ಕೇಂದ್ರಸರ್ಕಾರದ ಈಚಿನ ವರ್ಷಗಳ ಹಲವು ಯೋಜನೆಗಳ ಫಲಿತವಾಗಿ ದೇಶದ ಸಮಾಜದ ಅಂತರ್ವಿನ್ಯಾಸದಲ್ಲಿ ಎದ್ದುಕಾಣುವ ಪರಿವರ್ತನೆಯಾಗುತ್ತಿರುವುದು ಒಂದು ಗಣನಾರ್ಹ ಬೆಳವಣಿಗೆ. ಕಳೆದ ಒಂಬತ್ತು ವರ್ಷಗಳಲ್ಲಿ ಯೋಜನೆಗಳ ಲಕ್ಷ್ಯಸಾಧಕತೆಯ ಸಾಂದ್ರತೆಯಿಂದಾಗಿ ಅಭಿವೃದ್ಧಿಯು ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ಜಲಶಕ್ತಿ, ಆಯುಷ್ ಮೊದಲಾದ ಕ್ಷೇತ್ರಗಳು ಹಿಂದಿದ್ದುದಕ್ಕಿಂತ ಹೆಚ್ಚು ದೃಢಿಷ್ಠವಾಗಿರುವುದರಿಂದ ಎಲ್ಲ ಜನವರ್ಗಗಳ ಸ್ಥಿತಿಯೂ ಉತ್ತಮಗೊಂಡಿದೆ. ಕೌಶಲವೃದ್ಧಿ, ಸಹಕಾರಿ ಕ್ಷೇತ್ರ ಮೊದಲಾದವಕ್ಕೇ ಮೀಸಲಾದ ಪ್ರತ್ಯೇಕ ಸಚಿವಾಲಯಗಳೇ ಕಾರ್ಯನಿರತವಾಗಿವೆ. ಬಹುತೇಕ ಬಡ ವರ್ಗಗಳಿಗೆ ಆಸರೆ ನೀಡುವ ಹೈನುಗಾರಿಕೆ ಮೊದಲಾದ ಕ್ಷೇತ್ರಗಳಿಗೆ ವಿಶೇಷ ನೆರವನ್ನು ನೀಡಲಾಗಿದೆ. ಈ ಹಲವಾರು ಕ್ರಮಗಳ ಪರಿಣಾಮವಾಗಿ ಹಿಂದೆ ‘ಬಡತನದ ರೇಖೆಗಿಂತ ಕೆಳಗಿರುವವರು’ ಎಂದು ಗುರುತಿಸಲ್ಪಟ್ಟಿದ್ದವರ ಪೈಕಿ ಕಳೆದ ಐದು ವರ್ಷಗಳಲ್ಲಿಯೇ 13.5 ಕೋಟಿಯಷ್ಟು ಅಧಿಕ ಜನರು ಬಡತನದ ಕಕ್ಷೆಯಿಂದ ಹೊರಬಂದಿದ್ದಾರೆ, ಈಗ ತಮ್ಮದೇ ಒಂದು ಹೊಸ ಮಧ್ಯಮವರ್ಗವಾಗಿ ಘಟಿತವಾಗಿದ್ದಾರೆ. ಇದಕ್ಕಿಂತ ಮಿಗಿಲಾದ ಸಂತೃಪ್ತಿ ಏನಿದ್ದೀತು? ಒಟ್ಟು ಜನಸಂಖ್ಯೆಯ ಮೂರರಲ್ಲೊಂದರಷ್ಟಿರುವ ಮಧ್ಯಮವರ್ಗದ ಏಳ್ಗೆಯಾಗಿರುವುದೇ ಕೇಂದ್ರಸರ್ಕಾರದ ಪ್ರಯಾಸದ ಸಫಲತೆಯ ಸೂಚಕವಲ್ಲವೇ? ಇಡೀ ದೇಶದ ಸರ್ವತೋಮುಖ ಅಭ್ಯುದಯದ ಆಧಾರಸ್ತಂಭ ಮಧ್ಯಮವರ್ಗವೇ. ಈಗ್ಗೆ ದಶಕಕ್ಕೆ ಹಿಂದೆ ಮಂದಗತಿಯಲ್ಲಿದ್ದ ಸಮೃದ್ಧ್ಯಭಿಮುಖ ಪಯಣ ಈಗ ವೇಗವನ್ನು ಪಡೆದುಕೊಂಡಿರುವುದು ಈ ಪೀಳಿಗೆಯವರಿಗೆ ಒಂದು ಹೃದ್ಯ ಅನುಭವವಾಗಿದೆ.
ಬಡತನವನ್ನು ಹಿಂದಿಕ್ಕಿರುವ ಜನವರ್ಗ
Month : November-2023 Episode : Author :