ಅಯೋಧ್ಯೆಯಲ್ಲಿ ೨೦೨೪ರ ಜನವರಿ ೨೨ಕ್ಕೆ ಬಹುಕಾಲ-ನಿರೀಕ್ಷಿತ ರಾಮಮಂದಿರದಲ್ಲಿ ಪ್ರಭು ರಾಮಚಂದ್ರಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯಲಿರುವ ಸಂದರ್ಭದಲ್ಲಿ ಶ್ರೀರಾಮನದೇ ಆಗಿದ್ದ ಸ್ಥಳದ ಮೇಲಿನ ಅವನ ಪ್ರಭುತ್ವವನ್ನು ವಿವಾದಾತೀತವಾಗಿ ಸ್ಥಾಪಿಸಿ ಅದಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯದ ಅಂಗೀಕಾರಮುದ್ರೆಯನ್ನು ದೊರಕಿಸಿಕೊಟ್ಟ ಕೆ. ಪರಾಶರನ್ ಅವರಿಗೆ ಸಮಸ್ತ ಹಿಂದೂ ಜನತೆಯ ಅಭಿವಂದನೆ ಸಲ್ಲುತ್ತದೆ.
ಭಗವಂತನೂ ವಕೀಲರನ್ನು ನೇಮಿಸಿಕೊಳ್ಳಬೇಕಾದ ಕಾಲದಲ್ಲಿ ನಾವಿದ್ದೇವೆ ಎಂಬ ವಿಕಟತೆಯನ್ನು ಸದ್ಯಕ್ಕೆ ಪಕ್ಕಕ್ಕಿರಿಸೋಣ. ಅಂತಹ ಸನ್ನಿವೇಶ ಬಂದಾಗ ‘ರಾಮಲಲ್ಲಾ’ನಿಗೆ ಸಮರ್ಥ ವಕೀಲರು ದೊರೆತದ್ದೂ ಅವರು ಕಕ್ಷಿಗಾರ ದೇವರಿಗೆ ಮೊಕದ್ದಮೆಯನ್ನು ಗೆಲ್ಲಿಸಿಕೊಟ್ಟದ್ದೂ ಇಡೀ ದೇಶವನ್ನೇ ರೋಮಾಂಚಗೊಳಿಸಿದೆ. ಅಯೋಧ್ಯೆಯ ರಾಮಮಂದಿರವಿರುವ ಸ್ಥಳದ ಸ್ವಾಮಿತ್ವ ಮೊದಲಾದ ಹಲವು ಜಟಿಲ ವಿವಾದಾಂಶಗಳನ್ನು ಒಳಗೊಂಡಿದ್ದ ಮೊಕದ್ದಮೆಯಲ್ಲಿ ತಮ್ಮ ದೀರ್ಘ ಐತಿಹಾಸಿಕ ಮಂಡನೆಯನ್ನು ೧೯೧೯ರ ಅಕ್ಟೋಬರ್ ೧೬ರಂದು ಮುಕ್ತಾಯಗೊಳಿಸಿದ ವಕೀಲ ಕೆ. ಪರಾಶರನ್ “ಇನ್ನು ಮೇಲೆ ನಾನು ಸಮಯವನ್ನು ಹೇಗೆ ಕಳೆಯಲಿ?” ಎಂದು ವಿನೋದವಾಗಿ ಅಂದಿದ್ದರು. ಆಗ್ಗೆ ಹಿಂದಿನ ಎಂಟು ತಿಂಗಳು ಪರಾಶರನ್ರ ಮನಸ್ಸನ್ನು ಅವರ ‘ಕಕ್ಷಿಗಾರ’ ರಾಮಲಲ್ಲಾ ಅಷ್ಟು ಪೂರ್ತಿಯಾಗಿ ಆಕ್ರಮಿಸಿಬಿಟ್ಟಿದ್ದ.
ಅಯೋಧ್ಯೆಯಲ್ಲಿ ೨೦೨೪ರ ಜನವರಿ ೨೨ಕ್ಕೆ ಬಹುಕಾಲ-ನಿರೀಕ್ಷಿತ ರಾಮಮಂದಿರದಲ್ಲಿ ಪ್ರಭು ರಾಮಚಂದ್ರನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯಲಿರುವ ಸಂದರ್ಭದಲ್ಲಿ ಶ್ರೀರಾಮನದೇ ಆಗಿದ್ದ ಸ್ಥಳದ ಮೇಲಿನ ಅವನ ಪ್ರಭುತ್ವವನ್ನು ವಿವಾದಾತೀತವಾಗಿ ಸ್ಥಾಪಿಸಿ ಅದಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯದ ಅಂಗೀಕಾರಮುದ್ರೆಯನ್ನು ದೊರಕಿಸಿಕೊಟ್ಟ ಕೆ. ಪರಾಶರನ್ ಅವರಿಗೆ ಸಮಸ್ತ ಹಿಂದೂ ಜನತೆಯ ಅಭಿವಂದನೆ ಸಲ್ಲುತ್ತದೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಹಿಂದುಗೂಡಿ ಕೆ. ಪರಾಶರನ್ ಅವರು ಕೇಂದ್ರಸರ್ಕಾರದ ಅನುಮೋದನೆಯಿಂದ ಘಟಿತವಾದ ‘ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ನ್ಯಾಸದ ಪ್ರಮುಖ ನ್ಯಾಸಕರ್ತರಾಗಿ (‘ಫಸ್ಟ್ ಟ್ರಸ್ಟೀ’) ನಿಯುಕ್ತರಾದರು. ಮುಂದಿರನಿರ್ಮಾಣಕಾರ್ಯದ ಉಸ್ತುವಾರಿಯ ಹೊಣೆ ಆ ನ್ಯಾಸದ್ದು. ೨೦೨೦ರ ಆಗಸ್ಟ್ ೫ರಂದು ವಿಧ್ಯುಕ್ತವಾಗಿ ನಡೆದ ರಾಮಮಂದಿರ ಭೂಮಿಪೂಜನವನ್ನು ತಮ್ಮ ನಿವಾಸದಿಂದ ವೀಕ್ಷಿಸುವ ಧನ್ಯತಾಭಾವ ಪರಾಶರನ್ ಅವರದಾಯಿತು.
ಭೂಮಿಕೆ
ರಾಮಲಲ್ಲಾ ಮೊಕದ್ದಮೆಗೆ ದೀರ್ಘ ಇತಿಹಾಸವಿದೆ. ಅದರ ಇತ್ತೀಚಿನ ಹಂತವನ್ನು ಪ್ರಸ್ತಾವಿಸುವುದಾದರೆ: ೨೦೧೦ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಮಂದಿರವಿರುವ ಸ್ಥಳಕ್ಕೆ ಶ್ರೀರಾಮ, ನಿರ್ಮೋಹಿ ಅಖಾಡಾ, ಸುನ್ನಿ ವಕ್ಫ್ ಬೋರ್ಡ್ – ಈ ಮೂವರೂ ವಾರಸುದಾರರೆಂದು ಹೇಳಿತ್ತು. ಆ ತೀರ್ಪನ್ನು ಪ್ರಶ್ನಿಸಿ ಮೇಲರ್ಜಿಗಳು (ಅಪೀಲ್ಸ್) ದಾಖಲೆಯಾಗಿದ್ದವು. ೨೦೧೯ರ ಮಾರ್ಚ್ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಮೂವರು ಕಕ್ಷಿದಾರರೂ ಮಾತುಕತೆಯ ಮೂಲಕ ಒಂದು ಒಪ್ಪಂದಕ್ಕೆ ಬರಲು ಅವಕಾಶ ಕಲ್ಪಿಸಿತು. ಮಾತುಕತೆಗಳು ವಿಫಲಗೊಂಡದ್ದರಿAದ ನ್ಯಾಯಾಲಯ ೨೦೧೯ರ ಆಗಸ್ಟ್ ೬ರಂದು ವಿಚಾರಣೆಯ ಪ್ರಕ್ರಿಯೆಯನ್ನು ಪುನರಾರಂಭಿಸಿತು; ದಿನವಹಿ ವಿಚಾರಣೆ ನಡೆಯತೊಡಗಿತು.
ಆಮೇಲಿನ ದಿನಗಳಲ್ಲಿ ಮೊಕದ್ದಮೆಗೆ ಸಮಯಮಿತಿ ನಿಯಮ ಅನ್ವಯಿಸುವುದೆ, ೧೯೪೯ರಲ್ಲಿ ದೇಗುಲದಲ್ಲಿ ಆದ ವಿಗ್ರಹಗಳ ಆವಿಷ್ಕರಣದಿಂದ ಭಾವನೆಗಳಿಗೆ ಧಕ್ಕೆಯೊ ಕಾನೂನಿನ ಉಲ್ಲಂಘನೆಯೊ ಆದಂತಾಯಿತೆ, ನಿರ್ಮೋಹಿ ಅಖಾಡಾದ ಹಕ್ಕು-ಪ್ರತಿಪಾದನೆ ಊರ್ಜಿತವೆ – ಈ ರೀತಿಯ ತಾಂತ್ರಿಕ ಅಂಶಗಳು ಚರ್ಚೆಗೆ ಬಂದು ಪರಾಶರನ್ ಅವರು ಕಾನೂನಿನ ಎಲ್ಲ ಕ್ಲಿಷ್ಟತೆಗಳನ್ನೂ ತಮ್ಮ ಪರಿಜ್ಞಾನದಿಂದಲೂ ವಾದಪ್ರಖರತೆಯಿಂದಲೂ ದಾಟಿದರು.
ನ್ಯಾಯಾಲಯದಲ್ಲಿನ ವಾದ-ಪ್ರತಿವಾದಗಳು ಮುಗಿದ ತರುವಾಯ ಪರಾಶರನ್ ಮುಸ್ಲಿಮರ ಪರ ವಕೀಲ ರಾಜೀವ್ ಧವನ್ರೊಡನೆ ಸೌಹಾರ್ದಮಯ ಸಲ್ಲಾಪ ನಡೆಸಿದ್ದುದು ಹೃದಯಂಗಮವಾಗಿದ್ದಿತು. ‘ನ್ಯಾಯಾಲಯದ ತೀರ್ಪು ಏನೇ ಆದರೂ ಸಾಮರಸ್ಯ ಮುಂದುವರಿಯಲೇಬೇಕು’ ಎಂದು ಆಗಾಗ ಪರಾಶರನ್ ಹೇಳುವುದಿದೆ.
ವಿಸ್ಮಯಕರ ಪ್ರತಿಭೆ
ಈ ವಯಸ್ಸಿನಲ್ಲಿಯೂ ಪರಾಶರನ್ರಿಗಿರುವ ಅಸ್ಖಲಿತ ಸ್ಮರಣಶಕ್ತಿಯು ಅದ್ಭುತವೆನ್ನುವ ಅನಿರುದ್ಧ ಶರ್ಮ (ಅಯೋಧ್ಯೆ ಮೊಕದ್ದಮೆಯಲ್ಲಿ ಸಹಾಯಕ ವಕೀಲರು) ಮೊದಲಾದವರು ಹೇಳುವಂತೆ ಪರಾಶರನ್ ಸಿದ್ಧಪಡಿಸಿದ ಲಿಖಿತ ವಾಙ್ಮೂಲಗಳಿಂದ ಪದೇಪದೇ ಪಕ್ಕಕ್ಕೆ ಸರಿದು ಹೊಸ ವಾದಾಂಶಗಳನ್ನೂ ಹಿನ್ನೆಲೆ ಮಾಹಿತಿಗಳನ್ನೂ ನೆನಪಿನಿಂದಲೇ ಹೆಕ್ಕಿ ತೆಗೆದು ತಮ್ಮ ನಿಲವನ್ನು ಸಮರ್ಥಿಸುತ್ತಿರುತ್ತಾರೆ. ಮಹಾಭಾರತಾದಿಗಳಿಂದ ಉದ್ಧರಿಸುವಷ್ಟೆ ಅನಾಯಾಸವಾಗಿ ರೋಮನ್ ಮತ್ತು ಆ್ಯಂಗ್ಲೊಸ್ಯಾಕ್ಸನ್ ನ್ಯಾಯಶಾಸ್ತ್ರ ಮೂಲಗಳಿಂದಲೂ ಉದ್ಧರಿಸುತ್ತಹೋಗುತ್ತಾರೆ.
ಅಂತಿಮ ವಾದಮಂಡನೆಯ ಸಂದರ್ಭದಲ್ಲಿ ಪರಾಶರನ್ರ ವಯಸ್ಸಿನ ಕಾರಣದಿಂದ ಅವರು ನಿಂತಿರುವುದಕ್ಕೆ ಬದಲಾಗಿ ನ್ಯಾಯಾಸ್ಥಾನದಲ್ಲಿ ಕುಳಿತೇ ವಾದ ಮಾಡಬಹುದೆಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಹೇಳಿದರೂ, ಪರಾಶರನ್ ಆ ಸೂಚನೆಯನ್ನು ವಿನಯಪೂರ್ವಕ ನಿರಾಕರಿಸಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿಂತುಕೊಂಡೇ ತಮ್ಮ ವಾದವನ್ನು ಮುಂದುವರಿಸಿದರು.
ನ್ಯಾಯಾಂಗದ ಪ್ರಾಕಾರದಲ್ಲಿ ಶ್ರೀರಾಮನು ಕಾಲ್ಪನಿಕ ವ್ಯಕ್ತಿಯಾಗಿರದೆ ವಾಸ್ತವ ವ್ಯಕ್ತಿ (‘ಜ್ಯೂರಿಸ್ಟಿಕ್ ಪರ್ಸನ್’) ಎಂಬುದನ್ನು ಸ್ಥಾಪಿಸಿ ಈ ಕಾರಣದಿಂದ ಅವನ ಹಕ್ಕುಗಳು ರಕ್ಷಣೀಯವೆಂದು ಸಾಧಿಸಿದುದು ಪರಾಶರನ್ರ ವಿಶಿಷ್ಟ ಕೊಡುಗೆ.
ಪರಾಶರನ್ ಅವರಿಗೆ ನೆರವಾಗಲು ಪಿ.ವಿ. ಯೋಗೇಶ್ವರನ್, ಅನಿರುದ್ಧ ಶರ್ಮ, ಶ್ರೀಧರ ಪೋತರಾಜು, ಅದಿತಿ ದಾನಿ, ಡಿ.ಎಸ್. ಅಶ್ವಿನಕುಮಾರ್, ಭಕ್ತಿವರ್ಧನಸಿಂಗ್ ಮೊದಲಾದವರ ತಂಡ ಅವಿರತ ಶ್ರಮಿಸಿತು. ಪರಾಶರನ್ರಂತೂ ಪ್ರತಿದಿನ ಮುಂಜಾನೆಯೂ ಸಂಜೆಯೂ ಹಲವು ಗಂಟೆಗಳ ಕಾಲ ಅಧ್ಯಯನ-ವಿಶ್ಲೇಷಣೆಗಳಲ್ಲಿ ವ್ಯಯಿಸುತ್ತಿದ್ದರು. ಹಲವಾರು ಸಲ ನಿಯಮದಂತೆ ಲಿಖಿತ ವಾಙÆ್ಮಲಗಳನ್ನು ಸಲ್ಲಿಸಿದ್ದರೂ ಅವಕ್ಕೆ ಪೋಷಕವಾಗಿ ಪರಾಶರನ್ ಯಾವುದೇ ಟಿಪ್ಪಣಿಗಳನ್ನು ಅವಲಂಬಿಸದೆ ಮೌಖಿಕವಾಗಿಯೇ ಎಲ್ಲ ಆಧಾರಗಳ ಸಹಿತ ಮಾಡುತ್ತಿದ್ದ ಮಂಡನೆಗಳೂ ಪ್ರತಿಪಾದನೆಗಳೂ ವಿಸ್ಮಯಕರಗಳಾಗಿರುತ್ತಿದ್ದವು. ೯೩ರ ವಯಸ್ಸಿನಲ್ಲಿ ಅವರಿಗಿರುವ ಸ್ಮರಣಶಕ್ತಿಯನ್ನೂ ಅವರ ವಾದತೀಕ್ಷ್ಣತೆಯನ್ನೂ ಕಂಡು ನ್ಯಾಯಾಲಯದಲ್ಲಿ ಸೇರಿದ್ದವರೆಲ್ಲ ಬೆರಗಾಗುತ್ತಿದ್ದರು.
ದಾರ್ಶನಿಕ ದೃಷ್ಟಿ
ಪರಾಶರನ್ ಅವರಿಗೆ ಇದು ವಕೀಲವೃತ್ತಿಯ ಸಂದರ್ಭ ಮಾತ್ರವಾಗಿರಲಿಲ್ಲ; ಭಗವಂತನಲ್ಲಿ ತಮ್ಮ ಭಕ್ತಿಯ ಅರ್ಪಣೆಯ ಅಭಿವ್ಯಂಜನೆಯೂ ಆಗಿತ್ತು.
ನ್ಯಾಯಾಂಗ ವ್ಯವಹಾರದಿಂದ ಅತೀತವಾದ ದಾರ್ಶನಿಕ ದೃಷ್ಟಿಯೂ ಪರಾಶರನ್ರಿಗೆ ಇಲ್ಲದಿಲ್ಲ.
೯೩ರ ಇಳಿವಯಸ್ಸಿನಲ್ಲಿ ಈ ಚರಿತ್ರಾರ್ಹ ಮೊಕದ್ದಮೆಯಲ್ಲಿ ಯಶಸ್ಸಾಧನೆಗಾಗಿ ಶ್ರಮಿಸಲು ತಮಗೆ ಶಕ್ತಿ ಲಭಿಸಿದ್ದು ಭಗವಾನ್ ಶ್ರೀರಾಮನೊಡನೆ ತಾವು ಬೆಳೆಸಿಕೊಂಡಿರುವ ಆಧ್ಯಾತ್ಮಿಕ ತತ್ಪರತೆಯಿಂದ ಎಂದು ಪರಾಶರನ್ ಹೇಳುತ್ತಿದ್ದರು. “ನನ್ನ ಅವಸಾನದೊಳಗೆ ನಾನು ಮಾಡಬೇಕಾದ ವಾದಮಂಡನೆಯನ್ನು ಮುಗಿಸಬೇಕೆಂಬುದು ನನ್ನ ಅಂತಿಮೇಚ್ಛೆ” ಎಂದು ಭಾವಪೂರ್ಣವಾಗಿ ಆಗಾಗ ಹೇಳಿದ್ದರು.
ಭಗವಂತ ಅವರ ತೀವ್ರಾಕಾಂಕ್ಷೆಯನ್ನು ಈಡೇರಿಸುವುದರ ಮೂಲಕ ಇಡೀ ಹಿಂದೂ ಸಮಾಜಕ್ಕೇ ರಾಮಮಂದಿರವೆಂಬ ಅನುಪಮ ನಿಧಿಯನ್ನು ಕರುಣಿಸಿದ್ದಾನೆ.
ತಮ್ಮ ಸನಾತನಧರ್ಮದ ವಾರಸಿಕೆಯನ್ನು ಪರಾಶರನ್ ಎಂದೂ ಅಣಗಿಸಿಕೊಂಡವರಲ್ಲ; ಪ್ರತಿಯಾಗಿ ಅದನ್ನು ಘೋಷಿಸುವುದರಲ್ಲಿ ಅಸೀಮ ಹೆಮ್ಮೆಪಡುತ್ತಾರೆ. ಅವರ ಈ ಶ್ರದ್ಧೆಯೂ ನ್ಯಾಯಶಾಸ್ತçದಲ್ಲಿ ಉತ್ತುಂಗ ಪರಿಣತಿಯೂ ಒಗ್ಗೂಡಿರುವುದು ಒಂದು ಸುಂದರ ಸಂಯೋಗ. ನ್ಯಾಯಾಲಯದಲ್ಲಿನ ಅವರ ಎಷ್ಟೊ ಮಂಡನೆಗಳ ಎಷ್ಟೊ ಭಾಗಗಳು ಧಾರ್ಮಿಕ ಪ್ರವಚನಗಳೆಂದೇ ಅನಿಸುವುದುಂಟು. ಇದನ್ನು ಲಕ್ಷಿಸಿಯೇ ಮದರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸಂಜಯ ಕಿಶನ್ಕೌಲ್ ಪರಾಶರನ್ರವರನ್ನು ‘ಪಿತಾಮಹ ಆಫ್ ಇಂಡಿಯನ್ ಬಾರ್’ ಎಂದು ಕರೆದು “ತಮ್ಮ ಧರ್ಮದ ಬೇರುಗಳಿಂದ ದೂರ ಸರಿಯದೆಯೇ ಅವರು ಪ್ರಚಲಿತ ಕಾನೂನಿನ ಸೌಷ್ಠವಕ್ಕೂ ಉನ್ನತ ಕೊಡುಗೆಯನ್ನು ನೀಡಿದ್ದಾರೆ” ಎಂದಿದ್ದರು.
ಇತಿಹಾಸಾರ್ಹ ಗೆಲವು
ಭಾರತದ ಈಚಿನ ಇತಿಹಾಸದಲ್ಲೇ ಅತುಲ್ಯವೆನಿಸಿದ ಅಯೋಧ್ಯಾ ಮೊಕದ್ದಮೆಯಲ್ಲಿ ಆ ಸ್ಥಳದ ಮೇಲೆ ಹಿಂದೂಗಳಿಗೆ ಇರುವ ಹಕ್ಕನ್ನು ಕಾನೂನಿನ ಪ್ರಾಕಾರದಲ್ಲಿ ಪ್ರತಿಪಾದಿಸುವುದರ ಜೊತೆಜೊತೆಗೇ “ಮುಸ್ಲಿಮರಿಗೆ ಪ್ರಾರ್ಥನೆಗೆ ಹತ್ತಾರು ಜಾಗಗಳಿವೆ. ಅಯೋಧ್ಯೆಯ ಆಸುಪಾಸಿನಲ್ಲಿಯೆ ಐವತ್ತರವತ್ತು ಮಸೀದಿಗಳಿವೆ. ಆದರೆ ಹಿಂದೂಗಳಿಗೆ ಪವಿತ್ರ ರಾಮಜನ್ಮಸ್ಥಾನವೆಂದು ಆರಾಧನಾಸ್ಥಾನವಾಗಿ ಲಭ್ಯವಿರುವುದು ಮಂದಿರವಿರುವ ಸ್ಥಳವೊಂದೇ. ಆದ್ದರಿಂದ ಈ ಸ್ಥಳದ ಮೇಲೆ ಹಿಂದೂ ಸಮಾಜದ ಹಕ್ಕನ್ನು ನ್ಯಾಯಾಲಯ ದೃಢೀಕರಿಸುವುದರ ಮೂಲಕ ೪೩೩ ವರ್ಷಗಳ ಹಿಂದೆ ಬಾಬರನೆಸಗಿದ್ದ ಇತಿಹಾಸಗತ ಅನ್ಯಾಯವನ್ನು ಈಗ ಸರಿಪಡಿಸಬೇಕಾಗಿದೆ” ಎಂದು ಪ್ರಬಲವಾಗಿ ಪ್ರತಿಪಾದಿಸಿದರು. ಅವರು ಹಂತಹAತವಾಗಿ ತಿಂಗಳುಗಳುದ್ದಕ್ಕೂ ಬೆಳೆಸಿದ ತೀಕ್ಷ÷್ಣ ವಾದಸರಣಿಯ ಫಲವಾಗಿ ಹಿಂದೂ ಸಮಾಜದ ಪರವಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊಮ್ಮಿ ರಾಮಮಂದಿರನಿರ್ಮಾಣಕ್ಕೆ ಇದ್ದ ಕಾನೂನಿನ ತೊಡಕು ನಿವಾರಣೆಗೊಂಡು ಹಿಂದೂಗಳ ಬಹುಕಾಲದ ಕನಸಾದ ರಾಮಮಂದಿರವನ್ನು ಸಾಧ್ಯವಾಗಿಸಿದೆ.
* * *
ತಮ್ಮ ನ್ಯಾಯಶಾಸ್ತ್ರ ತಜ್ಞತೆಗಾಗಿಯೂ ಪ್ರಖರ ಬುದ್ಧಿಮತ್ತೆಗೂ ಹೆಸರಾದ ಕೇಶವ ಪರಾಶರನ್ ೧೯೮೩ರಿಂದ ೧೯೮೯ರವರೆಗೆ ಅಟಾರ್ನಿ-ಜನರಲ್ ಆಗಿದ್ದರು. ಅದಕ್ಕೆ ಮುಂಚೆ ೧೯೭೬ರಲ್ಲಿ ತಮಿಳುನಾಡಿನ ಅಡ್ವೊಕೇಟ್-ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ೨೦೧೯ರಿಂದ ಆರು ವರ್ಷಗಳ ಒಂದು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. ಉನ್ನತಮಟ್ಟದ ನ್ಯಾಯಾಂಗಸೇವೆಗಾಗಿ ಅವರಿಗೆ ೨೦೦೩ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ೨೦೧೧ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯೂ ಪ್ರಾಪ್ತವಾಗಿವೆ. ಇವಲ್ಲದೆ ‘ಮೋಸ್ಟ್ ಎಮಿನೆಂಟ್ ಸೀನಿಯರ್ ಸಿಟಿಜನ್ (೨೦೧೯), ಶ್ರೀ ನಾರಾಯಣಗುರು ಪ್ರಶಸ್ತಿ (೨೦೨೦) ಮತ್ತಿತರ ಮನ್ನಣೆಗಳೂ ಲಭಿಸಿವೆ.
ಇಂದಿರಾಗಾಂಧಿಯವರಿಂದ ನರೇಂದ್ರ ಮೋದಿ ವರೆಗಿನ ಎಲ್ಲ ಪ್ರಧಾನಮಂತ್ರಿಗಳ ಅಪಾರ ಗೌರವಕ್ಕೆ ಪಾತ್ರರಾದವರು ಪರಾಶರನ್.
ವ್ಯಕ್ತಿತ್ವದ ಘನತೆ
ತಾವು ರಾಜಕೀಯದಿಂದ ದೂರವೆಂದು ಪರಾಶರನ್ ಪದೇಪದೇ ಹೇಳುತ್ತಿರುತ್ತಾರೆ. ರಾಜಕೀಯಸಂಬಂಧಿತ ಮೊಕದ್ದಮೆಗಳಿಂದಲೂ ದೂರ ಉಳಿಯಬಯಸುತ್ತಾರೆ. ಅವರಿಗೆ ವಾಜಪೇಯಿ ಸರ್ಕಾರ ‘ಪದ್ಮಭೂಷಣ’ವನ್ನಿತ್ತರೆ ಕಾಂಗ್ರೆಸ್ ಸರ್ಕಾರ ‘ಪದ್ಮವಿಭೂಷಣ’ವನ್ನಿತ್ತುದು ಆಕಸ್ಮಿಕವಲ್ಲ.
ಶ್ರೀರಂಗಂನಲ್ಲಿ ೧೯೨೭ರ ಅಕ್ಟೋಬರ್ ೯ರಂದು ಕೇಶವ ಪರಾಶರನ್ ಅವರ ಜನನವಾಯಿತು. ತಂದೆ ಕೇಶವ ಅಯ್ಯಂಗಾರ್, ತಾಯಿ ರಂಗನಾಯಕಿ. ಕೇಶವ ಅಯ್ಯಂಗರ್ಯರೂ ವೃತ್ತಿಯಲ್ಲಿ ವಕೀಲರಾಗಿದ್ದುದಲ್ಲದೆ ವೇದಾಂತದಲ್ಲಿ ಆಳವಾದ ಪರಿಜ್ಞಾನವಿದ್ದವರು; ಲ್ಯಾಟಿನ್, ಗ್ರೀಕ್ ಭಾಷೆಗಳಲ್ಲೂ ನಿರರ್ಗಳ ಮಾತನಾಡಬಲ್ಲವರು. ಕಾನೂನಿನ ಬಗೆಗೆ ತಮ್ಮ ದೃಷ್ಟಿಯೂ ಭಗವಂತನಲ್ಲಿ ಭಕ್ತಿಯೂ ಎರಡೂ ತಮ್ಮ ತಂದೆಯಿಂದ ದೊರೆತ ವಾರಸಿಕೆಗಳು – ಎನ್ನುತ್ತಾರೆ ಪರಾಶರನ್. ಅವರದು ಆಚಾರಶೀಲ ಕುಟುಂಬ. ಹೀಗೆ ಪರಾಶರನ್ ಅವರ ದೈವಶ್ರದ್ಧೆ ಪಿತ್ರಾರ್ಜಿತ. ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಾಡುವಾಗ ಎಷ್ಟೊ ಸಂದರ್ಭಗಳಲ್ಲಿ ಅವರು ‘ಕೇಸ್ ಲಾ’ಗಳಿಗೆ ಪೂರಕವಾಗಿ ರಾಮಾಯಣ ಮಹಾಭಾರತ ವಾಕ್ಯಗಳನ್ನು ಉದ್ಧರಿಸುತ್ತಾರೆ. ಅದು ನ್ಯಾಯಾಲಯದ ಮುಂದಿದ್ದ ವಿವಾದಕ್ಕೆ ಸಂಗತವಾಗಿದ್ದಾಗಲಷ್ಟೆ.
ಶಿಕ್ಷಣದುದ್ದಕ್ಕೂ ಪದಕಗಳನ್ನು ಗಳಿಸಿದ್ದವರು ಪರಾಶರನ್. ಕಾನೂನು ಪರೀಕ್ಷೆಯಲ್ಲಿ ‘ಹಿಂದೂ ಲಾ’ ವಿಭಾಗದಲ್ಲಿಯೆ ಅವರಿಗೆ ಸುವರ್ಣ ಪದಕ ಬಂದಿತ್ತು.
ನ್ಯಾಯಾಂಗಣದಲ್ಲಿ
ಸರ್ವೋಚ್ಚ ನ್ಯಾಯಾಲಯದಲ್ಲಿ ಪರಾಶರನ್ರ ವಕೀಲವೃತ್ತಿ ಆರಂಭವಾದದ್ದು ೧೯೫೮ರಲ್ಲಿ. ಆರು ದಶಕಗಳಷ್ಟರ ವೃತ್ತಿಯಲ್ಲಿ ಅವರು ಯಶಸ್ಸು ಕಂಡ ಇತಿಹಾಸಾರ್ಹ ಮೊಕದ್ದಮೆಗಳು ಹಲವಾರು.
ಸ್ವತಂತ್ರ ಮನೋವೃತ್ತಿಗೂ ನಿರ್ಭೀತತೆಗೂ ಹೆಸರಾದವರು ಪರಾಶರನ್. ಅವರು ಸಾಲಿಸಿಟರ್-ಜನರಲ್ ಸ್ಥಾನದಲ್ಲಿದ್ದಾಗ (೧೯೮೫) ಇಂದಿರಾಗಾಂಧಿ ಸರ್ಕಾರ ನ್ಯಾಯಬಾಹಿರವಾಗಿ ಛಲದಿಂದ ‘ಇಂಡಿಯನ್ ಎಕ್ಸ್ಪ್ರೆಸ್’ ಕಟ್ಟಡದ ನಿರ್ಮೂಲನಕ್ಕೆ ಆದೇಶ ಹೊರಡಿಸಿದಾಗ ಅದು ನ್ಯಾಯೋಲ್ಲಂಘನೆಯಾಗುತ್ತದೆ ಎಂದು ಅಭಿಮತ ನೀಡಿದರು. ಅವರ ತಜ್ಞ ಸಲಹೆಯನ್ನು ಸರ್ಕಾರ ತಿರಸ್ಕರಿಸಿದಾಗ ಅವರು ತಮ್ಮ ಸಾಲಿಸಿಟರ್-ಜನರಲ್ ಸ್ಥಾನಕ್ಕೇ ರಾಜೀನಾಮೆ ನೀಡಲು ಮುಂದಾದರು.
ಈಚಿನ ಶಬರಿಮಲೈ-ಸಂಬಂಧಿತ ಮೊಕದ್ದಮೆಯಲ್ಲಿ ನಾಯರ್ ಸರ್ವಿಸ್ ಸೊಸೈಟಿಯ ಪರವಾಗಿ ವಕಾಲತ್ತು ವಹಿಸಿದ ಪರಾಶರನ್, ಅಯ್ಯಪ್ಪನ ನೈಷ್ಠಿಕ ಬ್ರಹ್ಮಚರ್ಯಾವತಾರಕ್ಕೆ ಸಂವಿಧಾನದ ಸಮರ್ಥನೆ ಇರುವುದಾಗಿಯೂ ಆ ಕಾರಣದಿಂದ ಮಹಿಳೆಯರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸುವುದು ಕಾನೂನಿಗೆ ಅಸಮ್ಮತವಲ್ಲವೆಂದೂ, ಪಾರಂಪರಿಕ ನೆಲೆಯಲ್ಲಿ ದೇವಾಲಯಕ್ಕೆ ಸಂಬಂಧಿಸಿದ ನಿಯಮಾವಳಿಯನ್ನು ಅನೂರ್ಜಿತಗೊಳಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲವೆಂದೂ ಪ್ರಖರವಾಗಿ ವಾದಿಸಿದರು. ಆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಿಗೆ ಪರಾಶರನ್ ಹೇಳಿದ ಒಂದು ಮಾತು ಮಾರ್ಮಿಕವಾಗಿದೆ: “ಜನರ ಬದುಕಿಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲೂ ಪ್ರಾಚೀನರು ಬುದ್ಧಿಗೇಡಿಗಳೆಂಬ ಮತ್ತು ನಮಗೆ ಹೆಚ್ಚಿನ ಪರಿಜ್ಞಾನವಿದೆಯೆಂಬ ನಿಲವು ಅಂಗೀಕಾರಾರ್ಹವಲ್ಲ.”
ಮೂರ್ಧನ್ಯ ವಕೀಲ ನಾನಿ ಪಾಲ್ಖಿವಾಲಾರಿಗೆ ವಿರುದ್ಧವಾಗಿ ಪರಾಶರನ್ ಎಷ್ಟೊ ಮೊಕದ್ದಮೆಗಳಲ್ಲಿ ವಾದಿಸಿದುದುಂಟು: ಹೊಟೇಲ್ ಅಂಡ್ ರೆಸ್ಟೋರೆಂಟ್ಸ್ ಅಸೋಸಿಯೇಷನ್ ಪ್ರಕರಣ, ಬಾಂಬೆ ಟರ್ಸ್ ಪ್ರಕರಣ, ಇತ್ಯಾದಿ.
ಪಿ.ವಿ. ನರಸಿಂಹರಾವ್ ಅಧಿಕಾರಾವಧಿಯಲ್ಲಿ ‘ಓ.ಬಿ.ಸಿ.’ ವರ್ಗಗಳಿಗೆ ಹೆಚ್ಚಿನ ಆರಕ್ಷಣೆಯನ್ನು ಸೂಚಿಸಿದ್ದ ಮಂಡಲ್ ಆಯೋಗದ ನಿಲವನ್ನು ಪ್ರಶ್ನಿಸಿದ್ದ ‘ಇಂದಿರಾ ಸಾಹ್ನಿ ಮೊಕದ್ದಮೆ’ಯಲ್ಲಿ ಭಾಗವಹಿಸಿದ್ದ ಪರಾಶರನ್ ಜಾತಿಗಳ ‘ಹಿಂದುಳಿದಿರುವಿಕೆ’ಯ ಮಾನದಂಡಗಳ ವಿಧಿಬದ್ಧ ಅನುಸರಣೆ ಆಗಬೇಕೆಂದು ವಾದಿಸಿದರು.
ಮನೆವಾರ್ತೆ
ಪರಾಶರನ್-ಸರೋಜಾ ದಂಪತಿಗಳಿಗೆ ಮೂವರು ಪುತ್ರರು – ಮೋಹನ್, ಸತೀಶ್, ಬಾಲಾಜಿ. ಮೂವರೂ ವಕೀಲರು. ಮೋಹನ್ ಪರಾಶರನ್ ಯು.ಪಿ.ಎ. ಅಧಿಕಾರಾವಧಿಯಲ್ಲಿ ಸಾಲಿಸಿಟರ್-ಜನರಲ್ ಆಗಿದ್ದರು.
ಪರಾಶರನ್ರ ಧಾರ್ಮಿಕ ಒಲವು ರಕ್ತಗತವಾದದ್ದು; ಮೇಲುಮೇಲಿನದಲ್ಲ. ಅವರು ಕೂಡುವ ದಿವಾನಖಾನೆಯ ಗೋಡೆಗಳ ಮೇಲೆ ರಾಧಾ-ಕೃಷ್ಣರ ಚಿತ್ರಗಳು, ಬಾಲಕೃಷ್ಣನ ಚಿತ್ರ; ಗಾಜಿನ ಸಂಪುಟದಲ್ಲಿ ಧನುರ್ಧಾರಿ ಬಾಲಕ ರಾಮನ ಪುಟ್ಟ ವಿಗ್ರಹ. ಅವರ ಹಣೆಯಲ್ಲಿ ಸದಾ ತಿಲಕವೂ ನಾಮವೂ ವಿರಾಜಮಾನ. ಶುಭ್ರ ಅಚ್ಚಬಿಳಿಯ ಪಂಚೆ ಮತ್ತು ಸೌಮ್ಯನೀಲಿ ಬಣ್ಣದ ಸ್ವೆಟರ್ – ಇದು ಮನೆಯಲ್ಲಿದ್ದಾಗ ಅವರ ಉಡುಪು. ಪ್ರತಿದಿನ ಒಂದೆರಡು ಸರ್ಗಗಳಾದರೂ ವಾಲ್ಮೀಕಿರಾಮಾಯಣವನ್ನು ಓದುವುದು ಕಳೆದ ಅರವತ್ತು ವರ್ಷಗಳಿಂದ ಅವರು ಮಾಡಿಕೊಂಡಿರುವ ರೂಢಿ. “ದಿನೇ ದಿನೇ ಎದುರಾಗುವ ಸಮಸ್ಯೆಗಳನ್ನೆದುರಿಸಿ ಮುನ್ನಡೆಯಲು ನನಗೆ ಶಕ್ತಿಯನ್ನು ಕೊಟ್ಟಿರುವುದು ವಾಲ್ಮೀಕಿರಾಮಾಯಣದ ಸಂಗಡಿಕೆಯೇ” ಎನ್ನುತ್ತಾರೆ ಅವರು ದೃಢವಿಶ್ವಾಸದಿಂದ. ಹೀಗಾಗಿ ಅಯೋಧ್ಯೆ ದೀರ್ಘಕಾಲದಿಂದ ಅವರ ಹೃದಯಕ್ಕೆ ಹತ್ತಿರದ್ದೇ ಆಗಿದೆ.
ದೆಹಲಿಯ ಗ್ರೇಟರ್ ಕೈಲಾಶ್ ಬಡಾವಣೆಯಲ್ಲಿನ ಪರಾಶರನ್ರ ಮನೆಯ ಸಂಖ್ಯೆ R-20. ‘ಇದರಲ್ಲಿ R ಎಂದರೆ Ram’ ಎಂದು ಪರಾಶರನ್ರ ಮಗ ಮೋಹನ್ ವಿನೋದವಾಡುತ್ತಾರೆ. ಪರಾಶರನ್ರ ಮನೆಯ ಗುರುತನ್ನು ತಿಳಿಸಬೇಕಾದಾಗ ಬಡಾವಣೆಯ ಜನರು ‘ತಳಮಹಡಿಯ ಕಚೇರಿಯಲ್ಲಿ ಪಾರ್ಥಸಾರಥಿಯ ಚಿತ್ರಪಟ ಇರುವ ಕಟ್ಟಡ’ ಎಂದು ಹೇಳುವುದು ವಾಡಿಕೆಯಾಗಿದೆ.
ಕಾರಸೇವೆಯ ದಿನಗಳಿಂದಲೇ ಅಯೋಧ್ಯೆಯ ವಿಷಯದಲ್ಲಿ ಪರಾಶರನ್ ಗಾಢವಾದ ಆಸಕ್ತಿ ತಳೆದಿದ್ದರು.
ಜಗತ್ತಿನ ಎಲ್ಲವನ್ನೂ ನಿಯಂತ್ರಿಸುವವು ಮಾನವಾತೀತ ಶಕ್ತಿಗಳು – ಎಂಬ ಐನ್ಸ್ಟೆöÊನ್ನ ಮಾತನ್ನು ಸ್ಮರಿಸುತ್ತ ಪರಾಶರನ್ ಅಯೋಧ್ಯೆ ಮೊಕದ್ದಮೆಯ ಬಗೆಗೆ ಹೇಳುತ್ತಾರೆ: “ಇದರಲ್ಲಿ ನನ್ನ ಪಾತ್ರ ಗೌಣ. ಲೋಕಾತೀತ ಶಕ್ತಿಯೊಂದರ ನಿರ್ದೇಶನದಂತೆ ಎಲ್ಲ ವ್ಯವಹಾರಗಳೂ ನಡೆಯುತ್ತವೆ. ಶ್ರೀರಾಮನಿಗೇ ಅನ್ನಿಸಿರಬೇಕು – ಇಷ್ಟು ಕಾಲ ನಡೆದಿರುವ ರಗಳೆ ಸಾಕೆಂದು!”