ನಮ್ಮ ಕಲ್ಪನೆಯಂತೆಯೇ ಈ ಜಗತ್ತೆಲ್ಲ ಆಗಬೇಕು ಎಂಬ ಕನಸು ನಮಗೆ. ಅದು ಹೇಗೆ ಸಾಧ್ಯ ಹೇಳಿ? ನಮ್ಮ ಅವಾಸ್ತವ ಕನಸುಗಳೇ ತಾಪಕಾರಣ! ಇದಕ್ಕೆ ಪರಿಹಾರವೆಂದರೆ ‘ದೇವಚಿಂತನೆ’; ಜಗತ್ತಿನ ಜಗದೀಶ್ವರನ ಸರಿಯಾದ ಜ್ಞಾನ; ಪರಿಣಾಮದತ್ತ ಬಹಳ ಗಮನಹರಿಸದೆ ಪವಿತ್ರ ಕಾರ್ಯ ಮಾಡುವುದು. ಸತ್ಸಂಕಲ್ಪದ ಪ್ರಾರ್ಥನೆಗೈವುದು. ಆದರೆ ಆ ಕುರಿತು ಅತಿಯಾದ ಚಿಂತೆ ಬೇಡ. ಈ ಸಂಗತಿ ಮಾತನಾಡಿದಷ್ಟು ಸರಳವೇನಲ್ಲ ಆಚರಣೆಯಲ್ಲಿ ತರುವುದು. ಈ ಪ್ರವಚನದಲ್ಲಿ ನಾವೀಗ ಮಗ್ನರು. ಮನಸ್ಸು ತಿಳಿ. ಆದರೇನು? ಇದು ಮುಗಿದು ಹೊರಗೆ ಹೋಗುವಾಗ ನಮ್ಮ ಹೊಸ ಕಾಲ್ಮರಿ ಕಾಣದಾಗಿದ್ದರೆ ತತ್ಕ್ಷಣ ತಾಪವಾಗುತ್ತದೆ. ನನಗೂ ಅಷ್ಟೇ, ನಿಮಗೂ ಅಷ್ಟೇ. ಹಾಗೆ ತಾಪವಾಗಲೇಬಾರದೆಂದಿಲ್ಲ. ಅದು ಆ ಕ್ಷಣ ಮಾತ್ರವಿರಬೇಕು. ದೀರ್ಘಕಾಲಿಕವಾಗಬಾರದು, ಅಷ್ಟೇ. ಗಾಳಿ ಬಿಟ್ಟಾಗ ಎಲೆ ಅಲುಗಿದಂತೆ, ಕಲ್ಲು ತೂರಿದಾಗ ತೆರೆ ಆಡುವಂತೆ ಬಳಿಕ ಶಾಂತ. ಹಾಗೆ ನಾವಿರಲು ಕಲಿಯದಿದ್ದರೆ ಬದುಕು ಹಾಳಾಗುತ್ತದೆ.
ಚಿಂತೆ ನಮ್ಮನ್ನು ನಾಶಮಾಡಬಾರದು. ದೇವರು ಈ ಸುಂದರ ವಿಶ್ವವನ್ನು ಕೊಟ್ಟಿದ್ದಾನೆ. ನಾವು ಸಂತೋಷದಿಂದ ನೋಡಬೇಕು; ಕೇಳಬೇಕು; ಮಾಡಬೇಕು; ಅನುಭವಿಸಬೇಕು. ಚಿಂತೆ ಏಕೆ?
ವಿಶ್ವದ ಬಗ್ಗೆ, ವಿಶ್ವೇಶ್ವರನ ಬಗೆಗೆ ಚಿಂತನೆ ಮಾಡುವುದು ಬೇಕಾದಷ್ಟಿದೆ. ಯಾವನೋ ಒಬ್ಬ ಮನುಷ್ಯ ನುಡಿದ ಮಾತಿಗೆ ಅಷ್ಟೇಕೆ ಮಹತ್ತ್ವ ಕೊಡುವುದು? ಇಮ್ಯಾನುಯಲ್ ಕ್ಯಾಂಟನೆಂಬ ಮಹಾನುಭಾವ ಭಗವಚ್ಚಿಂತನೆ, ಸತ್ಯಚಿಂತನೆಯಲ್ಲಿ ಎಷ್ಟು ಆಳವಾಗಿ ತೊಡಗಿದನೆಂದರೆ ಲಗ್ನವಾಗುವುದನ್ನೇ ಮರೆತ! ಎಂಬತ್ತು ವರುಷ. ಆತ ಸತ್ಯ ನೆನಹಿನಲ್ಲಿ ಮರೆತ. ನಾವು ಲಗ್ನದ ಗದ್ದಲದಲ್ಲಿ ಸತ್ಯವನ್ನೇ ಮರೆತೆವು! ಸಣ್ಣಪುಟ್ಟ ಸಂಗತಿಗಳಿಗಾಗಿ ಸಮಗ್ರ ಆಯುಷ್ಯವನ್ನೇ ಸವೆಸುವುದೇಕೆ? ಅದು ಸುಖವನ್ನೆಲ್ಲಿ ಕೊಟ್ಟೀತು? ವಿಜ್ಞಾನ ಕ್ಷೇತ್ರದಲ್ಲಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಚಿಂತನೆಗೆ ಬೇಕಾದಷ್ಟು ಅವಕಾಶ. ಈ ಚಿಂತನೆಯಿಂದ ಶಾಂತಿ ಸಮಾಧಾನ ಇದೆ. ಕೃತಕೃತ್ಯತೆ ಇದೆ. ನಡೆದುಹೋದ ಸಿಹಿ ಕಹಿ ಘಟನೆಗಳನ್ನು ಆಯಾ ಕ್ಷಣದಲ್ಲಿ ಅನುಭವಿಸಿ ಮರೆತುಬಿಡುವ ಸಾಧನೆ ಅನಿವರ್ಯ. ಬದುಕು ‘ಹೇಮ’ವಾಗಲು, ಮರೆವುದೂ ಒಂದು ಕಲೆ. ಮನಸ್ಸು ಉದಾತ್ತ ಕರ್ಯಗಳಲ್ಲಿ ತೊಡಗಿ ಸಂತೋಷಿಸಲು ಕಲಿತರೆ ಮರೆವು ಸುಲಭಸಾಧ್ಯ. ಅದಕ್ಕಾಗಿ ಸತ್ಯಚಿಂತನೆ. ಅದು ಹೆಚ್ಚಿದಷ್ಟೂ ಸಾಮಾನ್ಯ ಸಂಗತಿಗಳ ‘ಚಿಂತೆ’ ಕ್ಷೀಣಿಸುತ್ತದೆ.
ಹೇಗೆ ಸೌಂದರ್ಯ, ಸಿರಿ, ಶಕ್ತಿಗಳು ಸಂಪತ್ತುಗಳೋ ಹಾಗೆ ಭಾವವೂ ಅಮೌಲ್ಯ ಸಂಪದ. ಒಳ್ಳೆಯದನ್ನು ನೋಡಿ, ಮುಟ್ಟಿ, ಸವಿದು ಸಂತಸಪಡುವ ಬಾಲಕನ ಭಾವ ಸುಭಾವ! ಅವನ ಪ್ರಸನ್ನತೆಗದು ಕಾರಣ.
[ಪೂಜ್ಯ ಸ್ವಾಮಿಗಳ ‘ಭಗವಚ್ಚಿಂತನ’
ಪ್ರವಚನಸಂಕಲನದಿಂದ.
ಕೃಪೆ: ಜಗದ್ಗುರು ಶ್ರೀ ಶಿವರಾತ್ರೀಶ್ವರ
ಗ್ರಂಥಮಾಲೆ, ಮೈಸೂರು.]