ಕೇವಲ ೧೦-೧೧ ವರ್ಷಕ್ಕೇ ಮ್ಯಾಂಡೊಲಿನ್ ಎಂಬ ವಿದೇಶಮೂಲದ ಪುಟ್ಟ ಉಪಕರಣದ ಮೂಲಕ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮೊಗೆದುಮೊಗೆದು ಕೊಟ್ಟ ಮ್ಯಾಂಡೊಲಿನ್ ಮಾಂತ್ರಿಕ ಯು. ಶ್ರೀನಿವಾಸ್ ಆ ಪುಟ್ಟ ವಾದ್ಯದ ಮೂಲಕ ಜಗತ್ತನ್ನೇ ಅಳೆದವರು.
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ’ (ಸಮರ್ಥರಾದ ವ್ಯಕ್ತಿಗಳಿಗೆ ಅವರು ಹಿಡಿದ ಕೆಲಸದ ಯಶಸ್ಸು ಅವರ ಬಲ-ಶೌರ್ಯಗಳಿಂದ ಬರುತ್ತದೆಯೇ ಹೊರತು ಬಳಸುವ ಉಪಕರಣದಿಂದಲ್ಲ) ಎನ್ನುವುದು ಸಂಸ್ಕೃತದ ಒಂದು ಪ್ರಸಿದ್ಧವಾದ ನಾಣ್ಣುಡಿ. ಒಂದು ಕೆಲಸ ಯಶಸ್ವಿ ಆಗುವುದರಲ್ಲಿ ಅದಕ್ಕೆ ಬಳಸುವ ಸಾಧನದ ಪಾತ್ರ ಏನೂ ಇಲ್ಲ ಎಂದು ಅಲ್ಲಗಳೆಯುವಂತಿಲ್ಲ. ಆದರೆ ಸಾಧನದ ಪಾತ್ರ ಬಹಳ ಮುಂದೆ ಬರುವುದಿಲ್ಲ. ಅಂತಿಮವಾಗಿ ನಿರ್ಣಾಯಕ ಆಗುವುದು ಕಾರ್ಯದಲ್ಲಿ ತೊಡಗಿರುವವರ ಸತ್ತ್ವ ಅಥವಾ ಕೆಚ್ಚು. ಒಂದು ತೆಂಗಿನಕಾಯಿ ಸುಲಿಯುವುದಕ್ಕಾದರೂ ಅದರ ಹತ್ಯಾರ ಬೇಕು; ಆದರೆ ಸಾಧಕರಾದ ಕೆಲವರು ಕೇವಲ ಹಲ್ಲಿನಲ್ಲಿ ಕಚ್ಚಿಯೇ ಅದನ್ನು ಸುಲಿದುಬಿಡುತ್ತಾರಲ್ಲವೆ?
ಮಹಾಭಾರತದ ಭೀಮನ ಆಯುಧ ಗದೆ. ಆದರೆ ಎಲ್ಲ ಸಂದರ್ಭಗಳಲ್ಲಿ ಆತ ಅದಕ್ಕಾಗಿ ಹುಡುಕಾಡುತ್ತಾನೆ ಎಂದಿಲ್ಲ. ಆಗ ಗಿಡವೋ ಮರವೋ ಕೈಗೆ ಸಿಕ್ಕಿದ್ದೇ ಆಯುಧವಾಗುತ್ತದೆ. ಕುರುಕ್ಷೇತ್ರಯುದ್ಧದ ಸಂದರ್ಭದಲ್ಲಿ ಆತನ ಯುದ್ಧದ ಕ್ರಮ ಅದಕ್ಕಿಂತ ಭಿನ್ನವಾಗಿರಲಿಲ್ಲ ಎಂಬಂತಹ ವಿವರಗಳನ್ನು `ಪರ್ವ’ ಕಾದಂಬರಿಯಲ್ಲಿ ಎಸ್.ಎಲ್. ಭೈರಪ್ಪ ನೀಡುತ್ತಾರೆ. ಅಲ್ಲಿ ಆಯುಧ ಮುಖ್ಯವಲ್ಲ; ಅದು ಏನಾದರೂ ಇದ್ದುಕೊಳ್ಳಲಿ; ಫಲಿತಾಂಶ ಮುಖ್ಯ. ಹಾಗೆ ಆತ ಕೌರವಸೋದರರನ್ನೆಲ್ಲ ಬಡಿದುಹಾಕಿದ.
ಆದರೆ ನಾವಿಲ್ಲಿ ಬಡಿದುಹಾಕಿದ ಯಾವುದೇ ವಿವರಗಳನ್ನು ನೀಡುತ್ತಿಲ್ಲ. ಬದಲಾಗಿ ಮ್ಯಾಂಡೊಲಿನ್ ಎಂಬ ವಿದೇಶ ಮೂಲದ ಪುಟ್ಟ ಉಪಕರಣದ ಮೂಲಕ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮೊಗೆದುಮೊಗೆದು ಕೊಟ್ಟ ಮ್ಯಾಂಡೊಲಿನ್ ಮಾಂತ್ರಿಕ ಯು. ಶ್ರೀನಿವಾಸ್ ಸ್ಮರಣೆಗೆ ತೊಡಗಿದ್ದೇವೆ. ಈ ಪುಟ್ಟವಾದ್ಯದ ಮೂಲಕ ಜಗತ್ತನ್ನೇ ಅಳೆದ ಶ್ರೀನಿವಾಸ್ ಕೇವಲ ೪೫ರ ಹರೆಯದಲ್ಲಿ ಕಳೆದ ಸೆಪ್ಟೆಂಬರ್ ೧೯ರಂದು ನಮ್ಮನ್ನು ಅಗಲಿದರು; ಮ್ಯಾಂಡೊಲಿನ್ ಅವರ ಹೆಸರಿನೊಂದಿಗೆ ಸೇರಿಹೋಗಿ ಅವರು ಮ್ಯಾಂಡೊಲಿನ್ ಶ್ರೀನಿವಾಸ್ ಆಗಿದ್ದರು. ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೆ ಅವರ ಪ್ರವೇಶವೇ ಮ್ಯಾಂಡೊಲಿನ್ ವಾದ್ಯದೊಂದಿಗಾಯಿತು; ಆಗ ಅವರ ವಯಸ್ಸು ಕೇವಲ ೧೦-೧೧ ವರ್ಷ. ಹತ್ತು ವರ್ಷದ ಒಬ್ಬ ಹುಡುಗ ತನ್ನಂತೆಯೇ ಪುಟ್ಟದಾದ ಒಂದು ಹೊಸ ವಾದ್ಯವನ್ನು ಹಿಡಿದುಕೊಂಡು ಬಂದು ಬಹುಬೇಗ ಅದಕ್ಕೆ ಸ್ವೀಕಾರಾರ್ಹತೆಯನ್ನು ಗಳಿಸಿ ಕೊಟ್ಟಿದ್ದು, ಅದರ ಸಂಗೀತವನ್ನು ಅತ್ಯಂತ ಉನ್ನತ ಸ್ಥಿತಿಗೆ ಒಯ್ದದ್ದು, ತನ್ನ ಬೆನ್ನಹಿಂದೆ ಈ ವಾದ್ಯದ ಒಂದು ಶಿಷ್ಯಸಂಕುಲವನ್ನು ಬಿಟ್ಟುಹೋದದ್ದು ನಮ್ಮ ಕಣ್ಣಮುಂದಿರುವ ಪವಾಡ ಎನಿಸುವಂತಹ ಒಂದು ಸತ್ಯ.
ಮ್ಯಾಂಡೊಲಿನ್ ಸೆಳೆತ
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನರ್ಸಾಪುರ ತಾಲೂಕಿನ ಪಾಲಕೊಲ್ಲುವಿನಲ್ಲಿ ಫೆಬ್ರುವರಿ ೨೮, ೧೯೬೯ರಂದು ಉಪ್ಪಾಲಪು ಶ್ರೀನಿವಾಸ್ ಜನನವಾಯಿತು. ಅಜ್ಜ ನಾಗಸ್ವರ ವಾದಕರು; ತಂದೆ ಸತ್ಯನಾರಾಯಣ ಲಘುಶಾಸ್ತ್ರೀಯ ಸಂಗೀತ ತಂಡ(ಆರ್ಕೆಸ್ಟ್ರಾ)ವನ್ನು ನಡೆಸುತ್ತಿದ್ದರು. ಅಂದರೆ ಪುಟ್ಟ ಬಾಲಕ ಸಂಗೀತದ ಉಪಕರಣಗಳ ಸಂಪರ್ಕಕ್ಕೆ ಬರುತ್ತಿದ್ದ. “ನಮ್ಮದು ಸಂಗೀತಗಾರರ ಕುಟುಂಬ. ಒಮ್ಮೆ ತಂದೆಯ ಜೊತೆ ಒಂದು ಮದುವೆಗೆ ಹೋದಾಗ ಲಘುಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಆರ್ಕೆಸ್ಟ್ರಾದ ಒಬ್ಬ ನುಡಿಸಿದ ಮ್ಯಾಂಡೊಲಿನಿನಿಂದ ಪುಟ್ಟ ಬಾಲಕನಾದ ನಾನು ಮೋಹಿತನಾದೆ. ನನಗೊಂದು ಕೊಡಿಸುವಂತೆ ತಂದೆಗೆ ದುಂಬಾಲುಬಿದ್ದೆ” ಎಂದು ಆ ಸಂದರ್ಭವನ್ನು ಶ್ರೀನಿವಾಸ್ ನೆನಪಿಸಿಕೊಂಡಿದ್ದಾರೆ. ತಂದೆ ಮ್ಯಾಂಡೊಲಿನ್, ಗಿಟಾರ್ಗಳನ್ನೆಲ್ಲ ನುಡಿಸುತ್ತಿದ್ದರು. ತಂದೆ ಮನೆಯಲ್ಲಿಲ್ಲದಾಗ ಪುಟ್ಟ ಬಾಲಕ ಆ ಮ್ಯಾಂಡೊಲಿನನ್ನು ನುಡಿಸುತ್ತಿದ್ದನಂತೆ. ಈಗ ಸ್ವಂತ ಮ್ಯಾಂಡೊಲಿನ್ ಬಂದ ಮೇಲೆ ಕಲಿಕೆ ಸರಾಗವಾಯಿತು. ಸುಮಾರು ಹತ್ತು ವರ್ಷದವರೆಗೆ ತಂದೆ ಅದನ್ನು ನುಡಿಸುವುದನ್ನು ಹೇಳಿಕೊಟ್ಟರು. ಆತನದ್ದು ವಾಮನ ತ್ರಿವಿಕ್ರಮನಾದಂತಹ ಬೆಳವಣಿಗೆ. ಸರಳೆ ವರಸೆ, ಅಲಂಕಾರಗಳನ್ನು ನಾಲ್ಕು ತಿಂಗಳಲ್ಲಿ ಕಲಿತು ಮುಗಿಸಿದ. ಬಳಿಕ ಭೈರವಿ ಅಟತಾಳ ವರ್ಣ `ವಿರಿಬೋಣಿ’, ಪಂಚರತ್ನ ಕೃತಿಗಳಲ್ಲಿ ಸೇರಿದ `ಎಂದರೋ ಮಹಾನುಭಾವುಲು’, `ವಾತಾಪಿ ಗಣಪತಿಂ ಭಜೇಹಂ’ ಕೃತಿಗಳ ಪಾಠ ನಡೆಯಿತು. ವರ್ಣವನ್ನು ಒಂದು, ಎರಡನೇ ಕಾಲಗಳಲ್ಲಿ ನುಡಿಸುತ್ತಿದ್ದ. ದಿನಕ್ಕೆ ೧೦-೧೨ ಗಂಟೆ ಅಭ್ಯಾಸ ನಡೆಯುತ್ತಿತ್ತು.
ಈ ನಡುವೆ ತಂದೆ ಹುಡುಗನ ಪ್ರಚಂಡ ಸಾಧ್ಯತೆಯನ್ನು ಗುರುತಿಸಿ ರುದ್ರರಾಜು ಸುಬ್ಬರಾಜು ಎಂಬವರನ್ನು ಸಂಗೀತಪಾಠಕ್ಕೆ ನೇಮಿಸಿದರು. ಅವರು ಚೆಂಬೈ ವೈದ್ಯನಾಥ ಭಾಗವತರ ಶಿಷ್ಯರು; ಕಚೇರಿ ಕಲಾವಿದರು. ಅವರಿಗೆ ಮ್ಯಾಂಡೊಲಿನ್ ನುಡಿಸಲು ಗೊತ್ತಿಲ್ಲ; ಅವರು ಕೃತಿಗಳನ್ನು ಹಾಡುವುದು, ಆರು ವರ್ಷದ ಪೋರ ಶ್ರೀನಿವಾಸ್ ಅದನ್ನು ನುಡಿಸುವುದು – ಹೀಗೆ ಪಾಠ ನಡೆಯಿತು. ಈ ರೀತಿಯಲ್ಲಿ ಶ್ರೀನಿವಾಸ್ ನುಡಿಸಾಣಿಕೆಯ ತನ್ನದೇ ಶೈಲಿಯನ್ನು ರೂಪಿಸಿಕೊಂಡ. ಆಶ್ಚರ್ಯವೆಂದರೆ, ಶ್ರಮದಾಯಕವಾದ ಕರ್ನಾಟಕ ಶೈಲಿಯನ್ನು ಹಿಂದೆ ಯಾರೂ ಮ್ಯಾಂಡೊಲಿನಿನಲ್ಲಿ ಕಲಿಸುತ್ತಾ ಇರಲಿಲ್ಲ.
ಹೊಸವಾದ್ಯ
ಪಾಶ್ಚಾತ್ಯ ವಾದ್ಯದಲ್ಲಿ ಕರ್ನಾಟಕ ಸಂಗೀತವನ್ನು ಆರಿಸಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆಗೆ ಸಂದರ್ಶನವೊಂದರಲ್ಲಿ ಉತ್ತರಿಸಿದ ಶ್ರೀನಿವಾಸ್ “ಕಲಿಯಲು ಶುರುಮಾಡುವಾಗ ಅದು ಎಲ್ಲಿಗೆ ಹೋಗುತ್ತದೆಂದು ಗೊತ್ತಿರಲಿಲ್ಲ. ಕರ್ನಾಟಕ ಸಂಗೀತವನ್ನು ಕೇಳುತ್ತಿದ್ದೆ; ಆದರೂ ಅದನ್ನು ಕಲಿಯಬೇಕೆಂದು ಇರಲಿಲ್ಲ. ಏನಾದರೂ ಹೊಸತು ಮಾಡಬೇಕೆಂಬ ಬಲವಾದ ಆಶೆ ಇದ್ದ ಕಾರಣ ಮ್ಯಾಂಡೊಲಿನಿನಲ್ಲಿ ಕರ್ನಾಟಕ ಸಂಗೀತವನ್ನು ನುಡಿಸಿದೆ. ವೇಗವಾಗಿ ಕಲಿತಿದ್ದಕ್ಕೆ ಅಂತಹ ತೀವ್ರವಾದ ಆಶೆಯೇ ಕಾರಣ ಇದ್ದಿರಬೇಕು; ತಂದೆಯಿಂದ ನಾಲ್ಕು ವರ್ಷ ಕಲಿತೆ. ಗುರುಗಳಾದ ರುದ್ರರಾಜು ಸುಬ್ಬರಾಜು ನನ್ನನ್ನು ಮೊದಲ ದರ್ಜೆಯ ಕರ್ನಾಟಕ ಸಂಗೀತಗಾರನನ್ನಾಗಿ ಮಾಡಲು ಶ್ರಮಿಸಿದರು. ೧೯೯೪ರಲ್ಲಿ ಅವರು ನಿಧನಹೊಂದುವವರೆಗೂ ಅವರ ಕೈಕೆಳಗೆ ಕಲಿತೆ” ಎಂದಿದ್ದರು (`ದಿ ಹಿಂದೂ ಆನ್ ಮ್ಯೂಸಿಕ್’ ಪುಟ ೩೭೬). ತಂದೆ ಸತ್ಯನಾರಾಯಣರಿಗೆ ಮಗ ಸಂಗೀತಗಾರ ಆಗಬೇಕೆಂದು ಇರಲಿಲ್ಲವಂತೆ. “ನೀನು ನನ್ನ ಹಾಗೆ ಒದ್ದಾಡುವುದು ಬೇಡ ಎನ್ನುತ್ತಿದ್ದರು. ಅವರ ಕೆಲವು ಸ್ನೇಹಿತರು ಒತ್ತಾಯಿಸಿದ ಮೇಲೆಯೇ ಅವರು ನನಗೆ ಸಂಗೀತ ಕಲಿಸಿದ್ದು” ಎಂದಿದ್ದಾರೆ ಶ್ರೀನಿವಾಸ್.
ಮ್ಯಾಂಡೊಲಿನ್ ಮೂಲತಃ ಬುಲ್ಬುಲ್ ತರಂಗದಂತೆ ಯೂರೋಪಿನ ಜಾನಪದ ಸಂಗೀತದ ಒಂದು ವಾದ್ಯ. ಮೊದಲು ಸಾಮಾನ್ಯವಾದ ಮರದ ಎಕಾಸ್ಟಿಕ್ ಮ್ಯಾಂಡೊಲಿನ್ ಬಳಸಿದ ಶ್ರೀನಿವಾಸ್ ಬಹುಬೇಗ ಎಲೆಕ್ಟ್ರಿಕ್ ಮ್ಯಾಂಡೊಲಿನ್ಗೆ ಬದಲಾವಣೆಗೊಂಡರು. ದೀರ್ಘ ಮತ್ತು ನಿರಂತರವಾದ ಸ್ವರಕ್ಕೆ ಇದು ಉತ್ತಮವಾಯಿತು. ಆ ಮೂಲಕ ಕರ್ನಾಟಕ ಸಂಗೀತಕ್ಕೆ ಪೂರಕವಾಯಿತು. ಮ್ಯಾಂಡೊಲಿನಿನಲ್ಲಿ ಹಿಂದೆ ನಾಲ್ಕು ಜೋಡಿತಂತಿಗಳು ಸೇರಿ ಒಟ್ಟು ಎಂಟು ತಂತಿಗಳಿದ್ದವು; ಅದನ್ನು ಶ್ರೀನಿವಾಸ್ ಐದು ಏಕ (ಸಿಂಗಲ್) ತಂತಿಗಳಿಗೆ ಬದಲಾಯಿಸಿದರು. ಇದರಿಂದ ಕರ್ನಾಟಕ ಸಂಗೀತದ ಸ್ಥಾಯಿ (ಪಿಚ್), ರಾಗವ್ಯವಸ್ಥೆ ಮತ್ತು ವಿಶೇಷವಾಗಿ ಗಮಕಗಳ ನುಡಿಸುವಿಕೆಗೆ ಅನುಕೂಲವಾಯಿತು. ಈ ವಾದ್ಯವನ್ನು ಗಾಯಕೀ ಶೈಲಿಗೆ ಹೊಂದಿಸುವುದು ಬಹುದೊಡ್ಡ ಸವಾಲಾಗಿತ್ತು; ಅದನ್ನು ಬಾಲಕ ಶ್ರೀನಿವಾಸ್ ಬಹುಬೇಗ ಸಾಧಿಸಿಬಿಟ್ಟ. ಮ್ಯಾಂಡೊಲಿನಿನ ಸ್ವರ ಎಷ್ಟು ಕ್ಷೀಣವೆಂದರೆ, ಅದಕ್ಕೆ ಕಾಂಟ್ಯಾಕ್ಟ್ ಮೈಕ್ ಅನಿವಾರ್ಯ.
ತಂದೆ ಸತ್ಯನಾರಾಯಣ ಅವರು ಮಗನನ್ನು ರುದ್ರರಾಜು ಸುಬ್ಬರಾಜುರವರಿಗೆ ವಹಿಸಿದರು. ರುದ್ರರಾಜು ಇಡೀ ಕುಟುಂಬವನ್ನು ಕರ್ನಾಟಕ ಸಂಗೀತದ ಕಾಶಿ ಎನ್ನಿಸಿದ ಮದ್ರಾಸಿಗೆ (ಇಂದಿನ ಚೆನ್ನೈ) ಕರೆತಂದರು. ಮೊದಲಿಗೆ ತಮ್ಮ ಮನೆಯಲ್ಲೇ ಇರಿಸಿಕೊಂಡು ರಾಜೇಶ್ವರರಾವ್ ಅವರಂತಹ ಸಂಗೀತ ನಿರ್ದೇಶಕರ ಸಿನೆಮಾಗಳಲ್ಲಿ ಅವಕಾಶ ಹುಡುಕಲು ಹೇಳಿದರು. “೧೯೮೦ರಲ್ಲೇ ಮದ್ರಾಸಿಗೆ ಬಂದೆವು. ಸ್ನೇಹಿತರು ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯ ಎಂಬರುಮಾನಾರ್ ಚೆಟ್ಟಿಯಾರ್ ಅವರಿಗೆ ಪರಿಚಯಿಸಿದರು. ಅವರು ಡಿಸೆಂಬರ್ (೧೯೮೧) ಸಂಗೀತ ಋತುವಿನಲ್ಲಿ ಕಚೇರಿಗೆ ಅವಕಾಶ ನೀಡುವ ಮೂಲಕ ನನ್ನನ್ನು ಮ್ಯಾಂಡೊಲಿನ್ ವಾದಕ ಎಂದು ಮದ್ರಾಸ್ನ ಶ್ರೋತೃಗಳಿಗೆ ಪರಿಚಯಿಸಿದರು. ನಾವು ಇಲ್ಲಿ ನಿಂತೆವು. ಏಕೆಂದರೆ ಮದ್ರಾಸಿನಲ್ಲಿ ನಿಂತರೆ ಮಾತ್ರ ಕರ್ನಾಟಕ ಸಂಗೀತದಲ್ಲಿ ಹೆಸರು ಗಳಿಸಲು ಸಾಧ್ಯ. ೧೯೮೩ರಲ್ಲಿ ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಅವಕಾಶ ಸಿಕ್ಕಿತು. ೧೯೮೪ರಿಂದ ಹಿರಿಯ ಕಲಾವಿದನ ಸ್ಥಾನಮಾನ ಸಿಕ್ಕಿತು” ಎಂದು ಶ್ರೀನಿವಾಸನ್ ನೆನಪಿಸಿಕೊಂಡದ್ದಿದೆ.
ಆರಂಭದ ಕಛೇರಿಗಳಲ್ಲೇ ಶ್ರೀನಿವಾಸ್ ಸಂಗೀತ ಶಾಸ್ತ್ರೀಯತೆಯ ಮೂಲಭೂತ ಅಂಶಗಳಲ್ಲಿ ಬೇರೂರಿದೆ ಎಂಬುದು ಖಚಿತವಾಗಿತ್ತು. ಆತನ ರಾಗಾನುಸಂಧಾನ ಹಲವು ಸಲ ಸ್ವಂತದ್ದು ಮತ್ತು ಅನಿರೀಕ್ಷಿತ. ಲಯ ಆತನಿಗೆ ರಕ್ತಗತವಾಗಿ ಬಂದಿತ್ತು; ಅದನ್ನು ಬೆಳೆಸಿಕೊಂಡ ಎಂದು ವಿಮರ್ಶಕರು ಗುರುತಿಸಿದ್ದಾರೆ.
ವಿನೀತ ಬಾಲಕ
ಶ್ರೀನಿವಾಸ್ ಮೊದಲ ಭೇಟಿ ತನಗೆ ೧೯೮೦ರಲ್ಲಿ ಜೆಮಿನಿ ಸ್ಟುಡಿಯೋದಲ್ಲಾಯಿತು ಎಂದು ಹಿನ್ನೆಲೆಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಮ್ ನೆನಪಿಸಿಕೊಂಡಿದ್ದಾರೆ. “ಹಮ್ ಪಾಂಚ್ ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ ನಡೆಯುತ್ತಿತ್ತು. ಸಂಗೀತ ನಿರ್ದೇಶಕ ವಾಸು ರಾವ್ (ಬಾಸ್ ಗಿಟಾರ್ ವಾದಕ – ೭ ವರ್ಷದ ಶ್ರೀನಿವಾಸ್ನನ್ನು ಅವರು ಪಾಶ್ಚಾತ್ಯ ಸಂಗೀತಕ್ಕೆ ಪರಿಚಯಿಸಿದ್ದರು) ಆತನನ್ನು ಕರೆತಂದಿದ್ದರು. ನಾನು ಕೇಳಿದಂತೆ `ಶಂಕರಾಭರಣಂ’ ಚಿತ್ರದ ಒಂದು ಹಾಡನ್ನು ನುಡಿಸಿದ; ಎಲ್ಲ ಗಮಕಗಳು ಅತ್ಯಂತ ಪರಿಪೂರ್ಣವಾಗಿ ಬಂದಿದ್ದವು. ನಾನು ಹಾಡಿದ ಥೀಮ್ ಸಾಂಗ್ಗೆ ಆತ ಮ್ಯಾಂಡೊಲಿನ್ ನುಡಿಸಿದ. ನಿರ್ಮಾಪಕ ಬೋನಿ ಕಪೂರ್ ಆತನಿಗೆ ೧೭೫ ರೂ. (ನೂರು ರೂ. ಜಾಸ್ತಿ) ನೀಡಿದರು. ಶಾಸ್ತ್ರಬದ್ಧವಾಗಿ ಸಂಗೀತ ಕಲಿಯಲು ಮದ್ರಾಸಿಗೆ ಬರುತ್ತೇನೆ ಎಂದು ಹೇಳಿದ” ಎಂದಿದ್ದಾರೆ ಎಸ್.ಪಿ.ಶ್ರೀನಿವಾಸ್ನ ಮೊದಲ ಸಂಗೀತ ಕಚೇರಿ ಕೇವಲ ೯ ವರ್ಷದವನಿದ್ದಾಗ ಆಂಧ್ರಪ್ರದೇಶದ ಗುಡಿವಾಡದ ತ್ಯಾಗರಾಜ ಆರಾಧನಾ ಉತ್ಸವದಲ್ಲಿ ಜರಗಿತು. ಆದರೆ ನಿಜವಾದ `ಬ್ರೇಕ್’ ಸಿಕ್ಕಿದ್ದು, ೧೯೮೧ರಲ್ಲಿ ಮದ್ರಾಸಿನ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯ ಕಚೇರಿಯಲ್ಲಿ. ಹೊಸ ವಾದ್ಯ ಹಾಗೂ ಪುಟ್ಟ ಬಾಲಕ ಪೂರ್ಣಪ್ರಮಾಣದ ಕಚೇರಿ ನಡೆಸಿದಾಗ ಮದ್ರಾಸಿನಂತಹ ಸಂಗೀತಕ್ಷೇತ್ರದಲ್ಲೇ ತೀವ್ರ ಸಂಚಲನ ಉಂಟಾಯಿತು. ಹಲವರ ಸಂಶಯ ನಿವಾರಣೆಯಾಯಿತು; ಶ್ರೋತೃಗಳು ಮಂತ್ರಮುಗ್ಧರಾದರು. ಸಂಗೀತಪ್ರಿಯರ ಪ್ರೀತಿ, ಕಲಾಪೋಷಕರ ಪ್ರೋತ್ಸಾಹ ಎಲ್ಲವೂ ದೊರೆತವು. ಕೇವಲ ೧೧ನೇ ವರ್ಷದಲ್ಲಿ ಒಬ್ಬ ಸ್ಟಾರ್ ಹುಟ್ಟಿದ್ದ. “ಮ್ಯಾಂಡೊಲಿನ್ನಲ್ಲಿ ನಾನು ಎಲ್ಲವನ್ನೂ ನುಡಿಸಿದರೂ ಕೂಡ ತಂದೆಗೆ ಹೆಚ್ಚಿನ ಸಾಧನೆಯ ಬಗ್ಗೆ ಸಂದೇಹವಿತ್ತು. ಏಕೆಂದರೆ ಕರ್ನಾಟಕ ಸಂಗೀತದ ಪ್ರಧಾನ ಅಂಶವಾದ ಗಮಕವನ್ನು ನುಡಿಸಲು ನನ್ನ ವಾದ್ಯದ ಸಾಮರ್ಥ್ಯ ಸೀಮಿತ. ನಾನು ತೋಡಿ ಮತ್ತು ವರಾಳಿ ರಾಗಗಳನ್ನು ನುಡಿಸಿದಾಗ ಅವರಿಗೆ ನನ್ನ ಸಾಮರ್ಥ್ಯ ಖಾತ್ರಿ ಆಯಿತು. ನನಗೆ ತೋಡಿ ಇಷ್ಟ. ನಾಗಸ್ವರದಲ್ಲಿ ಟಿ.ಎನ್. ರಾಜರತ್ನಂ ಪಿಳ್ಳೆ ಅವರ ತೋಡಿಯನ್ನು ಕೇಳಿ ಪ್ರಭಾವಿತನಾಗಿದ್ದೆ; ಅದೇ ರೀತಿ ಟಿ.ಆರ್. ಮಹಾಲಿಂಗಮ್ ಅವರ ಕೊಳಲುವಾದನದಿಂದಲೂ ತುಂಬ ಪ್ರಭಾವಿತನಾಗಿದ್ದೇನೆ. ಇನ್ನು ಗಾಯಕೀ ಶೈಲಿಯನ್ನು ಚೆನ್ನಾಗಿ ಇರಿಸಿಕೊಳ್ಳುವ ಸಲುವಾಗಿ ಅರಿಯಾಕುಡಿ, ಶೆಮ್ಮಂಗುಡಿ, ಜಿ.ಎನ್. ಬಾಲಸುಬ್ರಹ್ಮಣ್ಯಮ್ ಮೊದಲಾದವರ ಸಂಗೀತವನ್ನು ಕೇಳುತ್ತಿರುತ್ತೇನೆ” ಎಂದು ಶ್ರೀನಿವಾಸ್ ಒಮ್ಮೆ ಹೇಳಿದ್ದರು.
ಜಾಕಿರ್ ಹುಸೇನ್, ಶಿವಮಣಿಯಂತಹ ತಾಳವಾದ್ಯದ ಮೇರುಕಲಾವಿದರು ಶ್ರೀನಿವಾಸ್ ಜೊತೆ ಕೆಲಸ ಮಾಡಿದ್ದು, ತುಂಬ ಅಭಿಮಾನ ಇಟ್ಟುಕೊಂಡಿದ್ದರು. “ವೇದಿಕೆಯಲ್ಲಿ ಶ್ರೀನಿವಾಸ್ ಜೊತೆ ನುಡಿಸುವಾಗನೋ ಶಕ್ತಿ ಬಂದಂತಾಗುತ್ತದೆ. ಅದು ದಿವ್ಯವಾದದ್ದು” ಎನ್ನುತ್ತಿದ್ದ ಶಿವಮಣಿಯಲ್ಲಿ ಮಾತಿಗೆ ಮೀರಿದ ಅಭಿಮಾನವಿತ್ತು. ಶ್ರೀನಿವಾಸ್ ಶವಯಾತ್ರೆಯುದ್ದಕ್ಕೂ ತನ್ನ ಡ್ರಮ್ಸ್ ನುಡಿಸುವ ಮೂಲಕ ಆತ ಶ್ರೀನಿವಾಸ್ಗೆ ಅಪೂರ್ವವಾದ ಗೌರವ ಸಲ್ಲಿಸಿದರು.
ಹಿರಿಯರ ಮೆಚ್ಚುಗೆ
ಮದ್ರಾಸಿನ ಎರಡನೇ ಕಚೇರಿ ಶ್ರೀಕೃಷ್ಣ ಗಾನಸಭಾದಲ್ಲಿ ನಡೆದಿದ್ದು, ಅದನ್ನು ಕೇಳಿದ ಸಂಗೀತ ದಿಗ್ಗಜ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮೆಚ್ಚುಗೆಯನ್ನು ಪ್ರಕಟಿಸಿದರು. ಮುಂದಿನ ವರ್ಷ ಚೆನ್ನೈ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದ ಶ್ರೀನಿವಾಸ್ ಕಚೇರಿ ಬಗ್ಗೆ ವಿಮರ್ಶಕಿ ಮೈತ್ರೇಯಿ ನಂದಕುಮಾರ್ ಹೀಗೆ ನೆನಪಿಸಿಕೊಳ್ಳುತ್ತಾರೆ: “೧೨ ವರ್ಷದ ಹುಡುಗ – ಅಂಗಿಚೆಡ್ಡಿ ಹಾಕಿಕೊಂಡು ಕೈಯಲ್ಲಿ ಪುಟ್ಟ ಮ್ಯಾಂಡೊಲಿನ್ ಹಿಡಿದುಕೊಂಡು ವೇದಿಕೆಗೆ ಬಂದ; ಪಾರಿವಾಳದಂತಹ ಕಣ್ಣು, ಮುಖದಲ್ಲಿ ದೇವದೂತ(ಏಂಜಲ್)ನಂತಹ ಮುಗುಳುನಗು; ಆ ದೃಶ್ಯ ಈಗಲೂ ರೋಮಾಂಚನ ತರುತ್ತದೆ.” ಅಂದಿನ ಬಗ್ಗೆ ಶ್ರೀನಿವಾಸ್ ಹೇಳಿದ್ದು: “ತಂದೆ ವೇದಿಕೆಯಲ್ಲಿ ಕುಳಿತು ತಾಳಹಾಕುತ್ತಿದ್ದರು; ನನಗೆ ಆತ್ಮವಿಶ್ವಾಸ ಬಂತು” ಎಂಬುದಾಗಿ. ಶ್ರೀನಿವಾಸ್ ಕಲ್ಪನೆ ಯಾವಾಗಲೂ ಶ್ರೀಮಂತ ಮತ್ತು ಹೊಸತು ಆಗಿರುತ್ತಿದ್ದು, ಕೇಳಿದ ಯಾರನ್ನೂ ಮೇಲಕ್ಕೆ ಎತ್ತುವಂತಿತ್ತು. ಒಬ್ಬ ಶ್ರೋತೃ “ಬಾಲಕ ಶ್ರೀನಿವಾಸನ ಸಂಗೀತ ಕೇಳಿ ನನಗೆ ಪುನರ್ಜನ್ಮದಲ್ಲಿ ನಂಬಿಕೆ ಬಂದಿತು; ಕೆಲವು ವರ್ಷಗಳಾದ ಮೇಲೆ ಅವನ ಗಾತ್ರಕ್ಕೂ ಅವನ ಸಂಗೀತದ ಪಕ್ವತೆಗೂ ತಾಳೆ ಆಯಿತು” ಎಂದು ಉದ್ಗರಿಸಿದ್ದಾರೆ.
ಮೊದಲ ಕಚೇರಿಯ ಬಗೆಗೆ ಗಿಟಾರ್ವಾದಕ ಜಾನ್ ಆಂಟನಿ ಅವರ ಅನುಭವದ ಅಭಿವ್ಯಕ್ತಿ ಕಾವ್ಯಾತ್ಮಕವಾಗಿದೆ. “ಆ ರಾತ್ರಿ ನನಗೆ ನಿದ್ರೆ ಬರಲಿಲ್ಲ. ಒಬ್ಬ ದೇವಲೋಕದ ವ್ಯಕ್ತಿ ನಮ್ಮ ಮುಂದಿರುವಾಗ ನಿದ್ರೆ ಬರುವುದು ಹೇಗೆ? ಆತನ ಕಚೇರಿ ಮ್ಯಾಜಿಕ್ನಂತಿತ್ತು. ಶ್ರೋತೃಗಳಿಗೆ ಆವೇಶ ಬಂದಂತಾಗಿತ್ತು. ಮನುಷ್ಯಮಾತ್ರರಿಗೆ ಅದು ಅಸಾಧ್ಯ ವಿತ್ತು. ಕಚೇರಿ ಮುಗಿದೊಡನೆ ಅವನನ್ನು ನೋಡಿ ಮಾತನಾಡಿಸೋಣವೆಂದು ಹೋದೆವು. ಅಷ್ಟು ಹೊತ್ತಿಗೆ ಆತ ಒಂದು ಟ್ಯಾಕ್ಸಿಯಲ್ಲಿ ಗಾಢನಿದ್ರೆಯಲ್ಲಿದ್ದ. ಪಕ್ಕವಾದ್ಯದಲ್ಲಿದ್ದ ಮಾವೆಲಿಕ್ಕರ ವೇಲುಕುಟ್ಟಿ ನಾಯರ್ ಸಿಕ್ಕಿದರು. `ತೋಡಿಯನ್ನು ಅವನಂತೆ ನುಡಿಸಲು ೨೦ ವರ್ಷಗಳ ಪ್ರಾಕ್ಟೀಸ್ ಬೇಕು’ ಎಂಬುದು ಅವರ ನುಡಿ. ಮುಂದೆ ಚೆನ್ನೈಯಲ್ಲಿ ಆತ ನಮ್ಮ ನೆರೆಕೆರೆಯಲ್ಲಿದ್ದ. ನಮ್ಮ ಮನೆಗೆ ಆಗಾಗ ಬರುತ್ತಿದ್ದ. ನಾನು ಅವನೊಂದಿಗೆ ಯಾವುದಾದರೂ ಆಟ ಆಡಿರಲೂಬಹುದು. ಆದರೆ ನಿಜ ಹೇಳಬೇಕೆಂದರೆ, ಆ ದೇವಲೋಕದವನೊಂದಿಗೆ ಆಡುವ ಧೈರ್ಯ ನನಗಿರಲಿಲ್ಲ” ಎಂದು ಅವರು ಬಣ್ಣಿಸಿದ್ದಾರೆ.
ನಾಲ್ಕು ಹುಲಿ – ಒಂದು ಇಲಿ
ಆರಂಭದಲ್ಲಿ ಸ್ವಲ್ಪ ಅನುಮಾನವಿದ್ದರೂ ಬಹುಬೇಗ ಕರ್ನಾಟಕ ಸಂಗೀತದ ಧೀಮಂತರು ಶ್ರೀನಿವಾಸ್ ಕಚೇರಿಯ ಪಕ್ಕವಾದ್ಯಕ್ಕೆ ಕುಳಿತುಕೊಳ್ಳಲಾರಂಭಿಸಿದರು. ಶ್ರೀಕೃಷ್ಣ ಗಾನಸಭಾದ ಕಚೇರಿಯಲ್ಲಿ ಪಕ್ಕವಾದ್ಯ ಕಲಾವಿದರಾಗಿ ಸಿಕ್ಕಿಲ್ ಭಾಸ್ಕರನ್, ವಿಕ್ಕು ವಿನಾಯಕರಾಮ್, ತಂಜಾವೂರು ಉಪೇಂದ್ರನ್ ಹಾಗೂ ವಳಂಗೈಮಾನ್ ಷಣ್ಮುಗಸುಂದರಮ್ ಪಾಲ್ಗೊಂಡಿದ್ದರು. ಶ್ರೋತೃವರ್ಗದಲ್ಲಿ ತಮಿಳುನಾಡಿನ ಮಂತ್ರಿ ಕೆ. ರಾಜಾರಾಮ್ ಉಪಸ್ಥಿತರಿದ್ದರು. ಕಚೇರಿ ಮುಗಿದ ಬಳಿಕ ಅವರು “ಒಂದು ಇಲಿ ನಾಲ್ಕು ಹುಲಿಗಳನ್ನು ಹೇಗೆಲ್ಲ ಆಡಿಸಿತು!” ಎಂದು ಉದ್ಗರಿಸಿದರಂತೆ.
ಖ್ಯಾತ ವೀಣಾವಾದಕಿ ಜಯಂತಿ ಕುಮರೇಶ್, “೧೯೮೦ರ ದಶಕದಲ್ಲಿ ಅವನು ಬಿರುಗಾಳಿಯನ್ನೇ ಎಬ್ಬಿಸಿದ. ನೋಡಲು ದೇವರ ಮಗುವಿನಂತಿದ್ದ. ಮದ್ರಾಸಿನ ಅವನ ಮೊದಲ ಕಚೇರಿಗೆ ಹೋಗಿದ್ದೆ. ದಿಗ್ಗಜರೆಲ್ಲ ಇದ್ದರು; ನಂಬಲಸಾಧ್ಯವಾದ ಕಚೇರಿ. ಕಚೇರಿ ಮುಗಿಯುತ್ತಲೇ ಮಹಾನ್ ಸಂಗೀತಗಾರರು ಆತ ಇದ್ದ ಕಡೆಗೆ ನುಗ್ಗಿ ಉಂಗುರ, ಬಳೆ ಮುಂತಾಗಿ ಕೈಯಲ್ಲಿದ್ದುದನ್ನೆಲ್ಲ ಕೊಟ್ಟರು. ಆಗ ಅವನಿಗೆ ಅದೆಲ್ಲ ಏನೆಂದು ಅರ್ಥವಾಗಿರಲಾರದು. ಕರ್ನಾಟಕ ಸಂಗೀತಕ್ಕೆ ಶ್ರೀನಿವಾಸ್ ಸದ್ದಿಲ್ಲದೆ ಹೊಸ ವಾದ್ಯ, ಹೊಸ ಪರಿಕಲ್ಪನೆಗಳನ್ನು ಕೊಟ್ಟರು. ದೇವರ ಬಳಿ ಇದ್ದ ವ್ಯಕ್ತಿ ಅಲ್ಲಿಗೇ ಮರಳಿದರು” ಎಂದು ದುಃಖಿಸಿದ್ದಾರೆ.
ಶ್ರೀನಿವಾಸ್ ಸಂಗೀತದ ಕುರಿತು `ಶ್ರುತಿ’ ಪತ್ರಿಕೆ ಆಗಸ್ಟ್ ೧೯೮೩ರ ಸಂಚಿಕೆಯಲ್ಲಿ ವಿಮರ್ಶಿಸುತ್ತಾ “ಮ್ಯಾಂಡೊಲಿನನ್ನು ಆತ ಎಷ್ಟು ಕೌಶಲದಿಂದ ಬಳಸಿಕೊಳ್ಳುತ್ತಾನೆಂದರೆ, ಈ ಸಂಗೀತ ಆ ವಾದ್ಯದ್ದಲ್ಲ. ಆದರೂ ಅದನ್ನು ಕರ್ನಾಟಕ ಸಂಗೀತಕ್ಕೆ ತಂದು ಗಮಕ ಎಲ್ಲ ಅಳವಡಿಸಿದ್ದಾನೆ. ಇದು ರಾಜರತ್ನಂ ಪಿಳ್ಳೆ ಮತ್ತು ಟಿ.ಆರ್. ಮಹಾಲಿಂಗಮ್ ಹೆಮ್ಮೆಪಡುವಂತಿದೆ” ಎಂದು ಬರೆಯಿತು. ಶ್ರೀನಿವಾಸ್ರ ಈ ಶೈಲಿಯಲ್ಲಿ ೩೦ ವರ್ಷಗಳ ಬಳಿಕವೂ ಹೆಚ್ಚಿನ ಬದಲಾವಣೆ ಬೇಕಾಗಲಿಲ್ಲ. ಹಲವು ರೀತಿಗಳಲ್ಲಿ ಆತ ಅದನ್ನು ವಿಸ್ತರಿಸಿದರೂ ಕೂಡ ಅದೇ ಸ್ಫೋಟ ಮತ್ತು ಮೃದುತ್ವ. ಸ್ಥಗಿತತೆಯಾಗಲಿ ಏಕತಾನತೆಯಾಗಲಿ ಇಲ್ಲವೇ ಇಲ್ಲ. ಹೊಸತನ ಮತ್ತು ಅಚ್ಚರಿಗಳು ಸೇರುತ್ತಾ ಬಂದವು. ಶ್ರೀನಿವಾಸ್ ಇಷ್ಟದ ಪ್ರಮುಖ ಸಂಗೀತಗಾರರಲ್ಲಿ ವಯೊಲಿನ್ ವಾದಕ ಎಂ.ಎಸ್. ಗೋಪಾಲಕೃಷ್ಣನ್, ವೀಣೆಯ ಎಸ್. ಬಾಲಚಂದರ್ ಕೂಡ ಇದ್ದಾರೆ; ಹಳೆಕಾಲದ ಸಂಗೀತಕ್ಕೆ ಹೋಗಿ ಆತ ಸ್ಫೂರ್ತಿ ಪಡೆಯುತ್ತಿದ್ದರು.
ನಿತ್ಯವೂ ಹೊಸತು
ಹಿರಿಯ ವಯೊಲಿನ್ ವಾದಕಿ ಎ. ಕನ್ಯಾಕುಮಾರಿ ೧೯೯೦ರ ದಶಕದ ಮಧ್ಯಭಾಗದವರೆಗೆ ಸುಮಾರು ೧೩ ವರ್ಷ ಶ್ರೀನಿವಾಸ್ಗೆ ಪಕ್ಕವಾದ್ಯ ನೀಡಿದ್ದಾರೆ. ಶ್ರೀನಿವಾಸ್ ಅಕಾಲ ಮರಣದಿಂದ ಆಘಾತಗೊಂಡವರಲ್ಲಿ ಅವರೂ ಒಬ್ಬರು. “ಆತನೊಂದಿಗೆ ೧೩ ವರ್ಷ ನುಡಿಸಿದೆ. ಅದಾದರೋ ಎಂತಹ ಅನುಭವ! ಅತ್ಯಂತ ರೋಮಾಂಚಕಾರಿ. ಅಪರೂಪದ ರಾಗದ ಸ್ವರ ನುಡಿಸಿ ನನ್ನ ಕಡೆಗೊಂದು ತುಂಟನಗು ಬೀರುವನು. ಅದಕ್ಕೆ ನಾನು ನನ್ನ ವಾದ್ಯದಲ್ಲಿ ಸೂಕ್ತ ಉತ್ತರ ನೀಡುವುದು. ಆತನ ಜೊತೆ ಇಡೀ ತಂಡ ತುದಿಗಾಲಲ್ಲಿ ನಿಂತಿರಬೇಕಿತ್ತು. ನಮಗದು ಇಷ್ಟವೂ ಆಗಿತ್ತು. ಆತ ಸಹಕಲಾವಿದರಿಗೆ ಸಮಾನ ಸ್ಥಾನಮಾನ ನೀಡುವ ಅಪರೂಪದ ಕಲಾವಿದ” ಎಂದಿರುವ ಕನ್ಯಾಕುಮಾರಿ ಮುಂದುವರಿದು, “ಬಾಲಪ್ರತಿಭೆಗಳು ನಮಗೆ ಗೊತ್ತು. ಅಂತಹ ಕೆಲವರಿಗೆ ನಾನು ವಯೊಲಿನ್ ನುಡಿಸಿದ್ದೇನೆ. ಆದರೆ ಈ ಮನಸ್ಸಿಗೆ ಹೋಲಿಕೆ ಇಲ್ಲ. ಈತ ಅಸಾಮಾನ್ಯ. ಕಚೇರಿ ಒಂದರಂತೆ ಇನ್ನೊಂದಿಲ್ಲ. ಒಂದು ರಾಗವನ್ನು ಆತ ಒಂದರಂತೆ ಇನ್ನೊಂದು ಸಲ ನುಡಿಸಿದ್ದಿಲ್ಲ. ಯಾವುದೇ ಬಗೆಯ ಶ್ರೋತೃಗಳಿಗೆ ಆತನ ಸಂಗೀತ ಇಷ್ಟವಾಗುತ್ತಿತ್ತು. ಪಂಡಿತ-ಪಾಮರ ಎಲ್ಲರೂ ಅಚ್ಚರಿಗೀಡಾಗುತ್ತಿದ್ದರು. ಅದು ದಿವ್ಯ, ಆ ತೇಜಸ್ಸು ಅದ್ವಿತೀಯ; ಅವನು ಸುಬ್ರಹ್ಮಣ್ಯ, ಅವನ ಕೈಯಲ್ಲಿದ್ದುದು ಶಕ್ತ್ಯಾಯುಧ, ಅದರಿಂದ ಹರಿಯುತ್ತಿದ್ದುದು ಅಮೃತ” ಎಂದು ಕೊಂಡಾಡಿದ್ದಾರೆ.
ಮ್ಯಾಂಡೊಲಿನ್ಗೆ ಮೊದಮೊದಲು ವಿರೋಧ ಇತ್ತು. ಆದರೆ ಆತ ರಸಿಕರು ಅದನ್ನು ಒಪ್ಪಿಕೊಳ್ಳುವವರೆಗೂ ಬಿಡಲಿಲ್ಲ. ಪ್ರತಿ ಕಚೇರಿಯಲ್ಲೂ ಆತ ಏನನ್ನೋ ಸಾಬೀತುಪಡಿಸುತ್ತಿದ್ದ ಎನ್ನುವ ಕನ್ಯಾಕುಮಾರಿ, ಶ್ರೀನಿವಾಸ್ ಬಗೆಗಿನ ಒಂದು ಆತ್ಮೀಯ ಚಿತ್ರವನ್ನು ಕೂಡ ನೀಡಿದ್ದಾರೆ: “ಕಚೇರಿಗಾಗಿ ನಾವು ಯಾವುದೋ ದೂರದ ಊರಿಗೆ ಕಾರಿನಲ್ಲಿ ಹೋಗಬೇಕಾಗುತ್ತಿತ್ತು. ಸಾಕಷ್ಟು ಸಮಯವಿರುತ್ತಿತ್ತು. ಆಗ ಆತ ತನ್ನ ಹಾಸ್ಯ, ಮಗುವಿನಂತಹ ವೀಕ್ಷಣೆಗಳಿಂದ ನಮ್ಮನ್ನೆಲ್ಲ ನಗಿಸುತ್ತಿದ್ದ. ಮತ್ತೆ ಹತ್ತಿರ ಕುಳಿತಿದ್ದ ನಮ್ಮಲ್ಲಿ ಯಾರಾದರೊಬ್ಬರ ಮೇಲೆ ಒರಗಿ ನಿದ್ರೆ ಮಾಡುತ್ತಿದ್ದ. ಆತ ಆಂಜನೇಯನ ಉಪಾಸಕ; ಹಿರಿಯರ ಬಗೆಗೆ ತುಂಬ ಗೌರವ ಇರಿಸಿಕೊಂಡಿದ್ದ” ಎನ್ನುವ ಕನ್ಯಾಕುಮಾರಿ, “ಆತ ಸಂಗೀತವನ್ನು ಬಹುತೇಕ ಸ್ವಂತ ಕಲಿತವ. ಪ್ರವಾಸದ ವೇಳೆ ತನಗೆ ವಶವಾಗದಿರುವ ರಾಗಗಳ ಬಗ್ಗೆ ಜೊತೆಗಿರುವ ಹಿರಿಯರಲ್ಲಿ ಕೇಳುತ್ತಿದ್ದ. ವಯೊಲಿನ್ ಮೇಲೆ ಒಂದು ಮಿಡಿತ ಸಾಕು; ಎಲ್ಲವನ್ನೂ ಗ್ರಹಿಸಿಬಿಡುತ್ತಿದ್ದ. ಎಂ.ಎಲ್. ವಸಂತಕುಮಾರಿ ಅವರ ಬಾನಿಯಲ್ಲಿ ಹಲವು ಕೀರ್ತನೆಗಳನ್ನು ಕಲಿತಿದ್ದ. ಜ್ಞಾನದ ದಾಹ, ದಣಿವರಿಯದ ಪ್ರಾಕ್ಟೀಸ್ ಅವನದಾಗಿತ್ತು. ಮಾತನಾಡುವಾಗಲೂ ಅವನ ಬೆರಳು ಮ್ಯಾಂಡೊಲಿನ್ ಮೇಲೆ ಹರಿದಾಡುತ್ತಿತ್ತು. (ಪುಟ್ಟವಾದ್ಯ ಮ್ಯಾಂಡೊಲಿನನ್ನು ಶ್ರೀನಿವಾಸ್ ಯಾವಾಗಲೂ ತನ್ನೊಂದಿಗೆ ಇಟ್ಟುಕೊಳ್ಳುತ್ತಿದ್ದರು.) ತನ್ನ ಅಪರೂಪ ಬುದ್ಧಿಮತ್ತೆ (ಜೀನಿಯಸ್)ಯನ್ನು ಕಲಾವಿದನಾಗಲು ಬಳಸಿಕೊಂಡು ಮ್ಯಾಜಿಕನ್ನೇ ಮಾಡಿದ” ಎಂದು ಸ್ಮರಿಸಿಕೊಂಡಿದ್ದಾರೆ. “ನಾವು ಅವನು ಬೆಳೆಯುವುದನ್ನು ಕಂಡವರು. ಅವನೀಗ ಇಲ್ಲ ಎಂದರೆ ನಂಬಲಾಗುತ್ತಿಲ್ಲ” ಎಂದು ಈ ಹಿರಿಯ ಕಲಾವಿದೆ ಕನ್ಯಾಕುಮಾರಿ ತಮ್ಮ ನೋವಿಗೆ ದನಿಯಾಗಿದ್ದಾರೆ.
ಅನುಭವಿಗಳಿಗೂ ಕಷ್ಟ
ಪ್ರಸಿದ್ಧ ಮೃದಂಗವಾದಕ ಕೆ.ವಿ. ಪ್ರಸಾದ್ ಇದೇ ರೀತಿ ಸುದೀರ್ಘಕಾಲ ಶ್ರೀನಿವಾಸ್ಗೆ ಸಾಥಿ ಆಗಿದ್ದವರು. “೧೯೮೪ರಿಂದ ೧೧ ವರ್ಷಗಳ ಕಾಲ ನಾನು ಆತನಿಗೆ ಪಕ್ಕವಾದ್ಯ ನುಡಿಸಿದ್ದೇನೆ. ಆತ ಬಹಳ ವೇಗವಾಗಿ ನುಡಿಸುತ್ತಿದ್ದ ಕಾರಣ ಕಷ್ಟವಾಗುತ್ತಿತ್ತು. ಕಲ್ಪನಾಸ್ವರಗಳನ್ನು ಡಿಕೋಡ್ ಮಾಡಿ ರಾಗಸಹಿತ ಅನುಸರಿಸಬೇಕು. ಆ ಪುಟ್ಟ ವಾದ್ಯದಲ್ಲಿ ನುಡಿಸಲು ಆಗದೆ ಇರುವಂಥದು ಏನೂ ಇಲ್ಲ ಎಂದು ಆತ ಮಾಡಿತೋರಿಸಿದ. ಈ ಹಂತದಲ್ಲಿ ಹಲವು ಮಹಾನ್ ಹಿಂದುಸ್ತಾನಿ ಸಂಗೀತಗಾರರಿಂದ ಜುಗಲ್ಬಂದಿ ಬಗ್ಗೆ ಬೇಡಿಕೆ ಇದ್ದರೂ ಆತ ನಿರಾಕರಿಸುತ್ತಾ ಬಂದ. ಸುಮಾರು ೧೯೯೬ರವರೆಗೆ ಕೇವಲ ಕರ್ನಾಟಕ ಶಾಸ್ತ್ರೀಯ ಕಚೇರಿಗಳನ್ನು ಮಾಡುತ್ತಿದ್ದರು. ಮುಂದೆ ತಬಲಾವಾದಕ ಜಾಕಿರ್ ಹುಸೇನ್ ಮುಂತಾದವರ ಜೊತೆ ಸೇರಿ ಫ್ಯೂಶನ್ ಕಚೇರಿಗಳನ್ನು ಕೂಡ ನಡೆಸಿದರು. ಗಮನಿಸಬೇಕಾದ ಒಂದು ಅಂಶವೆಂದರೆ, ಶ್ರೀನಿವಾಸ್ ಒಂದರಿಂದ ಇನ್ನೊಂದು ಪ್ರಕಾರಕ್ಕೆ ಹೋಗುವಾಗ ಪರಂಪರೆ ಮತ್ತು ಪಾಶ್ಚಾತ್ಯ ಮಾದರಿಗಳ ಕುರಿತು ಜ್ಞಾನ, ಒಳನೋಟಗಳನ್ನು ಹೊಂದಿರುತ್ತಿದ್ದರು” ಎಂದಿದ್ದಾರೆ ಕೆ.ವಿ. ಪ್ರಸಾದ್. ಜಾಜ್ ಮತ್ತು ಫ್ಯೂಶನ್ ಸಂಗೀತಗಳ ಬೆನ್ನುಹಿಡಿದು ಬಹಳ ದೊಡ್ಡ ಪ್ರಮಾಣದಲ್ಲಿ ವಿದೇಶಪ್ರವಾಸಗೈದರೂ ಕೂಡ ಚೆನ್ನೈನ ಸಂಗೀತಋತುವನ್ನು ಒಮ್ಮೆಯೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಮ್ಯೂಸಿಕ್ ಅಕಾಡೆಮಿಯಲ್ಲಿ ಪ್ರತಿವರ್ಷ ಶ್ರೀನಿವಾಸ್ ಸಂಗೀತ ಕಚೇರಿ ಇರುತ್ತಿತ್ತು; ಹಾಗೆಯೇ ಇತರ ಸಭಾಗಳಲ್ಲಿ ಕೂಡ.
೧೯೯೩ರಲ್ಲಿ ಕೈಗೊಂಡ ಅಮೆರಿಕ ಸಂಗೀತ ಪ್ರವಾಸವನ್ನು ಪ್ರಸಾದ್ ಹೀಗೆ ನೆನಪಿಸಿಕೊಳ್ಳುತ್ತಾರೆ: “೭೨ ದಿನಗಳಲ್ಲಿ ೩೮ ಕಚೇರಿಗಳನ್ನು ನಡೆಸಿದೆವು. ಅಮೆರಿಕದ ಪೂರ್ವ ಕರಾವಳಿಯಿಂದ ಪಶ್ಚಿಮದ ಕರಾವಳಿವರೆಗೆ ಹಾರಾಟ. ಆಗ ಶ್ರೀನಿವಾಸ್ ಸುಪರ್ಬ್ (ಅತ್ಯುತ್ತಮ). ಪ್ರತಿ ಕಚೇರಿಯಲ್ಲಿ ಆತ ಎಸೆಯುತ್ತಿದ್ದ ಸವಾಲುಗಳು ಆ ಪ್ರವಾಸದ ದೊಡ್ಡ ಉಡುಗೊರೆ. ಅದೇ ಪ್ರವಾಸದಲ್ಲಿ ಎನ್. ರಮಣಿ (ಕೊಳಲು) ಅವರೊಂದಿಗೆ ಜುಗಲ್ಬಂದಿ ನಡೆಸಿದ. ಶ್ರೀಮುಷ್ಣಂ ರಾಜಾರಾವ್ ಮತ್ತು ನಾನು ಇಬ್ಬರ ಮೃದಂಗ; ಮತ್ತೆ ವೆಲ್ಲೂರು ರಾಮಭದ್ರನ್ ಸೇರಿಕೊಂಡರು. ತನ್ನ ಸಂಗೀತದಂತೆಯೇ ಆತ ವೈಬ್ರೆಂಟ್, ಯಂಗ್ ಮತ್ತು ಫ್ರೆಶ್. ಮ್ಯಾಂಡೊಲಿನನ್ನು ಕರ್ನಾಟಕ ಸಂಗೀತಕ್ಕೆ ಬಳಸಬಾರದು, ಗುರುಕುಲ ಪದ್ಧತಿಯಲ್ಲಿ ಕಲಿತವರು ಮಾತ್ರ ಸಂಗೀತಗಾರರಾಗಬಲ್ಲರು ಎಂಬ ಮಡಿವಂತರ ಅಂಬೋಣಗಳಿಗೆ ಸೊಪ್ಪುಹಾಕದೆ ಆತ ತನ್ನ ಸಂಗೀತದಿಂದಲೇ ಉತ್ತರ ನೀಡಿದರು. ಮ್ಯಾಂಡೊಲಿನ್ ಅವರ ಜೀವನದ ಭಾಗವಾಗಿತ್ತು. ತಾನು ಸೃಷ್ಟಿಸುತ್ತಿದ್ದ ಸಂಗೀತದ ಸಂಕೀರ್ಣತೆ ಆತನಿಗೆ ಗೊತ್ತೇ ಇರಲಿಲ್ಲವೇನೋ! ಮುಖಭಾವ ತಮಾಷೆ ಮಾಡುವಂತೆ ಇರುತ್ತಿತ್ತು.”
ಟಿಎಂಕೆ ನೆನಪು
ಪ್ರಚಂಡ ಪ್ರತಿಭಾವಂತ ಹಾಗೂ ನೇರಮಾತಿಗೆ ಹೆಸರಾದ ಯುವಗಾಯಕ ಟಿ.ಎಂ. ಕೃಷ್ಣ ಶ್ರೀನಿವಾಸ್ ಸಂಗೀತವನ್ನು ಮೆಚ್ಚಿಕೊಂಡಿದ್ದರೆಂದರೆ ಅದೊಂದು ದೊಡ್ಡ ಅರ್ಹತಾಪತ್ರವೇ ಸರಿ. “೧೯೮೧-೮೨ರ ಆ ಕಾಲಘಟ್ಟವನ್ನು ನೆನಪಿಸಿಕೊಳ್ಳಿ. ಇವನ ಸಂಗೀತ ಕೇಳಿ ಮದ್ರಾಸಿನ ಜನ ನಿಬ್ಬೆರಗು; ಒಂದು ಫೆನಾಮೆನನ್ (ಲೋಕೋತ್ತರ ಘಟನೆ). ಬಹುಬೇಗ ಅನುಭವಿಗಳಾದ ಹಲವರ ಜೊತೆ ಕೆಲಸ ಮಾಡಿದ. ಕೆಲವು ಸಲ ಅನುಭವಿಗಳಿಗೂ ಅವನ ಜೊತೆ ಕಷ್ಟವಾಗುತ್ತಿತ್ತು. ಅವನ ಬೆರಳುಗಳು ತಂತಿಯ ಮೇಲೆ ಚಲಿಸುವುದಲ್ಲ; ಹಾರುವುದು. ಇಷ್ಟು ಸಣ್ಣ ವಾದ್ಯದಿಂದ ಅಷ್ಟೊಂದು ನಾದಪ್ರವಾಹ ನಂಬಲಸಾಧ್ಯ. ಅತಿ ವೇಗದ ಅತ್ಯಂತ ರೋಮಾಂಚಕ ಸ್ವರಗುಚ್ಛಗಳನ್ನು ಆತ ಸೃಷ್ಟಿಸಿದ. ಜೊತೆಗೆ ಅತಿ ಮೃದು ಮತ್ತು ಗಂಭೀರ ಕೂಡ. ಕಾಣುವಾಗ ನಮಗೆ ಇದು ಸುಲಭ ಎನಿಸುತ್ತಿತ್ತು. ಏನೋ ತಮಾಷೆ ಮಾಡುವ ಮುಖಭಾವ, ಮುಗುಳ್ನಗು. ತಾನು ಖುಷಿಪಟ್ಟು ಎಲ್ಲರಿಗೂ ಸಂತೋಷಕೊಟ್ಟ” ಎಂದಿದ್ದಾರೆ ಟಿ.ಎಂ.ಕೆ.
“೧೯೮೪ರಲ್ಲಿ ಆತ ಎಂಟು ವರ್ಷದವನಿದ್ದಾಗ ನಾನು ಮೊದಲಬಾರಿ ಆತನ ಸಂಗೀತ ಕೇಳಿದೆ. ಸಂಗೀತ ಕಲಿಯುತ್ತಿದ್ದ ನಮಗೆ ಆತ ದೊಡ್ಡ ಸ್ಫೂರ್ತಿ, ಹೀರೋ. ನಾವೂ ಅದೇ ರೀತಿ ಆಗಿ ವೇದಿಕೆಯ ಮೇಲೆ ಮಿಂಚಬೇಕೆಂಬ ಆಶೆ. ೧೯೯೦ರ ದಶಕದ ಹೊತ್ತಿಗೆ ಆತ ಲೋಕಸಂಚಾರಿ. ಜಾಜ್ ಉತ್ಸವಗಳಲ್ಲೂ ಭಾಗಿ. ೧೯೯೭ರಲ್ಲಿ `ರಿಮೆಂಬರ್ ಶಕ್ತಿ’ ಎನ್ನುವ ಫ್ಯೂಶನ್ ಬ್ಯಾಂಡ್ಗೆ ಸೇರಿದ. ಅಲ್ಲೂ ಬಹಳಷ್ಟು ಮಿಂಚಿದ. ಶಾಂತವಾಗಿ ಕುಳಿತು ತನ್ನ ಸರದಿ ಬಂದಾಗ ಅಚ್ಚರಿ ಮೂಡಿಸುವ ವಸ್ತು ಕೊಡುತ್ತಾನೆ. ಸಂಗೀತಕ್ಕೆ ಹೊರತಾಗಿ ನಾವು ಶ್ರೀನಿವಾಸ್ರಿಂದ ಕಲಿತ ಅಮೂಲ್ಯ ಪಾಠವೆಂದರೆ ಜನ ಮತ್ತು ಕಲೆ ಬಗೆಗಿನ ಗೌರವ. ಇತರ ಸಂಗೀತಗಾರರ ಬಗ್ಗೆ ಉದಾರವಾದ ಮೆಚ್ಚುಗೆ. ಹೆಚ್ಚು ಮಾತನಾಡುವವನಲ್ಲ; ಕೈಯಲ್ಲಿ ಮ್ಯಾಂಡೊಲಿನ್ ಬಂತೆಂದರೆ ಸಂಗೀತದ ಪ್ರವಾಹ. ಅವನ ಕಾಲದಲ್ಲಿ ಬದುಕಿದ್ದು ನಮ್ಮ ಅದೃಷ್ಟ” – ಇದು ಟಿ.ಎಂ. ಕೃಷ್ಣ ಅವರ ಹೃದಯ ತುಂಬಿದ ಮಾತು.
ಸಂಕೀರ್ಣ ಸಂಗೀತ
ಹಿರಿಯ ಸಂಗೀತಗಾರ ಓ.ಎಸ್. ತ್ಯಾಗರಾಜನ್ ಅವರು “ಶ್ರೀನಿವಾಸ್ ಸಂಗೀತ ತುಂಬ ಸಂಕೀರ್ಣ. ಅದ್ಭುತವಾದ ಆ ತಾಂತ್ರಿಕತೆ ತುಂಬ ಪ್ರಾಕ್ಟೀಸ್ನಿಂದ ಬಂದದ್ದು; ಆದರೂ ಕಿವಿಗೆ ಹಿತಕರ. ಜಾಗ್ರತೆಯಿಂದ ನಿರ್ವಹಿಸಬೇಕಾದ ವರಾಳಿ, ಮುಖಾರಿಯಂತಹ ವಿವಾದಿ ರಾಗಗಳನ್ನು ಆತ ನುಡಿಸುತ್ತಿದ್ದ ರೀತಿ ಅನನ್ಯ. ಲಯದ ಮೇಲೆ ಆತನಿಗೆ ಅದ್ಭುತ ಹಿಡಿತವಿತ್ತು. ಅಚ್ಚರಿ ಮೂಡಿಸುವ ತಾಳವಿನ್ಯಾಸಗಳನ್ನು ರೂಪಿಸುತ್ತಿದ್ದ. ಆದರೂ ನಾದದಲ್ಲಿ ಬಿರುಕು ಉಂಟಾಗುತ್ತಿರಲಿಲ್ಲ. ಆತನ ಸಂಕೀರ್ಣತೆ ಬೇಕೆಂದೇ ಮಾಡುವ ಸೃಷ್ಟಿಯಲ್ಲ. ಇದನ್ನೆಲ್ಲ ಶ್ರೀನಿವಾಸ್ ರಾಗಲಕ್ಷಣ ಸ್ವಲ್ಪವೂ ತಪ್ಪದೆ ಮಾಡುತ್ತಿದ್ದರು” ಎಂದು ವಿಶ್ಲೇಷಿಸಿದ್ದಾರೆ.
ಜಾಜ್ ಗಿಟಾರ್ವಾದಕ ಜಾನ್ ಮೆಕ್ಲಾಗ್ಲಿನ್ ೧೯೮೦ರ ದಶಕದ ಆರಂಭದಲ್ಲೇ ಶ್ರೀನಿವಾಸ್ ಸಂಗೀತ ಕೇಳಿ ಮಾರುಹೋಗಿದ್ದರು. ಆದರೆ ಶ್ರೀನಿವಾಸ್ ಕರ್ನಾಟಕ ಸಂಗೀತದಿಂದ ಆಚೆಗೆ ಬಾರದ ಕಾರಣ ಜೊತೆಯಾಗಿ ಭಾಗವಹಿಸಬೇಕೆಂಬ ಅವರ ಆಶೆ ಹಾಗೇ ಉಳಿದುಕೊಂಡಿತ್ತು; ೧೨-೧೩ ವರ್ಷಗಳ ಬಳಿಕ ಅದಕ್ಕೆ ಅವಕಾಶವಾಯಿತು; `ರಿಮೆಂಬರ್ ಶಕ್ತಿ’ ಎಂಬ ತಂಡದಲ್ಲಿ ಒಟ್ಟಿಗೆ ಕೆಲಸ ಮಾಡಿದರು; ಆಲ್ಬಂಗಳನ್ನು ತಂದರು. “ಇತರ ಫ್ಯೂಶನ್ ಆಲ್ಬಂಗಳಿಗೆ ಸಾಧ್ಯವಾಗದ್ದನ್ನು ಶ್ರೀನಿವಾಸ್ ಸಾಧಿಸಿದರು. ಹೆಚ್ಚಿನ ಫ್ಯೂಶನ್ಗಳಲ್ಲಿ ಭಾರತೀಯ ಕಲಾವಿದರು ಲೀಡ್ ಮಾಡುತ್ತಾರೆ; ಜಾಜ್ ಸಂಗೀತಗಾರರು ಅದನ್ನು ಅನುಸರಿಸುತ್ತಾರೆ. ಇದಕ್ಕೆ ಭಿನ್ನವಾಗಿ ಶ್ರೀನಿವಾಸ್ ಜಾಜ್ನ ಜೊತೆಗಾರರನ್ನು ತನ್ನೊಂದಿಗೇ ಸೇರಿಸಿಕೊಂಡು `ಕರೆ-ಪ್ರತಿಕ್ರಿಯೆ’ ರೀತಿಯಲ್ಲಿ ಮಾಡುತ್ತಿದ್ದರು. ಆತನಿಗೆ ಅಂತಹ ಸಾಮರ್ಥ್ಯವಿತ್ತು; ಎಲ್ಲರೂ ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತಿದ್ದರು” ಮೆಕ್ಲಾಗ್ಲಿನ್ ಶ್ರೀನಿವಾಸ್ರನ್ನು ಮೆಚ್ಚಿಕೊಂಡ ರೀತಿ ಅದು.
ಪ್ರಯೋಗಕ್ಕೆ ಸೈ
ಶ್ರೀನಿವಾಸ್ ಎಂದೂ ಪ್ರಯೋಗಕ್ಕೆ ಅಂಜಲಿಲ್ಲ. ಬಹಳ ಬೇಗ ಆತ ಎಕಾಸ್ಟಿಕ್ ಮ್ಯಾಂಡೊಲಿನ್ ಬಿಟ್ಟು ಎಲೆಕ್ಟ್ರಿಕ್ ಉಪಕರಣಕ್ಕೆ ಹೋದರು. ಎಂಟು ತಂತಿಗಳಿಂದ ಐದಕ್ಕೆ ಇಳಿಸಿದರು. ಕಳೆದ ಹಲವು ವರ್ಷಗಳಲ್ಲಿ ತನ್ನ ಸಂಗೀತ ವ್ಯವಸ್ಥೆಯಲ್ಲಿ ಆತ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ತಾಂತ್ರಿಕವಾಗಿ ಪಿಕಪ್ಗಳು, ಪ್ರೋಸೆಸರ್ಗಳ ಪರಿಣಾಮ, ಧ್ವನಿವರ್ಧಕಗಳು ಉತ್ತಮಗೊಳ್ಳುತ್ತಾ ಬಂದವು. ಸಂಗೀತವು ಸಮೃದ್ಧ ಮತ್ತು ಅಭಿವ್ಯಕ್ತಿಪರ ಆಗುತ್ತಾ ಬಂತು; ಮಾತ್ರವಲ್ಲ, ಆತನಲ್ಲಿ ಮಧುರೆ ಮಣಿ ಅಯ್ಯರ್ ಅವರ ಸೃಷ್ಟಿಶೀಲತೆ ಮಿಂಚಿದೆ ಎಂದು ಗುರುತಿಸಿದವರೂ ಇದ್ದಾರೆ.
ಜಾಕಿರ್ ಹುಸೇನ್, ಶಿವಮಣಿಯಂತಹ ತಾಳವಾದ್ಯದ ಮೇರುಕಲಾವಿದರು ಶ್ರೀನಿವಾಸ್ ಜೊತೆ ಕೆಲಸ ಮಾಡಿದ್ದು, ತುಂಬ ಅಭಿಮಾನ ಇಟ್ಟುಕೊಂಡಿದ್ದರು. ಶ್ರೀನಿವಾಸ್ ಜಾಕಿರ್ರನ್ನು `ಪೂರ್ವ-ಪಶ್ಚಿಮದ ಸೇತುವೆ’ ಎಂದು ಬಣ್ಣಿಸುತ್ತಿದ್ದರು. ಜಾಕಿರ್ ಕಚೇರಿ ಮಧ್ಯದಲ್ಲಿ “ಲೇಡೀಸ್ ಅಂಡ್ ಜಂಟ್ಲ್ಮೆನ್, ಈತ ಮ್ಯಾಂಡೊಲಿನ್ ಮಾಂತ್ರಿಕ (Wizಚಿಡಿಜ); ಶ್ರೀನಿವಾಸ್ಗೊಂದು ದೊಡ್ಡ ಚಪ್ಪಾಳೆ” ಎಂದು ಸಂತೋಷದಿಂದ ಹುರಿದುಂಬಿಸುತ್ತಿದ್ದರು. “ವೇದಿಕೆಯಲ್ಲಿ ಶ್ರೀನಿವಾಸ್ ಜೊತೆ ನುಡಿಸುವಾಗ ಏನೋ ಶಕ್ತಿ ಬಂದಂತಾಗುತ್ತದೆ. ಅದು ದಿವ್ಯವಾದದ್ದು” ಎನ್ನುತ್ತಿದ್ದ ಶಿವಮಣಿಯಲ್ಲಿ ಮಾತಿಗೆ ಮೀರಿದ ಅಭಿಮಾನವಿತ್ತು. ಶ್ರೀನಿವಾಸ್ ಶವಯಾತ್ರೆಯುದ್ದಕ್ಕೂ ತನ್ನ ಡ್ರಮ್ಸ್ ನುಡಿಸುವ ಮೂಲಕ ಆತ ಅಪೂರ್ವವಾದ ಗೌರವ ಸಲ್ಲಿಸಿದರು.
ತಮ್ಮನ ಅಳಲು
ಶ್ರೀನಿವಾಸ್ ಅಕಾಲಿಕ ಅಗಲುವಿಕೆಯಿಂದ ತುಂಬ ಹಾನಿಗೀಡಾದವರು ತಮ್ಮ ಯು. ರಾಜೇಶ್. ಅಣ್ಣ ೯ ವರ್ಷ ಕಿರಿಯನಾದ ಆತನಿಗೆ ಗುರು ಕೂಡ. ಸುಮಾರು ೨೦ ವರ್ಷ ಆತ ಅಣ್ಣನೊಂದಿಗೆ ಸಹ-ವಾದನ ಮಾಡಿದ್ದಾರೆ. ಈಗ ಅಣ್ಣನಿಲ್ಲದೆ ಶ್ರೋತೃಗಳನ್ನು ಎದುರಿಸುವುದು ಹೇಗೆಂಬ ಚಿಂತೆ ಆತನನ್ನು ಕಾಡುತ್ತಿದೆ. “ಕಚೇರಿಯಲ್ಲಿ ಮ್ಯಾಂಡೊಲಿನ್ ನುಡಿಸುವಾಗ ಬಲಕ್ಕೆ ತಿರುಗಿ ನೋಡುವುದು ನನ್ನ ಅಭ್ಯಾಸ. ಅಣ್ಣ ಕಣ್ಣಿನಲ್ಲೇ ನೀಡುವ ಒಪ್ಪಿಗೆಗಾಗಿ ಹಾಗೆ ಮಾಡುತ್ತಿದ್ದೆ. ಈಗ ವೇದಿಕೆಯ ಆ ಜಾಗ ಖಾಲಿ ಇರುವುದನ್ನು ಎದುರಿಸುವುದು ಸುಲಭವಲ್ಲ. ಅಣ್ಣನ ಪಾದರಕ್ಷೆಗಳಲ್ಲಿ ನಾನು ಕಾಲಿಡಲಾರೆ; ಅವು ತುಂಬ ದೊಡ್ಡವು. ಈ ಬಗ್ಗೆ ನಾನು ರಸಿಕರ ನೆರವು ಕೋರುತ್ತೇನೆ; ಅಣ್ಣ ಶಕ್ತಿ ಕೊಡುತ್ತಾನೆಂದು ನಂಬುತ್ತೇನೆ. ಗೊಂದಲ, ಬೇಸರ ಆದಾಗ ಅವನ ಕೋಣೆಯೊಳಗೆ ಒಮ್ಮೆ ಇಣುಕುತ್ತೇನೆ. `ಮಾಡುವುದನ್ನು ಮುಂದುವರಿಸು; ನಿನ್ನ ಹೃದಯದತ್ತ ತಿರುಗಿ ನೋಡು’ ಎಂದಂತಾಗುತ್ತದೆ” ಎನ್ನುತ್ತಾರೆ ರಾಜೇಶ್.
“ನಾವು ಪ್ರವಾಸದಲ್ಲಿ ಇರದಿದ್ದಾಗ ಪ್ರತಿದಿನ ಬೆಳಗ್ಗೆ ಇಬ್ಬರೂ ಸೇರಿ ಅಭ್ಯಾಸ ನಡೆಸುವುದು ಕಡ್ಡಾಯವಿತ್ತು. ಆಗ ನನಗೆ ರಾಗ-ಲಯಗಳ ಅಪೂರ್ವ ದರ್ಶನ ಆಗುತ್ತಿತ್ತು. ನಾನು ಬೆಳೆಯುತ್ತಿದ್ದೆ. ಅತ್ಯಂತ ಸಂಕೀರ್ಣವಾದ ಸ್ವರಗುಚ್ಛಗಳನ್ನು ಕೂಡ ಆತ ತುಂಬ ಸರಳಗೊಳಿಸಿ, ವಿರಚನೆ ಮಾಡಿ (ವಿಭಜಿಸಿ) ತಿಳಿಸಿಕೊಡುತ್ತಿದ್ದ” ಎನ್ನುವ ತಮ್ಮ ರಾಜೇಶ್,”ನಾನು ದುಃಖದಲ್ಲಿ ಅಳುವುದು ಅಣ್ಣನಿಗೆ ಇಷ್ಟವಾಗುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ನನ್ನ ಕೈ ಹಿಡಿದುಕೊಂಡ. ನಾಡಿಮಿಡಿತ ಇಳಿಯುತ್ತಿತ್ತು. ಆಗಲೂ ಅವನ ಕಣ್ಣುಗಳಲ್ಲಿ ಆಶೆ ಇತ್ತು. ಅವನು ಹೇಳಿದ ಒಂದೇ ಮಾತು: `ನಾನು ಮನೆಗೆ ಹೋಗಬೇಕು.’ ನಾನು ವಾಪಸು ಕರೆತಂದೆ…. ಅವನ ದಣಿವರಿಯದ ಉತ್ಸಾಹ, ಶಕ್ತಿಶಾಲಿಯಾದ ಸಂಗೀತ ನನ್ನ ಜೊತೆಗೆ ಇರುತ್ತವೆ” ಎಂದು ನೊಂದು ನುಡಿಯುತ್ತಾರೆ.
ಶ್ರೀನಿವಾಸ್ಗೆ ಪಿತ್ತಕೋಶದ ಸಮಸ್ಯೆಯುಂಟಾಗಿ ಸೆ. ೧೧ರಂದು ಅದರ (ಲಿವರ್) ಕಸಿ ಮಾಡಲಾಗಿತ್ತು; ಸುಧಾರಿಸುತ್ತಿದ್ದರು. ಆದರೆ ೧೮ರಂದು ಸಂಜೆ ಸಮಸ್ಯೆ ಶುರುವಾಗಿ ತಮ್ಮ ಅಭಿಮಾನಿಗಳನ್ನು ತಬ್ಬಲಿಗೊಳಿಸಿ ಹೊರಟೇಹೋದರು. ಹೆತ್ತವರು, ಮಗ ಹಾಗೂ ಸೋದರ-ಸೋದರಿಯರನ್ನು ಅವರು ಅಗಲಿದರು. ಆಂಧ್ರಪ್ರದೇಶದ ವಿಜಿಲೆನ್ಸ್ ಅಧಿಕಾರಿಯೊಬ್ಬರ ಮಗಳನ್ನು ಅವರು ೧೯೯೪ರಲ್ಲಿ ವಿವಾಹವಾಗಿದ್ದು, ೨೦೧೨ರಲ್ಲಿ ವಿಚ್ಛೇದನವಾಗಿತ್ತು.
ಮೆಕ್ಲಾಗ್ಲಿನ್ ನೀಡುತ್ತಿದ್ದ ಕ್ಲಿಷ್ಟ ರಚನೆಗಳ ಮೇಲೆ ಹಿಡಿತ ಬರಬೇಕಿದ್ದರೆ ೨-೩ ವಾರಗಳೆ ಬೇಕು. ಅದಕ್ಕೆ ಶ್ರೀನಿವಾಸ್ ತೆಗೆದುಕೊಳ್ಳುತ್ತಿದ್ದದ್ದು ಕೇವಲ ೨೦ ನಿಮಿಷ ಮಾತ್ರ!
ದಿಗ್ಗಜರ ಸ್ಫೂರ್ತಿ
ಶ್ರೀನಿವಾಸ್ ಸಂಗೀತ ಶಿಕ್ಷಣದಲ್ಲಿ ಸಾಂಪ್ರದಾಯಿಕ ಲಾಕ್ಷಣಿಕತೆ ಇಲ್ಲವೆಂದು ಕೆಲವು ವಿಮರ್ಶಕರು ಆಕ್ಷೇಪಿಸಿದ್ದಿದೆ.ಆದರೆ ಆತನ ಮೂಲಗಳ ಅಧಿಕೃತತೆಯನ್ನು ಪ್ರಶ್ನಿಸುವುದು ಅಸಾಧ್ಯ ಎನ್ನುವ ಸಮಾಧಾನ ನೀಡಲಾಗಿದೆ. ಹಳೆಯಕಾಲದ ಸಂಗೀತ ದಿಗ್ಗಜರೊಂದಿಗೆ ಆತ ಆಗಾಗ ಮುಖಾಮುಖಿ ಆಗುತ್ತಿದ್ದರು. ಮುಖ್ಯವಾಗಿ ಆಲಾಪನೆಯಲ್ಲಿ ಅದನ್ನು ಕಾಣಬಹುದಿತ್ತು. ಹೊಸತು ಬಯಸುವ ಶ್ರೋತೃಗಳಿಗೆ ನವರಸಕನ್ನಡ, ಬಿಂದುಮಾಲಿನಿ, ಕದನಕುತೂಹಲ ರಾಗಗಳ ಮೂಲಕ ತನ್ನ ಲಯದ ಔನ್ನತ್ಯವನ್ನು ತೋರಿಸುತ್ತಿದ್ದ ಶ್ರೀನಿವಾಸ್, ಭೈರವಿ, ಶಂಕರಾಭರಣ, ಕಾಂಭೋಜಿ, ಖರಹರಪ್ರಿಯ ಅಥವಾ ತೋಡಿಗಳ ಘನತೆಯನ್ನು ಸಂಪೂರ್ಣವಾಗಿ ಚಿತ್ರಿಸಬಲ್ಲವರಾಗಿದ್ದರು; ಹಾಗೆಯೇ ಮೋಹನ, ಬಹುದಾರಿ, ಹಿಂದೋಳ ಅಥವಾ ಷಣ್ಮುಖಪ್ರಿಯ ರಾಗಗಳ ಮೋಹಕತೆ(ಗುಂಗು)ಯನ್ನು ತೋರಿಸುತ್ತಿದ್ದರು. ಆತನ ಕಮಾಚ್, ಶುದ್ಧಸಾವೇರಿ, ಸಿಂಧುಭೈರವಿ ಮತ್ತು ಸುನಾದವಿನೋದಿನಿ ರಾಗಗಳಿಗೆ ಅಭಿಮಾನಿಗಳು ಪೂರ್ತಿ ಮಾರುಹೋಗಿದ್ದರು. ಈ ರಾಗಗಳಲ್ಲಿ ಶ್ರೀನಿವಾಸ್ ಹೆಸರು ಹಿಂದಿನ ಸಂಗೀತ ದಿಗ್ಗಜಗಳಿಗೇನೂ ಕಡಮೆ ಇರಲಿಲ್ಲ.
ಶ್ರೀನಿವಾಸ್ ಕರ್ನಾಟಕ ಸಂಗೀತಕ್ಕೆ ಆಗಮಿಸಿದ ಮೊದಲ ಒಂದು ದಶಕ ತಮಿಳುನಾಡು ಮಾತ್ರವಲ್ಲ; ಇಡೀ ದೇಶದಲ್ಲಿ ಆತ ಬಿರುಗಾಳಿ ಎಬ್ಬಿಸಿದ; ಆ ಅವಧಿಯಲ್ಲಿ ಕರ್ನಾಟಕ ಸಂಗೀತ ಕಚೇರಿಗೆ ಅತಿಹೆಚ್ಚು ಜನ ಸೇರುತ್ತಿದ್ದುದು ಶ್ರೀನಿವಾಸ್ ಕಚೇರಿಗೆ ಎನ್ನಬಹುದು. ೨೦೦೦ದ ಬಳಿಕ ದೇಶದಲ್ಲಿ ವಾದ್ಯಸಂಗೀತಕ್ಕೆ ಹಂಬಲಿಸುವವರ ಸಂಖ್ಯೆ ಕಡಮೆಯಾಗಿದೆ. ಆ ಹೊತ್ತಿಗೆ ಶ್ರೀನಿವಾಸ್ ಹೆಚ್ಚು ವಿದೇಶ ಪ್ರವಾಸಗಳಲ್ಲಿ ತೊಡಗಿರುತ್ತಿದ್ದರು. ಮೊದಲಿಗೆ ಅನಿವಾಸಿ ಭಾರತೀಯರ ಸಮ್ಮುಖದಲ್ಲಿ ಕರ್ನಾಟಕ ಸಂಗೀತದಿಂದ ಆರಂಭವಾದದ್ದು ಮುಂದೆ ಜಾಗತಿಕಮಟ್ಟದ ಪ್ರಸಿದ್ಧರ ಜೊತೆಗೆ ಫ್ಯೂಶನ್ ಸಂಗೀತ ಹೆಚ್ಚಿತು; ಪ್ರತಿಷ್ಠಿತ ಜಾಜ್ ಸಂಗೀತೋತ್ಸವಗಳಲ್ಲಿ ಆತ ಭಾಗವಹಿಸಿದ್ದರು. ಅವರಿಗೆ ನೀಡುತ್ತಿದ್ದ ಸಮಯ ಇನ್ನಷ್ಟು-ಮತ್ತಷ್ಟು ವಿಸ್ತರಣೆಯಾಗುತ್ತಿತ್ತು. ಸುಮಾರು ಎರಡು ದಶಕ ಆತ ಫ್ಯೂಶನ್ ಬ್ಯಾಂಡ್ `ಶಕ್ತಿ’ಯ ಅವಿಭಾಜ್ಯ ಅಂಗವಾಗಿದ್ದರು. ಜಾನ್ ಮೆಕ್ಲಾಗ್ಲಿನ್, ಜಾಕಿರ್ ಹುಸೇನ್, ಶಂಕರ್ ಮಹಾದೇವನ್, ಸೆಲ್ವ ಗಣೇಶ್ ಅದರಲ್ಲಿದ್ದರು.
ನಿಧಾನದ ಒಲವು
“೪೫ರ ಹರೆಯ ದಾಟುವ ಹೊತ್ತಿಗೆ ಶ್ರೀನಿವಾಸನ್ ಹೆಚ್ಚು ತೂಕದ ಮತ್ತು ಸಂಗೀತದ ಆಳವಾದ ಹಂತಕ್ಕೆ ಬರುತ್ತಿದ್ದರೇನೋ. ದೊಡ್ಡಗುಂಪಿಗೆ ಸಂಗೀತವನ್ನು ಉಣಬಡಿಸುವುದು, ಶಬ್ದವೈವಿಧ್ಯದಲ್ಲಿ ಅವರನ್ನು ಮುಳುಗಿಸುವುದು ಆತನಿಗೆ ಇಷ್ಟವಾದರೂ, ಇನ್ನು ಆತನ ಸಂಗೀತ ಗಾಢವಾದ ಮತ್ತು ಮೃದುವಾದ ಹಂತಕ್ಕೆ ಪ್ರವೇಶಿಸುತ್ತದೇನೋ ಎಂಬ ಸೂಚನೆಯನ್ನು ಆಗೀಗ ನೀಡುತ್ತಿದ್ದರು. ಅಂತಹ ಪರಿಪೂರ್ಣ ಸಂಗೀತಕ್ಕೆ ಬೇಕಾದ ಎಲ್ಲವೂ ಆತನ ಬಳಿ ಇದ್ದವು. ಆದರೆ ದೇವರು ಅಷ್ಟರಲ್ಲೇ ಕರೆದೊಯ್ದ” ಎಂದು ವಿಮರ್ಶಕ ವಿ. ರಾಮನಾರಾಯಣ್ (`ಫ್ರಂಟ್ಲೈನ್’) ಬೇಸರದ ನುಡಿಗಳನ್ನಾಡಿದ್ದಾರೆ. ೧೯೯೫ರ ಒಂದು ಸಂದರ್ಶನದಲ್ಲಿ “ಆರಂಭಿಕ ವರ್ಷಗಳಲ್ಲಿ ನಿಮ್ಮ ಸಂಗೀತದಲ್ಲಿ ವೇಗವೇ ಪ್ರಧಾನವಾಗಿತ್ತು; ಈಗ ನಿಧಾನ ಆಗುತ್ತಾ ಇದೆ” ಎನ್ನುವ ಪ್ರಶ್ನೆಗೆ ಶ್ರೀನಿವಾಸ್ “ನಿಜ; ಒಳ್ಳೆಯ ಸಂಗೀತಕ್ಕೆ ವೇಗ ಸಲ್ಲದೆಂದು ಗೊತ್ತಾಗಿದೆ” ಎಂದು ಉತ್ತರಿಸಿದ್ದರು. ಆದರೆ ಅವರು ಆ ಬಳಿಕ ವಿದೇಶ ಪ್ರವಾಸ, ಫ್ಯೂಶನ್ಗಳತ್ತ ಹೆಚ್ಚು ಸರಿದರೆನ್ನುವುದಕ್ಕೆ ಅನ್ಯಾನ್ಯ ಕಾರಣಗಳಿರಬಹುದು.
ಇನ್ನು ಯು. ಶ್ರೀನಿವಾಸ್ ಅವರ ಸಜ್ಜನಿಕೆ, ವಿನಮ್ರ ನಡವಳಿಕೆಗಳ ಬಗ್ಗೆ ಹೇಳದವರಿಲ್ಲ; ಅವರ ಸಂಗೀತದ ಕುರಿತು ಮಾತನಾಡಿದರೆ ಎರಡನೇ ಮಾತಾಗಿ ಅದು ಬಂದೇ ಬರುತ್ತದೆ. “ತುಂಬ ವಿನಯವಂತ; ವಿಮಾನ ನಿಲ್ದಾಣ, ರೈಲು ನಿಲ್ದಾಣ, ಹೊಟೇಲ್ಗಳಲ್ಲಿ ಕಂಡಾಗಲೂ ನನಗೆ ಉದ್ದಂಡ ನಮಸ್ಕರಿಸುತ್ತಿದ್ದ” ಎಂದು ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಹೇಳಿದರೆ, “ಒಳ್ಳೆಯ ಚಿಂತನೆ (ಕಲ್ಪನೆ) ಬರಲಿ ಎಂದು ರಾಮ, ಹನುಮ, ಗಣೇಶರನ್ನು ಪ್ರಾರ್ಥಿಸುತ್ತೇನೆ; ಧ್ಯಾನ ಮಾಡುತ್ತೇನೆ” ಎಂದು ಶ್ರೀನಿವಾಸ್ ಒಂದೆಡೆ ಹೇಳಿದ್ದರು. ಪದ್ಮಶ್ರೀ ಪ್ರಶಸ್ತಿ ಬಂದಾಗ ಆತ ಹೇಳಿದ್ದು: “ನನ್ನ ಮಟ್ಟಿಗೆ ಅತಿ ದೊಡ್ಡ ಪ್ರಶಸ್ತಿ ಎಂದರೆ ಜನರ ಮೆಚ್ಚುಗೆ.”
ನಂಬಿಕೆ-ಶಕುನ
ಮೃದಂಗವಾದಕ ಕೆ.ವಿ. ಪ್ರಸಾದ್ ಅವರು, “ಶ್ರೀನಿವಾಸ್ ಕಂದಾಚಾರಗಳಲ್ಲಿ ನಂಬಿಕೆ ಇದ್ದವ. ಅವನಿಗೆ ಬಲವಾದ ನಂಬಿಕೆಗಳಿದ್ದವು. ಕಾರ್ಯಕ್ರಮಕ್ಕೆ ಕಾರಿನಲ್ಲಿ ಹೊರಡುವಾಗ ಸೋದರಿಯರನ್ನು ಕರೆದು ಕಾರಿನ ಮುಂದೆ ನಿಲ್ಲಲು ಹೇಳುತ್ತಿದ್ದರು (ಶುಭಶಕುನವೆಂದು). ಸಮಯಪ್ರಜ್ಞೆ ಆತನ ಇನ್ನೊಂದು ಗುಣ. ಯಾವುದೇ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಅಥವಾ ಮುಂಚಿತವಾಗಿ ಹೋಗುವುದನ್ನು ಆತ ಅಭ್ಯಾಸ ಮಾಡಿಕೊಂಡಿದ್ದರು. ಆಂಜನೇಯ ಮತ್ತು ಸಾಯಿಬಾಬಾ ಭಕ್ತ; ಕಂಚಿ ಪರಮಾಚಾರ್ಯರ ಬಗ್ಗೆ ತುಂಬ ಗೌರವವಿದ್ದು ಅವರಿಂದ ಮಾರ್ಗದರ್ಶನ ಪಡೆಯುವುದಿತ್ತು. ಸಂಗೀತದಲ್ಲೇ ಮುಳುಗಿ ಹೋಗಿರಲಿಲ್ಲ. ಸಿನೆಮಾ ನೋಡುವುದು ಆತನ ಒಂದು ಹವ್ಯಾಸ. ವೇದಿಕೆಯಲ್ಲಿದ್ದಾಗ ಕೂದಲರಾಶಿ ಕಣ್ಣಿನ ಮೇಲೆ ಬೀಳುವುದು, ಅದನ್ನು ತಳ್ಳುವುದು ನಡೆಯುತ್ತಾ ಇರುತ್ತದೆ. ಆದರೆ ಕಣ್ಣುಮಾತ್ರ ಇರುವುದು ಬೆರಳಿನ ಮೇಲೆ” ಎನ್ನುವ ಸುಂದರ ಚಿತ್ರವನ್ನು ನೀಡಿದ್ದಾರೆ.
ಸಮಯ ಸಿಕ್ಕಿದಾಗೆಲ್ಲ ಶ್ರೀನಿವಾಸ್ ಪ್ರಾರ್ಥನೆ, ಧ್ಯಾನ ಮಾಡುತ್ತಿದ್ದರು. ಮಾನವರಾದ ನಾವು ಏನನ್ನೂ ನಿರೀಕ್ಷಿಸಬಾರದು. ನಮಗೆ ಸಿಗಬೇಕಾದದ್ದು ಸಿಕ್ಕಿಯೇ ಸಿಗುತ್ತದೆ ಎಂಬುದು ಅವರ ನಿಲವಾಗಿತ್ತು. ತಾಳವಾದ್ಯದಲ್ಲಿ ಸಹಕರಿಸುತ್ತಿದ್ದ ಸೆಲ್ವ ಗಣೇಶ್ “ಶ್ರೀನಿವಾಸರ ನೆನಪು ಅದ್ಭುತ. ನಾನು ಧರಿಸಿದ್ದ ಕುರ್ತಾದ ಬಣ್ಣದಿಂದ ಹಿಡಿದು ನಾವು ನುಡಿಸಿದ ರಚನೆಗಳವರೆಗೆ ಎಲ್ಲವೂ ನೆನಪು. ಒಂದು ಕಡೆಯಲ್ಲಿ ಆ ರಾಗವನ್ನು ಹತ್ತು ವರ್ಷದ ಹಿಂದೆ ನುಡಿಸಿದ್ದೇವೆ; ಈಗ ಅದೇ ಬೇಡ” ಎಂದು ನೆನಪಿಸಿಕೊಂಡಿದ್ದಾರೆ. ಮೆಕ್ಲಾಗ್ಲಿನ್ ನೀಡುತ್ತಿದ್ದ ಕ್ಲಿಷ್ಟ ರಚನೆಗಳ ಮೇಲೆ ಹಿಡಿತ ಬರಬೇಕಿದ್ದರೆ ೨-೩ ವಾರ ಬೇಕು. ಅದಕ್ಕೆ ಶ್ರೀನಿವಾಸನ್ ತೆಗೆದುಕೊಳ್ಳುತ್ತಿದ್ದದ್ದು ಕೇವಲ ೨೦ ನಿಮಿಷ ಎಂದೊಬ್ಬರು ಹೇಳಿದರೆ, ಆತ ಏಕಪಾಠಿ ಎಂದು ಹಲವರು ನೆನಪಿಸಿಕೊಂಡಿದ್ದಾರೆ.
ಶ್ರೀನಿವಾಸ್ ಸಂಗೀತವನ್ನು ಬಹುತೇಕ ಸ್ವಂತ ಕಲಿತವರು. ತಮಗೆ ವಶವಾಗದಿರುವ ರಾಗಗಳ ಬಗ್ಗೆ ಹಿರಿಯರನ್ನು ಕೇಳುತ್ತಿದ್ದರು. ವಯೊಲಿನ್ ಮೇಲಿನ ಒಂದು ಮಿಡಿತ ಸಾಕು ಎಲ್ಲವನ್ನೂ ಗ್ರಹಿಸಿಬಿಡುತ್ತಿದ್ದರು. ಜ್ಞಾನದಾಹ, ದಣಿವರಿಯದ ಪ್ರಾಕ್ಟೀಸ್ ಅವರದಾಗಿತ್ತು. ಮಾತನಾಡುವಾಗಲೂ ಅವರ ಬೆರಳು ಮ್ಯಾಂಡೊಲಿನ್ ಮೇಲೆ ಹರಿದಾಡುತ್ತಿತ್ತು….
ಹಾಸ್ಯಪ್ರಜ್ಞೆ
ಸಹ-ಕಲಾವಿದ ಅನಿಲ್ ಶ್ರೀನಿವಾಸನ್ ಯು. ಶ್ರೀನಿವಾಸ್ ಅವರ ಸರಳತೆಯ ಮಾನವೀಯ ಮುಖವನ್ನು ನೆನಪಿಸುತ್ತಾ, “ನಾನು ಜನರ ಅನುಕರಣೆ ಮಾಡುವುದು ಅವರಿಗೆ ಇಷ್ಟ. ದಿಢೀರಾಗಿ ಕರೆದು ಯಾರನ್ನಾದರೂ ಅನುಕರಣೆ ಮಾಡು ಎಂದು ಹೇಳುವರು. ನಾನು ಮಾಡಿದಾಗ ಬಿದ್ದುಬಿದ್ದು ನಗುತ್ತಿದ್ದರು” ಎಂದಿದ್ದಾರೆ. ಇದೇ ರೀತಿ ಮೆಕ್ಲಾಗ್ಲಿನ್ ಬೇರೊಂದು ಸ್ಮರಿಸಿದ್ದಾರೆ: “ಪ್ರತಿಸಾರಿ ನಾವು ಒಂದು ಹೊಟೇಲಿಗೆ ಹೋದಾಗ ಶ್ರೀನಿವಾಸ್ ಹೇಳುವುದು `ವಾಟರ್ ಪ್ಲೀಸ್, ರೂಂ ಟೆಂಪರೇಚರ್ ಪ್ಲೀಸ್’ ಎಂಬುದಾಗಿ. ಆದಕಾರಣ ನಾವು ಮಾತನಾಡುವಾಗ ಆಗಾಗ `ರೂಂ ಟೆಂಪರೇಚರ್ ಪ್ಲೀಸ್’ ಎನ್ನುವುದನ್ನು ತರುತ್ತಾ ತಮಾಷೆ ಮಾಡುತ್ತಿದ್ದೆವು. ಆತನಿಗೆ ಉತ್ತಮ ಹಾಸ್ಯಪ್ರಜ್ಞೆ ಇದ್ದಕಾರಣ ಎಲ್ಲರೂ ಸೇರಿ ನಗುತ್ತಿದ್ದೆವು.” ನೃತ್ಯಪಟು ರಾಜಾರೆಡ್ಡಿ ಅವರು ನೀಡಿದ ಒಂದು ಹೇಳಿಕೆಯಲ್ಲಿ “ಇಂದಿನ ಸಾಮಾನ್ಯ ಯುವ-ಕಲಾವಿದರಂತೆ ಶ್ರೀನಿವಾಸ್ ಮಾಧ್ಯಮದಲ್ಲಿ ಮೂಗು ತೂರಿಸುತ್ತಿರಲಿಲ್ಲ; ತನ್ನ ಕೆಲಸದ ಮೂಲಕ ಆತ ತೋರಿಸಿದ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಆತನನ್ನು ಆರಿಸಿದಾಗ ನಾನು ಜ್ಯೂರಿಯಲ್ಲಿದ್ದೆ. ಹಲವರು ಪ್ರಶಸ್ತಿಗೆ ರಾಜಕೀಯ ಪ್ರಭಾವವನ್ನು ಬಳಸುತ್ತಾರೆ. ಈತ ಅರ್ಹತೆ ಪ್ರಕಾರ ನಡೆಯಲಿ ಎಂದು ಸುಮ್ಮನಿದ್ದ” ಎಂದು ತಿಳಿಸಿದ್ದಾರೆ. ಪದ್ಮಶ್ರೀ ಹಾಗೆಯೇ ಇದು ಕೂಡ ಶ್ರೀನಿವಾಸ್ಗೆ ಸಣ್ಣ ಪ್ರಾಯದಲ್ಲೇ ಬಂತು.
ವೇದಿಕೆಯ ಮೇಲೂ ಶ್ರೀನಿವಾಸ್ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು. ಮುಖದಲ್ಲಿ ಮುಗುಳ್ನಗು, ಸಹ-ವಾದಕರತ್ತ ಗೌರವಪೂರ್ಣ ನೋಟ, ಸಂದರ್ಭಕ್ಕೆ ತಕ್ಕಂತೆ `ಬಲೇ, ಬಲೇ’ ಎನ್ನುವ ಉದ್ಗಾರ, ವಾದ್ಯದ ಮೇಲೆ ಏಕಾಗ್ರತೆ, ಪ್ರಾಮಾಣಿಕತೆ, ಉದಾರತೆಗಳು ಶ್ರೋತೃಗಳಿಗೂ ಸಂತೋಷ ನೀಡುತ್ತಿದ್ದವು. “ಆತನ ಮಾತೆಲ್ಲ ಜೀಯಲ್ಲಿ ಮುಗಿಯುವುದು. (ಉದಾ – ಹ್ಯಾಪಿ ದಿವಾಲೀಜೀ) ಇಂತಹ ಶ್ರೀನಿವಾಸ್ ಮಾತುಗಳು ಸಾವಿರಾರು ಕಿವಿಗಳಲ್ಲಿ ಅನುರಣಿಸುತ್ತಿರಬಹುದು; ಅವರ ಮಾತುಗಳು ಹೃದಯದಿಂದ ಬರುತ್ತಿದ್ದವು” ಎಂದು ಪತ್ರಕರ್ತೆ ಚಿತ್ರಾ ಸ್ವಾಮಿನಾಥನ್ ಹೇಳುತ್ತಾರೆ. ಯಾವುದಕ್ಕೂ ಉಬ್ಬುವುದಿಲ್ಲ; `ದೇವರ ದಯೆ, ಹಿರಿಯರ ಆಶೀರ್ವಾದ’ ಎಂಬಲ್ಲಿಗೆ ಬಂದು ನಿಲ್ಲುತ್ತದೆ.
ಶ್ರೀನಿವಾಸ್ ಅಭಿಮಾನಿಗಳಲ್ಲಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಕೂಡ ಸೇರಿದ್ದರು. ಎಂಜಿಆರ್ ಒಮ್ಮೆ ಟಿವಿಯಲ್ಲಿ ಶ್ರೀನಿವಾಸ್ ಮ್ಯಾಂಡೊಲಿನ್ ವಾದನ ಕೇಳಿ ಆಕರ್ಷಿತರಾಗಿ ದೂರದರ್ಶನದವರಿಗೆ ಫೋನ್ ಮಾಡಿ, ಶ್ರೀನಿವಾಸ್ ಫೋನ್ ನಂಬರ್ ಕೇಳಿದರು. ಆಗ ಅವರಿಗೆ ಫೋನೇ ಇರಲಿಲ್ಲ. ಕಾರ್ಯದರ್ಶಿಯನ್ನು ಶ್ರೀನಿವಾಸ್ ಮನೆಗೆ ಕಳುಹಿಸಿದ ಎಂಜಿಆರ್, ಒಂದು ಸರ್ಕಾರಿ ಸಮಾರಂಭದಲ್ಲಿ ಮ್ಯಾಂಡೊಲಿನ್ ನುಡಿಸುವಂತೆ ಕೋರಿದರು. “ಆ ದಿನ ಬೇರೆ ಕಾರ್ಯವಿದೆ; ಬರಲಾರೆ” ಎಂದು ಶ್ರೀನಿವಾಸ್ ಕ್ಷಮೆ ಕೋರಿದಾಗ ಎಂಜಿಆರ್ ತಮ್ಮ ಕಾರ್ಯಕ್ರಮವನ್ನೇ ಮುಂದೂಡಿ ಶ್ರೀನಿವಾಸ್ಗೆ ಅನುಕೂಲವಾದ ದಿನ ಇರಿಸಿದರು. ಇದು ಓರ್ವ ಕಲಾವಿದನಿಗೆ ಇನ್ನೊಬ್ಬ ಕಲಾವಿದ ಸಲ್ಲಿಸಿದ ಗೌರವ ಇರಬಹುದಲ್ಲವೆ? ಯಾವ ಪ್ರಶಸ್ತಿ ಇದಕ್ಕೆ ಸಮನಾಗಬಹುದು??.
ಎಂ.ಬಿ. ಹಾರ್ಯಾಡಿ