ಶಾಂತಿ, ತೃಪ್ತಿ ಮತ್ತು ಸಂತೋಷ – ಇವುಗಳು ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇರಬೇಕಾದ ಸಹಜವಾದ ಗುಣಗಳು. ಆದರೆ, ಮನುಷ್ಯನು ಬಾಹ್ಯಪ್ರಪಂಚದ ವಸ್ತುಗಳಲ್ಲಿ ಇವುಗಳನ್ನು ತಪ್ಪುಕಲ್ಪನೆಯಿಂದಾಗಿ ಹುಡುಕುತ್ತಾನೆ. ಮನಸ್ಸು ಯಾವ ವಸ್ತುವನ್ನು ಹಂಬಲಿಸುವುದೋ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ. ಅವಿರತವಾಗಿ ಬದಲಾಗುವ ಬಾಹ್ಯಪ್ರಪಂಚದ ಶಾಶ್ವತವಾದ ಸುಖವು ದೊರೆಯುತ್ತದೆ ಎಂದು ಆಶಾಭಾವನೆಯನ್ನು ಇಟ್ಟುಕೊಳ್ಳುತ್ತಾನೆ.
ಪ್ರಾಪಂಚಿಕವಸ್ತುಗಳನ್ನು ಕಂಡು ಅವುಗಳನ್ನು ಪಡೆಯಲು ಪ್ರಯತ್ನಿಸಿದಾಗ ಮನಸ್ಸು ಪ್ರಕ್ಷುಬ್ಧವಾಗುತ್ತದೆ. ಅದು ದೊರೆತ ಕೂಡಲೇ, ಮನುಷ್ಯನು ಕ್ಷಣಿಕವಾದ ಸುಖವನ್ನು ಅನುಭವಿಸುತ್ತಾನೆ. ಮರುಭೂಮಿಯಲ್ಲಿ ಮರೀಚಿಕೆಯನ್ನು ಕಂಡು ಬಾಯಾರಿಕೆಯನ್ನು ತಣಿಸಿಕೊಳ್ಳುವ ಪ್ರಯತ್ನದಂತೆಯೇ ಈ ವ್ಯವಹಾರವು ಇರುತ್ತದೆ.
‘ನಿಯಂತ್ರಣವಿಲ್ಲದ ವಾಸನೆಗಳು ವಿವೇಕದಿಂದ ಶಮನವಾದಾಗಲೇ ನಿಜವಾದ ಸಂತೋಷವು ಲಭ್ಯವಾಗುತ್ತದೆ’ ಎಂದು ನಮ್ಮ ಶಾಸ್ತ್ರಗಳು ತಿಳಿಸುತ್ತವೆ. ಬಾಹ್ಯವಸ್ತುಗಳಲ್ಲಿ ನಿರತರಾಗಿರುವಾಗ ನಿಜವಾದ ಸುಖ, ಸಮಾಧಾನವು ಲಭಿಸುವುದಿಲ್ಲ. ಯಾವುದಾದರೂ ಕರ್ಮದಿಂದಾಗಲಿ, ಅನುಭವದಿಂದಾಗಲಿ ಮನಸ್ಸಿನಲ್ಲಿ ಮೂಡುವ ಅನಿಯಂತ್ರಿತವಾದ ಸ್ವಭಾವವನ್ನು ‘ವಾಸನೆ’ಗಳು ಎಂದು ನಮ್ಮ ಪೂರ್ವಜರು ತಿಳಿಸಿದ್ದಾರೆ. ಇವುಗಳು ಮನುಷ್ಯನನ್ನು ಮೋಹಪರವಶನನ್ನಾಗಿ ಮಾಡಿ ಸತತವಾಗಿ ಬಾಹ್ಯಪ್ರಪಂಚದ ವಸ್ತುವಿನ ಕಡೆಗೆ ಸೆಳೆಯುತ್ತವೆ.
‘ಪ್ರವಾಹದಂತೆ ಇರುವ ವಾಸನೆಗಳನ್ನು ತಕ್ಷಣವೇ ಹತೋಟಿಗೆ ತಂದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಅವುಗಳು ಮೇಲೆ ಏಳದಂತೆ ತಡೆಯುವ ಪ್ರಯತ್ನವನ್ನು ಮಾಡುತ್ತಾ, ಅಂತರಂಗದಲ್ಲಿ ಸುಖ-ಸಂತೋಷವನ್ನು ಹುಡುಕುವ ಪ್ರಯತ್ನವನ್ನು ಮಾಡಬೇಕು’ ಎಂದು ಶಾಸ್ತ್ರಗಳು ಉಪದೇಶಿಸುತ್ತವೆ.
ಅವಿರತವಾದ ಅಭ್ಯಾಸದಿಂದ ಸಾಧಕನು ಎಲ್ಲ ವಾಸನೆಗಳನ್ನೂ ನಿಯಂತ್ರಿಸಿ ಅಂತರಂಗದಲ್ಲಿ ಶಾಂತಿಯನ್ನು ಅನುಭವಿಸಬಹುದು. ಮನಸ್ಸು ಅಂತರಂಗದಲ್ಲಿ ನೆಲಸಿದಾಗ ವಾಸನೆಗಳೂ ಶಾಂತವಾಗುತ್ತವೆ.
ಬಾಹ್ಯಪ್ರಪಂಚದಲ್ಲಿ ಸುಖವನ್ನು ಹುಡುಕುವ ಅಭ್ಯಾಸವು ನಿಯಂತ್ರಿತವಾದಾಗ, ಮನಸ್ಸು ಯಾವುದೇ ಅಡಚಣೆಯಿಲ್ಲದೆ ಪರಮಸುಖಪ್ರದವಾದ ಆತ್ಮನಲ್ಲಿ ನೆಲೆಸುವುದು ಸ್ವಾಭಾವಿಕವಾಗುತ್ತದೆ.
ಜಗದ್ಗುರು ಶ್ರೀ ಆದಿಶಂಕರಾಚಾರ್ಯರು, ಈ ವಿಷಯವಾಗಿ –
ಯಥಾ ಯಥಾ ಪ್ರತ್ಯಗವಸ್ಥಿತಂ ಮನಸ್ತಥಾ ತಥಾ
ಮುಂಚಂತಿ ಬಾಹ್ಯವಾಸನಾಃ |
ನಿಃಶೇಷಮೋಕ್ಷೇ ಸತಿ ವಾಸನಾನಾಮಾತ್ಮಾನುಭೂತಿಃ
ಪ್ರತಿಬಂಧಶೂನ್ಯಾ ||
– ಎಂದು ಅಪ್ಪಣೆಕೊಡಿಸಿರುತ್ತಾರೆ.
ಮನಸ್ಸಿನ ಚಂಚಲತೆಯನ್ನು ನಿಗ್ರಹಮಾಡಿಕೊಳ್ಳುವುದು ಸಾಧನೆಯ ಮೊದಲನೆಯ ಅಪೇಕ್ಷೆಯಾಗಿರುತ್ತದೆ. ಎಲ್ಲ ಆಧ್ಯಾತ್ಮಿಕ ಸಾಧನೆಯ ಗುರಿಯೂ ಇದೇ ಆಗಿರುತ್ತದೆ. ಕಠಿಣವಾದ ಈ ಸಾಧನೆಯ ಸಮುದ್ರಯಾನದಲ್ಲಿ ಸದ್ಗುರುವು ಮಾತ್ರ ಸಾಧಕನನ್ನು ಕ್ಷೇಮವಾಗಿ ದಡಕ್ಕೆ ಸೇರಿಸಲು ಶಕ್ತನಾಗಿರುತ್ತಾನೆ.
ಎಲ್ಲರೂ ಇದನ್ನು ಚೆನ್ನಾಗಿ ಅರಿತುಕೊಂಡು ಶಾಶ್ವತವಾದ ಅಂತಃಸುಖವನ್ನು ಪಡೆಯುವಂತಾಗಲೆಂದು ಹರಸುತ್ತೇವೆ.
(ಕನ್ನಡ ಅನುವಾದ: ಜಿ. ವಿಜಯಕುಮಾರ್
ಕೃಪೆ: ‘ಶಂಕರಕೃಪಾ’ ಮಾಸಪತ್ರಿಕೆ)