಲಾದರೂ ನಿಯತವೇಗದಲ್ಲಿ ಸುತ್ತುತ್ತವೋ ಎಂದರೆ ಅದೂ ಇಲ್ಲ! ಸೂರ್ಯನ ಹತ್ತಿರ ಸುಳಿವಾಗ ಅವುಗಳ ವೇಗ ಹೆಚ್ಚುತ್ತದೆ. ಅವನಿಂದ ದೂರ ಹೋದಂತೆ ವೇಗ ಕುಗ್ಗುತ್ತಾ ಸಾಗುತ್ತದೆ. ಈ ತೊಂದರೆಯನ್ನು ವೃತ್ತಾಕಾರದ ಗಿಯರುಗಳ ಯಂತ್ರದಲ್ಲಿ ಪರಿಹರಿಸಿಕೊಳ್ಳುವುದು ಹೇಗೆ? ಚಕ್ರಗಳ ಹಲ್ಲುಗಳಲ್ಲಿ ವ್ಯತ್ಯಾಸ ಮಾಡಿ ಈ ಕೆಲಸವನ್ನು ಸಾಧಿಸಬಹುದು ಎನ್ನುವುದು ಒಂದು ಯೋಚನೆ. ಅಂದರೆ, ಕಾಯಗಳು ಬೇಗಬೇಗನೆ ಹೆಜ್ಜೆಹಾಕುವುದನ್ನು ತೋರಿಸಲು ಹಲ್ಲುಗಳ ಅಂತರ ಹೆಚ್ಚಿಸಬೇಕು. ಚಲನೆ ನಿಧಾನವಾಗಿದೆ ಎನ್ನುವುದನ್ನು ಸೂಚಿಸಲು ಹೆಚ್ಚು ಒತ್ತೊತ್ತಾಗಿರುವ ಹಲ್ಲುಗಳನ್ನು ಬಿಡಿಸಬೇಕು. ಮೇಲ್ನೋಟಕ್ಕೆ ಇದೊಂದು ಸರಳ ಪರಿಹಾರ ಎನಿಸಿದರೂ ಇನ್ನೊಂದು ಸಮಸ್ಯೆಯನ್ನು ತಂದೊಡ್ಡುತ್ತದೆ. ಒತ್ತೊತ್ತಾದ ಹಲ್ಲುಗಳಿರುವ ಚಕ್ರಗಳು ಜತೆಗೂಡಿದಾಗ, ಅಗತ್ಯಕ್ಕಿಂತ ಹೆಚ್ಚು ನಿಧಾನದ ಚಲನೆಯನ್ನು ಅವು ತೋರಿಸುತ್ತವೆ. ಅಥವಾ ದೂರ ಸರಿದ ಹಲ್ಲುಗಳ ಚಕ್ರಗಳು ಜೊತೆಯಾದರೆ, ಅವು ಅಗತ್ಯಕ್ಕಿಂತ ಹೆಚ್ಚಿನ ವೇಗದಿಂದ ಗ್ರಹ ಓಡಿದಂತೆ ತೋರಿಸುವ ಅಪಾಯ ಇದೆ. ಇದು, ಇಡೀ ಯಂತ್ರದ ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗು ಮಾಡಬಹುದು! ಹಾಗಾದರೆ ಮಾಡುವುದೇನು? ಗ್ರೀಕರು ಅದಕ್ಕೂ ಒಂದು ಪರಿಹಾರ ಕಂಡುಹಿಡಿದರು. ಒಂದು ಚಕ್ರದ ಬದಲಿಗೆ ಕಪ್ಪೆಗಳಂತೆ ಒಂದರ ಬೆನ್ನಮೇಲೊಂದು ಕೂತ ಎರಡು ಚಕ್ರಗಳನ್ನು ಬಳಸಿದರು. ಇವೆರಡರ ನಡುವೆ ತೂತು ಕೊರೆದು ಒಂದು ಕಡ್ಡಿಯನ್ನು ನೆಟ್ಟರು. ಚಕ್ರಗಳು ತಿರುಗಿದಂತೆಲ್ಲ ಈ ಕಡ್ಡಿಯೂ ಅತ್ತಿತ್ತ ಚಲಿಸಿ, ವೇಗದ ಚಲನೆ ತೋರಿಸಬೇಕಾದಾಗ ಒಂದು ಚಕ್ರವೂ, ನಿಧಾನಗತಿಯನ್ನು ತೋರಿಸಬೇಕಾದಾಗ ಎರಡನೇ ಚಕ್ರವೂ ತಿರುಗುವಂತೆ ವ್ಯವಸ್ಥೆ ಮಾಡಿದರು! ಹೀಗೆ ಅವಳಿಚಕ್ರಗಳನ್ನು ಅಳವಡಿಸಿ ದೀರ್ಘವೃತ್ತದ ಸಮಸ್ಯೆಯನ್ನು ಗೆದ್ದರು!
ಆಂಟಿಕಿಥಿರಾ ಯಂತ್ರದ ವಿನ್ಯಾಸದ ರಹಸ್ಯ ಹೊರಬರುತ್ತಿದ್ದಂತೆಯೇ ಚರಿತ್ರಕಾರರಿಗೆ ತಲೆಬಿಸಿಯಾಯಿತು. ಯಾಕೆಂದರೆ, ಅವರು ಇದುವರೆಗೂ ನಂಬಿ ಬರೆದುಕೊಂಡ ಇತಿಹಾಸವನ್ನು ಈಗ ಒರೆಸಿ ಹೊಸದಾಗಿ ಬರೆಯಬೇಕಾಯಿತು. ಹದಿನೈದನೇ ಶತಮಾನದಲ್ಲಿ ಯೋಹಾನ್ ಕೆಪ್ಲರ್ ಬರುವವರೆಗೂ ನಮಗೆ ಗ್ರಹಗಳು ದೀರ್ಘವೃತ್ತದಲ್ಲಿ ಚಲಿಸುವ ವಿಚಾರ ತಿಳಿದಿರಲಿಲ್ಲ ಎನ್ನುವುದು ಇದುವರೆಗೆ ನಾವು ಓದಿರುವ ಇತಿಹಾಸ. ಆದರೆ, ಕ್ರಿ.ಪೂ. ೭೦ರಲ್ಲಿ ಈ ಯಂತ್ರವನ್ನು ರಚಿಸಿದವರಿಗೆ ಅದರ ಮಾಹಿತಿ ಇತ್ತು ಎನ್ನುವುದನ್ನು ಈಗ ಒಪ್ಪಬೇಕಾಗಿದೆ. ಅರಬ್ಬರ ಮೂಲಕ ೧೩ನೇ ಶತಮಾನದಲ್ಲಿ ಯೂರೋಪಿಯನ್ನರು ಗಿಯರ್ಗಳ ಬಗ್ಗೆ ಕಲಿಯುವವರೆಗೂ ಅದರ ಪರಿಚಯ ಯಾರಿಗೂ ಇರಲಿಲ್ಲ ಎನ್ನುವುದು ಇದುವರೆಗೆ ಕಲಿಸಿಕೊಂಡುಬಂದ ಇತಿಹಾಸ. ಆದರೆ, ಗಿಯರ್ಗಳ ಬಗ್ಗೆ ಯಾವ ಆಧುನಿಕ ಇಂಜಿನಿಯರಿಗೂ ಸವಾಲು ಹಾಕಬಲ್ಲಷ್ಟು ಪಾಂಡಿತ್ಯ ಪ್ರಾಚೀನರಿಗೂ ಇತ್ತು ಎನ್ನುವುದನ್ನು ಆಂಟಿಕಥಿರಾ ಸಾರಿ ಹೇಳುತ್ತಿದೆ! ನಮ್ಮ ಪೂರ್ವಜರಿಗೆ ಗ್ರಹಣ, ಗ್ರಹಚಲನೆಗಳ ವಿಷಯದಲ್ಲಿ ಅಪ್ರತಿಮ ಪಾಂಡಿತ್ಯ ಇತ್ತು ಎನ್ನುವುದನ್ನು ಈಗ ನಾವು ಒಪ್ಪಿಕೊಳ್ಳುವಂತಾಗಿದೆ. ಇನ್ನು ನಿಕೋಲಾಸ್ ಕೋಪರ್ನಿಕಸ್ ಬರುವವರೆಗೂ ಜನರಿಗೆ ಸೂರ್ಯನೇ ಸೌರಸಂಸಾರದ ಕೇಂದ್ರವೆನ್ನುವುದು ಗೊತ್ತಿರಲಿಲ್ಲ ಎಂದೇ ಇದುವರೆಗೆ ತಮ್ಮನ್ನು ನಂಬಿಸಿಕೊಂಡವರು ಈ ಯಂತ್ರವನ್ನು ನೋಡಿ ಕಣ್ಕಣ್ಣು ಬಿಡುವಂತಾಗಿದೆ!
ಆ ಕಾಲದಲ್ಲಿ ಗ್ರೀಕರ ನಾಲ್ಕು ಪ್ರಾಂತಗಳು ಬಹಳ ಜನಪ್ರಿಯವಾಗಿದ್ದವು. ಅಲೆಕ್ಸಾಂಡ್ರಿಯವನ್ನು ಬಿಟ್ಟರೆ ಎರಡನೇ ಅತಿದೊಡ್ಡ ವ್ಯಾಪಾರ ಮತ್ತು ಆಡಳಿತಪ್ರದೇಶವಾಗಿದ್ದದ್ದು ಸಿರಾಕ್ಯೂಸ್ ಎಂಬ ದ್ವೀಪ. ಇದನ್ನು ಕೊರಿಂತ್ ಪ್ರಾಂತ ಎಂದು ಕರೆಯಲಾಗುತ್ತಿತ್ತು. ನಾಲ್ಕೂ ಪ್ರಾಂತಗಳಲ್ಲಿ ಆಗಿನ ಕಾಲದಲ್ಲಿ ಪ್ರತಿನಾಲ್ಕು ವರ್ಷಗಳಿಗೊಮ್ಮೆ ಕ್ರೀಡಾಸ್ಪರ್ಧೆಗಳು ನಡೆಯುತ್ತಿದ್ದವು. ಯಾವ್ಯಾವ ವರ್ಷದಲ್ಲಿ ಎಲ್ಲಿ ಸ್ಪರ್ಧೆಗಳು ನಡೆಯುತ್ತವೆ ಎನ್ನುವುದನ್ನು ತಿಳಿಯಲು ಬೇಕಾದ ವ್ಯವಸ್ಥೆಯನ್ನು ಆಂಟಿಕಥಿರಾದಲ್ಲಿ ಮಾಡಲಾಗಿತ್ತು. ಅದರಲ್ಲಿ ಎಲ್ಲಕ್ಕಿಂತ ಕೊರಿಂತ್ನ ಕ್ರೀಡೆಗಳ ಹೆಸರನ್ನು ದೊಡ್ಡದಾಗಿ ಬರೆಯಲಾಗಿತ್ತು. ಆ ಕಾಲದ ರಾಷ್ಟ್ರೀಯ ಕ್ರೀಡೆಯಾದ ಒಲಿಂಪಿಕ್ಸ್ ಅನ್ನೂ ಮೀರಿಸಿ ಕೊರಿಂತ್ ಕ್ರೀಡೆಗಳಿಗೆ ದೊಡ್ಡ ಮನ್ನಣೆ ಕೊಡಬೇಕಾದರೆ, ಈ ಯಂತ್ರವನ್ನು ಆ ಪ್ರಾಂತದವರೇ ತಯಾರಿಸಿರಬೇಕು ಎನ್ನುವುದು ವಿಜ್ಞಾನಿಗಳ ಊಹೆ. ಕ್ರಿ.ಪೂ. ೨೦೦ರ ಸುಮಾರಿಗೆ ಸಿರಾಕ್ಯೂಸ್ ನಗರದಲ್ಲಿದ್ದ ಮತ್ತು ಆಂಟಿಕಥಿರಾದಂಥ ಯಂತ್ರವನ್ನು ಮಾಡಬಲ್ಲ ಏಕೈಕ ಪ್ರತಿಭಾಶಾಲಿ ಎಂದರೆ ಆರ್ಕಿಮಿಡೀಸ್ ಒಬ್ಬನೇ. ಹಾಗಾದರೆ ಈ ಯಂತ್ರದ ನಿರ್ಮಾತೃ ಅವನೇ ಇರಬಹುದೆ? ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.?