ಇಂದಿನ ಬೆಂಗಳೂರು ಜಿಲ್ಲೆಯಲ್ಲಿ ಪುರಾತತ್ತ್ವ ಉತ್ಖನನಗಳಾವುವೂ ನಡೆದಿಲ್ಲ. ನಡೆದಿರುವ ಸಣ್ಣಪ್ರಮಾಣದ ಕೆಲವು ಉತ್ಖನನಗಳಲ್ಲಿ (ಉತ್ಖನನವೆನ್ನುವುದಕ್ಕಿಂತ ಅನ್ವೇಷಣೆ ಎಂಬ ಪದ ಹೆಚ್ಚು ಸೂಕ್ತ) ನೇರವಾಗಿ ಕೃಷಿಗೆ ಸಂಬಂಧಪಟ್ಟ ವಿವರಗಳು ದೊರೆತಿಲ್ಲ. ಆಹಾರಕ್ಕೆ ಸಂಬಂಧಪಡುವ ಅವಶೇಷಗಳೂ ದೊರೆತಿಲ್ಲ. ಒಂದೆರಡು ಕಡೆ ದೊರೆತಿವೆ ಎಂದು ವರದಿಯಾಗಿದ್ದರೂ ವಿವರಗಳು ಅಸ್ಪಷ್ಟ. ಆಹಾರ ಪದ್ಧತಿಗೆ ಸಂಬಂಧಪಡುವ ಕೆಲವೊಂದು ಪಾತ್ರೆಗಳು ದೊರೆತಿವೆ ಎಂದು ಅಸ್ಪಷ್ಟವಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲೆಯ ಕೃಷಿ ಸಂಸ್ಕೃತಿ ಹಾಗೂ ಹಸುರಿನ ವಿವರಗಳನ್ನು ತಿಳಿಯಲು ಶಾಸನಗಳು, ಸಾಹಿತ್ಯಕೃತಿಗಳು ಹಾಗೂ ಆಧುನಿಕ ಕಾಲದ ಕೆಲವು ಗ್ರಂಥಗಳು ಮಾತ್ರ ನೆರವು ನೀಡುತ್ತವೆ. ಇಂದು ನಗರೀಕರಣ ಪ್ರಕ್ರಿಯೆ ಅತ್ಯಂತ ವೇಗವಾಗಿ ಸಾಗಿ ಹೊಲಗದ್ದೆಗಳಿದ್ದ ಪ್ರದೇಶಗಳು ನಾಶವಾಗಿವೆ.
ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಸಂವರ್ಧನೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನವಾಗಿದೆ. ಇದು ನಾಗರಿಕತೆಯ ಉತ್ಕರ್ಷಕ್ಕೆ ಕಾರಣವಾದ ಒಂದು ಪ್ರಮುಖ ಬೆಳವಣಿಗೆಯಾಗಿತ್ತು. ಕೃಷಿ ಮತ್ತು ಕೃಷಿಕರ ಉಲ್ಲೇಖಗಳು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಸಂಕಲನವೆಂದು ಒಮ್ಮತದಿಂದ ಅಂಗೀಕರಿಸಿರುವ ಋಗ್ವೇದದಲ್ಲಿಯೇ ಕಂಡುಬರುತ್ತವೆ. ಪಶುಪಾಲನೆ ಮತ್ತು ವ್ಯವಸಾಯವೇ ಆ ಕಾಲದ ಪ್ರಮುಖವಾದ ವೃತ್ತಿಯಾಗಿತ್ತು. ಬಡಗಿ, ಕಮ್ಮಾರ, ವೈದ್ಯ, ಯಾಜಕ ಮುಂತಾದ ವೃತ್ತಿಗಳನ್ನು ಮಾಡುತ್ತಿದ್ದವರ ಉಲ್ಲೇಖ ಋಗ್ವೇದದಲ್ಲಿದೆ (೯-೧೧೧-೧). ಕೃಷಿಯ ಬಗೆಗೆ ವೇದದಲ್ಲಿ ದೊರಕುವ ವಿವರಗಳಲ್ಲಿ ಒಂದು ಇಂತಿದೆ.
ಯುನಕ್ತಸೀರಾ ವಿಯುಗಾ ತನುಧ್ವಂ
ಕೃತೇ ಯೋನೌ ವಪತೇಹ ಬೀಜಂ
ಗಿರಾ ಚ ಶ್ರುಷ್ಟಿಃ ಸಭರಾ ಅಸನ್ನೋ
ನೇದೀಯ ಇತ್ಸ್ಮಮಣ್ಯಃ ಪಕ್ವಮೇಯಾತ್ || ೧೦-೧೦೧-೩ ||
[ನೇಗಿಲನ್ನು ಹೂಡಿ, ನೊಗಗಳನ್ನು ವಿಸ್ತಾರಗೊಳಿಸಿಕೊಂಡು, ಉಳುಮೆ ಮಾಡಿದ ಸಾಲುಗಳಲ್ಲಿ ಕಾಳುಗಳನ್ನು ಬಿತ್ತನೆ ಮಾಡಿದರೆ, ನಮ್ಮ ಪ್ರಾರ್ಥನೆ ಅಥವಾ ಸ್ತುತಿಯಿಂದ ಸಮೃದ್ಧವಾದ ಬೆಳೆಯಾಗುತ್ತದೆ. ಕೊಯ್ಲನ್ನು ಮಾಡುವವರು ಕುಡುಗೋಲುಗಳೊಡನೆ ಮಾಗಿದ ಪೈರಿನ ಕಡೆ ಬರುವಂತಾಗಲಿ]
ಕೃಷಿಮಿತ್ ಕೃಷಸ್ವ (೫-೩೪-೧೩) ಎಂದು ಹೇಳುವ ಉದ್ದೇಶವೇನೆಂದರೆ ಪ್ರಾಮಾಣಿಕವಾದ ವೃತ್ತಿಯಿಂದ ಜೀವನವನ್ನು ಸಂಪಾದಿಸಬೇಕು ಎಂಬುದಾಗಿದೆ. ಕೃಷಿಗೆ ಅಗತ್ಯವಾದ ನೀರಾವರಿ ಕಾಲುವೆಗಳ ಉಲ್ಲೇಖಗಳೂ ಋಗ್ವೇದದಲ್ಲಿವೆ. (೩-೪೫-೩; ೭-೪೯-೨)
ವೇದದಲ್ಲಿರುವ ಪರ್ಜನ್ಯಸೂಕ್ತವು ನಮ್ಮ ಪೂರ್ವಿಕರು ಮಳೆ ಮತ್ತು ನೀರಾವರಿಗೆ ಎಷ್ಟು ಪ್ರಾಮುಖ್ಯವನ್ನು ಕೊಟ್ಟಿದ್ದರು ಎಂಬುದಕ್ಕೆ ಉತ್ಕೃಷ್ಟ ಉದಾಹರಣೆಯಾಗಿದೆ. ಏಕೆಂದರೆ ಮಳೆಯಿಲ್ಲದೆ ಕೃಷಿವ್ಯವಸ್ಥೆ ನಡೆಯಲು ಸಾಧ್ಯವಿಲ್ಲ. ಉತ್ತರ ಭಾರತದಲ್ಲಿ ಜೀವನದಿಗಳ ಅವಲಂಬನೆಯಿದ್ದರೆ, ದಕ್ಷಿಣಭಾರತದಲ್ಲಿ ಬಲುಮಟ್ಟಿಗೆ ಮಳೆಯ ಆಧಾರದಿಂದಲೇ ಹರಿಯುವ ನದಿಗಳಿವೆ. ಇದರಿಂದಾಗಿ ಪ್ರದೇಶವಾರು ಬೇರೆ ಬೇರೆ ರೀತಿಯ ನೀರಾವರಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಯಿತೆಂದು ಲಭ್ಯವಿರುವ ಆಧಾರಗಳು ಹೇಳುತ್ತವೆ. ಋಗ್ವೇದದಲ್ಲಿ ನದಿಗಳನ್ನು ಸ್ತುತಿಸುವ ಸೂಕ್ತಗಳೇ ಇವೆ. ನದಿಗಳೇ ಮಾನವನ ಜೀವ, ಜೀವನಾಡಿಗಳಾದ ಕಾರಣ ಈ ಸೂಕ್ತಗಳು ರೂಪಗೊಂಡಿವೆ. ಇದೇ ರೀತಿಯಾಗಿ ಪರ್ಜನ್ಯಸೂಕ್ತವೂ ಸಹ. ಯಜರ್ವೇದದ ಚಮಕಪ್ರಶ್ನದಲ್ಲಿ (ಸಸ್ವರ ವೇದಮಂತ್ರಾಃ, ಪ್ರಕಟನೆ: ಶ್ರೀರಾಮಕೃಷ್ಣ ಆಶ್ರಮ, ಮೈಸೂರು-೨೦೧೦, ಪುಟ ೧೪೮) ವ್ರೀಹಿ (ಅಕ್ಕಿ), ಯವೆ (ಬಾರ್ಲಿ), ಮಾಷಾ (ಉದ್ದು), ತಿಲ (ಎಳ್ಳು), ಮುದ್ಗ (ಹೆಸರುಕಾಳು), ಖಲ್ವ (ದ್ವಿದಳ ಧಾನ್ಯ), ಗೋಧೂಮ (ಗೋಧಿ) ಧಾನ್ಯಗಳ ಉಲ್ಲೇಖವಿದೆ. ಇಂತಹ ಅನೇಕ ವಿವರಗಳು ವೇದಗಳಲ್ಲಿ ದೊರಕುತ್ತವೆ.
ಈ ವಿವರಗಳಿಂದ ಭಾರತದೇಶದ ಕೃಷಿಯು ಬಹಳ ಪ್ರಾಚೀನವಾದುದೆಂದೂ ಇಂದಿನ ವರೆಗೂ ಅದು ಬಲುಮಟ್ಟಿಗೆ ಸ್ವಸ್ವರೂಪದಲ್ಲಿಯೇ ಉಳಿದುಕೊಂಡು ಬಂದಿದೆ ಎಂದೂ ಹೇಳಬಹುದಾಗಿದೆ. ಇದಕ್ಕೆ ಸರಸ್ವತೀ ನದಿ ಕೊಳ್ಳದ ಉತ್ಖನನಗಳೂ (The Sarasvati Civilization by Major General G.D Bakshi, Garuda Prakashan, Haryana-2019) ಹಾಗೂ ಬೇರೆ ಬೇರೆ ಪ್ರದೇಶಗಳ ಉತ್ಖನನಗಳೂ ಪೋಷಕವಾಗಿವೆ.
ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ. ಬೆಂಗಳೂರು ತಾಲ್ಲೂಕು ೪೮೬ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಂಗಳೂರು ನಗರ ಜಿಲ್ಲೆಯು ೫ ತಾಲ್ಲೂಕುಗಳನ್ನು ಹೊಂದಿದ್ದು {ಬೆಂಗಳೂರು ಉತ್ತರ ಅಥವಾ ಬೆಂಗಳೂರು, ಬೆಂಗಳೂರು ದಕ್ಷಿಣ ಅಥವಾ ಕೆಂಗೇರಿ, ಬೆಂಗಳೂರು ಪೂರ್ವ ಅಥವಾ ಕೃಷ್ಣರಾಜಪುರ, ಯಲಹಂಕ ಮತ್ತು ಆನೇಕಲ್}, ಬೆಂಗಳೂರು ಗ್ರಾಮಾಂತರ ಜಿಲ್ಲೆಯು ೪ ತಾಲ್ಲೂಕುಗಳನ್ನು ಹೊಂದಿದೆ (ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ). ಬೆಂಗಳೂರು ಪ್ರದೇಶವು ಸಮುದ್ರಮಟ್ಟದಿಂದ ಸುಮಾರು ೯೧೪ ಮೀಟರ್ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೨o ೩೯o G ಹಾಗೂ ೧೩o G ಅಕ್ಷಾಂಶದಲ್ಲಿದ್ದರೂ ಕೂಡ ಬೆಂಗಳೂರಿನಲ್ಲಿ ಸದಾಕಾಲ ತಂಪು ವಾತಾವರಣವಿರುವುದು, ಸುಮಾರು ೨೪oC ರಿಂದ ೩೫oC ರವರೆಗೆ ಉಷ್ಣಾಂಶವಿರುವುದು. ದಕ್ಷಿಣ ಪ್ರಸ್ತಭೂಮಿಯ ಒಂದು ಭಾಗವಾದ ಮೈಸೂರು ಪ್ರಸ್ಥಭೂಮಿಯ ಹೃದಯಭಾಗದಲ್ಲಿ ನೆಲೆಸಿರುವ ಈ ನಗರವು, ಕರ್ನಾಟಕದ ಆಗ್ನೇಯ ಭಾಗದಲ್ಲಿದೆ. ೭೪೧ ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ಪ್ರದೇಶವು ೫.೮ ಮಿಲಿಯನ್ (ಅತಿ ಹೆಚ್ಚು ಜನಸಂಖ್ಯೆಯುಳ್ಳ ಮೂರನೆಯ ನಗರ) ಜನಸಂಖ್ಯೆಯನ್ನು ಹೊಂದಿದೆ. ಉಷ್ಣವಲಯದ ವಾತಾವರಣವಿರುವುದರಿಂದ, ಈ ಪಟ್ಟಣವು ಪದೇ ಪದೇ ಮಳೆಯನ್ನು ಅನುಭವಿಸುತ್ತ ಬೇಸಿಗೆಗಾಲದಲ್ಲಿ ಬೆಚ್ಚಗಿದ್ದು ಚಳಿಗಾಲದಲ್ಲಿ ತಂಪಾಗಿರುತ್ತದೆ. ಇಂತಹ ಸುಂದರ ವಾತಾವರಣವು ಒಂದು ಕಾಲದಲ್ಲಿ ನಿವೃತ್ತಿ ಹೊಂದಿದವರನ್ನು ಆಕರ್ಷಿಸಿದ್ದು, ಈ ಕಾರಣದಿಂದಲೇ ಬೆಂಗಳೂರನ್ನು ‘ನಿವೃತ್ತಿ ಹೊಂದಿದವರ ಸ್ವರ್ಗ’ ಎಂದೂ ಕೂಡ ಕರೆಯಲಾಗುತ್ತಿತ್ತು. ಬೇಸಿಗೆಯಲ್ಲಿ ತಾಪಮಾನವು ೨೦ರಿಂದ ೩೬ ಡಿಗ್ರಿಯಿದ್ದು, ಚಳಿಗಾಲದಲ್ಲಿ ೧೭ ರಿಂದ ೨೭ ಡಿಗ್ರಿಯಾಗಿರುತ್ತದೆ (ಈಚಿನ ದಿನಗಳ ಚಳಿಗಾಲದಲ್ಲಿ ಥಂಡಿ ಎನ್ನುವುದು ೧೩ ಡಿಗ್ರಿಗೂ ಇಳಿದಿರುವುದು ಹಾಗೂ ವ್ಯಾಪಕವಾಗಿ ವಾತಾವರಣ ವ್ಯತ್ಯಯವಾಗುತ್ತಿರುವುದು ಗಮನಾರ್ಹ).
ಇಂದಿನ ಬೆಂಗಳೂರು ಜಿಲ್ಲೆಯಲ್ಲಿ ಪುರಾತತ್ತ್ವವ ಉತ್ಖನನಗಳಾವುವೂ ನಡೆದಿಲ್ಲ. ನಡೆದಿರುವ ಸಣ್ಣಪ್ರಮಾಣದ ಕೆಲವು ಉತ್ಖನನಗಳಲ್ಲಿ (ಉತ್ಖನನವೆನ್ನುವುದಕ್ಕಿಂತ ಅನ್ವೇಷಣೆ ಎಂಬ ಪದ ಹೆಚ್ಚು ಸೂಕ್ತ) ನೇರವಾಗಿ ಕೃಷಿಗೆ ಸಂಬಂಧಪಟ್ಟ ವಿವರಗಳು ದೊರೆತಿಲ್ಲ. ಆಹಾರಕ್ಕೆ ಸಂಬAಧಪಡುವ ಅವಶೇಷಗಳೂ ದೊರೆತಿಲ್ಲ. ಒಂದೆರಡು ಕಡೆ ದೊರೆತಿದೆ ಎಂದು ವರದಿಯಾಗಿದ್ದರೂ ವಿವರಗಳು ಅಸ್ಪಷ್ಟ. ಆಹಾರ ಪದ್ಧತಿಗೆ ಸಂಬಂಧಪಡುವ ಕೆಲವೊಂದು ಪಾತ್ರೆಗಳು ದೊರೆತಿವೆ ಎಂದು ಅಸ್ಪಷ್ಟವಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲೆಯ ಕೃಷಿ ಸಂಸ್ಕೃತಿ ಹಾಗೂ ಹಸುರಿನ ವಿವರಗಳನ್ನು ತಿಳಿಯಲು ಶಾಸನಗಳು, ಸಾಹಿತ್ಯಕೃತಿಗಳು ಹಾಗೂ ಆಧುನಿಕ ಕಾಲದ ಕೆಲವು ಗ್ರಂಥಗಳು ಮಾತ್ರ ನೆರವು ನೀಡುತ್ತವೆ. ಕೆಲವೊಂದು ಸಾಹಿತ್ಯಿಕ ಕೃತಿಗಳಲ್ಲಿ ಕೃಷಿಕರ ವಿವರ ಅಲ್ಲಲ್ಲಿ ದೊರಕುತ್ತದೆ. ವಿಖ್ಯಾತ ಶಾಸನತಜ್ಞ ಲೂಯಿ ರೈಸ್ ಅವರ ಮೈಸೂರು ಗೆಝೆಟಿಯರ್ನಲ್ಲಿ ಕೆಲವೊಂದು ವಿವರಗಳು ದೊರಕುತ್ತವೆ. ಈ ವಿವರಗಳು ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿ ಇಂದಿನ ಸ್ವರೂಪಕ್ಕೆ ಸದೃಶವಾಗಿಯೇ ಇವೆ. ಬೆಂಗಳೂರಿನ ಪ್ರದೇಶ ಬಲುಮಟ್ಟಿಗೆ ಹೊಲಗದ್ದೆಗಳಿದ್ದ ಪ್ರದೇಶವೇ ಆಗಿತ್ತು ಎಂಬುದನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಆತ್ಮಕಥೆ ‘ಭಾವ’ ಸಂಪುಟಗಳು, ತಿ.ತಾ. ರ್ಮ ಮತ್ತು ಡಿ.ವಿ. ಗುಂಡಪ್ಪನವರ ಬರಹಗಳು ಮೊದಲಾದ ಆಕರಗಳಲ್ಲಿನ ಸಾಂರ್ಭಿಕ ವಿವರಗಳು ಸಾಬೀತು ಮಾಡುತ್ತವೆ. ಇಂದು ನಗರೀಕರಣ ಪ್ರಕ್ರಿಯೆ ಅತ್ಯಂತ ವೇಗವಾಗಿ ಸಾಗಿ ಹೊಲಗದ್ದೆಗಳಿದ್ದ ಪ್ರದೇಶಗಳು ನಾಶವಾಗಿವೆ. ಶಾಸನಗಳಲ್ಲಿ ಹೊಲಗದ್ದೆಗಳ ವಿವರಗಳು ದಾಖಲಾಗಿರುವ ಕಾರಣ, ಆ ಕಾಲದ ಸ್ವರೂಪವನ್ನು ನಾವು ಪುನಾರಚಿಸಿಕೊಳ್ಳಬೇಕಿದೆ. ಆ ಕಾಲದಲ್ಲಿ (ಪ್ರಾಚೀನ ಕಾಲ ಮತ್ತು ೧೮೦೦-೧೯೦೦ ರ ಸುಮಾರು) ಬಳಕೆಯಲ್ಲಿದ್ದ ಎಷ್ಟೋ ಬೆಳೆಗಳ ದೇಶೀ ಹೆಸರುಗಳು, ತಳಿಗಳು ಇಂದು ನಮಗೆ ಕೈತಪ್ಪಿಹೋಗಿವೆ. ಉದಾಹರಣೆಗೆ: ಲೂಯಿ ರೈಸರು ತಮ್ಮ ಮೈಸೂರು ಗೆಜೆಟಿಯರ್ನಲ್ಲಿ ಸುಮಾರು ೨೧ ಬಗೆಯ ಬಾಳೆಹಣ್ಣು ತಳಿಗಳ ಹೆಸರುಗಳನ್ನು ದಾಖಲಿಸಿದ್ದಾರೆ. ಇಂತಹವುಗಳ ಬಗೆಗೆ ಕೋಶವೊಂದು ರಚನೆಯಾಗಬೇಕಾದ ಅಗತ್ಯವಿದೆ.
ಪ್ರಾಚೀನ ಬೆಂಗಳೂರಿನ ಕೃಷಿ ಸಂಸ್ಕೃತಿ, ಶಾಸನಗಳಲ್ಲಿ ಕಂಡುಬರುವ ಕೃಷಿಭೂಮಿಯ ವಿವರಗಳು : ಬೆಂಗಳೂರು ಜಿಲ್ಲೆಯ ಶಾಸನಗಳಲ್ಲಿ ಬೆಳೆಗಳ ವಿವರ ದೊರಕುವುದು ಅಪರೂಪ. ದಾನಗಳನ್ನು ನೀಡಿರುವ ಸಮಯದಲ್ಲಿ ಉಲ್ಲೇಖಗೊಂಡಿರುವ ಅಡಕೆ, ಎಲೆ ಇತ್ಯಾದಿಗಳನ್ನು ಈ ಜಿಲ್ಲೆಯ ಬೆಳೆಗಳೆಂದು ನೇರವಾಗಿ ಹೇಳುವುದು ಸಮರ್ಥನೀಯವಲ್ಲ. ಇಂತಹ ಕೆಲವು ಪದಾರ್ಥಗಳಿಗೆ ಸುಂಕವನ್ನು ಹೇರಲಾಗುತ್ತಿತ್ತು. ಇವುಗಳನ್ನು ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದ ವಿವರಗಳು ಶಾಸನೋಕ್ತವಾಗಿವೆ. ಭೂಮಿಯನ್ನು ದಾನ ಕೊಟ್ಟಿರುವ ವಿವರಗಳನ್ನು ಶಾಸನಗಳು ಧಾರಾಳವಾಗಿ ದಾಖಲಿಸಿವೆ. ಈ ಸಂದರ್ಭದಲ್ಲಿ ಗದ್ದೆ, ಬೆದ್ದಲು ಇತ್ಯಾದಿ ಶಬ್ದಗಳು ಸೀಮಾ ವಿವರಗಳ ಸಹಿತ ಶಾಸನಗಳಲ್ಲಿ ದೊರಕುತ್ತವೆ. ಉದಾಹರಣೆಗೆ:
- ಆವೂರ ಗದ್ದೆ ಬೆದ್ದಲು {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಬೆಂಗಳೂರು-೨೨}
- ಮಾವಿನಕೆಱೆಹುರವಾಮಾರಾಡಿಯಕೆಱೆಯವೊಳಗಾ ದಚತುಸ್ಸೀಮೆಯ ಗದ್ದೆ ಬೆಜ್ಜಲನು {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಬೆಂಗಳೂರು-೨೪}
ಕೃಷಿಯೇ ಪ್ರಧಾನವಾಗಿರುವ ನಾಡಿನಲ್ಲಿ ಕೃಷಿಗೆಂದು ಎಂಬ ಉಲ್ಲೇಖವನ್ನು ಮಾಡುವ ಅಗತ್ಯವಂತೂ ನಾಡಿನವರಿಗೆ ಕಂಡುಬಂದಿಲ್ಲ. ನೀರಾವರಿಗೆ, ಕೆರೆಗಳಿಗೆ ಸಂಬಂಧಪಡುವ ವಿವರಗಳು ಶಾಸನಗಳಲ್ಲಿವೆ. ಇವುಗಳ ಬಗೆಗೆ ಈಗಾಗಲೇ ಅಧ್ಯಯನವೂ ನಡೆದು ಬರಹಗಳು ಪ್ರಕಟವಾಗಿವೆ. ಆದುದರಿಂದ ಶಾಸನಗಳಿಂದ ಲಭ್ಯವಾಗುವ ವಿವರಗಳನ್ನು ದಿಙ್ಮಾತ್ರ ಇಲ್ಲಿ ದಾಖಲಿಸಲಾಗಿದೆ.
- ಕೆಲವು ಶಾಸನಗಳಲ್ಲಿ ಗದ್ದೆಯನ್ನು ದಾನವಾಗಿ ನೀಡಲಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಬತ್ತವನ್ನು ಬೆಳೆಯುವ ಭೂಮಿ ಎಂದು ಅಧ್ಯಾಹಾರ ಮಾಡಿಕೊಳ್ಳಬೇಕಾದ ಸಂದರ್ಭಗಳೂ ಉಂಟು {ಉದಾಹರಣೆಗೆ: ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ನೆಲಮಂಗಲ-೧, ಕಾಲ: ಕ್ರಿ.ಶ. ೧೦೨೯}. ಲೂಯಿ ರೈಸ್ ಅವರು ಇದೇ ರೀತಿ ಅರ್ಥೈಸಿದ್ದಾರೆ. ಶಾಸನಗಳಲ್ಲಿ ಕಾಡಾರಂಭ, ನೀರಾರಂಭ, ಗುಡಿ, ಗುಯ್ಯಲು, ಬಿತ್ತುವಟ, ತೋಟ, ತುಡಿಕೆ ಎಂಬ ಶಬ್ದಗಳು ದೊರಕುತ್ತವೆ. ಇವೆಲ್ಲವೂ ಮೂಲತಃ ಕೃಷಿಗೆ ಸಂಬಂಧಪಟ್ಟ ಶಬ್ದಗಳೇ ಆಗಿವೆ.
- ತಲಕಾಡು ಗಂಗರ ಕಾಲದ ಕೆರೆಗಳಲ್ಲಿ, ಕ್ರಿ. ಶ. ೮೭೦ರಲ್ಲಿ ಸತ್ಯವಾಕ್ಯ ಪೆರ್ಮಾ[ನ]ಡಿಯ ಸಾಮಂತನಾದ ಕಲಿಯುಗದಣುಗ ನಾಗತ್ತರನ ಆಳು, ಇರ್ವ್ವಲಿಯೂರಿನ (ಇಂದಿನ ಸರ್ಜಾಪುರ ರಸ್ತೆಯ ಅಗರ ಸಮೀಪದ ಇಬ್ಬಲೂರು) ಒಡೆಯ, ಇರುಗಮಯ್ಯನ ಮಗ ಸಿರಿಯಮಯ್ಯ ಎಂಬವನು ಬೆಂಗಳೂರು ದಕ್ಷಿಣ ತಾಲ್ಲೂಕು ಅಗರದ ಬಳಿ ಮೂಡಣ ಕೆರೆಯೊಂದನ್ನು ಕಟ್ಟಿಸಿದ ವಿವರ ಹಾಗೂ ಅದಕ್ಕೂ ಮೊದಲೇ ಅಲ್ಲಿದ್ದ ಎರಡು ಕೆರೆಗಳಿಗೆ ತೂಬುಗಳನ್ನು ಇಡಿಸಿದ ವಿವರ ಶಾಸನದಲ್ಲಿ ದಾಖಲಾಗಿದೆ {ನೋಡಿ: ಬೆಂಪೂರೊಡೆಯ (=ಬೇಗೂರು) ನಾಗತ್ತರನ ಶಾಸನಗಳು – ಎಸ್. ಕರ್ತಿಕ್, ಸಂಶೋಧನ ಸಂಭಾವನೆ (ಇತಿಹಾಸ, ಹಸ್ತಪ್ರತಿ, ವಿಮರ್ಶೆ ವ್ಯಕ್ತಿಚಿತ್ರ ಸಂಬಂಧೀ ಬರಹಗಳು), ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು-೨೦೧೬, ಪುಟ ೭-೨೨}. ಇವುಗಳೇ ಬಲುಮಟ್ಟಿಗೆ ಬೆಂಗಳೂರಿನ ಪ್ರಾಚೀನ ಕೆರೆಗಳೆಂದು ಕಾಣುತ್ತದೆ. ಇವುಗಳಲ್ಲಿ ಅಗರದ ಕೆರೆ ಈಗಲೂ ಉಳಿದುಕೊಂಡಿದೆ.
- ಕ್ರಿ.ಶ. ೧೨-೩-೧೨೪೭ ರ ಮಡಿವಾಳದ ಶಾಸನದಲ್ಲಿ ‘ವೆಂಗಳೂರು ಪಿರಿಯ ಕೆರೆ’ ಎಂಬ ಉಲ್ಲೇಖ ಕಂಡುಬರುತ್ತದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಬೆಂಗಳೂರು-೬೮}. ಕನ್ನಡದ ಬ ತಮಿಳಿನಲ್ಲಿ ವ ಆಗುವುದರಿಂದ ವೆಂಗಳೂರು ಎಂಬ ರೂಪ ಬಳಕೆಯಾಗಿದೆ. ಶಾಸನಪಾಠ ಅಲ್ಲಲ್ಲಿ ತ್ರುಟಿತವಾಗಿದೆ. ವೆಂಗಳೂರ ಪಿರಿಯ ಕೆರೆ ಎಂದರೆ ಈಗ ಮಡಿವಾಳದ ಕೆರೆಯೆಂದು ಕರೆಯುವುದೇ ಆಗಿದೆಯೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಆಧಾರಗಳು ಸಾಲವು.
- ಕ್ರಿ.ಶ. ೧೦ನೆಯ ಶತಮಾನದ ಕೊನೆಕೊನೆಗೆ ಬೆಂಗಳೂರು ಜಿಲ್ಲಾ ಪ್ರದೇಶವು ಚೋಳರ ಆಳ್ವಿಕೆಗೆ ಒಳಪಟ್ಟಿತು. ಆಗಲೂ ಕೆರೆಗಳ ನಿರ್ಮಾಣಕಾರ್ಯ ಅವಿರತವಾಗಿ ಮುಂದುವರಿದಿರುವುದು ಕಂಡುಬರುತ್ತದೆ. ಸಣ್ಣೆನಾಡ ಗಾಮುಂಡನ ಮಗ ರಾಜರಾಜ ವೇಳಾನ್ ಎಂಬವನು ಪಟ್ಟಂದೂರು ಕೆರೆಯನ್ನು ಕಟ್ಟಿಸಿದ ವಿವರ ಕ್ರಿ.ಶ. ೧೦೪೩ರ ಚೋಳ ರಾಜೇಂದ್ರನ ಕಾಡುಗೋಡಿಯ ಶಾಸನದಲ್ಲಿ ಬಂದಿದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಹೊಸಕೋಟೆ -೧೪೨}.
- ಹನ್ನೆರಡನೆಯ ಶತಮಾನದ ವೇಳೆಗೆ ಹೊಯ್ಸಳರ ಆಳ್ವಿಕೆ ಬೆಂಗಳೂರು ಜಿಲ್ಲಾ ಪ್ರದೇಶದ ಮೇಲೆ ನೆಲೆಗೊಂಡಿತು. ಹೊಯ್ಸಳರ ಮಹಾಮಂಡಳೇಶ್ವರರಾದ ಕಕ್ಕಡ ಮಹಾರಾಯರೂ ಪೂರ್ವಾಧಿರಾಯರೂ ಆನೇಕಲ್ ತಾಲ್ಲೂಕು ಪ್ರದೇಶದಲ್ಲಿ ಅನೇಕ ಕೆರೆಕಟ್ಟೆಗಳ ನಿರ್ಮಾಣ ಕಾರ್ಯವನ್ನು ಕೈಕೊಂಡ ವಿವರಗಳು ದೊರಕುತ್ತವೆ. ಕ್ರಿ.ಶ. ೧೨೬೫ರ ಹಂದೇನಹಳ್ಳಿ ಗ್ರಾಮದ ಶಾಸನವು ಮಂಡಲರಾಯ ತ್ರಿಭುವನಮಲ್ಲ ಕಕ್ಕ್ಕಡ ಮಹಾರಾಯನಿಂದ ಆ ಗ್ರಾಮದ ಕೆರೆ ರೂಪಗೊಂಡಿದೆ ಎಂದು ತಿಳಿಸುತ್ತದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಆನೇಕಲ್-೪೧}.
- ತ್ರಿಭುವನಮಲ್ಲ ಪೂರ್ವಾದಿರಾಯ ಅಲ್ಲಾಳ ಪೆರುಮಾಳ್ ಎಂಬವನಿಗಾಗಿ ಸೋಮಗಾವುಂಡನ ಮದ್ಯೆಯನ್ನನ ಮಗ ವೈರವನ್ ಎಂಬವನು ಕೆರೆಯೊಂದನ್ನು ಕಟ್ಟಿಸಿದ ವಿವರ ಕ್ರಿ. ಶ. ೧೨೭೪ರ ಮಾಯಸಂದ್ರ ಗ್ರಾಮದ ಶಾಸನದಲ್ಲಿ ಬಂದಿದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಆನೇಕಲ್-೪೫}.
- ಕ್ರಿ.ಶ. ೧೪-೧೧-೧೪೧೨ರ ಮಾಯಸಂದ್ರ ಶಾಸನದಲ್ಲಿ ತತ್ತನಕೆಱೆ, ಬೆಳ್ಳವಾರಣದ ಕೆಱೆಗಳ ಹೆಸರು ದಾಖಲಾಗಿದೆ {ನೋಡಿ : ಬೆಂಗಳೂರು ಜಿಲ್ಲೆ ಆನೇಕಲ್ ತಾಲ್ಲೂಕು ಮಾಯಸಂದ್ರ ಶಾಸನದ ಪರಿಷ್ಕೃತ ಪಾಠ ಮತ್ತು ವಿಶ್ಲೇಷಣೆ-ಎಸ್. ಕರ್ತಿಕ್, ಸಂಶೋಧನ ಸಂಭಾವನೆ (ಇತಿಹಾಸ, ಹಸ್ತಪ್ರತಿ, ವಿಮರ್ಶೆ ವ್ಯಕ್ತಿಚಿತ್ರ ಸಂಬಂಧೀ ಬರಹಗಳು), ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು-೨೦೧೬, ಪುಟ ೩೬-೪೫}. ಈಗ ಇವುಗಳನ್ನು ಗುರುತಿಸುವುದೇ ಕಷ್ಟಕರವಾಗಿದೆ.
- ಬೆಂಗಳೂರು ಪೂರ್ವತಾಲ್ಲೂಕಿನ ವಿಭೂತಿಪುರ ಗ್ರಾಮದ ಶಾಸನವು ಕ್ರಿ.ಶ. ೧೩೦೭ರಲ್ಲಿ ಮಾಸಂದಿನಾಡಿನ ಪಶ್ಚಿಮ ಭಾಗದ ಅಧಿಕಾರಿ ಸೆಂಬಿದೇವನ್, ನಾಡಗೌಡ ವಿಲ್ಲಗಾವುಂಡನ್ ಮುಂತಾದವರು ಸೇರಿ ಕಾಡನ್ನು ಕಡಿದು, ಮರಳನ್ನು ತೆಗೆದು, ಮಟ್ಟಮಾಡಿ ಕೆರೆಯೊಂದನ್ನು ರಚಿಸಿ, ಊರೊಂದನ್ನು ಕಟ್ಟಿ ಆ ಊರಿಗೆ ವಾಚ್ಚಿದೇವಪುರವೆಂದು ನಾಮಕರಣ ಮಾಡಿ, ವಾಚ್ಚಿದೇವ ಯತಿಗೆ ಮಡಪುರಂ ಅಂದರೆ ಪುರಧರ್ಮವಾಗಿ ದತ್ತಿಬಿಟ್ಟ ಸಂಗತಿಯನ್ನು ತಿಳಿಸುತ್ತದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಬೆಂಗಳೂರು -೧೩೩}.
- ಕ್ರಿ.ಶ. ೧೩೧೦ರಲ್ಲಿ ಹೊಯ್ಸಳ ಮೂರನೆಯ ವೀರಬಲ್ಲಾಳನ ಸಾಮಂತಾಧಿಪತಿಯಾದ ನರಲೋಕಗಂಡ ಮಯಿಲೆಯ ನಾಯಕರ ಸೋದರ ಚೆಂನಯ ನಾಯಕನು ಮೂರು ಸಾವಿರ ಹೊನ್ನನ್ನು ವೆಚ್ಚಮಾಡಿ “ರಾಮಸಮುದ್ರ’ ಎಂಬ ಕೆರೆಯನ್ನು ಕಟ್ಟಿಸಿದ. ಈ ಶಾಸನದಲ್ಲಿ ಭೂತಳದಲ್ಲಿರುವ ನರ, ಮೃಗ, ಪಶುಪಕ್ಷಿ ಮೊದಲಾದವು ಸಾಯುವುದನ್ನು ತಡೆಯಲು ಸದಾ ಲೋಕವು ಗಂಗಾದೇವಿಯ ಅಂದರೆ ನೀರಿನ ಆವಲಂಬನೆಯಲ್ಲಿರಲು ಈ ಕೆರೆಯನ್ನು ಕಟ್ಟಿಸಿರುವ ಸಂಗತಿ ದಾಖಲಾಗಿದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಬೆಂಗಳೂರು – ೧೧೧}.
- ಹೊಸಕೋಟೆಯ ತಾಮ್ರಶಾಸನವೊಂದರಲ್ಲಿ (ಕ್ರಿ.ಶ. ೨-೧೧-೧೬೯೩) ಸುಗುಟೂರು ಪಾಳೆಯಗಾರ ಮುಮ್ಮಡಿ ಚಿಕ್ಕರಾಯ ಚಿಕ್ಕತಮ್ಮೇಗೌಡನು ಭೂದಾನದ ಜೊತೆಗೆ ನೆಲ್ಲು, ರಾಗಿ ಮತ್ತು ಹಣದ ರೂಪದಲ್ಲಿ ವಾರ್ಷಿಕ ವರಮಾನ ಬರುವಂತೆ ಉದಾರವಾದ ದತ್ತಿ ಬಿಟ್ಟಿರುವ ಉಲ್ಲೇಖ ದೊರಕುತ್ತದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಹೊಸಕೋಟೆ-೧೦೫}. ಈ ಉಲ್ಲೇಖವು ಆಗ ಬೆಳೆಯುತ್ತಿದ್ದ ಬೆಳೆಗಳನ್ನು ಕುರಿತು ಹೇಳುತ್ತಿರುವಂತಿದೆ ಎಂಬ ಅಂಶ ಸಂಭಾವ್ಯವಾದ್ದು.
- ವಿಜಯನಗರ ಸಾಮ್ರಾಜ್ಯದ ಅರಸರು ಮತ್ತು ಅಧಿಕಾರಿಗಳು ಬಹಳವಾಗಿ ಕೆರೆ, ಕಟ್ಟೆಗಳ ನರ್ಮಾಣಕ್ಕೆ ಪ್ರೋತ್ಸಾಹ ನೀಡಿದರು. ಸಾಮಂತ ಅರಸರು, ಪಾಳೆಯಗಾರರು ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲವೆನ್ನುವುದು ಅಷ್ಟೇ ಗಮನಾರ್ಹ ಸಂಗತಿಯಾಗಿದೆ.
ಮೇಲೆ ದಾಖಲಿಸಿರುವಂತಹ ವಿವರಗಳು ಸಂಕ್ಷಿಪ್ತ ಪಕ್ಷಿನೋಟವಷ್ಟೇ ಆಗಿದೆ. ಇನ್ನೂ ಅನೇಕ ವಿವರಗಳು ಶಾಸನಗಳಲ್ಲಿ ಧಾರಾಳವಾಗಿ ದೊರಕುತ್ತವೆ. ಬೆಂಗಳೂರು ಜಿಲ್ಲೆಯಲ್ಲಿ ಸುಮಾರು ೩೦೦ ಕ್ಕೂ ಅಧಿಕ ಕೆರೆಗಳಿದ್ದವೆಂದು ಶಾಸನಗಳಿಂದ ತಿಳಿದುಬರುತ್ತದೆ. ಸಮಸ್ತ ಜೀವಜಂತುಗಳು, ಮನುಷ್ಯ-ಪ್ರಾಣಿಗಳಾದಿಯಾಗಿ ಎಲ್ಲರಿಗೂ ಉದಕವೇ ಜೀವವಾದ ಕಾರಣ ಎಲ್ಲರಿಗೂ ಉಪಯೋಗವಾಗಬೇಕೆಂಬ ಸದುದ್ದೇಶದಿಂದಲೇ ಕೆರೆಗಳ ರಚನೆಯಾಗಿದೆ. ಇವುಗಳಿಂದ ಕೃಷಿ ಚಟುವಟಿಕೆಗೆ ಬಲವಿತ್ತು. ಇವುಗಳ ದಡಗಳಲ್ಲಿ ಕೃಷಿ ವ್ಯಾಪಕವಾಗಿ ನಡೆಯುತ್ತಿತ್ತು. ಬೆಂಗಳೂರು ನಗರದಲ್ಲಿ ಕಾರಂಜಿ, ರ್ಮಾಂಬುಧಿ ಮುಂತಾದ ಕೆರೆಗಳು ಇಂದು ನಗರೀಕರಣದ ಕಾರಣ ಇಲ್ಲವಾಗಿವೆ (ಗವಿಪುರದ ಕೆಂಪಾಂಬುಧಿ, ಮಾಗಡಿ ರಸ್ತೆಯ ಹೇರೋಹಳ್ಳಿ, ಅಂದ್ರಹಳ್ಳಿ, ಹಲಸೂರು, ಯಡಿಯೂರು, ಸಾರಕ್ಕಿ, ಪುಟ್ಟೇನಹಳ್ಳಿ, ಹೊಸಕೆರೆಹಳ್ಳಿ, ಕೆ.ಆರ್.ಪುರ, ಹೆಬ್ಬಾಳ, ಮಡಿವಾಳ ಮುಂತಾದ ಪ್ರದೇಶಗಳ ಕೆರೆಗಳು ಇದ್ದರೂ ಕೆಲಮಟ್ಟಿಗೆ ಮೂಲಸ್ವರೂಪವನ್ನು ಕಳೆದುಕೊಂಡು, ಕಲುಷಿತವಾಗಿ ಉಪಯೋಗವನ್ನೇ ಕಳೆದುಕೊಂಡಿವೆ/ ಕಳೆದುಕೊಳ್ಳುತ್ತಿವೆ). ಇಂದಿನ ಬೆಂಗಳೂರಿನ ನ್ಯಾಷನಲ್ ಕಾಲೇಜ್ ವೃತ್ತ, ಬಳ್ಳಾರಿ ರಸ್ತೆಯ ಗಂಗೇನಹಳ್ಳಿ (ಈಗ ಗಂಗಾನಗರ), ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ ಮುಂತಾದ ಕಡೆಗಳಲ್ಲಿ ಇದ್ದ ಕೃಷಿಭೂಮಿ ಮತ್ತು ಹಸುರು ವ್ಯಾಪಕವಾಗಿಯೇ ನಾಶವಾಗಿದೆ. ಸರ್ಜಾಪುರದಲ್ಲಿ ಇದ್ದ ದಂಡನ ಕೆರೆ ಎಂಬುದು ಈಗ ಇಲ್ಲ. ಇದರ ಹೆಸರು ತಿಳಿದಿರುವವರೂ ಬಹಳ ಕಡಮೆ ಮಂದಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ರಾಮಸಂದ್ರ ಮುಂತಾದ ಪ್ರದೇಶಗಳ ಕೆರೆಗಳು, ಬೆಂಗಳೂರು ನಗರ ಜಿಲ್ಲೆಯ ಮುತ್ತಾನಲ್ಲೂರು, ಕೋಟಗಾನಹಳ್ಳಿ, ಬಿಕ್ಕನಹಳ್ಳಿ, ತ್ಯಾವಕನಹಳ್ಳಿ, ಹಂದೇನಹಳ್ಳಿ, ಬಿಲ್ಲಾಪುರ, ಬಿದರಗುಪ್ಪೆ, ಗುಡ್ನಹಳ್ಳಿ, ಭಕ್ತಿಪುರ, ಮಾಯಸಂದ್ರ, ಸಿಂಗೇನ ಅಗ್ರಹಾರ, ಹುಸ್ಕೂರು, ಚಿಕ್ಕತಿಮ್ಮಸಂದ್ರ, ಬಳ್ಳೂರು ಇತ್ಯಾದಿ ಗ್ರಾಮಗಳ ಕೆರೆಗಳು ಕೆಲಮಟ್ಟಿಗೆ ಉಳಿದುಕೊಂಡಿವೆ. ಕುಡಿಯುವ ನೀರಿಗೆಂದು ಬಾವಿಗಳನ್ನು ತೋಡಿಸಿರುವ ವಿವರಗಳೂ ಅವುಗಳನ್ನು ಬಳಸುತ್ತಿದ್ದ ವಿವರಗಳೂ ಮೌಖಿಕವಾಗಿ ದೊರಕುತ್ತವೆ. ಉದಾಹರಣೆಗೆ: ಬೆಂಗಳೂರು ನಗರ ಜಿಲ್ಲೆಯ ಸರ್ಜಾಪುರದಲ್ಲಿದ್ದ ಸರಿಗೆಬಾವಿ, ತೊಟ್ಟಿಲು ಬಾವಿ, ನಾಗರಬಾವಿ (ಕಲ್ಯಾಣಿ), ಗೋವಿಂದರಾಜುಲ ಬಾವಿ (ಕಲ್ಯಾಣಿ) ಮುಂತಾದವು. ಇವುಗಳಲ್ಲಿ ಬಹುತೇಕವು ಈಗ ಇಲ್ಲವಾಗಿವೆ. ಇರುವವುಗಳೂ ತಮ್ಮ ಮೂಲಸ್ವರೂಪವನ್ನು ಕಳೆದುಕೊಂಡಿವೆ. ಎಷ್ಟೋ ಸ್ಥಳನಾಮಗಳು ಕೂಡ ಕೆರೆಕಟ್ಟೆಗಳು, ಬೆಳೆಗಳ ವಿವರಗಳನ್ನು ಅರಿಯುವ ದಿಸೆಯಲ್ಲಿ ನೆರವೀಯುತ್ತವೆ (ಉದಾಹರಣೆಗೆ: ಸಣ್ಣಕ್ಕಿ ಬಯಲು ಇತ್ಯಾದಿ).
ಈಗಿನ ಮೂಲಸೌಕರ್ಯ ಮತ್ತು ಸಂಪನ್ಮೂಲಗಳು: ಬೆಂಗಳೂರಿನಲ್ಲಿ ೪೦.೭೬% ವ್ಯವಸಾಯ ಮಾಡದೇ ಇರುವಂತಹ ಭೂಮಿ ಇದೆ. ಉಳಿದ ೪೩.೬೬% ಭೂಮಿಯಲ್ಲಿ ೧೪.೦೯% ಭೂಮಿಯಲ್ಲಿ ವ್ಯವಸಾಯ ಮಾಡಲಾಗುತ್ತಿದೆ ಮತ್ತು ೧.೪೯% ರಷ್ಟು ಭೂಮಿ ಅರಣ್ಯಪ್ರದೇಶವಾಗಿದೆ. ಬೆಂಗಳೂರು ಭೂ ಪ್ರದೇಶದಲ್ಲಿ ಗ್ರಾನೈಟ್, ಜೆನೆಸಿಸ್, ಮಿಗ್ಮಟೈಟ್ಸ್ ಇದ್ದು ಕೆಂಪು ಮಣ್ಣು ಮತ್ತು ಜೇಡಿ ಮಣ್ಣನ್ನು ಹೊಂದಿದೆ. ಬೆಂಗಳೂರಲ್ಲಿ ಮಧ್ಯಮ ಮತ್ತು ಎರಡು ಮಾದರಿ ಮಳೆಯ ವಿನ್ಯಾಸವಿದ್ದು ಸಣ್ಣ ಮತ್ತು ದೀರ್ಘ ಅವಧಿಯ ಬೆಳೆಗಳನ್ನು ಬೆಳೆಯಲು ಪ್ರಶಸ್ತವಾಗಿದೆ. ಬೆಂಗಳೂರು ಜಿಲ್ಲೆಯನ್ನು ಭೌಗೋಳಿಕವಾಗಿ ಬಯಲುನಾಡಿನ ಪ್ರದೇಶವೆಂದು ಗುರುತಿಸಲಾಗಿದೆ. ಬೆಂಗಳೂರು ಜಿಲ್ಲಾ ಪ್ರದೇಶವು, ಈಶಾನ್ಯ ಮತ್ತು ಪೂರ್ವಕ್ಕೆ ಬಲುಮಟ್ಟಿಗೆ ಸಮತಟ್ಟಾಗಿದ್ದು ದಕ್ಷಿಣ ಪಿನಾಕಿನೀ ನದಿಯ ಜಲಾನಯನ ಪ್ರದೇಶವಾಗಿದೆ. ವಾಯವ್ಯ ಮತ್ತು ಪಶ್ಚಿಮ ಪ್ರದೇಶಗಳು ಅರ್ಕಾವತಿ ನದಿಗೆ ನೀರುಣಿಸುವ ಕೊರಕಲು ಪ್ರದೇಶದಿಂದ ಕೂಡಿದೆ. ದಕ್ಷಿಣ ಭಾಗದಲ್ಲಿ ಬನ್ನೇರುಘಟ್ಟದ ಬೆಟ್ಟ ಗುಡ್ಡಗಳ ಸಾಲುಗಳಿದ್ದು ಇದರ ಪಶ್ಚಿಮಕ್ಕಿರುವ ಪ್ರದೇಶಗಳು ಅರ್ಕಾವತಿಗೂ ಪೂರ್ವಕ್ಕಿರುವ ಪ್ರದೇಶಗಳು ದಕ್ಷಿಣ ಪಿನಾಕಿನಿಗೂ ನೀರೊದಗಿಸುತ್ತವೆ. ಕೃಷಿ ಚಟುವಟಿಕೆಯು ಈ ಭಾಗಗಳಲ್ಲಿ ಹೆಚ್ಚಾಗಿಯೇ ಕಂಡುಬರುತ್ತದೆ. ಬೆಂಗಳೂರು ನಗರ ಜಿಲ್ಲೆಯನ್ನು ಮಳೆಯನ್ನು ಅವಲಂಬಿಸಿರುವ ಇಲ್ಲವೇ ಒಣಬೇಸಾಯ ವಲಯ ಎಂದು ಇಂದಿನ ದಿನಗಳಲ್ಲಿ ಗುರುತಿಸಲಾಗಿದೆ.
ವ್ಯವಸಾಯಕ್ಕೆ ಪ್ರಾಮುಖ್ಯ: ಬೆಂಗಳೂರಿನ ಒಟ್ಟು ವಿಸ್ತೀರ್ಣದಲ್ಲಿ ಶೇಕಡಾ ೧೪.೦೯ ರಷ್ಟು ಭೂಮಿಯಲ್ಲಿ ಮಾತ್ರ ವ್ಯವಸಾಯ ಮಾಡಲಾಗುತ್ತದೆ. ಇದರಲ್ಲಿ ಪ್ರಧಾನವಾಗಿ ಬೇಳೆಕಾಳುಗಳು ೬೬.೩೬% ಭೂಮಿಯಲ್ಲಿ ಕೇಂದ್ರೀಕೃತವಾಗಿದೆ. ದ್ವಿದಳ ಧಾನ್ಯಗಳನ್ನು ೯.೯೪% ವಿಸ್ತೀರ್ಣದ ಭೂಮಿಯಲ್ಲಿ ಬೆಳೆಯಲಾಗುತ್ತದೆ. ಆನೇಕಲ್ ತಾಲ್ಲೂಕನ್ನು ರಾಜ್ಯದ ರಾಗಿಯ ಬಟ್ಟಲು ಎಂದು ಕರೆಯುತ್ತಾರೆ. ಆದರೆ ಈಚೆಗೆ ಈ ತಾಲ್ಲೂಕಿನಲ್ಲಿ ಮಳೆ ಹಾಗೂ ಅಂತರ್ಜಲ ಕುಸಿತದಿಂದಾಗಿ ರಾಗಿ ಬೆಳೆ ಕಡಮೆಯಾಗಿದೆ. ಬೆಂಗಳೂರು ನಗರ ಹೂವಿನ ಕೃಷಿಯಲ್ಲಿ ಅತ್ಯುನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ಪ್ರಮುಖ ಬೆಳೆಗಳು ಬತ್ತ, ರಾಗಿ, ಜೋಳ, ಹುರುಳಿಕಾಳು, ಎಣ್ಣೆ ಬೀಜಗಳು. ಇದಲ್ಲದೆ ಬಾಳೆಹಣ್ಣು, ದ್ರಾಕ್ಷಿ, ಪಪ್ಪಾಯ, ಮಾವು, ಸಪೋಟ, ದಾಳಿಂಬೆ, ತೆಂಗು ಇವುಗಳನ್ನು ಬೆಳೆಯಲಾಗುತ್ತದೆ. ಪನ್ನೀರ್, ಚಪ್ಪರದ ಬದನೆಕಾಯಿಯನ್ನು ಕೂಡ ಬೆಂಗಳೂರಿನಲ್ಲಿ ಬೆಳೆಯಲಾಗುತ್ತದೆ. ದೇವನಹಳ್ಳಿಯಲ್ಲಿ ಬೆಳೆಯಲಾಗುವ ಚಕ್ಕೋತ ಪ್ರಸಿದ್ಧಿಯನ್ನು ಪಡೆದಿದೆ. ಇದೇ ರೀತಿ ಹೊಸಕೋಟೆ ಪ್ರದೇಶದ ಹೂವಿನ ಬೆಳೆ ಉಲ್ಲೇಖಾರ್ಹವಾಗಿದೆ. ಆನೇಕಲ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಲ್ಲಿಗೆ, ಕನಕಾಂಬರ, ಶಾಮಂತಿಗೆ, ಕಾಕಡಾ, ಸರ್ಯಕಾಂತಿ, ಗುಲಾಬಿ ಹೂವುಗಳನ್ನು ಕೂಡ ಬೆಳೆಯಲಾಗುತ್ತದೆ. ಆನೇಕಲ್, ಸರ್ಜಾಪುರ ಪ್ರದೇಶಗಳಲ್ಲಿ ಸೌತೇಕಾಯಿ, ಅವರೇಕಾಯಿ, ಸೊಪ್ಪು ಇವನ್ನು ಈಗ ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿಯೂ ಸಂದರ್ಭಕ್ಕೆ ತಕ್ಕಂತೆ ಬೆಳೆಗಳಲ್ಲಿ ವ್ಯತ್ಯಾಸಗಳಾಗುವುದುಂಟು.
ಬೆಂಗಳೂರು ನೀಲಿ ದ್ರಾಕ್ಷಿಯು ಅದರ ವಿಶೇಷ ರುಚಿ ಹಾಗೂ ಬೆಳೆಯ ವೈಜ್ಞಾನಿಕ ಗುಣಕ್ಕಾಗಿಯೇ ಪ್ರಸಿದ್ಧವಾಗಿದೆ. ಜೊತೆಗೆ ನೀಲಿ ದ್ರಾಕ್ಷಿ ಬೆಳೆಯುವ ಭಾರತದ ಏಕೈಕ ರಾಜ್ಯ ಕರ್ನಾಟಕವೇ ಆಗಿದೆ. ಇದನ್ನು ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಈ ಭಾಗಗಳಲ್ಲಿನ ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ ದ್ರಾಕ್ಷಿ ಬೆಳೆಗೆ ನೀರಿನ ಕೊರತೆ ಎದುರಾಗಿದೆ. ಕೆಲವೊಂದು ನಿರ್ದಿಷ್ಟ ಗುಣ ಹೊಂದಿರುವ ಕೃಷಿ ಮತ್ತು ತೋಟಗಾರಿಕಾ ತಳಿಗಳಿಗೆ ‘ಭೌಗೋಳಿಕ ಗುರುತಿಸುವಿಕೆ’ (ಜಿಯೊಗ್ರಾಫಿಕಲ್ ಇಂಡಿಕೇಷನ್ -ಜಿಐ) ಎಂದು ಮಾನ್ಯತೆ ದೊರೆಯುತ್ತದೆ. ಅದರಂತೆ ಬೆಂಗಳೂರು ನೀಲಿ ದ್ರಾಕ್ಷಿಯ ವಿಶಿಷ್ಟ ಗುಣಕ್ಕಾಗಿ ೨೦೧೧ರಲ್ಲಿ ಈ ಬೆಳೆಗೆ ಭೌಗೋಳಿಕ ಮಾನ್ಯತೆ ದೊರೆತಿದೆ. ಬಹೂಪಯೋಗಿ ಬೆಂಗಳೂರು ನೀಲಿ ದ್ರಾಕ್ಷಿಯನ್ನು ತಿನ್ನಲು ಮಾತ್ರವಲ್ಲ, ಮದ್ಯ ತಯಾರಿಕೆಗೂ ಬಳಸಲಾಗುತ್ತದೆ. ಸಾಮಾನ್ಯವಾಗಿ ಫ್ರೆಂಚ್ ದ್ರಾಕ್ಷಿ ಮದ್ಯ ತಯಾರಿಕೆಗೆ ಸೂಕ್ತವಾಗಿದ್ದರೂ ಅದನ್ನು ಹಣ್ಣಿನ ರೂಪದಲ್ಲಿ ತಿನ್ನಲು ಸಾಧ್ಯವಿಲ್ಲ. ಆದರೆ ಬೆಂಗಳೂರು ನೀಲಿ ದ್ರಾಕ್ಷಿಯಿಂದ ಮದ್ಯ, ಹಣ್ಣಿನರಸ, ಸ್ಪಿರಿಟ್, ಹಣ್ಣಿನ ರಸಾಯನಗಳನ್ನು ತಯಾರಿಸಬಹುದು, ಅಲ್ಲದೆ ತಿನ್ನಲು ಕೂಡ ರುಚಿಯಾಗಿರುತ್ತದೆ. ಇದು ವರ್ಷಪೂರ್ತಿ ಫಲ ನೀಡುತ್ತದೆಯಾದರೂ ಫೆಬ್ರುವರಿ ಮಧ್ಯದಿಂದ ಏಪ್ರಿಲ್ವರೆಗೆ ಇರುವ ಈ ಹಣ್ಣು ಬೇಸಿಗೆ ಹಣ್ಣು ಎಂದೇ ಪ್ರಸಿದ್ಧಿ ಪಡೆದಿದೆ.
ಬಸವನಗುಡಿ ಪ್ರದೇಶದಲ್ಲಿ ಕಡಲೆಕಾಯಿ ಬೆಳೆಯುವಿಕೆಯ ಐತಿಹ್ಯ: ದೊಡ್ಡಬಸವಣ್ಣನ ಗುಡಿ ಇರುವ ಪ್ರದೇಶದಲ್ಲಿ ಪ್ರತಿವರ್ಷವೂ ಕರ್ತಿಕ ಮಾಸದ ಕೊನೆಯ ಸೋಮವಾರದಂದು ನಡೆಯುವ ಕಡಲೆಕಾಯಿ ಪರಿಷೆ ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಗೆ ಜೀವಂತಸಾಕ್ಷಿಯಾಗಿದೆ. ಈ ಪ್ರದೇಶವು ಸುಂಕೇನಹಳ್ಳಿ ಎಂಬ ಗ್ರಾಮವಾಗಿದ್ದು, ಈಗಲೂ ತನ್ನ ಅಸ್ತಿತ್ವವವನ್ನು ಉಳಿಸಿಕೊಂಡಿದೆ. ಇಲ್ಲಿ ಕಡಲೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತೆಂದೂ ಅದನ್ನು ಬಸವ ಅಥವಾ ಗೂಳಿ ಬಂದು ತಿಂದು ಹೋಗುತ್ತಿತ್ತು ಎಂದೂ ಕಡೆಗೆ ಅದನ್ನು ಹಿಡಿಯಲು ಹೋದಾಗ ವಿಗ್ರಹವಾಗಿ ಕುಳಿತಿತೆಂದೂ ಕತೆಗಳಿವೆ. ಸಾಕ್ಷಾತ್ ಕೈಲಾಸದ ನಂದಿಯೇ ಇದು ಎಂಬ ನಂಬಿಕೆಯಿಂದ ಇಂದಿಗೂ ಇಲ್ಲಿ ಕಡಲೆಕಾಯಿಯನ್ನು ನೈವೇದ್ಯಮಾಡಿ ೩ ದಿನ ವಿಜೃಂಭಣೆಯಿಂದ ಕಡಲೆಕಾಯಿ ಪರಿಷೆಯನ್ನು ಆಚರಿಸಲಾಗುತ್ತದೆ. ಈ ಪ್ರದೇಶದಲ್ಲಿ ಕಡಲೆಕಾಯಿಯನ್ನು ಬೆಳೆಯಲಾಗುತ್ತಿತ್ತು ಎಂಬುದಕ್ಕೆ ವೈಜ್ಞಾನಿಕವಾಗಿ ಪುರಾವೆಯೇನೂ ದೊರಕದು. ಆದರೆ ಸಾಂಸ್ಕೃತಿಕ ಆಚರಣೆಗೆ ಇರುವ ಹಲವು ಆಯಾಮಗಳಲ್ಲಿ ಇದನ್ನೂ ಒಂದಾಗಿ ಪರಿಗಣಿಸಬಹುದು.
ಬೆಂಗಳೂರು ಮತ್ತು ಬುಕನನ್: ಬುಕನನ್ ತನ್ನ ಪ್ರವಾಸ ಕಥನದಲ್ಲಿ ಅಕ್ಕಿ, ರಾಗಿ, ಗೋಡಂಬಿ ಇತ್ಯಾದಿಗಳ ಬೆಳೆಗಳನ್ನು, ಆಮದು ರಫ್ತುಗಳ ವಿವರವನ್ನು ವಿವರವಾಗಿ ಪ್ರಸ್ತಾಪಿಸಿದ್ದಾನೆ. ಇವನು ಪ್ರಸ್ತಾಪಿಸುವ ಬೆಳೆಗಳೇ ಇಂದಿಗೂ ಈ ಪ್ರದೇಶದಲ್ಲಿ ರೂಢಿಯಲ್ಲಿವೆ.
ಕೃಷಿ ಸಂಬಂಧೀ ಸಮಸ್ಯೆಗಳು ಮತ್ತು ಸಂಸ್ಥೆಗಳು: ಇನ್ನು ಭೂಮಿಪೂಜೆ, ಫಸಲು ಬಂದಾಗ ಅದರಲ್ಲಿ ಒಂದು ಭಾಗವನ್ನು ದೇವರಿಗೆ, ಭೂಮಿತಾಯಿಗೆಂದು ನೈವೇದ್ಯ ಮಾಡುವುದು ಇಂದಿಗೂ ನಡೆದುಕೊಂಡು ಬಂದಿದೆ. ಮಳೆಗಾಗಿ ಕಾಯುವಾಗ ಸ್ವಾತಿ ಮಳೆ, ಹಸ್ತಾ ಮಳೆ ಎಂದು ಹೇಳುವುದು ಇಂದಿಗೂ ವಾಡಿಕೆಯಲ್ಲಿದೆ. ಕೃಷಿಯನ್ನು ಬಲುಮಟ್ಟಿಗೆ ಎಲ್ಲ ಪಂಗಡದವರೂ ರೂಢಿಸಿಕೊಂಡಿದ್ದಾರೆ. ಬೆಂಗಳೂರು ಪ್ರದೇಶದಲ್ಲಿ ತಿಗಳರು, ರೆಡ್ಡಿಗಳು, ಗೌಡರು, ಬ್ರಾಹ್ಮಣರು ಮುಂತಾದ ಎಲ್ಲ ಪಂಗಡಗಳೂ ಕೃಷಿಯನ್ನು ಅವಲಂಬಿಸಿವೆ. ಆದರೆ ಇಂದಿನ ಕಾಲದಲ್ಲಿ ಮಳೆಯ ಕೊರತೆ, ಅಂತರ್ಜಲದ ಕುಸಿತ, ಇತರ ರೀತಿಯ ಪ್ರಕೃತಿಯ ವೈಪರೀತ್ಯಗಳಿಂದ ರೈತರು ಬೆಳೆಯನ್ನು ಬೆಳೆಯುವುದು ಕಷ್ಟಸಾಧ್ಯ ಎಂಬಂತಾಗಿದೆ. ಕಾಡನ್ನು, ನಗರ ಪ್ರದೇಶದ ಮರಗಳನ್ನು ಸತತವಾಗಿ ಕಡಿಯುತ್ತಿರುವ ಕಾರಣ ಮಳೆ ಕುಂಠಿತಗೊಂಡು ತೊಂದರೆಯಾಗತೊಡಗಿದೆ.
ಅತಿವೃಷ್ಟಿ, ಅನಾವೃಷ್ಟಿಯೂ ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಹಸುರು ಎಂಬುದು ರಾರಾಜಿಸುತ್ತಿದ್ದ ಕಾಲ ಸಂಪೂರ್ಣವಾಗಿ ಬದಲಾಗಿಹೋಗಿದೆ. ರೈತರ ಮಕ್ಕಳು ರೈತರಾಗಿ ಕಷ್ಟಪಡುವುದು ಬೇಡ ಎಂಬಂತಹ ಮಾತು ಕೇಳಿಬರುತ್ತಿರುವುದು ಈ ಹಿನ್ನೆಲೆಯಲ್ಲಿಯೇ ಎಂದು ಕಾಣುತ್ತದೆ. ಇದನ್ನು ಪೂರ್ಣವಾಗಿ ಸರಿ ಎನ್ನಲೂ ಸಾಧ್ಯವಿಲ್ಲ, ತಪ್ಪು ಎನ್ನಲೂ ಸಾಧ್ಯವಿಲ್ಲ. ಪೂರ್ವಕಾಲದಲ್ಲಿ ಇದು ಕರ್ತವ್ಯ ಎಂಬ ನೆಲೆಯಲ್ಲಿ ಪರಿಗಣಿತವಾಗಿತ್ತು. ಎಷ್ಟೋ ಪ್ರದೇಶಗಳು ಇಂದು ನಗರೀಕರಣದ ಪ್ರಭಾವಕ್ಕೆ ಒಳಗಾಗಿ ಕೃಷಿಭೂಮಿಯನ್ನು ಕಳೆದುಕೊಂಡಿವೆ. ಮಣ್ಣಿನಸಾರ ತನ್ನ ಕ್ಷಮತೆಯನ್ನು ಕಳೆದುಕೊಂಡಿದೆ. ವೈಜ್ಞಾನಿಕ ರೀತಿಯ ಕೃಷಿಯನ್ನು ನಮ್ಮಲ್ಲಿ ಇನ್ನೂ ರೂಢಿಸಿಕೊಂಡಿಲ್ಲವೇನೋ ಎಂಬಂತಹ ಅನುಮಾನವನ್ನು ಕೆಲವರು ಹೊರಹಾಕಿದ್ದಾರೆ. ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಗಾಂಧಿ ಕೃಷಿವಿಜ್ಞಾನ ಕೇಂದ್ರದ (ಜಿ.ಕೆ.ವಿ.ಕೆ.) ಆವರಣದಲ್ಲಿ ಕೃಷಿ ವಿಶ್ವವಿದ್ಯಾನಿಲಯ ೧೯೪೬ರಲ್ಲಿ ಸ್ಥಾಪನೆಗೊಂಡಿತು. ಇದು ಬೆಂಗಳೂರು ನಗರದಿಂದ ೧೫ ಕಿ.ಮೀ. ದೂರದಲ್ಲಿ ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಇದೆ. ಭೌಗೋಳಿಕವಾಗಿ ಈ ಸ್ಥಳವು ೧೩೦ ೦೫” ಉತ್ತರ ಅಕ್ಷಾಂಶ ಮತ್ತು ೭೭೦ ೩೪” ಪೂರ್ವ ರೇಖಾಂಶದಲ್ಲಿ ಇದೆ. ಕೇಂದ್ರವು ಸರಾಸರಿ ಸಾಗರಮಟ್ಟಕ್ಕಿಂತ ೯೨೪ ಮೀ. ಎತ್ತರದಲ್ಲಿದೆ. ಇಲ್ಲಿನ ವಾರ್ಷಿಕ ಮಳೆಯು ೫೨೮ ಮಿ.ಮೀ.ಗಳಿಂದ ೧೩೭೪.೪ ಮಿ.ಮೀ.ಗಳಷ್ಟು ಹಾಗೂ ಸರಾಸರಿ ಮಳೆಯು ೯೧೫.೮ ಮಿ.ಮೀ.ಗಳಷ್ಟಿದೆ. ಇಂತಹ ಪ್ರದೇಶದಲ್ಲಿ ಕೃಷಿಗೆ ಸಂಬAಧಪಡುವ ಪ್ರಯೋಗಗಳು ಮತ್ತು ಸಮ್ಮೇಳನಗಳು ಸತತವಾಗಿ ನಡೆಯುತ್ತಲೇ ಇದ್ದು, ಮತ್ತಷ್ಟು ರೈತಸ್ನೇಹಿಯಾಗಬೇಕಿದೆ.
ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆಯು {Indian Council of Agricultural Research-Indian Institute of Horticultural Research} ಹಣ್ಣು, ತರಕಾರಿಗಳ ಸಂರಕ್ಷಣೆ, ಹೊಸ ತಳಿಗಳ ಆವಿಷ್ಕಾರ ಮತ್ತು ಅವುಗಳನ್ನು ಪ್ರಚುರ ಪಡಿಸುವುದು ಮುಂತಾದ ಕೆಲಸಗಳನ್ನು ಬಹಳವಾಗಿ ಮಾಡಿದೆ, ಮಾಡುತ್ತಿದೆ. ಯಲಹಂಕದ ಅಲ್ಲಾಳಸಂದ್ರದಲ್ಲಿರುವ Council of Scientific and Industrial Research–Central Institute of Medicinal and Aromatic Plants ಸಂಸ್ಥೆಯು ದವನ, ಮರುಗ, ಮಜ್ಜಿಗೆಹುಲ್ಲು, ತೈಲಗಳು ಮುಂತಾದವುಗಳ ಪರೀಕ್ಷೆ, ಅವುಗಳ ಔಷಧೀಯ ಗುಣ, ರೈತರಿಗೆ ಅವುಗಳ ಪರಿಚಯ ಮತ್ತು ಆರ್ಥಿಕವಾಗಿ ಬೆನ್ನೆಲುಬಾಗಿ ನಿಲ್ಲುವುದು ಮುಂತಾದ ಕೆಲಸಗಳನ್ನು ವ್ಯಾಪಕವಾಗಿ ಮಾಡುತ್ತಿದೆ. ಲಾಲ್ಬಾಗಿನಲ್ಲಿ ವಿವಿಧ ರೀತಿಯ ಹಣ್ಣುಗಳನ್ನು, ತರಕಾರಿಗಳನ್ನು ಬೆಳೆಯಲಾಗುತ್ತದೆ. ರೈತರ ಅನುಕೂಲಕ್ಕಾಗಿ ಸರ್ಕಾರಗಳು ವಿವಿಧ ರೀತಿಯ ಯೋಜನೆಗಳನ್ನು ಮಾಡುತ್ತಲೇ ಇವೆ. ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸರ್ಕಾರವು ಮಾರುಕಟ್ಟೆಗಳನ್ನು, ಉಗ್ರಾಣಗಳನ್ನು ಸ್ಥಾಪಿಸಿದೆ.
ಹಿಂದೆ ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ತೋರಿಸಲಾಗುತ್ತಿತ್ತು, ಬೆಳೆಗಳನ್ನು ಕಿರುಪ್ರಮಾಣದಲ್ಲಿ ಮಾರಾಟ ಕೂಡ ಮಾಡಲಾಗುತ್ತಿತ್ತು. ೧೮೬೬ರಲ್ಲಿ ರೈತರಿಗೆ ಅನುಕೂಲವಾಗುವ ಹಾಗೆ ಬೆಂಗಳೂರಿನ ಸುತ್ತ ಯಾವ ಯಾವ ಬೆಳೆಯನ್ನು ಬೆಳೆಯಬಹುದು ಎಂಬ ಮಾಹಿತಿ ಸಹ ವಸ್ತುಸಂಗ್ರಹಾಲಯದಲ್ಲಿ ದೊರಕುತ್ತಿತ್ತು. ಸಂತೆಗಳ ಬಗೆಗೆ ಶಾಸನಗಳಲ್ಲಿ ಅನೇಕ ಉಲ್ಲೇಖಗಳಿವೆ. ಇವುಗಳು ಕೂಡ ಕೃಷಿ ಬೆಳೆಗಳ ಮಾರಾಟಕ್ಕೆ ಇಂಬು ಕೊಡುತ್ತಿದ್ದವು. ಆದುದರಿಂದ ಕೃಷಿ ಚಟುವಟಿಕೆಗಳಿಗೆ ಸಂತೆಗಳ ಕೊಡುಗೆ ಅಪಾರ. ಇಂದು ಇವುಗಳ ಸಂಖ್ಯೆ ಕಡಮೆಯಾಗಿ ನಡೆಯುವ ರೀತಿ ವ್ಯತ್ಯಾಸಗೊಂಡಿದ್ದರೂ ಕೊಡುಗೆಯನ್ನು ನಿರ್ಲಕ್ಷಿಸುವಂತಿಲ್ಲ. ಮಳೆ ಕೊಯ್ಲು ಪದ್ಧತಿಯಿಂದ ಅಂತರ್ಜಲವನ್ನು ಕಾಯ್ದುಕೊಳ್ಳುವ ಪ್ರಕ್ರಿಯೆ ನಡೆದೇ ಇದೆ. ಇವೆಲ್ಲವುಗಳ ಪ್ರಯೋಜನವನ್ನು ಪಡೆದುಕೊಳ್ಳುವುದು ನಮ್ಮದೇ ಕರ್ತವ್ಯವಾಗಿದೆ.
ಕೃಷಿಯ ಸಮಸ್ಯೆಗಳ ಬಗೆಗೆ ನಾವು ಮಾಧ್ಯಮಗಳಲ್ಲಿ ಗಮನಿಸುತ್ತಲೇ ಇರುತ್ತೇವೆ. ಇವುಗಳಲ್ಲಿ ಸತ್ಯವೆಷ್ಟು ಎಂಬುದನ್ನು ಸ್ವತಃ ಅಧ್ಯಯನ ಮಾಡಬೇಕು. ಇಲ್ಲವಾದಲ್ಲಿ ಸರಿಯಲ್ಲದ ಮಾಹಿತಿಗಳನ್ನೇ ನಂಬುವಂತಾಗುತ್ತದೆ. ಕೃಷಿಗೆ ಮೂಲಭೂತವಾದ ನೀರಾವರಿ ಸೌಲಭ್ಯ ಇಂದು ಸಮರ್ಪಕವಾಗಿ ಇದೆಯೇ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಬೆಂಗಳೂರಿನ ಶಾಸನಗಳಲ್ಲಿ ಕಂಡುಬರುವ ಕೆರೆಗಳಲ್ಲಿ ಶೇಕಡಾ ೫೦-೬೦ ಕೆರೆಗಳು ಇಂದು ಇಲ್ಲವಾಗಿವೆ. ಇವುಗಳ ಸಂರಕ್ಷಣೆಯ ಬಗೆಗೆ ಕೂಗು ಎದ್ದಿದೆಯಾದರೂ ಸಮರ್ಪಕ ಅನುಷ್ಠಾನದ ಕೊರತೆಯಂತೂ ಇದೆ. ರಾಸಾಯನಿಕಗಳ ಬಳಕೆಯ ಸಾಧಕ-ಬಾಧಕಗಳ ಬಗೆಗೆ ಸತತವಾಗಿ ಚರ್ಚೆಯಾಗುತ್ತಿರುವುದು ಗಮನಿಸತಕ್ಕ ವಿಷಯವೇ ಆಗಿದೆ. ತಿಪ್ಪೆಯ ಗೊಬ್ಬರವನ್ನು ಬಳಸುವುದು, ಮಣ್ಣಿನ ಪರೀಕ್ಷೆಯನ್ನು ಮಾಡಿ ಅದರ ಸಾರವನ್ನು ಸಂರಕ್ಷಿಸುವುದು ಇತ್ಯಾದಿ ಯೋಜನೆಗಳು ಇವೆಯಾದರೂ ಪೂರ್ಣಪ್ರಮಾಣದಲ್ಲಿ ಇವುಗಳ ಅನುಷ್ಠಾನ ನಡೆಯುತ್ತಿಲ್ಲ ಎಂಬುದೂ ನಿಜವೇ ಎಂದು ಅಂಕಿ-ಅಂಶಗಳು ತೋರಿಸಿಕೊಡುತ್ತವೆ.
ಎಲ್ಲವನ್ನೂ ಸರ್ಕಾರವೇ ಕಾನೂನುಗಳ ಮೂಲಕ ಜಾರಿಗೆ ತಂದು ಮಾಡಿಸಲು ಸಾಧ್ಯವಿಲ್ಲ. ಪೂರ್ವದಲ್ಲಿ ಜನರು ತಮ್ಮ ಇಚ್ಛಾಶಕ್ತಿಯ ಆವಲಂಬನೆಯಿಂದಲೇ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ರೀತಿ ಇಂದು ನಮಗೆ ಆದರ್ಶವಾಗಬೇಕು. ರ್ಯಾಯ ಬೆಳೆಗಳ ಸಾಧ್ಯತೆಯನ್ನು ಹಿಂದಿನ ಕಾಲದಲ್ಲಿ ಬಹಳ ಚೆನ್ನಾಗಿ ಮನ ಗಂಡಿದ್ದರು. ಇದನ್ನು ಇಂದಿನ ದಿನಗಳಲ್ಲಿಯೂ ಯಥೋಚಿತವಾಗಿ ಅನುಸರಿಸುವಂತಾಗಬೇಕು. ಅರಣ್ಯವನ್ನು ಬೆಳೆಸುವ ಮಾತುಗಳು, ಯೋಜನೆಗಳು ಈಚೀಚೆಗೆ ಬಹಳವಾಗಿ ಕೇಳಿಬರುತ್ತಿದೆ. ಇದು ಕೂಡ ಸಮರ್ಪಕವಾಗಿ ನಡೆಯಬೇಕು. ಪ್ರಕೃತ ಬರಹದಲ್ಲಿ ಲಭ್ಯವಿರುವ ಆಧಾರಗಳ ಆವಲಂಬನೆಯಿಂದ ಸಂಕ್ಷಿಪ್ತವಾದ ಪಕ್ಷಿನೋಟವನ್ನು ಒದಗಿಸಲಾಗಿದೆ. ಇಂತಹ ಹತ್ತುಹಲವು ಅಂಶಗಳ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲೆಯ ಕೃಷಿಪರಂಪರೆಯನ್ನು ಅಧ್ಯಯನ ನಡೆಸಬೇಕಾದ ಅಗತ್ಯವಿದೆ.
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ
ದೇಶೋಯಂ ಕ್ಷೋಭರಹಿತಃ ಸಜ್ಜನಾಃ ಸಂತು ನಿರ್ಭಯಾಃ
[ಕಾಲಕಾಲಕ್ಕೆ ಮಳೆಯಾಗಲಿ, ಪೃಥ್ವಿಯು ಸಸ್ಯಶಾಮಲೆಯಾಗಿರಲಿ, ದೇಶದಲ್ಲಿ ಕ್ಷೋಭೆ ಇಲ್ಲದಿರಲಿ. ಸಜ್ಜನರು ನಿರ್ಭಯದಿಂದ ಇರುವಂತಾಗಲಿ]
ಆಧಾರಸೂಚಿ:
೧. ಆನೆನಾಡು {ಆನೆಕಲ್ಲು ತಾಲ್ಲೂಕು ಪ್ರದೇಶದ ಪ್ರಾಚೀನ ಇತಿಹಾಸ} – ಪಿ.ವಿ. ಕೃಷ್ಣಮೂರ್ತಿ, ಆನೇಕಲ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಆನೇಕಲ್, ಬೆಂಗಳೂರು-೨೦೨೦
೨. ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ಬೆಂಗಳೂರು), (ಸಂ) ಬಿ.ಎಲ್. ರೈಸ್, ಮೈಸೂರು ಪುರಾತತ್ತ್ವ ಇಲಾಖೆ, ಬೆಂಗಳೂರು- ೧೯೦೫
೩. ಎಪಿಗ್ರಾಫಿಯಾ ಕರ್ಣಾಟಿಕಾ-೯ (ಬೆಂಗಳೂರು ಜಿಲ್ಲೆ ಅಪ್ರಕಟಿತ ಪುರವಣಿ ಸಂಪುಟ)
೪. ಜಾನಪದದಲ್ಲಿ ಮಳೆ ಮತ್ತು ಬರ ಒಂದು ನೋಟ-ಲಕ್ಷ್ಮಣ್ ತೆಲಗಾವಿ, ರವಿದಾಸ ಪ್ರಕಾಶನ, ಧಾರವಾಡ-೨೦೨೧
೫. ಜ್ಞಾಪಕ ಚಿತ್ರಶಾಲೆ (೮ ಸಂಪುಟಗಳು) – ಡಿ.ವಿ. ಗುಂಡಪ್ಪ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ-೨೦೧೮
೬. ನನ್ನ ಜೀವನ ಮತ್ತು ಧ್ಯೇಯ – ತಿ.ತಾ. ರ್ಮ, ನವನೀತ ಪ್ರಕಾಶನ, ಬೆಂಗಳೂರು – ೨೦೦೨
೭. ಪುರಾತತ್ತ್ವ ಪಿತಾಮಹ ಬಿ.ಎಲ್. ರೈಸ್ ಜೀವನ ಸಾಧನೆ – ಎಸ್.ಎಲ್. ಶ್ರೀನಿವಾಸಮೂರ್ತಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು – ೨೦೧೧
೮. ಪರ್ಜನ್ಯ ಯಾಗಾಚರಣೆ ಮತ್ತು ಬರನಿವಾರಣೆ ಒಂದು ಅವಲೋಕನ – ಲಕ್ಷö್ಮಣ್ ತೆಲಗಾವಿ, ರೇಣುಕಾ ಪ್ರಕಾಶನ, ಚಿತ್ರದುರ್ಗ – ೨೦೧೯
೯. ಬೆಂಗಳೂರು ಜಿಲ್ಲೆಯ ಇತಿಹಾಸ ಮತ್ತು ಪುರಾತತ್ತ್ವ, ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು – ೨೦೧೩
೧೦. ಭಾವ (೩ ಸಂಪುಟಗಳು) – ಮಾಸ್ತಿ ವೆಂಕಟೇಶ ಅಯ್ಯಂಗಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕರ್ಯಾಲಯ ಟ್ರಸ್ಟ್, ಗವೀಪುರ ವಿಸ್ತರಣ, ಬೆಂಗಳೂರು-೨೦೦೮ (ಅನುಬಂಧ ಸಹಿತವಾದ ಸಚಿತ್ರ ಮುದ್ರಣ)
೧೧. ವಿಶ್ವಕರ್ಣಾಟಕ ಪತ್ರಿಕೆಯ ಸಂಚಿಕೆಗಳು-(ಸಂ) ತಿ.ತಾ. ರ್ಮ
೧೨. ವೈದಿಕ ಸಾಹಿತ್ಯ ಚರಿತ್ರೆ-ಎನ್. ಎಸ್. ಅನಂತರಂಗಾಚಾರ್, ಡಿ.ವಿ.ಕೆ. ಮರ್ತಿ, ಪ್ರಕಾಶಕರು, ಮೈಸೂರು-೨೦೦೫, ನಾಲ್ಕನೆಯ ಮುದ್ರಣ
೧೩. ಸುಗುಟೂರು ವೀರಶೈವ ಅರಸುಮನೆತನ – ಪಿ.ವಿ. ಕೃಷ್ಣಮೂರ್ತಿ, ಕನ್ನಡ ಅಧ್ಯಯನಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೧೯೯೪
೧೪. ಕರ್ನಾಟಕ ಸರ್ಕಾರದ ಅಧಿಕೃತ ಅಂರ್ಜಾಲತಾಣಗಳು
೧೫. Agricultural College, Hebbal 1946-1971 (Silve Jubilee Souvenir), University of Agricultural Sciences, Hebbal, Bangalore
೧೬. A Journey from Madras through the Countries of Mysore, Canara and Malabar (Volume-1) – Francis Buchanan-Hamilton, 1870, Second Edition
೧೭. Mysore: A Gazetteer Compiled for Government by Benjamin Lewis Rice (2 Volumes, Revised), 1897
೧೮. Mysore: A Gazetteer Compiled for Government by C. Hayavadana Rao (5 Volumes)