ಈಚೆಗೆ ಬಂಗ್ಲಾದೇಶದ ಪ್ರಧಾನಿಯಾಗಿ ಐದನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಶೇಕ್ ಹಸೀನಾ ಅವರಿಗೆ ೫೨ ವರ್ಷಗಳ ಹಿಂದೆ ಜನವರಿ ೧೨, ೧೯೭೨ರಂದು ಅವರ ತಂದೆ ಹಾಗೂ ಬಂಗ್ಲಾದೇಶದ ರಾಷ್ಟ್ರಪಿತ ಶೇಕ್ ಮುಜೀಬುರ್ ರೆಹಮಾನ್ ಅವರು ಹೊಸದಾಗಿ ರಚನೆಯಾದ ಸ್ವತಂತ್ರ ದೇಶದ ಮೊದಲ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ನೆನಪಾಗಿರಲೇಬೇಕು. ತನ್ನ ದೇಶಬಾಂಧವರು ‘ಬಂಗಬಂಧು’ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಮುಜೀಬ್ ಅವರು ಬಂಗಾಳಿ ಮಾತನಾಡುತ್ತಿದ್ದ ತನ್ನ ಜನರನ್ನು ಪಶ್ಚಿಮ ಪಾಕಿಸ್ತಾನೀಯರ ಆಳ್ವಿಕೆಯ ಸಂಕೋಲೆಯಿಂದ ಬಿಡುಗಡೆ ಮಾಡಿದ್ದಷ್ಟೇ ಅಲ್ಲ; ಹೊಸದಾಗಿ ನಿರ್ಮಾಣಗೊಂಡ ತನ್ನ ದೇಶದಲ್ಲಿ ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯ ಬೀಜ ಬಿತ್ತುವ ಕಾರ್ಯವನ್ನು ಕೂಡ ಮಾಡಿದರು.
ಆದರೆ ಪಾಕಿಸ್ತಾನಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗಲೇ ಇಲ್ಲ. ಅದರ ಸ್ಥಾಪಕನಾದ ಮೊಹಮದಾಲಿ ಜಿನ್ನಾ ಪಾಶ್ಚಾತ್ಯ ಮಾದರಿಯ ಪ್ರಜಾಪ್ರಭುತ್ವವನ್ನು ಅಲ್ಲಿ ಜಾರಿಗೆ ತರಲು ಬಯಸಿದ್ದರು; ಆದರೆ ಅದು ಆ ದೇಶದಲ್ಲಿ ಬೇರೂರಲೇ ಇಲ್ಲ. ಅದರ ಅಸ್ತಿತ್ವದ ಮೊದಲ ದಶಕದಲ್ಲಿ ಪಾಕಿಸ್ತಾನಕ್ಕೆ ಒಂದು ಸಂವಿಧಾನ ಕೂಡ ಇರಲಿಲ್ಲ; ಅಲ್ಲಿ ಭಾರತ ಸರ್ಕಾರ ಕಾಯ್ದೆ-೧೯೩೫ರನ್ವಯವೇ ಆಡಳಿತ ನಡೆಸಲಾಗುತ್ತಿತ್ತು.
೧೯೫೬ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಒಂದು ಸಂವಿಧಾನವು ಜಾರಿಗೆ ಬಂತು; ಆದರೆ ಅದು ಅಲ್ಪಾಯುಷಿ ಆಯಿತು. ೧೯೫೮ರಲ್ಲಿ ಸಂಭವಿಸಿದ ಸೇನಾಕ್ರಾಂತಿಯಲ್ಲಿ ಜನರಲ್ ಅಯೂಬ್ಖಾನ್ ಅಧಿಕಾರಕ್ಕೆ ಬಂದರು. ಪಾಕಿಸ್ತಾನ ತನ್ನ ಅಸ್ತಿತ್ವದ ೭೫ ವರ್ಷಗಳಲ್ಲಿ ಬಹುತೇಕ ಅರ್ಧಭಾಗವನ್ನು ಸೇನಾಡಳಿತದಲ್ಲೇ ಕಳೆಯಿತು. ಅಲ್ಲಿ ತಥಾಕಥಿತ ಚುನಾಯಿತ ಸರ್ಕಾರ ಎನ್ನುವ ವ್ಯವಸ್ಥೆ ಇದ್ದಾಗಲೂ ದೇಶ ಸೇನೆಯ ಬಿಗಿ ನಿಯಂತ್ರಣದಲ್ಲೇ ಇತ್ತು.
ನಿರಂತರವಾಗಿ ಅಧಿಕಾರಕ್ಕೆ ಬಂದ ಸೇನಾಡಳಿತಗಳ ಕಾಲದಲ್ಲಿ ಪೂರ್ವಪಾಕಿಸ್ತಾನವು ಸಾಕಷ್ಟು ಮಲತಾಯಿ ಧೋರಣೆಯನ್ನು ಅನುಭವಿಸಿತ್ತು. ಬಂಗಬಂಧು ಎದ್ದುನಿಂತು ಬಂಗಾಳಿ ರಾಷ್ಟ್ರದ ಹಕ್ಕುಗಳ ಪರವಾಗಿ ಹೋರಾಡಿದರು. ಅದಕ್ಕಾಗಿ ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರಿಗಳು ಅವರನ್ನು ದಂಡಿಸದೆ ಬಿಡಲಿಲ್ಲ. ಒಂದು ಚುನಾವಣೆ ನಡೆಸಿ ಲಾಹೋರ್ನಲ್ಲೊಂದು ‘ಕೈಗೊಂಬೆ ಸರ್ಕಾರ’ವನ್ನು ಸ್ಥಾಪಿಸುವುದಕ್ಕೆ ಜನರಲ್ ಯಾಹ್ಯಾಖಾನ್ ಮುಂದಾದಾಗ ಪೂರ್ವಪಾಕಿಸ್ತಾನದ ಬಂಗಾಳಿ ಮತದಾರರು ಬಂಗಬಂಧು ನಾಯಕತ್ವದ ಅವಾಮಿ ಲೀಗನ್ನು ಬೆಂಬಲಿಸಿದರು. ೧೯೭೦ರ ಡಿಸೆಂಬರ್ ೭ರಂದು ನಡೆದ ಚುನಾವಣೆಯಲ್ಲಿ ೩೦೦ ಸ್ಥಾನಗಳ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಾಮಿ ಲೀಗ್ ೧೬೬ ಸ್ಥಾನಗಳಲ್ಲಿ ಜಯಗಳಿಸಿತು.
ನಿಜವೆಂದರೆ, ಆಗ ಮುಜೀಬುರ್ ರೆಹಮಾನ್ ಅವರನ್ನು ಸರ್ಕಾರ ರಚಿಸುವುದಕ್ಕೆ ಆಹ್ವಾನಿಸಬೇಕಿತ್ತು. ಆದರೆ ಯಾಹ್ಯಾಖಾನ್ ಮಾರ್ಚ್ ೨೫, ೧೯೭೧ರಂದು ಬಂಗಬಂಧುವನ್ನು ಬಂಧಿಸಿದರು; ಮತ್ತು ಪಾಕಿಸ್ತಾನ ಸೇನೆ ಪೂರ್ವಪಾಕಿಸ್ತಾನದ ಜನತೆಯ ಮೇಲೆ ಹೇಳಲಾಗದಷ್ಟು ದೌರ್ಜನ್ಯಗಳನ್ನು ನಡೆಸಿತು. ಅಂತಹ ಸನ್ನಿವೇಶದಲ್ಲಿ ಕೋಲ್ಕತಾದಲ್ಲಿ ಅವಾಮಿ ಲೀಗ್ ನೇತೃತ್ವದ ಸರ್ಕಾರವನ್ನು ಸ್ಥಾಪಿಸಲಾಯಿತು; ಮತ್ತು ಮುಕ್ತಿಬಾಹಿನಿಯ ನೇತೃತ್ವದಲ್ಲಿ ಒಂದು ಬಂಡುಕೋರ ಚಳವಳಿ ಆರಂಭವಾಯಿತು. ಪಶ್ಚಿಮಭಾಗದಲ್ಲಿ ಪಾಕಿಸ್ತಾನದ ಸೇನೆ ಭಾರತೀಯ ಪಡೆಗಳ ಮೇಲೆ ದಾಳಿ ನಡೆಸಿದಾಗ ಭಾರತ ಮಧ್ಯಪ್ರವೇಶಿಸಿತು; ಪರಿಣಾಮವಾಗಿ ಪಾಕಿಸ್ತಾನ ಸೇನೆಗೆ ಅವಮಾನಕರ ಸೋಲಾಗಿ ಅದು ಶರಣಾಗತವಾಯಿತು; ಜೊತೆಗೆ ಬಂಗ್ಲಾದೇಶ ಎನ್ನುವ ಹೊಸ ದೇಶದ ರಚನೆಯಾಯಿತು.
ಹತ್ತು ತಿಂಗಳ ಜೈಲುವಾಸದಿಂದ ಬಿಡುಗಡೆಗೊಂಡ ಬಂಗಬಂಧು ಜನವರಿ ೧೦, ೧೯೭೨ರಂದು ಢಾಕಾಗೆ ವಾಪಸಾದರು. ವಿಜಯದ ನಗೆಯೊಂದಿಗೆ ಲಂಡನ್ನಿಂದ ಹೊರಟ ಅವರು ಅಲ್ಲಿಯ ಹೀತ್ರೊ ವಿಮಾನನಿಲ್ದಾಣದಲ್ಲಿ “ನಾನು ಎಂದೂ ಪಾಕಿಸ್ತಾನದ ಪ್ರಜೆ ಎಂದು ಭಾವಿಸಲಿಲ್ಲ; ಮುಂದೆಯೂ ಭಾವಿಸಲಾರೆ” ಎಂದು ಘೋಷಿಸಿದರು. ಪಾಕಿಸ್ತಾನದಿಂದ ಸಂಪೂರ್ಣ ಭಿನ್ನವಾದ ತತ್ತ್ವಗಳ ಆಧಾರದಲ್ಲಿ ಅವರು ಬಂಗ್ಲಾದೇಶವನ್ನು ಕಟ್ಟಬಯಸಿದರು. ತಾಯ್ನಾಡಿಗೆ ತಮ್ಮನ್ನು ಸ್ವಾಗತಿಸಲು ಬಂದ ೭೦ ಲಕ್ಷ ಜನರನ್ನುದ್ದೇಶಿಸಿ ಭಾಷಣ ಮಾಡುವಾಗ ಅವರು ಹೀಗೆ ಹೇಳಿದರು: “ನನ್ನ ಬಂಗಾಳದ ಜನರಿಗೆ ಹೊಟ್ಟೆ ತುಂಬ ಅನ್ನ ಉಣ್ಣಲು ಸಾಧ್ಯವಾಗದಿದ್ದರೆ, ಬಂಗಾಳದ ನನ್ನ ಮಾತೆಯರಿಗೆ ಮತ್ತು ಸೋದರಿಯರಿಗೆ ಮಾನಮುಚ್ಚುವಂತಹ ಬಟ್ಟೆ ದೊರೆಯುವವರೆಗೆ ಮತ್ತು ನಮ್ಮ ಯುವಜನರಿಗೆಲ್ಲ ಉದ್ಯೋಗ ಅಥವಾ ಉದ್ಯೋಗಾವಕಾಶಗಳು ಲಭ್ಯವಾಗುವವರೆಗೆ ನನ್ನ ಈ ಸ್ವಾತಂತ್ರ್ಯವು ನಿರರ್ಥಕ. ದೇಶವನ್ನು ಸುಭದ್ರವಾದ ಆರ್ಥಿಕ ತಳಹದಿಯ ಮೇಲೆ ನಿಲ್ಲಿಸುವುದು ನನ್ನ ಜೀವನದ ಪರಮಧ್ಯೇಯ” – ಎಂದು.
ದುರದೃಷ್ಟವೆಂಬಂತೆ, ಪಾಕಿಸ್ತಾನದ ಕರಿನೆರಳಿನಿಂದ ಪಾರಾಗಲು ಬಂಗ್ಲಾದೇಶಕ್ಕೆ ಸಾಧ್ಯವಾಗಲಿಲ್ಲ. ೧೯೭೫ರ ಆಗಸ್ಟ್ ೧೫ರಂದು ಭಾರತವು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದಾಗ ಬಂಗ್ಲಾದೇಶದ ಸೇನೆ ಮುಜೀಬ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ಮತ್ತವರ ಕುಟುಂಬದ ಹತ್ತಾರು ಜನರನ್ನು ಕೊಂದುಹಾಕಿತು; ಅದರಲ್ಲಿ ಅವರ ಪತಿ ಮತ್ತು ಮೂವರು ಪುತ್ರರೂ ಸೇರಿದ್ದರು; ಕೊನೆಯ ಬಾಲಕನಿಗೆ ಕೇವಲ ಹತ್ತು ವರ್ಷ. ಮುಂದೆ ಅದೇ ನವೆಂಬರ್ನಲ್ಲಿ ಅಧಿಕಾರಕ್ಕೆ ಬಂದ ಜಿಯಾವುರ್ ರೆಹಮಾನ್ ಸೇನೆಯ ದಾಳಿಯ ವೇಳೆ ಸ್ಥಳದಲ್ಲಿ ಹಾಜರಿರಲಿಲ್ಲ; ಆದರೆ ಆತ ಪಿತೂರಿಗಾರರನ್ನುದ್ದೇಶಿಸಿ ಹೀಗೆ ಹೇಳಿದರೆಂದು ತಿಳಿದುಬಂದಿದೆ: “ನಾನೊಬ್ಬ ಹಿರಿಯ ಅಧಿಕಾರಿ. ಈ ಕೆಲಸದಲ್ಲಿ ನಾನು ಭಾಗಿಯಾಗಲಾರೆ. ಆದರೆ ಓರ್ವ ಕಿರಿಯ ಅಧಿಕಾರಿ ಅದನ್ನು ಮಾಡುವುದಿದ್ದರೆ ಮುಂದುವರಿಸಲಿ.”
ಬಂಗಬಂಧು ಏನು ಬಯಸಿದ್ದರೋ ಬಂಗ್ಲಾದೇಶ ಆ ರೀತಿ ಮುಂದುವರಿಯಲಿಲ್ಲ. ಅದು ಕೂಡಾ ಪಾಕಿಸ್ತಾನ ಮಾದರಿಯ ಸೇನಾ ಸರ್ವಾಧಿಕಾರವಾಯಿತು; ಮತ್ತು ೧೫ ವರ್ಷ ಅದೇರೀತಿ ಮುಂದುವರಿಯಿತು. ೧೯೮೧ರಲ್ಲಿ ಜ|| ಹುಸೇನ್ ಮಹಮ್ಮದ್ ಇರ್ಷಾದ್, ಜಿಯಾವುರ್ ರೆಹಮಾನ್ ಅವರನ್ನು ಕೊಂದು ಸೇನಾ ಸರ್ವಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ; ಮತ್ತು ಅದೇ ರೀತಿ ಸುಮಾರು ಹತ್ತು ವರ್ಷ ಮುಂದುವರಿದ. ಆಗ ನಕಲಿ ಚುನಾವಣೆಗಳು ನಡೆದು, ಜಿಯಾವುರ್ ರೆಹಮಾನ್ ಅವರ ಬಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್ಪಿ) ಹಾಗೂ ಇರ್ಷಾದ್ ಅವರ ಜತಿಯಾ ಪಾರ್ಟಿಗಳು ಭಾಗವಹಿಸುತ್ತಿದ್ದವು; ಇರ್ಷಾದ್ ನಿರಂತರವಾಗಿ ಸರ್ಕಾರವನ್ನು ಪರೋಕ್ಷವಾಗಿ ನಡೆಸುತ್ತಿದ್ದರು. ಮುಂದೆ ೧೯೯೦ರಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರಜಾಸತ್ತಾತ್ಮಕ ಕ್ರಾಂತಿ ನಡೆಸಿದಾಗ ಸೇನೆ ತನ್ನ ನೆಲೆಗಳಿಗೆ ವಾಪಸ್ಸಾಗಬೇಕಾಯಿತು; ಆಗ ಪ್ರಜಾಪ್ರಭುತ್ವವನ್ನು ಹೋಲುವ ಒಂದು ವ್ಯವಸ್ಥೆ ಅಧಿಕಾರಕ್ಕೆ ಬಂತು. ಕಳೆದ ಮೂರು ದಶಕಗಳಲ್ಲಿ ಬಿಎನ್ಪಿ ಮತ್ತು ಅವಾಮಿ ಲೀಗ್ಗಳು ಸರ್ಕಾರ ನಡೆಸುತ್ತ ಬಂದಿವೆ; ಕಳೆದ ಇಪ್ಪತ್ತು ವರ್ಷಗಳಿಂದ ಅವಾಮಿ ಲೀಗ್ ಅಧಿಕಾರದಲ್ಲಿದೆ.
ಮುಜೀಬುರ್ ರೆಹಮಾನ್ ಮತ್ತವರ ಇಡೀ ಕುಟುಂಬದ ಹತ್ಯೆ ನಡೆದಾಗ ಪುತ್ರಿಯರಾದ ಶೇಕ್ ಹಸೀನಾ ಮತ್ತು ರೆಹಾನಾ ಯೂರೋಪ್ನಲ್ಲಿದ್ದರು. ಈ ಸೋದರಿಯರಿಗೆ ಭಾರತದ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೆಹಲಿಯಲ್ಲಿ ಆಶ್ರಯ ನೀಡಿದರು. ಅವಾಮಿ ಲೀಗ್ನ ಮುಖ್ಯಸ್ಥೆಯಾಗಿ ಆಯ್ಕೆಗೊಂಡ ಶೇಕ್ ಹಸೀನಾ ೧೯೮೧ರಲ್ಲಿ ಢಾಕಾಗೆ ಮರಳಿದರು; ಆದರೆ ಸೇನಾಡಳಿತ ಅವರನ್ನು ಆಗಾಗ ಬಂಧಿಸುತ್ತಿತ್ತು; ಹಾಗೂ ದಮನಕ್ಕೊಳಪಡಿಸುತ್ತಿತ್ತು. ಅಂತಿಮವಾಗಿ ೧೯೯೦ರಲ್ಲಿ ಪ್ರಜಾಪ್ರಭುತ್ವವು ಮರಳಿದಾಗ ಇಬ್ಬರು ಪ್ರಮುಖ ನಾಯಕರಲ್ಲಿ ಆಕೆ ಒಬ್ಬರಾಗಿದ್ದರು; ಈವರೆಗೆ ಸುಮಾರು ಇಪ್ಪತ್ತು ವರ್ಷ ಹಸೀನಾ ದೇಶದ ಪ್ರಧಾನಿಯಾಗಿದ್ದಾರೆ. ಈಚೆಗೆ (೨೦೨೪) ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ಜಯಿಸುವುದರೊಂದಿಗೆ ಆಕೆ ಮತ್ತೆ ಐದು ವರ್ಷಗಳ ಅಧಿಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಓರ್ವ ಚುನಾಯಿತ ಪ್ರಧಾನಿಯಾಗಿ ೨೫ ವರ್ಷ ಅಧಿಕಾರವನ್ನು ಗಳಿಸುವ ಮೂಲಕ ಶೇಕ್ ಹಸೀನಾ ಒಂದು ದಾಖಲೆಯನ್ನು ನಿರ್ಮಿಸಿದ್ದಾರೆ.
ಜೀವನದ ಅನುಭವಗಳು ಹಸೀನಾ ಅವರಿಗೆ ಹಲವು ಮಹತ್ತ್ವದ ಪಾಠಗಳನ್ನು ಕಲಿಸಿವೆ. ಭಯೋತ್ಪಾದನೆ ಮತ್ತು ಮತೀಯ ಉಗ್ರಗಾಮಿಗಳ ವಿರುದ್ಧ ಆಕೆ ಗಟ್ಟಿಯಾಗಿ ನಿಂತಿದ್ದಾರೆ. ಆರ್ಥಿಕ ಪುನಶ್ಚೇತನದ ಬಗೆಗೆ ಅವರು ವಿಶೇಷ ಗಮನ ನೀಡಿದ ಕಾರಣ ದೇಶದ ಆರ್ಥಿಕತೆ ತುಂಬ ಮೇಲ್ಮಟ್ಟಕ್ಕೇರಿದೆ. ೨೦೧೮ರಲ್ಲಿ ಅತಿ ಹಿಂದುಳಿದ ದೇಶವೆನ್ನುವ ವಿಶ್ವಸಂಸ್ಥೆಯ ಪಟ್ಟಿಯಲ್ಲಿದ್ದ ದೇಶ, ಈಗ ಅಭಿವೃದ್ಧಿಶೀಲ ದೇಶ ಎನ್ನುವ ಮಟ್ಟಕ್ಕೆ ಬಂದಿದೆ. ತಲಾ ಜಿಡಿಪಿ, ಮಾನವ ಬಂಡವಾಳ ಸೂಚ್ಯಂಕ ಮತ್ತು ಆರ್ಥಿಕ ಅಪಾಯ ಸೂಚ್ಯಂಕದಂತಹ ಮಾನದಂಡಗಳಲ್ಲಿ ಅದು ನೆರೆರಾಷ್ಟ್ರಗಳನ್ನು ಹಿಂದೆ ಹಾಕಿದೆ.
ಆದರೂ ದೇಶದ ಪ್ರಜಾಪ್ರಭುತ್ವ ಈಗಲೂ ಸೂಕ್ಷ್ಮಸ್ಥಿತಿಯಲ್ಲೇ (ದುರ್ಬಲ) ಇರುವುದೊಂದು ಪ್ರಧಾನ ಸವಾಲಾಗಿದೆ. ಈಚಿನ ಚುನಾವಣೆಯನ್ನು ಪ್ರಮುಖ ವಿರೋಧಪಕ್ಷವಾದ ಬಿಎನ್ಪಿ ಬಹಿಷ್ಕರಿಸಿತು; ಮತ್ತು ಹಿಂಸಾತ್ಮಕ ಘಟನೆಗಳು ನಡೆದವು. ಬಿಎನ್ಪಿಯ ‘ಚುನಾವಣೆ ಬಹಿಷ್ಕಾರ’ ನಿರ್ಧಾರವನ್ನು ಯಾರೂ ಬೆಂಬಲಿಸಲು ಸಾಧ್ಯವಿರಲಿಲ್ಲ. ಭಾರತದಲ್ಲಾಗಲಿ ಅಥವಾ ಬಂಗ್ಲಾ ದೇಶದಲ್ಲಾಗಲಿ, ವಿರೋಧಪಕ್ಷವನ್ನು ಬಲಪಡಿಸುವುದು ಆಳುವ ಪಕ್ಷದ ಕರ್ತವ್ಯವೆಂದು ಯಾರೂ ವಾದಿಸಲು ಸಾಧ್ಯವಿಲ್ಲ. ಆದ್ದರಿಂದ ಪಾಶ್ಚಾತ್ಯ ಜಗತ್ತಿನ ಕೆಲವರು ಮಾಡಿದ ಈ ಟೀಕೆ ನಿಲ್ಲುವುದಿಲ್ಲ. ಏನಿದ್ದರೂ ಶೇಕ್ ಹಸೀನಾ ಅವರು ಒಂದು ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು; ಅದೆಂದರೆ, ದೇಶದ ಮುಂದಿರುವ ಸವಾಲನ್ನು ಎದುರಿಸುವುದು; ಹಾಗೂ ಬಂಗ್ಲಾದೇಶದಲ್ಲಿ ಎಂದಿಗೂ ಪ್ರಜಾಪ್ರಭುತ್ವವೇ ಇರುವುದು; ಮತ್ತು ಬಂಗ್ಲಾದೇಶ ಸದಾ ಒಂದು ಜಾತ್ಯತೀತ (ಸೆಕ್ಯುಲರ್) ರಾಷ್ಟ್ರವಾಗಿರುವುದು ಎನ್ನುವ ಆಕೆಯ ತಂದೆಯ ಕನಸನ್ನು ನನಸಾಗಿಸಲು ಆಕೆಗೆ ಮಾತ್ರ ಸಾಧ್ಯ.
(ಅನುವಾದ: ಎಚ್. ಮಂಜುನಾಥ ಭಟ್)