ಪಕ್ಷದ ಸಿದ್ಧಾಂತಕ್ಕೆ ಮೂಲವಾದ ಆರೆಸ್ಸೆಸ್ ಜೊತೆಗೆ ಉತ್ತಮ ಸಂಬಂಧವನ್ನು ಇರಿಸಿಕೊಂಡಿರುವುದು ಮೋದಿ ಅವರ ಹೆಚ್ಚುಗಾರಿಕೆ ಎನ್ನಲಡ್ಡಿಯಿಲ್ಲ. ಈ ವಿಷಯದಲ್ಲಿ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದ ವಾಜಪೇಯಿ ಅವರು ಟೀಕೆಗೊಳಗಾಗಿದ್ದರು. ಸರ್ಕಾರವು ಸಿದ್ಧಾಂತದಿಂದ ದೂರ ಸರಿಯುತ್ತಿದೆ ಎಂದು ಆರೆಸ್ಸೆಸ್ ಮತ್ತು ಪರಿವಾರದವರಿಂದ ಟೀಕೆಗಳು ಬಂದವು. ಅಂಥದೇನೂ ಇರದಂತೆ ತಡೆದದ್ದು ಮೋದಿ ಅವರ ಸಾಮರ್ಥ್ಯ ಎನ್ನಲಡ್ಡಿಯಿಲ್ಲ. ಅದಕ್ಕೆ ಮೋದಿ ಅವರ ವ್ಯಕ್ತಿತ್ವ ಮತ್ತು ಬಲಿಷ್ಠ ರಾಷ್ಟ್ರೀಯತೆಗೆ ಸಂಬಂಧಿಸಿದ ಎಲ್ಲವನ್ನೂ ಗಮನಿಸುತ್ತ ಅದನ್ನು ತಪ್ಪದಂತೆ ಅವರು ನೋಡಿಕೊಳ್ಳುತ್ತಿರುವುದು ಕಾರಣ ಎನ್ನಬಹುದು.
(ಕಳೆದ ಸಂಚಿಕೆಯಿಂದ)
ಬಿ.ಜೆ.ಪಿ. ಪಕ್ಷಕ್ಕೆ ದೊಡ್ಡ ಬೆಂಬಲವಿದ್ದ ಕಾರಣ ಎನ್.ಡಿ.ಎ. ಆಡಳಿತವು ಪರಿಣಾಮಕಾರಿಯಾಯಿತು. ಮೋದಿ ಅವರು ತಮ್ಮ ಗುಜರಾತಿನ ಅನುಭವದಿಂದ ಕಂಡುಕೊAಡ ಅಂಶವೆAದರೆ, ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಜನರ ಪ್ರಜ್ಞೆಗೆ ಇಳಿಯದಿದ್ದರೆ ಅವು ಫಲಕಾರಿ ಆಗುವುದಿಲ್ಲ. ಸರ್ಕಾರೀ ಯಂತ್ರಕ್ಕೆ ಹೊರತಾಗಿ ಪಕ್ಷದ ಸಂಘಟನಾ ಬಂಧ (ವ್ಯವಸ್ಥೆ) ಕೂಡ ಪರಿಣಾಮಕಾರಿ ಉಪಕರಣವಾಗುತ್ತದೆ; ಅದರ ಆರಂಭದಲ್ಲೇ ಜನ ಅದನ್ನು ತಿಳಿಯುವಲ್ಲಿ ಸಹಕಾರಿಯಾಗುತ್ತದೆ.
ಗುಜರಾತಿನಲ್ಲಿ ಮುಖ್ಯಮಂತ್ರಿ ಮೋದಿ ಆಗಾಗ ಗ್ರಾಮ, ಬ್ಲಾಕ್(ತಾಲೂಕು) ಹಾಗೂ ಜಿಲ್ಲಾಮಟ್ಟಗಳಲ್ಲಿ ಸಮಾರಂಭಗಳನ್ನು ಏರ್ಪಡಿಸಿ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುತ್ತಿದ್ದರು. ಅದರಲ್ಲಿ ಜನಪ್ರತಿನಿಧಿಗಳು ಭಾಗವಹಿಸಿ ಜನರ ನಡುವೆ ಅರಿವು ಮೂಡಿಸುತ್ತಿದ್ದರು. ಸರ್ಕಾರೀ ಯೋಜನೆಗಳ ಜೊತೆ ಪಕ್ಷವು ಆ ರೀತಿಯಲ್ಲಿ ಸೇರಿಕೊಂಡದ್ದರಿAದ ಕಾರ್ಯಕರ್ತರ ಮತ್ತು ಜನರ ಸಂಪರ್ಕ ಕೂಡ ಆಗುತ್ತಿತ್ತು; ಅದಲ್ಲದೆ, ಕಾರ್ಯಕ್ರಮದ ಬಗ್ಗೆ ಜನರ ಒಲವು (ಮೂಡ್) ಏನೆಂದು ತಿಳಿಯಲು ಅನುಕೂಲ ಆಗುತ್ತಿತ್ತು.
ಪ್ರಜಾಪ್ರಭುತ್ವದಲ್ಲಿ ಪಕ್ಷದ ಗಟ್ಟಿಯಾದ ಸಾಂಸ್ಥಿಕ ಬಲವಿಲ್ಲದೆ ನಡೆಸುವ ಆಡಳಿತವು ದುರಂತಕ್ಕೆ ದಾರಿಯಾಗುವುದು ಖಚಿತ. ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಮೋದಿ ಇದನ್ನು ಅಂತಃಸ್ಥಗೊಳಿಸಿಕೊಂಡಿದ್ದರು. ರಾಷ್ಟ್ರಮಟ್ಟದಲ್ಲಿ ಅವರು ಸರ್ಕಾರ ಮತ್ತು ಪಕ್ಷದ (ಬಿಜೆಪಿ) ನಡುವೆ ಪರಿಪೂರ್ಣ ಹೊಂದಾಣಿಕೆಯ ಮನೋಭಾವವನ್ನು ಪ್ರೇರಿಸುತ್ತಾ ಬಂದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಜನಾಂದೋಲನದ ಉಪಕರಣವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವುದು ಹೇಗೆ ಎನ್ನುವ ಪ್ರಶ್ನೆ ಬಂತು. ಪ್ರಧಾನಿ ಮೋದಿ ಅವರು ‘ಸ್ವಚ್ಛ ಭಾರತ ಅಭಿಯಾನ’ವನ್ನು ಘೋಷಿಸಿದಾಗ (ಅಕ್ಟೋಬರ್ 2, 2014) ಜನ ಅದಕ್ಕೆ ಉತ್ತರವನ್ನು ಕಂಡುಕೊಂಡರು. ಹೀಗೆ ‘ಕ್ಲೀನ್ ಇಂಡಿಯಾ ಮಿಷನ್’ ಮೋದಿ ಸರ್ಕಾರದ ಮೊದಲ ಗಾಂಧಿ ಜಯಂತಿಯ ದಿನ ಆರಂಭಗೊಂಡಿತು. ಅದು ಗಾಂಧಿ ದರ್ಶನಕ್ಕೆ ಅನುಗುಣವಾದ ಮಹತ್ತ್ವಾಕಾಂಕ್ಷೆಯ ಒಂದು ಕಾರ್ಯಕ್ರಮವಾಗಿತ್ತು.
ಕಾರ್ಯಕ್ರಮದ ಅಡಿಯಲ್ಲಿ ಹಳ್ಳಿಗಳಲ್ಲಿ ಶೌಚಾಲಯಗಳನ್ನು ಕಟ್ಟಿಸಿ ‘ಬಯಲು ಶೌಚಾಲಯ ಮುಕ್ತ’ (ಓಡಿಎಫ್) ವಾಗಿಸುವುದು ಅದರ ಉದ್ದೇಶವಾಗಿತ್ತು. ಈ ಯೋಜನೆ ಹಿಂದೆ ಇತ್ತಾದರೂ ಪರಿಣಾಮಕಾರಿಯಾಗಿ ಜಾರಿ ಆಗಿರಲಿಲ್ಲ. ಎನ್ಡಿಎ ಸರ್ಕಾರ ಕೈಗೊಂಡ ಈ ಯೋಜನೆ ಮುಂದಿನ ವರ್ಷಗಳಲ್ಲಿ ಒಳ್ಳೆಯ ಪ್ರಗತಿಯನ್ನು ಕಂಡಿತು. ಅಷ್ಟು ದೊಡ್ಡ ಆಂದೋಲನ ಸ್ವರೂಪದ ಈ ಕಾರ್ಯಕ್ರಮದ ಪ್ರಮುಖ ಲಕ್ಷಣವೆಂದರೆ ಸರ್ಕಾರ ಮತ್ತು ಜನತೆಯ ನಡುವಣ ನಿಕಟ ಸಂಬಂಧ. ದೇಶಾದ್ಯಂತ ಬಹಳ ವೇಗದಲ್ಲಿ ಶೌಚಾಲಯಗಳು ನಿರ್ಮಾಣವಾಗುವ ಮೂಲಕ ಅದು ಅತಿದೊಡ್ಡ ಜಾಗೃತಿ ಅಭಿಯಾನ ಕೂಡ ಆಗಿತ್ತು. ಸ್ವಾತಂತ್ರ್ಯೋತ್ತರದಲ್ಲಿ ದೇಶದಲ್ಲಿ ಬೇರೆ ಇಷ್ಟು ದೊಡ್ಡ ನೈರ್ಮಲ್ಯ ಕಾರ್ಯಕ್ರಮವು ನಡೆದುದಿಲ್ಲ. ಆಳುವ ಪಕ್ಷದ ಸಾಂಸ್ಥಿಕ ಬಲ ಅದರಲ್ಲಿ ಪೂರ್ತಿ ತೊಡಗಿಕೊಂಡ ಕಾರಣ ಕಾರ್ಯಕ್ರಮವು ಯಶಸ್ವಿ ಕೂಡ ಆಯಿತು. ಪಕ್ಷದ ಕಾರ್ಯಕರ್ತರಿಗೆ ರಾಜಕೀಯದಲ್ಲಿ ಶಿಕ್ಷಣ ಪಡೆಯಲೂ ಸ್ವಚ್ಛ ಭಾರತ ಅಭಿಯಾನವು ಸಹಕಾರಿ ಆಯಿತು.
ಮನ ಮೀಟಿದ ಮಾತು
“ಶೌಚಾಲಯಗಳಿಲ್ಲದ ಕಾರಣ ಗ್ರಾಮೀಣ ಪ್ರದೇಶದ (ಕೆಲವು ಪಟ್ಟಣಗಳಲ್ಲಿ ಕೂಡ) ನಮ್ಮ ತಾಯಂದಿರು ದೀರ್ಘ ಕಾಲದಿಂದ ತುಂಬ ಕಷ್ಟವನ್ನು ಅನುಭವಿಸುತ್ತಿದ್ದರು” ಎನ್ನುವ ಮೋದಿ ಅವರ ಮಾತು ಸಮಾಜದ ದೊಡ್ಡ ಭಾಗದ ಜನರ ಭಾವನೆಗಳನ್ನು ಮೀಟಿತೆನ್ನಬಹುದು. ಪಕ್ಷಕ್ಕೆ ಅದರಿಂದ ಅನುಕೂಲಕರ ವಾತಾವರಣವು ನಿರ್ಮಾಣವಾಯಿತು. ಜನರ ನಡುವೆ ಪಕ್ಷದ ಪ್ರಭಾವ ಬೆಳೆಯಿತು. ಜನಕಲ್ಯಾಣ ಕಾರ್ಯಕ್ರಮದಲ್ಲಿ ಆಡಳಿತವು ಪರಿಣಾಮಕಾರಿ ಉಪಕರಣವಾಯಿತು.
ಪ್ರಧಾನಿಯಾಗಿ ಮೊದಲ ವರ್ಷದಲ್ಲಿ ನರೇಂದ್ರ ಮೋದಿ ಅವರು ಕೈಗೊಂಡ ಇನ್ನೊಂದು ಕಾರ್ಯಕ್ರಮ ‘ಪ್ರಧಾನಮಂತ್ರಿ ಜನಧನ ಯೋಜನೆ’. ಅದರ ಮೂಲಕ ಅವರು ಅಭಿವೃದ್ಧಿ ಮತ್ತು ಜನಕಲ್ಯಾಣದಲ್ಲಿ ಬ್ಯಾಂಕಿಂಗ್ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ತೊಡಗಿಸುವ ಪ್ರಯತ್ನ ನಡೆಸಿದರು. ಬ್ಯಾಂಕಿಂಗ್ ಕ್ಷೇತ್ರವು ದೇಶದ ಪ್ರತಿಯೊಬ್ಬ ನಾಗರಿಕನನ್ನು ಮುಟ್ಟುವಂತೆ ಮಾಡುವಲ್ಲಿ ಈ ಯೋಜನೆ ಬಹಳಷ್ಟು ಯಶಸ್ವಿಯಾಯಿತು. ಇದರಿಂದ ಪ್ರಧಾನಿ ಮೋದಿ ಸಾಮಾಜಿಕ ಮತ್ತು ಆರ್ಥಿಕವಾಗಿ ಅಂಚಿನಲ್ಲಿದ್ದವರನ್ನು ದೇಶದ ಮುಖ್ಯವಾಹಿನಿಗೆ ತಂದರು. ಇದು ತುರ್ತು ಅಗತ್ಯದ ಒಂದು ಕಾರ್ಯಕ್ರಮ ಆಗಿದ್ದರೂ ಕೂಡ ಹಿಂದಿನ ಸರ್ಕಾರಗಳು ಅತ್ತ ಗಮನಹರಿಸಿರಲಿಲ್ಲ; ಕಾರಣ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಪರಿಣಾಮಕಾರಿ ಯೋಜನೆ ರೂಪಿಸುವಲ್ಲಿನ ಅಸಾಮರ್ಥ್ಯ.
ಪ್ರಧಾನಮಂತ್ರಿ ಜನಧನ ಯೋಜನೆಯ ಮೂಲಕ ಮೋದಿ ಎರಡು ವರ್ಷಗಳಲ್ಲಿ ದೇಶದ 26 ಕೋಟಿ ಜನರನ್ನು ಬ್ಯಾಂಕಿನ ಸಂಪರ್ಕಕ್ಕೆ ತಂದರು. ಅಷ್ಟು ಜನ ಬ್ಯಾಂಕ್ ಖಾತೆಗಳನ್ನು ತೆರೆದರು. ಇದರಿಂದ ಇನ್ನೊಮ್ಮೆ ದೊಡ್ಡ ರೀತಿಯಲ್ಲಿ ದೇಶದ ಜನಸಮುದಾಯದ ಸಂಘಟನೆ ಕಾರ್ಯಗತಗೊಂಡಿತು. ಒಂದು ಸರ್ಕಾರೀ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ರೀತಿಯ ಪ್ರತಿಕ್ರಿಯೆ ವಿಶೇಷವೆಂದೇ ಹೇಳಬೇಕು. ಇದು ರಾಜಕೀಯವಲ್ಲ; ಕಲ್ಯಾಣ ಕಾರ್ಯಕ್ರಮ ಎಂಬುದಿಲ್ಲಿ ಗಮನಾರ್ಹ.
ಗರೀಬಿ ಹಟಾವೋ – ಅಂದು, ಇಂದು
ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು ಹಿಂದಿನವರಿಗಿಂತ, ಅದರಲ್ಲೂ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳಿಗಿಂತ ಪೂರ್ತಿ ಭಿನ್ನ ಎಂಬುದನ್ನಿಲ್ಲಿ ಉಲ್ಲೇಖಿಸಬೇಕು. ಉದಾಹರಣೆಗೆ ಅವರ ಬಡತನ ನಿರ್ಮೂಲನ ಕಾರ್ಯಕ್ರಮಗಳು. ಪ್ರಧಾನಿ ಇಂದಿರಾ ಗಾಂಧಿಯವರು 1970ರ ದಶಕದಲ್ಲಿ ‘ಗರೀಬಿ ಹಟಾವೋ’ ಕಾರ್ಯಕ್ರಮವನ್ನು ಘೋಷಿಸಿದ್ದರು. ಆ ಘೋಷಣೆಯೇನೋ ಜನಪ್ರಿಯವಾಯಿತು. ಅದರಿಂದ ಅವರು ಒಂದು ಲೋಕಸಭಾ ಚುನಾವಣೆಯನ್ನು ಗೆದ್ದಿರಲೂಬಹುದು. ದೇಶದಲ್ಲಿ ಆಗ ಆಹಾರಪದಾರ್ಥಗಳ ಕೊರತೆಯಿತ್ತು. ಗರೀಬಿ ಹಟಾವೋದಿಂದಾಗಿ ಜನ ಇಂದಿರಾಗಾಂಧಿಯವರ ಪರ ಆದರು. ದೇಶದಲ್ಲಿ ಆಹಾರದ ಸ್ವಾವಲಂಬನೆ ಬಂದ ಮೇಲೆ ಇನ್ನೊಂದು ಚುನಾವಣೆಗೆ ಆಕೆ “ರೋಟಿ ಕಪಡಾ ಮಕಾನ್’ (ಅನ್ನ ಬಟ್ಟೆ ವಸತಿ) ಎನ್ನುವ ಘೋಷಣೆಗೆ ಚಾಲನೆ ನೀಡಿದರು. 1980ರ ದಶಕದ ಆ ಅಭಿಯಾನವನ್ನು (ಡಿಸ್ಕೋರ್ಸ್) ಮೋದಿ ಪರಿಣಾಮಕಾರಿಯಾಗಿ ಬದಲಿಸಿದರು; ಬದುಕಿ ಉಳಿಯುವುದರ ಆಚೆಗೆ ಒಯ್ದರು; ಇನ್ನಷ್ಟು ಕೇಳಿ ಎಂದು ಜನತೆಗೆ ಕರೆ ನೀಡಿದರು. ಎಲ್ಲ ಕಾರ್ಯಕ್ರಮಗಳಲ್ಲಿ ಅವರ ಒತ್ತು ಜನ ಸರ್ಕಾರೀ ನೆರವಿನ ಕಾರ್ಯಕ್ರಮಗಳ ಮೂಲಕ ಖಾಸಗಿ ಹಿಡಿತದಿಂದ ಮುಕ್ತರಾಗಬೇಕು ಎಂಬುದಾಗಿತ್ತು. ಗುಜರಾತಿನ ಮುಖ್ಯಮಂತ್ರಿ ಆದಂದಿನಿಂದ ಅವರು ಹೇಳುವ ಬಡತನ ನಿರ್ಮೂಲನ ಎಂದರೆ ಸಾಮಾಜಿಕ ಏಣಿಯನ್ನು ಏರುವ ಬಗ್ಗೆ ಜನರ ಮಹತ್ತ್ವಾಕಾಂಕ್ಷೆಗೆ ಪ್ರೇರಣೆ ನೀಡುವುದೇ ಪ್ರಧಾನವಾಗಿತ್ತು.
* * *
ಸಾಮಾಜಿಕ ಮನಶ್ಶಾಸ್ತ್ರ
ಸಾಮಾಜಿಕ ಮನಶ್ಶಾಸ್ತçವನ್ನು ಬಲ್ಲವರು ಬಹುಶಃ ಭಾರತದ ಇಂದಿನ ರಾಜಕೀಯದಲ್ಲಿ ನರೇಂದ್ರ ಮೋದಿ ಅವರ ಮಟ್ಟದಲ್ಲಿ ಬೇರೆ ಯಾರೂ ಇಲ್ಲವೆಂದು ಪ್ರಸಿದ್ಧ ಪತ್ರಕರ್ತ ಅಜಯ್ಸಿಂಗ್ ತನ್ನ ಪುಸ್ತಕದಲ್ಲಿ ಅಭಿಪ್ರಾಯಪಡುತ್ತಾರೆ. ಅದಕ್ಕೆ ನಿದರ್ಶನವೆಂಬಂತೆ ಅವರು ಸರ್ಕಾರೀ ಯೋಜನೆಗಳನ್ನು ಎಚ್ಚರದಿಂದ ರೂಪಿಸುತ್ತಾರೆ. ಒಟ್ಟಾರೆಯಾಗಿ ಅದು ಜನ ಕಲ್ಯಾಣದ ಪರವಾಗಿ ಇರುತ್ತದೆ. ಅವುಗಳ ಹಿಂದೆ ಕೇವಲ ರಾಜಕೀಯ ಉದ್ದೇಶ ಇರುವುದಿಲ್ಲ. ಸರ್ಕಾರದ ಪ್ರಾಮಾಣಿಕತೆಗೆ ಉದಾಹರಣೆಯಾಗಿರುವ ಆ ಯೋಜನೆಗಳು ಆಳುವ ಪಕ್ಷದ ಕಾರ್ಯಕರ್ತರಿಗೆ ಸ್ಫೂರ್ತಿಯನ್ನು ನೀಡುವಂತಿರುತ್ತವೆ.
ಭಾರತೀಯರ ಮನೋಭಾವವನ್ನು ಪ್ರಧಾನಿ ಮೋದಿ ಅವರು ತಿಳಿಯುವ ರೀತಿ ವಿಶಿಷ್ಟವಾಗಿರುತ್ತದೆ. ಇವರ ಮಟ್ಟದ ಗಟ್ಟಿಯಾದ ನಾಯಕ ಅಲ್ಲವಾಗಿದ್ದರೆ ಮೋದಿ ಅವರ ರಾಜಕೀಯ ಜೀವನ ಎಂದೋ ಮುಗಿದುಹೋಗುತ್ತಿತ್ತು. ನವೆಂಬರ್ 8, 2016ರಂದು ಸಂಜೆ ಪ್ರಧಾನಿ ಮೋದಿ ಅಂದಿನ 500 ಮತ್ತು 1,000 ರೂ. ನೋಟುಗಳನ್ನು ನಿಷೇಧಿಸಿದರು. ಈ ಅಸಾಮಾನ್ಯ ಕ್ರಮವನ್ನು ಪ್ರಕಟಿಸುವಾಗ ಅವರು ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿ, ತನ್ನ ಉದ್ದೇಶವನ್ನು ತಿಳಿಸಿದರು. ಕಪ್ಪುಹಣದ ದಾಸ್ತಾನಿಗೆ ತಡೆಹಾಕುವುದು ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನಿಂದ ಭಯೋತ್ಪಾದಕರಿಗೆ ಖೋಟಾ ನೋಟಿನ ರೂಪದಲ್ಲಿ ಬರುವ ಹಣವನ್ನು ತಡೆಯುವುದು ಸರ್ಕಾರದ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಹೇಳಿದ ಅವರು, “ಉತ್ತಮ ಭವಿಷ್ಯಕ್ಕಾಗಿ ಸ್ವಲ್ಪ ಕಷ್ಟವನ್ನು ಸಹಿಸಿಕೊಳ್ಳಿ” ಎಂದು ದೇಶದ ಜನತೆಯಲ್ಲಿ ಪ್ರಾಂಜಲವಾಗಿ ಮನವಿ ಮಾಡಿದರು.
ನೋಟುಗಳ ಹಠಾತ್ ನಿಷೇಧದಿಂದ ಜನರಿಗೆ ಸ್ವಲ್ಪ ಕಷ್ಟ ಆಗುವುದೆಂದು ಅವರಿಗೆ ಗೊತ್ತಿತ್ತು. ಆದರೆ ಉದ್ದೇಶ ಒಳ್ಳೆಯದಿದ್ದರೆ ದೇಶದ ಜನ ಬೆಂಬಲಿಸುತ್ತಾರೆನ್ನುವ ಧೈರ್ಯ, ವಿಶ್ವಾಸಗಳಿಂದ ಅಂತಹ ಕ್ರಮಕ್ಕೆ ಮುಂದಾದರು. ಪ್ರತಿಪಕ್ಷಗಳು ಆಗ ನೋಟ್ಬ್ಯಾನ್ ವಿರುದ್ಧ ಜನರನ್ನು ಕೆರಳಿಸಲು ಪ್ರಯತ್ನಿಸದೆ ಬಿಡಲಿಲ್ಲ. ಆದರೆ ದೇಶದಲ್ಲಿ ಯಾವುದೇ ಪ್ರತಿಭಟನೆ ಸಾಧ್ಯವಾಗಲಿಲ್ಲ. ನೋಟ್ಬ್ಯಾನ್ನಿಂದ ಬಿಜೆಪಿಗೆ ರಾಜಕೀಯ ಲಾಭ ಕೂಡ ಆಯಿತು. ಬಳಿಕ ಬಂದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತವನ್ನು ಗಳಿಸಿತು.
500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಆಗ ಒಟ್ಟು ಚಲಾವಣೆಯಲ್ಲಿದ್ದ ಹಣದಲ್ಲಿ ಶೇ.86ರಷ್ಟು ಕರೆನ್ಸಿ ತನ್ನ ಮೌಲ್ಯವನ್ನು ಕಳೆದುಕೊಂಡಿತ್ತು. ಹಿಂದೆ ಜನವರಿ 16, 1978ರಂದು ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ನೋಟ್ಬ್ಯಾನ್ ಮಾಡಲು ಹೋಗಿ ಅದನ್ನು ಸರಿಯಾಗಿ ಕಾರ್ಯಗತ ಮಾಡಲು ಸಾಧ್ಯವಾಗಿರಲಿಲ್ಲ. ಮೋದಿ ಅವರು ಅದರಲ್ಲಿ ಯಶಸ್ವಿಯಾಗಲು ಕಾರಣ ಅವರ ಸಂಘಟನಾಶಕ್ತಿ ಮತ್ತು ಉದ್ದೇಶವನ್ನು ಜನತೆಗೆ ಮನದಟ್ಟು ಮಾಡುವ ಸಾಮರ್ಥ್ಯ ಎನ್ನಬಹುದು. ಒಂದೆರಡು ತಿಂಗಳ ಕಾಲ ನಡೆದಿದ್ದ ಸಿದ್ಧತೆಯ ಬಗೆಗಿನ ರಹಸ್ಯವನ್ನು ಕಾಪಾಡುವುದರಲ್ಲೇ ಅವರ ಸಾಮರ್ಥ್ಯ ವ್ಯಕ್ತವಾಗಿತ್ತು. ಅಂತಹ ಸಂದರ್ಭದಲ್ಲಿ ಮೋದಿ ಜನರ ಜೊತೆ ನೇರವಾಗಿ ಮಾತನಾಡುತ್ತಾರೆ. ರೇಡಿಯೋದ ‘ಮನ್ ಕೀ ಬಾತ್’ ಅದಕ್ಕೆ ಉದಾಹರಣೆ. ಕಪ್ಪುಹಣವನ್ನು ಆರ್ಥಿಕತೆಯಿಂದ ದೂರ ಮಾಡಲು ಇದು ತಾತ್ಕಾಲಿಕವಾಗಿ ಅನುಭವಿಸಬೇಕಾದ ನೋವು ಎಂದರು. ಉಗ್ರರಿಗೆ ಪಾಕಿಸ್ತಾನದ ಕಡೆಯಿಂದ ಕಳ್ಳ ನೋಟು ಬರುವುದನ್ನು ತಡೆಯಬೇಕಾಗಿದೆ ಎಂದು ನೆನಪಿಸಿದರು. ಆ ಹೊತ್ತಿನಲ್ಲಿ ಜನರ ಕಷ್ಟವನ್ನು ದೂರಮಾಡಲು ಪಕ್ಷದ ಸಂಘಟನಾ ಜಾಲವನ್ನು ಬಳಸಿದರು. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಬೇಕಾದ ನೆರವು ನೀಡಿದರು. ವಿವಿಧ ಮಾಧ್ಯಮಗಳ ಮೂಲಕ ಜನತೆಗೆ ಅಗತ್ಯವಾದ ಮಾಹಿತಿ, ಸೂಚನೆಗಳನ್ನು ಕೊಡುತ್ತಾ ಬಂದರು. ವಿಷಯವನ್ನು ನಿರ್ವಹಿಸಿದ ಕ್ರಮದಿಂದ ಚರ್ಚೆ ಎಲ್ಲಿಗೆ ಬಂತೆಂದರೆ ‘ನೀವು ಕಪ್ಪು ಹಣಕ್ಕೆ ಪರವಾ ವಿರುದ್ಧವಾ?’ ಎಂಬಲ್ಲಿಗೆ ಬಂದು ನಿಂತಿತು; ಇದು ಸಾಮಾನ್ಯ ಜನಕ್ಕೆ ನಾಟುವಂತಹ ವಿಷಯ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಆಗ ಆರ್ಜೆಡಿಯ ಲಾಲೂಪ್ರಸಾದ್ ಯಾದವ್ ಜೊತೆ ಮೈತ್ರಿಯಲ್ಲಿದ್ದರೂ ಕೂಡ ನೋಟ್ ನಿಷೇಧಕ್ಕೆ ತತ್ಕ್ಷಣ ಬೆಂಬಲ ಪ್ರಕಟಿಸಿದರು. ಅದು ರಾಜಕೀಯಕ್ಕಿಂತ ಆರ್ಥಿಕ ವಿಷಯ ಎಂದವರು ಸಮರ್ಥಿಸಿಕೊಂಡರು.
2017ರ ಫೆಬ್ರುವರಿ-ಮಾರ್ಚ್ ವಿಧಾನಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಬಹುದೊಡ್ಡ ಸಾಧನೆಯನ್ನೇ ಮಾಡಿತು. 2012ರ ಚುನಾವಣೆಯಲ್ಲಿ ಅದು ಕಾಂಗ್ರೆಸ್ನ ಅನಂತರ ನಾಲ್ಕನೇ ಸ್ಥಾನದಲ್ಲಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ 80ರಲ್ಲಿ 73 ಸ್ಥಾನಗಳನ್ನು ಗೆದ್ದಿದ್ದರೂ ಕೂಡ ಅಸೆಂಬ್ಲಿ ಚುನಾವಣೆಯಲ್ಲಿ ಅಂತಹ ಸಾಧನೆ ಸಾಧ್ಯವೆ ಎಂಬ ಸಂದೇಹ ಇದ್ದೇ ಇತ್ತು. ಆಗ ಉತ್ತರಾಖಂಡ, ಪಂಜಾಬ್ ಮತ್ತು ಮಣಿಪುರಗಳಲ್ಲಿ ಕೂಡ ಚುನಾವಣೆ ಇತ್ತು. ಏನಿದ್ದರೂ ಉತ್ತರಪ್ರದೇಶವು ತುಂಬ ಮುಖ್ಯ ಆಗಿತ್ತು.
ಉತ್ತರಪ್ರದೇಶ – 2017ರ ಚುನಾವಣೆ
ನೋಟುಗಳ ನಿಷೇಧದ ಕಾರಣದಿಂದ ಉತ್ತರಪ್ರದೇಶ ಚುನಾವಣೆಯಲ್ಲಿ ಭ್ರಷ್ಟಾಚಾರವೇ ಮುಖ್ಯ ವಿಷಯವಾಯಿತು. ಕಾನೂನು-ಸುವ್ಯವಸ್ಥೆಯ ಸಮಸ್ಯೆ, ಗೂಂಡಾಗಿರಿ, ಪ್ರಾದೇಶಿಕ ಸತ್ರಪರಿಂದ ಹಣ (ಹಫ್ತಾ) ಸಂಗ್ರಹ ಮುಂತಾದ ಕಾರಣಗಳಿಂದ ಅದು ಕುಖ್ಯಾತ ರಾಜ್ಯವಾಗಿತ್ತು. ಆಗ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಎರಡಕ್ಕೂ ಭ್ರಷ್ಟಾಚಾರದ ಕಳಂಕವಿತ್ತು. ನೋಟು ನಿಷೇಧದಿಂದ ಕಪ್ಪುಹಣದ ಪಿಡುಗು ತೊಲಗುತ್ತದೆಂದು ಜನ ಭಾವಿಸಿದಾಗ ಪ್ರಾದೇಶಿಕ ಪಕ್ಷಗಳು ಹಿಂದೆ ಬಿದ್ದವು. ಭ್ರಷ್ಟಾಚಾರದ ನಿರ್ಮೂಲನದೊಂದಿಗೆ ರಾಜಕೀಯದ ಅಪರಾಧೀಕರಣಕ್ಕೂ ತಡೆಹಾಕುವುದಾಗಿ ಬಿಜೆಪಿ ಭರವಸೆ ನೀಡಿತು. ಉತ್ತರಪ್ರದೇಶದ ರಾಜಕೀಯದಲ್ಲಿ ಜಾತಿವ್ಯವಸ್ಥೆಗಿದ್ದ ಮಹತ್ತ್ವವನ್ನು ತಗ್ಗಿಸಿದ್ದು ಕೂಡ ಬಿಜೆಪಿಯ ಸಾಧನೆಯಾಗಿ ಮೂಡಿಬಂತು.
2015ರ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ ಸೋಲುಕಂಡಿತು. ಉತ್ತರಪ್ರದೇಶದಲ್ಲೂ ಹಾಗೇ ಆಗಬಹುದೆನ್ನುವ ಸಮೀಕ್ಷೆಗಳಿದ್ದವು. 1991ರ ಬಳಿಕ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಬಹುಮತ ದೊರೆತದ್ದಿಲ್ಲ. ಮೋದಿ ಅವರ ವೈಯಕ್ತಿಕ ಆಕರ್ಷಣೆಯಿಂದ ಅಲ್ಲಿ ಬಿಜೆಪಿಗೆ ಲಾಭವಾಯಿತು. ಮಹತ್ತ್ವದ ಒಂದು ಅಂಶವೆಂದರೆ, ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದರು. ಅಖಿಲೇಶ್ ಯಾದವ್ ಅವರು ತಮ್ಮ ರಾಜಕೀಯದಲ್ಲಿ ಯಾದವ್-ಮುಸ್ಲಿಂ ಜೋಡಿಯ ಮೇಲೆ ನಂಬಿಕೆ ಇಟ್ಟಿದ್ದರು. ಮಾಯಾವತಿ ಅವರ ಬೆಂಬಲವು ಪರಿಶಿಷ್ಟರ ಜಾಟವ ಸಮುದಾಯಕ್ಕೆ ಸೀಮಿತವಾಗಿತ್ತು. ಹೊಸ ಸನ್ನಿವೇಶದಲ್ಲಾದ ಬದಲಾವಣೆಯೆಂದರೆ, ಬಿಜೆಪಿಗೆ ಸಿಗುವ ಬೆಂಬಲವು ವಿಸ್ತರಣೆಯಾಗಿ ಯಾದವೇತರ ಓಬಿಸಿ (ಇತರ ಹಿಂದುಳಿದ ಜಾತಿಗಳು) ಮತ್ತು ಜಾಟವರಿಗೆ ಹೊರತಾದ ಪರಿಶಿಷ್ಟ ಜಾತಿಗಳನ್ನು ಒಳಗೊಂಡಿತ್ತು; ಮೇಲ್ಜಾತಿಗಳ ಬೆಂಬಲ ಬಿಜೆಪಿಗೆ ಹಿಂದಿನಂತೆಯೇ ಮುಂದುವರಿದಿತ್ತು. ಇದು ಉತ್ತರಪ್ರದೇಶದ ರಾಜಕೀಯದಲ್ಲಿ ದೊಡ್ಡ ಸಾಧನೆ ಎನಿಸಿತು. ಹಿಂದೆ 1991ರ ಹೊತ್ತಿಗೆ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಇದ್ದಾಗ ಕೂಡ ಪಕ್ಷ ಮೇಲ್ಜಾತಿ ಮತ್ತು ಓಬಿಸಿಯ ಕೆಲವು ಭಾಗಗಳಿಗೆ ಸೀಮಿತವಾಗಿತ್ತು. ಆಗ ಕಲ್ಯಾಣಸಿಂಗ್ ಅವರ ನಾಯಕತ್ವದಲ್ಲಿ ಬಿಜೆಪಿ ಜಯಗಳಿಸಿತ್ತು.
2017ರ ಚುನಾವಣೆಯಲ್ಲಿ ಬೃಹತ್ ರಾಜ್ಯ ಉತ್ತರಪ್ರದೇಶದ ಒಟ್ಟು 403 ಸ್ಥಾನಗಳಲ್ಲಿ ಬಿಜೆಪಿ 325 ಸ್ಥಾನಗಳನ್ನು ಗೆದ್ದುಕೊಂಡಿತು. ಚಲಾವಣೆಯಾದ ಒಟ್ಟು ಮತದಲ್ಲಿ ಅದರ ಗಳಿಕೆ ಶೇ. 39.67ರಷ್ಟಿತ್ತು. ಉತ್ತರಪ್ರದೇಶದಲ್ಲಿ ಈ ರೀತಿ ಬಿಜೆಪಿಯ ಗರಿಷ್ಠ ಪ್ರಾಬಲ್ಯಕ್ಕೆ ಮೋದಿಯವರ ಕುಗ್ಗದ ಆಕರ್ಷಣೆ ಮತ್ತು ಪಕ್ಷದ ಅಜೇಯವಾದ ಸಾಂಸ್ಥಿಕ ಬಂಧವು ಕಾರಣವೆನಿಸಿತು.
ಮುಖ್ಯಮಂತ್ರಿ ಆಯ್ಕೆಯಲ್ಲೂ ಮೋದಿ ಅವರ ನಾಯಕತ್ವ ದೇಶದ ಜನತೆಗೆ ಇನ್ನೊಂದು ಆಶ್ಚರ್ಯವನ್ನು ನೀಡಿತು; ಗೋರಖನಾಥ ಪೀಠದ ಮುಖ್ಯಸ್ಥ, ಮಹಂತ ಯೋಗಿ ಆದಿತ್ಯನಾಥ ಅವರನ್ನು ಈ ಬೃಹತ್ ರಾಜ್ಯದ ಮುಖ್ಯಮಂತ್ರಿಯಾಗಿ ಆರಿಸಿದರು. ಅದಕ್ಕೆ ಹಲವರು ಹುಬ್ಬೇರಿಸಿದರು. ವಿದ್ಯಾವಂತರು, ಪ್ರತಿಪಕ್ಷಗಳು (ಸೆಕ್ಯುಲರಿಸಂ ಭಕ್ತರು) ಕೂಡ ಯೋಗಿ ಅವರ ಆಯ್ಕೆಯನ್ನು ವಿರೋಧಿಸಿದರು. ಅದನ್ನೆಲ್ಲ ಬದಿಗೊತ್ತಿ ಮಾರ್ಚ್ 19, 2017ರಂದು ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯಾಗಿ ಆರಿಸಿದರು. ಉತ್ತರಾಖಂಡ, ಮಣಿಪುರಗಳಲ್ಲಿ ಬಿಜೆಪಿಗೆ ಸುಲಭ ಜಯ ದೊರೆಯಿತು. ಪಂಜಾಬ್ನಲ್ಲಿ ಕಾಂಗ್ರೆಸ್ನಿಂದ ಸೋಲಾಯಿತು.
2014-2019ರ ನಡುವೆ (ಎರಡು ಲೋಕಸಭಾ ಚುನಾವಣೆಗಳ ನಡುವೆ) ಉತ್ತರಪ್ರದೇಶವು ಬಿಜೆಪಿಗೆ ದೊರೆತ ಅತಿಮುಖ್ಯ ಗೆಲವಾಗಿತ್ತು. ಮೋದಿ ನೇತೃತ್ವದ ಕಾರಣ ಈ ಐದು ವರ್ಷಗಳಲ್ಲಿ ಪಕ್ಷ (ಮೋದಿ, ಅಮಿತ್ ಶಾ ಜೋಡಿ) ನಾಯಕರಿಲ್ಲದ ಕಡೆ ಅಲಕ್ಷಿತರಾದ ಎರಡನೇ ಸಾಲಿನ ನಾಯಕರನ್ನು ಒಲಿಸಿಕೊಂಡು ಬೆಳೆಸಿದರು. ಹೀಗೆ ಪಕ್ಷವು ಮೊದಲಬಾರಿಗೆ ಅಸ್ಸಾಂ, ತ್ರಿಪುರಾ ಮತ್ತು ಕಾಶ್ಮೀರದಲ್ಲೂ (ಪಿಡಿಪಿ ಜೊತೆಗಿನ ಮೈತ್ರಿಯಾದರೂ) ಅಧಿಕಾರಕ್ಕೆ ಬಂತು. ಆದರೂ ಕೆಲವು ರಾಜ್ಯಗಳಲ್ಲಿ ಬೆಳೆಯಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಅದರಲ್ಲಿ ಒಡಿಶಾ ಒಂದು.
* * *
ಜಾರುವ ನೆಲ ಬಿಹಾರ
ಬಿಜೆಪಿಯ ಬೆಳವಣಿಗೆ ವಿಷಯದಲ್ಲಿ ಬಿಹಾರದ ಸ್ಥಿತಿ ಕುತೂಹಲಕರ. ಅದು ಬಿಜೆಪಿಗೆ ಯಾವಾಗಲೂ ಕಾಲು ಜಾರುವ ಸ್ಥಳವಾಗಿರುವುದು ಕಾಣಿಸುವುದು. ಅದಕ್ಕೆ ಕಾರಣಗಳು ಹಲವು. ರಾಜ್ಯದ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿ ಸಮಾಜವಾದಿ ಶಕ್ತಿಗಳಿಗೊಂದು ಸ್ಥಾನವಿದೆ (ಅದರಲ್ಲಿ ಮಾರ್ಕ್ಸ್ವಾದಿಗಳೂ ಇದ್ದರು); ಕಮ್ಯೂನಿಸ್ಟರು ವಿರೋಧ ಪಕ್ಷದಲ್ಲಿದ್ದರು. ಕಾಂಗ್ರೆಸ್ ಪ್ರಧಾನ ಪಕ್ಷವಾಗಿತ್ತು. ಬಿಜೆಪಿ ಅಥವಾ ಜನಸಂಘ ಯಾವಾಗಲೂ ಅಂಚಿನಲ್ಲಿದ್ದವು. ಮಂಡಲ್ ವರದಿ ಜಾರಿಯ ವಿವಾದದ ಅನಂತರದ ಕಾಲದಲ್ಲಿ ಲಾಲೂಪ್ರಸಾದ್ ಯಾದವ್ ಬೆಳೆದು ಜಾತಿಯ ನೆಲೆಯಲ್ಲಿ ಗಟ್ಟಿಯಾದರು. ಮುಖ್ಯವಾಗಿ ಓಬಿಸಿ ಬೆಂಬಲ ಪಡೆದು, ಅದರಿಂದ ಲಾಲೂಪ್ರಸಾದ್ ಯಾದವ್ ಸೆಕ್ಯುಲರ್ ಓಬಿಸಿ ನಾಯಕರೆಂದು ತನ್ನ ಪ್ರತಿಮೆಯನ್ನು ಬೆಳೆಸಿಕೊಂಡರು. ಜೊತೆಗೆ ಮುಸ್ಲಿಂ ಪರ ಒಲವು ಕೂಡ ಇತ್ತು. 1990ರಲ್ಲಿ ರಾಜ್ಯಕ್ಕೆ ಆಡ್ವಾಣಿ ಅವರ (ಅಯೋಧ್ಯೆ) ರಥಯಾತ್ರೆಯು ಬಂದಾಗ ಲಾಲೂಪ್ರಸಾದ್ ಅದನ್ನು ತಡೆದು ಆಡ್ವಾಣಿ ಅವರನ್ನು ಬಂಧಿಸಿದರು. ಇದರ ಜೊತೆ ಆತನ ಮ್ಯಾನರಿಸಂಗಳು, ಡಯಲಾಗ್ಗಳು ಜನಪ್ರಿಯವಾಗಿ ಒಟ್ಟಾರೆ ಆತ ಒಬ್ಬ ಐಕಾನ್ ಸೆಕ್ಯುಲರ್ ನಾಯಕ ಆದರು.
1995ರಲ್ಲಿ ಜಾರ್ಜ್ ಫರ್ನಾಂಡೆಸ್ ಮತ್ತು ನಿತೀಶ್ಕುಮಾರ್ ಲಾಲೂಪ್ರಸಾದ್ ಯಾದವ್ ಅವರಿಂದ ಸಿಡಿದು ದೂರವಾದರು. ಆಗ ಬಿಹಾರದಲ್ಲಿ ಲಾಲೂಪ್ರಸಾದ್ ಅವರ ರಾಜಕೀಯ ಬ್ರಾಂಡ್ಗೆ ಒಂದು ಹೊಸ ಪರ್ಯಾಯ ಕಂಡುಬಂತು. ಆದರೆ ಬಿಹಾರದ ಮೇಲೆ ಲಾಲೂಪ್ರಸಾದ್ ಅವರ ಪ್ರಾಬಲ್ಯ 2005ರ ವರೆಗೆ ಮುಂದುವರಿಯಿತು. 1998 ಮತ್ತು 1999ರ ಲೋಕಸಭಾ ಚುನಾವಣೆಯ ವೇಳೆ ಜಾರ್ಜ್ ಮತ್ತು ನಿತೀಶ್ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡರು; 2000ದ ವಿಧಾನಸಭಾ ಚುನಾವಣೆಯಲ್ಲಿ ಅದು ಮುಂದುವರಿಯಿತು. ಈ ನಡುವೆ ಲಾಲೂಪ್ರಸಾದ್ ಬಹುಕೋಟಿಯ ಮೇವು ಹಗರಣದಲ್ಲಿ ಸಿಕ್ಕಿಬಿದ್ದು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಆಗ ಅವರು ಪತ್ನಿ ರಾಬ್ರಿದೇವಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಿದರು; ಮತ್ತೆ ಲಾಲೂಪ್ರಸಾದ್ ಬಿಹಾರದಲ್ಲಿ ದುರ್ಬಲರಾದರು; ಕೇಂದ್ರಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿ ಮಿಂಚಿದರಾದರೂ ರಾಜ್ಯದ ಅಧಿಕಾರವನ್ನು ನಿತೀಶ್ಕುಮಾರ್ ಅವರಿಗೆ ಬಿಟ್ಟುಕೊಡಬೇಕಾಯಿತು.
ಎನ್ಡಿಎ ನಾಯಕ ನಿತೀಶ್
2000ದಲ್ಲೊಮ್ಮೆ ನಿತೀಶ್ಕುಮಾರ್ ಬಿಹಾರದ ಮುಖ್ಯಮಂತ್ರಿಯಾದರು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದೆ ಅವರು ರಾಜೀನಾಮೆ ಕೊಡಬೇಕಾಯಿತು. ರಾಬ್ರಿದೇವಿ ಮತ್ತೆ ಮುಖ್ಯಮಂತ್ರಿಯಾಗಿ 2005ರ ವರೆಗೆ ಮುಂದುವರಿದರು. 2005ರ ಚುನಾವಣೆಯಲ್ಲಿ ಯಾರಿಗೂ ಬಹುಮತ ದೊರೆಯಲಿಲ್ಲ. ನಿತೀಶ್ಕುಮಾರ್ ಎನ್ಡಿಎ ಭಾಗವಾಗಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು; ಮತ್ತು ಬಿಹಾರದಲ್ಲಿ ನಿತೀಶ್ಕುಮಾರ್ ಎನ್ಡಿಎಯ ಪ್ರಶ್ನಾತೀತ ನಾಯಕರಾದರು.
ಆದರೆ ನರೇಂದ್ರ ಮೋದಿ ಅವರ ಜೊತೆಗಿನ ನಿತೀಶ್ಕುಮಾರ್ ಅವರ ಸಂಬಂಧ ಏಳುಬೀಳುಗಳನ್ನು ಕಂಡಿತು. ಅದರಿಂದ ರಾಷ್ಟ್ರೀಯ ರಾಜಕೀಯದ ಮೇಲೆ ಪರಿಣಾಮ ಇರುತ್ತಿತ್ತು. ಖಾಸಗಿಯಾಗಿ ಇಬ್ಬರೂ ಒಳ್ಳೆಯ ಸ್ನೇಹಿತರು; ಆದರೆ ಸಾರ್ವಜನಿಕವಾಗಿ ಪರಸ್ಪರ ವಿರೋಧಿಗಳು. ಮೋದಿ ಅವರ ವಿರೋಧಿ ಎನ್ನುವ ರೀತಿಯಲ್ಲಿ ನಿತೀಶ್ ತಮ್ಮ ಇಮೇಜನ್ನು ಬೆಳೆಸಿಕೊಂಡದ್ದು ಕಾಣಿಸುತ್ತದೆ; ಕಾರಣ ರಾಜ್ಯದಲ್ಲಿ ಮುಸ್ಲಿಮರ ವೋಟು ಗಳಿಸುವ ಹಂಬಲ. ಆರ್ಜೆಡಿಯಿಂದ ಲಾಲೂಪ್ರಸಾದ್ ಮುಸ್ಲಿಮರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಲೇ ಇದ್ದಾರೆ. ಅದಕ್ಕೆ ಮೋದಿಯವರನ್ನು ಟೀಕಿಸಿದರೆ ಅನುಕೂಲ ಎಂದವರು ಭಾವಿಸಿದ್ದಾರೆ. ನಿತೀಶ್ಕುಮಾರ್ ಅವರದ್ದು ಎನ್ಡಿಎಯಲ್ಲಿದ್ದರೂ ತಾನು ಮುಸ್ಲಿಂ ಪರ ಎಂದು ತೋರಿಸಿಕೊಳ್ಳುವ ಪ್ರಯತ್ನ.
ಅದಕ್ಕಾಗಿ ಅವರು ಬಿಹಾರಕ್ಕೆ ನರೇಂದ್ರ ಮೋದಿ ಪ್ರಚಾರಕ್ಕೆ ಬರಬಾರದೆಂದು ರಾಜ್ಯ ಬಿಜೆಪಿಯನ್ನು ಒತ್ತಾಯಿಸಿದರು. 2005 ಮತ್ತು 2010ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ದೇಶಾದ್ಯಂತ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದರು. 2010ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಐದನೇ ನಾಲ್ಕರಷ್ಟು ಬಹುಮತ ಗಳಿಸಿದರು. ಅದರಿಂದ ಅವರಿಗೆ ರಾಷ್ಟಿçÃಯ ರಾಜಕೀಯದ ಆಶೆ ಶುರುವಾಯಿತು. ಮೋದಿ ವಿರುದ್ಧ ಟೀಕೆ ತುಂಬಾ ಹೆಚ್ಚಾಗಿ 2013ರಲ್ಲಿ ಎನ್ಡಿಎಯಿಂದ ಹೊರಗೆಹೋದರು. ಮೋದಿ ಅವರು ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಪ್ರಕಟಿಸಿದಾಗ ಅದಕ್ಕೆ ನಿತೀಶ್ ಅವರ ವಿರೋಧವಿತ್ತು. ಆ ಚುನಾವಣೆಯಲ್ಲಿ ಬಿಹಾರದಲ್ಲಿ ಅವರ ಪಕ್ಷ (ಜೆಡಿಯು-ಸಂಯುಕ್ತ ಜನತಾದಳ) ಕುಸಿದುಹೋಯಿತು. ಮೋದಿ ಅಲೆಯ ಎದುರು ಅವರ ಪಕ್ಷಕ್ಕೆ ರಾಜ್ಯದ 40 ಸ್ಥಾನಗಳಲ್ಲಿ ಎರಡು ಮಾತ್ರ ದಕ್ಕಿದವು. ಸೋಲಿನ ಹೊಣೆ ಹೊತ್ತು ನಿತೀಶ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ, ಪಕ್ಷದವರೇ ಆದ ಜೀತನ್ರಾಮ್ ಮಾಂಝಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದರು.
ಮೋದಿ ಅವರಿಗೆ ವಿರೋಧ
ಒಬ್ಬ ಚಾಣಾಕ್ಷ ರಾಜಕಾರಣಿಯಾದ ನಿತೀಶ್ಕುಮಾರ್ ಅವರಿಗೆ ತನ್ನ ರಾಜಕೀಯ ತಪ್ಪು ಬಹುಬೇಗ ತಿಳಿಯಿತು. ಬಿಹಾರದಲ್ಲಿ ಏಕಾಂಗಿಯಾಗಿ (ಒಂದೇ ಪಕ್ಷ) ಚುನಾವಣೆಯನ್ನು ಎದುರಿಸಿದರೆ ಮೂಲೆಗೆ ಸೇರಬೇಕಾಗುತ್ತದೆಂದು ಅನುಭವಸಿದ್ಧವಾಯಿತು. ಲಾಲೂಪ್ರಸಾದ್ ರಾಜ್ಯ ರಾಜಕೀಯದ ಅಂಚಿನಲ್ಲಿದ್ದರೂ ಕೂಡ ಯಾದವರು ಮತ್ತು ಮುಸ್ಲಿಮರು ಅವರಿಗೇ ಬೆಂಬಲ ನೀಡಿದರು. ಆ ಚುನಾವಣೆಯಲ್ಲಿ (2015) ನಿತೀಶ್ ತನ್ನ ಓಬಿಸಿ ಬೆಂಬಲವನ್ನು ಗಟ್ಟಿ ಮಾಡಿಕೊಳ್ಳಲು ಲಾಲೂಪ್ರಸಾದ್ ಜೊತೆ ಮೈತ್ರಿ ಮಾಡಿಕೊಂಡರು; ಮೋದಿ ಅಲೆಯನ್ನು ತಡೆಯುವುದು ಕೂಡ ಅವರ ಉದ್ದೇಶವಾಗಿತ್ತು. ಬಿಜೆಪಿಯಿಂದ ಮೀಸಲಾತಿಗೆ ಧಕ್ಕೆಯಾಗುತ್ತದೆ ಎಂಬ ಅಪಪ್ರಚಾರ ನಡೆಯಿತು. ಒಂದಷ್ಟು ಜನ ತಮ್ಮ ಪ್ರಶಸ್ತಿಗಳನ್ನು ವಾಪಸು ಮಾಡಿದರು. ಒಟ್ಟಿನಲ್ಲಿ ಆ ಚುನಾವಣೆಯಲ್ಲಿ ನಿತೀಶ್ ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಆರ್ಜೆಡಿ ಜೊತೆ ಸೇರಿ ಮೈತ್ರಿ ಸರ್ಕಾರವನ್ನು ರಚಿಸಿದರು. ಆದರೆ ಆ ಸರ್ಕಾರ ಗಟ್ಟಿಯಾಗಿರಲಿಲ್ಲ. ಲಾಲೂಪ್ರಸಾದ್ ಕುಟುಂಬದವರ ಪೂರ್ತಿ ಸಹಕಾರ ಸಿಗಲಿಲ್ಲ. ಆ ಸಹವಾಸ ನಿತೀಶ್ಕುಮಾರ್ ಅವರಿಗೆ ಹಿತವೆನಿಸಲಿಲ್ಲ.
ಆರ್ಜೆಡಿ ಮೈತ್ರಿಯ ಕಷ್ಟ
ಮೈತ್ರಿ ಪಕ್ಷದ ಒಬ್ಬ ವ್ಯಕ್ತಿಯು ಆರ್ಥಿಕ ಹಗರಣದಿಂದ ಹೊರಬರಲು ಬಿಜೆಪಿಯ ನೆರವು ಕೇಳಿದ. ಅದು ನಿತೀಶ್ ಅವರಿಗೆ ತಿಳಿಯಿತು. ನಾಲ್ಕು ಸಲದ ಲೋಕಸಭಾ ಸದಸ್ಯ, ಭೀಕರ ಡಾನ್ ಮೊಹಮದ್ ಶಹಾಬುದ್ದೀನ್ನನ್ನು 2016ರ ಸೆಪ್ಟೆಂಬರ್ನಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಯಿತು; ಅದರಿಂದ ನಿತೀಶ್ ಅವರಿಗೆ ಕಷ್ಟವಾಯಿತು. 200 ಕಾರುಗಳ ಮೆರವಣಿಗೆಯಲ್ಲಿ ಕುಖ್ಯಾತ ಶಹಾಬುದ್ದೀನ್ನನ್ನು ಕರೆದೊಯ್ಯಲಾಯಿತು. ನಿತೀಶ್ ಸರ್ಕಾರಕ್ಕೆ ಅವಮಾನವಾಗುವಂತೆ ಆತ ತಾನು ಲಾಲೂಪ್ರಸಾದ್ ನಿಷ್ಠನೆಂದು ಹೇಳಿಕೊಂಡ. ಮುಂದೆ ನಿತೀಶ್ ಮಿತ್ರ ಪಕ್ಷದಿಂದ (ಆರ್ಜೆಡಿ) ಇನ್ನಷ್ಟು ದೂರವಾದರು. ಅದೇ ಹೊತ್ತಿಗೆ ಸಿಬಿಐ ಲಾಲೂಪ್ರಸಾದ್ ಮತ್ತು ಪುತ್ರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮನೆಯ ಮೇಲೆ ದಾಳಿ ನಡೆಸಿತು. ಪಾಟ್ನಾ ಮತ್ತು ರಾಂಚಿಯ ಭೂಹಗರಣದ ಸಂಬಂಧ ಆ ದಾಳಿ ನಡೆದಿತ್ತು.
ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಯಾವುದೇ ಹೊಸ ರಾಜಕೀಯ ಪರಿಸ್ಥಿತಿಯನ್ನು ತಮಗೆ ಅನುಕೂಲವಾಗುವಂತೆ ಪರಿವರ್ತಿಸುವ ಸಾಮರ್ಥ್ಯ ಮೋದಿ ಅವರಲ್ಲಿದೆ. ಮತದಾರರಲ್ಲಿ ನಿತೀಶ್ಕುಮಾರ್ ಬಗ್ಗೆ ಇನ್ನೂ ಗೌರವ ಇದೆ ಎಂಬುದನ್ನು ಗಮನಿಸಿದ ಅವರು, ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಜೆಡಿಯು ಮೈತ್ರಿಗೆ ಒಲವು ತೋರಿದರು. ಆರ್ಜೆಡಿ ಜೊತೆಗಿನ ಸಂಬಂಧದಿಂದ ಹೊರಗೆ ಬಂದರೆ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಿ ಎಂದು ಪಕ್ಷದ ರಾಜ್ಯ ನಾಯಕರಿಗೆ ಸಲಹೆ ನೀಡಿದರು. ಲಾಲೂಪ್ರಸಾದ್ ಸಂಬಂಧ ಕಡಿದುಕೊಂಡ ನಿತೀಶ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು (ಜುಲೈ 26, 2017). ಮೋದಿ ಅವರ ಸೂಚನೆ ಮೇರೆಗೆ 3 ಗಂಟೆಯೊಳಗೆ ನಿತೀಶ್ ಜೊತೆ ಬಿಜೆಪಿಯ ಮೈತ್ರಿ ಏರ್ಪಟ್ಟಿತು. ಮರುದಿನ ನಿತೀಶ್ಕುಮಾರ್ ಮತ್ತೆ ಬಿಹಾರದ ಮುಖ್ಯಮಂತ್ರಿಯಾದರು; ಬಿಜೆಪಿಯ ಸುಶೀಲ್ಕುಮಾರ್ ಮೋದಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಹೀಗೆ ಕೇವಲ 14 ಗಂಟೆಯೊಳಗೆ ಬಿಜೆಪಿಗೆ ದೇಶದ ಒಂದು ಮುಖ್ಯ ರಾಜ್ಯವು ಸಿಕ್ಕಿದಂತಾಯಿತು. ಜೆಡಿಯು-ಆರ್ಜೆಡಿಗಳ ನಡುವೆ ಹೊಂದಾಣಿಕೆ ಇಲ್ಲದಿದ್ದದ್ದೇ ಅದಕ್ಕೆ ಕಾರಣ ಎಂಬುದು ಸ್ಪಷ್ಟವಾಯಿತು.
ಒಣ ಪ್ರತಿಷ್ಠೆ ಇಲ್ಲ
ಇಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಪ್ರಧಾನಿ ಮೋದಿ ಅದನ್ನೊಂದು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಳ್ಳಲಿಲ್ಲ. ನಿತೀಶ್ಕುಮಾರ್ ಹಿಂದೆ ತೋರಿದ್ದ ದ್ವೇಷದ ಕಾರಣದಿಂದ ತಪ್ಪು ನಿರ್ಧಾರವನ್ನು ಕೈಗೊಳ್ಳಲೂ ಇಲ್ಲ. ಪರಿಣಾಮವೆಂದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಕೂಟಕ್ಕೆ ರಾಜ್ಯದ 40 ಸ್ಥಾನಗಳಲ್ಲಿ 39 ದೊರಕಿತು. ಇದಕ್ಕಿಂತ ಇನ್ನೇನು ಬೇಕು? ಇದು ಮೋದಿ ಅವರ ಮುತ್ಸದ್ದಿತನದ ಫಲವಲ್ಲವೆ?
ಅಂತಹ ಫಲಿತಾಂಶಕ್ಕೆ ಪ್ರಧಾನಿ ಮೋದಿ ಅವರ ನಾಯಕತ್ವದ ವರ್ಚಸ್ಸು ಬೆಳೆದದ್ದು ಕೂಡ ಕಾರಣ. ಐದು ವರ್ಷಗಳ ಅವರ ಆಡಳಿತವು ಪಕ್ಷದ ಘನತೆ-ಗೌರವಗಳನ್ನು ತುಂಬ ಹೆಚ್ಚಿಸಿತ್ತು. 2019ರ ಲೋಕಸಭಾ ಚುನಾವಣೆಯನ್ನು ಎದುರಿಸುವಾಗ ಮೊದಲ ಬಾರಿಗೆ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ ಅವರಂತಹ ದೊಡ್ಡ ನಾಯಕರಿರಲಿಲ್ಲ. ಪ್ರಧಾನಿ ಮೋದಿ, ಅವರ ಯುವ ಮಂತ್ರಿಗಳು, ಪಕ್ಷದ ಅಧ್ಯಕ್ಷ ಅಮಿತ್ ಶಾ ರೂಪಿಸಿದ ಯುವ ನಾಯಕರು ಮುಂಚೂಣಿಯಲ್ಲಿದ್ದರು. ಐದು ವರ್ಷಗಳ ಅಧಿಕಾರವು ಪಕ್ಷಕ್ಕೆ ದೇಶಾದ್ಯಂತ ಅನುಕೂಲಕರ ವಾತಾವರಣವನ್ನು ನಿರ್ಮಿಸಿತ್ತು. ಬಿಜೆಪಿ ಸಾಂಸ್ಥಿಕವಾಗಿ ಬಲಶಾಲಿಯಾಗಿತ್ತು. ರಾಜ್ಯಮಟ್ಟದ ವಿಜಯಗಳಿಂದಾಗಿ ಪಕ್ಷದ ಸದಸ್ಯರ ಸಂಖ್ಯೆ ಬೆಳೆಯಿತು. ದೇಶದ ಪೂರ್ವ, ಈಶಾನ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಬಿಜೆಪಿ ಬೆಳವಣಿಗೆಗೆ ಇದ್ದ ಅಡಚಣೆಯನ್ನು ಸಾಕಷ್ಟು ನಿವಾರಿಸಲಾಗಿತ್ತು. ಪಕ್ಷದ ಸಾಮಾಜಿಕ ನೆಲೆ (base) ವಿಸ್ತರಿಸಿತ್ತು. ಮೋದಿ ಅವರ ಜನಪ್ರಿಯತೆ ಮತ್ತು ಕಾರ್ಯತಂತ್ರಗಳ ಪರಿಣಾಮವಾಗಿ ಪಕ್ಷ 1990ಕ್ಕೆ ಮುನ್ನ ಕಾಂಗ್ರೆಸ್ಗೆ ಇದ್ದಂತಹ ಮೊದಲ ಸ್ಥಾನಕ್ಕೆ (ಲೀಡ್ ಪೊಸಿಶನ್) ಬಂದಿತ್ತು.
ಪಕ್ಷದ ಸಿದ್ಧಾಂತಕ್ಕೆ ಮೂಲವಾದ ಆರೆಸ್ಸೆಸ್ ಜೊತೆಗೆ ಉತ್ತಮ ಸಂಬಂಧವನ್ನು ಇರಿಸಿಕೊಂಡಿರುವುದು ಮೋದಿ ಅವರ ಹೆಚ್ಚುಗಾರಿಕೆ ಎನ್ನಲಡ್ಡಿಯಿಲ್ಲ. ಈ ವಿಷಯದಲ್ಲಿ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದ ವಾಜಪೇಯಿ ಅವರು ಟೀಕೆಗೊಳಗಾಗಿದ್ದರು. ಸರ್ಕಾರವು ಸಿದ್ಧಾಂತದಿಂದ ದೂರ ಸರಿಯುತ್ತಿದೆ ಎಂದು ಆರೆಸ್ಸೆಸ್ ಮತ್ತು ಪರಿವಾರದವರಿಂದ ಟೀಕೆಗಳು ಬಂದವು. ಅಂಥದೇನೂ ಇರದಂತೆ ತಡೆದದ್ದು ಮೋದಿ ಅವರ ಸಾಮರ್ಥ್ಯ ಎನ್ನಲಡ್ಡಿಯಿಲ್ಲ. ಅದಕ್ಕೆ ಮೋದಿ ಅವರ ವ್ಯಕ್ತಿತ್ವ ಮತ್ತು ಬಲಿಷ್ಠ ರಾಷ್ಟ್ರೀಯತೆಗೆ ಸಂಬಂಧಿಸಿದ ಎಲ್ಲವನ್ನೂ ಗಮನಿಸುತ್ತ ಅದನ್ನು ತಪ್ಪದಂತೆ ಅವರು ನೋಡಿಕೊಳ್ಳುತ್ತಿರುವುದು ಕಾರಣ ಎನ್ನಬಹುದು.
* * *
ಪುಲ್ವಾಮ ಘಟನೆ – ಪಾಕ್ಗೆ ಪಾಠ
ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ಫೆಬ್ರುವರಿ 14, 2019ರಂದು ಸಿಆರ್ಪಿಎಫ್ ವಾಹನದ ಮೇಲೆ ದಾಳಿ ನಡೆಸಿ 40 ಜನ ಯೋಧರನ್ನು ಕೊಂದರು. ಇಡೀ ದೇಶಕ್ಕೆ ಆಘಾತ ನೀಡಿದ ಘಟನೆ ಅದಾಗಿತ್ತು. ಕೇಂದ್ರಸರ್ಕಾರ ಪಾಕಿಸ್ತಾನದ ಒಳಗಿದ್ದ ಉಗ್ರ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿ, ನೂರಾರು ಉಗ್ರರನ್ನು ಕೊಂದುಹಾಕಿತು; ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯು ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಮರ್ಮಾಘಾತವೇ ಆಯಿತು. ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿತ್ತು. ಪ್ರತಿಪಕ್ಷಗಳು ಪುಲ್ವಾಮ ಘಟನೆಗೆ ಸಂಬAಧಿಸಿ ಸರ್ಕಾರವನ್ನು ಟೀಕಿಸುವ ತಪ್ಪು ಮಾಡಿದವು. ಬಾಲಾಕೋಟ್ ದಾಳಿಗೆ ಪುರಾವೆ ಕೇಳುವ ಮೂಲಕ ಸೇನೆಯ ವಿಶ್ವಾಸಾರ್ಹತೆಯನ್ನು ಪಶ್ನಿಸಿದವು. ಇದು ಆ ಪಕ್ಷಗಳಿಗೇ ತಿರುಗೇಟಾಯಿತು. ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಮೋದಿ ಪೌರುಷವನ್ನು ತೋರಿದ್ದರು. ಪ್ರತಿಪಕ್ಷಗಳು ಮೋದಿ ಅವರನ್ನು ಟೀಕಿಸುವ ಮೂಲಕ ದೇಶದ ಭದ್ರತೆಯ ವಿಷಯದಲ್ಲಿ ಸೆಲ್ಫ್ಗೋಲ್ ಹೊಡೆದಂತಾಯಿತು. ಭಯೋತ್ಪಾದಕ ದಾಳಿ, ಗಡಿಯಲ್ಲಿ ಕದವಿರಾಮ ಉಲ್ಲಂಘನೆ, ಭಯೋತ್ಪಾದಕರಿಗೆ ನೆರವಿನಂತಹ ಕೃತ್ಯಗಳಿಂದ ನಿರಂತರ ಕಿರಿಕಿರಿ ಉಂಟುಮಾಡುತ್ತಿದ್ದ ಪಾಕಿಸ್ತಾನಕ್ಕೆ ಮೋದಿ ಸರ್ಕಾರದ ಒಂದೆರಡು ಪ್ರಹಾರಗಳು ಮರ್ಮಾಘಾತ ಉಂಟುಮಾಡಿದವು. ಇದರಿಂದ ಮೋದಿ ಅವರ ವರ್ಚಸ್ಸಿಗೆ ಮತ್ತು ಬಿಜೆಪಿಯ ಸಂಘಟನೆಗೆ ಅಪಾರವಾದ ಲಾಭವಾಯಿತು. ಇನ್ನು ಮೋದಿ ಅವರ ಉಜ್ವಲಾದಂತಹ ಜನಕಲ್ಯಾಣ ಕಾರ್ಯಕ್ರಮಗಳು ಕೂಡ ಸರ್ಕಾರ ಮತ್ತು ಆಳುವ ಪಕ್ಷಗಳಿಗೆ ಹೆಮ್ಮೆಯನ್ನು ತಂದುಕೊಟ್ಟವು.
2019ರ ಏಪ್ರಿಲ್ 11ರಿಂದ ಮೇ 19ರವರೆಗಿನ ಏಳು ಹಂತಗಳ ಚುನಾವಣೆಯಲ್ಲಿ ಯಾರು ಗೆದ್ದು ಸರ್ಕಾರ ರಚಿಸುತ್ತಾರೆಂಬುದು ಯಾರಿಗೂ ಗೊತ್ತಿರಲಿಲ್ಲ. ಸಮೀಕ್ಷೆಗಳು ಖಚಿತವಾಗಿ ಏನನ್ನೂ ಹೇಳಲು ಅಸಮರ್ಥವಾಗಿದ್ದವು. ಎನ್ಡಿಎಗೆ ಬಹುಮತ ಸಿಗಲಾರದು; ಸಿಕ್ಕಿದರೂ ತುಂಬ ತೆಳುವಾದ ಬಹುಮತ ಎಂದೆಲ್ಲ ಹೇಳುತ್ತಿದ್ದವು. ಮೇ 23ರಂದು ಫಲಿತಾಂಶ ಪ್ರಕಟವಾದಾಗ ಹಲವರಿಗೆ ಅಚ್ಚರಿ. ಬಿಜೆಪಿ 300ರ ಗಡಿ ದಾಟಿತ್ತು. ಈಗ ನರೇಂದ್ರ ಮೋದಿ ಆಯ್ದ ಒಂದು ಗುಂಪಿಗೆ ಸೇರಿದವರಾದರು. ಅವಧಿ ಪೂರ್ಣ ಮುಗಿಸಿ ಚುನಾವಣೆಯನ್ನು ಎದುರಿಸಿ ಮತ್ತೆ ಗೆದ್ದು ಬಂದವರು ಅವರಾಗಿದ್ದರು. ಕಾಂಗ್ರೆಸ್ನ ಹೊರಗೆ ಈ ರೀತಿ ಸ್ವಂತ ಬಲದಿಂದ ಗೆದ್ದು ಎರಡನೇ ಸಲ ಸರ್ಕಾರ ರಚಿಸಿದವರಲ್ಲಿ ಅವರೇ ಪ್ರಥಮ. ಐದು ವರ್ಷಗಳ ಹಿಂದಿನ ‘ಅಲೆ’ಗೆ ಭಿನ್ನವಾದ ಈ ಸಾಧನೆಗೆ ನಿರೀಕ್ಷೆ ಆಧಾರವಲ್ಲ; ಸಾಧನೆಯೇ ಆಧಾರ.
ಅಧ್ಯಕ್ಷೀಯ ಶೈಲಿ ಪ್ರಚಾರ
ಹಿಂದಿನ ಚುನಾವಣೆ ಜೊತೆಗೆ ಹೋಲಿಸಿದರೆ ಇಲ್ಲದ ಸಮಾನ ಅಂಶವೆಂದರೆ ಗೆಲವಿನ ಸೂತ್ರ-ಮೋದಿ ಇಮೇಜ್ ಆಧಾರದಲ್ಲಿ ಅಧ್ಯಕ್ಷೀಯ ಶೈಲಿಯ ಪ್ರಚಾರ. ಅದರ ಜೊತೆಗೆ ಬೂತ್ಮಟ್ಟದವರೆಗೆ ಪಕ್ಷದ ಸಂಘಟನೆ. ರಾಜ್ಯಮಟ್ಟದಲ್ಲಿ ಫಲಿತಾಂಶದ ದಾಖಲೆಯು ಮಿಶ್ರವಾಗಿದ್ದರೂ ಕೂಡ ದೀರ್ಘಕಾಲ ಪಕ್ಷಕ್ಕೆ ತಳಮಟ್ಟದಲ್ಲಿ ಅಸ್ತಿತ್ವ ಇಲ್ಲದ ಕಡೆ ಕೂಡ ಪಕ್ಷ ಕಾಣಿಸಿಕೊಳ್ಳುವಂತಾಯಿತು ಎಂದರೆ ಅತಿಶಯೋಕ್ತಿ ಆಗಲಾರದು. ಮೋದಿ-ಅಮಿತ್ ಶಾ ಜೋಡಿ ಚುನಾವಣೆಯ ಮೈಕ್ರೋ ಮ್ಯಾನೇಜ್ಮೆಂಟ್ (ಸೂಕ್ಷ್ಮ ನಿರ್ವಹಣೆ) ಕಲೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸಿದೆ. ರಾಷ್ಟ್ರಮಟ್ಟದಲ್ಲಿ ಮತ್ತು ತನ್ನ ಭದ್ರಕೋಟೆ ಇರುವ ರಾಜ್ಯಗಳಲ್ಲಿ ಇದು ಚುನಾವಣೆಯನ್ನು ಗೆಲ್ಲುವ ಯಂತ್ರ ಅಥವಾ ಮಂತ್ರವಾಗಿದೆ.
ಪಕ್ಷದಿಂದ ಸರ್ಕಾರಕ್ಕೆ ಶಾ
2019ರ ಚುನಾವಣೆಯ ಅನಂತರ ಅಮಿತ್ ಶಾ ಪಕ್ಷದಿಂದ ಸರ್ಕಾರಕ್ಕೆ ಸ್ಥಳಾಂತರವಾಗಿ ಗೃಹಮಂತ್ರಿಯಾದರು. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಜೆ.ಪಿ. ನಡ್ಡಾ ಅವಿರೋಧ ಆಯ್ಕೆಯಲ್ಲಿ ಪಕ್ಷದ ಅಧ್ಯಕ್ಷರಾದರು. ಸ್ಪಷ್ಟ ಬಹುಮತದ ಜನಸಮ್ಮತಿಯು ದೊರೆತ ಕಾರಣ ಪ್ರಧಾನಿ ಮೋದಿ ಅವರು ಪಕ್ಷದ ಸೈದ್ಧಾಂತಿಕ ಅಜೆಂಡಾ(ಕಾರ್ಯಸೂಚಿ)ವನ್ನು ಮುಂದೆ ತಂದರು. ಅದು ಅವರ ಕರ್ತವ್ಯವಾಗಿತ್ತು. ಏಕೆಂದರೆ ಹೆಚ್ಚಿನ ಮತದಾರರು ಆ ವಿಶನ್ಗಾಗಿಯೆ (ಕಾಣ್ಕೆ, ದರ್ಶನ) ಬಿಜೆಪಿಗೆ ವೋಟು ಹಾಕಿದ್ದರು. ಹಿಂದುತ್ವ ಸಿದ್ಧಾಂತವು ಮೊದಲ ಅವಧಿಗಿಂತ ಹೆಚ್ಚು ಸ್ಪಷ್ಟ ರೀತಿಯಲ್ಲಿ ಅನುಷ್ಠಾನಕ್ಕೆ ಬರತೊಡಗಿತು.
ಬಿಜೆಪಿ ನೇತೃತ್ವದ ವಾಜಪೇಯಿ ಸರ್ಕಾರಕ್ಕೆ ವಿವಿಧ ಒತ್ತಡಗಳ ನಡುವೆ ಸಮನ್ವಯ ಮಾಡುವುದೇ ಕಷ್ಟವಾಗಿತ್ತು. ಆದ್ದರಿಂದ ಈ ನಿಟ್ಟಿನಲ್ಲಿ ಮುಂದುವರಿಯಲು ಸಾಧ್ಯವಿರಲಿಲ್ಲ. ‘ಹೊಸ ಭಾರತ’ವನ್ನು ರೂಪಿಸುವ ಬಗ್ಗೆ ಸರ್ಕಾರ ಬಹುಕಾಲದಿಂದ ಬಾಕಿಯಿದ್ದ ನಾಲ್ಕು ಬೇಡಿಕೆಗಳನ್ನು ಒಂದೊAದೇ ಜಾರಿಗೊಳಿಸುವ ಬಗ್ಗೆ ಕಾರ್ಯಪ್ರವೃತ್ತವಾಯಿತು. ಹೊಸ ಸರ್ಕಾರವು ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ – ಅಂದರೆ ಜುಲೈನಲ್ಲಿ ಸರ್ಕಾರ ಮೊದಲ ಕೆಲಸಕ್ಕೆ ಇಳಿಯಿತು. ಮುಸ್ಲಿಮರಲ್ಲಿ ದಿಢೀರಾಗಿ ಮೂರು ತಲಾಖ್ ಹೇಳಿ ಪತ್ನಿಗೆ ವಿಚ್ಛೇದನ ನೀಡುವ ಕ್ರಮದಿಂದ ಆ ಸಮುದಾಯದ ಮಹಿಳೆಯರಿಗೆ ತುಂಬ ಅನ್ಯಾಯವಾಗುತ್ತಿತ್ತು. ತ್ರಿವಳಿ ತಲಾಖ್ ಸಂವಿಧಾನಬಾಹಿರವೆಂದು ಸುಪ್ರೀಂಕೋರ್ಟ್ 2017ರಲ್ಲೇ ಹೇಳಿತ್ತು. ಸರ್ಕಾರ ಆ ಬಗ್ಗೆ 2017ರಲ್ಲಿ ಮಸೂದೆಯನ್ನು ಕೂಡ ತಂದಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ಅದು ಅಂಗೀಕಾರವಾಗಲಿಲ್ಲ. ಜನವರಿ 30ರಂದು ಸರ್ಕಾರ ಹೊಸ ಮಸೂದೆಯನ್ನು ಮಂಡಿಸಿ ಅಂಗೀಕಾರ ಮಾಡಿಸಿತು. ತ್ರಿವಳಿ ತಲಾಖ್ ಮುಸ್ಲಿಂ ಪರ್ಸನಲ್ ಲಾ (ಶರೀಯತ್)ದ ಭಾಗವಾಗಿದ್ದು, ಅದರ ರದ್ದತಿ ಅವರ ಮತೀಯ ನಂಬಿಕೆಗೆ ವಿರುದ್ಧವಾಗಿತ್ತು.
ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಅದು ಮಧ್ಯಯುಗೀನ ಶಾಸನದಂತಿದ್ದು, ಮಹಿಳೆಯರಿಗೆ ಭಾರೀ ಅನ್ಯಾಯ ಎಸಗುತ್ತಿತ್ತು. ಉದಾರವಾದಿ (ಲಿಬರಲ್) ರೀತಿಯಲ್ಲಿ ಹೇಳುವುದಾದರೆ ಕೂಡ ಅದನ್ನು ರದ್ದುಗೊಳಿಸುವ ಶಾಸನ ಹಿಂದೆಯೇ ಬರಬೇಕಿತ್ತು. ತ್ರಿವಳಿ ತಲಾಖ್ ರದ್ದತಿಯು ಮುಸ್ಲಿಂ ಅಸ್ಮಿತೆಯನ್ನು ಕಸದಬುಟ್ಟಿಗೆ ಹಾಕಿದಂತೆ ಎಂದು ಅದರ ಬೆಂಬಲಿಗರು ಭಾವಿಸಿದರು. ಹೊಸ ಶಾಸನವನ್ನು ಮುಸ್ಲಿಂ ಮಹಿಳೆಯರಲ್ಲದೆ, ಹೊರಗಿನವರು ಕೂಡ ಸ್ವಾಗತಿಸಿದರು; ಇದು ಲಿಂಗ ಸಂಬಂಧಿ ನ್ಯಾಯ (ಜೆಂಡರ್ ಜಸ್ಟಿಸ್) ಎಂದು ಮನ್ನಣೆಗೆ ಪಾತ್ರವಾಯಿತು. ತ್ರಿವಳಿ ತಲಾಖ್ ರದ್ದತಿಯು ಸಮಾನ ನಾಗರಿಕ ಸಂಹಿತೆಯ (ಯುಸಿಸಿ) ಕಡೆಗಿನ ಮೊದಲ ಹೆಜ್ಜೆ ಎಂದು ವಿಶ್ಲೇಷಕರು ಹೇಳಿದರೆ, ಇದು ಬಿಜೆಪಿ ಪಕ್ಷ ಸ್ಥಾಪನೆಯ ಮೂಲ ಉದ್ದೇಶಗಳಲ್ಲೊಂದು ಎಂದು ಪಕ್ಷದ ಒಳಗಿನವರು ಅಭಿಪ್ರಾಯಪಟ್ಟರು.
* * *
ವಿಧಿ 370 ರದ್ದು
ವಾರದೊಳಗೆ ಇನ್ನೊಂದು ಕಾರ್ಯಾಚರಣೆ ಆರಂಭಗೊAಡಿತು. (5-8-2019). ಸಂವಿಧಾನದ 370ನೇ ವಿಧಿಯ ರದ್ದತಿಗೆ ಸಂಬಂಧಿಸಿದ ಮಸೂದೆಯನ್ನು ಗೃಹಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದರು. ಬಹುತೇಕ ಜಮ್ಮು-ಕಾಶ್ಮೀರದ ಎಲ್ಲ ಸಮಸ್ಯೆಗಳಿಗೆ ಮೂಲವಾದ 370ನೇ ವಿಧಿಯನ್ನು ಈ ರೀತಿಯಲ್ಲಿ ರದ್ದುಪಡಿಸಲಾಗುತ್ತದೆಯೆ? ರದ್ದತಿಗೆ ಪರ ಮತ್ತು ವಿರುದ್ಧವಾಗಿ ದೇಶದಲ್ಲಿ ದಶಕಗಳಿಂದ ಚರ್ಚೆ ನಡೆದಿತ್ತು. ಎಲ್ಲರಿಗೆ ಆಶ್ಚರ್ಯವಾಗಿ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯಲಿಲ್ಲ. ಅಷ್ಟೊಂದು ದೊಡ್ಡ ಸಮಸ್ಯೆಯಾಗಿ ಬೆಳೆದುಬಂದದ್ದಕ್ಕೆ ಇಷ್ಟು ಸುಲಭದ ಪರಿಹಾರವೆ? ವಿಧಿಯ ರದ್ದತಿಯು ಸಂಸತ್ತಿನಲ್ಲಿ ಬಹುಮತದಿಂದ ಅಂಗೀಕಾರವಾಯಿತು. ಗೊತ್ತುವಳಿ (ನಿರ್ಣಯ) ಎಷ್ಟು ಪರಿಪೂರ್ಣ ಇತ್ತೆಂದರೆ ಚರ್ಚೆಗೆ ಅವಕಾಶವೇ ಉಳಿದಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ದೇಶದ ಒಳಗೆ ಮತ್ತು ಹೊರಗೆ ಕುತಂತ್ರ ನಡೆಸುತ್ತಿದ್ದವರು, ರಕ್ತದ ಕೋಡಿ ಹರಿಸುತ್ತಿದ್ದವರು, ಸೇನಾ ಸಿಬ್ಬಂದಿಯ ಮೇಲೆ ಕಲ್ಲೆಸೆಯುವ ಮಟ್ಟಕ್ಕೆ ಹೋಗಿದ್ದವರೆಲ್ಲ ಒಮ್ಮೆಗೇ ಸ್ತಬ್ಧವಾದರು.
ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಜಮ್ಮು-ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು. ಲಡಾಖ್ ಪ್ರದೇಶವನ್ನು ಪ್ರತ್ಯೇಕಿಸಿತು. ಬಗೆಬಗೆಯ ಆಟಗಳೊಂದಿಗೆ ಪಾಕಿಸ್ತಾನದೊಂದಿಗೆ ಕಣ್ಣಮುಚ್ಚಾಲೆ ಆಡುತ್ತಿದ್ದ ನಾಯಕಮಣಿಗಳು ಜೈಲು ಅಥವಾ ಗೃಹಬಂಧನಕ್ಕೊಳಗಾಗಿ ಕಂಬಿ ಎಣಿಸಬೇಕಾಯಿತು. ಪಕ್ಷದ (ಬಿಜೆಪಿ) ಕಾರ್ಯಕರ್ತರು ಸೇರಿದಂತೆ ದೇಶಪ್ರೇಮಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ದೇಶಾದ್ಯಂತ ನಗರ-ಪಟ್ಟಣಗಳಲ್ಲಿ ಸಿಹಿ ಹಂಚಿದರು. ಗಂಡು ರಾಷ್ಟ್ರೀಯತೆಯ ಭಕ್ತರಿಗೆ, ವಿಶೇಷವಾಗಿ ಆರೆಸ್ಸೆಸ್ ಕಾರ್ಯಕರ್ತರಿಗೆ ಮೋದಿ ಅವರ ಈ ಐತಿಹಾಸಿಕ ಹೆಜ್ಜೆಯಿಂದ ದಶಕಗಳ ಹಳೆಯ ಕನಸು ನನಸಾದಂತಹ ಸಂತೋಷವಾಯಿತು. ಅಶಾಂತಿಗೆ ಜಾಗತಿಕಮಟ್ಟದಲ್ಲಿ ಹೆಸರು ಪಡೆದ ರಾಜ್ಯವನ್ನು ಉಪರಾಜ್ಯಪಾಲರ ಕೆಳಗಿಟ್ಟು ಪ್ರಜಾಪ್ರಭುತ್ವವನ್ನು ಹಂತಹಂತವಾಗಿ ತಂದು ಪೂರ್ಣಗೊಳಿಸುವುದಾಗಿ ಕೇಂದ್ರಸರ್ಕಾರ ತಿಳಿಸಿತು. ಇದು ರಾಜ್ಯದ ಪಾಕ್-ಬೆಂಬಲಿತ ಭಯೋತ್ಪಾದಕರಿಗೆ ಕೂಡ ಉತ್ತರವಾಗಿತ್ತು. ಜಮ್ಮು-ಕಾಶ್ಮೀರದ ಸಮಸ್ಯೆ 1990ರ ದಶಕದ ಆರಂಭದಿಂದಲೇ ಉಲ್ಬಣಿಸಿ ಬೆಳೆದುಬಂದಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಎನ್ಆರ್ಸಿ, ಸಿಎಎ
2019ರ ಕೊನೆಯ ವೇಳೆಗೆ ಮೋದಿ ಸರ್ಕಾರದ ಮೂರನೇ ಮಹತ್ತ್ವಪೂರ್ಣ ಕೆಲಸವು ಮುಂದೆ ಬಂತು. ಡಿಸೆಂಬರ್ 12ರಂದು ಸಂಸತ್ತು ದೇಶದ ನಾಗರಿಕತೆ ಕಾಯ್ದೆಗೆ ತಿದ್ದುಪಡಿಯನ್ನು ತಂದಿತು. ಆ ಮೂಲಕ ಆಫಘಾನಿಸ್ತಾನ, ಬಂಗ್ಲಾದೇಶ ಮತ್ತು ಪಾಕಿಸ್ತಾನ ವಲಸಿಗರಿಗೆ ಕಾನೂನುಬದ್ಧ ಸ್ಥಾನಮಾನವನ್ನು ನೀಡಿತು. 2014ಕ್ಕೆ ಮುನ್ನ ಭಾರತಕ್ಕೆ ಬಂದವರಿಗೆ ಅದನ್ನು ಅನ್ವಯಿಸಿದ್ದು ಹಿಂದು, ಸಿಖ್, ಜೈನ, ಪಾರ್ಸಿ, ಬೌದ್ಧ ಮತ್ತು ಕ್ರೈಸ್ತರಿಗೆ ಈ ಅವಕಾಶವನ್ನು ನೀಡಲಾಯಿತು. ಆ ದೇಶಗಳಲ್ಲಿ ನಡೆದ ಮತೀಯ ಹಿಂಸೆ(ಕಿರುಕುಳ)ಯನ್ನು ತಾಳಲಾರದೆ ದೇಶ ಬಿಟ್ಟು ಓಡಿ ಬಂದ ಸಂತ್ರಸ್ತರಿಗೆ ಆಶ್ರಯ ನೀಡುವ ಕ್ರಮ ಇದಾಗಿತ್ತು.
ತ್ರಿವಳಿ ತಲಾಖ್ನಂತೆಯೇ ಇದನ್ನು ಕೂಡ ಎರಡು ರೀತಿಗಳಲ್ಲಿ ಕಾಣಬಹುದಿತ್ತು. ಮುಸ್ಲಿಮರನ್ನು ಇದರಿಂದ ಹೊರಗೆ ಇಟ್ಟಿದ್ದರು. ಆ ಮೂಲಕ ಮುಸಲ್ಮಾನರನ್ನು ಪ್ರತ್ಯೇಕಿಸಿದಂತಾಯಿತು ಎಂದು ಸಮುದಾಯದವರು ಮತ್ತು ಪ್ರತಿಪಕ್ಷದವರು ಕ್ಯಾತೆ ತೆಗೆದರು. ನಿಜವೆಂದರೆ, ಮುಸ್ಲಿಮರು ಮಾತ್ರ ಆ ದೇಶಗಳಿಂದ ಗಡಿದಾಟಿ ತಪ್ಪಿಸಿಕೊಳ್ಳಲು ಕಾರಣವಿಲ್ಲದವರು; ಅದು ಪೂರ್ತಿಯಾಗಿ ಮತೀಯ ದಮನವಾಗಿದೆ. ಅಂತಾರಾಷ್ಟಿçÃಯ ವೇದಿಕೆಗಳಲ್ಲಿ ಈ ವಿಷಯ ಪ್ರಸ್ತಾಪಗೊಂಡರೂ ಕೂಡ ಆ ದೇಶಗಳು ಈ ಅಮಾನವೀಯ ಹಿಂಸೆಗೆ ತಡೆ ಹಾಕಿದುದಿಲ್ಲ. ಸರ್ಕಾರದ ಕ್ರಮ ಈ ಮತೀಯ (ಧಾರ್ಮಿಕ) ಸಮುದಾಯಗಳಿಗೆ ಒಂದು ಶ್ರೇಷ್ಠಮಟ್ಟದ ಮಾನವೀಯ ಕ್ರಮ ಎನಿಸಿತು.
ಈ ಉದ್ದೇಶಕ್ಕಾಗಿ ರಾಷ್ಟ್ರೀಯ ನಾಗರಿಕರ ಪಟ್ಟಿ (ಎನ್ಆರ್ಸಿ)ಯನ್ನು ತಯಾರಿಸುವುದಾಗಿ ಗೃಹಮಂತ್ರಿ ಪ್ರಕಟಿಸಿದರು. ಅದಕ್ಕಾಗಿ ದೇಶದ ಆಯಾ ನಾಗರಿಕರು ತಮ್ಮ ವಿವರಗಳನ್ನು ಸಾಬೀತುಪಡಿಸಬೇಕು. ದಾಖಲಾತಿ ಇಲ್ಲದಿದ್ದರೆ ನಾಗರಿಕತೆ ತಿದ್ದುಪಡಿ ಕಾಯ್ದೆಯು (ಸಿಎಎ) ಇತರರಿಗೆ ಆಶ್ರಯ ನೀಡುತ್ತದೆ. ಅದು ಮುಸ್ಲಿಮರಿಗಿಲ್ಲ ಎಂದು ಕೆಲವರಿಗೆ ಭಯ ಉಂಟಾಯಿತು. ಎರಡೂ ಸೇರಿದಾಗ ಕೆಲವರ ಮನಸ್ಸಿನಲ್ಲಿ ಮುಸ್ಲಿಮರು ದೇಶ ಬಿಡಬೇಕಾಗಬಹುದೆಂಬ ಆತಂಕ ಉಂಟಾಯಿತು. ವಾರದೊಳಗೆ ವ್ಯಾಪಕ ಪ್ರತಿಭಟನೆಗಳು ಕಂಡುಬಂದವು. ಫ್ರೆಬುವರಿ 2020ರಲ್ಲಿ ದೆಹಲಿಯಲ್ಲಿ ಸುದೀರ್ಘ ಹೋರಾಟ, ಕೋಮುಹಿಂಸಾಚಾರಗಳು ನಡೆದವು. ಅದರ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಕೈವಾಡವಿತ್ತು; ಅದಕ್ಕಾಗಿ ಭಾರೀ ಮೊತ್ತದ ಹಣವನ್ನು ವ್ಯಯಿಸಲಾಗಿದೆ ಎಂದು ಮತ್ತೆ ಬಹಿರಂಗಕ್ಕೆ ಬಂತು. ಬಳಿಕ ಪಿಎಫ್ಐ ನಿಷೇಧಕ್ಕೂ ಕೇಂದ್ರಸರ್ಕಾರ ಕ್ರಮಕೈಗೊಂಡಿದೆ. ಎನ್ಆರ್ಸಿ ಮತ್ತು ಸಿಎಎ ಈ ಎರಡು ಕಾರ್ಯಕ್ರಮಗಳು ಸದ್ಯಕ್ಕೆ ಬದಿಗೆ ತಳ್ಳಲ್ಪಟ್ಟರೂ ಪಕ್ಷದ ಕಟ್ಟಾ ಬೆಂಬಲಿಗರಿಗೆ ಈ ಸಲ ಹಿಂದುತ್ವ ಕಾರ್ಯಸೂಚಿ ಜಾರಿಗೆ ಬಹುಮತ ಇಲ್ಲ ಎಂದು ಹೇಳುವಂತಿರಲಿಲ್ಲ.
ಅಯೋಧ್ಯೆಯ ರಾಮಮಂದಿರ
ಮೋದಿ ಸರ್ಕಾರದ ನಾಲ್ಕನೇ ಐತಿಹಾಸಿಕ ಕಾರ್ಯಕ್ರಮವು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ವರ್ಷವಾಗುವ ಹೊತ್ತಿಗೆ ಬಂತು; ಅದು ರಾಮಜನ್ಮಭೂಮಿ ಎಂದು ಪರಿಗಣಿತವಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿಪೂಜೆ. ದೇಶದ ರಾಮಭಕ್ತರಿಗೆ ಇದು ಹತ್ತಾರು ಅಡ್ಡಿ-ಆತಂಕಗಳ ಅನಂತರ ಬಂದ ಮಹಾನ್ ಘಟನೆಯಾಗಿತ್ತು. ಆ ಪವಿತ್ರ ನೆಲದಲ್ಲಿ ಪ್ರಧಾನಿ ಮೋದಿ ಅವರು ಧಾರ್ಮಿಕ ಕಾರ್ಯವನ್ನು ನೆರವೇರಿಸುವುದನ್ನು ಜನ ಟಿವಿಯಲ್ಲಿ ಕಂಡು ಧನ್ಯತೆಯ ಭಾವವನ್ನು ಅನುಭವಿಸಿದರು. ಈ ವಿಷಯದಲ್ಲಿ ಮೋದಿ ಅವರ ಜೀವನ ಒಂದು ಆವರ್ತವನ್ನು (ಸರ್ಕಲ್) ಪೂರೈಸಿತ್ತು. 1990ರಲ್ಲಿ ಅವರು ಆಡ್ವಾಣಿ ಅವರ ರಥಯಾತ್ರೆಯ ಸಂಯೋಜಕರಾಗಿದ್ದರು. ಈಗ ಪ್ರಧಾನಿಯಾಗಿ ಆ ಬೃಹತ್ ದೇವಾಲಯದ ಗುದ್ದಲಿಪೂಜೆಯನ್ನು ನೆರವೇರಿಸಿದರು.
ಶ್ರೀರಾಮ ಜನಿಸಿದ್ದೆಂದು ನಂಬಲಾದ ಆ ಸ್ಥಳದಲ್ಲಿ ಮೊದಲು ಮಸೀದಿಯೆನ್ನಲಾಗಿದ್ದ ಕಟ್ಟಡ (ಬಾಬರಿ ಮಸೀದಿ) ಇತ್ತು. ದೇಶಾದ್ಯಂತದಿಂದ ಬಂದ ಕರಸೇವಕರು 1992ರ ಡಿಸೆಂಬರ್ 6ರಂದು ಆ ಕಟ್ಟಡವನ್ನು ಉರುಳಿಸಿದರು. ಇದು ನಂಬಿಕೆಯ ವಿಷಯವಾದ ಕಾರಣ ನ್ಯಾಯಾಲಯದ ಅನುಮತಿಗೆ ಕಾಯದೆ ಅಲ್ಲಿ ಮಂದಿರ ನಿರ್ಮಿಸಬೇಕೆಂದು ಹಲವರು ಆಗ್ರಹಿಸಿದರು. ಮೋದಿ ಅವರು ಆ ನಿಲವನ್ನು ಸ್ವೀಕರಿಸಲಿಲ್ಲ; ನ್ಯಾಯಾಂಗದಲ್ಲಿ ಪೂರ್ತಿ ನಂಬಿಕೆಯಿಂದ ವಿವಿಧ ಹಂತಗಳನ್ನು ದಾಟಿ ಮುಂದುವರಿದರು. ವಿವಾದಕ್ಕೆ ಸಂಬಂಧಿಸಿ ಮಸೀದಿಯಿದ್ದ ಜಾಗ ಯಾರದೆಂದು ನ್ಯಾಯಾಲಯ ಹೇಳಿತು; ಮಸೀದಿಯ ಕೆಳಗೆ ದೇವಾಲಯದ ಅವಶೇಷಗಳು ಕಂಡುಬಂದಿದ್ದವು. ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿದ ಬಳಿಕ 2019ರ ನವೆಂಬರ್ನಲ್ಲಿ ಮೋದಿ ದೇವಾಲಯ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದರು. ಇದೀಗ ರಾಮಮಂದಿರವು ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು ಬರುವ ಜನವರಿಯಲ್ಲಿ (2024) ಉದ್ಘಾಟನೆಗೊಳ್ಳುವುದಾಗಿ ಪ್ರಕಟಿಸಲಾಗಿದೆ.
ಸಾಂಸ್ಕೃತಿಕ ರಾಷ್ಟ್ರೀಯತೆ
ಪ್ರಧಾನಿ ಮೋದಿ ಅವರ ಸಾಧನೆಯ ಈ ಪಟ್ಟಿಗೆ ಕಾಶಿ ವಿಶ್ವನಾಥ ದೇವಳದ ಕಾರಿಡಾರ್ ನಿರ್ಮಾಣವು ತಪ್ಪದೆ ಸೇರುತ್ತದೆ. ಶತಮಾನಗಳ ಅವ್ಯವಸ್ಥಿತ ಬೆಳವಣಿಗೆಯಿಂದಾಗಿ ಕಾಶಿ ದೇವಾಲಯದ ಪರಿಸರವು ಗಲೀಜು ಕೊಂಪೆಯ ರೂಪವನ್ನು ತಾಳಿತ್ತು. ಗಂಗಾನದಿ ತಟದ ಆ ವಿಶಾಲ ಜಾಗದಲ್ಲಿ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವುದೇ ಸವಾಲಿನ ಕೆಲಸವಾಗಿತ್ತು. ಮೋದಿ ಅವರಲ್ಲದೆ ಬೇರೆಯವರಿಗೆ ಅದು ಅಸಾಧ್ಯ ಎಂಬಂತಿತ್ತು. ಕಾಶಿಯ ಅಂತಹ ಪರಿಸ್ಥಿತಿ ಎಲ್ಲ ಶ್ರದ್ಧಾಳು ಹಿಂದುಗಳನ್ನು ಕೆಣಕುವಂತಿತ್ತು. ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದ ಸದಸ್ಯರಾದದ್ದೇ ಶ್ರದ್ಧಾಳುಗಳ ಅದೃಷ್ಟದ ಬಾಗಿಲನ್ನು ತೆರೆಯಿತೆನ್ನಬಹುದು. ತಮ್ಮ ಕ್ಷೇತ್ರದಲ್ಲಿ ಮೋದಿ ಪುನರುಜ್ಜೀವನಗೊಂಡ ಕಾಶಿ ವಿಶ್ವನಾಥ ದೇವಾಲಯ ಸಂಕೀರ್ಣದ ಉದ್ಘಾಟನೆಯನ್ನು ನೆರವೇರಿಸಿದರು.
ವಿಶ್ವನಾಥ ತನ್ನ ಮುಂದಿನ ಗಂಗಾನದಿ ಮತ್ತು ತನ್ನ ವಾಹನ ನಂದಿಯನ್ನು ತಡೆಯಿಲ್ಲದೆ ನೋಡುವುದು ಸಾಧ್ಯವಾಯಿತು. ಕಾಶಿಯಲ್ಲಿ ಪ್ರಧಾನಿ ಮೋದಿ ಅವರು ನಡೆಸಿದ ಕಾರ್ಯವು ಅನ್ಯಮತೀಯರ ದಾಳಿಯಿಂದ ವಿರೂಪಗೊಂಡಿದ್ದ ದೇವಳವನ್ನು ನೇರ್ಪುಗೊಳಿಸಿದ ರಾಣಿ ಅಹಲ್ಯಾಬಾಯಿ ಹೋಳ್ಕರ್ಳ ಸಾಧನೆಗೆ ಸಮಾನವೆನ್ನುವ ಶ್ಲಾಘನೆಗೆ ಪಾತ್ರವಾಗಿದೆ. ಡಿಸೆಂಬರ್ 2021ರಲ್ಲಿ ಈ ಕಾರ್ಯ ನೆರವೇರಿತು. ಗಂಗೆಯಲ್ಲಿ ಮಿಂದ ಮೋದಿ (ಗಂಗಾನದಿ ಶುದ್ಧೀಕರಣ ಕೂಡ ಅವರ ಸಾಧನೆಯ ಪಟ್ಟಿಯಲ್ಲಿದೆ) ಕೇಸರಿ ಬಟ್ಟೆ, ರುದ್ರಾಕ್ಷಿಗಳನ್ನು ಧರಿಸಿದರು. ಅಲ್ಲಿಯ ಸಂಪ್ರದಾಯದಂತೆ ಸ್ವತಃ ವಿಶ್ವನಾಥನನ್ನು ಪೂಜಿಸಿದರು. ಹೀಗೆ ಮೋದಿ ಅವರ ಕೆಲಸಗಳಲ್ಲಿ ಧಾರ್ಮಿಕತೆಗೆ ಜಾಗವಿದೆ ಎಂಬುದು ಸಾಬೀತಾಯಿತು; ಇದು ಅವರ ಸಾಂಸ್ಕೃತಿಕ ರಾಷ್ಟ್ರೀಯತೆ ಎನ್ನುವ ವಿಶ್ಲೇಷಣೆಯನ್ನು ಪಡೆದುಕೊಂಡಿದೆ.
ಹಿಮಾಲಯದ ಉನ್ನತ ಸ್ಥಳದಲ್ಲಿರುವ ಕೇದಾರನಾಥಕ್ಕೆ ನರೇಂದ್ರ ಮೋದಿ ಆಗಾಗ ಹೋಗುತ್ತಾರೆ. ಭೀಕರ ಪ್ರವಾಹದಿಂದ ವ್ಯಾಪಕ ಹಾನಿಗೊಳಗಾದ ಕೇದಾರನಾಥಮಂದಿರದ ಪುನರ್ನಿರ್ಮಾಣವು ಮೋದಿ ಅವರ ನಿಗಾದಲ್ಲೇ ನಡೆಯಿತು. ಮೋದಿ ಸರ್ಕಾರಕ್ಕೆ ಚಾರ್ಧಾಮ್ನ ಕ್ಷೇತ್ರಗಳನ್ನು ಜೋಡಿಸುವ ಉದ್ದೇಶವಿದೆ; ಹಾಗೂ ಅಲ್ಲಿ ಜೋಡಿ ರಸ್ತೆ (ಡಬಲ್ ಹೈವೇ) ನಿರ್ಮಿಸುತ್ತಾರೆಂದು ಹೇಳಲಾಗಿದೆ.
ಇನ್ನು ‘ರಾಷ್ಟ್ರ ಮೊದಲು ವಿದೇಶಾಂಗ ನೀತಿ’, ದೇಶದ ಗಡಿಗಳನ್ನು ಸುಭದ್ರವಾಗಿ ರಕ್ಷಿಸುವುದು, ವಿಶೇಷವಾಗಿ ಚೀನಾದ ದುಷ್ಟ ವಿಸ್ತರಣಾವಾದದ ವಿರುದ್ಧ ಸೆಡ್ಡು ಹೊಡೆದಿರುವುದು – ಮುಂತಾದ ಮೋದಿ ಅವರ ಕ್ರಮಗಳು ಪಕ್ಷದ ಬೆಳವಣಿಗೆಗೂ ಸ್ಫೂರ್ತಿ ನೀಡಿವೆ. ಪಕ್ಷದ ಕಾರ್ಯಕರ್ತರ ಅರ್ಪಣಾಮನೋಭಾವವನ್ನು ಗಳಿಸಲು ಸೈದ್ಧಾಂತಿಕ ಅಜೆಂಡಾ ಕೂಡ ಅವಶ್ಯ. ಅದರಿಂದ ಪಕ್ಷದ ಸಾಂಸ್ಕೃತಿಕ ಚೌಕಟ್ಟು ಗಟ್ಟಿಯಾಗುತ್ತದೆ.
* * *
2ನೇ ಅವಧಿಯಲ್ಲಿ
ಗಮನಿಸಬೇಕಾದ ಒಂದು ಅಂಶವೆಂದರೆ, ಮೋದಿ ಸರ್ಕಾರವು ಎರಡನೇ ಅವಧಿಯಲ್ಲಿ ಹಮ್ಮಿಕೊಂಡ ಬೃಹತ್ ಯೋಜನೆಗಳಿಗೆ 2020ರ ಆರಂಭದಲ್ಲಿ ವಕ್ಕರಿಸಿದ ಮಹಾಮಾರಿ ಕೊರೋನಾ (ಕೋವಿಡ್-19) ತಡೆಯೊಡ್ಡಿತು. ಮೊದಲಿಗೆ ಕೇವಲ ನಾಲ್ಕು ತಾಸುಗಳ ನೋಟೀಸಿನಲ್ಲಿ ಮೋದಿ ಇಡೀ ದೇಶಕ್ಕೆ ಲಾಕ್ಡೌನ್ ಹೇರಿದರು. ಲಾಕ್ಡೌನ್ ಹೇರಿದ ಸಮಯ (ಟೈಮಿಂಗ್) ಮತ್ತು ಗಾತ್ರದ ಬಗ್ಗೆ ಚರ್ಚೆ ನಡೆಯಿತಾದರೂ ಅದರ ಉದ್ದೇಶವನ್ನು ಯಾರೂ ಪ್ರಶ್ನಿಸಲಿಲ್ಲ. ದೇಶವು ಅಂತಹ ತೀವ್ರ ಕ್ರಮವನ್ನು ಕೂಡ ಬೆಂಬಲಿಸಿತು. ಜಗತ್ತಿನ ಜನಸಂಖ್ಯೆಯ ಶೇ.20ರಷ್ಟು ಭಾಗ ಮನೆಯೊಳಗೆ ಕುಳಿತಿತ್ತು. ಒಬ್ಬ ಜನಪ್ರಿಯ ಮತ್ತು ಗೌರವಾರ್ಹ ನಾಯಕನಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಇದು ರಾಜ್ಯಗಳಲ್ಲೂ ಯಶಸ್ವಿಯಾಯಿತು. ಈ ವಿಷಯದಲ್ಲಿ ರಾಜಕೀಯ ಆಯಾಮಕ್ಕೆ ಒತ್ತು ಸಿಗಲಿಲ್ಲ ಎನ್ನುವುದು ಸಮಾಧಾನದ ಸಂಗತಿ. ಕೊರೋನಾ ನಿರ್ವಹಣೆಯಲ್ಲಿ ಗೊಂದಲವಾದೀತೆಂದು ಕೆಲವರು ಭಯಪಟ್ಟರು; ಆದರೆ ಹಾಗಾಗಲಿಲ್ಲ.
ಬಿಕ್ಕಟ್ಟುಗಳ ವೇಳೆ ಪ್ರಧಾನಿ ಮೋದಿ ದೇಶಕ್ಕೆ ಸಮರ್ಥ ನಾಯಕತ್ವವನ್ನು ನೀಡಿದ್ದಾರೆ. ಆಡಳಿತ ಯಂತ್ರವನ್ನು ಚುರುಕಾಗಿ ನಡೆಸಿದ್ದಾರೆ. ವಲಸೆ ಹೋಗಿ ದೇಶದ ಯಾವಾವುದೋ ಕಡೆ ಇದ್ದ ಕಾರ್ಮಿಕರು ಕೊರೋನಾದಿಂದಾಗಿ ಊರಿಗೆ ಮರಳುವ ಸಮಸ್ಯೆ ಉಂಟಾಯಿತು. ಮರಳಿದ ಮೇಲೆ ಕೂಡ ಕೆಲವು ತೊಂದರೆಗಳು ಎದುರಾದವು; ರೋಗ ಹಬ್ಬುವ ಭೀತಿಯಿತ್ತು. ಕೊರೋನಾ ವೈರಸ್ ವಿರುದ್ಧ ಯುದ್ಧ ನಡೆಸುವಲ್ಲಿ ಭಾರತಕ್ಕೆ ಎರಡು ಕೊರತೆಗಳಿದ್ದವು. ಅವುಗಳೆಂದರೆ –
1) ದೇಶದ ದಟ್ಟವಾದ ಜನಸಾಂದ್ರತೆ ಮತ್ತು ಸಾಂಸ್ಕೃತಿಕ ವೈವಿಧ್ಯ.
2) ಸಾರ್ವಜನಿಕ ಆರೋಗ್ಯಸೇವೆ ಮತ್ತು ಮೂಲಸವಲತ್ತುಗಳ ಕೊರತೆ.
ಆದರೂ ಮೋದಿ ಅವರ ನಾಯಕತ್ವದಲ್ಲಿ ದೇಶ ಕೊರೋನಾ ಸಮಸ್ಯೆಗೆ ದಿಟ್ಟವಾಗಿ ಪರಿಹಾರವನ್ನು ಕಂಡುಕೊAಡಿತು. ಔಷಧಿಗಳ ಪೂರೈಕೆಯಿಂದ ಹಿಡಿದು ಹೆಲ್ತ್ಕೇರ್ ಸೆಂಟರ್ಗಳನ್ನು ತೆರೆಯುವವರೆಗೆ ಎಲ್ಲ ಕೆಲಸಗಳು ಕೇಂದ್ರಸರ್ಕಾರದ ಆರೋಗ್ಯ ಇಲಾಖೆಯ ಉಸ್ತುವಾರಿಯಲ್ಲಿ ಸುಸೂತ್ರವಾಗಿ ನಡೆದವು. ಕೊರೋನಾ ಲಸಿಕೆಯ ಸಂಶೋಧನೆಯಲ್ಲಂತೂ ಮೋದಿ ಅವರ ನೇತೃತ್ವ ಇಲ್ಲವಾಗಿದ್ದರೆ ಅಷ್ಟು ದೊಡ್ಡ ಕಾರ್ಯ ಅಷ್ಟು ಸಲೀಸಾಗಿ ಮತ್ತು ಶೀಘ್ರದಲ್ಲಿ ನಡೆಯುತ್ತಿರಲಿಲ್ಲ; ಲಸಿಕೆಗೆ ಜಾಗತಿಕ ಗುಣಮಟ್ಟ ದೊರೆತು ಅದು ಸರ್ವಮಾನ್ಯವಾಗುತ್ತಿರಲಿಲ್ಲ ಎಂಬ ಮಾತು ವ್ಯಾಪಕವಾಗಿ ಬಂತು. ದೇಶದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಡೆಸುವುದರ ಜೊತೆಗೆ ಮೋದಿ ಸರ್ಕಾರ ಹಲವು ಸಣ್ಣ-ಪುಟ್ಟ ದೇಶಗಳಿಗೆ ಲಸಿಕೆಯನ್ನು ಒದಗಿಸಿ ಲಕ್ಷಾಂತರ ಜೀವಗಳನ್ನು ಉಳಿಸಿತು; ಆ ದೇಶಗಳು ಭಾರತಕ್ಕೆ ಶಾಶ್ವತವಾಗಿ ಕೃತಜ್ಞವಾಗಿವೆ.
ಬೃಹತ್ ಲಸಿಕೆ ನೀಡಿಕೆ
ದೇಶದಲ್ಲಿ ಲಸಿಕೆ ನೀಡಿಕೆಯನ್ನು 2021ರ ಜನವರಿಯಲ್ಲಿ ಆರಂಭಿಸಲಾಯಿತು. ಆದರೆ ಕೊರೋನಾದ ಎರಡನೇ ಅಲೆ ಇನ್ನೂ ಜೋರಾಗಿ ಬಂತು. ಲಸಿಕೆ ನೀಡಿಕೆ ಇನ್ನೂ ಆರಂಭದ ಹಂತದಲ್ಲಿತ್ತು. ಮಾರ್ಚ್ನಿಂದ ಮೇ-ಜೂನ್ವರೆಗೆ ಕೇಂದ್ರ, ರಾಜ್ಯಸರ್ಕಾರಗಳು ಅತಂತ್ರ ಸ್ಥಿತಿಗೆ ತಲಪಿದವು. ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ; ಇದ್ದರೂ ಆಮ್ಲಜನಕ-ವೆಂಟಿಲೇಟರ್ಗಳ ಕೊರತೆ. ದೇಶದಲ್ಲಿ ಒಂದೇ ದಿನ ನಾಲ್ಕು ಲಕ್ಷ ಜನರಿಗೆ ಸೋಂಕು ತಗಲಿತ್ತು (ಅದು ಆಗ ಜಾಗತಿಕ ದಾಖಲೆ). ವ್ಯಾಪಕ ಜೀವಹಾನಿ ಆಯಿತು. ಮೊದಲ ವರ್ಷ ಮೋದಿ ಕೊರೋನಾವನ್ನು ಚೆನ್ನಾಗಿ ನಿಭಾಯಿಸಿದರೆನ್ನುವ ಹೊಗಳಿಕೆ ಬಂದರೆ, ಎರಡನೇ ವರ್ಷ ಸರ್ಕಾರ ವಿಫಲವಾಯಿತೆನ್ನುವ ಟೀಕೆಯನ್ನು ಎದುರಿಸಬೇಕಾಯಿತು. ಸರ್ಕಾರ ಕೊರೋನಾವನ್ನು ಅಲಕ್ಷಿಸಿತು ಎಂದವರಿದ್ದಾರೆ. ಆದರೆ ವ್ಯಾಪಕ ಜೀವಹಾನಿಗೆ ಸರ್ಕಾರದ ಪ್ರಯತ್ನದ ಕೊರತೆ ಕಾರಣ ಎನ್ನುವುದಕ್ಕಿಂತ ಎರಡನೇ ಬಾರಿ ವೈರಸ್ ತುಂಬ ಅಪಾಯಕಾರಿ ಆಗಿದ್ದುದು ಮತ್ತು ಲಸಿಕೆ ದೇಶದ ಜನತೆಯನ್ನು ಇನ್ನೂ ತಲಪದಿದ್ದುದು ಕಾರಣ ಎನ್ನಬಹುದು. ಕೊರೋನಾ ಈ ರೀತಿ ದಾಳಿ ಮಾಡಿದಾಗ ಮುಂದುವರಿದ ದೇಶಗಳವರಿಗೆ ಕೂಡ ನಿಯಂತ್ರಣ ಅಸಾಧ್ಯವೆನಿಸಿತು.
ವರ್ಷದ ಉತ್ತರಾರ್ಧದಲ್ಲಿ ಸಮಸ್ಯೆಯ ತೀವ್ರತೆ ಇಳಿಮುಖವಾಗಿ ವರ್ಷದ ಕೊನೆಯ ಹೊತ್ತಿಗೆ ಪರಿಸ್ಥಿತಿ ಸುಧಾರಿಸಿತು. ಆದರೆ ಮೋದಿ ಅವರಿಗೆ ಬಿಕ್ಕಟ್ಟು ನಿಭಾಯಿಸುವ ಹೊಣೆ ಇದ್ದೇ ಇತ್ತು. ದೇಶಬಾಂಧವರೊAದಿಗೆ ನೇರ ಸಂಪರ್ಕ, ಸಮಸ್ಯೆಯ ಮೇಲೆ ನಿರಂತರ ನಿಗಾ ಮುಂತಾದ ಕ್ರಮಗಳಿಂದ ಮೋದಿ ತಮ್ಮದೇ ರೀತಿಯಲ್ಲಿ ಸಮಸ್ಯೆಯನ್ನು ಪರಿಹರಿಸಿದರು. ಕೆಳಹಂತದ ಜನರನ್ನು ತಲಪುವಲ್ಲಿ ಬಿಜೆಪಿ ಸಹಕರಿಸಿತು.
* * *
ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರು ನರೇಂದ್ರ ಮೋದಿ ಅವರನ್ನು ಬಲಪಂಥದ ನಾಯಕರ ಜೊತೆ ಸೇರಿಸುತ್ತಾರೆ. ಆದರೆ ಬಲಪಂಥೀಯರ ನಡುವೆ ಮೋದಿ ಏಕಾಂಗಿಯಾಗಿದ್ದಾರೆ. ಕೋವಿಡ್ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸುವಾಗ ಮೋದಿ ವಿಜ್ಞಾನಕ್ಕೆ ಅಂಟಿಕೊಂಡೇ ಮಾತನಾಡುತ್ತಿದ್ದರು. ಒಟ್ಟಿನಲ್ಲಿ ಮೋದಿ ಅವರ ವಿಶ್ವಾಸಾರ್ಹತೆ ಈಗಲೂ ಗಟ್ಟಿಯಾಗಿದೆ; ಇದು ಸಣ್ಣ ಸಾಧನೆಯಲ್ಲ; ಮತ್ತು ಆಳುವ ಪಕ್ಷಕ್ಕೆ ಇದೇ ದೊಡ್ಡ ಕೊಡುಗೆ ಮತ್ತು ಸ್ಫೂರ್ತಿ.
ಪರಿವರ್ತನೆಯ ಪರ್ವ
ದೇಶದ ರಾಜಕೀಯದಲ್ಲಿ ಮೋದಿ ಬಹುದೊಡ್ಡ ಬದಲಾವಣೆಯನ್ನು ತಂದಿದ್ದಾರೆ. ಒಂದು ಪಕ್ಷದ ಸರ್ಕಾರ ಎಂಬುದು ಮುಗಿದೇಹೋಯಿತು ಎನ್ನುವಾಗ ಮೋದಿ ಅದನ್ನು ವಾಪಸು ತಂದರು. ಸಹೋದ್ಯೋಗಿಗಳ ಜೊತೆ ಸೇರಿ ಪಕ್ಷವನ್ನು ದಾಖಲೆಯ ಮಟ್ಟಕ್ಕೆ ಬೆಳೆಸಿದರು. ಕೇವಲ ದಶಕದ ಹಿಂದೆ ಮೋದಿ ಅವರಿಂದ ಇಂತಹ ಪರಿವರ್ತನೆ ಬರುತ್ತದೆ ಎಂದರೆ ಯಾರೂ ನಂಬುತ್ತಿರಲಿಲ್ಲ. ಬೃಹದಾಕಾರಕ್ಕೆ ಬೆಳೆದು ಅತ್ಯಂತ ಜನಪ್ರಿಯರಾದ ಮೋದಿ ಜನರೊಂದಿಗೆ ಮಾತನಾಡುವಲ್ಲಿ ದೇಶದ ರಾಜಕೀಯ ಪರಿಭಾಷೆಯನ್ನೇ ಬದಲಿಸಿದ್ದಾರೆ.
ಮಾತು–ಯುವಜನಕ್ಕೆ ಸ್ಫೂರ್ತಿ
ಜನರನ್ನು ಮಂತ್ರಮುಗ್ಧಗೊಳಿಸುವಂತಹ ಮಾತುಗಾರಿಕೆಯಲ್ಲಿ ಮೋದಿ ವಾಜಪೇಯಿ ಅವರ ವಾಗ್ಮಿತೆಗೆ ಸಮಾನರಾಗದಿರಬಹುದು. ಆದರೆ ಹಿಂದಿನ ರಾಜಕೀಯ ವರಸೆಯ ಮಾತುಗಳಿಂದ ತಾಳ್ಮೆ ಕಳೆದುಕೊಂಡಿದ್ದ ಯುವಜನತೆಗೆ ಮೋದಿ ಅವರ ಮಾತುಗಳು ಇಷ್ಟವಾದವು. ಅವರ ಶೈಲಿ, ಮಾತಿಗೆ ನಾಟಕೀಯ ಸ್ಪರ್ಶ, ಅಚ್ಚು ಹೊಡೆದಂತಿರುವ ಸಾಲುಗಳು (ಪಂಚ್ ಲೈನುಗಳು), ಸ್ವಲ್ಪಮಟ್ಟಿಗೆ ಶ್ರುತಿಬದ್ಧವೆನಿಸುವ ಸ್ವರಭಾರ (ಧಾಟಿ)ಗಳು ವಾಜಪೇಯಿ ಅನಂತರದ ಕಾಲದ ಓರ್ವ ಮುಖ್ಯ ಭಾಷಣಕಾರರನ್ನಾಗಿ ಮಾಡಿವೆ; ಅನೇಕ ಕಡೆ ಮೋದಿ ಅವರ ಮಾತುಗಳಿಗೆ ಸಭೆಯಿಂದ ‘ಮೋದಿ, ಮೋದಿ’ ಎಂಬ ಘೋಷಣೆ ಮೊಳಗುತ್ತದೆ. ಅಂಕಿ-ಅAಶಗಳ ಚೀಟಿಯಿಲ್ಲದೆ ಅವರು ಸರ್ಕಾರದ ಸಾಧನೆಗಳನ್ನು ಕರಾರುವಾಕ್ಕಾಗಿ ವಿವರಿಸಬಲ್ಲರು. ಹಿಂದಿ ಪ್ರಧಾನವಾದ ಉತ್ತರಭಾರತದಷ್ಟೇ ದಕ್ಷಿಣಭಾರತದಲ್ಲೂ ಅವರ ಆಕರ್ಷಣೆ ಎದ್ದುತೋರುತ್ತದೆ. ಒಂದು ರಾಜಕೀಯ ಪರ್ಯಾಯವನ್ನು ಹುಡುಕುತ್ತಿದ್ದ ಇಡೀ ದೇಶದಲ್ಲಿ ಅವರು ಆಶೆಯ ಕಿರಣವನ್ನು ಮೂಡಿಸಿದ್ದಾರೆ. ಕೇವಲ ಕೆರಿಷ್ಮಾ(ಪ್ರದರ್ಶನದ ವರ್ಚಸ್ಸು)ದಿಂದ ಜನರ ವಿಶ್ವಾಸವನ್ನು ಬಹುಕಾಲ ಹಿಡಿದಿಡಲು ಸಾಧ್ಯವಿಲ್ಲ ಎಂಬುದವರ ನಂಬಿಕೆ. ಕೆರಿಷ್ಮಾ ಇದ್ದರೂ ಜನಮಾನಸದಲ್ಲಿ ಹೆಚ್ಚು ಕಾಲ ಉಳಿಯದ ಬಹಳಷ್ಟು ನಾಯಕರನ್ನು ನಾವು ನೋಡಿದ್ದೇವೆ.
ಯಶಸ್ಸಿನ ಪ್ರಮುಖ ಕಾರಣ
ಮೋದಿ ಅವರ ಯಶಸ್ಸಿನ ಒಂದು ಪ್ರಮುಖ ಕಾರಣವೆಂದರೆ, ಅವರ ಅಪೂರ್ವವಾದ ಸ್ಥಿತಿಸ್ಥಾಪಕ ನಮ್ಯತೆಯ ಗುಣ (flexibility). ತಮ್ಮಲ್ಲಿರುವ ಆರೆಸ್ಸೆಸ್ ಮೂಲದಿಂದ ಬಂದ ವಾಸ್ತವತೆಯ ಅರಿವಿನಿಂದ ಅವರು ಪುಸ್ತಕದ ನಿಯಮಗಳಿಗೆ ಅಂಟಿಕೊಳ್ಳುವ ಬದಲು ಹೊಸ ಚಿಂತನೆ ಮತ್ತು ಕಾರ್ಯಶೈಲಿಗಳನ್ನು ಒಪ್ಪಿಕೊಂಡು ಪ್ರೋತ್ಸಾಹಿಸುತ್ತಾರೆ. ಪಕ್ಷಕ್ಕೆ ಬಂದ ದಿನದಿಂದ ಮೋದಿ ಹಳೇಶೈಲಿಯ ರೂಢಿಗತ ವಿಧಾನಗಳನ್ನು ಬಿಟ್ಟು ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ; ಆ ಮೂಲಕ ಪಕ್ಷದ ತಳಹದಿಯನ್ನೇ ವಿಸ್ತರಿಸಿದ್ದಾರೆ. ಇದು ವಾಸ್ತವವನ್ನು ಸ್ವಾಗತಿಸುವ ಭಾರತೀಯ ವಿಧಾನ ಕೂಡ ಆಗಿದೆ. ಹೊರಗಿನ ಬಹಳಷ್ಟು ಜನರಿಗೆ ಮೋದಿ ಅವರ ಈ ವಿಧಾನ ಅರ್ಥವಾಗುವುದು ಕಷ್ಟ. ಸ್ಥಿತಿಸ್ಥಾಪಕಗುಣದ ಉದಾರತೆಯಿಂದಲೇ ಪಕ್ಷವನ್ನು ಬೆಳೆಸಿದ್ದಾರೆ. ಅವರ ಈ ಕ್ರಮವನ್ನು ಸಂಘಪರಿವಾರ ಕೂಡ ಒಪ್ಪಿಕೊಂಡಿದೆ.
“ಬಿಜೆಪಿಯ ಈಚಿನ ಬೆಳವಣಿಗೆಗೆ ಮೋದಿ ಅವರ ಕೆರಿಷ್ಮಾ ಒಂದೇ ಕಾರಣ ಎನ್ನುವುದು ಕೂಡ ಒಪ್ಪತಕ್ಕ ಮಾತಲ್ಲ. ಈ ಬೆಳವಣಿಗೆಯನ್ನು ನಾವು ಭಾರತೀಯ ಜನಸಂಘದ ದಿನಗಳಿಂದ ಬಿಜೆಪಿಯ ಇಂದಿನ ದಿನಗಳ ತನಕ ನೋಡಬೇಕು. ಒಂದೆಡೆ ಬಿಜೆಪಿ ಬೆಳೆಯುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ನಂತಹ ವಿಶಾಲ ತಳಹದಿಯ ಪಕ್ಷ ಸೊರಗುತ್ತಿದೆ. ಮತ್ತೊಂದೆಡೆ ಪ್ರಬಲವಾದ ಸಿದ್ಧಾಂತ ಮತ್ತು ಕಾರ್ಯಕರ್ತರ ಬಲವುಳ್ಳ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷ ಅಂಚಿಗೆ ಸರಿದಿದೆ. ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿರುವ ರಾಜ್ಯಗಳಲ್ಲಿ ಬಿಜೆಪಿ ಜನರ ಪ್ರಾದೇಶಿಕ ಒಲವುಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ಈ ನಿಟ್ಟಿನಲ್ಲಿ ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಒಡಿಶಾ ಮುಂತಾದ ಎಲ್ಲ ರಾಜ್ಯಗಳ ವಿದ್ಯಮಾನಗಳನ್ನು ಗಮನಿಸಬಹುದು. ಬಿಹಾರದಲ್ಲಿ ಮೈತ್ರಿ ಸರ್ಕಾರ ನಡೆಸಿದಾಗ ತನ್ನ ಶಾಸಕರ ಬಲ ಹೆಚ್ಚಿದ್ದಾಗಲೂ ಪಕ್ಷ ಮುಖ್ಯಮಂತ್ರಿ ಸ್ಥಾನವನ್ನು ನಿತೀಶ್ಕುಮಾರ್ ಅವರಿಗೇ ಬಿಟ್ಟುಕೊಟ್ಟಿತ್ತು” ಎಂದಿದ್ದಾರೆ ಲೇಖಕ ಅಜಯ್ಸಿಂಗ್.
ಅಂತಹ ನಿತೀಶ್ಕುಮಾರ್ ಈಗ ಕೇಂದ್ರದಲ್ಲಿ ಎನ್ಡಿಎ ಸರ್ಕಾರದ ಬದಲಿಗೆ ‘ಇಂಡಿಯಾ’ ಕೂಟದ ಸರ್ಕಾರವನ್ನು ತರಲು ಹವಣಿಸುತ್ತಿದ್ದಾರೆ. ಅದಕ್ಕಾಗಿ ಅವರು ಎಷ್ಟೆಷ್ಟು ರಾಜಿಗಳನ್ನು ಮಾಡಿಕೊಳ್ಳುತ್ತಾರೋ ಕಾಲವೇ ಹೇಳಬೇಕು.
(ಮುಗಿಯಿತು)
ಮುಖ್ಯಮಂತ್ರಿ ಮೋದಿ ಪದಚ್ಯುತಿ ಪ್ರಸ್ತಾಪ
ಅಯೋಧ್ಯೆಯಿಂದ ರೈಲಿನಲ್ಲಿ ಮರಳುತ್ತಿದ್ದ 59 ಮಂದಿಯನ್ನು ಗೋಧ್ರಾದಲ್ಲಿ ಬೆಂಕಿ ಹಚ್ಚಿ ಕೊಂದದ್ದು ಮತ್ತು ಅನಂತರ ರಾಜ್ಯದ ಹಲವೆಡೆ ಸ್ಫೋಟಗಳ ಹಿಂಸೆಗೆ ಸುಮಾರು 2,000 ಜನ ಬಲಿಯಾದ ಹಿಂಸಾಚಾರಗಳು ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಸ್ವಲ್ಪ ಕಾಲ ರಾಜಕೀಯ ಅಸ್ಥಿರತೆಯನ್ನು ಉಂಟುಮಾಡಿದವು. ಮುಖ್ಯಮಂತ್ರಿಯಾಗಿ ಸುಮಾರು ಐದು ತಿಂಗಳು ಕಳೆದಿದ್ದವು. ಭೀಕರ ಭೂಕಂಪದ ಪರಿಹಾರಕಾರ್ಯ ಬಿಟ್ಟರೆ ಬೇರೆ ದೊಡ್ಡ ಸುದ್ದಿಯೇನೂ ಇರಲಿಲ್ಲ. ಆಗ ಮೋದಿ ಒಮ್ಮೆಲೇ ಅಂತಾರಾಷ್ಟ್ರೀಯ ಸುದ್ದಿಯ ಕೇಂದ್ರಬಿಂದುವಾದರು. ಕೆಲವರು ಅವರನ್ನು ಹಿಂದುತ್ವದ ಸಾಕಾರಮೂರ್ತಿ, ಹಿಂದೂ ಹೃದಯಸಾಮ್ರಾಟ, ಆಡ್ವಾಣಿ ಮತ್ತು ಬಾಳ ಠಾಕ್ರೆ ಅವರಿಗಿಂತಲೂ ಬಲಶಾಲಿ ಎಂದು ಬಣ್ಣಿಸಿದರು; ಮತ್ತೆ ಕೆಲವರು ಅವರನ್ನು ಹಿಟ್ಲರ್ಗೆ ಹೋಲಿಸತೊಡಗಿದರು. ಒಂದೋ ಅವರನ್ನು ಮೆಚ್ಚಿ ಹೊಗಳುವುದು, ಇಲ್ಲವೇ ತೆಗಳುವುದು – ಎರಡೇ ನಡೆಯಿತು. ಮಧ್ಯದ ಮಾರ್ಗ ಇಲ್ಲ; ಅಲಕ್ಷಿಸಿ ಸುಮ್ಮನಿರುವುದೂ ಇಲ್ಲ. ಬೇಡವೆಂದರೂ ವಿವಾದಗಳು ಅವರನ್ನು ಮುತ್ತಿಕೊಳ್ಳುತ್ತಿದ್ದವು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಜಯ ತಂದುಕೊಡಬಲ್ಲರೆ? ಅಥವಾ ಅವರನ್ನು ಬದಲಿಸಬೇಕೆ ಎಂಬ ಚರ್ಚೆಗಳು ಕೂಡ ನಡೆದವು.
ಈ ಅನಿಶ್ಚಿತತೆಯನ್ನು ಉಂಟುಮಾಡಿದ್ದರಲ್ಲಿ ಪಕ್ಷದ ಉನ್ನತ ನಾಯಕರ ಪಾತ್ರವೂ ಇತ್ತು. ಗುಜರಾತ್ ಗಲಭೆ ಬಗ್ಗೆ ಸೆಕ್ಯುಲರ್ವಾದಿಗಳ ಟೀಕೆಯಿಂದ ರೋಸಿಹೋದ ನಾಯಕರು ಮೋದಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಮಾತನಾಡಿದರು. ಮೋದಿ ಅವರಿಂದ ರಾಜೀನಾಮೆಯನ್ನು ಕೊಡಿಸುವ ಬಗ್ಗೆ ಪ್ರಧಾನಿ ವಾಜಪೇಯಿ ಅವರು ಅರುಣ್ ಜೇಟ್ಲಿ ಅವರನ್ನು ಗಾಂಧಿನಗರಕ್ಕೂ ಕಳುಹಿಸಿದರು. 2002ರ ಏಪ್ರಿಲ್ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರ ರಾಜೀನಾಮೆಯನ್ನು ಪ್ರಕಟಿಸುವ ನಿರೀಕ್ಷೆಯಿತ್ತು. ಆದರೆ ಗೋವಾದಲ್ಲಿ ಜರಗಿದ ಕಾರ್ಯಕಾರಿಣಿ ಸಭೆಯಲ್ಲಿ ಇಬ್ಬರು ಯುವನಾಯಕರು ತಿರುಗಿ ಬಿದ್ದರು. ಮೋದಿ ಅವರನ್ನು ಈಗ ಪದಚ್ಯುತಗೊಳಿಸುವುದು ಪಕ್ಷದ ಸಿದ್ಧಾಂತಕ್ಕೆ ಹೊಂದಿಕೆ ಆಗುವುದಿಲ್ಲವೆಂದು ಪ್ರಮೋದ್ ಮಹಾಜನ್ ಮತ್ತು ಅರುಣ್ ಜೇಟ್ಲಿ ಹಿರಿಯ ನಾಯಕರ ಮುಂದೆ ಬಲವಾಗಿ ವಾದಿಸಿದರು. ಆಗ ವಾಜಪೇಯಿ ತಕ್ಷಣ ತಮ್ಮ ನಿರ್ಧಾರವನ್ನು ವಾಪಸು ಪಡೆದರೆಂದು ಪತ್ರಕರ್ತ, ಲೇಖಕ ಅಜಯ್ಸಿಂಗ್ ವಿವರಿಸಿದ್ದಾರೆ. ಅನಂತರ ಮೋದಿ ಪಕ್ಷಕ್ಕೆ ಗುಜರಾತಿನಲ್ಲಿ ಮೂರು ಚುನಾವಣೆಗಳನ್ನು ಗೆದ್ದುಕೊಟ್ಟರು!
ಮೋದಿ ಕಾರ್ಯಶೈಲಿ: 3 ಅಂಶಗಳು
ಜನಸಮುದಾಯದ ವಿಶ್ವಾಸವನ್ನು ಗೆಲ್ಲುವುದಕ್ಕಾಗಿ ಆರಂಭದಿAದಲೂ ತಾನು ಮೂರು ನಿರ್ಣಾಯಕ ಅಂಶಗಳಿಗೆ ಒತ್ತು ಕೊಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಅವುಗಳೆಂದರೆ – “ಒಂದು – ಜನತೆ ಮತ್ತು ರಾಷ್ಟ್ರದ ಪ್ರಯೋಜನಕ್ಕಾಗಿ ನಾನು ಯಾರನ್ನು ಕೂಡ ಸಂಪರ್ಕಿಸದೆ ಬಿಡುವುದಿಲ್ಲ. ಎರಡು – ವೈಯಕ್ತಿಕ ಲಾಭಕ್ಕಾಗಿ ನಾನು ಏನನ್ನೂ ಮಾಡುವುದಿಲ್ಲ. ಮೂರು – ನಾನು ನಿಜವಾದ ತಪ್ಪನ್ನು ಮಾಡಬಹುದು; ಆದರೆ ಏನನ್ನೂ ದುರುದ್ದೇಶದಿಂದ ಮಾಡುವುದಿಲ್ಲ.” ಅವರ ಈ ಮೂರು ಸಂದೇಶಗಳು ಬಿಜೆಪಿ ಕಾರ್ಯಕರ್ತರಿಗೆ ಅರ್ಥವಾಗಿದೆ ಎನ್ನಬೇಕು. ಬೆಳೆಯುತ್ತಲೇ ಇರುವ ಪಕ್ಷದ ಕಾರ್ಯಕರ್ತರಷ್ಟೇ ಅಲ್ಲ; ಪಕ್ಷದ ಬೆಂಬಲಿಗರು ಕೂಡ ಅದನ್ನು ತಿಳಿದುಕೊಂಡಿದ್ದಾರೆ. ಆ ಕಾರಣದಿಂದಾಗಿ ಹಿಂದೆ ಸ್ವಾತಂತ್ರ್ಯದ ಆರಂಭದ ವರ್ಷಗಳಲ್ಲಿ ಕಾಂಗ್ರೆಸ್ ಜನರ ನಡುವೆ ಎಂತಹ ಪ್ರಾಬಲ್ಯವನ್ನು ಸಾಧಿಸಿತ್ತೋ ಅಂತಹ ಪ್ರಾಬಲ್ಯ ಈಗ ಬಿಜೆಪಿಗೆ ಲಭ್ಯವಾಗಿದೆ. ರಾಜಕೀಯವಾಗಿ ಮೋದಿ ತುಂಬ ಚಾಣಾಕ್ಷರು ಎಂಬುದರಲ್ಲಿ ಸ್ವಲ್ಪವೂ ಅನುಮಾನವಿಲ್ಲ. ಚುನಾವಣೆಯನ್ನು ಗೆಲ್ಲಲು ಅವರು ಎಚ್ಚರದಿಂದ ತಮ್ಮ ಕಾರ್ಯತಂತ್ರವನ್ನು ಹೆಣೆಯುತ್ತಾರೆ. ಅದನ್ನು ಎಲ್ಲ ರಾಜಕಾರಣಿಗಳು ಮಾಡುತ್ತಾರೆ. ಮೋದಿ ಅವರ ಯಶಸ್ಸಿನ ಹಿಂದಿರುವ ನೈಜ ಕಾರಣವೆಂದರೆ, ಪಕ್ಷವನ್ನು ಕಟ್ಟಿ ಬೆಳೆಸುವ ಅವರ ಬುದ್ಧಿಮತ್ತೆ. ಅದನ್ನು ಅವರು ಕಲಿತದ್ದು ಸಂಘಪರಿವಾರದ ಹಲವು ನಾಯಕರಿಂದ; ಕಲಿತದ್ದನ್ನು ಯಶಸ್ವಿಯಾಗಿ ಅನ್ವಯಿಸಿದವರು ಅವರೇ. ಇದು ದಶಕಗಳ ಸಾಧನೆ.