ವಾರಾಣಸಿ ಎಂಬ ಪ್ರಸಿದ್ಧವಾದ ನಗರವಿದೆ. ಅಲ್ಲಿ ಹಿಂದೆ ಪ್ರತಾಪಮುಕುಟನೆಂಬ ರಾಜನಿದ್ದನು. ಅವನಿಗೆ ಮನ್ಮಥನಂತೆ ಸುಂದರನಾದ ವಜ್ರಮುಕುಟನೆಂಬ ಮಗನಿದ್ದನು. ಅವನ ಮಂತ್ರಿಗೂ ರಾಜಕುಮಾರನ ವಯಸ್ಸಿನವನೇ ಆದ ಬುದ್ಧಿಶರೀರನೆಂಬ ಮಗನಿದ್ದನು. ರಾಜಕುಮಾರನೂ ಮಂತ್ರಿಕುಮಾರನೂ ಒಟ್ಟಿಗೆ ಕೂಡಿ ಆಡಿ ಬೆಳೆದು ಆತ್ಮೀಯರಾಗಿದ್ದರು.
ಒಮ್ಮೆ ಅವರಿಬ್ಬರೂ ಬೇಟೆಗೆಂದು ಕಾಡಿಗೆ ತೆರಳಿದ್ದರು. ಬೇಟೆಯಾಡುತ್ತ ಕಾಡಿನಲ್ಲಿ ಬಹುದೂರ ಹೋದಾಗ ಅವರು ಅಲ್ಲಿ ಒಂದು ವಿಶಾಲವಾದ ಕೊಳವನ್ನು ಕಂಡರು. ಅದೇ ಹೊತ್ತಿಗೆ ಸರಿಯಾಗಿ ಅನುಪಮ ಸುಂದರಿಯಾದ ಸ್ತ್ರೀಯೊಬ್ಬಳು ಅಲ್ಲಿಗೆ ಬಂದಳು. ರಾಜಪುತ್ರನು ಅವಳ ಸೌಂದರ್ಯವನ್ನು ಕಂಡು ಅವಳಲ್ಲಿ ಮೋಹಗೊಂಡನು. ಅವಳೂ ರಾಜಪುತ್ರನಲ್ಲಿ ಮೋಹಗೊಂಡಳು.
ಈಕೆ ಯಾರಿರಬಹುದೆಂದು ರಾಜಕುಮಾರನು ಯೋಚನೆ ಮಾಡುತ್ತಿದ್ದಾಗ ಅವಳು ಸಂಜ್ಞೆಯ ರೂಪದಲ್ಲಿ ತನ್ನ ತಲೆಯಿಂದ ಒಂದು ನೈದಿಲೆ ಹೂವನ್ನು ತೆಗೆದು ಕಿವಿಗೆ ಸಿಕ್ಕಿಸಿಕೊಂಡಳು. ಮತ್ತೊಂದು ಹೂವನ್ನು ಹಲ್ಲಿನಿಂದ ಕಡಿದುಹಾಕಿದಳು. ಇನ್ನೊಂದು ತಾವರೆ ಹೂವನ್ನು ಮುಡಿದುಕೊಂಡು ಎದೆಯ ಮೇಲೆ ಕೈಯನ್ನು ಇಟ್ಟುಕೊಂಡಳು. ಆಮೇಲೆ ಯಾವ ಮಾತನ್ನೂ ಆಡದೆ ಅಲ್ಲಿಂದ ಹೊರಟುಹೋದಳು. ಅವಳು ಮಾಡಿದ ಸಂಜ್ಞೆಯೊಂದೂ ರಾಜಕುಮಾರನಿಗೆ ಅರ್ಥವಾಗಲಿಲ್ಲ, ಆದರೆ ಮಂತ್ರಿಕುಮಾರನಿಗೆ ಅರ್ಥವಾಗಿತ್ತು.
ಬೇಟೆಯನ್ನು ಮುಗಿಸಿ ಅವರಿಬ್ಬರೂ ರಾಜಧಾನಿಗೆ ಹಿಂದಿರುಗಿದರು. ರಾಜಕುಮಾರನು ಅಲ್ಲಿ ಕಂಡ ಸುಂದರಿಯ ನೆನಪಿನಲ್ಲೇ ಇದ್ದನು. ಮಂತ್ರಿಕುಮಾರನೊಂದಿಗೆ ಮಾತನಾಡುತ್ತ ಅವನು ಅವಳನ್ನೇ ನೆನಪಿಸಿಕೊಂಡು “ಅವಳು ಯಾರು, ಯಾವ ದೇಶದವಳು, ಒಂದೂ ಗೊತ್ತಾಗಲಿಲ್ಲವಲ್ಲ!” ಎಂದು ಹೇಳಿಕೊಂಡನು. ಆಗ ಮಂತ್ರಿಕುಮಾರನು – “ಅವಳು ಸಂಜ್ಞೆಯ ರೂಪದಲ್ಲಿ ಹೇಳಿದಳಲ್ಲ, ನೈದಿಲೆಯನ್ನು ಕಿವಿಯ ಮೇಲೆ ಇಟ್ಟುಕೊಂಡಿದ್ದಕ್ಕೆ ತಾನು ಕರ್ಣೋತ್ಪಲನ ದೇಶದವಳು ಎಂದರ್ಥ. ಮತ್ತೊಂದು ಹೂವನ್ನು ಹಲ್ಲಿನಿಂದ ಕಡಿದಿದ್ದಕ್ಕೆ ತಾನು ದಂತಘಾಟಕನ ಮಗಳು ಎಂದರ್ಥ. ತಾವರೆ ಹೂವನ್ನು ಮುಡಿದುಕೊಂಡಿದ್ದಕ್ಕೆ ತನ್ನ ಹೆಸರು ಪದ್ಮಾವತಿ ಎಂದರ್ಥ. ಎದೆಯ ಮೇಲೆ ಕೈ ಇಟ್ಟುಕೊಂಡಿದ್ದಕ್ಕೆ ತನಗೆ ನಿನ್ನ ಮೇಲೆ ಪ್ರಾಣ ಎಂದರ್ಥ. ಅವಳು ನಿನ್ನನ್ನು ಪ್ರೀತಿಸುತ್ತಿದ್ದಾಳೆ. ಅದರಲ್ಲಿ ಯಾವುದೇ ಸಂಶಯವಿಲ್ಲ” ಎಂದನು.
ಅದನ್ನು ಕೇಳಿ ರಾಜಕುಮಾರನು ಅತ್ಯಂತ ಸಂತೋಷದಿಂದ “ಹಾಗಿದ್ದರೆ ಈಗಿಂದೀಗಲೇ ಹೊರಡೋಣ” ಎಂದು ಹೇಳಿ ಮಂತ್ರಿಕುಮಾರನೊಂದಿಗೆ ಹೊರಟೇಬಿಟ್ಟನು. ಅವರಿಬ್ಬರೂ ಬೇಟೆಯ ನೆಪದಲ್ಲಿ ಹೊರಟರಾದರೂ, ದಾರಿಯಲ್ಲಿ ಅನುಚರರ ಕಣ್ಣು ತಪ್ಪಿಸಿ, ನೇರವಾಗಿ ಕರ್ಣೋತ್ಪಲನು ಆಳುತ್ತಿದ್ದ ಕಳಿಂಗದೇಶಕ್ಕೆ ಬಂದರು. ಅಲ್ಲಿ ಅಡುಗೂಲಜ್ಜಿಯ ಮನೆಯಲ್ಲಿ ಉಳಿದುಕೊಂಡರು. ಮಂತ್ರಿಪುತ್ರನು ಅಡುಗೂಲಜ್ಜಿಯೊಂದಿಗೆ ಮಾತನಾಡುತ್ತ “ಅಮ್ಮ, ದಂತಘಾಟಕನೆಂಬವನು ನಿನಗೆ ಗೊತ್ತೇ?” ಎಂದು ಕೇಳಿದನು.
“ಹೌದು, ಅವನಿಗೆ ಪದ್ಮಾವತಿಯೆಂಬ ಮಗಳಿದ್ದಾಳೆ. ನಾನು ಅವಳ ದಾದಿ” ಎಂದು ಅವಳು ಹೇಳಿದಳು.
ಮಂತ್ರಿಪುತ್ರನು ಅವಳಿಗೆ ದುಡ್ಡಿನ ಆಸೆ ತೋರಿಸಿ “ಹಾಗಿದ್ದರೆ ನೀನು ಒಂದು ಕೆಲಸ ಮಾಡು, ಏಕಾಂತದಲ್ಲಿ ಆ ಪದ್ಮಾವತಿಯ ಹತ್ತಿರಕ್ಕೆ ಹೋಗಿ ನೀನು ಕೊಳದ ಬಳಿ ನೋಡಿದ ರಾಜಕುಮಾರನು ನಿನ್ನನ್ನು ಕಾಣಲು ಬಂದಿದ್ದಾನೆ”ಎಂದು ಅವಳಿಗೆ ತಿಳಿಸು ಎಂದನು.
ಅಡುಗೂಲಜ್ಜಿಯು ಅದರಂತೆ ಪದ್ಮಾವತಿಯ ಹತ್ತಿರ ಹೋಗಿ ಹೇಳಿದಳು. ಆ ಮಾತನ್ನು ಕೇಳುತ್ತಿದ್ದಂತೆಯೆ ಪದ್ಮಾವತಿಯು ಕೋಪಗೊಂಡವಳಂತೆ ಅಜ್ಜಿಯ ಎರಡೂ ಕೆನ್ನೆಗಳಿಗೆ ಹೊಡೆದು ಕಳಿಸಿದಳು. ಅದನ್ನು ಕೇಳಿ ರಾಜಕುಮಾರನಿಗೆ ನಿರಾಸೆಯಾಯಿತು. ಆದರೆ ಮಂತ್ರಿಕುಮಾರನು ಸಂತೋಷಪಟ್ಟು ಅವನಿಗೆ – “ಮಿತ್ರ, ಆಕೆ ಕೈಗೆ ಕರ್ಪೂರ ಹತ್ತಿಸಿಕೊಂಡು ಕೆನ್ನೆಯ ಮೇಲೆ ಹತ್ತು ಬೆರಳು ಕಾಣಿಸುವಂತೆ ಹೊಡೆದಿದ್ದಾಳೆ. ಅದಕ್ಕೆ ‘ಈಗ ಶುಕ್ಲಪಕ್ಷ, ಅದರಲ್ಲಿ ಇನ್ನೂ ಹತ್ತು ದಿನಗಳಿವೆ. ಅದು ಕಳೆಯಲಿ’ ಎಂದು ಅರ್ಥ” ಎಂದು ವಿವರಿಸಿದನು.
ರಾಜಕುಮಾರನಿಗೆ ಸ್ವಲ್ಪ ಸಮಾಧಾನವಾಯ್ತು. ಅವನು ಅಷ್ಟು ದಿನ ಹೇಗೋ ತಡೆದುಕೊಂಡಿದ್ದನು. ಅದು ಕಳೆಯುತ್ತಿದ್ದಂತೆ ಮಂತ್ರಿಪುತ್ರನು ಅಡುಗೂಲಜ್ಜಿಯನ್ನು ಮತ್ತೆ ಕಳುಹಿಸಿದನು. ಆದರೆ ಈ ಸಲ ಪದ್ಮಾವತಿಯು ಅಜ್ಜಿಯು ಮಾತನಾಡಲು ಆರಂಭಿಸಿದ ಕೂಡಲೇ ಅರಗಿನ ರಸ ಅಂಟಿಕೊಂಡಿದ್ದ ತನ್ನ ಕೈಯಿಂದ ಅವಳ ಎದೆಯ ಮೇಲೆ ಮೂರು ಬೆರಳು ಕಾಣುವಂತೆ ಹೊಡೆದು ಕಳುಹಿಸಿದಳು. ಅದನ್ನು ನೋಡಿ ರಾಜಪುತ್ರನು ಮತ್ತೆ ನಿರಾಶನಾದನು. ಆದರೆ ಮಂತ್ರಿಪುತ್ರನು “ಗೆಳೆಯಾ, ಅನ್ಯಥಾ ಭಾವಿಸಬೇಡ. ‘ನಾನು ಬಹಿಷ್ಠೆಯಾಗಿದ್ದೇನೆ, (ಹೊರಗಾಗಿದ್ದೇನೆ) ಮೂರುದಿನ ಕಳೆಯಲಿ’ ಎಂದು ಅದಕ್ಕೆ ಅರ್ಥ” ಎಂದು ವಿವರಿಸಿದನು. ರಾಜಪುತ್ರನಿಗೆ ಸಂತೋಷವಾಯ್ತು. ಮತ್ತೆ ಮೂರು ದಿನ ಕಳೆದವು.
ಪುನಃ ಅಡುಗೂಲಜ್ಜಿಯನ್ನು ಅವರು ಪದ್ಮಾವತಿಯ ಬಳಿಗೆ ಕಳುಹಿಸಿದರು. ಈ ಸಲ ಮಾತ್ರ ಪದ್ಮಾವತಿಯು ಅವಳನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿ, ಊಟ ಉಪಚಾರಗಳಿಂದ ಸಂತೋಷಪಡಿಸಿ ಸಂಜೆಯವರೆಗೂ ತನ್ನ ಬಳಿಯೇ ಇರಿಸಿಕೊಂಡಳು. ಅಷ್ಟುಹೊತ್ತಿಗೆ ‘ಅರಮನೆಯ ಮದದಾನೆ ಹಗ್ಗ ಕಿತ್ತುಕೊಂಡು, ಮನ ಬಂದಂತೆ ಓಡಿ ಬರುತ್ತಿದೆ’ಎಂಬ ಸುದ್ದಿ ಬಂತು. ಆಗ ಪದ್ಮಾವತಿಯು ಅಜ್ಜಿಗೆ “ನೀನು ಈಗ ಮುಖ್ಯ ಮಾರ್ಗದಿಂದ ಹೋಗುವುದು ತುಂಬ ಅಪಾಯ. ಗವಾಕ್ಷದಿಂದ ನೂಲೇಣಿಯ ಮೂಲಕ ಇಳಿದು ಉದ್ಯಾನಕ್ಕೆ ಹೋಗಿ ಅಲ್ಲಿಂದ ಹೊರಗೆ ಹೋಗು. ನನ್ನ ಸಖಿಯರು ನಿನಗೆ ಸಹಾಯ ಮಾಡುತ್ತಾರೆ” ಎಂದು ಹೇಳಿದಳು. ಅಜ್ಜಿ ಅದರಂತೆ ನೂಲೇಣಿಯ ಮೂಲಕವೇ ಕೆಳಗಿಳಿದು ಹೊರಬಂದು ಮನೆ ಸೇರಿಕೊಂಡಳು.
ನಡೆದಿದ್ದೆಲ್ಲವನ್ನೂ ಅವಳಿಂದ ಕೇಳಿದ ಮಂತ್ರಿಕುಮಾರನು ಗೆಳೆಯನಿಗೆ – “ನಿನ್ನ ಇಷ್ಟಾರ್ಥ ಸಿದ್ಧಿಯಾಯಿತು. ನೀನು ಈ ರಾತ್ರಿಯೇ ಉದ್ಯಾನಕ್ಕೆ ಹೋಗಿ, ಅಲ್ಲಿಂದ ನೂಲೇಣಿಯನ್ನು ಏರಿ ಪದ್ಮಾವತಿಯ ಅಂತಃಪುರಕ್ಕೆ ಹೋಗು. ಇದನ್ನು ಸೂಚಿಸುವುದಕ್ಕಾಗಿಯೇ ಅವಳು ಹಾಗೆ ಮಾಡಿದ್ದಾಳೆ” ಎಂದು ಹೇಳಿದನು. ರಾಜಕುಮಾರನು ಸಂತೋಷದಿಂದ ಆ ರಾತ್ರಿಯೇ ಅದೇ ಮಾರ್ಗವಾಗಿ ಅಂತಃಪುರವನ್ನು ತಲಪಿದನು. ಸಖಿಯರು ಅವನನ್ನು ಬರಮಾಡಿಕೊಂಡು ಪದ್ಮಾವತಿಯ ಬಳಿಗೆ ತಲಪಿಸಿದರು. ಪದ್ಮಾವತಿಯು ಅವನನ್ನು ಪ್ರೇಮದಿಂದ ಆಲಿಂಗಿಸಿ ಸತ್ಕರಿಸಿದಳು. ಬಳಿಕ ಅವರಿಬ್ಬರೂ ಗಾಂಧರ್ವ ವಿವಾಹ ಮಾಡಿಕೊಂಡು ಸುಖವಾಗಿ ಕೆಲವು ದಿನಗಳನ್ನು ಕಳೆದರು.
ಒಮ್ಮೆ ರಾಜಕುಮಾರನು ಪದ್ಮಾವತಿಗೆ “ನನ್ನ ಸ್ನೇಹಿತನೊಬ್ಬನು ನನ್ನ ಜೊತೆಯಲ್ಲೇ ಬಂದು, ನಿನ್ನ ದಾದಿಯ ಮನೆಯಲ್ಲಿ ಒಬ್ಬನೇ ಇದ್ದಾನೆ. ನಾನು ಅವನನ್ನು ಒಂದು ಸಲ ಮಾತನಾಡಿಸಿಕೊಂಡು ಬರುತ್ತೇನೆ” ಎಂದು ಹೇಳಿ ಹೊರಟನು. ಆಗ ಪದ್ಮಾವತಿಯು ಕುತೂಹಲದಿಂದ “ಹಾಗಾದರೆ ನನ್ನ ಸಂಜ್ಞೆಗಳನ್ನೆಲ್ಲ ನೀನೇ ಅರ್ಥಮಾಡಿಕೊಂಡಿದ್ದೋ, ನಿನ್ನ ಗೆಳೆಯನು ಅರ್ಥಮಾಡಿಕೊಂಡು ನಿನಗೆ ತಿಳಿಸಿದ್ದೋ?” ಎಂದು ಕೇಳಿದಳು. “ನನಗೆ ಒಂದೂ ಅರ್ಥವಾಗಿರಲಿಲ್ಲ. ಎಲ್ಲ ನನ್ನ ಗೆಳೆಯನೇ ಅರ್ಥಮಾಡಿಕೊಂಡು ನನಗೆ ತಿಳಿಸಿದ್ದು” ಎಂದು ರಾಜಕುಮಾರನು ಉತ್ತರಕೊಟ್ಟನು.
ಈ ಮಾತನ್ನು ಕೇಳಿ ಪದ್ಮಾವತಿಯು ಸ್ವಲ್ಪ ಯೋಚಿಸಿ – “ಛೇ, ಈ ವಿಷಯವನ್ನು ನೀನು ಮೊದಲೇ ಹೇಳಲಿಲ್ಲವೇಕೆ? ತಡವಾಗಿ ತಿಳಿಸಿದ್ದು ತಪ್ಪು. ಆ ನಿನ್ನ ಸ್ನೇಹಿತ ನನ್ನ ಅಣ್ಣನ ಹಾಗೆ. ನೀನು ಮೊದಲೇ ತಿಳಿಸಿದ್ದರೆ ನಾನು ತಾಂಬೂಲಾದಿಗಳನ್ನು ಕೊಟ್ಟು ಅವನ ಸತ್ಕಾರ ಮಾಡುತ್ತಿದ್ದೆನಲ್ಲವೆ?” ಎಂದು ಹೇಳಿದಳು. ಅವಳ ಸೌಜನ್ಯವನ್ನು ಗಮನಿಸಿ ರಾಜಕುಮಾರನಿಗೆ ಸಂತೋಷವಾಯ್ತು. ಅವನು ಅಲ್ಲಿಂದ ಹೊರಟು ಗೆಳೆಯನು ಉಳಿದುಕೊಂಡಿದ್ದ ಅಡುಗೂಲಜ್ಜಿಯ ಮನೆಗೆ ಬಂದು ಗೆಳೆಯನಿಗೆ ಎಲ್ಲವನ್ನೂ ತಿಳಿಸಿದನು. ಅಂದು ರಾತ್ರಿ ಅವನೊಂದಿಗೆ ಅಲ್ಲಿಯೇ ಉಳಿದುಕೊಂಡನು.
ಮರುದಿನ ಬೆಳಗಾಯಿತು. ರಾಜಕುಮಾರನು ಸ್ನಾನಾದಿಗಳನ್ನು ಮುಗಿಸಿಕೊಂಡು ಗೆಳೆಯನೊಂದಿಗೆ ಮಾತನಾಡುತ್ತ ಕುಳಿತುಕೊಂಡಿದ್ದನು. ಆವಾಗಲೇ ಪದ್ಮಾವತಿಯ ಸಖಿಯು ಅಲ್ಲಿಗೆ ಬಂದು ಮಂತ್ರಿಪುತ್ರನ ಯೋಗಕ್ಷೇಮವನ್ನು ವಿಚಾರಿಸಿಕೊಂಡಳು. ಆಮೇಲೆ ಪದ್ಮಾವತಿಯು ಕಳಿಸಿದ್ದ ತಾಂಬೂಲವನ್ನೂ, ಪಕ್ವಾನ್ನವನ್ನೂ ಅವನಿಗೆ ನೀಡಿ “ದಯವಿಟ್ಟು ಸ್ವೀಕರಿಸಬೇಕು” ಎಂದು ಬೇಡಿಕೊಂಡಳು. ಆಮೇಲೆ ರಾಜಪುತ್ರನನ್ನು ಕುರಿತು “ನೀವು ಮಾತ್ರ ಊಟಕ್ಕೆ ಅಲ್ಲಿಗೇ ಬರಬೇಕು, ಪದ್ಮಾವತಿ ನಿಮಗಾಗಿ ಕಾಯುತ್ತಿದ್ದಾಳೆ” ಎಂದು ಹೇಳಿ ಅಲ್ಲಿಂದ ಹೊರಟಳು.
ಆಗ ಮಂತ್ರಿಪುತ್ರನು ರಾಜಪುತ್ರನನ್ನು ಕುರಿತು “ಮಿತ್ರ, ನೋಡು, ನಿನಗೆ ಈಗ ಒಂದು ಕೌತುಕವನ್ನು ತೋರಿಸುತ್ತೇನೆ” ಎಂದು ಹೇಳಿ ಪದ್ಮಾವತಿಯು ತನಗೆಂದು ಕಳಿಸಿದ್ದ ಪಕ್ವಾನ್ನದಲ್ಲಿ ಒಂದು ತುತ್ತನ್ನು ನಾಯಿಗೆ ಹಾಕಿದನು. ಅದನ್ನು ತಿಂದ ನಾಯಿ ಆ ಕೂಡಲೇ ಸತ್ತು ಬಿದ್ದಿತು. ರಾಜಪುತ್ರನು ಆಶ್ವರ್ಯದಿಂದ ನೋಡುತ್ತಿದ್ದಾಗ ಮಂತ್ರಿಪುತ್ರನು ವಿವರಿಸಿದನು – “ಅವಳು ತಿಳಿಸಿದ ಸಂಜ್ಞೆಗಳೆಲ್ಲವನ್ನೂ ನಾನು ಅರ್ಥಮಾಡಿಕೊಂಡೆ. ಹಾಗಾಗಿ ಅವಳು ‘ಈತ ಒಬ್ಬ ಧೂರ್ತನಿದ್ದಾನೆ. ಇವನು ಬದುಕಿರುವುದು ಅಪಾಯ’ ಎಂದು ತೀರ್ಮಾನಿಸಿ ನನ್ನನ್ನು ಕೊಲ್ಲಲು ವಿಷಮಿಶ್ರಿತ ಪಕ್ವಾನ್ನವನ್ನು ಕಳಿಸಿದ್ದಾಳೆ. ನಾನು ಇದ್ದರೆ ನಿನ್ನ ಮನಸ್ಸು ಅವಳಲ್ಲಿ ಪೂರ್ಣವಾಗಿ ಒಲಿದಿರುವುದಿಲ್ಲ. ನೀನು ನನ್ನೊಂದಿಗೆ ಊರಿಗೆ ಹಿಂದಿರುಗಿಬಿಡಲೂಬಹುದು ಎಂದು ಅವಳ ಯೋಚನೆ” ಎಂದು.
ಅದನ್ನು ಕೇಳಿ ರಾಜಕುಮಾರನು “ಮಿತ್ರ, ನೀನು ನಿಜವಾಗಿಯೂ ಬುದ್ಧಿಶರೀರನೇ ಹೌದು” ಎಂದು ಅವನನ್ನು ಹೊಗಳಿದನು. ಪದ್ಮಾವತಿಯ ಬಗೆಗೆ ಅವನಿಗೆ ಕೋಪ ಬಂತು. ಆದರೆ ಮಂತ್ರಿಕುಮಾರನೇ “ಮಿತ್ರ, ಕೋಪಮಾಡಿಕೊಳ್ಳಬೇಡ. ಅವಳನ್ನು ಉಪಾಯದಿಂದ ನಮ್ಮ ನಗರಕ್ಕೆ ಕರೆದೊಯ್ಯೋಣ” ಎಂದು ಹೇಳಿದನು. ಅದೇ ಹೊತ್ತಿಗೆ ಹೊರಗೆ ಬೀದಿಯಲ್ಲಿ “ಅಯ್ಯೋ, ರಾಜನ ಮಗನು ಸತ್ತುಹೋಗಿಬಿಟ್ಟನಲ್ಲ…!” ಎಂಬ ಕೂಗು ಕೇಳಿಸಿತು. ಅದನ್ನು ಕೇಳಿ ಮಂತ್ರಿಕುಮಾರನು ಆ ಕ್ಷಣವೇ ಮನಸ್ಸಿನಲ್ಲಿ ಒಂದು ಉಪಾಯವನ್ನು ಸಿದ್ಧಪಡಿಸಿಕೊಂಡು ರಾಜಪುತ್ರನಿಗೆ “ಮಿತ್ರ, ಇಂದು ರಾತ್ರಿ ನೀನು ಪದ್ಮಾವತಿಯ ಮನೆಗೆ ಹೋಗು. ಉಪಾಯವಾಗಿ ಅವಳಿಗೆ ಚೆನ್ನಾಗಿ ಮದ್ಯವನ್ನು ಕುಡಿಸು. ಅವಳಿಗೆ ಪ್ರಜ್ಞೆ ತಪ್ಪಿದಾಗ ಅವಳ ಸೊಂಟದ ಮೇಲೆ ಈ ತ್ರಿಶೂಲದಿಂದ ಗುರುತು ಮಾಡು. ಅವಳ ಆಭರಣಗಳನ್ನೆಲ್ಲ ಕಳಚಿ ಇಲ್ಲಿಗೆ ತಂದುಬಿಡು. ಮುಂದೇನು ಮಾಡಬೇಕೆಂದು ಮತ್ತೆ ತಿಳಿಸುತ್ತೇನೆ” ಎಂದು ಹೇಳಿ ಒಂದು ತ್ರಿಶೂಲವನ್ನು ಕೊಟ್ಟು ಕಳುಹಿಸಿದನು.
ರಾಜಪುತ್ರನು ಹಾಗೆಯೆ ಮಾಡಿದನು. ಆಭರಣಗಳನ್ನು ತಂದು ಗೆಳೆಯನ ಕೈಯಲ್ಲಿಟ್ಟನು. ಆ ಕೂಡಲೇ ಮಂತ್ರಿಪುತ್ರನು ತಾಪಸನ ವೇಷವನ್ನು ಧರಿಸಿಕೊಂಡು ಸ್ಮಶಾನದಲ್ಲಿ ಹೋಗಿ ಕುಳಿತುಕೊಂಡನು. ರಾಜಪುತ್ರನಿಗೆ ತನ್ನ ಶಿಷ್ಯನ ವೇಷ ಹಾಕಿ, ಅವನ ಕೈಗೆ ಪದ್ಮಾವತಿಯ ಆಭರಣಗಳಲ್ಲಿ ಹೆಚ್ಚು ಬೆಲೆ ಬಾಳುವ ಮುತ್ತಿನ ಹಾರವನ್ನು ಕೊಟ್ಟು, “ಇದನ್ನು ಪೇಟೆಯಲ್ಲಿ ಮಾರುವುದಕ್ಕೆಂದು ತೋರಿಸುತ್ತಿರು. ಬೆಲೆಯನ್ನು ತುಂಬಾ ಹೆಚ್ಚಾಗಿಯೆ ಹೇಳು. ಆಗ ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ ತುಂಬಾ ಜನ ನೋಡುತ್ತಾರೆ. ಆಗ ನಗರರಕ್ಷಕರು ಬಂದು ನಿನ್ನನ್ನು ಹಿಡಿದುಕೊಳ್ಳಬಹುದು. ನೀನು ಅವರೆದುರು ಧೈರ್ಯವಾಗಿ ‘ಇದನ್ನು ಮಾರಬೇಕೆಂದು ನಮ್ಮ ಗುರುಗಳು ಕೊಟ್ಟಿದ್ದಾರೆ’ ಎಂದು ಹೇಳು” ಹೀಗೆಂದು ಹೇಳಿ ಕಳುಹಿಸಿದನು.
ಅದರಂತೆಯೇ ಅವನು ಮಾರಾಟ ಮಾಡಲು ಪ್ರಯತ್ನಪಡುತ್ತಿದ್ದಾಗ ನಗರರಕ್ಷಕರು ಅಲ್ಲಿಗೆ ಬಂದರು. ಅವರು ಹಿಂದಿನ ರಾತ್ರಿ ದಂತಘಾಟಕನ ಮನೆಯಲ್ಲಿ ಆಭರಣಗಳು ಕಳುವಾದವೆಂಬ ಸುದ್ದಿ ತಿಳಿದು, ಕಳ್ಳನನ್ನು ಹುಡುಕುತ್ತಿದ್ದರು. ಇವನನ್ನು ಹಿಡಿದುಕೊಂಡು ನಗರಾಧ್ಯಕ್ಷನ ಬಳಿಗೆ ಒಯ್ದರು. ಅಲ್ಲಿ ವಿಚಾರಿಸಲಾಗಿ, ಇವನು “ಇದನ್ನು ಮಾರಲೆಂದು ನಮ್ಮ ಗುರುಗಳು ಕೊಟ್ಟರು” ಎಂದನು. “ನಿನ್ನ ಗುರುಗಳನ್ನು ತೋರಿಸು” ಎಂದು ನಗರಾಧ್ಯಕ್ಷನು ಹೇಳಿದಾಗ ಶಿಷ್ಯನು ಅವನನ್ನು ಸ್ಮಶಾನಕ್ಕೆ ಕರೆತಂದನು. ನಗರಾಧ್ಯಕ್ಷನು ಅಲ್ಲಿದ್ದ ತಾಪಸನನ್ನು ಗೌರವದಿಂದ ನಮಸ್ಕರಿಸಿ – “ಸ್ವಾಮಿ, ಇದು ನಿನ್ನೆ ರಾತ್ರಿ ದಂತಘಾಟಕನ ಮನೆಯಿಂದ ಕಳುವಾದ ಮುತ್ತಿನ ಹಾರ. ನಿಮ್ಮ ಕೈಗೆ ಹೇಗೆ ಬಂತು?” ಎಂದು ಪ್ರಶ್ನಿಸಿದನು.
ಅದಕ್ಕೆ ತಾಪಸವೇಷದ ಮಂತ್ರಿಕುಮಾರನು “ನಾನು ಕಾಡಿನಲ್ಲಿ ಅಲೆಯುವ ತಪಸ್ವಿ. ಅಕಸ್ಮಾತ್ ನಿನ್ನೆ ರಾತ್ರಿ ಈ ಊರಿನ ಸ್ಮಶಾನದಲ್ಲಿದ್ದೆ. ಆಗ ಅಲ್ಲಿಗೆ ಕೆಲವು ಯೋಗಿನಿಯರು ಬಂದರು. ಅವರಲ್ಲಿ ಒಬ್ಬಳು ರಾಜನ ಮಗನನ್ನು ಹೊತ್ತು ತಂದು, ಅವನ ಹೃದಯಕಮಲವನ್ನು ಕಿತ್ತು ಭೈರವನಿಗೆ ಸಮರ್ಪಿಸಿದಳು. ಕುಡಿದು ಮತ್ತಳಾಗಿದ್ದ ಅವಳು ನನ್ನ ಜಪಮಾಲೆಯನ್ನೇ ಕಿತ್ತುಕೊಳ್ಳುವುದಕ್ಕೆ ಬಂದಳು. ಆದರೆ ನಾನು ಅದಕ್ಕೆ ಅವಕಾಶ ಕೊಡಲಿಲ್ಲ. ಅವಳು ಧರಿಸಿದ್ದ ಮುತ್ತಿನಹಾರವನ್ನು ನಾನೇ ಕಿತ್ತುಕೊಂಡೆ. ವಿಕಾರವಾಗಿ ಮುಖವನ್ನು ತಿರುಗಿಸಿಕೊಂಡು ಅವಳು ಹಿಂದಿರುಗುವಾಗ ನನ್ನ ತ್ರಿಶೂಲದಿಂದ ಅವಳ ಸೊಂಟದ ಮೇಲೆ ತಿವಿದುಬಿಟ್ಟೆ. ಅವಳೇನೊ ತಪ್ಪಿಸಿಕೊಂಡು ಬಿಟ್ಟಳು. ಆದರೆ ನಾನು ಮಾಡಿದ ತ್ರಿಶೂಲದ ಗುರುತು ಇನ್ನೂ ಅವಳ ಶರೀರದ ಮೇಲೆ ಇದ್ದೇ ಇರುತ್ತದೆ. ಇನ್ನು ತಪಸ್ವಿಯಾದ ನನಗೆ ಮುತ್ತಿನಹಾರದಿಂದ ಆಗಬೇಕಾದ್ದೇನು? ಅದಕ್ಕೆಂದೇ ಅದನ್ನು ಮಾರುವುದಕ್ಕೆಂದು ಕಳುಹಿಸಿದೆ. ಅದು ದಂತಘಾಟಕನ ಮನೆಯಿಂದ ಕದ್ದಿದ್ದೆಂದು ನನಗೇನು ಗೊತ್ತು?” ಎಂದನು.
ನಗರಾಧ್ಯಕ್ಷನು ಅದೆಲ್ಲವನ್ನೂ ಮಹಾರಾಜನಿಗೆ ವರದಿ ಮಾಡಿದನು. ‘ಹಾಗಿದ್ದರೆ ನಿನ್ನೆ ಸತ್ತುಹೋದ ನನ್ನ ಮಗನನ್ನು ಆ ಯೋಗಿನಿಯೇ ಸ್ಮಶಾನಕ್ಕೆ ಒಯ್ದು ಅವನ ಹೃದಯಕಮಲವನ್ನು ಕಿತ್ತಿರುತ್ತಾಳೆ. ಹೇಗಾದರೂ ಮಾಡಿ ಅವಳನ್ನು ಹಿಡಿದು ದಂಡಿಸಬೇಕು. ಅವಳ ಸೊಂಟದ ಮೇಲೆ ಈ ತಾಪಸನು ಮಾಡಿರುವ ತ್ರಿಶೂಲದ ಗುರುತು ಇದೆ. ಆದ್ದರಿಂದ ಆ ಗುರುತು ಇರುವ ಹೆಂಗಸು ಯಾರೆಂದು ತಿಳಿದರೆ ಯೋಗಿನಿ ಯಾರೆಂದು ಗೊತ್ತಾಗುತ್ತದೆ’ ಎಂದು ಭಾವಿಸಿ ಅವನು ಎಲ್ಲ ಹೆಂಗಸರನ್ನೂ ಪರಿಶೀಲಿಸುವಂತೆ ದಾಸಿಯರಿಗೆ ಆಜ್ಞಾಪಿಸಿದನು. ಅದರಂತೆ ದಂತಘಾಟಕನ ಮನೆಯಲ್ಲಿ ಪದ್ಮಾವತಿಯನ್ನು ಹೆಂಗಸರಿಂದ ಪರೀಕ್ಷಿಸಿದಾಗ ಅವಳ ಸೊಂಟದ ಮೇಲೆ ತ್ರಿಶೂಲದ ಗುರುತಿರುವುದು ಗೊತ್ತಾಯ್ತು. ಹಾಗಿದ್ದರೆ ನನ್ನ ಮಗನನ್ನು ಕೊಂದ ಯೋಗಿನಿ, ಡಾಕಿನಿ ಇವಳೇ ಹೌದು ಎಂದು ನಿಶ್ಚಯಿಸಿ ರಾಜನು ಪದ್ಮಾವತಿಯನ್ನು ನಗರದಿಂದ ಹೊರಹಾಕಿಸಿದನು.
ಪದ್ಮಾವತಿಯು ಅನಾಥಳಾಗಿ ನಗರದ ಹೊರಗೆ ಕಾಡಿನಲ್ಲಿ ದುಃಖಿಸುತ್ತ ಅಲೆಯುತ್ತಿದ್ದಾಗ ಈ ರಾಜಪುತ್ರ ಮತ್ತು ಮಂತ್ರಿಪುತ್ರರಿಬ್ಬರೂ ನಿಜವೇಷದಲ್ಲಿ ಕುದುರೆಗಳ ಮೇಲೆ ಕುಳಿತು ಅಲ್ಲಿಗೆ ಬಂದರು. ಪದ್ಮಾವತಿಗೆ ಅಭಯ ನೀಡಿ ಅವಳನ್ನು ತಮ್ಮ ರಾಜಧಾನಿಗೆ ಕರೆದೊಯ್ದರು. ಅಲ್ಲಿ ರಾಜಕುಮಾರನು ಅವಳೊಂದಿಗೆ ಸುಖವಾಗಿದ್ದನು.
ಇತ್ತ ದಂತಘಾಟಕನಾದರೋ ಮಗಳನ್ನು ಹುಡುಕಿಸಲು ಬಹಳ ಪ್ರಯತ್ನ ಮಾಡಿದನು. ಕೊನೆಗೂ ಅವಳು ಸಿಗದಿದ್ದಾಗ ಅವಳು ಕಾಡುಮೃಗಗಳ ಪಾಲಾಗಿರಬೇಕೆಂದು ನಿಶ್ಚಯಿಸಿಕೊಂಡನು. ಅವನೂ ಅವನ ಹೆಂಡತಿಯೂ ಮಗಳು ಸತ್ತಳೆಂಬ ಅದೇ ದುಃಖದಲ್ಲಿ ಕೊರಗಿ ಕೊರಗಿ ಸತ್ತುಹೋದರು.
* * *
ಹೀಗೆಂದು ಕಥೆಯನ್ನು ಹೇಳಿ ಮುಗಿಸಿ ಬೇತಾಳನು – “ಅಯ್ಯಾ ರಾಜ! ಈಗ ನನಗೊಂದು ಸಂಶಯವಾಗಿದೆ. ಅದನ್ನು ನೀನು ಪರಿಹಾರ ಮಾಡಬೇಕು. ದಂತಘಾಟಕನೂ ಅವನ ಹೆಂಡತಿಯೂ ಅನ್ಯಾಯವಾಗಿ ಸತ್ತರಲ್ಲ, ಅದರ ಪಾಪ ಯಾರಿಗೆ ಸೇರಬೇಕು? ರಾಜಪುತ್ರನಿಗೋ, ಮಂತ್ರಿಪುತ್ರನಿಗೋ, ಇಲ್ಲ ಪದ್ಮಾವತಿಗೋ? ನೀನು ಬುದ್ಧಿವಂತ. ಇದಕ್ಕೆ ಸಮಾಧಾನ ನಿನಗೆ ಗೊತ್ತಿರುತ್ತದೆ. ಹೇಳು. ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆ ತಾನಾಗೇ ನೂರು ಹೋಳಾಗಿ ಒಡೆದುಹೋಗುತ್ತದೆ.., ಎಚ್ಚರ!” ಎಂದನು.
ತ್ರಿವಿಕ್ರಮನು ನಸುನಕ್ಕು – “ಅಯ್ಯಾ ಯೋಗೇಶ್ವರ! ಆ ಪಾಪ ಸೇರಬೇಕಾದ್ದು ಇವರಾರಿಗೂ ಅಲ್ಲ. ಆ ದೇಶದ ರಾಜನಾದ ಕರ್ಣೋತ್ಪಲನಿಗೆ ಸೇರಬೇಕು. ಏಕೆಂದರೆ ರಾಜಕುಮಾರನನ್ನು ಸಂತೋಷ ಪಡಿಸುವುದು ಮಂತ್ರಿಕುಮಾರನ ಕರ್ತವ್ಯ. ಅದನ್ನು ಅವನು ಮಾಡಿದ್ದಾನೆ. ಅವನದೇನೂ ಪಾಪವಿಲ್ಲ. ಇನ್ನು ರಾಜಕುಮಾರ ಮತ್ತು ಪದ್ಮಾವತಿ ಇಬ್ಬರೂ ಕಾಮಮೋಹಿತರಾಗಿ, ವಿಚಾರಶೂನ್ಯರಾಗಿದ್ದರು. ತಮ್ಮ ಸುಖವೊಂದೇ ಅವರ ಲಕ್ಷ್ಯವಾಗಿತ್ತು. ಹಾಗಾಗಿ ಅವರದ್ದೂ ಪಾಪವಿಲ್ಲ. ರಾಜನಾದ ಕರ್ಣೋತ್ಪಲನು ರಾಜನೀತಿಯನ್ನು ತಿಳಿಯದವನು. ತನ್ನ ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂದು ಎಲ್ಲವನ್ನೂ ಚಾರರ ಮುಖಾಂತರ ತಿಳಿದು ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಅವನು ಕಂಡುಕೊಳ್ಳಬೇಕಿತ್ತು. ಅದನ್ನು ಮಾಡದೆ ಅವನು ತಪ್ಪು ಮಾಡಿದ. ಇದರಿಂದಾಗಿ ಈ ಪಾಪ ನಿಜವಾಗಿ ಅವನಿಗೇ ಸೇರಬೇಕು” ಎಂದನು. ಅವನು ಕೊಟ್ಟ ಉತ್ತರ ತೃಪ್ತಿಕರವಾಗೇನೋ ಇತ್ತು. ಆದರೆ ಉತ್ತರವನ್ನು ಕೊಡುವುದಕ್ಕಾಗಿ ಅವನು ಬಾಯಿಬಿಟ್ಟು ಮಾತನಾಡಿ ಮೌನವ್ರತವನ್ನು ಭಂಗ ಮಾಡಿದ್ದನು. ಆದ್ದರಿಂದ ಬೇತಾಳನು ಆ ಕೂಡಲೇ ಅವನ ಹೆಗಲಿನಿಂದ ಛಂಗನೆ ಮಾಯವಾಗಿ ಮತ್ತೆ ಅದೇ ಮುಳ್ಳುಮುತ್ತುಗದ ಮರಕ್ಕೆ ಹೋಗಿ ಮೊದಲಿದ್ದ ಸ್ಥಳಕ್ಕೇ ಸೇರಿಬಿಟ್ಟನು.