ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಅಕ್ಟೋಬರ್ 2023 > ವೇತಾಲಪಂಚವಿಂಶತಿಕಾ

ವೇತಾಲಪಂಚವಿಂಶತಿಕಾ

ಈ ಕಥಾಮಾಲಿಕೆ ಕುರಿತು

ಗುಣಾಢ್ಯನಿಂದ ಪೈಶಾಚೀಭಾಷೆಯಲ್ಲಿ ವಿರಚಿತವಾದ ಬೃಹತ್ಕಥೆಯನ್ನು ಸೋಮದೇವನು ಕಥಾಸರಿತ್ಸಾಗರವೆಂಬ ಹೆಸರಿನಲ್ಲಿ ಸಂಸ್ಕೃತಕ್ಕೆ ತಂದನು. ರಾಮಾಯಣ ಮತ್ತು ಮಹಾಭಾರತಗಳ ಅನಂತರ ಪ್ರಾಚೀನಭಾರತೀಯ ಸಾಹಿತ್ಯಕ್ಕೆಲ್ಲ ಮೂಲ ಆಕರ ಇದುವೇ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಜಗತ್ಪ್ರಸಿದ್ಧವಾಗಿರುವ ಬೇತಾಳಕಥೆಗಳ ಮೂಲವೂ ಇದೇ. ವಸ್ತುತಃ ವೇತಾಲಪಂಚವಿಂಶತಿಕಾ ಎಂಬ ಹೆಸರೇ ಸೂಚಿಸುವಂತೆ ಇಲ್ಲಿರುವುದು ಇಪ್ಪತ್ತೈದು ಕಥೆಗಳು ಮಾತ್ರ. ಆದರೆ ಕಾಲಕ್ರಮದಲ್ಲಿ ಅದಕ್ಕೆ ಬೇರೆ ಬೇರೆ ಕಥೆಗಳೂ ಸೇರಿಕೊಂಡು, ಬೇರೆ ಬೇರೆ ಭಾಷೆಗಳ ಸಾಹಿತ್ಯದಲ್ಲೂ ಪರಂಪರೆ ಮುಂದುವರಿದು, ಇಂದು ಅದೆಷ್ಟೋ ಕಥೆಗಳು ಬೇತಾಳಕಥೆಗಳ ಹೆಸರಿನಲ್ಲಿ ಪ್ರಚಲಿತವಾಗಿವೆ.

ಹಾಗಿದ್ದರೆ ಮೂಲದಲ್ಲಿರುವ ಬೇತಾಳಕಥೆಗಳು ಯಾವುವು? – ಎಂಬ ಕುತೂಹಲ ಅನೇಕರ ಮನಸ್ಸಿನಲ್ಲಿ ಮೂಡುವುದು ಸಹಜವೇ ಆಗಿದೆ. ಅದಕ್ಕಾಗಿ ಇಲ್ಲಿ ಕಥಾಸರಿತ್ಸಾಗರದಲ್ಲಿ ಹೇಳಲಾಗಿರುವ ಮೂಲಕಥೆಗಳಷ್ಟನ್ನೇ ತಿಳಿಯಾದ ಕನ್ನಡದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. .ಆರ್. ಕೃಷ್ಣಶಾಸ್ತ್ರಿಗಳು ಮಾಡಿರುವ ಕಥಾಸರಿತ್ಸಾಗರದ ಕಥಾಮೃತವೆಂಬ ಕನ್ನಡ ಅನುವಾದಕ್ಕೆ ಇದು ಋಣಿಯಾಗಿದ್ದರೂ ಅದಕ್ಕಿಂತ ಹೆಚ್ಚಾಗಿ ಸಂಸ್ಕೃತಮೂಲವನ್ನೇ ಅವಲಂಬಿಸಿದೆ.

ಹೊಸ ಪೀಳಿಗೆಯ ಓದುಗರಿಗೂ ಕಥೆಗಳು ಆಸ್ವಾದ್ಯಗಳಾಗುತ್ತವೆಂಬುದು ನಿಸ್ಸಂದೇಹ.

ಪೀಠಿಕೆ

ಗೋದಾವರಿ ನದಿಯ ತೀರದಲ್ಲಿ ಪ್ರತಿಷ್ಠಾನವೆಂಬ ನಗರವಿದೆ. ಹಿಂದೆ ಅಲ್ಲಿ ಧಾರ್ಮಿಕನೂ, ಪರಾಕ್ರಮಿಯೂ ಆದ ತ್ರಿವಿಕ್ರಮಸೇನನೆಂಬ ರಾಜನಿದ್ದನು. ಒಂದು ದಿನ ಅವನು ಆಸ್ಥಾನದಲ್ಲಿದ್ದಾಗ ಕ್ಷಾಂತಿಶೀಲನೆಂಬ ಭಿಕ್ಷುವು ಅಲ್ಲಿಗೆ ಬಂದು, ಅವನ ಕೈಯಲ್ಲಿ ಒಂದು ಹಣ್ಣನ್ನು ಕೊಟ್ಟು ಮಾತನಾಡದೆ ಹೊರಟುಹೋದನು. ಅಂದಿನಿಂದ ಅವನು ಪ್ರತಿದಿನವೂ ರಾಜನು ಆಸ್ಥಾನಕ್ಕೆ ಬರುತ್ತಿದ್ದಂತೆಯೆ ಅಲ್ಲಿಗೆ ಬಂದು ಹಣ್ಣನ್ನು ಅವನ ಕೈಯಲ್ಲಿರಿಸಿ ಹಿಂದಿರುಗುತ್ತಿದ್ದ. ರಾಜನೂ ಆ ಹಣ್ಣನ್ನು ತನ್ನ ಪಕ್ಕದಲ್ಲಿರುತ್ತಿದ್ದ ಕೋಶಾಧ್ಯಕ್ಷನಿಗೆ ಕೊಡುತ್ತಿದ್ದ. ಹೀಗೆ ಬಹಳ ದಿನಗಳವರೆಗೆ ನಡೆಯಿತು.

ಒಮ್ಮೆ ಎಂದಿನಂತೆ ಹೀಗೆಯೆ ಕ್ಷಾಂತಿಶೀಲನು ಬಂದು ಹಣ್ಣನ್ನು ರಾಜನ ಕೈಯಲ್ಲಿರಿಸಿ ಹಿಂದಿರುಗಿದನು. ಅದೇ ಹೊತ್ತಿಗೆ ಯಾರೋ ಸಾಕಿದ ಕಪಿಯೊಂದು ತಪ್ಪಿಸಿಕೊಂಡು ಅಲ್ಲಿಗೆ ಬಂತು. ರಾಜನು ಹಣ್ಣನ್ನು ಕಪಿಯ ಕೈಗೆ ಕೊಟ್ಟನು. ಕಪಿಯು ಹಣ್ಣನ್ನು ತಿನ್ನುತ್ತಿರುವಾಗ ಅದರೊಳಗಿಂದ ಬೆಲೆಬಾಳುವ ರತ್ನವೊಂದು ಕೆಳಗೆ ಬಿತ್ತು. ಅದನ್ನು ಕಂಡು ಆಶ್ಚರ್ಯಪಟ್ಟು ರಾಜನು ಕೋಶಾಧ್ಯಕ್ಷನನ್ನು ಕರೆದು “ಇದುವರೆಗೂ ನಾನು ಕೊಡುತ್ತಿದ್ದ ಹಣ್ಣುಗಳನ್ನು ಏನು ಮಾಡಿದೆ?” ಎಂದು ಕೇಳಿದನು.

“ನಾನು ಅದನ್ನು ಹಾಗೆಯೆ ಕಿಟಕಿಯಿಂದ ಖಜಾನೆಯೊಳಗೆ ಎಸೆದುಬಿಡುತ್ತಿದ್ದೆ. ಅವೆಲ್ಲ ಅಲ್ಲೇ ಬಿದ್ದಿರಬೇಕು. ಅಪ್ಪಣೆಯಾದರೆ ಹೋಗಿ ನೋಡಿಬರುತ್ತೇನೆ” ಎಂದು ಹೇಳಿ ಕೋಶಾಧ್ಯಕ್ಷನು ರಾಜನ ಅಪ್ಪಣೆಯಂತೆ ಖಜಾನೆಯ ಬಾಗಿಲನ್ನು ತೆರೆದು ನೋಡಿದನು. ಅಲ್ಲಿ ಹಣ್ಣುಗಳನ್ನು ಎಸೆಯುತ್ತಿದ್ದ ಜಾಗದಲ್ಲಿ ಹೊಳೆಯುತ್ತಿದ್ದ ರತ್ನಗಳ ರಾಶಿಯನ್ನು ಕಂಡನು. ಅದನ್ನೇ ರಾಜನಿಗೆ ನಿವೇದಿಸಿಕೊಂಡನು. ರಾಜನು ಸಂತೋಷದಿಂದ ಆ ರತ್ನಗಳೆಲ್ಲವನ್ನೂ ಅವನಿಗೇ ಕೊಟ್ಟನು.

ಮರುದಿನ ಎಂದಿನಂತೆ ಕ್ಷಾಂತಿಶೀಲನು ಆಸ್ಥಾನಕ್ಕೆ ಬಂದು ಹಣ್ಣನ್ನು ಕೊಡಲು ಮುಂದಾದಾಗ ರಾಜನು ಅದನ್ನು ಸ್ವೀಕರಿಸದೆ “ಅಯ್ಯಾ ಭಿಕ್ಷು! ಪ್ರತಿದಿನ ಇಷ್ಟೊಂದು ವೆಚ್ಚ ಮಾಡಿಕೊಂಡು ನನ್ನನ್ನು ಸೇವಿಸುತ್ತಿರುವೆಯಲ್ಲ, ಇದು ಯಾಕೆ? ಇದರ ಕಾರಣವೇನೆಂದು ಹೇಳದಿದ್ದರೆ ನಾನು ಇನ್ನು ಮುಂದೆ ಹಣ್ಣನ್ನು ತೆಗೆದುಕೊಳ್ಳುವುದಿಲ್ಲ” ಎಂದನು.

ಭಿಕ್ಷುವು ಏಕಾಂತದಲ್ಲಿ ಅದರ ಕಾರಣವನ್ನು ಹೇಳಿದನು – “ರಾಜನ್! ನಾನೊಂದು ಮಂತ್ರಸಾಧನೆಗೆ ತೊಡಗಿದ್ದೇನೆ. ಅದು ಪರಿಪೂರ್ಣವಾಗುವುದಕ್ಕೆ ವೀರನೊಬ್ಬನ ಸಹಾಯ ಬೇಕಾಗಿದೆ. ಅದನ್ನು ನಿನ್ನಿಂದ ಅಪೇಕ್ಷಿಸಿ ನಿನ್ನ ಗಮನಸೆಳೆಯಲು ಹಾಗೆ ಮಾಡಿದ್ದೇನೆ” ಎಂದು.

ಅದನ್ನು ಕೇಳಿ ತ್ರಿವಿಕ್ರಮಸೇನನು ಆಶ್ಚರ್ಯಪಟ್ಟು “ಆಗಲಿ, ಖಂಡಿತ ಸಹಾಯ ಮಾಡುತ್ತೇನೆ. ನನ್ನಿಂದ ಯಾವ ರೀತಿಯ ಸಹಾಯ ಬೇಕು, ಹೇಳು” ಎಂದನು.

ಭಿಕ್ಷುವು “ಹಾಗಾದರೆ ಬರುವ ಕೃಷ್ಣಪಕ್ಷದ ಚತುರ್ದಶಿಯ ಮಧ್ಯರಾತ್ರಿ ನಗರದ ಹೊರಭಾಗದಲ್ಲಿರುವ ಸ್ಮಶಾನಕ್ಕೆ ನೀನು ಒಬ್ಬಂಟಿಯಾಗಿ ಬರಬೇಕು. ಅಲ್ಲಿರುವ ಆಲದಮರದ ಕೆಳಗೆ ನಾನು ಇರುತ್ತೇನೆ. ನೀನು ಮುಂದೆ ಮಾಡಬೇಕಾದ ಕೆಲಸವನ್ನು ಅಲ್ಲಿಯೇ ತಿಳಿಸುತ್ತೇನೆ” ಎಂದನು.

ರಾಜನು ಒಪ್ಪಿಕೊಂಡನು. ಕ್ಷಾಂತಿಶೀಲನು ಹೊರಟು ಹೋದನು. ದಿನಗಳು ಕಳೆದವು. ಚತುರ್ದಶಿ ತಿಥಿಯೂ ಬಂತು. ಅಂದು ರಾತ್ರಿ ರಾಜನು ಅಂತಃಪುರದ ಮತ್ತು ಅರಮನೆಯ ಎಲ್ಲರ ಕಣ್ಣುತಪ್ಪಿಸಿ, ಏಕಾಂಗಿಯಾಗಿ ಖಡ್ಗವನ್ನು ಮಾತ್ರ ಹಿಡಿದುಕೊಂಡು ಹೊರಟನು. ಅವನು ಕಪ್ಪುಬಣ್ಣದ ಬಟ್ಟೆಯನ್ನು ಧರಿಸಿಕೊಂಡಿದ್ದನು. ನೇರವಾಗಿ ಅವನು ಸ್ಮಶಾನವನ್ನು ತಲಪಿದನು. ಆ ಸ್ಮಶಾನವೋ, ಕಗ್ಗತ್ತಲಿನಿಂದ ಕೂಡಿತ್ತು. ಅಲ್ಲಲ್ಲಿ ಕೆಲವು ಹೆಣಗಳು ಚಿತೆಯ ಮೇಲೆ ಇನ್ನೂ ಉರಿಯುತ್ತಿದ್ದವು. ಅಸ್ಥಿಪಂಜರಗಳೂ, ಬುರುಡೆಗಳೂ ಅಲ್ಲಲ್ಲಿ ಬಿದ್ದಿದ್ದವು. ದೂರದಿಂದ ನರಿಗಳು ಊಳಿಡುವುದು ಕೇಳಿಸುತ್ತಿತ್ತು. ಅಳ್ಳೆದೆಯವರಾದರೆ ಹೃದಯಸ್ತಂಭನವಾಗುವುದೇ ಸರಿ. ಆದರೆ ತ್ರಿವಿಕ್ರಮಸೇನನು ಒಂದಿಷ್ಟೂ ಹೆದರದೆ, ದೃಢವಾದ ಹೆಜ್ಜೆಗಳನ್ನಿಡುತ್ತ ಭಿಕ್ಷುವು ಹೇಳಿದ್ದ ಆಲದಮರದ ಬಳಿಗೆ ಬಂದನು. ಮರದ ಕೆಳಗೆ ರಚಿಸಿದ್ದ ದೊಡ್ಡ ಮಂಡಲದ ನಡುವೆ ಭಿಕ್ಷುವು ಕುಳಿತುಕೊಂಡಿದ್ದನು. ರಾಜನು ಅವನನ್ನು ಸಮೀಪಿಸಿ “ಮಹಾನುಭಾವ! ನಾನು ಬಂದಿದ್ದೇನೆ. ಹೇಳಿ, ನಾನೇನು ಮಾಡಬೇಕು?” ಎಂದು ಕೇಳಿಕೊಂಡನು.

ಭಿಕ್ಷುವು ಸಂತೋಷದಿಂದ – “ಮಹಾರಾಜ! ಇಲ್ಲಿಂದ ದಕ್ಷಿಣ ದಿಕ್ಕಿನಲ್ಲಿ ಮುಂದೆ ಹೋದರೆ ಅಲ್ಲೊಂದು ಮುಳ್ಳುಮುತ್ತುಗದ ಮರವಿದೆ. ಅದರಿಂದ ಒಂದು ಹೆಣ ನೇತಾಡುತ್ತಿದೆ. ನೀನು ಅಲ್ಲಿಗೆ ಹೋಗಿ ಮೌನವಾಗಿ ಆ ಹೆಣವನ್ನು ಇಲ್ಲಿಗೆ ತಂದುಕೊಡಬೇಕು” ಎಂದನು.

“ಹಾಗೇ ಆಗಲಿ” ಎಂದು ಹೇಳಿ ರಾಜನು ಅಲ್ಲಿಂದ ಹೊರಟು ನೇರವಾಗಿ ಆ ಮುಳ್ಳುಮುತ್ತುಗದ ಮರದ ಹತ್ತಿರ ಬಂದನು. ಭಿಕ್ಷುವು ಹೇಳಿದಂತೆ ಹೆಣವೊಂದು ಆ ಮರದಿಂದ ನೇತಾಡುತ್ತಿತ್ತು. ರಾಜನು ಧೈರ್ಯದಿಂದ ಮರವನ್ನೇರಿ, ಹೆಣವನ್ನು ನೇತಾಡಿಸಿದ್ದ ಹಗ್ಗವನ್ನು ಖಡ್ಗದಿಂದ ಕತ್ತರಿಸಿದನು. ಹೆಣವು ಧೊಪ್ಪನೆ ಕೆಳಗೆ ಬಿದ್ದು ಕೂಗಿಕೊಂಡಿತು! ರಾಜನು ಕೂಡಲೇ ಮರದಿಂದ ಕೆಳಗಿಳಿದು ‘ಇದೇನಿದು, ಈ ಶರೀರದಲ್ಲಿ ಇನ್ನೂ ಜೀವವಿದೆಯೋ…’ ಎಂದು ಅಂದುಕೊಂಡು ಅದನ್ನು ಮುಟ್ಟಲು ಅದು ಗಹಗಹಿಸಿ ನಕ್ಕಿತು. ಆಗ ಅದು ಬೇತಾಳವೆಂದು ರಾಜನಿಗೆ ತಿಳಿಯಿತು. ಆದರೂ ಅವನು ಹೆದರದೆ “ಏಕೆ ನಗುತ್ತೀಯೆ? ಬಾ, ಹೋಗೋಣ!” ಎಂದು ಹೇಳಿ ಅದನ್ನು ಎತ್ತಿಕೊಳ್ಳಲು ಕೈ ಚಾಚಿದನು. ಅಷ್ಟರೊಳಗಾಗಿ ಆ ಶವವು ತಾನಾಗಿಯೇ ಮತ್ತೆ ಮೊದಲಿನಂತೆ ಮರದ ಮೇಲೆ ನೇತುಹಾಕಿಕೊಂಡಿತು!

ರಾಜಾ ತ್ರಿವಿಕ್ರಮನು ಧೃತಿಗೆಡದೆ ಮತ್ತೆ ಮರವನ್ನೇರಿ, ಹೆಣವನ್ನು ನಿಧಾನವಾಗಿ ಕೆಳಗಿಳಿಸಿ, ಮಾತನಾಡದೆ ಅದನ್ನು ಹೆಗಲಮೇಲೆ ಹೊತ್ತುಕೊಂಡು ಭಿಕ್ಷುವಿದ್ದ ಕಡೆಗೆ ಹೊರಟನು. ಆಗ ಆ ಹೆಣದೊಳಗೆ ಸೇರಿಕೊಂಡಿದ್ದ ಬೇತಾಳನು “ಅಯ್ಯಾ ರಾಜನೇ! ವೃಥಾ ಇಷ್ಟು ದೊಡ್ಡ ಭಾರವನ್ನು ಹೊತ್ತುಕೊಂಡು ನಡೆಯುತ್ತಿದ್ದೀಯೆ… ಇರಲಿ. ನಿನ್ನ ಮಾರ್ಗಾಯಾಸದ ಪರಿಹಾರಕ್ಕಾಗಿ, ದಾರಿ ಕಳೆಯುವುದಕ್ಕಾಗಿ ನಾನೊಂದು ಕಥೆಯನ್ನು ಹೇಳುತ್ತೇನೆ. ಗಮನವಿಟ್ಟು ಕೇಳಿಸಿಕೋ” ಎಂದು ಹೇಳಿದನು. ರಾಜನು ಏನೂ ಉತ್ತರ ಹೇಳದೆ ಮೌನವಾಗಿಯೇ ಇದ್ದನು. ಬೇತಾಳನು ಮುಂದಿನ ಕಥೆಯನ್ನು ಹೇಳಿದನು –

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ