ಚೀನಾದ ಬೆಲ್ಟ್ ಹಾಗೂ ರೋಡ್ ಯೋಜನೆಗೆ ಸೆಡ್ಡು ಹೊಡೆಯಲು ಭಾರತ ಹಾಗೂ ಅಮೆರಿಕವು ಮಧ್ಯಪ್ರಾಚ್ಯದ ಮೂಲಕ ಐರೋಪ್ಯ ರಾಷ್ಟ್ರಗಳಿಗೆ ಹೋಗುವ ರಸ್ತೆ ಯೋಜನೆಯ ಪ್ರಸ್ತಾಪ ಮಾಡಿತ್ತು. ಇದರ ಬೆನ್ನಲ್ಲೇ ಇರಾನ್ಗೆ ಸೆಡ್ಡು ಹೊಡೆಯಬೇಕು ಎನ್ನುವ ಉದ್ದೇಶದಿಂದ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಜತೆ ಕೈ ಜೋಡಿಸಲು ಸೌದಿ ಅರೇಬಿಯಾ ಮುಂದಾಗಿತ್ತು. ಇದರಿಂದ ಒಂದಿಷ್ಟು ವಿಷಮ ಶಕ್ತಿಗಳು ಹಾಗೂ ಚೀನಾದ ಆಸಕ್ತಿಗೆ ಸೆಡ್ಡು ಹೊಡೆದಂತಾಗುತ್ತದೆ. ಇಸ್ರೇಲನ್ನು ಕೆಣಕಿದರೆ ಸುಮ್ಮನೇ ಇರುವುದಿಲ್ಲ ಎನ್ನುವುದು ಜಗತ್ತಿಗೆ ತಿಳಿದ ವಿಚಾರ.
ಯಹೂದಿಗಳು ಕ್ರೂರಿಗಳು!
ಮಾನವೀಯತೆ ಇಲ್ಲದ ಮೃಗಗಳು:
ಪ್ಯಾಲೇಸ್ತೈನಿನ ಮುಗ್ಧ ಮಕ್ಕಳು, ಹೆಂಗಸರ ಮೇಲೆ ಬಾಂಬ್ಗಳ ಸುರಿಮಳೆ ಮಾಡುತ್ತಿರುವ ರಣಹೇಡಿಗಳು!
ಪ್ಯಾಲೇಸ್ತೈನಿನ ನಿರಾಶ್ರಿತ ಯಹೂದಿಗಳು ಆಶ್ರಯದಾತರನ್ನೇ ಕೊಲ್ಲುತ್ತಿದ್ದಾರೆ!
ಇಸ್ರೇಲ್-ಪ್ಯಾಲೇಸ್ತೈನ್ ಇತಿಹಾಸ ಗೊತ್ತಿಲ್ಲದೇ ಇಂದಿನ ರಾಜಕೀಯವನ್ನಷ್ಟೇ ಪರಿಶೀಲಿಸಿಕೊಂಡವರು ಈ ರೀತಿ ಮಾತನಾಡುವುದು ಸಹಜ. ಹಾಗೆಯೇ ಪ್ಯಾಲೇಸ್ತೈನ್ನಲ್ಲಿ ಮುಸ್ಲಿಂರಿದ್ದಾರೆ ಎನ್ನುವ ಕಾರಣಕ್ಕೆ ಇಸ್ರೇಲನ್ನು ಬೆಂಬಲಿಸುವವರು ಒಂದಿಷ್ಟು ಜನ. ಆದರೆ ವಾಸ್ತವದಲ್ಲಿ ಯಹೂದಿಗಳು ಇಷ್ಟೊಂದು ಕಠಿಣಹೃದಯಿಗಳಾಗಲು ಹಾಗೂ ಪ್ರತಿ ಹೋರಾಟದಲ್ಲೂ ಭೀಕರತೆ ಕಾಣಲು ಅವರಲ್ಲಿನ ಅಸ್ತಿತ್ವದ ಪ್ರಶ್ನೆ ಕಾರಣವಾಗಿದೆ. ಯಹೂದಿಗಳನ್ನು ಈ ಕ್ರೂರ ಜಗತ್ತು ಅಷ್ಟೊಂದು ಕೆಟ್ಟದಾಗಿ ನಡೆಸಿಕೊಂಡಿದೆ. ಆದರೆ ಮಾನವೀಯತೆಯ ಭಾಷಣ ಮಾಡುವವರು ಯಹೂದಿಗಳ ಮೇಲಾಗಿರುವ ಅನ್ಯಾಯವನ್ನು ಬದಿಗಿಟ್ಟು, ಕೇವಲ ಪ್ಯಾಲೇಸ್ತೈನಿಯನರ ಬಗೆಗೆ ಕಣ್ಣೀರಿನ ವ್ಯವಹಾರ ಮಾಡುತ್ತಿದ್ದಾರೆ. ಯಾವುದೇ ಇತಿಹಾಸ ಹಾಗೂ ಹೋರಾಟವನ್ನು ನಮ್ಮ ಇಷ್ಟ-ಕಷ್ಟಕ್ಕೆ ತಕ್ಕಂತೆ ನೋಡಲಾಗುವುದಿಲ್ಲ. ‘ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ್ದು ತಪ್ಪು, ಆದರೆ ಇಸ್ರೇಲ್ ಹಾಗೆ ಮಾಡಿದ್ದು ಸರಿಯಲ್ಲ’ ಎಂದು ಒಂದೇ ವಾಕ್ಯದಲ್ಲಿ ಷರಾ ಬರೆಯಲಾಗದು. ಇಂದಿನ ಇಸ್ರೇಲ್ಗೆ ಯಹೂದಿಗಳು ನಿರಾಶ್ರಿತರಾಗಿ ಬಂದವರಿರಬಹುದು. ಆದರೆ ಇಸ್ರೇಲ್ ಎನ್ನುವುದು ಅವರ ನಿರಾಶ್ರಿತ ಕ್ಯಾಂಪ್ ಅಲ್ಲ. ಬದಲಾಗಿ ಇದೇ ಯಹೂದಿಗಳು ಇಸ್ರೇಲ್, ಜೋರ್ಡಾನ್, ಸಿರಿಯಾ ಸೇರಿ ಅರಬ್ ರಾಷ್ಟ್ರಗಳಲ್ಲಿ ನೂರಾರು ವರ್ಷಗಳ ಕಾಲ ಬದುಕಿದ್ದರು. ಇಸ್ಲಾಂ ಹಾಗೂ ಕ್ರಿಸ್ಚಿಯಾನಿಟಿಯಂತೆ ತಮ್ಮದೇ ಧರ್ಮದ ಪಾಲನೆಯನ್ನು ಈ ಭಾಗದಲ್ಲಿ ಮಾಡಿಕೊಂಡು ಬಂದಿದ್ದರು. ಆದರೆ ಸಾವಿರ ವರ್ಷಗಳ ಹಿಂದೆ ಇದೇ ಯಹೂದಿಗಳನ್ನು ವ್ಯವಸ್ಥಿತವಾಗಿ ಅರಬ್ನಿಂದ ಓಡಿಸುವ ಕೆಲಸವಾಯಿತು. ಗ್ರೀಕರ ಕಾರಣದಿಂದ ಐರೋಪ್ಯ ರಾಷ್ಟ್ರಗಳಲ್ಲಿ ಈ ಸಮುದಾಯ ನೆಲೆ ಕಂಡಿತು. ಗ್ರೀಕ್ ಸಾಮ್ರಾಜ್ಯ ಬೆಳೆದಂತೆ ಆ ಸೈನ್ಯದಲ್ಲಿದ್ದ ಯಹೂದಿಗಳು ಕೂಡ ಜಗತ್ತಿನ ಬೇರೆ ಬೇರೆ ಭಾಗಗಳಿಗೂ ಸಣ್ಣ ಸಂಖ್ಯೆಯಲ್ಲಿ ವಲಸೆ ಹೋದರು. ಇದರ ಮಧ್ಯೆಯೂ ಧರ್ಮಾಂಧತೆ ಕಾರಣದಿಂದ ಯಹೂದಿಗಳು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಾಮ್ರಾಜ್ಯಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಇದಾದ ಬಳಿಕ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಮತ್ತೆ ಹಿಟ್ಲರ್ ಕಪಿಮುಷ್ಟಿಯಲ್ಲಿ ಲಕ್ಷಾಂತರ ಯಹೂದಿಗಳನ್ನು ಜೀವಂತ ಸಮಾಧಿ ಮಾಡಲಾಯಿತು. ಆಗ ಬದುಕುಳಿದ ಒಂದಿಷ್ಟು ಜನರು ಅಮೆರಿಕದತ್ತ ಓಡಿಹೋದರೆ, ಬ್ರಿಟಿಷರ ನೆರವಿನಿಂದ ಒಂದಿಷ್ಟು ಜನರು ಪ್ಯಾಲೇಸ್ತೈನ್ಗೆ ಬಂದರು. ಆಗ ಈ ಭಾಗವು ಬ್ರಿಟಿಷ್ ಆಡಳಿತದಲ್ಲಿತ್ತು. 2 ಸಾವಿರಕ್ಕೂ ಅಧಿಕ ವರ್ಷಗಳ ಕಾಲ ಜೀವಭಯದಲ್ಲೇ ನರಳುತ್ತಿದ್ದ ಯಹೂದಿಗಳು ವಿಶ್ವ ಪರ್ಯಟನ ಮಾಡಿ ಮತ್ತೆ ತಮ್ಮ ಮೂಲ ವಾಸಸ್ಥಳಕ್ಕೆ ಬಂದಿದ್ದರು. ಆ ಹಂತದಲ್ಲಿ ಯಹೂದಿ ಸಮುದಾಯದ ರಕ್ಷಣೆಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಶುರುವಾಯಿತು. ಕೇವಲ ಅಂದಿನ ಇತಿಹಾಸವನ್ನು ನೋಡಿದಾಗ ಯಹೂದಿಗಳು ನಿರಾಶ್ರಿತರು. ಆದರೆ ಅರಬರ ಸಾವಿರಾರು ವರ್ಷಗಳ ಇತಿಹಾಸ ನೋಡಿದಾಗ ಈ ಜಾಗದ ಮೇಲೆ ಯಹೂದಿಗಳಿಗೂ ಧಾರ್ಮಿಕ ಹಾಗೂ ವಾಸ್ತವಿಕ ಹಕ್ಕುಗಳಿದ್ದವು. ಇದೇ ಆಧಾರದ ಮೇಲೆ ವಿಶ್ವಸಂಸ್ಥೆಯು ಇಸ್ರೇಲ್ ರಚನೆಗೆ ಒಪ್ಪಿತು. ಇದಕ್ಕೆ ಬ್ರಿಟನ್ ಹಾಗೂ ಅಮೆರಿಕ ಮಧ್ಯಸ್ಥಿಕೆಯನ್ನು ವಹಿಸಿದವು. ವಿಪರ್ಯಾಸವೆಂದರೆ ಈ ರಾಷ್ಟ್ರರಚನೆಯು ಸುತ್ತಲಿನ ಯಾವುದೇ ಮುಸ್ಲಿಂ ರಾಷ್ಟ್ರಗಳಿಗೆ ರುಚಿಸಲಿಲ್ಲ. ಅಂದಿನಿಂದಲೂ ಅರಬ್ ರಾಷ್ಟ್ರಗಳು ನೇರವಾಗಿ ಹಾಗೂ ಪರೋಕ್ಷವಾಗಿ ಇಸ್ರೇಲ್ ಮೇಲೆ ವ್ಯವಸ್ಥಿತ ದಾಳಿ ಶುರು ಮಾಡಿದವು.
ಇಸ್ರೇಲ್ಗೆ ಅಸ್ತಿತ್ವದ ಪ್ರಶ್ನೆಯಾದರೆ, ಅರಬ್ ಮುಸ್ಲಿಂ ರಾಷ್ಟ್ರಗಳಿಗೆ ಇದು ಧಾರ್ಮಿಕ ವಿಚಾರವಾಗಿ ಪರಿಣಮಿಸಿತು. ಇದನ್ನು ಜಗತ್ತಿನೆದುರು ನೇರವಾಗಿ ಹೇಳಲು ಇವರು ಬಯಸದಿದ್ದರೂ ಉದ್ದೇಶ ಸ್ಪಷ್ಟವಾಗಿತ್ತು. ಏಕೆಂದರೆ ಇದೇ ಭಯದ ವಾತಾವರಣದ ಮೂಲಕವೇ ಅರಬ್ನಲ್ಲಿದ್ದ ಏಕೈಕ ಕ್ರಿಶ್ಚಿಯನ್ ರಾಷ್ಟ್ರ ಲೆಬನಾನನ್ನು ಕೂಡ ಇಂಥದೇ ಉಗ್ರಶಕ್ತಿಗಳು ಇಂದು ಮುಸ್ಲಿಂ ರಾಷ್ಟ್ರವನ್ನಾಗಿ ಬದಲಾಯಿಸಿವೆ. ಇಸ್ರೇಲಿಗರಿಗೂ ಇದೇ ಭಯ ಕಾಡುತ್ತಿದೆ.
ಪ್ಯಾಲೇಸ್ತೈನಿಯನರಿಗೆ ಅನ್ಯಾಯ ಆಗಿದೆಯೇ?
ಪ್ಯಾಲೇಸ್ತೈನ್ ದೇಶವನ್ನು ಇಬ್ಭಾಗ ಮಾಡಿ ಇಸ್ರೇಲ್ ರಚಿಸಿ ಅನ್ಯಾಯ ಮಾಡಲಾಗಿದೆ ಎಂದು ಮೇಲ್ನೋಟದ ಆರೋಪ ಮಾಡಿಬಿಡಬಹುದು. ಆದರೆ ಅರಬ್ ದೇಶಗಳ ಧಾರ್ಮಿಕ ಹಾಗೂ ರಾಜಕೀಯ ಸಂದಿಗ್ಧತೆ ಅಷ್ಟು ಸುಲಭವಾಗಿಲ್ಲ. ನಾವು ಭಾರತೀಯರು ಇತರ ಧರ್ಮ ಹಾಗೂ ಸಮುದಾಯಗಳ ಜನರನ್ನು ಒಪ್ಪಿಕೊಂಡು ಸಹಿಷ್ಣುತೆಯಿಂದ ಇರುವಂತೆ ಅವರಿಲ್ಲ. ಮಧ್ಯಪ್ರಾಚ್ಯದಲ್ಲಿ ಇನ್ನೊಂದು ಧರ್ಮದ ಪಾಲನೆಗೆ ಅವಕಾಶ ಕೊಡದ ರೀತಿ ಷರಿಯಾ ಕಾನೂನುಗಳನ್ನು ಪಾಲನೆಮಾಡಲಾಗುತ್ತಿದೆ. ಲಿಬರಲ್, ಪ್ರಜಾತಾಂತ್ರಿಕ ದೇಶ ಎನಿಸಿಕೊಂಡಿದ್ದ ಲೆಬನಾನ್, ಷರಿಯಾ ಕಾನೂನಿನತ್ತ ವಾಲಿದೆ. ಇನ್ನೊಂದೆಡೆ ಷಿಯಾ-ಸುನ್ನಿಗಳ ಕಿತ್ತಾಟದಲ್ಲಿ ಶಾಂತಿದೂತರ ಜಾಗ ಎಂದು ಹೇಳಿಸಿಕೊಳ್ಳುವ ಮಧ್ಯಪ್ರಾಚ್ಯ ಭಾಗವು ಅಶಾಂತಿಯ ತೋಟವಾಗಿದೆ. ಇಂತಹ ವಿಷಮ ಸ್ಥಿತಿ ಹಾಗೂ ಉದಾಹರಣೆಗಳು ಇರುವಾಗ, ಪ್ಯಾಲೇಸ್ತೈನ್ ನೀಡಿದ ಪ್ರಸ್ತಾವನೆ ಏನೆಂದರೆ, ‘ಪ್ರತ್ಯೇಕ ದೇಶ ಮಾಡುವುದು ಬೇಡ, ಪ್ಯಾಲೇಸ್ತೈನ್ನಲ್ಲಿ ಯಹೂದಿಗಳಿರಲಿ’ ಎಂದು ಹೇಳಿದರು. ಸಾವಿರಾರು ವರ್ಷಗಳ ಹೊಡೆತ ತಿಂದಿರುವ ಯಹೂದಿಗಳು ಹಾಗೂ ಪ್ರಸ್ತುತ ಮಧ್ಯಪ್ರಾಚ್ಯದ ಹೆಣಗಾಟ ನೋಡಿದಾಗ ಇದನ್ನು ಯಹೂದಿಗಳು ಕನಸಲ್ಲೂ ಒಪ್ಪಿಕೊಳ್ಳಲು ಸಾಧ್ಯವಿರಲಿಲ್ಲ. ತಮ್ಮ ನಂಬಿಕೆ ಹಾಗೂ ಧರ್ಮದ ಮೇಲೆ ಅಪಾರ ನಂಬಿಕೆ ಇರುವ ಈ ಸಮುದಾಯವು, ತನ್ನನ್ನು ಇನ್ನೊಂದು ಧರ್ಮವು ಆಪೋಶನ ತೆಗೆದುಕೊಳ್ಳುವುದನ್ನು ನೋಡಲಾಗದು ಎನ್ನುವ ಕಾರಣಕ್ಕಾಗಿಯೇ ಇಷ್ಟೊಂದು ಕಠಿಣ ಹಾಗೂ ದೃಢವಾಗಿ ನಿಂತಿದೆ. ಒಂದೊಮ್ಮೆ ಪ್ಯಾಲೇಸ್ತೈನಿಯನರ ಪ್ರಸ್ತಾಪ ಒಪ್ಪಿಕೊಂಡಿದ್ದರೆ, ಮಧ್ಯಪ್ರಾಚ್ಯದ ಸಾಕಷ್ಟು ರಾಷ್ಟ್ರಗಳಲ್ಲಿ ನಡೆಯುತ್ತಿರುವ ಆಂತರಿಕ ಕಲಹವು ಇಲ್ಲೂ ನಡೆಯುತ್ತಿತ್ತು. ಇಂದು ದೇಶವಾಗಿ ಇಸ್ರೇಲ್ ಹೋರಾಡುವುದಕ್ಕೂ, ಒಂದು ಗುಂಪಾಗಿ ಹೋರಾಡುವುದಕ್ಕೂ ವ್ಯತ್ಯಾಸವಿದೆ.
ವಿನಾಶ ಮತ್ತು ಅಭಿವೃದ್ಧಿ
1948ರಲ್ಲಿ ದೇಶ ವಿಭಜನೆಯಾದಾಗ ಪ್ಯಾಲೇಸ್ತೈನ್ ಹಾಗೂ ಇಸ್ರೇಲ್ ಜನರ ಆದಾಯದಲ್ಲಿ ದೊಡ್ಡ ವ್ಯತ್ಯಾಸ ಇರಲಿಲ್ಲ. ಎರಡೂ ದೇಶದ ಜನರ ವರಮಾನವು 1900 ಡಾಲರುಗಳ ಆಸುಪಾಸಿನಲ್ಲಿತ್ತು. ಈಗದು 3600 ಡಾಲರ್ಗೆ ತಲಪಿದೆ. ಹಾಲಿ ಯುದ್ಧದ ಬಳಿಕ ಮತ್ತೆ ಪಾತಾಳಕ್ಕೆ ಇಳಿಯಬಹುದು. ಆದರೆ ಇಸ್ರೇಲ್ ಜನರ ವರಮಾನವು 55000 ಡಾಲರ್ನ ಆಸುಪಾಸಿನಲ್ಲಿದೆ. ಅಂದರೆ ಧರ್ಮಾಂಧತೆಯಲ್ಲೇ ಜೀವನ ನಡೆಸುವವರ ಆರ್ಥಿಕತೆಯು ವೃದ್ಧಿಗೊಳ್ಳಲಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಇಸ್ರೇಲ್ ಅದೆಷ್ಟೋ ಪಟ್ಟು ಬೆಳೆದಿದೆ. ಕೃಷಿ, ತಂತ್ರಜ್ಞಾನ, ರಕ್ಷಣೆ ಸೇರಿ ಸಾಕಷ್ಟು ಕೇತ್ರಗಳಲ್ಲಿ ಜಗತ್ತಿಗೆ ಮಾದರಿ ಎನಿಸಿಕೊಂಡು ಬೆಳೆದಿದೆ. ಪಕ್ಕದಲ್ಲಿರುವ ಯಹೂದಿಗಳು ಕೂಡ ನಮ್ಮವರೇ ಎಂದು ಒಪ್ಪಿಕೊಂಡು ಯಹೂದಿಗಳಂತೆ ಅಭಿವೃದ್ಧಿಯ ಹಾದಿಯಲ್ಲಿ ಸಾಗಿದ್ದಾರೆ. ಪ್ಯಾಲೇಸ್ತೈನ್ನಲ್ಲಿ ಬಾಂಬ್ಗಳ ಬದಲಿಗೆ ಇಸ್ರೇಲ್ ರೀತಿಯಲ್ಲಿ ಹೂವುಗಳು ಬೆಳೆಯಲಿಲ್ಲ.
ಪಾಠ ಹಾಗೂ ವಾಸ್ತವಿಕತೆ
ಈ ಜಗತ್ತಿನಲ್ಲಿ ಸಾಮಾನ್ಯವಾಗಿ ಎರಡು ರೀತಿಯ ನಿರಾಶ್ರಿತರು ಇರುತ್ತಾರೆ. ಒಬ್ಬರು ಹೊಟ್ಟೆಗೆ ಹಿಟ್ಟಿಲ್ಲದೇ ಇನ್ನೊಂದು ದೇಶದ ನೆಲದ ಮೇಲೆ ಕಾಲಿಟ್ಟು ಅವರೊಂದಿಗೆ ಒಬ್ಬರಾಗಿ ಬದುಕುತ್ತಾರೆ. ಆ ದೇಶದ ಅವಿಭಾಜ್ಯ ಅಂಗವಾಗಿ, ದೇಶದ ಜನಕ್ಕೆ ಋಣಿಯಾಗಿ, ಕೃತಜ್ಞತಾಭಾವದಿಂದ ರಾಷ್ಟ್ರದ ಏಳಿಗೆಗಾಗಿ ಬೆವರು ಸುರಿಸುತ್ತಾರೆ. ಇನ್ನೊಂದು ವರ್ಗವೆಂದರೆ ಆ ದೇಶಕ್ಕೆ ಬಂದು ತನ್ನ ಜನಸಂಖ್ಯೆಯನ್ನು ಹೆಚ್ಚಿಸಿ ತನ್ನ ಹಳೆಯ ಹೊಲಸನ್ನು ಈ ದೇಶದಲ್ಲೂ ಪಸರಿಸುವ ಕೆಲಸ ಮಾಡಿ, ಅಲ್ಲಿಯ ಪ್ರಾದೇಶಿಕತೆ, ಸಂಸ್ಕೃತಿಯನ್ನು ಆಪೋಶನ ತೆಗೆದುಕೊಳ್ಳುತ್ತದೆ. ಸಂಸ್ಕೃತಿಯ ಆಚರಣೆಯಲ್ಲಿ ದ್ವಂದ್ವ ಇರಬಾರದು. ಒಂದು ಧರ್ಮವನ್ನು ಇಷ್ಟಪಟ್ಟು ಸೇರುವುದು ಬೇರೆ. ಆದರೆ ಉಸಿರುಕಟ್ಟಿಸಿ ಧರ್ಮ ಬೋಧನೆ ಮಾಡುವುದು ಬೇರೆ. ಆದರೆ ಈ ಜಗತ್ತಿನಲ್ಲಿ ಉದಾರವಾದಿಗಳು ಎನಿಸಿಕೊಂಡವರ ಸಮಸ್ಯೆ ಏನೆಂದರೆ ಎಲ್ಲವನ್ನೂ ಏಕಮುಖವಾಗಿ ನೋಡಿ, ಉಳಿದವರಿಗೆ ವಿಶಾಲತೆಯ ಬುದ್ಧಿವಾದ ಹೇಳುತ್ತಾರೆ. ವಾಸ್ತವ ಏನೆಂದರೆ ಅವರಷ್ಟು ಸಂಕುಚಿತರು ಮತ್ತೊಬ್ಬರಿಲ್ಲ. ಇಂದು ಸ್ವೀಡನ್ ಸೇರಿ ಸಾಕಷ್ಟು ಐರೋಪ್ಯ ರಾಷ್ಟ್ರಗಳು ಈ ದ್ವಂದ್ವಕ್ಕೆ ಬೆಲೆ ತೆರುತ್ತಿವೆ. ಮಧ್ಯಪ್ರಾಚ್ಯದಿಂದ ಬಂದ ನಿರಾಶ್ರಿತರು ಐರೋಪ್ಯ ದೇಶಗಳ ಆಹುತಿ ಪಡೆಯುತ್ತಿವೆ. ಆ ದೇಶಗಳ ಭಾಗವಾಗುವ ಬದಲು ಐರೋಪ್ಯ ರಾಷ್ಟ್ರಗಳನ್ನು ಮತ್ತೊಂದು ಅರಬ್ ಮಾಡುವ ಪ್ರಯತ್ನದಲ್ಲಿದ್ದಾರೆ. ಭಾರತದಲ್ಲಿಯೂ ಕಾಶ್ಮೀರ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಇತ್ತೀಚೆಗೆ ತಮಿಳುನಾಡಿನಲ್ಲಿ ಇಂತಹ ಪ್ರಯತ್ನ ಆಗಾಗ ವರದಿಯಾಗುತ್ತಿದೆ. ಆದರೆ ಯಹೂದಿಗಳು ಇಂತಹ ಕೆಲಸ ಮಾಡಿಲ್ಲ. ಇಸ್ರೇಲಿಗರ ಮನವಿ ಹಾಗೂ ಅಧಿಕಾರಯುತ ಆಗ್ರಹವೇನೆಂದರೆ, ‘ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ’.
ಭಾರತದ ಪ್ರಯತ್ನಕ್ಕೆ ಸೆಡ್ಡು!?
ಚೀನಾದ ಬೆಲ್ಟ್ ಹಾಗೂ ರೋಡ್ ಯೋಜನೆಗೆ ಸೆಡ್ಡು ಹೊಡೆಯಲು ಭಾರತ ಹಾಗೂ ಅಮೆರಿಕವು ಮಧ್ಯಪ್ರಾಚ್ಯದ ಮೂಲಕ ಐರೋಪ್ಯ ರಾಷ್ಟ್ರಗಳಿಗೆ ಹೋಗುವ ರಸ್ತೆ ಯೋಜನೆಯ ಪ್ರಸ್ತಾಪ ಮಾಡಿತ್ತು. ಇದರ ಬೆನ್ನಲ್ಲೇ ಇರಾನ್ಗೆ ಸೆಡ್ಡು ಹೊಡೆಯಬೇಕು ಎನ್ನುವ ಉದ್ದೇಶದಿಂದ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಜತೆ ಕೈ ಜೋಡಿಸಲು ಸೌದಿ ಅರೇಬಿಯಾ ಮುಂದಾಗಿತ್ತು. ಇದರಿಂದ ಒಂದಿಷ್ಟು ವಿಷಮ ಶಕ್ತಿಗಳು ಹಾಗೂ ಚೀನಾದ ಆಸಕ್ತಿಗೆ ಸೆಡ್ಡು ಹೊಡೆದಂತಾಗುತ್ತದೆ. ಇಸ್ರೇಲ್ನ್ನು ಕೆಣಕಿದರೆ ಸುಮ್ಮನೇ ಇರುವುದಿಲ್ಲ ಎನ್ನುವುದು ಜಗತ್ತಿಗೆ ತಿಳಿದ ವಿಚಾರ. ಇಸ್ರೇಲ್ನ್ನು ಕೆಣಕಿ, ಮುಸ್ಲಿಂ ರಾಷ್ಟ್ರಗಳ ಕಣ್ಣಲ್ಲಿ ಮತ್ತೆ ಅದನ್ನು ವಿಲನ್ ಮಾಡಿದರೆ, ಸೌದಿ ಅರೇಬಿಯಾದೊಂದಿಗಿನ ಸ್ನೇಹದ ಒಪ್ಪಂದ ಮತ್ತೆ ಮುಂದೂಡಿದಂತಾಗುತ್ತದೆ. ಮಧ್ಯಪ್ರಾಚ್ಯದಲ್ಲಿನ ಹೊಗೆ ಆಡುತ್ತಲೇ ಇರುತ್ತದೆ. ಈ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ವಿಧ್ವಂಸಕ ಶಕ್ತಿಗಳು ಮತ್ತೊಮ್ಮೆ ಯಶಸ್ವಿಯಾಗಿವೆ. ಆ ಕುತಂತ್ರ ಕೂಟದ ವ್ಯವಹಾರದಿಂದ ಮೊದಲಿಗೆ ಇಸ್ರೇಲಿನ ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳದೇ ಇಸ್ರೇಲ್ ವಿರಮಿಸುವುದಿಲ್ಲ. ಯುದ್ಧಭೂಮಿಯಲ್ಲಿ ಮಾನವೀಯತೆಯ ಪಾಠಕ್ಕೆ ಬೆಲೆಯಿಲ್ಲ. ಒಂದೊಮ್ಮೆ ಮಾಡುವುದಾದರೂ ಮೊದಲು ಬೆಂಕಿ ಹಚ್ಚಿದವರ ತಲೆಗೆ ಮಾನವೀಯತೆ ತುಂಬಬೇಕು. ಇಲ್ಲವಾದಲ್ಲಿ ಹೇಡಿಗಳಂತೆ ಪ್ರತಿ ಬಾರಿಯೂ ಹೊಡೆತ ತಿನ್ನುವುದರ ಜತೆಗೆ ಮಾನವೀಯತೆ ಪಾಠವನ್ನು ಮಾತ್ರ ಕೇಳಿಸಿಕೊಂಡಿರಬೇಕಾಗುತ್ತದೆ. ಹಾಗೆಯೇ ಬಾಂಬ್ಗಳನ್ನು ಹಾಕಿ ಅಡುಗೆಮನೆಗೆ ಹೋಗಿ ಅಡಗಿ ಕುಳಿತು, ಮಕ್ಕಳು ಹೆಂಗಸರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎನ್ನುವ ಧಾರ್ಮಿಕ ಭಯೋತ್ಪಾದಕ ನಾಟಕಕ್ಕೆ ತೆರೆ ಎಳೆಯಲೇಬೇಕಿದೆ. ಈ ಕೆಲಸವನ್ನು ಚಾಚುತಪ್ಪದೆ ಇಸ್ರೇಲ್ ಮಾಡಲು ಹೊರಟಂತಿದೆ.