ತಂತ್ರಜ್ಞಾನ ತನ್ನದಾಗಿಸಿಕೊಳ್ಳುವಲ್ಲಿ
ಅಮೃತಕಾಲದ ಭಾರತ ಹಿಡಿದಿರುವ ಹಾದಿ ಯಾವುದು?
19 ಸಾವಿರ ಕೋಟಿ ರೂಪಾಯಿಯ ಹಸಿರು ಹೈಡ್ರೋಜನ್ ಮಿಷನ್ ಘೋಷಿಸಿರುವ ಮೋದಿ ಸರ್ಕಾರ ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ಪ್ರೋತ್ಸಾಹಿಸುತ್ತಿದೆ. ಗುಜರಾತಿನಲ್ಲಿ 74 ಸಾವಿರ ಹೆಕ್ಟೇರ್ ಭೂಮಿಯಲ್ಲಿ ದೊಡ್ಡಮಟ್ಟದಲ್ಲಿ ಹಸಿರು ಜಲಜನಕವನ್ನು ಅಗ್ಗವಾಗಿಸಬಲ್ಲ ತಂತ್ರಜ್ಞಾನ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿದೆ. ಅಂಬಾನಿಯವರ ರಿಲಾಯನ್ಸ್. ಗ್ರೀನ್ ಹೈಡ್ರೋಜನ್ ಎನ್ನುವುದು ಯಾವುದೋ ದೂರದ ಕಲ್ಪನೆ ಆಗಿದ್ದರೆ ಭಾರತದ ಸರ್ಕಾರ ಮತ್ತು ಖಾಸಗಿಯವರು ಈ ಮಟ್ಟದಲ್ಲಿ ಅದರಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ ಎನ್ನುವುದು ಯಾರಿಗಾದರೂ ಹೊಳೆಯುತ್ತದೆಯಲ್ಲವೆ?
ಇತ್ತೀಚೆಗೆ ದೇಶದ ಚಂದ್ರಯಾನ-3 ಯಶಸ್ವಿಯಾದಾಗ ನಾನಾ ಅಭಿವ್ಯಕ್ತಿ ಮಾಧ್ಯಮ ವೇದಿಕೆಗಳಲ್ಲಿ ಆ ಕುರಿತ ಫೋಟೊಗಳು, ಸಂಭ್ರಮದ ಮಾಹಿತಿಗಳು ಸಹಜವಾಗಿಯೇ ಹರಿದಾಡಿದವು. ಅವೆಲ್ಲ ಸಂಭ್ರಮಗಳ ನಡುವೆಯೇ ಹಳೆಯ ಚಿತ್ರವೊಂದೂ ಹರಿದಾಡಿತು. ಅದು ಈ ಹಿಂದಿನ ಚಂದ್ರಯಾನ-2ಕ್ಕೆ ಸಂಬಂಧಿಸಿದ್ದು.
ಯಶಸ್ಸಿಗೆ ಹಲವು ಅಪ್ಪಂದಿರು, ಸೋಲು ಅನಾಥ – ಎಂಬ ಮಾತನ್ನು ಸುಳ್ಳಾಗಿಸಿದ ಚಿತ್ರವೂ ಅದು ಹೌದು. ಅದರಲ್ಲಿ, ಚಂದ್ರಯಾನ-2 ಯೋಜನೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿAಗ್ ಆಗದೇ ವಿಫಲವಾಗಿದ್ದಕ್ಕೆ ನಿರಾಸೆ-ದುಃಖಗಳ ಭಾವ ಹೊತ್ತು ಭಾರವಾಗಿದ್ದ ಅಂದಿನ ಇಸ್ರೋ ಅಧ್ಯಕ್ಷ ಕೆ. ಸಿವನ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಗಿದಪ್ಪಿ ಸಾಂತ್ವನಿಸುತ್ತಿದ್ದರು.
ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿ ಎನ್ನುವುದು ಕೇವಲ ಹಣವಿದ್ದ ಮಾತ್ರಕ್ಕೆ ಸಾಧಿಸಿಬಿಡಬಹುದಾದ ಸಂಗತಿ ಅಲ್ಲ. ಅಲ್ಲಿ ವರ್ಷಗಳ ತಪಸ್ಸದೃಶ ಪರಿಶ್ರಮ ಬೇಕಾಗುತ್ತದೆ. ಬಹಳ ಮುಖ್ಯವಾಗಿ, ಸೋತಾಗಲೂ ಜೊತೆ ನಿಂತು “ನಿಮ್ಮ ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸಿ” ಎಂದು ಹೇಳುವ ವ್ಯವಸ್ಥೆ ಬೇಕಾಗುತ್ತದೆ. ಮೋದಿ-ಸಿವನ್ ಅಪ್ಪುಗೆಯ ಆ ಚಿತ್ರ ಜನಮಾನಸದಲ್ಲಿ ಅಚ್ಚಾಗಿರುವುದಕ್ಕೆ ಕಾರಣವೆಂದರೆ ಮೋದಿ ಸರ್ಕಾರ ಈ ಒಂಬತ್ತು ವರ್ಷಗಳಲ್ಲಿ ಅಂಥದೊಂದು ವಾತಾವರಣವನ್ನು ನಿರ್ಮಿಸಿರುವುದನ್ನು ಆ ದೃಶ್ಯ ಸಮರ್ಥವಾಗಿ ಹಿಡಿದಿಟ್ಟಿರುವುದೇ ಆಗಿದೆ.
ಅಮೃತಕಾಲದಲ್ಲಿ ವಿಜ್ಞಾನ–ತಂತ್ರಜ್ಞಾನ: ಒಂದು ಟ್ರೈಲರ್
ನಮ್ಮಲ್ಲಿ ವಿಜ್ಞಾನಸಂಬಂಧಿ ಸಂಸ್ಥೆಗಳು, ಉತ್ಪಾದನಾ ಘಟಕಗಳು ಇವೆಲ್ಲ ಹಲವು ದಶಕಗಳ ಹಿಂದಿನಿಂದಲೇ ಇವೆ. ಹೀಗಿರುವಾಗ, ಮೋದಿ ಸರ್ಕಾರದ್ದೇನು ಹೆಚ್ಚುಗಾರಿಕೆ ಎಂದು ಕೆಲವರಾದರೂ ಪ್ರಶ್ನಿಸಿಯಾರು. ಆ ನಿಟ್ಟಿನಲ್ಲಿ ಕೆಲವು ಅಂಶಗಳನ್ನು ಉಲ್ಲೇಖ ರೂಪದಲ್ಲಿ ಹಿಡಿದಿಡೋಣ. ಅವುಗಳಲ್ಲಿ ಕೆಲವನ್ನಷ್ಟೇ ಲಂಬಿಸೋಣ. ಆಗ, ಸ್ವತಂತ್ರ ಭಾರತದ ಅಮೃತಕಾಲ ಎಂದು ಕರೆಸಿಕೊಳ್ಳುತ್ತಿರುವ ಈ ಮುಖ್ಯ ಮಗ್ಗುಲಿನಲ್ಲಿ ಭಾರತವು ವಿಜ್ಞಾನ-ತಂತ್ರಜ್ಞಾನಗಳಲ್ಲಿ ಕ್ರಮಿಸುತ್ತಿರುವ ಹಾದಿ ಏನೆಂಬುದು ತಿಳಿಯುತ್ತದೆ.
ಇವತ್ತಿಗೆ ಜಗತ್ತಿನ ಪ್ರಭಾವಿಗಳೆಲ್ಲ ಒಂದು ಮೇಜಿನ ಸುತ್ತ ಕುಳಿತು ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಬಗ್ಗೆ ಮಾತನಾಡಲು ಹೊರಟರೆ ಅಲ್ಲಿ ಭಾರತದ ಪ್ರಸ್ತಾಪವಿರದೇ ಹೋಗುವುದಕ್ಕೆ ಸಾಧ್ಯವಿಲ್ಲ.
- “ಭಾರತ ಅಭಿವೃದ್ಧಿಪಡಿಸಿರುವ ಯುಪಿಐ ಪಾವತಿ ವ್ಯವಸ್ಥೆ ಜಗತ್ತಿಗೊಂದು ಮಾದರಿ. ಯುಪಿಐ ವ್ಯವಸ್ಥೆ ಮೇಲೆಯೇ ಅಮೆಜಾನ್ ಪೇ ಥರದ ತಂತ್ರಾAಶ ಅಭಿವೃದ್ಧಿಪಡಿಸಿರುವ ನಾವು ಅಮೆರಿಕಕ್ಕೂ ಇದನ್ನೇ ಶಿಫಾರಸು ಮಾಡುತ್ತೇವೆ” ಎಂದು ಹೇಳಿದ್ದು ಗೂಗಲ್ ಸಿಇಓ ಸುಂದರ ಪಿಚ್ಚೈ. ನಮಗೆಲ್ಲ ತಿಳಿದಿರಬೇಕು – ಅಮೆರಿಕದಲ್ಲಿ ಕ್ರೆಡಿಟ್ ಕಾರ್ಡ್ ಜನಪ್ರಿಯವಿದ್ದಿರಬಹುದು, ಆದರೆ ನಮ್ಮಂತೆ ಕ್ಯೂಆರ್ ಕೋಡ್ ಮೇಲೆ ಮೊಬೈಲ್ ಫೋನಿನ ದೃಷ್ಟಿಹರಿಸಿ ಕ್ಷಣಮಾತ್ರದಲ್ಲಿ ಹಣಪಾವತಿಸುವ ವ್ಯವಸ್ಥೆ ಅಲ್ಲಿನ್ನೂ ಇಲ್ಲ!
- ವಿಜ್ಞಾನದ ವಿಷಯಕ್ಕೆ ಬಂದರೆ, ಈ ಹಿಂದೆ ಚಂದ್ರನ ಮೇಲೆ ಅಮೆರಿಕ, ಸೋವಿಯತ್, ಚೀನಾ ಇವೆಲ್ಲ ಮಾನವಸಹಿತ ಯಾನವನ್ನೇ ಮಾಡಿದ್ದಿರಬಹುದು. ಆದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಅನ್ವೇಷಕ ಯಂತ್ರಗಳನ್ನಿಳಿಸಿದ ಮೊದಲ ದೇಶ ಭಾರತ. ಹಾಗೆಂದೇ, ಅಲ್ಲಿಂದ ಬಂದಿರುವ ಮಾಹಿತಿಯ ವಿಶ್ಲೇಷಣೆಗೆ ಜಗತ್ತೇ ಭಾರತದತ್ತ ನೋಡುತ್ತಿದೆ.
- ಉಪಗ್ರಹಗಳನ್ನು ಕಕ್ಷೆಯಲ್ಲಿ ಕೂರಿಸುವುದಕ್ಕೆ ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಭಾರತವೇ ಅತಿ ಕಡಮೆ ವೆಚ್ಚದ ಸೇವಾದಾರನಾಗುವ ಕಾಲವಂತೂ ಅದಾಗಲೇ ಬಂದದ್ದಾಗಿಬಿಟ್ಟಿದೆ. ಖಾಸಗಿ ಕಂಪನಿಯವರಿಗೂ ಬಾಹ್ಯಾಕಾಶ ವಲಯವನ್ನು ತೆರೆದಿರಿಸಿರುವ ಮೋದಿ ಸರ್ಕಾರದ ಸುಧಾರಣಾ ಕ್ರಮ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಬಾಹ್ಯಾಕಾಶ ವಿಜ್ಞಾನಿಗಳನ್ನು, ಉದ್ದಿಮೆಗಳನ್ನು ಸೃಷ್ಟಿಸಲಿದೆ.
- ಯಾವ ಸೌದಿ ಅರೇಬಿಯ ಮತ್ತು ಗಲ್ಫ್ ದೇಶಗಳು ಇವತ್ತಿನವರೆಗೆ ಕಚ್ಚಾತೈಲರೂಪದಲ್ಲಿ ನಮಗೆ ಶಕ್ತಿ ಪೂರೈಸುತ್ತಿವೆಯೋ ಅವೇ ಭಾರತದಿಂದ ಭವಿಷ್ಯದಲ್ಲಿ ಶಕ್ತಿ ತರಿಸಿಕೊಳ್ಳುವುದಕ್ಕೆ ಸಮುದ್ರದಡಿಯ ಕೇಬಲ್ ಕೊಳವೆಯ ಜಾಲವೊಂದಕ್ಕೆ ಒಪ್ಪಂದ ಮಾಡಿಕೊಂಡಿವೆ. ಅದಾಗಲೇ ಜಾಗತಿಕ ಸೌರಮೈತ್ರಿಯ ನಾಯಕತ್ವ ಸ್ಥಾನದಲ್ಲಿರುವ ಭಾರತವು, ಮುಂದಿನ ದಿನಗಳಲ್ಲಿ ಹಸಿರು ಹೈಡ್ರೋಜನ್ ಒದಗಿಸುವ ಮುಖ್ಯ ದೇಶವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಈ ಒಪ್ಪಂದಗಳಾಗಿವೆ. ಗ್ರೀನ್ ಹೈಡ್ರೋಜನ್ ಎನ್ನುವುದು ಸದ್ಯಕ್ಕೇನೂ ವ್ಯಾವಹಾರಿಕ ಯಶಸ್ಸನ್ನು ಸಾಧಿಸಿಲ್ಲ. ಆದರೆ ‘ಗ್ರೀನ್ ಹೈಡ್ರೋಜನ್ ಮಿಷನ್’ಗಾಗಿ 19 ಸಾವಿರ ಕೋಟಿ ರೂಪಾಯಿಗಳನ್ನು ಭಾರತವು ತೆಗೆದಿಡುತ್ತಿರುವುದು, ಮುಕೇಶ್ ಅಂಬಾನಿಯಂಥ ದಿಗ್ಗಜರು ಈ ನಿಟ್ಟಿನಲ್ಲಿ ವಿಶೇಷವಾಗಿ ತೊಡಗಿಕೊಂಡಿರುವುದು ಇವೆಲ್ಲವನ್ನೂ ಗಮನಿಸಿರುವ ಇತರ ದೇಶಗಳು ಅದಾಗಲೇ ಭಾರತದ ಯಶಸ್ಸನ್ನು ಮುಂಗಾಣುತ್ತಿವೆ! ಗ್ರೀನ್ ಹೈಡ್ರೋಜನ್ ಉತ್ಪಾದನೆಯ ಸಮರ್ಪಕ ತಂತ್ರಜ್ಞಾನದಲ್ಲಿ ಭಾರತವು ಯಶ ಸಾಧಿಸಿದಲ್ಲಿ, ಈಗ ಇಂಧನ ಆಮದು ಮಾಡಿಕೊಳ್ಳುತ್ತಿರುವ ದೇಶದ ಚಹರೆಯೇ ಬದಲಾಗಿ ನಾವು ಇಂಧನ ರಫ್ತು ಮಾಡುವ ದೇಶವಾಗಲಿದ್ದೇವೆ.
- 2016ರಲ್ಲಿ ಮೋದಿ ಸರ್ಕಾರವು ‘ಸ್ಟಾರ್ಟ್ ಅಪ್ ಇಂಡಿಯಾ’ ಎಂಬ ನವೋದ್ದಿಮೆಗಳನ್ನು ಉತ್ತೇಜಿಸುವ ಅಭಿಯಾನ ಪ್ರಾರಂಭಿಸಿತು. ಇದು ಕೇವಲ ಘೋಷಣೆ ಅಲ್ಲ. ನವೋದ್ದಿಮೆಗಳ ಪ್ರಾರಂಭಕ್ಕಿರುವ ನಿಯಮಗಳನ್ನು ಸುಸೂತ್ರಗೊಳಿಸಿ, ಕರ ವಿನಾಯತಿಗಳನ್ನು ಕೊಟ್ಟು, ಹಣಕಾಸು ಮತ್ತು ಮಾರುಕಟ್ಟೆ ಎಟುಕಿಸಿಕೊಳ್ಳುವ ಹಾದಿಯನ್ನು ಸುಗಮವಾಗಿಸಿದ್ದರ ಫಲವೇನು ಗೊತ್ತೆ? 2018ರಲ್ಲಿ 8,635 ಇದ್ದ ನೊಂದಾಯಿತ ನವೋದ್ದಿಮೆಗಳ ಸಂಖ್ಯೆಯು 2022ರಲ್ಲಿ 26,542ಕ್ಕೆ ಏರಿದೆ. ಇವುಗಳಲ್ಲಿ ಕೇವಲ ವ್ಯಾಲ್ಯೂವೇಷನ್ ಎತ್ತರಿಸಿಕೊಂಡು ಹಣದ ಆಟ ಆಡುತ್ತಿರುವ ಕಂಪೆನಿಗಳೇ ಇವೆ ಎಂದೇನೂ ಅಂದುಕೊಳ್ಳಬೇಡಿ. ಭವಿಷ್ಯದ ಬುನಾದಿ ಗಟ್ಟಿಮಾಡುತ್ತಿರುವ ಸ್ಕೈರೂಟ್ ಏರೋಸ್ಪೇಸ್ ರೀತಿಯ ಸುಮಾರು 190 ನವೋದ್ದಿಮಗಳಿವೆ. ವಿದೇಶದ ಗೂಗಲ್ ಮ್ಯಾಪಿಗೆ ಪರ್ಯಾಯವಾಗಿ ಇಸ್ರೋದ ‘ನಾವಿಕ್’ ಉಪಗ್ರಹ ವ್ಯವಸ್ಥೆ ಬಳಸಿಕೊಂಡು ಕೆಲಸ ಮಾಡುವ ಮ್ಯಾಪ್ ಮೈ ಇಂಡಿಯಾದಂಥ ಡಿಜಿಟಲ್ ದಿಕ್ಸೂಚಿ ಕಂಪೆನಿಗಳಿವೆ. ಕೃಷಿಯಲ್ಲಿ ಯಂತ್ರವ್ಯವಸ್ಥೆ, ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪರಿಹಾರಗಳನ್ನು ಸೂಚಿಸುತ್ತಿರುವ ಸುಮಾರು 1,138 ನವೋದ್ದಿಮೆಗಳಿಗೆ ನಾನಾ ಹಂತಗಳಲ್ಲಿ ಸರ್ಕಾರದ ಉತ್ತೇಜಕ ಹಣಕಾಸು ನಿಧಿಯ ಸಹಾಯ ಪ್ರಾಪ್ತವಾಗಿದೆ.
- ಕೇವಲ ಖರ್ಚಿನ ಬಾಬ್ತುಗಳಾಗಿದ್ದ ಸರ್ಕಾರೀ ಸ್ವಾಮ್ಯದ ಕಂಪೆನಿಗಳು ಉತ್ಪಾದಕತೆ ಕಳೆದುಕೊಂಡಿದ್ದ ಸ್ಥಿತಿಯು ಈ ಒಂಬತ್ತು ವರ್ಷಗಳಲ್ಲಿ ಬದಲಾಗಿದೆ. ಹಾಗೆಂದೇ, ಬುಲೆಟ್ ಪ್ರೂಫ್ ಜಾಕೆಟ್ಟುಗಳು ನಮ್ಮ ಯೋಧರ ಪ್ರಾಣಗಳನ್ನು ರಕ್ಷಿಸುವಂತಾಗಿದೆ. ಎಚ್ಎಎಲ್ ಲಾಭ ತೋರಿಸುತ್ತಿದೆ. ‘ವಂದೇ ಭಾರತ’ದಂಥ ಹೊಸತಲೆಮಾರಿನ ನವ ತಂತ್ರಜ್ಞಾನದ ವೇಗದ ರೈಲುಗಳು ಭಾರತದಲ್ಲೇ ಉತ್ಪಾದನೆಯಾಗಿ ವಿಕ್ರಮ ಬರೆದಿವೆ.
ಸಾಮಾನ್ಯರ ಬದುಕನ್ನು ಸುಗಮವಾಗಿಸುವ ತಂತ್ರಜ್ಞಾನ
ಪ್ರಧಾನಿ ನರೇಂದ್ರ ಮೋದಿ ಅವರ ಮೊದಲನೇ ಅವಧಿಯ ಸರ್ಕಾರಕ್ಕೆ ಮೂಲಭೂತ ಅಗತ್ಯಗಳನ್ನು ಪೂರೈಸುವುದರಲ್ಲೇ ಹೆಚ್ಚಿನ ಗಮನವಿತ್ತು. ಅವರೇ ಹೇಳಿಕೊಂಡಂತೆ, ತಮ್ಮ ಮೊದಲ ಐದು ವರ್ಷಗಳು ವ್ಯವಸ್ಥೆಯಲ್ಲಿನ ಗುಂಡಿ ಮುಚ್ಚುವುದಕ್ಕೇ ಬೇಕಾಯಿತು ಎನ್ನುವುದು.
ಆದರೆ, ಈ ಪ್ರಕ್ರಿಯೆಯನ್ನು ವಿಶೇಷವಾಗಿಸಿದ್ದು ಹಾಗೂ ಜನಮಾನಸದಲ್ಲಿ ಪ್ರಭಾವಿಯಾಗಿಸಿದ್ದು ಮತ್ತದೇ ತಂತ್ರಜ್ಞಾನದ ಬಳಕೆಯೇ. ಗಮನಿಸಿ ನೋಡಿ: ಶೌಚಾಲಯ, ಮನೆಗಳನ್ನು ಕಟ್ಟಿಕೊಡುವ ಯೋಜನೆಗಳನ್ನು ಈ ಹಿಂದಿನ ಸರ್ಕಾರಗಳು ಮಾಡಿರಲಿಲ್ಲ ಎಂದೇನೂ ಇಲ್ಲ. ಆದರೆ, ಅವು ಹೆಚ್ಚಿನವು ಕಾಗದದ ಮೇಲಿನ ಯೋಜನೆಗಳಾಗಿದ್ದವು. ಹಾಗಂತಲೇ, ರಾಜೀವ್ ಗಾಂಧಿ ಹೇಳಿದ್ದ ರೀತಿಯಲ್ಲೇ ಕೇಂದ್ರದಿAದ ಒಂದು ರೂಪಾಯಿ ಕಳುಹಿಸಿದರೆ ಲಾಭಾರ್ಥಿಗೆ ಮುಟ್ಟುತ್ತಿದ್ದದ್ದು ಹದಿನೈದೇ ಪೈಸೆ.
ಮೋದಿ ಸರ್ಕಾರ ಇಲ್ಲೆಲ್ಲ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡಿತು. ಆವಾಸ್ ಯೋಜನೆಯ ಹಣ ಪಡೆದುಕೊಂಡು ಗುತ್ತಿಗೆದಾರ ಮುಗಿಯಿತು ಅಂತ ಸುಳ್ಳೇ ಲೆಕ್ಕ ತೋರಿಸುವಂತಿಲ್ಲ. ಅದನ್ನು ಉಪಗ್ರಹಾಧಾರಿತ ‘ಡಿಜಿಟಲ್ ಮ್ಯಾಪಿಂಗ್’ಗೆ ಅಧಿಕಾರಿಗಳು ದಾಖಲಿಸಬೇಕು. ಆಗ ಕೇಂದ್ರದ ಮೇಲುಹಂತದ ಅಧಿಕಾರಿಗಳಿಗೆ ಕುಳಿತಲ್ಲಿಂದಲೇ ನಿರ್ಮಾಣಕಾರ್ಯ ಆಗಿದೆಯೋ ಇಲ್ಲವೋ ಎಂಬುದನ್ನು ಉಪಗ್ರಹ ಚಿತ್ರದಿಂದಲೇ ಖಾತ್ರಿಪಡಿಸಿಕೊಳ್ಳಬಹುದಾದ ಅವಕಾಶವಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಹ ಕೆಲಸ ಮಾಡದೇ ಸುಳ್ಳು-ಸುಳ್ಳೇ ಹೂಳೆತ್ತಿದೆ, ಗುಂಡಿ ತೆಗೆದೆ, ಜಲ ಸಂರಕ್ಷಣೆಯ ಬಾಂದುಗಳ ನಿರ್ಮಾಣ ಮಾಡಿದೆ ಎಂದು ಹಣ ಕೀಳುವುದು ಕೆಳಹಂತದ ಆಡಳಿತಯಂತ್ರಕ್ಕೆ ಕಷ್ಟವಾಗಿದೆ. ಕಾರಣ, ಇದೇ ಉಪಗ್ರಹಾಧಾರಿತ ಜಿಯೊ-ಟ್ಯಾಗಿಂಗ್ ವ್ಯವಸ್ಥೆ. ಗ್ರಾಮೀಣ ಭಾಗಗಳಲ್ಲಿ 10 ಕೋಟಿಯಷ್ಟು ಶೌಚಾಲಯಗಳು ನಿರ್ಮಾಣವಾಗಿದ್ದರ ಹಿಂದೆಯೂ ಹೀಗೊಂದು ನಿಗಾ ವ್ಯವಸ್ಥೆ ಇದೆ.
ಇದುವರೆಗೆ ಬ್ಯಾಂಕ್ ಖಾತೆಯನ್ನೇ ಹೊಂದಿರದ 50 ಕೋಟಿ ಮಂದಿಗೆ ಜನಧನದ ಮೂಲಕ ಖಾತೆ ಕೊಟ್ಟಿದ್ದು ಮೋದಿ ಸರ್ಕಾರದ ದೊಡ್ಡ ಸಾಧನೆಯೇ. ಆದರೆ ಅದಕ್ಕಿಂತ ದೊಡ್ಡ ಸಾಧನೆ ಎಂದರೆ ಇದನ್ನೂ ತಂತ್ರಜ್ಞಾನಕ್ಕೆ ಜೋಡಿಸುತ್ತ ‘ಜಾಮ್ ತ್ರಿವಳಿ’ ವ್ಯವಸ್ಥೆಯನ್ನು ರೂಪಿಸಿದ್ದು. ಜನಧನ ಖಾತೆ-ಆಧಾರ್-ಮೊಬೈಲ್ ಫೋನ್ – ಇವನ್ನೇ ಜಾಮ್ ತ್ರಿವಳಿ ಎನ್ನುತ್ತಾರೆ. ಇದರಿಂದ ಆಗಿದ್ದೇನೆಂದರೆ – ಅದು ಉದ್ಯೋಗ ಖಾತ್ರಿ ಕೂಲಿಯಿರಬಹುದು, ಗ್ಯಾಸ್ ಸಿಲಿಂಡರ್ ಸಬ್ಸಿಡಿ ಇದ್ದಿರಬಹುದು, ಕಿಸಾನ್ ಸಮ್ಮಾನ್ ನಿಧಿ ಹಣವಿರಬಹುದು – ಇವೆಲ್ಲವೂ ಯಾರ ಮಧ್ಯಸ್ಥಿಕೆಯೂ ಇಲ್ಲದ ಹಾಗೆ, ಯಾರಿಗೂ ಲಂಚ ತಿನ್ನಿಸುವುದಕ್ಕೆ ಅವಕಾಶವಿರದ ಹಾಗೆ ನೇರವಾಗಿ ಫಲಾನುಭವಿಯನ್ನು ಇಡಿ ಇಡಿಯಾಗಿ ಮುಟ್ಟಿದವು.
ತಂತ್ರಜ್ಞಾನವನ್ನು ಸಾಮಾನ್ಯನ ಕಲ್ಯಾಣಕ್ಕೆ ಬಳಸಿದ ಬಗೆ ಇದು! ಎರಡನೇ ಅವಧಿಯಲ್ಲಿ ಇದೇ ವಿನ್ಯಾಸವು ಬೇರೆ ವಿಸ್ತಾರವನ್ನು ಪಡೆದುಕೊಳ್ಳುತ್ತಿದೆ.
ಹಣಪಾವತಿ ವಿಚಾರದಲ್ಲಿ ಯುಪಿಐ ವ್ಯವಸ್ಥೆ ತಂದ ರೀತಿಯಲ್ಲೇ ಇ-ಕಾಮರ್ಸ್ ವಿಭಾಗದಲ್ಲೂ ‘ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್’ ಎಂಬ ಡಿಜಿಟಲ್ ಜಾಲವನ್ನು ಕೇಂದ್ರಸರ್ಕಾರ ರೂಪಿಸಿದೆ. ಇದರಿಂದ ಯಾವುದೋ ಸಣ್ಣಪಟ್ಟಣದ ಅಂಗಡಿಯವ ಇಲ್ಲವೇ ಉತ್ಪಾದಕ ಸಹ ಎಲ್ಲೆಡೆ ತನ್ನ ಮಾರುಕಟ್ಟೆ ಕಂಡುಕೊಳ್ಳಬಹುದು. ಅರ್ಥಾತ್, ಈ ನೆಟ್ವರ್ಕ್ನಲ್ಲಿ ತನ್ನ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟರೆ, ದೇಶದ ಇನ್ನಾವುದೋ ಮೂಲೆಯಲ್ಲಿರುವವ ಅದನ್ನು ಆರ್ಡರ್ ಮಾಡಬಲ್ಲ. ಖಾಸಗಿ ವಿತರಣಾ ವ್ಯವಸ್ಥೆಯವರೂ ಇದೇ ನೆಟ್ವರ್ಕ್ನಲ್ಲಿರುವುದರಿಂದ ಅವರ ಮೂಲಕ ವಸ್ತುಗಳನ್ನು ಕಳುಹಿಸಬಹುದಾದಂಥ ಈ ವ್ಯವಸ್ಥೆ ಅಮೆಜಾನ್ ಥರದ ವಿದೇಶೀ ಏಕಸ್ವಾಮ್ಯದ ಅಂತರ್ಜಾಲ ಮಾರುಕಟ್ಟೆಯಿಂದ ಸ್ಥಳೀಯರನ್ನು ರಕ್ಷಿಸುತ್ತದೆ. ಸಣ್ಣ-ಪುಟ್ಟವರಿಗೆ ಅಮೆಜಾನ್-ಫ್ಲಿಪ್ಕಾರ್ಟ್ ರೀತಿಯವರು ನೀಡದ ವೇದಿಕೆಯನ್ನು ಈ ಸರ್ಕಾರೀ ವ್ಯವಸ್ಥೆ ಕೊಡಲಿಕ್ಕಿದೆ.
ಅದೇ ರೀತಿ ಯುಲಿಪ್ (ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್ಫಾರ್ಮ್) ಮೂಲಕ ಭಾರತದಂಥ ವಿಶಾಲ ದೇಶದಲ್ಲಿ ಸರಕು ಸಾಗಣೆ ಜಾಲವನ್ನೂ ಸುಗಮಗೊಳಿಸುವ ಮಹಾಸಾಹಸಕ್ಕೆ ಮೋದಿ ಸರ್ಕಾರ ಕೈಹಾಕಿದೆ. ಉದಾಹರಣೆಗೆ, ನೀವು ಒಬ್ಬ ವ್ಯಾಪಾರಿಯಾಗಿದ್ದು ದೆಹಲಿಯಿಂದ ಬೆಂಗಳೂರಿಗೆ ಒಂದು ಟ್ರಕ್ ಸರಂಜಾಮು ಕಳುಹಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಸದ್ಯಕ್ಕೆ ಎಲ್ಲ ತಲೆನೋವು ನಿಮ್ಮದೇ. ಬೆಂಗಳೂರಿಗೆ ಟ್ರಕ್ ಏನೋ ಕಳುಹಿಸುತ್ತೀರಿ. ಅದು ಇಲ್ಲಿ ಅನ್ಲೋಡ್ ಮಾಡಿದ ನಂತರ ದೆಹಲಿಗೆ ಖಾಲಿ ವಾಪಸಾಗಬೇಕಾ? ಎಷ್ಟೆಲ್ಲ ವೆಚ್ಚ ಅಲ್ಲವೇ? ಆದರೆ ಯುಲಿಪ್ ಎಂಬ ತಂತ್ರಜ್ಞಾನಾಧಾರಿತ ಸಾಗಣೆ ನಿರ್ವಹಣೆ ವ್ಯವಸ್ಥೆ ಜಾರಿಗೆ ಬಂದರೆ ಅಲ್ಲಿ ನಿಮಗೆ ಹಲವು ಮಾಹಿತಿಗಳು ಸಿಗುತ್ತವೆ. ನಿಗದಿತ ದಿನಾಂಕದಂದು ಯಾವೆಲ್ಲ ಟ್ರಕ್ಕುಗಳು ಬೆಂಗಳೂರಿಗೆ ಹೋಗುತ್ತವೆ, ಆ ಪೈಕಿ ನಿಮ್ಮ ಸರಂಜಾಮಿಗೆ ಸೂಕ್ತ ಜಾಗದ ಟ್ರಕ್ ಯಾವುದು ಎಂಬುದನ್ನು ಬುಕ್ ಮಾಡಬಹುದು. ಇತ್ತ ಬೆಂಗಳೂರಿನ ಸರಂಜಾಮು ಕೇಂದ್ರದಲ್ಲಿ ದೆಹಲಿಗೆ ತೆರಳಬೇಕಿರುವ ಸರಕುಗಳ ಮಾಹಿತಿ ಅಪ್ಡೇಟ್ ಆಗಿರುತ್ತದೆ. ಹೀಗಾಗಿ ಬೆಂಗಳೂರಿಗೆ ಬಂದ ಟ್ರಕ್ ದೆಹಲಿಗೆ ಹಿಂತಿರುಗುವಾಗ ಅದು ಬುಕ್ ಮಾಡಿಕೊಳ್ಳಬಹುದಾದ ಸಾಗಣೆ ಆರ್ಡರ್ ಯಾವುದೆಂಬುದನ್ನು ಮೊದಲೇ ಗೊತ್ತುಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ನಿಮ್ಮ ಸರಕುಸಾಗಣೆಯು ಮತ್ತೆಲ್ಲೋ ಕೇರಳದ ನಗರವನ್ನು ಮುಟ್ಟಬೇಕಿದ್ದರೆ ಅದಕ್ಕೆ ಬೆಂಗಳೂರಿನ ಕೇಂದ್ರದಿಂದ ಮುಂದಕ್ಕೆ ಒದಗಬಹುದಾದ ಸಾಗಣೆ ವಾಹನದ ಲಭ್ಯತೆಯನ್ನೂ ಯುಲಿಪ್ ತಿಳಿಸುತ್ತದೆ. ಇದು ಒಂದು ಉದಾಹರಣೆ ಮಾತ್ರ. ರೈಲು-ರಸ್ತೆ-ಹಡಗು-ವಿಮಾನ ಇವೆಲ್ಲವುಗಳ ಸಾಗಣೆ ಜಾಲದ ವ್ಯವಸ್ಥಿತ ಸಂಘಟನೆ ಡಿಜಿಟಲ್ ರೂಪದಲ್ಲಿ ಆದಾಗ ಅದೆಂಥ ಕ್ರಾಂತಿಯನ್ನು ತರಲಿದೆ ಎಂಬುದನ್ನೊಮ್ಮೆ ನೀವೇ ಊಹಿಸಿ.
ಗ್ರೀನ್ ಹೈಡ್ರೋಜನ್ ಎಂಬ ಮಹಾಕನಸು
19 ಸಾವಿರ ಕೋಟಿ ರೂಪಾಯಿಯ ಹಸಿರು ಹೈಡ್ರೋಜನ್ ಮಿಷನ್ ಘೋಷಿಸಿರುವ ಮೋದಿ ಸರ್ಕಾರ ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ಪ್ರೋತ್ಸಾಹಿಸುತ್ತಿದೆ. ಗುಜರಾತಿನಲ್ಲಿ 74 ಸಾವಿರ ಹೆಕ್ಟೇರ್ ಭೂಮಿಯಲ್ಲಿ ದೊಡ್ಡಮಟ್ಟದಲ್ಲಿ ಹಸಿರು ಜಲಜನಕವನ್ನು ಅಗ್ಗವಾಗಿಸಬಲ್ಲ ತಂತ್ರಜ್ಞಾನ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿದೆ. ಮುಕೇಶ ಅಂಬಾನಿಯವರ ರಿಲಾಯನ್ಸ್. ಗ್ರೀನ್ ಹೈಡ್ರೋಜನ್ ಎನ್ನುವುದು ಯಾವುದೋ ದೂರದ ಕಲ್ಪನೆ ಆಗಿದ್ದರೆ ಭಾರತದ ಸರ್ಕಾರ ಮತ್ತು ಖಾಸಗಿಯವರು ಈ ಮಟ್ಟದಲ್ಲಿ ಅದರಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ ಎನ್ನುವುದು ಯಾರಿಗಾದರೂ ಹೊಳೆಯುತ್ತದೆಯಲ್ಲವೆ?
ಹಾಗಾದರೆ, ಏನಿದು ಭಾರತ ಬೆನ್ನಟ್ಟಿರುವ ಹಸಿರು ಜಲಜನಕದ ಮಹಾಕನಸು?
ಜಲಜನಕವನ್ನು ಶಕ್ತಿಮೂಲವಾಗಿ ಬಳಸುವುದು ಈಗಿನ ಅನ್ವೇಷಣೆಯೇನಲ್ಲ. ಕೈಗಾರಿಕಾ ವಲಯದಲ್ಲಿ ಹೈಡ್ರೋಜನ್ ಬಳಕೆ ಲಾಗಾಯ್ತಿನಿಂದಲೂ ಇದೆ. ಆದರೆ ಅವೆಲ್ಲ ಹೆಚ್ಚಾಗಿ ಗ್ರೇ-ಹೈಡ್ರೋಜನ್. ಇನ್ನೊಂದು ಬ್ಲೂ ಹೈಡ್ರೋಜನ್ ಅಂತಲೂ ಇದೆ. ಆದರೆ ಈಗ ಜಗತ್ತು ಮತ್ತು ಭಾರತ ತಮ್ಮ ಮಹತ್ತ್ವಾಕಾಂಕ್ಷೆ ಹೊಂದಿರುವುದು ಗ್ರೀನ್ ಹೈಡ್ರೋಜನ್ ಅರ್ಥಾತ್ ಹಸಿರು ಜಲಜನಕದ ಬಗೆಗೆ.
ಅದರರ್ಥ ಜಲಜನಕ ಬೇರೆ ಬೇರೆ ಬಣ್ಣಗಳಲ್ಲಿರುತ್ತದೆ ಅಂತಲ್ಲ. ಬದಲಿಗೆ ಎಲೆಕ್ಟೊçಲಿಸಿಸ್ ಅಥವಾ ವಿದ್ಯುತ್ ವಿಭಜನೆ ಪ್ರಕ್ರಿಯೆಯನ್ನು ನಡೆಸಿ ಜಲಜನಕವನ್ನು ಪಡೆಯುವ ಬೇರೆ ಬೇರೆ ವಿಧಾನಗಳನ್ನು ಕೆಲವು ಬಣ್ಣಗಳಲ್ಲಿ ಗುರುತಿಸಲಾಗಿದೆ. ಆ ಬಣ್ಣಕ್ಕೆ ಅರ್ಥವೂ ಇದೆ.
ಇವತ್ತಿಗೆ ಅತಿ ಬಳಕೆಯಲ್ಲಿರುವ ಜಲಜನಕ ಗ್ರೇ ಮಾದರಿಯದ್ದು ಎಂದು ಗುರುತಿಸಲಾಗುತ್ತದೆ. ಕಾರಣವಿಷ್ಟೆ. ಬೇರೆ ಮೂಲದಿಂದ ಜಲಜನಕವನ್ನು ಬೇರ್ಪಡಿಸುವುದಕ್ಕೆ ಬೇಕಾಗುವ ಶಕ್ತಿಯನ್ನು ಕಲ್ಲಿದ್ದಲು ಉರಿಸುವ ಮೂಲಕವೋ ಅಥವಾ ಪೆಟ್ರೊಲಿಯಂ ವಸ್ತುಗಳನ್ನು ದಹಿಸುವ ಮೂಲಕವೋ ಪಡೆಯಲಾಗಿದೆ ಎಂದರ್ಥ. ಅರ್ಥಾತ್, ಇಲ್ಲಿ ಜಲಜನಕವು ಇಂಧನವಾಗಿ ಸಿಗುವುದಕ್ಕೂ ಮೊದಲು ಪಳೆಯುಳಿಕೆ ಇಂಧನದ ಬಳಕೆ ಆಗಿದೆ. ಹೀಗಾಗಿ ಮಾಲಿನ್ಯವೂ ಉಂಟಾಗಿರುತ್ತದೆ. ಆದ್ದರಿಂದಲೇ ಇದನ್ನು ಬೂದು ಅಥವಾ ಗ್ರೇ ಎಂದು ಗುರುತಿಸುತ್ತಾರೆ. ಇಲ್ಲಿ ಇನ್ನೊಂದು ವಿಚಾರವೂ ಇದೆ, ಇದರಲ್ಲಿ ಜಲಜನಕವನ್ನು ಪಡೆಯುವುದು ಮೀಥೇನ್ ಅನ್ನು ವಿಭಜಿಸುವ ಮೂಲಕ. ನಿಮ್ಮ ಹೈಸ್ಕೂಲು ಪಠ್ಯ ನೆನಪು ಮಾಡಿಕೊಳ್ಳಿ – ಇಂಗಾಲ ಮತ್ತು ಜಲಜನಕ ಸೇರಿ ಮೀಥೇನ್ ಆಗಿದೆ.
CH4 ಎಂದು ಅಭ್ಯಾಸ ಮಾಡಿದ್ದೇವಲ್ಲವೇ? ವಿಭಜನೆಯಲ್ಲಿ ಜಲಜನಕ ಸಿಗುತ್ತದೆ ಎಂದಾದಾಗ ಉಳಿದು ವಾತಾವರಣ ಸೇರುವುದು ಇಂಗಾಲ ತಾನೇ? ಇದೂ ವಾತಾವರಣಕ್ಕೆ ಅಹಿತಕರವೇ.
ಅದರ ನಂತರ ಬ್ಲೂ ಹೈಡ್ರೋಜನ್ ಎನ್ನುವುದು ಒಂದಿದೆಯಲ್ಲ, ಏನದು? ಇದರಲ್ಲಿ ಜಲಜನಕವನ್ನು ಪಡೆಯುವುದು ಗ್ರೇ ಮಾದರಿಯಲ್ಲೇ. ಆದರೆ ಒಂದು ವ್ಯತ್ಯಾಸ ಏನೆಂದರೆ, ಜಲಜನಕ ಪಡೆಯುವುದಕ್ಕೆ ಪಳೆಯುಳಿಕೆ ಇಂಧನವನ್ನು ಉರಿಸಿದಾಗ ಬಿಡುಗಡೆಯಾಗುವ ಇಂಗಾಲವನ್ನು ಇಲ್ಲಿ ವಾತಾವರಣಕ್ಕೆ ಸೇರದಂತೆ ಹಿಡಿದಿಡಲಾಗುತ್ತದೆ. ನಂತರ ಅದನ್ನು ಭೂಮಿಗೆ ಸೇರಿಸುವ ಪ್ರಕ್ರಿಯೆಗಳೂ ಇವೆ. ಆದರೆ ಉತ್ಸರ್ಜನೆಯಾಗುವ ಎಲ್ಲ ಇಂಗಾಲವನ್ನೂ ಹಿಡಿದಿಡುವುದಕ್ಕೆ ಆಗುವುದಿಲ್ಲ. ಹೀಗಾಗಿ, ತುಲನಾತ್ಮಕವಾಗಿ ಇಲ್ಲಿ ಮಾಲಿನ್ಯ ಕಡಮೆ ಎನ್ನುವ ಕಾರಣಕ್ಕೆ ಇದನ್ನು ಬ್ಲೂ ಎಂದು ಗುರುತಿಸಲಾಗಿದೆ.
ಸರಿ. ಈಗ ಹಸಿರು ಜಲಜನಕದ ವಿಷಯಕ್ಕೆ ಬರೋಣ. ಇಲ್ಲಿ ಜನಜನಕವನ್ನು ಪಡೆಯುವುದಕ್ಕೆ ಆಶ್ರಯಿಸುವುದು ಮೀಥೇನ್ ವಿಭಜನೆಯನ್ನಲ್ಲ, ಬದಲಿಗೆ ಎಚ್2ಒ. (H2O) ಅಂದರೆ ಮತ್ತೇನಲ್ಲ ನೀರು. ಜಲಜನಕ ಮತ್ತು ಆಮ್ಲಜನಕ ಸೇರಿ ನೀರು ಉತ್ಪತ್ತಿಯಾಗಿದೆ ಎನ್ನುವ ಶಾಲಾಪಾಠವನ್ನು ಮತ್ತೆ ನೆನಪಿಸಿಕೊಳ್ಳಿ. ಇಲ್ಲಿ ವಿಭಜನೆ ನಡೆದು ಜಲಜನಕ ಸಿಕ್ಕರೆ ಉಳಿಯುವುದು ಆಮ್ಲಜನಕ ತಾನೇ? ಇಷ್ಟೇ ಅಲ್ಲ, ಹೀಗೆ ಆಮ್ಲಜನಕ ಮತ್ತು ಜಲಜನಕವನ್ನು ಪ್ರತ್ಯೇಕಿಸುವುದಕ್ಕೆ ಬಳಸುವ ಶಕ್ತಿಮೂಲ ಸಹ ಸೌರವಿದ್ಯುತ್ ಇಲ್ಲವೇ ಪವನವಿದ್ಯುತ್ ರೀತಿಯ ನವೀಕೃತ ಇಂಧನ ಮೂಲಗಳಾಗಿರುತ್ತವೆ. ಹೀಗಾಗಿ ಈ ವಿಧಾನದಲ್ಲಿ ಮಾಲಿನ್ಯ ಇಲ್ಲವೇ ಇಲ್ಲ. ಇಂಗಾಲದ ಉತ್ಸರ್ಜನೆಯ ಮಾತೇ ಇಲ್ಲ. ಹಾಗೆಂದೇ ಇದನ್ನು ಹಸಿರು ಜಲಜನಕ ಎಂದು ಕರೆಯಲಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅಂಥವರು ಅದಾಗಲೇ ಗ್ರೀನ್ ಹೈಡ್ರೋಜನ್ ಕಾರಿನಲ್ಲಿ ಸಂಚರಿಸುತ್ತಿರುವುದನ್ನು ನೋಡಿದ್ದೇವಾದರೂ ಅದಿನ್ನೂ ಸಾರ್ವತ್ರಿಕಗೊಳಿಸುವಷ್ಟು ಪರಿಣಾಮಕಾರಿ ಆಗಿಲ್ಲ. ಮುಖ್ಯವಾಗಿ ಜಲಜನಕ ಬೇರ್ಪಡಿಸುವ ಹಂತದಲ್ಲಿ ಬಳಕೆಯಾಗುವ ವಿಭಜಕ ತಂತ್ರಜ್ಞಾನ ಇದೆಯಲ್ಲ, ಅದು ಸುಧಾರಿಸಬೇಕಿದೆ. ಹಾಗಾದಾಗ ಮಾತ್ರ ಇದು ಸಾರ್ವಜನಿಕರಿಗೆ ಕಡಮೆ ವೆಚ್ಚದಲ್ಲಿ ಸಿಗುವಂತಾಗುತ್ತದೆ. ಜಗತ್ತು ಮತ್ತು ಭಾರತ ತಲೆಕೆಡಿಸಿಕೊಳ್ಳುತ್ತಿರುವುದು, ಅಂಬಾನಿಯಂಥ ದಿಗ್ಗಜರು ಸಹ ಸಂಶೋಧನೆಗೆಂದು ಹಣ ಎತ್ತಿಟ್ಟಿರುವುದು ಈ ಎಲೆಕ್ಟ್ರೋಲೈಸರ್, ವಿದ್ಯುತ್ ವಿಭಜಕ ಪ್ರಕ್ರಿಯೆಯ ಸುಧಾರಿತ ತಂತ್ರಜ್ಞಾನ ಪ್ರಕ್ರಿಯೆಯ ಬಗ್ಗೆ.
ಭಾರತ ಅದಾಗಲೇ ಸೌರಶಕ್ತಿ ಸೇರಿದಂತೆ ನವೀಕೃತ ಇಂಧನ ಮೂಲಗಳ ಅಭಿವೃದ್ಧಿಯನ್ನು ವಿಸ್ತಾರ ಮಾಡಿದೆ. ಹಸಿರು ಜಲಜನಕ ಪಡೆಯುವುದಕ್ಕೆ ಬೇಕಾಗಿರುವ ನೀರು – ಎಚ್2ಓ ನಮ್ಮನ್ನು ಮೂರೂ ಕಡೆ ಸುತ್ತುವರಿದಿದೆ. ಹಾಗಂತಲೇ ಭಾರತ ಹಸಿರು ಹೈಡ್ರೋಜನ್ ಮೇಲೆ ಈ ಪರಿ ಆಸಕ್ತಿಯನ್ನು ಇರಿಸಿಕೊಂಡಿದೆ.
2030ರ ವೇಳೆಗೆ ವಾರ್ಷಿಕವಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸಬೇಕು, ತಾನು ಆತ್ಮನಿರ್ಭರವಾಗುವುದರ ಜೊತೆಗೆ ನಂತರದ ದಿನಗಳಲ್ಲಿ ಜಗತ್ತಿಗೇ ಇಂಧನ ಪೂರೈಕೆದಾರನಾಗಬೇಕು ಎಂಬ ಕನಸು ಭಾರತದ್ದು. ಅಲ್ಲದೇ ಇಂಗಾಲ ಉತ್ಸರ್ಜನೆಯ ಮೂಲಕ ಆಗುತ್ತಿದ್ದ ಮಾಲಿನ್ಯ ತಗ್ಗಿಸಿದ ಶ್ರೇಯಸ್ಸನ್ನೂ ಈ ಮೂಲಕ ಪಡೆಯಬಹುದು.
ರಕ್ಷಣಾ ಉತ್ಪನ್ನ ವಲಯ
2019ರಲ್ಲಿ ಸೋಲು ಕಾಣುವುದಕ್ಕೂ ಮೊದಲು ರಾಹುಲ್ ಗಾಂಧಿಯವರ ಮತಕ್ಷೇತ್ರವಾಗಿದ್ದದ್ದು ಅಮೇಠಿ. ಭಾರತವನ್ನು ಹೇಗೆ ನಡೆಸಬೇಕು ಎಂಬ ಬಗ್ಗೆಲ್ಲ ಪುಂಖಾನುಪುಂಖ ಮಾತನಾಡುವ ರಾಹುಲ್ ಗಾಂಧಿ ತಾನು ಮತ್ತು ತನ್ನ ಕುಟುಂಬ ಪರಂಪರಾಗತವಾಗಿ ಪ್ರತಿನಿಧಿಸಿಕೊಂಡುಬಂದಿದ್ದ ಕ್ಷೇತ್ರಕ್ಕೆ ಮಾಡಿದ್ದು ನಗಣ್ಯ. ಇವತ್ತು ಅದೇ ಅಮೇಠಿಯಿಂದ ರಷ್ಯಾ ಸಹಭಾಗಿತ್ವದ ಎ.ಕೆ.203 ರೈಫಲ್ಲುಗಳು ಆರ್ಡಿನನ್ಸ್ ಫ್ಯಾಕ್ಟರಿಯಿಂದ ಹೊರಬರುತ್ತಿವೆ. ಇದಕ್ಕೂ ಮೊದಲು ಆ ಶಸ್ತ್ರಾಸ್ತ್ರ ಕಾರ್ಖಾನೆಯು ಕೇವಲ ಹೆಸರಿಗಷ್ಟೇ ಎಂಬಂತಿತ್ತು.
ಇದು ಕೇವಲ ಒಂದು ಸರ್ಕಾರೀ ಸ್ವಾಮ್ಯದ ಕಾರ್ಖಾನೆಯ ಕಥೆ ಅಲ್ಲ. ಮೋದಿ ಸರ್ಕಾರ ದೇಶದ 41 ಶಸ್ತ್ರ ತಯಾರಿಕಾ ಘಟಕಗಳನ್ನು ಏಳು ಕಂಪೆನಿಗಳಲ್ಲಿ ವಿಭಾಗಿಸಿ ಅವಕ್ಕೆಲ್ಲ ಕಾರ್ಪೋರೇಟ್ ಆಡಳಿತ ತಂದು ಉತ್ಪಾದಕತೆ ಇರುವಂತೆ ನೋಡಿಕೊಂಡಿದೆ. ಅದಾಗಿ ಆರೇ ತಿಂಗಳಲ್ಲಿ ಈ ಪೈಕಿ ಆರು ಘಟಕಗಳು ಲಾಭದ ಹಳಿಗೆ ಬಂದುಬಿಟ್ಟವು.
ಡಿಆರ್ಡಿಒ ವಿಚಾರದಲ್ಲೂ ಉತ್ಪಾದಕತೆ ಹೆಚ್ಚಿಸುವುದಕ್ಕೆ ನಿವೃತ್ತ ಸೇನಾಧಿಕಾರಿಗಳ ಸಮಿತಿಯ ರಚನೆ ಆಗಿದೆ.
ಇವೆಲ್ಲ ಸರ್ಕಾರೀ ವ್ಯವಸ್ಥೆಯನ್ನು ಸರಿಪಡಿಸುವ ಕ್ರಮಗಳಾದರೆ, ರಕ್ಷಣಾ ವಿಭಾಗದಲ್ಲಿ ಭಾರತದ ಖಾಸಗಿ ವಲಯವು ಬೆಳೆಯುವುದಕ್ಕೆ ಅನುವಾಗುವಂತೆ 928 ರಕ್ಷಣಾ ಪರಿಕರಗಳ ಮೇಲೆ ಆಮದು ನಿರ್ಬಂಧ ಹೇರಿದೆ ಭಾರತ ಸರ್ಕಾರ. ಈ ನಿಯಮವು ಡಿಸೆಂಬರ್ 2023ರಿಂದ 2029ರ ಡಿಸೆಂಬರ್ವರೆಗೆ ಜಾರಿಯಲ್ಲಿರಲಿದೆ. ಇದರರ್ಥ, ಹೀಗೆ ಗೊತ್ತು ಮಾಡಲಾದ ಉತ್ಪನ್ನಗಳನ್ನು ಕೇವಲ ದೇಸೀ ನಿರ್ಮಾತೃಗಳಿಂದ ಮಾತ್ರವೇ ಖರೀದಿಸಲಾಗುತ್ತದೆ. ಇದು ಆ ಎಲ್ಲ ಉತ್ಪನ್ನಗಳಲ್ಲಿ ನಮ್ಮ ದೇಶದವರೇ ಹೊಸತನವನ್ನು, ಮೇಲ್ದರ್ಜೆಯನ್ನು ಸಾಧಿಸುವುದಕ್ಕೆ ನೆರವಾಗುತ್ತದೆ.
ಈ ರಕ್ಷಣಾ ವಿಭಾಗದ ತಂತ್ರಜ್ಞಾನ ಉದ್ದಿಮೆಗಳ ಉತ್ತೇಜನವನ್ನು ವಿಶೇಷವಾಗಿ ಅದೇಕೆ ಹೇಳಬೇಕಿದೆ ಗೊತ್ತೆ? ಏಕೆಂದರೆ, ಹೆಚ್ಚಿನ ನಾಗರಿಕ ಬಳಕೆಯ ಉತ್ಪಾದನಾ ಸಾಮರ್ಥ್ಯಗಳು ಮತ್ತು ಅನ್ವೇಷಣೆಗಳು ಈ ಮಿಲಿಟರಿ ಮೂಲದಿಂದಲೇ ಹುಟ್ಟುತ್ತವೆ ಎನ್ನುವುದು ಚರಿತ್ರೆ ನಮಗೆ ಹೇಳುವ ಸತ್ಯ. ಅದು ಬ್ಯಾಂಡ್ ಏಡ್ ಇದ್ದಿರಬಹುದು, ಸ್ಯಾನಿಟರಿ ಪ್ಯಾಡ್ ಇದ್ದಿರಬಹುದು – ಇವೆಲ್ಲ ವಿಶ್ವಯುದ್ಧದಲ್ಲಿ ಯೋಧರ ಅಗತ್ಯ ಪೂರೈಕೆಗೆ ಅನ್ವೇಷಣೆಗೊಂಡು ನಂತರದ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಹಾಸುಹೊಕ್ಕಾಗಿವೆ. ಹೀಗಾಗಿ, ರಕ್ಷಣಾ ವಿಭಾಗದಲ್ಲಿ ಒಂದು ದೇಶ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದೆಂದರೆ ಅದು ನಾಗರಿಕ ಜೀವನದಲ್ಲಿ ತಂತ್ರಜ್ಞಾನದ ಉನ್ನತಿಯನ್ನು ಸಾಧಿಸುವುದಕ್ಕೆ ಮುನ್ನುಡಿ ಆಗುತ್ತದೆ.
ಇದು ಭವಿಷ್ಯದ ಮಾತಾದರೆ, ರಕ್ಷಣಾ ವಿಭಾಗದ ಸುಧಾರಣೆಗಳು ಅದಾಗಲೇ ಫಲ ಕೊಡುವುದಕ್ಕೆ ಆರಂಭಿಸಿವೆ. ಕೇವಲ ಶಸ್ತ್ರ ಆಮದು ದೇಶವಾಗಿದ್ದ ಭಾರತವು ಇವತ್ತಿಗೆ 85 ದೇಶಗಳಿಗೆ ನಾನಾ ಬಗೆಯ ಶಸ್ತç-ರಕ್ಷಣಾ ಪರಿಕರಗಳನ್ನು ರಫ್ತು ಮಾಡುತ್ತಿದೆ. 2022-23ರ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ಸಾಮಗ್ರಿಗಳ ರಫ್ತಿನ ಮೌಲ್ಯ ಬರೋಬ್ಬರಿ 16,000 ಕೋಟಿ ರೂಪಾಯಿಗಳಷ್ಟು. 2016-17ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು ಹತ್ತುಪಟ್ಟು ಹೆಚ್ಚಿನ ಬೆಳವಣಿಗೆ.
ಕೆಳಗಿನ ಕೋಷ್ಟಕವು ಭಾರತದ ಈ ವ್ಯಾವಹಾರಿಕ ವಿಕ್ರಮವನ್ನು ಕಟ್ಟಿಕೊಡುತ್ತದೆ. ರಫ್ತಿನ ಸಂಖ್ಯೆಗಳನ್ನು ಕೋಟಿ ರುಪಾಯಿಗಳ ಮೌಲ್ಯದಲ್ಲಿ ಓದಿಕೊಳ್ಳಬೇಕು.
ಹಣಕಾಸು ವರ್ಷ ಒಟ್ಟು ರಫ್ತು ಮೌಲ್ಯ
2016-17 1,521
2017-18 4,682
2018-19 10,745
2019-20 9,115
2020-21 8,434
2021-22 12,814
2022-23 15,920
ನಮ್ಮಲ್ಲೂ ಎಲಾನ್ ಮಸ್ಕ್ ರೀತಿಯ ಅನ್ವೇಷಕರು ಹುಟ್ಟಬೇಕಲ್ಲವೇ?
ತಂತ್ರಜ್ಞಾನ ಪ್ರಗತಿಯ ಬಗ್ಗೆ ವಿವರಿಸುವಾಗ ಬಾಹ್ಯಾಕಾಶದ ಬಗ್ಗೆ ಅಷ್ಟಾಗಿ ವಿವರಿಸುವುದೇ ಬೇಡ. ಏಕೆಂದರೆ ಇತ್ತೀಚಿನ ಇಸ್ರೋ ವಿಕ್ರಮಗಳು ಎಲ್ಲರ ಕಣ್ಣಿಗೆ ಕಟ್ಟಿದಂತಿವೆ.
ಆದರೆ ಮೋದಿ ಸರ್ಕಾರದ ನಿರ್ಣಯವೊಂದು ಭವಿಷ್ಯದಲ್ಲಿ ಭಾರತದ ಬಾಹ್ಯಾಕಾಶ ವಿಜ್ಞಾನವು ನಿಜಕ್ಕೂ ಮೇರೆಗಳಿಲ್ಲದೇ ಬೆಳೆಯುವುದಕ್ಕೊಂದು ಬುನಾದಿ ಹಾಕಿದೆ. ಅದೇನು ಗೊತ್ತೆ? ಈಗೆರಡು ವರ್ಷಗಳ ಹಿಂದೆ ಬಾಹ್ಯಾಕಾಶವನ್ನು ಖಾಸಗಿಯವರಿಗೂ ತೆರೆದಿರಿಸುವ ನಿರ್ಣಯ ಕೈಗೊಂಡಿದ್ದಷ್ಟೇ ಅಲ್ಲ, ಪ್ರಾರಂಭಿಕವಾಗಿ ಇಸ್ರೋ ಸಂಸ್ಥೆಯೇ ನಮ್ಮಲ್ಲಿನ ಖಾಸಗಿ ಅನ್ವೇಷಕರ ಪಡೆಯನ್ನು ಕಟ್ಟುವುದಕ್ಕೆ ಮಾರ್ಗದರ್ಶನ ಮಾಡುವ ವ್ಯವಸ್ಥೆ ರೂಪಿಸಿರುವುದು ಅತಿದೊಡ್ಡ ಮೈಲಿಗಲ್ಲು.
ಬಾಹ್ಯಾಕಾಶದಲ್ಲಿ ಹಲವು ವಿಕ್ರಮಗಳನ್ನು ಸಾಧಿಸಿರುವ ಅಮೆರಿಕವನ್ನು ಗಮನಿಸಿ. ಅಲ್ಲಿ ನಾಸಾ ಎಂಬ ಸರ್ಕಾರೀ ಪೋಷಿತ ಬೃಹತ್ ಸಂಸ್ಥೆಯ ಜೊತೆಯಲ್ಲೇ ಎಲಾನ್ ಮಸ್ಕ್ ಎಂಬ ಸಾಹಸಿ ಉದ್ದಿಮೆದಾರ, ಅನ್ವೇಷಕ ಕಟ್ಟಿ ನಿಲ್ಲಿಸಿರುವ ‘ಸ್ಪೇಸ್ ಎಕ್ಸ್’ ಸಂಸ್ಥೆಯೂ ಇದೆ. ಈ ಸ್ಪೇಸ್ ಎಕ್ಸ್ ಮುಂಬರುವ ದಿನಗಳಲ್ಲಿ ನಾಸಾದ ಜತೆ ಕೈಜೋಡಿಸಿ ಚಂದ್ರನ ದಕ್ಷಿಣಧ್ರುವದಲ್ಲಿ ಮಾನವನನ್ನು ಇಳಿಸುವ ಕಾರ್ಯದಲ್ಲಿ ಭಾಗಿಯಾಗುವಷ್ಟರಮಟ್ಟಿಗೆ ಬೆಳೆದಿದೆ.
ಭಾರತದ ವಿಷಯಕ್ಕೆ ಬಂದರೆ, ಇಸ್ರೋ ಒಂದು ಅಪ್ರತಿಮ ಸಂಸ್ಥೆಯೇ ಆದರೂ ಅದೆಷ್ಟು ಪ್ರತಿಭೆಗಳಿಗೆ ಕೆಲಸ ಕೊಡಬಲ್ಲದು? ಇಸ್ರೋ ಮೂಲಕ ಕೇವಲ ಸರ್ಕಾರವಷ್ಟೇ ಬಾಹ್ಯಾಕಾಶ ಯೋಜನೆಗೆ ಹಣ ವ್ಯಯಿಸಬೇಕೇ? ಸರ್ಕಾರೀ ಚೌಕಟ್ಟು ಮೀರಿ ಬಾಹ್ಯಾಕಾಶ ವಿಜ್ಞಾನದಲ್ಲಿ ಕೆಲಸ ಮಾಡುವ ಸಾಮರ್ಥ್ಯವಿರುವ ಭಾರತದ ಪ್ರತಿಭೆಗಳು ತಮ್ಮ ಕೌಶಲಕ್ಕೆ ತಕ್ಕ ಕೆಲಸವನ್ನು ಅಮೆರಿಕದಂಥ ದೇಶಗಳಲ್ಲಿ ಹುಡುಕಹೋದರೆ ಅದು ಈ ದೇಶಕ್ಕಾಗುವ ನಷ್ಟವೂ ಹೌದಲ್ಲವೇ?
ಇವೆಲ್ಲವಕ್ಕೆ ಪರಿಹಾರರೂಪವಾಗಿ 2020ರಲ್ಲಿ ಭಾರತ ಸರ್ಕಾರವು ‘ಇನ್ ಸ್ಪೇಸ್’ (ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್) ಸಂಸ್ಥೆಯನ್ನು ಪ್ರಾರಂಭಿಸಿದೆ. ಇದು ಭಾರತದ ಸರ್ಕಾರೇತರ ಸಂಸ್ಥೆಗಳಿಗೆ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಹಕರಿಸುತ್ತದೆ. ಈ ಏಜೆನ್ಸಿಯಿಂದ ಅನುಮತಿ ಪಡೆದವರು ಉಪಗ್ರಹಗಳ ತಯಾರಿಕೆ, ಉಡಾವಣೆ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಈ ಎಲ್ಲ ಹಂತಗಳಲ್ಲಿ ಇಸ್ರೋ ತನ್ನ ಉಡಾವಣೆ ವೇದಿಕೆಗಳನ್ನು ಕೊಡುತ್ತದಷ್ಟೇ ಅಲ್ಲ, ಹಲವು ಸಣ್ಣ ಕೈಗಾರಿಕೆಗಳನ್ನು ಒಳಗೊಂಡ ತನ್ನ ಪೂರೈಕೆ ಜಾಲವನ್ನೂ ಇವರಿಗೆ ಪರಿಚಯಿಸಿಕೊಟ್ಟು ಸಾಮರ್ಥ್ಯ ಕಟ್ಟಿಕೊಳ್ಳುವುದಕ್ಕೆ ಸಹಕರಿಸುತ್ತದೆ.
2022ರ ನವೆಂಬರ್ನಲ್ಲಿ ಸ್ಕೈರೂಟ್ ಏರೋಸ್ಪೇಸ್ ಎಂಬ ನವೋದ್ದಿಮೆ ಇಸ್ರೋ ಸಹಕಾರದೊಂದಿಗೆ ವಿಕ್ರಮ-ಎಸ್ ಎಂಬ ರಾಕೆಟನ್ನು ಯಶಸ್ವಿಯಾಗಿ ಹಾರಿಸಿರುವುದು ಇತ್ತೀಚಿನ ಮೈಲಿಗಲ್ಲು. ಇದೇ ರೀತಿ ಬಹಳಷ್ಟು ನವೋದ್ದಿಮೆಗಳು ಬಾಹ್ಯಾಕಾಶ ವಿಭಾಗದಲ್ಲೀಗ ಕ್ಷಿಪ್ರವಾಗಿ ತಲೆಯೆತ್ತುತ್ತಿವೆ. ಭಾರತದ ಇಂಜಿನಿಯರಿಂಗ್ ಮತ್ತು ವಿಜ್ಞಾನ ಕೌಶಲವು ನಮ್ಮಲ್ಲೇ ಉಳಿದು ಅನ್ವೇಷಣೆಗಳಿಗೆ ತೊಡಗುವಂತಾಗುತ್ತಿದೆ.
360 ಬಿಲಿಯನ್ ಡಾಲರುಗಳ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಪಾಲು ಕೇವಲ ಶೇಕಡ 2ರಷ್ಟಿದೆ. ಇದನ್ನು 2030ರ ವೇಳೆಗೆ ಶೇ. 9ಕ್ಕೆ ಏರಿಸಬೇಕು ಎಂಬುದು ಮೋದಿ ಸರ್ಕಾರದ ಸಂಕಲ್ಪ.
ತಂತ್ರಜ್ಞಾನದ ರಹದಾರಿಯಲ್ಲಿ ಸ್ವಯಂ ನಾವಿಕನಾಗುವತ್ತ ಭಾರತ
ಅದು ಕಾರ್ಗಿಲ್ ಯುದ್ಧದ ಸಮಯ. ಕಡಿದಾದ ಬೆಟ್ಟಗಳ ನೆತ್ತಿಯ ಸೂಕ್ಷ್ಮ ಜಾಗಗಳ ಮೇಲೆ ಕುಳಿತುಬಿಟ್ಟಿದ್ದ ವೈರಿಗಳನ್ನು ಕೆಳಗಿನಿಂದ ಮೇಲೇರಿ ಹೋಗಿ ಸಂಹರಿಸುವುದು ಸುಲಭದ ಮಾತಲ್ಲ. ಆ ಸಂದರ್ಭದಲ್ಲಿ ಮಿಲಿಟರಿ ಉಪಯೋಗಕ್ಕಾಗಿ ಜಿಪಿಎಸ್ ವ್ಯವಸ್ಥೆಯ ಸಹಕಾರವನ್ನು ಭಾರತ ಕೇಳಿದಾಗ ಅಮೆರಿಕ ನಿರಾಕರಿಸಿತ್ತು.
ಇದು ನಾಳೆ ನಾಗರಿಕರ ವಿಚಾರದಲ್ಲೂ ಆಗಬಾರದು ಎಂದೇನಿಲ್ಲವಲ್ಲ. ಯಾಕಂದರೆ, ರಷ್ಯ-ಉಕ್ರೇನ್ ಸಂಘರ್ಷ ಶುರುವಾದಾಗ ಉಕ್ರೇನ್ ಪರವಾಗಿ ಕೆಲವು ಪ್ರದೇಶಗಳು ಜಿಪಿಎಸ್ನಲ್ಲಿ ಕಾಣದೇ ಇರುವ ಹಾಗೆ ಅಮೆರಿಕ ಮಾಡಿತ್ತು. ನಮ್ಮಲ್ಲೂ ಈ ರೀತಿಯದ್ದೇನಾದರೂ ಆದರೆ ಜಿಪಿಎಸ್ ವ್ಯವಸ್ಥೆಯನ್ನು ನಂಬಿಕೊಂಡು ಮಾಡುತ್ತಿದ್ದ ಹಲವು ಕಾರ್ಯಗಳು ಮುಗ್ಗರಿಸಿಬಿಡುತ್ತವೆ. ಏಕೆಂದರೆ, ನಾವು ಸಂಚಾರಕ್ಕೋ, ಆಹಾರ ತರಿಸಿಕೊಂಡಾಗ ಅದನ್ನು ಟ್ರ್ಯಾಕ್ ಮಾಡುವುದಕ್ಕೋ ಬಳಸುವ ಆ್ಯಪ್ಗಳಲ್ಲಿ ಹೆಚ್ಚಿನವು ಕಾರ್ಯನಿರ್ವಹಿಸುವುದು ಅಮೆರಿಕದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ವ್ಯವಸ್ಥೆಯ ಆಧಾರದಲ್ಲಿ, ಅಮೆರಿಕದ ಉಪಗ್ರಹಗಳ ಜತೆಗಿನ ಸಂಯೋಜನೆಯಲ್ಲಿ. ಇವತ್ತು ನಮ್ಮ ಸೆಲ್ಫೋನ್ ಸೇರಿದ ಹಾಗೆ ದಿಕ್ಸೂಚಿ ವ್ಯವಸ್ಥೆ ಉಪಯೋಗಿಸುವ ಈ ಬಗೆಯ ಹೆಚ್ಚಿನ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಈ ಜಿಪಿಎಸ್ ವ್ಯವಸ್ಥೆಯೇ ಅಂತರ್ಗತವಾಗಿದೆ.
ಈಗಿನ ಸುದ್ದಿ ಏನೆಂದರೆ ಭಾರತ ಇದನ್ನು ನಮ್ಮ ದೇಶೀಯ ದಿಕ್ಸೂಚಿ ವ್ಯವಸ್ಥೆ, ಇಸ್ರೊದ ನಾವಿಕ್ ಮುಖಾಂತರ ಬದಲಾಯಿಸುವುದರತ್ತ ಹೆಜ್ಜೆ ಇಟ್ಟಿದೆ.
ನಮ್ಮಲ್ಲಿ ಹಲವರಿಗೆ ತಕ್ಷಣಕ್ಕೆ ಅನ್ನಿಸಿಬಿಡಬಹುದು – ಅದರಲ್ಲೇನಿದೆ, ನಮ್ಮ ಎಲೆಕ್ಟ್ರಾನಿಕ್ ಪರಿಕರಗಳಲ್ಲಿ ನಾವಿಕ್ಗೆ ಸಂಬಂಧಿಸಿದ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಇದನ್ನು ಬದಲಾಯಿಸಿಬಿಡಬಹುದು ಎಂದು. ಅದು ಅಷ್ಟು ಸರಾಗವಲ್ಲ. ಇದನ್ನೊಂದು ಇನ್-ಬಿಲ್ಟ್ ಅರ್ಥಾತ್ ಅಂತರ್ಗತ ವ್ಯವಸ್ಥೆಯನ್ನಾಗಿ ಪರಿಕರಗಳ ಚಿಪ್ ವ್ಯವಸ್ಥೆಯಲ್ಲೇ ಅಳವಡಿಸಬೇಕಾಗುತ್ತದೆ. ಆಗ ಮಾತ್ರ, ನೀವು ಭಾರತದಲ್ಲಿ ನಿಮ್ಮ ಸೆಲ್ಫೋನಿನಲ್ಲಿ ಲೊಕೇಶನ್ ಆನ್ ಮಾಡಿದಾಗ ಅದು ಜಿಪಿಎಸ್ ಬದಲಿಗೆ ನಾವಿಕ್ ಮುಖಾಂತರ ಕೆಲಸ ಮಾಡುವ ಹಾಗಾಗುತ್ತದೆ.
ಡಿಸೆಂಬರ್ 2025ರ ವೇಳೆಗೆ ಭಾರತದಲ್ಲಿ ತಯಾರಾಗುವ ಎಲ್ಲ ಸ್ಮಾರ್ಟ್ ಫೋನ್ಗಳು ನಾವಿಕ್ ದಿಕ್ಸೂಚಿ ವ್ಯವಸ್ಥೆಯನ್ನು ಅಂತರ್ಗತ ಮಾಡಿಕೊಳ್ಳುವ ಹಾಗೆ ಮಾಡುತ್ತೇವೆ ಎಂದು ಕೇಂದ್ರದ ಐಟಿ ಸಚಿವ ರಾಜೀವ ಚಂದ್ರಶೇಖರ ಹೇಳಿದ್ದಾರೆ. ಭಾರತದಲ್ಲಿ ಸಿದ್ಧವಾಗಿ ಇತ್ತೀಚೆಗೆ ಬಿಡುಗಡೆ ಆಗಿರುವ ಐಫೋನ್ 15ರ ಮಾಡೆಲ್ಲುಗಳು ನಾವಿಕ್ ವ್ಯವಸ್ಥೆಗೆ ಪೂರಕವಾಗಿ ರೂಪಗೊಂಡಿವೆ. ಅದಾಗಲೇ ಶಾಮಿ, ಒಪ್ಪೊ, ವಿವೊ, ಒನ್ ಪ್ಲಸ್ ಬ್ರಾಂಡುಗಳ ಕೆಲವು ಮಾದರಿಗಳಲ್ಲಿ ಈ ಅಳವಡಿಕೆ ಆಗಿದೆ. ವಾಹನಗಳಲ್ಲಿ ದಿಕ್ಸೂಚಿ ವ್ಯವಸ್ಥೆಯಲ್ಲಿ ನಾವಿಕ್ ಅಳವಡಿಕೆಗೆ ಅನುಕೂಲ ಇರುವ ಹಾಗೆ ಅದಾಗಲೇ ಮಾಡಲಾಗಿದೆ. ಪ್ರಾರಂಭದಲ್ಲಿ ಕೆಲವು ಉತ್ತೇಜಕ ಕ್ರಮಗಳ ಮೂಲಕ, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ಮಾರ್ಟ್ ಫೋನ್ ತಯಾರಕರು ತಮ್ಮ ಸ್ಮಾರ್ಟ್ ಫೋನ್ ಉತ್ಪಾದನೆಯ ವೇಳೆ ನಾವಿಕ್ ಬೆಂಬಲಿಸುವ ಹಾರ್ಡ್ವೇರ್ ರೂಪಿಸಿಕೊಳ್ಳುವಂತೆ ಸರ್ಕಾರ ಮಾಡಲಿದೆ.
ಸದ್ಯಕ್ಕೆ ಇಸ್ರೋದ ಏಳು ಉಪಗ್ರಹಗಳು ಕಕ್ಷೆಯಲ್ಲಿದ್ದುಕೊಂಡು ಈ ನಾವಿಕ್- ನ್ಯಾವಿಗೇಷನ್ ವಿತ್ ಇಂಡಿಯನ್ ಕಾನಸ್ಟಲೇಷನ್- ವ್ಯವಸ್ಥೆಯನ್ನು ನಿಭಾಯಿಸುತ್ತಿವೆ. ಜಿಪಿಎಸ್ ರೀತಿ ಇಡೀ ಜಗತ್ತನ್ನು ನಾವಿಕ್ ಕವರ್ ಮಾಡುವುದಿಲ್ಲ, ಭಾರತ ಮತ್ತು ಅದರ ಪಕ್ಕದ ರಾಷ್ಟ್ರಗಳನ್ನು ಕವರ್ ಮಾಡುತ್ತದೆ. ಆದರೆ ನಿಖರತೆಯ ವಿಷಯಕ್ಕೆ ಬಂದರೆ ಜಿಪಿಎಸ್ಗಿಂತ ನಾವಿಕ್ ಒಂದು ಕೈ ಮೇಲೆ ಎಂದು ಪರಿಣತರು ಹೇಳುತ್ತಾರೆ.
ನಾವಿಕ್ ವ್ಯವಸ್ಥೆಯಲ್ಲಿ ಮಿಲಿಟರಿಗೆ, ಸರ್ವೇ ಉಪಯೋಗಗಳಿಗೆ ಬೇರೆಯದೇ ವ್ಯವಸ್ಥೆ ಇದೆ. ಅದು ನಾಗರಿಕರ ಬಳಕೆಯಿಂದ ಬೇರ್ಪಟ್ಟಿರುವಂಥದ್ದು. ಸ್ಮಾರ್ಟ್ ಫೋನ್ಗಳಲ್ಲಿ ನಾವಿಕ್ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವುದು ಎಂದರೆ ಜಿಪಿಎಸ್ ವ್ಯವಸ್ಥೆಗೆ ಕನೆಕ್ಟ್ ಆಗುವ ಆಯ್ಕೆಯನ್ನೇ ಕಿತ್ತುಕೊಳ್ಳುವುದು ಎಂದೇನೂ ಅಲ್ಲ. ಆದರೆ, ಭಾರತದಲ್ಲಿ ಎಲ್ಲ ನಾಗರಿಕರೂ ತಮ್ಮದೇ ದೇಶದ ದಿಕ್ಸೂಚಿ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸುವ ದಿನಗಳು ಬರುತ್ತಿವೆ. ಸದ್ಯಕ್ಕೆ ಏಳು ಉಪಗ್ರಹಗಳ ಬಲ ಹೊಂದಿರುವ ನಾವಿಕ್ ವ್ಯವಸ್ಥೆಗೆ ಇನ್ನಷ್ಟು ಉಪಗ್ರಹಗಳನ್ನು ಸೇರಿಸುವ ಯೋಜನೆ ಸಹ ಇಸ್ರೋದ ಮುಂದೆ ಇದೆ.
* * *
ಇದೇ ಮಾದರಿಯಲ್ಲಿ ಎಲ್ಲ ಸೂಕ್ಷ್ಮ ತಂತ್ರಜ್ಞಾನಗಳಲ್ಲಿ ತನ್ನ ಹಿಡಿತ ಸಾಧಿಸುವತ್ತಲೂ ಭಾರತ ಹೆಜ್ಜೆ ಇಡುತ್ತಿದೆ. ಆದರೆ ಇದು ಒಂದೇಟಿಗೆ ಸಾಧ್ಯವಾಗುವಂಥದ್ದಲ್ಲ. ಹಾಗೆಂದೇ ಮೋದಿ ಸರ್ಕಾರವು ಕಳೆದೆರಡು ವರ್ಷಗಳಲ್ಲಿ ಪಿಎಲ್ಐ ಸ್ಕೀಮ್ – ಎಂದರೆ, ಉತ್ಪಾದನೆ ಆಧಾರಿತ ಉತ್ತೇಜನದ ಯೋಜನೆ – ಹಮ್ಮಿಕೊಂಡಿದೆ. ಅತಿ ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಇದರ ಹೆಸರೇ ವಿವರಿಸುವಂತೆ, ಆಯ್ದ ವಿಭಾಗಗಳಲ್ಲಿ ತಮ್ಮ ಉತ್ಪನ್ನಗಳ ಉತ್ಪಾದನೆಯನ್ನು ಭಾರತದ ನೆಲದಿಂದ ಮಾಡಿ, ನಿಗದಿತ ಅವಧಿಯಲ್ಲಿ ನಿರ್ದಿಷ್ಟಗೊಳಿಸಿದ ಪ್ರಮಾಣ ತಲಪಿದಾಗ ಶೇ. 4-6ರ ವರೆಗೆ ಸಬ್ಸಿಡಿ ದೊರೆಯುತ್ತದೆ.
ಸೆಮಿಕಂಡಕ್ಟರ್, ಲ್ಯಾಪ್ಟಾಪ್, ಟೆಲಿಕಾಂ, ಫಾರ್ಮಾ, ಆಟೋಮೊಬೈಲ್ ಸೇರಿದಂತೆ ಹಲವು ಉತ್ಪಾದನಾ ವಲಯಗಳಲ್ಲಿ ಜಾರಿಗೆ ಬಂದಿರುವ ಈ ಪಿಎಲ್ಐ ಸ್ಕೀಮನ್ನು ಜಾಗತಿಕ ದೈತ್ಯ ಕಂಪೆನಿಗಳು ಅಪ್ಪಿಕೊಂಡಿವೆ. ಈ ವಿಭಾಗಗಳಲ್ಲಿ ಆಮದು ಮಾಡಿಕೊಳ್ಳುವ ವೆಚ್ಚ ಕಡಮೆಯಾಗುವುದು ದೇಶಕ್ಕೆ ದೊಡ್ಡ ಲಾಭ. ಆದರೆ ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಇದರಲ್ಲಿ ಕೊಡುಗೆ ಏನಿಲ್ಲವಲ್ಲ ಎಂಬ ಪ್ರಶ್ನೆ ಏಳಬಹುದೇನೋ. ಆದರೆ, ಈ ಎಲ್ಲ ಕ್ಷೇತ್ರಗಳಲ್ಲಿ ಭಾರತದಲ್ಲೇ ಉತ್ಪಾದನಾ ಘಟಕಗಳು ತಲೆಯೆತ್ತುವುದರಿಂದ ಕೆಲವೇ ವರ್ಷಗಳಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲ ಕೌಶಲಗಳನ್ನು ಇಲ್ಲಿನ ಪ್ರತಿಭೆಗಳು ಇಲ್ಲೇ ಉದ್ಯೋಗ ಪಡೆದು ಕಲಿಯುವಂತಾಗುತ್ತದೆ. ದೀರ್ಘಾವಧಿಯಲ್ಲಿ ಈ ಎಲ್ಲ ವಲಯಗಳಲ್ಲಿ ಭಾರತೀಯರ ತಂತ್ರಜ್ಞಾನ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ.
ಕ್ವಾಟಂ ಕಂಪ್ಯೂಟಿಂಗ್ ಎಂಬ ಭವಿಷ್ಯದ ಬೆರಗು
ಕೇವಲ ಅಂಕಿಸಂಖ್ಯೆಗಳನ್ನು ಉಲ್ಲೇಖಿಸಿದರೆ ಏನೂ ಹೇಳಿದಂತಾಗುವುದಿಲ್ಲ. ಆದರೂ ಈ ಕುರಿತ ವಿವರಣೆಗೆ ಮೊದಲು ಈ ಸಂಖ್ಯೆಯನ್ನು ಒಪ್ಪಿಸಿಕೊಂಡುಬಿಡಿ.
2023-24ರ ವರ್ಷದಿಂದ 2030-31ರ ಅವಧಿಗೆ ರಾಷ್ಟ್ರೀಯ ಕ್ವಾಂಟಂ ಮಿಷನ್ ಎಂಬ ಯೋಜನೆಗೆ ಬರೋಬ್ಬರಿ 6,000 ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ ಮೋದಿ ಸರ್ಕಾರ.
ಗೂಗಲ್, ಐಬಿಎಂನಂಥ ದೈತ್ಯ ಕಂಪೆನಿಗಳು ಹಾಗೂ ಅಮೆರಿಕ ಮತ್ತು ಚೀನಾದಂಥ ಜಾಗತಿಕ ಶಕ್ತಿಗಳು ತಮ್ಮಲ್ಲಿ ಯಾರು ಮೊದಲು ಎಂಬಂತೆ ಕ್ವಾಂಟಂ ಕಂಪ್ಯೂಟರ್ ತರುವುದಕ್ಕೆ ಜಿದ್ದಿನಲ್ಲಿವೆ. ಯಾಕೆಂದರೆ, ಈ ಸ್ಪರ್ಧೆ ಗೆದ್ದವರೇ ಜಗತ್ತನ್ನು ನಿರ್ದೇಶಿಸುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಮೆರಿಕ ಮತ್ತು ಚೀನಾಗಳಲ್ಲಿ ಒಂದೆರಡು ಮಾದರಿಗಳು ಬಂದಿವೆಯಾದರೂ ಕ್ವಾಂಟಂ ಕಂಪ್ಯೂಟರ್ ಅನ್ವೇಷಣೆ ಸದ್ಯಕ್ಕೆ ಪ್ರಾಥಮಿಕ ಹಂತದಲ್ಲಿದೆ.
ಕ್ವಾಂಟಂ ಕಂಪ್ಯೂಟಿಂಗ್ ಎಂದರೆ ಈಗ ನಾವು ಉಪಯೋಗಿಸುತ್ತಿರುವ ಡಿಜಿಟಲ್ ಗಣಕದ ಸಾಮರ್ಥ್ಯವನ್ನೇ ದೊಡ್ಡಮಟ್ಟದಲ್ಲಿ ವಿಸ್ತರಿಸಿಕೊಳ್ಳುವುದು ಎಂಬ ಕಲ್ಪನೆಯೇನಾದರೂ ನಿಮ್ಮಲ್ಲಿದ್ದರೆ ಅದು ತಪ್ಪು. ಈ ಕ್ವಾಂಟಂ ಕಂಪ್ಯೂಟಿಂಗ್ ಎಂಬ ಪದ್ಧತಿ ಭವಿಷ್ಯದಲ್ಲಿ ನಾವೀಗ ಇಷ್ಟೆಲ್ಲ ಅಚ್ಚರಿಯಿಂದ ಬಳಸುತ್ತಿರುವ ಡಿಜಿಟಲ್ ವ್ಯವಸ್ಥೆಯನ್ನೇ ಹಳೆಕಾಲದ ಪಳೆಯುಳಿಕೆಯಂತೆ ಮಾಡಿಬಿಡಬಲ್ಲದು!
ಒಂದು ಮತ್ತು ಜೀರೊ ಎಂಬ ಬೈನರಿ ವ್ಯವಸ್ಥೆಯಲ್ಲಿ ಇವತ್ತಿನ ಡಿಜಿಟಲ್ ಕಂಪ್ಯೂಟಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆಯಷ್ಟೆ. ಈ ಕ್ವಾಂಟಂ ಗಣಕ ಎಂಬುದು ಅಣುಗಳ ಹಂತಕ್ಕೆ ಇಳಿದು ಲೆಕ್ಕ ಮಾಡಬಲ್ಲದು. ಇದರಿಂದ ಏನು ಪ್ರಯೋಜನ ಎಂದರೆ ನಕ್ಷತ್ರಪುಂಜಗಳಾಚೆಗಿನ ಜಗತ್ತನ್ನೂ ಹತ್ತಿರಕ್ಕೆ ತರಬಲ್ಲ ಗಣಿತಗಳು ಸಾಕಾರವಾಗುವುದರಿಂದ ಹಿಡಿದು, ಈಗ ಕೈಮೀರಿದ ಹಂತದಲ್ಲಷ್ಟೇ ವೈದ್ಯರ ವಿಮರ್ಶೆಗೆ ಸಿಗುವ ಕ್ಯಾನ್ಸರ್ ಬೆಳವಣಿಗೆ ಇನ್ನೂ ಅಣುವಿನಲ್ಲಿದ್ದಾಗಲೇ ಪತ್ತೆಯಾಗಿ ಜೀವ ಉಳಿಸಿಕೊಳ್ಳುವುದು ಸಾಧ್ಯವಾಗುವವರೆಗೆ ಅನಂತ ಅವಕಾಶಗಳ ಆಸೆಯನ್ನು ಕ್ವಾಂಟಂ ಕಂಪ್ಯೂಟಿಂಗ್ ಹುಟ್ಟಿಸಿದೆ.
ಹೀಗಿರುವಾಗ, ಅವೆಷ್ಟೋ ದೇಶಗಳಿಗೆ ಹೀಗೊಂದು ಯೋಚನೆಯೇ ಅನೂಹ್ಯ ಎನಿಸಿರುವ ಈ ಪ್ರಾರಂಭಿಕ ಹಂತದಲ್ಲಿಯೇ ಭಾರತವು ಭವಿಷ್ಯದ ಕ್ವಾಂಟಂ ತಂತ್ರಜ್ಞಾನಕ್ಕೆ ಪೂರಕ ಸಂಶೋಧನೆ ಮತ್ತು ಅನ್ವೇಷಣೆಗಳನ್ನು ಸಾಧ್ಯವಾಗಿಸಬಲ್ಲ ಪರಿಸರವೊಂದನ್ನು ಈ ನೆಲದಲ್ಲಿ ರೂಪಿಸುವುದಕ್ಕೆ ಅದಾಗಲೇ ತೊಡಗಿಸಿಕೊಂಡಿದೆ ಎಂಬುದು ಅಭಿಮಾನದ ಸಂಗತಿಯಲ್ಲವೆ?
ಕೊನೆಯಲ್ಲಿ
ಯಾವುದೇ ದೇಶದ ತಂತ್ರಜ್ಞಾನ ಸಾಮರ್ಥ್ಯದ ಅಭಿವೃದ್ಧಿ ಎನ್ನುವುದು ದೂರದೃಷ್ಟಿ, ಕರಾರುವಾಕ್ ಯೋಜನೆ, ಪರಿಶ್ರಮ ಮತ್ತು ನಿರಂತರತೆಗಳನ್ನು ಬೇಡುವಂಥದ್ದು. ಹೀಗಾಗಿಯೇ, ಪ್ರತಿ ಬಜೆಟ್ಟಿನಲ್ಲೂ ಹೊಸ ರೈಲುಮಾರ್ಗಗಳನ್ನು ಘೋಷಿಸಿ, ಎಂದೂ ಸಾಕಾರವಾಗದ ಅವುಗಳ ಸುಳ್ಳು ಲೆಕ್ಕದಲ್ಲೇ ಖುಷಿಗೊಳ್ಳುವ ಜನರಿದ್ದರೆ ಅವರಿಗೆ ಲಾಲು ಪ್ರಸಾದ ಯಾದವರಂಥ ಲೂಟಿಕೋರರೇ ಸಿಗುತ್ತಾರೆ. ಸ್ವಲ್ಪ ಮಹಾತ್ತ್ವಾಕಾಂಕ್ಷೆ ಮತ್ತು ಅರಿವಿನ ವರ್ತನೆಯನ್ನು ಜನಸಮೂಹ ತೋರಿದಾಗಲಷ್ಟೇ ಮುಂಬರುವ 40 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆಯನ್ನು ಆಧುನಿಕಗೊಳಿಸುವ ಅಶ್ವಿನಿ ವೈಷ್ಣವ್ ರೀತಿಯವರು ಸಿಗುತ್ತಾರೆ. ಏನೂ ಮಾಡದೇ ಮಲಗಿದ್ದರೂ ಹಣ ಬರುವಂತಿರಬೇಕು ಎಂದು ಯೋಚಿಸುವ ಜನರಿದ್ದರೆ ರಾಹುಲ್ ಗಾಂಧಿಯಂಥವರು ಭಾಷಣದಲ್ಲಿ ಹೇಳುವ, ಅನುಷ್ಠಾನಯೋಗ್ಯವಲ್ಲದ ಸ್ಕೀಮುಗಳು ಹಳ್ಳಕ್ಕೆ ತಳ್ಳುತ್ತವೆ. ಸ್ವಲ್ಪವೇ ವಿವೇಚನೆಯಿಂದ ಜನ ಯೋಚಿಸಿದಾಗಲೂ ಜನಧನ-ಯುಪಿಐನಂಥ ದೀರ್ಘಾವಧಿ ಸಲಕರಣೆಗಳನ್ನು ಕೊಡಬಲ್ಲವರು ಬರುತ್ತಾರೆ.
ಈ ಹಿನ್ನೆಲೆಯಲ್ಲಿ, ಭವಿಷ್ಯವನ್ನು ಬೆಳಗಬಲ್ಲ ತಂತ್ರಜ್ಞಾನದ ಹಾದಿಯನ್ನು ಒಳ್ಳೆಯ ಹದದಲ್ಲೇ ಹಿಡಿದಿರುವ ಭಾರತವನ್ನು ಮುಗ್ಗರಿಸುವ ಇಲ್ಲವೇ ಅದರ ಯಾನದ ವೇಗ ಹೆಚ್ಚಿಸಬಲ್ಲ ಶಕ್ತಿ ಕೊನೆಗೂ ಜನರಲ್ಲಿಯೆ ಇದೆ. ಆ ಜನಬುದ್ಧಿ ಸನ್ಮಾರ್ಗದಲ್ಲಿ ಪ್ರಚೋದಿತವಾಗಲೆಂದು ಹಾರೈಸೋಣ.