ಹಳ್ಳಿಯೊಂದರಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪಡೆದಿದ್ದ ಲೇಖರಾಮ್, ಆಂಗ್ಲ ಶಿಕ್ಷಣದಿಂದ ವಂಚಿತರಾಗಿದ್ದರಲ್ಲದೆ ಲಾಹೋರ್ನಂತಹ ಸಾಮಾಜಿಕ ಕ್ರಾಂತಿಯ ತವರೂರನ್ನು ಕಂಡಿರಲಿಲ್ಲ. ಆದರೆ ಪರ್ಶಿಯನ್ ಮತ್ತು ಅರಬ್ಬೀ ಭಾಷೆಗಳಲ್ಲಿ ತಮಗಿದ್ದ ಪಾಂಡಿತ್ಯವನ್ನು ಮುಂದಿನ ದಿನಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಪ್ರಯೋಗಿಸುವಲ್ಲಿ ಸಫಲರಾಗುತ್ತಾರೆ. ೧೮೮೦ರಲ್ಲಿ ಅಜ್ಮೇರದಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರನ್ನು ಭೇಟಿ ಮಾಡುವ ಲೇಖರಾಮ್ ಆನಂತರದಲ್ಲಿ ಆರ್ಯಸಮಾಜದ ಒಬ್ಬ ನಿಷ್ಠಾವಂತ ಕಟ್ಟಾಳಾಗಿ ಪರಿವರ್ತಿತರಾಗುತ್ತಾರೆ. ದಯಾನಂದ ಸರಸ್ವತಿ ಮತ್ತು ಗುರುದತ್ ಮೊದಲಾದವರ ಗುರಿ ಸಾಂಪ್ರದಾಯಿಕ ಹಿಂದು ಮತ್ತು ಕ್ರಿಸ್ತ ಪಾದ್ರಿಗಳಾದರೆ ಪಂಡಿತ ಲೇಖರಾಮ್ ಮಾತ್ರ ತಮ್ಮ ದಾಳಿಗೆ ಇಸ್ಲಾಂ ಅನ್ನು ಗುರಿ ಮಾಡುತ್ತಾರೆ. ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಮುಸ್ಲಿಂ ಅಧಿಕಾರಿಗಳ ಕೆಳಗೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಲೇಖರಾಮ್, ಪ್ರತ್ಯಕ್ಷ/ಅಪ್ರತ್ಯಕ್ಷವಾಗಿ ಮುಸ್ಲಿಂ ವಿರೋಧಿಯಾಗಿ ರೂಪಗೊಳ್ಳುತ್ತಾರೆ. ಆರ್ಯಸಮಾಜವನ್ನು ಸೇರಿದ ಪಂಡಿತ ಲೇಖರಾಮ್ರವರು ಗೋ–ಸಂರಕ್ಷಣೆ, ಸರಕಾರೀ ಶಾಲೆಗಳಲ್ಲಿ ಹಿಂದು ಮಾಧ್ಯಮಕ್ಕೆ ಒತ್ತು ನೀಡುವುದು ಮತ್ತು ಅಹ್ಮದೀಯ ಪಂತ ವಿರೋಧಿ ಪ್ರಚಾರಕ್ಕೆ ಆದ್ಯತೆ ನೀಡುತ್ತಾರೆ.
ಹಿಂದು-ಮುಸಲ್ಮಾನ ಸಮುದಾಯಗಳ ನಡುವೆ ಆಗಿಂದಾಗ್ಗೆ ನಡೆಯುತ್ತಿದ್ದ ಸಂಘರ್ಷಗಳು ಪಂಜಾಬಿನ ಪ್ರಮುಖ ಲಕ್ಷಣಗಳಲ್ಲೊಂದಾಗಿತ್ತು. ಈದ್ ಹಬ್ಬದ ದಿನ ಮುಸ್ಲಿಮರು ಬಲಿಕೊಡುತ್ತಿದ್ದ ಹಸು, ಹಿಂದು ಅಥವಾ ಸಿಖ್ ಸಮುದಾಯದವರು ವಾಸಿಸುತ್ತಿದ್ದ ಪ್ರದೇಶಗಳಲ್ಲಿ ಗೋಮಾಂಸವನ್ನು ಸಾಗಿಸುವುದು, ಹೋಲಿ-ರಂಜಾನ್ ನಂತಹ ಹಬ್ಬದ ದಿನಗಳಲ್ಲಿ ಪರಸ್ಪರರ ಆಚರಣೆಗಳು, ಮುಸ್ಲಿಮರ ಮಸೀದಿಯ ಮುಂದೆ ವಾದ್ಯಗಳೊಂದಿಗೆ ಹೋಗುವ ಹಿಂದುಗಳ ಧಾರ್ಮಿಕ ಮೆರವಣಿಗೆಗಳು, ಅಥವಾ ಮೊಹರಂ ದಿನ ಅವರ ‘ತಾಜಿಯ’ಗಳನ್ನು ಸಾಗಿಸುವಾಗ ತಡೆಯುವ ಅರಳಿಮರದ ಕೊಂಬೆಗಳು, ಮುಸ್ಲಿಮರ ಮೆರವಣಿಗೆಯಲ್ಲಿ ನುಗ್ಗುವ ಬ್ರಾಹ್ಮಣರ ಗೂಳಿ…. ಹೀಗೆ ಪ್ರತಿಯೊಂದು ಚಿಕ್ಕಪುಟ್ಟ ಘಟನೆಯೂ ಕೋಮುಗಲಭೆಗಳಿಗೆ ಸುಲಭವಾದ ಕಿಡಿಯಾಗುತ್ತಿತ್ತು.
ಇಂತಹ ವಾತಾವರಣದಲ್ಲಿ ೧೮೩೯ರಲ್ಲಿ ಪಂಜಾಬ್ನ ಲೂಧಿಯಾನದಲ್ಲಿ ಪಾದಾರ್ಪಣೆ ಮಾಡಿದ ಕ್ರಿಸ್ತ ಮತಪ್ರಚಾರಕರು ಮುಂದಿನ ಹತ್ತು ವರ್ಷಗಳಲ್ಲಿ ಲೂಧಿಯಾನದಿಂದ ಲಾಹೋರ್ವರೆಗೆ ಹಬ್ಬುತ್ತಾರೆ. ೧೮೮೦ರ ವೇಳೆಗೆ ಇವರ ಜಾಲ ದೆಹಲಿಯಿಂದ ಉತ್ತರಕ್ಕೆ ಸಿಮ್ಲಾದವರೆಗೆ, ಪಶ್ಚಿಮದಲ್ಲಿ ಅಂಬಾಲಾದಿಂದ ಪೇಶಾವರ್ ವರೆಗೆ, ಲಾಹೋರ್ನಿಂದ ಮುಲ್ತಾನ್ನ ದಕ್ಷಿಣದವರೆಗೆ, ಪೇಶಾವರದಿಂದ ಡೇರಾ ಘಾಜಿಖಾನ್ವರೆಗೆ ಪಸರಿಸುತ್ತದೆ.
೧೮೮೧ರಲ್ಲಿ ಕ್ರಿಸ್ತಮತಕ್ಕೆ ಮತಾಂತರಗೊಂಡವರ ಸಂಖ್ಯೆ ೩೯೧೨ ಆಗಿದ್ದರೆ ಮುಂದಿನ ದಶಕದಲ್ಲಿ ೧೯,೦೦೦ ದಾಟುವ ಅದು ೧೯೦೧ರ ವೇಳೆಗೆ ೩೮,೦೦೦ ತಲಪುತ್ತದೆ. ಮತಾಂತರಗೊಂಡವರ ಸಂಖ್ಯೆಯ ದೃಷ್ಟಿಯಿಂದ ಇದನ್ನೇನೂ ಮಹತ್ತ್ವದ ಬೆಳವಣಿಗೆ ಎನ್ನಲಾಗುವುದಿಲ್ಲ. ಆದರೆ ಇದಕ್ಕೆ ಹಿಂದು ಸಮುದಾಯದ ಅಸ್ಪೃಶ್ಯರು ಮತ್ತು ಕ್ರಿಸ್ತ ಶಾಲೆಗಳಲ್ಲಿ ಓದುತ್ತಿದ್ದ ಮೇಲ್ಜಾತಿಯ ವಿದ್ಯಾರ್ಥಿಗಳು ಗುರಿಯಾಗುತ್ತಿದ್ದುದು ಹಿಂದುಗಳಿಗೆ ಕಳವಳವನ್ನುಂಟು ಮಾಡುವ ಸಂಗತಿಯಾಗುತ್ತದೆ.
ಅಸ್ಪೃಶ್ಯರಲ್ಲಿ ಅನೇಕರು ಈಗಾಗಲೆ ಇಸ್ಲಾಂ ಮತ್ತು ಸಿಖ್ ಮತಕ್ಕೆ ಮತಾಂತರಗೊಂಡಿದ್ದರು. ಆದರೆ ಮೇಲ್ಜಾತಿಯ ಹಿಂದು ಶಿಕ್ಷಿತ ಯುವಕರು ಕ್ರಿಸ್ತ ಮತವನ್ನಪ್ಪುತ್ತಿರುವುದು ಸಮಾಜದ ಪ್ರಾಜ್ಞವರ್ಗಕ್ಕೆ ಆತಂಕಕಾರಿಯಾಗಿ ಪರಿಣಮಿಸುತ್ತದೆ. ಆರ್ಥಿಕ ವಿಕಾಸಕ್ಕೆ ಅತ್ಯಗತ್ಯವೆನಿಸುತ್ತಿದ್ದ ಆಂಗ್ಲರ ಉನ್ನತಶಿಕ್ಷಣದ ಬೆನ್ನೇರಿ ಬಂದ ಮತಾಂತರದ ಪಿಡುಗು ಅವರಿಗೆ ನುಂಗಲಾರದ ತುತ್ತಿನಂತಾಗಿತ್ತು. ಕ್ರಿಸ್ತ ಪಾದ್ರಿಗಳು ತಮ್ಮ ಆಕ್ರಮಣಕಾರಿ ಮತಾಂತರದ ಯುದ್ಧದೊಂದಿಗೆ ಮುದ್ರಣಯಂತ್ರದಂತಹ ಆವಿಷ್ಕಾರಗಳನ್ನು ಭಾರತದಲ್ಲಿ ಪರಿಚಯಿಸಿ ಅವುಗಳನ್ನು ತಮ್ಮ ಮತ ಪ್ರಚಾರಕ ಸಾಹಿತ್ಯ ಮುದ್ರಣಕ್ಕೆ ಬಳಸಿದಾಗ ಅದು ಕ್ರಾಂತಿಕಾರಕ ಬೆಳವಣಿಗೆಗೆ ಹಾದಿಯಾಯಿತು.
ಪೇಟೆಯ ಹಾದಿಬೀದಿಗಳಲ್ಲಿ ನಿಂತು ಕ್ರಿಸ್ತ ಮತವನ್ನು ಪ್ರಚಾರ ಮಾಡುತ್ತಿದ್ದ ಪಾದ್ರಿಗಳು ಭಾರತದಲ್ಲಿ ಪ್ರಚಲಿತವಿದ್ದ ಧಾರ್ಮಿಕ ಶಾಸ್ತ್ರಾರ್ಥದಲ್ಲಿ ಪಾಲ್ಗೊಳ್ಳತೊಡಗಿದರು. ಶಾಲೆಗಳು, ಆಸ್ಪತ್ರೆ-ದವಾಖಾನೆಗಳು, ಅನಾಥಾಲಯ ಮೊದಲಾದವನ್ನು ಪ್ರಾರಂಭಿಸುವ ಮೂಲಕ ತಮ್ಮ ಬಲೆಯನ್ನು ದೃಢಗೊಳಿಸಿಕೊಂಡರಲ್ಲದೆ ಮನೆಯಿಂದ ಹೊರಬರದ ಮಹಿಳೆಯರನ್ನು ತಲಪಲು ‘ಜನಾನಾ ಸೇವೆ’ಯನ್ನು ಪ್ರಾರಂಭಿಸುತ್ತಾರೆ. ಸರಕಾರಿ ಕೃಪಾಪೋಷಿತ ಕ್ರಿಸ್ತ ಮಿಷನರಿಗಳು ಹಿಂದುಧರ್ಮೀಯರಿಗೆ ಆತಂಕವನ್ನುಂಟು ಮಾಡುವುದರ ಮೂಲಕ ಪಂಜಾಬ್ನಲ್ಲಿ ಧಾರ್ಮಿಕ ಪುನರುಜ್ಜೀವನದ ಅಗತ್ಯ ಹೆಚ್ಚಾಗುತ್ತದೆ. ಅವರ ಆತಂಕಕ್ಕೆ ಉತ್ತರಸ್ವರೂಪವಾಗಿ ಆರ್ಯಸಮಾಜ ಕಾಣಿಸಿಕೊಳ್ಳುತ್ತದೆ.
೧೮೭೭ರಲ್ಲಿ ಲಾಹೋರ್ನಲ್ಲಿ ಪಾದಾರ್ಪಣೆ ಮಾಡಿದ ಮಹರ್ಷಿ ದಯಾನಂದ ಸರಸ್ವತಿಯವರು ಮುಂದಿನ ಹದಿನೈದು ತಿಂಗಳುಗಳಲ್ಲಿ ಪಂಜಾಬ್ನಲ್ಲಿ ಆರ್ಯಸಮಾಜದ ಅನೇಕ ಶಾಖೆಗಳನ್ನು ತೆರೆದರಲ್ಲದೆ ಸಾಂಪ್ರದಾಯಿಕ ಹಿಂದುಗಳು ಮತ್ತು ಕ್ರಿಸ್ತ ಮತಪ್ರಚಾರಕರೊಂದಿಗೆ ಅನೇಕ ಬಾರಿ ಶಾಸ್ತ್ರಾರ್ಥಕ್ಕೆ ತೊಡಗುತ್ತಾರೆ. ೧೮೮೩ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರು ನಿಧನರಾಗುವ ವೇಳೆಗೆ ಪಂಜಾಬ್ನಲ್ಲಿ ಅವರ ಆರ್ಯಸಮಾಜ ಪ್ರಾರಂಭಿಕ ಹಂತದಲ್ಲಿದ್ದ ಆಂದೋಲನವಾಗಿ ಬೆಳೆದುನಿಂತಿತ್ತು.
ದಯಾನಂದ ಸರಸ್ವತಿಯವರ ನಿಧನದ ಬಳಿಕ ಆರ್ಯ ಸಮಾಜದಲ್ಲಿ ಎರಡು ಮಹತ್ತರ ಬದಲಾವಣೆಗಳಾಗುತ್ತವೆ. ಮೊದಲನೆಯದಾಗಿ ಆರ್ಯಸಮಾಜವನ್ನು ಮುನ್ನಡೆಸುವ ಹೊಣೆ ಅವರ ಮೂವರು ಅನುಯಾಯಿಗಳಾದ ಪಂಡಿತ ಗುರುದತ್, ಪಂಡಿತ ಲೇಖರಾಮ್ ಮತ್ತು ಲಾಲಾ ಮುಂಶಿರಾಮ್ (ಅನಂತರದಲ್ಲಿ ಸ್ವಾಮಿ ಶ್ರದ್ಧಾನಂದ ಆದವರು) ಅವರ ಮೇಲೆ ಬೀಳುತ್ತದೆ. ಲಾಹೋರ್ ಕಾಲೇಜಿನಲ್ಲಿ ಎಂ.ಎ. ಪದವಿಗಾಗಿ ವ್ಯಾಸಂಗ ಮಾಡುತ್ತಿದ್ದ ಪಂಡಿತ ಗುರುದತ್ರವರ ಸುತ್ತ ದಯಾನಂದ ಸರಸ್ವತಿಯವರ ಧಾರ್ಮಿಕ-ಸಾಮಾಜಿಕ ಬೋಧನೆಯನ್ನು ಅರಿತುಕೊಳ್ಳಲು ಬಯಸುತ್ತಿದ್ದ ಆರ್ಯಸಮಾಜದ ದೊಡ್ಡದೊಂದು ಗುಂಪು ಸುತ್ತುವರಿದಿರುತ್ತದೆ. ಈ ಗುಂಪಿನಲ್ಲಿ ಆರ್ಯಸಮಾಜ ಮತ್ತು ರಾಜಕೀಯದಲ್ಲಿ ಭಾವೀ ನಾಯಕರಾದ ಲಾಲಾ ಲಜಪತ್ರಾಯ್ ಮತ್ತು ಲಾಲಾ ಹಂಸರಾಜ್ರವರು ಸೇರಿರುತ್ತಾರೆ. ಪಂಡಿತ ಗುರುದತ್ರವರು ತಮ್ಮ ತೀಕ್ಷ್ಣ ಬುದ್ಧಿಮತ್ತೆಯಿಂದ ೧೮೮೫ರಿಂದ ಪ್ರಾರಂಭಿಸಿ ೧೮೯೦ರಲ್ಲಿ ಸಾವನ್ನಪ್ಪುವವರೆಗೆ ಆರ್ಯಸಮಾಜ ಮತ್ತು ದಯಾನಂದ ಸರಸ್ವತಿಯವರ ಚಿಂತನೆಗೆ ಹೊಸತೊಂದು ರೂಪ ಕೊಡಲು ಶ್ರಮಿಸುತ್ತಾರೆ.
೧೮೫೬ರಲ್ಲಿ ಜನಿಸಿ ೧೮೮೨ರಲ್ಲಿ ಕಾನೂನು ವ್ಯಾಸಂಗಕ್ಕಾಗಿ ಲಾಹೋರ್ ಸೇರುವ ಮುಂಶಿರಾಮ್ ಪಂಡಿತ ಗುರುದತ್ರವರ ನೇತೃತ್ವವನ್ನು ಒಪ್ಪಿಕೊಂಡು ೧೮೮೫ರಲ್ಲಿ ಆರ್ಯಸಮಾಜದ ಸದಸ್ಯರಾಗುತ್ತಾರೆ. ಮುಂದಿನ ಎರಡು ದಶಕಗಳಲ್ಲಿ ಅನೇಕ ಕ್ರಾಂತಿಕಾರಿ ಸಾಮಾಜಿಕ ಆಂದೋಲನಗಳಿಗೆ ನಾಂದಿಹಾಡುವ ಮುಂಶಿರಾಮ್ ತಮ್ಮ ‘ತೀಕ್ಷ್ಣವಾದ’ದ ಮೂಲಕ ಆರ್ಯಸಮಾಜದ ಪ್ರಚಾರದಲ್ಲಿ ತೊಡಗುತ್ತಾರೆ. ದಸರಾ ಹಬ್ಬದ ಸಮಯದಲ್ಲಿ ಜಲಂಧರದ ಸುತ್ತಮುತ್ತಲ ಹಳ್ಳಿಗಳಲ್ಲಿ ಮತ ಪ್ರಚಾರಕ್ಕೆ ತೊಡಗುವ ಮುಂಶಿರಾಮ್ ಕ್ರಿಸ್ತ ಮತಾಂತರಿಗಳಿಗೆ ಬಹಿರಂಗ ಪಂಥಾಹ್ವಾನವನ್ನು ಎಸೆದು ಶಾಸ್ತ್ರಾರ್ಥಗಳಲ್ಲಿ ಭಾಗವಹಿಸುತ್ತಾರೆ. ೧೮೮೮-೮೯ರಲ್ಲಿ ಅವರು “ಸತ್ ಧರಮ್ ಪ್ರಚಾರಕ್” ಎಂಬ ಉರ್ದು ಪತ್ರಿಕೆ ಮತ್ತು “ದೋಆಬ್ ಉಪದೇಶಕ್ ಮಂಡಲ್” ಎಂಬ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ. ಇಸ್ಲಾಂ ಮತ್ತು ಕ್ರಿಸ್ತ ಅನುಯಾಯಿಗಳನ್ನು ಆರ್ಯಸಮಾಜಕ್ಕೆ ಸೇರಿಸಿಕೊಳ್ಳಲು ‘ಶುದ್ಧಿ ಆಂದೋಲನ’ವನ್ನು ಚಾಲನೆ ಮಾಡುತ್ತಾರೆ. ಪಂಡಿತ ಗುರುದತ್ ಮತ್ತು ಮುಂಶಿರಾಮ್ರವರ ಇಂತಹ ತೀಕ್ಷ್ಣವಾದದ ಚಟುವಟಿಕೆಗಳು ಆರ್ಯಸಮಾಜದ ಇತರ ಮಂದವಾದಿಗಳ ಅಸಮಾಧಾನಕ್ಕೆ ಎಡೆಮಾಡಿಕೊಡುತ್ತದೆ. ಮಂದವಾದಿಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತಗೊಂಡವರು. ಇವರ ಪರಿಶ್ರಮದಿಂದ ಲಾಹೋರ್ನಲ್ಲಿ ತಲೆಯೆತ್ತಿದ ದಯಾನಂದ ಆಂಗ್ಲೋ-ವೇದಿಕ್ ಶೈಕ್ಷಣಿಕ ಸಂಸ್ಥೆ ಮುಂದಿನ ದಶಕಗಳಲ್ಲಿ ಭಾರಿ ಶೈಕ್ಷಣಿಕ ಪ್ರಗತಿಗೆ ಕಾರಣವಾಗುತ್ತದೆ. ಕ್ರಮೇಣ ಲಾಲಾ ಹಂಸರಾಜ್ ಮತ್ತು ಲಜಪತ್ರಾಯ್ರವರು ಈ ಸಂಸ್ಥೆಯ ಮೇಲೆ ನಿಯಂತ್ರಣ ಸಾಧಿಸಿ ತೀವ್ರವಾದಿಗಳನ್ನು ದೂರ ಮಾಡುವುದರಲ್ಲಿ ಸಫಲರಾಗುತ್ತಾರೆ.
ಈ ಸಮಯದ ಮೂರನೆಯ ನಾಯಕರಾದ ಪಂಡಿತ ಲೇಖರಾಮ್ರವರ ಹಿನ್ನೆಲೆ ಇವರಿಬ್ಬರಿಗಿಂತಲೂ ಭಿನ್ನವಾಗಿದೆ. ಹಳ್ಳಿಯೊಂದರಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪಡೆದಿದ್ದ ಲೇಖರಾಮ್, ಆಂಗ್ಲ ಶಿಕ್ಷಣದಿಂದ ವಂಚಿತರಾಗಿದ್ದರಲ್ಲದೆ ಲಾಹೋರ್ನಂತಹ ಸಾಮಾಜಿಕ ಕ್ರಾಂತಿಯ ತವರೂರನ್ನು ಕಂಡಿರಲಿಲ್ಲ. ಆದರೆ ಪರ್ಶಿಯನ್ ಮತ್ತು ಅರಬ್ಬೀ ಭಾಷೆಗಳಲ್ಲಿ ತಮಗಿದ್ದ ಪಾಂಡಿತ್ಯವನ್ನು ಮುಂದಿನ ದಿನಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಪ್ರಯೋಗಿಸುವಲ್ಲಿ ಸಫಲರಾಗುತ್ತಾರೆ. ೧೮೮೦ರಲ್ಲಿ ಅಜ್ಮೇರಾದಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರನ್ನು ಭೇಟಿ ಮಾಡುವ ಲೇಖರಾಮ್ ಆನಂತರದಲ್ಲಿ ಆರ್ಯಸಮಾಜದ ಒಬ್ಬ ನಿಷ್ಠಾವಂತ ಕಟ್ಟಾಳಾಗಿ ಪರಿವರ್ತಿತರಾಗುತ್ತಾರೆ. ದಯಾನಂದ ಸರಸ್ವತಿ ಮತ್ತು ಗುರುದತ್ ಮೊದಲಾದವರ ಗುರಿ ಸಾಂಪ್ರದಾಯಿಕ ಹಿಂದು ಮತ್ತು ಕ್ರಿಸ್ತ ಪಾದ್ರಿಗಳಾದರೆ ಪಂಡಿತ ಲೇಖರಾಮ್ ಮಾತ್ರ ತಮ್ಮ ದಾಳಿಗೆ ಇಸ್ಲಾಂ ಅನ್ನು ಗುರಿ ಮಾಡುತ್ತಾರೆ. ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಮುಸ್ಲಿಂ ಅಧಿಕಾರಿಗಳ ಕೆಳಗೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಲೇಖರಾಮ್, ಪ್ರತ್ಯಕ್ಷ/ಅಪ್ರತ್ಯಕ್ಷವಾಗಿ ಮುಸ್ಲಿಂ ವಿರೋಧಿಯಾಗಿ ರೂಪಗೊಳ್ಳುತ್ತಾರೆ. ಆರ್ಯಸಮಾಜವನ್ನು ಸೇರಿದ ಪಂಡಿತ ಲೇಖರಾಮ್ರವರು ಗೋ-ಸಂರಕ್ಷಣೆ, ಸರಕಾರೀ ಶಾಲೆಗಳಲ್ಲಿ ಹಿಂದಿ ಮಾಧ್ಯಮಕ್ಕೆ ಒತ್ತು ನೀಡುವುದು ಮತ್ತು ಅಹ್ಮದೀಯ ಪಂತ ವಿರೋಧಿ ಪ್ರಚಾರಕ್ಕೆ ಆದ್ಯತೆ ನೀಡುತ್ತಾರೆ.
೧೮೮೧ರ ಸುಮಾರಿಗೆ ಪಂಡಿತ ಲೇಖರಾಮ್ ಪೇಶಾವರದ ಆರ್ಯಸಮಾಜದ ಒಬ್ಬ ಪ್ರಮುಖ ನಾಯಕರಾಗಿದ್ದರು. ಪೊಲೀಸ್ ಸೇವೆಯಲ್ಲಿದ್ದ ಅವರು ೧೮೮೪ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆರ್ಯಸಮಾಜದ ಮುಖವಾಣಿಯಾಗಿದ್ದ ‘ಆರ್ಯ ಗೆಜೆಟ್’ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಲು ಮುಂದಾಗುತ್ತಾರೆ. ಲೇಖರಾಮ್ರವರು ‘ಆರ್ಯ ಗೆಜೆಟ್’ ಪತ್ರಿಕೆಯನ್ನು ಇಸ್ಲಾಂ ಮತ ಹಾಗೂ ಪ್ರವಾದಿ ಮಹಮ್ಮದರನ್ನು ಟೀಕಿಸಲು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಆಪಾದಿಸಲಾಗುತ್ತದೆ. ೧೮೫೭ರ ಕ್ರಾಂತಿಯ ಬಳಿಕ ಮುಘಲ್ ದೊರೆ ಬಹಾದುರ್ ಶಾರವರ ಪದಚ್ಯುತಿ, ಮುಘಲ್ ಸಾಮ್ರಾಜ್ಯದ ಅಂತ್ಯದಿಂದ ದಿಕ್ಕೆಟ್ಟುಹೋಗಿದ್ದ ಮುಸ್ಲಿಂ ಸಮುದಾಯ ಆರ್ಯಸಮಾಜ ನಡೆಸುತ್ತಿದ್ದ ಮತೀಯ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರಲಿಲ್ಲ. ಇಸ್ಲಾಂ ಅನ್ನು ತಮ್ಮ ಸ್ವಂತ ಆಸ್ತಿ ಎಂದು ಭಾವಿಸುತ್ತಿದ್ದ ಮುಲ್ಲಾಗಳು ಚಿಕ್ಕದೊಂದು ಪ್ರತಿಭಟನೆಯನ್ನೂ ಮಾಡಲಾಗದೆ ಕೈಚೆಲ್ಲಿ ಕುಳಿತಿದ್ದ ಕಾಲವದು. ಇದರಿಂದ ಉತ್ತೇಜಿತಗೊಂಡ ಲೇಖರಾಮ್ ಪ್ರವಾದಿ ಮತ್ತು ಕುರಾನಿನ ವಿರುದ್ಧ ಬಿಡಿಬೀಸಾಗಿ ತಮ್ಮ ಪ್ರಚಾರವನ್ನು ಮುಂದುವರಿಸುತ್ತಾರೆ. ಇಲ್ಲಿಂದ ಪಂಡಿತ ಲೇಖರಾಮ್ ಮತ್ತು ಮಿರ್ಜಾ ಅಹ್ಮದ್ರವರ ನಡುವಿನ ವೈಯಕ್ತಿಕ ಹಗೆತನ ಪ್ರಾರಂಭಗೊಳ್ಳುತ್ತದೆ.
ಕಾದಿಯಾಂನ ಹಜ್ರತ್ ಮಿರ್ಜಾ ಗುಲಾಂ ಅಹ್ಮದ್ ಎಂಬಾತ ಅಹ್ಮದೀಯ ಮುಸ್ಲಿಂ ಸಮುದಾಯದ ಸಂಸ್ಥಾಪಕರಾಗಿದ್ದಾರೆ. ಮೊಹಮ್ಮದ್ ಪೈಗಂಬರರ ನಂತರ ತಾನೇ ಅಲ್ಲಾನ ಪ್ರವಾದಿ ಎಂದು ಕರೆದುಕೊಳ್ಳುವ ಹಜ್ರತ್ ಮಿರ್ಜಾ ಗುಲಾಂ ಅಹ್ಮದ್ ಭಗವಂತನ ಅನುಗ್ರಹಕ್ಕೆ ಒಳಗಾಗುತ್ತಿದ್ದು ಅದನ್ನು ಅವರು ಬಯಸಿ ಬರುವ ಭಕ್ತರಿಗೆ ತೋರಿಸುವವರಾಗಿದ್ದರು. ಇವರ ಇಂತಹ ಭಗವದ್ ಪ್ರೇರಣೆಯಿಂದ ಪ್ರಭಾವಿತರಾಗಿದ್ದ ಮುಸಲ್ಮಾನರು ಮಾತ್ರವಲ್ಲದೆ ಹಿಂದು ಮತ್ತು ಕ್ರಿಸ್ತ ಸಮುದಾಯದವರೂ ಹಜ್ರತ್ರನ್ನು ಪರಸ್ಪರ ಅಂತಿಮಗತಿಶಾಸ್ತ್ರ (eschatology) ಗ್ರಂಥಗಳಲ್ಲಿ ಉಲ್ಲೇಖಿಸಿರುವ ಅವತಾರಗಳಲ್ಲಿ ಕಾಣಲು ತವಕದಿಂದಿರುತ್ತಾರೆ. ಅಂದಿನ ದಿನಗಳಲ್ಲಿ ಬೀದಿಗಳಲ್ಲಿ ಮತಪ್ರಚಾರ ಬಹಳ ವ್ಯಾಪಕವಾಗಿ ಪ್ರಚಲಿತವಾಗಿದ್ದು ಇಬ್ಬರು ಭಿನ್ನಮತೀಯರು ಬೀದಿಗಳಲ್ಲಿ ವಾದ-ವಾಗ್ವಾದದ ಶಾಸ್ತ್ರಾರ್ಥದಲ್ಲಿ ತೊಡಗಿ ಅಂತ್ಯದಲ್ಲಿ ತಾವೇ ಗೆದ್ದುದಾಗಿ ತೀರ್ಮಾನಿಸಿಕೊಳ್ಳುತ್ತಿದ್ದ ಕಾಲವದು. ಇಂತಹ ವಾದ-ವಾಗ್ವಾದಗಳು ಸಹಜವಾಗಿ ಬಹುತೇಕ ಪರಸ್ಪರ ಅಪಮಾನಜನಕ, ಅವಹೇಳನಕಾರಿ ಜಗಳಗಳಲ್ಲಿ ಪರ್ಯವಸಾನವಾಗುತ್ತಿದ್ದವು. ಆದರೆ ಹಜ್ರತ್ ಮಿರ್ಜಾ ಗುಲಾಂ ಅಹ್ಮದ್ ಇದಕ್ಕೊಂದು ಅಪವಾದವಾಗಿದ್ದರು. ಅವರು ಭಕ್ತರನ್ನು ತಮ್ಮ ಬಳಿ ಕರೆಸಿಕೊಂಡು ಭಗವತ್ ಪ್ರೇರಣೆಯಿಂದ ಆತನ ಕೃಪೆಗೆ ಪಾತ್ರರಾಗಬೇಕೆಂದು ಬೋಧಿಸುತ್ತಿದ್ದರು. ಅವರನ್ನು ನಂಬಿ ಬರುತ್ತಿದ್ದ ಸಹಸ್ರಾರು ಅನುಯಾಯಿಗಳು ಭಗವತ್ ಪ್ರೇರಣೆಯಿಂದ ಧನ್ಯರಾಗಿದ್ದಾರೆ. ಅಹ್ಮದೀಯ ಪಂತ ಮತ್ತು ಆರ್ಯಸಮಾಜದಲ್ಲಿ ಬಹಳಷ್ಟು ಸಾಮ್ಯಗಳಿವೆ ಎಂದು ಕೆನ್ನೆತ್ ಜೋನ್ಸ್ ಬರೆಯುತ್ತಾರೆ. ಆರ್ಯಸಮಾಜದಂತೆ ಅಹ್ಮದೀಯರೂ ಸಾಂಪ್ರದಾಯಿಕ ಇಸ್ಲಾಮನ್ನು ಆಧುನಿಕೀಕರಿಸಲು ಪ್ರಯತ್ನಿಸುತ್ತಿದ್ದರು. ಕ್ರಿಸ್ತ ಮತಾಂತರಿಗಳನ್ನು ಎದುರುಹಾಕಿಕೊಳ್ಳಲು ಹಿಂಜರಿಯುತ್ತಿರಲಿಲ್ಲ. ಮಿರ್ಜಾ ಗುಲಾಂ ಅಹ್ಮದ್ರವರು ತಮ್ಮನ್ನು ತಾವೇ ಇಸ್ಲಾಂನ ಕೊನೆಯ ಪ್ರವಾದಿ ಮತ್ತು ಕ್ರಿಸ್ತರ ಮಸೀಯ ಎಂದು ಕರೆದುಕೊಳ್ಳುತ್ತಾರೆ. ಮಿರ್ಜಾ ಅಹ್ಮದ್ರವರು ೧೮೭೯ರಲ್ಲಿ ಜನರನ್ನು ಮತಾಂತರಿಸಲು ಪ್ರಾರಂಭಿಸಿದರಾದರೂ ೧೮೮೦ರ ದಶಕದ ಅಂತ್ಯದವರೆಗೆ ಅದು ಪ್ರಭಾವಕಾರಿಯಾಗಿ ಬೆಳೆಯಲಿಲ್ಲ. ಅವರು ತಮ್ಮ ಆಕ್ರಮಣಕಾರಿ ಮತಾಂತರದ ಧೋರಣೆಯಿಂದ ಕ್ರಿಸ್ತ ಹಾಗೂ ಆರ್ಯಸಮಾಜದ ಕೆಂಗಣ್ಣಿಗೆ ಗುರಿಯಾದುದರಲ್ಲಿ ಅಚ್ಚರಿಯೇನಿಲ್ಲ.
ಹಜ್ರತ್ ಅಹ್ಮದ್ರವರು ಬೋಧಿಸುತ್ತಿದ್ದ ಇಸ್ಲಾಂನಲ್ಲಿ ಹುಳುಕನ್ನು ಕಂಡುಹಿಡಿಯಲು ಲೇಖರಾಮ್ ೧೮೮೬ರಲ್ಲಿ ಕಾದಿಯಾಂಗೆ ಭೇಟಿ ನೀಡುತ್ತಾರೆ. ಅದೊಂದು ಅವಸರದ ಭೇಟಿಯಾಗಿತ್ತು. ಅವರನ್ನು ಭೇಟಿಯಾದ ಹಜ್ರತ್ ಗುಲಾಂ ಅಹ್ಮದ್ರವರು ಲೇಖರಾಮ್ ಗಳಿಸುತ್ತಿದ್ದುದಕ್ಕಿಂತಲೂ ಎರಡರಷ್ಟು ಆದಾಯ ತಾವು ನೀಡುವುದಾಗಿಯೂ ಇನ್ನೂ ಕೆಲದಿನಗಳ ಕಾಲ ಅಲ್ಲಿ ಉಳಿದು ಭಗವತ್ ಅನುಗ್ರಹವನ್ನು ಕಾಣುವಂತೆ ಒತ್ತಾಯಿಸುತ್ತಾರೆ. ಇದಕ್ಕೆ ಲೇಖರಾಮ್ ಸಿದ್ಧರಿರಲಿಲ್ಲ. ಹಜ್ರತ್ ಮಿರ್ಜಾ ಗುಲಾಂ ಅಹ್ಮದ್ರವರು ಎರಡು ಗ್ರಂಥಗಳ ರಚನೆಯಲ್ಲಿ ತೊಡಗಿದ್ದರು. ‘ಬ್ರಹೈನ್ ಇ ಅಹ್ಮದೀಯ’ (Brahain I Ahmadiyya) ಎಂಬ ಪುಸ್ತಕ ಇಸ್ಲಾಂನ ಹಿರಿಮೆಯನ್ನು ಸಾರುವುದಾಗಿದ್ದರೆ ‘ಸುರ್ಮ ಚಸ್ಮೆ ಆರ್ಯ’ (Surma Chasme Arya) ಎಂಬ ಕೈ ಪುಸ್ತಕ ಆರ್ಯರ ಕಣ್ಣು ತೆರೆಸಲೆಂದು ಬರೆಯಲಾಗಿತ್ತು.
ಇದಕ್ಕುತ್ತರವಾಗಿ ಲೇಖರಾಮ್ರವರು ಬರೆದ ‘ತಕ್ಜೀಬ್ ಇ ಬುರಾಹಿನ್ ಅಹ್ಮದೀಯ’ (Takzeeb e Burahin Ahmadiyya) ಅಹ್ಮದೀಯರ ಸುಳ್ಳುಗಳ ಕಂತೆ ಎಂಬ ಪುಸ್ತಕದಲ್ಲಿ ಪ್ರವಾದಿ ಮೊಹಮ್ಮದ್ ಮತ್ತು ಹಜ್ರತ್ ಅಹ್ಮದ್ರನ್ನು ಅತೀವವಾಗಿ ನಿಂದಿಸಲಾಗುತ್ತದೆ. ಇದರಲ್ಲಿ ಬಳಸಲಾದ ಕೀಳುಮಟ್ಟದ ಕೊಳಕುಭಾಷೆಯನ್ನು ಒಬ್ಬ ಸಾಮಾನ್ಯ ಬರಹಗಾರನೂ ಬಳಸಲು ಇಚ್ಛಿಸುವುದಿಲ್ಲ ಎಂದು ಲೇಖಕ ಸೈಯದ್ ಹಸ್ನತ್ ಅಹ್ಮದ್ ಆಪಾದಿಸುತ್ತಾರೆ. ಇದರಿಂದ ಮನನೊಂದ ಹಜ್ರತ್ ಅಹ್ಮದ್ ಖಡ್ಗದ ಬದಲಿಗೆ ತಮ್ಮ ಲೇಖನಿಯ ಸಹಾಯದಿಂದ ‘ಇಸ್ಲಾಂನ ಯುದ್ಧ’ವನ್ನು ಘೋಷಿಸುತ್ತಾರೆ. ತಮ್ಮ ಇದುವರೆಗಿನ ಮತೀಯ ಅವಹೇಳನಕಾರಿ ಚಟುವಟಿಕೆಗಳಿಂದ ಮನತಣಿಯದ ಆರ್ಯ ಗೆಜೆಟ್ ೧೮೮೬ರ ಜುಲೈ ೨೭ರಂದು ಅಹ್ಮದ್ ಮುಂದಿನ ಮೂರು ವರ್ಷಗಳಲ್ಲಿ ಸಾವನ್ನಪ್ಪುತ್ತಾರೆ ಎಂದು ಸಾರುವ ಪ್ರಚೋದನಕಾರಿ ಕೈ ಪತ್ರವೊಂದನ್ನು ಪ್ರಕಟಿಸುತ್ತದೆ. ಅದೇ ವರ್ಷದ ಡಿಸೆಂಬರ್ ೩ರಂದು ಹಜ್ರತ್ ಮಿರ್ಜಾ ಗುಲಾಂ ಅಲಿಯವರನ್ನು ಕೊಲೆಗೈಯುವುದಾಗಿ ಬೆದರಿಸುವ ಅನಾಮಧೇಯ ಪತ್ರವೊಂದು ತಲಪುತ್ತದೆ. ಪತ್ರವನ್ನು ಬರೆದವರು ಯಾರು ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗದಂತೆ ಮಾಡಲು ಚಿಕ್ಕ ಮಗುವಿನ ಕೈ ಬರಹವನ್ನು ಬಳಸಲಾಗಿತ್ತಾದರೂ ಪತ್ರದ ಭಾಷೆ ಮಾತ್ರ ಈಗಾಗಲೆ ಪ್ರಕಟವಾಗಿದ್ದ ಕೈಪತ್ರದ ಭಾಷೆಗೆ ಹೋಲಿಕೆಯಾಗುವಂತಿತ್ತು.
ತಮ್ಮ ಪ್ರಚಾರವನ್ನು ಮುಂದುವರಿಸುವ ಪಂಡಿತ ಲೇಖರಾಮ್ರವರು ‘ಹುಜ್ಜತ್ ಉಲ್ ಇಸ್ಲಾಂ’ ಮತ್ತು ‘ಖಾಬ್ತೇಹ್ ಅಹ್ಮದೀಯ’ (Hujjat-ul-Islam and Khabteh-Ahmadiyya) ಎಂಬ ಮತ್ತೆರಡು ಪ್ರಚೋದನಕಾರಿ ಪುಸ್ತಕಗಳನ್ನು ಬರೆಯುತ್ತಾರೆ. ಎರಡನೆಯ ಪುಸ್ತಕದ ೩೨೪ನೇ ಪುಟದಲ್ಲಿ ಆತ ತಮ್ಮೊಂದಿಗೆ ಶಾಸ್ತ್ರಾರ್ಥಕ್ಕಾಗಿ ಬರುವಂತೆ ಹಜ್ರತ್ ಮಿರ್ಜಾ ಅಹ್ಮದ್ರವರು ನೀಡಿದ ಪಂಥಾಹ್ವಾನವನ್ನು ಸ್ವೀಕರಿಸುತ್ತ “ನಾಲ್ಕು ವೇದಗಳು ಪರಮ ಪವಿತ್ರ ಗ್ರಂಥಗಳಾಗಿವೆ. ಹುಟ್ಟು ಸಾವುಗಳಿಲ್ಲದ ಆತ್ಮ ಚಿರಾಯುವಾಗಿದೆ. ಭಗವಂತನು ಎಂದೂ ಯಾರೊಬ್ಬರ ಪಾಪವನ್ನು ಕ್ಷಮಿಸುವುದಿಲ್ಲ. ಇದಕ್ಕಾಗಿ ನಾನು ಮತ್ತೊಬ್ಬರ ಮಧ್ಯಸ್ಥಿಕೆಯಲ್ಲಿ ನಂಬಿಕೆ ಹೊಂದಿಲ್ಲ. ಎಲ್ಲ ಭಗವತ್ ಪ್ರೇರಣೆಗಳು ಆರ್ಯಧರ್ಮದಿಂದಲೇ ಲಭ್ಯವಾಗಿದ್ದು ಅದೊಂದು ವಿಶ್ವಗುರುವಾಗಿದೆ. ಆರ್ಯಧರ್ಮದ ಛತ್ರಛಾಯೆಯ ಹೊರಗೆ ಬರುತ್ತಾರೆ ಎನ್ನಲಾಗುವ ಒಂದುನೂರಾ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳಲ್ಲಿ ನನಗೆ ನಂಬಿಕೆಯಿಲ್ಲ. ತೋರಾಹ್, ಬೈಬಲ್ ಮತ್ತು ಕುರಾನ್ಗಳು ಮನುಷ್ಯನ ಸುಳ್ಳು ಸೃಷ್ಟಿಗಳಾಗಿದ್ದು ಲಾಲಸೆ, ಮೂರ್ಖತನ ಅಥವಾ ಖಡ್ಗದ ಮೇಲೆ ಆಧಾರಿತವಾಗಿವೆ” ಎಂದು ಬರೆಯುತ್ತಾರೆ.
ತಮ್ಮ ಜೀವಿತಕಾಲದಲ್ಲಿ ಪಂಡಿತ ಲೇಖರಾಮ್ ಒಟ್ಟಾರೆ ೩೨ ಪುಸ್ತಕಗಳನ್ನು ರಚಿಸಿರುತ್ತಾರೆ. ಮೇಲೆ ಉಲ್ಲೇಖಿಸಲಾದ ಪುಸ್ತಕಗಳಲ್ಲದೆ ಅವರು ‘ನುಷ್ಕ ಎ ಖಬ್ತ್ ಎ ಅಹ್ಮದೀಯ’ (Nushka e Khabt e Ahmadiya – ಅಹ್ಮದೀಯರ ಹುಚ್ಚುತನ), ‘ರದ್ದ್ ಎ ಖಿಲಾತ್ ಎ ಇಸ್ಲಾಂ’ (Radd e Khilaat e Islam – ಇಸ್ಲಾಮಿನ ಗೌರವ ನಿಲುವಂಗಿಯ ನಿರಾಕರಣೆ), ‘ಇಬ್ತಲ್ ಎ ಬಶರ್ತ್ ಅಹ್ಮದೀಯ’ (Ibtal e Bashart Ahmadiya – ಅಹ್ಮದೀಯರ ಹೇಳಿಕೆಗಳಿಗೆ ಪ್ರತ್ಯುತ್ತರ) ಎಂಬ ಕೃತಿಗಳನ್ನೂ ರಚಿಸಿದ್ದಾರೆ. ಆದರೆ ಅವರ ಇಸ್ಲಾಂವಿರೋಧಿ ಪುಸ್ತಕಗಳಲ್ಲಿ ಇಸ್ಲಾಮನ್ನು ಜಿಹಾದ್ ಮೂಲಕ ಸಂಪತ್ತು, ಸ್ತ್ರೀಯರು-ಮಕ್ಕಳು, ಗುಲಾಮರನ್ನು ಗಳಿಸುವ ಒಂದು ಹಿಂಸಾತ್ಮಕ, ದಬ್ಬಾಳಿಕೆಯ ಮತವೆಂದು ವರ್ಣಿಸುವ ‘ಜಿಹಾದ್ – ಮೊಹಮ್ಮದೀಯ ಮತದ ತಳಹದಿ’ ಬಹಳ ಮಹತ್ತ್ವದ್ದಾಗಿದೆ. ವಿಶ್ವದಾದ್ಯಂತ ಅದರಲ್ಲೂ ಮುಖ್ಯವಾಗಿ ಅದು ಭಾರತದಲ್ಲಿ ನಡೆಸಿದ ಕಗ್ಗೊಲೆ ಮತ್ತು ವಿನಾಶದ ಇತಿಹಾಸವನ್ನು ಬಿಚ್ಚಿಡುವ ಅವರ ಪುಸ್ತಕ ಮುಸ್ಲಿಮರನ್ನು ಕೆರಳುವಂತೆ ಮಾಡಿತ್ತು. ಲೇಖರಾಮ್ ತಮ್ಮ ಇಂತಹ ಕೃತಿಗಳಿಂದ ಸಾಂಪ್ರದಾಯಿಕ, ಅಹ್ಮದೀಯ ಹಾಗೂ ಸುಧಾರಣಾವಾದಿ ಮುಸಲ್ಮಾನರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಮುಂಬಯಿ ಮತ್ತು ಲಾಹೋರ್ಗಳ ನ್ಯಾಯಾಲಯಗಳಲ್ಲಿ ಅವರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿದರೆ ಮುಸ್ಲಿಂ, ಸಿಖ್ ಮತ್ತು ಕ್ರಿಸ್ತರ ಪತ್ರಿಕೆಗಳಲ್ಲಿ ಅವರ ಮೇಲೆ ಅವಿರತ ದಾಳಿ ಮುಂದುವರಿಯುತ್ತದೆ. ಇಸ್ಲಾಮನ್ನು ಕುರಿತು ಅವರು ಪ್ರಯೋಗಿಸುತ್ತಿದ್ದ ಭಾಷೆ ಆ ಸಮುದಾಯವನ್ನು ಕೆರಳುವಂತೆ ಮಾಡಿತ್ತು. ೧೮೯೬ರಲ್ಲಿ ಅನೇಕ ಮುಸಲ್ಮಾನರು ಸೇರಿ ನ್ಯಾಯಾಲಯದಲ್ಲಿ ಅವರ ವಿರುದ್ಧ ನೀಡಲಾದ ದೂರನ್ನು ನ್ಯಾಯಾಲಯ ವಜಾ ಮಾಡುತ್ತದೆ. ಆದರೆ ಇಂತಹ ಯಾವ ಬೆದರಿಕೆಗಳಿಗೂ ಬಗ್ಗದ ಲೇಖರಾಮ್ರವರನ್ನು ಮಣಿಸುವ ಒಂದೇ ಹಾದಿ ಎಂದರೆ ಅವರನ್ನು ಹಿಂಸೆಯಿಂದ ನಿವಾರಿಸುವುದೆಂಬುದನ್ನು ಮನಗಂಡ ವಿರೋಧಿಗಳು ೧೮೯೭ರ ಮಾರ್ಚ್ ೬ರಂದು ಅವರನ್ನು ದೈಹಿಕವಾಗಿ ಮುಗಿಸುತ್ತಾರೆ.
* * *
ಈ ಪ್ರಕರಣದಲ್ಲಿ ಪಂಡಿತ ಲೇಖರಾಮ್ ಮತ್ತು ಹಜ್ರತ್ ಮಿರ್ಜಾ ಅಹ್ಮದ್ ನಡುವೆ ನಡೆದಿದ್ದ ‘ಭವಿಷ್ಯವಾಣಿ’ಗಳ ಕಾದಾಟ ಮಹತ್ತ್ವದ ಪಾತ್ರ ವಹಿಸುತ್ತದೆ. ೧೮೮೬ರ ಫೆಬ್ರುವರಿ ೨೦ರಂದು ಸಾವನ್ನಪ್ಪುತ್ತಾರೆ ಎಂಬ ಭವಿಷ್ಯವನ್ನು ನುಡಿದಿದ್ದ ಹಜ್ರತ್ ಮಿರ್ಜಾ ಅಹ್ಮದ್ರು ಅದನ್ನು ೧೮೯೩ರ ಫೆಬ್ರುವರಿ ೨೦ರಂದು ಪುನರುಚ್ಚರಿಸುತ್ತಾರೆ.
೧೮೮೬ರ ಜುಲೈ ೨೭ರಂದು ಅಹ್ಮದ್ ಮುಂದಿನ ಮೂರು ವರ್ಷಗಳಲ್ಲಿ ಕಾಲರಾದಿಂದ ಸಾವನ್ನಪ್ಪುತ್ತಾರೆ ಎಂಬ ಭವಿಷ್ಯವಾಣಿಯನ್ನು ಆರ್ಯ ಗೆಜೆಟ್ನಲ್ಲಿ ಪ್ರಕಟಿಸಿದ್ದಾಗಿತ್ತು. ೧೮೯೩ರ ಫೆಬ್ರ್ರುವರಿ ೨೦ರಂದು ಹಜ್ರತ್ ಅಹ್ಮದ್, ಲೇಖರಾಮ್ ಅಂದಿನಿಂದ ಮುಂದಿನ ಆರು ವರ್ಷಗಳೊಳಗೆ ಈದ್ ಹಬ್ಬದ ದಿನಗಳಲ್ಲಿ ಕೊಲ್ಲಲ್ಪಡುತ್ತಾರೆ ಎಂದು ಭಗವಂತ ತಮಗೆ ತಿಳಿಸಿದುದಾಗಿ ನುಡಿಯುತ್ತಾರೆ. “ಇಸ್ಲಾಂ ವಿರುದ್ಧ ಲೇಖರಾಮ್ರ ದಾಳಿಗನುಗುಣವಾಗಿ ಅವರ ಶಿಕ್ಷೆಯೂ ಕಠೋರವಾಗಿರುತ್ತದೆ; ಅವರ ಸಾವು ಯಾವುದೇ ಕಾಯಿಲೆಯಿಂದ ಸಂಭವಿಸದೆ ಅವರ ಎಲ್ಲೆಮೀರಿದ ನಡಾವಳಿ ಅವರನ್ನು ವಿಚಿತ್ರ ಸದ್ದನ್ನು ಮಾಡುವ ಒಂದು ಅರೆ ಸತ್ತ ಕರುವಿನಂತೆ ಮಾಡುತ್ತದೆ” ಎಂಬುದಾಗಿ ಭಗವಂತ ತಮಗೆ ತಿಳಿಸಿದ್ದಾನೆ ಎಂದು ತಮ್ಮ ಪುಸ್ತಕ “ಕರಾಮಾತ್ ಉಸ್ ಸಾದಿಕೀನ್” (Karamat-us-Sadiqeen)ನಲ್ಲಿ ಸಾರುತ್ತಾರೆ. ಆದರೆ ಇದಕ್ಕೆ ಕಿವಿಗೊಡದ ಲೇಖರಾಮ್ ನಿರಾತಂಕವಾಗಿ ತಮ್ಮ ಇಸ್ಲಾಂ/ಪ್ರವಾದಿ ಮೊಹಮ್ಮದ್ ವಿರೋಧಿ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ. “ನಿರಂತರವಾಗಿ ತಮ್ಮ ಕಟುವಾದ ಭಾಷೆಯಿಂದ ಲೇಖರಾಮ್ ಹಚ್ಚಿಸಿದ ಹಿಂಸೆಯ ಕಿಡಿ ಅಂತ್ಯದಲ್ಲಿ ಹಜ್ರತ್ ಅಹ್ಮದ್ ಭವಿಷ್ಯವಾಣಿಯನ್ನು ನಿಜವೆಂದು ರೂಪಿಸುವಲ್ಲಿ ಪರ್ಯವಸಾನವಾಯಿತು.’’
ಕೆಲವರು ಹಜ್ರತ್ ಭವಿಷ್ಯವಾಣಿಯನ್ನು ಒಂದು ‘ಕಾಕತಾಳೀಯ’ವೆಂದು ಹೀಗಳೆದಾಗ ಹಜ್ರತ್ “ಶಕ್ತಿಯಿದ್ದರೆ ಪಂಡಿತ ಲೇಖರಾಮ್ ಸಹಿತ ತಮ್ಮ ಬಗ್ಗೆ ಇಂತಹದ್ದೊಂದು ಭವಿಷ್ಯವಾಣಿಯನ್ನು ನುಡಿಯಲಿ” ಎಂದು ಸವಾಲು ಹಾಕುತ್ತಾರೆ. ಇದೊಂದು ಸುಲಭದ ಮಾರ್ಗವಾಗಿತ್ತು. ಏಕೆಂದರೆ ಆಗಿನ್ನೂ ಮೂವತ್ತು ವರ್ಷದ ಯುವಕನಾಗಿದ್ದ ಲೇಖರಾಮ್, ಐವತ್ತು ವರ್ಷದ ವಯಸ್ಸನ್ನು ದಾಟಿದ್ದ ಹಜ್ರತ್ ಅಹ್ಮದ್ರವರು ಇನ್ನು ಹತ್ತು ವರ್ಷಗಳಲ್ಲಿ ಕೊನೆಗಾಣುತ್ತಾರೆ ಎಂದು ಭವಿಷ್ಯ ನುಡಿದರೂ ಅದು ಸತ್ಯವಾಗುವ ಸಾಧ್ಯತೆ ಇತ್ತು. ಮೂವತ್ತು ವರ್ಷದ ವ್ಯಕ್ತಿಯ ಸಾವನ್ನು ಇನ್ನು ಆರು ವರ್ಷಗಳಲ್ಲಿ ನಿರೀಕ್ಷಿಸುವುದಕ್ಕಿಂತಲೂ ಅರವತ್ತು ವರ್ಷದ ವ್ಯಕ್ತಿಯ ಸಾವನ್ನು ನಿರೀಕ್ಷಿಸುವುದು ಸುಲಭವಾಗಿತ್ತು. ಇಂತಹ ಟೀಕೆಗಳ ಬಾಯಿ ಮುಚ್ಚಿಸಲು ಮತ್ತೊಂದು ಪುಸ್ತಕವನ್ನು ಬರೆಯುವುದರಲ್ಲಿ ತೊಡಗಿದ್ದ ಹಜ್ರತ್ ಅಹ್ಮದ್ ೧೮೯೩ರ ಏಪ್ರಿಲ್ ೨೩ರಂದು ಮತ್ತೊಂದು ಭವಿಷ್ಯವಾಣಿಯನ್ನು ನುಡಿಯುತ್ತಾರೆ.
ತಮ್ಮ ‘ಬರಕತುದೂವ’ (Barakatudooa) ಎಂಬ ಪುಸ್ತಕದಲ್ಲಿ ‘ಲೇಖರಾಮ್ ಪೇಶಾವರಿಯ ಬಗ್ಗೆ ಮತ್ತೊಂದು ಸುದ್ದಿ’ ಎಂಬ ಶೀರ್ಷಿಕೆಯಲ್ಲಿ “ಇಂದು ಎಂದರೆ ೧೮೯೩ರ ಏಪ್ರಿಲ್ ೨ರಂದು ಮುಂಜಾನೆ ನಾನು ತೂಕಡಿಸುತ್ತಿದ್ದೆ. ನಾನೊಂದು ವಿಶಾಲವಾದ ಮನೆಯಲ್ಲಿದ್ದಂತೆ ಕಂಡುಬಂದಿತು. ಇದ್ದಕ್ಕಿದ್ದಂತೆ ದೈತ್ಯಾಕಾರದ ಭೀಕರ ವ್ಯಕ್ತಿಯೊಬ್ಬ ನನ್ನ ಮುಂದೆ ನಿಂತಂತೆ ಕಂಡಿತು. ಆತನ ಮುಖವನ್ನು ಅವಲೋಕಿಸಿದ ನನಗೆ ಆತನಲ್ಲಿ ಬೇರೊಂದು ಸೃಷ್ಟಿಯ ಲಕ್ಷಣಗಳು ಕಂಡುಬರುತ್ತವೆ. ಆತನೊಬ್ಬ ಮಾನವನಾಗಿರದೆ ದೇವಮಾನವನೋ ಎಂಬ ಭಾವ ಉದಯಿಸಿತು. ಆತ ನನ್ನ ಮುಖವನ್ನು ನೋಡುತ್ತ ‘ಆ ಲೇಖರಾಮ್ ಎಲ್ಲಿದ್ದಾನೆ?’ ಎಂದು ಕೇಳುತ್ತಾನೆ. ಆತ ಲೇಖರಾಮ್ನ ಹೆಸರಿನೊಂದಿಗೆ ಮತ್ತೊಂದು ಹೆಸರನ್ನು ಹೇಳಿದನಾದರೂ ಆ ಎರಡನೆಯ ಹೆಸರು ನನ್ನ ಸ್ಮೃತಿಯಲ್ಲಿ ಉಳಿಯಲಿಲ್ಲ. ಈತನನ್ನು ಭಗವಂತನೇ ಲೇಖರಾಮ್ನನ್ನು ಶಿಕ್ಷಿಸಲು ಕಳುಹಿಸಿದ್ದಾನೆ ಎಂಬುದು ನನಗೆ ಥಟ್ಟನೆ ಹೊಳೆಯಿತು. ಆ ಮತ್ತೊಬ್ಬ ವ್ಯಕ್ತಿಯ ಬಗ್ಗೆ ನಾನು ಈಗಾಗಲೇ ಒಂದು ಕರಪತ್ರವನ್ನು ಹೊರಡಿಸಿದ್ದೇನೆ ಎಂಬ ಅಂಶ ನನಗೆ ಹೊಳೆಯಿತು’’ ಎಂದು ವಿಶದೀಕರಿಸುತ್ತಾರೆ. ಇದಾದ ಐದು ತಿಂಗಳುಗಳ ನಂತರ ಎಂದರೆ ೧೮೯೩ರ ಆಗಸ್ಟ್ ೨೪ರಂದು ಹಜ್ರತ್ ಮತ್ತೊಂದು ದೃಶ್ಯವನ್ನು ಕಂಡಿರುವುದಾಗಿ ತಿಳಿಸುತ್ತಾರೆ. ತಮ್ಮ ಪುಸ್ತಕ ‘ಕರಾಮಾತ್ ಉಸ್ ಸಾದಿಕೀನ್’ (Karamat-us-Sadiqeen)ನಲ್ಲಿ “ಭಗವಂತನು ನನಗೆ ಮತ್ತೊಂದು ಸಿಹಿ ಸುದ್ದಿಯನ್ನು ಕರುಣಿಸಿ ಈದ್ ಹಬ್ಬದ ಸಮೀಪದಲ್ಲಿ ನಾನದನ್ನು ಕಾಣಲಿದ್ದೇನೆ ಎಂದು ತಿಳಿಸಿದ್ದಾನೆ. ಭಗವಂತ ಮತ್ತು ಪ್ರವಾದಿಯವರನ್ನು ತನ್ನ ಅಶ್ಲೀಲ ಭಾಷೆಯಿಂದ ಹೀಗಳೆಯುತ್ತಿರುವ ಲೇಖರಾಮ್ ಪೇಶಾವರಿ ಎಂಬ ಶತ್ರುವಿನ ವಿರುದ್ಧ ನನ್ನ ಪ್ರಾರ್ಥನೆಯನ್ನು ಮನ್ನಿಸಿ ಆತ ಇನ್ನು ಆರು ವರ್ಷಗಳಲ್ಲಿ ಸಾವನ್ನಪ್ಪಲಿದ್ದಾನೆ ಎಂದು ಭರವಸೆ ನೀಡಿದ.’’
ಮೇಲ್ಕಂಡ ಭವಿಷ್ಯವಾಣಿಯಿಂದ ನಾಲ್ಕು ಅಂಶಗಳು ಸ್ಪಷ್ಟಗೊಳ್ಳುತ್ತವೆ. ೧. ಲೇಖರಾಮ್ ಒಂದು ಮಾರಣಾಂತಿಕ ವಿಪತ್ತನ್ನು ಎದುರಿಸಲಿದ್ದಾರೆ. ೨. ಇದು ಮೊದಲ ಭವಿಷ್ಯವಾಣಿ ನುಡಿದ ದಿನದಿಂದ (೧೮೯೩ ಫೆಬ್ರುವರಿ ೨೦) ಮುಂದಿನ ಆರು ವರ್ಷಗಳೊಳಗೆ ಜರುಗಲಿದೆ. ೩. ಇದು ಈದ್ ಹಬ್ಬದ ದಿನಗಳಲ್ಲಿ ನಡೆಯಲಿದೆ ೪. ಲೇಖರಾಮ್ (ಮೋಸೆಸ್ನ ಯಹೂದಿಗಳ) ಅರೆಸತ್ತ ಕರುವಿನಂತೆ ವಿನಾಶವನ್ನು ಎದುರಿಸಲಿದ್ದಾನೆ.
ಪಂಜಾಬ್ನ ಮುಸಲ್ಮಾನರು ೧೮೯೭ರ ಮಾರ್ಚ್ ೬ರಂದು ಈದ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಅಂದು ಲೇಖರಾಮ್ ಲಾಹೋರ್ ನಗರದ ಮಧ್ಯಭಾಗದಲ್ಲಿರುವ ವಾಚ್ಚುವಾಲಿ ಬೀದಿಯಲ್ಲಿದ್ದ ತಮ್ಮ ಮನೆಯಲ್ಲಿದ್ದರು. ಅವರೊಂದಿಗೆ ಅಂದಿನ ದಿನಗಳಲ್ಲಿ ಸಂಸ್ಕೃತ ಕಲಿಯಲು ಬಂದಿದ್ದ ಶಿಷ್ಯನೊಬ್ಬ ಅವರ ಮನೆಯ ಕೋಣೆಯಲ್ಲಿರುತ್ತಾನೆ. ಒಂದು ಸಂಜೆ ಲೇಖರಾಮ್ರವರ ತಾಯಿ ಮತ್ತು ಪತ್ನಿ ಮನೆಯ ಹೊರಗಿನ ಅಂಗಳದಲ್ಲಿರುವಾಗ ಇದ್ದಕ್ಕಿದ್ದಂತೆ ಚೀತ್ಕರಿಸುವ ಸದ್ದು ಕೇಳಿಬರುತ್ತದೆ. ಗಾಬರಿಗೊಂಡ ತಾಯಿ ಮತ್ತು ಪತ್ನಿಯರಿಬ್ಬರೂ ಮನೆಯೊಳಕ್ಕೆ ಧಾವಿಸಿದಾಗ ಕೋಣೆಯಲ್ಲಿ ಲೇಖರಾಮ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಹೊಟ್ಟೆಗೆ ಚಾಕುವಿನ ಇರಿತದಿಂದಾದ ಗಾಯದಿಂದ ತಮ್ಮ ಕರುಳು ಹೊರಬೀಳದಂತೆ ಹಿಡಿದುಕೊಂಡಿದ್ದ ಅವರು ವಿಲವಿಲ ಒದ್ದಾಡುತ್ತಿದ್ದರು. ಅವರ ಶಿಷ್ಯನಂತೆ ವೇಷ ಧರಿಸಿದ್ದ ಕೊಲೆಗಾರ ಮಾತ್ರ ಅಲ್ಲಿರಲಿಲ್ಲ. ಮನೆಗಿದ್ದ ಒಂದೇ ಬಾಗಿಲಿನಿಂದ ಕೊಲೆಗಾರ ಓಡಿಹೋದದ್ದನ್ನು ತಾವು ಗಮನಿಸಲಿಲ್ಲ ಎಂದು ಲೇಖರಾಮ್ರವರ ತಾಯಿ ಮತ್ತು ಪತ್ನಿ ಇಬ್ಬರೂ ತಿಳಿಸುತ್ತಾರೆ. ‘ಶುದ್ಧೀಕರಣ’ಕ್ಕಾಗಿ ತಮ್ಮ ಬಳಿ ಬಂದಿದ್ದ ವ್ಯಕ್ತಿಯೇ ತಮ್ಮನ್ನು ಇರಿದದ್ದಾಗಿ ಲೇಖರಾಮ್ ತಮ್ಮ ಸಾವಿನ ಹೇಳಿಕೆಯನ್ನು ನೀಡುತ್ತಾರೆ.
ಕೊಲೆಗಾರನ ರಹಸ್ಯ ಆಳವಾಗುತ್ತಿದ್ದಂತೆ ಸ್ಥಳೀಯ ಪತ್ರಿಕೆಗಳಲ್ಲಿ ವಾದ-ವಿವಾದಗಳ ಸುಳಿಗಳು ಸುತ್ತಿಕೊಳ್ಳತೊಡಗಿದವು. ಇರಿತದ ಸಮಯದಲ್ಲಿ ಲೇಖರಾಮ್ ಬೆತ್ತಲೆ ಇದ್ದರೆಂದು ಬರೆಯುವ ‘ರಹ್ಬಾರ್ ಇ ಹಿಂದ್’ (Rahbar-i-Hind) ಎಂಬ ಲಾಹೋರ್ನ ಪತ್ರಿಕೆಯೊಂದು ಮತ್ತೊಬ್ಬ ಮಹಿಳೆಯೊಂದಿಗೆ ಅವರಿಗಿದ್ದ ಅಕ್ರಮ ಸಂಬಂಧವೇ ಅವರ ಕೊಲೆಗೆ ಕಾರಣ ಎಂದು ಬರೆಯುತ್ತದೆ. ಆದರೆ ಲೇಖರಾಮ್ ಸಂಧ್ಯಾವಂದನೆಗಾಗಿ ಅರೆ ಬೆತ್ತಲೆ ಎಂದರೆ ಮೈ ಮೇಲಿನ ಅಂಗವಸ್ತ್ರವನ್ನು ತೆಗೆದಿದ್ದರೆಂಬುದು ವಾಸ್ತವ ಸಂಗತಿ ಇರಬಹುದೆ? ತಮ್ಮ ಮನೆಯ ಮಹಡಿಯ ಮೇಲೆ ಸಂಧ್ಯಾವಂದನೆ ಮುಗಿಸಿದ ಲೇಖರಾಮ್ ತಮ್ಮ ಆಯಾಸವನ್ನು ನೀಗಿಸಲು ಎರಡೂ ತೋಳುಗಳನ್ನು ಮೇಲಕ್ಕೆತ್ತಿ ಮೈಯನ್ನು ಹಿಂದಕ್ಕೆ ಬಾಗಿಸಿ ಮೈ ಮುರಿಯುತ್ತಿದ್ದಾಗ ಮರುದಿನ ಎಂದರೆ ಭಾನುವಾರದಂದು ಇಸ್ಲಾಂನಿಂದ ಹೊಸತಾಗಿ ಶುದ್ಧೀಕರಣಗೊಳ್ಳಲಿರುವ ಶಿಷ್ಯ ಅವರ ಬೊಜ್ಜು ಹೊಟ್ಟೆಗೆ ತನ್ನ ಕೈಯ್ಯಲ್ಲಿದ್ದ ಹರಿತವಾದ ಚೂರಿಯನ್ನು ತೂರಿಸುತ್ತಾನೆ. ಅಚ್ಚರಿಯ ಸಂಗತಿಯೆಂದರೆ ಲೇಖರಾಮ್ರಂತಹ ಖ್ಯಾತ ವ್ಯಕ್ತಿಯ ಜೊತೆ ಮೂರು ವಾರಗಳಿಂದ ಓಡಾಡುತ್ತಿದ್ದ ಈ ಆಷಾಢಭೂತಿ ಶಿಷ್ಯನ ಹೆಸರು ಲೇಖರಾಮ್ ಪತ್ನಿ, ತಾಯಿಯೂ ಸೇರಿದಂತೆ ಯಾರಿಗೂ ತಿಳಿದಿರಲಿಲ್ಲ.
ಪಂಡಿತ ಲೇಖರಾಮ್ರ ಅಮಾನುಷ ಕೊಲೆ ಆರ್ಯ ಸಮಾಜದ ಇತರ ಕಾರ್ಯಕರ್ತರಲ್ಲಿ ತಳಮಳ ಹಾಗೂ ಭೀತಿಯನ್ನುಂಟು ಮಾಡುತ್ತದೆ. ಅವರೆಲ್ಲರ ಕಣ್ಣುಗಳು ಈಗ ಹಜ್ರತ್ ಮಿರ್ಜಾ ಅಹ್ಮದ್ರವರತ್ತ ತಿರುಗುತ್ತವೆ. ತಮ್ಮ ಭವಿಷ್ಯವಾಣಿಯನ್ನು ನಿಜ ಮಾಡಲು ಹಜ್ರತ್, ಪಂಡಿತ ಲೇಖರಾಮ್ರವರ ಕೊಲೆಯನ್ನು ಮಾಡಿಸಿದ್ದಾರೆ ಎಂಬ ಆರೋಪ ದಟ್ಟವಾಗಿ ಕೇಳಿಬರತೊಡಗಿತು. ಲೇಖರಾಮ್ರಿಗೆ ಒದಗಿದ ಸ್ಥಿತಿ ತಮಗಾರಿಗೂ ಉಂಟಾಗದಂತೆ ಎಚ್ಚರ ವಹಿಸಬೇಕೆಂಬ ಕಿವಿಮಾತು ಎಲ್ಲರಿಗೂ ಹೇಳಲಾಯಿತು. ೧೮೯೩ರಲ್ಲಿ ಹಜ್ರತ್ ಮಾಡಲಾಗಿದ್ದ ಭವಿಷ್ಯವಾಣಿಯಲ್ಲಿ ಮುಂದಿನ ಆರು ವರ್ಷಗಳಲ್ಲಿ ಎಂದರೆ ೧೮೯೯ರವರೆಗೆ ಲೇಖರಾಮ್ರ ಜೀವಕ್ಕೆ ಅಪಾಯ ಒದಗುವ ಸಂಭವವಿದ್ದುದರಿAದ ತಮ್ಮ ಭವಿಷ್ಯವಾಣಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಇನ್ನೂ ಎರಡು ವರ್ಷಗಳ ಕಾಲಾವಕಾಶ ಇದ್ದುದರಿಂದ ಹಜ್ರತ್ ಕೊಲೆಗೈದಿರುವ ಸಾಧ್ಯತೆ ಕಂಡುಬರುವುದಿಲ್ಲ ಎಂಬ ವಾದ ಎಲ್ಲೆಡೆ ಪ್ರಾರಂಭಗೊಳ್ಳುತ್ತದೆ. ಆರ್ಯಸಮಾಜದವರ ಆಪಾದನೆಗಳನ್ನು ಪರಿಶೀಲಿಸಲು ಪೊಲೀಸರು ಹಜ್ರತ್ ಅಹ್ಮದ್ರ ಮನೆಯ ಮೇಲೆ ದಾಳಿ ಮಾಡುತ್ತಾರೆ. ಆದರೆ ಅವರಿಗೆ ಯಾವ ಸಾಕ್ಷ್ಯಾಧಾರಗಳೂ ಲಭ್ಯವಾಗಲಿಲ್ಲ.
ಆರ್ಯಸಮಾಜದವರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಲೇಖರಾಮ್ರ ಕೊಲೆಯ ಭವಿಷ್ಯವಾಣಿಯನ್ನು ನುಡಿದಿದ್ದ ಹಜ್ರತ್ ಈಗ ಅವರ ಕೊಲೆಗಾರ ಯಾರೆಂಬುದನ್ನು ತಮ್ಮ ಭಗವಂತನನ್ನು ಕೇಳಿ ಜಗತ್ತಿಗೆ ತಿಳಿಸಲಿ ಎಂದು ಸವಾಲನ್ನೆಸೆಯುತ್ತಾರೆ. ಸರಕಾರ ಕೊಲೆಗಾರನ ಬಗ್ಗೆ ಸುಳಿವು ನೀಡಿದವರಿಗೆ ೨೦,೦೦೦ ರೂಪಾಯಿ ಬಹುಮಾನವನ್ನು ಘೋಷಿಸುತ್ತದೆ. ಆನಂತರದಲ್ಲಿ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಯಿತಲ್ಲದೆ ಕೊಲೆಗಾರ ಸ್ವತಃ ಬಂದು ಶರಣಾದರೆ ಆತನಿಗೆ ಕ್ಷಮಾದಾನ ನೀಡುವ ಆಶ್ವಾಸನೆಯನ್ನೂ ನೀಡಲಾಯಿತು. ಇದರ ಮುಖ್ಯ ಉದ್ದೇಶ ಕೊಲೆಗಾರನಿಗೆ ಶಿಕ್ಷೆ ನೀಡುವುದಾಗಿರದೆ ಹಜ್ರತ್ ಗುಲಾಮ್ ಅಜ್ಮದ್ ಮುಖಕ್ಕೆ ಮಸಿ ಬಳೆಯುವುದಾಗಿತ್ತಲ್ಲದೆ ಅದೊಂದು ದೈವಪ್ರೇರಿತ ಕಾರ್ಯವಾಗಿರದೆ ಬಹಳ ಎಚ್ಚರಿಕೆಯಿಂದ ಹೆಣೆಯಲಾಗಿದ್ದ ಒಂದು ಷಡ್ಯಂತ್ರ ಎಂದು ನಿರೂಪಿಸುವುದಾಗಿತ್ತು.
ಪಂಡಿತ ಲೇಖರಾಮ್ರ ಕೊಲೆಗೆ ಪ್ರತೀಕಾರವಾಗಿ ಲಾಹೋರ್, ಅಮೃತಸರ್, ಬಟಾಲ ಮತ್ತು ಗುಜ್ರನ್ವಾಲಗಳ ಕೆಲವು ವ್ಯಕ್ತಿಗಳು ಸೇರಿ ರಹಸ್ಯ ಷಡ್ಯಂತ್ರವೊಂದನ್ನು ರಚಿಸುತ್ತಾರೆ. ಅದರ ಪ್ರಕಾರ ೨೦,೦೦೦ ರೂಪಾಯಿಗಳನ್ನು ನೀಡಿ ಒಬ್ಬ ಕೊಲೆಗಾರನನ್ನು ಬಾಡಿಗೆಗೆ ತೆಗೆದುಕೊಂಡು ಆತನ ಮೂಲಕ ಹಜ್ರತ್ ಅಹ್ಮದ್ ಕೊಲೆ ಮಾಡುವ ಉದ್ದೇಶ ಅವರದಾಗಿತ್ತು. ೧೮೯೭ರ ಮಾರ್ಚ್ ೧೮ರ ಸಂಚಿಕೆಯಲ್ಲಿ ‘ಅಫ್ತಾಬ್ ಇ ಹಿಂದ್’ ಎಂಬ ಪತ್ರಿಕೆಯೊಂದರಲ್ಲಿ ಬಶೀಶರ್ ದಾಸ್ (Basheshar Das – ಬಿಶ್ವೇಶ್ವರದಾಸ್) ಎಂಬಾತ ‘ಮಿರ್ಜಾ ಕಾದಿಯಾನಿ ಖಬರ್ದಾರ್’ ಎಂಬ ಶೀರ್ಷಿಕೆಯಲ್ಲಿ ಬರೆದ ಲೇಖನ ಪ್ರಕಟವಾಗುತ್ತದೆ. ‘ರಾಹ್ಬರ್ ಹಿಂದ್’ ಎಂಬ ಮತ್ತೊಂದು ಪತ್ರಿಕೆಯಲ್ಲಿ ಮಾರ್ಚ್ ೧೫ರಂದು ಇಂತಹ ಮತ್ತೊಂದು ಎಚ್ಚರಿಕೆ ಪ್ರಕಟಗೊಳ್ಳುತ್ತದೆ. ಇಂತಹ ಬೆದರಿಕೆಗಳ ಹೊರತಾಗಿಯೂ ಮುಂದಿನ ಹನ್ನೊಂದು ವರ್ಷಗಳವರೆಗೆ ಅಹ್ಮದ್ ತಮ್ಮ ಜೀವನವನ್ನು ಸಾಫಲ್ಯಪೂರ್ಣವಾಗಿ ಜೀವಿಸುತ್ತಾರೆ. ಅಹ್ಮದ್ಗೆ ಸುಮಾರು ೧೭ ವರ್ಷಗಳ ಹಿಂದೆಯೇ ಇಂತಹ ಪ್ರಯತ್ನಗಳು ನಡೆಯಲಿವೆ ಎಂಬ ವಿಚಾರ ತಿಳಿದಿತ್ತಾದರೂ ಭಗವಂತ ಅವರನ್ನು ರಕ್ಷಿಸಲಿದ್ದಾನೆ ಎಂಬ ಭರವಸೆಯೂ ದೊರಕಿತು.
ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಲೇಖರಾಮ್ ಕೊಲೆಗೆ ಕೆಲದಿನಗಳ ಮೊದಲು ಅವರ ವಿಳಾಸವನ್ನು ತಿಳಿಸುವಂತೆ ಮುಂಬಯಿಯಿಂದ ತಂತಿ ಸಂದೇಶವೊಂದು ಬಂದಿತ್ತು ಎಂಬ ಮತ್ತೊಂದು ಆಸಕ್ತಿಕರ ಸಂಗತಿ ಹೊರಬರುತ್ತದೆ. ಒಂದೆಡೆ ಹಜ್ರತ್ ಮಿರ್ಜಾ ಅಹ್ಮದ್ ಭವಿಷ್ಯವಾಣಿ, ಮತ್ತೊಂದೆಡೆ ಇಂತಹ ಸಂಶಯಾತ್ಮಕ ತಂತಿ ಸಂದೇಶವೊಂದು ಬಂದಾಗ್ಯೂ ಲೇಖರಾಮ್ರಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಏಕೆ ಕೋರಲಾಗಲಿಲ್ಲ ಎಂಬ ಪ್ರಶ್ನೆ ಏಳುತ್ತದೆ. ಅಬ್ದುಲ್ಲ ಆಥಮ್ ಎಂಬಾತನ ಬಗ್ಗೆಯೂ ಹಜ್ರತ್ ಇಂತಹ ಭವಿಷ್ಯವಾಣಿಯನ್ನು ಮಾಡಿದ್ದರ ವಿರುದ್ಧ ಕ್ರಿಸ್ತ ಸಮುದಾಯದವರು ಅಬ್ದುಲ್ಲ ಆಥಮ್ಗೆ ರಕ್ಷಣೆ ನೀಡಲು ಮುಂದಾಗಿದ್ದರು. ‘ಚೌದವೀಂ ಸದಿ’ಎಂಬ ಪತ್ರಿಕೆ ತನ್ನ ೧೮೯೭ರ ಮಾರ್ಚ್ ೨೩ರ ಸಂಚಿಕೆಯಲ್ಲಿ “ಲೇಖರಾಮ್ರಿಗೆ ಕೆಲವೇ ದಿನಗಳಲ್ಲಿ ತಮ್ಮ ಕೊಲೆಯಾಗಲಿದೆ ಎಂಬ ಮುನ್ನೆಚ್ಚರಿಕೆಯನ್ನು ನೀಡಲಾಗಿತ್ತಾದರೂ ಅವರು ಮತ್ತು ಅವರ ಅನುಯಾಯಿಗಳು ಹಜ್ರತ್ ಅಹ್ಮದ್ ಮೇಲೆ ಕಣ್ಣಿಡುವಂತೆ ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಲಿಲ್ಲವೇಕೆ?’’ ಎಂದು ಪ್ರಶ್ನಿಸಿತ್ತು.
ಕೊಲೆಯಾದ ದಿನ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಲೇಖರಾಮ್ ಕೊಲೆಯಾದ ಕೋಣೆಯನ್ನು ಪರಿಶೀಲಿಸುತ್ತಾರೆ. ಮನೆಗೆ ಒಂದೇ ಬಾಗಿಲಿದ್ದುದರಿಂದ ಹೊರಗಡೆ ಇದ್ದ ತಾಯಿ ಮತ್ತು ಪತ್ನಿಯ ಕಣ್ಣುತಪ್ಪಿಸಿ ಕೊಲೆಗಾರ ಹೇಗೆ ಕಣ್ಮರೆಯಾದ ಎಂಬ ರಹಸ್ಯವನ್ನು ಯಾರೂ ಭೇದಿಸಲಾರದೆ ಹೋದರು. ಮೃತ್ಯುಶಯ್ಯೆಯಲ್ಲಿದ್ದ ಲೇಖರಾಮ್ ಅವರನ್ನು ಅನಾರ್ಕಲಿಯಲ್ಲಿದ್ದ ಮೇಯೊ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅತೀವ ನೋವಿನಿಂದ ಬಳಲುತ್ತಿದ್ದ ಅವರಿಗೆ ಅಲ್ಲಿ ಡಾ. ಮಿರ್ಜಾ ಯಾಕುಬ್ ಬೇಗ್ ಮತ್ತು ಲೆಫ್ಟಿನೆಂಟ್ ಕರ್ನಲ್ ಎಫ್. ಪರ್ರಿ ಚಿಕಿತ್ಸೆ ನೀಡುತ್ತಾರೆ. ಬಳಿಕ ಅವರು ಆರು ಗಂಟೆಗಳು ಬದುಕಿದ್ದರು. ತಮ್ಮ ಮರಣಶಯ್ಯೆಯಲ್ಲಿ ಅವರು ಕೊಲೆಗಾರನ ಬಗ್ಗೆ ತಿಳಿಸಿದರಾದರೂ ಹಜ್ರತ್ ಅಹ್ಮದ್ ಬಗ್ಗೆ ಅನುಮಾನ ವ್ಯಕ್ತಪಡಿಸಲಿಲ್ಲ ಎಂದು ಹೇಳಲಾಗುತ್ತದೆ. ಡಾ. ಮಿರ್ಜಾ ಯಾಕುಬ್ ಬೇಗ್ ತಾವು ಹಜ್ರತ್ ಅಹ್ಮದ್ರ ಅನುಯಾಯಿ ಎಂದು ತಿಳಿದಾಗ್ಯೂ ಲೇಖರಾಮ್ ತಮ್ಮ ಗುರುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಲಿಲ್ಲ ಎಂದು ಹೇಳಿಕೊಳ್ಳುತ್ತಾರೆ.
ಇಲ್ಲಿ ಕುತೂಹಲಕಾರಿ ಸಂಗತಿ ಎಂದರೆ ಲೇಖರಾಮ್ರಿಗೆ ಇರಿದ ಸಮಯದಿಂದ ಅವರ ಸಾವಿನವರೆಗೆ ಜೊತೆಗಿದ್ದ ಪೊಲೀಸರು ಅವರ ಅಂತಿಮ ಹೇಳಿಕೆಯನ್ನು ದಾಖಲಿಸಿಕೊಳ್ಳಲಿಲ್ಲ. ಕೊಲೆಯಾದ ದಿನ ರಾತ್ರಿ ಪೊಲೀಸರು ಲೇಖರಾಮ್ ಅವರ ಮನೆಯ ನೆರೆಹೊರೆಯಲ್ಲಿ ತೀವ್ರವಾಗಿ ಶೋಧನೆ ನಡೆಸಿದರಾದರೂ ಕೊಲೆಗಾರನ ಬಗ್ಗೆ ಯಾವುದೇ ಸುಳಿವು ದೊರಕಲಿಲ್ಲ.
ಈದ್ ಹಬ್ಬದಂದು ಲೇಖರಾಮ್ರನ್ನು ಕೊಲೆಗೈದ ಕೊಲೆಗಾರ ಅಂತ್ಯದವರೆಗೂ ಅಜ್ಞಾತನಾಗಿ ಉಳಿಯುತ್ತಾನೆ. ಸಾಂಪ್ರದಾಯಿಕ ಹಿಂದು, ಸಿಖ್ ಮತ್ತು ಮುಸಲ್ಮಾನ ಎಲ್ಲ ಪಂಗಡಗಳನ್ನು ಬೈದು, ಕಟುವಾಗಿ ಟೀಕಿಸುತ್ತಿದ್ದ ಪಂಡಿತ ಲೇಖರಾಮ್ರನ್ನು ಯಾವುದೇ ಸಮುದಾಯಕ್ಕೆ ಸೇರಿದ ಕೊಲೆಗಾರ ಕೊಲೆಗೈದಿರುವ ಸಾಧ್ಯತೆಯಿದೆ. ಈ ಕೊಲೆಗೆ ಮತ್ತೊಬ್ಬರು ಕಾರಣ ಎಂದು ಮೇಲ್ಕಂಡ ಎಲ್ಲ ಸಮುದಾಯದವರೂ ಪರಸ್ಪರ ಕಚ್ಚಾಡುವುದರಲ್ಲಿ ಕಾಲ ಕಳೆದರು. ಎಲ್ಲ ವಿಚಾರಣೆ, ಶೋಧನೆಗಳ ಬಳಿಕ ಹಜ್ರತ್ ಮಿರ್ಜಾ ಅಹ್ಮದ್ರ ಭವಿಷ್ಯವಾಣಿ ನಿಜವಾಯಿತು ಎಂಬ ಸಂಗತಿ ಮಾತ್ರ ನಿಚ್ಚಳಗೊಳ್ಳುತ್ತದೆ. ಇದು ಹಜ್ರತ್ ಅಹ್ಮದ್ ಅಲ್ಲಾನ ಕೊನೆಯ ಪ್ರವಾದಿ ಎಂಬ ಸತ್ಯವನ್ನು ಸಾರುತ್ತದೆ ಎಂದು ಅಹ್ಮದೀಯ ಸಮುದಾಯದವರು ಬೀಗುತ್ತಾರೆ.
ಲೇಖರಾಮ್ ಕೊಲೆಯ ನಂತರದ ದಿನಗಳಲ್ಲಿ ಎಲ್ಲ ಕೋಮಿನವರಲ್ಲೂ ಪರಸ್ಪರ ಸಂದೇಹ, ದ್ವೇಷ ಮತ್ತು ಪ್ರತೀಕಾರದ ಭಾವನೆ ಹೊಗೆಯಾಡತೊಡಗುತ್ತದೆ. ಮುಸಲ್ಮಾನರ ವಿರುದ್ಧ ಆರ್ಯಸಮಾಜಿಗಳು ಸಾಮಾಜಿಕ, ಆರ್ಥಿಕ ಬಹಿಷ್ಕಾರ ಸಾರುತ್ತಾರೆ. ಆರ್ಯಸಮಾಜಿಗಳು ತಮ್ಮ ತತ್ತ್ವ ಮತ್ತು ಚಿಂತನೆಗಾಗಿ ದಯಾನಂದ ಸರಸ್ವತಿಯವರ ಬಳಿಕ ಪ್ರಾಣತ್ಯಾಗ ಮಾಡಿದ ಪಂಡಿತ ಲೇಖರಾಮ್ ಅವರನ್ನು ಎರಡನೆಯ ‘ಹುತಾತ್ಮ’ ಎಂದು ಭಾವಿಸತೊಡಗಿದರು. ಅವರ ತೀವ್ರವಾದದ ಚಿಂತನೆಯನ್ನು ಮುಂದುವರಿಸಿಕೊಂಡು ನಡೆಯುವ ಆರ್ಯಸಮಾಜ ಮುಂದಿನ ದಶಕಗಳಲ್ಲಿ ಮುಸಲ್ಮಾನರನ್ನು ತಮ್ಮ ಶಾಶ್ವತ ಶತ್ರುಗಳೆಂದು ಪರಿಗಣಿಸತೊಡಗುತ್ತದೆ. ಅವರ ನೆನೆಪಿನಲ್ಲಿ ಲಾಲಾ ಮುಂಶಿರಾಮ್ರವರು (ಸ್ವಾಮಿ ಶ್ರದ್ಧಾನಂದ) ೧೮೯೮ರ ಅಕ್ಟೋಬರ್ನಲ್ಲಿ ‘ಆರ್ಯ ಮುಸಾಫಿರ್’ (ಆರ್ಯ ಪ್ರಯಾಣಿಕ) ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಆನಂತರದ ದಿನಗಳಲ್ಲಿ ಕಂಡುಬಂದ ಹಿಂದು-ಮುಸ್ಲಿಂಸಾಮರಸ್ಯದ ಕೊರತೆ, ಹಿಂಸಾಚಾರ, ದೇಶದ ವಿಭಜನೆ ಇತ್ಯಾದಿಗಳು ಆರ್ಯಸಮಾಜದ ‘ಮುಸ್ಲಿಂ ದ್ವೇಷ’ದ ಸತ್ಯಾಸತ್ಯತೆಗೆ ಪುರಾವೆಯಾಗಿ ನಿಲ್ಲುತ್ತದೆ ಎಂದು ಜೋನ್ಸ್ ಕೆನ್ನೆತ್ ಅಭಿಪ್ರಾಯ ಪಡುತ್ತಾರೆ. ವಿಭಜಿತ ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ ಲಾಹೋರ್ ಪಾಕಿಸ್ತಾನದ ಪಾಲಿಗೆ ಸೇರುತ್ತದೆ. ಇದರಿಂದ ಆರ್ಯಸಮಾಜ ತನ್ನ ಮಹತ್ತ್ವವನ್ನು ಕಳೆದುಕೊಂಡಿತು. ಆದರೆ ಇಂದಿಗೂ ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ಇರುವ ಅನುಮಾನದ ಕಂದಕವನ್ನು ನಿವಾರಿಸಲು ಭಾರತ ಹೆಣಗಾಡುತ್ತಿದೆ.
ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ ಮತಾಂತರಿಸುವುದರಲ್ಲಿ ಸಿದ್ಧಹಸ್ತರೆನಿಸಿದ ಕ್ರಿಸ್ತಮಿಶನರಿಗಳು ಮತ್ತು ಬ್ರಹ್ಮಸಮಾಜದ ಕಾರ್ಯವಿಧಾನದಿಂದ ಸ್ಫೂರ್ತಿಗೊಂಡ ಆರ್ಯಸಮಾಜ ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ತಳಹದಿಯನ್ನಾಗಿಸಿಕೊಂಡು ಹಿಂದುಸಮಾಜಕ್ಕೆ ಹೊಸತೊಂದು ಆಯಾಮವನ್ನು ಒದಗಿಸುವಲ್ಲಿ ಸಫಲವಾಯಿತು. ಹಿಂದುತ್ವವೆಂಬುದು ಒಂದು ‘ಪ್ರಚಾರಕ ಧರ್ಮ’ದ ರೂಪ ತಾಳುವ ಮೂಲಕ ಹಿಂದು ಸಮುದಾಯ ಅದುವರೆಗೆ ಇತರರು ನಡೆಸುತ್ತಿದ್ದ ಮತಾಂತರವನ್ನು ಬರಿಗೈಯಲ್ಲಿ ಎದುರಿಸುವ ಪರಿಸ್ಥಿತಿಯಿಂದ ಹೊರಬರುವಂತಾಯಿತು. ಆರ್ಯಸಮಾಜದ ‘ಶುದ್ಧಿ’ ಆಂದೋಲನ ಕೇವಲ ರಕ್ಷಣಾತ್ಮಕವಾಗಿ ಉಳಿಯದೆ ಆಕ್ರಮಣಕಾರಿಯಾಗಿಯೂ ಹೊರಹೊಮ್ಮುತ್ತದೆ. ಅವರು ಬಳಸಿದ ಮತಾಂತರ, ಮರು-ಮತಾಂತರ, ಶೈಕ್ಷಣಿಕ ವಿಕಾಸ, ಸಮಾಜ ಸುಧಾರಣೆಯ ಹೊಸ ಆಧುನಿಕ ತಂತ್ರಗಳು ಹಿಂದು ಧರ್ಮವನ್ನು ಇತರ ಧರ್ಮಗಳ ಕೃಪಾಕಟಾಕ್ಷಕ್ಕೆ ಬಲಿಯಾಗುವ ಪಶುವಾಗದೆ ಉಳಿಯುವಂತೆ ಮಾಡುವಲ್ಲಿ ಬಹಳ ಸಹಾಯಕವಾಗಿವೆ. ೧೯೩೯ರಲ್ಲಿ ಆರ್ಯಸಮಾಜದ ಕಟ್ಟಾಳುಗಳಲ್ಲಿ ಒಬ್ಬರಾಗಿದ್ದ ಗಂಗಾಪ್ರಸಾದ್ ಅವರು “ನಲವತ್ತು ವರ್ಷಗಳ ಹಿಂದೆ ಆರ್ಯಸಮಾಜವನ್ನು ಹೊರಗಿನ ಕಲ್ಮಷವನ್ನು ಒಳತರುತ್ತಿರುವ ಒಂದು ಧರ್ಮವಿರೋಧಿ ಸಂಘಟನೆ ಎಂದು ಕಾಣಲಾಗುತ್ತಿತ್ತು. ಆದರೆ ಇಂದು ಅದೇ ಆರ್ಯಸಮಾಜವನ್ನು ಹಿಂದು ಧರ್ಮದ ಸಂರಕ್ಷಕನಂತೆ ಕಾಣಲಾಗುತ್ತಿದೆ” ಎಂದು ಬರೆಯುತ್ತಾರೆ. ವೈದಿಕ ಧರ್ಮದ ಉಳಿವು ಮತ್ತು ಸುಧಾರಣೆಗಾಗಿ ದಯಾನಂದ ಸರಸ್ವತಿಯವರಿಂದ ಪ್ರಾರಂಭಗೊಂಡ ಬಲಿದಾನದ ಇತಿಹಾಸದಲ್ಲಿ ಪಂಡಿತ ಲೇಖರಾಮ್ರ ಬಲಿದಾನ ಮತ್ತೊಂದು ಅಧ್ಯಾಯವನ್ನು ಸೇರಿಸುತ್ತದೆ.
ಆಕರ:
1. Asif M Basit, London “A Murder in British Lahore: Closing the Case of Lekh Ram” https://www.reviewofreligions.org/12030/a-murder-in-british-lahore-closing-the-case-of-lekh-ram/
2. Kenneth Jones, ‘’Communalism_in_Punjab: The Arya Samaj Contribution’’, The Journal of Asian Studies, Vol 28, No. 1 (Nov., 1968)
3. Syed Hasnat Ahmad, Canada, “Pandit Lekh Ram -The Malicious Arya” in ‘Review of Religions’ Vol. LXXIX no. 5, May 1984