ಭಗವಂತನು ಬಹಿರಂಗದಲ್ಲಿ ಸಕಲ ಸೃಷ್ಟಿಯಾಗಿ ತೋರಿದನು. ಅವನೇ ನಮ್ಮ ಅಂತರಂಗದಲ್ಲಿ ಹೃದಯದ ಮಾಧುರ್ಯವಾಗಿ ನೆಲೆಸಿದನು. ಅತ್ತ ಲಕ್ಷ್ಯವಿಲ್ಲದ್ದರಿಂದ ನಮಗೆ ಭಗವತ್ಪ್ರೇಮದ ಭಾವ ಬರುತ್ತಿಲ್ಲ. ನಮ್ಮ ಹೃದಯದಲ್ಲಿ ಹುದುಗಿರುವ ಈ ಪರಮ ಪ್ರೇಮವನ್ನು ಅನುಭವಿಸುವುದೇ ಭಕ್ತಿ!
ಒಬ್ಬ ತರುಣ ಶಿಷ್ಯ. ಸಶಕ್ತ, ಸುಂದರಾಂಗ, ಸುಸಂಸ್ಕಾರಿ. ಗುರುಗಳ ಸೇವೆಯನ್ನು ಶ್ರದ್ಧೆಯಿಂದ ಮಾಡಿಕೊಂಡಿದ್ದ. ಸದಾ ಗುರುಸಾನ್ನಿಧ್ಯದಲ್ಲಿಯೇ ಇರುತ್ತಿದ್ದ. ಒಂದು ದಿನ ಗುರುಗಳೊಂದಿಗೆ ಪಯಣ ಹೊರಟ. ಬಿಸಿಲು ದಿನ. ನಡೆದು ನಡೆದು ದಣಿದರು. ಅಲ್ಲೊಂದು ಹಳ್ಳ. ಹಳ್ಳದ ದಡದಲ್ಲೊಂದು ಮರ. ಆ ಮರದಡಿ ಬಂದು ಕುಳಿತರು.
ಗುರುಗಳು ಶಿಷ್ಯನನ್ನು ಕರೆದು ಹೇಳಿದರು, “ಸಮೀಪದಲ್ಲಿ ಒಂದು ಹಳ್ಳಿಯಿದೆ. ನೀನು ಅಲ್ಲಿಗೆ ಹೋಗಿ ಭಿಕ್ಷೆ ಮಾಡಿಕೊಂಡು ಬಾ. ಇಲ್ಲಿಯೇ ಊಟಮಾಡಿ, ವಿಶ್ರಮಿಸಿ, ಮುಂದೆ ಹೋಗೋಣ.” “ಅಪ್ಪಣೆ ಗುರುಗಳೆ” ಎಂದು ಶಿಷ್ಯ ಭಿಕ್ಷೆಗೆ ಹೊರಟ.
ಊರನ್ನು ತಲಪಿದ. ನಾಲ್ಕು ಮನೆ ಭಿಕ್ಷೆ ಮಾಡಿದ. ‘ಐದನೆಯ ಮನೆ ಭಿಕ್ಷೆ ಮಾಡಿದರೆ ಆಯಿತು. ಹಿಂತಿರುಗುವುದು’ ಎಂದು ಹೋದ. ಅದು ದೊಡ್ಡ ಮನೆ. ಒಳಗಿಂದ ಒಬ್ಬ ಹೆಣ್ಣು ಮಗಳು ಭಿಕ್ಷೆ ತಂದಳು. ಹದಿನೆಂಟು ವರುಷದ ತರುಣಿ ಅವಳು. ಅಪ್ರತಿಮ ಸುಂದರಿ. ತರುಣ ಶಿಷ್ಯ ಅವಳನ್ನು ನೋಡಿದ. ಮತ್ತೆ ನೋಡಿದ. ನೋಡುತ್ತಲೇ ಇದ್ದ! ತಾನಾರು, ತಾನು ಬಂದ ಉದ್ದೇಶವೇನು, ಎಲ್ಲವನ್ನೂ ಮರೆತಿದ್ದ!
ಆತ ಆ ತರುಣಿಯ ತಂದೆಗೆ ತನ್ನ ಭಾವನೆ ತಿಳಿಸಿದ. ಅವರಿಗೂ ಸಂತಸ. ಲಗ್ನ ಮಾಡಿದರು. ಪ್ರಪಂಚ ಆರಂಭವಾಯಿತು. ಎರಡು ಮಕ್ಕಳಾದವು. ಸುಖರೂಪದ ಸಂಸಾರ ಸಾಗಿತ್ತು ಆ ಶಿಷ್ಯನದು! ಒಂದು ದಿನ, ಸತಿಪತಿಗಳು ಸರಸ ಮಾತನಾಡುತ್ತಿದ್ದರು. ಏನೋ ಸಂದರ್ಭ. ಮಾತು ಮಾತಿಗೆ ಹತ್ತಿಕೊಂಡು ಬೆಳೆಯಿತು. ಸತಿ ಸಹಜ ನುಡಿದಳು, “ನೀವು ಸ್ವಲ್ಪ ವಿಚಾರ ಮಾಡಬೇಕು; ಇಂದು ಈ ಮನೆಯೇ ನನ್ನದೆನ್ನುವಂತೆ ಮಾತನಾಡುತ್ತಿರುವಿರಲ್ಲಾ! ಒಂದು ದಿನ ನೀವಿಲ್ಲಿಗೆ ಜೋಳಿಗೆ ಹಿಡಿದುಕೊಂಡು ಬಂದಿದ್ದಿರಿ! ಮರೆತಿಲ್ಲವಷ್ಟೆ?”
ತಕ್ಷಣ ಶಿಷ್ಯನಿಗೆ ನೆನಪಾಗಿತ್ತು. ಅರಿವಿನ ಸಾಗರನಾದ ಗುರುವನ್ನು ಹುಡುಕಿಕೊಂಡು ಹೊರಟಿದ್ದ! ಗುರುಗಳ ಸಾನ್ನಿಧ್ಯದಲ್ಲಿ ಇದ್ದ ಶಿಷ್ಯನ ಗತಿಯೇ ಹೀಗೆ! ಇನ್ನು……..?!
ವಿಷಯಗಳ ಸೆಳೆತಕ್ಕೆ ಮನುಷ್ಯನು ಒಳಗಾಗುತ್ತಾನೆ. ಪರಮ ಸತ್ಯವನ್ನೂ, ಪರಮ ಪ್ರೇಮವನ್ನೂ ಮರೆಯುತ್ತಾನೆ. ಭಕ್ತಿಯ ಲಾಭವನ್ನು ಕಳೆದುಕೊಳ್ಳುತ್ತಾನೆ. ಕಾರಣ, ನಾವು ಸತ್ಯವನ್ನೆಂದೂ ಮರೆಯಬಾರದು. ಅದಕ್ಕೆ ನಾವು ನಿತ್ಯವೂ ಅರಿತವರ ಸಂಗದೊಳಗಿರಬೇಕು. ಅದೇ ಸತ್ಸಂಗ. ಸತ್ಸಂಗದಲ್ಲಿ ಮೂರು ಪ್ರಕಾರ. 1. ಸಂತರ ಸಂಗ, 2. ನಿಸರ್ಗ ಸಂಗ, 3. ನೆನಹಿನ ಸಂಗ.
[ಪೂಜ್ಯ ಸ್ವಾಮಿಗಳ ‘ಭಕ್ತಿಯೋಗ’ ಪ್ರವಚನಸಂಕಲನದಿಂದ.
ಸಂಪಾದನ: ಡಾ|| ಶ್ರದ್ಧಾನಂದ ಸ್ವಾಮಿಗಳು.
ಕೃಪೆ: ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು.]